ಕರ್ನಾಟಕದ ಹುಟ್ಟು ಎಂದರೆ ಕನ್ನಡದ ಹುಟ್ಟು. ನುಡಿಯಿಂದ ನಾಡು, ನಾಡಿಂದ ನಡೆಗೆ ಜಾಡು. ನಿರ್ದಿಷ್ಟ ಭೌಗೋಳಿಕ ಎಲ್ಲೆಗಳನ್ನು ಗುರುತಿಸಿಕೊಂಡ ನಾಡೊಂದು ರಾಜಕೀಯ ಆಡಳಿತ ಸ್ವರೂಪ ಪಡೆದ ಕೂಡಲೇ ಅದು ರಾಜ್ಯ, ಸಾಮ್ರಾಜ್ಯ, ದೇಶ. ಇಂದಿನ ನಮ್ಮ ಕರ್ನಾಟಕ ಕೂಡ ಬೆಳೆದು ಬಂದಿರುವುದು ಹಾಗೆಯೇ. ಇದುವರೆವಿಗಿನ ಇತಿಹಾಸದಲ್ಲಿ ಇದರ ಹೆಜ್ಜೆ ಗುರುತುಗಳನ್ನು ಕಾಣುವುದು ಕ್ರಿ.ಶ. ನಾಲ್ಕನೇ ಶತಮಾನದ ಆದಿಯಿಂದ. ಗಂಡುಮೆಟ್ಟಿನ ನಾಡು ಎಂದು ಹೆಸರಾಗಿರುವ ಇಂದಿನ ಚಿತ್ರದುರ್ಗದ ಚಂದ್ರವಳ್ಳಿ ತಟಾಕ ಪ್ರದೇಶದಲ್ಲಿ ಮಯೂರ ಶರ್ಮನೆಂಬ ಮಹತ್ವಾಕಾಂಕ್ಷಿ ಕಟ್ಟಿದ ಮೊದಲ ಕನ್ನಡ ಸೇನೆಯಿಂದ. ಅದರ ಫಲಿತವೇ ಕನ್ನಡದ ಮೊದಲ ಸಾಮ್ರಾಜ್ಯ ಎಂದು ಕರೆಯಲ್ಪಡುವ ಕದಂಬ ಸಾಮ್ರಾಜ್ಯ. ಅದರ ಮುಂದುವರೆದ ಅಭಿವೃದ್ಧಿ ಆಯಾಮಗಳು ಮತ್ತು ಬೆಳವಣಿಗೆಗಳ ಸೂಕ್ಷ್ಮ ಸುಳುಹುಗಳು ಸಿಗುವುದು ಕನ್ನಡದ ಆದಿ ಗ್ರಂಥ ‘ಕವಿರಾಜ ಮಾರ್ಗ’ದ “ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್’’ ಎಂಬ ಕಾವ್ಯ ಸಾಲುಗಳಿಂದ.
ಇದು ಅಂದಿನ ಕನ್ನಡ ನಾಡಿನ ಭೌಗೋಳಿಕ ವ್ಯಾಪ್ತಿಯನ್ನು ಗುರುತಿಸಿದರೆ, “ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ/ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್/’’ ಎಂದು ಆದಿಕವಿ ಪಂಪ ಹೇಳುವ ಮಾತುಗಳು, ಅದರ ಭೌತಿಕ ಮತ್ತು ಬೌದ್ಧಿಕ ಶ್ರೀಮಂತಿಕೆಯನ್ನು ಬಿಂಬಿಸುತ್ತವೆ. ಹುಟ್ಟಿದ ನೆಲದಲ್ಲೇ ಮತ್ತೆ ಮತ್ತೆ ಹುಟ್ಟಿ ಬರುವ ಆಶಯವೆಂದರೆ ಆ ಕಾಲದ ನೆಮ್ಮದಿಯ ಬದುಕಿನ ಬಗೆಗಿನ ಪ್ರೀತಿ ಹಾಗೂ ಅಭಿಮಾನ. ಹೀಗಿದ್ದ ಕನ್ನಡ ದೇಶ 20ನೇ ಶತಮಾನದ ಆದಿಯ ಹೊತ್ತಿಗೆ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು/ ಬದುಕು ಬಲುಹಿನ ನಿಧಿಯು/ ಸದಭಿಮಾನದ ಗೂಡು/ ಎಂದು ಧ್ವನಿ ಎತ್ತುವ ಸ್ಥಿತಿ ತಲುಪಿದ್ದು, ಆ ಎರಡು ಕಾಲಘಟ್ಟಗಳ ನಡುವಿನ ಇತಿಹಾಸ. ಒಂದು ಕಾಲದ ಸಮಗ್ರ ಕನ್ನಡ ದೇಶ ಆಧುನಿಕ ಕಾಲಘಟ್ಟಕ್ಕೆ ಬರುವ ಹೊತ್ತಿಗೆ ಅಷ್ಟ ದಿಕ್ಕುಗಳ ಸುಮಾರು ಇಪ್ಪತ್ತು ಆಡಳಿತ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿತ್ತು. ಅದನ್ನು ಮತ್ತೆ ಕೂಡಿಸಿ ಕಟ್ಟುವ ಪ್ರಯತ್ನ, ಹೋರಾಟಗಳು ಗಟ್ಟಿಗೊಂಡು “ಕರ್ನಾಟಕ ಏಕೀಕರಣ’’ ಚಳವಳಿಯಾಯಿತು. ಅದರ ಫಲಿತಗಳೇ ಇಂದಿನ ನಮ್ಮ ಕರ್ನಾಟಕ. ಅದರ ಫಲಾನುಭವಿಗಳೇ ಕನ್ನಡದ ಪ್ರಜೆಗಳಾದ ನಾವು.
ಹೀಗೆ ಇಡಿಗೊಂಡ ರಾಜ್ಯದಲ್ಲಿ ನಿರ್ಲಕ್ಷಿಸಲಾಗದ ಪ್ರತ್ಯೇಕತೆಯ ಕೂಗು, ವಿಘಟನೆಯ ಧ್ವನಿ, ಮತ್ತೆ ಮತ್ತೆ ಕೇಳಿಬರಲು ಕಾರಣವೇನು? ಆಲೋಚಿಸುವ ಯಾರಿಗಾದರೂ ಕಾಣುವ ಒಂದೇ ಕಾರಣ ಎಂದರೆ ಅದು ಸಮಾನ ಪ್ರಾದೇಶಿಕ ಅಭಿವೃದ್ಧಿಯಲ್ಲಿನ ನ್ಯೂನತೆಗಳು. ಅರಾಜಕತೆಗೆ ಅಸಮಾನತೆಗಳೇ ಕಾರಣ. ಸ್ವಾತಂತ್ರದ ನಂತರದ ಏಳೂವರೆ ದಶಕಗಳಲ್ಲಿ ದೇಶ ಮತ್ತು ರಾಜ್ಯಗಳ ಪ್ರಾದೇಶಿಕ ಮತ್ತು ವ್ಯಕ್ತಿ ನೆಲೆಯ ಅಸಮಾನತೆಗಳನ್ನು ಕನಿಷ್ಠಮಟ್ಟಕ್ಕಾದರೂ ತರಲು ಸಾಧ್ಯವಾಗಿದ್ದಿದ್ದರೆ, ನಿಜಕ್ಕೂ ಈ ಕೂಗನ್ನು ಶಮನಗೊಳಿಸಬಹುದಿತ್ತು. ಪ್ರತ್ಯೇಕತೆಯ ಅಪಸ್ವರಗಳಿಗೆ ಅಸಮಾನ ನಡೆ, ಸೌಲಭ್ಯಗಳ ವಂಚನೆ, ಹಂಚಿಕೆಯ ನ್ಯಾಯದ ಕೊರತೆ ಮತ್ತು ಸ್ವಾಭಿಮಾನಕ್ಕೆ ಬೀಳುವ ಪೆಟ್ಟುಗಳಲ್ಲದೆ ಇನ್ನೇನಿರಲು ಸಾಧ್ಯ? ಇದು ಕುಟುಂಬದಿಂದ ಮೊದಲುಗೊಂಡು ಎಲ್ಲಾ ಹಂತಗಳಲ್ಲೂ ನಿಜ.
ಇದನ್ನೂ ಓದಿರಿ: ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?
