ಕಳೆದ 50 ವರ್ಷಗಳು ಕನ್ನಡ ಚಿತ್ರರಂಗದ ಪಾಲಿಗೆ ಬಹಳ ಮಹತ್ವದ ವರ್ಷಗಳು. 1956ರಲ್ಲಿ ಮೈಸೂರು ರಾಜ್ಯದ ಉದಯವಾದಾಗ, ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟಪಡುತ್ತಿದ್ದ ಕನ್ನಡ ಚಿತ್ರರಂಗ, ಮುಂದಿನ 17 ವರ್ಷಗಳಲ್ಲಿ ಕರ್ನಾಟಕವೆಂದು ಮರುನಾಮಕರಣವಾಗುವ ಹೊತ್ತಿಗೆ ದೊಡ್ಡ ಪ್ರಗತಿಯನ್ನು ಸಾಧಿಸಿತ್ತು. 70ರ ದಶಕವಂತೂ ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣ ಯುಗವಾಗಿತ್ತು. ಕರ್ನಾಟಕಕ್ಕೆ ಈಗ 50ರ ಸಂಭ್ರಮ. ಆ ಸುವರ್ಣ ಯುಗದಿಂದ ಸುವರ್ಣ ಕರ್ನಾಟಕದವರೆಗೆ ಕನ್ನಡ ಚಿತ್ರರಂಗವು ಎಷ್ಟು ಪ್ರಗತಿ ಸಾಧಿಸಿದೆ, ಇವತ್ತಿನ ಚಿತ್ರರಂಗದ ಸ್ಥಿತಿ-ಗತಿ ಹೇಗಿದೆ ಎಂಬುದರ ಕುರಿತು ಒಂದು ಅವಲೋಕನ ಇಲ್ಲಿದೆ.
ಕನ್ನಡ ಚಿತ್ರರಂಗಕ್ಕೆ ಇದೀಗ 90ರ ಹರೆಯ. 1934ರ ಮಾರ್ಚ್ 03ರಂದು ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ ಬಿಡುಗಡೆಯಾಗುವ ಮೂಲಕ ಕನ್ನಡ ಚಿತ್ರರಂಗದ ಜನನವಾಯಿತು. ಅಲ್ಲಿಂದ ಇಲ್ಲಿಯವರೆಗೂ ಸುಮಾರು ಐದು ಸಾವಿರ ಚಿತ್ರಗಳು ನಿರ್ಮಾಣವಾಗಿವೆ. ಕನ್ನಡ ಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿವೆ.
90 ವರ್ಷಗಳ ಇತಿಹಾಸವಿರುವ ಚಿತ್ರರಂಗವು ತನ್ನ ಅದ್ಭುತ ದಿನಗಳನ್ನು ಕಂಡಿದ್ದು 70ರ ದಶಕದಲ್ಲಿ ಎಂದರೆ ತಪ್ಪಿಲ್ಲ. ಅಷ್ಟರಲ್ಲಾಗಲೇ ಚಿತ್ರರಂಗದ ಉದಯವಾಗಿ ನಾಲ್ಕು ದಶಕಗಳಾಗಿದ್ದವು. ಆದರೆ, ಆರಂಭದ ವರ್ಷಗಳೇನೂ ಅಷ್ಟು ಸುಲಭವಾಗಿರಲಿಲ್ಲ. ಹಲವು ಮಹನೀಯರ ನಿರಂತರ ಶ್ರಮ ಮತ್ತು ಹೋರಾಟದ ಫಲವಾಗಿ 60ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದಿಷ್ಟು ಸೌಕರ್ಯ ಮತ್ತು ಸೌಲಭ್ಯಗಳು ಸಿಕ್ಕವು. ಅದೆಲ್ಲದರ ಫಲವಾಗಿ 70ರ ದಶಕದಲ್ಲಿ ಚಿತ್ರ ನಿರ್ಮಾಣ ಸಂಖ್ಯೆ ಹೆಚ್ಚಾಗಿದ್ದಷ್ಟೇ ಅಲ್ಲ, ಚಿತ್ರಗಳ ಶೈಲಿ ಬದಲಾಯಿತು. ಹೊಸ ಕಲಾವಿದರು ಮತ್ತು ತಂತ್ರಜ್ಞರು ಬಂದರು. ಹೊಸ ಪ್ರಯೋಗಗಳು ಶುರುವಾದವು. ಹೊಸ ದಾಖಲೆ, ಹೆಗ್ಗಳಿಕೆ, ಪ್ರಶಸ್ತಿಗಳು ಕನ್ನಡ ಚಿತ್ರರಂಗದ ಪಾಲಾದವು. ಒಟ್ಟಾರೆ, 70ರ ದಶಕದಲ್ಲಿ ಕನ್ನಡ ಚಿತ್ರರಂಗದ ಸ್ವರೂಪವೇ ಬೇರೆಯಾಯಿತು. ಹಾಗಾಗಿಯೇ, ಆ ಕಾಲಘಟ್ಟವನ್ನು ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಸುವರ್ಣ ಯುಗದಿಂದ ಸುವರ್ಣ ಕರ್ನಾಟಕದವರೆಗೆ, ಅಂದರೆ ಈ 50 ವರ್ಷಗಳಲ್ಲಿ ಏನೆಲ್ಲ ಬದಲಾವಣೆಗಳಾದವು ಮತ್ತು ಬೆಳವಣಿಗೆಗಳಾದವು ಎಂಬುದು ಗಮನಾರ್ಹ.

ಸಂಕಷ್ಟದಲ್ಲಿದ್ದ ಕನ್ನಡ ಚಿತ್ರರಂಗ
70ರ ದಶಕವು ಕನ್ನಡ ಚಿತ್ರರಂಗಕ್ಕೆ ಬಹಳ ಪ್ರಮುಖವಾದ ಘಟ್ಟ. 1956ರಲ್ಲಿ ಕರ್ನಾಟಕ ರಾಜ್ಯದ ಸ್ಥಾಪನೆಯಾದರೂ, ಕನ್ನಡ ಚಿತ್ರರಂಗವು ನೆಲೆಯೂರಿದ್ದು ತಮಿಳುನಾಡಿನ ಮದರಾಸಿನಲ್ಲಿ. ಪರಭಾಷಾ ಚಿತ್ರಗಳ, ಡಬ್ಬಿಂಗ್ ಚಿತ್ರಗಳ ಹಾವಳಿ ದೊಡ್ಡ ಮಟ್ಟದಲ್ಲಿತ್ತು. ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿತರಣಾ ವ್ಯವಸ್ಥೆ ಸಹ ಪರಭಾಷಿಕರ ಕೈಯಲ್ಲೇ ಇತ್ತು. ಇನ್ನು, ಕರ್ನಾಟಕದಲ್ಲಿ ಚಿತ್ರ ನಿರ್ಮಾಣ ಮಾಡುವುದಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಿತ್ತು. ರಾಜ್ಯ ಸರ್ಕಾರದಿಂದ ಕನ್ನಡ ಚಿತ್ರರಂಗಕ್ಕೆ ಯಾವೊಂದು ಉತ್ತೇಜನ ಇಲ್ಲವಾಗಿತ್ತು. ಇಂಥ ಸಮಯದಲ್ಲೇ ಕರ್ನಾಟಕದಲ್ಲಿ ಕನ್ನಡ ಚಿತ್ರರಂಗವನ್ನು ನೆಲೆಯೂರಿಸುವುದಕ್ಕೆ ಪ್ರಯತ್ನಗಳು 1960ರ ದಶಕದಲ್ಲಾಯಿತು.
