ಭಾಷೆ ಮತ್ತು ಲಿಂಗತ್ವ; ಹೆಣ್ಣಿಗಿಲ್ಲವೇ ಸ್ವತಂತ್ರ ಅಸ್ತಿತ್ವ? (ಭಾಗ- 1)

Date:

ಮಧ್ಯಕಾಲೀನ ಸಾಹಿತ್ಯದ ಬಹುದೊಡ್ಡ ದಾರ್ಶನಿಕನಾದ ಅಲ್ಲಮಪ್ರಭು ಭಾಷೆಯ ಬಗೆಗೆ ಬರೆದಿರುವ ಈ ವಚನವು ಗಮನ ಸೆಳೆಯುತ್ತದೆ. ಧರ್ಮಗಳು ಮಾತ್ರವೇ ಬಹು ದೊಡ್ಡ ಉಪಾಧಿಗಳೆಂದು ನಂಬುವ ಸಮಾಜದಲ್ಲಿ ಜಪ, ತಪ, ನೇಮ, ನಿತ್ಯಗಳು ಆಚಾರ ಸಂಹಿತೆಗಳಾಗಿ ಮೀರಲಾಗದ ತತ್ವಗಳಾಗಿ ನಿಲ್ಲುತ್ತವೆ. ಇವುಗಳ ಅನುಸರಣೆಯಿಂದಲೇ ಎಲ್ಲ ಬಗೆಯ ಕಷ್ಟ-ಕಾರ್ಪಣ್ಯಗಳಿಂದ ವಿಮೋಚನೆ. ಇವುಗಳ ಪಾಲನೆಯಿಂದಲೇ ಪರಮ ಸಾಫಲ್ಯ. ಆದ್ದರಿಂದ ಈ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಪರಮ ಪದವಿಗೆ ಏರಬಹುದು ಎಂದೇ ಜನರು ನಂಬುತ್ತಾರೆ ಅಥವಾ ನಂಬಿಸಲ್ಪಡುತ್ತಾರೆ. ಹೀಗಾಗಿ ಈ ಎಲ್ಲವುಗಳ ಬಗೆಗೆ ಜನರಲ್ಲಿ ಪ್ರಶ್ನಾತೀತ ಆಸ್ಥೆಯೊಂದು ಮನೆ ಮಾಡಿಕೊಂಡಿದೆ. ಅಲ್ಲಮ ಜನರ ಈ ಶ್ರದ್ಧೆಯನ್ನೇ ಒಡೆಯುವ ಪ್ರಯತ್ನ ಮಾಡಿದ್ದಾನೆ.

ಮನುಷ್ಯರು ನಿರ್ಮಿಸಿಕೊಂಡಿರುವ ಈ ಎಲ್ಲ ಅಂಶಗಳು ವಿಮೋಚನೆಗೆ ದಾರಿ ಮಾಡಿಕೊಡುವ ಬದಲು ಬಂಧನವಾಗಿ ಕಾಡುವ ಪರಿಯನ್ನು ಕಂಡು ಆತ ನಗೆಯಾಡುತ್ತಾನೆ. ಜಪ, ನೇಮ ಮತ್ತು ಶೀಲ ಇತ್ಯಾದಿ ಧಾರ್ಮಿಕ ಆಚರಣೆಗಳ ಸಾಲಿಗೆ ಭಾಷೆಯನ್ನು ಸೇರಿಸಿದ್ದು ಇಲ್ಲಿ ಗಮನಾರ್ಹವಾಗಿದೆ. ಭಾರತೀಯ ದಾರ್ಶನಿಕರಿಗೆ ಭಾಷೆಯು ವಾಗ್ದೇವಿ, ಸರಸ್ವತಿ, ವಾಣಿ, ಬ್ರಹ್ಮನ್, ಪಾರ್ವತಿ, ಪರಮೇಶ್ವರ ಆಗಿ ಕಂಡಿದ್ದರೆ ಅಲ್ಲಮನಿಗೆ ಅದು ಪ್ರಾಣಘಾತಕವಾಗಿ ಕಂಡಿದ್ದು ಅದೇಕೆ ಎಂಬ ಪ್ರಶ್ನೆಗಳು ಕಾಡದೆ ಇರದು. ಅದಕ್ಕೆ ಅಲ್ಲಮ ತನ್ನ ವಚನಗಳುದ್ದಕ್ಕೂ ಆಧಾರಗಳನ್ನು ನೀಡುತ್ತ ಭಾಷೆಯು ನಿರಪೇಕ್ಷಿತವಲ್ಲ; ಅದನ್ನು ಸೃಜಿಸುವ ಮತ್ತು ಬಳಸುವ ನೆಲೆಯೊಂದು ಇರುತ್ತದೆ. ಈ ನೆಲೆಗಳನ್ನು ಮನುಷ್ಯರು ಅಸ್ತಿತ್ವಗೊಳಿಸುತ್ತಾರೆ ಮತ್ತು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಚಾಲನೆಗೊಳಿಸುತ್ತಾರೆ ಎಂಬುದನ್ನು ನಿರೂಪಿಸುತ್ತಾನೆ. ಭಾಷೆಯನ್ನು ದೈವೀಕರಿಸುವಲ್ಲಿ ನಡೆದ ಸಾಂಸ್ಕೃತಿಕ ರಾಜಕಾರಣವನ್ನು ಆತ ಅನಾವರಣ ಮಾಡದೇ ಬಿಟ್ಟಿಲ್ಲ. ಆದ್ದರಿಂದಲೆ ಆತ ಭಾರತೀಯರ ಬದುಕು ಶಬ್ದಪ್ರಮಾಣದ (ವೇದಾಗಮಗಳು) ಮೇಲೆ ನಿಲ್ಲದೆ ಅನುಭಾವ ಪ್ರಮಾಣದಲ್ಲಿ ಪ್ರವರ್ತಿತವಾಗಿವೆ ಎಂದು ಹೇಳುತ್ತಾನೆ. ಸಂಸ್ಕೃತ ಕಾವ್ಯ ಮೀಮಾಂಸೆಯಿಂದ ಭಿನ್ನವಾದ ಜನಸಾಮಾನ್ಯರ ಬದುಕಿನ ಪರಿಪ್ರೇಕ್ಷದಲ್ಲಿ ಅರಳಿದ ಕನ್ನಡ ಕಾವ್ಯ ಮೀಮಾಂಸೆಯೊಂದನ್ನು ಅಲ್ಲಮ ಕಟೆದು ನಿಲ್ಲಿಸುತ್ತಾನೆ. ಆದರೆ ಅದು ಅವೈದಿಕ ಚಿಂತನಾ ಪ್ರಸ್ಥಾನವಾದ್ದರಿಂದ ಹೆಚ್ಚು ಪ್ರಚಲಿತವಾಗಲಿಲ್ಲ.