ಇದಕ್ಕೆ ಮೊದಲ ಕಾರಣ, ಆ ಎಲ್ಲ ಹಂತಗಳಲ್ಲಿನ ಆಡಳಿತದೋಷ. ದೋಷಪೂರಿತ ಆಡಳಿತವನ್ನು ದೋಷಮುಕ್ತಗೊಳಿಸುವಲ್ಲಿನ ಸಂಬಂಧಪಟ್ಟವರ ನಿರ್ಲಕ್ಷ್ಯ, ದೌರ್ಬಲ್ಯ ಅಥವಾ ಅಸಹಾಯಕತೆ. ಸರಿಯಲ್ಲದ್ದನ್ನು ಸಹಿಸಿಕೊಳ್ಳುವುದು ಸಾಧ್ಯವಾಗದಾಗ, ದೂರವಾಗುವುದೇ ಲೇಸು ಎಂಬ ಭಾವ. ಇದನ್ನು ಸರಿಗೊಳಿಸುವ ಕೆಲಸ ಬಹುಮುಖ್ಯವಾಗಿ ಸಾರ್ವಜನಿಕ ಆಳ್ವಿಕೆಯ ಹೊಣೆ ಹೊತ್ತ ಸರ್ಕಾರಗಳದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಅಂತಿಮವಾಗಿ ಮತದಾರರದ್ದೇ. ಸಾರ್ವಜನಿಕ ಚುನಾವಣೆಯ ಸಂದರ್ಭದಲ್ಲಿ `ಆಯ್ಕೆ’ ಎನ್ನುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ, ಸಂಕಷ್ಟಕ್ಕೆ ಒಳಗಾಗುವ ಮೊದಲ ವರ್ಗ ಮಹಿಳೆಯರು, ಮಕ್ಕಳು ಮತ್ತು ಮಧ್ಯಮ ಹಾಗೂ ಕೆಳವರ್ಗದ ಜನ. ಈ ದೃಷ್ಟಿಯಿಂದ, ಕರ್ನಾಟಕದ ಏಕೀಕರಣೋತ್ತರ ಅವಧಿಯ ಅಭಿವೃದ್ಧಿಯ ವಿದ್ಯಮಾನಗಳನ್ನು ಈ ಲೇಖನದ ಮಿತಿಯಲ್ಲಿ ಸಂಕ್ಷಿಪ್ತವಾಗಿ ಅವಲೋಕಿಸುತ್ತಲೇ, ಆಗಿರುವ ಪ್ರಗತಿಯನ್ನು ಒಪ್ಪಿಕೊಳ್ಳುತ್ತಾ, ಸದಭಿವೃದ್ಧಿಯನ್ನು ಮೆಚ್ಚಿಕೊಂಡು, ಸದಭಿಮಾನದ ಚೆಲುವ ಕನ್ನಡ ನಾಡನ್ನು ಕಟ್ಟಿಕೊಳ್ಳುವಲ್ಲಿ, ಎಲ್ಲಿ ಎಡವಿದ್ದೇವೆ ಎನ್ನುವುದರತ್ತ ಗಮನಹರಿಸಿ, ಸರಿದಾರಿಗೆ ಹೋಗುವತ್ತ ಒಂದಷ್ಟು ಬೆಳಕು ಚೆಲ್ಲುವುದು ಈ ಲೇಖನದ ಉದ್ದೇಶ.
ಸ್ವಾತಂತ್ರ ನಂತರದ ಮೊದಲ ಇಪ್ಪತ್ತೈದು ವರ್ಷಗಳು
ಮೊದಲಿಗೆ, ಅಭಿವೃದ್ಧಿಯ ಹಾದಿಯಲ್ಲಿ ಈಗ ಎಲ್ಲಿದ್ದೇವೆ ಎನ್ನುವುದನ್ನು ಗುರುತಿಸಿಕೊಳ್ಳುವ ಪ್ರಯತ್ನ. ಸ್ವಾತಂತ್ರ್ಯೋತ್ತರದ ಸುಮಾರು ನಾಲ್ಕು ದಶಕಗಳ ಕಾಲ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ರಾಷ್ಟ್ರೀಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಕನ್ನಡ ರಾಜ್ಯ ಕಟ್ಟುವ ಕೆಲಸಕ್ಕೆ ಹೋರಾಟಗಳು ನಡೆದವು. ಭಾಷಾವಾರು ಪ್ರಾಂತ್ಯಗಳ ನಿರ್ಮಾಣಕ್ಕೆ ದೇಶಾದ್ಯಂತ ನಡೆದ ಹೋರಾಟಗಳ ಮಾದರಿಯಲ್ಲೇ ಕರ್ನಾಟಕ ಏಕೀಕರಣ ಚಳವಳಿಯೂ ಇತ್ತು. ಸ್ವಾತಂತ್ರ್ಯ ಬಂದಕೂಡಲೆ ದೇಶದಲ್ಲಿ ಬಹುತೇಕ ನಿಶ್ಚಿತ ಎಲ್ಲ ರಾಜ್ಯಗಳೂ ನಿರ್ಮಾಣವಾದರೆ, ಕರ್ನಾಟಕದ ಸ್ಥಿತಿ ನೆನೆಗುದಿಗೆ ಬಿತ್ತು. ನವೆಂಬರ್ 1, 1956ರವರೆಗೆ ಏಕೀಕರಣ ಚಳವಳಿ ತೀವ್ರಗೊಳ್ಳಬೇಕಾಯಿತು. ಮೈಸೂರು ಭಾಗದ ಹಲವರ ಭಿನ್ನಾಭಿಪ್ರಾಯಗಳ ನಡುವೆಯೂ, ಕೊನೆಗೆ `ಮೈಸೂರು ರಾಜ್ಯ’ ಅಧಿಕೃತವಾಗಿ ಘೋಷಣೆಯಾಯಿತು. ಇದರ ಮೊದಲ ಮುಖ್ಯಮಂತ್ರಿಯಾಗಿ ಕೆ. ಸಿ. ರೆಡ್ಡಿಯವರು ಅಕ್ಟೋಬರ್ 25, 1947ರಂದು ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಹಲವು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಾಯಿತು. ನಂತರ ಮುಖ್ಯಮಂತ್ರಿಗಳಾಗಿ ಬಂದ ಕೆಂಗಲ್ ಹನುಮಂತಯ್ಯನವರ ಅವಧಿಯಲ್ಲಿ (1952-1956) ರಾಜ್ಯ ಕಚೇರಿ ವಿಧಾನಸೌಧ ಒಳಗೊಂಡಂತೆ ನೀರಾವರಿ, ವಿದ್ಯುಚ್ಛಕ್ತಿ, ರಸ್ತೆ-ರೈಲು ಮುಂತಾದ ಮೂಲಸೌಲಭ್ಯಳತ್ತ ಹೆಚ್ಚಿನ ಗಮನಹರಿಸಲಾಯಿತು. ಅವರ ನಂತರ, ಅಂದರೆ 1956ರಲ್ಲಿ ಏಕೀಕೃತ ಮೈಸೂರು ಪ್ರಾಂತ್ಯದ ಮೊದಲ ಮುಖ್ಯಮಂತ್ರಿಯಾಗಿ ಎಸ್. ನಿಜಲಿಂಗಪ್ಪನವರು ಮುಖ್ಯಮಂತ್ರಿಯಾದರು. ಅವರ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳು ಗಣನೀಯವಾದುವುಗಳು. ನಾಲ್ವಡಿ ಕೃಷ್ಣರಾಜ ಒಡೆಯರ್, ಮಿರ್ಜಾ ಇಸ್ಮಾಯಿಲ್, ಸರ್. ಎಂ. ವಿಶ್ವೇಶ್ವರಯ್ಯ ಮೊದಲಾದವರ ಅವಧಿಯಲ್ಲಿ ಆರಂಭವಾಗಿ ಅಪೂರ್ಣಗೊಂಡಿದ್ದ ಕಾಮಗಾರಿಗಳು ಮತ್ತು ಕೈಗಾರಿಕಾ-ವಾಣಿಜ್ಯ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಒತ್ತು ಕೊಡಲಾಯಿತು. ಜೊತೆಗೆ, ಹೊಸ ನೀರಾವರಿ ಯೋಜನೆಗಳು, ರಸ್ತೆ-ರೈಲು ಮಾರ್ಗಗಳ ನಿರ್ಮಾಣ, ವಿದ್ಯುಚ್ಛುಕ್ತಿ ಉತ್ಪಾದನಾ ಘಟಕಗಳು, ವಿವಿಧ ಕೈಗಾರಿಕೆಗಳೂ, ಕಾರ್ಖಾನೆಗಳೂ, ಹಾಲು ಉತ್ಪಾದನಾ ಕೇಂದ್ರಗಳೂ ಸ್ಥಾಪನೆಯಾದವು.

