(ಮುಂದುವರಿದು ಭಾಗ…) ಕಳೆದ ಎಪ್ಪತ್ತೈದು ವರ್ಷಗಳು ಅಂದರೆ ಹತ್ತಿರ ಹತ್ತಿರ ಮುಕ್ಕಾಲು ಶತಮಾನದ ಅವಧಿಯಲ್ಲಿ ನಾವೆಂಥ ಭಾಷೆಯನ್ನು ಬಳಸಿ ಬೆಳೆಸುತ್ತಿದ್ದೇವೆ ಎಂಬುದನ್ನು ಅವಲೋಕಿಸಿದರೆ ಬಹುದೊಡ್ಡ ಆಘಾತವಾಗುತ್ತದೆ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ ನಮ್ಮ ರಾಜಕಾರಣ, ಆಡಳಿತ, ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯಲ್ಲಿ ಬಳಕೆಯಾಗುತ್ತಿರುವ ಭಾಷೆಯ ಕೆಲವು ನಮೂನೆ ನೋಡಿದರೆ ಸಾಕು, ಭಾಷಿಕವಾಗಿ ನಾವೆಷ್ಟು ಅಧಮರಾಗಿದ್ದೇವೆ ಎಂಬುದು ಅರಿವಿಗೆ ಬರುತ್ತದೆ. ದಿವಂಗತ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ವಿರೋಧಿ ದಳಗಳು ಮತ್ತು ಕರ್ಮಠ ನಾಗರಿಕರು ಅವರ ವೈಧವ್ಯವನ್ನು ಕುರಿತು ಆಡಿದ ಮಾತುಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಇಲ್ಲಿ ನಮೂದಿಸಲು ಸಾಧ್ಯವಿಲ್ಲದ ಶಬ್ದಗಳಲ್ಲಿ ಅವರನ್ನು ಹಳಿದಿರುವುದನ್ನು ಕೇಳಿದ್ದೇವೆ (ನಮ್ಮ ಭಾಗದ ಪುರುಷರಂತೂ ಅದನ್ನು ರಂಡಿಮುಂಡಿ ರಾಜಕಾರಣ ಎಂದೆ ಬಯ್ಯುವದಿತ್ತು). ಅದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರೊಬ್ಬರು ಸಂಸತ್ತಿನಲ್ಲಿ `ಪ್ರಧಾನಿ ಇಂದಿರಾ ಒಬ್ಬರೇ ಗಂಡಸರು. ಉಳಿದವರೆಲ್ಲ ಹೆಂಗಸರು’ ಎಂದು ಹೇಳಿದ್ದು ಪತ್ರಿಕೆಯಲ್ಲಿ ಸುದ್ದಿಯಾಗಿ ಮಹಿಳಾ ಸಂಘಟನೆಗಳು ಅದನ್ನು ಉಗ್ರವಾಗಿ ಖಂಡಿಸಿದ್ದೂ ಇದೆ. ಮಾನ್ಯ ಸಂಸದ, ಶಾಸಕರುಗಳು ಎದುರಾಳಿಯನ್ನು ಟೀಕಿಸುವಾಗ ನಾನೇನು ಬಳೆ ತೊಟ್ಟಿಲ್ಲ ಎಂದು ಹೇಳುವುದಂತೂ ಮಾಮೂಲಿ. ಹೆಣ್ಣು ಮಕ್ಕಳ ಬಳೆ, ಕುಂಕುಮಗಳಷ್ಟು ಅಪಸವ್ಯಗಳಿಗೆ ಒಳಗಾದ ವಸ್ತುಗಳು ಇನ್ನೊಂದು ಇರಲಿಕ್ಕಿಲ್ಲ.
ಶಾಸನ ಸಭೆ ಮತ್ತು ಸಂಸತ್ತಿನಲ್ಲಿ 33% ಮಹಿಳಾ ಮೀಸಲಾತಿ ನೀಡಬೇಕೆಂದು ಮಸೂದೆ ಮಂಡಿಸಿದಾಗ ನಮ್ಮ ಘನತೆವೆತ್ತ ಸಂಸದರು ಬಳಸಿದ ಭಾಷೆಯನ್ನು ಪ್ರಜ್ಞಾವಂತರು ಮರೆತಿಲ್ಲ. ಒಬ್ಬರು `ಮಹಿಳೆಯರಿಗೆ 33% ಮೀಸಲಾತಿ ನೀಡಿದರೆ ಸಂಸದ ಭವನದ ಒಳಗೆ ಬ್ಯೂಟಿ ಪಾರ್ಲರ್ ತೆಗೆಯಬೇಕಾಗುತ್ತದೆ’ ಎಂದು ವ್ಯಂಗ್ಯವಾಡಿದರೆ ಇನ್ನೊಬ್ಬರು `ಮನೆಯಲ್ಲಿ ಅಡುಗೆ ಯಾರು ಮಾಡಬೇಕು?’ ಎಂದು ಕೆಣಕಿದರು. ಇನ್ನೊಬ್ಬರು ‘ಮಹಿಳೆಯರು ರಾಜಕೀಯಕ್ಕೆ ಬಂದರೆ ಕುಟುಂಬಗಳೇ ಹಾಳಾಗುತ್ತವೆ’ ಎಂದು ಫರಮಾನು ಹೊರಡಿಸಿದ್ದರು. ಮತ್ತೊಬ್ಬರು 33% ಮಹಿಳಾ ಮೀಸಲಾತಿ ಕಾಯ್ದೆಯಾದರೆ ಶ್ರೀಮಂತ ಮಹಿಳೆಯರಿಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದನ್ನು ಅವರು `ಕೇವಲ ಬಾಬ್‌ಕಟ್ ಮಾಡಿದ ಅಂದರೆ ತುಂಡುಗೂದಲಿನ ಮಹಿಳೆಯರೇ ಸಂಸದ, ಶಾಸನ ಸಭೆಗಳಲ್ಲಿ ತುಂಬುತ್ತಾರೆ’ ಎಂದು ಹಗುರವಾಗಿ ಮಾತಾಡಿದ್ದರು. ಇಂಥ ಮಾತುಗಳಿಗೆ ಪಕ್ಷಭೇದವಿಲ್ಲ. ಪ್ರದೇಶ, ಭಾಷೆ, ಅಂತಸ್ತು ಹೀಗೆ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಬೇ ಧಡಕ್ ಆಗಿ ಬಳಸುತ್ತಾರೆ. ಈ ಹಿಂದೆ ಕೇಂದ್ರದ ಸಂಸದರೊಬ್ಬರು ತಮ್ಮದೇ ಪಕ್ಷದ ಮಹಿಳೆಯೊಬ್ಬಳನ್ನು ಶ್ಲಾಘಿಸುವಾಗ “ಓ ಪ್ರತಿಶತ ಟಂಚ್ ಮಾಲ್ ಹೈ’’ ಎಂದಿದ್ದರು. ಟಂಚ್ ಅಂದರೆ ಭೋಜಪುರಿಯಲ್ಲಿ ಸೆಕ್ಸಿ ಎಂದಾಗುತ್ತದೆ. ಅವಳು ನೂರಕ್ಕೆ ನೂರರಷ್ಟು ಸೆಕ್ಸಿಯಾಗಿದ್ದಾಳೆ ಎಂದೇ ಅರ್ಥ ಬರುವ ರೀತಿಯಲ್ಲಿ ಮಾತಾಡಿದ್ದರು. ಇನ್ನೊಮ್ಮೆ ತಾವು ಹೇಮಾಮಾಲಿನಿಯ ಗಲ್ಲದಂತೆ ನೈಸ್ ಆದ ರಸ್ತೆಗಳನ್ನು ಮಾಡುತ್ತೇನೆ ಎಂದು ಹೇಳಿ ತಾವು ಬಹಳ ದೊಡ್ಡ ಜೋಕ್ ಸೃಷ್ಟಿಸಿದಂತೆ ಬೀಗಿದ್ದರು. ಆಡುವವರಿಗೆ ಇದು ಮಜಾ ಅನಿಸಬಹುದು. ಆದರೆ ಆಡಿಸಿಕೊಳ್ಳುವವರಿಗೆ ಅದೆಷ್ಟು ಮುಜುಗರ ಆಗುತ್ತದೆ ಎಂಬ ಕನಿಷ್ಠ ಪರಿಜ್ಞಾನವಿಲ್ಲದ ರಾಜಕಾರಣಿಗಳು ನಮ್ಮಲ್ಲಿ ವೆಗ್ಗಳವಾಗಿದ್ದಾರೆ.
ರಾಜಕಾರಣದಲ್ಲಿ ಸಾಮಾನ್ಯವಾಗಿ ಮಹಿಳೆಯರ ವಿರುದ್ಧ ನಿಂದನಾತ್ಮಕ ಇಲ್ಲವೆ ಹಿಂಸಾತ್ಮಕ ಮತ್ತು ಅಶ್ಲೀಲಾತ್ಮಕ ಭಾಷೆಯನ್ನೇ ಬಳಸಲಾಗುತ್ತದೆ. ಈ ಹಿಂದೆ ಮಾಯಾವತಿಯನ್ನು ಟೀಕಿಸುವಾಗ ಬಿಜೆಪಿ ನಾಯಕರೊಬ್ಬರು `ಮಾಯಾವತಿಯವರು ಹೆಚ್ಚು ಹಣ ಕೊಡುವವರಿಗೆ ಟಿಕೇಟು ಕೊಡುತ್ತಾರೆ. ಅವರ ವರ್ತನೆಯು ವೇಶ್ಯೆಯರಿಗಿಂತ ಕೀಳು’ ಎಂದು ಜರೆದಿದ್ದರು. ಇದು ಇಡೀ ದೇಶದಲ್ಲಿ ಖಂಡನೆಗೆ ಒಳಗಾಗಿತ್ತು. ಆದರೆ ಅದೇ ಹೊತ್ತಿನಲ್ಲಿ ಬಿಎಸ್‌ಪಿ ವಕ್ತಾರರು ತಾವೇನೂ ಕಡಿಮೆ ಇಲ್ಲ ಎಂಬಂತೆ ಅಷ್ಟೇ ಸೆಕ್ಸಿಸ್ಟ್ ಪರಿಭಾಷೆಯಲ್ಲಿ ಉತ್ತರ ನೀಡಿದ್ದರು. ಇನ್ನೊಮ್ಮೆ ಚುನಾವಣಾ ರ್ಯಾಲಿಯೊಂದರಲ್ಲಿ ಎಸ್‌ಪಿ ನಾಯಕರೊಬ್ಬರು ತಾವು ರ್ಯಾಲಿಗೆ ಬರಲು ತಡವಾದುದಕ್ಕೆ ಮಾಯಾವತಿಯನ್ನು ಗುರಿಯಾಗಿಸಿಕೊಂಡು `ಅಷ್ಟು ಕುರೂಪಿಯಾದ ಹೆಂಗಸೊಬ್ಬಳನ್ನು ಐದು ವರ್ಷ ತಾಳಿಕೊಂಡಿದ್ದೀರಿ, ನಮಗೂ ಒಂದಷ್ಟು ಸಮಯ ಕೊಡಬೇಕಾಗುತ್ತದೆ’ ಎಂದು ಅಸಹ್ಯಕರ ವ್ಯಂಗ್ಯದಲ್ಲಿ ಮಾತಾಡಿದ್ದರು. ಉತ್ತರ ಪ್ರದೇಶದಲ್ಲಿ ಎಸ್‌ಪಿ ಪಕ್ಷವು ಪ್ರಸಿದ್ಧ ಸ್ವಿಮಿಂಗ್ ಪಟು ನಫಿಜಾ ಅಲಿಯನ್ನು ಕಣಕ್ಕಿಳಿಸಿದಾಗ ಬಿಎಸ್‌ಪಿ ಪಕ್ಷದ ವಕ್ತಾರನೊಬ್ಬ, “ಈ ಮುದುಕಿಯನ್ನು ತರುವ ಬದಲು ಐಶ್ವರ್ಯ ರೈಯನ್ನಾದರೂ ಕಣಕ್ಕಿಳಿಸಿದ್ದರೆ ಖುಷಿಪಡುತ್ತಿದ್ದೆ” ಎಂದು ಚಟ ತೀರಿಸಿಕೊಂಡಿದ್ದನು.
ಇದನ್ನೂ ಓದಿರಿ: ಭಾಷೆ ಮತ್ತು ಲಿಂಗತ್ವ; ಹೆಣ್ಣಿಗಿಲ್ಲವೇ ಸ್ವತಂತ್ರ ಅಸ್ತಿತ್ವ? (ಭಾಗ- 1)
ಇನ್ನೊಮ್ಮೆ ಬಿಜೆಪಿ ನಾಯಕಿ ಸ್ಮೃತಿ ಇರಾನಿಯವರನ್ನು ಕುರಿತು ಕಾಂಗ್ರೆಸ್ ಪಕ್ಷದ ಸಂಸದರೊಬ್ಬರು “ಮೊನ್ನೆ ಮೊನ್ನಿನವರೆಗೆ ಟಿವಿಯಲ್ಲಿ ಟೊಂಕ ಕುಣಿಸುತ್ತಿದ್ದಿರಿ. ಈಗ ರಾಜಕೀಯ ವಿಶ್ಲೇಷಕರಾಗಿ ಏನು ಕುಣಿಸಲು ಬಂದಿದ್ದೀರಿ’’ ಎಂದೇ ಕನಿಷ್ಠವಾಗಿ ಕೇಳಿದ್ದರು. ಅತ್ಯಾಚಾರಗಳ ವಿಷಯ ಸಂಸತ್ತು, ಶಾಸನ ಸಭೆಗಳಲ್ಲಿ ಚರ್ಚೆಗೆ ಬಂದಾಗಲಂತೂ ಮಹಿಳೆಯರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತಾಡುವುದು ಮಾಮೂಲಿ. ಈ ಹಿಂದೆ 2013ರಲ್ಲಿ ಕಾಂಗ್ರೆಸ್ ನಾಯಕರೊಬ್ಬರು, “ಸ್ತ್ರೀಯರು ಕಣ್ಣಲ್ಲೆ ಆಹ್ವಾನ ನೀಡುವವರೆಗೂ ಯಾವ ಪುರುಷನೂ ಅವಳ ಬಳಿಗೆ ಹೋಗಲಾರ’’ ಎಂದು ತೀರ ಬೇಜವಾಬ್ದಾರಿಯಿಂದ ಮಾತಾಡಿದ್ದರು. ನಿರ್ಭಯಾ ಪ್ರಕರಣದ ಹೊತ್ತಲ್ಲಿ ರಾಷ್ಟ್ರಪತಿಯ ಪುತ್ರನೂ ಕಾಂಗ್ರೆಸ್ ಸಂಸದನೂ ಆಗಿದ್ದವರೊಬ್ಬರು, `ವಯಸ್ಸಾದ ಮುದುಕಿಯರು ಮುಖಕ್ಕೆ ಬಣ್ಣ ಬಳಿದುಕೊಂಡು ಡಿಸ್ಕೋಥೆಕ್‌ಗೆ ಹೋಗಿ ನಂತರ ಆಕ್ರೋಶ ವ್ಯಕ್ತಪಡಿಸಲು ಇಂಡಿಯಾ ಗೇಟ್‌ಗೆ ಬಂದು ಪ್ರತಿಭಟನೆ ಮಾಡುತ್ತಾರೆ’ ಎಂದಿದ್ದನು. ಚಂಡಿಗಢದಲ್ಲಿ ಎಎಪಿ ಪಕ್ಷದಿಂದ ಸ್ಪರ್ಧಿಸಿದ್ದ ಚಿತ್ರನಟಿ ಗುಲ್ ಪನಾಗ್ ಅವರ ದೇಹ ಪ್ರದರ್ಶನದ ಚಿತ್ರಗಳು ಅಶ್ಲೀಲ ಟ್ಯಾಗ್‌ಗಳೊಂದಿಗೆ ತರಹೇವಾರಿ ಸೆಕ್ಸಿಸ್ಟ್ ಪರಿಭಾಷೆಯೊಂದಿಗೆ ಹರಿದಾಡಿದ್ದವು. ಮತ್ತೊಮ್ಮೆ ಬಿಜೆಪಿಯ ನಾಯಕರೊಬ್ಬರು ಅರವಿಂದ ಕೇಜ್ರಿವಾಲ್ ಅವರನ್ನು ಟೀಕಿಸುವ ಭರದಲ್ಲಿ, “ಅರವಿಂದ ಕೇಜ್ರಿವಾಲರು ಕೂಡ ರಾಖಿ ಸಾವಂತ್‌ರಂತೆ ಯಾವಾಗಲೂ ತೆರೆದುಕೊಂಡೆ ನಿಲ್ಲುತ್ತಾನೆ’’ ಎಂಬ ವಾಕ್ಯಗಳನ್ನು ಉದುರಿಸಿದ್ದರು. ಇನ್ನೊಮ್ಮೆ ಎಎಪಿ ಶಾಸಕಿಯಾಗಿದ್ದ ಅಲಕಾ ಲಂಬಾರವರನ್ನು ಕುರಿತು ಬಿಜೆಪಿ ಶಾಸಕನೊಬ್ಬ, “ರಾತ್ರಿ ಹೊತ್ತು ತಿರುಗುವ ಹೆಣ್ಣು’’ ಎಂದು ತನ್ನ ತೀಟೆ ತೀರಿಸಿಕೊಂಡಿದ್ದನು.
ಸ್ತ್ರೀ ತುಚ್ಛೀಕರಣದ ಭಾಷೆ ಬಳಸುವಲ್ಲಿ ನಮ್ಮ ಮಾಧ್ಯಮದ ಮಿತ್ರರೂ ಹಿಂದೆ ಬಿದ್ದಿಲ್ಲ. ಈ ಹಿಂದೆ ಪ್ರಸಿದ್ಧ ಟೆನಿಸ್ ಆಟಗಾರ್ತಿ ಬರೆದ “ಏಸ್ ಎಗೇನ್ಸ್‌ಟ್ಸ್ ಆಡ್ಸ್’’ ಪುಸ್ತಕ ಕುರಿತು ಪರಿಚಯಿಸುವಾಗ ಹಿರಿಯ ಪತ್ರಕರ್ತರೊಬ್ಬರು, “ಇಷ್ಟೆಲ್ಲಾ ಝಗ್‌ಮಗಿಸುವ ಸಾನಿಯಾ ಸೆಟ್ಲ್ ಆಗುವುದು ಯಾವಾಗ? ದುಬೈನಲ್ಲಾ? ಅಥವಾ ಬೇರೆ ಯಾವುದಾದರೂ ದೇಶದಲ್ಲಾ? ಅವಳು ತಾಯ್ತನ ಅನುಭವಿಸುವುದು ಯಾವಾಗ?’’ ಎಂದೆಲ್ಲಾ ಗಳುಹಿ ತಮ್ಮ ಬಾಯಿ ಚಟ ತೀರಿಸಿಕೊಂಡರು. ಅದಕ್ಕೆ ಸಾನಿಯಾ ತುಂಬಾ ಸಮರ್ಥವಾದ ಉತ್ತರ ನೀಡಿದ್ದರು. ಅದರಂತೆ ಕೇಂದ್ರ ಸಚಿವ ವಯಲಾರ್ ರವಿಯವರು ಅತ್ಯಾಚಾರ ಪ್ರಕರಣವೊಂದನ್ನು ಕುರಿತು ಪ್ರಶ್ನಿಸಿದ ಪತ್ರಕರ್ತೆಯೊಬ್ಬಳಿಗೆ, “ಕುರಿಯನ್ ವಿರುದ್ಧ ನಿಮಗೇನಾದರೂ ವೈಯಕ್ತಿಕ ಸಿಟ್ಟು ಇದೆಯೆ? ನನಗೆ ಗೊತ್ತು ನಿಮಗೇನೊ ಇದೆ. ನಿಮ್ಮ ಮತ್ತು ಅವರ ನಡುವೆ ಎಂದಾದರೂ ಏನಾದರೂ ನಡೆದಿದೆಯೆ?’’ ಎಂದು ಬಹಿರಂಗವಾಗಿ ಮರುಪ್ರಶ್ನಿಸಿ ಆ ಪತ್ರಕರ್ತ ಮಹಿಳೆಯ ಸ್ಥೈರ್ಯ ಕುಸಿಯುವಂತೆ ಮಾಡಿದ್ದರು. ಆನಂತರ ದೇಶದ ತುಂಬ ಪ್ರತಿಭಟನೆ ಭುಗಿಲೆದ್ದು ಮರುದಿನ ಆತ ಕ್ಷಮೆ ಕೇಳಬೇಕಾಗಿ ಬಂತು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆಗೈಯುತ್ತಾರೆ ಎಂದು ಕಂಡರೆ ಸಾಕು ಅವಳ ಚಾರಿತ್ರ್ಯ ಹನನ ಮಾಡಲು ಸಮಾಜ ಟೊಂಕ ಕಟ್ಟಿ ನಿಲ್ಲುತ್ತದೆ. ಹೀಗೆ ಮಾಡುವ ಮೂಲಕ ಮಹಿಳೆಯರನ್ನು ನಿರ್ವಿಣ್ಣಗೊಳಿಸಬೇಕೆಂಬ ಇರಾದೆ ಇದ್ದಿರಲು ಸಾಕು.
ಕರ್ನಾಟಕವು ಮಹಿಳಾ ವಿರೋಧಿ ಮಾತುಗಳನ್ನು ಉದುರಿಸುವಲ್ಲಿ ಹಿಂದೆ ಬಿದ್ದಿಲ್ಲ. 1996ರಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆದ ಹೊತ್ತಿನಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದವರು ಬಳಸಿದ ಭಾಷೆಯನ್ನು ಮಹಿಳೆಯರು ಮರೆತಿಲ್ಲ. ಮಹಿಳೆಯರನ್ನು ಕುರಿತು ಅವರು `ಸುಂದರವಾದ ವಸ್ತುವನ್ನು ನೋಡಬಾರದೇಕೆ? ಸುಂದರ ವಸ್ತುವನ್ನು ನೋಡಿ ಹಂಬಲಿಸುವುದು ಪಾಪವೆ?’ ಎಂದು ಉಡಾಫೆಯಾಗಿ ಹೇಳಿದ್ದರಲ್ಲದೆ ಮತ್ತೂ ಮುಂದುವರೆದು, `ಅದನ್ನು ಪ್ರತಿಭಟನೆ ಮಾಡಿದವರಿಗೆ ವಿಶ್ವಸುಂದರಿ ಪ್ರದರ್ಶನ ನೋಡಬೇಕೆಂದು ಯಾರೂ ಒತ್ತಾಯಿಸುತ್ತಿಲ್ಲ. ಈ ಸ್ಪರ್ಧೆ ವಿರೋಧಿಸುತ್ತಿರುವ ಹೆಚ್ಚಿನವರು ದೃಷ್ಟಿ ಮಂಕಾಗುತ್ತಿರುವ ಮುದುಕರು’ ಎಂದು ಛೇಡಿಸಿದ್ದರು. ಮಂಡ್ಯದಲ್ಲಿ ಚಿತ್ರನಟಿ ರಮ್ಯಾ ಅವರು ಸ್ಪರ್ಧಿಸಿ ಆಯ್ಕೆಯಾದಾಗ ವಿರೋಧ ಪಕ್ಷದ ನಾಯಕರಿಗೆ ಮಂಡ್ಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿದ್ದನ್ನು ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, `ರಮ್ಯಾನ ಕಾಲ್ಗುಣದಿಂದಾಗಿ ಮಂಡ್ಯದಲ್ಲಿ ಹೆಚ್ಚು ರೈತರ ಆತ್ಮಹತ್ಯೆಗಳಾಗಿವೆ’ ಎಂಬ ತಿಳಿಗೇಡಿ ಹೇಳಿಕೆಯನ್ನಿತ್ತಿದ್ದರು. ಕುಮಾರಸ್ವಾಮಿಯೂ ರಮ್ಯರನ್ನು ಕುರಿತು, `ಚಿತ್ರನಟಿಯ ಬಣ್ಣದ ಮಾತುಗಳಿಗೆ ಮರುಳಾಗಬೇಡಿ’ ಎಂದು ಕುಹಕ ಕುಟಿಲ ಮಾತುಗಳನ್ನಾಡಿ ರಮ್ಯಾಳಿಂದ ಸರಿಯಾಗಿ ಮಂಗಳಾರತಿ ಮಾಡಿಸಿಕೊಂಡಿದ್ದರು. ಕರ್ನಾಟಕದ ಪ್ರಜ್ಞಾವಂತ ಶಾಸಕರೊಬ್ಬರು ರೇಪ್‌ಅನ್ನು ಕುರಿತು ಇರುವ ಜನಜನಿತ ಆಡುಮಾತನ್ನು ಉದಾಹರಣೆಯಾಗಿ ಬಳಸಿದ್ದಕ್ಕೆ ಸಾಕಷ್ಟು ಆಕ್ಷೇಪಣೆಗೆ ಗುರಿಯಾಗಿದ್ದರು. ‘ರೇಪ್ ತಡೆಯಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಅದನ್ನು ಎಂಜಾಯ್ ಮಾಡಬೇಕು’ ಎಂದು ವ್ಯಂಗ್ಯವಾಗಿ ಹೇಳಿದ್ದರು. ಈ ಮಾತು ಮಹಿಳೆಯರ ಘನತೆ-ಗೌರವವನ್ನು ಅಮಾನವೀಯವಾಗಿ ಮಣ್ಣು ಮುಕ್ಕಿಸುತ್ತದೆ. ರೇಪ್ ಎಂಬುದೇ ಮಾರಣಾಂತಿಕ. ಇನ್ನು ಅದನ್ನು ಎಂಜಾಯ್ ಮಾಡಲು ಮಹಿಳೆಯರು ಪಶುಗಳಲ್ಲ ಎಂಬ ಎಚ್ಚರ ಅವರಿಗೆ ಇರಬೇಕಿತ್ತು.
