‘ನಾವಲೇಕರ್ ರಾಮಾಯಣ’ ಹೇಳಿದ್ದು ಆರ್‌ಎಸ್‌ಎಸ್ ಕುತಂತ್ರಗಳ ಬಗ್ಗೆ ಅಲ್ಲವೇ?

Date:

ಆರ್‌ಎಸ್‌ಎಸ್‌ಗೆ ನೂರು ವರ್ಷವಾಗಿದೆ. ಇದೇ ಸಂದರ್ಭದಲ್ಲಿ ಆ ಸಂಘಟನೆಯ ವಿರುದ್ಧ ಭಾರೀ ಪ್ರತಿರೋಧವೂ ಎದ್ದಿದೆ. ಆರ್‌ಎಸ್‌ಎಸ್ ಬಯಸುವ ‘ಬ್ರಾಹ್ಮಣೀಯ ವ್ಯವಸ್ಥೆ’ ಮತ್ತು ಸಂವಿಧಾನ ಹೇಳುವ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ವ್ಯವಸ್ಥೆ ನಡುವೆ ಸಂಘರ್ಷ ನಡೆಯುತ್ತಲೇ ಇದೆ.

ಆರ್‌ಎಸ್‌ಎಸ್ ಹೇಗೆ ಅಧಿಕಾರ ಹಿಡಿಯಿತು, ಅದರ ತಂತ್ರಗಾರಿಕೆ ಏನು ಎಂಬುದನ್ನು ಅರಿತುಕೊಳ್ಳದೇ ಹೋದರೆ, ಅದು ಪ್ರತಿಪಾದಿಸುವ ಆರ್ಯನ್ ಜನಾಂಗೀಯವಾದವು ಅರ್ಥವಾಗುವುದಿಲ್ಲ. ಆರ್‌ಎಸ್‌ಎಸ್‌ನ ಕಾರ್ಯತಂತ್ರವನ್ನು ಅರಸುತ್ತಾ ಹೋದಾಗಲೆಲ್ಲ ಈ ನೆಲದಲ್ಲಿ ಬೇರೂರಿದ ಆರ್ಯ ಸಂಸ್ಕೃತಿಯ ಕಬಂಧಬಾಹುಗಳು ಉಸಿರುಗಟ್ಟಿಸುತ್ತವೆ. ತಮ್ಮ ಅಸ್ಮಿತೆಯನ್ನು ಅರಿಯದ ಬಡ ಶೂದ್ರ, ಅಸ್ಪೃಶ್ಯ ಸಮುದಾಯಗಳು- ಮುಸ್ಲಿಮರ ವಿರುದ್ಧ ಹಲ್ಲುಮಸೆಯುತ್ತಾ ಬಲಿಪಶುಗಳಾಗುತ್ತಿರುವುದು ಹೇಗೆ ಎಂದು ಗೊತ್ತಾದಾಗ, ಸಂಕಟವಾಗುತ್ತದೆ.

ಭಾರತದ ಹಿಂದುತ್ವ ರಾಜಕಾರಣದ ಕುರಿತು ಆಳವಾಗಿ ಅಧ್ಯಯನ ಮಾಡಿರುವ, ಫ್ರೆಂಚ್ ಮೂಲದ ರಾಜಕೀಯ ವಿಜ್ಞಾನಿ ಕ್ರಿಸ್ಟೋಫ್ ಜಾಫ್ರೆಲಾಟ್ ಅವರು ಇತ್ತೀಚೆಗೆ ‘ದಿ ವೈರ್’ ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಆಡಿರುವ ಮಾತುಗಳು ಆರ್‌ಎಸ್ಎಸ್‌ನ ‘ಕಾರ್ಯ ವಿಧಾನ’ವನ್ನು ಬಹಿರಂಗಪಡಿಸುತ್ತವೆ. ಆರ್‌ಎಸ್‌ಎಸ್‌ ಸಂಘಟನೆಯನ್ನು ಹೇಗೆ ಕಟ್ಟಲಾಗಿದೆ ಎಂಬುದನ್ನು ವಿವರಿಸುವ ಜಾಫ್ರೆಲಾಟ್, ”ಅದರ ಉದ್ದೇಶ ಅಧಿಕಾರ ಹಿಡಿಯುವುದಲ್ಲ, ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸುವುದು” ಎನ್ನುತ್ತಾರೆ. ಮುಂದುವರೆದು, ”ಹಿಟ್ಲರ್‌ನ ಗುರಿ ಅಧಿಕಾರ ಹಿಡಿಯುವುದಾಗಿತ್ತು. ಮುಸಲೋನಿ ರೋಮ್‌ನತ್ತ ನಡೆದ. ಆದರೆ ಆರ್‌ಎಸ್‌ಎಸ್‌ ದೆಹಲಿಯತ್ತ ಹೆಜ್ಜೆ ಹಾಕಲಿಲ್ಲ. ಅವರ ಗುರಿ, ಫ್ಯಾಸಿಸ್ಟ್‌ನ ಮುಂದುವರಿದ ಭಾಗವಾದ ಟೊಟಲಿಟೇರಿಯನಿಸಂ(Totalitarianism)” ಎನ್ನುತ್ತಾರೆ. ಅಂದರೆ ವಿರೋಧ ಪಕ್ಷಗಳನ್ನು ಸಂಪೂರ್ಣ ದಮನ ಮಾಡಿ, ರಾಜಕೀಯ, ಆರ್ಥಿಕತೆ, ಶಿಕ್ಷಣ ವ್ಯವಸ್ಥೆ, ಕಲೆ, ವಿಜ್ಞಾನ, ನಾಗರಿಕರ ಖಾಸಗಿ ಜೀವನ- ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳವುದು ಆರ್‌ಎಸ್‌ಎಸ್‌ ಗುರಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)