ಇನ್ನು ಬಿ.ಡಿ. ಜತ್ತಿ ಮತ್ತು ಎಸ್. ಆರ್. ಕಂಠಿಯವರ ಅಲ್ಪಾವಧಿಯ ಆಡಳಿತದ ನಂತರ ಮತ್ತೆ ಮುಖ್ಯಮಂತ್ರಿಯಾದುದು ಎಸ್. ನಿಜಲಿಂಗಪ್ಪನವರು. 1962ರಿಂದ 1968ರ ಅವರ ಅವಧಿಯಲ್ಲಿ ಹಿಂದಿನ ಯೋಜನೆಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆದವು. ಹಾಗೆಯೇ ಅವರ ನಂತರ ಮುಖ್ಯಮಂತ್ರಿಗಳಾಗಿ ಬಂದ ವೀರೇಂದ್ರ ಪಾಟೀಲ ಅವರ ಅವಧಿಯಲ್ಲಿ(1968-1971) ಕೂಡ. ಪಂಡಿತ್ ಜವಾಹರ್‌ಲಾಲ್ ನೆಹರು ಅವರ ಪ್ರಧಾನಮಂತ್ರಿತ್ವದ ಅವಧಿಯಲ್ಲಿ ಆರಂಭವಾದ ಭಾರತ ಸರ್ಕಾರದ ಬಹುತೇಕ ಅಭಿವೃದ್ಧಿ ಯೋಜನೆಗಳು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಯಾದವು. ಆಹಾರ ಸಮಸ್ಯೆ ನಿವಾರಿಸಿಕೊಳ್ಳಲು ಕೃಷಿಯಲ್ಲಿ ‘ಹಸಿರು ಕ್ರಾಂತಿ’ ಉದ್ದೇಶಿತ ಹಲವು ಕಾರ್ಯಕ್ರಮಗಳು ಜಾರಿಯಾದವು. ಮೊದಲ ಮೂರು ಪಂಚವಾರ್ಷಿಕ ಯೋಜನೆಗಳ ಕಾರ್ಯಕ್ರಮಗಳು ಸಹಕಾರಿ ಚಳವಳಿ ಒಳಗೊಂಡು ಕೃಷಿ, ಕೈಗಾರಿಕೆ ಮತ್ತು ಮೂಲಸೌಲಭ್ಯಗಳ ನಿರ್ಮಾಣಕ್ಕೆ ಕಾರಣವಾದವು. ಇನ್ನು 1972-77 ಮತ್ತು 1978-1980ರ ಎರಡು ಕಂತಿನ ಅವಧಿಗೆ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸಿದ ಡಿ. ದೇವರಾಜ ಅರಸು ಅವರ ಕಾಲ, ಸಂವಿಧಾನ ಆಶಿತ ಹಲವು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ನಾಂದಿಯಾಯಿತು. ಕರ್ನಾಟಕದ ಅಭಿವೃದ್ಧಿ ಇತಿಹಾಸದಲ್ಲಿ ದಾಖಲಾರ್ಹ ಬೆಳವಣಿಗೆಗಳಾದವು. ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಅಭಿವೃದ್ಧಿಯ ಮೊದಲ ಹೆಜ್ಜೆಯಾಗಿ ಅವರ ನೇತೃತ್ವದ ಸರ್ಕಾರ ತೆಗೆದುಕೊಂಡ ಮೊದಲ ನಿರ್ಧಾರ ಎಂದರೆ, ನವೆಂಬರ್ 1, 1973ರಂದು ‘ಮೈಸೂರು ರಾಜ್ಯ’ ಎನ್ನುವ ಹೆಸರನ್ನು ಕರ್ನಾಟಕದ ಭೌಗೋಳಿಕ ವಿಸ್ತಾರಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ‘ಕರ್ನಾಟಕ ರಾಜ್ಯ’ ಎಂದು ನಾಮಕರಣ ಮಾಡಿದ್ದು. ಅದೂ ಒಬ್ಬ ಮೈಸೂರು ಜಿಲ್ಲೆಯ ವ್ಯಕ್ತಿಯಾಗಿ ಮತ್ತು ಮೈಸೂರು ಅರಸರ ದೂರ ಸಂಬಂಧಿಯಾಗಿ, ಅವರ ಅಂದಿನ ನಿರ್ಧಾರ, ಪ್ರಾದೇಶಿಕ ಒಲವಿಗಿಂತ ಕನ್ನಡದ ಅಸ್ಮಿತೆಗೆ ಅವರು ಕೊಟ್ಟ ಬಹುದೊಡ್ಡ ಕೊಡುಗೆ.
ಸ್ವಾತಂತ್ರ್ಯೋತ್ತರ ಕರ್ನಾಟಕದ ಮೊದಲ ಇಪ್ಪತ್ತೈದು ವರ್ಷಗಳ ಸಂಕಿಪ್ತ ನೋಟ ಇದಾದರೆ, ಇದರ ಮುಂದಿನ ಐವತ್ತು ವರ್ಷಗಳ ಏಕೀಕೃತ ಕರ್ನಾಟಕದಲ್ಲಿ ಕನ್ನಡಿಗರ ಬದುಕು ಏನಾಯಿತು? ಏಕೀಕರಣ ಚಳವಳಿಯ ನಿಜ ಕನಸುಗಳು ವಾಸ್ತವವಾದವೆ? ಭಾರತೀಯ ಸಂವಿಧಾನದ ಅಶಯಗಳಂತೆ ಕನ್ನಡಿಗರ ಬದುಕು ಹಸಿರಾಯಿತೇ? ಎನ್ನುವುದನ್ನು ನೋಡೋಣ.
ನಂತರದ ಐವತ್ತು ವರ್ಷಗಳು
ಈ ಮೊದಲು ಹೇಳಿದಂತೆ, ದೇವರಾಜ ಅರಸು ಅವರ ಸರ್ಕಾರ ಅವರ ಆಡಳಿತದ ಅವಧಿಯ ಆರಂಭದಿಂದಲೇ ರಾಜ್ಯದ ಬಹುಮುಖ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಂಡಿತು. ಅಭಿವೃದ್ಧಿಯ ದಿಕ್ಕನ್ನು ಮೇಲಿನಿಂದ ಆರಂಭಿಸಿ ಕೆಳಗಿನ ಹಂತಕ್ಕೆ ತರುವುದರ ಬದಲಾಗಿ ತಳಸಮುದಾಯಗಳಿಂದ ಆರಂಭಿಸಿ ಮೇಲ್ವರ್ಗದೊಂದಿಗೆ ಜೋಡಿಸುವ ಹೊಸ ಪ್ರಯತ್ನಕ್ಕೆ ಮುಂದಾಯಿತು. ಸಾರ್ವಜನಿಕ ಆಡಳಿತವನ್ನು ಸರ್ವೋದಯದತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನಗಳು ನಡೆದವು. ಅದಕ್ಕೆ ಪೂರಕವೆಂಬಂತೆ ಕಾಕತಾಳೀಯವಾಗಿ ಘೋಷಣೆಯಾಗಿದ್ದು, ರಾಷ್ಟ್ರೀಯ ತುರ್ತು ಪರಿಸ್ಥಿತಿ. ಯಾವುದನ್ನು ಪ್ರಜಾಪ್ರಭುತ್ವ ವಿರೋಧಿ ಕರಾಳ ದಿನಗಳು ಎಂದು ಕರೆಯಲಾಯಿತೋ, ಅವೇ ದಿನಗಳನ್ನು ಅರಸು ಅವರು ಶೋಷಿತ ಸಮುದಾಯಗಳನ್ನು ಅತಿ ವೇಗವಾಗಿ ಮೇಲೆತ್ತಲು ಬಳಸಿಕೊಂಡರು. ಹಾವನೂರು ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಸಿಕ್ಕ ಸುವರ್ಣಾವಕಾಶ ಅದಾಯಿತು. ಭಾರತ ಸರ್ಕಾರ ಜಾರಿಗೊಳಿಸಿದ ‘20 ಅಂಶಗಳ ಆರ್ಥಿಕ ಕಾರ್ಯಕ್ರಮ’ವು ಇದಕ್ಕೆ ನೀರು, ಗೊಬ್ಬರ, ಬೇಲಿ ಆಯಿತು.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-1)
ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಈ ಕಾರ್ಯಕ್ರಮಗಳು ಅದೆಷ್ಟು ಗಟ್ಟಿಯಾಗಿ ನಿಂತವೆಂದರೆ, ಇವತ್ತಿನವರೆವಿಗೂ ಯಾವ ಸರ್ಕಾರಗಳೂ ಈ ಕಾರ್ಯಕ್ರಮಗಳಿಂದ ಹಿಂದೆ ಸರಿಯಲಾಗದಷ್ಟು ಗಟ್ಟಿಯಾಗಿ. ನಂತರ ಭಾರತ ಸರ್ಕಾರ 1978ರಲ್ಲಿ ಆರಂಭಿಸಿದ ‘ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ (IRDP-Integrated Rural Development Programme)’, ಇದೇ 20 ಅಂಶಗಳ ಮುಂದುವರೆದ ಕಾರ್ಯಕ್ರಮವಾಯಿತು. ಸುಮಾರು ಇಪ್ಪತ್ತು ವರ್ಷಗಳ ಕಾಲ ಇದು ಪರಿಣಾಮಕಾರಿಯಾಗಿ ಜಾರಿಯಲ್ಲಿತ್ತು. ರಾಜ್ಯದ ಹತ್ತು ಹಲವು ಅಭಿವೃದ್ಧಿ ಯೋಜನೆಗಳ ಜೊತೆಗೆ ಭಾರತ ಸರ್ಕಾರದ ಈ ಆರ್ಥಿಕ ಕಾರ್ಯಕ್ರಮಗಳು ರಾಜ್ಯದ ಬಹುಮುಖ ಅಭಿವೃದ್ಧಿಗೆ ಆಧಾರಸ್ಥಂಭವಾಗಿದ್ದವು. ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಇವತ್ತಿನಷ್ಟು ಸಂಘರ್ಷ ಇರಲಿಲ್ಲ. ಈ ಕಾರ್ಯಕ್ರಮಗಳ ಜಾರಿಯಲ್ಲಿ ಎಲ್ಲೆಲ್ಲಿ ಯಾವ ಯಾವ ಜನಪ್ರತಿನಿಧಿಗಳು ಯಾವಯಾವಾಗ ಕ್ರಿಯಾಶೀಲರಾಗಿದ್ದರೋ, ಆವಾಗೆಲ್ಲ ಆ ಪ್ರದೇಶಗಳು ಅಭಿವೃದ್ಧಿಯತ್ತ ದಾಫುಗಾಲಿಟ್ಟವು. ಜನಾರ್ದನ ಪೂಜಾರಿಯವರ ‘ಸಾಲ ಮೇಳ’ ದೇಶಾದ್ಯಂತ ಸದ್ದು ಮಾಡಿದ್ದೂ ಆಗಲೇ. ಅರಸು ಅವರು ಮುಖ್ಯಮಂತ್ರಿಯಾಗಿ ಬರುವವರೆಗೆ ರಾಜ್ಯದಲ್ಲಿ ಅಧಿಕೃತ ಭಾಷೆ ಯಾವುದು ಎನ್ನುವ ಗೊಂದಲವಿತ್ತು. ಸಂಸ್ಕೃತವನ್ನು ಮೊದಲ ಭಾಷೆಯಾಗಿ ತೆಗೆದುಕೊಳ್ಳುವ ಅವಕಾಶವಿತ್ತು. ಅದಕ್ಕೆ ಇತಿಶ್ರೀ ಹಾಡಿ ಕನ್ನಡವನ್ನು ಮೊದಲ ಭಾಷೆಯಾಗಿ ಆದೇಶಿಸಿದ್ದು ಅರಸು ಅವರ ಸರ್ಕಾರ. ಬಹುಶಃ ಅವರೇನಾದರೂ ಇನ್ನೆರಡು ವರ್ಷಗಳು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೆ, ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಕ ಹೆಜ್ಜೆ ಇಡುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿದ್ದರೆ ಗೋಕಾಕ್ ಚಳವಳಿಯ ಅಗತ್ಯವೇ ಬರುತ್ತಿರಲಿಲ್ಲ.

ತದನಂತರ, ಕಣ್ಣಿಗೆ ಕಾಣುವಂತಹ ಆಡಳಿತ ಸುಧಾರಣೆಯನ್ನು ಕರ್ನಾಟಕ ಕಂಡದ್ದು ಎಂಬತ್ತರ ದಶಕದಲ್ಲಿ. ರಾಮಕೃಷ್ಣ ಹೆಗಡೆಯವರ ಮುಖ್ಯಮಂತ್ರಿತ್ವದ ಅವಧಿಯಲ್ಲಿ. ವಿಕೇಂದ್ರೀಕೃತ ಆಡಳಿತ ವಿಧಾನವಾಗಿ ‘ಪಂಚಾಯತ್ ರಾಜ್’ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು. ನಜೀರ್ ಸಾಬ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ದೇಶದ ಗಮನ ಸೆಳೆದದ್ದು. ಇದನ್ನು ಮೆಚ್ಚಿದ ಅಂದಿನ ಪ್ರಧಾನಿ ರಾಜೀವ ಗಾಂಧಿಯವರು ಅದನ್ನು ದೇಶವ್ಯಾಪಿ ಜಾರಿಗೊಳಿಸಿದ್ದು. ಹಾಗೆ ನೋಡಿದರೆ, ‘ಪಂಚಾಯತ್ ರಾಜ್’ ಉದ್ದೇಶವೇ ವಿಕೇಂದ್ರೀಕೃತ ಆಡಳಿತದ ಜೊತೆಜೊತೆಗೆ ಕನ್ನಡವನ್ನು ಆಡಳಿತ ಭಾಷೆಯಾಗಿ ಬೆಸೆಯುವುದಾಗಿತ್ತು. ದೇಶದ ಗಮನ ಸೆಳೆಯುವಂತಹ ಜನಪ್ರಿಯ ಯೋಜನೆಗಳು ಕರ್ನಾಟಕದಲ್ಲಿ ಮತ್ತೆ ಜಾರಿಗೊಂಡದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ. ಅದೂ ಈಗಿನ ಎರಡನೆಯ ಅವಧಿಯಲ್ಲಿ. ಪಂಚ ಭಾಗ್ಯಗಳ ಅನುಷ್ಠಾನದ ಮೂಲಕ.
ಕರ್ನಾಟಕದ ಅಭಿವೃದ್ಧಿಯ ಇಂದಿನ ಸ್ಥಿತಿ
“ಭಾರತ ಜನನಿಯ ತನುಜಾತೆ’’ ಎಂದು ಭಾರತದೊಂದಿಗೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿರುವ ಕರ್ನಾಟಕದ ಇವತ್ತಿನ ಅಭಿವೃದ್ಧಿಯ ಚಿತ್ರಣ, ಹೆಚ್ಚೂ ಕಡಿಮೆ ಜನನಿಯ ಚಿತ್ರಣವನ್ನೇ ಹೋಲುತ್ತದೆ. ಹೆಚ್ಚೆಂದರೆ ಕೆಲವೊಂದು ಕ್ಷೇತ್ರಗಳಲ್ಲಿ ಬೆಳವಣಿಗೆಯ ದರ ರಾಷ್ಟ್ರೀಯ ಸರಾಸರಿಗಿಂತ ಒಂದಷ್ಟು ಹೆಚ್ಚಿರಬಹುದಷ್ಟೆ. 2023-24ರ ವರ್ಷಾಂತ್ಯಕ್ಕೆ ರಾಜ್ಯದ ಒಟ್ಟು ವರಮಾನ ಬೆಳವಣಿಗೆ (ಜಿಡಿಪಿ) ದರ ಶೇ. 8.2 ಇದ್ದರೆ, ದೇಶದ್ದೂ ಕೂಡ ಅಷ್ಟೇ ಇದೆ. ಜಿಡಿಪಿ ದೃಷ್ಟಿಯಿಂದ ಭಾರತ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದ್ದರೆ, ಭಾರತದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಭೂ ವ್ಯಾಪ್ತಿಯಲ್ಲಿ ಭಾರತ ಜಗತ್ತಿನಲ್ಲಿ 7ನೇ ಸ್ಥಾನದಲ್ಲಿದ್ದು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗೆಯೇ ಕರ್ನಾಟಕ, ಭಾರತದ ಶೇ. 5.83 ಪ್ರದೇಶದಲ್ಲಿ ಶೇ. 5.05ರಷ್ಟು ಜನಸಂಖ್ಯೆ ಹೊಂದಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕಕ್ಕೆ ಭಾರತದಲ್ಲಿ 2ನೆಯ ಸ್ಥಾನ. ಇದು ಕರ್ನಾಟಕದಲ್ಲಿನ ಮೂಲಸೌಲಭ್ಯಗಳು ವಿದೇಶಿ ಬಂಡವಾಳವನ್ನು ಪರಿಣಾಮಕಾರಿಯಾಗಿ ಆಕರ್ಷಿಸುವಂತೆ ಬೆಳೆದಿರುವುದರ ಸಂಕೇತವೂ ಹೌದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ವಿದೇಶಿ ಕಂಪನಿಗಳಿಗೆ ಕರ್ನಾಟಕ ಸರ್ಕಾರ ಬೆಂಗಳೂರಿನ ಸುತ್ತಮುತ್ತಲಿನ ಭೂಮಿ, ನೀರು, ವಿದ್ಯುಚ್ಛುಕ್ತಿ, ಸಾರಿಗೆ-ಸಂಪರ್ಕ ಮತ್ತು ನಾಗರಿಕ ಸೌಲಭ್ಯಗಳನ್ನು ಉದಾರವಾಗಿ ಒದಗಿಸಿರುವುದು. ಗಮನಿಸಬೇಕಾದ ಅಂಶಗಳೆಂದರೆ, ಅದಕ್ಕೆ ತಕ್ಕನಾಗಿ ಕನ್ನಡಿಗರಿಗೆ ಉದ್ಯೋಗಗಳು ದೊರಕಿವೆಯೇ? ತೆರಿಗೆ ಪಾಲು ಸಂದಿದೆಯೇ? ಸ್ಥಳೀಯರಿಗೆ ಅನುಭೋಗಿ ಸರಕು-ಸೇವೆಗಳ ಪ್ರಯೋಜನ ಆಗಿದೆಯೇ? ಗುಣಮಟ್ಟದ ಜೀವನ ಸಂದಿದೆಯೇ? ಎನ್ನುವುದು.
