ನೆರೆಹೊರೆ ರಾಜ್ಯಗಳೊಂದಿಗೆ ಕರ್ನಾಟಕದ ಗಡಿ ಸಂಬಂಧ; ವಿವಾದಗಳ ಮೂಲ ಯಾವುದು? (ಭಾಗ-2)

Date:

(ಮುಂದುವರಿದ ಭಾಗ..) ನಾಲ್ವರು ತಜ್ಞರ ಸಮಿತಿ: ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು 1960ರ ಜೂನ್ 5ರಂದು ಜಂಟಿ ಪ್ರಕಟಣೆ ಹೊರಡಿಸಿ ಮುಂಬೈ-ಮೈಸೂರು ರಾಜ್ಯದ ಗಡಿ ವಿವಾದದ ಕುರಿತು ಸಮಗ್ರ ಅಧ್ಯಯನ ನಡೆಸಿ ಸಾಧಕ – ಬಾಧಕಗಳ ಕುರಿತು ವರದಿ ಸಲ್ಲಿಸಲು ನಾಲ್ವರು ತಜ್ಞರ ಸಮಿತಿ ರಚಿಸುವುದಾಗಿ ಹೇಳಿದರು. ಈ ಸಮಿತಿಯಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸೂಚಿಸುವ ತಲಾ ಇಬ್ಬರು ಸದಸ್ಯರು ಇರುತ್ತಾರೆ ಎಂದು ಘೋಷಿಸಲಾಯಿತು. ಈ ಘೋಷಣೆಯ ಹಿನ್ನೆಲೆಯಲ್ಲಿಯೇ 1960 ನವೆಂಬರ್ 30ರಂದು ಮುಂಬೈ ರಾಜ್ಯದ ಅಂದಿನ ಮುಖ್ಯಮಂತ್ರಿ ವೈ.ಬಿ.ಚವಾಣ್ ಅವರು ಎಚ್.ವಿ. ಪಾಟಸ್ಕರ್ ಮತ್ತು ಎಂ.ಡಿ. ಭಟ್ ಅವರನ್ನು ಮುಂಬೈ ರಾಜ್ಯದ ಪ್ರತಿನಿಧಿಗಳನ್ನಾಗಿ ಸೂಚಿಸಿದರು. ಅದೇ ಪ್ರಕಾರ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರು ಸಿ.ಚನ್ನಯ್ಯ ಹಾಗೂ ಎಸ್.ಎಸ್.ಮಳಿಮಠ ಅವರನ್ನು ಮೈಸೂರು ರಾಜ್ಯದ ಪ್ರತಿನಿಧಿಗಳೆಂದು ಸೂಚಿಸಿದರು. ಹೀಗೆ ನಾಲ್ವರು ತಜ್ಞರ ಸಮಿತಿ ರಚನೆಯಾಯಿತು.

