ನಮ್ಮ ಕರ್ನಾಟಕ | 50 ವರ್ಷಗಳಲ್ಲಿ ಕೃಷಿ ಕ್ಷೇತ್ರ ಕಂಡ ಏಳುಬೀಳುಗಳೇನು? (ಭಾಗ-1)

Date:

ಕರ್ನಾಟಕ ರಾಜ್ಯದ ಕೃಷಿಯನ್ನು ಅವಲೋಕಿಸುವಾಗ ಅಭಿವೃದ್ಧಿ ಮಾನದಂಡಗಳ ಜೊತೆಗೆ ಕಳೆದೈದು ದಶಕಗಳಲ್ಲಿ ಕೈಗೊಂಡ ಮಹತ್ವದ ಸುಧಾರಣೆ, ನೀತಿ, ಕಾರ್ಯಯೋಜನೆಗಳತ್ತ ಗಮನ ಕೂಡ ಅಗತ್ಯ. ಕರ್ನಾಟಕದಂತಹ ರಾಜ್ಯವೊಂದರ ಕೃಷಿ ವ್ಯವಸ್ಥೆಯ ಮೇಲೆ 90ರ ನಂತರದ ಉದಾರೀಕರಣ, ಜಾಗತೀಕರಣ ನೀತಿಗಳ ಪರಿಣಾಮಗಳನ್ನು ಬದಿಸರಿಸಿ ನೋಡಲು ಸಾಧ್ಯವೇ ಇಲ್ಲ. ಇವೆಲ್ಲವುದಕ್ಕೂ ನೇರವಾಗಿ ತಳುಕು ಹಾಕಿಕೊಂಡಿರುವ ರಾಜ್ಯದ ರೈತಾಪಿ ವರ್ಗದ ಸ್ಥಿತಿಗತಿಗಳತ್ತ ಗಮನ ಹರಿಸಿದರಂತೂ ಆತಂಕಕಾರಿ ವಿಚಾರಗಳು ಹೊರಹೊಮ್ಮುವವು. ಮಾರುಕಟ್ಟೆ ಶಕ್ತಿಗಳು, ಕಾರ್ಪೊರೇಟ್ ವಲಯ ‘ರಾಜ್ಯಶಕ್ತಿ’, ಸರ್ಕಾರಗಳ ಮೇಲೆ ಹತೋಟಿ ಅಧಿಕಗೊಳಿಸುತ್ತಿರುವ ಜೊತೆಗೆ ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳು ಅಪ್ಪಳಿಸುತ್ತಿರುವ ಈ ಸಮಯದಲ್ಲಿ ನಮ್ಮ ಕೃಷಿಯನ್ನು ಮಾತ್ರವಲ್ಲ ಕೃಷಿಕರನ್ನು ಸಂರಕ್ಷಿಸುವ ಸವಾಲು ಹಿಂದೆಂದಿಗಿಂತಲೂ ಅಧಿಕವಾಗಿದೆ.

ಸುಧಾರಣೆ, ನೀತಿಗಳ ನಡುವೆಯ ಅಭಿವೃದ್ಧಿ ಪಥದಲ್ಲಿ ಹಿಂದೆ:

