ಸತ್ಯ ಹೇಳಿದರೆ ಧರ್ಮವನ್ನು ಎಳೆದು ತಂದು, ವಾಸ್ತವಗಳನ್ನು ಮರೆಮಾಚುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಹೇಳಿದ ವಿಷಯಕ್ಕಿಂತ ಮಾತನಾಡಿದವರ ಧರ್ಮವೇ ಮುಖ್ಯವಾಗಿ ವಿಷಯಾಂತರ ಮಾಡಲೆತ್ನಿಸುವವರ ಹಿಂದೆ ಯಾವ ಕಾಣದ ಕೈಗಳಿವೆ?
‘ಧೂತ’ ಯೂಟ್ಯೂಬ್ ಚಾನೆಲ್‌ನ ಸಮೀರ್ ಎಂ.ಡಿ. ಅವರು ಮಾಡಿದ ‘ಧರ್ಮಸ್ಥಳ ಹಾರರ್’ ವಿಡಿಯೊ, 2012ರಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಈಡಾದ ಸೌಜನ್ಯ ಎಂಬ ಹೆಣ್ಣು ಮಗಳ ಕಥೆಯನ್ನು ವಿನೂತನವಾಗಿ ಕಟ್ಟಿಕೊಟ್ಟಿತು. ಆ ವಿಡಿಯೊದಲ್ಲಿ ಎಲ್ಲಿಯೂ ಧರ್ಮಸ್ಥಳ ಧರ್ಮಾಧಿಕಾರಿಯ ಹೆಸರನ್ನು ಉಲ್ಲೇಖಿಸಲಿಲ್ಲ. ದೊಡ್ಡ ಗೌಡರು, ಚಿಕ್ಕಗೌಡರು ಎಂಬ ಪದಗಳನ್ನು ಸಮೀರ್ ಬಳಸಿದ್ದರು. ಈ ಹಿಂದೆ ಧರ್ಮಾಧಿಕಾರಿಯವರ ಹೆಸರು ಉಲ್ಲೇಖಿಸಿ ವರದಿ ಮಾಡಿದ ಹಲವು ಯೂಟ್ಯೂಬ್ ಚಾನೆಲ್‌ಗಳ ಮೇಲೆ ತಡೆಯಾಜ್ಞೆಗಳನ್ನು ತರಲಾಗಿತ್ತು. ಜೊತೆಗೆ ಅಪ್‌ಲೋಡ್ ಮಾಡಲಾದ ವಿಡಿಯೊಗಳನ್ನು ಡಿಲೀಟ್ ಮಾಡಿಸಲಾಗಿತ್ತು. ಈ ಕಾರಣಕ್ಕೆ ಸಮೀರ್ ಎಲ್ಲಿಯೂ ಹೆಸರು ಬಳಸಲಿಲ್ಲ. ಆದರೆ ಎಐ ತಂತ್ರಜ್ಞಾನ ಉಪಯೋಗಿಸಿ ಮಾಡಲಾದ ಘಟನೆಯ ಮರುಸೃಷ್ಟಿಯ ವಿಡಿಯೊ ತುಣುಕುಗಳು, ಫೋಟೋಗಳು, ಸಮೀರನ ವಿನೂತನ ಪ್ರಸ್ತುತಿ ಜನರ ಗಮನ ಸೆಳೆದವು. ಹೀಗಾಗಿ ಒಂದೂವರೆ ಕೋಟಿಯಷ್ಟು ಮಂದಿ ಈ ವಿಡಿಯೊವನ್ನು ವೀಕ್ಷಣೆ ಮಾಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ಸಂಚಲನ ಉಂಟು ಮಾಡಿದ ಕೂಡಲೇ, “ಸಮೀರ್ ಹಿಂದೂ ಧರ್ಮಕ್ಕೆ ಅಪಚಾರ ಮಾಡಿದ್ದಾನೆ, ಹಿಂದೂ ದೇವಾಲಯವನ್ನು ವಿಡಿಯೊದಲ್ಲಿ ಪ್ರಸ್ತಾಪಿಸಿದ್ದಾನೆ, ಇದು ಹಿಂದೂಗಳನ್ನು ಅವಮಾನಿಸಲು ಮಾಡಿದ ವಿಡಿಯೊ” ಎಂದು ಹುಯಿಲೆಬ್ಬಿಸಲಾಗಿದೆ.
ಸಮೀರ್ ವಿಡಿಯೊ ಮಾಡಿ ‘ಹರಿಬಿಟ್ಟಿದ್ದಾನೆ’ ಎಂದು ಭಾವಿಸಿದ ಮತೀಯವಾದಿ ಮನಸ್ಥಿತಿಯ ಪೊಲೀಸರು, ಸ್ವಯಂಪ್ರೇರಿತ (ಸುವೋಮೊಟೊ) ಪ್ರಕರಣ ದಾಖಲಿಸಿ, ಸಮೀರ್ ಅವರನ್ನು ಅಕ್ರಮವಾಗಿ ಬಂಧಿಸಲು ಯತ್ನಿಸಿದರು. ಆದರೆ ಕರ್ನಾಟಕ ಹೈಕೋರ್ಟ್, ಪೊಲೀಸರಿಗೆ ತಪರಾಕಿ ಹಾಕಿದೆ. ಸಮೀರ್ ಪರವಾಗಿ ಹರಿದುಬಂದಿರುವ ಬೆಂಬಲ ನೋಡಿ, ಆತನನ್ನು ಧರ್ಮದ ಗೂಟಕ್ಕೆ ಕಟ್ಟಿಹಾಕುವ ಪ್ರಯತ್ನಗಳಿಗೆ ಭಾರೀ ಹಿನ್ನಡೆಯಾಗಿದೆ. “ಇನ್ನೊಬ್ಬ ಹಿಂದೂ ನಿಮ್ಮ ಮನೆಯ ಸಹೋದರಿಯನ್ನೋ, ತಾಯಿಯನ್ನೋ ಅತ್ಯಾಚಾರ ಮಾಡಿದರೆ, ಹಿಂದೂ ಅತ್ಯಾಚಾರ ಮಾಡಿದ್ದಾನೆಂದು ಸುಮ್ಮನಿರುತ್ತೀರಾ? ಹಿಂದೂ ಆಗಲಿ, ಮುಸ್ಲಿಂ ಆಗಲಿ, ಮತ್ಯಾರೇ ಧರ್ಮದವರಾಗಲೀ ಅತ್ಯಾಚಾರವನ್ನು ಅತ್ಯಾಚಾರವನ್ನಾಗಿಯೇ ನೋಡಬೇಕು. ಇಲ್ಲಿ ಧರ್ಮವನ್ನು ಹುಡುಕಬಾರದು, ಸಮೀರ್ ಸತ್ಯವನ್ನು ಮಾತನಾಡಿದ್ದಾನೆ” ಎಂದಿದ್ದಾರೆ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್. ಸೌಜನ್ಯ ಪ್ರಕರಣ ಸಂಬಂಧ ನಿರಂತರ ದನಿ ಎತ್ತಿದವರು ಮಟ್ಟಣ್ಣನವರ್.
ಇದನ್ನೂ ಓದಿರಿ: ಕೋಳಿ ಫಾರಂನಿಂದ ಕೊಯಮತ್ತೂರು, ನಂದಿ ಬೆಟ್ಟದವರೆಗೆ ‘ಜಗ್ಗಿ’ ಬೆಳೆದಿದ್ದು ಹೀಗೆ..
ಸೌಜನ್ಯ ವಿಚಾರವಾಗಿ ಎಂದೂ ಮಾತನಾಡದವರು, ಈಗ ಸೌಜನ್ಯ ಕೇಸ್ ಸಂಬಂಧ ಪ್ರತಿಕ್ರಿಯಿಸುತ್ತಿದ್ದಾರೆ. ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕೆಂದು ಹೇಳುತ್ತಲೇ, ಸಮೀರ್ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ಮುಖ್ಯ ಗುರಿ ‘ಸಮೀರ್’ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡುವುದೇ ಆಗಿದೆ. ಸಮೀರ್ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಯಾರಾದರೂ ಪೋಸ್ಟ್ ಹಾಕಿದ್ದೇ ತಡ, ಕೆಲವು ಫೇಕ್ ಅಕೌಂಟ್‌ಗಳ ಮೂಲಕ ಸರಣಿಯಾಗಿ ಕಮೆಂಟ್ ಮಾಡಿಸಲಾಗುತ್ತಿದೆ. ಪೋಸ್ಟರ್‌ಗಳನ್ನು ಕಮೆಂಟ್‌ಗಳ ಮೂಲಕ ಹಂಚಲಾಗುತ್ತಿದೆ. ಫೇಕ್ ನರೇಟಿವ್ ಕಟ್ಟಲು ಒಂದು ಬಾಡಿಗೆ ಪಡೆ ಸಕ್ರಿಯವಾಗಿರುವುದನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಸೌಜನ್ಯ ಪ್ರಕರಣ ಕಳೆದ ವರ್ಷ ಭಾರೀ ಚರ್ಚೆಯಲ್ಲಿದ್ದಾಗಲೂ ಹೀಗೆಯೇ ಫೇಕ್ ನರೇಟಿವ್ ಕಟ್ಟುವ ಪೇಜ್‌ಗಳು, ಫೇಸ್‌ಬುಕ್ ಅಕೌಂಟ್‌ಗಳು ತಾತ್ಕಾಲಿಕವಾಗಿ ಹುಟ್ಟಿಕೊಂಡಿದ್ದವು. ಪ್ರಕರಣ ತಣ್ಣಗಾದ ಮೇಲೆ ಆ ಪೇಜ್‌ಗಳೂ ನೇಪಥ್ಯಕ್ಕೆ ಸರಿದಿದ್ದವು. ಈಗ ಸಮೀರ್ ಒಬ್ಬ ಹಿಂದೂ ವಿರೋಧಿ ಎಂದು ಬಿಂಬಿಸಲು ಭಾರೀ ದೊಡ್ಡ ಮಟ್ಟದಲ್ಲಿ ನಕಲಿ ಖಾತೆಗಳು ಸಕ್ರಿಯವಾಗಿರುವುದನ್ನು ಗಮನಿಸಬಹುದು.
ಇದು ಸಮೀರ್ ವಿಷಯಕ್ಕಷ್ಟೇ ಮುಗಿಯದ ವಿಚಾರ. ಈ ಹಿಂದೆಯೂ ಸತ್ಯ ಬಯಲಿಗೆಳೆದ ಮುಸ್ಲಿಂ ಹೋರಾಟಗಾರರನ್ನು, ಬರಹಗಾರರನ್ನು, ಪತ್ರಕರ್ತರನ್ನು ‘ಹಿಂದೂ ವಿರೋಧಿ’ ಎಂದೂ, ‘ದೇಶದ್ರೋಹಿ’ ಎಂದೂ ಚಿತ್ರಿಸುವ ಕೆಲಸವನ್ನು ಹಿಂದುತ್ವ ಬಲಪಂಥೀಯ ಗುಂಪುಗಳು ಮಾಡಿವೆ.

ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ‘ಆಲ್ಟ್ ನ್ಯೂಸ್’ನ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರು ಮುಸ್ಲಿಂ ಎಂಬ ಕಾರಣಕ್ಕೆ ಅವರ ಮೇಲೆ ಬಲಪಂಥೀಯ ಟ್ರೋಲ್ ಪಡೆ, ವಿನಾಕಾರಣ ವಿಷಕಾರುವುದು ಎಂದಿಗೂ ನಿಲ್ಲುವುದಿಲ್ಲ. ಬಿಜೆಪಿಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಖಾಸಗಿ ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಪ್ರವಾದಿ ಮಹಮ್ಮದರ ಕುರಿತು ಕ್ಷುಲ್ಲಕವಾಗಿ ಹೇಳಿಕೆ ನೀಡಿದರು. ಸುದ್ದಿ ವಾಹಿನಿಯ ನಿರೂಪಕಿ ಆ ಮಾತುಗಳಿಗೆ ಆಕ್ಷೇಪವನ್ನು ವ್ಯಕ್ತಪಡಿಸಲಿಲ್ಲ. ಆದರೆ ವಿಡಿಯೊ ತುಣುಕನ್ನು ಮುಚ್ಚಿ ಹಾಕಲಾಗಿತ್ತು. ಅದನ್ನು ಅಗೆದು ಬಗೆದು ಹೊರ ತೆಗೆದ ಜುಬೇರ್, “ದ್ವೇಷದ ಮಾತುಗಳನ್ನಾಡುತ್ತಿದ್ದರೂ ಸದರಿ ಮಾಧ್ಯಮದ ನಿರೂಪಕಿ ಯಾಕೆ ಸುಮ್ಮನಿದ್ದರು?” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿರಿ: ‘ರೀಲ್ಸ್’ ಸಚಿವ ಅಶ್ವಿನಿ ವೈಷ್ಣವ್ ಕಾಲದಲ್ಲಿ ಪ್ರಪಾತಕ್ಕೆ ಜಾರಿದ ರೇಲ್ವೆ ಇಲಾಖೆ!
ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿ ಮಾತನಾಡಿ ನೂಪುರ್ ಶರ್ಮ ಸಿಕ್ಕಿ ಬಿದ್ದಿದ್ದು ಹೀಗೆ. ನಂತರ ಮುಸ್ಲಿಂ ರಾಷ್ಟ್ರಗಳಲ್ಲಿ ವಿರೋಧದ ಕಿಡಿ ಹೊತ್ತಿತ್ತು. ಭಾರತದ ಉತ್ಪನ್ನಗಳಿಗೆ ನಿರ್ಬಂಧ ಹೇರುವ ಆತಂಕ ಎದುರಾಯಿತು. ಅಂತಿಮವಾಗಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ವಜಾ ಮಾಲಾಯಿತು. ಇದರ ಬೆನ್ನಲ್ಲೇ ಬಿಜೆಪಿ ಮತ್ತು ಸಂಘಪರಿವಾರದ ಭಕ್ತ ಪಡೆ ಜುಬೇರ್ ವಿರುದ್ಧ ಮುಗಿ ಬಿದ್ದಿತು. ಸತ್ಯ ಹೊರಗೆಳೆದಿದ್ದಕ್ಕೆ ‘ದೇಶದ್ರೋಹಿ’, ‘ಹಿಂದೂ ವಿರೋಧಿ’, ‘ಹಿಂದೂ ನಾಯಕರ ಮೇಲೆ ಪಿತೂರಿ ಮಾಡುವವ’ ಎಂದು ನಿಂದಿಸಲಾಯಿತು. ಅದೇ ಸಂದರ್ಭದಲ್ಲಿ 2018ರ ಟ್ವೀಟ್ ಒಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜುಬೇರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದರು.

“2014ಕ್ಕಿಂತ ಮೊದಲು : ಹನಿಮೂನ್ ಹೋಟೆಲ್, 2014ರ ನಂತರ: ಹನುಮಾನ್ ಹೋಟೆಲ್. #ಸಂಸ್ಕಾರಿ ಹೋಟೆಲ್”- ಎಂಬ ಟಿಪ್ಪಣಿಯೊಂದಿಗೆ ಚಿತ್ರವೊಂದನ್ನು ಹಂಚಿಕೊಂಡಿದ್ದರು ಜುಬೇರ್. ‘ಹನಿಮೂನ್’ ಎಂದು ಹಿಂದಿ ಅಕ್ಷರದಲ್ಲಿ ಬರೆಯಲಾಗಿರುವ ಬೋರ್ಡ್‌ನಲ್ಲಿ ಕೆಲವು ಅಕ್ಷರಗಳನ್ನು ತಿದ್ದಿ ‘ಹನುಮಾನ್’ ಎಂದು ತಿರುಚಲಾಗಿರುವ ತುಣುಕನ್ನು ಜುಬೇರ್ ತಮ್ಮ ಮೀಮ್‌ಗೆ ಬಳಸಿದ್ದರು.
“ನಮ್ಮ ದೇವರು ಹನುಮಾನ್. ಆತ ಬ್ರಹ್ಮಚಾರಿ. ಹೀಗಿರುವಾಗ ಹನಿಮೂನ್ ಎಂಬ ಪದದೊಂದಿಗೆ ಹನುಮಾನ್ ಎಂದು ಜೋಡಿಸುವುದು ಹಿಂದೂಗಳಿಗೆ ಮಾಡಿದ ನೇರ ಅವಮಾನ. ದಯವಿಟ್ಟು ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಹನುಮಾನ್ ಭಕ್ತ (@balajikijaiin) ಟ್ವಿಟರ್ ಖಾತೆಯಲ್ಲಿ ಆರೋಪಿಸಲಾಗಿತ್ತು.
ವಾಸ್ತವದಲ್ಲಿ ಜುಬೇರ್ ಟ್ವೀಟ್ ಮಾಡಿದ ಫೋಟೋವು ಬಾಲಿವುಡ್ ಸಿನಿಮಾ ‘ಕಿಸ್ಸಿ ಸೇ ನಾ ಕೆಹನಾ (1983)’ದ ಒಂದು ದೃಶ್ಯದ ತುಣುಕಾಗಿತ್ತು. ಫಾರೂಕ್ ಶೇಖ್, ದೀಪ್ತಿ ನವಲ್ ಮತ್ತು ಉತ್ಪಲ್ ದತ್ ಅವರಂತಹ ಪ್ರಸಿದ್ಧ ಕಲಾವಿದರು ಅಭಿನಯಿಸಿರುವ ಸಿನಿಮಾದ ಹಾಸ್ಯ ದೃಶ್ಯ ಅದಾಗಿತ್ತು. ಹೇಗಾದರೂ ಜುಬೇರ್ ಅವರನ್ನು ಸಿಕ್ಕಿಸಬೇಕೆಂದು ಹೊರಟವರಿಗೆ ಈ ಟ್ವೀಟ್ ನೆಪವಾಗಿತ್ತಷ್ಟೇ. ನೂಪುರ್ ಅವರನ್ನು ಬಿಜೆಪಿಯಿಂದ ಹೊರಹಾಕಿದ ಬಳಿಕ ಪೊಲೀಸರು ಒತ್ತಡಕ್ಕೆ ಸಿಲುಕಿ ಜುಬೇರ್ ಅವರನ್ನು ಬಂಧಿಸಿ, ಒಂದು ತಿಂಗಳು ಜೈಲಿನಲ್ಲಿರಿಸಿದ್ದರು.
ಇದನ್ನೂ ಓದಿರಿ: ‘ದಿ ಇಂಡಿಯಾ ಹೇಟ್ ಲ್ಯಾಬ್’ ಬಿಚ್ಚಿಟ್ಟಿರುವ ದ್ವೇಷಭಾಷಣಗಳ ಆಘಾತಕಾರಿ ಸತ್ಯಗಳು!
ಇದೇ ಜುಬೇರ್ ಅವರ ಮೇಲೆ 2024ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಪೊಲೀಸರು ದೇಶದ್ರೋಹದ ಕೇಸ್ ದಾಖಲಿಸಿದರು. ಕಾರಣ ಮಾತ್ರ ಆಶ್ಚರ್ಯಕರವಾಗಿದೆ. ಸದಾ ಮುಸ್ಲಿಮರ ವಿರುದ್ಧ ವಿಷಕಾರುವ, ವಿವಾದಿತ ಹಿಂದುತ್ವ ಧರ್ಮಗುರು ಯತಿ ನರಸಿಂಗಾನಂದ ಅವರು ಪ್ರವಾದಿ ಮಹಮ್ಮದರ ಕುರಿತು ನಿಂದನಾತ್ಮಕವಾಗಿ ಮಾತನಾಡಿದ್ದರು. ಯತಿ ಮಾಡಿದ ಭಾಷಣದ ವಿಡಿಯೊವನ್ನು ಜುಬೇರ್ ಹೊರಗೆಳೆದು ಟ್ವೀಟ್ ಮಾಡಿದ್ದರು. ಮುಸ್ಲಿಂ ಸಮುದಾಯದಿಂದ ಹಲವೆಡೆ ಸಹಜವಾಗಿ ಪ್ರತಿಭಟನೆಗಳು ನಡೆದವು. ಆನಂತರದಲ್ಲಿ ಜುಬೇರ್ ವಿರುದ್ಧ ‘ದೇಶದ್ರೋಹ’ದ ಕೇಸ್ ದಾಖಲಿಸಲಾಯಿತು.
“ವಿಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಯತಿ ನರಸಿಂಗಾನಂದ ಅವರ ಮೇಲೆ ಮುಸ್ಲಿಮರನ್ನು ಜುಬೇರ್ ಪ್ರಚೋದಿಸಿದ್ದಾರೆ” ಎಂದು ನರಸಿಂಗಾನಂದರ ಸಹಚರ ಉದಿತಾ ತ್ಯಾಗಿ ದೂರು ನೀಡಿದ್ದರು. ಕೆಲವೇ ದಿನಗಳಲ್ಲಿ, ಉತ್ತರ ಪ್ರದೇಶದ ಪೊಲೀಸರು ಜುಬೇರ್ ವಿರುದ್ಧ ಕೇಸ್ ದಾಖಲಿಸಿದರು. “ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲಾಗಿದೆ, ಕ್ರಿಮಿನಲ್ ಬೆದರಿಕೆ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶಪೂರಿತ ಉದ್ದೇಶ ಮೆರೆಯಲಾಗಿದೆ” ಎಂದು ಆರೋಪಿಸಲಾಗಿದೆ. ಇಲ್ಲಿನ ಪಿತೂರಿಯನ್ನು ಗಮನಿಸಲು ವಿಶೇಷ ಜ್ಞಾನವೇನೂ ಬೇಕಿಲ್ಲ. ದ್ವೇಷದ ಮಾತನಾಡಿದ ಯತಿ ನರಸಿಂಗಾನಂದರ ವಿಡಿಯೊವನ್ನು ಬಯಲಿಗೆಳೆದದ್ದೇ ಇಲ್ಲಿ ಆಗಿರುವ ಮಹಾ ಪ್ರಮಾದ!

ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ನಾಗರಿಕ ಹಕ್ಕುಗಳ ರಕ್ಷಣಾ ಸಂಘದ (APCR) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನದೀಮ್ ಖಾನ್ ಅವರನ್ನು ದೆಹಲಿ ಪೊಲೀಸರು ಅಕ್ರಮವಾಗಿ ಬಂಧಿಸಲು ಯತ್ನಿಸಿದ್ದರು. ಬೆಂಗಳೂರಿನಲ್ಲಿರುವ ನದೀಮ್ ಸಹೋದರನ ನಿವಾಸಕ್ಕೆ ಯಾವುದೇ ವಾರೆಂಟ್ ಇಲ್ಲದೆ ಪೊಲೀಸರು ಆಗಮಿಸಿದ್ದರು.
ಭಾರತದಾದ್ಯಂತ ಇತ್ತೀಚೆಗೆ ವರದಿಯಾದ ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣಗಳ ಘಟನೆಗಳನ್ನು ತೋರಿಸುವ ವಿಡಿಯೊ ಹಂಚಿಕೊಂಡಿದ್ದಕ್ಕೆ ನದೀಮ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಸ್ಥಳೀಯ ಪೊಲೀಸರಿಗೆ ಯಾವುದೇ ಸೂಚನೆ ನೀಡದೆ, ಅಕ್ರಮ ಬಂಧನಕ್ಕೆ ಯತ್ನಿಸಲಾಗಿತ್ತು. ʼಅರ್ನೇಶ್ ಕುಮಾರ್ vs ಬಿಹಾರʼ ಮತ್ತು ʼಸಿದ್ಧಾರ್ಥ್ vs ಉತ್ತರಪ್ರದೇಶʼ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಾರ್ಗಸೂಚಿಗಳನ್ನು ಪೊಲೀಸರು ಉಲ್ಲಂಘಿಸಿದ್ದರು.

ಪ್ರಭುತ್ವದ ತರತಮಗಳನ್ನು ಪ್ರಶ್ನಿಸಿದ ಬಳಿಕ ಜೈಲಿಗೆ ದೂಡಲ್ಪಟ್ಟವರ ಪೈಕಿ ಮುಸ್ಲಿಂ ಸಮುದಾಯದ ಹೋರಾಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ವಿರುದ್ಧ ಯುಎಪಿಎ ಥರದ ಕಠಿಣ ಕಾನೂನುಗಳನ್ನು ಬಳಸಲಾಗಿದೆ. ಒಂದಲ್ಲ ಒಂದು ಗಂಭೀರ ಆರೋಪಗಳಿಗೆ ಸಿಲುಕಿಸಿ, ಮಾನವೀಯ ದನಿಗಳನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಮಾಡಿದೆ.
ದೆಹಲಿ ಗಲಭೆ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ತಳ್ಳಲ್ಪಟ್ಟವರ ಪಟ್ಟಿ ದೊಡ್ಡದಿದೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಪಿಎಚ್‌ಡಿ ವಿದ್ಯಾರ್ಥಿನಿ ಮೀರನ್ ಹೈದರ್, ಇಸ್ಲಾಮಿಕ್ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾರೆಂಬ ಆರೋಪಕ್ಕೆ ಗುರಿಯಾದ ಅದೇ ವಿವಿಯ ಭಾಷಾ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ, ಜಾಮೀಯಾದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಿಫಾ ಉರ್ ರೆಹಮಾನ್ ಅವರನ್ನು 2020ರ ದೆಹಲಿ ಗಲಭೆಗೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಜೆಎನ್‌ಯುನ ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್, ಹತ್ರಾಸ್ ಅತ್ಯಾಚಾರ ಘಟನೆಯ ವರದಿ ಮಾಡಲು ಹೋಗಿ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್- ಹೀಗೆ ಸತ್ಯ ನುಡಿದ ಮುಸ್ಲಿಮರನ್ನು, ನ್ಯಾಯಕ್ಕಾಗಿ ದನಿ ಎತ್ತಿದ ಮುಸ್ಲಿಮರನ್ನು ಜೈಲಿಗೆ ದೂಡಿ ಹಿಂಸಿಸಲಾಗಿದೆ. ನ್ಯಾಯ ಕೇಳುವ ಮುಸ್ಲಿಮರಿಗೆ ದೇಶದ್ರೋಹಿಗಳೆಂದೋ, ಧರ್ಮಧಾರಿತವಾಗಿ ಪ್ರಚೋದನೆ ಮಾಡಲು ಯತ್ನಿಸುತ್ತಿದ್ದಾರೆಂದೋ, ಹಿಂದೂ ವಿರೋಧಿಗಳೆಂದೋ, ಇವರು ಮುಸ್ಲಿಮರ ಕುರಿತು ಏನನ್ನೂ ಮಾತನಾಡುವುದಿಲ್ಲವೆಂದೋ ಆರೋಪಿಸಿ, ಅವರ ದನಿಯನ್ನು ಹತ್ತಿಕ್ಕಲಾಗುತ್ತಿದೆ.
ಮುಸ್ಲಿಮರ ವಿರುದ್ಧ ಹಿಂದುತ್ವ ಮತೀಯವಾದಿಗಳ ದ್ವೇಷದ ಎಲ್ಲೆಗಳು ಮೀರಿದ ಉದಾಹರಣೆಗಳಿವೆ. ಬುಲ್ಲಿಬಾಯ್, ಸುಲ್ಲಿ ಡೀಲ್ಸ್ ಎಂಬ ಆಪ್‌ಗಳನ್ನು ಸೃಷ್ಟಿಸಿ, ಇನ್ನೆಂದೂ ಕಾಣದಂತಹ ವಿಕೃತಿ ಮೆರೆಯಲಾಗಿತ್ತು. ಈ ಆಪ್ ಸೃಷ್ಟಿಯ ಹಿಂದೆ ಇದ್ದವರು ಬಹುತೇಕ ಹದಿಹರೆಯದ ಮೇಲ್ಜಾತಿ ಯುವಕ- ಯುವತಿಯರು ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿರಿ: ಆಸಾರಾಂ ಬಾಪು: ಸಂತನೋ, ಪಾಪಿಯೋ?
ಹೋರಾಟದಲ್ಲಿ ಮುಂಚೂಣಿಯಲ್ಲಿರುವ, ಪ್ರಭುತ್ವದ ವಿರುದ್ಧ ದನಿ ಎತ್ತುತ್ತಾ ಸಮಾನತೆಗಾಗಿ ಶ್ರಮಿಸುತ್ತಿರುವ ನೂರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ವಿಕೃತವಾಗಿ ಬಳಸಿ ಬುಲ್ಲಿ ಬಾಯ್ಸ್ ಆಪ್‌ನಲ್ಲಿ ಹಂಚಿ, “ಇವರೆಲ್ಲರನ್ನೂ ಹರಾಜಿಗೆ ಇಡಲಾಗಿದೆ” ಎಂದು ಪ್ರಕಟಿಸಿ ಲೈಂಗಿಕವಾಗಿ ಕಿರುಕುಳ ಕೊಡಲಾಗಿತ್ತು.
ಬುಲ್ಲಿಬಾಯ್ ಪ್ರಕರಣವನ್ನು ಅಗೆಯುತ್ತಾ ಹೋದಂತೆ ಮತ್ತಷ್ಟು ವಿಕೃತಿಗಳು ಬಯಲಾಗುತ್ತಾ ಹೋಗಿದ್ದವು. ಬಲಪಂಥೀಯ ಗುಂಪಿನೊಳಗೆಯೇ ಎರಡು ಬಣಗಳು ಹುಟ್ಟಿಕೊಂಡಿರುವುದನ್ನು ಆ ಸಂದರ್ಭದಲ್ಲಿ ಗುರುತಿಸಲಾಗಿತ್ತು. ಅವುಗಳೇ ‘ಟ್ರ್ಯಾಡ್ಸ್’ ಮತ್ತು ‘ರಾಯ್ತಾಸ್’. ಟ್ರ್ಯಾಡ್ಸ್- ತೀವ್ರತರನಾದ ಉಗ್ರ ಚಟುವಟಿಕೆಯನ್ನು ಬೆನ್ನೇರಿದ್ದರೆ, ರಾಯ್ತಾಸ್- ಬಿಜೆಪಿ ಮತ್ತು ಆರ್‌ಎಸ್‌ಎಸ್ ಆಣತಿಯಂತೆ ಕುಣಿಯುವ ರಾಜಕೀಯ ಮತೀಯವಾದಿ ಗುಂಪು. ವಿಚಿತ್ರವೆಂದರೆ ಟ್ರ್ಯಾಡ್ಸ್‌ಗಳಿಗೆ, ರಾಯ್ತಾಸ್‌ಗಳ ಕಾರ್ಯ ವೈಖರಿಯ ಬಗ್ಗೆಯೂ ತೀವ್ರ ಅಸಮಾಧಾನ.
ಕೊಂಚವು ಘನತೆ, ಮಾನವೀಯತೆ ಇರದ ಗುಂಪು ಟ್ರ್ಯಾಡ್ಸ್‌ಗಳದ್ದು. ಟ್ವಿಟರ್‌ಗೆ ಭೇಟಿ ಕೊಟ್ಟು ಸುಮ್ಮನೆ Trads Hindu ಎಂದು ಸರ್ಚ್ ಮಾಡಿ ನೋಡಿ. ಟ್ರ್ಯಾಡ್ ಗುಂಪನ್ನು ಬೆಂಬಲಿಸುವ ಹ್ಯಾಂಡಲ್‌ಗಳು ದಂಡಿಯಾಗಿ ಸಿಗುತ್ತವೆ. ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಮುಸ್ಲಿಂ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲ್ಲಲಾಗಿತ್ತು. ಇದನ್ನು ಟ್ರ್ಯಾಡ್ಸ್ ಗುಂಪಿನ ಹ್ಯಾಂಡಲ್‌ಗಳು ವಿಕೃತವಾಗಿ ಸಂಭ್ರಮಿಸಿರುವ ಪೋಸ್ಟ್‌ಗಳು ಈಗಲೂ ಸಿಗುತ್ತವೆ. ರಾಯ್ತಾಸ್‌ಗಳು ಮುಸ್ಲಿಂ ದ್ವೇಷವನ್ನು ಮುಖ್ಯವಾಗಿ ಇಟ್ಟುಕೊಂಡರೂ ದಲಿತರ ಮೇಲಿನ ಅಸಹನೆಯನ್ನು ಬಹಿರಂಗವಾಗಿ ತೋರಿಸಿಕೊಳ್ಳುವುದಿಲ್ಲ. ಆದರೆ ಟ್ರ್ಯಾಡ್ಸ್‌ಗಳಿಗೆ ದಲಿತರ ಮೇಲೆಯೂ ತೀರಲಾಗದ ಅಸಹನೆ.
ಟ್ರ್ಯಾಡ್ಸ್ ತಮ್ಮ ಸಿದ್ಧಾಂತವನ್ನು ಒಪ್ಪದ ಯಾರಿಗಾದರೂ ಆನ್‌ಲೈನ್‌ನಲ್ಲಿ ಕಿರುಕುಳ ಕೊಡುವಲ್ಲಿ ಹೆಸರುವಾಸಿ. “ಟ್ರ್ಯಾಡ್ಸ್ ಅನ್ನು ಒಪ್ಪದಿದ್ದರೆ, ಅವರು ನಿಮ್ಮನ್ನು ಹಿಂದೂಗಳೆಂದು ಪರಿಗಣಿಸುವುದಿಲ್ಲ. ಟ್ರ್ಯಾಡ್ಸ್‌ಗಳು ಸಾವರ್ಕರ್ ಸಿದ್ಧಾಂತವನ್ನು ತಮ್ಮ ದೊಡ್ಡ ಶತ್ರುಗಳೆಂದು ಪರಿಗಣಿಸುತ್ತಾರೆ. ಅವರು ದ್ವಾರಕಾ ಮತ್ತು ಪುರಿಯ ಶಂಕರಾಚಾರ್ಯರನ್ನು ತಮ್ಮ ಗುರುಗಳೆಂದು ಪರಿಗಣಿಸುತ್ತಾರೆ. ಅವರ ಉಗ್ರಗಾಮಿ ವಿಚಾರಗಳನ್ನು ಒಪ್ಪದ ಯಾರ ವಿರುದ್ಧವಾದರೂ ಸರಿ ಉಗ್ರವಾದವನ್ನೇ ಪ್ರತಿಯಾಗಿ ಬಳಸುತ್ತಾರೆ. ಅವರ ಸಿದ್ಧಾಂತವು ಕಟ್ಟುನಿಟ್ಟಾದ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಅವರು ಜಾತಿ ಶ್ರೇಷ್ಠತೆಯನ್ನು ನಂಬುತ್ತಾರೆ. ಅವರು ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಲು ಬಯಸುತ್ತಾರೆ. ಈ ಟ್ರ್ಯಾಡ್ಸ್‌ನವರು ದಲಿತರ ಪ್ರಗತಿಯನ್ನು ಇಷ್ಟಪಡುವುದಿಲ್ಲ ಅಥವಾ ಬ್ರಾಹ್ಮಣರನ್ನು ಹೊರತುಪಡಿಸಿ ಯಾವುದೇ ಜಾತಿಯನ್ನು ಇಷ್ಟಪಡುವುದಿಲ್ಲ. ಅವರನ್ನು ಕೆಲವು ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಗಳು ಬೆಂಬಲಿಸುತ್ತಾರೆ” ಎಂಬ ಸಂಗತಿಗಳನ್ನು ಸ್ವತಂತ್ರ ಮಾಧ್ಯಮಗಳು ಬಯಲಿಗೆಳೆದಿದ್ದವು.

ಮುಸ್ಲಿಂ ಎಂಬ ಕಾರಣಕ್ಕೆ ಹೇಗೆಲ್ಲ ದನಿಯನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ ಎಂಬುದಕ್ಕೆ ಇಷ್ಟು ಹೇಳಬೇಕಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ಅಕೌಂಟ್‌ಗಳ ಮೂಲಕ ಅತ್ಯಾಚಾರಿಗಳನ್ನು ಬೆಂಬಲಿಸುವುದು, ಮುಸ್ಲಿಮರನ್ನು ದ್ವೇಷಿಸುವುದು ಹೆಚ್ಚಾಗುತ್ತಿದೆ. ಒಂದು ರೀತಿಯಲ್ಲಿ ಟ್ರ್ಯಾಡ್‌ಗಳ ಮನಸ್ಥಿತಿಗಳು ಹೆಚ್ಚಾಗುತ್ತಿರುವುದು ಕಾಣುತ್ತಿದೆ. ಇಂದು ಸೌಜನ್ಯ ಪರ ದನಿ ಎತ್ತಿದವರ ವಿರುದ್ಧ ಧರ್ಮದ ಅಸ್ತ್ರವನ್ನು ಬಳಸಲಾಗುತ್ತಿದೆ. ಅವರೊಳಗೆ ನಿಜವಾಗಿಯೂ ಮತೀಯವಾದಿ ಕಣ್ಣುಗಳನ್ನು ಮೀರಿದ ಮನುಷ್ಯ ಸಹಜ ಪ್ರೀತಿ ಇರಲು ಸಾಧ್ಯವೇ? ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕೆಂಬ ನಿಜವಾದ ಕಾಳಜಿ ಅವರಿಗಿದೆಯೇ?
ಸೌಜನ್ಯ ಅವರ ತಾಯಿ ಕುಸುಮಾವತಿ ಕಳೆದ ವರ್ಷ ಹೇಳಿದ ಮಾತೊಂದು ಮತ್ತೆ ಮತ್ತೆ ಕಾಡುತ್ತದೆ. “ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿದವರು ಅವಳನ್ನು ಸಾಯಿಸದೆ ಹಾಗೆ ಬಿಟ್ಟಿದ್ದರೆ ಸಾಕಿತ್ತು. ತಾಯಿಯಾಗಿ ನನ್ನ ಮಗುವನ್ನು ನಾನು ಸಾಕುತ್ತಿದ್ದೆ. ಆದರೆ ನನ್ನ ಮಗು ಕ್ರೂರವಾಗಿ ಸತ್ತದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ” ಎಂದಿದ್ದರು ಕುಸುಮಾವತಿ. ಎದೆಗಿರಿಯುವ ಈ ಮಾತುಗಳು ನಿಮ್ಮನ್ನು ಬಾಧಿಸದಿದ್ದರೆ, ಸೌಜನ್ಯ ಪರ ದನಿ ಎತ್ತಿದವರ ಧರ್ಮವನ್ನು ಹುಡುಕಿ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದರೆ, ನಿಮ್ಮೊಳಗೆ ಮನುಷ್ಯತ್ವದ ಸೆಲೆಗಳು ಬತ್ತಿಹೋಗಿರಬಹುದಷ್ಟೇ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