ಆರ್‌ಎಸ್‌ಎಸ್‌ನ ಈ ಸಾಂಸ್ಕೃತಿಕದ ರಾಜಕೀಯದ ತಂತ್ರಗಾರಿಕೆಯನ್ನು ‘ರಾಮಾಯಣ’ದ ಮೂಲದಲ್ಲೇ ಹುಡುಕಬಹುದು ಎನ್ನುವಷ್ಟು ವಿಚಾರಪ್ರಚೋದನೆಯನ್ನು ‘ಎ ನ್ಯೂ ಅಪ್ರೋಚ್ ಟು ರಾಮಾಯಣ’ ಕೃತಿ ಒದಗಿಸುತ್ತದೆ. ಸಂಸ್ಕೃತ ವಿದ್ವಾಂಸ ಎನ್.ಆರ್.ನಾವಲೇಕರ್ 1947ರಲ್ಲಿ ಬರೆದ ಈ ಕೃತಿಯನ್ನು ಡಾ. ಟಿ.ಎನ್ ವಾಸುದೇವಮೂರ್ತಿಯವರು, ‘ರಾಮಾಯಣ ಒಂದು ಹೊಸ ಓದು’ ಎಂಬ ಶೀರ್ಷಿಕೆಯಲ್ಲಿ ಕೆಲವು ವರ್ಷಗಳ ಹಿಂದೆ ಕನ್ನಡಕ್ಕೆ ತಂದಿದ್ದಾರೆ. ಈ ಕೃತಿಯನ್ನು ತಿರುವು ಹಾಕುತ್ತಾ ಹೋದಂತೆ, ‘ಅರೇ, ಈ ದೇಶದ ಮೂಲನಿವಾಸಿಗಳ ಮೇಲೆ, ಹೊರಗಿನಿಂದ ಬಂದವರು ಮಾಡುತ್ತಿರುವ ತಂತ್ರಗಾರಿಕೆ ಇದೇ ಅಲ್ಲವೇ?’ ಅನಿಸುತ್ತದೆ.

WhatsApp Image 2025 10 31 at 16.54.46
‘ಎ ನ್ಯೂ ಅಪ್ರೋಚ್ ಟು ರಾಮಾಯಣ’ ಕೃತಿಯ ಕನ್ನಡಾನುವಾದ- ‘ರಾಮಾಯಣ: ಒಂದು ಹೊಸ ಓದು’

‘ರಾಮನನ್ನು ಪೂಜಿಸುವ ಪ್ರತಿಯೊಬ್ಬರೂ ಓದಬೇಕಾದ ಕೃತಿ’ ಎಂಬ ಒಕ್ಕಣೆ ಬೇರೆ ಮುಖಪುಟದಲ್ಲಿ ಮುದ್ರಿತವಾಗಿದೆ. ನಾವಲೇಕರ್ ವಿಶ್ಲೇಷಣೆಗಳನ್ನು ಓದುತ್ತಾ ಹೋದಂತೆ, ಆರ್‌ಎಸ್‌ಎಸ್‌ ಹೇಗೆ ಕೆಲಸ ಮಾಡಿದೆ ಎಂಬುದು ರಾಮಾಯಣದ ಹಿನ್ನೆಲೆಯಲ್ಲಿ ಗಮನಕ್ಕೆ ಬರುತ್ತದೆ. ಮುನ್ನೂರು ರಾಮಾಯಣಗಳು ನಮ್ಮಲ್ಲಿವೆ ಎನ್ನುವ ಬಹುತ್ವ ಪರಿಕಲ್ಪನೆಯನ್ನು ಬದಿಗಿರಿಸಿ, ಸಂಘಪರಿವಾರದ ಏಕ ರಾಮಾಯಣಕ್ಕೆ ಪೂರಕವಾಗಿ ‘ನಾವಲೇಕರ್’ ಹೇಳುವ ವಿಶ್ಲೇಷಣೆಯು ರಾಮನ ರಾಜಕೀಯ ತಂತ್ರಗಾರಿಕೆಯನ್ನೂ ಹೇಳುತ್ತದೆ; ರಾಮನ ತಂತ್ರಗಾರಿಕೆಗೂ ಆರ್‌ಎಸ್‌ಎಸ್‌ನ ಇಂದಿನ ಕುತಂತ್ರಗಳಿಗೂ ಸಾಮ್ಯತೆ ಇರುವುದೂ ಗೊತ್ತಾಗುತ್ತದೆ.

ಹಾಗಾದರೆ, ನಾವಲೇಕರ್ ರಾಮಾಯಣ ಏನನ್ನು ಹೇಳುತ್ತಿದೆ?

1. ಈವರೆಗೆ ರಾಮಾಯಣವನ್ನು ಭಕ್ತಿಯ ತುತ್ತ ತುದಿಗೆ ಕೊಂಡೊಯ್ಯಲಾಗಿದ್ದು, ಮೂಲತಃ ಅದೊಂದು ರಾಮನ ರಾಜತಾಂತ್ರಿಕ ನಡೆಯ ಕಥನ. ಭೀತಿಯನ್ನು ಎದುರಿಸುತ್ತಿದ್ದ ಆರ್ಯ ಕುಲವನ್ನು ರಕ್ಷಿಸಲೆಂದೇ ರಾಮ ಅಲೆದಾಡಿದ. ರಾಮಾಯಣ ಎಂದರೆ ‘ರಾಮನ ಅಲೆದಾಟ’. ಆರ್ಯರು ಭಾರತಕ್ಕೆ ಬಂದ ಮೇಲೆ, ಇಲ್ಲಿ ಮೊದಲೇ ವಾಸವಿದ್ದವರನ್ನು ಹಿಮ್ಮೆಟ್ಟಿಸಿ ದಕ್ಷಿಣಕ್ಕೆ ತಳ್ಳಿದರು.

2. ಆರ್ಯರಲ್ಲದ ಜನಾಂಗವನ್ನು ಸಾತ್ಪುರ ಪರ್ವತ ಪ್ರದೇಶದಿಂದಲೂ ಆಚೆಗೆ ದಕ್ಷಿಣ ದಂಡಕಾರಣ್ಯಕ್ಕೆ ತಳ್ಳಲಾಯಿತು. ರಾಕ್ಷಸ ಶಿಲ್ಪಿಯಾದ ಮಯಾಸುರನು ರಾಕ್ಷಸ ಸಾಮ್ರಾಜ್ಯವನ್ನು ಮರುಸ್ಥಾಪನೆ ಮಾಡುವ ಉದ್ದೇಶದಿಂದ ಸಮುದ್ರದಲ್ಲಿ ಒಂದು ಅಜ್ಞಾತ ಜಾಗಕ್ಕೆ ಹೊರಟು ಹೋದನೆಂದು ಮತ್ಸ್ಯಪುರಾಣ ಉಲ್ಲೇಖಿಸುತ್ತದೆ. ದೇವತೆಗಳು (ಆರ್ಯರು) ದಾಳಿ ಮುಂದುವರೆಸಿ ರಾಕ್ಷಸರನ್ನು ದಕ್ಷಿಣ ಸಮುದ್ರ ತೀರದವರೆಗೂ ಅಟ್ಟಿಸಿಕೊಂಡು ಹೋಗಬಹುದಿತ್ತು. ಆದರೆ ಅವರು ವಿಂದ್ಯಪರ್ವತವನ್ನು ದಾಟಿ ದಕ್ಷಿಣದ ಕಡೆಗೆ ಹೋಗಲಿಲ್ಲ. ತಾರಕಾಸುರನೊಂದಿಗೆ ಯುದ್ಧಮಾಡಿ ಬಳಲಿದ್ದರು… ಸಾಕು, ಇನ್ನಾದರೂ ನೆಮ್ಮದಿಯಿಂದ ಬದುಕೋಣ ಎಂದು ನಿರ್ಧರಿಸಿದರು. ಮುಂದೆ ವೈಭವೋಪೇತ ಜೀವನ, ವಾಗಾಡಂಬರದಿಂದ ಕಾಲಕ್ರಮೇಣ ದುರ್ಬಲರಾದರು. ತಮ್ಮ ಶಕ್ತಿ, ಸಾಮರ್ಥ್ಯ, ಸಂಕಲ್ಪಗಳನ್ನು ಕಳೆದುಕೊಂಡರು.

3. ರಾಕ್ಷಸರು ಪ್ರತಿಕಾರಕ್ಕಾಗಿ ಕಾಯುತ್ತಿದ್ದರು. ಹೀಗಿರುವಾಗ ರಾವಣಾಸುರ ಬೆಳೆದ. ಆತ ಯಾವುದೇ ದಿಕ್ಕಿಗೆ ತಿರುಗಿದರೂ ಅವನ ಸಂಪೂರ್ಣ ಶಕ್ತಿ ಆ ದಿಕ್ಕಿಗೆ ವಿನಿಯೋಗವಾಗುತ್ತಿತ್ತು. ಹೀಗಾಗಿ ರೂಪಕದ ಭಾಷೆಯಲ್ಲಿ ದಶಮುಖ ಎನಿಸಿಕೊಂಡ. ಆಗಿನ ಅಯೋಧ್ಯೆಯ ರಾಜ ಅನರಣ್ಯ ಮಾತ್ರ ರಾವಣನನ್ನು ದಿಟ್ಟತನದಿಂದ ಎದುರಿಸಿದ. ಒಬ್ಬನೇ ಹೋರಾಡಿದ. ಆದರೆ ರಾವಣನನ್ನು ಗೆಲ್ಲಲಾಗಲಿಲ್ಲ.

4. ಪ್ರತಿಕಾರಕ್ಕಾಗಿ ರಾಕ್ಷಸರು, ದೇವತೆಗಳು (ಆರ್ಯರು) ಹಮ್ಮಿಕೊಳ್ಳುತ್ತಿದ್ದ ಕಾರ್ಯಗಳನ್ನೆಲ್ಲ ಕೆಡಿಸುತ್ತಿದ್ದರು. ಬಲಿಷ್ಠನಾದ ರಾವಣನನ್ನು ಸೋಲಿಸುವುದು ಕಷ್ಟವಾಯಿತು. ಸುಖದಲ್ಲಿ ತೇಲುತ್ತಿದ್ದ ಆರ್ಯರು ಆತಂಕಕ್ಕೊಳಗಾದರು. ಅನರಣ್ಯನ ಸೋಲಿನ ಇತಿಹಾಸವನ್ನೂ ರಾಮ ಅರಿತಿದ್ದ. ರಾವಣನನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದು ತಿಳಿದ. ಅದಕ್ಕೆ ದೀರ್ಘಕಾಲದ ರಾಜತಾಂತ್ರಿಕತೆಯನ್ನು ರೂಪಿಸಿದ. ಅದನ್ನು ಯಾರಲ್ಲೂ ಹೇಳಿಕೊಳ್ಳಲಿಲ್ಲ. ಆತನ ಆಂತರ್ಯದಲ್ಲಿ ಆರ್ಯರನ್ನು ರಕ್ಷಿಸುವುದು ಮಾತ್ರ ಮುಖ್ಯವಾಗಿತ್ತು. ಅದಕ್ಕಾಗಿ ಒದಗಿಬಂದ ಅವಕಾಶಗಳನ್ನು ಅವನು ತ್ಯಜಿಸಲಿಲ್ಲ. ಆತ ವನವಾಸಕ್ಕೆ ಹೊರಟಿದ್ದು, ಪಿತೃವಾಕ್ಯ ಪರಿಪಾಲನೆಗಿಂತ ಮುಖ್ಯವಾಗಿ ದಕ್ಷಿಣದ ರಾಜಕಾರಣಗಳನ್ನು ಅರಿಯುವ ಉದ್ದೇಶವಿತ್ತು. ನಾರುಮುಡಿ ಉಟ್ಟಿದ್ದರೂ ಆತ ಬಿಲ್ಲು-ಬಾಣ ತೊಟ್ಟಿರುತ್ತಿದ್ದ. ಅಂದರೆ ಆತನ ಮುಖ್ಯ ಉದ್ದೇಶ ರಾಕ್ಷಸ ಕುಲವನ್ನು ಗೆಲ್ಲುವುದಾಗಿತ್ತು.

5. ರಾವಣನನ್ನು ಮೊದಲು ಕುಟಿಲೋಪಾಯದಿಂದ ಕಟ್ಟಿಹಾಕಿ ಬಳಿಕ ಅವನನ್ನು ಕೊಲ್ಲುವುದು ಸುಲಭವೆಂದು ಯೋಚಿಸಿದ (ಪು.77). ಆದರೆ ಕುಟಿಲೋಪಾಯದಿಂದ ಕಟ್ಟಿಹಾಕುವುದು ಹೇಗೆ? ಒಮ್ಮೆ ಸಿಂಹಾಸನವನ್ನೇರಿ ಕೋಸಲಾಧಿಪತಿ ಎನಿಸಿಕೊಂಡುಬಿಟ್ಟರೆ ಯುದ್ಧವಲ್ಲದೆ ಬೇರೆ ಉದ್ದೇಶಕ್ಕೆ ಲಂಕೆಯೊಳಗೆ ಪ್ರವೇಶಿಸುವುದು ಅಸಾಧ್ಯದ ಮಾತಾಗುತ್ತದೆ. ಹಾಗೆ ಪ್ರವೇಶಿದರೆ ರಾವಣನ ವಿರುದ್ಧ ಹೋರಾಡಿ ಸೋಲಬೇಕಾಗುತ್ತದೆ…. ಹಾಗೆ ಮಾಡದೆ ಸಿಂಹಾಸನದಿಂದ ಪರಿತ್ಯಕ್ತನಾದ, ರಾಜ್ಯದಿಂದ ಉಚ್ಚಾಟಿತನಾದ ಒಬ್ಬ ನತದೃಷ್ಟ ರಾಜಕುಮಾರ ಎನಿಸಿಕೊಂಡರೆ ಯಾರ ಪ್ರಾಂತ್ಯವೂ ಅಲ್ಲದ ದಂಡಕಾರಣ್ಯದೊಳಗೆ ಪ್ರವೇಶಿಸುವುದು ಸುಲಭವಾಗುತ್ತದೆ. ಹೀಗೆ ಸರಹದ್ದು ತಲುಪಿ, ರಾವಣನ ಸುತ್ತ ನೇಣುಹಗ್ಗ ಹೆಣೆಯಬೇಕೆಂದು ಯೋಚಿಸಿದ, ರಾವಣ ಅದರೊಳಗೆ ಬಿದ್ದೇಬೀಳುವ ಹಾಗೆ ಕುಟಿಲೋಪಾಯ ಹೂಡಿದ.

ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 1)

6. ವೈದಿಕರು, ಅಪಾಯಕಾರಿಯೂ, ಅಸುರಕ್ಷಿತವೂ ಆದ ಕೋಸಲದ ದಕ್ಷಿಣ ಭಾಗದಲ್ಲಿ ಏಕೆ ಅಷ್ಟೊಂದು ಸಂಖ್ಯೆಯಲ್ಲಿ ಋಷ್ಯಾಶ್ರಮಗಳನ್ನು ಕಟ್ಟಿಕೊಂಡಿದ್ದರು ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತ. ಯಜ್ಞ, ದಾನ, ತಪಸ್ಸುಗಳೇ ಅವರ ಉದ್ದೇಶವಾಗಿದ್ದರೆ ಅದಕ್ಕಾಗಿ ಅವರು ದಕ್ಷಿಣಕ್ಕೆ ಬರುವ ಅಗತ್ಯವೇ ಇರಲಿಲ್ಲ. ಕೋಸಲದ ಉತ್ತರ ಭಾಗದಲ್ಲೇ ಬೇಕಾದಷ್ಟು ಅರಣ್ಯಗಳಿದ್ದವು, ನದಿಗಳಿದ್ದವು, ಪುಣ್ಯಕ್ಷೇತ್ರಗಳಿದ್ದವು…. ಅಲ್ಲದೆ, “ದ್ವಿಜನಾದವನು ಯಾವುದೇ ಕಾರಣಕ್ಕೂ ಆರ್ಯಾವರ್ತವನ್ನು ದಾಟಿ ಹೋಗಬಾರದು” ಎಂದು ಮನು ಆದೇಶಿಸಿದ್ದ. ಮನುವಿನ ಆಜ್ಞೆಯನ್ನೇ ಆರ್ಯರು ಉಲ್ಲಂಘಿಸುವುದೇ? ಇಲ್ಲ, ಅದಕ್ಕೊಂದು ಕಾರಣವಿತ್ತು. ಅವರೆಲ್ಲ ರಾಮನ ಬರುವನ್ನು ನಿರೀಕ್ಷಿಸುತ್ತಿದ್ದರು. ರಾಮ ಬಂದ ತಕ್ಷಣ ಬಹಳ ಕಾಲ ಕಾಯುತ್ತಿದ್ದಂತೆ ಮಾತನಾಡುತ್ತಿದ್ದರು. ಅಯೋಧ್ಯೆಯ ವಿದ್ಯಮಾನಗಳನ್ನು ಕೆದಕಲು ಹೋಗುತ್ತಿರಲಿಲ್ಲ. ‘ಇನ್ನು ಕಾಲಹರಣ ಮಾಡುವುದೇಕೆ?’ ಎಂಬಂತೆ ವರ್ತಿಸುತ್ತಿದ್ದರು.

ಮೇಲ್ನೋಟಕ್ಕೆ ಈ ಋಷ್ಯಾಶ್ರಮಗಳು ತಪೋಭೂಮಿಯಂತೆ, ಯಜ್ಞಯಾಗಾದಿಗಳನ್ನು ನೆರವೇರಿಸುತ್ತಿದ್ದ ದಿವ್ಯಕ್ಷೇತ್ರದಂತೆ ಕಾಣಿಸುತ್ತಿದ್ದವು. ಆದರೆ ವಾಸ್ತವದಲ್ಲಿ ಇವೆಲ್ಲ ಆಯುಧ ಶಾಲೆಗಳಾಗಿದ್ದವು. ಗುಟ್ಟಾಗಿ ಆಯುಧಗಳನ್ನು ತಯಾರಿಸುವ ಕಾರ್ಖಾನೆಗಳಾಗಿದ್ದವು. ಆಯುಧಗಳನ್ನು ಸಂಗ್ರಹಿಸುವ ಗೋದಾಮುಗಳಾಗಿದ್ದವು. ಲಂಕೆಯಲ್ಲಿ ರಾಮ ಯುದ್ಧ ಮಾಡುವ ಸಂದರ್ಭದಲ್ಲಿ ಇಲ್ಲಿಂದ ಶಸ್ತ್ರಾಸ್ತ್ರಗಳು ಸರಬರಾಜಾಗುತ್ತಿದ್ದವು (ಪು.ಸಂ.99).

7. ಒಂದು ವೇಳೆ ರಾಮ ನೇರವಾಗಿ ಯುದ್ಧಕ್ಕೆ ಹೋಗಿದ್ದರೆ, ರಾವಣನನ್ನು ಮಣಿಸುವುದು ಕಷ್ಟವಾಗುತ್ತಿತ್ತು. ಅದಕ್ಕೂ ಮೊದಲು ರಾವಣ ರಾಜ್ಯದ ಎಲ್ಲ ಪಿತೂರಿಗಳು, ಸೈನ್ಯ ಬಲ ತಿಳಿಯಬೇಕಿತ್ತು. ಅದಕ್ಕಾಗಿ ಸೀತೆಯನ್ನು ರಾವಣ ಅಪಹರಿಸುವಂತೆ ಬಲೆ ಹೆಣೆಯಬೇಕಾಯಿತು. ನಿಜಕ್ಕೂ ಅಪಹರಣಕ್ಕೊಳಗಾಗಿದ್ದು ಸೀತೆಯಲ್ಲ, ಶಬರಿ. ಆಕೆಯನ್ನು ಮುದುಕಿ ಎನ್ನಲಾಗದು, ತರುಣಿಯಾಗಿದ್ದಳು. ಸೀತೆಯನ್ನು ಬಚ್ಚಿಟ್ಟು, ಇನ್ನು ಒಂದು ವರ್ಷ ಕಾಲ ಹೊರಗೆ ಬಾರದಂತೆ ಸೂಚಿಸಿ, ‘ಮಾಯಾ ಸೀತೆ’ಯನ್ನು ಸೃಷ್ಟಿಸಲಾಯಿತು. ತನ್ನ ತಂಗಿಗಾದ ಅವಮಾನಕ್ಕೆ ಪ್ರತಿಕಾರವಾಗಿ ರಾವಣ ಅಪರಿಸಿದ್ದು- ನಿಜವಾದ ಸೀತೆಯನ್ನಲ್ಲ, ಮಾಯಾಸೀತೆಯನ್ನು… (ಪು.ಸಂ. 114-131ರವರೆಗಿನ ವಿಶ್ಲೇಷಣೆ ನೋಡಬಹುದು).

8. ರಾಮ ಯುದ್ಧ ಮಾಡಲು ಕಾರಣ ಸಿಕ್ಕಂತಾಯಿತು. ಇತ್ತ ಲಂಕೆಯಲ್ಲಿ ‘ಬೇರೊಬ್ಬನ ಹೆಂಡತಿಯನ್ನು ಅಪರಿಸಿದವನಿಗೆ ಶಿಕ್ಷೆ ಆಗಲೇಬೇಕು’ ಎಂದು ರಾವಣನ ಪ್ರಜೆಗಳೇ ಮಾತಾಡುವಂತಾಯಿತು.

9. ರಾಜ್ಯಾಧಿಕಾರ ಪಡೆಯಬೇಕಾದರೆ ಸೈನ್ಯ ಬಲ ಬೇಕು. ರಾವಣನಿಗೆ ಸವಾಲಾಗಿದ್ದ ಕಿಷ್ಕಿಂದೆಯ ಅರಸ ವಾಲಿಯನ್ನು ನೋಡಿದ. ವಾಲಿಯನ್ನೇ ನೇರವಾಗಿ ಸಹಾಯ ಕೋರಬಹುದಿತ್ತು. ಆದರೆ ಸೌರ್ವಭೌಮನಾದವನು, ಅಧಿಕಾರದಲ್ಲಿದ್ದವನು ರಾಜತಾಂತ್ರಿಕವಾಗಿ ಮುಂದೊಂದು ದಿನ ಸವಾಲಾಗುತ್ತಾನೆ ಎಂದು ರಾಮ ಭಾವಿಸಿದ. ಅಧಿಕಾರದಾಸೆಗೆ ಒಳಗಾಗಿದ್ದ ವಾಲಿಯ ಸಹೋದರ ಸುಗ್ರೀವನನ್ನು ಬಳಸಿಕೊಂಡು, ಪಿತೂರಿಯಿಂದ ವಾಲಿಯನ್ನು ಕೊಲ್ಲಲಾಯಿತು. ರಾಮನಿಗೆ ವಾಲಿಯ ಧೈರ್ಯ ಮತ್ತು ಬಲದ ಬಗ್ಗೆ ಗೌರವಗಳಿದ್ದವು ಎಂಬುದು ಬೇರೆ ಮಾತು. ಸುಗ್ರೀವನ ಸಹಾಯ ಸಿಕ್ಕಿತು. ಸೀತೆಯ ಅಪಹರಣವಾಗಿದೆ. ಲಂಕೆಗೆ ಹೋಗಲು ಅವಕಾಶ ದೊರೆತಿದೆ.

10. ರಾಮ ತನ್ನ ಬಂಟ ಹನುಮಂತನನ್ನು ಲಂಕೆಗೆ ಕಳುಹಿಸಿದ. ರಾವಣನ ತಮ್ಮ ವಿಭೀಷಣ ಅಧಿಕಾರದ ಆಸೆ ಹೊಂದಿದ್ದ. ಇಂಥವನೇ ರಾಮನಿಗೆ ಬೇಕಾಗಿತ್ತು. ವಿಭೀಷಣನೊಂದಿಗೆ ವ್ಯವಹಾರ ಕುದುರಿಸಲು ಹನುಮಂತ ಲಂಕೆಗೆ ಬಂದ. ಅಲ್ಲಿಂದ ಬಂದ ಹನುಮಂತ, ‘ಲಂಕೆಗೆ ಬೆಂಕಿ ಇಟ್ಟು ಬಂದೆ’ ಎನ್ನುತ್ತಾನೆ. ಅಂದರೆ, ‘ರಾಜತಾಂತ್ರಿಕವಾಗಿ ಗೆದ್ದು ಬಂದೆ ಎಂಬರ್ಥ. ಮುಂದೆ ಬಂದ ಕವಿಗಳು ಅದನ್ನು ಕಪಿಚೇಷ್ಟೆಯ ಚಾಪ್ಟರ್ ಮಾಡಿದ್ದಾರೆ ಎಂಬುದು ನಾವಲೇಕರ್ ವ್ಯಂಗ್ಯ.

ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)

***

ಉತ್ತರಕಾಂಡದ ಗೋಳಿನ ಕಥೆಗೆ ಹೋಗುವುದು ಬೇಡ. ರಾಮನ ರಾಜತಾಂತ್ರಿಕತೆ ಮತ್ತು ಕುತಂತ್ರಗಳು ಹೇಗಿದ್ದವು, ಆತನು ಹೇಗೆ ರಾವಣನನ್ನು ದುರ್ಬಲನನ್ನಾಗಿ ಮಾಡಿದ ಎಂಬ ವಿವರಗಳಿಗೆ ನಾವಲೇಕರ್ ತಮ್ಮದೇ ಆಧಾರಗಳನ್ನು ಉಲ್ಲೇಖಿಸಿದ್ದಾರೆ. (ಈ ಲೇಖನದ ಮಿತಿಯೊಳಗೆ ಎಲ್ಲವನ್ನೂ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಇಡೀ ಕೃತಿಯನ್ನೇ ಆಧಾರವಾಗಿ ನೋಡಬಹುದು.)

ನಮ್ಮಲ್ಲಿ ಹಲವು ರೀತಿಯ ರಾಮಾಯಣಗಳು ಇವೆಯಾದರೂ ನಾವಲೇಕರ್ ರಾಮಾಯಣ ಹೇಳುತ್ತಿರುವ ‘ರಾಜಕಾರಣ’, ‘ಆರ್ಯರ ತಂತ್ರಗಾರಿಕೆ’ಯನ್ನು ಗಮನಿಸಬೇಕಾಗುತ್ತದೆ. ಅಂದು ಮತ್ತು ಇಂದು ನಡೆಯುತ್ತಿರುವ ಸಾಂಸ್ಕೃತಿಕ ರಾಜಕಾರಣದ ಸುಳಿವುಗಳು ಇಲ್ಲಿವೆ.

modi 77
ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ವಾನರರು ರಾಮನಿಗೆ, ಮಕ್ಕಳು ಕೃಷ್ಣನಿಗೆ, ವನವಾಸಿಗಳು ಶಿವಾಜಿಗೆ ನೆರವಾದಂತೆ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳು ಸೇರಿದಂತೆ ಎಲ್ಲರ ಒತ್ತಾಸೆಯಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ” ಎಂದಿದ್ದರು. ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್, “ಈ ದಿನಕ್ಕಾಗಿ ಆರ್‌ಎಸ್‌ಎಸ್ 30 ವರ್ಷಗಳಿಂದ ಕೆಲಸ ಮಾಡುತ್ತಿತ್ತು” ಎಂದು ಹೇಳಿಕೆ ನೀಡಿದ್ದರು.

ಈ ಇಬ್ಬರ ಮಾತಿನಲ್ಲಿಯೂ ಆರ್ಯನ್‌  ಕಾರ್ಯ ವೈಖರಿ ಅಡಗಿದೆ. ರಾಮ ಹುಟ್ಟುಹಾಕಿದ ರಾಜತಾಂತ್ರಿಕತೆ ಅಡಗಿದೆ. ಈ ದಿನಕ್ಕಾಗಿ ಆರ್‌ಎಸ್‌ಎಸ್ ಕೇವಲ 30 ವರ್ಷ ಕೆಲಸ ಮಾಡಿಲ್ಲ. 1925ರಿಂದಲೂ ಶ್ರಮಿಸಿದೆ. ಆರ್‌ಎಸ್‌ಎಸ್ ಚಿಂತನೆಗಳನ್ನು ತೀವ್ರ ವಿರೋಧಿಸುವವರು, ರಾಜಕೀಯ ವಿಶ್ಲೇಷಕರು ಸಂಘಪರಿವಾರದ ಸಂಘಟಿತ, ವ್ಯವಸ್ಥಿತ ಕಾರ್ಯಸೂಚಿಗಳನ್ನು ಅಲ್ಲಗಳೆಯಲಾರರು. 1925ರಲ್ಲಿ ಹುಟ್ಟಿದ ಆರ್‌ಎಸ್‌ಎಸ್ ಪೂರ್ಣ ಯಶಸ್ಸು ಗಳಿಸಿದ್ದು- 2014ರಲ್ಲಿ. ಅಷ್ಟು ಕಾಲ ಅವಿರತವಾಗಿ ತನ್ನ ಐಡಿಯಾಲಜಿಯನ್ನು ವ್ಯವಸ್ಥಿತವಾಗಿ ಬಿತ್ತಿದೆ. ಅಂದು ನೆಟ್ಟ ಸಸಿ ಈಗ ಫಲ ನೀಡುತ್ತಿದೆ. ಹಲವು ಸಮುದಾಯಗಳ ಸಾಂಸ್ಕೃತಿಕ ಚಹರೆಗಳನ್ನೇ ಬಲಿ ಹಾಕಿ, ಮುನ್ನುಗ್ಗುತ್ತಿರುವಲ್ಲಿ ಇತರ ಸಮುದಾಯಗಳು ಬ್ರಾಹ್ಮಣೀಯ ಯಜಮಾನಿಕೆಯನ್ನು ಒಪ್ಪಿಕೊಂಡಂತೆಯೂ ಕಾಣುತ್ತದೆ.

ಆರ್‌ಎಸ್‌ಎಸ್‌ನ ಎಲ್ಲ ಅಧಿಕಾರ ಆರ್ಯಕುಲದವರ ಕೈಯಲ್ಲಿದೆ. ಅಧಿಕಾರ ಹಿಡಿಯುವುದಕ್ಕಾಗಿ ಸಂಘಪರಿವಾರ ಬಳಸಿಕೊಂಡಿದ್ದು ಅದೇ ಸುಗ್ರೀವನನ್ನು, ಅದೇ ವಿಭೀಷಣನನ್ನು. ಶೂದ್ರರನ್ನೇ ಬಳಸಿಕೊಂಡು, ಶೂದ್ರ ಅಸ್ಮಿತೆಯನ್ನೇ ಮುಗಿಸುವ ಹುನ್ನಾರವಿದೆಯಲ್ಲ- ಅದು ರಾಮನ ಕಾಲದಲ್ಲಿ ರೂಢಿಗೆ ಬಂದ ರಾಜಕಾರಣ.

ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)

ರೈತ ಚಳವಳಿ, ದಲಿತ ಚಳವಳಿಗಳನ್ನು ಒಡೆದವರು ವಿಭೀಷಣರಂತೆ, ಸುಗ್ರೀವರಂತೆ. ಅವರೆಂದೂ ರಾವಣರಾಗಲು ಸಾಧ್ಯವಿಲ್ಲ. ಶ್ರೇಣಿಕೃತ ವ್ಯವಸ್ಥೆ ಜೀವಂತವಾಗಿರಿಸಬೇಕಾದರೆ ರಾವಣನನ್ನು ಮುಗಿಸುವುದು ಅನಿವಾರ್ಯ. ವೈದಿಕ ಪರಂಪರೆಯನ್ನು ಶ್ರಮಣ ಪರಂಪರೆ ದಿಟ್ಟವಾಗಿ ತಿರಸ್ಕರಿಸುತ್ತಾ ಬಂದಿದೆ. ರಾವಣನಂತೆ ತಮಿಳುನಾಡಿನಲ್ಲಿ ಪೆರಿಯಾರ್, ಕೇರಳದಲ್ಲಿ ನಾರಾಯಣಗುರು, ಮಹಾರಾಷ್ಟ್ರದಲ್ಲಿ ಅಂಬೇಡ್ಕರ್, ಜ್ಯೋತಿಬಾ ಫುಲೆ ದಂಪತಿ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರರಂತೂ ಆರ್‌ಎಸ್‌ಎಸ್ ಪಾಲಿಗೆ ಆಧುನಿಕ ರಾವಣ. ಭೀಮನನ್ನು ಬೌದ್ಧಿಕವಾಗಿ ಎದುರಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ವಿಚಾರಗಳನ್ನು ತಿರುಚಲು ಮುಂದಾಗಿದ್ದಾರೆ.

ಸೈದ್ಧಾಂತಿಕ ವಿರೋಧಿ ಬಣಗಳೆಲ್ಲ ಒಡೆದು ಹೋದಷ್ಟೂ ಸಂಘಪರಿವಾರಕ್ಕೆ ಖುಷಿಯೋ ಖುಷಿ. ಹೀಗಾಗಿ ದಲಿತರನ್ನು ಒಡೆದು ಆಳಲು, ಬಸವ ಅನುಯಾಯಿಗಳನ್ನು ಇಬ್ಭಾಗಿಸಲು ಯತ್ನಿಸುತ್ತದೆ. ಒಟ್ಟಾರೆ ‘ಡಿವೈಡ್ ಅಂಡ್ ರೂಲ್’ ಆರ್‌ಎಸ್‌ಎಸ್‌ನ ತಂತ್ರಗಾರಿಕೆ.

ಆರ್ಯಕುಲವನ್ನು ರಾಮ ಅಂದಿಗೂ ರಕ್ಷಿಸಿದ ಇಂದಿಗೂ ರಕ್ಷಿಸಿದ. ಕಾಲಕಾಲಕ್ಕೆ ಉದಯಿಸಿದ ರಾವಣರನ್ನು ಶೂದ್ರ ಮನಸ್ಸುಗಳು ಅರಿಯಲೇ ಇಲ್ಲ. “ಈವರೆಗೆ ನನಗೆ ಸಾಧ್ಯವಾದಷ್ಟು ವಿಮೋಚನಾ ರಥವನ್ನು ಎಳೆದಿದ್ದೇನೆ, ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ, ಇಲ್ಲವಾದರೆ ಅಲ್ಲಿಗೇ ಬಿಟ್ಟುಬಿಡಿ, ಹಿಂದಕ್ಕೆ ಮಾತ್ರ ದೂಡಬೇಡಿ” ಎಂದು ಅಂಬೇಡ್ಕರರು ನೋವಿನಿಂದ ನುಡಿದದ್ದು ದಲಿತಾದಿ ಶೂದ್ರರ ಮಾನಸಿಕ ದಾಸ್ಯಕ್ಕೆ ಹಿಡಿದ ಕನ್ನಡಿಯಲ್ಲವೇ? ಗಮನಿಸಿ- ಭಜರಂಗದಳದಲ್ಲಿ ಇರುವ ಕಠೋರ ಹಿಂದೂವಾದಿಗಳೆಲ್ಲ ಶೂದ್ರ ಹುಡುಗರು!

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...