ಈ ನಾಲ್ವರು ತಜ್ಞರ ಸಮಿತಿ 1961ರ ಜನವರಿ 23ರಿಂದ ಕಾರ್ಯಾರಂಭ ಮಾಡಿತು. ಎರಡೂ ರಾಜ್ಯಗಳ ಹಲವಾರು ಕಡೆಗಳಲ್ಲಿ ಈ ಸಮಿತಿ ಐದು ಸಭೆಗಳನ್ನು ನಡೆಸಿತು. ಆರನೆಯ ಸಭೆ 1962ರ ಜನವರಿ 1 ಮತ್ತು 2ರಂದು ಮುಂಬೈಯಲ್ಲಿ ನಡೆಯಿತು. ನಾಲ್ಕೂ ಜನ ತಜ್ಞರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಯಿತು. ಈ ಸಭೆಯಲ್ಲಿ ಮುಂಬೈ ರಾಜ್ಯದ ಪ್ರತಿನಿಧಿಯಾಗಿದ್ದ ಎಚ್.ವಿ.ಪಾಟಸ್ಕರ್ ಅವರು ಭಾಷಾ ಬಹುಸಂಖ್ಯಾತರಿರುವುದು ಗಡಿ ನಿರ್ಧರಿಸಲು ಮಾನದಂಡವಾಗಬೇಕು ಎಂಬ ಸಲಹೆಯನ್ನು ಮುಂದಿಟ್ಟರು. ಆಗ ಮೈಸೂರು ರಾಜ್ಯದ ಪ್ರತಿನಿಧಿಗಳು ಈ ಸಲಹೆಯನ್ನು ತೀವ್ರವಾಗಿ ವಿರೋಧಿಸಿದರು. ಬಹುತೇಕ ಎಲ್ಲ ವಿಷಯಗಳಲ್ಲಿಯೂ ಈ ನಾಲ್ವರು ತಜ್ಞರ ಸಮಿತಿಗೆ ಒಮ್ಮತಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಸುಮಾರು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಈ ಸಮಿತಿ ಸದಸ್ಯರಲ್ಲಿ ಗಡಿ ಸಮಸ್ಯೆ ಇತ್ಯರ್ಥಕ್ಕೆ ಒಮ್ಮತ ಮೂಡಲೇ ಇಲ್ಲ. ಈ ನಾಲ್ವರು ತಜ್ಞರ ಸಮಿತಿ ಗಡಿ ವಿವಾದವನ್ನು ಇತ್ಯರ್ಥ ಪಡಿಸಲು ವಿಫಲವಾಗಿದ್ದರಿಂದ ಹೋರಾಟಗಳು ಮುಂದುವರೆದವು. ಆಗ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಪರಸ್ಪರ ಮಾತುಕತೆಯ ಮೂಲಕ ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿತು. ಈ ಸೂಚನೆಯ ಪ್ರಕಾರ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಗಡಿ ಸಮಸ್ಯೆಯ ಇತ್ಯರ್ಥಕ್ಕೆ ಅತ್ಯಂತ ಸೌಹಾರ್ದ ವಾತಾವರಣದಲ್ಲಿ 2-3 ಸಭೆಗಳನ್ನು ನಡೆಸಿದರು. ಆದರೂ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.

ನಂತರ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನ ಮಂತ್ರಿ, ಕಾಂಗ್ರೆಸ್ ಅಧ್ಯಕ್ಷರು, ಗೃಹಸಚಿವರನ್ನು ಭೇಟಿ ಮಾಡಿ ಗಡಿ ವಿವಾದ ಇತ್ಯರ್ಥಪಡಿಸಲು ಆಯೋಗ ರಚಿಸುವುದನ್ನು ವಿಳಂಬ ಮಾಡಿದರೆ ವಿರೋಧ ಪಕ್ಷಗಳು ಮುಂಬೈ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆಯೋಗ ನೇಮಕ ಮಾಡುವುದು ವಿಳಂಬವಾದರೆ ಸರ್ಕಾರ ನಡೆಸುವುದೇ ಕಷ್ಟವಾಗುತ್ತದೆ ಎಂಬ ಅಭಿಪ್ರಾಯವನ್ನು ಮಂಡಿಸಿದರು. ಈ ಮಧ್ಯೆ ಮುಂಬೈ ಸರ್ಕಾರದ ಸಚಿವ ಸಂಪುಟ ಅಗತ್ಯ ಬಿದ್ದರೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡುವ ಸರ್ವಾನುಮತದ ನಿರ್ಣಯ ಕೈಕೊಂಡಿತು. ಈ ವಿವಾದವನ್ನು ಮಹಾರಾಷ್ಟ್ರೀಯರು ಅತ್ಯಂತ ಕ್ಲಿಷ್ಟ ಪರಿಸ್ಥಿತಿಗೆ ತಂದು ನಿಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಹಾಜನ ಆಯೋಗ:

