70ರ ದಶಕದಲ್ಲಿ ‘ದಲಿತ’ ಎನ್ನುವ ಶಬ್ದವನ್ನು ಅರ್ಥೈಸಲು ಸಾಕಷ್ಟು ಚರ್ಚೆಗಳು ನಡೆದವು. ಹಾಗೆಯೇ ಈಗ ಮತ್ತೆ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಇದು ಮರು ಅರ್ಥೈಸುವಿಕೆಯಾಗಿರದೆ, ‘ದಲಿತ’ ಎನ್ನುವ ಪದದ ಮೇಲೆ ನಡೆಸುವ ಪ್ರಹಾರದಂತೆ ಭಾಸವಾಗುತ್ತದೆ. ಹೀಗಾಗಲು ಮುಖ್ಯ ಕಾರಣ, ಚರಿತ್ರೆಯ ಗ್ರಹಿಕೆಯಲ್ಲಿಯ ಲೋಪಗಳು ಮತ್ತು ಮೇಲ್ಪದರಿನ ಹಾರಿಕೆಯ ಮಾತುಗಳಾಗಿವೆ. ಅದರಲ್ಲೂ ದಲಿತ ಚಳವಳಿಯಲ್ಲಿ ಸಕ್ರಿಯವಾಗಿದ್ದವರೇ ಅಪವ್ಯಾಖ್ಯಾನ ಅಥವಾ ಅಪಾರ್ಥಕ್ಕೆ ಗುರಿ ಮಾಡಲು ನಿಂತಾಗ ಇಂಥ ಚರ್ಚೆಗಳು ಭುಗಿಲೇಳುತ್ತವೆ. ಇಂದಿನ ದಲಿತ ಪದದ ಚರ್ಚೆಯೂ ಇಂಥದೇ ಸಂದರ್ಭದ್ದಾಗಿದೆ.
ವಿಧಾನಸಭೆಯಲ್ಲಿ ನಡೆದ ಚರ್ಚೆಯೊಂದರಲ್ಲಿ ವಿರೋಧಪಕ್ಷದ ನಾಯಕರಾದ ಅಶೋಕ್ ಅವರು ‘ದಲಿತ’ ಶಬ್ದವನ್ನು ಪ್ರಯೋಗ ಮಾಡಿದಾಗ ಎಚ್ ಸಿ ಮಹದೇವಪ್ಪನವರು ಹಾಗೂ ಜಿ ಪರಮೇಶ್ವರ ಅವರು ಆಕ್ಷೇಪವನ್ನು ವ್ಯಕ್ತಪಡಿಸಿ, ನೀವು ‘ದಲಿತ’ ಎನ್ನುವ ಶಬ್ದವನ್ನು ಬಳಸಬೇಡಿ ಸಂವಿಧಾನಾತ್ಮಕವಾದ ‘ಪರಿಶಿಷ್ಟ ಜಾತಿ’, ‘ಪರಿಶಿಷ್ಟ ಪಂಗಡ’ ಎನ್ನುವ ಪದ ಬಳಸುವಂತೆ ಹೇಳಿದ ಮಾತು ಚರ್ಚೆಗೆ ಗ್ರಾಸವಾಗುತ್ತಿದೆ. ಹಾಗೆಯೇ ಶ್ರೀಮತಿ ಬಿ.ಟಿ.ಲಲಿತಾ ನಾಯಕ್ ಅವರು, ದಲಿತ ಎನ್ನುವ ಪದಕ್ಕೆ “ತಂದೆ ಇಲ್ಲದೆ ಹುಟ್ಟಿದವರು” ಎನ್ನುವ ಅರ್ಥವಿದೆ. ಹೀಗಾಗಿ ಇಂತಹ ಪದವನ್ನು ಬಳಸಬಾರದು ಎಂದು ಹೇಳಿದ್ದು, ಹೆಚ್ಚಿನ ವಿವಾದಕ್ಕೆ ಕಾರಣವಾಗಿದೆ. ಈ ಅಭಿಪ್ರಾಯಗಳು ವರ್ತಮಾನದ ಹಾಗೂ ಚರಿತ್ರೆಯಲ್ಲಾದ ಚರ್ಚೆಯ ಸಂಗತಿಗಳನ್ನು ಸರಿಯಾಗಿ ಗ್ರಹಿಸದೇ ಹೋಗಿದ್ದರ ಪರಿಣಾಮವಾಗಿದೆ.
ಅಪಾರ್ಥದ ಮೂಲ ಎಳೆಯ ಸೆಲೆಗಳು
ನವೋದಯದ ಸಂದರ್ಭದಿಂದ ಹಿಡಿದು 70ರ ದಶಕದವರೆಗೆ ‘ಹರಿಜನ’ ಎನ್ನುವ ಪದ ಹೆಚ್ಚು ಬಳಕೆಯಲ್ಲಿತ್ತು. ಈ ಪದವನ್ನು ಗಾಂಧೀಜಿಯವರು ಅಸ್ಪೃಶ್ಯರಿಗೆ ನಾಮಕರಣ ಮಾಡಿದರು ಎಂದು ಹೇಳುವುದಿದೆ. ಆದರೆ ಅದು ಸಮರ್ಥನೀಯವಲ್ಲ. ಏಕೆಂದರೆ ಹರಿಜನ ಎನ್ನುವ ಪದವನ್ನು 17ನೇ ಶತಮಾನದಲ್ಲಿ ಹರಿದಾಸರು ಬಳಸಿದ್ದಾರೆ. ರಾಮದಾಸರು ಈ ಪದವನ್ನು ಬಳಸಿದರು. ರವಿದಾಸರು ತಮ್ಮ ‘ಧೂಹಾ’ಗಳಲ್ಲಿಯೂ ಈ ಪದ ಬಳಸಿದ್ದಾರೆ. ಗಾಂಧೀಜಿಯವರು ದೇವರು; ಅನಾಥ ಬಂಧು, ದೀನ ಬಂಧು, ಹೀಗಾಗಿ ಪಂಚಮರು ‘ದೇವರಿಗೆ ಪ್ರಿಯರು’, ಅವರಿಗೆ ಅಸ್ಪೃಶ್ಯರೆಂದು ಕರಿಯಬಾರದು ಎಂದು ಹೇಳಿ, ತಮ್ಮ ಪತ್ರಿಕೆ ಮೂಲಕ ಹರಿಜನ ಪದವನ್ನು ಜನಪ್ರಿಯಗೊಳಿಸಿದರು.
ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?
70ರ ದಶಕದ ದಲಿತ ಚಳವಳಿಯ ಆರಂಭದಲ್ಲಿ ‘ಹರಿಜನ’ ಎಂಬ ಪದದ ಮೇಲೆ ದಲಿತರು ಕೆಂಡ ಕಾರಿದರು. “ನಾವು ಅನಾಥರಲ್ಲ”, “ದೇವರ ಮಕ್ಕಳೂ ಅಲ್ಲ”, “ನಮಗೂ ತಂದೆ ತಾಯಿಗಳಿದ್ದಾರೆ” ಎಂದು ಹೇಳುತ್ತಾ, ಮಹಾರಾಷ್ಟ್ರದಲ್ಲಿ ಬಳಕೆಯಾಗುತ್ತಿದ್ದ ದಲಿತ ಪದವನ್ನೇ ಸ್ವಾಭಿಮಾನದಿಂದ ಬಳಕೆಗೆ ತಂದರು. ಮಹಾರಾಷ್ಟ್ರದಲ್ಲಿ ಈ ಸ್ಥಿತಿ ಇರಲಿಲ್ಲ. ಏಕೆಂದರೆ, ಡಾ ಅಂಬೇಡ್ಕರ್ ಅವರು ‘ಹರಿಜನ’ ಪದಕ್ಕೆ ಪ್ರತಿಯಾಗಿ “ನೀವೇನು ರಾಕ್ಷಸರ ಮಕ್ಕಳೊ?” ಎಂದು ಪ್ರಶ್ನಿಸುವುದರ ಮೂಲಕ ಮೊದಲೇ ವೈಚಾರಿಕತೆಯ ಅಡಿಪಾಯವನ್ನು ಹಾಕಿದ್ದರು.
ಶ್ರೀಮತಿ ಬಿ.ಟಿ.ಲಲಿತಾ ನಾಯಕ್ ಅವರು ‘ದಲಿತ’ ಪದಕ್ಕೆ ಹಾಗೆ ಅರ್ಥ ಹೇಳಿದರೂ, ಆ ಪದ ನಿಘಂಟುವಿನಲ್ಲೂ ಇಲ್ಲ ಎಂದು ಹೇಳುತ್ತಾರೆ. ಕನ್ನಡದ ಹೆಚ್ಚಿನ ನಿಘಂಟುಗಳಲ್ಲಿ ‘ದಲಿತ’, ‘ದಳಿತ’ ಎನ್ನುವ ಪದಕ್ಕೆ ಚೂರು, ತುಂಡು, ಒಡೆಯಲ್ಪಟ್ಟ, ಸೀಳಲ್ಪಟ್ಟ, ತುಂಡು ಮಾಡಲ್ಪಟ್ಟ, ದಮನಕ್ಕೆ ಒಳಗಾದ, ಶೋಷಿತ ಜನ ಎಂಬ ಅರ್ಥಗಳು ದೊರೆಯುತ್ತವೆ. ‘ದಲ’ ಪದ ಮೂಲತಃ ಸಂಸ್ಕೃತ ದಿಂದ ಬಂದುದಾಗಿದೆ.
ದಲಿತ ಪದದ ಬಳಕೆಯ ಹಿನ್ನೋಟ
ಮರಾಠಿ ಲೇಖಕರ ಪ್ರಕಾರ 1869ರಲ್ಲಿ ಸಾವಿತ್ರಿಬಾಯಿ ಫುಲೆ (ಹಾಗೂ ಜ್ಯೋತಿಬಾ ಫುಲೆ) ಅವರು ‘ಮಹರ್’ ಎಂಬ ಪದಕ್ಕೆ ಸಮಾನಾರ್ಥಕವಾಗಿ ‘ದಲಿತ’ ಎಂಬ ಪದ ಮೊದಲು ಬಳಸಿದ್ದಾಗಿ ಉಲ್ಲೇಖಿಸುತ್ತಾರೆ. 1930ರಲ್ಲಿ ಎಲ್ಲ ಜಾತಿಯ ಅಸ್ಪೃಶ್ಯರನ್ನು ಒಗ್ಗೂಡಿಸಲು ಹಾಗೂ ಸಬಲೀಕರಣಕ್ಕಾಗಿ ಈ ಪದವನ್ನು ಪದೇಪದೇಯಾಗಿ ಕಾಂಗ್ರೆಸ್ ಪಕ್ಷ ಬಳಸಿದೆ. ಅಲ್ಲದೆ ‘ಅಖಿಲ ಭಾರತ ದಲಿತ ಕಾಂಗ್ರೆಸ್ ಪರಿಷತ್ತು’ ರೂಪಿಸಿದ್ದು ಸ್ಮರಿಸಬಹುದು. ಸೈಮನ್ ಆಯೋಗವೂ ಈ ಪದವನ್ನು ಬಳಸಿದೆ. ಡಾ. ಅಂಬೇಡ್ಕರ್ ಅವರು 1930ರಿಂದ 1940ರವರೆಗೆ ಈ ಪದವನ್ನು ಹಲವು ಬಾರಿ ಬಳಸಿದ್ದಾರೆ. `ಅಖಿಲ ಭಾರತ ದಲಿತ ಫೆಡರೇಶನ್’ (AIDF) ಮೂಲಕವೇ ಅವರು ಸರ್ವತೋಮುಖ ಅಭಿವೃದ್ಧಿಗಾಗಿ ಬ್ರಿಟಿಷರಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ. ‘ಭಾರತದ ಸ್ವಾತಂತ್ರ್ಯದ ಪ್ರಶ್ನೆಯಲ್ಲಿ ದಲಿತ ವರ್ಗಗಳ ದೃಷ್ಟಿಕೋನ’ ಎಂಬ ಲೇಖನವೂ ಇದೆ. ‘ಬ್ರಿಟಿಷ್ ಸಾಮ್ರಾಜ್ಯ ಮತ್ತು ವಿಶ್ವದಲ್ಲಿ ನಡುಕ ಸೃಷ್ಟಿಸಿದ ಪದ’ ಎಂದೇ ಬರೆಯುತ್ತಾರೆ. ಆದರೆ ದಶಕದ ಹಿಂದೆ ಪತ್ರಿಕೆವೊಂದರ ಲೇಖನದಲ್ಲಿ ‘ಈ ಪದದ ಬಗ್ಗೆ ಅಂಬೇಡ್ಕರ್ ಅವರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ಓದಿದ ನೆನಪು. ಆದರೆ ಅಂಬೇಡ್ಕರ್ ಅವರ ಆ ಅಭಿಪ್ರಾಯ ನನ್ನ ಓದಿನ ವ್ಯಾಪ್ತಿಗೆ ದೊರಕಿಲ್ಲ.
