ರಾಜಸ್ಥಾನದ ಒಂದು ಸಣ್ಣ ಗ್ರಾಮ ಶ್ರೀಗಂಗಾನಗರ. ಇದು ಪಂಜಾಬ್ ಪಾಕಿಸ್ತಾನ ಮತ್ತು ರಾಜಸ್ಥಾನಗಳ ನಡುವೆ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದೆ. ಇಲ್ಲಿದ್ದಾಗ ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲು ನನಗೆ ಯಾವುದೇ ವಿಶೇಷ ಅವಕಾಶಗಳಿರಲಿಲ್ಲ. ಶಾಲೆಯಲ್ಲಾಗಲಿ ಮನೆಯಲ್ಲಾಗಲಿ ಕರ್ನಾಟಕದ ಬಗ್ಗೆ ಯಾವುದಾದರೂ ರೀತಿಯಲ್ಲಿ ಕೇಳಿದ್ದರ ಬಗ್ಗೆ ನನಗೆ ನೆನಪಿಲ್ಲ. ಕರ್ನಾಟಕವನ್ನು ನೋಡಬೇಕು ಎಂಬ ಬಯಕೆ ನನಗೆ ಕ್ರಿಕೆಟ್‌ನಿಂದಲೇ ಶುರುವಾಯ್ತು. ಸುನೀಲ್ ಗವಾಸ್ಕರ್‌ಗಿಂತಲೂ ನಾನ್ಯಾಕೆ ಗುಂಡಪ್ಪ ವಿಶ್ವನಾಥ್‌ರವರ ಅಭಿಮಾನಿಯಾಗಿದ್ದೆ ಎಂಬುದು ನನಗೆ ಗೊತ್ತಿಲ್ಲ. ಆ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಒಂದು ವೇಳೆ ಗೆಲ್ಲುತ್ತಿದ್ದರೆ ಅದು ಸ್ಪಿನ್ ಬಾಲಿಂಗ್‌ನಿಂದ ಎಂದೆನಿಸುತ್ತಿತ್ತು. ದುಶ್ಯಂತ್ ಸಿಂಗ್‌ರವರ ಜೊತೆಗೆ ಕರ್ನಾಟಕದ ಎರಪ್ಪಲ್ಲಿ ಪ್ರಸನ್ನ ಮತ್ತು ಬಿ.ಎಸ್. ಚಂದ್ರಶೇಖರ್‌ರವರ ಜೊತೆಜೊತೆಗೆ ನಾನು ಕರ್ನಾಟಕ ರಣಜಿ ತಂಡದ ಅಭಿಮಾನಿಯಾದೆ.
ಒಂದು ಕಡೆ ನಾನು ಮುಂಬೈ ತಂಡದ ಉತ್ತುಂಗತೆಯಿಂದ ರೋಸಿ ಹೋಗಿದ್ದರೆ, ಮತ್ತೊಂದು ಕಡೆ ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ನೋಡಬಹುದಾದ ಕ್ರಿಕೆಟ್ ತಂಡಗಳೇ ಇಲ್ಲದಿರುವುದರಿಂದ ಕರ್ನಾಟಕದ ಕ್ರಿಕೆಟ್ ಟೀಮ್ ನನ್ನದು ಎಂದೆನಿಸುತ್ತಿತ್ತು. ಆ ದಿನಗಳಲ್ಲಿ ನಾವು ಕ್ರಿಕೆಟ್ ಮ್ಯಾಚ್ ಸೋತು ಹೋಗುವುದೇನೋ ಅಂದುಕೊಂಡಾಗಲೆಲ್ಲ ಚಂದ್ರಶೇಖರ್ ಏನಾದರೂ ಮೋಡಿ ಮಾಡುತ್ತಾರೆ ಎಂಬ ಸಣ್ಣ ಆತ್ಮವಿಶ್ವಾಸ ಮಿನುಗುತ್ತಿತ್ತು. ಇದಲ್ಲದೇ ನಾನು ಬ್ರಿಜೇಶ್ ಪಟೇಲ್‌ರವರ ಅಭಿಮಾನಿಯೂ ಆಗಿದ್ದೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಸಿದ್ಧರಾಗಿದ್ದರು. ಆ ದಿನಗಳಲ್ಲಿ ಟಿವಿ ಇರಲಿಲ್ಲ. ನನ್ನ ಮನೆ ಸೇರಿದಂತೆ ಊರಿನಲ್ಲಿರುವ ಯಾವುದೇ ಮನೆಯಲ್ಲಿಯೂ ಟಿವಿ ಇರಲಿಲ್ಲ. ವಿಶ್ವನಾಥ್‌ರವರ ಕೈಚಳಕ, ಪ್ರಸನ್ನರವರ ಆಟದ ಮೋಡಿ, ಚಂದ್ರಶೇಖರ್‌ರವರ ಗೂಗ್ಲಿ ಸೇರಿದಂತೆ ಈ ಕ್ರಿಕೆಟ್ ಪಂದ್ಯಗಳ ಮೋಹಕ ಕಮೆಂಟರಿಯನ್ನು ನಾವು ರೇಡಿಯೋದಲ್ಲಿ ಕೇಳಬೇಕಿತ್ತು ಅಥವಾ ಮರುದಿನ ಬರುವ ಪತ್ರಿಕೆಗಳಿಂದಲೇ ಓದಿ ತಿಳಿಯಬೇಕಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಕ್ರಿಕೆಟ್ ನನ್ನ ಪಾಲಿಗೆ ಒಂದು ರೀತಿ ಕಲ್ಪನೆಗಳೊಂದಿಗೆ ಬೆಸೆದ ಸಂಬಂಧವಾಗಿತ್ತು. ವಿಶ್ವನಾಥ್‌ರವರೊಂದಿಗೆ ‘ಗುಂಡಪ್ಪ’ ಹೆಸರು ಜೋಡಿಸಲ್ಪಟ್ಟಿರುವುದು ಒಂದು ಥರಾ ವಿಚಿತ್ರ ಎನಿಸುತ್ತಿತ್ತು. ಯಾಕೆಂದರೆ, ನಮ್ಮ ಊರಿನಲ್ಲಿ ಇಂತಹ ಹೆಸರುಗಳನ್ನು ನಾನು ಕೇಳಿಯೇ ಇರಲಿಲ್ಲ. ಹಾಗೆಯೇ ಎರಪಲ್ಲಿಯೂ ಕೂಡ. ಆದರೆ, ಕಲ್ಪನೆಗಳ ಆಸರೆಯಿಂದಾಗಿ ಈ ದೂರದೂರಿನೊಂದಿಗೆ ಒಂದು ರೀತಿಯ ಸಂಬಂಧ ಬೆಸೆಯಿತು. ನನ್ನ ಸಣ್ಣ ಊರನ್ನು ತೊರೆದು ಜೆಎನ್‌ಯು ಸೇರಿದಾಗಲೂ ಅಲ್ಲಿ ಒಡಿಶಾ ಮತ್ತು ಬಿಹಾರದಿಂದ ಬರುವಷ್ಟು ವಿದ್ಯಾರ್ಥಿಗಳು ಕರ್ನಾಟಕದಿಂದ ಇರಲಿಲ್ಲ. ಹಾಗಾಗಿ ಕರ್ನಾಟಕದ ಬಗ್ಗೆ ಇದ್ದ ನನ್ನ ಕಲ್ಪನೆಯಲ್ಲಿ ಯಾವುದೇ ವಿಶೇಷ ಬದಲಾವಣೆಗಳು ಆಗಲಿಲ್ಲ. ಕೇವಲ ಚೆಂಗಲ್ ರೆಡ್ಡಿ ಎಂಬ ಸ್ನೇಹಿತ ಮಾತ್ರ ನನ್ನೊಂದಿಗಿದ್ದರು. ನಮ್ಮಸಮತಾ ಯುವಜನ ಸಭಾದಲ್ಲಿ ಕೆಲವೊಮ್ಮೆ ಅವರ ಬಾಯಿಂದ ಕರ್ನಾಟಕದ ಸಮಾಜವಾದಿಗಳ ಬಗ್ಗೆ ಕೇಳಿದ್ದೇನಾದರೂ ಅದು ಮನಸ್ಸಿಗೆ ಇಳಿದಿರಲಿಲ್ಲ. ಆ ದಿನಗಳಲ್ಲಿ ಕಿಶನ್ ಪಟ್ನಾಯಕ್ ಮತ್ತು ಸಚ್ಚಿದಾನಂದ್ ಸಿನ್ಹಾರವರ ಮೂಲಕ ಸಮತಾ ಸಂಘಟನೆಯೊಂದಿಗೆ ಸೇರಿಕೊಂಡೆ, ಅದರ ಮೊದಲ ಸಭೆಯು ಕರ್ನಾಟಕದಲ್ಲಾಗಿತ್ತು. ಆದರೆ ಕಾರಣಾಂತರಗಳಿಂದ ನನಗೆ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದಾದ ಕೆಲವು ದಿನಗಳ ಬಳಿಕ ರೈತರ ಆಂದೋಲನ ನಡೆಯಿತು. ಆಗ ನಂಜುಂಡಸ್ವಾಮಿಯವರ ಬಗ್ಗೆ ಅರಿತೆ. ಆದರೂ, ಕರ್ನಾಟಕ ಹೇಗಿದೆ ಎಂಬ ಬಗ್ಗೆ ಸ್ಪಷ್ಟವಾದ ಕಲ್ಪನೆ ಮಾಡಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ.

ಇದನ್ನೂ ಓದಿರಿ: ಪರಿಷ್ಕೃತ ನೀತಿಗಳು ಕೈಗಾರಿಕೆಗೆ ಮಾರಕವಾಗಿದ್ದು ಹೇಗೆ?