ಮಹಾರಾಷ್ಟ್ರ ರಾಜ್ಯದ ಮುಖಂಡರ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರವು ಮಹಾರಾಷ್ಟ್ರ-ಮೈಸೂರು-ಕೇರಳ ರಾಜ್ಯಗಳ ಗಡಿ ವಿವಾದ ಬಗೆಹರಿಸಲು ನಿವೃತ್ತ ನ್ಯಾಯಮೂರ್ತಿ ಮೆಹರಚಂದ ಮಹಾಜನ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ನೇಮಕ ಮಾಡಿ 1966ರ ಅಕ್ಟೋಬರ್ 25ರಂದು ಅಧಿಸೂಚನೆ ಹೊರಡಿಸಿತು. ಈ ಎರಡೂ ರಾಜ್ಯಗಳ ಮನವಿ ಪತ್ರಗಳನ್ನು ಪರಿಶೀಲಿಸಿದ ಮಹಾಜನ ಆಯೋಗ 1967 ಫೆಬ್ರುವರಿ 23ರಿಂದ 1967 ಮೇ 21ರವರೆಗೆ ವಿವಿಧ ಗಡಿ ಪ್ರದೇಶಗಳಿಗೆ ಪ್ರವಾಸ ಕೈಕೊಂಡಿತು. ಆಯೋಗ ಭೇಟಿ ನೀಡಿದ ಸಂದರ್ಭದಲ್ಲಿ ಸ್ಪಂದಿಸಿದ ರಾಜ್ಯ ಸರ್ಕಾರಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು, ಒಟ್ಟು 2,240 ಮನವಿ, ಅಹವಾಲುಗಳನ್ನು ಸಲ್ಲಿಸಿದರು. ಗಡಿ ಪ್ರದೇಶದ ಜನರನ್ನು ಖುದ್ದಾಗಿ ಭೇಟಿ ಮಾಡಿದ ನ್ಯಾಯಮೂರ್ತಿ ಮಹಾಜನ ಅವರು ತಮ್ಮ ಪ್ರವಾಸದ ಸಂದರ್ಭದಲ್ಲಿ 7,572 ಜನರನ್ನು ಸಂದರ್ಶಿಸಿದರು. ನಂತರ ವಿವಿಧ ರಾಜ್ಯಗಳು ಸಲ್ಲಿಸಿದ ವಾದ-ಪತ್ರಿವಾದಗಳನ್ನು ಪರಿಗಣನೆಗೆ ತೆಗೆದುಕೊಂಡ ಆಯೋಗ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ 1967 ಆಗಸ್ಟ್ 25ರಂದು ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿತು.

mahajan
ನ್ಯಾಯಮೂರ್ತಿ ಮೆಹರಚಂದ ಮಹಾಜನ

ಮಹಾಜನ ಆಯೋಗ ತನ್ನ ವರದಿಯಲ್ಲಿ ಮಹಾರಾಷ್ಟ್ರ ತನಗೆ ಹಸ್ತಾಂತರಿಸಬೇಕು ಎಂದು ಕೇಳಿದ್ದ 883 ಗ್ರಾಮಗಳ ಪೈಕಿ ಬೆಳಗಾವಿ, ಕಾರವಾರ, ಸೂಪಾ, ಹಳಿಯಾಳ ಸೇರಿದಂತೆ 513 ಹಳ್ಳಿ-ನಗರಗಳನ್ನು ಕರ್ನಾಟಕದಲ್ಲಿಯೇ ಉಳಿಸಿ ಖಾನಾಪುರ, ನಿಪ್ಪಾಣಿ, ಲೋಂಡಾ, ನಂದಗಡ ಸೇರಿದಂತೆ 249 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಹಸ್ತಾಂತರಿಸುವಂತೆ ಶಿಫಾರಸು ಮಾಡಿತು. ಅದೇ ರೀತಿ ಕರ್ನಾಟಕ ತನಗೆ ಸೇರಬೇಕು ಎಂದು ಹಕ್ಕು ಮಂಡಿಸಿದ್ದ 516 ಗ್ರಾಮಗಳ ಪೈಕಿ ಸೊಲ್ಲಾಪುರ, ಅಕ್ಕಲಕೋಟೆ ಮತ್ತಿತರ ಪ್ರದೇಶಗಳನ್ನು ಹೊರತುಪಡಿಸಿ 249 ಗ್ರಾಮಗಳನ್ನು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವರ್ಗಾಯಿಸಲು ಆಯೋಗ ಶಿಫಾರಸು ಮಾಡಿತು. ಆಗ ಅಂದು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿ. ಎಸ್. ನಿಜಲಿಂಗಪ್ಪ ಅವರು ಮಹಾಜನ ಆಯೋಗದ ವರದಿಯನ್ನು ಒಪ್ಪಿಕೊಳ್ಳುವುದಾಗಿ ಘೋಷಿಸಿದರು. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ವಿ.ಪಿ. ನಾಯಕ್ ಮತ್ತು ಕೇಂದ್ರದ ಗೃಹಸಚಿವರಾಗಿದ್ದ ವೈ.ಬಿ. ಚವಾಣ್ ಕೂಡಾ ಆಯೋಗದ ತೀರ್ಪು ಮನ್ನಿಸುವುದಾಗಿ ಘೋಷಣೆ ಮಾಡಿದರು. ಆದರೆ ನಂತರ ಆಯೋಗದ ವರದಿಯ ಮೇಲೆ ಕಣ್ಣಾಡಿಸಿದ ಗೃಹಸಚಿವ ವೈ.ಬಿ.ಚವಾಣ್ ದಿಗ್ಭ್ರಾಂತರಾದರು. ಏಕೆಂದರೆ ಮಹಾಜನ ಆಯೋಗವು ಮಹಾರಾಷ್ಟ್ರ ಕೇಳಿದ್ದ 883 ಹಳ್ಳಿಗಳ ಪೈಕಿ ಬೆಳಗಾವಿ, ಕಾರವಾರ ಹೊರತುಪಡಿಸಿದಂತೆ ಮತ್ತು ನಿಪ್ಪಾಣಿ, ಖಾನಾಪುರ ಸೇರಿದಂತೆ 249 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ನಿರ್ಣಯಿಸಿತ್ತು. ಅದೇ ರೀತಿ ಮಹಾರಾಷ್ಟ್ರವೇ ಹಸ್ತಾಂತರಿಸಲು ಒಪ್ಪಿದ್ದ 260 ಹಳ್ಳಿಗಳ ಪೈಕಿ ಇನ್ನೂ 11 ಹಳ್ಳಿಗಳನ್ನು ಮಹಾರಾಷ್ಟ್ರದಲ್ಲಿಯೇ ಉಳಿಸಿ 249 ಹಳ್ಳಿಗಳನ್ನು ಮೈಸೂರು ರಾಜ್ಯಕ್ಕೆ ಹಸ್ತಾಂತರಿಸಬೇಕು ಎಂದು ಆಯೋಗ ಶಿಫಾರಸು ಮಾಡಿತ್ತು.

ತಮ್ಮ ಸ್ಥಾನದ ಅಧಿಕಾರ ಬಲದಿಂದ ನೀತಿ ನಿಯಮಗಳನ್ನು ಗಾಳಿಗೆ ತೂರಿದ ಅಂದಿನ ಕೇಂದ್ರ ಗೃಹ ಸಚಿವ ವೈ.ಬಿ.ಚವಾಣ್ ಅವರು ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸುವ ಮುನ್ನವೇ ‘ಲೀಕ್’ ಮಾಡಿದರು. ಮೂಲಕ ಕೇಂದ್ರ ಗೃಹಸಚಿವರು ಮಹಾರಾಷ್ಟ್ರದ ಪಕ್ಷಪಾತಿಯಾಗಿ ವರ್ತಿಸಿದರು. ಅನಧಿಕೃತವಾಗಿ ಮಹಾಜನ ಆಯೋಗದ ವರದಿಯ ಶಿಫಾರಸುಗಳು ಮಹಾರಾಷ್ಟ್ರದ ಮುಖಂಡರಿಗೆ ದೊರೆಯುವಂತೆ ನೋಡಿಕೊಂಡರು ಎಂಬ ಆರೋಪಗಳು ಕೇಳಿ ಬಂದವು. ಮಹಾಜನ ಆಯೋಗದ ಶಿಫಾರಸುಗಳು ತಿಳಿಯುತ್ತಿದ್ದಂತೆ ಸ್ವತಃ ಅಂದಿನ ಕೇಂದ್ರ ಗೃಹಸಚಿವರೂ ಸೇರಿದಂತೆ ಮಹಾರಾಷ್ಟ್ರದ ಮುಖಂಡರು ಬಣ್ಣ ಬದಲಿಸತೊಡಗಿದರು. ಮಹಾಜನ ಆಯೋಗ ಬೆಳಗಾವಿಯನ್ನು ಕರ್ನಾಟಕದಲ್ಲಿಯೇ ಉಳಿಸಿದ್ದರಿಂದ ಮುಂಬೈನಲ್ಲಿ ಹಿಂಸಾಚಾರಕ್ಕಿಳಿದ ‘ಶಿವಸೈನಿಕರು’ ದೊಂಬಿಗಿಳಿದರು. ಘಟನೆಯಲ್ಲಿ 69 ಜನರು ಪ್ರಾಣ ತೆತ್ತರು. ‘ಒಲ್ಲದವರಿಗೆ ಮೊಸರಿನಲ್ಲಿ ಕಲ್ಲು’ ಎನ್ನುವ ಹಾಗೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕೆಂಬ ವಾದವನ್ನು ಮಹಾಜನ ಆಯೋಗ ತಳ್ಳಿ ಹಾಕಿದ್ದರಿಂದ ಆಯೋಗದ ವರದಿಯನ್ನೇ ಸುಟ್ಟು ಹಾಕಿ ಪ್ರತಿಭಟಿಸಿದರು. ಆಯೋಗ ನೀಡುವ ತೀರ್ಪಿಗೆ ಬದ್ಧ ಎಂದು ಘಂಟಾಘೋಷವಾಗಿ ಹೇಳಿದ್ದವರು ತೀರ್ಪು ತಮಗೆ ವಿರೋಧವಾಗಿ ಬಂದಿದ್ದರಿಂದ ಅಂದಿನ ಮುಖ್ಯಮಂತ್ರಿ ವಿ.ಪಿ.ನಾಯಕ್ ಆದಿಯಾಗಿ ಎಲ್ಲ ಮುಖಂಡರೂ ತಮ್ಮ ಒತ್ತಾಸೆಯಿಂದಲೇ ರಚನೆಯಾಗಿದ್ದ ಆಯೋಗದ ವರದಿಯನ್ನು ತಿರಸ್ಕರಿಸಿದರು.