ಪ್ರಭುವಿಗೆ ಭಾಷೆ ಎಂಬುದು ಪ್ರಾಣಘಾತಕವಾಗಿ ಕಂಡಿದ್ದರೆ ಅದು ಅಕಾರಣವೇನಲ್ಲ. ಮನುಷ್ಯರ ಅಪ್ರತಿಮ ಆವಿಷ್ಕಾರಗಳಲ್ಲಿ ಭಾಷೆಯೂ ಒಂದು. ಭಾಷೆಯ ಆವಿಷ್ಕಾರವು ಮನುಷ್ಯರ ಬಹು ದೊಡ್ಡ ಉಪಲಬ್ಧಿ ಎಂಬುದೇನೋ ಸರಿ. ಆದರೆ ಈ ಭಾಷೆಯೆಂಬುದು ಕೂಡ ನಿರಪೇಕ್ಷಿತವಾದುದೇನೂ ಅಲ್ಲ. ಅದು ತನ್ನಿಂದ ತಾನೇ ಉದ್ಭವಿಸಿದ ಸ್ವಯಂಭೂ ಸಂಗತಿಯೇನಲ್ಲ. ಅಭಿವ್ಯಕ್ತಿಯೆಂಬುದು ಜೈವಿಕ ಸಂಗತಿಯಾದರೆ ಅದಕ್ಕೆ ವಾಹಕವಾಗುವ ಶಾಬ್ದಿಕ ರಚನೆಗಳು ಸಾಮಾಜಿಕ ಸಂಗತಿಯಾಗಿವೆ. ಅದನ್ನು ಸೃಜಿಸಿದ ಮನುಷ್ಯರ ಎಲ್ಲ ಬಗೆಯ ಕಳಂಕಗಳು ಅದಕ್ಕೆ ಅಂಟಿಕೊಂಡಿರುತ್ತವೆ. ಮನುಷ್ಯರ ಮಿತಿಗಳು ಭಾಷೆಯ ಮಿತಿಗಳು ಆಗಿರುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂದು ನಾವು ಎದುರುಗೊಳ್ಳುತ್ತಿರುವ ಭಾಷೆ ಲಿಂಗ ನಿರಪೇಕ್ಷಿತವಾಗಿಲ್ಲ. ಅದು ನಮ್ಮ ಸಮಾಜದ ಯಾಜಮಾನ್ಯ ಊಳಿಗ ವ್ಯವಸ್ಥೆಗೆ ಪೂರಕವಾಗಿದೆಯಷ್ಟೇ. ನಾವು ಇಂದು ಬಳಸುತ್ತಿರುವ ಭಾಷೆಗೆ ಜಾತಿ, ಲಿಂಗ, ವರ್ಗ, ವರ್ಣ ಇತ್ಯಾದಿ ಅನೇಕ ತಾರತಮ್ಯಗಳು ಅಂಟಿಕೊಂಡಿವೆ. ಆಧುನಿಕ ಭಾಷಾ ವಿಜ್ಞಾನಿಗಳು ಭಾಷೆಯನ್ನು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಅಧ್ಯಯನಕ್ಕೊಳಗುಮಾಡಿ ಅದ್ಹೇಗೆ ಅಧಿಕಾರ ರಾಜಕಾರಣದ ಉಪಕರಣವಾಗಿ ಅಭಿವೃದ್ಧಿಗೊಂಡು ಬಳಕೆಯಾಗುತ್ತ ಬರುತ್ತಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಆದ್ದರಿಂದಲೆ ಪ್ರಭುವಿನಂಥವರಿಗೆ ಭಾಷೆಯೂ ಅಪಾಯಕಾರಿ ಎನಿಸಿದೆ. ಭಾಷೆ ಎಂಬುದು ಅಮೂರ್ತವೆನಿಸಿದರೂ ಭಾಷೆ ಬಳಸುವ ಸಮುದಾಯಗಳು ಅಮೂರ್ತವಲ್ಲ. ತಟಸ್ಥವಂತೂ ಮೊದಲೆ ಅಲ್ಲ. ಹೀಗಾಗಿ ಕಟ್ಟಿದ ಭಾಷೆ ಏನನ್ನು ಪ್ರತಿನಿಧಿಸುತ್ತಿದೆ ಎಂಬುದು ಮುಖ್ಯ.