ಅಹಿತಕರ ಗೇಣಿದಾರಿಕೆ ಭೂ ಸಂಬಂಧವನ್ನು ಕೊನೆಗೊಳಿಸಿ ದೇಶದಲ್ಲಿ ಪ್ರಗತಿಪರ `ಭೂಸುಧಾರಣೆ’ಯನ್ನು 1973ರಲ್ಲೇ ಕೈಗೊಂಡ ಮುಂಚೂಣಿ ರಾಜ್ಯ ಕರ್ನಾಟಕ. ದೇಶಕ್ಕೆ ಒಂದು `ಕೃಷಿ ನೀತಿ’ ಇಲ್ಲದಿರುವಾಗ 1995ರ ಜನತಾದಳ ಸರ್ಕಾರ `ಕೃಷಿಗೆ ಕೈಗಾರಿಕಾ ಸ್ಥಾನಮಾನ’ದಂತಹ ದಿಟ್ಟ ಪ್ರಸ್ತಾವನೆ ಮಾಡಿ ಪ್ರತ್ಯೇಕ ಕೃಷಿ ನೀತಿಯನ್ನು ಹೊರತಂದಿರುತ್ತದೆ. ಜೊತೆಗೆ, ದೇಶದಲ್ಲಿ ಮೊದಲು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ)ಗಳನ್ನು ಕೃಷಿಯಲ್ಲಿ ಅಳವಡಿಸಿದ, ಕೃಷಿಗೆ ಒಂದು ಪ್ರತ್ಯೇಕ ಆಯವ್ಯಯ ಮಂಡಿಸಿದ, ‘ಕೃಷಿ ಬೆಲೆ ಆಯೋಗ’ ರಚಿಸಿದ ಹೆಗ್ಗಳಿಕೆಗಳು ಕರ್ನಾಟಕದ್ದು. ಇವೆಲ್ಲವುಗಳ ಜೊತೆಗೆ ಕೃಷಿ ವಲಯದ ಬಿಕ್ಕಟ್ಟಿನ ನಿವಾರಣೆಗೆ ಸ್ವಾಮಿನಾಥನ್, ದ್ವಾರಕಿನಾಥ್, ವೀರೇಶ್, ಪ್ರೇಮನಾಥ್‌ರಂಥ ತಜ್ಞರ ಜೊತೆಗೆ ದಕ್ಷ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿಯವರ ಸಾಲು ಸಾಲು ವರದಿಗಳೂ ಬಂದಿರುತ್ತವೆ. ಅಷ್ಟೇ ಮುಖ್ಯವಾಗಿ ಕೃಷಿ ಮತ್ತು ಸಂಬಂಧಿಸಿದ ವಿಚಾರಗಳ ಶಿಕ್ಷಣದ ಜವಾಬ್ದಾರಿ ಹೊತ್ತಿರುವ ವಿಶ್ವವಿದ್ಯಾನಿಲಯಗಳು, ಅವಕ್ಕೆ ಹೊಂದಿಕೊಂಡ ಸಂಶೋಧನಾ ಕೇಂದ್ರ, ಕಾಲೇಜುಗಳು ದೇಶದ ಯಾವ ರಾಜ್ಯದಲ್ಲೂ ಇಲ್ಲದಷ್ಟು ಅಧಿಕ ಸಂಖ್ಯೆಯಲ್ಲಿ ಕರ್ನಾಟಕದಲ್ಲಿವೆ. ಗಮನಾರ್ಹ ವಿಚಾರವೆಂದರೆ ಸರ್ಕಾರ ರೈತಪರ ನೀತಿ, ನಿಲುವುಗಳಿಂದ ವಿಮುಖವಾಗದ ಹಾಗೆ ಒತ್ತಡ ಹೇರಲು ಐತಿಹಾಸಿಕ ಕಾಗೋಡು ಹೋರಾಟದಿಂದ ಲೋಹಿಯಾವಾದಿ ಪ್ರೊ. ನಂಜುಂಡಸ್ವಾಮಿ ಹುಟ್ಟುಹಾಕಿದ ರೈತ ಚಳವಳಿ ಮತ್ತು ಸಂಘಟನೆಗಳು ರಾಜ್ಯದಲ್ಲಿ ಅತ್ಯಂತ ಸಕ್ರಿಯವಾಗಿವೆ. ಇವೆಲ್ಲ ಪರಿಣಾಮಕಾರಿಯಾಗಿದ್ದೆ ಆದಲ್ಲಿ ಕರ್ನಾಟಕದ ಕೃಷಿಯ ಪರಿಸ್ಥಿತಿ ಮತ್ತು ರೈತರ ಸ್ಥಿತಿ ಬೇರೇನೆ ಆಗಿರುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜ್ಯದ ವೈವಿಧ್ಯಮಯ ಹವಾಮಾನ ಮತ್ತು ಮಣ್ಣಿನ ಗುಣಲಕ್ಷಣದ ಸುಮಾರು ನೂರು ಲಕ್ಷ ಹೆಕ್ಟರ್ಗಳಿಗಿಂತ ಅಧಿಕ ಭೂಮಿಯಲ್ಲಿ 78 ಲಕ್ಷ ರೈತ ಕುಟುಂಬಗಳು ಪ್ರತಿವರ್ಷ ಭತ್ತ, ಜೋಳ, ತೊಗರಿ, ನೀರುಳ್ಳಿ, ಟಮೊಟೊ, ದ್ರಾಕ್ಷಿ, ಅಡಿಕೆ, ಕಾಫಿ ಇವೇ ಮೊದಲಾದ 28 ಪ್ರಮುಖ ಬೆಳೆಗಳ ಬೇಸಾಯ ಕೈಗೊಳ್ಳುತ್ತಿರುವರು. ಕೇಂದ್ರ ಸರ್ಕಾರದ `ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಸಚಿವಾಲಯ’ದ ಇತ್ತೀಚಿಗಿನ ವರದಿಯ ಪ್ರಕಾರ ನಮ್ಮ ಆಹಾರ ಬೆಳೆಗಳ ಉತ್ಪಾದಕತೆ, ಪಂಜಾಬ್, ಆಂಧ್ರವಿರಲಿ ರಾಷ್ಟ್ರಮಟ್ಟಕ್ಕೆ ಹೋಲಿಸಿದರೂ ಶೇ.30ರಷ್ಟು ಕಡಿಮೆ ಇರುತ್ತದೆ. ಕಾವೇರಿ, ಕೃಷ್ಣ, ಪೆನ್ನಾರ್, ಪಾಲಾರ್ ಹೀಗೆ ಏಳು ಪ್ರಮುಖ ನದಿ ಕೊಳ್ಳಗಳನ್ನು ಕರ್ನಾಟಕ ಹೊಂದಿದ್ದರೂ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ನಮ್ಮ ಸಾಧನೆ ನಿರಾಶಾದಾಯಕವಾಗಿದೆ. ರಾಷ್ಟ್ರಮಟ್ಟದಲ್ಲಿ ಶೇಕಡಾ 50ರಷ್ಟು ಬೇಸಾಯ ಭೂಮಿಗೆ ನೀರಾವರಿ ಕಲ್ಪಿಸಲು ಸಾಧ್ಯವಾಗಿದ್ದರೆ ಕರ್ನಾಟಕದ ಸಾಧನೆ ಈ ನಿಟ್ಟಿನಲ್ಲಿ ಶೇಕಡಾ 30ರಷ್ಟು ಮಾತ್ರ. ಸುಮಾರು 30,000 ‘ಸಮುದಾಯ ಕೆರೆ’ಗಳು ರಾಜ್ಯದಲ್ಲಿದ್ದರೂ ಇವುಗಳನ್ನು ಪುನಶ್ಚೇತನಗೊಳಿಸಿ ಸಣ್ಣ ನೀರಾವರಿ ಅಭಿವೃದ್ಧಿಪಡಿಸಲು ರಾಜ್ಯ ಹಿಂದೆ ಬಿದ್ದಿದೆ. ಇವೆಲ್ಲವುದರ ಪರಿಣಾಮ ರಾಜಸ್ಥಾನದ ನಂತರ ಅತಿ ಹೆಚ್ಚು ‘ಒಣ ಭೂಮಿ’ ಹೊಂದಿರುವ ರಾಜ್ಯ ಎಂಬ ಅಪಖ್ಯಾತಿಯನ್ನು ಕೂಡ ಕರ್ನಾಟಕ ಪಡೆದಿದೆ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಹಳಿ ತಪ್ಪಿದ್ದೆಲ್ಲಿ?