ಇದನ್ನೂ ಓದಿರಿ: ನೆರೆಹೊರೆ ರಾಜ್ಯಗಳೊಂದಿಗೆ ಕರ್ನಾಟಕದ ಗಡಿ ಸಂಬಂಧ; ವಿವಾದಗಳ ಮೂಲ ಯಾವುದು? (ಭಾಗ-1)

ರಾಜಕೀಯ ದಾಳ:

ಕರ್ನಾಟಕದ ನೆಲ-ಜಲ ಕಬಳಿಸುವ ಕನಸನ್ನು ಮಹಾಜನ ಆಯೋಗ ಭಗ್ನಗೊಳಿಸಿದರೂ ಮಹಾರಾಷ್ಟ್ರದವರು ಅಲ್ಲಿಗೇ ಸುಮ್ಮನಾಗಲಿಲ್ಲ. ಮಹಾಜನ ಆಯೋಗ ರಚನೆಯಾಗುವುದಕ್ಕೂ ಮುನ್ನ ನೆಹರು ಸಮಿತಿ, ಧಾರ್ ಆಯೋಗ, ಕೇಳ್ಕರ್ ಸಮಿತಿ ಹೀಗೆ ಎಲ್ಲ ಆಯೋಗ ಮತ್ತು ಸಮಿತಿಗಳು ಬೆಳಗಾವಿಯನ್ನು ಕರ್ನಾಟಕದ ಅವಿಭಾಜ್ಯ ಅಂಗ ಎಂದೇ ಸಾರಿವೆ. ಅದನ್ನೇ ಮಹಾಜನ ಆಯೋಗ ಕೂಡಾ ಎತ್ತಿ ಹಿಡಿಯಿತು. ಆದರೆ ಆಗಾಗ ಸಂದರ್ಭ ಸಿಕ್ಕಾಗಲೆಲ್ಲ ಕಾಲು ಕೆದರಿ ಜಗಳ ತೆಗೆಯುವುದನ್ನು ಮಹಾರಾಷ್ಟ್ರೀಯರು ರೂಢಿಯಾಗಿಸಿಕೊಂಡರು. ಹಲವಾರು ಮುಖಂಡರು ಗಡಿ ವಿವಾದವನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡರು. ರಾಜಕೀಯವಾಗಿ ಮೂಲೆಗುಂಪಾಗಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ 1986ರಲ್ಲಿ ಬೆಳಗಾವಿಯಲ್ಲಿ ದಿಢೀರ್ ಪ್ರತ್ಯಕ್ಷರಾಗಿ ಗಡಿ ವಿವಾದ ಉಲ್ಬಣಗೊಳ್ಳುವಂತೆ ಮಾಡಿದ್ದರು. ಮೂಲಕ ರಾಜಕೀಯದಲ್ಲಿ ಮಿಂಚಿದರು. ಹೀಗೆ ಮಹಾರಾಷ್ಟ್ರದ ಹಲವಾರು ಮುಖಂಡರಿಗೆ ಮತ್ತು ಬೆಳಗಾವಿ, ಕಾರವಾರ ಜಿಲ್ಲೆಯ ಕೆಲವರಿಗೆ ಗಡಿ ವಿವಾದವೇ ರಾಜಕೀಯ ಬಂಡವಾಳವಾಗಿತ್ತು. ಜನರ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಗಳಿಸುತ್ತಲೇ ಬಂದರು. ಆದರೆ 1986ರಲ್ಲಿ ನಡೆದ ಭಾಷಾ ಗಲಭೆಯಲ್ಲಿ 9 ಜನರು ಪ್ರಾಣ ಕಳೆದುಕೊಂಡ ಘಟನೆಯ ನಂತರ ಭಾಷಾ ವಿವಾದ ಕ್ಷೀಣಿಸುತ್ತಲೇ ಬಂದಿದೆ. 1957ರಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯವರು (ಎಂಇಎಸ್) ಮೊದಲ ಬಾರಿಗೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಒಬ್ಬರೂ ಆಯ್ಕೆಯಾಗಲಿಲ್ಲ. ಎಂಇಎಸ್‌ನವರು ಪ್ರತಿ ವರ್ಷ ರಾಜ್ಯೋತ್ಸವದ ದಿನ ‘ವಾರ್ಷಿಕ ತಿಥಿ’ಯಂತೆ ಆಚರಿಸುವ ‘ಕರಾಳ ದಿನ’ ಅರ್ಥ ಕಳೆದುಕೊಂಡಿದೆ.

ಇಷ್ಟೆಲ್ಲ ಕಸರತ್ತುಗಳನ್ನು ಮಾಡಿದರೂ ಬೆಳಗಾವಿ ಮತ್ತಿತರ ಪ್ರದೇಶಗಳು ತಮಗೆ ದಕ್ಕದಿದ್ದುದರಿಂದ ಹತಾಶರಾಗಿರುವ ಮಹಾರಾಷ್ಟ್ರದವರು ಗಡಿ ವಿವಾದವನ್ನು ಸುಪ್ರೀಂಕೋಟ್‌ಗೆ ಒಯ್ಯುವ ನಿರ್ಧಾರ ಕೈಕೊಳ್ಳುವ ಮೂಲಕ ಹೊಸ ‘ಪ್ರಹಸನ’ಕ್ಕೆ ಕೈ ಹಾಕಿದ್ದಾರೆ. ಛಲಬಿಡದ ತ್ರಿವಿಕ್ರಮನಂತೆ ಮಹಾರಾಷ್ಟ್ರ ಸರ್ಕಾರ ಈ ಗಡಿ ವಿವಾದವನ್ನು ಸುಪ್ರೀಂಕೋರ್ಟ್‌ಗೆ ತೆಗೆದುಕೊಂಡು ಹೋಗಿದೆ. ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿಯೂ ಸಮರ್ಥ ವಾದ ಮಂಡಿಸುತ್ತಿದೆ. ಈಗ ಈ ಗಡಿ ವಿವಾದ ಸುಪ್ರೀಂಕೋರ್ಟ್‌ನ ತೀರ್ಪಿನ ನಂತರವಾದರೂ ಇತ್ಯರ್ಥವಾಗುತ್ತದೆಯೇ ಕಾದು ನೋಡಬೇಕಿದೆ.

ಕಾಸರಗೋಡು ವಿವಾದ:

ರಾಜ್ಯ ಪುನರ್ ವಿಂಗಡಣೆಯ ಕಾಲಕ್ಕೆ ಅತೀ ಹೆಚ್ಚು ಕನ್ನಡ ಭಾಷಿಕರೇ ಇದ್ದ ಮತ್ತು ಕನ್ನಡಮಯ ಪ್ರದೇಶವೇ ಆಗಿರುವ ಕಾಸರಗೋಡು ಮತ್ತಿತರ ಗಡಿಭಾಗದ ಹಳ್ಳಿಗಳನ್ನು ಕೇರಳ ರಾಜ್ಯಕ್ಕೆ ಸೇರ್ಪಡೆ ಮಾಡಲಾಗಿತ್ತು. ಆಗ ಕಯ್ಯಾರ ಕಿಞ್ಞಣ್ಣ ರೈ ಅವರ ಮುಖಂಡತ್ವದಲ್ಲಿ ಅಲ್ಲಿನ ಕನ್ನಡಿಗರು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಹೋರಾಟ ಆರಂಭಿಸಿದರು. ಕರ್ನಾಟಕದ ಜನ ಮತ್ತು ಸರ್ಕಾರ ಅಲ್ಲಿನ ಕನ್ನಡಿಗರಿಗೆ ನೈತಿಕ ಬೆಂಬಲ ನೀಡಿದರು. ಆಗಾಗ ಅಲ್ಲಿನ ಕನ್ನಡಿಗರು ಮತ್ತು ಕರ್ನಾಟಕದ ಕೆಲವು ಕನ್ನಡ ಪರ ಸಂಘಟನೆಗಳು ಕಾಸರಗೋಡು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು ಎಂದು ಹೋರಾಟ ಮಾಡಿದರೂ ಈ ವಿಷಯ ಅಂಥ ಉದ್ವಿಗ್ನತೆಗೆ ಕಾರಣವಾಗಿದ್ದಿಲ್ಲ. ಆದರೆ ಮಹಾರಾಷ್ಟ್ರ ರಾಜ್ಯದ ಮುಖಂಡರ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ ಮಹಾರಾಷ್ಟ್ರ-ಮೈಸೂರು-ಕೇರಳ ರಾಜ್ಯಗಳ ಗಡಿ ವಿವಾದ ಬಗೆಹರಿಸಲು ನಿವೃತ್ತ ನ್ಯಾಯಮೂರ್ತಿ ಮೆಹರಚಂದ ಮಹಾಜನ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ನೇಮಕ ಮಾಡಿ 1966ರ ಅಕ್ಟೋಬರ್ 25ರಂದು ಅಧಿಸೂಚನೆ ಹೊರಡಿಸಿತ್ತು.

kasaragod
ಕಾಸರಗೋಡು

ಕೇರಳದ ಕಾಸರಗೋಡು ತಾಲ್ಲೂಕನ್ನು ಸೇರ್ಪಡೆ ಮಾಡಬೇಕು ಎಂಬ ಮೈಸೂರು ರಾಜ್ಯದ ಬೇಡಿಕೆ ಕುರಿತು ವಿಚಾರಣೆ ನಡೆಸುವುದನ್ನು ರಾಜ್ಯದಲ್ಲಿ ಜನಪ್ರಿಯ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಮುಂದೂಡಬೇಕು ಎಂದು ಕೇರಳದ ಸದಸ್ಯರು ಕೋರಿಕೆ ಸಲ್ಲಿಸಿದರು. ಈ ಕೋರಿಕೆ ನ್ಯಾಯಸಮ್ಮತವಾಗಿರುವುದಾಗಿ ಹೇಳಿದ ಆಯೋಗ ಕಾಲಾವಕಾಶ ನೀಡಿತು. ಮುಂದೆ ಚುನಾವಣೆಗಳು ನಡೆದು ಜನಪ್ರಿಯ ಸರ್ಕಾರ ರಚನೆಯಾದ ಮೇಲೂ ಕೇರಳದಿಂದ ಯಾವ ಪ್ರತಿಕ್ರಿಯೆಯೂ ಬಾರದಿದ್ದಾಗ ಆಯೋಗ ಕೇರಳ ರಾಜ್ಯಪಾಲರಿಗೆ ಪತ್ರ ಬರೆದು ನಿಲುವು ಸ್ಪಷ್ಟಪಡಿಸುವಂತೆ ಮನವಿ ಸಲ್ಲಿಸಿತು. ಆಗ ಕೇರಳ ಸರ್ಕಾರ ಗಡಿ ವಿಷಯದಲ್ಲಿ ಯಥಾಸ್ಥಿತಿ ಮುಂದುವರಿಕೆಗೆ ಬದ್ಧವಾಗಿದೆ. ಒಂದೊಮ್ಮೆ ಆಯೋಗ ಕೇರಳಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು ಆಯೋಗದ ಎದುರು ಹಾಜರಾಗಿ ರಾಜ್ಯದ ನಿಲುವು ಸ್ಪಷ್ಟಪಡಿಸುವುದಾಗಿ ತಿಳಿಸಿತು. ಕೇರಳದ ಅಂದಿನ ಮುಖ್ಯಮಂತ್ರಿ ಇ.ಎಂ.ಎಸ್.ನಂಬೂದರಿಪಾದ ಆಯೋಗಕ್ಕೆ ಪತ್ರ ಬರೆದು ತಮ್ಮ ರಾಜ್ಯದ ನಿಲುವಿನ ರೂಪರೇಷೆಗಳನ್ನು ಸೂಚ್ಯವಾಗಿ ತಿಳಿಸಿದರು.

ಇದನ್ನೂ ಓದಿರಿ: ಕರ್ನಾಟಕದ ಸಾರಿಗೆ ವ್ಯವಸ್ಥೆ; ಪರಿಣಾಮಕಾರಿ ಬದಲಾವಣೆ ಸಾಧ್ಯವೇ?

ಇದರ ಜತೆ ಕೇರಳದ ಕಾಸರಗೋಡು ತಾಲ್ಲೂಕನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಬೇಕು ಎಂಬ ಮನವಿಯನ್ನು ಅಂದಿನ ಮೈಸೂರು ರಾಜ್ಯ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಮಂಗಳೂರು, ಕಾಸರಗೋಡು, ಮತ್ತಿತರ ಕಡೆಗಳಲ್ಲಿ ಭೇಟಿ ನೀಡಿ ಹಲವಾರು ಜನರನ್ನು ಸಂದರ್ಶಿಸಿತು. ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಹಲವಾರು ಜನರಿಂದ ಆಯೋಗ ಮನವಿಗಳನ್ನು ಸ್ವೀಕರಿಸಿತು. ಅಲ್ಲದೇ ಹಲವಾರು ಜನರನ್ನು ವೈಯಕ್ತಿಕವಾಗಿ ಸಂದರ್ಶಿಸಿತು. ಮಹಾಜನ ಆಯೋಗ ತನ್ನ ಅಂತಿಮ ವರದಿಯಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು ಎಂಬ ಶಿಫಾರಸು ಮಾಡಿತ್ತು. ಹೀಗಾಗಿ ಈಗಲೂ ಕರ್ನಾಟಕ ಮಹಾಜನ ಆಯೋಗದ ವರದಿ ಜಾರಿಯಾಗಬೇಕು ಎಂದು ವಾದ ಮಂಡನೆ ಮಾಡುತ್ತಲೇ ಇದೆ. ಆದರೆ ಈ ವರದಿ ಜಾರಿಯಾಗದೇ ಇರುವುದರ ಪರಿಣಾಮವಾಗಿ ಕಾಸರಗೋಡು ಕೇರಳದಲ್ಲಿಯೇ ಉಳಿದುಕೊಂಡಿದೆ.

(ಮುಗಿಯಿತು)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ..)

kadade photo
ಪ್ರೊ. ಓಂಕಾರ ಕಾಕಡೆ
+ posts

ಪ್ರೊ. ಓಂಕಾರ ಕಾಕಡೆ ಅವರು ಕೆಲಕಾಲ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಸದ್ಯ ಜರ್ನಲಿಸಂ ವಿಭಾಗದ ಅಧ್ಯಾಪಕರಾಗಿದ್ದಾರೆ. ಈ ಮುಂಚೆ ಅವರು ಪ್ರಸಾರಾಂಗ ನಿರ್ದೇಶಕರಾಗಿದ್ದರು. ವಿ.ವಿ.ಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ನೇಮಕವಾಗುವ ಮುನ್ನ ಅವರು ಪ್ರಜಾವಾಣಿಯಲ್ಲಿ (2001-03) ಬೆಳಗಾವಿ ಹಾಗೂ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಓಂಕಾರ ಕಾಕಡೆ
ಪ್ರೊ. ಓಂಕಾರ ಕಾಕಡೆ
ಪ್ರೊ. ಓಂಕಾರ ಕಾಕಡೆ ಅವರು ಕೆಲಕಾಲ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಸದ್ಯ ಜರ್ನಲಿಸಂ ವಿಭಾಗದ ಅಧ್ಯಾಪಕರಾಗಿದ್ದಾರೆ. ಈ ಮುಂಚೆ ಅವರು ಪ್ರಸಾರಾಂಗ ನಿರ್ದೇಶಕರಾಗಿದ್ದರು. ವಿ.ವಿ.ಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗಕ್ಕೆ ನೇಮಕವಾಗುವ ಮುನ್ನ ಅವರು ಪ್ರಜಾವಾಣಿಯಲ್ಲಿ (2001-03) ಬೆಳಗಾವಿ ಹಾಗೂ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...