111 5

ಲಿಂಗ ತಾರತಮ್ಯದ ಅಂಶಗಳು ಮೊದಲು ಢಾಳವಾಗಿ ಕಾಣಿಸಿಕೊಂಡದ್ದೆ ಭಾಷಾ ವಲಯದಲ್ಲಿ ಎಂದು ಕಾಣಿಸುತ್ತದೆ. ಶಾಬ್ದಿಕ ರಚನೆಗಳಲ್ಲಿ ಹೆಣ್ಣನ್ನು ಅಧೀನವಾಗಿಸಿದ ಸಂಕಥನಗಳೇ ಉದ್ದಕ್ಕೂ ಪಸರಿಸಿವೆ. ಭಾಷೆಯಲ್ಲಿ ಗಂಡು ಭಾಷೆ, ಹೆಣ್ಣು ಭಾಷೆ ಎಂಬ ವರ್ಗೀಕರಣ ಇರುತ್ತದೆಯೇ? ಹಾಗಿಲ್ಲ ಎಂದು ಹೇಳಿದರೆ ಅದು ಬೀಸು ಹೇಳಿಕೆಯಾದೀತು. ಕನ್ನಡದ ಪ್ರಮುಖ ಭಾಷಾ ತಜ್ಞರಲ್ಲಿ ಒಬ್ಬರಾದ ಕೆ ವಿ ನಾರಾಯಣ ಅವರು, “ಭಾಷಾ ಬಳಕೆಯಲ್ಲಿ ಹೆಂಗಸು ಒಂದು ತರತಮ ಭಾವದ ಸ್ಥಿತಿಗೆ ಒಳಗಾಗಿದ್ದಾಳೆ. ಅದಕ್ಕೆ ಆಕೆಯ ಪ್ರತಿಕ್ರಿಯೆ ಹೇಗಿರಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿ ನಮ್ಮೆದುರು ನಿಂತಿದೆ’’ ಎನ್ನುತ್ತಾರೆ(ಹೆಣ್ಣು ಮತ್ತು ಭಾಷೆ-ಪುಟ- 12). ಹೌದು, ನಾವು ಬಳಸುತ್ತಿರುವ ಭಾಷೆಯು ಪುರುಷಪ್ರಧಾನ ನಂಬಿಕೆ-ನೆಲೆಗಳನ್ನು ಪೋಷಿಸಿಕೊಂಡು ಬರುತ್ತಿದೆ. ಇಲ್ಲಿ ಸ್ಥಿತವಾಗಿರುವ ಶಿಷ್ಟ ಭಾಷೆಯಲ್ಲಿ ಪುಲ್ಲಿಂಗವಾಚಕ ಪ್ರಯೋಗಗಳೇ ಇವೆ. ಅದರಲ್ಲಿ ಮಹಿಳಾ ಸಂವೇದನೆಗಳನ್ನು ಅನುವುಗೊಳಿಸಬೇಕೆಂದರೆ ಅದು ಪರಿಶಿಷ್ಟವಾಗಿ ಸೇರಿಸಬೇಕು. ಸಾರ್ವತ್ರಿಕ ವಿಷಯಗಳನ್ನು ತಿಳಿಸುವಾಗ ಉದಾಹರಣೆಗೆ `ಮಾನವ ತಾನು ನಡೆದು ಬಂದ ದಾರಿಯ ನೆನಪು ಮಾಡಿಕೊಳ್ಳುತ್ತಾನೆ. ಭ್ರಮೆಯೆ ಬದುಕಾದರೆ ಮನುಷ್ಯ ವಿವೇಕ ಕಳೆದುಕೊಳ್ಳುತ್ತಾನೆ ಅಥವಾ ಮನುಷ್ಯ ಪ್ರಾಣಿಗೆ ಬುದ್ಧಿ ಮೊಳೆತಾಗಿನಿಂದ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದ್ದಾನೆ’ ಇತ್ಯಾದಿ ವಿವರಗಳನ್ನು ನೀಡುವಾಗ ಮನುಷ್ಯ, ಮಾನವ ಎಂಬ ಪದಗಳು ಹೆಣ್ಣು, ಗಂಡು ಒಟ್ಟಾರೆ ಮನುಕುಲವನ್ನು ಪ್ರತಿನಿಧಿಸುತ್ತಿದ್ದರೂ ಕ್ರಿಯಾಪದಗಳು ಮಾತ್ರ ಪುಲ್ಲಿಂಗ ವಾಚಕವಾಗಿಯೇ ಬಳಸಲ್ಪಡುತ್ತವೆ. ಇಲ್ಲವೆ ಅವುಗಳನ್ನು ಬಹುವಚನ ವಾಚಕವಾಗಿ ಅಥವಾ ನಪುಂಸಕಲಿಂಗವಾಗಿ ಬಳಸುತ್ತೇವೆ. ಇಂದಿನ ತಂತ್ರಜ್ಞಾನ ಲೋಕದಲ್ಲಿ ಮಾನವ ಗಣನೀಯ ಸಾಧನೆ ಮಾಡಿದ್ದಾಳೆ ಎಂದು ಬರೆಯುವುದಿಲ್ಲ. ಮಾಡಿದ್ದಾನೆ, ಮಾಡಿದ್ದಾರೆ, ಮಾಡಿದೆ ಎಂದೇ ಬಳಸುತ್ತೇವೆ. ಇದು ಭಾಷೆಯ ಸಮಸ್ಯೆ ಮಾತ್ರವಲ್ಲ, ನಾವು ನಿರ್ಮಿಸಿಕೊಂಡು ಬಂದಿರುವ ಸಾಮಾಜಿಕ ವ್ಯವಸ್ಥೆ ಮತ್ತು ತನ್ಮೂಲಕ ರೂಪಣೆಗೊಂಡಿರುವ ಸಾಂಸ್ಕೃತಿಕ ವಿನ್ಯಾಸಗಳ ಸಮಸ್ಯೆ.

