ಕಳೆದ ಐವತ್ತು ವರ್ಷಗಳ ಸಾಹಿತ್ಯ ಪರಂಪರೆಯಲ್ಲಿ ಕರ್ನಾಟಕ ಆವಾಹಿಸಿಕೊಂಡ ಸಾಹಿತ್ಯೇತರ ಪ್ರೇರಣೆಗಳನ್ನು ಈ ಲೇಖನದ ಮೊದಲ ಭಾಗದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಮುಂದುವರಿದು ಈ ಪರಂಪರೆಯಲ್ಲಿನ ಸಾಹಿತ್ಯಕ ಪ್ರೇರಣೆಗಳನ್ನು ವಿಸ್ತೃತವಾಗಿ ನೋಡುವ ಅಗತ್ಯವಿದೆ.
(ಮುಂದುವರಿದ ಭಾಗ..)
2. ಸಾಹಿತ್ಯಕ ಪ್ರೇರಣೆಗಳು: ಗೋಪಾಲಕೃಷ್ಣ ಅಡಿಗರಿಂದ ಉದ್ಘಾಟನೆಗೊಂಡು ಎ. ಕೆ. ರಾಮಾನುಜನ್, ಬಿ ಸಿ ರಾಮಚಂದ್ರ ಶರ್ಮ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ಶಾಂತಿನಾಥ ದೇಸಾಯಿ, ಎಚ್.ಎಂ. ಚೆನ್ನಯ್ಯ, ಟಿ.ಜಿ. ರಾಘವ, ರಾಘವೇಂದ್ರ ಖಾಸನೀಸ, ತಿರುಮಲೇಶ್ ಮೊದಲಾದವರಿಂದ ವಿಸ್ತೃತವಾಗಿ ಬೆಳೆದ ಕನ್ನಡ ನವ್ಯ ಸಾಹಿತ್ಯವು 1970ರ ದಶಕದ ಮೊದಲ ಭಾಗಕ್ಕಾಗುವಾಗ ಬಹುತೇಕವಾಗಿ ತನ್ನ ಸಾಧ್ಯತೆಗಳನ್ನೆಲ್ಲ ತೀರಿಸಿಕೊಂಡು ಜಡಾವಸ್ಥೆಗೆ ತಲುಪಿತ್ತು. ನವ್ಯವು ಹುಟ್ಟಿಕೊಂಡಾಗ ಕಾಣಿಸಿಕೊಂಡ ಹೊಸತನವು ಆಗಲೇ ಹಳತಾಗಿತ್ತು. ಹೇಳಿದ್ದನ್ನೇ ಹೇಳುವ ಲೇಖಕರ ಸಂಖ್ಯೆ ಹೆಚ್ಚಾಗಿತ್ತು. ಓದುಗರ ವಿಷಯದಲ್ಲಿ ನವ್ಯದವರು ತೋರಿದ ದುರಹಂಕಾರವೂ ಜನಗಳ ನಡುವೆ ಅಸಮಾಧಾನ, ಆಕ್ರೋಶಗಳನ್ನು ಹುಟ್ಟು ಹಾಕಿತ್ತು. ನವ್ಯದ ಎಲ್ಲ ಬರಹಗಳು ಅತಿ ಎನ್ನುವ ಏಕಾಂಗಿತನವನ್ನು, ಸಮಾಜದಿಂದ ದೂರ ಸರಿದ ವ್ಯಕ್ತಿತ್ವವನ್ನೂ ಕೀರ್ತಿಸುತ್ತಿದ್ದುವು. ಇಂಥ ಕಡೆ ಸಾಹಿತ್ಯದ ಜವಾಬ್ದಾರಿ ಒಂದು ಮಿತಿಗೊಳಪಡುತ್ತದೆ. ಇಂಥ ಹಲವು ಕಾರಣಗಳಿಂದ ನವ್ಯದ ಮೂಲ ಸೈದ್ಧಾಂತಿಕ ಮತ್ತು ಅಭಿವ್ಯಕ್ತಿ ಕ್ರಮವು ಬಂಡಾಯದ ಇದಿರು ನಿಲ್ಲದೇ ಹೋಯಿತು. ಹೊಸ ಆಕೃತಿಗಳ ಹುಡುಕಾಟಕ್ಕೆ ತಾನಾಗಿಯೇ ಎಡೆ ಮಾಡಿಕೊಟ್ಟಿತು.
ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ (1975) ಹೊಸ ಆಕೃತಿಯಲ್ಲಿ ಪ್ರತ್ಯಕ್ಷವಾಗುವುದರೊಂದಿಗೆ ಬಂಡಾಯ ಸಾಹಿತ್ಯದ ಉಗಮಕ್ಕೆ ನಾಂದಿ ಹಾಡಿತು. ಇದನ್ನು ಗದ್ಯದಲ್ಲಿ ಗಟ್ಟಿಯಾಗಿ ಸಾರಿದ್ದು ಪೂರ್ಣಚಂದ್ರ ತೇಜಸ್ವಿಯವರು. ‘ಅಬಚೂರಿನ ಪೋಸ್ಟ್ ಆಫೀಸ್’ ಎಂಬ ತಮ್ಮ ಕಥಾಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ಅವರು ಹೀಗೆ ಬರೆದರು: ‘ನವ್ಯ ಸಾಹಿತ್ಯ ಸಂಪೂರ್ಣ ನಿಸ್ತೇಜಗೊಂಡಿದೆ. ಬದಲಾಗುತ್ತಿರುವ ಪರಿಸರದ ಹೊಸ ಜವಾಬ್ದಾರಿಗಳನ್ನು ಅದು ಹೊರಲಾರದು. ಏಕೆಂದರೆ ಮೊದಲನೆಯದಾಗಿ, ಯಾಂತ್ರಿಕವಾಗಿರುವ ಅದರ ಸಾಂಕೇತಿಕ ಶೈಲಿ-ತಂತ್ರಗಳು, ಕೇವಲ ಉಪಾಧ್ಯಾಯರೇ ಹೆಚ್ಚಾಗಿರುವ ಅದರ ಸಾಹಿತ್ಯ ವರ್ಗ ಮತ್ತು ಕೇವಲ ಸಾಹಿತ್ಯದ ಮಟ್ಟಿಗೆ ಸೀಮಿತಗೊಂಡ ಕ್ರಾಂತಿಕಾರಕತನ (1983)’. ಹೀಗೆ ತೇಜಸ್ವಿಯರು ನವ್ಯ ಸಾಹಿತ್ಯಕ್ಕೆ ಕೊನೆ ಹಾಡಿದರು.

ಇದೇ ಹೊತ್ತಿಗೆ ತೆಲುಗಿನಲ್ಲಿ 1965ರಿಂದೀಚೆಗೆ ಪ್ರಬಲವಾಗಿ ಕಾಣಿಸಿಕೊಂಡ ದಿಗಂಬರ ಕಾವ್ಯದಿಂದ ಬಂಡಾಯ ಚಳವಳಿಯು ಪ್ರೇರಣೆ ಪಡೆಯಿತು. ಈ ಪ್ರೇರಣೆಯನ್ನು ಬಹಳ ಸ್ಪಷ್ಟವಾಗಿ ಗುರುತಿಸುವುದು ಕಷ್ಟವಾದರೂ ಬಂಡಾಯ ಚಳವಳಿಯ ಬರಹಗಾರರು ಆಗಾಗ ಚೆರಬಂಡರಾಜು, ನಗ್ನಮುನಿ, ಶ್ರೀಶ್ರೀ ಮೊದಲಾದವರ ಹೆಸರುಗಳನ್ನು ಹೇಳಿದ್ದುಂಟು. ಬಂಡಾಯ-ದಲಿತ ಸಾಹಿತ್ಯ ವೇದಿಕೆಗಳಲ್ಲಿ ದಿಗಂಬರ ಕವಿಗಳು ಕಾಣಿಸಿದ್ದುಂಟು. ಈ ಪ್ರಭಾವವು ಕರ್ನಾಟಕದ ಆಂಧ್ರಗಡಿ ಭಾಗದಲ್ಲಿ ಹೆಚ್ಚು ಕಾಣಿಸಿಕೊಂಡಿತ್ತು.
ಇದನ್ನೂ ಓದಿರಿ: ಕಳೆದ 50 ವರ್ಷಗಳ ಕನ್ನಡ ಸಾಹಿತ್ಯ: ಪ್ರಮುಖ ಪ್ರೇರಣೆಗಳು ಮತ್ತು ಪ್ರವೃತ್ತಿಗಳು (ಭಾಗ-1)
ಬಂಡಾಯ ಚಳವಳಿಯ ಮೇಲೆ ಮರಾಠಿ ದಲಿತ ಸಾಹಿತ್ಯ ಬಹಳ ಪ್ರೇರಣೆ ಬೀರಿದೆ. ನನ್ನಂಥವನಿಗೆ ಮರಾಠಿ ಸಾಹಿತ್ಯದ ಬಗ್ಗೆ ತಿಳಿದದ್ದೇ ಚಳವಳಿಯ ಸಂದರ್ಭದಲ್ಲಿ. ಈ ಮಾತು ಮುಖ್ಯವಾಗಿ ಅಂಬೇಡ್ಕರರ ಜನಪ್ರಿಯತೆಯೊಂದಿಗೂ ಸಂಬಂಧ ಹೊಂದಿದೆ. ದಲಿತರಿಗೆ ಅಂಬೇಡ್ಕರ್ ಅವರೇ ನಾಯಕರಾದುದರಿಂದ ಈ ಪ್ರಭಾವವೂ ಅನಿವಾರ್ಯವಾಯಿತು. ಈ ಮಧ್ಯೆ ಬಾಬುರಾವ್ ಬಾಗುಲ್, ಮನೋಹರ ವಾಂಖೇಡೆ, ದಯಾ ಪವಾರ್, ನಾಮದೇವ ಢಸಾಳ, ಲತೀಫಾ, ಕೇಶವ ಮೇಶ್ರಾಮ್, ವಾಮನ್ ನಿಂಬಾಳ್ಕರ್, ಅರುಣ್ ಕಾಂಬ್ಳೆ ಮೊದಲಾದವರ ಬರಹಗಳಿಂದ ಚಳವಳಿ ಸಾಕಷ್ಟು ಪ್ರೇರಣೆ ಪಡೆಯಿತು. ಮರಾಠಿಯ ಅನೇಕ ಲೇಖಕರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವೇದಿಕೆಯಲ್ಲಿ ಭಾಗವಹಿಸಿದರು.
ಮೇಲಿನ ಮೂರು ಮುಖ್ಯ ಸಾಹಿತ್ಯಿಕ ಪ್ರೇರಣೆಗಳಲ್ಲದೆ ಇನ್ನೂ ಹಲವನ್ನು ಇಲ್ಲಿ ಗುರುತಿಸಲು ಸಾಧ್ಯವಿದೆ. ಹಿಂದಿಯಲ್ಲಿ ಮಾರ್ಕ್ಸ್‌ವಾದಿಗಳ ಪ್ರಭಾವದಿಂದ ಬೆಳೆದು ಬಂದ ಜನವಾದಿ ಸಾಹಿತ್ಯದ ಬಗ್ಗೆ ಕರ್ನಾಟಕದಲ್ಲಿ ಒಲವು ಮೂಡಿತ್ತು. ಕೇರಳದಲ್ಲಿ ಜನಪ್ರಿಯವಾದ ಕಮ್ಯುನಿಸ್ಟ್ ಸರ್ಕಾರಕ್ಕೆ ಬೆಂಬಲವಾಗಿ ನಿಂತ ಮಾರ್ಕ್ಸ್‌ವಾದಿ ಬರಹಗಾರರ ಸಾಹಿತ್ಯವೂ ಕನ್ನಡಕ್ಕೆ ಬರಲಾರಂಭಿಸಿದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗುತ್ತಿದ್ದ ‘ಕಪ್ಪು ಸಾಹಿತ್ಯ’ವು ಕನ್ನಡದಲ್ಲಿಯೂ ಕಾಣಿಸಿಕೊಂಡಿತು. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ವರ್ಣಬೇಧ ನೀತಿಯ ವಿರುದ್ಧ ಹೋರಾಡುತ್ತಿದ್ದ ಕವಿ ಬೆಂಜಮಿನ್ ಮೊಲಾಯಿಸ್‌ನನ್ನು ಗಲ್ಲಿಗೇರಿಸಿದಾಗ, ಅವನ ಬಗ್ಗೆ ಕನ್ನಡದಲ್ಲಿ `ಕಪ್ಪುನಾಡಿನ ಕೆಂಪು ಸೂರ್ಯ’ (1987) ಎಂಬ ಕವನ ಸಂಕಲನವೊಂದು ಪ್ರಕಟವಾಯಿತು. ಮೂರನೇ ಜಗತ್ತಿನಲ್ಲಿ ನಡೆಯುತ್ತಿದ್ದ ಗೆರಿಲ್ಲಾ ಹೋರಾಟಗಳ ಅಂಗವಾಗಿ ಹುಟ್ಟುತ್ತಿದ್ದ ಗೆರಿಲ್ಲಾ ಸಾಹಿತ್ಯವೂ ನಮಗೆ ಓದಲು ದೊರೆಯುತ್ತಿತ್ತು.
ಹೀಗೆ ಕಳೆದ 50 ವರ್ಷಗಳಲ್ಲಿ ನಮಗೆಲ್ಲ ಬಗೆ ಬಗೆಯ ಸಾಹಿತ್ಯ ಓದಲು ಸಿಗುತ್ತಿತ್ತು. ಚಳವಳಿಗಾರರು ಮಾತಾಡಲೂ ಸಿಗುತ್ತಿದ್ದರು. ಸಾಮಾಜಿಕ ವಾತಾವರಣವೂ ಇಂದಿನಂತಿರದೆ ಮುಕ್ತವಾಗಿತ್ತು. ಆ ಕಾಲದಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣಗಳು ನಮಗೆ ಪ್ರಶ್ನಿಸುವುದನ್ನು ಕಲಿಸಿದವು. ಇತಿಹಾಸವನ್ನು ಹೊಸದಾಗಿ ನೋಡಲು ಹೇಳಿಕೊಟ್ಟವು. ನಾವೆಲ್ಲ ನಮ್ಮದೇ ರೀತಿಗಳಲ್ಲಿ ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸತೊಡಗಿದೆವು. ಮಾನವೀಯ ಸಂಬಂಧಗಳಿಗೆ ಒತ್ತು ನೀಡತೊಡಗಿದೆವು. ಮುಕ್ತ ಚಿಂತನೆಗೆ ಮತ್ತು ವಿಮರ್ಶೆಗೆ ಸಾಕಷ್ಟು ಅವಕಾಶವಿತ್ತು. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ಹೆಚ್ಚಿಸಲು ಲೇಖಕರು ಕೆಲಸ ಮಾಡಬೇಕೆಂದು ನಾವೆಲ್ಲಾ ಭಾವಿಸಿದ್ದೆವು.
ಈ ಎಲ್ಲ ಬೆಳವಣಿಗೆಗಳು ಉಂಟು ಮಾಡಿದ ಸಾಮಾಜಿಕ ಎಚ್ಚರಕ್ಕೆ ಪ್ರಮುಖವಾದ ಮೂರು ಆಯಾಮಗಳಿದ್ದುವು-
ಮೊದಲನೆಯದಾಗಿ, ಸಂಪ್ರದಾಯಸ್ಥ ಬ್ರಾಹ್ಮಣರ ವಿರುದ್ಧ ಸಿಡಿದೇಳುವ ಬ್ರಾಹ್ಮಣ ಲೇಖಕರನ್ನು ಅದು ಸೃಷ್ಟಿಸಿತು. ಅವರಲ್ಲಿ ಅನೇಕರು ದಲಿತರ ಪರವಾಗಿ ಬರೆದದ್ದಲ್ಲದೆ ಅಂತರಜಾತಿ ವಿವಾಹಗಳನ್ನೂ ಮಾಡಿಕೊಂಡರು.
ಇದನ್ನೂ ಓದಿರಿ: ಸತ್ಯ ಹೇಳಿ ಸಂಕಟಕ್ಕೆ ಸಿಲುಕಿದ ಮುಸ್ಲಿಮರಿವರು…
ಎರಡನೆಯದಾಗಿ, ಬ್ರಾಹ್ಮಣೇತರರು ಬ್ರಾಹ್ಮಣ್ಯದ ವಿರುದ್ಧ ಸಿಡಿದೆದ್ದದ್ದು. ಹೀಗೆ ಮಾಡುತ್ತಲೇ ವಿದ್ಯೆ ಮತ್ತು ಸಾರ್ವಜನಿಕ ಉದ್ಯೋಗ ಇಲಾಖೆಗಳಲ್ಲಿ ಅವರು ನಿಧಾನವಾಗಿ ಪ್ರವೇಶ ದೊರಕಿಸಿಕೊಂಡರು. ಈ ಹೊಸ ನೌಕರ ವರ್ಗವು ಬ್ರಾಹ್ಮಣ್ಯಕ್ಕೆ ವಿರೋಧಿಯಾಗಿದ್ದುಕೊಂಡೇ ಕರ್ನಾಟಕದ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಪ್ರಬಲ ಶಕ್ತಿಯಾಗಿ ಕಾಣಿಸಿಕೊಂಡಿತು. ಇರುವ ವ್ಯವಸ್ಥೆಯ ಪೂರ್ಣ ಲಾಭ ಪಡೆದ ಈ ನೌಕರಶಾಹೀ ವರ್ಗದಲ್ಲಿ ಒಕ್ಕಲಿಗರು ಮತ್ತು ಲಿಂಗಾಯಿತರು ಪ್ರಬಲರಾಗಿದ್ದರು. ಈ ಎರಡೂ ಸಮುದಾಯಗಳು ತಮ್ಮಷ್ಟಕ್ಕೆ ತಾವು ಪರಸ್ಪರ ವಿರೋಧಿಗಳಾಗಿದ್ದರೂ ಬ್ರಾಹ್ಮಣ್ಯಕ್ಕೆ ಸಂಬಂಧಿಸಿದಂತೆ ಒಂದೇ ಧ್ವನಿಯಲ್ಲಿ ಮಾತಾಡಿದರು. ಆದರೆ ದಲಿತರ ವಿಷಯಕ್ಕೆ ಬಂದಾಗ ಇವರ ಪ್ರಗತಿಪರತೆಯು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟದ್ದುಂಟು.
ಮೂರನೆಯದಾಗಿ, ದಲಿತರಲ್ಲಿ ಕಾಣಿಸಿಕೊಂಡ ಸತ್ವಶಾಲೀ ಎಚ್ಚರ. ದಲಿತರು ಸಹಜವಾಗಿಯೇ ಸವರ್ಣೀಯರ ವಿರುದ್ಧ ತಮ್ಮ ಅಪನಂಬಿಕೆಗಳನ್ನು ದಿಟ್ಟವಾಗಿ ಹೊರಹಾಕಿದರು. ಸಾಂಪ್ರದಾಯಿಕ ಮಡಿ-ಮೈಲಿಗೆಯ ಪರಿಕಲ್ಪನೆಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುತ್ತಿದ್ದವರಿಗೆ ದಲಿತರು ಆಘಾತ ನೀಡಿದರು.
ಈ ಎಚ್ಚರಗಳಿಗೆ ಪೂರಕವಾಗಿ ಮಹಿಳೆಯರಲ್ಲಿ ಮತ್ತು ಮುಸ್ಲಿಮರಲ್ಲಿ ಕೂಡಾ ಒಂದು ವಿಧದ ಜಾಗೃತ ಪ್ರಜ್ಞೆ ಕಾಣಿಸಿಕೊಂಡಿತು. ಹುಣಶೀಕೋಟೆ ಅನಸೂಯಮ್ಮ ಮತ್ತು ಕುದುರೆಮೋತಿ ಅತ್ಯಾಚಾರ ಪ್ರಕರಣಗಳಂತಹ ಸಂದರ್ಭದಲ್ಲಿ ಬಂಡಾಯ ಚಳವಳಿಯು ಪ್ರತಿಸ್ಪಂದಿಸಿದ ಬಗೆಗೆ ಮಹಿಳೆಯರು ಮತ್ತು ಅಂಚಿನ ವರ್ಗಗಳ ಯುವಜನತೆ ಆಕರ್ಷಿತರಾದರು. ಹೊಸ ವೈಚಾರಿಕತೆಯ ಸ್ಪರ್ಶಕ್ಕೆ ಮುಸ್ಲಿಂ ಬರಹಗಾರರು ಮತ್ತು ಲೇಖಕಿಯರು ತಮ್ಮನ್ನು ಒಡ್ಡಿಕೊಂಡರು. ದೊಡ್ಡ ಮಟ್ಟದಲ್ಲಿ ಅವರೂ ಬರೆಯತೊಡಗಿದರು. ಕನ್ನಡ ಸಾಹಿತ್ಯಕ್ಕೆ ಹೊಸನೀರು ಹರಿದು ಬಂತೆನ್ನಬಹುದು. ಬೊಳುವಾರು ಮಹಮ್ಮದ್ ಕುಂಞ ಮತ್ತು ಸಾರಾ ಅಬೂಬಕರ್ ಇದರ ಮುಂಚೂಣಿಯಲ್ಲಿದ್ದರು.

ಇವೆಲ್ಲವುಗಳ ನಡುವೆ ಲೇಖಕರ ಕೆಲವು ಮಿತಿಗಳಿಗೂ ನಾವು ಸಾಕ್ಷಿಗಳಾದೆವು. ಗ್ರಾಮೀಣ ಜನತೆಗೂ ಲೇಖಕರಿಗೂ ನಡುವೆ ಯಾವೊಂದು ಗಂಭೀರ ಸಂವಾದವೂ ನಡೆಯದೆ ಹೋಯಿತು. ಬರಹಗಾರರಲ್ಲಿ ಹಲವರು ತಾವು ಇತರರನ್ನು ಮೇಲೆತ್ತಲಿರುವ ಶಕ್ತಿಗಳೆಂದು ಭಾವಿಸಿದರು. ಇದರಿಂದಾಗಿ ಬಹಳ ಲೇಖಕರಿಗೆ ಸಾಮಾಜಿಕವಾಗಿ `ಕೆಳಗೆ’ ಇರುವ ಜನರನ್ನು ಮುಟ್ಟಲಾಗಲೇ ಇಲ್ಲ. ಅನೇಕರು ಇತರರು ಹೇಳಿದ ಮಾತುಗಳಿಗೆ ಪ್ರತಿಕ್ರಿಯಿಸುವುದರಲ್ಲಿಯೇ ತಮ್ಮ ಶಕ್ತಿಯನ್ನು ಕಳಕೊಂಡರು. ಕೆಲವು ಲೇಖಕರು ಪ್ರಭು ಸಮ್ಮಿತದ ರೀತಿಯಲ್ಲಿ ಬರೆಯುತ್ತಾ ಆಜ್ಞೆ ನೀಡಲು ಆರಂಭಿಸಿದರು. ಇನ್ನು ಕೆಲವರು ರೊಚ್ಚು-ಆವೇಶಗಳ ಏಕನಾದ ಮೀಟಿದರು. ಮತ್ತೆ ಕೆಲವರು ಗೋಳಿನ ಕಡಲಲ್ಲಿ ಮುಳುಗಿದರು. ಹೀಗೆ ಬಂಡಾಯ ದಲಿತ ಬರಹಗಾರರು ತಮ್ಮ ಸೃಜನಶೀಲತೆಗೆ ತಾವೇ ಮಿತಿಗಳನ್ನು ಹೇರಿಕೊಂಡರು. ಬೆರಳೆಣಿಕೆಯ ಕೆಲವರು ಮಾತ್ರ ಚಳವಳಿಯ ದೌರ್ಬಲ್ಯಗಳನ್ನು ಮೀರಿ ಮಹತ್ವದ ಕೃತಿಗಳನ್ನು ನೀಡಲು ಶಕ್ತರಾದರು. ಅಂತಹವರ ಕೃತಿಗಳನ್ನು ನಾವು ಈಗಲೂ ಓದುತ್ತಿದ್ದೇವೆ.
