ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಒಂದೇ ದಿನ ಇಬ್ಬರ ಆತ್ಮಹತ್ಯೆ, ಫೈನಾನ್ಸ್ ಹಾವಳಿಯಿಂದ ಮಹಿಳೆ ಆತ್ಮಹತ್ಯೆ, ಈ ದುಷ್ಟ ಫೈನಾನ್ಸ್ ಕಿರುಕುಳದಿಂದ ಮುಂದುವರೆದ ಸಾವಿನ ಸರಣಿ- ಈ ರೀತಿಯ ಸುದ್ದಿಗಳನ್ನು ನಾವು ದಿನವೂ ನೋಡುತ್ತಿದ್ದೇವೆ. ಪರೋಕ್ಷವಾಗಿ ಒಂದು ವ್ಯವಸ್ಥೆಯೇ ಸುಲಿಗೆಗೆ ಮುಂದೆ ನಿಂತು ಕೊಲೆಗಳನ್ನು ಮಾಡುತ್ತಿದೆ ಅಂದರೆ ತಪ್ಪಾಗಲಾರದು. ಆದರೆ ಇಂತಹ ಸ್ಥಿತಿಗೆ ಸರ್ಕಾರಗಳೂ ಮತ್ತು ಅವುಗಳ ನೀತಿಗಳು ಕಾರಣ ಎಂಬುದನ್ನು ಗಂಭೀರವಾಗಿ ಚರ್ಚಿಸಬೇಕಾಗಿದೆ.
ಈ ಮೈಕ್ರೋ ಫೈನಾನ್ಸ್ ಅಂದರೆ ಏನು? ಯಾಕೆ ಜನರು ವಿಪರೀತವಾಗಿ ಈ ಫೈನಾನ್ಸ್ ಕಂಪನಿಗಳಿಂದ ಸಾಲ ತಗೆದುಕೊಳ್ಳುತ್ತಿದ್ದಾರೆ? ಎಷ್ಟು ಬಡ್ಡಿಯನ್ನು ಕಂಪನಿಗಳು ವಸೂಲಿ ಮಾಡುತ್ತಿವೆ? ಸರ್ಕಾರ ಏನನ್ನೂ ಮಾಡಲು ಸಾಧ್ಯವಿಲ್ಲವೆ?
ಕಡಿಮೆ ಆದಾಯ ಇರುವ ಬಡವರಿಗೆ, ಅಂದರೆ ವಾರ್ಷಿಕ ಆದಾಯ 3 ಲಕ್ಷ ರೂ. ಒಳಗೆ ಇರುವ ಕುಟುಂಬಗಳಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಜನಕ್ಕೆ ಸಣ್ಣ ಸಾಲವನ್ನು ಕೊಟ್ಟು ನಿಗದಿತ ಬಡ್ಡಿ ಮತ್ತು ಅಸಲನ್ನು ವಸೂಲಿ ಮಾಡುವುದನ್ನೇ ಮೈಕ್ರೋ ಫೈನಾನ್ಸ್ ಎಂದು ಕರೆಯಬಹುದು.
ಇವು ಮೊದಲು ಪ್ರಾರಂಭವಾಗುವಾಗ ಬ್ಯಾಂಕುಗಳ ರೀತಿಯಲ್ಲೇ ಕೆಲಸ ಮಾಡುತ್ತಿದ್ದವು. ಅಂದರೆ ಸೇವಿಂಗ್ ಅಕೌಂಟ್ ಓಪನ್ ಮಾಡಿಸಿ ಅಲ್ಲಿ ಉಳಿತಾಯ ಇಡಿಸಿ, ಖಾತೆದಾರರಿಗೆ ವಿಮೆ ಮತ್ತು ಇತರ ಹಣಕಾಸು ಸೇವೆಗಳನ್ನು ಒದಗಿಸುವ ಒಂದು ವ್ಯವಸ್ಥೆಯಂತಿತ್ತು. ಈ ಮೂಲಕ ಆರ್ಥಿಕ ಸೇವೆಗಳಿಗೆ ಪ್ರವೇಶ ಇಲ್ಲದೆ ಇರುವ ಜನರಿಗೆ ಅವಕಾಶಗಳನ್ನು ಕೊಟ್ಟು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದೇ ಮುಖ್ಯ ಉದ್ದೇಶವಾಗಿತ್ತು. ಆದರೆ ಕಾಲ ಕ್ರಮೇಣ ಇವುಗಳ ಮೇಲಿನ ಹಿಡಿತ ಸುಲಿಗೆಕೋರ ಕಂಪನಿಗಳ ಕೈಗೆ ಸಿಕ್ಕಿದೆ.
ಮೈಕ್ರೋ ಫೈನಾನ್ಸ್ ಹುಟ್ಟಿದ್ದು ಹೇಗೆ?
