(ಮುಂದುವರಿದ ಭಾಗ..) ಬಿ.ಕೆ.ಹರಿಪ್ರಸಾದ್ 1979ರಲ್ಲಿ ದೆಹಲಿಗೆ ಬಂದವರು. ನಾಲ್ಕು ದಶಕಗಳಿಗೂ ಮೀರಿ ದೆಹಲಿಯ ರಾಜಕಾರಣದಲ್ಲಿದ್ದವರು. ಕಾಂಗ್ರೆಸ್ ಪಕ್ಷದ ಒಳ ಹೊರಗನ್ನು ಬಲು ಸಮೀಪದಿಂದ ಬಲ್ಲವರು. ಅದ್ಭುತ ವಾಗ್ಮಿಯಲ್ಲದಿದ್ದರೂ ತೂಕದ ಮಾತಾಡುವವರು. ದೆಹಲಿಯನ್ನು ಬಲ್ಲವರು. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಎಐಸಿಸಿ ಜಂಟಿ ಕಾರ್ಯದರ್ಶಿಯಾಗಿ, ಪ್ರಧಾನಕಾರ್ಯದರ್ಶಿಯಾಗಿ ಪಕ್ಷಕ್ಕಾಗಿ ಹೆಚ್ಚಾಗಿ ತೆರೆಮರೆಯಲ್ಲಿ ದುಡಿದವರು. ಈ ಕಾರಣಕ್ಕಾಗಿ ಉತ್ತರ ಭಾರತವನ್ನು ಅಂಗೈ ಗೆರೆಗಳಂತೆ ಅರಿತವರು. ಎಐಸಿಸಿಯ ಹಲವು ಅಧ್ಯಕ್ಷರ ಸನಿಹದ ಸಂಪರ್ಕ ಹೊಂದಿದ್ದವರು. ಹಲವು ಅವಧಿಗಳ ಕಾಲ ರಾಜ್ಯಸಭಾ ಸದಸ್ಯರಾಗಿ ಬಹುಮುಖ್ಯ ಸ್ಥಾಯೀ ಸಮಿತಿಗಳಲ್ಲಿ ಕೆಲಸ ಮಾಡಿದವರು. ಎಐಸಿಸಿ ಪ್ರಧಾನಕಾರ್ಯದರ್ಶಿಯಾಗಿ 30 ವರ್ಷಗಳ ಕಾಲ ಮಹಾರಾಷ್ಟ್ರ, ರಾಜಸ್ತಾನ, ಬಿಹಾರ, ಹರಿಯಾಣ, ಮಧ್ಯಪ್ರದೇಶ ಮುಂತಾದ 19 ರಾಜ್ಯಗಳ ಉಸ್ತುವಾರಿ ನಿಭಾಯಿಸಿದ ವಿರಳಾತಿವಿರಳ ಕನ್ನಡಿಗ.
“ಹೊಟ್ಟೇಲಿ ಬೆಂಕಿ ಇದ್ರೆ ನೋವಿದ್ರೆ, ಅಧ್ಯಯನ ಮಾಡಿ ತಿಳಿದುಕೊಂಡಿದ್ರೆ ಸಂಸತ್ತಿನಲ್ಲಿ ಮಾತಾಡಬಹುದು. ನಾವು ಮಾತಾಡದಿದ್ದರೆ ಉತ್ತರದವರು ನಮ್ಮನ್ನು ಲೆಕ್ಕಕ್ಕೆ ಇಡೋದಿಲ್ಲ. ಲೋಕಸಭೆ ಅಂದ್ರೆ ದುಡ್ಡಿರೋರು, ಬಲಾಢ್ಯರನ್ನು ಕಳಿಸಿಬಿಡ್ತಾರೆ. ಅವರು ಪಾರ್ಲಿಮೆಂಟಲ್ಲಿ ದನಿಯೆತ್ತಿ ಮಾತಾಡುವ ಕುರಿತು ಅವರು ತಲೇನೆ ಕೆಡಿಸಿಕೊಳ್ಳಲ್ಲ. ತಮಿಳುನಾಡು, ಕೇರಳದವರು ಮಾತಾಡ್ತಾರೆ. ಕೆಲ್ಸ ಮಾಡ್ತಾರೆ, ಚೆನ್ನಾಗೂ ಮಾಡ್ತಾರೆ. ರೇಲ್ವೆ ಸಚಿವರಾಗಿ ಜಾಫರ್ ಷರೀಫ್ ಅವರು ಮೀಟರ್ ಗೇಜನ್ನ ಯೂನಿಗೇಜ್ ಮಾಡಿದ್ದೂ ಕರ್ನಾಟಕಕ್ಕೆ ಬಹಳ ಲಾಭ ಆಯಿತು. ಕರ್ನಾಟಕ ಮತ್ತು ರಾಜಸ್ತಾನ ಬಿಟ್ಟರೆ ಉಳಿದೆಲ್ಲ ಕಡೆ ಮೊದಲಿನಿಂದಲೇ ಬ್ರಾಡ್ ಗೇಜ್ ಇತ್ತು. ಕರ್ನಾಟಕಕ್ಕೆ ಮಾಡಲು ಹೊರಟರೆ ಸ್ವಂತ ರಾಜ್ಯದ ಪಕ್ಷಪಾತದ ಆರೋಪ ಬರ್ತದೆಂದು ಯೂನಿಗೇಜ್ ಹೆಸರು ಮುಂದೆ ಮಾಡಿದರು. ಷರೀಫ್ ಅವರು ಮಾಡಿದಷ್ಟು ಕೆಲಸವನ್ನು ಬೇರೆ ಯಾರೂ ಕರ್ನಾಟಕಕ್ಕೆ ಮಾಡಲಿಲ್ಲ. ಅಲ್ಪಸಂಖ್ಯಾತರು ಅಂತ ಅವರಿಗೆ ಯಾರೂ ಕ್ರೆಡಿಟ್ಟೂ ಕೊಡಲಿಲ್ಲ. ಕೆಂಗಲ್ ಹನುಮಂತಯ್ಯ, ಸಿ.ಎಂ.ಪೂಣಚ್ಚ ರೇಲ್ವೆ ಸಚಿವರಾಗಿದ್ದರು. ಆದರೆ ಇದ್ರು, ಹೋದರು ಎಂಬಂತಾಗಿತ್ತು. ಕರ್ನಾಟಕಕ್ಕೆ ಕೆಲಸ ಮಾಡಬೇಕೆಂಬ ಇಚ್ಛಾಶಕ್ತಿ ಇರಬೇಕು. ಪಾರ್ಲಿಮೆಂಟಲ್ಲಿ ಕುಳಿತು ಪಕ್ಷದ ಪರವಾಗಿ ಕೈಯೆತ್ತಿ ಬರ್ತೀನಿ ಸಾಕು ಅಂದ್ರೆ ಯಾರೇನು ಮಾಡಲಾದೀತು? ಕರ್ನಾಟಕದ ಬಲಿಷ್ಠ ಸಮುದಾಯಗಳ ರಾಜಕಾರಣಿಗಳು ತಮಗೆ ಅಧಿಕಾರ ಸಿಕ್ಕಾಗ ಸ್ವಾರ್ಥ ಬಿಟ್ಟು ಬೇರೇನೂ ಮಾಡಲಿಲ್ಲ.