‘ದಲಿತ’ ಪದ ಕೋರ್ಟಿನ ವಿಚಾರ ಮತ್ತು ಕೋಮುವಾದಿ ಶಕ್ತಿ
“ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಪದಗಳ ಬದಲಾಗಿ ‘ದಲಿತ’ ಎಂಬ ಪದ ಬಳಸುತ್ತಿದ್ದಾರೆ” ಎಂದು ಆಕ್ಷೇಪಿಸಿ 2018ರಲ್ಲಿ ಮಹಾರಾಷ್ಟ್ರದ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದರು. ಆಗ ಕೋರ್ಟ್ ಸಾಂವಿಧಾನಿಕವಾದ ‘ಪರಿಶಿಷ್ಟ ಜಾತಿ’ ಮತ್ತು ‘ಪರಿಶಿಷ್ಟ ಪಂಗಡ’ ಎಂಬ ಪದಗಳನ್ನು ಬಳಸಬೇಕೆಂದು ದಲಿತ ಪದ ಸಾಂವಿಧಾನಿಕ ಅಲ್ಲದ್ದರಿಂದ ಬಳಸಬಾರದು ಎಂದು ಹೇಳಿತು. ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾದ ಅಶೋಕ ಅವರು ‘ದಲಿತ’ ಎಂಬ ಪದ ಬಳಸಿದ್ದರಿಂದ ಎಚ್ ಸಿ ಮಹದೇವಪ್ಪ ಹಾಗೂ ಜಿ ಪರಮೇಶ್ವರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಾಗಿಯೇ ಇದೆ. ಆಡಳಿತಾತ್ಮಕವಾಗಿ ಸಾಂವಿಧಾನಿಕ ಪದವನ್ನೇ ಬಳಸಬೇಕಾಗುತ್ತದೆ. ಪರ್ಯಾಯವಾಗಿ ‘ದಲಿತ’ ಪದ ಬಳಸುವುದು ಸರಿಯಾದ ಕ್ರಮವಾಗಲಾರದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಎನ್ನುವ ಪದ ಹೇಗೆ ಸಾಂವಿಧಾನಾತ್ಮಕ ಶಾಸನದ ಪದವೋ, ದಲಿತ ಎನ್ನುವ ಪದವು ಜನಮಾನಸದ ಸಾಮಾಜಿಕ ಪದವಾಗಿದೆ. ಹೀಗಿದ್ದು ಆಯಾ ಪದಗಳನ್ನು ಆಯಾ ಕ್ಷೇತ್ರದಲ್ಲಿಯೇ ಬಳಸುವುದು ಅನಿವಾರ್ಯ. ಕೋರ್ಟಿನ ಆಜ್ಞೆಯಾಗಲಿ ದಲಿತ ನಾಯಕರ ಪ್ರತಿಪಾದನೆ ಆಗಲಿ ಎಲ್ಲವೂ ಸಮರ್ಥನೀಯವಾಗಿವೆ.
ಇದನ್ನೂ ಓದಿರಿ: ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?
ಈ ಪ್ರಕರಣದ ನಡೆಯಲಿ ತಾಳ ತಪ್ಪಿದ್ದು ಎಲ್ಲಿ ಎಂದರೆ, ಕೋರ್ಟಿನ ಆದೇಶದಲ್ಲಿಯ “ದಲಿತ – ಪದ ಬಳಸಬಾರದು” ಎಂಬ ಮಾತನ್ನಷ್ಟೇ ಎತ್ತಿಕೊಂಡು, ನಿಷೇಧಾತ್ಮಕವಾದ ರೀತಿಯಲ್ಲಿ ಹರಿ ಬಿಟ್ಟಿದ್ದು. ಕೋಮುವಾದಿ ಶಕ್ತಿಗಳು ದಲಿತ ಪದದೊಂದಿಗೆ ಇರುವ ಸಾಮಾಜಿಕ ಸಂಘಟನಾತ್ಮಕ ಶಕ್ತಿ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಬಳಕೆಯಾಗುತ್ತಿರುವ ದಲಿತ ಪದದ ಶಕ್ತಿಯನ್ನು ಭಂಜನೆ ಮಾಡಿ, ದಲಿತರನೇ ಒಡೆದು ಹಾಕುವ ದುರುದ್ದೇಶದಿಂದ ದಲಿತ ಪದಕ್ಕೆ ಅಪಾರ್ಥದ ಸೋಂಕು ಹಚ್ಚಿ ಹರಿಯ ಬಿಟ್ಟಂತಿದೆ. ದಲಿತ ಪದ ಬಳಕೆಯ ಆಕ್ಷೇಪಣೆಯನ್ನು ಎತ್ತಿ ಕೋಟಿ೯ಗೆ ಹೋದವರು ಆರ್‌ಎಸ್‌ಎಸ್‌ನ (ದಲಿತ?) ಸದಸ್ಯರು ಎನ್ನುವ ಮಾತಿದೆ. ಈ ವಿಷಯವೂ ಪರೋಕ್ಷವಾಗಿ ಸಂಕೀರ್ಣತೆಗೆ ಕಾರಣವಾಗಿದೆ. ಈ ಕೋಮುವಾದಿ ನಡೆಯ ವಿಚಾರವನ್ನೇ ಸತ್ಯ ಎಂದು ನಂಬಿ, ಕೆಲವು ಪ್ರಗತಿಪರ ಕ್ರಿಯಾಶೀಲ ಚಿಂತಕರು ದಾರಿ ತಪ್ಪುತ್ತಿದ್ದಾರೆ. ಅಂತಹ ಅಪಗ್ರಹಿಕೆಗೆ ಬಿ.ಟಿ.ಲಲಿತಾ ನಾಯಕ್ ಅವರು ಒಳಗಾದಂತಿದೆ. ಶ್ರೀಮತಿ ಬಿ.ಟಿ.ಲಲಿತಾ ನಾಯಕ್ ಅವರು ದಲಿತ ಬಂಡಾಯ ಚಳವಳಿಯ ಜೊತೆಗೆ ಅಷ್ಟೇ ಸಕ್ರಿಯವಾಗಿ ಕೆಲಸ ಮಾಡಿದವರು. ಮಹಿಳೆಯರಲ್ಲಿ ಅತ್ಯಂತ ಹಿರಿಯರು, ಪ್ರಗತಿಪರ ನೆಲೆಯಲ್ಲಿಯೇ ನಿಂತು ಬರೆದವರು. ಅವರಿಂದ ನಿರೀಕ್ಷಿಸಲಾರದ ಮಾತುಗಳು ಅವು. ಕೆಲ ಚಿಂತಕರು ದಲಿತ ಪದದ ಅಪಾರ್ಥದ ಅರ್ಥೈಸುವಿಕೆಯೊಂದಿಗೆ ಈ ಪದವನ್ನು ಬಿಟ್ಟು ಬೇರೆ ಪದವನ್ನು ಬಳಸಬೇಕು ಎನ್ನುತ್ತಿದ್ದಾರೆ. ಈ ಚಿಂತನೆ ಮುಂದೆ ಎಂತಹ ಪೆಟ್ಟು ಕೊಡಬಲ್ಲದು ಎಂಬ ಮುನ್ನೋಟವಿಲ್ಲದೆ ಹೇಳಿದ ಮಾತಾಗಿದೆ. ಒಂದು ವೇಳೆ ಆ ದೂರದೃಷ್ಟಿ ಇದ್ದದ್ದೇ ಆದರೆ ಇಂಥ ಮಾತು ಹೇಳುತ್ತಿರಲಿಲ್ಲ.