1987ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಲೋಹಿಯಾರವರ ಬಗ್ಗೆ ಸೆಮಿನಾರ್ ನಡೆಸಿಕೊಡಲು ಆಹ್ವಾನ ಲಭಿಸಿದಾಗ ನನಗೆ ಕರ್ನಾಟಕದ ಸಾಕ್ಷಾತ್ ದರ್ಶನವಾಯ್ತು. ಇದು ಕೂಡ ಒಂದು ವಿಚಿತ್ರ ಘಟನೆ. ಆ ವೇಳೆ ನಾನು ಪಂಜಾಬ್ ಯೂನಿವರ್ಸಿಟಿಯಲ್ಲಿದ್ದೆ ಹಾಗೂ ಸಮಾಜವಾದಿ ವಿಷಯದಲ್ಲಿ ದೀಕ್ಷೆ ಪಡೆಯುತ್ತಿದ್ದೆ. ದಕ್ಷಿಣ ಭಾರತದಲ್ಲಿ ಸಿಗುವ ಇಡ್ಲಿ, ದೋಸೆ, ವಡೆಗಳನ್ನು ಹೊರತುಪಡಿಸಿ ಮಂಗಳೂರಿನಲ್ಲಿ ಇದಕ್ಕಿಂತಲೂ ಭಿನ್ನವಾದ ತಿಂಡಿಗಳ ಪರಿಚಯ ನನಗಾಯ್ತು. ದಿನದ ಮೂರು ಹೊತ್ತಿನ ಊಟದಲ್ಲಿ ರೊಟ್ಟಿಯ ಬದಲು ರೈಸ್‌ಬಾತ್ ತಿಂದು ನನಗೆ ಸಾಕು ಸಾಕಾಯ್ತು. ವಿಶ್ವವಿದ್ಯಾಲಯದಿಂದ ಬಹಳ ದೂರದಲ್ಲಿದ್ದ ಮಂಗಳೂರು ರೈಲ್ವೆ ನಿಲ್ದಾಣದಲ್ಲಿದ್ದ ಪಂಜಾಬಿ ಢಾಬಾದಲ್ಲಿ ರೊಟ್ಟಿ ತಿಂದ ಬಳಿಕ ನನ್ನ ಹೊಟ್ಟೆಗೆ ಸಂತೃಪ್ತಿಯ ಅನುಭವವಾಯ್ತು. ಆದರೆ, ಈ ಸಂತೃಪ್ತಿಯ ಜೊತೆಜೊತೆಗೆ ನಾಚಿಕೆಯೂ ಆಯ್ತು. ರಾಷ್ಟ್ರೀಯ ಐಕ್ಯತೆಯ ಬಗ್ಗೆ ಮಾತನಾಡುವ ನನಗೆ ಒಂದೆರಡು ದಿನ ಬಾತ್ ಕೂಡ ತಿಂದು ಕೂರಲು ಆಗಲಿಲ್ಲವಲ್ಲ ಎಂದೆನಿಸಿತು. ಚಂಡೀಗಡಕ್ಕೆ ಮರಳಿದ ಬಳಿಕ ಸತತ ಹದಿನೈದು ದಿನಗಳ ಕಾಲ ಬರೀ ಬಾತ್ ತಿನ್ನುವ ಮೂಲಕ ನಾನು ರೊಟ್ಟಿಯ ಮೇಲಿನ ವ್ಯಾಮೋಹದಿಂದ ನನ್ನನ್ನು ನಾನೇ ಮುಕ್ತಗೊಳಿಸಿದೆ. ಏನೇ ಇರಲಿ ಮಂಗಳೂರಿನ ಈ ಭೇಟಿಯ ಸಮಯದಲ್ಲಿ ಆ ಸೆಮಿನಾರ್‌ನಿಂದಾಗಿ ಕರ್ನಾಟಕದ ಚಿಂತನಾ ಪರಂಪರೆಯ ಬಗ್ಗೆ ನನಗೆ ಪರಿಚಯವಾಯ್ತು. ಪ್ರೊ. ರಾಘವೇಂದ್ರ ರಾವ್, ವೆಲೆರಿಯನ್ ರೊಡ್ರಿಗಸ್, ರಾಜಾರಾಮ್ ತೋಳ್ಪಾಡಿ ಸೇರಿದಂತೆ ಬುದ್ಧಿಜೀವಿಗಳೊಂದಿಗೆ ಪರಿಚಯವಾಯ್ತು. ಬಳಿಕ ಇದು ದೀರ್ಘಾವಧಿಯ ಸಂಬಂಧವಾಗಿ ಮಾರ್ಪಾಡಾಯ್ತು.
1993ರಲ್ಲಿ ನಾನು ಡಿ.ಆರ್ ನಾಗರಾಜ್ ಅವರನ್ನು ಮೊದಲ ಬಾರಿ ಭೇಟಿಯಾದ ಬಳಿಕ ಕರ್ನಾಟಕದ ಜೊತೆಗಿನ ಈ ಸಂಬಂಧ ಗಾಢವಾಯ್ತು. ಆದರೆ, ಕರ್ನಾಟಕ, ದೆಹಲಿ ಅಥವಾ ಚಂಡೀಗಡದ ಬದಲಿಗೆ ನಮ್ಮ ಈ ಭೇಟಿಯು ಶಿಮ್ಲಾದಲ್ಲಿ ಆಯ್ತು. ಆ ದಿನಗಳಲ್ಲಿ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿದ್ದರು ಮತ್ತು ನಾನು ಆಗ ಮೂರು ತಿಂಗಳ ಅವಧಿಗೆ ಸಂದರ್ಶಕ ಪ್ರಾಧ್ಯಾಪಕನಾಗಿ ಅಲ್ಲಿ ಸೇರಿಕೊಂಡಿದ್ದೆ. ಈ ವೇಳೆ ನನಗೆ ಕನ್ನಡ ನಾಟಕಕಾರರಾದ ಪ್ರಸನ್ನರವರನ್ನು ಭೇಟಿಯಾಗುವ ಅವಕಾಶದ ಜೊತೆಗೆ ಹೆಗ್ಗೋಡಿಗೆ ಹೋಗುವ ಭಾಗ್ಯವೂ ಲಭಿಸಿತು. ನಾಟಕದ ವಿಧಗಳು, ಗಾಂಧಿಯ ವಿಚಾರಧಾರೆಗಳು ಹಾಗೂ ಆಂದೋಲನದ ಕುರಿತ ನಿಷ್ಠೆ ಈ ಮೂರರ ಸಮ್ಮಿಲನವು ಕರ್ನಾಟಕದಲ್ಲಿಯೇ ಕಾಣಸಿಗುತ್ತದೆ. ನಾಗರಾಜ್ ಅವರನ್ನು ಭೇಟಿಯಾದ ಮೊದಲ ದಿನವೇ ನಾನು ಅಚ್ಚರಿಗೊಳಗಾದೆ. ಅವರ ಆಲೋಚನೆಯು ಸಮಾಜವಾದಿ ಪರಂಪರೆಯು ಭಾರತೀಯ ಪರಂಪರೆ, ಪಂಥೀಯ ವಿಚಾರಗಳೆಲ್ಲವೂ ಗಾಂಧಿ-ಅಂಬೇಡ್ಕರ್ ವಿಚಾರಧಾರೆಗಳನ್ನು ಒಂದೆಡೆಗೆ ಬೆಸೆಯುತ್ತಿದ್ದವು. ಇದೇ ನನ್ನ ಹುಡುಕಾಟವೂ ಆಗಿತ್ತು. ಯಾಕೆಂದರೆ ಗಾಂಧಿ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪರಸ್ಪರ ವಿರುದ್ಧವಾಗಿ ನಿಲ್ಲಿಸುವ ಪ್ರಯತ್ನವನ್ನು ನೋಡಿ ನಾನು ಹೈರಾಣಾಗಿದ್ದೆ. ಈ ನಡುವೆ ನಾಗರಾಜ್‌ರವರು ತಮ್ಮ ಅಪ್ರಕಟಿತ ಲೇಖನದ ಪ್ರತಿಯನ್ನು ನೀಡಿದರು. ತದನಂತರದ ದಿನಗಳಲ್ಲಿ ಅವರ ಈ ಪುಸ್ತಕವು ಬಹಳ ಪ್ರಸಿದ್ಧವಾಯ್ತು. Self-Purification vs self-emancipation: Gandhi Ambedkar ಎಂಬ ಲೇಖನ. ನಂತರ ಅದು ‘ಫ್ಲೇಮಿಂಗ್ ಫೀಟ್’ ಎಂಬ ಪುಸ್ತಕದಲ್ಲಿ ಪ್ರಕಟವಾಯಿತು. ನಾಗರಾಜ್ ಅವರ ವಾದ ಮಂಡಿಸುವ ವಿಧಾನಗಳು ನನಗಿಂತ ತುಂಬಾ ಭಿನ್ನವಾಗಿದ್ದವು. ಆದರೆ, ಇದರಲ್ಲಿ ಒಂದು ತೀಕ್ಷ್ಣ ದೃಷ್ಟಿಕೋನವಿತ್ತು. ರಾಜಕೀಯ ವಿಚಾರಧಾರೆ ಇತ್ತು. ಇಲ್ಲಿಂದ ಆರಂಭವಾದ ಈ ಸಂಬಂಧ ಅವರ ಅನಿರೀಕ್ಷಿತ ಅಗಲುವಿಕೆಯವರೆಗೂ ಗಾಢವಾಗಿತ್ತು. ಶಿಮ್ಲಾದ ಬಳಿಕ ನಾನು ಸಿಎಸ್‌ಡಿಎಸ್‌ಗೆ ತೆರಳಿದೆ. ನನ್ನ ಆಗ್ರಹದ ಮೇರೆಗೆ ನಾಗರಾಜ್ ಅವರೂ ಸಿಎಸ್‌ಡಿಎಸ್‌ಗೆ ಬಂದರು. ದೆಹಲಿ ಸೇರಿದಂತೆ ದೇಶದ ಬೋಧನಾ ಕೇಂದ್ರಗಳಲ್ಲಿ ಅವರು ತಮ್ಮ ಛಾಪನ್ನು ಮೂಡಿಸಿದರು. ಡಿ.ಆರ್. ನಾಗರಾಜ್ ಅವರ ಬಾಯಿಂದಲೇ ನಾನು ಮೊದಲ ಬಾರಿಗೆ ದೇವನೂರ ಮಹಾದೇವರವರ ಬಗ್ಗೆ, ಲಂಕೇಶ್- ಲಂಕೇಶ್ ಪತ್ರಿಕೆಯ ಬಗ್ಗೆ, ಗೋಪಾಲಗೌಡರ ಬಗ್ಗೆ, ಅನಂತಮೂರ್ತಿಯವರ ವಿಶ್ಲೇಷಣೆಗಳ ಬಗ್ಗೆ ಅರಿತೆ. ಕರ್ನಾಟಕದ ಚಿಂತನಾ ಪರಂಪರೆ ಹಾಗೂ ವಿಚಾರಧಾರೆಗಳು ನಾಗರಾಜ್ ಅವರಿಂದಲೇ ನನ್ನ ತನುಮನಗಳನ್ನು ಸೇರಿಕೊಂಡಿದ್ದು, ಬಳಿಕ ಅವು ಎಂದಿಗೂ ಅಳಿದು ಹೋಗಲಿಲ್ಲ.