ಇದನ್ನೂ ಓದಿರಿ: ‘ರೀಲ್ಸ್’ ಸಚಿವ ಅಶ್ವಿನಿ ವೈಷ್ಣವ್ ಕಾಲದಲ್ಲಿ ಪ್ರಪಾತಕ್ಕೆ ಜಾರಿದ ರೇಲ್ವೆ ಇಲಾಖೆ!
21ನೇ ಶತಮಾನದ ಬೆಳವಣಿಗೆಗಳು: ಈಚಿನ 25 ವರ್ಷಗಳು
1992ರ ಜಾಗತೀಕರಣದ ಆನಂತರ ಭಾರತದ ಹೇಗೋ ಹಾಗೆ ಕರ್ನಾಟಕದ ಪರಿಸ್ಥಿತಿಯೂ ಬದಲಾಯಿತು. ಕರ್ನಾಟಕದ ಮಾರುಕಟ್ಟೆ ವಿಶ್ವಕ್ಕೆ ತೆರೆದುಕೊಂಡಿತು. ಬೆಂಗಳೂರು ಕರ್ನಾಟಕದ ಸಿಲಿಕಾನ್ ವ್ಯಾಲಿ ಎಂದು ಕರೆಯಿಸಿಕೊಂಡಿತು. ಖಾಸಗಿ ಕಂಪೆನಿಗಳು ದೊಡ್ಡ ಮಟ್ಟದಲ್ಲಿ ರಾಜ್ಯಕ್ಕೆ ಪ್ರವೇಶ ಪಡೆದವು. ಈ ಬಂಡವಾಳಶಾಹಿ ಶಕ್ತಿಗಳ ಜೊತೆಗೆ, ಉಗ್ರ ಹಿಂದುತ್ವ ಮತ್ತು ನಕಲಿ ರಾಷ್ಟ್ರೀಯತೆಯೂ ಸೇರಿಕೊಂಡು ಬಲಪಂಥೀಯ ರಾಜಕೀಯವನ್ನು ಬೆಳೆಸಿತು. ‘ಭಾರತೀಯ ಜನತಾ ಪಕ್ಷ’ ಎಂಬ ಒಂದು ರಾಜಕೀಯ ಪಕ್ಷವು ಹಿಂದುತ್ವದ ಒಡೆತನವನ್ನು ತಾನೇ ಕೈಗೆತ್ತಿಕೊಂಡಿತು. ಬಹುಸಂಖ್ಯಾತರ ಧರ್ಮವನ್ನು ಮುನ್ನೆಲೆಗೆ ತಂದ ಹಿಂದುತ್ವದ ಶಕ್ತಿಗಳು ಅಲ್ಪಸಂಖ್ಯಾತರನ್ನು ಭಯಕ್ಕೆ ತಳ್ಳಿದವು. ಸಂವಿಧಾನವನ್ನು ಗೌಣಗೊಳಿಸಿದವು. ಗಾಂಧೀಜಿ-ನೆಹರೂ ಅವರಂಥ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಲಾಯಿತು. ಸನಾತನ ಧರ್ಮದ ಪ್ರತಿಪಾದಕರೆಂದು ಘೋಷಿಸಿಕೊಂಡ ಕೆಲವರು ಯಾವ ಬಗೆಯ ಚರ್ಚೆಗಳಿಗೂ ಅವಕಾಶ ಮಾಡಿಕೊಡದೆ ನಯವಾಗಿ ಸರ್ವಾಧಿಕಾರ ನೆಲೆಗೊಳ್ಳುವಂತೆ ಮಾಡಿದರು. ಮುಕ್ತ ಚರ್ಚೆಗೆ ಹೆಸರಾಗಿದ್ದ ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಅಂಥ ಮಹತ್ವದ ಶಿಕ್ಷಣ ಸಂಸ್ಥೆಗಳನ್ನು ಪ್ರಭುತ್ವ ನಾಶ ಮಾಡಬಯಸಿತು. ಈ ನಡುವೆ ಇದೀಗ ಜಾರಿಗೆ ಬಂದಿರುವ ಹೊಸ ಶಿಕ್ಷಣ ನೀತಿಯು ‘ಶಿಕ್ಷಣದಲ್ಲಿ ಭಾರತೀಕರಣ’ ಎಂಬ ಪರಿಕಲ್ಪನೆಯನ್ನು ತೇಲಿಬಿಟ್ಟಿದೆ. ಒಂದೆಡೆ ಜಾಗತೀಕರಣ, ಇನ್ನೊಂದೆಡೆ ಭಾರತೀಕರಣ- ಇವೆರಡರ ನಡುವೆ ಇವತ್ತು ದೇಶ ನಲುಗುತ್ತಿದೆ. ಇಂಥ ಬೆಳವಣಿಗೆಗಳ ವಿರುದ್ಧ ಯಾವ ಬಗೆಯ ಹೋರಾಟಗಳು ಸಾಧ್ಯ ಎಂಬುದನ್ನು ಕಳೆದ 25 ವರ್ಷಗಳ ಕರ್ನಾಟಕ ಹುಡುಕುತ್ತಿದೆ. ಅದರ ಕೆಲವು ಹೆಜ್ಜೆ ಗುರುತುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.
ಶಿಕ್ಷಣ ಕುರಿತ ಹೋರಾಟಗಳು
ಇವತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳು ಭಾಷಾ ಅಧ್ಯಯನವನ್ನು ‘ಅನುತ್ಪಾದಕ’ ಎಂದು ಹೇಳುತ್ತಿವೆ. ಜನರೂ ಅದನ್ನು ನಂಬಿ ಭಾಷಾ ಕಲಿಕೆಯಿಂದ ದೂರ ಹೋಗುತ್ತಿದ್ದಾರೆ. ಮಕ್ಕಳಿಗೆ ಕೆಲವು ಕೌಶಲ್ಯಗಳನ್ನು ಕಲಿಸಿ, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದು ಇಲ್ಲವೇ ವಿದೇಶಗಳಿಗೆ ಕಳಿಸಿಕೊಡುವುದು ಮುಖ್ಯ ಎಂದು ಬಹುತೇಕ ಎಲ್ಲರೂ ನಂಬಿದ್ದಾರೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಸಾಮಾಜಿಕ ಜಾಲತಾಣಗಳೂ ಸೇರಿದಂತೆ, ಮಾಧ್ಯಮಗಳು ಕೂಡಾ ಭಾಷೆಗಳ ಸಾವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ಒಟ್ಟು ಪರಿಣಾಮವೋ ಎಂಬಂತೆ ಶಿಕ್ಷಣ ಕ್ಷೇತ್ರದಲ್ಲಿ ಈಗ ಭಾಷಾಧ್ಯಯನ ಕಳೆಗುಂದುತ್ತಿದೆ. ಕರ್ನಾಟಕ ಸರಕಾರವು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡ ಹೊರಟಾಗ ಸುಪ್ರೀಂ ಕೋರ್ಟ್ ಅದನ್ನು 2015ರಲ್ಲಿಯೇ ತಿರಸ್ಕರಿಸಿದೆ. ಈ ಕುರಿತು ಸಂವಿಧಾನದಲ್ಲಿಯೇ ಬದಲಾವಣೆ ತರಲು ಯಾರೂ ಕೆಲಸ ಮಾಡುತ್ತಿಲ್ಲ. ಸರಿಯೋ ತಪ್ಪೋ ಹೊಸ ತಲೆಮಾರಿನ ಜನರು ಇಂಗ್ಲಿಷನ್ನು ಅನ್ನದ ಭಾಷೆಯಾಗಿ ಗ್ರಹಿಸಿದ್ದಾರೆ. ಇದರಿಂದಾಗುತ್ತಿರುವ ಬಹಳ ದೊಡ್ಡ ಅಪಾಯವೆಂದರೆ, ಕನ್ನಡವೂ ಸೇರದಂತೆ, ಅನೇಕ ಭಾಷೆಗಳು ಪತನಮುಖಿಯಾಗಿರುವುದು. ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೆ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲ. ಸಣ್ಣ ಭಾಷೆಗಳನ್ನಾಡುವ ಜನರಲ್ಲಿಯೂ ತಮ್ಮ ಮಾತೃ ಭಾಷೆಗಳ ಬಗೆಗೆ ಅಭಿಮಾನ ಕಡಿಮೆಯಾಗಿ, ಇಂಗ್ಲಿಷಿನ ಮೇಲೆ ಮೋಹ ಹೆಚ್ಚಾಗುತ್ತಲಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಭಾವಿ ಪ್ರಾದೇಶಿಕ ಭಾಷೆಗಳಿಗೇನೋ ಮಹತ್ವ ಬಂದುವು, ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದುವು. ಸಣ್ಣ ಭಾಷೆಗಳನ್ನು ಅನೇಕ ರಾಜ್ಯ ಸರಕಾರಗಳು ತಮ್ಮ ರಾಜ್ಯದ ಅಧಿಕೃತ ಭಾಷೆಗಳೆಂದು ಮಾನ್ಯ ಮಾಡುತ್ತಿಲ್ಲ.
ಜಾಗತೀಕರಣವು ಜಗತ್ತಿನ ಭಾಷೆಗಳ ವ್ಯಾಕರಣವನ್ನು ಏಕರೂಪಿಯಾಗಿ ಮಾರ್ಪಡಿಸಿದೆ. ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಜಗತ್ತನ್ನು ಆಮೂಲಾಗ್ರವಾಗಿ ಬದಲಾಯಿಸಿವೆ. ಮೇಲಿನ ಪರಿಭಾಷೆಗಳು ಮೂಲತಃ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿವೆಯಾದರೂ ಇಂದು ಅವು ನಮ್ಮ ಸಮಾಜವನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡಿವೆ. ಅದೇ ಪ್ರಕಾರ ಅವು ನಮ್ಮ ಶಿಕ್ಷಣ ಕ್ಷೇತ್ರವನ್ನೂ ಆಮೂಲಾಗ್ರವಾಗಿ ಬದಲಾಯಿಸಲು ಒತ್ತಾಯಿಸುತ್ತಿವೆ. ಪರಿಣಾಮವಾಗಿ ಶಿಕ್ಷಣದ ಅಂತಾರಾಷ್ಟ್ರೀಕರಣ ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದಾಗುತ್ತಿದೆ. ವಿಶ್ವದ ಕುರಿತಾದ ಭಾರತದ ತಿಳಿವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳುವಳಿಕೆಗಾಗಿ ಈ ಅಂತಾರಾಷ್ಟ್ರೀಕರಣ ಪ್ರಕ್ರಿಯೆ ಅಗತ್ಯ ಎಂದು ಹೊಸ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಲಾಗಿದೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ ಮತ್ತು ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಸಂಸ್ಥೆಯು ಜಂಟಿಯಾಗಿ ಪ್ರಬಲವಾದ ವಾದ ಮಂಡಿಸಿವೆ. ಇದನ್ನು ಕಾರ್ಪೋರೇಟ್ ವಲಯ ಬಲವಾಗಿ ಬೆಂಬಲಿಸಿದೆ. ಪರಿಣಾಮವಾಗಿ ಶಿಕ್ಷಣದ ಖಾಸಗೀಕರಣ ಪ್ರಕ್ರಿಯೆ ಆರಂಭವಾಗಿದೆ. ಸರಕಾರಗಳು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯುತ್ತಿದ್ದಂತೆ ಖಾಸಗಿ ಶಾಲೆಗಳು, ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು, ಮತ್ತು ವಿದೇಶಿ ವಿಶ್ವವಿದ್ಯಾಲಯಗಳು ತಲೆ ಎತ್ತತೊಡಗಿದವು.
ಇದನ್ನೂ ಓದಿರಿ: ಕೋಳಿ ಫಾರಂನಿಂದ ಕೊಯಮತ್ತೂರು, ನಂದಿ ಬೆಟ್ಟದವರೆಗೆ ‘ಜಗ್ಗಿ’ ಬೆಳೆದಿದ್ದು ಹೀಗೆ..
ಭಾರತದಲ್ಲಿ ಶಿಕ್ಷಣದ ಅಂತಾರಾಷ್ಟ್ರೀಕರಣ ಪ್ರಕ್ರಿಯೆಯು ಗ್ಯಾಟ್ (General Agreement of Trade in Services) ಹಾಗೂ ಡಬ್ಲ್ಯುಟಿಒ (World Trade Organizations) ಒಪ್ಪಂದದ ಮೇರೆಗೆ ಆರಂಭವಾಯಿತು. ಏಪ್ರಿಲ್ 1, 2005 ರಂದು ಜಾರಿಗೆ ಬಂದ ಈ ಒಪ್ಪಂದದ ಅನುಸಾರವಾಗಿ, 10ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣವನ್ನು Educational Services as sector of industry under GATS ಎಂದು ಘೋಷಿಸಿತು. ಇಂದು ನಾವು ಶಿಕ್ಷಣದ ವ್ಯಾಪಾರೀಕರಣದ ಬಗ್ಗೆ ಆಗಾಗ ಅಸಹನೆ ಪ್ರಕಟಿಸುತ್ತೇವೆ, ಆದರೆ ಅದು ಸರಕಾರದ ಒಂದು ಅಂಗೀಕೃತ ಯೋಜನೆಯಾಗಿದೆ ಎಂಬುದನ್ನು ಮರೆಯಬಾರದು. ಹೀಗೆ ಶಿಕ್ಷಣವನ್ನು ಕೈಗಾರಿಕೆಗಳ ಭಾಗವಾಗಿ ಪರಿಗಣಿಸಿದ ಆನಂತರ ಭಾರತವೂ ಸೇರಿದಂತೆ ಅನೇಕ ದೇಶಗಳು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಸಜ್ಜಾದವು. ಹೀಗಾಗಿ, ಇಂದು ಶಿಕ್ಷಣವು ಒಂದು ರಾಜ್ಯದ, ಒಂದು ವಿಶ್ವವಿದ್ಯಾಲಯದ, ಅಥವಾ ಒಂದು ದೇಶದ ಗಡಿಗೆ ಸೀಮಿತವಾಗಿ ಉಳಿದಿಲ್ಲ. ಶಿಕ್ಷಣವು ಇದೀಗ `ಸೀಮಾತೀತ’ವಾಗುತ್ತಿದೆ. ಶಿಕ್ಷಣದ ಅಂತಾರಾಷ್ಟ್ರೀಕರಣದ ಪ್ರಕ್ರಿಯೆಯು ಸ್ಥಳೀಯ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವಿಶಿಷ್ಟತೆಗಳನ್ನೆಲ್ಲ ಮರೆಸಿ, ‘ವಾಸನೆ ಬಣ್ಣ ರಹಿತವಾದ’ ಏಕರೂಪದ ವ್ಯವಸ್ಥೆಯೊಂದನ್ನು ಆಗು ಮಾಡುತ್ತಿದೆ. ಇವುಗಳ ಪರಿಣಾಮವೋ ಎಂಬಂತೆ ನಿಂತ ನೆಲದ ಬಗ್ಗೆ ಗೌರವವಿಲ್ಲದ, ಮಣ್ಣಿನ ವಾಸನೆಯ ಅರಿವಿಲ್ಲದ ಅಂತರರಾಷ್ಟ್ರೀಯ ಪ್ರಜೆಗಳು ನಿರ್ಮಾಣವಾಗುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಕನ್ನಡ ಸಾಹಿತ್ಯ ಇನ್ನಷ್ಟೇ ತನ್ನ ವಸ್ತುವನ್ನಾಗಿ ಸ್ವೀಕರಿಸಬೇಕಾಗಿದೆ, ಇಂಥ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲೂ ಮುಖ್ಯವಾಗಿ ಭಾಷೆ ಮತ್ತು ಸಾಹಿತ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೊಸದಾಗಿ ಯೋಚಿಸುತ್ತಿದ್ದಾರೆ. ಕರ್ನಾಟಕ ರಾಜ್ಯವೂ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುತ್ತಿದೆ. ಡಾ. ವಿ ಪಿ ನಿರಂಜನಾರಾಧ್ಯ, ಡಾ. ರಾಜೇಂದ್ರ ಚೆನ್ನಿ ಮೊದಲಾದವರು ಶಿಕ್ಷಣ ಕುರಿತಾದ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ.
ಪರ್ಯಾಯ ಮಾಧ್ಯಮಗಳ ಸೃಷ್ಟಿ
1990ರ ದಶಕದ ಆನಂತರ ಮಾಧ್ಯಮಗಳು ಹೊಸ ಹಾದಿ ಹಿಡಿದವು. ರಾಷ್ಟ್ರೀಯತೆಯ ಹೆಸರಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮಗಳು ಮೂಲೆಗೊತ್ತಲ್ಪಟ್ಟವು. ಜನ ಭಾಷೆಯಲ್ಲಿ ಮಾತಾಡುತ್ತ, ಜನರನ್ನು ಮುಟ್ಟುವ, ಸಂಘಟಿಸುವ ಮತ್ತು ಅವರನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಬೇಕಾದ ಮಾಧ್ಯಮಗಳು ಪ್ರಭುತ್ವದ ಪರವಾಗಿ ನಿಲ್ಲತೊಡಗಿದವು. ಸ್ಥಳೀಯ ಸಂಸ್ಕೃತಿಯ ಅಭಿವೃದ್ಧಿಯ ವಿಷಯಗಳನ್ನು ಕೈಬಿಟ್ಟ ಮಾಧ್ಯಮಗಳು ಉದ್ಯಮಗಳ ಕಡೆ ಮುಖಮಾಡಿದವು. ಮೊದಲ 25 ವರ್ಷಗಳ ಅವಧಿಯಲ್ಲಿ ಪ್ರಬಲವಾಗಿದ್ದ ಮುದ್ರಣ ಮಾಧ್ಯಮಗಳನ್ನು ಆನಂತರದ 25 ವರ್ಷಗಳಲ್ಲಿ ಟಿವಿಗಳು ಆಕ್ರಮಿಸಿಕೊಂಡವು. ಬಂಡವಾಳಶಾಹಿಗಳು ದೊಡ್ಡ ಮಟ್ಟದಲ್ಲಿ ಸಮೂಹ ಮಾಧ್ಯಮಗಳ ಮೇಲೆ ಹಣ ಸುರಿಯಲು ಆರಂಭಿಸಿದಾಗ, ಮಾಧ್ಯಮಗಳು ಹಣ ಸುರಿದವರ ಮುಂದೆ ಮಂಡಿಯೂರಿ ಕುಳಿತುಕೊಳ್ಳಲು ಆರಂಭಿಸಿದರು. ದೊಗಳೆ ಅಂಗಿ ಮತ್ತು ಜೋಳಿಗೆ ಹಾಕಿಕೊಂಡು, ಲಾಭವೋ ನಷ್ಟವೋ ಯೋಚಿಸದೆ, ನಾಡು ನುಡಿಗೆ ಸೇವೆ ಸಲ್ಲಿಸುತ್ತಿದ್ದ 80ರ ದಶಕದ ಪತ್ರಿಕೆಗಳ ಜಾಗದಲ್ಲಿ ಕಾರ್ಪೋರೇಟ್ ಸಂಸ್ಕೃತಿಯ, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ನಿರೂಪಕರು ಕಾಣಿಸಿಕೊಂಡರು. ಕನ್ನಡದ ನಡುವೆ ಬೇಕಾದಷ್ಟು ಇಂಗ್ಲಿಷ್ ಪದಗಳನ್ನೂ ಸೇರಿಸುತ್ತಾ, ನೋಡುವವರ ನಡುವೆ ತಾನು ಮಹಾ ಬುದ್ಧಿವಂತನೆಂದು ಕೃತಕವಾಗಿ ಬಿಂಬಿಸುತ್ತಾ, ಬಗೆ ಬಗೆಯ ಆದೇಶಗಳನ್ನೂ, ನ್ಯಾಯ ತೀರ್ಮಾನಗಳನ್ನೂ ಕೊಡುತ್ತಾ, ಅವಶ್ಯ ಬಿದ್ದಾಗ ಬ್ಲಾಕ್ ಮೇಲ್ ತಂತ್ರಗಳನ್ನು ಅನುಸರಿಸುತ್ತಾ ಬೆಳೆದ ಮಾಧ್ಯಮಗಳು ನಾಡು ನುಡಿಗಳನ್ನು ಬೆಳೆಸುವ ತನ್ನ ಜವಾಬ್ದಾರಿಗಳಿಂದ ದೂರ ಸರಿಯುತ್ತಲೇ ಹೋದುವು.
ಇಂದಿನ ಮಾಧ್ಯಮಗಳಿಗೆ ಬಂಡವಾಳಶಾಹಿಗಳು ಹೊಸ ಸಿದ್ಧಾಂತವೊಂದನ್ನು ಕಲಿಸಿದ್ದಾರೆ. ಅದೆಂದರೆ ಹೇಗಾದರೂ ಮಾಡಿ ದುಡ್ಡು ಮಾಡು! ಅದಕ್ಕಾಗಿ ಬೇಕಾದರೆ, ಜನರ ನಡುವೆ ಜಗಳ ಹಚ್ಚು, ಕೋಮುವಾದ ಹೆಚ್ಚಿಸು, ಆಳುವವರನ್ನು ಕೀರ್ತಿಸು, ಜ್ಯೋತಿಷಿಗಳನ್ನು ಕೂರಿಸಿ ಮೂಢ ನಂಬಿಕೆಗಳನ್ನು ಪಸರಿಸು, ಜನಗಳನ್ನು ಮೋಸ ಮಾಡಲು ಬೇಕಾದಂತ ಸುಳ್ಳುಗಳನ್ನೋ ಪರಿಭಾಷೆಗಳನ್ನೋ ಸೃಷ್ಟಿಸು, ಏನಾದರೂ ಮಾಡು. ಆದರೆ ಹಾಕಿದ ಹಣ ಹಿಂದಿರುಗುವಂತೆ ಮಾಡು ಅಷ್ಟೆ. ಹಣ ಹಾಕಿದವರ ಋಣ ತೀರಿಸಬೇಕಾದ್ದು ಸಂಬಳ ಪಡೆಯುವವರ ಕರ್ತವ್ಯ ತಾನೇ?
ಹೀಗೆ ಹೆಚ್ಚಿನ ಮಾಧ್ಯಮಗಳು ಆಳುವ ವರ್ಗದ ಪರವಾಗಿರುವುದರಿಂದ ಜನಪರವಾಗಿರುವವರು ಬಲಿಷ್ಠವಾದ ಪರ್ಯಾಯ ಮಾಧ್ಯಮಗಳನ್ನು ಕಟ್ಟಿಕೊಳ್ಳದೇ ಬೇರೆ ಹಾದಿಯೇ ಇರಲಿಲ್ಲ. ಈ ಕೆಲಸವನ್ನು 21ನೇ ಶತಮಾನದ ಮೊದಲ ಭಾಗದ ಕರ್ನಾಟಕ ಸಾಕಷ್ಟು ಯಶಸ್ವಿಯಾಗಿ ಮಾಡಿದೆ. ಈದಿನ.ಕಾಮ್, ಕನ್ನಡ ಪ್ಲಾನೆಟ್, ನಾನು ಗೌರಿ ಮೊದಲಾದ ಪತ್ರಿಕೆಗಳು ಈ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಿವೆ. ಸರ್ವಾಧಿಕಾರಿ ಮತ್ತು ಕೋಮುವಾದಿ ಶಕ್ತಿಗಳನ್ನು ಸೋಲಿಸುವಲ್ಲಿ ಈದಿನ.ಕಾಮ್ ವಹಿಸಿದ ಪಾತ್ರ ಐತಿಹಾಸಿಕವಾದುದು.