ದೂರ ದೃಷ್ಟಿ ಚಿಂತನೆ ಇಲ್ಲದೆ ಹೇಳಿದ ಮಾತು
ದಲಿತ ಚಳವಳಿಗೆ ಹಾಗೂ ದಲಿತ ಸಾಹಿತ್ಯ ಚಳವಳಿಗೆ ಈಗ 50 ವರ್ಷ ತುಂಬಿದೆ. ಈ ಚಳವಳಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಾದ್ಯಂತ ವ್ಯಾಪಿಸಿದೆ. ವಿಶ್ವದಲ್ಲಿಯೇ ದಲಿತ ಸಾಹಿತ್ಯಕ್ಕೆ. ತನ್ನದೇ ಆದ ಸ್ಥಾನವಿದೆ; ಇಂಥ ವಿದ್ಯಮಾನಗಳು ಕೋಮುವಾದಿಗಳಿಗೆ ಸಹಿಸಲಾಗದ ತುತ್ತಾಗಿವೆ. ಅಪಾರ್ಥದ ಸೋಂಕು ಅದು ಭಾರತೀಯ ದಲಿತ ಸಾಹಿತ್ಯಕ್ಕೆ ಹಾಗೂ ಚಳವಳಿಗೆ ಅಂಟಿಸಿದಂತೆ. ಈಗ ದಲಿತ ಪದ ಕೈಬಿಡುವುದು ಎಂದರೆ, ಈ ಐವತ್ತು ವರ್ಷದ ಸಂಘರ್ಷಾತ್ಮಕ ಬದುಕಿನ ಚಳವಳಿಯ ಚರಿತ್ರೆಯನ್ನೇ ನಾಶ ಮಾಡುವುದು ಎಂದರ್ಥ. ಹೀಗಾಗಿ ಈ ಪ್ರಯತ್ನ ಭಾರತೀಯ ದಲಿತ ಚಳವಳಿಯ ಹೋರಾಟದ ಇತಿಹಾಸಕ್ಕೆ ನಾವಾಗಿಯೇ ತೆಗ್ಗು ತೋಡಿ ಸಂಸ್ಕಾರ ಮಾಡಿದಂತೆ. ಚರಿತ್ರೆ ನಾಶಮಾಡುವುದು ಸುಲಭ, ಆದರೆ ಕಟ್ಟುವುದು ಕಷ್ಟ. ಇದರ ಭವಿತವ್ಯದ ಪರಿಣಾಮವನ್ನು ಎಚ್ಚರಿಕೆಯಿಂದ ಅರಿಯಬೇಕಿದೆ.
ದಲಿತ- ಒಂದು ಆಲೋಚನಾ ಕ್ರಮ ಹಾಗೂ ವ್ಯಾಖ್ಯಾನಗಳು
ದಲಿತ ಎಂದರೆ ಜಾತಿವಾದಿ ಪದವಲ್ಲ. ಅದು ಜಾತಿಯನ್ನು ಪ್ರತಿನಿಧಿಸುವುದಿಲ್ಲ. ಜಾತೀಯತೆಯನ್ನೇ ಕೇಂದ್ರ ಮಾಡಿಕೊಂಡು ಶೋಷಣೆ ಮಾಡುವವರ ವಿರುದ್ಧ ಧ್ವನಿಯೆತ್ತಿ ನಿಂತ “ಒಂದು ಜನ ವರ್ಗದ ಆಲೋಚನಾ ಕ್ರಮ”ವೇ ದಲಿತ . ಇದಕ್ಕೆ ದಲಿತ ಪ್ರಜ್ಞೆ, ದಲಿತ ತಾತ್ವಿಕತೆ, ದಲಿತ ಸಂವೇದನೆ ಎನ್ನುವಂತವು ಅಡಿಪಾಯವಾಗಿವೆ. ಅಲ್ಲದೆ ಅದು ತಳ ಸಮುದಾಯಗಳನ್ನು ಅರಿವಿನಿಂದ ಎಚ್ಚರಿಸಿದ ಸ್ವಾಭಿಮಾನದ ಪದವಾಗಿದೆ. ಈ ಪದ ಕಾಲದಿಂದ ಕಾಲಕ್ಕೆ ಭಿನ್ನ ಅರ್ಥದ ವ್ಯಾಖ್ಯಾನಗಳನ್ನು ಪಡೆದುಕೊಂಡಿದೆ. ವ್ಯಾಖ್ಯಾನಗಳು ಏನೇ ಇದ್ದರೂ, ದಲಿತ ಪ್ರಜ್ಞೆ, ದಲಿತ ತಾತ್ವಿಕತೆ ಎನ್ನುವುದು ಸ್ಥಾಯಿಯಾದುದಾಗಿದೆ.