ಮೈಕ್ರೋ ಫೈನಾನ್ಸ್ ವ್ಯವಸ್ಥೆಯನ್ನು ಪರಿಚಯ ಮಾಡಿದವರು ಮುಹಮ್ಮದ್ ಯುನುಸ್. ಇವರು ಬಾಂಗ್ಲಾದೇಶದವರು. ಈಗ ಬಾಂಗ್ಲಾದ ಹಂಗಾಮಿ ಪ್ರಧಾನಿಯೂ ಆಗಿದ್ದಾರೆ. 1976ನೇ ಇಸವಿಯಲ್ಲಿ ಬಾಂಗ್ಲಾದೇಶ ಭೀಕರ ಬರಗಾಲಕ್ಕೆ ತುತ್ತಾದಾಗ, ಅಲ್ಲಿನ ಜನರು ಅನುಭವಿಸಿದ್ದ ಯಾತನೆ ಮತ್ತು ಸಾಲಗಾರರ ವಿಪರೀತ ಕಿರುಕುಳವನ್ನು ಇವರು ಕಣ್ಣಾರೆ ಕಂಡಿದ್ದರು. ಇದಾದ ನಂತರ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಯೋಚಿಸಿ, ಜನರಿಗೆ ಸಾಲ ಸೌಲಭ್ಯವನ್ನು ಸರ್ಕಾರದಿಂದಲೇ ದೊರಕಿಸಬೇಕೆಂದು ಪ್ರಯತ್ನ ಮಾಡಿದರು. ಆದರೆ ಅವರ ಪ್ರಯತ್ನ ಕೈಗೂಡಲಿಲ್ಲ.
ಇದನ್ನೂ ಓದಿರಿ: ಕರ್ನಾಟಕ 50 | ಪತ್ರಿಕೋದ್ಯಮ ಕಂಡ ಮೂರು ಪಲ್ಲಟಗಳು
ಆರ್ಥಿಕವಾಗಿ ಅನುಕೂಲಸ್ಥರಾಗಿದ್ದ ಯುನುಸ್ ಅವರೇ ಮೂರ್ನಾಲ್ಕು ಮಹಿಳೆಯರಿಗೆ ಕೆಲವು ಸಾವಿರ ಮಾತ್ರ ಸಾಲ ಕೊಡಿಸುತ್ತಾರೆ. ನಂತರ ಈ ಸಾಲವನ್ನು ಕೆಲವೇ ಕೆಲವು ತಿಂಗಳಲ್ಲಿ ಆ ಮೂರ್ನಾಲ್ಕು ಮಹಿಳೆಯರು ತೀರಿಸುತ್ತಾರೆ. ಇದಾದ ನಂತರ ಅವರ ಶ್ರದ್ದೆ ಮತ್ತು ದುಡಿಮೆಯನ್ನು ಗೌರವಿಸಿ ಮತ್ತಷ್ಟು ಜನರಿಗೆ ನಿರಂತರವಾಗಿ ಸಾಲ ಕೊಡಿಸಲು ಮುಂದಾಗುತ್ತಾರೆ.

ಕೇವಲ ಸಾಲ ಮಾತ್ರ ಕೊಡಿಸುತ್ತಲೇ ಹೋದರೆ ಇದು ಅಷ್ಟಕ್ಕೇ ಸೀಮಿತವಾಗಿ ಉಳಿಯುತ್ತದೆ ಎಂದು ತಿಳಿದು ಕೊನೆಗೆ, ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಒಂದು ಗ್ರಾಮೀಣ ಬ್ಯಾಂಕ್ ಸ್ಥಾಪನೆ ಮಾಡಲು ಯೋಚಿಸುತ್ತಾರೆ. 1976ರಲ್ಲಿ ಮೊಳೆತ ಈ ಆಲೋಚನೆ 1983ರಲ್ಲಿ ಅಂತಿಮ ಸ್ವರೂಪ ಪಡೆದು ಗ್ರಾಮೀಣ ಬ್ಯಾಂಕ್ ಆರಂಭವಾಗುತ್ತದೆ.
ಮುಂದುವರೆದು ಇವು ಅತ್ಯಂತ ಯಶಸ್ವಿಯಾಗಿ 70 ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ವ್ಯಾಪಿಸಿ, 2500ಕ್ಕೂ ಹೆಚ್ಚು ಬ್ಯಾಂಕುಗಳು ಸ್ಥಾಪನೆಯಾಗುತ್ತವೆ. ಇದೇ ಮಾದರಿಯನ್ನು ಇನ್ನೂ ಅನೇಕ ದೇಶಗಳು ಅನುಸರಿಸಿ, ಇದು ಅತ್ಯಂತ ಜನಪ್ರಿಯವಾಗುತ್ತದೆ. ಮುಹಮ್ಮದ್ ಯುನುಸ್‌ಗೆ 2006ರಲ್ಲಿ ನೊಬೆಲ್ ಪ್ರಶಸ್ತಿಯೂ ದೊರಕುತ್ತದೆ.
ಭಾರತದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಕಂಪನಿಗಳ ಪರ ಸರ್ಕಾರದ ನಡೆ
ಬಾಂಗ್ಲಾದೇಶದ ಮಾದರಿಯನ್ನೇ ಅನುಸರಿಸಿ ಭಾರತದಲ್ಲಿಯೂ 1990ರಲ್ಲಿ ಮೈಕ್ರೋ ಫೈನಾನ್ಸ್ ವ್ಯವಸ್ಥೆ ಶುರುವಾಯಿತು. ಈ ಮಾದರಿ ಭಾರತಕ್ಕೆ ಹೊಸದಾದರೂ, ಕೇವಲ ಆಸ್ತಿವಂತರಿಗೆ ಮತ್ತು ಕನಿಷ್ಟ ಮಾಸಿಕ ವೇತನದಾರರಿಗೆ ಮಾತ್ರ ಹಣ ಕೊಟ್ಟು ಒಂದಿಷ್ಟು ನ್ಯಾಯಯುತವಾಗಿ ವಸೂಲಿ ಮಾಡುವುದು ಆರಂಭವಾಯಿತು. ಆದರೆ ಕಾಲಕ್ರಮೇಣ 2005-06ರಷ್ಟರಲ್ಲಿ ಇದನ್ನೇ ಒಂದು ಖಾಸಗೀ ಉದ್ಯಮದ ರೀತಿಯಲ್ಲಿ ಪ್ರಾರಂಭ ಮಾಡುವುದಕ್ಕೆ ಶುರುಮಾಡಿದ್ದು NBFCಗಳು; ಅಂದರೆ ಬ್ಯಾಂಕೇತರ ಫೈನಾನ್ಸ್ ಕಂಪನಿಗಳು!
2005ರಲ್ಲಿ ಶುರುವಾದ ಕಂಪನಿಗಳ ವಹಿವಾಟು ಕೇವಲ ಐದು ವರ್ಷಗಳಲ್ಲಿ 20,000 ಕೋಟಿ ರೂ. ಗಣನೀಯ ಲಾಭ ಗಳಿಸುವಷ್ಟು ಮಟ್ಟಕ್ಕೆ ಬೆಳೆದವು. ಆದರೆ ಇದರ ಜೊತೆಗೆ ವಿರೋಧದ ಅಲೆಗಳೂ ಎದ್ದವು. ಅತಿಯಾದ ಬಡ್ಡಿ ಮತ್ತು ವಸೂಲಾತಿಯ ಪ್ರಕ್ರಿಯೆಗಳಲ್ಲಿ ಅಮಾನವೀಯ ನಡವಳಿಕೆಗಳು ಕಂಡುಬಂದವು. ಸಾಲ ಪಡೆದವರ ವಿರುದ್ಧವೂ ಆರೋಪಗಳು ಕೇಳಿಬಂದವು.
ಕೇವಲ ಕಳೆದ ಹತ್ತು ವರ್ಷಗಳ ಯಾವುದೇ ಖಾಸಗಿ ಫೈನಾನ್ಸ್ ಕಂಪನಿಗಳ ಆದಾಯವನ್ನು ನೋಡಿದರೆ ಸೋಜಿಗವೆನಿಸುತ್ತದೆ. ಅವು ಬೆಳೆದು ನಿಂತಿರುವ ರೀತಿಯು ಜನರಿಂದ ಅವು ಹೇಗೆಲ್ಲ ಸುಲಿಗೆ ಮಾಡುತ್ತಿವೆ ಎಂಬುದರ ಅಂದಾಜು ಸಿಗುತ್ತದೆ.
ಇದನ್ನೂ ಓದಿರಿ: ದೆಹಲಿ ಚುನಾವಣೆ | ಆಪ್-ಕಾಂಗ್ರೆಸ್ ಕದನದಲ್ಲಿ ಲಾಭವಾಗುವುದೇ ಬಿಜೆಪಿಗೆ?
ಬಜಾಜ್ ಫೈನಾನ್ಸ್ ಕಂಪನಿಯ 2015ರ ನೆಟ್ ವರ್ತ್ 898 ಕೋಟಿ ರೂಪಾಯಿ ಇದ್ದದ್ದು, ಈಗ ಇದರ ಒಟ್ಟು ನೆಟ್ ವರ್ತ್ 16,058 ಕೋಟಿ ರೂಪಾಯಿ. ಮತ್ತೊಂದು ಕಂಪನಿಯಾದ ಶ್ರೀರಾಮ್ ಫೈನಾನ್ಸ್‌ನದ್ದು 2015ರಲ್ಲಿ 1,028 ಕೋಟಿ ರೂಪಾಯಿ ಇದ್ದಂತಹ ನೆಟ್ ವರ್ತ್, ಈಗ 9,454 ಕೋಟಿ ರೂಪಾಯಿಯಾಗಿದೆ. ಹಾಗೆ, ಮೂಥೂಟ್ ಫೈನಾನ್ಸ್ ನೆಟ್‌ವರ್ತ್ 671 ಕೋಟಿ ರೂ. ಇದ್ದದ್ದು, ಈಗ 4400 ಕೋಟಿ ರೂ. ಆಗಿದೆ. ಅಂದರೆ ಒಟ್ಟು ಮಾರ್ಕೆಟ್ ಬಂಡವಾಳದಲ್ಲಿ 2015ರಿಂದ ಇಲ್ಲಿಗೆ ಮೂಥೂಟ್ ಫೈನಾನ್ಸ್ ಸುಮಾರು 910% ಬೆಳೆದು ನಿಂತಿದೆ. ಯಾವುದೇ NBFCಕಂಪನಿಗಳನ್ನು ತಗೆದುಕೊಂಡರೂ ಅವೆಲ್ಲವೂ ಎಷ್ಟು ಕೋಟಿ ಸಂಪಾದಿಸಿವೆ ಎಂಬುದು ಊಹೆಗೂ ಮೀರಿದ್ದು.

ಚಿನ್ನದ ಮೇಲೆ ಸಾಲ ಕೊಡುವಂತಹ ಮಣಪುರಂ ಗೋಲ್ಡ್ ಲೋನ್ ಕಂಪನಿಯ ಒಟ್ಟು ನೆಟ್ ವರ್ತ್ ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ 520% ಬೆಳೆದು ನಿಂತಿದೆ. ಬಡವರು ಕಷ್ಟಪಟ್ಟು ಮಾಡಿಸಿಕೊಂಡ ಚಿನ್ನದ ಸರವೋ ಅಥವಾ ಮಕ್ಕಳಿಗಾಗಿ ಮಾಡಿಸಿಕೊಂಡ ಒಡವೆಗಳು ಅಲ್ಪಾವಧಿಯ ಸಾಲಕ್ಕೆಂದು ಇವರ ಕೈ ಸೇರಿ ಕೊನೆಗೆ ಅಧಿಕ ಬಡ್ಡಿ ಕಟ್ಟಲಾಗದೆ ಕಂಪನಿಯ ಪಾಲಾಗಿಬಿಡುತ್ತವೆ. ಹೀಗಾಗಿ ಕಂಪನಿಗಳು ಮತ್ತಷ್ಟು ಬೆಳೆಯುತ್ತಿವೆ.

RBI ಮತ್ತು ಸರ್ಕಾರದ ನಡೆ
ಕಳೆದ ಏಳೆಂಟು ವರ್ಷಗಳ ಕೆಳಗೆ ಯಾವುದೇ ಬ್ಯಾಂಕಿನ ಅಥವಾ ಮೈಕ್ರೋ ಫೈನಾನ್ಸ್ ಕಂಪನಿಗಳ ಗರಿಷ್ಟ ಬಡ್ಡಿ 11%-12% ಇರುವಂತೆ ಆರ್.ಬಿ.ಐ ನಿಯಂತ್ರಿಸಿತ್ತು. ಆದರೆ ಇದರ ಮೇಲಿನ ಹಿಡಿತವನ್ನು ಕೇಂದ್ರ ಸರ್ಕಾರ ಮತ್ತು ನಮ್ಮ ರಿಸರ್ವ್ ಬ್ಯಾಂಕ್ 2022ರಲ್ಲಿ ಸಂಪೂರ್ಣ ಕೈ ಬಿಟ್ಟವು. ಅಂದರೆ ಯಾವುದೇ ಫೈನಾನ್ಸ್ ಕಂಪನಿಗಳು ತಾವಾಗಿಯೇ ಬಡ್ಡಿ ದರವನ್ನು ನಿಗದಿ ಮಾಡಬಹುದು ಎಂದಾಯಿತು. ಈಗ ಈ ಫೈನಾನ್ಸ್ ಕಂಪನಿಗಳು ಸುಮಾರು 20%ರಿಂದ 28%ವರೆಗೂ ಬಡ್ಡಿಯನ್ನು ವಸೂಲಿ ಮಾಡುತ್ತಿವೆ!
2020ರಲ್ಲಿ ಕೋವಿಡ್ ಕಾರಣದಿಂದ ಉಂಟಾದಂತಹ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಮತ್ತು RBI, ಈ ಕಾರ್ಪೋರೇಟ್ ಫೈನಾನ್ಸ್ ಕಂಪನಿಗಳ ಮೇಲಿನ ಹಿಡಿತವನ್ನು ಸಡಿಲಗೊಳಿಸಿದವು. ಕಂಪನಿಗಳೇ ತಮ್ಮ ಬಡ್ಡಿದರಗಳ ನಿಗದಿ ಮಾಡಿಕೊಳ್ಳಬಹುದು ಎನ್ನವಂತೆ ಕೈಚೆಲ್ಲಿ ಬಿಟ್ಟವು. ಅದಾದ ನಂತರ ಕಂಪನಿಗಳ ಲಾಭ ಮುಗಿಲು ಮುಟ್ಟುತ್ತಿದೆ. ಜನಸಾಮಾನ್ಯರು ಬೀದಿಪಾಲಾಗುತ್ತಿದ್ದಾರೆ. ಕೇಂದ್ರ ಸರ್ಕಾರವೂ ಶ್ರೀಮಂತರ ಮೇಲಿನ ತೆರಿಗೆ ಮತ್ತು ಬಡವರ ಮೇಲಿನ ಪರೋಕ್ಷ ತೆರಿಗೆ ಎರಡರಲ್ಲೂ ಯಾವುದೇ ವ್ಯತ್ಯಾಸ ಇಲ್ಲದಂತೆ ನಡೆದುಕೊಳ್ಳುತ್ತಲಿದೆ.
ನೋಟು ರದ್ದತಿ ಮತ್ತು ಕೋವಿಡ್ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಆದಂತಹ ನಿರುದ್ಯೋಗದ ಪ್ರಮಾಣದ ಬಗ್ಗೆ ಸರ್ಕಾರಗಳು ಗಮನ ವಹಿಸಿ, ಜನರ ಕೈಗೆ ಹಣ ನೀಡಬೇಕಿತ್ತು. ಕೊನೆಯ ಪಕ್ಷ ಹಣಕೊಡಲಾಗದಿದ್ದರೂ ಜನರ ಹಣ ಜನರ ಬಳಿಯೇ ಇರುವಂತಹ ಆರ್ಥಿಕ ಕ್ರಮಗಳನ್ನು ಜರುಗಿಸಬೇಕಿತ್ತು. ಆದರೆ ಅದೇ ಸಮಯದಲ್ಲಿ ದಿನ ಬಳಕೆಯ ವಸ್ತುಗಳಿಂದ ಹಿಡಿದು ಪೆಟ್ರೋಲ್ ಡೀಸೆಲ್ ತನಕ ಎಲ್ಲ ದರಗಳನ್ನು ಹೆಚ್ಚಳ ಮಾಡಿತು ಸರ್ಕಾರ.
ಇದನ್ನೂ ಓದಿರಿ: ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ
ಇಂತಹ ಸನ್ನಿವೇಶದಲ್ಲಿ ಈಗಾಗಲೇ ಹೈರಾಣಾಗಿದ್ದ ಹಳ್ಳಿ ಜನಕ್ಕೆ ಸರ್ಕಾರಗಳು ಸಹಾಯ ಮಾಡದೆ, ಮೈಕ್ರೋ ಫೈನಾನ್ಸ್ ಕಂಪನಿಗಳ ಕಾಟವೂ ಜೋರಾಯಿತು. ಜನರಿಗೆ ಸಣ್ಣ ಸಣ್ಣ ಸಾಲ ಕೊಟ್ಟು ಅಧಿಕ ಬಡ್ಡಿ ವಸೂಲಿ ಮಾಡುವ ಒಂದು ವ್ಯವಸ್ಥೆಯನ್ನು ಸರ್ಕಾರವೇ ನೇರವಾಗಿ ಪ್ರೋತ್ಸಾಹಿಸಿತು.
ಗೂಂಡಾ ವರ್ತನೆಯತ್ತ ಮೈಕ್ರೋ ಫೈನಾನ್ಸ್
ಮೈಕ್ರೋ ಫೈನಾನ್ಸ್ ವ್ಯವಸ್ಥೆಯು ಮಹಿಳೆಯರಿಗೆ ಮತ್ತು ಬಡವರಿಗೆ ಯಾವುದೇ ಜಾಮೀನು ಇಲ್ಲದೆ ಕೇವಲ ನಂಬಿಕೆಯ ಆಧಾರದಲ್ಲಿ ಹುಟ್ಟು ಪಡೆದು ಒಂದು ಗ್ರಾಮೀಣ ಬ್ಯಾಂಕ್ ಆಯಿತು. ಆದರೆ ಇಂದು ಬಹುತೇಕ ಖಾಸಗೀ ಬಂಡವಾಳಶಾಹಿಗಳು ಮೈಕ್ರೋ ಫೈನಾನ್ಸ್ ಮೂಲಕ ಅದೇ ಮಹಿಳೆಯರನ್ನು ಆತ್ಮಹತ್ಯೆಗೆ ತಳ್ಳುತ್ತಿವೆ.
ಈ ಕಂಪನಿಗಳು ಅತ್ಯಂತ ವ್ಯವಸ್ಥಿತವಾಗಿ ಹಳ್ಳಿಹಳ್ಳಿಗೂ ವ್ಯಾಪಿಸಿ ಗೂಂಡಾಗಳನ್ನು ಛೂ ಬಿಟ್ಟು ಕುಟುಂಬಗಳನ್ನು ಒಕ್ಕಲೆಬ್ಬಿಸುವ, ಪರೋಕ್ಷವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೀತಿಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ.
ಬಾಗಲಕೋಟೆಯ ನವನಗರದಲ್ಲಿ ಅಹಮದ್ ಎನ್ನುವವರು ಅಲ್ಲಿನ ಸಾಲಗಾರರ ಕಾಟಕ್ಕೆ ಹೆದರಿ ಬುರ್ಕಾ ಹಾಕಿಕೊಂಡು ಓಡಾಡುತ್ತಿದ್ದರಂತೆ. ಕೊನೆಗೆ ಬುರ್ಕಾ ಹಾಕಿದ್ದು ಈತನೇ ಅಂತ ಗೊತ್ತಾದ ಮೇಲೆ ಸಾರ್ವಜನಿಕವಾಗಿ ಥಳಿಸಲಾಗಿತ್ತು!

ದಾವಣಗೆರೆ ಹೊನ್ನಾಳಿಯ ದುರ್ಗಿಗುಡಿ ನಿವಾಸಿ, ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಪುಷ್ಪಲತಾ ಅವರು ಇದ್ದಕ್ಕಿದ್ದಂತೆ ಕಾಣೆ ಆಗಿದ್ದರು. ಎರಡು ದಿನಗಳ ನಂತರ ತುಂಗಭದ್ರಾ ನದಿಯಲ್ಲಿ ಹೆಣವಾಗಿ ಪತ್ತೆಯಾದರು. ಅವರ ಸಹೋದರಿಯ ಮನೆಯಲ್ಲಿ ವಿಚಾರಿಸಿದಾಗ ಪುಷ್ಪಲತಾ ಅವರ ಮೇಲೆ ಫೈನಾನ್ಸ್ ಕಂಪನಿಗಳು ಹೇರಿದಂತಹ ಒತ್ತಡ ಮತ್ತು ಕಿರುಕುಳದ ಸಂಗತಿ ಹೊರಬಿದ್ದಿತ್ತು.
ಹೀಗೆ ರಾಮನಗರ, ಚಾಮರಾಜನಗರ, ಮಂಡ್ಯ ಸೇರಿದಂತೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಗಳೇ ಅತ್ಯಧಿಕವಾಗಿವೆ. ಇನ್ನು ದಾಖಲಾಗದ ಸಾವಿರಾರು ಸಂಗತಿಗಳು ಕಣ್ಮರೆಯಾಗುತ್ತಿವೆ.
ಸ್ವಸಹಾಯ ಸಂಘದಂತಿರುವ ಧರ್ಮಸ್ಥಳ ಫೈನಾನ್ಸ್‌ನಲ್ಲಿಯೂ ಕಿರುಕುಳ
ಸಣ್ಣ ಸಣ್ಣ ಹಳ್ಳಿಗಳನ್ನೂ ವ್ಯಾಪಿಸಿರುವ, ಧರ್ಮಸ್ಥಳ ಗ್ರಾಮಾಭಿವೃಧ್ದಿ ಸಂಘಗಳೂ ಇಂದು ಮಹಿಳೆಯರ ನಡುವೆ ದ್ವೇಷವನ್ನು ಹೆಚ್ಚಿಸಿವೆ. ಮಹಿಳಾ ಗುಂಪಿನಲ್ಲಿ ಯಾರೇ ಒಬ್ಬ ಮಹಿಳೆ ಸಾಲ ಕಟ್ಟದೇ ಇದ್ದಲ್ಲಿ ಅದೇ ಮಹಿಳೆಗೆ ಜಾಮೀನಾಗಿರುವ ಮತ್ತೊಬ್ಬ ಮಹಿಳೆಯ ಮೇಲೆ ಒತ್ತಡ ಹೇರುವಿಕೆ ಎದುರಾಗುತ್ತದೆ. ಇದರಿಂದ ಮಹಿಳೆಯರ ನಡುವಿನ ದ್ವೇಷ ಮತ್ತು ಮನಸ್ತಾಪಗಳು ಹೆಚ್ಚಿವೆ. ಇದೇ ಕಾರಣಕ್ಕೆ ಮನೆಯ ಮಂದಿ ಊರು ಬಿಡುವಷ್ಟು ಸನ್ನಿವೇಶ ಉಂಟಾಗಿವೆ. ಇಂತಹ ಸಂಘಗಳ ಮೇಲೂ ಕಡಿವಾಣ ಹಾಕಬೇಕಿದೆ. ಇಂತಹ ಫೈನಾನ್ಸ್ ಕಂಪನಿಗಳು ಮೈಕ್ರೋ ಫೈನಾನ್ಸ್ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದು ಕಳವಳಕಾರಿ. ಧರ್ಮಸ್ಥಳ ಸಂಘಗಳ ಮೇಲೂ ನಿಯಂತ್ರಣ ತರುವ ತುರ್ತು ಅಗತ್ಯವಿದೆ.
ರಾಜ್ಯ ಸರ್ಕಾರದ ನಡೆ ಮತ್ತು ಸುಗ್ರೀವಾಜ್ಞೆ
ಕೆಲವು ಕಂಪನಿಗಳು ವಸೂಲಾತಿಗೆಂದು ಕೆಲವು ವ್ಯಕ್ತಿಗಳನ್ನು ಮುನ್ನಲೆಗೆ ಬಿಟ್ಟಿದ್ದವು. ಗೂಂಡಾಗಳ ರೀತಿಯಲ್ಲಿ ವಸೂಲಿ ಮಾಡಲು ಮುಂದಾದವರ ವಿರುದ್ದ ಈಗಾಗಲೇ ಬೆಳಗಾವಿ, ಮಂಡ್ಯ, ಮೈಸೂರು, ಬೀದರ್ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಫ್ಐಆರ್ ದಾಖಲಾಗಿವೆ. ಈ ವಿಚಾರಗಳು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಮುಖೇನ ಹೆಚ್ಚು ಪ್ರಚಾರವಾದ್ದರಿಂದ ಸರ್ಕಾರವೂ ಗಂಭೀರವಾಗಿ ಪರಿಗಣಿಸಿ ಹಲವು ಸಚಿವರನ್ನೊಳಗೊಂಡಂತೆ ಸಮಿತಿಯನ್ನೂ ರಚಿಸಿದೆ. ‘ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ-2025’ಯನ್ನು ಸಮಿತಿಯು ರೂಪಿಸಿದ್ದು ಹಲವು ಮಹತ್ವದ ಸಂಗತಿಗಳನ್ನು ಈ ಸುಗ್ರೀವಾಜ್ಞೆ ಪ್ರಸ್ತಾಪಿಸಿದೆ.
ಇದನ್ನೂ ಓದಿರಿ: ಸಿನೆಮಾಗಳು ‘ಮುಸ್ಲಿಂ ಭಯ ಮತ್ತು ದ್ವೇಷ’ ಬಿತ್ತಿದ್ದು ಹೇಗೆ?
ಸುಗ್ರೀವಾಜ್ಞೆಯಲ್ಲೇನಿದೆ?
* ನೋಂದಣಿರಹಿತ ಮತ್ತು ಪರವಾನಗಿರಹಿತ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು ನೀಡಿರುವ ಸಾಲದ ಅಸಲು ಮತ್ತು ಬಡ್ಡಿಯ ಮೊತ್ತವನ್ನು ಸಾಲಗಾರರು ಮರುಪಾವತಿ ಮಾಡಬೇಕಿಲ್ಲ.
*ನೋಂದಣಿರಹಿತ ಮತ್ತು ಪರವಾನಗಿರಹಿತ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು ಯಾವುದೇ ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಮತ್ತು ವಿಚಾರಣಾ ಹಂತದಲ್ಲಿ ಇರುವ ಎಲ್ಲ ಪ್ರಕರಣಗಳೂ ಸುಗ್ರೀವಾಜ್ಞೆ ಜಾರಿಯಾದ ಕ್ಷಣದಿಂದ ರದ್ದುಗೊಳ್ಳಲಿವೆ.
*ಸಾಲಗಾರರಿಗೆ ಹಿಂಸೆ, ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರರಿಗೆ ಆರು ತಿಂಗಳಿಗಿಂತ ಕಡಿಮೆ ಇಲ್ಲದ ಮತ್ತು ಮೂರು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 35 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ನೋಂದಣಿ ಪ್ರಾಧಿಕಾರವು ಅಂತಹ ಸಂಸ್ಥೆಗಳ ನೋಂದಣಿಯನ್ನು ಅಮಾನತು ಮಾಡಬಹದು ಅಥವಾ ಬ್ಯಾನ್ ಮಾಡಬಹುದು.
*ಸುಗ್ರೀವಾಜ್ಞೆ ಹೊರಡಿಸಿದ 30 ದಿನಗಳ ಒಳಗೆ ಆಯಾ ನೋಂದಣಿ ಪ್ರಾಧಿಕಾರದಲ್ಲಿ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಸಂಸ್ಥೆಗಳು ರಿಜಿಸ್ಟ್ರಾರ್ ಮಾಡಿಕೊಳ್ಳಬೇಕು.
*ಸಾಲಗಾರರ ಸಂಪೂರ್ಣ ಮಾಹಿತಿ, ಸಾಲದ ಮೊತ್ತ, ಬಡ್ಡಿದರ, ವಸೂಲಿಗೆ ಬಾಕಿ, ಸಾಲ ಪಡೆಯುವಾಗ ಸಂಗ್ರಹಿಸಿದ ಲಿಖಿತ ಮುಚ್ಚಳಿಕೆ ನೀಡಬೇಕು.
- * ನೋಂದಣಿ ಅವಧಿ ಒಂದು ವರ್ಷ ಮಾತ್ರ. ಅವಧಿ ಮುಗಿಯುವ 60 ದಿನಗಳ ಮೊದಲು ಮರು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಶೀಲಿಸಿದ ಬಳಿಕ ಪ್ರಾಧಿಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
- * ದೂರು ಬಂದರೆ ಅಥವಾ ಸ್ವಯಂಪ್ರೇರಿತವಾಗಿ ನೋಂದಣಿ ರದ್ದು ಮಾಡುವ ಅಧಿಕಾರವು ಪ್ರಾಧಿಕಾರಕ್ಕೆ ಇರಲಿದೆ.
* ಸುಗ್ರೀವಾಜ್ಞೆಯಲ್ಲಿರುವ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ, ಪ್ರಾಧಿಕಾರವು ನೋಟಿಸ್ ನೀಡದೆ ನೋಂದಣಿಯನ್ನು ಅಮಾನತು ಅಥವಾ ರದ್ದು ಮಾಡಬಹುದು.