ನಾಗರಾಜ್‌ರ ಬಳಿ ಒಮ್ಮೆ ಮರಾಠಿ ದಲಿತ ಸಾಹಿತ್ಯ ಮತ್ತು ಕನ್ನಡ ದಲಿತ ಸಾಹಿತ್ಯಗಳ ಬಗ್ಗೆ ತುಲನೆ ಮಾಡಲು ಕೇಳಿದ್ದು ನನಗೀಗಲೂ ನೆನಪಿದೆ. ನಾಗರಾಜ್ ಅವರು ತುಂಟ ನಗೆ ಬೀರಿ, “ಮರಾಠಿ ದಲಿತ ಸಾಹಿತ್ಯದಲ್ಲಿ ಮೊದಲು ದಲಿತ ಬಳಕೆ ಮರಾಠಿ ಸಾಹಿತ್ಯ ಬರುತ್ತದೆ. ಆದರೆ, ಕನ್ನಡ ದಲಿತ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯ ಮುಂಚೂಣಿಯಲ್ಲಿದ್ದು ಆ ಬಳಿಕ ದಲಿತರಿದ್ದಾರೆ’’ ಎಂದಿದ್ದರು. ಇಂಗ್ಲಿಷ್ ಬಾರದೇ ಇರುವ ಹಲವು ಚಿಂತಕರಲ್ಲಿ ಒಂದು ರೀತಿಯ ಕೀಳರಿಮೆ ಕಂಡುಬರುತ್ತದೆ, ಆದರೆ ಅದು ನಾಗರಾಜ್ ಅವರಲ್ಲಿ ಕಾಣುತ್ತಿರಲಿಲ್ಲ, ಅವರಲ್ಲಿ ಸ್ವಾಭಿಮಾನ ಎದ್ದುಕಾಣುತ್ತಿತ್ತು. ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯ ಹಿಂದಿ ಅನುವಾದವನ್ನು ಓದಿದಾಗ ನನಗೆ ಈ ಕೃತಿಯನ್ನು ಹಿಂದಿಯಲ್ಲಿ ಬರೆದಿಲ್ಲ ಎಂದೆನಿಸಲೇ ಇಲ್ಲ. ಕರ್ನಾಟಕದ ಗ್ರಾಮೀಣ ಜೀವನದ ಜೊತೆಜೊತೆಗೆ ನನಗೆ ಇಡೀ ಭಾರತದ ಗ್ರಾಮೀಣ ಜೀವನದ ಅನುಭವವಾಯ್ತು. ಆದರೆ, ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ನನ್ನ ಅನುಭವವು ಅಷ್ಟಾಗಿ ಇರಲಿಲ್ಲ. ಕಿಶನ್ ಅವರೊಂದಿಗೆ ಒಂದೆರಡು ಬಾರಿ ಕರ್ನಾಟಕಕ್ಕೆ ಬಂದಿದ್ದೆ. ಈ ವೇಳೆ ರೈತ ಹೋರಾಟಗಾರರೊಂದಿಗೆ ಭೇಟಿ ಆಯ್ತು. ಈ ಅವಧಿಯಲ್ಲಿ ನಂಜುಂಡ ಸ್ವಾಮಿಯವರಿಗೆ ನನ್ನ ಮೇಲೆ ವಿಶೇಷ ಕಾಳಜಿ ಇದ್ದಿದ್ದು ನೆನಪಿದೆ. ಇದರ ಹೊರತಾಗಿ ಜನಾಂದೋಲನಗಳ ಬಗ್ಗೆ ನನಗೆ ಅಷ್ಟಾಗಿ ಪರಿಚಯವಿರಲಿಲ್ಲ. ಆಮ್ ಆದ್ಮಿ ಪಾರ್ಟಿಯನ್ನು ದಿಲ್ಲಿಯನ್ನು ಹೊರತಾಗಿ ಇತರ ರಾಜ್ಯಗಳಿಗೆ ವಿಸ್ತರಿಸುವ ಜವಾಬ್ದಾರಿಯನ್ನು ನನಗೆ ನೀಡಿದಾಗಲೇ ಕರ್ನಾಟಕ ರಾಜಕೀಯದ ವಿಸ್ತೃತ ಪರಿಚಯವಾಯ್ತು. ಆ ದಿನಗಳಲ್ಲಿ ಇಲ್ಲಿರುವ ಎಲ್ಲ ಜನಾಂದೋಲನಗಳ ಜೊತೆಗೆ ಮಾತುಕತೆ ನಡೆಸುವ ಮೂಲಕ, ಬೆಂಗಳೂರಿನ ಸಿವಿಲ್ ಸೊಸೈಟಿಗಳು ಹಾಗೂ ಸರ್ವೋದಯ ಕರ್ನಾಟಕದ ಪರಿಚಯವಾಯ್ತು.
ಇದನ್ನೂ ಓದಿರಿ: ರಾಜ್ಯಪಾಲ ಹುದ್ದೆಯ ರಾಜಕಾರಣ; ತಿಳಿಯಲೇಬೇಕಾದ ಐತಿಹಾಸಿಕ ಸಂಗತಿಗಳಿವು!