ಮುಂದುವರೆದು, ಬಡತನ ಮತ್ತು ನಿರುದ್ಯೋಗದ ಬೆಳವಣಿಗೆಯ ದರಗಳು ಗಣನೀಯವಾಗಿ ಅಲ್ಲದಿದ್ದರೂ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇವೆ. ಸಾಕ್ಷರತೆಯ ಪ್ರಮಾಣ ಹತ್ತಿರ ಹತ್ತಿರ ಶೇ. 80ಕ್ಕೆ ತಲುಪಿದೆ. ಆದರೆ ಈ ಎಲ್ಲ ಸೂಚ್ಯಂಕಗಳ ಜೊತೆಗೆ ನಾವು ಮುಖ್ಯವಾಗಿ ಗಮನಿಸಬೇಕಿರುವುದು, ಇತ್ತೀಚಿನ ಇತರೆ ಅಭಿವೃದ್ಧಿ ಸೂಚ್ಯಂಕಗಳನ್ನು ಕುರಿತಂತೆ. ಏಕೆಂದರೆ, ಬರೀ ಜಿಡಿಪಿ ಮತ್ತು ತಲಾ ವರಮಾನಗಳಷ್ಟೇ ಅಭಿವೃದ್ಧಿಯ ಎಲ್ಲ ಮುಖಗಳನ್ನು ಪ್ರತಿನಿಧಿಸುವುದಿಲ್ಲ. ಅಭಿವೃದ್ಧಿ ಮಾಪನ ಮಾನದಂಡಗಳಲ್ಲೂ ನಿಖರತೆಯ ಭರವಸೆಗಾಗಿ ಹೆಚ್ಚಿನ ಬೆಳವಣಿಗೆಗಳಾಗಿವೆ. ಅವುಗಳಲ್ಲಿ ಮುಖ್ಯವಾಗಿ ಮಾನವ ಅಭಿವೃದ್ಧಿ ಸೂಚ್ಯಂಕ (HDI-Human Development Index). ಜನರ ಜ್ಞಾನಮಟ್ಟ, ಆರೋಗ್ಯ ಸೌಲಭ್ಯಗಳು ಮತ್ತು ಜೀವನ ಸ್ಥಿತಿಗೆ ಸಂಬಂಧಿಸಿದ ಅಂಶಗಳನ್ನು ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ. ಭಾರತದಲ್ಲಿ ಇದನ್ನು ಮೊದಲು ಪ್ರಯೋಗಿಸಿದ್ದು ಕರ್ನಾಟಕ ರಾಜ್ಯ.
2014ರಿಂದ ಈ ಸೂಚ್ಯಂಕವನ್ನು ಎಲ್ಲ ಜಿಲ್ಲೆಗಳಿಗೂ ಲೆಕ್ಕಹಾಕಲಾಗಿದೆ. ಇದೇ ಸೂಚ್ಯಂಕವನ್ನು ಆಧರಿಸಿ ವಿಶ್ವಸಂಸ್ಥೆ 2022ರಲ್ಲಿ ಪಟ್ಟಿ ಮಾಡಿದ 193 ರಾಷ್ಟ್ರಗಳಲ್ಲಿ ಭಾರತದ ಸ್ಥಾನ 134. ಒಕ್ಕೂಟ ಸರ್ಕಾರ, ಜಿಡಿಪಿಯನ್ನು ಬರುವ ವರ್ಷಗಳಲ್ಲಿ 3ನೇ ಸ್ಥಾನಕ್ಕೆ ಏರಿಸುವುದಾಗಿ ಹೇಳುತ್ತಿದೆಯೇ ಹೊರತು, ಎಚ್‌ಡಿಐನಲ್ಲಿ ಯಾಕೆ ಇಷ್ಟೊಂದು ಕೆಳಗಿದೆ ಎನ್ನುವುದರತ್ತ ಗಮನಹರಿಸುತ್ತಿಲ್ಲ. ಇದೇ ಸೂಚ್ಯಂಕದಲ್ಲಿ, ಅದೇ ವರ್ಷದಲ್ಲಿ ಭಾರತದಲ್ಲಿ ಕರ್ನಾಟಕದ ಸ್ಥಾನ 18ನೆಯದು. ಆದರೆ ಅದೇ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸೂಚ್ಯಂಕದಲ್ಲಿ, 2023ರಲ್ಲಿ, ಜಗತ್ತಿನ 180 ರಾಷ್ಟ್ರಗಳಲ್ಲಿ ಭಾರತದ ಸ್ಥಾನ 93ನೆಯದಾದರೆ, CMS -India Corruption Study ವರದಿ ಪ್ರಕಾರ ಕರ್ನಾಟಕಕ್ಕೆ ಮೊದಲನೇ ಸ್ಥಾನ. ಹಿಮಾಚಲ ಪ್ರದೇಶದ್ದು ಕೊನೆಯದು. ಇದನ್ನು ನಮ್ಮ “ಚೆಲುವ ಕರ್ನಾಟಕ’’ದ ಚೆಲುವು ಎನ್ನಲೆ?
ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)
ಇನ್ನು ವಲಯವಾರು ಅಭಿವೃದ್ಧಿಯತ್ತ ಕಣ್ಣುಹಾಯಿಸುವುದಾದರೆ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನಾ ದರ ಮತ್ತು ಪ್ರಮಾಣ ಹೆಚ್ಚಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ (ಕೋವಿಡ್ ಅವಧಿ ಹೊರತುಪಡಿಸಿ) ರಾಜ್ಯದ ಒಟ್ಟು ವರಮಾನದಲ್ಲಿ ಕೃಷಿಯ ಪಾಲು ಕಡಿಮೆಯಾಗುತ್ತಿದ್ದು ಕೈಗಾರಿಕಾ ಉತ್ಪನ್ನದ ಪಾಲು ಬಹುತೇಕ ಸ್ಥಿರವಾಗಿದೆ. ಸೇವಾ ವಲಯದ ಪಾಲು ಹೆಚ್ಚುತ್ತಿದೆ. ರೈತರ ಸ್ಥಿತಿ ದಿನದಿನಕ್ಕೂ ಸಂಕಷ್ಟಗಳತ್ತಲೇ ಸಾಗುತ್ತಿದೆ. ಒಂದು ಕಾಲದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ “ಉಳುವ ಯೋಗಿಯ ನೋಡಲ್ಲಿ’’ ಎನ್ನುವ ರೈತಗೀತೆಯಲ್ಲಿ ವಿಷಾದದ ಸ್ವರ ಕೇಳಿಬರುತ್ತಿದೆ. ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿಮಾಡುವತ್ತ ಕಾಳಜಿ ಇಲ್ಲವಾಗಿದೆ. ಬದಲಾಗಿ ಕಾರ್ಪೊರೇಟೀಕರಣ ಆಕರ್ಷಕವಾಗಿ ಕಾಣುತ್ತಿದೆ. ರೈತ ಚಳವಳಿ ತನ್ನ ಮೂಲ ಉದ್ದೇಶಗಳಿಂದ ದೂರವಾಗುತ್ತ ಮೊದಲಿನ ಗಟ್ಟಿತನವನ್ನು ಕಳೆದುಕೊಳ್ಳುತ್ತಿದೆ. ಇದರ ಮಧ್ಯೆ ಒಕ್ಕೂಟ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವಂತೆ ಮಾಡಿದ ಹೋರಾಟ ಮೆಚ್ಚುವಂತಹುದು. ದೇವರಾಜ ಅರಸು ಅವರ ಕಾಲದ ಭೂಸುಧಾರಣಾ ಕಾಯಿದೆಯ ಜಾರಿ ಪೂರ್ಣಗೊಳ್ಳುತ್ತಿಲ್ಲ. ಸಹಕಾರ ಚಳವಳಿ ಪಟ್ಟಭದ್ರರ ಮತ್ತು ಅಧಿಕಾರಶಾಹಿಯ ಕೈಯಲ್ಲಿ ಅದರ ಆಶಯವನ್ನೇ ಕಳೆದುಕೊಳ್ಳುತ್ತಿದೆ. ಇದು ದೇಶದ ಸ್ಥಿತಿಯೂ ಹೌದು.
ಸಾರಿಗೆ, ಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಕ್ಷೇತ್ರಗಳಲ್ಲಿ ಆಗಿರುವಷ್ಟು ಪ್ರಗತಿ ಕೃಷಿಯಲ್ಲಾಗಲೀ, ಸಣ್ಣ ಕೈಗಾರಿಕಾ ವಲಯದಲ್ಲಾಗಲೀ ಆಗಲಿಲ್ಲ. ಜಾಗತೀಕರಣದ ಕ್ರಮಗಳನ್ನು ಅವಕಾಶಗಳೆಂದು ಪರಿಗಣಿಸಿ ಸ್ಥಳೀಯ ಮಾರುಕಟ್ಟೆಗಳನ್ನು ಸಮಸಮವಾಗಿ ಬೆಳೆಸುವ ಕ್ರಮಗಳತ್ತ ಇನ್ನೋವೇಟಿವ್ ಆಗಲಿಲ್ಲ. ಕರ್ನಾಟಕದಲ್ಲಿ ಆರಂಭಿಸಿದ `ಸ್ತ್ರೀ ಶಕ್ತಿ’ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಿದ್ದರೆ ಇವತ್ತಿನ ಎಷ್ಟೋ ಭಾಗ್ಯಗಳ ಅಗತ್ಯವೇ ಇರುತ್ತಿರಲಿಲ್ಲವೇನೋ. ಸ್ತ್ರೀ ಸಬಲೀಕರಣದ ಸರಿ ಆರಂಭ ಕರ್ನಾಟಕದಲ್ಲಿ ಆದದ್ದೇ ‘ಸ್ವ ಸಹಾಯ ಸಂಘ’ಗಳ ಬ್ಯಾಂಕ್ ಲಿಂಕ್ಡ್ ಮೈಕ್ರೋ ಪೈನಾನ್ಸ್ ನೆರವಿನಿಂದ. ಇವತ್ತು ಅವು ಮತ್ತೆ 20ನೇ ಶತಮಾನದ Indegenious Money Lenders ರಂತಹ ‘ವಸೂಲಿ ಪಠಾಣರ’ ಕೈ ಸೇರುತ್ತಿವೆ. ಗ್ರಾಮೀಣ ಬ್ಯಾಂಕುಗಳನ್ನು ಸ್ವಾಯತ್ತ ಮಾದರಿಯಲ್ಲಿ ಗಟ್ಟಿಗೊಳಿಸುವುದರ ಬದಲಾಗಿ ಅವುಗಳ ವಿಲೀನೀಕರಣ-Merger-ಕ್ಕೆ ಮುಂದಾದದ್ದು ಅವುಗಳ ಮೂಲ ಆಶಯಗಳನ್ನೇ ನೆಲಕಚ್ಚುವಂತಾಗಿಸಿತು.
ಇನ್ನು ಎಲ್ಲ ಕ್ಷೇತ್ರಗಳಿಗೂ ಮಾನವಸಂಪನ್ಮೂಲ ಒದಗಿಸುವ ಶಿಕ್ಷಣ ಕ್ಷೇತ್ರವನ್ನು ಇವತ್ತಿಗೂ ಅನುತ್ಪಾದಕ ಎನ್ನುವಂತೆಯೇ ನಿರ್ವಹಿಸುತ್ತಿರುವುದು. ಶಿಕ್ಷಣದಲ್ಲಿ ಕನ್ನಡ ಬಳಕೆಯ ಸ್ಥಿತಿ ಎಲ್ಲಿಗೆ ಬಂದಿದೆ ಎನ್ನುವುದಕ್ಕೆ ಇತ್ತೀಚಿನ ಒಂದು ಸಣ್ಣ ಉದಾಹರಣೆ ಸಾಕು. ಇಡೀ ರಾಜ್ಯದ ಆಡಳಿತ ನಿರ್ವಹಣೆಗೆ ಆಧಾರ ಸ್ಥಂಭವಾದ ಅಧಿಕಾರಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊತ್ತ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಆಂಗ್ಲ ಭಾಷಾ ಪ್ರಶ್ನೆಗಳನ್ನು ಕನ್ನಡಕ್ಕೆ ಅನುವಾದಿಸುವಲ್ಲಿ ಆಗಿರುವ ತಪ್ಪುಗಳು. ಇದರಿಂದಾಗಿ ಪರೀಕ್ಷೆಯನ್ನೇ ರದ್ದುಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದದ್ದು. ಶೋಚನೀಯ ಎಂದರೆ ಯಾರು ಇಂಥ ಕೆಲಸಗಳನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿರುವರೋ ಅವರುಗಳೇ ಈ ಬಗ್ಗೆ ಗಂಭೀರವಾಗಿರದಿರುವುದು. ಕೆಟ್ಟ ಸಾಂಸ್ಥಿಕ ಫಲಿತಗಳಿಗೆ ಕೆಟ್ಟ ಆಡಳಿತವೇ ಕಾರಣ. ಇನ್ನು ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಶಿಕ್ಷಣಕ್ಕೆ ಸಂಬಂಧಿಸಿ ಹೇಳುವುದಾದರೆ, ತರಗತಿಯೊಳಗಿನ ಬೋಧನೆ ಪದವಿ ಮುಗಿಸಿದ ವಿದ್ಯಾರ್ಥಿಗಳ ಬದುಕಾಗುತ್ತಿಲ್ಲ. ಅಂಕಿ ಅಂಶಗಳು ಹೇಳುವಂತೆ ಹೆಚ್ಚಿನ ನಿರುದ್ಯೋಗಿಗಳ ಸಂಖ್ಯೆ ಡಿಪ್ಲಮೋ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರದ್ದೇ ಆಗಿದೆ. ಉದ್ಯೋಗದ ಭರವಸೆಯಿಲ್ಲದ ಅಥವಾ ಆರ್ಥಿಕ ಬದುಕಿನ ಭರವಸೆಯ ಜ್ಞಾನ, ಕೌಶಲ್ಯಗಳನ್ನು ಕಲಿಸದ ಪದವಿ ಶಿಕ್ಷಣವನ್ನು ಇನ್ನೂ ಎಲ್ಲಿಯವರೆಗೆ ಕಲಿಯಬೇಕು, ಕಲಿಸಬೇಕು? ಇದನ್ನು ಸರಿಪಡಿಸುವ ಜವಾಬ್ದಾರಿ, ಜವಾಬ್ದಾರಿಯುತ ಪ್ರಭುತ್ವಗಳದ್ದಲ್ಲದೆ ಇನ್ನ್ಯಾರದ್ದಾಗುತ್ತದೆ?
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-2)
ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಎಲ್ಲ ಕಾಲದ ಎಲ್ಲ ಸರ್ಕಾರಗಳಿಗೆ ಮಾದರಿಯಾಗುವಂತೆ ಮಾಡಿದ ಕೆಲಸ ಎಂದರೆ ಪದವೀಧರರಿಗೆ ಸ್ಟೈಪೆಂಡ್ ಕೊಟ್ಟು ಅವರನ್ನು ಸರ್ಕಾರದ ವಿವಿಧ ಇಲಾಖೆಗಳ ಸೇವೆಯಲ್ಲಿ ತೊಡಗಿಸಿದ್ದು. ಕೊನೆಗೆ ಸುಮಾರು 16,000 ಸ್ಟೈಪೆಂಡ್ ಪದವೀಧರರನ್ನು ಖಾಯಂಗೊಳಿಸಿದ್ದು. ಅದರ ಫಲಾನುಭವಿಗಳಾದ ಎಷ್ಟೋ ನೌಕರರು ಅಧಿಕಾರಿಗಳಾಗಿ ಉತ್ತಮ ಸೇವೆ ಕೊಟ್ಟು ನಿವೃತ್ತರಾದರು. ಬದುಕನ್ನು ಕನ್ನಡವಾಗಿಸುವ ಅಥವಾ ಕನ್ನಡ ಶಿಕ್ಷಣವನ್ನು ಬದುಕಾಗಿಸುವ ನೆಲೆಯಲ್ಲಿ ಜವಾಬ್ದಾರಿಯುತ ಸರ್ಕಾರ ತುಳಿಯಬೇಕಾದ ಹಾದಿ ಎಂದರೆ ಇದೇ ಅಲ್ಲವೇ? ಆಗ ಆದ ಒಂದೇ ವ್ಯತ್ಯಯ ಎಂದರೆ ನೇಮಕಾತಿಯಲ್ಲಿನ ಮೀಸಲಾತಿ ನಿರ್ವಹಣೆ.