ಈಗ ಹೊಸ ಪಾರ್ಲಿಮೆಂಟ್ ಕಟ್ಟಡದಲ್ಲಿ ಸೆಂಟ್ರಲ್ ಹಾಲ್ ಇಲ್ಲ. ಹಳೆಯ ಕಟ್ಟಡದ ಸೆಂಟ್ರಲ್ ಹಾಲ್ ನಲ್ಲಿ ಕಾಫೀ, ನಾಲ್ಕು ಹೋಳು ಬ್ರೆಡ್ ತಿಂದು ಹೋಗೋ ಕೆಲಸಕ್ಕೆ ಬಹಳ ಮಂದಿ ಸೀಮಿತ ಆಗಿದ್ರು. ಸತತವಾಗಿ ಸುಮಾರು 40 ವರ್ಷ ಕಾಂಗ್ರೆಸ್ ನಿಂದ 25-26 ಮಂದಿ ಲೋಕಸಭೆಗೆ ಆಯ್ಕೆ ಆಗಿ ಬರ್ತಿದ್ದರು. ಸಮರ್ಥಿಸಿಕೊಂಡು ಕೆಲಸ ಮಾಡಬಹುದಿತ್ತು. ಬಿ. ಶಂಕರಾನಂದ್, ಡಾ. ವಿ.ಕೆ.ಆರ್.ವಿ ರಾವ್, ಎಂ.ವಿ. ಕೃಷ್ಣಪ್ಪ ತುಸು ಕೆಲಸ ಮಾಡಿದರು. ಆದರೆ ಷರೀಫ್ ಕೆಲಸ ಅಸಾಧಾರಣ. ಮೊದಲೆಲ್ಲ ದೆಹಲಿಗೆ ಬರಬೇಕೆಂದರೆ ಚೆನ್ನೈಗೆ ಹೋಗಿ ರಾತ್ರಿವರೆಗೆ ಕಾದು ತಮಿಳುನಾಡು ಎಕ್ಸ್‌ಪ್ರೆಸ್ ಹಿಡಿದು ದೆಹಲಿಗೆ ಬರಬೇಕಿತ್ತು. ಕರ್ನಾಟಕದಿಂದ ನೇರವಾಗಿ ದೆಹಲಿಗೆ ರೈಲು ಸಂಚಾರ ಇರಲಿಲ್ಲ. ಷರೀಫ್ 1980-81ರಲ್ಲಿ ನೇರ ರೈಲು ವ್ಯವಸ್ಥೆ ಮಾಡಿದರು. ಯಲಹಂಕಕ್ಕೆ ವ್ಹೀಲ್ ಅಂಡ್ ಆಕ್ಸಲ್ ಪ್ಲ್ಯಾಂಟ್ ತಂದ್ರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ಸಾಕು. ಪಾರ್ಲಿಮೆಂಟಿಗೆ ಯಾರಾದರೂ ಆರಿಸಿ ಹೋಗಲಿ ಎಂದು ನಮ್ಮವರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಸರಿಯಾದವರನ್ನು ಆರಿಸಿ ಕಳಿಸಲ್ಲ. ಕೇರಳದ್ದು ಸೈದ್ಧಾಂತಿಕ ಹೋರಾಟ, ತಮಿಳುನಾಡಿಗೆ ಏನಾದರೂ ಕೆಲಸ ಮಾಡಬೇಕು ಎಂಬುದು ತಮಿಳು ಸಂಸದರ ಹೋರಾಟ. ನಮ್ಮದು ಎರಡೂ ಇಲ್ಲ.
ಇದನ್ನೂ ಓದಿರಿ: ಕರ್ನಾಟಕ 50 | ದೆಹಲಿಯ ಕಣ್ಣಲ್ಲಿ ಕರ್ನಾಟಕ; ಕರ್ನಾಟಕದ ಕಣ್ಣಲ್ಲಿ ದೆಹಲಿ (ಭಾಗ-1)
ತಮಿಳುನಾಡಿನವರು ತಮಿಳು ಮತ್ತು ಇಂಗ್ಲಿಷಲ್ಲಿ ಮಾತಾಡ್ತಾರೆ. ನಮ್ಮವರು ಬಾಯೇ ಬಿಡಲ್ಲ ಅಂತಾರೆ. ಕಾಂಗ್ರೆಸ್ ಮೂರು ಸಲ ಹೋಳಾದದ್ದು ಕರ್ನಾಟಕದವರಿಂದಲೇ. ನಿಜಲಿಂಗಪ್ಪನವರು, ಕಾಸು ಬ್ರಹ್ಮಾನಂದರೆಡ್ಡಿ ರೆಡ್ಡಿ ಕಾಂಗ್ರೆಸ್ ಆಗಿದ್ದರ ಹಿಂದೆ ಕೆ.ಎಚ್. ಪಾಟೀಲ್ ಮತ್ತು ಎಸ್‌ಎಂ. ಕೃಷ್ಣ ಇದ್ದರು. ದೇವರಾಜ ಅರಸರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ತಮಗೆ ಆದ ಅವಹೇಳನಕ್ಕೆ ಸಿಡಿದು ನಿಂತರು. ಬಲಿಷ್ಠ ಜಾತಿಗಳವರಿಗೆ ಅವಹೇಳನದ ಪ್ರಶ್ನೆ ಇರಲಿಲ್ಲ. ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋದ ಬಲಿಷ್ಠ ಸಮುದಾಯಗಳು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವುದಕ್ಕೆ ಪ್ರಾಶಸ್ತ್ಯ ನೀಡಿದರೇ ವಿನಾ ಕರ್ನಾಟಕಕ್ಕೆ ಕೆಲಸ ಮಾಡಲು ಅಲ್ಲ. ಜೊತೆಗೆ ಇಂಗ್ಲಿಷಲ್ಲಿ ಮಾತಾಡಲು ಬಾರದೆ, ಕನ್ನಡದಲ್ಲಿ ಮಾತಾಡಲಾಗದೆ ಕೀಳರಿಮೆ ಅನುಭವಿಸಿ ಬಾಯಿ ಹೊಲಿದುಕೊಂಡವರೇ ಹೆಚ್ಚು. ಮಾರ್ಗರೆಟ್ ಆಳ್ವ ಒಳ್ಳೆಯ ಸಂಸದೀಯ ಪಟು. ಜನಾರ್ದನ ಪೂಜಾರಿಯವರು ಬ್ಯಾಂಕ್ ಲೋನ್ ಮನ್ನಾ ಮಾಡಿದರು. ವೈಯಕ್ತಿಕವಾಗಿ ಭ್ರಷ್ಟರಿರಲಿಲ್ಲ. ನಮ್ಮ ಸದಸ್ಯರ ಹಿಂಜರಿಕೆಯ ಲಾಭವನ್ನು ಪಡೆದ ದೆಹಲಿ ನಾಯಕರು ನಮ್ಮನ್ನು ಗದರಿಸಿಕೊಂಡೋ, ಅದುಮಿಟ್ಟುಕೊಂಡೋ ಇದ್ದರು. ಕಳೆದ ಹತ್ತು ವರ್ಷಗಳಿಂದಲಂತೂ ಅಭಿವೃದ್ಧಿಯ ಕುರಿತು ಮಾತೇ ಇಲ್ಲ, ಕೋಮು ಧ್ರುವೀಕರಣದ ಆರ್ಭಟವೇ ಎಲ್ಲ.