ಇದನ್ನೂ ಓದಿರಿ: ಗಂಗೆಯ ಒಡಲಿಗೆ ‘ವಿಷ’ದ ಸಂಕಟ; ವೈಜ್ಞಾನಿಕ ಸತ್ಯಗಳಿಗೆ ಬೆನ್ನು ತಿರುಗಿಸಲಾದೀತೆ?
ಒಂದು ಕಡೆ ರಾಜ್ಯದಲ್ಲಿ ಈ ಪರಿಸ್ಥಿತಿಯಾದರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು, ಅಲ್ಲಿನ ಚಿತ್ರರಂಗಗಳ ಪ್ರಗತಿಗೆ ತಮ್ಮದೇ ರೀತಿಯಲ್ಲಿ ನೆರವು ನೀಡುತ್ತಿದ್ದವು. ಚಿತ್ರರಂಗವನ್ನು ಉತ್ತೇಜಿಸುವ ಸಲುವಾಗಿ ಬೇರೆ ರಾಜ್ಯಗಳಲ್ಲಿ ಸಹಾಯಧನ ಪದ್ಧತಿ ಶುರುವಾಗಿತ್ತು. ಈ ತರಹದ ಸಹಾಯಗಳು ಕನ್ನಡ ಚಿತ್ರರಂಗಕ್ಕೂ ಬೇಕು ಎಂಬ ಮನವಿಯನ್ನು ಚಿತ್ರರಂಗದ ಹಿರಿಯರು ಸರ್ಕಾರಕ್ಕೆ ಸಲ್ಲಿಸಿದರು. ಈ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಸರ್ಕಾರ, ಮೈಸೂರು ರಾಜ್ಯಲ್ಲಿ ತಯಾರಾದ ಎಲ್ಲ ಕನ್ನಡ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆಯನ್ನು 1966ರ ಏಪ್ರಿಲ್‍ನಿಂದ ಜಾರಿಗೆ ತಂದಿತು. ಸಹಾಯಧನ ಪಡೆಯುವ ಚಿತ್ರಗಳು ರಾಜ್ಯದಲ್ಲೇ ಸಂಪೂರ್ಣ ಚಿತ್ರೀಕರಣವಾಗುವುದರ ಜೊತೆಗೆ, ಇಲ್ಲೇ ಸಂಸ್ಕರಣ ಮಾಡಿಸಿರಬೇಕು ಎಂದು ಘೋಷಿಸಿತು. ಜೊತೆಗೆ ಕನ್ನಡದ ಮೂರು ಅತ್ಯುತ್ತಮ ಚಿತ್ರಗಳಿಗೆ, ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡುವ ಪದ್ಧತಿ ಶುರುವಾಯಿತು. ಮನರಂಜನಾ ತೆರಿಗೆಯ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸಿ, ಅದರಿಂದ ಸಂಗ್ರಹವಾಗುವ ಮೊತ್ತವನ್ನು ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ಘೋಷಿಸಲಾಯಿತು.
ಸರ್ಕಾರದ ಉತ್ತೇಜನದಿಂದ ಚಿತ್ರರಂಗಕ್ಕೆ ವರ
ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಬಿಟ್ಟರೆ ಚಿತ್ರೀಕರಣ ಮಾಡುವುದಕ್ಕೆ ಬೇರೆ ಸ್ಟುಡಿಯೋಗಳಿರಲಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳಾದವು. ಸರ್ಕಾರಿ ಮತ್ತು ಖಾಸಗೀ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಕಂಠೀರವ ಸ್ಟುಡಿಯೋವನ್ನು ಪ್ರಾರಂಭಿಸಲಾಯಿತು. ಸ್ವಂತ ಸ್ಟುಡಿಯೋ ಆರಂಭಿಸುವುದಾಗಿ ಬಂದ ಹಿರಿಯ ನಟ ಟಿ.ಎನ್. ಬಾಲಕೃಷ್ಣ ಅವರ ಮನವಿಯ ಮೇರೆಗೆ ಸರ್ಕಾರವು ಕೆಂಗೇರಿ ಬಳಿ 15 ಎಕರೆ ಜಮೀನನ್ನು ಗುತ್ತಿಗೆಗೆ ನೀಡಿತು. ಈ ಜಾಗದಲ್ಲಿ ಬಾಲಣ್ಣನವರು ಅಭಿಮಾನ್ ಸ್ಟುಡಿಯೋ ಕಟ್ಟಿದರು. ಇನ್ನೊಂದು ಕಡೆ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ ಸ್ಥಾಪನೆಯಾಯಿತು. ಇವೆಲ್ಲವೂ ಕೆಲವೇ ವರ್ಷಗಳ ಅಂತರದಲ್ಲಿ ಪ್ರಾರಂಭವಾಗಿ, ಕನ್ನಡ ಚಿತ್ರರಂಗಕ್ಕೆ ದೊಡ್ಡ ಉತ್ತೇಜನವನ್ನು ನೀಡಿತು. ಜೊತೆಗೆ ಸರ್ಕಾರವು ಹೆಸರುಘಟ್ಟದಲ್ಲಿ ಚಿತ್ರನಗರಿ ನಿರ್ಮಾಣಕ್ಕಾಗಿ ಸ್ಥಳ ಮೀಸಲಿಟ್ಟಿತು.
ಇದೆಲ್ಲರ ಫಲವಾಗಿ ಮದರಾಸಿನಲ್ಲಿ ಬೀಡುಬಿಟ್ಟಿದ್ದ ಕನ್ನಡ ಚಿತ್ರರಂಗ ಕ್ರಮೇಣ ಕರ್ನಾಟಕದತ್ತ ವಲಸೆ ಬರತೊಡಗಿತು. ಚಿತ್ರರಂಗ ಪೂರ್ಣಪ್ರಮಾಣದಲ್ಲಿ ಕರ್ನಾಟಕಕ್ಕೆ ಬಂದಿದ್ದು 1980ರ ದಶಕದ ಮಧ್ಯಭಾಗದಲ್ಲಾದರೂ, ಇದರ ಆರಂಭ 1970ರಿಂದಲೇ ಶುರುವಾಯಿತು. ಕ್ರಮೇಣ ಬೆಂಗಳೂರಿನ ಗಾಂಧಿನಗರದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಹೆಚ್ಚಾದವು. ಕನ್ನಡ ಚಿತ್ರಗಳ ಸಂಖ್ಯೆ ಸಹ ಕ್ರಮೇಣ ಹೆಚ್ಚಾಯಿತು. ಅದಕ್ಕೆ ಸರಿಯಾಗಿ 1934ರಿಂದ 69ರವರೆಗೆ, ಅಂದರೆ 35 ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 300 ಮಾತ್ರ. ಅದೇ 70ರ ದಶಕದಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 350ಕ್ಕೇರಿತು.