ನೀರಾವರಿ ಸೌಲಭ್ಯ ಹೆಚ್ಚಿಸುವ ವಿಫಲತೆಯ ಕಾರಣ ಸುಧಾರಿಸಿದ ಬೀಜ, ರಸಗೊಬ್ಬರ ಮುಂತಾದ ಆಧುನಿಕ ‘ಕೃಷಿ ಪರಿಕರಗಳ’ ಬಳಕೆ ಸ್ವಾಭಾವಿಕವಾಗಿ ಕುಂಠಿತವಾಗಿದೆ. ಕೃಷಿ ಸಾಲದ ಪೂರೈಕೆ ಕೂಡ ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಜನ್ಮ ನೀಡಿದ್ದರೂ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಇರುವುದು ತಿಳಿದುಬಂದಿರುತ್ತದೆ. ಇವೆಲ್ಲವುದರ ಜೊತೆಗೆ ಕೃಷಿ ಉತ್ಪಾದನಾ ವೆಚ್ಚ ಅಧಿಕವಾಗಿ, `ಕರ್ನಾಟಕ ಕೃಷಿ ಬೆಲೆ ಆಯೋಗ’ದ ಇತ್ತೀಚಿಗಿನ ವರದಿಯ ಪ್ರಕಾರ ರಾಜ್ಯದಲ್ಲಿ ಬಹುತೇಕ ಆಹಾರ ಬೆಳೆಗಳಲ್ಲಿ ರೈತ ಭರಿಸಿದ ಸಮಗ್ರ ವೆಚ್ಚ ಪರಿಗಣಿಸಿದರೆ ಬೇಸಾಯವೆಂಬುದು ಒಂದು ನಷ್ಟದ ಕಸುಬಾಗಿರುತ್ತದೆ. `ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್’ (ನಬಾರ್ಡ್)ನ ಇತ್ತೀಚಿಗಿನ ಸಮೀಕ್ಷೆ ಪ್ರಕಾರ ರಾಜ್ಯದ ಕೃಷಿ ಅವಲಂಬಿತರ ತಲಾ ಆದಾಯ ದಿನವೊಂದಕ್ಕೆ 138 ರೂ.ಗಳು ಮಾತ್ರ. ಕೃಷಿಯನ್ನೇ ನಂಬಿದಲ್ಲಿ ರಾಜ್ಯದ ರೈತರಲ್ಲಿ ಶೇಕಡಾ 72ರಷ್ಟು ಮಂದಿ ಬಡತನ ರೇಖೆಯ ಕೆಳಗಿಳಿಯುವ ಸಾಧ್ಯತೆ ಇದೆ. ರಾಜ್ಯದ ಶೇಕಡಾ 68ರಷ್ಟು ಕೃಷಿ ಕುಟುಂಬಗಳು ಋಣ ಬಾಧೆಯಿಂದ ತತ್ತರಿಸುತ್ತಿರುವುದು ಕೇಂದ್ರ ಸರ್ಕಾರದ 2021ರ ವರದಿಯಿಂದ ವ್ಯಕ್ತವಾಗಲಿದೆ. ಇವೆಲ್ಲವುದರ ಪರಿಣಾಮವಾಗಿ, ಬೇಸಾಯ ಮಾಡದೆ ಭೂಮಿ ಬೀಳುಬಿಡುವುದು, ನಗರಕ್ಕೆ ಗುಳೆ ಹೋಗುವುದು, ಎಲ್ಲೂ ಪರಿಹಾರ ಸಿಗದೆ ಅಂತಿಮವಾಗಿ ಆತ್ಮಹತ್ಯೆಗೆ ಶರಣಾಗುವುದು ಕರ್ನಾಟಕದ ಅನ್ನದಾತರ ದಶಕಗಳ ಕಾಲದ ಕರುಣಾಜನಕ ಸ್ಥಿತಿಯಾಗಿದೆ. ಕೋವಿಡ್ ಲಾಕ್ಡೌನ್ ಸಮಯದಲ್ಲಿ ನಡೆಸಿದ ಒಂದು ಸಮೀಕ್ಷೆಯಲ್ಲಿ ರಾಜ್ಯದ ಅರ್ಧದಷ್ಟು ಯುವರೈತರು ಕೃಷಿಯಲ್ಲಿ ಮುಂದುವರೆಯುವ ಆಸಕ್ತಿ ಇಲ್ಲದೆ ಹೊರಹೋಗಲು ಯೋಚಿಸುತ್ತಿರುವ ವಿಚಾರ ಹೊರಹೊಮ್ಮಿರುತ್ತದೆ.

ಸಮನ್ವಯ ಮತ್ತು ಗುರಿ ಮುಟ್ಟುವುದರಲ್ಲಿ ವಿಫಲತೆ:

‘ಉಳುವವನಿಗೆ ಭೂ ಒಡೆತನ’ದ ಅತ್ಯುಚ್ಚ ಉದ್ದೇಶವನ್ನು ಒಡಲಲ್ಲಿರಿಸಿ ಹೊರಬಂದಿರುವ 1973ರ ಕರ್ನಾಟಕ ಭೂ ಸುಧಾರಣಾ ಕಾಯಿದೆಯಲ್ಲಿ ಕೃಷಿ ಭೂಮಿಯ ಸದ್ಬಳಕೆ ಕೂಡ ಪ್ರಮುಖ ಆಶಯವಾಗಿದೆ. ಹಾಗಿದ್ದರೂ, ನಿರಂತರ ನಿರ್ಲಕ್ಷ್ಯದ ಕಾರಣ ರಾಜ್ಯದ ಶೇಕಡಾ 36ರಷ್ಟು ಕೃಷಿ ಭೂಮಿಯ ಫಲವತ್ತತೆ ನಾಶವಾಗಿ ಅವನತಿಯ ದಾರಿ ಹಿಡಿದಿರುತ್ತದೆ. ಹೀಗೆ ಮುಂದುವರಿದಲ್ಲಿ ಭೂ ಅವನತಿಯ (Degradation) ಪ್ರಮಾಣ 2050ರಲ್ಲಿ ಶೇಕಡಾ 80ರಷ್ಟು ತಲುಪುವ ಸಾಧ್ಯತೆ ಇದೆ ಎನ್ನುವ ಆಘಾತಕಾರಿ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿರುತ್ತದೆ. ಭೂ ಅವನತಿ ಈ ಪ್ರಕ್ರಿಯೆ ದೇಶದಾದ್ಯಂತ ಸಂಭವಿಸುತ್ತಿದ್ದರೂ ಕರ್ನಾಟಕದಲ್ಲಿ ಇನ್ನೂ ಅಧಿಕವಾಗಿರುತ್ತದೆ. ರಾಜ್ಯದ ಕೃಷಿ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ಕೃಷಿ ಬಿಕ್ಕಟ್ಟಿರಲಿ ಭೂ ಫಲವತ್ತತೆ ನಾಶ, ಉತ್ಪಾದಕತೆ ಕುಂಠಿತದಂತಹ ತಾಂತ್ರಿಕ ಸಮಸ್ಯೆಗಳನ್ನೂ ಪರಿಹರಿಸದಿರುವುದು ದೊಡ್ಡ ವಿಫಲತೆ ಎನ್ನಬಹುದು.

1970ರಲ್ಲಿ ರಾಜ್ಯದ ರೈತರ ಸರಾಸರಿ ಹಿಡುವಳಿ ಗಾತ್ರ 3.2 ಹೆಕ್ಟರ್‌ಗಳಿದ್ದರೆ ಇತ್ತೀಚಿಗಿನ ವರ್ಷದಲ್ಲಿ ಇದು 1.4 ಹೆಕ್ಟರ್ಗೆ ಇಳಿದಿದೆ. ನಮ್ಮ ಅರ್ಧ ಭಾಗ ರೈತರು ಒಂದು ಹೆಕ್ಟರಿಗಿಂತ ಕಡಿಮೆ ಇರುವ ಬಡ ರೈತರಾಗಿರುವರು ಮಾತ್ರವಲ್ಲ, ಇವರ ಹಿಡುವಳಿ ಒಂದೆಡೆ ಇರದೆ ಚದುರಿರುತ್ತದೆ. ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ ಸುಮಾರು 21 ಲಕ್ಷ ಹೆಕ್ಟೇರು ಅಥವಾ ಶೇಕಡಾ 16 ವಿಸ್ತೀರ್ಣ ಬೇಸಾಯ ಮಾಡದೆ ಬೀಳುಬಿಟ್ಟಿರುವುದು ಹಿಂದಿನ ಒಂದು ಅಧ್ಯಯನದಿಂದ ವ್ಯಕ್ತವಾಗಿದೆ. ಇವೆಲ್ಲ ಭೂಸುಧಾರಣೆಯ ಮುಂದಿನ ಹಂತವಾಗಿರುವ ‘ಸಹಕಾರಿ ಬೇಸಾಯ’ದ ಬಗ್ಗೆ ಗಮನ ಹರಿಸದಿರುವುದನ್ನು ಎತ್ತಿ ತೋರಿಸುತ್ತದೆ. 1983-85ರ ರಾಮಕೃಷ್ಣ ಹೆಗಡೆ ಸರ್ಕಾರದ ಒಣ ಬೇಸಾಯ ತಂತ್ರಜ್ಞಾನ ವೃದ್ಧಿ ಮತ್ತು ‘ಜಲಾನಯನ ಅಭಿವೃದ್ಧಿ’ ಕಾರ್ಯಕ್ರಮ ಹಾಗೂ ಕಳೆದ ಬಾರಿಯ ಕಾಂಗ್ರೆಸ್ ಸರ್ಕಾರ ಕೈಗೊಂಡ ಹೊಲದಲ್ಲೇ ಮಳೆ ನೀರನ್ನು ಕೃಷಿ ಹೊಂಡದ ಮೂಲಕ ಸಂಗ್ರಹಿಸಿ ಬಳಸುವ ‘ಕೃಷಿ ಭಾಗ್ಯ’ದಂತಹ ಕಾರ್ಯಕ್ರಮಗಳನ್ನೆಲ್ಲ ಸಮನ್ವಯಗೊಳಿಸಿದ್ದಲ್ಲಿ ರಾಜ್ಯದ ಕೃಷಿ ಭೂಮಿ ಸದ್ಬಳಕೆಯ ದಿಕ್ಕೇ ಬದಲಾಗಿರುತ್ತಿತ್ತು.

ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ `ಅನ್ನಭಾಗ್ಯ’ ಯೋಜನೆಯಡಿ ರಾಗಿ ಮತ್ತು ಜೋಳ ಈ ಎರಡು ಸಿರಿಧಾನ್ಯಗಳನ್ನು ಸೇರ್ಪಡಿಸಿರುವುದಕ್ಕೆ ಎಲ್ಲೆಡೆ ಶ್ಲಾಘನೆ ಬಂದಿರುತ್ತದೆ. ಆದರೆ ಇದನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಪ್ರಯತ್ನ ನಡೆದಿರುವುದಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಹೊರತಂದಿರುವ ಮಹತ್ವದ `ಆಹಾರ ಭದ್ರತೆ ಕಾಯಿದೆ’ಯನ್ನು ಸಮರ್ಥವಾಗಿ ಬಳಸಿಕೊಂಡು ನಮ್ಮ ರೈತರು ಉತ್ಪಾದಿಸಿದ ಧಾನ್ಯ, ಹಣ್ಣು, ಹಾಲು ತರಕಾರಿಗಳನ್ನು ಖರೀದಿಸಿ ಪಡಿತರದಡಿ ಹಂಚುವ ಜೊತೆಗೆ ಮಹಿಳಾ ಮತ್ತು ಶಿಶು ಕಲ್ಯಾಣದ ವಿವಿಧ ಯೋಜನೆಗಳಡಿ ಬಳಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದರೆ ರಾಜ್ಯದಲ್ಲಿ ಹಸಿವಿನಷ್ಟೇ ತಾಂಡವಾಡುತ್ತಿರುವ ಅಪೌಷ್ಟಿಕತೆಗೂ ಪರಿಹಾರ ದೊರಕುತ್ತಿತ್ತು. ಮಾತ್ರವಲ್ಲ, ರೈತರ ಉತ್ಪನ್ನಕ್ಕೆ ಯುಪಿಎ ಅವಧಿಯಲ್ಲೇ ಹೊರತಂದಿರುವ `ಸ್ವಾಮಿನಾಥನ್ ಸಮಿತಿ’ಯ ಶಿಫಾರಸ್ಸಿನಂತೆ ಲಾಭದಾಯಕ ಧಾರಣೆ ಕೂಡ ದೊರಕಿಸುವ ಸಾಧ್ಯತೆ ಇತ್ತು.

ಇದನ್ನೂ ಓದಿರಿ: ನಾಗರಿಕ ಸೇವೆ: ಕನ್ನಡಿಗರಿಗಿರುವ ಸವಾಲುಗಳೇನು?

ಇತ್ತೀಚಿಗಿನ ವರ್ಷಗಳಲ್ಲಿ `ಸಾವಯವ ಕೃಷಿ’, ಸಿರಿಧಾನ್ಯ ಬೇಸಾಯಕ್ಕೆ ಕೊಡುತ್ತಿರುವ ಪ್ರಯತ್ನಗಳು ಸುಸ್ಥಿರ – ಪರಿಸರಸ್ನೇಹಿಕೃಷಿ ವ್ಯವಸ್ಥೆಯ ನಿರ್ಮಾಣದತ್ತ ಸಾಗಿದ್ದರೆ ಇಂದು ಅಪ್ಪಳಿಸುತ್ತಿರುವ ಹವಾಮಾನ ವೈಪರೀತ್ಯದ ಪರಿಣಾಮಗಳಿಗೆ ಸ್ವಲ್ಪ ತಡೆ ಬರುತ್ತಿತ್ತು. ಇನ್ನು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೊರಬಂದ ‘ಕೃಷಿಗೆ ಕೈಗಾರಿಕೆಯ ಸ್ಥಾನಮಾನ’ ಕೇವಲ ಘೋಷಣೆಯಾಯ್ತೇ ಹೊರತು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಚಿಂತನೆಗಳೇ ನಡೆಯಲಿಲ್ಲ. ಭಾಜಪ ಸರಕಾರದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಪ್ರಾರಂಭಿಸಿ ನಂತರ ಮಂಡಿಸಿದ ಆಯವ್ಯಯಗಳೆಲ್ಲವನ್ನು ಕೃಷಿಯಿಂದಲೇ ಪ್ರಾರಂಭಿಸಿ `ಕೃಷಿ ಬಜೆಟ್’ ಎಂದಿದ್ದರೂ ಆ ನಿಟ್ಟಿನ ಪಾಲು ಗಮನಾರ್ಹವಾಗಿ ಅಧಿಕವಾಗಿರುವುದಿಲ್ಲ. ನಂತರ 1999ರ ಎಸ್.ಎಂ. ಕೃಷ್ಣ ಅವಧಿಯಲ್ಲಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನಗಳನ್ನು ಕೃಷಿವಲಯಕ್ಕೆ ತರುವ ಹಲವು ಕಾರ್ಯಕ್ರಮಗಳನ್ನ ರೂಪಿಸಲಾಯಿತು. ಇವುಗಳ ಜೊತೆಗೆ ಕೃಷಿ ವಾಣಿಜ್ಯೀಕರಣ ನಿಟ್ಟಿನಲ್ಲಿ ಬಂದ ಹಲವಾರು ವರದಿ, ಕಾರ್ಯಕ್ರಮಗಳು ಉದಾರೀಕರಣ, ಜಾಗತೀಕರಣ ನೀತಿಗಳಿಗೆ ಪೂರಕವಾದವೇ ಹೊರತು ನಮ್ಮ ವಿದ್ಯಾವಂತ ಯುವಕರನ್ನು ಕೃಷಿಯತ್ತ ಸೆಳೆಯುವ ಒಂದು ಪ್ರಯತ್ನವಾಗಲಿಲ್ಲ.

siridanyagalu
ಸಿರಿಧಾನ್ಯಗಳು (ಸಾಂದರ್ಭಿಕ ಚಿತ್ರ)

ಯುವಕರು ಕೃಷಿಯಲ್ಲಿ ತೊಡಗಲು ಬೇಸಾಯವನ್ನು ಒಂದು ಲಾಭದಾಯಕ ಕಸುಬನ್ನಾಗಿಸಿ ಆ ಮೂಲಕ `ಊಹಿಸಲ್ಪಡುವ ಆದಾಯ’ ದೊರಕುವಂತಾಗಬೇಕು. ಇದಕ್ಕೆ ಪೂರಕವಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯಾದರೂ ಖಾತರಿಯಾಗಿ ಸಿಗುವುದು ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಪ್ರಥಮವಾಗಿ ಸ್ಥಾಪಿಸಲ್ಪಟ್ಟಿರುವ `ಕರ್ನಾಟಕ ಕೃಷಿ ಬೆಲೆ ಆಯೋಗ’ದ ಹಲವು ಉಪಯುಕ್ತ ವರದಿಗಳನ್ನಾಗಲಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕೊಟ್ಟಿರುವ `ಬೆಂಬಲ ಬೆಲೆಗೆ ಕಾನೂನು ಸ್ವರೂಪ’ ನೀಡುವ ಆಶ್ವಾಸನೆಯನ್ನಾಗಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೂ ಪರಿಗಣಿಸದಿರುವುದು ಅರ್ಥವಾಗದ ವಿಚಾರವಾಗಿದೆ. ಸುಧಾರಣೆ, ನೀತಿ, ನಿಲುವು ಕಾರ್ಯಯೋಜನೆಗಳು ಉದ್ದೇಶಿತ ಗುರಿ ತಲುಪದಿರಲು ದಿಟ್ಟ ಕ್ರಮ ಮತ್ತು ರಾಜಕೀಯ ಇಚ್ಛಾಶಕ್ತಿಗಳ ಕೊರತೆ ಕಾರಣ ಎನ್ನುವುದು ನಿರ್ವಿವಾದ ವಿಚಾರ. ಆದರೆ ಅದಕ್ಕೂ ಮೀರಿದ ಮೂಲಭೂತ ಅಡೆಚಣೆಗಳನ್ನು ಕರ್ನಾಟಕದಂತಹ ರಾಜ್ಯ ಎದುರಿಸುತ್ತಿದೆಯೇ ಎನ್ನುವ ಪ್ರಶ್ನೆಗೆ ಕೆಳಗಿನ ಮೂರು ವಿಚಾರಗಳ ಬಗ್ಗೆ ಗಂಭೀರ ಅವಲೋಕನ ಅಗತ್ಯವಾಗಿದೆ.

I. ಜಾಗತೀಕರಣ, ಉದಾರೀಕರಣ ನೀತಿಗಳ ಪರಿಣಾಮ:

90ರ ನಂತರದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (LPG) ನೀತಿಗಳು ದೇಶದ ಅರ್ಥವ್ಯವಸ್ಥೆಯ ಮೇಲೆ ದಟ್ಟ ಛಾಯೆ ಬೀರಿದ್ದು ಅದರ ಪರಿಣಾಮ ಕೃಷಿ ವ್ಯವಸ್ಥೆ ಮೇಲೆ ಕೂಡ ಬಿದ್ದಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಸಮಾನ ಆಸಕ್ತಿ, ನಿಲುವು ಹೊಂದಿದ್ದರೂ ಆಡಳಿತಾರೂಢ ಭಾಜಪ ಇನ್ನೂ ಮುಂದುವರಿದು ಅದಾನಿ, ಅಂಬಾನಿ, ಪತಂಜಲಿಗಳಿಗೆ ದೇಶದ ಕೃಷಿ ವ್ಯವಸ್ಥೆಯ ಮೇಲೆ ಹಿಡಿತ ಅಧಿಕಗೊಳಿಸುವ ಎಲ್ಲ ಅವಕಾಶ ಕಲ್ಪಿಸಿರುತ್ತದೆ. ಈ ಉದ್ದೇಶದಿಂದಲೇ 2020ರಲ್ಲಿ ಮೂರು ಕರಾಳ ಕೃಷಿ ಶಾಸನಗಳನ್ನು ತಂದಿದ್ದು, ಚಾರಿತ್ರಿಕ ರೈತ ಹೋರಾಟಕ್ಕೆ ಮಣಿದ ನಂತರ ಹಿಂಪಡೆದಿರುವುದು ತಿಳಿದೇ ಇದೆ. ಆದರೆ, ಇದಕ್ಕೆ ಪೂರಕವಾಗಿ ಕರ್ನಾಟಕದ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯಿದೆಗಳಿಗೆ ತಂದಿರುವ ಅಷ್ಟೇ ಮಾರಕ ಬದಲಾವಣೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಹಿಂದೆ ಮುಂದೆ ನೋಡುತ್ತಿರುವುದು ಕಾಂಗ್ರೆಸ್ ಪಕ್ಷದ ನಿರುತ್ಸಾಹ ಮಾತ್ರವಲ್ಲ ನಿಸ್ಸಹಾಯಕತೆಯನ್ನೂ ಎತ್ತಿ ತೋರಿಸುತ್ತದೆ.

ಬೇಸಾಯವೇ ಒಂದು ನಷ್ಟದ ಕಸುಬಾಗಿದ್ದರೆ ಅದೇ ಬೇಸಾಯ ಭೂಮಿಗೆ ಲಕ್ಷಾಂತರ ರೂ. ಬೆಲೆ ಸಿಗುವಂತಾಗಿರುವುದು ಭೂಮಿ ಸುಲಭವಾಗಿ ಕೊಂಡುಕೊಳ್ಳುವ `ಸರಕೀಕರಣ’ಕ್ಕೆ (Commodification) ಒಳಪಡುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ. ಈ ನಿಟ್ಟಿನ ದೊಡ್ಡ ಅಡಚಣೆಯಾಗಿದ್ದ ಭೂಸುಧಾರಣೆ ಕಾಯ್ದೆಯ ಮೇಲಿನ ವ್ಯವಸ್ಥಿತ ಆಕ್ರಮಣ ಕರ್ನಾಟಕದಿಂದ ಪ್ರಾರಂಭವಾಗಿರುವುದು ಸಹಜವಾಗಿರುತ್ತದೆ. ಇದರ ಹಿಂದೆ ಐ.ಎಂ.ಎಫ್., ವಿಶ್ವ ವ್ಯಾಪಾರ ಸಂಸ್ಥೆ (WTO), ವಿಶ್ವ ಬ್ಯಾಂಕ್ ಮುಂತಾದವುಗಳ ಒತ್ತಡವಿರುವುದರಲ್ಲಿ ಅನುಮಾನವಿಲ್ಲ. ಇದರ ಜೊತೆಗೆ ಕೇಂದ್ರ ಸರ್ಕಾರದ 2020ರ `ಹೊಸ ಶಿಕ್ಷಣ ನೀತಿ’ ನೀತಿಗಳನ್ನು ರಾಜ್ಯಗಳ ಕೃಷಿ ಶಿಕ್ಷಣ ಮತ್ತು ಸಂಶೋಧನಾ ವ್ಯವಸ್ಥೆಯ ಮೇಲೆ ಹೇರುವ ನಿಟ್ಟಿನಲ್ಲಿ `ಡೀನ್ ಸಮಿತಿಯ 6ನೇ ವರದಿ’ಯನ್ನು ಇತ್ತೀಚೆಗೆ ಹೊರತರಲಾಗಿರುತ್ತದೆ. ಕರ್ನಾಟಕ ರಾಜ್ಯವೊಂದಕ್ಕೆ ಸೂಕ್ತವೆನಿಸುವ ಕೃಷಿ ಶಿಕ್ಷಣ, ಸಂಶೋಧನೆ, ತಂತ್ರಜ್ಞಾನ ವ್ಯವಸ್ಥೆ ರೂಪಿಸಿಕೊಳ್ಳುವ ಸ್ವಾಯತ್ತತೆ ಇಲ್ಲದಿರುವುದೂ ಗಂಭೀರ ವಿಚಾರವಾಗಿದೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಜಾಗತೀಕರಣ, ಉದಾರೀಕರಣ ನೀತಿಗಳ ಮೂಲ ಉದ್ದೇಶವೇ ಕೃಷಿಯ ಮೇಲೆ ಮಾತ್ರವಲ್ಲ ಇಡೀ ಅರ್ಥವ್ಯವಸ್ಥೆಯಲ್ಲಿ ಸರ್ಕಾರದ ಪಾತ್ರ ಕಡಿಮೆಮಾಡಿ ಮಾರುಕಟ್ಟೆ ಶಕ್ತಿಗಳು, ಕಾರ್ಪೊರೇಟ್ ವಲಯದ ಹಿಡಿತ ಅಧಿಕಗೊಳಿಸುವುದಾಗಿದೆ. ಇದಕ್ಕೆ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ನರಸಿಂಹರಾವ್, ಮನಮೋಹನ ಸಿಂಗ್ ದ್ವಯರ ಕೊಡುಗೆ ಮಹತ್ವದ್ದಾಗಿರುವಾಗ ಆ ಪಕ್ಷದಿಂದ ಕೃಷಿ ಬಗೆಗಿನ ನಿಲುವು ಬೇರೆಯಾಗುವ ಸಾಧ್ಯತೆ ಇದೆಯೇ ಎನ್ನುವ ಪ್ರಶ್ನೆ ಕೂಡಾ ಏಳುತ್ತದೆ. ಚುನಾವಣಾ ದೃಷ್ಟಿಯಿಂದ ಬಹುಸಂಖ್ಯಾತವಾಗಿರುವ ರೈತಸಮುದಾಯವನ್ನು ತಲುಪಬೇಕಾಗಿರುವ ಅನಿವಾರ್ಯತೆ ಇರುವಾಗ ರೈತಾಪಿ ವರ್ಗದ ಹಿತ ಬಲಿಕೊಡದ ರೀತಿಯಲ್ಲಿ ನವಉದಾರೀಕರಣ ನೀತಿಗಳೊಡನೆ ಸ್ವಲ್ಪ ಹೊಂದಾಣಿಕೆಯ ದಾರಿ ಹುಡುಕುವ ಒತ್ತಡ, ಸವಾಲುಗಳು ಎಲ್ಲ ಪಕ್ಷಗಳ ಮೇಲಿರುತ್ತದೆ.

ಮಾರುಕಟ್ಟೆ, ಬೆಲೆ, ಖರೀದಿ, ಹಂಚಿಕೆಯಂತಹ ವಿಚಾರಗಳಲ್ಲಿ ಸರ್ಕಾರದ ಪಾತ್ರ ಮತ್ತು `ಹಸ್ತಕ್ಷೇಪ’(Intervention)ವನ್ನು ಪರಿಣಾಮಕಾರಿಯಾಗಿ ಅಧಿಕಗೊಳಿಸುತ್ತಾ ಇನ್ನೊಂದೆಡೆಯಿಂದ ರೈತಾಪಿ ವರ್ಗದ ಸಾಂಘಿಕ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳಿಂದ ಕೃಷಿ ಕ್ಷೇತ್ರದ ಮೇಲಿನ ಜಾಗತೀಕರಣ ಮತ್ತು ಉದಾರೀಕರಣದ ನೀತಿಗಳ ದುಷ್ಪರಿಣಾಮಗಳನ್ನು ತಡೆಗಟ್ಟುವ ಸಾಧ್ಯತೆ ನಿಚ್ಚಳವಾಗಿದೆ. ಜೊತೆಗೆ, ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ವಿಚಾರದಲ್ಲಿ ಬರಿದೇ ಸರ್ಕಾರದ ಮೇಲೆ ಅವಲಂಬನೆಯಾಗದೆ, ಬೃಹದಾಕಾರವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಮತ್ತು ಖಾಸಗಿ ವಲಯವನ್ನು ಸಮರ್ಥವಾಗಿ ಬಳಸಿಕೊಳ್ಳುವ ದಾರಿ ಕೂಡ ಹುಡುಕಬೇಕಾಗಿದೆ.

farmers 9
ಸಾಂದರ್ಭಿಕ ಚಿತ್ರ

II. ಜಾತಿ ಮತ್ತಿತರ `ಪ್ರತ್ಯೇಕೀಕರಣ’ಗಳ ಸವಾಲುಗಳು:

ರಾಜ್ಯದಲ್ಲಿ ಶೇಕಡಾ 70ರಷ್ಟು ರೈತರು ಲಿಂಗಾಯಿತ, ಒಕ್ಕಲಿಗ ಮತ್ತು ಬ್ರಾಹ್ಮಣ ಈ ಮೂರು ಮೇಲ್ ಮಧ್ಯಮ ಪ್ರಭಾವಿ ಜಾತಿಗಳಿಗೆ ಸೇರಿರುತ್ತಾರೆ. ಭಾಜಪದ ಹಿಂದುತ್ವದ ಮೋಹಪಾಶಕ್ಕೆ ಒಳಗಾಗಿರುವ ಇವರನ್ನು ಜಾತಿ ಧರ್ಮದ ಆಧಾರದಲ್ಲಿ ತನ್ನ ತೆಕ್ಕೆಗೆ ಒಳಪಡಿಸಿಕೊಳ್ಳುವುದು ಭಾಜಪಕ್ಕೆ ಸುಲಭವಾದರೂ ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೆ ದೊಡ್ಡ ಸವಾಲು. 73ರ ಸುಧಾರಣ ಕಾಯಿದೆ ಮೂಲಕ ಈ ಮೇಲ್‌ಜಾತಿಗಳ ಬಡ ಗೇಣಿದಾರರನ್ನು ಸಂಘಟಿಸಿ ತನ್ನ ತೆಕ್ಕೆಗೆ ಒಳಪಡಿಸಿಕೊಂಡಿರುವ ದೇವರಾಜ ಅರಸರ `ಪ್ರತ್ಯೇಕೀಕರಣ’(Differentiation)ದ ಯಶಸ್ವಿ ರಾಜಕೀಯ ಪ್ರಯೋಗವನ್ನು ಮತ್ತೆ ಜ್ಞಾಪಿಸಿಕೊಳ್ಳಬೇಕಾಗಿದೆ. ಈ ಮೇಲ್ ಮಧ್ಯಮ ಜಾತಿಯ ಜೊತೆಗೆ ಶೇ.32ರಷ್ಟು `ಅಹಿಂದ’ (ದಲಿತರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು) ಗುಂಪಿನ ರೈತರಿದ್ದು ಇವರಲ್ಲಿ ಬಹುಪಾಲು ಕೃಷಿಯನ್ನೇ ಮಾಡದೆ ಭೂಮಿಯನ್ನು ಬೀಳುಬಿಟ್ಟು ನಗರಕ್ಕೆ ವಲಸೆ ಬಂದಿರುವರು. ಬಲತ್ಕಾರ ಭೂಸ್ವಾಧೀನ, ಭೂಕಬಳಿಕೆಗಳಿಗೆ ನೇರ ಬಲಿಪಶು ಇದೇ ಗುಂಪು ಎಂದು ಒತ್ತಿ ಹೇಳಬೇಕಾಗಿಲ್ಲ.

ರಾಜ್ಯದ ರೈತರಲ್ಲಿ ಶೇಕಡಾ 76ರಷ್ಟು ಸಣ್ಣ, ಅತಿ ಸಣ್ಣ ಹಿಡುವಳಿಗಳ ಬಡ ರೈತರಾಗಿದ್ದು ಕೃಷಿಯನ್ನೇ ನಂಬಿದಲ್ಲಿ ಇವರು `ಬಡತನದ ರೇಖೆ’ಯ ಕೆಳಗೆ ಇಳಿಯುವರು. ಸಾಲದ್ದಕ್ಕೆ, ರಾಜ್ಯದ ಬಹುತೇಕ (ಶೇ 70) ಬೇಸಾಯ ಭೂಮಿ ಸೂಕ್ತ ನೀರಾವರಿ ಸೌಲಭ್ಯವಿಲ್ಲದೆ ಮಳೆಯನ್ನೇ ನಂಬಿದ್ದು, ಮುಂಗಾರಿನೊಡನೆ ಜೂಜಾಟವಾಡುವ ದೌರ್ಭಾಗ್ಯ ಕೂಡ ಈ ಎಲ್ಲ ಬಡ ರೈತರದ್ದು. ಎಲ್ಲಕ್ಕಿಂತ ಮುಖ್ಯವಾಗಿ ಮಳೆ ಆಶ್ರಯದ ಈ ಬಡ ರೈತರೇ ಆಹಾರ ಭದ್ರತೆಗೆ ಅಪಾರ ಕಾಣಿಕೆ ನೀಡುತ್ತಿದ್ದರೂ ಹವಾಮಾನ ಬದಲಾವಣೆಯ ದುಷ್ಪರಿಣಾಮ ಇವರ ಮೇಲೆ ಅಧಿಕವಾಗಿದೆ ಎನ್ನುವ ಆತಂಕದ ವಿಚಾರ `ಆಹಾರ ಮತ್ತು ಕೃಷಿ ಸಂಘಟನೆ’ಯ (FAO) ಇತ್ತೀಚಿಗಿನ ವರದಿಯಿಂದ ತಿಳಿದು ಬಂದಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳ ಆದರ್ಶಗಳಡಿಯಲ್ಲಿ ರೈತಾಪಿ ವರ್ಗವನ್ನು ಸ್ವಲ್ಪ `ಪ್ರತ್ಯೇಕೀಕರಣ’ ನೆಲೆಯಿಂದ ನೋಡಿದ್ದೆ ಆದಲ್ಲಿ ಆದ್ಯತೆ ಯಾವ ಕಡೆಗಿರಬೇಕೆಂದು ಒತ್ತಿ ಹೇಳಬೇಕಾಗಿಲ್ಲ.

ಹಾಗೆಯೇ, ರಾಜ್ಯದಲ್ಲಿ ಬೇಸಾಯ ಕೈಗೊಂಡಿರುವ ಶೇ. 30ರಷ್ಟು ರೈತರು ಯುವಕರಾಗಿದ್ದು ಕೃಷಿ ಬಿಕ್ಕಟ್ಟಿನ ಜೊತೆಗೆ ವೈವಾಹಿಕ ಬದುಕಿಗೆ ಸೂಕ್ತ ವಧು ಸಿಕ್ಕದಂಥ ವಿಚಿತ್ರ ಸಾಮಾಜಿಕ ಸಮಸ್ಯೆಗೆ ಸಿಕ್ಕಿದ್ದು ಕೃಷಿಯಲ್ಲಿ ಇವರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಇನ್ನು ಪುರುಷರಿಗೆ ಸರಿಸಮಾನ ರೈತ ಮಹಿಳೆಯರು ಕೃಷಿಯಲ್ಲಿ ತೊಡಗಿದ್ದು ಒಡೆತನದಿಂದ ಹಿಡಿದು ನಿರ್ವಹಣೆ, ಸಾಲ ಸೌಲಭ್ಯ, ತೀರ್ಮಾನ ಕೈಗೊಳ್ಳುವ ವಿಚಾರಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವರು. ಚಿಕ್ಕ ಮತ್ತು ಬಡ ರೈತರು, ಮಳೆ ಆಶ್ರಯದ ರೈತರು, ಆಹಾರ ಬೆಳೆಯುತ್ತಿರುವ ರೈತರು, ರೈತ ಮಹಿಳೆಯರು ಮತ್ತು ಯುವ ರೈತರ ಮೇಲೆ ವಿಶೇಷ ಆದ್ಯತೆ ನೀಡಿ ರಾಜ್ಯದ ರೈತಸಮುದಾಯವನ್ನು ತಲುಪುವ ಅತ್ಯಂತ ಸೂಕ್ತ ದಾರಿ ಎಲ್ಲ ರಾಜಕೀಯ ಪಕ್ಷಗಳಿಗೂ ಮುಕ್ತವಾಗಿದೆ.

(ಮುಂದುವರಿಯುತ್ತದೆ..)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 11 17 at 3.55.08 PM
ಡಾ ಪ್ರಕಾಶ್‌ ಕಮ್ಮರಡಿ
+ posts

ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ (ಕೆಎಪಿಸಿ) ಅಧ್ಯಕ್ಷರೂ ಆಗಿದ್ದರು. ಅವರು ಈಗ ಕೃಷಿ ಅರ್ಥಶಾಸ್ತ್ರ, ಸುಸ್ಥಿರ ಮತ್ತು ಸಾವಯವ ಕೃಷಿ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಿಗೆ ಖಾಸಗಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜವಾದಿ ಚಿಂತನೆ ಹಾಗೂ ಚಳವಳಿಯಲ್ಲಿ ದಶಕಗಳಿಂದ ಸಕ್ರಿಯರು.

ಪೋಸ್ಟ್ ಹಂಚಿಕೊಳ್ಳಿ:

ಡಾ ಪ್ರಕಾಶ್‌ ಕಮ್ಮರಡಿ
ಡಾ ಪ್ರಕಾಶ್‌ ಕಮ್ಮರಡಿ
ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ (ಕೆಎಪಿಸಿ) ಅಧ್ಯಕ್ಷರೂ ಆಗಿದ್ದರು. ಅವರು ಈಗ ಕೃಷಿ ಅರ್ಥಶಾಸ್ತ್ರ, ಸುಸ್ಥಿರ ಮತ್ತು ಸಾವಯವ ಕೃಷಿ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಿಗೆ ಖಾಸಗಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜವಾದಿ ಚಿಂತನೆ ಹಾಗೂ ಚಳವಳಿಯಲ್ಲಿ ದಶಕಗಳಿಂದ ಸಕ್ರಿಯರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...