ನೆಹರೂ ಕಾಲದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹಲವಾರು ಕೇಂದ್ರ ಒಡೆತನದ ಸಾರ್ವಜನಿಕ ಉದ್ಯಮಗಳು ಸ್ಥಾಪನೆಯಾದವು. ಬೆಂಗಳೂರು ನಗರ ಆರಂಭದಲ್ಲಿ ಟಿಪ್ಪು ಸುಲ್ತಾನ್ ಕಾರಣ ರೇಷ್ಮೆ ನಗರವಾಗಿತ್ತು, 1907ರಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಬಂದು ಸೈನ್ಸ್ ಸಿಟಿ ಆಯ್ತು. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಸಾರ್ವಜನಿಕ ಉದ್ಯಮ ವಲಯದ ಔದ್ಯೋಗಿಕ ನಗರ ಆಯ್ತು. ಆನಂತರ ಹಾಲಿನ ನಗರ, ಸಿಲಿಕಾನ್ ಸಿಟಿ ಆಯ್ತು. ಸಿಲಿಕಾನ್ ಸಿಟಿ ಆಗಲು ಯಾರದೂ ಕೊಡುಗೆ ಇರಲಿಲ್ಲ. ತಾನಾಗಿಯೇ ಬೆಳೆಯಿತು’’ ಎನ್ನುತ್ತಾರೆ ಬಿ.ಕೆ. ಹರಿಪ್ರಸಾದ್.

ಹೆಚ್ಚೂ ಕಡಿಮೆ ಕಳೆದ 43 ವರ್ಷಗಳಿಂದ ದೆಹಲಿಯ ಇಂಡಿಯನ್ ಎಕ್ಸ್ ಪ್ರೆಸ್, ಝೀ ನ್ಯೂಸ್, ದಿ ಪಯನೀರ್ ಸುದ್ದಿ ಸಂಸ್ಥೆಗಳ ಹಿರಿಯ ಹುದ್ದೆಗಳಲ್ಲಿ ದುಡಿದ ಅರಕಲಗೂಡು ಸೂರ್ಯಪ್ರಕಾಶ್ ಪ್ರಸಾರಭಾರತಿಯ ಅಧ್ಯಕ್ಷರೂ ಆಗಿದ್ದವರು. ಈಗಲೂ ರಾಷ್ಟ್ರೀಯ ರಾಜಧಾನಿಯೇ ಅವರ ವಾಸ ಸ್ಥಾನ. What Ails Indian Parliament?: An Exhaustive Diagnosis ಎಂಬ ಮಹತ್ವದ ಕೃತಿಯನ್ನು ರಚಿಸಿದವರು.
ಅವರ ಪ್ರಕಾರ “ರಾಜಕೀಯ, ಪತ್ರಿಕೋದ್ಯಮ, ನೌಕರಶಾಹಿ, ಉದ್ಯಮ ಯಾವುದೇ ಕ್ಷೇತ್ರ ಅಥವಾ ಕಸಬು ಇರಬಹುದು. ದಿಲ್ಲೀವಾಲಗಳು ತಮ್ಮನ್ನು ರಾಜಾ ಎಂದೂ, ಇಲ್ಲಿಗೆ ಬರುವವರನ್ನು ಪ್ರಜಾ ಎಂಬ ಮನೋಭಾವ ಹೊಂದಿರುತ್ತಾರೆ. ಸಾಧಾರಣ ಕನ್ನಡಿಗ ದಿಲ್ಲೀವಾಲಗಳನ್ನು ಬೆಕ್ಕಸ ಬೆರಗಿನಿಂದ ನೋಡುತ್ತಾನೆ. ತನ್ನನ್ನು ಪ್ರಜೆ ಎಂದು ಬಗೆಯುತ್ತಾನೆ. ಇಲ್ಲಿಗೆ ಬರುವ ಕನ್ನಡಿಗರು ತಮ್ಮನ್ನು ತಾವು ಅರ್ಜಿದಾರರಂತೆ ಭಾವಿಸುತ್ತಾರೆ. ಇವರು ಆಡಳಿತಗಾರರು, ನಾವು ಅರ್ಜಿದಾರರು. ಯಾವುದೇ ಕಸಬು ಇರಬಹುದು. ಗುಂಡೂರಾಯರು ಮುಖ್ಯಮಂತ್ರಿ ಆಗಿದ್ದಾಗ ದೆಹಲಿಯಿಂದ ಎಐಸಿಸಿ ಕಾರ್ಯದರ್ಶಿ ಒಬ್ರು ಬೆಂಗಳೂರಿಗೆ ಹೋದರು. ಈತನಿಗೆ ವಿಮಾನನಿಲ್ದಾಣದಲ್ಲೇ ದೊಡ್ಡ ಕಾರು ವ್ಯವಸ್ಥೆ ವಿಂಡ್ಸರ್ ಮ್ಯಾನರ್‌ಗೆ ಕರೆದೊಯ್ದು ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ಆತ ಕೇವಲ ಜಂಟಿ ಕಾರ್ಯದರ್ಶಿಯೇ ಇರಬಹುದು, ಆದರೆ ಎಐಸಿಸಿ ಪ್ರಧಾನಕಾರ್ಯದರ್ಶಿ ಮತ್ತು ಅಧ್ಯಕ್ಷರ ಕಣ್ಣು ಮತ್ತು ಕಿವಿ ಎಂದು ಅವನನ್ನು ಖುಶಿಯಾಗಿ ಇಡಲಾಗುತ್ತದೆ. ಆ ಕಾಲದಲ್ಲಿ ನಾನು ನೋಡಿರೋದು, ಇಂದಿನವರೆಗೂ ಅದೇ ವ್ಯವಸ್ಥೆ. ಪ್ರಧಾನಕಾರ್ಯದರ್ಶಿ ಆಗಿದ್ದರೆ ಆತನಿಗೆ ಇನ್ನೂ ಹೆಚ್ಚಿನ ವ್ಯವಸ್ಥೆ. ಎಲ್ಲ ರಾಜಕೀಯ ಪಕ್ಷಗಳಿಗೂ ಇದು ಅನ್ವಯಿಸುತ್ತೆ. ದಿಲ್ಲೀವಾಲನ ಪ್ಯಾಕೇಜಿಂಗ್ ಸಖತ್ತಾಗಿರ್ತದೆ. ಸಾಧಾರಣವಾಗಿ ನಮ್ಮವರಲ್ಲಿ ಸರಕು ಸಿಕ್ಕಾಬಟ್ಟೆ ಇರ್ತದೆ. ಬುದ್ಧಿವಂತರು ಆದರೆ ಸ್ವಭಾವದಿಂದಲೇ ಸರಳರು. ದಿಲ್ಲಿಯವರೆಲ್ಲ ದರ್ಬಾರು ನಡೆಸ್ತಾರೆ. ಅದನ್ನು ನೋಡಿ ನಮ್ಮವರು ಗಾಬರಿ ಆಗಿಬಿಡ್ತಾರೆ. ಪಕ್ಷದ ಅಧ್ಯಕ್ಷ ಆಗಿರಬಹುದು, ಕೇಂದ್ರ ಮಂತ್ರಿ ಆಗಿರಬಹುದು, ಸರ್ಕಾರದ ಕಾರ್ಯದರ್ಶಿ ಅಥವಾ ಕ್ಯಾಬಿನೆಟ್ ಸೆಕ್ರೆಟರಿಯೇ ಇರಬಹುದು. ಅದು ದೆಹಲಿಯ ಸ್ಥಳಮಹಾತ್ಮೆ ಅಂದುಕೊಳ್ಳೋಣ. ದೆಹಲಿಯವರು ಅಸಾಧಾರಣ ಜನ ಅಂದುಕೊಳ್ಳುತ್ತಾರೆ ನಮ್ಮವರು. ಪತ್ರಿಕೋದ್ಯಮದಲ್ಲಿ ಅಸಾಧಾರಣ ಕಸಬುದಾರರು ಕರ್ನಾಟಕದಲ್ಲಿದ್ದರು, ಈಗಲೂ ಇದ್ದಾರೆ. ಆದರೆ ಅವರು ರೀಜನಲ್, ಇವನು ಡೆಲ್ಲಿಯಲ್ಲಿರುವವನು ನ್ಯಾಶನಲ್. ರೀಜನಲ್ ಎಡಿಟರ್‌ಗಳು ನಮ್ಮವರು ನ್ಯಾಶನಲ್ ಎಡಿಟರ್ ಜತೆ ಸೆಲ್ಫಿ ತಗೊಂಡು ಟ್ವಿಟರ್ ಮೇಲೆ ಹಾಕ್ಕೊಂಡು ಸಂಭ್ರಮಿಸುತ್ತಾರೆ. ರಾಜಕಾರಣದಲ್ಲೇ ನೋಡೋಣ. ಮಲ್ಲಿಕಾರ್ಜುನ ಖರ್ಗೆ ದೇಶದ ಅತಿ ಹಳೆಯ ರಾಜಕೀಯ ಪಕ್ಷದ ಅಧ್ಯಕ್ಷರಾಗಿರೋದು ನನಗೆ ಬಹಳ ಸಂತೋಷದ ವಿಷಯ. 1972ರಿಂದ ಅವರನ್ನು ನೋಡುತ್ತ ಬಂದಿದ್ದೇನೆ. ಶಾಸಕ, ಮಂತ್ರಿ, ಕೇಂದ್ರ ಮಂತ್ರಿ, ಲೋಕಸಭೆ ರಾಜ್ಯಸಭೆ ಎಲ್ಲವನ್ನೂ ಕಂಡವರು. ಅವರಷ್ಟು ರಾಜಕೀಯ ಅನುಭವ ದೆಹಲಿ ಸುತ್ತಮುತ್ತ ಆಪರೇಟ್ ಮಾಡೋರಿಗಿಂತ ಅದೆಷ್ಟೋ ನೂರು ಪಾಲು ಅನುಭವಸ್ಥರು. ಸಾರ್ವಜನಿಕ ಬದುಕಿನಲ್ಲಿ ಅವರ ಸ್ಥಾನಮಾನ ದೊಡ್ಡದು. ಖರ್ಗೆ ಅವರು ಈಗ ಸಾಧಿಸಿರುವುದನ್ನು (ಎಐಸಿಸಿ ಅಧ್ಯಕ್ಷತೆ) ದೆಹಲಿ ಸುತ್ತಮುತ್ತಲವರು 20-30 ವರ್ಷಗಳಷ್ಟು ಹಿಂದೆಯೇ ಸಾಧಿಸಿರುತ್ತಿದ್ದರು. ವ್ಯತ್ಯಾಸ ಏನೆಂದರೆ ಸಾಮರ್ಥ್ಯ ಅನುಭವ ಅರ್ಹತೆ ಇರುವವರು ರಾಷ್ಟ್ರಮಟ್ಟದಲ್ಲಿ ತುತ್ತತುದಿಗೆ ಏರಲು ಬಹಳ ಕಾಲ ಹಿಡಿಯುತ್ತದೆ. ನಮ್ಮ ಮನೋಭಾವವೇ ಅದರ ಮೂಲಕಾರಣ. ಶಾಲಾ ಕಾಲೇಜಲ್ಲಿ ಒಂದು ಕಾಲಕ್ಕೆ ಎನ್.ಸಿ.ಸಿ. ಕಡ್ಡಾಯ ಇರ್ತಿತ್ತು. ಅದೇ ರೀತಿ ನಮ್ಮ ಕನ್ನಡ ಪತ್ರಿಕೋದ್ಯಮದ ಹುಡುಗರು ಒಂದು ವರ್ಷ ಡೆಲ್ಲಿ ಸರ್ವೀಸ್ ಮಾಡಬೇಕು. ಈ ಅನುಭವ ನಮ್ಮ ಹುಡುಗರನ್ನು ಗಟ್ಟಿ ಮಾಡುತ್ತೆ. ಇಲ್ಲಿ ನುರಿತರೆ ಏಗಿದರೆ ಎಲ್ಲಿ ಬೇಕಾದರೂ ಬದುಕಬಹುದು. ಸಾರ ಮಾತ್ರವಲ್ಲ ರೂಪವೂ ಮುಖ್ಯ. ಬೆಂಗಳೂರಲ್ಲಿನ ಥರಾ ಶರ್ಟು ಪ್ಯಾಂಟು ಚಪ್ಪಲಿ ಹಾಕ್ಕೊಂಡು ಡೆಲ್ಲೀಲಿ ಓಡಾಡಿದರೆ ನಡೆಯಲ್ಲ. ಡೆಲ್ಲಿಯ ಆಫೀಸಿನ ಪ್ಯೂನ್ ಕೂಡ ಚಪ್ಪಲಿ ಹಾಕ್ಕೊಳಲ್ಲ. 1980ರ ದಶಕದಲ್ಲಿ ಎನ್.ಟಿ.ಆರ್. ಅವರ ತೆಲುಗುದೇಶಂ, ರಾಮಕೃಷ್ಣ ಹೆಗಡೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದವು. ನಮ್ಮವರೇ ದೇವೇಗೌಡರು ಪ್ರಧಾನಮಂತ್ರಿ ಆದರು. ಖರ್ಗೆಯವರು ಎಐಸಿಸಿ ಅಧ್ಯಕ್ಷರಾದರು. ಡಿ.ಎಂ.ಕೆ., ಅಣ್ಣಾ ಡಿ.ಎಂ.ಕೆ. ಅಸ್ಮಿತೆ ಇದ್ದೇ ಇದೆ. ಇಷ್ಟೆಲ್ಲ ಆದರೂ ದೆಹಲಿಯವರು ಕನ್ನಡಿಗರನ್ನು ಮದರಾಸಿ ಎಂದೇ ನೋಡ್ತಾರೆ. ಅದೇ ವಾಸ್ತವ. ಈ ಅಚ್ಚಿನ ಎರಕವನ್ನು ಮುರಿಯಲು ಇನ್ನೂ ಹಲವಾರು ದಶಕಗಳೇ ಹಿಡಿಯಬಹುದು.
ಇದನ್ನೂ ಓದಿರಿ: ಕೋಳಿ ಫಾರಂನಿಂದ ಕೊಯಮತ್ತೂರು, ನಂದಿ ಬೆಟ್ಟದವರೆಗೆ ‘ಜಗ್ಗಿ’ ಬೆಳೆದಿದ್ದು ಹೀಗೆ..
ನಾವು ಕನ್ನಡಿಗರು, ನಮ್ಮ ಮಾತೃಭಾಷೆ ಕನ್ನಡವೇ ಸರಿ. ಆದರೆ ಈ ದೇಶದ ರಾಜಕೀಯದಲ್ಲಿ ನಾವು ಬೆಳೀಬೇಕಾದರೆ ಸಂಸತ್ತಿನಲ್ಲಿ ಹಿಂದೀ ಮತ್ತು ಇಂಗ್ಲಿಷಲ್ಲಿ ಮಾತಾಡೋ ಶಕ್ತಿ ನಮಗೆ ಇರಲೇಬೇಕು. ಇಲ್ಲದಿದ್ದರೆ ಮುಂದುವರೆಯಲು ಸಾಧ್ಯವಿಲ್ಲ. ಇದು ಕಠೋರ ವಾಸ್ತವ. ಚಿದಂಬರಂ ತಮಿಳುನಾಡಿನವರು. ಅವರು ಇಂಗ್ಲಿಷಲ್ಲಿ ಮಾತಾಡಿ ದೇಶದ ದೊಡ್ಡ ರಾಜಕಾರಣಿ ಎನಿಸಿಕೊಂಡಿದ್ದಾರೆ. ನಮ್ಮ ಖರ್ಗೆಯವರು ಹಿಂದುಸ್ತಾನಿ ಚೆನ್ನಾಗಿ ಮಾತಾಡ್ತಾರೆ. ಅದು ತುಂಬ ಮುಖ್ಯ. ಲೋಕಸಭೆ-ರಾಜ್ಯಸಭೆಯಲ್ಲಿ 60 ಕೋಟಿ ಹಿಂದಿ ಭಾಷಿಕರ ಪ್ರತಿನಿಧಿಗಳು ಇರ್ತಾರೆ. ಸದನದಲ್ಲಿ ಅವರಿಗೆ ತಿಳಿಯುವಂತೆ ಮಾತಾಡೋದು ಮುಖ್ಯ. ಕರ್ನಾಟಕದಿಂದ ಲೋಕಸಭೆ ರಾಜ್ಯಸಭೆಗೆ ಬರುವವರು ಹಿಂದಿ ಇಲ್ಲವೇ ಇಂಗ್ಲಿಷ್ ಮಾತಾಡಲು ತಿಳಿದಿರಲೇಬೇಕು. ಹಿಂದೀಲಿ ಸಲೀಸಾಗಿ ಮಾತಾಡಿದರೆ ಯಾವ ರಾಷ್ಟ್ರೀಯ ಪಕ್ಷದ ಅಧ್ಯಕ್ಷರೂ ನಿರ್ಲಕ್ಷ್ಯ ಮಾಡಲು ಸಾಧ್ಯ?
ಆದರೆ ಹೀಗೆ ಮಾತಾಡಬಲ್ಲವರು ಕರ್ನಾಟಕದಿಂದ ಒಬ್ಬರೋ ಇಬ್ಬರೋ ಆಕಸ್ಮಿಕವಾಗಿ ಆಯ್ಕೆಯಾಗಿ ಬರ್ತಾರೆ. ನಾವು ಅರ್ಹತೆಗಳೆಂದು ಭಾವಿಸುವ ಅಂಶಗಳು ಪಕ್ಷದ ಟಿಕೆಟ್ ಪಡೆಯಲು ಅನರ್ಹತೆಗಳು! ಗೆಲ್ಲುವುದೊಂದೇ ಮಾನದಂಡ. ನಮ್ಮ ಸಂಸದರ ಗುಣಮಟ್ಟ ಕುಸಿಯುತ್ತಲೇ ನಡೆದಿದೆ. ಪಾರ್ಲಿಮೆಂಟಿನಲ್ಲಿ ಅತ್ಯುತ್ತಮ ಮತ್ತು ಬಹುದೊಡ್ಡ ಗ್ರಂಥಾಲಯ ಇದೆ. ಅಲ್ಲಿಗೆ ಹೋಗಿ ಅಧ್ಯಯನದಲ್ಲಿ ಕೊಂಚವಾದರೂ ಸಮಯ ಕಳೆಯುವ ಸಂಸದರ ಸಂಖ್ಯೆ ಬಹಳ ಕಡಿಮೆ. ಈ ಮುನ್ನ 790ರಲ್ಲಿ 20-30 ಸಂಸದರಾದರೂ ಗ್ರಂಥಾಲಯವನ್ನು ಉಪಯೋಗಿಸ್ತಿದ್ದರು. ಈಗ ಈ ಸಂಖ್ಯೆ ನಾಲ್ಕೈದಕ್ಕೆ ಕುಸಿದಿದೆ. ಭಣ ಭಣ ಅಂತಿರ್ತದೆ. ಅಲ್ಲಿ ಸಂವಿಧಾನ ರಚನಾ ಸಭೆಯ ಚರ್ಚೆಗಳು, ಇಲ್ಲಿಯವರೆಗಿನ ಲೋಕಸಭೆ- ರಾಜ್ಯಸಭೆಯ ಚರ್ಚೆಗಳು, ಸುಪ್ರೀಮ್ ಕೋರ್ಟ್ ತೀರ್ಪುಗಳು, ಏನು ಬೇಕೋ ಎಲ್ಲ ಇವೆ. ಶಿವರಾಜ ಪಾಟೀಲ್ ಸ್ಪೀಕರ್ ಆಗಿದ್ದಾಗ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅತ್ಯುತ್ತಮ ದರ್ಜೆಯ ಗ್ರಂಥಾಲಯವನ್ನು ರೂಪಿಸಿದರು.
ಕ್ಷೇತ್ರದ ಒತ್ತಡದ ಕಾರಣದಿಂದ ಅಧ್ಯಯನ ಮಾಡಿ ಮಾತಾಡಲು ಲೋಕಸಭಾ ಸದಸ್ಯರಿಗೆ ಕಾಲಾವಕಾಶ ಸಿಗಲ್ಲ. ಆದರೆ ಈ ಒತ್ತಡ ಇಲ್ಲದ ರಾಜ್ಯಸಭಾ ಸದಸ್ಯರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳೋದು ತೀರಾ ವಿರಳ. ರಾಷ್ಟ್ರ ಮಟ್ಟದಲ್ಲಿ ಹೊಳೆಯಬೇಕೆಂದರೆ ಇಂಗ್ಲಿಷ್ ಅಥವಾ ಹಿಂದೀ ಜ್ಞಾನ ತುಂಬಾ ಮುಖ್ಯ. ಇಂಗ್ಲಿಷ್- ಹಿಂದಿ ವಿರೋಧ ಇಟ್ಟುಕೊಂಡರೆ ಕೆಲಸ ಆಗಲ್ಲ. ವಿಶೇಷವಾಗಿ ಉತ್ತರ ಕರ್ನಾಟಕದಿಂದ ಬರುವ ಕರ್ನಾಟಕದ ಸಂಸದರಿಗೆ ಹಿಂದುಸ್ತಾನಿ ಗೊತ್ತಿರುತ್ತದೆ. ಅದನ್ನು ಅವರು ಬಳಸಿಕೊಳ್ಳಬೇಕು’’ ಎನ್ನುತ್ತಾರೆ ಸೂರ್ಯಪ್ರಕಾಶ್.

ರಾಜ್ಯಸಭೆಯ ಸಕ್ರಿಯ ಸದಸ್ಯರಾಗಿ ನಿವೃತ್ತರಾಗಿರುವ ಎಲ್.ಹನುಮಂತಯ್ಯ ಅವರು ‘ಈ ದಿನ.ಕಾಂ’ ಜೊತೆ ಈ ಕುರಿತು ಆಡಿದ ಮಾತುಕತೆ ಹೀಗಿದೆ-
“ದೆಹಲಿ ಸರ್ಕಾರಗಳು ಅರ್ಥಾತ್ ಕೇಂದ್ರ ಸರ್ಕಾರಗಳು ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುತ್ತವೆ. ಅದು ಸಂಸ್ಕೃತಿ, ಸಾಹಿತ್ಯ, ರಾಜಕಾರಣ, ಅಭಿವೃದ್ಧಿ ಏನೇ ಇದ್ದಿರಲಿ. ವಿಶೇಷವಾಗಿ ರಾಜ್ಯಗಳಲ್ಲಿ ಪ್ರತಿಪಕ್ಷಗಳ ಸರ್ಕಾರಗಳು ಇದ್ದರೆ, ಅವುಗಳನ್ನು ಎರಡನೆಯ ದರ್ಜೆಯ ಸರ್ಕಾರಗಳನ್ನಾಗಿ ನೋಡಿಕೊಳ್ಳಲಾಗುತ್ತದೆಯೇ ವಿನಾ ಸಮಾನವಾಗಿ ಯಾವಾಗಲೂ ನಡೆಸಿಕೊಂಡಿರಲ್ಲ. ಒಮ್ಮೊಮ್ಮೆ ಪ್ರಾದೇಶಿಕ ಸರ್ಕಾರಗಳು ಆ ಕೇಂದ್ರ ಸರ್ಕಾರದ ಭಾಗ ಆಗಿದ್ದರೆ (ಉದಾಹರಣೆಗೆ ಮೈತ್ರಿ ಸರ್ಕಾರಗಳು) ಅಂತಹ ಸರ್ಕಾರಗಳಿಗೆ ಚೌಕಾಶಿ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಆದರೆ ಅವರೇನಾದರೂ ರಾಷ್ಟ್ರೀಯ ಪಕ್ಷಗಳಾಗಿದ್ದರೆ ಅವರಿಗೆ ಅಂತಹ ಚೌಕಾಶಿ ಶಕ್ತಿ ಕೂಡ ಇರಲ್ಲ. ಅವು ಆಯಾ ರಾಷ್ಟ್ರೀಯ ಪಕ್ಷಗಳ ಹೈಕಮಾಂಡಿನ ಮರ್ಜಿಯಲ್ಲಿ ಇರಬೇಕಾಗ್ತದೆ. ಹೈಕಮಾಂಡ್ ಹೇಳಿದಂತೆ ಕೇಳುವ ಸರ್ಕಾರಗಳೇ ಇರುವುದನ್ನು ಕೇಂದ್ರ ಸರ್ಕಾರ ಬಯಸುತ್ತದೆ. ಆದ್ದರಿಂದ ಪ್ರಾದೇಶಿಕ ಪಕ್ಷ ಇರಬೇಕು ಎಂಬುದು ಕೆಲವು ದೃಷ್ಟಿಯಿಂದ ಹಿತವಾಗಿ ಕಾಣಬಹುದು. ಆದರೆ ಮತ್ತೆ ಕೆಲವು ದೃಷ್ಟಿಗಳಿಂದ ಅದು ಅನಾಹುತಕಾರಿ ಅಂತ ನನಗೆ ಅನ್ನಿಸ್ತದೆ. ಕೆಲವು ವಿಚಾರಗಳಲ್ಲಿ ಮಾತ್ರ ಪ್ರಾದೇಶಿಕ ಪಕ್ಷಗಳ ಮಾತುಗಳನ್ನು ಕೇಳಲಾಗುತ್ತದೆ. ಅದೂ ಕೇಂದ್ರದಲ್ಲಿ ಸರ್ಕಾರ ರಚಿಸಲು ನಿಮ್ಮ ಬೆಂಬಲ ಬೇಕಿದ್ದಾಗ ಮಾತ್ರ. ಇಲ್ಲದೆ ಹೋದರೆ ನಿಮ್ಮ ನ್ಯಾಯೋಚಿತ ಬೇಡಿಕೆಗಳನ್ನು ಕೂಡ ತಿರಸ್ಕರಿಸುವ ಮನೋಭಾವ ಅವರಲ್ಲಿ ಇರ್ತದೆ. ತೆರಿಗೆ ಹಂಚಿಕೆಯ ಮೊದಲ ಪ್ರಶ್ನೆಯನ್ನೇ ತೆಗೆದುಕೊಳ್ಳೋಣ. ಈಗ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಕಾಲದಲ್ಲಿ ತೆರಿಗೆ ಹಂಚಿಕೆಯ ಅನ್ಯಾಯವನ್ನು ಪ್ರತಿಭಟಿಸ್ತಾ ಇದ್ದಾರೆ. ಕರ್ನಾಟಕದ ಜನರಿಗೆ ಈಗ ಅನ್ನಿಸಲು ಶುರು ಆಗಿರೋದೇನಂದ್ರೆ ಯಾವುದೋ ರಾಜ್ಯದ ಅಭಿವೃದ್ಧಿಗೆ ನಾವ್ಯಾಕೆ ಅಷ್ಟೊಂದು ತೆರಿಗೆ ಕೊಡಬೇಕು ಅಂತ. ಎಲ್ಲದರ ಮೇಲೆ ತೆರಿಗೆ ಹೇರಿ, ಬೇರೆ ರಾಜ್ಯಗಳ ಅಭಿವೃದ್ಧಿಗೆ ಬಳಸುವುದೇ ಆದರೆ, ನಮಗೆ ಸಮಪಾಲು ಅಲ್ಲದಿದ್ದರೂ ನ್ಯಾಯಯುತ ಪಾಲು ನಮಗೆ ಸಿಗುವುದೇ ಆದರೆ, ನಾವು ತೆರುವ ತೆರಿಗೆ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ನಾವು ಪಾಲ್ಗೊಳ್ಳುತ್ತಿದ್ದೇವೆ ಎಂಬ ಅಭಿಪ್ರಾಯ ಬರುತ್ತದೆ. ನಮ್ಮದೇ ತೆರಿಗೆ ಹಣವನ್ನು ನಾವು ಉತ್ತರ ಕರ್ನಾಟಕದ ಬೆಳವಣಿಗೆಗೆ ಬಳಸದೆ ಉತ್ತರ ಭಾರತದ ರಾಜ್ಯಕ್ಕೆ ಬಳಸುವುದು ಉಚಿತವೂ ಅಲ್ಲ, ನ್ಯಾಯಸಮ್ಮತವೂ ಅಲ್ಲ.
ಪ್ರಾದೇಶಿಕ ಪಕ್ಷಗಳಿಗೆ ಚೌಕಾಶಿ ಶಕ್ತಿ ಬರೋದು ಅವರು ಸರ್ಕಾರದ ಪಾಲುದಾರರಾಗಿದ್ದಾಗ ಮಾತ್ರ. ಇಲ್ಲದೆ ಹೋದರೆ ಅವರನ್ನು ಎಲ್ಲ ದೃಷ್ಟಿಯಿಂದಲೂ ನಿಕೃಷ್ಟವಾಗಿ ಕಾಣುವ ಸ್ಥಿತಿ ಇದೆ. ವಿರೋಧ ಪಕ್ಷಗಳ ರಾಜ್ಯ ಸರ್ಕಾರಗಳನ್ನು ಇನ್ನೂ ಕೆಟ್ಟದಾಗಿ ನೋಡುವ ಬೆಳವಣಿಗೆ ಆಗಿದೆ. ಆದ್ದರಿಂದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಪುನಾರಚನೆ ಮಾಡಿ ಎಲ್ಲ ರಾಜ್ಯಗಳ ಸಮಭಾಗಿತ್ವ ಬರುವಂತೆ ನೋಡಿಕೊಳ್ಳಬೇಕು. ಹಣಕಾಸು ಆಯೋಗ ಶಿಫಾರಸು ಮಾಡಿದಷ್ಟು ಹಣವನ್ನೂ ನೀಡದೆ ಇರುವುದು ಕಾನೂನು ಪ್ರಕಾರದ ಅಪರಾಧ ಆಗಬೇಕಿದೆ. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯಲ್ಲಿ ರಾಜಕಾರಣವನ್ನು ಬಿಟ್ಟು ಯಾವ್ಯಾವ ವಿಷಯಗಳನ್ನು ಸಮನ್ವಯಕ್ಕೆ ತರಬಹುದೋ ಅದನ್ನು ಚರ್ಚಿಸಿ ಜಾರಿಗೊಳಿಸಬೇಕು. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ನೇಮಕ ಮಾಡುವ ರಾಜ್ಯಪಾಲರಿಗೆ ಆಯಾ ಸರ್ಕಾರಗಳಲ್ಲಿ ಮೂಗು ತೂರಿಸಿ ಪೀಡಿಸಿ ಎಂದು ಹೇಳಿಕಳಿಸುವುದು ಜನತಂತ್ರದ ಬೆಳವಣಿಗೆಗೆ ಮಾರಕ. ರಾಜ್ಯಪಾಲರ ಹುದ್ದೆಯೇ ಅಲಂಕಾರಿಕ. ಸಂವಿಧಾನದ ರಕ್ಷಣೆಯ ಆಶಯ ಇಟ್ಟುಕೊಂಡಿರುವಂತಹುದು. ರಾಜ್ಯಪಾಲರು ಎಲ್ಲ ಕೆಲಸಗಳಿಗೆ ಅಡ್ಡಿ ಮಾಡಿ ರಾಜ್ಯ ಸರ್ಕಾರ ಪಾಸು ಮಾಡಿದ ವಿಧೇಯಕಗಳಿಗೆ ಅಂಗೀಕಾರ ನೀಡದೆ ತಡೆಹಿಡಿದಿಟ್ಟುಕೊಳ್ಳುವುದು ಪ್ರಜಾಪ್ರಭುತ್ವದ ಬಲು ದೊಡ್ಡ ದುರಂತ. ಅಂತರರಾಜ್ಯ ಮಂಡಲಿಗಳಲ್ಲಿ ಈ ಕುರಿತು ಚರ್ಚೆಯಾಗಬೇಕು.

ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಬೆಳೆಸಿರುವ ಅವಿಭಜಿತ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೋಲಿಸಿದರೆ ರಾಷ್ಟ್ರಿಯ ಪಕ್ಷಗಳನ್ನು ಬೆಂಬಲಿಸಿ ಕಳೆದುಕೊಂಡದ್ದು ಹೆಚ್ಚೋ, ಪಡೆದುಕೊಂಡದ್ದು ಹೆಚ್ಚೋ? ರಾಷ್ಟ್ರ ಮಟ್ಟದಲ್ಲಿ ನಮ್ಮದೇ ಆಡಳಿತ ಇದ್ದಾಗ ನಾವು ಪಡಕೊಂಡದ್ದು ಹೆಚ್ಚು. ಆದರೆ ನಮ್ಮ ವಿರೋಧ ಪಕ್ಷಗಳ ಆಡಳಿತ ಇದ್ದಾಗ ಕಳಕೊಂಡದ್ದು ಹೆಚ್ಚು. ಲೋಕಸಭೆ ರಾಜ್ಯಸಭೆಗೆ ಕರ್ನಾಟಕದಿಂದ ಆರಿಸಿ ಬರುವ ಸದಸ್ಯರಿಗೆ ರಾಜ್ಯದ ಪರವಾಗಿ ದನಿಯೆತ್ತುವ ತ್ರಾಣವೇ ಉಡುಗಿ ಹೋಗಿದೆಯಲ್ಲ?
ಇದನ್ನೂ ಓದಿರಿ: ‘ರೀಲ್ಸ್’ ಸಚಿವ ಅಶ್ವಿನಿ ವೈಷ್ಣವ್ ಕಾಲದಲ್ಲಿ ಪ್ರಪಾತಕ್ಕೆ ಜಾರಿದ ರೇಲ್ವೆ ಇಲಾಖೆ!
ಅಭ್ಯರ್ಥಿಗಳ ಆಯ್ಕೆ ಮೂಲಭೂತ ಕಾರಣ. ಆಯ್ಕೆ ಆದ ಮೇಲೆ ಅವರಿಗೆ ತಯಾರಿ ಇಲ್ಲದಿರುವುದು. ತಮ್ಮ ಮಾತೃಪಕ್ಷಗಳ ಮುಲಾಜಿಗೆ ಕಟ್ಟು ಬೀಳುವುದು. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ಯಾವ ನಡವಳಿಕೆಯನ್ನೂ ನಾನು ರಾಜ್ಯಸಭಾ ಸದಸ್ಯನಾಗಿ ಆಳುವ ಪಕ್ಷದ ಸದಸ್ಯರಲ್ಲಿ ಕಾಣಲಿಲ್ಲ. ನೀರಾವರಿ, ಅಂತಾರಾಜ್ಯ ನದೀ ನೀರಿನ ಹಂಚಿಕೆಯ ಸಮಸ್ಯೆಗಳನ್ನು ಅವರು ಎತ್ತಲೇ ಇಲ್ಲ. ಭದ್ರಾ ಮೇಲ್ದಂಡೆ, ಎತ್ತಿನಹೊಳೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವಂತೆ ಒತ್ತಾಯಿಸುವ ಪ್ರಯತ್ನವನ್ನು ಆಳುವ ಪಕ್ಷದ ಸದಸ್ಯರು ಮಾಡಲಿಲ್ಲ. ನನ್ನಂತಹವರು ಒಂಟಿ ದನಿಯಾಗಿ ಈ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳು ನೆಲ ಜಲ ಕುರಿತು ಬರೆದ ಪತ್ರಗಳಿಗೆ ಉತ್ತರ ಬರೆಯುವ ಕನಿಷ್ಠ ಸೌಜನ್ಯವನ್ನೂ ಕೇಂದ್ರ ಸಚಿವರು ತೋರುತ್ತಿಲ್ಲ. ಮುಖ್ಯಮಂತ್ರಿಗಳು ಖುದ್ದಾಗಿ ಬಂದು ಕೇಂದ್ರ ಸಚಿವರು ಪ್ರಧಾನಿಯನ್ನು ಭೇಟಿ ಮಾಡಿ ಮಂಡಿಸಿದ ಬೇಡಿಕೆಗಳನ್ನು ಯಾವ ಕಾರಣಕ್ಕಾಗಿ ಈಡೇರಿಸಲು ಬರುವುದಿಲ್ಲ ಎಂದು ವಿವರಿಸುವ ಗೋಜಿಗೇ ಹೋಗುವುದಿಲ್ಲ. ಈ ಉತ್ತರದಾಯಿತ್ವ ನಿಗದಿ ಆಗಲೇಬೇಕು. ನಮ್ಮ ಎಲ್ಲ ಸಂಸದರನ್ನೂ ಇದಕ್ಕೆ ಹೊಣೆಯಾಗಿಸಬೇಕು. ಮಹದಾಯಿ ಯೋಜನೆ ಕುರಿತು ಸಣ್ಣ ಪ್ರಯತ್ನವನ್ನೂ ಕೇಂದ್ರ ಮಾಡಿಲ್ಲ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ವಿರೋಧಗಳನ್ನು ಆಳುವ ಪಕ್ಷ ಶತ್ರುಗಳಂತೆ ನೋಡ್ತದೆ. ಅವರನ್ನು ಶತ್ರುಗಳಂತೆ ನಡೆಸಿಕೊಂಡು ಸದನಗಳಿಂದ ಹೊರಹಾಕಲೂ ಹಿಂಜರಿಯುವುದಿಲ್ಲ. ಇದು ಜನತಂತ್ರ ವಿರೋಧಿ ಮಾತ್ರವಲ್ಲ, ಕ್ರೂರ ನಡೆ. ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರ ಹಾಕಿ ನಮ್ಮನ್ನು ಅನಾದರಿಸಿರುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.’’
ಹೆಚ್ಚೂ ಕಡಿಮೆ ಮೂರು ದಶಕಗಳ ಕಾಲ ದೆಹಲಿ ರಾಜಕಾರಣವನ್ನು ನೋಡಿದ ರಾಜ್ಯಸಭೆಯ ಮಾಜಿ ಸದಸ್ಯ ಎಚ್. ಹನುಮಂತಪ್ಪ ಅವರು ‘ಸಂಸತ್ತಿಗೆ ಒಳ್ಳೆಯ ಲಾಯರ್ ಗಳನ್ನು ಆಯ್ಕೆ ಮಾಡಿ ಕಳಿಸಬೇಕುʼ ಎನ್ನುತ್ತಾರೆ. ‘ಈಗ ಗೆಲ್ಲೋದೊಂದೇ ಅರ್ಹತೆಯಾಗಿಬಿಟ್ಟಿದೆ. ಗೆಲ್ಲಲು ಹಣ ಮತ್ತು ಜಾತಿ ಬೆಂಬಲ ಬೇಕು. ಹೀಗಿದ್ದಾಗ ದನಿ ಎತ್ತುವ ಸಾಮರ್ಥ್ಯ ಇರುವವರ ಆಯ್ಕೆ ಹೇಗೆ ಸಾಧ್ಯʼ ಎಂಬುದು ಅವರ ಪ್ರಶ್ನೆ.
ಅಂತಿಮವಾಗಿ ಇವರೆಲ್ಲರ ಮಾತಿನ ತಾತ್ಪರ್ಯ – ದೆಹಲಿಯನ್ನು ಕನ್ನಡಿಗರು ಕಾಣುತ್ತಿರುವ ರೀತಿ ಬದಲಾಗಬೇಕಿದೆ. ಆಗ ದೆಹಲಿಯು ಕರ್ನಾಟಕವನ್ನು ಕಾಣುವ ರೀತಿಯೂ ಬದಲಾಗುತ್ತದೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು




