ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯ ಅಂಗಸಂಸ್ಥೆಯಾದ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಯು ಭಾರತವನ್ನು ಪ್ರವೇಶಿಸುತ್ತಿದೆ. ಕಳೆದ ಕೆಲ ದಿನಗಳಲ್ಲಿ ಭಾರತೀಯ ಟೆಲಿಕಾಂ ವಲಯದಲ್ಲಿ ದೊಡ್ಡ ಮಟ್ಟದ ವ್ಯಾಪಾರ-ವಹಿವಾಟು ಒಪ್ಪಂದವೇರ್ಪಟ್ಟಿದೆ.
ಅದರಲ್ಲಿ ಭಾರತದ ಎರಡು ಬಹುದೊಡ್ಡ ಕಾರ್ಪೊರೇಟ್ ಟೆಲಿಕಾಂ ಸೇವಾ ಪೂರೈಕೆದಾರರಾದ ಮುಖೇಶ್ ಅಂಬಾನಿಯವರ ಜಿಯೋ ಮತ್ತು ಸುನಿಲ್ ಮಿತ್ತಲ್ ಅವರ ಬಾರ್ತಿ ಏರ್ಟೆಲ್ ಕಂಪನಿಗಳು ಅಮೆರಿಕದ ಎಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್‌ನೊಂದಿಗೆ ಸಾವಿರಾರು ಕೋಟಿ ರೂ.ಗಳ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಘೋಷಿಸಿದ್ದಾರೆ. ಈ ಒಪ್ಪಂದ ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಭಾರತಕ್ಕೆ ತರುತ್ತದೆ.
ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸಂಸ್ಥೆ ಭಾರತದಲ್ಲಿ ನೆಲೆಯೂರಲು, ವ್ಯಾಪಾರ-ವಹಿವಾಟು ವಿಸ್ತರಿಸಿಕೊಳ್ಳಲು ಉಪಗ್ರಹ ಸಂವಹನ ಪರವಾನಗಿಗೆ ಕಳೆದ ಎರಡು ವರ್ಷಗಳಿಂದ ಶ್ರಮಿಸುತ್ತಲೇ ಇತ್ತು. ಮಿಲಿಟರಿ ಮತ್ತು ಭದ್ರತಾ ಸಂಸ್ಥೆಗಳು ದೇಶದ ಭದ್ರತೆಯಂತಹ ಸೂಕ್ಷ್ಮ ವಿಷಯಗಳನ್ನು ಮುಂದಿಟ್ಟು, ಸೂಕ್ತ ಸ್ಪಷ್ಟೀಕರಣ ಕೇಳಿ ಪರವಾನಗಿಯನ್ನು ತಳ್ಳಿಹಾಕುತ್ತಲೇ ಇದ್ದವು.
ಹಾಗೆಯೇ ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಇಂಟರ್ನೆಟ್ ಸೇವೆ ಭಾರತಕ್ಕೆ ಬರುವುದನ್ನು ಸಂಪರ್ಕ ಕ್ಷೇತ್ರದ ದೈತ್ಯರೆಂದೇ ಪರಿಗಣಿಸಲಾದ ಮುಖೇಶ್ ಅಂಬಾನಿ ಮತ್ತು ಸುನಿಲ್ ಮಿತ್ತಲ್ ದೊಡ್ಡ ಮಟ್ಟದಲ್ಲಿ ವಿರೋಧಿಸಿದ್ದರು. ಪರಸ್ಪರ ಪ್ರತಿಸ್ಪರ್ಧಿ ಇಂಟರ್‌ನೆಟ್ ಸಂಸ್ಥೆಗಳ ಮಾಲೀಕರಾದ ಇವರು, ಸ್ಯಾಟಲೈಟ್ ಕಂಪನಿಗಳು ಕೂಡ ಸಾಂಪ್ರದಾಯಿಕ ಟೆಲಿಕಾಂ ಕಂಪನಿಗಳಂತೆ ಪರವಾನಗಿ ಶುಲ್ಕ ಪಾವತಿಸಬೇಕು ಮತ್ತು ತಮ್ಮ ಟೆಲಿಕಾಂ ಸೇವೆಗಳಿಗೆ ಸ್ಪೆಕ್ಟ್ರಮ್ ಖರೀದಿಸಬೇಕು ಎಂದು ಪ್ರತಿಪಾದಿಸಿ, ಭಾರತದಿಂದ ಹಿಮ್ಮೆಟ್ಟಿಸಿದ್ದರು.
ಆದರೆ ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಪ್ರವಾಸ ಕೈಗೊಂಡು ಟ್ರಂಪ್ ಮತ್ತು ಮಸ್ಕ್ ಅವರ ಕೈ ಕುಲುಕಿ ಬಂದ ನಂತರ, ಪವಾಡವೆಂಬಂತೆ ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸಂಸ್ಥೆಯೊಂದಿಗೆ ವಾಣಿಜ್ಯ ಒಪ್ಪಂದಕ್ಕೆ ಸಹಿ ಬಿದ್ದಿದೆ.
ಇದನ್ನೂ ಓದಿರಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದೇಕೆ? ಮುಂದೇನಾಗಬಹುದು?
ಇಲ್ಲಿ ಪ್ರಶ್ನೆ ಇರುವುದು, ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸಂಸ್ಥೆಯನ್ನು ತಡೆಯೊಡ್ಡಿದ್ದವರು, ಈಗ ಇದ್ದಕ್ಕಿದ್ದಂತೆ ಒಪ್ಪಿದ್ದು ಏಕೆ? ಪ್ರತಿಸ್ಪರ್ಧಿಗಳೆಂದು ಪರಿಗಣಿಸಲಾಗಿದ್ದ ಎರಡೂ ಕಂಪನಿಗಳೊಂದಿಗೆ ಮಸ್ಕ್, ಒಂದೇ ರೀತಿಯ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದು ಹೇಗೆ? ಈ ಒಪ್ಪಂದದ ಹಿಂದೆ ಯಾರಿದ್ದಾರೆ?
ಭಾರತೀಯ ಟೆಲಿಕಾಂ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಮುಖೇಶ್ ಅಂಬಾನಿ ಮತ್ತು ಸುನಿಲ್ ಮಿತ್ತಲ್, ಅಮೆರಿಕದ ದೈತ್ಯ ಸ್ಟಾರ್ಲಿಂಕ್ ಇಂಟರ್ನೆಟ್ ಬಂದರೆ ತಮ್ಮ ಪ್ರಾಬಲ್ಯಕ್ಕೆ-ಪ್ರಗತಿಗೆ ಹೊಡೆತ ಬೀಳುತ್ತದೆ ಮತ್ತು ವ್ಯಾಪಾರ ನಷ್ಟದ ಹಾದಿ ಹಿಡಿಯುತ್ತದೆ ಎಂದು ಭಯಕ್ಕೆ ಬಿದ್ದಿದ್ದರು. ಹಾಗೆಯೇ ತಮ್ಮೆಲ್ಲ ಪ್ರಭಾವ, ಹಣ ಮತ್ತು ಅನುಭವ ಬಳಸಿ, ಎಲಾನ್ ಮಸ್ಕ್ ಭಾರತಕ್ಕೆ ಬರದಂತೆ ತಡೆದಿದ್ದರು.
ಎಲಾನ್ ಮಸ್ಕ್ ಅವರನ್ನು ತಡೆದಿದ್ದವರೇ ಈಗ ಭಾರತಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಅವರೊಂದಿಗೇ ಕೈಜೋಡಿಸುತ್ತಿದ್ದಾರೆ. ಅವರೇ ಮುಂದೆ ನಿಂತು ಸ್ಟಾರ್ಲಿಂಕ್ ಕಾರ್ಯಾಚರಿಸಲು ಭಾರತ ಸರಕಾರದಿಂದ ಅನುಮೋದನೆ ಕೊಡಿಸುತ್ತಿದ್ದಾರೆ.

90ರ ದಶಕದಲ್ಲಿ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ, ಅವರ ಆಪ್ತಮಿತ್ರ ಸ್ಯಾಮ್ ಪಿತ್ರೋಡಾ ಅವರ ನೆರವಿನಿಂದ, ಬಿಎಸ್ಎನ್ಎಲ್ ಎಂಬ ಸರ್ಕಾರಿ ಸಂಸ್ಥೆಯ ಮೂಲಕ ಸಂಪರ್ಕ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿದ್ದರು. ಹಳ್ಳಿಹಳ್ಳಿಗಳಿಗೂ ಸಂಪರ್ಕ ಕಲ್ಪಿಸಿ, ಆ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದರು. ಸರ್ಕಾರಿ ಸಂಸ್ಥೆಯನ್ನು ಸದೃಢಗೊಳಿಸಿದ್ದರು.
ಆದರೆ, 2014ರಲ್ಲಿ ಪ್ರಧಾನಿಯಾದ ಮೋದಿಯವರು, ಸದೃಢವಾಗಿದ್ದ ಬಿಎಸ್ಎನ್ಎಲ್ ಎಂಬ ಸರ್ಕಾರಿ ಸಂಸ್ಥೆಯ ಕೈ ಕಾಲು ಕೀಲು ಮುರಿದು ಮೂಲೆಗೆ ಕೂರಿಸಿದರು. ಸಾಯಿಸಲಿಲ್ಲ, ಇದ್ದೂ ಸತ್ತಂತಹ ಸ್ಥಿತಿಗೆ ತಂದರು. ಅದು ಪರೋಕ್ಷವಾಗಿ ಸಂಪರ್ಕ ಸೇವೆಯಲ್ಲಿ ಮುನ್ನೆಲೆಗೆ ಬರುತ್ತಿದ್ದ ಖಾಸಗಿ ಕಂಪನಿಗಳಿಗೆ ಭರಪೂರ ಅವಕಾಶಗಳನ್ನು ಕಲ್ಪಿಸಿತು. ಸರ್ಕಾರಿ ಸಂಸ್ಥೆ 2ಜಿ, 3ಜಿ ಸೇವೆಯಲ್ಲಿ ತೆವಳುತ್ತಿರುವಾಗ, ಖಾಸಗಿ ಸಂಸ್ಥೆಗಳು 4ಜಿ, 5ಜಿಗೇರಿಸಿ, ಗ್ರಾಹಕರನ್ನು ಸೆಳೆದವು. ಸರ್ಕಾರಿ ಸಂಸ್ಥೆ ಸೊರಗಿತು, ಖಾಸಗಿ ಸಂಸ್ಥೆಗಳ ವ್ಯಾಪಾರ-ವಹಿವಾಟು ದುಪ್ಪಟ್ಟಾಯಿತು.
ಇದನ್ನೂ ಓದಿರಿ: ‘ರೀಲ್ಸ್’ ಸಚಿವ ಅಶ್ವಿನಿ ವೈಷ್ಣವ್ ಕಾಲದಲ್ಲಿ ಪ್ರಪಾತಕ್ಕೆ ಜಾರಿದ ರೇಲ್ವೆ ಇಲಾಖೆ!
ಪ್ರಧಾನಿ ಮೋದಿಯವರ ಕೃಪೆಯಿಂದ ಸಂಪರ್ಕ ಕ್ಷೇತ್ರದಲ್ಲಿ, ಇಂಟರ್ ನೆಟ್ ಸೇವೆ ಒದಗಿಸುವ ಉದ್ಯಮದಲ್ಲಿ ದೈತ್ಯರಂತೆ ಬೆಳೆದು ನಿಂತವರು- ಮುಖೇಶ್ ಮತ್ತು ಮಿತ್ತಲ್. ಇವರ ಜಿಯೋ ಮತ್ತು ಬಾರ್ತಿ ಏರ್‌ಟೆಲ್ ಸಂಸ್ಥೆಗಳೆರಡೂ ಏರ್ ಫೈಬರ್ ಎಂಬ ತಮ್ಮದೇ ಆದ ವೈರ್‍ಲೆಸ್ ಬ್ರಾಂಡ್ ಬ್ಯಾಂಡ್ ಸೇವೆಯನ್ನು ಹೊಂದಿವೆ. ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಘೋಷಿಸುವ ಮೂಲಕ, ಡೇಟಾ ಟ್ರಾಫಿಕ್ ವಿಷಯದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರಹೊಮ್ಮುವ ಕನಸು ಕಾಣುತ್ತಿವೆ.
ಎರಡು ಟೆಲಿಕಾಂ ದೈತ್ಯರು ಒಪ್ಪಂದ ಮಾಡಿಕೊಂಡಿರುವ ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ವಿಶ್ವದ ಮೊದಲ ಮತ್ತು ಅತಿದೊಡ್ಡ ಉಪಗ್ರಹ ಸಮೂಹವಾಗಿದೆ. ಪ್ರಸ್ತುತ, ಕಕ್ಷೆಯಲ್ಲಿ ಸುಮಾರು 7,086 ಸ್ಟಾರ್ ಲಿಂಕ್ ಉಪಗ್ರಹಗಳಿವೆ. ಅವುಗಳಲ್ಲಿ 7,052 ಕಾರ್ಯನಿರ್ವಹಿಸುತ್ತಿವೆ. ಕಡಿಮೆ ಎತ್ತರದಲ್ಲಿ ಭೂಮಿಯನ್ನು ಸುತ್ತುವ ಉಪಗ್ರಹಗಳು ಅಂದರೆ, ಲೋವರ್ ಅರ್ಥ್ ಆರ್ಬಿಟ್ ಉಪಗ್ರಹಗಳ ಮೂಲಕ ಹೈ ಸ್ಪೀಡ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಈಗಾಗಲೇ ಇದರ ಸೇವೆ 30ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿ, ಕಾರ್ಯಾಚರಿಸುತ್ತಿದೆ. ಇದು ಎತ್ತರದ ಪರ್ವತಗಳಲ್ಲಿ, ಆಳ ಸಮುದ್ರಗಳಲ್ಲಿ, ದಟ್ಟ ಕಾಡುಗಳಲ್ಲಿ ಅಥವಾ ಸಂಪರ್ಕಿಸಲು ಸಾಧ್ಯವಿಲ್ಲದ ದೂರದ ಸ್ಥಳಗಳಲ್ಲಿ ಬಳಕೆದಾರರನ್ನು ಸಂಪರ್ಕಿಸಲು ಇದರಿಂದ ಸಾಧ್ಯ ಎನ್ನಲಾಗಿದೆ.
ದೇಶವು ಮೊಬೈಲ್ ಸಂಪರ್ಕದಲ್ಲಿ ಅದ್ಭುತ ಪ್ರಗತಿ ಸಾಧಿಸಿದ್ದರೂ, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಡಿಜಿಟಲ್ ಅಂತರ ಶೇ. 65ರಷ್ಟಿದ್ದು, ಇದು ನಾಲ್ಕೈದು ವರ್ಷಗಳಿಂದ ಸ್ಥಿರವಾಗಿದೆ. ಭಾರತದ ಒಟ್ಟು ಜನಸಂಖ್ಯೆಯ ಶೇ. 48ರಷ್ಟು ಜನ ಸಂಪರ್ಕವಿಲ್ಲದ ಅಥವಾ ಅಪೂರ್ಣ ಸಂಪರ್ಕಿತರ ಪಟ್ಟಿಯಲ್ಲಿದ್ದಾರೆ.
ಗ್ರಾಮೀಣ ಮತ್ತು ಜನಸಂಪರ್ಕವಿಲ್ಲದ ಪ್ರದೇಶಗಳನ್ನು ಸಂಪರ್ಕಿಸಲು ಸರ್ಕಾರವು ಬಹಳಷ್ಟು ಹಣ ಖರ್ಚು ಮಾಡಿದೆ. ಆದಾಗ್ಯೂ, ಫೈಬರ್ ತಲುಪಿಸುವುದು ಮತ್ತು ಟವರ್ಗಳನ್ನು ಸ್ಥಾಪಿಸುವಲ್ಲಿ ಆಗುವ ಸವಾಲುಗಳಿಂದ ಯಶಸ್ಸು ಕಾಣಲಾಗಿಲ್ಲ. ಆದ್ದರಿಂದ ಭೂಮಿ ಆಧಾರಿತ ಮೊಬೈಲ್ ಆಪರೇಟರ್‌ಗಳು ಮತ್ತು ಸ್ಯಾಟ್ಕಾಂ ಆಪರೇಟರ್‌ಗಳು ಪರಸ್ಪರ ಸಂಪರ್ಕಿಸಿ ಹೆಚ್ಚಿನ ಜನರಿಗೆ ವೇಗವಾದ ಇಂಟರ್ನೆಟ್ ಸಂಪರ್ಕ ಒದಗಿಸಲು ಸಹಕರಿಸುವುದು ಅತೀ ಸೂಕ್ತವಾಗಿದೆ. ಅದು ಉಪಗ್ರಹ ಇಂಟರ್ ನೆಟ್ ಸಂಪರ್ಕದಿಂದ ಸಾಧ್ಯವಾಗಲಿದೆ ಎಂದು ಸಂಪರ್ಕ ಕ್ಷೇತ್ರದ ಇಬ್ಬರು ದೈತ್ಯರು ಹೇಳುತ್ತಿದ್ದಾರೆ.

ಹಾಗಾದರೆ, ಸಂಪರ್ಕ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಏನು ಮಾಡುತ್ತಿದೆ? ಅದಕ್ಕಾಗಿಯೇ ಇರುವ ಸಚಿವರು, ಇಲಾಖೆ, ಹರಿದ ಹಣ ಎಲ್ಲಿಗೆ ಹೋಗಿದೆ?
ಇದನ್ನೂ ಓದಿರಿ: ಕೋಳಿ ಫಾರಂನಿಂದ ಕೊಯಮತ್ತೂರು, ನಂದಿ ಬೆಟ್ಟದವರೆಗೆ ‘ಜಗ್ಗಿ’ ಬೆಳೆದಿದ್ದು ಹೀಗೆ..
2018ರಲ್ಲಿ ಎಲಾನ್ ಮಸ್ಕ್ ಸ್ಟಾರ್ಲಿಂಕ್‌ಗಾಗಿ ಸ್ಯಾಟಲೈಟ್ಗಳನ್ನು ಆಕಾಶಕ್ಕೆ ಹಾರಿಸುತ್ತಿದ್ದರು. ಆ ಸಮಯದಲ್ಲಿ ಭಾರತ ಸರ್ಕಾರ ಫೈಬರ್ ಆಪ್ಟಿಕ್ ಕೇಬಲ್ ಹಾಕುವ ಕೆಲಸದಲ್ಲಿ ನಿರತವಾಗಿತ್ತು. ಕುತೂಹಲಕರ ಸಂಗತಿ ಎಂದರೆ, ಜಗತ್ತಿನ ಇತರ ದೇಶಗಳು ಹೊಸ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳುತ್ತಿವೆ ಎಂಬುದರ ಬಗ್ಗೆ ಭಾರತದ ಪ್ರಧಾನಮಂತ್ರಿ ಮೋದಿಗೆ ತಿಳಿದಿರಲಿಲ್ಲ. 2020ರಲ್ಲಿ ಮೋದಿಯವರು ‘ಒಂದು ಸಾವಿರ ದಿನಗಳಲ್ಲಿ ಭಾರತದ ಪ್ರತಿ ಗ್ರಾಮವನ್ನು ಫೈಬರ್ ಆಪ್ಟಿಕ್ನಿಂದ ಜೋಡಿಸಿ, ಆರು ಲಕ್ಷ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗುವುದು’ ಎಂದು ಭಾಷಣ ಬಿಗಿದರು. ಆದರೆ, ಡಿಸೆಂಬರ್ 2024ರ ವೇಳೆಗೆ 2,14,313 ಗ್ರಾಮ ಪಂಚಾಯತಿಗಳಿಗೆ ಮಾತ್ರ ಸಂಪರ್ಕ ಕಲ್ಪಿಸಲಾಗಿದೆ. 2020ರಲ್ಲಿ ಪ್ರಧಾನಮಂತ್ರಿ ಮೋದಿ ಅವರು ಬಿಹಾರದ ಎಲ್ಲಾ 45,945 ಗ್ರಾಮಗಳನ್ನು ಫೈಬರ್ ಆಪ್ಟಿಕ್ ಇಂಟರ್ನೆಟ್ ಸೇವೆಯಿಂದ ಜೋಡಿಸುವುದಾಗಿ ಘೋಷಿಸಿದ್ದರು. ಅದೂ ಕೂಡ ಸಾಧ್ಯವಾಗಲಿಲ್ಲ.
ಫೈಬರ್ ಆಪ್ಟಿಕ್ ಕೇಬಲ್ ಹಾಕುವ ಪ್ರಯತ್ನದಲ್ಲಿ ಭಾರತ ಸರ್ಕಾರ ಬಡ ಜನತೆಯ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತಲೇ ಸಾಗಿದೆ, ಈಗ ಅದರ ಕತೆಯೇನು? ಫೈಬರ್ ಆಪ್ಟಿಕ್ ಕೇಬಲ್ ಹಾಕಲು ಗುಂಡಿ ತೋಡಿದ್ದು, ಮಾನವ ಶ್ರಮ, ಸಮಯ, ಅದಕ್ಕಾಗಿ ವಿನಿಯೋಗಿಸಿದ ಸರ್ಕಾರಿ ಆಡಳಿತ ಯಂತ್ರ, ಹಣ- ಇದೆಲ್ಲದರ ಲೆಕ್ಕ ಕೇಳುವವರಾರು?
ಹಾಗೆಯೇ, ಅಮೆರಿಕದ ದೈತ್ಯ ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಇಂಟರ್ನೆಟ್‌ಗೆ ಪ್ರಪಂಚದಾದ್ಯಂತ 40 ಲಕ್ಷ ಗ್ರಾಹಕರಿದ್ದಾರೆ. ಇವರ ಸೇವೆ ದುಬಾರಿ ಎಂಬ ಸುದ್ದಿಯೂ ಇದೆ. ಹೀಗಿದ್ದೂ, ಮುಖೇಶ್ ಅಂಬಾನಿ ಮತ್ತು ಸುನಿಲ್ ಮಿತ್ತಲ್, ‘ಸ್ಟಾರ್ಲಿಂಕ್ ಫೈಬರ್ಗೆ ಪೂರಕವಾಗಿ ಕೆಲಸ ಮಾಡುತ್ತೇವೆ, ಅದನ್ನು ಬದಲಾಯಿಸುವುದಿಲ್ಲ’ ಎಂದಿದ್ದಾರೆ. ಜನ ಕೂಡ ಯಾವುದು ಫಾಸ್ಟ್ ಸರ್ವಿಸ್ ಕೊಡುತ್ತದೋ, ಆ ಕಡೆ ಜಾರುತ್ತಾರೆ. ಹಾಗಾದರೆ, ಭಾರತದಲ್ಲಿ ಸ್ಯಾಟಲೈಟ್ ಇಂಟರ್‌ನೆಟ್ ಸೇವೆಗೆ ದರ ನಿಗದಿ ಮಾಡುವವರು ಯಾರು? ಅದು ಎಷ್ಟಿರುತ್ತದೆ?
ಇದನ್ನೂ ಓದಿರಿ: ಯುಎಇ ಜೊತೆಯಲ್ಲಿ ಮೋದಿ ಭಾರತದ ಬಲಿಷ್ಠ ನಂಟು
ಮತ್ತೊಂದು ಮಹತ್ವದ ಸಂಗತಿ, ಎಲಾನ್ ಮಸ್ಕ್, ತಮ್ಮ ಸ್ಟಾರ್ ಲಿಂಕ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಮಾತೆಂದರೆ, ನಮ್ಮ ಇಂಟರ್ ನೆಟ್ ಸೇವೆ ಸ್ಯಾಟಲೈಟ್ನಿಂದ ನೇರ, ತಡೆರಹಿತವಾಗಿದ್ದು, ಯಾವುದೇ ಸಂದರ್ಭದಲ್ಲಿಯೂ ಕನೆಕ್ಟಿವಿಟಿ ಕಟ್ ಆಗುವುದಿಲ್ಲ. ನಿರಂತರ ಸೇವೆ ನಮ್ಮದು ಎಂದಿದ್ದಾರೆ.
ಈಗ ದೇಶದಲ್ಲಿ ಮಣಿಪುರದಂತಹ ಜನಾಂಗೀಯ ಕದನಗಳು, ಗೋಧ್ರಾದಂತಹ ಕೋಮು ಗಲಭೆಗಳು, ಸಿಎಎ ಥರದ ಬೃಹತ್ ಪ್ರತಿಭಟನೆಗಳು, ದಂಗೆ, ಲೂಟಿಗಳಂತಹ ಸಂದರ್ಭ ಸೃಷ್ಟಿಯಾದರೆ, ಆ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸಲು ನಮ್ಮ ಪ್ರಧಾನಿ ಮೋದಿಯವರು ‘ಇಂಟರ್ ನೆಟ್ ಕಟ್ ಮಾಡಿ’ ಎಂದು ಯಾರಿಗೆ ಹೇಳುತ್ತಾರೆ, ಇವರ ಆದೇಶವನ್ನು ಯಾರು ಪಾಲಿಸುತ್ತಾರೆ?
ಒಂದು ಕಾಲದಲ್ಲಿ, ಭಾರತದೊಂದಿಗೆ ವ್ಯವಹಾರ ಮಾಡಲು ಬಯಸುವ ಪ್ರಪಂಚದ ಯಾರೇ ಆದರೂ, ದೆಹಲಿಗೆ ಬರುತ್ತಿದ್ದರು. ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡುತ್ತಿದ್ದರು. ಫೋಟೋ ತೆಗೆಸಿಕೊಳ್ಳುತ್ತಿದ್ದರು ಮತ್ತು ಆ ಫೋಟೋಗಳನ್ನು ಬಳಸಿ ಭಾರತದ ಸ್ಥಾನಮಾನವನ್ನು ಪ್ರಪಂಚಕ್ಕೆ ತೋರಿಸುತ್ತಿದ್ದರು. ಆದರೆ ಈಗ ಎಲಾನ್ ಮಸ್ಕ್ ರಂತಹ ಯಕಶ್ಚಿತ್ ಉದ್ಯಮಿಯನ್ನು ನೋಡಲು ಮೋದಿಯವರೇ ಅಮೆರಿಕಕ್ಕೆ ಹೋಗುತ್ತಾರೆ. 56 ಇಂಚಿನ ಎದೆಯನ್ನು ನಡುವಿನವರೆಗೂ ಬಗ್ಗಿಸಿ ನಿಲ್ಲುತ್ತಾರೆ.
ಮೋದಿ- ಯಾರ ಪ್ರಧಾನಿ? ಯಾರಿಗೋಸ್ಕರ ಪ್ರಧಾನಿ ಹುದ್ದೆಯಲ್ಲಿ ಕೂತಿದ್ದಾರೆ?

ಲೇಖಕ, ಪತ್ರಕರ್ತ