ಕನ್ನಡ ಚಿತ್ರರಂಗದಲ್ಲೊಂದು ಹೊಸ ಅಲೆ
1970ರ ದಶಕದಲ್ಲಿ ಕನ್ನಡದಲ್ಲಿ ಹೆಚ್ಚಾಗಿ ಪೌರಾಣಿಕ, ಭಕ್ತಿಪ್ರಧಾನ ಮತ್ತು ಕೌಟುಂಬಿಕ ಚಿತ್ರಗಳೇ ಬರುತ್ತಿದ್ದವು. 1970ರಲ್ಲಿ ಬಿಡುಡೆಯಾದ ಡಾ.ಯು.ಆರ್. ಅನಂತಮೂರ್ತಿ ವಿರಚಿತ ‘ಸಂಸ್ಕಾರ’ ಕಾದಂಬರಿಯನ್ನು ಆಧರಿಸಿದ ಚಿತ್ರ, ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನು ಕೊಟ್ಟಂತಹ ಚಿತ್ರ ಎಂದರೆ ತಪ್ಪಿಲ್ಲ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗವಾಗಿತ್ತು. ಅಲ್ಲಿಯವರೆಗೂ ಚಿತ್ರರಂಗದಲ್ಲಿದ್ದ ಒಂದಿಷ್ಟು ಫಾರ್ಮುಲಾಗಳನ್ನು ತೊಡೆದುಹಾಕಿದ ಚಿತ್ರ ಪಟ್ಟಾಭಿರಾಮ ರೆಡ್ಡಿ ನಿರ್ದೇಶನದ ‘ಸಂಸ್ಕಾರ’. ಅಲ್ಲಿಯವರೆಗೂ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದ ಹಾಡು, ಹೊಡೆದಾಟ, ಸುಖಾಂತ್ಯ ಇದ್ಯಾವುದೂ ಈ ಚಿತ್ರದಲ್ಲಿ ಇರಲಿಲ್ಲ.
ಇದನ್ನೂ ಓದಿರಿ: ಕರ್ನಾಟಕ 50 | ಎಡಪಂಥೀಯರು ಅಂಬೇಡ್ಕರರಿಂದ ದೂರಾದರೆಂಬುದು ಸುಳ್ಳು- ಜಿ.ಆರ್
ಇಲ್ಲಿಂದ ಈ ರೀತಿಯ ಚಿತ್ರಗಳ ಸಂಪ್ರದಾಯ ಶುರುವಾಯಿತು. ‘ವಂಶವೃಕ್ಷ’, ‘ಅಬಚೂರಿನ ಪೋಸ್ಟ್ ಆಫೀಸ್’, ‘ಚೋಮನ ದುಡಿ’, ‘ಸಂಕಲ್ಪ’, ‘ಕಾಡು’, ‘ತಬ್ಬಲಿಯು ನೀನಾದೆ ಮಗನೆ’, ‘ಹಂಸಗೀತೆ’, ‘ಕಥಾ ಸಂಗಮ’, ‘ಕಾಕನ ಕೋಟೆ’, ‘ಘಟಶ್ರಾದ್ಧ’, ‘ಪಲ್ಲವಿ’, ‘ಗ್ರಹಣ’ ಹೀಗೆ 70ರ ದಶಕದಲ್ಲಿ ಬಿಡುಗಡೆಯಾದ ಹಲವು ಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದವು. ಹೊಸ ಅಲೆ ಚಿತ್ರಗಳು, ಕಲಾತ್ಮಕ ಚಿತ್ರಗಳು ಹೀಗೆ ಬೇರೆಬೇರೆ ಹಣೆಪಟ್ಟಿ ಅಂಟಿಸಿಕೊಂಡು ಬಂದ ಈ ಚಿತ್ರಗಳು ಬರೀ ಖ್ಯಾತಿ ಅಥವಾ ಪ್ರಶಸ್ತಿಗಳಿಗೆ ಸೀಮಿತವಾಗಿರಲಿಲ್ಲ. ಈ ಚಿತ್ರಗಳಿಗೆ ರಾಜ್ಯದಲ್ಲಿ ದೊಡ್ಡ ಪ್ರೇಕ್ಷಕವರ್ಗವಿತ್ತು. ಕಮರ್ಷಿಯಲ್ ಚಿತ್ರಗಳ ಜೊತೆಗೆ ಈ ಚಿತ್ರಗಳನ್ನು ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ವಿತರಕರು ಬಿಡುಗಡೆ ಮಾಡುತ್ತಿದ್ದರು.
‘ಸಂಸ್ಕಾರ’ದಿಂದ ಹೊಸ ಪರಂಪರೆಗೆ ನಾಂದಿ
‘ಸಂಸ್ಕಾರ’ ಚಿತ್ರವು ಹಲವು ನಿರ್ದೇಶಕರಿಗೆ ಈ ತರಹದ ಹೊಸ ಅಲೆಯ ಚಿತ್ರಗಳನ್ನು ಮಾಡುವುದಕ್ಕೆ ಪ್ರೇರೇಪಿಸಿತು. ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ನಾಗಾಭರಣ, ಬರಗೂರು ರಾಮಚಂದ್ರಪ್ಪ, ಡಾ. ಚಂದ್ರಶೇಖರ್ ಕಂಬಾರ, ಪಿ. ಲಂಕೇಶ್ ಮುಂತಾದವರು ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಬರುವುದರ ಜೊತೆಗೆ, ಮುಂದಿನ ವರ್ಷಗಳಲ್ಲಿ ಈ ಪರಂಪರೆಯನ್ನು ಗಟ್ಟಿಗೊಳಿಸಿದರು. ನಿರಂತರವಾಗಿ ಈ ತರಹದ ಚಿತ್ರಗಳನ್ನು ನಿರ್ದೇಶಿಸುವ ಮೂಲಕ, ಹೊಸ ನಿರ್ದೇಶಕರಿಗೆ ಸ್ಫೂರ್ತಿಯಾದರು. ಜೊತೆಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಹಲವು ಪ್ರಶಸ್ತಿಗಳನ್ನು ಗೆದ್ದು ತರುವ ಮೂಲಕ ಮಾದರಿಯಾದರು. ಮೂಕಿ ಯುಗದಿಂದಲೂ ಸಾಹಿತ್ಯ ಕ್ಷೇತ್ರದ ಹಲವು ದಿಗ್ಗಜರು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ‘ಸಂಸ್ಕಾರ’ದ ನಂತರ ಆ ನಂಟು ಇನ್ನಷ್ಟು ತೀವ್ರವಾಯಿತು. ಒಂದು ಕಡೆ ಕಾದಂಬರಿ ಆಧಾರಿತ ಚಿತ್ರಗಳ ಸಂಖ್ಯೆ ಹೆಚ್ಚಾದರೆ, ಹಲವು ಸಾಹಿತಿಗಳು ಕನ್ನಡ ಚಿತ್ರರಂಗದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಗುರುತಿಸಿಕೊಂಡರು. ಡಾ. ಶಿವರಾಮ ಕಾರಂತ, ಡಾ.ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಆಲನಹಳ್ಳಿ ಕೃಷ್ಣ, ಪಿ. ಲಂಕೇಶ್, ನವರತ್ನರಾಮ್ ಮುಂತಾದವರು ಪ್ರತ್ಯಕ್ಷವಾಗಿ ನಿರ್ದೇಶನ, ಬರವಣಿಗೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಗುರುತಿಸಿಕೊಂಡರು.

ಇದು ಕಲಾತ್ಮಕ ಚಿತ್ರಗಳ ವಿಷಯವಾದರೆ ಕಮರ್ಷಿಯಲ್ ಚಿತ್ರಗಳಲ್ಲೂ ದೊಡ್ಡ ಬದಲಾವಣೆಯಾಗಿತ್ತು. 70ರ ದಶಕದವರೆಗೂ ಹೆಚ್ಚಾಗಿ ಪೌರಾಣಿಕ ಮತ್ತು ಕೌಟುಂಬಿಕ ಚಿತ್ರಗಳೇ ಬರುತ್ತಿದ್ದವು. 60ರ ದಶಕದ ಕೊನೆಯಲ್ಲಿ ಬಾಂಡ್ ಶೈಲಿಯ ‘ಜೇಡರ ಬಲೆ’ ಬಿಡುಗಡೆಯಾಯಿತು. ಅಲ್ಲಿಂದ ಬೇರೆಬೇರೆ ತರಹದ ಚಿತ್ರಗಳನ್ನು ಮಾಡುವ ಪ್ರಯತ್ನಗಳಾಯಿತು. ಈ ದಶಕದಲ್ಲಿ ಬಂದ ‘ಬಂಗಾರದ ಮನುಷ್ಯ’, ‘ಭೂತಯ್ಯನ ಮಗ ಅಯ್ಯು’, ‘ನಾಗರಹಾವು’, ‘ಗಂಧದ ಗುಡಿ’, ‘ಶಂಕರ್ ಗುರು’, ‘ಒಂದಾನೊಂದು ಕಾಲದಲ್ಲಿ’, ‘ಶರಪಂಜರ’, ‘ಕಸ್ತೂರಿ ನಿವಾಸ’, ‘ಬಯಲು ದಾರಿ’, ‘ಮಯೂರ’, ‘ಸಿಂಗಾಪೂರ್‍ನಲ್ಲಿ ರಾಜ-ಕುಳ್ಳ’, ‘ಕಾಡು’, ‘ಕೋಕಿಲ’, ‘ಭಕ್ತ ಕುಂಬಾರ’, ‘ಬಬ್ರುವಾಹನ’ ಮುಂತಾದ ಹಲವು ಚಿತ್ರಗಳು ಕನ್ನಡ ಚಿತ್ರರಂಗದ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿದೆ. ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಹುಣಸೂರು ಕೃಷ್ಣಮೂರ್ತಿ, ಸಿದ್ಧಲಿಂಗಯ್ಯ, ಕೆ.ಎಸ್.ಎಲ್. ಸ್ವಾಮಿ, ದೊರೈ-ಭಗವಾನ್, ಗೀತಪ್ರಿಯ, ರಾಜೇಂದ್ರ ಸಿಂಗ್ ಬಾಬು, ಭಾರ್ಗವ, ವಿಜಯ್, ವಿ. ಸೋಮಶೇಖರ್ ಕನ್ನಡ ಚಿತ್ರರಂಗವನ್ನು ತಮ್ಮ ಚಿತ್ರಗಳ ಮೂಲಕ ಇನ್ನಷ್ಟು ಶ್ರೀಮಂತಗೊಳಿಸಿದರು.
ಹೊಸ ತಲೆಮಾರಿನ ಪ್ರವೇಶ
70ರ ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಹೊಸ ಪ್ರತಿಭೆಗಳ ಪರಿಚಯವಾಯಿತು. 1954ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗಿ ಚಿತ್ರರಂಗಕ್ಕೆ ಅಡಿ ಇಟ್ಟಿದ್ದ ಡಾ. ರಾಜಕುಮಾರ್, 70ರ ದಶಕದೊಳಗೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರ ಸರೀಕರಾದ ಕಲ್ಯಾಣ್ ಕುಮಾರ್, ಉದಯಕುಮಾರ್, ನಂತರ ಬಂದ ರಾಜಶಂಕರ್, ರಾಜೇಶ್, ರಮೇಶ್ ಮುಂತಾದವರು ಸಹ ಸಾಕಷ್ಟು ಜನಪ್ರಿಯರಾಗುವುದರ ಜೊತೆಗೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಹೀಗಿರುವಾಗಲೇ, 70ರ ದಶಕದಲ್ಲಿ ಹೊಸ ತಲೆಮಾರಿನ ನಾಯಕರ ಆಗಮನವಾಯಿತು. ಶ್ರೀನಾಥ್, ಗಂಗಾಧರ್ ಮುಂತಾದವರು 60ರ ದಶಕದ ಕೊನೆಯಲ್ಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ‘ನಾಗರಹಾವು’ ಚಿತ್ರದ ಮೂಲಕ ವಿಷ್ಣುವರ್ಧನ್ ಮತ್ತು ಅಂಬರೀಶ್, ‘ಭೂತಯ್ಯನ ಮಗ ಅಯ್ಯು’ ಮೂಲಕ ಲೋಕೇಶ್, ‘ಸಂಕಲ್ಪ’ ಮೂಲಕ ಅನಂತ್ ನಾಗ್, ‘ಎಡಕಲ್ಲು ಗುಡ್ಡದ ಮೇಳೆ’ ಮೂಲಕ ಚಂದ್ರಶೇಖರ್, ‘ಒಂದಾನೊಂದು ಕಾಲದಲ್ಲಿ’ ಮೂಲಕ ಶಂಕರ್ ನಾಗ್, ಜೈಜಗದೀಶ್, ರಾಮಕೃಷ್ಣ, ಅಶೋಕ್, ಶ್ರೀನಿವಾಸಮೂರ್ತಿ ಮುಂತಾದವರ ಆಗಮನ 70ರ ದಶಕದಲ್ಲಾಯಿತು. ಇವರೆಲ್ಲರೂ ಚಿತ್ರರಂಗವನ್ನು ಇನ್ನಷ್ಟು ಮುನ್ನಡೆಸಿದರು.

ಇದನ್ನೂ ಓದಿರಿ: ಜಿಗಿದು ನಲಿವ ಕಿಶೋರಾವಸ್ಥೆ ಅದೆಂತಹ ಅಪಾಯಕ್ಕೆ ಸಿಲುಕಿದೆ ಬಲ್ಲಿರಾ?