ದುರ್ಬಲವಾಗುತ್ತಿರುವ ಒಕ್ಕೂಟ ವ್ಯವಸ್ಥೆ
ಒಕ್ಕೂಟ ಅಥವಾ ಫೆಡರೇಶನ್ ಪದವನ್ನು ರಾಜ್ಯಗಳ ಗುಂಪುಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಪ್ರಾದೇಶಿಕತೆಯ ಆಧಾರದ ಮೇಲೆ, ನೀತಿಗಳನ್ನು ರೂಪಿಸಲು ಅಥವಾ ಜಂಟಿ ಚಟುವಟಿಕೆಗಳನ್ನು ನಡೆಸಲು ಒಕ್ಕೂಟ ವ್ಯವಸ್ಥೆ ಸಹಾಯ ಮಾಡುತ್ತದೆ. ಆದರೆ ಇಂದಿನ ಭಾರತದಲ್ಲಿ ಕೇಂದ್ರ ಸರಕಾರವು ರಾಜ್ಯಗಳನ್ನು ಗೌರವದಿಂದ ನೋಡದೆ, ಸವಾರಿ ಮಾಡಲಿಚ್ಚಿಸುತ್ತದೆ. ರಾಜ್ಯಪಾಲರ ಮೂಲಕ ಕೇಂದ್ರ ಸರಕಾರವು ರಾಜ್ಯ ಸರಕಾರಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಯಸುತ್ತಿದೆ. ಇದರಿಂದಾಗಿ ಈಚಿನ ದಿನಗಳಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವ ಮತ್ತು ರಾಜ್ಯಗಳು ತಮ್ಮ ಸ್ವಾಯತ್ತೆಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಕನ್ನಡಿಗರು ಹೆಚ್ಚು ಜಾಗೃತರಾಗುತ್ತಿದ್ದಾರೆ.
ಇದನ್ನೂ ಓದಿರಿ: ಕರ್ನಾಟಕ 50 | ಸ್ತ್ರೀ ಸಂವೇದನೆ: ಕನ್ನಡ ಸಾಹಿತ್ಯ ಲೋಕದ ಹೆಜ್ಜೆ ಗುರುತುಗಳಿವು
ಸಂವಿಧಾನ ಉಳಿಸಿ ಆಂದೋಲನ
ಆರ್‌ಎಸ್‌ಎಸ್ ಮತ್ತು ಬಿಜೆಪಿಯು ಸಂವಿಧಾನವನ್ನು ಗೌಣವಾಗಿ ಕಾಣುವುದರ ವಿರುದ್ಧ ಕರ್ನಾಟಕದಲ್ಲಿ ‘ಸಂವಿಧಾನ ಉಳಿದರೆ, ನಾವು ಉಳಿಯುತ್ತೇವೆ. ಸಂವಿಧಾನ ಇಲ್ಲದಿದ್ದರೆ ನಾವು ಇರುವುದಿಲ್ಲ. ಅದಕ್ಕಾಗಿ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲ ನಾಗರಿಕರು ಕೆಲಸ ಮಾಡಬೇಕಾಗಿದೆ’ ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈ ಅರಿವಿನಲ್ಲಿ ಸಂವಿಧಾನದ ಸರಳೀಕೃತ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಹಂಚಲಾಗಿದೆ. ಸಂವಿಧಾನದ ಪೀಠಿಕೆಯನ್ನು ಕಾರ್ಯಕ್ರಮಗಳಲ್ಲಿ ಓದುವುದರ ಜೊತೆಗೆ ಮನೆ ಮನೆಗಳಿಗೆ ತಲುಪಿಸಲಾಗಿದೆ. ಇವತ್ತು ಇದೊಂದು ಬೃಹತ್ ಆಂದೋಲನವಾಗಿ ಬೆಳೆದಿದೆ.
ಕರ್ನಾಟಕಕ್ಕೊಂದು ಪ್ರಬಲ ಪ್ರಾದೇಶಿಕ ಪಕ್ಷದ ಹುಡುಕಾಟದಲ್ಲಿ
ಹುಸಿ ರಾಷ್ಟ್ರೀಯತೆಯ ಬಲೆಗೆ ಬೀಳುತ್ತಿರುವ ಕರ್ನಾಟಕ ರಾಜ್ಯಕ್ಕೆ ಇವತ್ತು ತನ್ನ ಇತಿಹಾಸವೇ ಮರೆತು ಹೋಗಿದೆ. ಅದಕ್ಕೆ ತನ್ನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತು ತಿಳಿವಳಿಕೆಯೇ ಇದ್ದಂತೆ ಕಾಣುವುದಿಲ್ಲ. ಪಕ್ಕದ ತಮಿಳುನಾಡು, ಕೇರಳ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ಸಾಂಸ್ಕೃತಿಕ ಗುರುತುಗಳ ಉಳಿಯುವಿಕೆಗೆ ನಡೆಸುತ್ತಿರುವ ಹೋರಾಟಗಳು ಪ್ರೇರಣೆ ನೀಡುತ್ತಿಲ್ಲ. ಕನ್ನಡವೇ ಪತನಮುಖಿಯಾಗಿದೆ. ಕೇಂದ್ರ ಸರಕಾರವು ರಾಜ್ಯ ಸರಕಾರಗಳು ತಾನು ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಲೇ ಇರಬೇಕೆಂದು ಬಯಸುತ್ತಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಕರ್ನಾಟಕವನ್ನು ಒಂದು ಪ್ರಾದೇಶಿಕ ಘಟಕವಾಗಿ ಗ್ರಹಿಸಿ ಅದಕ್ಕೊಂದು ರಾಜಕೀಯ ಆಯಾಮವನ್ನು ನೀಡುವುದದರ ಕುರಿತು ಇವತ್ತಿನ ಹೊಸತಲೆಮಾರಿನ ಅನೇಕರು ಯೋಚಿಸುತ್ತಿದ್ದಾರೆ. ಈ ಕುರಿತು ಕೆಲವು ಸಮಾವೇಶಗಳೂ ಚರ್ಚೆಗಳೂ ನಡೆದಿವೆ. ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ಕುರುಬ, ದಲಿತ ಮತ್ತಿತರ ಸಮುದಾಯಗಳ ನಡುವೆ ಆಳವಾಗಿ ಒಡೆದು ಹೋದ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ರೂಪುಗೊಳ್ಳುವುದು ಹೇಗೆ ಎಂಬ ಕುರಿತು ಚಿಂತನೆಗಳೂ ನಡೆಯುತ್ತಿವೆ.