ದಲಿತ ಬಂಡಾಯದ ಸಂಘಟನೆಯಲ್ಲಿ ಮೊದಲು ಈ ಪದಕ್ಕೆ ವ್ಯಾಖ್ಯಾನ ಮಾಡಿದವರು ಮಾರ್ಕ್ಸ್ ವಾದಿ ಚಿಂತಕರು. “ಶೋಷಣೆ ಎಂಬ ಪದಕ್ಕೆ ಜಾತಿಭೇದವಿಲ್ಲ; ಆರ್ಥಿಕ ಸಾಮಾಜಿಕ ರಾಜಕೀಯ ರಂಗದಲ್ಲೆಲ್ಲ ಶೋಷಣೆಗೆ ಒಳಗಾದ ಎಲ್ಲ ಜನರು ದಲಿತರು” ಎಂದು ವ್ಯಾಖ್ಯಾನಿಸಿದರು.
ಇನ್ನು ಕೆಲವು ಅಂಬೇಡ್ಕರ್ ವಾದಿ ಚಿಂತಕರು ಈ ಕೆಳಕಂಡಂತೆ ವ್ಯಾಖ್ಯಾನಿಸಿದರು. “ಪಂಚಮರು ಅಥವಾ ಬಹಿಷ್ಕೃತರು ಎಂದು ಕರೆಯಿಸಿಕೊಳ್ಳುವ ಅಸ್ಪೃಶ್ಯರೆಲ್ಲರೂ ದಲಿತರು”.
“ಅಸ್ಪೃಶ್ಯರು ಸೇರಿದಂತೆ (ಎರಡನೆಯ ವ್ಯಾಖ್ಯಾನ) ಅಸ್ಪೃಶ್ಯತೆಯ ನೋವನ್ನು ಅನುಭವಿಸದಿದ್ದರೂ, ಅಸ್ಪೃಶ್ಯರ ಹಾಗೆ ಆರ್ಥಿಕ ಸಾಮಾಜಿಕ ರಾಜಕೀಯ ರಂಗದಲ್ಲಿ ಶೋಷಣೆಗೆ ಒಳಗಾದ ಜನರು ಸೇರಿ ದಲಿತರಾಗುತ್ತಾರೆ” ಎಂದು ಲೋಹಿಯಾವಾದಿ ಚಿಂತಕರು ವ್ಯಾಖ್ಯಾನಿಸಿದರು.
ದಲಿತ ಸಂಘರ್ಷ ಸಮಿತಿ ಮಾಡಿದ ವ್ಯಾಖ್ಯಾನವನ್ನು ಒಳಗೊಂಡಂತೆ ನಾನು ರೂಪಿಸಿದ ಈ ಕೆಳಕಂಡ ವ್ಯಾಖ್ಯಾನ ಹೆಚ್ಚಿನ ಮಾನ್ಯತೆ ಪಡೆಯಿತು. ಅದು ಹೀಗಿದೆ: “ಶತಮಾನಗಳಿಂದ ಜನಸಮುದಾಯದಲ್ಲಿ ಆರ್ಥಿಕ ಸಾಮಾಜಿಕ ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಶೋಷಣೆಗೆ ಒಳಗಾದವರು, ಒಟ್ಟು ಮನುಷ್ಯದೊಂದಿಗೆ ಬದುಕಲಾಗದೆ ಊರ ಹೊರಗೆ ವಾಸಿಸಿ, ಕೀಳುವೃತ್ತಿಗೆ ಅವಲಂಬಿತರಾಗಿ ಹೆಸರು ಹೇಳಿಕೊಳ್ಳಲು ನಾಚಿಕೆ ಪಡುವ ಅಸ್ಪೃಶ್ಯರು ಅಥವಾ ಬಹಿಷ್ಕೃತರೆನಿಸಿಕೊಂಡವರೆಲ್ಲರೂ ದಲಿತರೆನಿಸಿಕೊಳ್ಳುತ್ತಾರೆ”.
ಈ ಕೊನೆಯ ವ್ಯಾಖ್ಯಾನ ಬರುವುದಕ್ಕೆ ಮುಖ್ಯ ಕಾರಣ, ಆ ಸಂದರ್ಭದಲ್ಲಿ ಹಾವನೂರು ವರದಿ ಜಾರಿಗೆ ಬರುವುದರೊಂದಿಗೆ ಅಸ್ಪೃಶ್ಯರಲ್ಲದ ಕೆಲ ಸಮುದಾಯಗಳು ಅಸ್ಪೃಶ್ಯರ ಪಟ್ಟಿಯಲ್ಲಿ ಸೇರಿದ್ದರಿಂದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆಲ ಜಾತಿಯವರು ಪಟ್ಟಿಯಿಂದ ಹೊರಗುಳಿದಿರುವುದು ಕಾರಣವಾಗಿತ್ತು. ಸರಕಾರ ಗುರುತಿಸಿರುವ ಪಟ್ಟಿಯಲ್ಲಿದ್ದವರು ಮಾತ್ರ ದಲಿತರಲ್ಲ; ಅದರ ಆಚೆಗೂ ಇದ್ದಾರೆ ಎನ್ನುವ ಅರಿವಿನಿಂದ ವ್ಯಾಖ್ಯಾನ ರೂಪಗೊಂಡಿತ್ತು. ಅನಂತರದಲ್ಲಿ ಮಂಡಲ ಆಯೋಗದ ‘ಓಬಿಸಿ’ ಪಟ್ಟಿಯೂ ಒಳಗೊಳ್ಳಲು ಯತ್ನಿಸಿತು. ಯಾವಾಗ ದಲಿತ ಎನ್ನುವ ಪದವನ್ನು ಕೆಲವರು ‘ಅಸ್ಪೃಶ್ಯರಿಗೆ’ ಸೀಮಿತಗೊಳಿಸಲು ಯತ್ನಿಸಿದಾಗ ವಿರೋಧಿಸಿದ ಸಂದರ್ಭಗಳಿವೆ. ಅದು ತಪ್ಪಲ್ಲ. ಏಕೆಂದರೆ ದಲಿತ ಎನ್ನುವುದು ‘ಒಂದು ಆಲೋಚನಾ ಕ್ರಮ’ ಎನ್ನುವ ನಿಲುವು ಆಗಿನ್ನೂ ರೂಪಗೊಂಡಿರಲಿಲ್ಲ.