- * ಸಾಲ ನೀಡುವ ಮತ್ತು ವಸೂಲು ಮಾಡುವ ನಿಯಮಗಳನ್ನು ಅಧಿಸೂಚನೆ ಮೂಲಕ ಸರ್ಕಾರ ರೂಪಿಸಬಹುದು.
- * ಸಾಲಗಾರರಿಂದ ಭದ್ರತೆಯಾಗಿ ಯಾವುದೇ ವಸ್ತು ಅಥವಾ ಆಸ್ತಿ ಅಡಮಾನ ಇಟ್ಟುಕೊಳ್ಳಬಾರದು. ಅಡಮಾನ ಇಟ್ಟುಕೊಂಡಿದ್ದರೆ ಅದನ್ನು ಸಾಲಗಾರರಿಗೆ ಹಿಂದಿರುಗಿಸಬೇಕು.
*ಕಿರುಕುಳ ಸಂಬಂಧ ಡಿವೈಎಸ್‌ಪಿ ಶ್ರೇಣಿಗಿಂತ ಮೇಲಿನ ಪೊಲೀಸ್ ಅಧಿಕಾರಿಗಳಿಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶ ನೀಡಲಾಗಿದೆ.
*ಸಾಲದಾತ ಮತ್ತು ಸಾಲಗಾರನ ನಡುವಿನ ವಿವಾದಗಳನ್ನು ಇತ್ಯರ್ಥಪಡಿಸಲು ಮಧ್ಯವರ್ತಿಯಾಗಿ ರಾಜ್ಯ ಸರ್ಕಾರವು ಒಂಬುಡ್ಸ್ಮನ್ ನೇಮಕ ಮಾಡಬಹುದು.
- * ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರುವುದು, ಅವಮಾನಿಸುವುದು, ಅಡ್ಡಿಪಡಿಸುವುದು, ಹಿಂಸಿಸುವುದು ನಿಷಿದ್ಧ.
- * ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರನ್ನು ನಿರಂತರವಾಗಿ ಹಿಂಬಾಲಿಸುವುದು, ಅವರ ಸ್ವಾಧೀನ ದಲ್ಲಿರುವ ಸ್ವತ್ತುಗಳ ಬಳಕೆಗೆ ಅಡ್ಡಿಪಡಿಸುವುದು ನಿಷಿದ್ಧ.
- * ಸಾಲಗಾರರು ಅಥವಾ ಅವರ ಕುಟುಂಬದವರು ವಾಸಿಸುವ, ಕೆಲಸ ಮಾಡುವ ಸ್ಥಳಕ್ಕೆ ನಿರಂತರವಾಗಿ ಭೇಟಿ ನೀಡಿ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು ನಿಷಿದ್ಧ.
- * ಬಲವಂತದಿಂದ ಸಾಲ ವಸೂಲಿ ಮಾಡಲು ಹೊರಗುತ್ತಿಗೆ ಸಿಬ್ಬಂದಿ ಬಳಕೆ, ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಬಳಸಿಕೊಳ್ಳುವುದು ನಿಷಿದ್ಧ.
- * ಸಾಲಗಾರನು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಸಾಲದಾತ ಅಥವಾ ಅವರ ಸಿಬ್ಬಂದಿ ಕಿತ್ತುಕೊಳ್ಳುವುದು ನಿಷಿದ್ಧ.
ಇಂತಹ ಹಲವು ಮಹತ್ವದ ನಿರ್ಧಾರಗಳನ್ನು ಸಗ್ರೀವಾಜ್ಞೆ ಹೊಂದಿದೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಈ ಅಂಶಗಳನ್ನು ವಿಸ್ತೃತವಾಗಿ ವರದಿ ಮಾಡಿವೆ. ಜನ ವಿರೋಧಿಯಾಗಿ ಸರ್ಕಾರಗಳು ಹಲವು ಸನ್ನಿವೇಶಗಳಲ್ಲಿ ಸುಗ್ರೀವಾಜ್ಞೆ ತಂದು ಟೀಕೆಗೆ ಒಳಗಾಗಿರುವುದುಂಟು. ಆದರೆ ಈ ಮಹತ್ವದ ಸುಗ್ರೀವಾಜ್ಞೆ ಜಾರಿಗೆ ಬಂದಲ್ಲಿ ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿ ಸ್ವಾಗತಾರ್ಹ ಚರ್ಚೆಗೆ ಒಳಗಾಗುವುದು ಖಾತ್ರಿ. ಈ ವಿಚಾರದಲ್ಲಿ ರಾಜ್ಯಪಾಲರು ರಾಜಕೀಯ ಮಾಡದೆ ಸುಗ್ರೀವಾಜ್ಞೆಗೆ ಒಪ್ಪಿಗೆ ಕೊಡಬೇಕಿದೆ.

ರಜನಿಕಾಂತ ಚಟ್ಟೇನಹಳ್ಳಿ
ಮಂಡ್ಯ ಜಿಲ್ಲೆಯ ಚಟ್ಟೇನಹಳ್ಳಿಯವರಾದ ರಜನಿಕಾಂತ ಅವರು ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡವರು.