ಇದನ್ನೂ ಓದಿರಿ: ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ

ಧರ್ಮ, ಕಲೆ, ಸಂಸ್ಕೃತಿ ಹೀಗೆ ಎಲ್ಲ ಅಂಶಗಳಲ್ಲಿ ಸ್ತ್ರೀಯರನ್ನು ಅಪಮಾನಿಸುವ ಸಂಗತಿಗಳು ಇಡುಕಿರಿದಿವೆ. ನಿತ್ಯ ಬಳಸುವ ಗಾದೆಮಾತುಗಳು, ಸಿಟ್ಟು ಬಂದಾಗ ಬಳಸುವ ಬೈಗುಳ, ಜಾಣ್ಣುಡಿ, ನಾಣ್ನುಡಿ, ಪಡೆಮಾತು ಹೀಗೆ ಎಲ್ಲೆಂದರಲ್ಲಿ ಸ್ತ್ರೀವಿರೋಧಿ ಭಾವ ಮಡುಗಟ್ಟಿದ್ದನ್ನು ಕಾಣುತ್ತೇವೆ. ತೀರ ಪ್ರಗತಿಪರರು ಎನಿಸಿಕೊಂಡವರು ಹಾರಿಸುವ ನಗೆ ಚಟಾಕಿಗಳಲ್ಲಿಯೂ ಸ್ತ್ರೀ ತುಚ್ಛೀಕರಣದ ಭಾವ ನವುರಾಗಿ ಬೆರೆತಿರುತ್ತದೆ. ಬೈಗುಳಗಳಂತೂ ನಮ್ಮ ಭವ್ಯ ಸಂಸ್ಕೃತಿಯ ದಿವ್ಯಜ್ಯೋತಿಗಳೇ. ಅವೆಲ್ಲವೂ ಸ್ತ್ರೀವಾಚಕ ಇಲ್ಲವೇ ಪ್ರಾಣಿವಾಚಕ ಮಾತ್ರವೇ ಇವೆ. ಇದಕ್ಕೆ ಕ್ವಚಿತ್ ಅಪವಾದಗಳಿರಬಹುದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ವೃತ್ತಿ ವಾಚಕ ಪದಗಳಲ್ಲಿ ಸ್ತ್ರೀಲಿಂಗವಾಚಿಗಳು ಇಲ್ಲ. ಉದಾಹರಣೆಗೆ ಕುಂಬಾರ, ಕಂಬಾರ, ಅಗಸ, ಮಡಿವಾಳ, ಅಕ್ಕಸಾಲಿಗ ಇತ್ಯಾದಿ ಪದಗಳು ಮಾತ್ರ ಇವೆ. ಇವುಗಳಿಗೆ ನಾವು ವಿಶೇಷ ಪ್ರತ್ಯಯಗಳನ್ನು ಹಚ್ಚಿಕೊಂಡು ಕುಂಬಾರಕಿ, ಕಂಬಾರಕಿ, ಅಗಸಗಿತ್ತಿ, ಮಡಿವಾಳತಿ ಹೀಗೆ ಸಿದ್ಧಪಡಿಸಿಕೊಳ್ಳಬೇಕು. ಶಬ್ದಕೋಶಗಳಲ್ಲಿ ಪದಗಳು ಸಿಗಲಾರವು. ಮೇಲಿನ ಎಲ್ಲ ಕೆಲಸಗಳಲ್ಲಿ ಮಹಿಳೆಯರ ಶ್ರಮವಿದೆ. ಆದರೆ ಅದರ ಅಧಿಕೃತ ಪಾಲುದಾರಿಕೆ ಇಲ್ಲ. ಆರ್ಥಿಕ ಆದಾಯ ಬರುವ ಎಲ್ಲ ವೃತಿಗಳಲ್ಲಿ ಸ್ತ್ರೀವಾಚಿಗಳಿಲ್ಲ. ಕಾರಣ ಅವುಗಳ ಆರ್ಥಿಕ ಲಾಭದಲ್ಲಿ ಅವಳ ಪಾಲು ಇಲ್ಲ. ಯಾವ ಕೆಲಸಕ್ಕೆ ಆರ್ಥಿಕ ಮೌಲ್ಯ ಇರುವುದಿಲ್ಲವೋ ಅವುಗಳಿಗೆ ಭಾಷಿಕ ನೆಲೆಯಲ್ಲಿ ಅಸ್ತಿತ್ವ ಇಲ್ಲ. ದುರಂತವೆಂದರೆ ಮನುಷ್ಯರು ಮಾಡಬಹುದಾದ ಎಲ್ಲ ಶ್ರಮಗಳನ್ನು ಮಹಿಳೆಯರು ಮಾಡಬಲ್ಲರು; ಮಾಡಿದ್ದಾರೆ. ಆದರೆ ಪುರುಷಪ್ರಧಾನ ಸಮಾಜವು ಕೆಲವು ಮುಖ್ಯ ಕೆಲಸಗಳು ಅಂದರೆ ಆರ್ಥಿಕ ಮೌಲ್ಯವಿರುವ ಕೆಲಸಗಳು ಹಾಗೂ ಗೌರವ ತರುವ ಕೆಲಸಗಳು ಇದ್ದಲ್ಲಿ ಅಂಥವುಗಳನ್ನು ಮಹಿಳೆಯರಿಂದ ದೂರವಿರಿಸಿದೆ.

ಹೆಚ್ಚುತ್ತಿರುವ ಲಿಂಗತ್ವ ತುಚ್ಛೀಕರಣ ಭಾಷಾ ಪ್ರಯೋಗ

ಚರಿತ್ರೆಯಲ್ಲಿ ಸ್ತ್ರೀ ತುಚ್ಛೀಕರಣ ಭಾಷೆಯು ಪ್ರಶ್ನಾತೀತವಾಗಿ ಬಳಕೆಯಲ್ಲಿತ್ತು ಎಂಬುದಕ್ಕೆ ಹೆಚ್ಚು ಪುರಾವೆಗಳು ನೀಡಬೇಕಿಲ್ಲ. ಆದರೆ ಆಧುನಿಕ ಕಾಲಘಟ್ಟವನ್ನು ದಾಟಿ ಆಧುನಿಕೋತ್ತರ ಯುಗಮಾನಕ್ಕೆ ಬಂದು ನಿಂತಿರುವ ವರ್ತಮಾನದಲ್ಲಿ ಲಿಂಗತ್ವ ತುಚ್ಛೀಕರಣವು ಹಿಂದೆಂದಿಗಿಂತಲೂ ಹೆಚ್ಚು ಅಬ್ಬರದಲ್ಲಿ ಬಳಕೆಯಾಗುತ್ತಿರುವುದನ್ನು ಕಂಡು ಗಾಬರಿಯಾಗದೆ ಇರದು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಮ್ಮ ಬದುಕಿನಲ್ಲಿ ಹಾಗೂ ಅದರ ವಾಹಕವಾಗಿರುವ ಭಾಷೆಯಲ್ಲಿ ಸಂಭವಿಸಿದ ಪಲ್ಲಟಗಳು ಹೆಚ್ಚು ಆಘಾತಕಾರಿಯಾಗಿವೆ. ಸ್ವಾತಂತ್ರ್ಯದ ಶುರುವಿನಲ್ಲಿ ಲಿಂಗತಟಸ್ಥ ಭಾಷೆಯನ್ನೇನು ಅಭಿವೃದ್ಧಿ ಪಡಿಸಿಕೊಂಡಿರಲಿಲ್ಲವಾದರೂ ಕನಿಷ್ಠ ಸಾರ್ವಜನಿಕ ಬದುಕಿನಲ್ಲಿಯಾದರೂ ಕೊಂಚ ಶಿಷ್ಟಾಚಾರವಿತ್ತು. ಆದರೆ ಕಾಲಕಳೆದಂತೆ ಅದರಲ್ಲಿಯೂ ವಿಶೇಷವಾಗಿ ಜಾಗತೀಕರಣ, ಖಾಸಗೀಕರಣಗಳು ಎಲ್ಲೆಲ್ಲೂ ಆವರಿಸಿಕೊಂಡು ಬದುಕೆಂಬ ಬದುಕು ಗ್ರಾಹಕರ ಸರಕಾಗಿ ಮಾರ್ಪಾಟಾಗಿರುವ ಈ ಅವಧಿಯಲ್ಲಿ ಭಾಷೆ ಹಿಂದೆಂದೂ ಕಂಡು ಕೇಳರಿಯದಷ್ಟು ಪಾತಾಳಕ್ಕೆ ಕುಸಿದಿರುವುದನ್ನು ಕಾಣುತ್ತಿದ್ದೇವೆ. ಅದಕ್ಕೆ ಮೊದಲ ಬಲಿಯಾದವಳು ಮಹಿಳೆಯೇ. ನಿದ್ದೆಗೆಡಿಸುವ ಸಂಗತಿ ಎಂದರೆ ಮಹಿಳೆಯರ ಬಗೆಗೆ ಬಳಸುತ್ತಿರುವ ಭಾಷೆ.

ರಾಜಕೀಯದಲ್ಲಿ ಸ್ತ್ರೀಯರನ್ನು ಕುರಿತು ಬಳಸಲಾಗುತ್ತಿರುವ ಭಾಷೆಯಂತೂ ಕುಸಿಯುತ್ತಿರುವ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಮೊದಲನೆಯದಾಗಿ ನಾವು ರಾಜಕೀಯವಾಗಿ ಲಿಂಗ ತಟಸ್ಥ ಭಾಷೆಯನ್ನು ಅಭಿವೃದ್ಧಿಪಡಿಸಿಕೊಂಡೇ ಇಲ್ಲ. ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲ, ಸಭಾಪತಿ, ಉಪಸಭಾಪತಿ, ಕುಲಪತಿ ಇತ್ಯಾದಿ ಶಬ್ದಗಳು ಪುರುಷರನ್ನು ಗಮನದಲ್ಲಿಟ್ಟುಕೊಂಡು ಟಂಕಿಸಿದವುಗಳೇ ಆಗಿವೆ. ಮಹಿಳೆಯೊಬ್ಬಳು ರಾಷ್ಟ್ರಾಧ್ಯಕ್ಷರ ಹುದ್ದೆಯನ್ನು ಅಲಂಕರಿಸಿದಾಗ ಅವಳನ್ನು ರಾಷ್ಟ್ರಪತಿ ಎಂದು ಸಂಬೋಧಿಸಬೇಕೆ? ಅದರಂತೆ ರಾಜ್ಯಪಾಲೆ ಎನ್ನಬೇಕೆ? ಇತ್ಯಾದಿ ಗೊಂದಲಗಳಲ್ಲದೆ ರಾಷ್ಟ್ರಪತಿಯು ಗಂಡಸಾಗಿದ್ದಾಗ ಅವನ ಹೆಂಡತಿಯನ್ನು ಸಂಬೋಧಿಸಲು ಶ್ರೀಮತಿ ರಾಷ್ಟ್ರಪತಿ ಎಂದೋ ಮಿಸೆಸ್ ಪ್ರೆಸಿಡೆಂಟ್ ಎಂದೋ ಕರೆದರೆ ಸುಲಭವಾಗಿ ಅರ್ಥವಾಗುತ್ತದೆ. ಅಥವಾ ಅರ್ಥಕ್ಕೆ ಬಾಧೆ ಬರದು. ಆದರೆ ಒಂದು ವೇಳೆ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಿದ್ದಾಗ ಅವಳ ಗಂಡನನ್ನು ಸಂಬೋಧಿಸಲು ಶ್ರೀಯುತ ರಾಷ್ಟ್ರಪತಿ ಅಥವಾ ಮಿಸ್ಟರ್ ಪ್ರೆಸಿಡೆಂಟ್ ಎನ್ನಲಾಗದು. ಹಾಗೇ ಹೇಳಿದರೆ ಅಪಾರ್ಥವಾಗುತ್ತದೆ.

ಅವಿವಾಹಿತೆಯನ್ನು ಸಂಬೋಧಿಸಲು ಕುಮಾರಿ ಬಳಸಬೇಕಂತೆ. ಕುಮಾರಿ ಎನ್ನುವುದನ್ನು ಸಾಮಾನ್ಯವಾಗಿ ಕಿರಿಯ ವಯಸ್ಸಿನ ಹೆಣ್ಣುಮಕ್ಕಳಿಗೆ ಹೇಳುವುದುಂಟು. ಆದರೆ ಮರಣಿಸುವವರೆಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾಳನ್ನು ಕುಮಾರಿ ಎಂದೇ ಸಂಬೋಧಿಸುವ ಚಾಳಿ ಇತ್ತು. ಅದರಂತೆ ಕುಮಾರಿ ಮಮತಾ ಬ್ಯಾನರ್ಜಿ, ಕುಮಾರಿ ಮಾಯಾವತಿ ಎಂದೇ ಉದ್ದೇಶಪೂರ್ವಕವಾಗಿ ಬಳಸಲಾಗುತ್ತದೆ. ಅದರಂತೆ ಅವಿವಾಹಿತರಾಗಿದ್ದ ಅಟಲಬಿಹಾರಿ ವಾಜಪೇಯಿಯನ್ನು ಯಾವತ್ತೂ ಮೀಡಿಯಾಗಳು ಕುಮಾರ ಅಟಲಬಿಹಾರಿ ವಾಜಪೇಯಿ ಎಂದು ಹೇಳಲಿಲ್ಲ. ಇಂಗ್ಲಿಷಿನಲ್ಲಿಯೂ ಅವಿವಾಹಿತ ಮಹಿಳೆಯನ್ನು ಮಿಸ್ ಎಂದು ಸಂಬೋಧಿಸಿದರೆ ವಿವಾಹಿತಳನ್ನು ಮಿಸೆಸ್ ಎನ್ನಬೇಕು. ಆದರೆ ಅವಿವಾಹಿತ ಪುರುಷನನ್ನು ಸಂಬೋಧಿಸಲು ಯಾವುದೇ ಉಪಾಧಿಗಳಿಲ್ಲ. ಎಲ್ಲ ದೇಶ ಮತ್ತು ಸಂಸ್ಕೃತಿಗಳಲ್ಲಿಯೂ ಸ್ತ್ರೀಯರನ್ನು ಅವರ ವೈವಾಹಿಕ ಸ್ಥಾನಮಾನಗಳ ಮೇಲೆಯೇ ಗುರುತಿಸಲಾಗುತ್ತಿರುವ ಚಾಳಿಯ ಹಿಂದೆ ಸ್ತ್ರೀಗೆ ಸ್ವತಂತ್ರ ಅಸ್ತಿತ್ವ ಇಲ್ಲ ಎಂಬ ನಂಬಿಕೆಯೇ ಗಟ್ಟಿ ಆಳುತ್ತಿದೆ.

vajapeyi
ಅಟಲ್ ಬಿಹಾರಿ ವಾಜಪೇಯಿ

ಇದನ್ನೂ ಓದಿರಿ: ‘ಕರ್ನಾಟಕ, ಕ್ರಿಕೆಟ್ ಮತ್ತು ನಾನು’: ಯೋಗೇಂದ್ರ ಯಾದವ್ ನೆನಪುಗಳು

ಸಾರ್ವಜನಿಕ ವಲಯಗಳಲ್ಲಿ ಬಳಸುವ ಭಾಷೆಯೂ ಅಧೋಗತಿಗೆ ಇಳಿದಿದೆ. ಜಾಹೀರಾತುಗಳಲ್ಲಿ ಬಳಸುವ ಭಾಷೆ ಮತ್ತು ಪರಿಕಲ್ಪನೆ ಎರಡೂ ದೇಹ ವ್ಯಾಪಾರದ ಸರಕೆ ಆಗಿರುತ್ತವೆ. ಟೈರ್, ಕುಕ್ಕರ್, ವಾಷಿಂಗ್ ಮಷೀನ್, ಬ್ಲೇಡ್ ಇತ್ಯಾದಿ ವಸ್ತುಗಳ ಪ್ರಚಾರದಲ್ಲಿ ಹೆಣ್ಣಿನ ಅಂಗಾಂಗಗಳನ್ನು ಸರಕಾಗಿ ಬಳಸುವುದಂತೂ ಇದ್ದೇ ಇದೆ. ಅದರೊಟ್ಟಿಗೆ ಬಳಕೆಯಾಗುತ್ತಿರುವ ಭಾಷೆಯೂ ಅಷ್ಟೇ ಅಸಹ್ಯಕರವಾಗಿ ಇರುತ್ತದೆ. “ಜೋ ಬೀವಿ ಸೇ ಕರತೇ ಪ್ಯಾರ್, ಓ ಕೈಸೆ ಕರತೆ ಪ್ರೆಸ್ಟೀಜ್ ಕುಕ್ಕರ್ ಸೇ ಇನಕಾರ್’’ ಅಂದರೆ ಹೆಂಡತಿಯನ್ನು ಪ್ರೀತಿ ಮಾಡುವವನು ಸದರಿ ಕುಕ್ಕರ್‌ಅನ್ನು ಪ್ರೀತಿಸದೆ ಇರಲಾರ ಎಂಬ ಅರ್ಥ ಬರುವ ಈ ಪದಪುಂಜ ಸ್ತ್ರೀಯರನ್ನು ವಸ್ತುಗಳಿಗೆ ಸಂವಾದಿಯಾಗಿಸುತ್ತದೆ.

ಧಾರ್ಮಿಕ ಲೋಕ ಇದಕ್ಕೆ ಹೊರತಾಗಿ ಉಳಿದಿಲ್ಲ. ಎಲ್ಲ ಮಠ, ಮಂದಿರ, ಆಶ್ರಮಗಳಲ್ಲಿ ಮುತ್ತೈದೆಯರ ವೈಭವೀಕರಣ. ದೇವರ ಹೆಸರಿನಲ್ಲಿ ಡ್ರೆಸ್ ಕೋಡ್. ನವರಾತ್ರಿಗಳಲ್ಲಿ ಒಂಬತ್ತು ಬಣ್ಣದ ಪೋಷಾಕು. ಅವುಗಳೊಟ್ಟಿಗೆ ಮುತ್ತೈದೆಯರ ಉಡಿ ತುಂಬುವುದು. ಅಂದರೆ ವಿಧವೆಯರನ್ನು ಅಪಮಾನಿಸುವುದು. ನಮ್ಮ ಎಲ್ಲ ಧಾರ್ಮಿಕ ಮತ್ತು ಸಾಮಾಜಿಕ ಆವರಣಗಳಲ್ಲಿ ಮಹಿಳೆಯರನ್ನು ಒಂದಿಲ್ಲೊಂದು ಬಗೆಯಲಿ ತುಚ್ಛೀಕರಿಸಲಾಗುತ್ತಿದೆ. ವಿಧವೆಯರಿಗೆ ಇಲ್ಲೆಲ್ಲೂ ಅವಕಾಶವಿಲ್ಲ. ಅದರಂತೆ ಅವಿವಾಹಿತ ಮಹಿಳೆಯರಿಗೂ ಸ್ಥಾನಮಾನಗಳಿಲ್ಲ. ಇವೆಲ್ಲವೂ ಅನೂಚಾನವಾಗಿ ನಡೆದುಕೊಂಡು ಬಂದವುಗಳೇ ಆಗಿವೆ. ದುರಂತವೆಂದರೆ ಈ ಎಲ್ಲ ಬಗೆಯ ಅಪಸವ್ಯಗಳಿಂದ ಹೊರಬೇಕಾದ ಸಮಾಜ ಹೊರಬರುವುದು ಒತ್ತಟ್ಟಿಗಿರಲಿ ಅಂಥವುಗಳನ್ನು ವಿಜೃಂಭಿಸುತ್ತಿರುವ ವಿಚಿತ್ರ ಸನ್ನಿವೇಶದಲ್ಲಿ ಇದ್ದೇವೆ.

ನಮ್ಮ ಸಿನಿಮಾ, ಧಾರಾವಾಹಿಗಳ ಭಾಷೆಯಂತೂ ಸ್ತ್ರೀ ತುಚ್ಛೀಕರಣದ ಪರಮಾವಧಿಯಲ್ಲಿದೆ. ಟಿ.ವಿ ಮಾಧ್ಯಮಗಳಲ್ಲಿ ಬಳಸುವ ಭಾಷೆಯು ಅತ್ಯಂತ ಹೇಯ ಮತ್ತು ನಿರ್ಲಜ್ಜತನದಿಂದ ಕೂಡಿದೆ. ಅತ್ಯಾಚಾರಗಳಿಗೆ ಸಂಬಂಧಪಟ್ಟ ಚರ್ಚೆಗಳು ನಡೆಯುವುದನ್ನು ಗಮನಿಸಬಹುದು. ದೇಶದಲ್ಲಿ ನಿರ್ಭಯಾ ಕಾಂಡ ನಡೆದಾಗ ನಮ್ಮ ಧಾರ್ಮಿಕ ಮುಖಂಡರು ಹೇಳಿದ್ದೇನೆಂದರೆ ಆ ವಿದ್ಯಾರ್ಥಿನಿಯು ಅತ್ಯಾಚಾರಿಗಳಿಗೆ ಅಣ್ಣಯ್ಯ, ತಮ್ಮಯ್ಯ ಎಂದು ಕರೆಯಬೇಕಿತ್ತಂತೆ. ಹಾಗೇ ಕರೆದರೆ ಅವರು ಪ್ರಾಯಶಃ ರೇಪ್ ಮಾಡುತ್ತಿರಲಿಲ್ಲವಂತೆ. ಇನ್ನೊಬ್ಬ ಮಹಾಶಯರು `ಇವೆಲ್ಲ ಪ್ರಕರಣಗಳು ಇಂಡಿಯಾ ಎಂಬ ನಗರಗಳಲ್ಲಿ ನಡೆಯುತ್ತವೆ. ಆದರೆ ಭಾರತವೆಂಬ ಹಳ್ಳಿಗಳಲ್ಲಿ ನಡೆಯುವುದಿಲ್ಲ’ ಎಂದು ಫರಮಾನು ಹೊರಡಿಸಿದ್ದರು. ಈ ದೇಶದಲ್ಲಿ ಲೈಂಗಿಕ ಅತ್ಯಾಚಾರಗಳು ಹಡೆದಪ್ಪ, ಒಡಹುಟ್ಟಿದ ಅಣ್ಣ-ತಮ್ಮಂದಿರು, ವಿದ್ಯೆ ಕಲಿಸುವ ಗುರುಗಳಾದಿಯಾಗಿ ಎಲ್ಲರಿಂದಲೂ ನಡೆಯುತ್ತಿವೆ. ನಗರಗಳಿಗಿಂತ ಹಳ್ಳಿಗಳಲ್ಲಿ ಮತ್ತು ಎಲ್ಲ ವಯೋಮಾನದ, ಎಲ್ಲ ಜನಜಾತಿಗಳ, ಎಲ್ಲ ಕ್ಷೇತ್ರಗಳಲ್ಲಿ ನಡೆಯುತ್ತವೆ ಎಂಬ ನಗ್ನಸತ್ಯ ಗೊತ್ತಿದ್ದೂ ಸಮಾಜ ಜಾಣ ಕುರುಡುತನ ತೋರುತ್ತದೆ. ಅತ್ಯಾಚಾರಗಳಿಗೆ ನಾವು ಬಳಸುತ್ತಿರುವ ಭಾಷೆಯೂ ಒಂದು ಕಾರಣವಾಗುತ್ತಿದೆ ಎಂಬುದನ್ನು ಮತ್ತೆಮತ್ತೆ ತಿಳಿಸಿ ಹೇಳಬೇಕಿದೆ. ಅಂದರೆ ಭಾಷೆಯಲ್ಲಿರುವ ಸ್ತ್ರೀ ತುಚ್ಛೀಕರಣವೂ ಗಾದೆಮಾತು, ಬೈಗುಳ, ನುಡಿಗಟ್ಟು, ವ್ಯಂಗ್ಯ, ವಿಕಟ ಹಾಸ್ಯ ಇತ್ಯಾದಿಗಳ ಮೂಲಕ ಪ್ರವರ್ತಿತವಾಗುತ್ತಲೇ ಇರುತ್ತದೆ. ಇಂಥ ಮಾತುಗಳನ್ನೇ ಕೇಳಿ ಬೆಳೆಯುವ ಮಕ್ಕಳು ತಮಗರಿವಿಲ್ಲದೆ ಸ್ತ್ರೀ ವಿರೋಧಿ ಭಾವನೆಯನ್ನು ರೂಢಿಸಿಕೊಳ್ಳುತ್ತವೆ. ಅತ್ಯಾಚಾರಗಳು ಮೊದಲು ತಲೆಯೊಳಗೆ ನಡೆಯುತ್ತವೆ. ಆನಂತರ ಅವು ಭೂಮಿಯಲ್ಲಿ ಸಾಕಾರಗೊಳ್ಳುತ್ತವೆ. ಆದ್ದರಿಂದ ನಾವು ಬಳಸುವ ಭಾಷೆಯು ಲಿಂಗ ಸಂವೇದನಾಶೀಲವುಳ್ಳದ್ದಾಗಿರಬೇಕು.

(ಮುಂದುವರಿಯುತ್ತದೆ..)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

baali madam
ಡಾ. ಮೀನಾಕ್ಷಿ ಬಾಳಿ
+ posts

ಪ್ರಾಧ್ಯಾಪಕರಾದ ಮೀನಾಕ್ಷಿ ಬಾಳಿಯವರು ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ ಹಾಗೂ ಚಿಂತಕರೆಂದೇ ಖ್ಯಾತರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರು. ‘ಮಡಿವಾಳಪ್ಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ದಾರೆ. ‘ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. ಇತ್ತೀಚೆಗೆ ನಿಜ ವಚನ ದರ್ಶನ ಪುಸ್ತಕ ರಚಿಸಿದ್ದಾರೆ. ಇವರಿಗೆ ಕದಳಿಶ್ರೀ ಪ್ರಶಸ್ತಿ ದೊರಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
ಪ್ರಾಧ್ಯಾಪಕರಾದ ಮೀನಾಕ್ಷಿ ಬಾಳಿಯವರು ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ ಹಾಗೂ ಚಿಂತಕರೆಂದೇ ಖ್ಯಾತರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರು. ‘ಮಡಿವಾಳಪ್ಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ದಾರೆ. ‘ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. ಇತ್ತೀಚೆಗೆ ನಿಜ ವಚನ ದರ್ಶನ ಪುಸ್ತಕ ರಚಿಸಿದ್ದಾರೆ. ಇವರಿಗೆ ಕದಳಿಶ್ರೀ ಪ್ರಶಸ್ತಿ ದೊರಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...