ಕರ್ನಾಟಕದಲ್ಲಿ ಜಮೀನ್ದಾರರು ಮತ್ತು ರೈತರು ಹಾಗೂ ಜನಸಾಮಾನ್ಯರನ್ನು ಒಗ್ಗೂಡಿಸುವ ಕೆಲಸ ಮಾಡಿದ ಏಕೈಕ ರಾಜಕೀಯ ಸಂಘಟನೆ ಇದು ಎಂಬ ಕಾರಣಕ್ಕಾಗಿ ಸರ್ವೋದಯ ಕರ್ನಾಟಕದ ಕಡೆಗೆ ನನಗೆ ವಿಶೇಷ ಒಲವಿತ್ತು. ಇದು ವೈಚಾರಿಕವಾಗಿ ಗಾಂಧಿ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜೋಡಿಸಲು ಪ್ರಯತ್ನಿಸಿತು. ಸರ್ವೋದಯ ಕರ್ನಾಟಕವನ್ನು ಆಮ್ ಆದ್ಮಿ ಪಾರ್ಟಿಯೊಂದಿಗೆ ಜೋಡಿಸುವಲ್ಲಿ ನಾನು ವಿಫಲನಾದೆನಾದರೂ (ದೇವನೂರ ಮಹಾದೇವರವರು ಈ ನಿರ್ಣಯವನ್ನು ಬಹಳಷ್ಟು ಯೋಚಿಸಿಯೇ ತೆಗೆದುಕೊಂಡಿದ್ದರು), ನನಗೆ ಕರ್ನಾಟಕದ ದಲಿತ ಸಂಘರ್ಷ ಸಮಿತಿ ಸೇರಿದಂತೆ ಕರ್ನಾಟಕದ ವಿವಿಧ ಸಂಘಟನೆಗಳ ಪರಿಚಯವಾಯ್ತು. ಇದಾದ ಬಳಿಕ ನೂರ್ ಶ್ರೀಧರ್, ಡಾ. ವಾಸು ಹಾಗೂ ಕರ್ನಾಟಕ ಜನಶಕ್ತಿಯ ಪರಿಚಯವಾಯ್ತು. ಆಮ್ ಆದ್ಮಿ ಪಾರ್ಟಿಯನ್ನು ತೊರೆದ ಬಳಿಕ ದೇಶಾದ್ಯಂತ ಸ್ವರಾಜ್ ಸಂವಾದ ಆರಂಭಿಸಿದೆವು. ಇದರ ಮೊದಲ ಸಂವಾದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಇಲ್ಲಿ ಮೊದಲ ಬಾರಿಗೆ ನನಗೆ ಡಾ. ವಾಸು ಅವರ ಪರಿಚಯವಾಯ್ತು. ಈ ವೇಳೆ ಗೌರಿ ಲಂಕೇಶ್‌ರವರನ್ನೂ ಭೇಟಿಯಾಗಿದ್ದು ನನಗೆ ನೆನಪಿದೆ. ಇದಾದ ಬಳಿಕ ಕರ್ನಾಟಕದ ಅನೇಕ ಸೆಕ್ಯುಲರ್ ಸಂಘಟನೆಗಳೊಂದಿಗೆ ಸಂಪರ್ಕ ಬೆಳೆದು ಅನೇಕ ರ‍್ಯಾಲಿ ಹಾಗೂ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಲಭಿಸಿತು. ಹೀಗೆ ಕರ್ನಾಟಕದ ಸಂಘಟನೆಗಳು ಮತ್ತು ದೇವನೂರ ಮಹಾದೇವರೊಂದಿಗೆ ನನ್ನ ಸಂಬಂಧವು ಗಟ್ಟಿಯಾಯಿತು. ಇದು ಕೇವಲ ವೈಚಾರಿಕ ಸಂಬಂಧವಾಗಿರಲಿಲ್ಲ, ಇದು ಕರ್ನಾಟಕದ ಜನಾಂದೋಲನಗಳೊಂದಿಗಿನ ಸಂಬಂಧವಾಗಿತ್ತು. ಉತ್ತರ ಭಾರತದ ಕೆಲವೇ ಕೆಲವು ಜನರಿಗೆ ಕರ್ನಾಟಕ ರೈತ ಸಂಘದ ಬಗ್ಗೆ ತಿಳಿದಿತ್ತು.
ಪ್ರೊ. ನಂಜುಂಡಸ್ವಾಮಿಯವರ ನೆನಪಲ್ಲಿ ನಿರ್ಮಿಸಲಾದ ಅಮೃತಭೂಮಿಯಲ್ಲಿ ನಡೆದ ಒಂದು ಶಿಬಿರದಲ್ಲಿ ನನಗೆ ಕರ್ನಾಟಕ ರಾಜ್ಯ ರೈತ ಸಂಘದ ಆಳವನ್ನು ಅರಿಯಲು ಸಾಧ್ಯವಾಯ್ತು. ದೌರ್ಭಾಗ್ಯವಶಾತ್ ಈ ಸಂಘಟನೆಯು ಹಲವು ಭಾಗಗಳಾದವು. ಆದರೂ, ಇವುಗಳ ನಡುವೆಯೂ ಆ ಎಲ್ಲರೊಂದಿಗೆ ಸ್ನೇಹಪೂರ್ಣ ಸಂಬಂಧವನ್ನು ಉಳಿಸಿಕೊಂಡು ಬರಲು ಸಾಧ್ಯವಾಗಿರುವುದು ನನ್ನ ಅದೃಷ್ಟ. 2016ರಲ್ಲಿ ದೇಶದಲ್ಲಿದ್ದ ಬರ ಪರಿಸ್ಥಿತಿಯ ವೇಳೆ ಸಂವೇದನಾ ಯಾತ್ರೆಯನ್ನು ಯಾದಗಿರಿಯಿಂದ ನಡೆಸಿದಾಗ ಉತ್ತರ ಕರ್ನಾಟಕವನ್ನು ಅರಿಯುವ ಅವಕಾಶ ಲಭಿಸಿತು. ಕರ್ನಾಟಕದಲ್ಲಿ ಓಡಾಡಿದಾಗ ನನಗೆ ಇಡೀ ಭಾರತದ ಪರಿಚಯವಾದಂತಾಯ್ತು. ಕರ್ನಾಟಕದ ಭೂವೈವಿಧ್ಯತೆಯ ಬಗ್ಗೆ ಹೇಳುವ ಜನರ ಮಾತುಗಳು ನಿಜವೆನಿಸಿತು. ಇಲ್ಲಿ ಸಮುದ್ರದ ತಟವೂ ಇದೆ, ಮರುಭೂಮಿಯಂತಹ ಪ್ರದೇಶಗಳೂ ಇವೆ, ಬೆಟ್ಟಗುಡ್ಡಗಳಿವೆ, ಹಚ್ಚಹಸಿರಾದ ಮೈದಾನಗಳೂ ಇವೆ. ಇದಲ್ಲದೇ ನನಗೆ ಕರ್ನಾಟಕದಲ್ಲಿ ದೇಶದ ರಾಜಕೀಯ ಚಿತ್ರಣವೂ ನೋಡಲು ಸಿಕ್ಕಿದೆ. ಬೆಂಗಳೂರಿನಿಂದ ಮಂಡ್ಯಕ್ಕೆ ಹೋಗುವಾಗ ದಿಲ್ಲಿಯಿಂದ ಮೀರಠ್‌ಗೆ ಹೋದಂತೆ ಭಾಸವಾಗುತ್ತದೆ. ಮೈಸೂರಿನಲ್ಲಿ ಓಡಾಡುವಾಗ ಸಾಂಸ್ಕೃತಿಕ ನಗರಿ ಪುಣೆಯಲ್ಲಿದ್ದಂತೆ ಭಾಸವಾಗುತ್ತದೆ. ಮಂಗಳೂರು ಹಾಗೂ ಉಡುಪಿಯಲ್ಲಿ ಓಡಾಡುವಾಗ ಕೇರಳದಲ್ಲಿದ್ದಂತೆ ಭಾಸವಾಗುತ್ತದೆ. ಜೈನ ಬಸದಿಗಳನ್ನು ನೋಡಿದಾಗ ರಾಜಸ್ಥಾನದಲ್ಲಿದ್ದೇನೆಂಬಂತೆ ಅನಿಸುತ್ತದೆ. ಗುಲಬರ್ಗಾದಲ್ಲಿ ಓಡಾಡುವಾಗ ಹೈದರಾಬಾದ್ ಹಾಗೂ ತೆಲಂಗಾಣದಲ್ಲಿ ಓಡಾಡಿದಂತೆ ಅನಿಸುತ್ತದೆ. ಬೆಳಗಾವಿಯ ಸಮೀಪ ಇದ್ದಾಗ ಮಹಾರಾಷ್ಟ್ರದ ನೆನಪಾಗುತ್ತದೆ. ಒಂದೊಮ್ಮೆ ರಾಷ್ಟ್ರಗೀತೆಯಲ್ಲಿ”ಪಂಜಾಬ ಸಿಂಧ ಗುಜರಾತ ಮರಾಠ ದ್ರಾವಿಡ ಉತ್ಖಲ್ ವಂಗಾ’’ ಬಗ್ಗೆ ವಿಶ್ಲೇಷಣೆ ಇದೆಯೇ ಹೊರತು ಕರ್ನಾಟಕದ ಬಗ್ಗೆ ಯಾಕಿಲ್ಲ ಎಂದು ನಾನು ಯೋಚಿಸಿದ್ದೆ. ಆದರೆ, ಭಾರತದ ಎಲ್ಲ ವೈವಿಧ್ಯತೆಗಳು ಕರ್ನಾಟಕದಲ್ಲಿವೆ ಎಂಬುದನ್ನು ಅರಿತ ಬಳಿಕ ನನ್ನನ್ನು ನಾನೇ ಸಂತೈಸಿಕೊಂಡೆ.
ಕರ್ನಾಟಕ ಕೇವಲ ಒಂದು ಪ್ರದೇಶವಲ್ಲ ಬದಲಾಗಿ ಇಡೀ ಭಾರತದ ಪ್ರತಿಬಿಂಬವನ್ನೇ ತುಂಬಿಕೊಂಡಿದೆ. ರಾಜಸ್ಥಾನದ ಒಂದು ಸಣ್ಣ ಊರಿನಿಂದ ಶುರುವಾದ ಈ ಕಾಲ್ಪನಿಕ ಸಂಬಂಧವು ಪ್ರಚಲಿತ ಸನ್ನಿವೇಶದಲ್ಲಿ ಗಾಢವಾದ ಸಂಬಂಧವಾಗಿ ಬದಲಾಯ್ತು. ಕರ್ನಾಟಕದ ರಣಜಿ ಟೀಮ್ ಪಂದ್ಯವನ್ನು ವೀಕ್ಷಿಸುವುದನ್ನು ಬಿಟ್ಟು ವರ್ಷಗಳೇ ಕಳೆದು ಹೋಗಿವೆ. ಆದರೆ, ನನ್ನ
ಕಿರಿಮಗನ ಒತ್ತಾಯದ ಮೇರೆಗೆಯೂ ನಾನು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಅಭಿಮಾನಿಯಾಗಲು ಸಾಧ್ಯವಾಗಲಿಲ್ಲ. ಯಾಕೋ ಏನೋ ನನ್ನ ಮನಸಿನಿಂದ `ಆರ್‌ಸಿಬಿ’ ತಂಡದ ಮೇಲಿರುವ ವಿಜಯ್ ಮಲ್ಯ ಎಂಬ ಕೊಳೆಯನ್ನು ಮರೆಯಲಾಗುವುದಿಲ್ಲ. ಕರ್ನಾಟಕದ ಕ್ರಿಕೆಟ್ ತಂಡದಿಂದ ನನಗೆ ಐಪಿಎಲ್ ಅಥವಾ ರಣಜಿ ಕಾಣಿಸಿಕೊಳ್ಳುವುದಿಲ್ಲ, ಟೀಂ ಇಂಡಿಯಾ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿರಿ: ಕೋಮುಗಲಭೆಗಳಿಗೆ ಹರಿದ ‘ಒಬಿಸಿ’ಗಳ ನೆತ್ತರು; ಕರ್ನಾಟಕ ಕಂಡ ರಕ್ತ ಚರಿತ್ರೆ ಬಲ್ಲಿರಾ?