ಚರಿತ್ರೆಯಲ್ಲಿ ದಲಿತರನ್ನು ಗುರುತಿಸಲು ಬಳಕೆಯಾದ ಪದಗಳು
ದಲಿತ ಪದದ ವ್ಯಾಖ್ಯಾನಗಳು ಕಾಲದಿಂದ ಕಾಲಕ್ಕೆ ಬದಲಾವಣೆಗಳಿಗೆ ಅನುಗುಣವಾಗಿ ಬದಲಾಗುತ್ತಾ ಹೋಗಿವೆ ಮತ್ತು ಬದಲಾಗುತ್ತವೆ. ಅದೇ ಚಲನಶೀಲತೆಯ ಪ್ರತೀಕ. ಹೀಗಾಗಿ ದಲಿತ ಎನ್ನುವ ಪದಕ್ಕೆ ಚೌಕಟ್ಟನ್ನು ಹಾಕಲು ‘ದಲಿತ ಪ್ರಜ್ಞೆ’ ಎಂಬ ಶಬ್ದ ಬಳಕೆಗೆ ಬರುವಂತಾಯಿತು. ದೇಶದ ಚರಿತ್ರೆಯಲ್ಲಿಯೂ ದಲಿತರನ್ನು ಗುರುತಿಸುವ ಪದಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಬಂದಿವೆ. ಅಂತ್ಯಜರು, ಅಂತ್ಯವಸಾಯಿ, ದಶ್ಶುಗಳು, ತಿರುಕುಲತರ್, ಪಂಚಮರು, ಆದಿಮರು, ಹರಿಜನರು, ಅಸ್ಪೃಶ್ಯರು, ಬಹಿಷ್ಕೃತರು, ಆದಿ ಕರ್ನಾಟಕ, ಅತಿ ಶೂದ್ರರು ಹೀಗೆಯೇ ಈ ಪಟ್ಟಿ ಹನುಮಂತನ ಬಾಲ ಬೆಳೆದಂತೆ ಬೆಳೆಯುತ್ತಲೇ ಹೋಗುತ್ತದೆ. ಹೀಗಾಗಿ ಡಾ. ಅಂಬೇಡ್ಕರ್, “ಮಹಾತ್ಮರು ಬರುತ್ತಾರೆ ಹೋಗುತ್ತಾರೆ ಅಸ್ಪೃಶ್ಯರು ಅಸ್ಪೃಶ್ಯರಾಗಿಯೇ ಉಳಿಯುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿರಿ: ವಿಶೇಷ ಲೇಖನ | ದಲಿತರು ಹಿಂದೂ ದೇವಾಲಯಗಳನ್ನು ಬಹಿಷ್ಕರಿಸಬೇಕಿದೆ
ಯಾವುದೇ ಒಂದು ಪದ ಅವಮಾನ ಸೂಚಕ ಎನಿಸಿದಾಗ, ದೋಷಪೂರಿತ ಎನಿಸಿದಾಗ, ಅಸ್ತಿತ್ವ ಕಳೆದುಕೊಂಡಾಗ, ಕಾರ್ಯಕಾರಣದ ಸಂಬಂಧಗಳ ಹಿನ್ನೆಲೆಯಲ್ಲಿ ಶಬ್ದಗಳನ್ನು ಬದಲಾಯಿಸಲು ಯತ್ನಿಸಿದ್ದು, ಸಮಾಜ ಸುಧಾರಕರು ಮತ್ತು ಸಮಾಜ ಚಿಂತಕರೇ ಆಗಿದ್ದಾರೆ. ಸಮಾಜ ಸುಧಾರಕರು ಬಂದಾಗಲೆಲ್ಲ ಹೊಸ ಪದಗಳು ಹುಟ್ಟಿಕೊಂಡಿವೆ. ಇಂಥ ಕೆಲಸವನ್ನು ಸ್ವತಃ ದಲಿತರೇ ಮಾಡಿದ್ದು ತುಂಬಾ ಕಡಿಮೆ. ‘ಆದಿ ಕರ್ನಾಟಕ’ ಎನ್ನುವ ಪದ ದಲಿತರೇ ಬೇಡಿಕೆ ಇಟ್ಟು ಮೈಸೂರು ಮಹಾರಾಜರಲ್ಲಿ ವಿನಂತಿಸಿ ಮನ್ನಣೆ ಪಡೆದುಕೊಂಡದ್ದಾಗಿದೆ. ಇದು ನಾವು ಈ ನೆಲದ ಮೂಲ ನಿವಾಸಿಗಳು ಎನ್ನುವುದನ್ನು ಪ್ರತಿನಿಧಿಸುತ್ತದೆ. ಇದೇ ಸಂದರ್ಭದಲ್ಲಿ ಆದಿ ದ್ರಾವಿಡ, ಆದಿ ಆಂಧ್ರ, ಎಂದು ನೆರೆ ರಾಜ್ಯಗಳಲ್ಲಿಯೂ ಕರೆದುಕೊಂಡಿದ್ದು ಗಣನೀಯವಾಗಿದೆ. ಈ ಪದಗಳು ಕೂಡ ‘ಹರಿಜನ’ ಎಂಬ ಶಬ್ದದಿಂದ ಬಿಡಿಸಿಕೊಳ್ಳಲು ಮಾಡಿದ ಪ್ರಯತ್ನದ ಭಾಗವೇ ಆಗಿವೆ. ಅನಂತರದಲ್ಲಿ ತಮಗೆ ತಾವೇ `ದಲಿತರು’ ಎಂದು ‘ಗುರುತಿಸಿಕೊಂಡ ಪದ’ವಾಗಿದೆ. ಇದಲ್ಲದೆ ಈ ದಲಿತ ಚಳವಳಿಯಲ್ಲಿ ಎಲ್ಲ ಜಾತಿಯ ಜನರು ತಮ್ಮ ತಮ್ಮ ಜಾತಿಯ ಹೆಸರನ್ನು ಕೀಳರಿಮೆಯನ್ನು ಮೀರಿ ಸ್ವಾಭಿಮಾನದಿಂದ ಹೇಳಿಕೊಳ್ಳಲು ಮುಂದಾದದ್ದು ವಿಶೇಷವೇ ಆಗಿದೆ.