ಭಾಷೆಯಲ್ಲಿ ಮಹಿಳೆಯನ್ನು ದೇಹವಾಗಿ ಮಾತ್ರ ಅಸ್ತಿತ್ವಗೊಳಿಸಲಾಗಿದೆ. ಅವಳನ್ನು ಮನಸ್ಸುಳ್ಳ ಮಾನವೀಯ ಜೀವಿಯಾಗಿ ನೋಡಿದ್ದು ಇಲ್ಲವೇ ಇಲ್ಲ ಎಂಬಷ್ಟು ನಮ್ಮ ಸಮಾಜ ಜಡವಾಗಿದೆ. ಇತ್ತೀಚೆಗೆ ಹೈಕೋರ್ಟ್ನ ಮಾನ್ಯ ನ್ಯಾಯಾಧೀಶರೊಬ್ಬರು ಪಾಟಿ ಸವಾಲು ಸಂದರ್ಭದಲ್ಲಿ ಮಹಿಳಾ ವಕೀಲೆಯೊಬ್ಬಳ ಮಾತನ್ನು ನಡುವೆ ತುಂಡರಿಸುತ್ತ, “ಸುಮ್ಮನಿರಮ್ಮ ನೀನೇನು ಎಲ್ಲಾ ನೋಡಿದ ಹಾಗೇ ಹೇಳುತ್ತಿಯಾ, ಇನ್ನೂ ಸುಮ್ಮನಿದ್ದರೆ ನೀನು ಆತನ ಒಳ ಉಡುಪಿನ ಬಣ್ಣವನ್ನು ಹೇಳುತ್ತಿಯಾ’’ ಎಂದು ಅಸೂಕ್ಷ್ಮತೆಯಿಂದ ಮಾತಾಡಿದ್ದರು. ಸಮಾಜದಲ್ಲಿ ಲಿಂಗ ಸಂವೇದನಾಶೀಲತೆಯನ್ನು ರೂಢಿಸಿ ಕಸಿಮಾಡಬೇಕಿದ್ದ ನ್ಯಾಯಾಧೀಶರೆ ಸ್ತ್ರೀಯರನ್ನು ಕುರಿತು ಇಷ್ಟು ಹಗುರವಾದ ಭಾಷೆ ಬಳಸಿದರೆ ಉಳಿದ ಸಾಮಾನ್ಯರಿಂದ ದೇಶದ ಮಹಿಳೆಯರು ನಿರೀಕ್ಷಿಸುವುದಾದರೂ ಏನು?
ಇದನ್ನೂ ಓದಿರಿ: ಆದಿವಾಸಿಗಳೂ ಇದ್ದಾರೆಂಬ ಅರಿವಿದೆಯೇ? (ಭಾಗ- 1)
ಸ್ತ್ರೀಯರನ್ನು ಮಾಲ್, ಹಕ್ಕಿ, ಸ್ಟೆಪಣಿ, ಬುಲ್‌ಬುಲ್, ಐಟಂ, ಬಾಂಬ್ ಹೀಗೆಲ್ಲ ಅಸಹ್ಯ ಅಶ್ಲೀಲಗೊಳಿಸಿ ಮಾತಾಡುವುದು ಗೂಂಡಾ ಭಾಷೆ. ದುರಂತವೆಂದರೆ ಪ್ರಜ್ಞಾವಂತ ಎನಿಸಿಕೊಂಡವರು, ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಕೂಡ ಇಂಥ ಭಾಷೆಯನ್ನು ಖುಲ್ಲಂಖುಲ್ಲಾ ಬಳಸುತ್ತಿರುವುದು ಇವತ್ತೂ ಮಾಮೂಲಿಯಾಗುತ್ತಿದೆ. ಭಾರತೀಯ ಸಂಸ್ಕೃತಿಯ ರಕ್ಷಕರೆಂದು ಮೆರೆಯುತ್ತಿರುವ ಕೋಮುವಾದಿ ಗೂಂಡಾಗಳು ಇಂಥ ಭಾಷೆ ಬಳಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಫೇಸ್‌ಲೆಸ್ ಫೇಸ್ ಬುಕ್‌ನಲ್ಲಿ ಉದುರುತ್ತಿರುವ ಭಾಷಾ ಪ್ರಯೋಗಗಳಂತೂ ಕನ್ನಡ ಭಾಷಿಕ ಸೂಕ್ಷ್ಮತೆ, ಅದರ ಪಾರಂಪರಿಕ ಘನತೆ- ಗೌರವವನ್ನು ಮಣ್ಣು ಮುಕ್ಕಿಸುತ್ತಿವೆ. ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಅವಾಂತರಗಳನ್ನು ಕುರಿತು ಯಾರೇ ವಿಮರ್ಶೆ ಮಾಡಿದರೂ ಸಾಕು, ಅವರನ್ನು ಅವಾಚ್ಯ ಪದಗಳಿಂದ ಟ್ರೋಲ್ ಮಾಡುವುದು ಕಂಡುಬರುತ್ತಿದೆ. ವಿಮರ್ಶೆ ಮಾಡಿದವರು ಮಹಿಳೆಯರಾಗಿದ್ದರಂತೂ ಬಾಯಿ ಮಾತಿನಲ್ಲಿಯೇ ಅವರನ್ನು ರೇಪ್ ಮಾಡಿಬಿಡುತ್ತಾರೆ. ಮೊದಲು ಅವಳ ತಾಯಿಯನ್ನು ಅವಾಚ್ಯ ಪದಗಳಿಂದ ಅಸಹ್ಯದ ಪರಮಾವಧಿಯಲ್ಲಿ ಹಳಿಯುತ್ತಾರೆ. ಸೂಕ್ಷ್ಮ ಸಂವೇದನೆ ಉಳ್ಳವರಾಗಿದ್ದರೆ ಕೋಮುವಾದಿಗಳು ಮಾಡುವ ಶಾಬ್ದಿಕ ಹಲ್ಲೆಗೆ ನಡುಗಿ ಹೋಗುತ್ತಾರೆ. ಇತ್ತೀಚೆಗೆ ಅಲ್ಪಸಂಖ್ಯಾತರನ್ನು ಅದರಲ್ಲಿಯೂ ಮಹಿಳೆಯರನ್ನು ಕುರಿತು ಅತ್ಯಂತ ಹೀನಾಯವಾಗಿ ಟ್ರೋಲ್ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಇದೆಲ್ಲವನ್ನು ನೋಡಿಯೂ ಸರಕಾರ ಇಂಥವರ ಮೇಲೆ ಕ್ರಮಕೈಗೊಳ್ಳದಷ್ಟು ಅಸೂಕ್ಷ್ಮವೂ ಮತಬ್ಯಾಂಕ್‌ಗಳ ಗುಲಾಮರೂ ಆಗಿದ್ದಾರೆ ಎಂಬುದೇ ನಿದ್ದೆಗೆಡಿಸುವ ಸಂಗತಿಯಾಗಿದೆ.