ಹೀಗೆ ಹೊಸ ಕಥೆಗಳಿಂದ, ವಿಷಯಗಳಿಂದ, ಕಲಾವಿದರಿಂದ, ತಂತ್ರಜ್ಞರಿಂದ, ದೃಷ್ಟಿಕೋನದಿಂದ ಕನ್ನಡ ಚಿತ್ರರಂಗ ಇನ್ನಷ್ಟು ಪ್ರಕಾಶಿಸುವುದರ ಜೊತೆಗೆ ಸುವರ್ಣ ಯುಗ ಎಂದೇ ಜನಪ್ರಿಯವಾಯಿತು. ಈ ದಶಕದಲ್ಲಿ ಕನ್ನಡ ಚಿತ್ರರಂಗದ ಹೆಗ್ಗಳಿಕೆ- ಹತ್ತು ಹಲವು. ಒಂದು ಕಡೆ ಸೀಮಿತ ಚೌಕಟ್ಟಿನಲ್ಲಿ, ಕಡಿಮೆ ಬಜೆಟ್‍ನಲ್ಲಿ ಚಿತ್ರೀಕರಣ ನಡೆಸುವುದರ ಜೊತೆಗೆ, ಇನ್ನೊಂದು ಕಡೆ ವಿದೇಶದಲ್ಲಿ ಚಿತ್ರೀಕರಣ ಮಾಡುವ, ಅದ್ಧೂರಿ ಸೆಟ್‍ಗಳಲ್ಲಿ, ನೂರಾರು ಜನರ ಸಮ್ಮುಖದಲ್ಲಿ ಚಿತ್ರೀಕರಣ ಮಾಡುವ ಪರಿಪಾಠ ಇದೇ ಯುಗದಲ್ಲಿ ಪ್ರಾರಂಭವಾಯಿತು. ಒಂದು ಕಡೆ ಹೊಸ ವಿಷಯಗಳನ್ನು ಹೇಳುವ ಜೊತೆಗೆ ಕಮರ್ಷಿಯಲ್ ರೀತಿಯಲ್ಲಿ ಅತ್ಯಂತ ವೈಭವೀಕರಿಸಿ ಹೇಳುವ ಶೈಲಿಯೂ ಶುರುವಾಯಿತು. ಕನ್ನಡ ಚಿತ್ರರಂಗವು 70ರ ದಶಕದವರೆಗೂ ಒಂದು ರೀತಿಯಾದರೆ, 70ರ ದಶಕದ ನಂತರ ಇನ್ನೊಂದು ರೀತಿಯಾಯಿತು. ಅಲ್ಲಿಂದ ಚಿತ್ರಗಳನ್ನು ಮಾಡುವ, ನೋಡುವ, ಅಭ್ಯಸಿಸುವ, ಅರಿತುಕೊಳ‍್ಳುವ ಶೈಲಿ ಬದಲಾಯಿತು. ಆ ಮಟ್ಟಿಗೆ 70ರ ದಶಕ ಅಥವಾ ಸುವರ್ಣ ಯುಗ ಕನ್ನಡ ಚಿತ್ರರಂಗದ ಪಾಲಿಗೆ ಮಹತ್ವದ ಯುಗ ಎಂದರೆ ತಪ್ಪಿಲ್ಲ.
ಉತ್ತುಂಗದಿಂದ ಇಳಿಮುಖದತ್ತ ಕನ್ನಡ ಚಿತ್ರರಂಗ
ಇದು 80ರ ದಶಕದಲ್ಲೂ ಯಶಸ್ವಿಯಾಗಿ ಮುಂದುವರೆಯಿತು. ಒಂದು ಕಡೆ ಸರ್ಕಾರ ಚಿತ್ರರಂಗಕ್ಕೆ ತನ್ನ ಪ್ರೋತ್ಸಾಹವನ್ನು ಮುಂದುವರೆಸಿತು. ಕರ್ನಾಟಕದಲ್ಲಿ ಸಿನಿಮಾ ಚಟುವಟಿಕೆಗಳು ಭರದಿಂದ ಸಾಗಿದವು. ಬರೀ ಬೆಂಗಳೂರು, ಮೈಸೂರುಗಳಷ್ಟೇ ಅಲ್ಲದೆ, ರಾಜ್ಯದ ಬೇರೆಬೇರೆ ಊರುಗಳಲ್ಲೂ ಚಿತ್ರೀಕರಣ ನಡೆಯುವುದರ ಜೊತೆಗೆ, ಅಲ್ಲಿನ ಮಂದಿ ಉತ್ಸಾಹದಿಂದ ಚಿತ್ರರಂಗದ ಬೇರೆ ಬೇರೆ ವಲಯಗಳಲ್ಲಿ ತೊಡಗಿಸಿಕೊಂಡರು. ಹೀಗಿರುವಾಗಲೇ, ಚಿತ್ರರಂಗಕ್ಕೆ ಹೊಸ ತಲೆಮಾರಿನ ನಟರು ಮತ್ತು ನಿರ್ದೇಶಕರ ಆಗಮನವಾಯಿತು. ಇವರೆಲ್ಲರ ಕೊಡುಗೆಯಿಂದ ಕನ್ನಡ ಚಿತ್ರರಂಗ ಮತ್ತಷ್ಟು ಬಲಿಷ್ಠವಾಯಿತು. 1985ರ ಹೊತ್ತಿಗೆ ಕನ್ನಡ ಚಿತ್ರಗಳ ಚಿತ್ರೀಕರಣವೆಲ್ಲ ಕರ್ನಾಟಕದಲ್ಲೇ ಆಗುತ್ತಿದ್ದರೂ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಮದರಾಸನ್ನು ಅವಲಂಬಿಸಬೇಕಾದ ಅಗತ್ಯವಿತ್ತು. ಶಂಕರ್ ನಾಗ್ ಅವರು ಬೆಂಗಳರಿನಲ್ಲಿ ಸಂಕೇತ್ ಸ್ಟುಡಿಯೋ ಪ್ರಾರಂಭಿಸಿದ ಮೇಲೆ ಆ ಕೊರತೆಯೂ ನಿವಾರಣೆಯಾಯಿತು. ಅಲ್ಲಿಂದ ಕನ್ನಡ ಚಿತ್ರರಂಗ ಮದರಾಸನ್ನು ಅವಲಂಬಿಸಬೇಕಾದ ಅವಶ್ಯಕತೆ ಇರಲಿಲ್ಲ. ಹಾಗಾಗಿ, ಆರಂಭದಿಂದಲೂ ಮದರಾಸಿನಲ್ಲಿ ನೆಲೆಯೂರಿದ್ದ ಕನ್ನಡ ಚಿತ್ರರಂಗವು, ನಂಟು ಬಿಡಿಸಿಕೊಂಡು ಕರ್ನಾಟಕದಲ್ಲೇ ನೆಲೆಯೂರಿತು.