ಇಷ್ಟಂತೂ ಹೇಳಲೇಬೇಕು; ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಉತ್ತುಂಗತೆಯನ್ನು ನೋಡಿದಾಗ ನನಗೆ ಬಹಳ ವೈಯಕ್ತಿಕವಾಗಿ ತುಂಬಾ ನೋವಾಯಿತು. ಉತ್ತರ ಭಾರತದಲ್ಲಿ ಆದ ರೀತಿಯಲ್ಲಿಯೇ ಮುಸ್ಲಿಮರ ವಿರುದ್ಧ ವಿಷಕಾರುವುದು, ಸುಳ್ಳು ಸುದ್ದಿಗಳನ್ನು ಹರಡುವುದರ ನಡುವೆ ಇದನ್ನೇ ಭಕ್ತಿಯ ಭಾವದಿಂದ ಸ್ವೀಕರಿಸಿದ ಜನೆತಯ ಬಗ್ಗೆ ಯೋಚಿಸುವಾಗ ಆಘಾತವಾಯ್ತು. ಇದು ನನ್ನ ಮನದಲ್ಲಿರುವ ಬಸವಣ್ಣನ ವಿಚಾರಧಾರೆಗಳ ನಾಡಿನೊಂದಿಗೆ ಹೊಂದಾಣಿಕೆ ಮಾಡಲು ಆಗಲಿಲ್ಲ. ನಂಜುಂಡಸ್ವಾಮಿಯವರಿಂದ ಹುಟ್ಟಿಕೊಂಡ ರೈತ ಆಂದೋಲನಗಳ ನಾಡಿನಲ್ಲಿ, ದಲಿತ ಚೈತನ್ಯಗಳಿಗೆ ಹೊಸ ಸ್ವರೂಪವನ್ನು ನೀಡಿದ ನಾಡಿನಲ್ಲಿ, ಇವೆಲ್ಲವನ್ನೂ ನಿರಾಕರಿಸುತ್ತ ಬಿಜೆಪಿ ಆರ್‌ಎಸ್‌ಎಸ್ ಹೇಗೆ ಬಲಿಷ್ಠತೆ ಸಾಧಿಸಿತು ಎಂಬುದನ್ನು ಅರಗಿಸಿಕೊಳ್ಳುವುದು ನನಗೆ ಬಹಳ ಕಷ್ಟಕರ ವಿಚಾರವಾಗಿತ್ತು. ಬಹುಶಃ ನನ್ನ ಕಲ್ಪನೆಗಳು ಒಂದಿಷ್ಟು ರೊಮ್ಯಾಂಟಿಕ್ ಆಗಿದ್ದಿರಬಹುದು, ಈ ಎಲ್ಲ ಪರಂಪರೆಗಳನ್ನು ಕಾಪಿಡಲು ಬಯಸಿ ಕೆಲಸ ಮಾಡುವ ಜನರಲ್ಲಿ ಕೆಲವು ಕುಂದುಕೊರತೆಗಳು ಇದ್ದಿರಬಹುದು. ಕಳೆದ ಇಪ್ಪತ್ತು ವರ್ಷಗಳಲ್ಲಿ ಬೆಂಗಳೂರು ದೇಶದ ಸಿವಿಲ್ ಸೊಸೈಟಿಗಳ ರಾಷ್ಟ್ರೀಯ ರಾಜಧಾನಿಯ ರೂಪವನ್ನು ಪಡೆಯುತ್ತಿದೆ. ಆದರೆ, ಇದೇ ಬೆಂಗಳೂರಿನ ಜನರು ಮುಂಬೈ ಹಾಗೂ ದೆಹಲಿಗಿಂತ ಭಿನ್ನವಾಗಿ ವರ್ತಿಸದೇ ಇದ್ದರೆ, ಅದು ನಮ್ಮ ಜನ ಸಂಘಟನೆಗಳ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಕರ್ನಾಟಕವು ತನ್ನ ಈ ಅದ್ಭುತವಾದ ಸಾಂಸ್ಕೃತಿಕ, ವೈಚಾರಿಕ ಪರಂಪರೆ ಹಾಗೂ ಸಂಘರ್ಷಶೀಲ ರಾಜಕೀಯ ಗದ್ದುಗೆಯನ್ನು ಈಗಿನ ಸಮಾಜ ಹಾಗೂ ಹೊಸ ಪೀಳಿಗೆಗೆ ತಲುಪಿಸುವಲ್ಲಿ ಸಫಲವಾಗುವುದೇ ಅಥವಾ ಕರ್ನಾಟಕವು ದೇಶದ ಇತರ ರಾಜ್ಯಗಳಂತೆ ಒಂದು ರಾಜ್ಯವಾಗಿ ಮಾರ್ಪಾಡಾಗುವುದೇ? ಎಂಬುದು ಭವಿಷ್ಯದ ಪ್ರಶ್ನೆಯಾಗಿದೆ. ಇದರ ತೀರ್ಮಾನ ದೂರದಲ್ಲಿ ಕುಳಿತ ಹಿತಚಿಂತಕನಾದ ನನ್ನಂಥವರು ಮಾಡಲಾರರು. ಈ ಸಂಘರ್ಷವನ್ನು ಕರ್ನಾಟಕದ ಜನತೆ ಹಾಗೂ ಜನಪರ ಸಂಘಟನೆಗಳೇ ಮಾಡಬೇಕಿದೆ. ಇಷ್ಟು ಮಾತ್ರ ಹೇಳಬಲ್ಲೆ, ಈ ಸಂಘರ್ಷಕ್ಕೆ ಕರ್ನಾಟಕದಲ್ಲಿ ಸಾಮಗ್ರಿಯ ಕೊರತೆಯಂತೂ ಇಲ್ಲ.
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಬರಹ)

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ




