ನೆರೆಹೊರೆ ರಾಜ್ಯಗಳೊಂದಿಗೆ ಕರ್ನಾಟಕದ ಗಡಿ ಸಂಬಂಧ; ವಿವಾದಗಳ ಮೂಲ ಯಾವುದು? (ಭಾಗ-1)

Date:

ಭಾರತವು ಇಂಗ್ಲಿಷರ ಆಳ್ವಿಕೆಯಲ್ಲಿ ಇದ್ದಾಗ ಕನ್ನಡ ಮಾತನಾಡುವ ಪ್ರದೇಶಗಳು ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ, ಹೈದರಾಬಾದ್ ನಿಜಾಂನ ಆಡಳಿತ ಮತ್ತು ಮೈಸೂರು ರಾಜ್ಯ ಹಾಗೂ ಕೊಡಗು ಸೇರಿ ವಿವಿಧ ಆಡಳಿತ ವ್ಯವಸ್ಥೆಯಲ್ಲಿ ಹರಿದು ಹಂಚಿಹೋಗಿದ್ದವು. ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಸ್ವಾತಂತ್ರ್ಯ ಹೋರಾಟ ಬಿರುಸುಗೊಂಡಿತ್ತು. ಇದೇ ಅವಧಿಯಲ್ಲಿ ಕನ್ನಡ ಭಾಷೆ ಮಾತನಾಡುವ ಜನರನ್ನು ಒಗ್ಗೂಡಿಸಿ ಒಂದು ರಾಜ್ಯ ರೂಪಿಸುವ ಕರ್ನಾಟಕ ಏಕೀಕರಣ ಚಳವಳಿ ಆರಂಭವಾಗಿತ್ತು.

ಕರ್ನಾಟಕ ಏಕೀಕರಣ ಚಳವಳಿಯ ಮುಖ್ಯ ಉದ್ದೇಶ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಗುರುತಿನ ರಕ್ಷಣೆ ಮಾಡುವುದಾಗಿತ್ತು. ಕನ್ನಡ ಮಾತನಾಡುವ ಪ್ರದೇಶಗಳು ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿದ್ದರಿಂದ ಕನ್ನಡ ಭಾಷೆಯ ಅಭಿವೃದ್ಧಿ ಮತ್ತು ಕನ್ನಡ ಮಾತನಾಡುವ ಜನರ ಸಾಮಾಜಿಕ-ಆರ್ಥಿಕ ಪ್ರಗತಿಗೆ ಇವು ಅಡ್ಡಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣ ಚಳವಳಿಯು ಕನ್ನಡ ಜನರ ಸಾಂಸ್ಕೃತಿಕ ಮತ್ತು ಭಾಷಾತ್ಮಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಅವಶ್ಯಕ ಎಂದು ಕಂಡುಬಂದಿತು. ಇದರಿಂದಾಗಿ ಕನ್ನಡಪರ ಚಿಂತಕರು ಈ ಕರ್ನಾಟಕ ಏಕೀಕರಣ ಚಳವಳಿಯನ್ನು ಹುಟ್ಟು ಹಾಕಿದರು. ಸ್ವಾತಂತ್ರ್ಯಾ ನಂತರ ರಾಜ್ಯ ಪುನರ್ ವಿಂಗಡಣಾ ಆಯೋಗದ (ಎಸ್‌ಆರ್‌ಸಿ) ಶಿಫಾರಸುಗಳ ಆಧಾರದ ಮೇಲೆ 1956ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು ಸೇರಿಸಿ, ಮೈಸೂರು ರಾಜ್ಯ ರಚನೆಯಾಯಿತು. ಇದರಿಂದ ಕರ್ನಾಟಕ ಏಕೀಕರಣ ಚಳವಳಿಯ ಆಶಯ ಈಡೇರಿದಂತಾಗಿತ್ತು. ಅದರ ನಂತರ ಡಿ.ದೇವರಾಜು ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 1973ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಪುನರ್ ನಾಮಕರಣ ಮಾಡಲಾಯಿತು.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಲಿಂಗ ಸಮಾನತೆ; 50 ವರ್ಷಗಳಲ್ಲಿ ಸಾಧಿಸಿದ್ದೇನು? ಸವಾಲುಗಳೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕರ್ನಾಟಕ ರಾಜ್ಯವು ಉತ್ತರದಲ್ಲಿ ಮಹಾರಾಷ್ಟ್ರ, ಪಶ್ಚಿಮಕ್ಕೆ ಗೋವಾ, ನೈಋತ್ಯಕ್ಕೆ ಕೇರಳ, ಆಗ್ನೇಯಕ್ಕೆ ತಮಿಳುನಾಡು ಹಾಗೂ ಪೂರ್ವಕ್ಕೆ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಕರ್ನಾಟಕ ತನ್ನ ನೆರೆಹೊರೆ ರಾಜ್ಯಗಳೊಂದಿಗೆ ಕೈಗಾರಿಕೆ, ವಾಣಿಜ್ಯ ವಹಿವಾಟು, ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಮತ್ತು ಸೌಹಾರ್ದ ಸಂಬಂಧಗಳನ್ನು ಹೊಂದಿದೆ. ಆದರೆ ಗಡಿ ವಿವಾದಗಳು, ನದಿ ನೀರಿನ ಹಂಚಿಕೆ ವಿವಾದಗಳು, ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ವಿವಾದಗಳಿಂದಾಗಿ ಆಗಾಗ ನೆರೆಹೊರೆ ರಾಜ್ಯಗಳ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುವುದೂ ಇದೆ. ಕೆಲವೊಮ್ಮೆ ನೆರೆಹೊರೆ ರಾಜ್ಯಗಳು ಎಲ್ಲೆ ಮೀರಿ ವರ್ತಿಸಿದಾಗಲೂ ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಸಂದರ್ಭಗಳಲ್ಲಿ ಕರ್ನಾಟಕದ ಜನತೆ ಸಂಯಮ ಮೆರೆದಿದ್ದಾರೆ. ನೆರೆಹೊರೆಯ ರಾಜ್ಯಗಳ ಜತೆಗೆ ಸಹಕಾರ, ಸಮನ್ವಯತೆಯಿಂದ ನಡೆದುಕೊಂಡಿದ್ದಾರೆ. ಆದರೂ ಈಗಲೂ ಗಡಿ, ಭಾಷೆ ಮತ್ತು ಜಲ ವಿವಾದಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ.

gadi state

ಗಡಿ ವಿವಾದಗಳು:

ಬಹುಮುಖ್ಯವಾಗಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಆಗಾಗ ಭುಗಿಲೇಳುವುದಿದೆ. ಕೇರಳದ ಕಾಸರಗೋಡು, ಆಂಧ್ರಪ್ರದೇಶದೊಂದಿಗೆ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಕೆಲವು ಹಳ್ಳಿಗಳ ವಿಚಾರದಲ್ಲಿ ಕೆಲವೊಮ್ಮೆ ಗಡಿ ವಿವಾದಗಳು ಹುಟ್ಟಿಕೊಳ್ಳುತ್ತವೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹೊರತುಪಡಿಸಿದರೆ ಉಳಿದ ಗಡಿ ವಿವಾದಗಳು ಅಷ್ಟೇನೂ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗಳನ್ನು ಹುಟ್ಟು ಹಾಕಿಲ್ಲ. ಆದರೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಆಗಾಗ ಎರಡೂ ರಾಜ್ಯಗಳ ಮಧ್ಯೆ ಉದ್ವಿಗ್ನ ವಾತಾವರಣ ಉಂಟು ಮಾಡುತ್ತಿದ್ದು ಸದ್ಯ ಈ ಗಡಿ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಗಡಿ ವಿವಾದಕ್ಕೆ ಬಹು ದೊಡ್ಡ ಇತಿಹಾಸವೇ ಇದೆ.

ಭಾಷಾವಾರು ಪ್ರಾಂತ ರಚನೆ:

ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತಾಗ 500ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಈ ಎಲ್ಲ ಸಂಸ್ಥಾನಗಳು ವಿಲೀನಗೊಂಡು ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಜಾರಿಗೆ ಬಂತು. ಆಡಳಿತಾತ್ಮಕ ದೃಷ್ಟಿಯಿಂದ ದೇಶದ ವಿವಿಧ ಭಾಗಗಳನ್ನು ವಿಂಗಡಿಸಿ ಪ್ರತ್ಯೇಕ ರಾಜ್ಯಗಳ ಸ್ಥಾಪನೆ ಮಾಡುವ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಭಾಷಾವಾರು ಪ್ರಾಂತ್ಯ ರಚನೆಯ ಕೂಗು ಕೇಳಿ ಬಂದಿತ್ತು. ಆಗ ಸಾಕಷ್ಟು ಚರ್ಚೆಗಳು ನಡೆದು ಭಾಷಾವಾರು ಪ್ರಾಂತ್ಯ ರಚನೆ ಮಾಡುವುದರಿಂದ ಹೆಚ್ಚು ಅನುಕೂಲ ಎಂಬ ತೀರ್ಮಾನಕ್ಕೆ ಬಂದ ಅಂದಿನ ನಮ್ಮ ರಾಜಕೀಯ ಮುಂದಾಳುಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು 1948ರ ಜೂನ್‌ನಲ್ಲಿ ಎಸ್.ಕೆ. ಧಾರ್ ನೇತೃತ್ವದ ಆಯೋಗವೊಂದನ್ನು ನೇಮಕ ಮಾಡಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಪ್ರಾಂತಗಳ ರಚನೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಈ ಕುರಿತು ಏಳು ತಿಂಗಳ ಕಾಲ ಅಧ್ಯಯನ ನಡೆಸಿದ ಎಸ್.ಕೆ.ಧಾರ್ ನೇತೃತ್ವದ ಆಯೋಗ ಅದೇ ವರ್ಷ (1948) ಡಿಸೆಂಬರ್‌ನಲ್ಲಿ ವರದಿ ಸಲ್ಲಿಸಿತು.

ಇದನ್ನೂ ಓದಿರಿ: ‘ಟ್ರಾನ್ಸ್‌ ಸಮುದಾಯ’; ಗ್ರಹಿಕೆಯ ತೊಡಕುಗಳೇನು? (ಭಾಗ-1)

ಜೈಪುರದಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಕಮಿಟಿ ಎಸ್.ಕೆ. ಧಾರ್ ನೇತೃತ್ವದ ಆಯೋಗ ಸಲ್ಲಿಸಿದ್ದ ವರದಿಯನ್ನು ಪರಾಮರ್ಶೆ ನಡೆಸಲು ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ.ಪಟ್ಟಾಭಿ ಸೀತಾರಾಮಯ್ಯ ಮತ್ತು ಪಂಡಿತ ಜವಾಹರಲಾಲ್ ನೆಹರು ಅವರನ್ನೊಳಗೊಂಡ ಸಮಿತಿಯನ್ನು ರಚಿಸಿತು. ‘ಕಾಂಗ್ರೆಸ್ ಭಾಷಾವಾರು ಪ್ರಾಂತ ರಚನೆಗೆ ಬದ್ಧವಾಗಿದ್ದರೂ ತಕ್ಷಣ ವಿಂಗಡಣೆಯ ಕಾರ್ಯವನ್ನು ಈಗಲೇ ಕೈಕೊಳ್ಳುವುದು ಸಾಧುವಲ್ಲ. ದೇಶದ ಆಡಳಿತ, ಆರ್ಥಿಕ ಮತ್ತು ಹಣಕಾಸು ಸ್ಥಿತಿಗತಿಗಳು ಸುಧಾರಿಸಿದ ಮೇಲೆ ಹಂತ ಹಂತವಾಗಿ ಪ್ರಾಂತ ವಿಂಗಡಣೆ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಉಚಿತ. ಭಾಷಾವಾರು ಪ್ರಾಂತ ರಚನೆಯನ್ನು ಆರಂಭಿಸುವಾಗ ಮೊದಲು ಆಂಧ್ರಪ್ರದೇಶ ರಾಜ್ಯ ಸ್ಥಾಪಿಸಬೇಕು. ಅದರ ಸಾಧಕ ಬಾಧಕಗಳನ್ನು ಅವಲೋಕಿಸಿದ ನಂತರ ಈ ಅನುಭವದ ಆಧಾರದ ಮೇಲೆ ಉಳಿದ ಪ್ರಾಂತಗಳ ವಿಂಗಡಣೆಯನ್ನು ಕೈಗೊಳ್ಳಬೇಕು’ ಎಂದು ಈ ಮೂವರು ನೇತೃತ್ವದ ಸಮಿತಿ ಶಿಫಾರಸು ಮಾಡಿತು. ಈ ವರದಿಯನ್ನು 1949 ಏಪ್ರಿಲ್ 1ರಂದು ಕಾಂಗ್ರೆಸ್ ಕಮಿಟಿಗೆ ಸಲ್ಲಿಸಿತು. ಇದರ ಪರಿಣಾಮವಾಗಿ ಭಾಷಾವಾರು ಪ್ರಾಂತ ವಿಂಗಡಣೆ ಕಾರ್ಯಕ್ಕೆ ಚಾಲನೆ ದೊರೆಯಲಿಲ್ಲ. ಮುಂದೆ ದೇಶದ ಹಲವಾರು ಕಡೆಗಳಲ್ಲಿ ಭಾಷಾವಾರು ಪ್ರಾಂತ ವಿಂಗಡಣೆಯ ಒತ್ತಾಯಗಳು ಬರಲಾರಂಭಿಸಿದವು. ಈ ಒತ್ತಡ ಹೆಚ್ಚಿದಾಗ ಲೋಕಸಭೆಯಲ್ಲಿ ಆಗಸ್ಟ್ 10, 1953ರಲ್ಲಿ ಮಸೂದೆಯನ್ನು ಮಂಡಿಸಲಾಯಿತು. ಈ ಮಸೂದೆ ಅಂಗೀಕೃತಗೊಂಡು 1953 ಅಕ್ಟೋಬರ್ 1ರಂದು ಭಾಷಾವಾರು ಪ್ರಾಂತ ರಚನೆಯ ತತ್ವದ ಆಧಾರದ ಮೇಲೆಯೇ ಮೊಟ್ಟ ಮೊದಲಿಗೆ ಆಂಧ್ರಪ್ರದೇಶ ರಾಜ್ಯ ಅಸ್ತಿತ್ವಕ್ಕೆ ಬಂದಿತು.

ರಾಜ್ಯಗಳ ಪುನರ್ ವಿಂಗಡಣೆ:

ಇದಾದ ನಂತರ ರಾಜ್ಯಗಳ ಪುನರ್ ವಿಂಗಡಣೆಯನ್ನು ಭಾಷಾವಾರು ಪ್ರಾಂತ ರಚನೆಯ ತತ್ವದ ಆಧಾರದ ಮೇಲೆ ಮಾಡುವುದರ ಸಾಧಕ ಬಾಧಕಗಳ ಕುರಿತು ಅಧ್ಯಯನ ನಡೆಸಲು ಆಯೋಗ ರಚಿಸುವುದಾಗಿ ಪ್ರಧಾನಮಂತ್ರಿಗಳು 1953 ಡಿಸೆಂಬರ್ 22ರಂದು ಸಂಸತ್ತಿನಲ್ಲಿ ಘೋಷಣೆ ಮಾಡಿದರು. ಈ ಘೋಷಣೆಯ ಹಿನ್ನೆಲೆಯಲ್ಲಿಯೇ 1953ರ ಡಿಸೆಂಬರ್ 29ರಂದು ಕೇಂದ್ರದ ಗೃಹಖಾತೆಯು ಶ್ರೀ ಸಯ್ಯದ್ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ರಾಜ್ಯ ಪುನರ್ ವಿಂಗಡಣಾ ಆಯೋಗ ರಚಿಸಿ ಅಧಿಸೂಚನೆ ಹೊರಡಿಸಿತು. ‘ರಾಜ್ಯ ಪುನರ್ ವಿಂಗಡಣಾ ಆಯೋಗ’ವು ದೇಶದ ವಿವಿಧ ಪ್ರಾಂತಗಳ ಪರಿಸ್ಥಿತಿ, ಸಮಸ್ಯೆಗಳು, ಐತಿಹಾಸಿಕ ಹಿನ್ನೆಲೆ, ಸದ್ಯದ ಸ್ಥಿತಿಗತಿಗಳು ಮತ್ತು ಸಂಬಂಧಪಟ್ಟ ಎಲ್ಲ ಮಹತ್ವದ ಹಾಗೂ ವಾಸ್ತವಿಕ ಸಂಗತಿಗಳ ಕುರಿತು ಆಯೋಗ ಅಧ್ಯಯನ ನಡೆಸುತ್ತದೆ’ ಎಂದು ಗೃಹ ಖಾತೆ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿತು. ರಾಜ್ಯಗಳ ಪುನರ್ ವಿಂಗಡಣೆಗೆ ಕೆಲವು ವಿಸ್ತೃತ ಸ್ವರೂಪದ ಮಾನದಂಡಗಳನ್ನೂ ಕೇಂದ್ರ ಸರ್ಕಾರ ಆಯೋಗಕ್ಕೆ ಸೂಚಿಸಿತು. ‘ಒಂದು ಪ್ರದೇಶದಲ್ಲಿ ವಾಸಿಸುವ ಜನರು ಆಡುವ ಭಾಷೆ, ಸಂಸ್ಕೃತಿ ನಿಸ್ಸಂಶಯವಾಗಿಯೂ ಅತ್ಯಂತ ಮಹತ್ವದ ಸಂಗತಿ. ಆದರೆ ರಾಜ್ಯಗಳ ಪುನರ್ ವಿಂಗಡಣೆಯ ಕಾಲಕ್ಕೆ ದೇಶದ ಭದ್ರತೆ, ಸುರಕ್ಷತೆ ಮತ್ತು ಒಗ್ಗಟ್ಟು ಕೂಡಾ ಗಮನದಲ್ಲಿ ಇಟ್ಟುಕೊಳ್ಳಲೇಬೇಕಾದ ಮಹತ್ವದ ಸಂಗತಿಗಳಾಗಿವೆ. ಅಲ್ಲದೆ ಆರ್ಥಿಕ, ಹಣಕಾಸು ಮತ್ತು ಆಡಳಿತಾತ್ಮಕ ಅನುಕೂಲಗಳು ಕೂಡಾ ಅಷ್ಟೇ ಮಹತ್ವದ ಸಂಗತಿಗಳಾಗಿವೆ’ ಎಂದು ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿತು. ನಾಲ್ಕು ಪ್ರಮುಖ ತತ್ವಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿದ ರಾಜ್ಯ ಪುನರ್ ವಿಂಗಡಣಾ ಆಯೋಗವು ವಿವಿಧ ರಾಜ್ಯಗಳ ಗಡಿಗಳನ್ನು ನಿರ್ಧರಿಸಿತು. ದೇಶದ 27 ಪ್ರಾಂತಗಳ ಬದಲಾಗಿ 16 ರಾಜ್ಯಗಳು ಮತ್ತು ದೆಹಲಿ, ಮಣಿಪುರ ಮತ್ತು ಅಂಡಮಾನ್ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲು ಆಯೋಗ ಶಿಫಾರಸು ಮಾಡಿತು. ಆಯೋಗದ ಈ ವರದಿ 1955 ಅಕ್ಟೋಬರ್ 10ರಂದು ಪ್ರಕಟವಾಯಿತು.

fasal ali
ಸಯ್ಯದ್ ಫಜಲ್ ಅಲಿ

ಆಯೋಗದ ವರದಿಯಲ್ಲಿ ಮುಂಬೈನ ದಕ್ಷಿಣ ಪ್ರದೇಶದ ಬೆಳಗಾವಿ, (ಚಂದಗಡ ತಾಲ್ಲೂಕು ಹೊರತುಪಡಿಸಿ), ವಿಜಯಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಅಂದು ಅಸ್ತಿತ್ವದಲ್ಲಿದ್ದ ಮೈಸೂರು ರಾಜ್ಯದ ವ್ಯಾಪ್ತಿಗೆ ಸೇರಿಸಲು ಶಿಫಾರಸು ಮಾಡಿತ್ತು. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕು, ಬಳ್ಳಾರಿ ತಾಲ್ಲೂಕು, ಹೊಸಪೇಟೆ ತಾಲ್ಲೂಕು, ಮಲ್ಲಾಪುರಂ ಉಪ ತಾಲ್ಲೂಕು ಮತ್ತು ತುಂಗಭದ್ರಾ ಯೋಜನಾ ಪ್ರದೇಶದ ಕೇಂದ್ರ ಕಚೇರಿ ಮತ್ತು ಆಣೆಕಟ್ಟು ಪ್ರದೇಶಗಳನ್ನು ಆಂಧ್ರಪ್ರದೇಶಕ್ಕೆ ಸೇರಿಸಲು ಆಯೋಗ ಶಿಫಾರಸು ಮಾಡಿತು. ಅಂದಿನ ಹೈದ್ರಾಬಾದ್ ಸಂಸ್ಥಾನಕ್ಕೆ ಒಳಪಟ್ಟಿದ್ದ ಗುಲ್ಬರ್ಗ, ರಾಯಚೂರು ಜಿಲ್ಲೆಗಳು ಮತ್ತು ಕಾಸರಗೋಡು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್‌ನ ಕೊಯಿಮತ್ತೂರು ಜಿಲ್ಲೆಗೆ, ಕೊಳ್ಳೇಗಾಲ ತಾಲ್ಲೂಕು ಹಾಗೂ ಕೊಡಗು ಜಿಲ್ಲೆಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಲೂ ಆಯೋಗ ನಿರ್ಣಯಿಸಿತು.

‘ಕನ್ನಡ ಭಾಷಿಕ ಜನರನ್ನೊಳಗೊಂಡ ಬಹುತೇಕ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ ರಚಿಸಲಾಗಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಕನ್ನಡ ಭಾಷಿಕರು ಅಧಿಕ ಸಂಖ್ಯೆಯಲ್ಲಿದ್ದರೂ ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಲು ಸಾಧ್ಯವಾಗಿಲ್ಲದಿರಬಹುದು. ಇದಕ್ಕೆ ಕಾರಣ ಭಾಷೆ, ಸಂಸ್ಕೃತಿಗಿಂತ ಇನ್ನೂ ಪ್ರಮುಖವಾಗಿರುವ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂಬ ಸ್ಪಷ್ಟನೆಯನ್ನೂ ಆಯೋಗ ನೀಡಿತು. ರಾಜ್ಯ ಪುನರ್ ವಿಂಗಡಣಾ ಆಯೋಗದ ಶಿಫಾರಸುಗಳ ಆಧಾರದ ಮೇಲೆ ರೂಪಿತವಾದ ರಾಜ್ಯ ಪುನರ್ ವಿಂಗಡಣಾ ಕಾಯ್ದೆ-1956 ಅದೇ ವರ್ಷ ಸಂಸತ್ತಿನಲ್ಲಿ ಕೆಲವು ತಿದ್ದುಪಡಿಗಳೊಂದಿಗೆ ಅಂಗೀಕಾರವಾಯಿತು. ಈ ಕಾಯ್ದೆ ಅಂಗೀಕಾರವಾಗುವ ಸಂದರ್ಭದಲ್ಲಿ ರಾಜ್ಯ ಪುನರ್ ವಿಂಗಡಣಾ ಆಯೋಗ ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲು ಶಿಫಾರಸು ಮಾಡಿದ್ದ ಸಿರಗುಪ್ಪ ತಾಲ್ಲೂಕು, ಬಳ್ಳಾರಿ ತಾಲ್ಲೂಕು, ಹೊಸಪೇಟೆ ತಾಲ್ಲೂಕು, ಮಲ್ಲಾಪುರಂ ಉಪ ತಾಲ್ಲೂಕು ಮತ್ತು ತುಂಗಭದ್ರಾ ಯೋಜನಾ ಪ್ರದೇಶದ ಕೇಂದ್ರ ಕಚೇರಿ ಮತ್ತು ಆಣೆಕಟ್ಟು ಪ್ರದೇಶಗಳನ್ನು ಕರ್ನಾಟಕಕ್ಕೆ ನೀಡಲು ತಂದ ತಿದ್ದುಪಡಿ ಕೂಡಾ ಅಂಗೀಕಾರವಾಯಿತು. ಹೀಗಾಗಿ ಇವತ್ತು ಈ ಪ್ರದೇಶಗಳು ಕರ್ನಾಟಕದಲ್ಲಿವೆ. ಆದರೆ ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಧ್ಯೆ ಈ ಗಡಿ ಪ್ರದೇಶಗಳ ಬಗೆಗೆ ಸಣ್ಣಪುಟ್ಟ ತಕರಾರುಗಳು ಇದ್ದರೂ ಅವುಗಳು ಅಷ್ಟಾಗಿ ವಿವಾದ ಹುಟ್ಟು ಹಾಕಿಲ್ಲ.

ವಲಯ ಮಂಡಳಿ:

ಬೆಳಗಾವಿ ಮತ್ತಿತರ ಪ್ರದೇಶಗಳ ಮೇಲೆ ಕಣ್ಣಿಟ್ಟಿದ್ದ ಮುಂಬೈ ಸರ್ಕಾರ ಈ ಪ್ರದೇಶಗಳನ್ನು ತನಗೆ ಹಸ್ತಾಂತರಿಸಬೇಕು ಎಂದು ಹಕ್ಕು ಮಂಡಿಸುತ್ತಲೇ ಇತ್ತು. ರಾಜ್ಯ ಪುನರ್ ವಿಂಗಡಣಾ ಕಾಯ್ದೆ ಅಂಗೀಕಾರವಾದ ನಂತರವೂ ಅಂದಿನ ಕೇಂದ್ರ ಗೃಹಖಾತೆ ಸಚಿವರು ಹಲವಾರು ರಾಜ್ಯಗಳ ಮಧ್ಯೆ ಗಡಿ ವಿಷಯವಾಗಿ ಇನ್ನೂ ಸಣ್ಣಪುಟ್ಟ ಹೊಂದಾಣಿಕೆಗಳ ವಿವಾದಗಳಿವೆ ಎಂಬುದನ್ನು ಒಂದಲ್ಲ ಹಲವು ಬಾರಿ ಒಪ್ಪಿಕೊಂಡಿದ್ದರು. ಇದಕ್ಕಾಗಿಯೇ ಇಂಥ ಗಡಿ ವಿವಾದಗಳ ಹೊಂದಾಣಿಕೆಗಳನ್ನು ಮಾಡಲು ವಲಯ ಮಂಡಳಿ (zonal council) ರಚಿಸಲಾಗುವುದು. ವಲಯ ಮಂಡಳಿ ಮೂಲಕ ಇಂಥ ಸಣ್ಣ ಪುಟ್ಟ ಗಡಿ ವಿವಾದಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಘೋಷಿಸಿದರು. ಇಂಥ ಒಂದು ವ್ಯವಸ್ಥೆಗೆ ಸಂಸತ್ತು ಅವಕಾಶ ಮಾಡಿಕೊಟ್ಟಿತು. ಅವಕಾಶವನ್ನು ಬಳಸಿಕೊಂಡ ಮಹಾರಾಷ್ಟ್ರ ಸರ್ಕಾರ 195ರಲ್ಲಿ ಮುಂಬೈ-ಮೈಸೂರು ರಾಜ್ಯಗಳ ಗಡಿಯನ್ನು ಮರು ಹೊಂದಾಣಿಕೆ ಮಾಡಬೇಕು ಎಂಬ ಬೇಡಿಕೆಯನ್ನು ಕೇಂದ್ರ ಗೃಹಖಾತೆಗೆ ಸಲ್ಲಿಸಿತು. ಮಹಾರಾಷ್ಟ್ರ ಮತ್ತು ಕರ್ನಾಟಕ ಮಧ್ಯದ ಇವತ್ತಿನ ಗಡಿ ವಿವಾದಕ್ಕೆ ಇದು ಮೂಲ ಕಾರಣ. ಹೀಗಾಗಿ ಎರಡೂ ರಾಜ್ಯಗಳ (ಕರ್ನಾಟಕ-ಮಹಾರಾಷ್ಟ್ರ) ಗಡಿ ವಿವಾದಕ್ಕೆ ಅಧಿಕೃತ ಮುದ್ರೆ ಬಿತ್ತು.

ಈ ಹಿನ್ನೆಲೆಯಲ್ಲಿ ಮುಂಬೈ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿ “ರಾಜ್ಯ ಪುನರ್ ವಿಂಗಡಣೆಯ ಕಾಲಕ್ಕೆ ಕೆಲವು ಸಂದರ್ಭಗಳಲ್ಲಿ ಆಡಳಿತಾತ್ಮಕ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಮರಾಠಿ ಭಾಷಿಕರು ಹೆಚ್ಚಾಗಿದ್ದರೂ ಅಂಥ ಪ್ರದೇಶಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಗಿದೆ. ಇದರಿಂದಾಗಿ ಬಹುಸಂಖ್ಯಾತ ಮರಾಠಿ ಭಾಷಿಕರು ಮತ್ತು ಪ್ರದೇಶಗಳು ಮೈಸೂರು ರಾಜ್ಯದಲ್ಲಿ ಉಳಿದಂತಾಗಿದೆ. ಹೀಗಾಗಿ ಮರಾಠಿ ಭಾಷಿಕ ಜನರು ತಮ್ಮ ಭಾಷೆ, ಸಂಸ್ಕೃತಿಗೆ ಭಿನ್ನವಾದ ರಾಜ್ಯದಲ್ಲಿ ಉಳಿದಿದ್ದರಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಾವುದೇ ಒಂದು ರಾಜ್ಯ ಎಷ್ಟು ಪ್ರದೇಶಗಳನ್ನು ಕಳೆದುಕೊಳ್ಳುತ್ತದೆ ಅಥವಾ ಪಡೆದುಕೊಳ್ಳತ್ತದೆ ಎಂಬುದಕ್ಕಿಂತ ಎರಡೂ ರಾಜ್ಯಗಳ ಗಡಿಭಾಗದ ಜನರು ತೊಂದರೆ ಅನುಭವಿಸುವಂತಾಗಬಾರದು. ಭಾಷಾವಾರು ಪ್ರಾಂತ ರಚನೆಯ ತತ್ವಕ್ಕೆ ಅನುಗುಣವಾಗಿ ಬಹುಸಂಖ್ಯಾತ ಭಾಷಿಕರು ಒಂದೇ ರಾಜ್ಯಕ್ಕೆ ಸೇರಬೇಕು. ಆದರೆ ಈಗ ಮಾಡಲಾಗಿರುವ ಗಡಿ ನಿರ್ಣಯ ಅಸಮರ್ಪಕವಾಗಿದೆ. ಇಂಥ ಸಣ್ಣ ಪುಟ್ಟ ಹೊಂದಾಣಿಕೆಗಳನ್ನು ಸರಿಪಡಿಸುವುದಕ್ಕಾಗಿಯೇ ಸಂಸತ್ತು ವಲಯ ಮಂಡಳಿ (zonal council) ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ. ಈ ವ್ಯವಸ್ಥೆ ಅಡಿಯಲ್ಲಿ ಮುಂಬೈ ಮತ್ತು ಮೈಸೂರು ರಾಜ್ಯಗಳ ಗಡಿಯನ್ನು ಮರು ಹೊಂದಾಣಿಕೆ ಮಾಡಬೇಕು” ಎಂದು ಒತ್ತಾಯಿಸಿತು.

ಮೈಸೂರು ಸರ್ಕಾರದ ವಾದ:

ಮುಂಬೈ ಸರ್ಕಾರ ಮಂಡಿಸಿದ ಬೇಡಿಕೆಗಳ ಬಗೆಗೆ ಮೈಸೂರು ರಾಜ್ಯ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ವಿರೋಧ ವ್ಯಕ್ತಪಡಿಸಿತು. “ರಾಜ್ಯಗಳ ಮಧ್ಯ ಪರಸ್ಪರ ಸಣ್ಣಪುಟ್ಟ ಗಡಿ ವಿವಾದಗಳಿದ್ದರೆ ಮಾತ್ರ ಅಂಥವುಗಳ ಮರು ಹೊಂದಾಣಿಕೆ ಮಾಡಲು ವಲಯ ಮಂಡಳಿಗಳು ರಚನೆಯಾಗಿರುವುದು. ಆದರೆ ಈಗ ಮುಂಬೈ ರಾಜ್ಯ ಮಂಡಿಸಿರುವ ಬೇಡಿಕೆ ವಿಸ್ತೃತ ಸ್ವರೂಪದ್ದು ಮತ್ತು ಎರಡೂ ರಾಜ್ಯಗಳ ಗಡಿಯ ಸ್ವರೂಪದಲ್ಲಿ ಭಾರಿ ಬದಲಾವಣೆಗಳನ್ನು ತರುವಂಥದ್ದಾಗಿದೆ. ಅಲ್ಲದೇ ಮುಂಬೈ ರಾಜ್ಯ ಮಂಡಿಸಿರುವ ಬಹುತೇಕ ಬೇಡಿಕೆಗಳು ರಾಜ್ಯ ಪುನರ್ ವಿಂಗಡಣೆಯ ಸಂದರ್ಭದಲ್ಲಿ ಸಂಸತ್ತು ತಿರಸ್ಕಾರಗೊಳಿಸಿರುವಂಥವೇ ಆಗಿವೆ. ಭಾಷಾ ಬಹುಸಂಖ್ಯಾತರಿದ್ದಾರೆ ಎನ್ನುವ ಕಾರಣಕ್ಕೆ ಅಥವಾ ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸುವ ಮೂಲಕ ಗಡಿ ನಿರ್ಧಾರ ಮಾಡುವ ತತ್ವವನ್ನು ಸಂಸತ್ತು ಸಂಪೂರ್ಣ ಮತ್ತು ಸ್ಪಷ್ಟ ಮಾತುಗಳಲ್ಲಿ ತಳ್ಳಿ ಹಾಕಿದೆ. ರಾಜ್ಯ ಪುನರ್ ವಿಂಗಡಣಾ ಆಯೋಗ ರಾಜ್ಯಗಳ ಗಡಿಯನ್ನು ನಿರ್ಧರಿಸುವಾಗ ಜಿಲ್ಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿದೆ ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ತಾಲೂಕನ್ನು ಘಟಕವನ್ನಾಗಿ ಪರಿಗಣಿಸಿ ಗಡಿ ನಿರ್ಧರಿಸಿದೆ. ಶೇ.70ಕ್ಕಿಂತ ಕಡಿಮೆ ಸಂಖ್ಯೆಯ ಭಾಷಿಕರು ಇರುವ ಯಾವುದೇ ಪ್ರದೇಶವನ್ನು ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ” ಎಂದು ಮೈಸೂರು ಸರ್ಕಾರ ವಾದ ಮಂಡಿಸಿತು.

ಇದನ್ನೂ ಓದಿರಿ: ಕರ್ನಾಟಕದ ಸಾರಿಗೆ ವ್ಯವಸ್ಥೆ; ಪರಿಣಾಮಕಾರಿ ಬದಲಾವಣೆ ಸಾಧ್ಯವೇ?

ಮುಂಬೈ ರಾಜ್ಯದ ಬೇಡಿಕೆಗಳ ವಿರುದ್ಧ ಸಮರ್ಥ ವಾದ ಮಂಡಿಸಿದ ಮೈಸೂರು ರಾಜ್ಯ ಕಠಿಣ ನಿಲುವು ತಾಳಿತು. ದೇಶದ ಎಲ್ಲ ಭಾಗಗಳಲ್ಲಿ ಸಂಚರಿಸಿದ ರಾಜ್ಯ ಪುನರ್ ವಿಂಗಡಣಾ ಆಯೋಗ ಸಮಗ್ರ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯಲ್ಲಿ ಕೆಲವು ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿ ಸಂಸತ್ತು ಒಪ್ಪಿಕೊಂಡಿದೆ. ಈಗ ಮತ್ತೆ ಗಡಿಯನ್ನು ಮರುಹೊಂದಾಣಿಕೆ ಮಾಡಲು ಹೋಗುವುದಕ್ಕೆ ಬಲವಾದ ಕಾರಣಗಳಿಲ್ಲ. ಆದ್ದರಿಂದ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಬೇಕು ಎಂಬುದು ಮೈಸೂರು ರಾಜ್ಯದ ವಾದವಾಗಿತ್ತು. ಆದರೆ ಈ ಮಧ್ಯೆ ಮುಂಬೈ ಸರ್ಕಾರ ಜೂನ್ 25, 1957ರಲ್ಲಿ ತಾನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಗಡಿ ವಿವಾದ ಕುರಿತು ಮನವಿಯನ್ನು ವಲಯ ಮಂಡಳಿಗೆ ವಹಿಸಿ ಆದಷ್ಟು ಬೇಗ ವಿವಾದವನ್ನು ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸತೊಡಗಿತು. ಕಾರ್ಯ ಬಾಹುಳ್ಯದಿಂದ ವಲಯ ಮಂಡಳಿ ಈ ಎರಡೂ ರಾಜ್ಯಗಳ ಗಡಿ ವಿವಾದವನ್ನು ಇತ್ಯರ್ಥಪಡಿಸಲು ಸಾಧ್ಯವಾಗಲಿಲ್ಲ. ಆಗ ಅಂದಿನ ಕೇಂದ್ರ ಗೃಹಸಚಿವ ಜಿ.ಬಿ.ಪಂತ್ ಅವರ ಸಮ್ಮುಖದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ವಿವಾದವನ್ನು ಬಗೆಹರಿಸುವುದಕ್ಕಾಗಿ ‘ನಾಲ್ವರು ತಜ್ಞರ ಸಮಿತಿ’ಗೆ ಒಪ್ಪಿಸಲು ನಿರ್ಧರಿಸಿದರು.

(ಮುಂದುವರಿಯುತ್ತದೆ..)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ..)

kadade photo
ಪ್ರೊ. ಓಂಕಾರ ಕಾಕಡೆ
+ posts

ಪ್ರೊ. ಓಂಕಾರ ಕಾಕಡೆ ಅವರು ಕೆಲಕಾಲ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಸದ್ಯ ಜರ್ನಲಿಸಂ ವಿಭಾಗದ ಅಧ್ಯಾಪಕರಾಗಿದ್ದಾರೆ. ಈ ಮುಂಚೆ ಅವರು ಪ್ರಸಾರಾಂಗ ನಿರ್ದೇಶಕರಾಗಿದ್ದರು. ವಿ.ವಿ.ಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ನೇಮಕವಾಗುವ ಮುನ್ನ ಅವರು ಪ್ರಜಾವಾಣಿಯಲ್ಲಿ (2001-03) ಬೆಳಗಾವಿ ಹಾಗೂ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಓಂಕಾರ ಕಾಕಡೆ
ಪ್ರೊ. ಓಂಕಾರ ಕಾಕಡೆ
ಪ್ರೊ. ಓಂಕಾರ ಕಾಕಡೆ ಅವರು ಕೆಲಕಾಲ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಸದ್ಯ ಜರ್ನಲಿಸಂ ವಿಭಾಗದ ಅಧ್ಯಾಪಕರಾಗಿದ್ದಾರೆ. ಈ ಮುಂಚೆ ಅವರು ಪ್ರಸಾರಾಂಗ ನಿರ್ದೇಶಕರಾಗಿದ್ದರು. ವಿ.ವಿ.ಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ನೇಮಕವಾಗುವ ಮುನ್ನ ಅವರು ಪ್ರಜಾವಾಣಿಯಲ್ಲಿ (2001-03) ಬೆಳಗಾವಿ ಹಾಗೂ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...