ಸ್ತ್ರೀವಾದವು ಮುನ್ನೆಲೆಗೆ ಬಂದಿರುವ ಈ ಹೊತ್ತಲ್ಲಿ ಅಂದರೆ ಲಿಂಗಸಮಾನತೆಯ ಚಳವಳಿಗಳು ವ್ಯಾಪಕವಾಗುತ್ತಿರುವ ವರ್ತಮಾನದಲ್ಲಿಯಾದರೂ ನಾವು ಭಾಷೆಯನ್ನು ಲಿಂಗ ಸಂವೇದನಾಶೀಲಗೊಳಿಸಿಕೊಳ್ಳಬೇಕಲ್ಲ! ದುರಂತವೆಂದರೆ ಲಿಂಗ ಸಮಾನತೆಯು ವಿಶ್ವದ ಸಮಗ್ರ ದೃಷ್ಟಿ-ಧೋರಣೆಯಾಗಬೇಕೆಂದು ಆಶಿಸುತ್ತಿರುವ ಈ ಹಂತದಲ್ಲಿ ನಾವು ಬೌದ್ಧಿಕವಾಗಿ ಹಿಂಚಲನೆಯಲ್ಲಿ ಕ್ರಮಿಸುತ್ತಿದ್ದೇವೆ ಎಂದರೆ ಅತಿಶಯೋಕ್ತಿಯೇನಲ್ಲ. ನಮ್ಮ ವಿಧಾನಸಭೆ, ಸಂಸತ್ತುಗಳಲ್ಲಿ ರಾಜಕೀಯ ಧುರೀಣರು ಬಳಸುತ್ತಿರುವ ಭಾಷೆ, ಕೋರ್ಟುಗಳಲ್ಲಿ ನ್ಯಾಯಾಧೀಶರು, ನ್ಯಾಯವಾದಿಗಳು ಬಳಸುತ್ತಿರುವ ಪದಪುಂಜಗಳು ಮತ್ತು ಜನಸಾಮಾನ್ಯರು ಟ್ರೋಲ್ ಮಾಡುತ್ತಿರುವ ಅಶ್ಲೀಲ ನುಡಿಮುತ್ತುಗಳು ಸಾಂಸ್ಕೃತಿಕ ಅಧೋಗತಿಯನ್ನು ಎತ್ತಿ ತೋರಿಸುತ್ತಿವೆ.
ಈ ಪ್ರವೃತ್ತಿಯು ಮಾನಸಿಕವಾಗಿ ಭಾರತ ಹಿಂಚಲನೆಯಲ್ಲಿದೆ ಎಂಬುದನ್ನು ಸಾಕ್ಷೀಕರಿಸುತ್ತಿದೆ. ಮಹಿಳೆಯರ ಬಗೆಗೆ ದೇಶದಲ್ಲಿ ತುಚ್ಛೀಕರಣದ ಭಾವ ಇನ್ನಷ್ಟು ಹುರಿಗೊಳ್ಳುತ್ತಿರುವುದು ಸೂರ್ಯಸ್ಪಷ್ಟವಾಗುತ್ತಿದೆ. ಕರ್ನಾಟಕವೂ ಅದಕ್ಕೆ ಹೊರತಾಗಿಲ್ಲ ಎಂಬುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಗಮನಿಸುತ್ತಿದ್ದೇವೆ. ಎನ್‌ಸಿಆರ್‌ಬಿ (ನ್ಯಾಷನಲ್ ಕ್ರೈಮ್ ರಿಕಾರ್ಡ್ ಬ್ಯೂರೋ)ಯ ಪ್ರಕಾರ ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಮಾಣವು 2014ರಲ್ಲಿ 3.37 ಲಕ್ಷದಷ್ಟು ಇದ್ದದ್ದು 2022ರ ಹೊತ್ತಿಗೆ 4.45 ಲಕ್ಷಕ್ಕೆ ಏರಿಕೆಯಾಗಿದೆ. ಇದು ಸರಾಸರಿ 30% ಹೆಚ್ಚಾಗಿದೆ. ಪ್ರತಿ ಲಕ್ಷಕ್ಕೆ 2014ರಲ್ಲಿ 56.3 ಇದ್ದದ್ದು 2022ರ ವೇಳೆಗೆ ಅದರ ಪ್ರಮಾಣ 66.4ಕ್ಕೆ ಏರಿಕೆಯಾಗಿದೆ. 2018ರ ಥಾಮಸ್ ರಾಯಿಟರ್ಸ್ ಫೌಂಡೇಶನ್‌ನ ಸಮೀಕ್ಷೆಯ ಪ್ರಕಾರ 193 ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ ಭಾರತವು ಮಹಿಳೆಯರಿಗೆ ವಿಶ್ವದಲ್ಲಿಯೇ ಅತ್ಯಂತ ಅಪಾಯಕಾರಿ ದೇಶ ಎಂದು ಗುರುತಿಸಿದೆ. ಇದು ಭಾರತದ ಎನ್‌ಸಿಆರ್‌ಬಿ ನೀಡಿದ ಅಂಕಿಅಂಶಗಳನ್ನು ಆಧರಿಸಿ ತಯಾರಿಸಿದ ವರದಿಯಾಗಿದೆ. ಭಾಷಾ ಬಳಕೆಗೂ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯಕ್ಕೂ ಅಂತರ್ ಸಂಬಂಧವಿರುತ್ತದೆ ಎಂಬುದನ್ನು ನಿರಾಕರಿಸಲಾಗದು. ಸಮಾಜದಲ್ಲಿ ಮಹಿಳಾ ವಿರೋಧಿ ನೆಲೆ ಹೆಚ್ಚಾದದ್ದು ಮೊದಲು ಭಾಷೆಯಲ್ಲಿ ಪ್ರತಿಫಲನಗೊಳ್ಳುತ್ತದೆ. ನಂತರ ಅದು ಕ್ರಿಯೆಯಾಗಿ ಮಾರ್ಪಡುತ್ತದೆ. ಇತ್ತೀಚೆಗೆ ಕನ್ನಡವನ್ನು ಕುಲಗೆಡಿಸಿ ಮಾತಾಡುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾದುದರ ಹಿಂದೆ ಫ್ಯಾಸಿಸ್ಟ್ ಮನೋಭಾವದ ನಡೆಗಳು ಇವೆ ಎಂಬುದನ್ನು ಅಲ್ಲಗಳೆಯಲಾಗದು.
ಭಾಷೆಗೆ ಯಾವತ್ತೂ ಮೇಲರಿಮೆ ಕೀಳರಿಮೆ ಇಲ್ಲ. ಅದನ್ನು ಬಳಸುವ ಜನರಿಗೂ ಅಂಥ ಭಾವನೆ ಇರಬಾರದು. ತಮ್ಮ ತೆವಲಿಗೆ ಭಾಷೆಯ ದುರ್ಬಳಕೆ ಸಲ್ಲದು. ಈ ದಿಸೆಯಲ್ಲಿ ಕನ್ನಡದ ಹಿರಿಮೆ ಗರಿಮೆ ಹೆಚ್ಚಿಸುವಂತೆ ಲಿಂಗ ತಟಸ್ಥ ಭಾಷೆಯೊಂದನ್ನು ನಾವು ರೂಪಿಸಿಕೊಳ್ಳಬೇಕಿದೆ. ಮಹಿಳೆಯರನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಯಲ್ಲಿ ತಲಸ್ಪರ್ಶಿ ಬದಲಾವಣೆ ತರುವ ಮೂಲಕ ಭಾಷೆಯನ್ನು ಲಿಂಗಸಂವೇದನಾಶೀಲ ಮಾಡಬೇಕಿದೆ. ಮಹಿಳೆಯರನ್ನು ಅಪಮಾನಿಸುವ ಪದಪುಂಜಗಳು, ಗಾದೆ ಮಾತುಗಳು, ಜಾಣ್ಣುಡಿಗಳನ್ನು ನಿಷೇಧಿಸಬೇಕು. ಸಾರ್ವಜನಿಕ ವಲಯಗಳಲ್ಲಿ ಸ್ತ್ರೀ ತುಚ್ಛೀಕರಣದ ನುಡಿಗಟ್ಟುಗಳನ್ನು ಉಚ್ಚಾಟಿಸಬೇಕು. ಹೊಸದೊಂದು ಪದಕೋಶವನ್ನು ತಯಾರಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕ ವ್ಯಕ್ತಿಗಳು ಭಾಷೆ ಬಳಸುವಾಗ ಸೂಕ್ಷ್ಮತೆ ಮತ್ತು ಎಚ್ಚರಿಕೆಯನ್ನು ವಹಿಸುವಂತೆ ನೋಡಿಕೊಳ್ಳಬೇಕಿದೆ. ಸರಕಾರಿ ಇಲಾಖೆಗಳನ್ನು ಲಿಂಗ ಸಂವೇದನಾಶೀಲಗೊಳಿಸಬೇಕು. ಭಾಷೆ ಪ್ರಜ್ಞಾವಂತರ ಕೈಯಲ್ಲಿನ ಸಾಧನವಾಗಬೇಕೇ ಹೊರತು, ಮಹಿಳಾ ವಿರೋಧಿಗಳ ಅಸ್ತ್ರವಾಗಬಾರದು. ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
(ಮುಗಿಯಿತು)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಾ. ಮೀನಾಕ್ಷಿ ಬಾಳಿ
ಪ್ರಾಧ್ಯಾಪಕರಾದ ಮೀನಾಕ್ಷಿ ಬಾಳಿಯವರು ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ ಹಾಗೂ ಚಿಂತಕರೆಂದೇ ಖ್ಯಾತರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರು. ‘ಮಡಿವಾಳಪ್ಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ದಾರೆ. ‘ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. ಇತ್ತೀಚೆಗೆ ನಿಜ ವಚನ ದರ್ಶನ ಪುಸ್ತಕ ರಚಿಸಿದ್ದಾರೆ. ಇವರಿಗೆ ಕದಳಿಶ್ರೀ ಪ್ರಶಸ್ತಿ ದೊರಕಿದೆ.