ಒಂದು ಕಡೆ ಕನ್ನಡ ಚಿತ್ರರಂಗ ಕರ್ನಾಟಕದಲ್ಲಿ ನೆಲೆಯೂರುತ್ತಿದ್ದಂತೆಯೇ ಇನ್ನೊಂದು ಕಡೆ ಹೀಗೆ ಎರಡು ದಶಕಗಳ ಕಾಲ ಉತ್ತುಂಗದಲ್ಲಿದ್ದ ಕನ್ನಡ ಚಿತ್ರರಂಗದ ಹೆಗ್ಗಳಿಕೆ ಕ್ರಮೇಣ 90ರ ದಶಕದಲ್ಲಿ ಕಡಿಮೆಯಾಗುತ್ತಾ ಬಂತು. ಇದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾಗಿ, 70ರ ದಶಕದಲ್ಲಿ ಚಿತ್ರರಂಗದಲ್ಲಿ ತೊಡಗಿಸಿಕೊಂಡ ಹಲವು ಸಾಹಿತಿಗಳು, ಪ್ರಾಜ್ಞರು, ಬುದ್ಧಿಜೀವಿಗಳು ಚಿತ್ರರಂಗದಿಂದ ದೂರವಾಗಿ, ತಮ್ಮದೇ ಕೆಲಸಗಳಲ್ಲಿ ತೊಡಗಿಸಿಕೊಂಡರು. ಕಲಾತ್ಮಕ ಚಿತ್ರಗಳ ನಿರ್ಮಾಣ ಕಡಿಮೆಯಾಗಿತ್ತು. ಪ್ರಮುಖವಾಗಿ, ಆ ಕಾಲದ ಕನ್ನಡ ಚಿತ್ರಗಳು ಗಮನಸೆಳೆದಿದ್ದು ತನ್ನ ನೈಜತೆ, ಸ್ವಂತಿಕೆ ಮತ್ತು ಸೊಗಡಿನ ದೃಷ್ಟಿಯಿಂದ. ಇವೆಲ್ಲವೂ ಕಡಿಮೆಯಾಗಿ, ಹೊಸ ತಲೆಮಾರಿನ ನಿರ್ದೇಶಕರು ಹೆಚ್ಚಾಗಿ ಕಮರ್ಷಿಯಲ್ ಮತ್ತು ನಗರ ಕೇಂದ್ರೀಕೃತ ಚಿತ್ರಗಳನ್ನು ಮಾಡುವತ್ತ ಗಮನಹರಿಸಿದರು. ಅಲ್ಲೊಂದು ಇಲ್ಲೊಂದು ಗ್ರಾಮೀಣ ಭಾಗದ ಚಿತ್ರಗಳು ಬಂದರೂ, ವ್ಯವಸ್ಥೆ ಮತ್ತು ರಾಜಕೀಯದ ವಿರುದ್ಧ ಸಾಮಾನ್ಯ ಮನುಷ್ಯ ಅಥವಾ ವ್ಯವಸ್ಥೆಯ ಒಂದು ಭಾಗವಾಗಿರುವ ಒಬ್ಬ ಮನುಷ್ಯ ಸಿಡಿದೇಳುವ ಸಾಲುಸಾಲು ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾದವು. 50ರ ದಶಕದಿಂದಲೂ ಪರಭಾಷೆಯ ಕೆಲವು ಚಿತ್ರಗಳು ಅಲ್ಲೊಂದು ಇಲ್ಲೊಂದು ಕನ್ನಡಕ್ಕೆ ರೀಮೇಕ್ ಆಗಿ ಬರುತ್ತಿದ್ದರೂ, ಅದು ದೊಡ್ಡ ಮಟ್ಟದಲ್ಲಿ ಜಾರಿಗೆ ಬಂದಿದ್ದು 90ರ ದಶಕದಲ್ಲಿ. ಹೊಸತನ ಕಡಿಮೆಯಾಗಿ, ಪ್ರೇಕ್ಷಕರಿಗೆ ಏಕತಾನತೆ ಕಾಡತೊಡಗಿತು. ಅಪರೂಪಕ್ಕೆಂಬಂತೆ ಕೆಲವು ಚಿತ್ರಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದರೂ, ಹೆಚ್ಚಾಗಿ ಬರುತ್ತಿದ್ದುದು ಹಾಡು, ಸಾಹಸ ದೃಶ್ಯಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದ್ದ ಕಮರ್ಷಿಯಲ್ ಚಿತ್ರಗಳೇ.
ಕಡಿಮೆಯಾದ ಗುಣಮಟ್ಟ, ಹೆಚ್ಚಿದ ಸಂಖ್ಯೆ
ಪ್ರಮುಖವಾಗಿ ಈ ಘಟ್ಟದಲ್ಲಿ ಪ್ರಯೋಗಶೀಲತೆ ಕಡಿಮೆಯಾಗಿತ್ತು. ಒಂದು ಚಿತ್ರ ಗೆದ್ದರೆ, ಅದ ಟ್ರೆಂಡ್ ಆಗಿ, ಅದೇ ರೀತಿಯ ಹಲವು ಚಿತ್ರಗಳು ಒಂದರ ಹಿಂದೊಂದು ನಿರ್ಮಾಣವಾಗುತ್ತಿದ್ದವು. ಪ್ರೇಮಕಥೆಗಳು, ಸೇಡಿನ ಕಥೆಗಳು, ಕಣ್ಣೀರ ಕಥೆಗಳು, ಪೊಲೀಸ್ ಕಥೆಗಳು, ರೌಡಿಸಂ ಕಥೆಗಳೇ ಹೆಚ್ಚಾಗಿ, ಬೇರೆ ಪರಿಸರದ ಕಥೆಗಳು ವಿರಳವಾದವು. ಹೀಗಿರುವಾಗಲೇ ಅಲ್ಲೊಂದು ಇಲ್ಲೊಂದು ಚಿತ್ರಗಳು ಗಮನಸೆಳೆದರೂ ಮಿಕ್ಕಂತೆ ಅದೇ ಚರ್ವಿತ ಚರ್ವಣ ಚಿತ್ರಗಳೇ. ಸಾಲದ್ದಕ್ಕೆ 90ರ ದಶಕದ ಕೊನೆಯಲ್ಲಿ ರೀಮೇಕ್ ಅತಿಯಾಗಿ, ಪರಭಾಷೆಯ ಮೀಸೆ ಸಂಸ್ಕೃತಿ ಹೆಚ್ಚಾಗಿ, ಕನ್ನಡ ಚಿತ್ರಗಳಲ್ಲಿ ಸ್ವಂತಿಕೆಯೇ ಇಲ್ಲ ಎನ್ನುವಂತಾಯಿತು.
ಇದನ್ನೂ ಓದಿರಿ: ಭಾರತ ‘ಮುಸ್ಲಿಂ ರಾಷ್ಟ್ರ’ವಾಗಲು ಸಾಧ್ಯವೇ? ಅಸಲಿ ಸಂಗತಿಗಳೇನು?
ಹೊಸ ಶತಮಾನ ಪ್ರಾರಂಭವಾಗುತ್ತಿದ್ದಂತೆಯೇ ಇನ್ನಷ್ಟು ಹೊಸ ತಲೆಮಾರಿನ ಕಲಾವಿದರು ಮತ್ತು ತಂತ್ರಜ್ಞರು ಕನ್ನಡ ಚಿತ್ರರಂಗಕ್ಕೆ ಹರಿದು ಬಂದರು. ಆ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಉತ್ತುಂಗದಲ್ಲಿದ್ದ ಕಾರಣ, ಅಲ್ಲಿನ ಹಲವರು ಕನ್ನಡ ಚಿತ್ರರಂಗದಲ್ಲಿ ಹಣ ತೊಡಗಿಸಿದರು. ಕನ್ನಡ ಚಿತ್ರಗಳ ಸಂಖ್ಯೆ ಏರಿತು. 90ರ ದಶಕದವರೆಗೂ ವರ್ಷಂಪ್ರತಿ 100 ಚಿತ್ರಗಳು ಬಿಡುಗಡೆಯಾದರೆ, 2000ನೇ ಇಸವಿಯ ನಂತರ ಆ ಸಂಖ್ಯೆ ಮತ್ತಷ್ಟು ಏರಿತು. ಚಿತ್ರಗಳ ಸಂಖ್ಯೆ ಹೆಚ್ಚಾಯಿತೇ ಹೊರತು, ಗುಣಮಟ್ಟ ಹೆಚ್ಚಲಿಲ್ಲ. ಇದರ ಜೊತೆಗೆ ಪರಭಾಷಾ ಚಿತ್ರಗಳ ಪೈಪೋಟಿ, ಟಿವಿ ಚಾನಲ್‍ಗಳ ಪೈಪೋಟಿ, ಚಿತ್ರಮಂದಿರಗಳ ಕೊರತೆ… ಇವೆಲ್ಲವೂ ಕನ್ನಡ ಚಿತ್ರರಂಗವನ್ನು ಕಾಡತೊಡಗಿತು.
ಡಿಜಿಟಲ್ ಕ್ರಾಂತಿಯಿಂದ ಪ್ರೇಕ್ಷಕರ ಕೊರತೆ
ಕಳೆದ ಒಂದು ದಶಕದಿಂದ ಕನ್ನಡ ಚಿತ್ರರಂಗ ಬೇರೆಯದೇ ಸಮಸ್ಯೆ ಎದುರಿಸುತ್ತಿದೆ. ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಎಲ್ಲ ಚಿತ್ರರಂಗಗಳಿಗೂ ಈ ಬಿಸಿ ತಟ್ಟಿದೆ. ಅದೇ ಡಿಜಿಟಲ್ ಮತ್ತು ಮೊಬೈಲ್ ಕ್ರಾಂತಿ. ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರಂಗಕ್ಕೆ ಪರಭಾಷಾ ಚಿತ್ರಗಳ ಪೈಪೋಟಿ, ಪೈರಸಿ, ಮನರಂಜನಾ ಚಾನೆಲ್‍ಗಳ ಹಾವಳಿ ಮಾತ್ರ ಇತ್ತು. ಆದರೆ, ಈಗ ಡಿಜಿಟಲ್ ಕ್ರಾಂತಿಯಿಂದ ಸಾಕಷ್ಟು ಪೈಪೋಟಿ ಎದುರಿಸಬೇಕಿದೆ. ಪ್ರಮುಖವಾಗಿ, ಇಂದು ಚಿತ್ರಮಂದಿರಗಳಿಗೆ ಹೋಗಿ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದೆ. 2013ರಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ, 32 ಕೋಟಿ ಜನ ಚಿತ್ರಮಂದಿರಗಳಿಗೆ ಹೋಗಿ ಚಿತ್ರಗಳನ್ನು ನೋಡುತ್ತಿದ್ದರಂತೆ. 10 ವರ್ಷಗಳ ನಂತರ ಅಂದರೆ 2023ರಲ್ಲಿ ಆ ಸಂಖ್ಯೆ 10ರಿಂದ 15 ಕೋಟಿಗೆ ಇಳಿದಿದೆ ಎಂದು ಹೇಳಲಾಗುತ್ತದೆ. ಇಷ್ಟಕ್ಕೂ ಜನ ಯಾಕೆ ಚಿತ್ರಮಂದಿರಗಳತ್ತ ಬರುತ್ತಿಲ್ಲ ಎಂಬ ಪ್ರಶ್ನೆಗೆ, ಹಲವು ಉತ್ತರಗಳು ಸಿಗುತ್ತಿವೆ. ಮೊದಲಿಗೆ ಹಿಂದಿನಂತೆ ಈಗ ಒಳ್ಳೆಯ ಮತ್ತು ಗುಣಮಟ್ಟದ ಚಿತ್ರಗಳ ನಿರ್ಮಾಣವಾಗುತ್ತಿಲ್ಲ ಎಂಬುದು ಒಂದು ಮಹತ್ವದ ಕಾರಣ. ಅದರ ಜೊತೆಗೆ ಪೈರಸಿ, ಟ್ರಾಫಿಕ್ ಸಮಸ್ಯೆ, ಟಿಕೆಟ್ ದರ ಏರಿಕೆ, ದುಬಾರಿ ವೆಚ್ಚ … ಸೇರಿದಂತೆ ಹಲವು ಕಾರಣಗಳನ್ನು ನೀಡಲಾಗುತ್ತದೆ. ಆದರೆ, ಇದೆಲ್ಲಕ್ಕಿಂತ ಒಂದು ಪ್ರಮುಖ ಕಾರಣವೆಂದರೆ ಅದು ಮೊಬೈಲ್ ಫೋನ್.

ಹಿಂದೊಮ್ಮೆ, ಮೊದಲು ಮೊಬೈಲ್ ಫೋನ್ ಬರೀ ಮಾತಿಗಾಗಿ ಬಳಸಲಾಗುತ್ತಿತ್ತು. ಆ್ಯಂಡ್ರಾಯ್ಡ್ ಫೋನ್ ಆವಿಷ್ಕಾರದ ಬಳಿಕ, ಮೊಬೈಲ್ ಬರೀ ಮಾತಿಗಷ್ಟೇ ಸೀಮಿತವಾಗಿಲ್ಲ. ಒಂದು ಕಾಲಕ್ಕೆ ಮನರಂಜನೆ ಎಂದರೆ ಅದು ಚಿತ್ರಮಂದಿರ ಮಾತ್ರ. ಸಿನಿಮಾ ಬೇಕೆಂದರೆ ಚಿತ್ರಮಂದಿರಗಳಿಗೆ ಹೋಗಬೇಕಿತ್ತು. ಕ್ರಮೇಣ ಟಿವಿಗಳಲ್ಲಿ ಸಿನಿಮಾ ನೋಡುವುದಕ್ಕೆ ಸಾಧ್ಯವಾಯಿತು. ಓಟಿಟಿ (ಓವರ್ ದಿ ಟಾಪ್) ವೇದಿಕೆಯ ಮೂಲಕ ಯಾವಾಗ ಬೇಕಾದರೂ ಚಲನಚಿತ್ರಗಳನ್ನು ಮೊಬೈಲ್‍ನಲ್ಲಿ ನೋಡುವ ವ್ಯವಸ್ಥೆ ಪ್ರಾರಂಭವಾಯಿತೋ, ಆಗಿನಿಂದ ಚಿತ್ರಮಂದಿರಗಳಲ್ಲಿ ಚಿತ್ರ ನೋಡುವ ಪರಿಪಾಠ ಹಂತಹಂತವಾಗಿ ಕಡಿಮೆಯಾಗತೊಡಗಿತು. ಚಿತ್ರಮಂದಿರಗಳಾದರೆ, ಅವರು ನಿಗದಿಪಡಿಸಿದ ಸಮಯದಲ್ಲಿ, ಅವರು ಕೇಳಿದ ದರದಲ್ಲಿ ಚಿತ್ರಗಳನ್ನು ನೋಡಬೇಕು. ಆದರೆ, ಓಟಿಟಿಯಲ್ಲಿ ಆ ತರಹದ ಯಾವುದೇ ಸಮಸ್ಯೆ ಇಲ್ಲ. ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಚಿತ್ರಗಳನ್ನು ನೋಡಬಹುದು. ಹಾಗಾಗಿ, ಚಿತ್ರಮಂದಿರಗಳಿಗೆ ಹೋಗಿ ಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗಿದೆ.
ಇದು ಬರೀ ಕನ್ನಡ ಚಿತ್ರರಂಗದ ಸಮಸ್ಯೆ ಅಲ್ಲ
ಇದು ಬರೀ ಕನ್ನಡ ಚಿತ್ರರಂಗದ ಸಮಸ್ಯೆಯೊಂದೇ ಅಲ್ಲ, ಒಟ್ಟಾರೆ ಎಲ್ಲಾ ಭಾಷೆಗಳ ಚಿತ್ರರಂಗಗಳೂ ಈ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಈ ಸಮಸ್ಯೆ ಸ್ವಲ್ಪ ಜಾಸ್ತಿಯೇ ಇದೆ. ಅದಕ್ಕೆ ಪೂರಕವಾಗಿ ಈ ವರ್ಷ ಕನ್ನಡದಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ಅದರಲ್ಲಿ ನಾಲ್ಕೈದು ಚಿತ್ರಗಳು ಮಾತ್ರ ಹಾಕಿದ ಹಣವನ್ನು ವಾಪಸ್ಸು ಪಡೆಯುವುದರ ಜೊತೆಗೆ ಲಾಭ ನೋಡಿವೆ. ಮಿಕ್ಕಂತೆ ಶೇ. 95ರಷ್ಟು ಚಿತ್ರಗಳು ಹಾಕಿದ ಬಂಡವಾಳವನ್ನೂ ವಾಪಸ್ಸು ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಒಂದು ಕಾಲಕ್ಕೆ ಚಿತ್ರ ಅದ್ಭುತವಲ್ಲದಿದ್ದರೂ, ಒಂದು ಮಟ್ಟಕ್ಕೆ ಇದೆ ಎಂದರೆ ನಾಲ್ಕೈದು ವಾರಗಳ ಪ್ರದರ್ಶನ ಕಾಣುತ್ತಿತ್ತು. ಆದರೆ, ಈಗ ನಾಲ್ಕೈದು ದಿನಗಳ ಪ್ರದರ್ಶನ ಕಾಣುವುದೇ ಹೆಚ್ಚು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿರಿ: ‘ಸಿಲಿಕಾನ್ ವ್ಯಾಲಿ ಬೆಂಗಳೂರು’ ಎಂಬ ವಿಸ್ಮಯ!
ಹಾಗೆ ನೋಡಿದರೆ, ಇಂದು ಗುಣಮಟ್ಟದ ಚಿತ್ರಗಳಿಗೆ ವಿಪುಲವಾದ ಅವಕಾಗಳಿವೆ. ಹಿಂದೊಮ್ಮೆ ನಿರ್ಮಾಪಕರಿಗೆ ಇದ್ದ ಒಂದೇ ಮಾರ್ಗ ಎಂದರೆ ಚಿತ್ರಮಂದಿರಗಳು ಮಾತ್ರ. ಅದು ಬಿಟ್ಟರೆ ಗುಣಮಟ್ಟದ ಚಿತ್ರಗಳಿಗೆ ಸರ್ಕಾರದಿಂದ ಸಿಗುತ್ತಿದ್ದ ಸಬ್ಸಿಡಿ. ಬಹಳಷ್ಟು ಚಿತ್ರಗಳ ವಿಷಯದಲ್ಲಿ ಆ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಿಯೇ ಹಾಕಿದ ಹಣ ವಾಪಸ್ಸು ಪಡೆಯಬೇಕಿತ್ತು, ಲಾಭ ಮಾಡಬೇಕಿತ್ತು. ಆದರೆ, ಈಗ ಅದೊಂದೇ ಮಾರ್ಗವಲ್ಲ. ಇಂದು ನಿರ್ಮಾಪಕರ ಎದುರು ಹಲವು ಮಾರ್ಗಗಳಿವೆ. ಸ್ಯಾಟಲೈಟ್, ಡಿಜಿಟಲ್, ಡಬ್ಬಿಂಗ್ ಸೇರಿದಂತೆ ಹಲವು ಹಕ್ಕುಗಳಿಂದ ದುಡ್ಡು ಪಡೆಯಬಹುದಾಗಿದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಮನರಂಜನಾ ಮಾಧ್ಯಮಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಭಾಷೆಗೆ ಗಡಿ ಇಲ್ಲದಂತಾಗಿದೆ. ಪ್ರೇಕ್ಷಕರಿಗೆ ಆದ್ಯತೆಗಳು ಹೆಚ್ಚಿವೆ. ತಾವು ನೋಡಬೇಕೆನಿಸುವ ಬೇರೆ ಭಾಷೆಯ ಚಿತ್ರಗಳನ್ನು ಕೂತಲ್ಲೇ ನೋಡುವ ಸಾಧ್ಯತೆ ಹೆಚ್ಚಿದೆ. ಕನ್ನಡ ಚಿತ್ರಗಳನ್ನು ನೋಡುವ, ಆ ಮೂಲಕ ಚಿತ್ರರಂಗವನ್ನು ಬೆಳೆಸುವುದು ಆದ್ಯತೆಯಾಗಿ ಉಳಿದಿಲ್ಲ. ಇಂಥದ್ದೊಂದು ಸವಾಲನ್ನು ಕನ್ನಡ ಚಿತ್ರರಂಗ ಹೇಗೆ ಎದುರಿಸುತ್ತದೆ ಎಂಬುದೇ ಈಗಿರುವ ಪ್ರಶ್ನೆ.
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಚೇತನ್ ನಾಡಿಗೇರ್
ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್ ನಾಡಿಗೇರ್ ಅವರು, 'ಉದಯವಾಣಿ', 'ರೂಪತಾರಾ', 'ಕನ್ನಡ ಪ್ರಭ', 'ವಿಜಯವಾಣಿ' ಮತ್ತು 'ವಿಜಯ ಕರ್ನಾಟಕ' ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್ ಅರವಿಂದ್ ಅವರ 'ಖುಷಿಯಿಂದ ರಮೇಶ್' ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ 'ಸ್ಕ್ರೀನ್ ಶಾಟ್- ದಾಖಲಾಗದ ದಾಖಲೆಗಳು' ಎಂಬ ಪುಸ್ತಕವನ್ನು ಬರೆದಿದ್ದಾರೆ.