ದಲಿತ ಪದ ಮತ್ತು ಸಂಕುಚಿತ ಅರ್ಥದ ಸೋಂಕು
ವಿಶಾಲ ಅರ್ಥದ ತಳಹದಿಯ ಮೇಲೆ ರೂಪಗೊಂಡಿದ್ದ `ದಲಿತ’ ಎನ್ನುವ ಪದ ಅನಂತರದಲ್ಲಿ ದಲಿತರು ಎಂದರೆ ಕೇವಲ ಅಸ್ಪೃಶ್ಯರು ಎನ್ನುವಂತಾಗಲು, ದಲಿತರೊಳಗಿನ ಎಡ ಬಲವು ಸೇರಿದಂತೆ ಕಾರಣಗಳು ಹಲವು. ಇದರೊಂದಿಗೆ ಬಂಡಾಯದ ಒಂದು ಚಿಂತನೆಯೂ ಇದರ ತಿರುವಾಗಿದೆ. ಏಕೆಂದರೆ ಚಳವಳಿಯ ಆರಂಭದಲ್ಲಿ ಪ್ರಗತಿಪರರೇ ದಲಿತ ಪದದ ಮತ್ತು ದಲಿತ ಸಾಹಿತ್ಯದ ವ್ಯಾಖ್ಯಾನ ಮಾಡಿದವರಾಗಿದ್ದಾರೆ. ದಲಿತರು ಎಂದರೆ ಅಸ್ಪೃಶ್ಯರು. ಈ ಅಸ್ಪೃಶ್ಯರು ಅಥವಾ ದಲಿತರು ಬರೆದದ್ದು ದಲಿತ ಸಾಹಿತ್ಯವಾಗುತ್ತದೆ ಎಂದು ಸರಳವಾಗಿ ಅರ್ಥೈಸಿದ್ದು, ದಲಿತ ಪದ ಮತ್ತು ಸಾಹಿತ್ಯಕ್ಕೂ ಸಂಕುಚಿತತೆ ಅನುವಾಯಿತು.
ಇದು ಅಪ್ರಜ್ಞಾಪೂರ್ವಕವಾಗಿ ಜಾತಿ ನಿಷ್ಠ ಸ್ವರೂಪಕ್ಕೆ ತಿರುಗಿದ ಕಾರಣದಿಂದಾಗಿ ಕೆಲ ದಲಿತರು ನಮ್ಮನ್ನು ‘ದಲಿತ ಕವಿ’, ‘ದಲಿತ ಸಾಹಿತಿ’ ಎಂದು ಕರೆಯಬೇಡಿ ಎಂದು ಹೇಳಿರುವುದಿದೆ. ಜಾತಿಯನ್ನು ಮೀರಲು ಹೋಗಿ ಗೊತ್ತಿಲ್ಲದೆ ಜಾತಿಯಲ್ಲಿ ಬಂಧಿತರಾದ ಪರಿ ಇದು. ಇಷ್ಟೆಲ್ಲ ಆಗುವುದಕ್ಕೆ ಮುಖ್ಯ ಕಾರಣ, ಬಂಡಾಯ ಸಾಹಿತ್ಯ ಎಂದರೆ ಯಾವುದು? ಎಂದು ವ್ಯಾಖ್ಯಾನಿಸುವಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದಕ್ಕಾಗಿಯೇ ಆಗಿದೆ. ಅಂದಿನ ದಿನಗಳಲ್ಲಿ “ದಲಿತರು ದಲಿತೇತರರು ದಲಿತ ಪ್ರಜ್ಞೆಯಿಂದ ಬರೆದದ್ದು ದಲಿತ ಸಾಹಿತ್ಯವಾಗುತ್ತದೆ” ಎನ್ನುವ ವ್ಯಾಖ್ಯಾನವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಲಾಗಿತ್ತಾದರೂ ಅನಂತರ ತಿಳಿಯಾಯಿತು. ದಲಿತೇತರರು ಬರೆದದ್ದು ದಲಿತ ಸಾಹಿತ್ಯವಾಗುತ್ತದೆ ಎಂದಾದರೆ, ಬಂಡಾಯ ಸಾಹಿತ್ಯ ಯಾವುದು ? ಎನ್ನುವ ಪ್ರಶ್ನೆ ಕಾಡಿದ್ದರ ಪರಿಣಾಮವಿದು. ಇದರಿಂದಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳಬಹುದು ಎಂಬ ಆತಂಕದಿಂದಾಗಿ ಪಡೆದ ರೂಪವಿದು. “ಶೋಷಣೆಗೆ ಒಳಗಾದ ಎಲ್ಲ ಜಾತಿಯ ಬಡವರು ದಲಿತರೇ ಆಗಿದ್ದಾರೆ” ಎಂದು ಮಾರ್ಕ್ಸ್ ವಾದಿ ಚಿಂತಕರು ವ್ಯಾಖ್ಯಾನಿಸಿದಾಗ, ಮತ್ತೆ ಅದರಲ್ಲಿಯೇ ತಳಜಾತಿಯವರನ್ನು ಗುರುತಿಸಲು `ತರದಲಿತ’ `ಪದದಲಿತ’ ಎನ್ನುವ ಶಬ್ದಗಳು ಪ್ರಯೋಗವಾಗಿವೆ. ಇದೆಲ್ಲ ಜಾತಿಯ ಪ್ರಖರತೆ. ಇವೆಲ್ಲ ಪ್ರಜ್ಞಾಪೂರ್ವಕವಾಗಿಯೇ ಆದವುಗಳಲ್ಲ. ಪ್ರಗತಿಪರತೆಯ ಉನ್ಮಾದ ಮತ್ತು ತಳ ಸಮುದಾಯದವರು ಅನುಭವಿಸಿದ ಕಷ್ಟದ ಪರವಾಗಿ ನಿಲ್ಲಲು ಮಾಡಿದ ಅತ್ಯುತ್ಸಾಹದ ಪರಿಣಾಮಗಳಾಗಿವೆ, ಆದರೆ ಇದೇ ಪ್ರಧಾನವಲ್ಲ. ಬಂಡಾಯ ಸಂಘಟನೆ ಒಂದು ಕಾಲಕ್ಕೆ ದಲಿತ ಚಳವಳಿ ಹಾಗೂ ಸಾಹಿತ್ಯದ ಬೆನ್ನೆಲುಬೇ ಆಗಿತ್ತು ಅದರ ಕೈಕೂಸಾಗಿ ಬೆಳೆದಿದೆ ಎನ್ನುವುದನ್ನು ಮರೆಯಲಾಗದು.
ಇದನ್ನೂ ಓದಿರಿ: ಬಿಜೆಪಿ ವಾಷಿಂಗ್ ಮಷೀನ್‌ನ ಈ ಸ್ವಾರಸ್ಯಕರ ಕಥೆಗಳನ್ನು ಕೇಳಿದ್ದೀರಾ?
ದಲಿತ ಪ್ರಜ್ಞೆಯ ಮೂಲ ಆಶಯವೇ ಎಲ್ಲ ರೀತಿಯ ಶೋಷಣೆ ಹಾಗೂ ಜಾತಿಯ ಕೂಪದಿಂದ ಹೊರಬರುವುದು ಮತ್ತು ಇನ್ನುಳಿದವರಿಗೂ ಇದರಿಂದ ಹೊರಬರಲು ಪ್ರೋತ್ಸಾಹಿಸುವ, ಅರಿವು ತುಂಬುವ ಕ್ರಿಯೆಯಾಗಿದೆ. ಈ ಪ್ರಜ್ಞೆ ಕೇವಲ ದಲಿತರಿಗೆ ಮಾತ್ರ ಸಂಬಂಧಪಟ್ಟದ್ದಲ್ಲ. ದಲಿತೇತರಿಗೂ ಸಂಬಂಧಪಟ್ಟದ್ದಾಗಿದೆ. ಒಬ್ಬ ಬ್ರಾಹ್ಮಣ, ಲಿಂಗಾಯತ, ವೀರಶೈವ ಹೀಗೆ ಎಲ್ಲ ಜಾತಿ ಮತದವರು ತಮ್ಮ ತಮ್ಮ ಜಾತಿಯ ಪಟ್ಟಭದ್ರ ಹಿತಾಸಕ್ತಿಯ ವಿರುದ್ಧ ಸಿಡಿದು ನಿಲ್ಲುವುದೇ ಆಗಿದೆ ಮತ್ತು ದಲಿತರನ್ನು ಜಾತಿ ಕೂಪದಿಂದ ಹೊರ ತರುವ ಮನೋಧರ್ಮವಾಗಿದೆ ಈ ಆಲೋಚನೆಯೇ ಮೈ ನವಿರೇಳಿಸುವ ಒಂದು ಚಿಂತನಾ ಕ್ರಮವಾಗಿದ್ದು ಅದನ್ನು ಧರೆಗಿಳಿಸಿದ್ದು ದಲಿತ- ಬಂಡಾಯದ ಆ ಕಾಲಘಟ್ಟವಾಗಿದೆ.
ಈ ಎಲ್ಲ ಚಿಂತನೆಗಳ ಹಿನ್ನೆಲೆಯಲ್ಲಿ ದಲಿತ ಎಂದರೆ; “ಒಂದು ಜನ ವರ್ಗದ ಆಲೋಚನಾ ಕ್ರಮವಾಗಿದೆ. ಹೀಗಾಗಿ ‘ದಲಿತ’ ಪದ ಸ್ವಾಭಿಮಾನದ ಪ್ರತೀಕವಾಗಿದೆ. ಸಾಹಿತ್ಯದಲ್ಲಿ ನವೋದಯ, ನವ್ಯ, ಪ್ರಗತಿಶೀಲ ಎಂಬ ಸಾಹಿತ್ಯ ಪ್ರಭೇದಗಳಿರುವಂತೆ, ದಲಿತ ಸಾಹಿತ್ಯವೂ ಒಂದು ಪ್ರಭೇದವಾಗಿದೆ. ನವೋದಯದ ಸಂದರ್ಭದಲ್ಲಿ ಹೆಚ್ಚಿನ ಲೇಖಕರೆಲ್ಲ ಬ್ರಾಹ್ಮಣರೇ ಆಗಿದ್ದರು. ಆ ಪಂಥಕ್ಕೆ ನಾವು ‘ಬ್ರಾಹ್ಮಣ ಸಾಹಿತ್ಯ’ ಎಂದು ಕರೆಯುವುದಿಲ್ಲ. ಆದ್ದರಿಂದ ದಲಿತ ಸಾಹಿತ್ಯ ಎನ್ನುವುದು ಜಾತಿವಾದಿ ಸಾಹಿತ್ಯವಲ್ಲ. ಅದೊಂದು ತಾತ್ವಿಕತೆಯ ಮೇಲೆ ರೂಪುಗೊಂಡಿರುವ ಸಾಹಿತ್ಯವಾಗಿದೆ.

ಪ್ರೊ. ಅರವಿಂದ ಮಾಲಗತ್ತಿ
ಕನ್ನಡ ಸಾಹಿತ್ಯದಲ್ಲಿ ಹೊಸ ಚರ್ಚೆಗಳನ್ನು ಹುಟ್ಟು ಹಾಕಿದವರು ಪ್ರೊ.ಅರವಿಂದ ಮಾಲಗತ್ತಿ. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಹೆಸರು ಮಾಡಿದವರು. ಮೂಕನಿಗೆ ಬಾಯಿ ಬಂದಾಗ, ಕಪ್ಪು ಕಾವ್ಯ, ಮೂರನೇ ಕಣ್ಣು, ನಾದ ನಿನಾದ, ಸಿಲಿಕಾನ್ ಸಿಟಿ ಮತ್ತು ಕೋಗಿಲೆ, ಮುಗಿಯದ ಕಥೆಗಳು, ಮಸ್ತಕಾಭಿಷೇಕ, ಸಮುದ್ರದೊಳಗಣ ಉಪ್ಪು ಮೊದಲಾದ ಕೃತಿ ರಚಿಸಿದ್ದಾರೆ. ಅವರ ಆತ್ಮಕತೆ 'ಗೌರ್ಮೆಂಟ್ ಬ್ರಾಹ್ಮಣ' ಕನ್ನಡ ಸಾಹಿತ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.