ಚೆಲುವ ಕರ್ನಾಟಕ ಹೇಗೆ?
ಏಕೀಕರಣ ಚಳವಳಿ ಆಶಯದ ಚೆಲುವ ಕನ್ನಡ ನಾಡನ್ನು, ಸದಭಿಮಾನದ ಗೂಡನ್ನು ಕಟ್ಟಲು ಇವತ್ತಿಗೂ ಕಾಲ ಮಿಂಚಿಲ್ಲ. ಹಾಗೆ ನೋಡಿದರೆ ಅದಕ್ಕೆ ಕಾಲ ಇನ್ನಷ್ಟು ಪಕ್ವವಾಗಿದೆ. ಜ್ಞಾನ, ತಂತ್ರಜ್ಞಾನದ ಬೆಳಗು, ಜಾಗತೀಕರಣದ ಅವಕಾಶಗಳು, ಸೂಕ್ತ ರೀತಿಯಲ್ಲಿ ಸಬಲೀಕರಿಸಿದರೆ ಸವಾಲುಗಳನ್ನು ಎದುರಿಸಿ ಬೆಳಯಬಲ್ಲ ಚುರುಕುಮತಿಯ ನವಪೀಳಿಗೆ ಸಿದ್ಧವಿದೆ. ನಿರುದ್ಯೋಗಿ ಸೈನ್ಯವಾಗುತ್ತಿರುವ ಯುವ ಶಕ್ತಿಯನ್ನು ಉದ್ಯಮಶೀಲ ಪಡೆಯನ್ನಾಗಿಸುವ ಕೆಲಸ ಆಯಾ ದೇಶ ಮತ್ತು ರಾಜ್ಯಗಳ ಸರ್ಕಾರಗಳದ್ದು. ““Being in business is not the business of Government” ಎಂದು ಆ ಕೆಲಸವನ್ನು ಖಾಸಗಿ ಸಂಸ್ಥೆಗಳಿಗೆ, ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿ ಕೈತೊಳೆದುಕೊಳ್ಳುವುದಲ್ಲ.
ಕನ್ನಡದ ಬದುಕು, ಹೇಗೆ?
ಅಭಿವೃದ್ಧಿಯ ಕಾಳಜಿ ಎಂದರೆ ಸುಸ್ಥಿರ ಬದುಕಿನ ಕನಸುಗಳು. ಅವುಗಳನ್ನು ವಾಸ್ತವಗೊಳಿಸುವ ದೂರದೃಷ್ಟಿಯ ಯೋಜನೆಗಳು. ಕಾಲಮಿತಿಯಲ್ಲಿ ಅವುಗಳನ್ನು ಕಾರ್ಯಗತಗೊಳಿಸುವ ಪ್ರಭುತ್ವದ ಬದ್ಧತೆ. ಆಗಿರುವ ಕೆಲಸಗಳ ಗುಣಮಟ್ಟದ ಪ್ರಾಮಾಣಿಕ ಮೌಲ್ಯಮಾಪನ ಮತ್ತು ಒಟ್ಟು ಆಡಳಿತದಲ್ಲಿನ ಪಾರದರ್ಶಕತೆ. ಜೊತೆಗೆ, ದ್ವೇಷರಹಿತ, ಸಂಘರ್ಷರಹಿತ ನೆಮ್ಮದಿಯ ಜೀವನ. ಇದು ಕನ್ನಡಿಗರ ನಿರೀಕ್ಷೆ ಅಷ್ಟೇ ಅಲ್ಲ, ಇಡೀ ದೇಶದ ಜನರದ್ದೂ ಕೂಡ. ಈ ದೃಷ್ಟಿಯಿಂದ ಆಗಿರುವ ಪ್ರಗತಿಯನ್ನು ಒಪ್ಪಿಕೊಳ್ಳುತ್ತಲೇ, ಹಳೆಯ ಕೊಳೆಯನ್ನು ತೊಳೆದು ಕನ್ನಡಿಗರ ಬದುಕನ್ನು ಏಕೀಕರಣ ಚಳವಳಿ ಆಶಿತ ದಿಕ್ಕಿನಲ್ಲಿ ಕೊಂಡೊಯ್ಯಬೇಕಾದರೆ, ಈ ಕೆಳಗಿನ ಕೆಲಸಗಳು ಆದ್ಯತೆಯ ಮೇರೆಗೆ ತುರ್ತಾಗಿ ಪೂರ್ಣಗೊಳ್ಳಬೇಕಾಗಿದೆ.
1. ಪ್ರಮುಖ ವರದಿಗಳ ತುರ್ತು ಜಾರಿ – ದೇಶದ ಸಮಗ್ರತೆಗೆ ಪೂರಕವಾಗಿಯೇ ಸ್ಥಳೀಯರಿಗೆ ಉದ್ಯೋಗಾಕಾಶಗಳನ್ನು ಒದಗಿಸುವ ಬಗ್ಗೆ 1984ರಲ್ಲಿ ಕೊಟ್ಟ ಮತ್ತು ಇತ್ತೀಚೆಗೆ ಪರಿಷ್ಕರಣೆಗೊಂಡ ಸರೋಜಿನಿ ಮಹಿಷಿ ವರದಿಯ ಜಾರಿಯನ್ನು ಪೂರ್ಣಗೊಳಿಸುವುದು. ಜಾಗತೀಕರಣ ಉದ್ದೇಶಿತ, ಮುಕ್ತ ಮಾರುಕಟ್ಟೆ ಆಧಾರಿತ, ಖಾಸಗೀಕರಣ ಕೇಂದ್ರಿತ ಆರ್ಥಿಕ ನೀತಿಯ ಪ್ರಾಬಲ್ಯದ ನಡುವೆಯೂ ಇದನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಹಾಗೆಯೇ, ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸಲು ರಚಿಸಿದ ಡಾ. ಡಿ. ಎಂ. ನಂಜುಂಡಪ್ಪ ವರದಿಯ ಶಿಫಾರಸುಗಳ ಅನುಷ್ಠಾನ. ಇದು ಪೂರ್ಣಗೊಂಡರೆ ಪ್ರತ್ಯೇಕತೆಯ ಕೂಗಿಗೆ ಬೆಲೆ ಇಲ್ಲ. ಕೃಷಿ ಮತ್ತು ಕೃಷಿಕರ ಏಳಿಗೆಗೆ ಸಂಬಂಧಿಸಿದಂತೆ ಇರುವ ಸ್ವಾಮಿನಾಥನ್ ಆಯೋಗ ವರದಿಯನ್ನು ಒಕ್ಕೂಟ ಸರ್ಕಾರಕ್ಕೆ ಮಾದರಿಯಾಗುವಂತೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅದಾವ ಅಡ್ಡಿಗಳಿವೆಯೋ ಅರ್ಥವಾಗುತ್ತಿಲ್ಲ.

2. ಜಲಾನಯನ ಅಭಿವೃದ್ಧಿ ಮತ್ತು ನೀರಿನ ನಿರ್ವಹಣೆಯ ಬಗ್ಗೆ ಹದ್ದಿನ ಕಣ್ಣಿಡುವುದು- ಸ್ವಾತಂತ್ರ್ಯೋತ್ತರದ ಎರಡು ದಶಕಗಳಲ್ಲಿ ಪೂರ್ಣಗೊಂಡ ಜಲಾಶಯಗಳ ಶೇ. 25ಕ್ಕಿಂತ ಹೆಚ್ಚಿನ ಭಾಗ ಹೂಳು ತುಂಬಿವೆ. ಹೂಳು ತೆಗೆದು ಅದನ್ನು ಕೃಷಿಗೆ ಬಳಸಿಕೊಳ್ಳುವುದರ ಜೊತೆಗೆ ಅಣೆಕಟ್ಟೆಗಳನ್ನು ಇನ್ನಷ್ಟು ಗಟ್ಟಿಯಾಗಿರುವಂತೆ ನೋಡಿಕೊಳ್ಳುವುದು. ಭದ್ರಾ ಮೇಲ್ದಂಡೆ ಯೋಜನೆ ಒಳಗೊಂಡಂತೆ ಬಾಕಿ ಇರುವ ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು. ಕೆರೆಗಳ ಒತ್ತುವರಿಯ ಮತ್ತು ಅವುಗಳನ್ನು ತುಂಬಿಸಿಡುವ ಬಗ್ಗೆ ಮೂಡುತ್ತಿರುವ ಜಾಗೃತಿಯನ್ನ ಗಮನಿಸಿ ಪರಿಣಾಮಕಾರಿ ನಿರ್ವಹಣೆ ಮಾಡುವುದು.
3. ಬಹುಬೆಳೆ ಸಂಸ್ಕೃತಿಗೆ ಒತ್ತು- ನೀರಾವರಿ ಸೌಲಭ್ಯಗಳು ವಿಸ್ತಾರಗೊಳ್ಳುತ್ತಲೇ, ಬೆಳೆ ಎಂದರೆ ಅದು ಅಡಿಕೆ ಬೆಳೆಯಾಗುತ್ತಿದೆ. ಅದಕ್ಕೆ ಕಾರಣಗಳು ಇಲ್ಲದಿಲ್ಲ. ಬಹುಬೆಳೆ ಪದ್ಧತಿಯನ್ನು ಜಾರಿಗೆ ತರಲು ಬರೀ ಮಾಹಿತಿ ಮತ್ತು ಪ್ರೋತ್ಸಾಹ ಧನ (subsidy) ನೀಡಿದರೆ ಸಾಲದು. ಮಣ್ಣು, ಮಳೆ, ಹವಾಮಾನ ಮೊದಲಾದ ಪ್ರಾದೇಶಿಕ ಕೃಷಿ ಅನುಕೂಲಗಳನ್ನು ಅನುಸರಿಸಿ ಬೆಳೆ ಬೆಳೆಯುವ ಯೋಜನೆಗಳನ್ನು-Crop Plan-ರೈತರಿಗೆ ರೂಪಿಸಿಕೊಡಬೇಕು. ಚೀನಾ ಮತ್ತು ಇಸ್ರೇಲ್‌ಗಳಿಗೆ ಅದೆಷ್ಟು ರೈತರು, ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಪ್ರವಾಸ ಮಾಡಿಸಿದರೂ ಫಲಿತಾಂಶ ಮಾತ್ರ ಶೂನ್ಯ ಎಂಬಂತಿದೆ.
4. ಪಂಚಾಯತ್ ರಾಜ್ ವ್ಯವಸ್ಥೆಯ ಸೂಕ್ತ ನಿರ್ವಹಣೆ- ಜಿಲ್ಲೆಯನ್ನೇ ಒಂದು ಪ್ರಾದೇಶಿಕ ಅಭಿವೃದ್ಧಿ ಘಟಕವಾಗಿ ಪರಿಗಣಿಸಿ ಯಾವ ಕನಸುಗಳನ್ನು ಹೊತ್ತು ಪಂಚಾಯತ್ ರಾಜ್ ಆಡಳಿತವನ್ನು ಸಂರಚಿಸಿ, ಸಂಯೋಜಿಸಿ ಕಾರ್ಯಗತಗೊಳಿಸಲಾಯಿತೋ, ಆ ಕನಸುಗಳು ಕಮರಿಹೋಗುತ್ತಿವೆ. ಕನ್ನಡದ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಇದಕ್ಕಿಂತ ದೊಡ್ಡ ಅವಕಾಶ ಇನ್ನೊಂದಿಲ್ಲ. ಇದು ಮರೆತು ಹೋದಂತಿದೆ. ಮೇಲಿನವರನ್ನು ನೋಡಿ ಕೆಳಗಿನವರು ಕೆಲಸ ಮಾಡುವುದಾಗಿದೆಯೇ ಹೊರತು ನೀತಿ, ನಿಯಮಗಳನ್ನು ಅನುಸರಿಸಿ ಅಲ್ಲ. ವಿಕೇಂದ್ರೀಕರಣ ಎನ್ನುವುದು ಭ್ರಷ್ಟಾಚಾರದ ವಿಕೇಂದ್ರೀಕರಣವಾಗುತ್ತಿದೆ. ಇದನ್ನು ತುರ್ತಾಗಿ ಸರಿಪಡಿಸಿಕೊಳ್ಳದೆ ಕನ್ನಡ ಉಸಿರಾಗದು, ಅಭಿವೃದ್ಧಿ ಹಸಿರಾಗದು.
5. ಕನ್ನಡಪರ ಸರ್ಕಾರಿ ಆದೇಶಗಳ ಪೂರ್ಣ ಜಾರಿ- ಶಿಕ್ಷಣ ಮಾಧ್ಯಮ ಮತ್ತು ಆಡಳಿತದಲ್ಲಿ ಕನ್ನಡ ಬಳಕೆಯ ಬಗ್ಗೆ ಇದುವರೆಗೂ ಆಗಿರುವ ಸರ್ಕಾರಿ ಆದೇಶಗಳು ಎಷ್ಟರಮಟ್ಟಿಗೆ ಜಾರಿಯಾಗೊಂಡಿವೆ ಎನ್ನುವುದರ ಮೌಲ್ಯಮಾಪನ ಮಾಡಿ ಅವುಗಳ ಪರಿಪೂರ್ಣ ಜಾರಿಗೆ ಮುಂದಾಗಬೇಕು. 1972ರಿಂದ ಇಲ್ಲಿಯವರೆಗೆ ಆಗಿರುವ ಆದೇಶಗಳತ್ತ ಒಮ್ಮೆ ಕಣ್ಣುಹಾಯಿಸಿದರೆ ಸಾಕು ನಮ್ಮ ಆಡಳಿತದ ನಿಷ್ಕ್ರಿಯತೆ ಸ್ಪಷ್ಟವಾಗುತ್ತದೆ. ಅಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತ ಮಕ್ಕಳು ಸಮಾನ ಪೈಪೋಟಿಯ ಪರೀಕ್ಷೆಗಳನ್ನಾಗಲೀ, ಔದ್ಯೋಗಿಕ ಸವಾಲುಗಳನ್ನಾಗಲೀ ಎದುರಿಸಿ ಬದುಕುವುದು ಹೇಗೆ ಸಾಧ್ಯ? ಸರ್ವೋದಯದ ಪರಿಕಲ್ಪನೆಯಲ್ಲಿ ಸಮಾಜವನ್ನು ಕಟ್ಟಬೇಕೆಂದರೆ ಮೊದಲು ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆಗಳನ್ನು ನಿವಾರಿಸಿಕೊಳ್ಳಬೇಕು. ರಾಜ್ಯ ನೀತಿಗಳ ಜಾರಿಯಲ್ಲಿ ನ್ಯಾಯಾಂಗದ ಹಸ್ತಕ್ಷೇಪ ನೇತ್ಯಾತ್ಮಕವೆಂದು ಕಂಡುಬಂದಾಗ ಕಾನೂನು ಪರಿಣತರ ಸಲಹೆ ಪಡೆದು ಶೀಘ್ರವಾಗಿ ಬಗೆಹರಿಸಿಕೊಳ್ಳುವ ಜಾಣ್ಮೆ ಬೇಕು. ಬದ್ಧತೆ ಗಟ್ಟಿಯಾಗಿದ್ದರೆ ಜಾಣ್ಮೆ ತನ್ನಷ್ಟಕ್ಕೆ ತಾನೇ ಬರುತ್ತದೆ.
ಒಟ್ಟಿನಲ್ಲಿ, ಕರ್ನಾಟಕವಾಗಲಿ ಭಾರತವಾಗಲಿ, ಅಭಿವೃದ್ಧಿಗೆ ಅಗತ್ಯವಾದ ಅವಕಾಶ, ಸಲಹೆಗಳು ಬೇಕಾದಷ್ಟಿವೆ. ಆದರೆ ಅನುಷ್ಠಾನಗೊಳಿಸುವ ಗಟ್ಟಿತನ ಬೇಕು. ಇಲ್ಲವಾದರೆ ಶತಮಾನಗಳು ಕಳೆದರೂ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’’, “ಹಚ್ಚೇವು ಕನ್ನಡದ ದೀಪ’’, “ಬಾರಿಸು ಕನ್ನಡ ಡಿಂಡಿಮವ’’, ಎಂದು ಹೇಳಿಕೊಳ್ಳುತ್ತಲೇ ಸಾಗಬೇಕಾಗುವುದು ಖಚಿತ.
(‘ಈದಿನ ಡಾಟ್ ಕಾಮ್’ ಹೊರ ತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ಚಿತ್ರದುರ್ಗ ಮೂಲದ ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪನವರು ವಿಶ್ರಾಂತ ಪ್ರಾಂಶುಪಾಲರು. ತುಮಕೂರು ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಜಾಗತೀಕರಣ ಮತ್ತು ಭಾರತದ ಅಭಿವೃದ್ಧಿ ಕುರಿತ ‘ಬೋಧಿವೃಕ್ಷದ ಕೆಳಗೆ’, ‘ಬೆಳಗಿನಬೆರಗು’, ‘ಅಮೃತ ಭಾರತ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.