ಆರ್‌ಎಸ್‌ಎಸ್ ವಿರುದ್ಧ ಹೋರಾಟ
ಹಿಂದುತ್ವ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ಬಂಡವಾಳಶಾಹಿಗಳೊಡನೆ ಕೈಜೋಡಿಸಿಕೊಂಡು ಬಲಿಷ್ಠವಾಗಿರುವ ಆರ್ ಎಸ್ ಎಸ್ ಸಮಾಜವು ಮುಂದಕ್ಕೆ ಚಲಿಸುತ್ತಿದ್ದಂತೆ ಜನರನ್ನು ಹಿಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಕಳೆದ 99 ವರ್ಷಗಳಿಂದ ಮಾಡುತ್ತಲೇ ಬರುತ್ತಿದೆ. ನಾನಾ ಹೆಸರಿನಲ್ಲಿ ಅದು ದೇಶದಾದ್ಯಂತ ಜಮೀನನ್ನು ಹೊಂದಿದೆ. ನಾವ್ಯಾರೂ ಬದುಕಿರದ ಒಂದು ಕಾಲದ ಬಗ್ಗೆ ಅದಕ್ಕೆ ಅದಮ್ಯ ವ್ಯಾಮೋಹ. ವರ್ತಮಾನದ ಚೌಕಟ್ಟಿನಲ್ಲಿ ಕಲ್ಪಿಸಿಕೊಂಡ ಇತಿಹಾಸ ಮತ್ತು ಕವಿಗಳು ಕಟ್ಟಿದ ಕಾಲಾತೀತ ಪುರಾಣಗಳ ಬಲೆಯಲ್ಲಿ ಸಿಲುಕಿಕೊಂಡ ಅದಕ್ಕೆ ಸಮಕಾಲೀನ ಸಮಾಜದಲ್ಲಿರುವ ಜಾತೀಯತೆ, ದಲಿತರ ಸಮಸ್ಯೆಗಳು, ಸರ್ವಾಧಿಕಾರ, ಮಹಿಳಾ ಶೋಷಣೆ, ಧಾರ್ಮಿಕ ಡಂಭಾಚಾರ, ಮತಾಂಧತೆ, ಮಾಧ್ಯಮಗಳ ಅಟ್ಟಹಾಸ, ಮೂಢನಂಬಿಕೆ ಇತ್ಯಾದಿಗಳೆಲ್ಲ ತಿಳಿಯದೇ ಹೋಗುತ್ತಿದೆ. ಯಾರಾದರೂ ಗೊತ್ತಿದ್ದವರು ಇವುಗಳ ಬಗೆಗೆ ಮಾತಾಡಿದರೆ ಅದು ತನ್ನ ಅಸಹನೆಯನ್ನು ಪ್ರಕಟಪಡಿಸುತ್ತದೆ, ದ್ವೇಷಿಸುತ್ತದೆ ಮಾತ್ರವಲ್ಲ ಅಂಥ ಧ್ವನಿಗಳನ್ನು ಮಟ್ಟ ಹಾಕಲೂ ಪ್ರಯತ್ನಿಸುತ್ತದೆ. ಇಂಥ ಕೆಲಸಗಳನ್ನು ಮಾಡಲು ಶ್ರೀ ಮೋಹನ್ ಭಾಗವತ್ ಹೇಳಿದಂತೆ ಅದಕ್ಕೆ ತನ್ನದೇ ಆದ ಒಂದು ಸೈನ್ಯ ಇದೆ. ಈ ಸೈನ್ಯದ ಸೈನಿಕರು ಯಾರು ಎಂದು ಗುರುತಿಸುವುದು ಈಚಿನ ದಿನಗಳಲ್ಲಿ ಬಹಳ ಸುಲಭ. ವಾಟ್ಸಾಪ್ ಸಂದೇಶ, ಫೇಸ್ ಬುಕ್ಕುಗಳಲ್ಲಿ ಬಳಸಲಾಗುತ್ತಿರುವ ಭಾಷೆಯನ್ನು ಗಮನಿಸಿದರೆ ಈ ಹೊಸ ಸೈನಿಕರನ್ನು ಅವರ ಹತ್ಯಾರಗಳ ಸಮೇತ ಪತ್ತೆ ಹಚ್ಚಬಹುದು. ಇಂಥವರ ವಿರುದ್ಧ ಸೈದ್ಧಾಂತಿಕವಾಗಿಯೂ ಪ್ರಾಯೋಗಿಕವಾಗಿಯೂ ಹೋರಾಡಲು ಕರ್ನಾಟಕ ಸಿದ್ಧವಾಗುತ್ತಿದೆ.

ಪರಿಸರ ಹೋರಾಟ
ವೈಜ್ಞಾನಿಕ ವಲಯದಲ್ಲಿ ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ ಮತ್ತು ಮಾಲಿನ್ಯದ ಕುರಿತು ಮತ್ತೆ ಚಟುವಟಿಕೆಗಳು ಆರಂಭವಾಗಿವೆ. ಸಂಪೂರ್ಣ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಜನರು ವಾಸ್ತವವನ್ನು ಗ್ರಹಿಸಲು ಆರಂಭಿಸಿದ್ದಾರೆ. ಹವಾಮಾನ ಬದಲಾವಣೆ, ಮಣ್ಣಿನ ಸವೆತ ಮತ್ತು ಅತಿಯಾದ ಮೀನುಗಾರಿಕೆಯು ಆಹಾರ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಈ ವಿಷಯಗಳ ಕುರಿತು ಗಂಭೀರವಾದ ಚರ್ಚೆಗಳು ಆರಂಭವಾಗಿರುವುದು ಆಶಾದಾಯಕವಾಗಿದೆ.
ಇದನ್ನೂ ಓದಿರಿ: ಯುಎಇ ಜೊತೆಯಲ್ಲಿ ಮೋದಿ ಭಾರತದ ಬಲಿಷ್ಠ ನಂಟು
ಕನ್ನಡ ಸಾಹಿತ್ಯ
ಮೇಲೆ ಹೇಳಿದ ಬೆಳವಣಿಗೆಗಳ ಕುರಿತು 21ನೇ ಶತಮಾನದ ಕನ್ನಡ ಸಾಹಿತ್ಯ ಗಂಭೀರವಾಗಿ ಪ್ರತಿಕ್ರಿಯಿಸಿದ್ದು ಕಡಿಮೆಯೆಂದೇ ಹೇಳಬಹುದು. ಮಹಿಳೆಯರು ಮತ್ತು ದಲಿತರು ಸಾಕಷ್ಟು ಕೆಲಸ ಮಾಡಿದ್ದರೂ ಇತರ ಮಧ್ಯಮ ಜಾತಿಗಳ ಜನರು ನಿರೀಕ್ಷಿತ ಮಟ್ಟದಲ್ಲಿ ಬರೆದಿಲ್ಲ. ಕೋಮುವಾದವನ್ನು ವಿರೋಧಿಸಿದ್ದಕ್ಕಿಂತ ಅದಕ್ಕೆ ಬಲಿಯಾದ ಲೇಖಕರೇ ಹೆಚ್ಚು. ಅನೇಕರು ಮಡಿವಂತಿಕೆಯನ್ನು ಬಿಟ್ಟುಕೊಟ್ಟಿಲ್ಲ. ನಮ್ಮ ಸಮಾಜದಲ್ಲಿ ಸಲಿಂಗರತಿ ಮತ್ತು ಅದಕ್ಕೆ ಸಂಬಂಧಿಸಿದಂತಿರುವ ಅನೇಕ ಸಂಗತಿಗಳು ಜನಪ್ರಿಯವಾಗಿದ್ದರೂ, ಅದರ ಬಗ್ಗೆ ಬರೆದವರೇ ಕಡಿಮೆ. 2018ರ ಸಪ್ಟಂಬರ ತಿಂಗಳಲ್ಲಿ ಭಾರತದ ಉಚ್ಛ ನ್ಯಾಯಾಲಯವು LGBTQ (Lesbian, Gay, Bisexual, Transgender and Queer) ಚಳವಳಿಯನ್ನು ಕಾನೂನುಬದ್ಧಗೊಳಿಸಿದ ಆನಂತರ, ಈ ಕುರಿತು ನಮ್ಮಲ್ಲಿಯೂ ಒಂದಷ್ಟು ಚರ್ಚೆಗಳು ಆರಂಭವಾದವು. ಪ್ರಕಾಶಕರೂ ಪುಸ್ತಕಗಳನ್ನು ಪ್ರಕಟಿಸಲು ಮುಂದೆ ಬರುತ್ತಿದ್ದಾರೆ.
ಕೊನೆಯ ಮಾತು: ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳನ್ನು ಇದಿರಿಸಲು ನಾವಿನ್ನೂ ಪೂರ್ತಿಯಾಗಿ ಸಜ್ಜುಗೊಂಡಿಲ್ಲ. 80 ಮತ್ತು 90ರ ದಶಕದ ಹೋರಾಟದ ತಂತ್ರಗಳು ಈಗ ಅಷ್ಟೇನೂ ಉಪಯೋಗಕ್ಕೆ ಬರುತ್ತಿಲ್ಲ. ಹೊಸ ತಂತ್ರಗಳ ಹುಡುಕಾಟ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಇಂಥ ಕೆಲಸಗಳ ಮುಂಚೂಣಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಹಿತಿಗಳು ಕಲಾವಿದರು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಅದು ಸರಿಯಾದೀತೆಂದು ನಾನು ಭಾವಿಸುತ್ತೇನೆ.
(‘ಈ ದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಾ. ಪುರುಷೋತ್ತಮ ಬಿಳಿಮಲೆ
ಜಾನಪದ ವಿದ್ವಾಂಸರು, ಲೇಖಕರು, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು




