ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತಗಳೆರಡೂ ಪರಸ್ಪರ ವಿರುದ್ಧ ಧ್ರುವಗಳಂತೆಯೆ ಇದೆ. ಹೀಗಾಗಿಯೇ ದಕ್ಷಿಣ ಭಾರತದಲ್ಲಿ ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಬಂದಿದ್ದರೆ, ಉತ್ತರ ಭಾರತದ ಜನಸಂಖ್ಯಾ ಸ್ಫೋಟ ಅಂಕೆ ಮೀರಿದೆ. ಇದಕ್ಕೆ ಪ್ರಮುಖ ಕಾರಣ: ಉತ್ತರ ಭಾರತ ರಾಜ್ಯಗಳಲ್ಲಿನ ಕಳಪೆ ಸಾಕ್ಷರತಾ ಪ್ರಮಾಣ. ಉತ್ತರ ಭಾರತದ ಜನರು ಪ್ರಶ್ನಿಸುವ ಸ್ಥೈರ್ಯ ನೀಡುವ ಗುಣಮಟ್ಟದ ಹಾಗೂ ವೈಜ್ಞಾನಿಕ ಶಿಕ್ಷಣದಿಂದಲೇ ವಂಚಿತರಾಗಿರುವುದರಿಂದ, ಅದು ಅವರ ರಾಜಕೀಯ ಆಯ್ಕೆ ಮತ್ತು ನಿರ್ಧಾರಗಳ ಮೇಲೂ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ. ಆದರೆ, ಇದರ ನೇರ ಸಂತ್ರಸ್ತನಾಗುತ್ತಿರುವುದು ಮಾತ್ರ ದಕ್ಷಿಣ ಭಾರತ.
ಭಾರತದ ರಾಜಕೀಯ ಸ್ಥಿತ್ಯಂತರದಲ್ಲಿ ಬಹು ದೊಡ್ಡ ಪಾತ್ರ ವಹಿಸಿದ್ದು ನಿಸ್ಸಂಶಯವಾಗಿ 1990ರಲ್ಲಿ ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷ ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ನಡೆದ ರಾಮ ರಥ ಯಾತ್ರೆ. ಈ ರಥ ಯಾತ್ರೆಯಿಂದಾಗಿ ಒಟ್ಟಾರೆ ಭಾರತದ ರಾಜಕೀಯ ಪರಿಭಾಷೆ ಎರಡು ಮೂರು ದಶಕಗಳಷ್ಟು ಹಿಂದಕ್ಕೆ ಸರಿದರೆ, ನಿರ್ದಿಷ್ಟವಾಗಿ ಉತ್ತರ ಭಾರತದ ರಾಜಕೀಯ ಪರಿಭಾಷೆ ಒಂದು ಶತಮಾನದಷ್ಟೇ ಹಿಂದಕ್ಕೆ ಸರಿದು ನಿಂತಿತು. ಅದಕ್ಕೆ ಕಾರಣ: ಉತ್ತರ ಭಾರತದ ಮೇಲೆ ಆರ್ಯರ ಸಾಂಸ್ಕೃತಿಕ ಹಿಡಿತ ಇಂದಿಗೂ ಪ್ರಬಲವಾಗಿರುವುದು. ಹೀಗಾಗಿಯೇ, ಅಲ್ಲಿಯವರೆಗೆ ಸಮಾಜವಾದಿ ಸಿದ್ಧಾಂತದ ಪಕ್ಷಗಳು ಹಾಗೂ ಬಂಡವಾಳಶಾಹಿಗಳ ಪರವಾಗಿ ಮೃದು ಧೋರಣೆ ಹೊಂದಿದ್ದ ಕಾಂಗ್ರೆಸ್ ನಡುವಿನ ರಾಜಕೀಯ ಅಖಾಡವಾಗಿದ್ದ ಉತ್ತರ ಭಾರತ, ರಾಮ ರಥಯಾತ್ರೆಯ ನಂತರ, ಏಕಾಏಕಿ ಧಾರ್ಮಿಕ ಕೇಂದ್ರಿತ ರಾಜಕಾರಣ ಮತ್ತು ಜಾತ್ಯತೀತ ರಾಜಕಾರಣದ ನಡುವಿನ ಹಣಾಹಣಿ ಕಣವಾಗಿ ಮಾರ್ಪಟ್ಟಿತು.
ಅದೇ ಹೊತ್ತಿಗೆ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣಗಳೆಂಬ ಆರ್ಥಿಕ ಸುಧಾರಣೆಗಳು ಜಾರಿಗೊಂಡು, ಭಾರತದ ಆರ್ಥಿಕತೆಗೆ ಮುಂಚಲನೆ ದೊರೆಯುತ್ತಿದ್ದಂತೆಯೆ, ಧಾರ್ಮಿಕ ಭಾವೋನ್ಮಾದವೂ ಅತಿರೇಕಕ್ಕೆ ತಲುಪಿತು. ಇದೆಲ್ಲದರಿಂದ, ಉತ್ತರ ಭಾರತದ ರಾಜಕಾರಣ ನಿಂತ ನೀರಾಗುವುದರೊಂದಿಗೆ, ಆ ಭಾಗದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿತು.
ಜನಸಂಖ್ಯಾ ಸ್ಫೋಟ
2011ರ ಜನಗಣತಿಯ ಪ್ರಕಾರ, ಭಾರತದ ಜನಸಂಖ್ಯೆ ಸುಮಾರು 121 ಕೋಟಿ ಇತ್ತು. ಅದೀಗ 145 ಕೋಟಿಗೆ ಏರಿಕೆಯಾಗಿದೆ. ಈ ಪೈಕಿ ದಕ್ಷಿಣ ಭಾರತದ ರಾಜ್ಯಗಳ ಜನಸಂಖ್ಯೆ ಪ್ರಮಾಣ ಸುಮಾರು 26 ಕೋಟಿಯಷ್ಟಿದೆ. ಅಂದರೆ, ಉತ್ತರ ಭಾರತವೊಂದರ ಒಟ್ಟು ಜನಸಂಖ್ಯೆಯೇ ಸುಮಾರು 120 ಕೋಟಿಯಷ್ಟಿದೆ. 1952ರಲ್ಲೇ ಜನಸಂಖ್ಯೆ ಏರಿಕೆಯನ್ನು ನಿಯಂತ್ರಿಸಲು ಕುಟುಂಬ ಯೋಜನೆಯನ್ನು ಜಾರಿಗೆ ತಂದರೂ, ಉತ್ತರ ಭಾರತದಲ್ಲಿ ಆ ಯೋಜನೆಯಿಂದ ಯಾವುದೇ ಪರಿಣಾಮ ಉಂಟಾಗಿಲ್ಲ. ಬದಲಿಗೆ ದೇಶದ ಜನಸಂಖ್ಯಾ ಸ್ಫೋಟಕ್ಕೆ ಉತ್ತರ ಭಾರತ ಬಹುದೊಡ್ಡ ಕೊಡುಗೆಯನ್ನೇ ನೀಡಿದೆ. ಈ ಪರಿಯ ಜನಸಂಖ್ಯಾ ಸ್ಫೋಟವು ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿರುವುದು ಉದ್ಯೋಗ ಸೃಷ್ಟಿಯ ಮೇಲೆ. ಭಾರತದಲ್ಲಿನ ನಿರುದ್ಯೋಗ ಪ್ರಮಾಣ ಸರಾಸರಿ ಶೇ. 6.7ರಷ್ಟಿದ್ದರೆ, ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಹರ್ಯಾಣ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಸುಮಾರು ಮೂರು ಪಟ್ಟು ಹೆಚ್ಚಿದೆ.
ಇದನ್ನೂ ಓದಿರಿ: ದೇವರ ಬಗ್ಗೆ ಬಾಬಾ ಸಾಹೇಬರು ಬರೆದಿದ್ದೇನೆಂದು ಅಮಿತ್ ಶಾ ಓದಿದ್ದಾರಾ?
ಕೇಂದ್ರ ಸರಕಾರದ ದತ್ತಾಂಶದ ಪ್ರಕಾರ, ಈ ರಾಜ್ಯಗಳಲ್ಲಿನ ನಿರುದ್ಯೋಗ ಪ್ರಮಾಣ ಏರಿಕೆಗೆ ಒಂಬತ್ತು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ. ಈ ಪೈಕಿ ಪ್ರಧಾನ ಕಾರಣವಾಗಿ ಹೊರಹೊಮ್ಮಿರುವುದು ಅತಿಯಾದ ಜನಸಂಖ್ಯೆ. ಉಳಿದಂತೆ, ಕೃಷಿ ಕ್ಷೇತ್ರದಲ್ಲಿ ಉತ್ಪಾದನಾ ಪ್ರಮಾಣ ಕುಂಠಿತಗೊಂಡಿರುವುದು, ಕಾನೂನು ಸಂಕೀರ್ಣತೆ ಹಾಗೂ ರಾಜ್ಯಗಳ ಬೆಂಬಲದ ಕೊರತೆ, ಮೂಲಭೂತ ಸೌಕರ್ಯ ಹಾಗೂ ಉತ್ಪಾದನಾ ವಲಯದಲ್ಲಿ ಅಸಮರ್ಪಕ ಬೆಳವಣಿಗೆ, ಅನೌಪಚಾರಿಕ ವಲಯಗಳ ಪ್ರಾಬಲ್ಯ, ಶಿಕ್ಷಣ ಮತ್ತು ಉದ್ಯಮಗಳ ಅಗತ್ಯ ನಡುವೆ ಹೊಂದಾಣಿಕೆಯಾಗದಿರುವುದು ಹಾಗೂ ಮಹಿಳೆಯರ ಮೇಲೆ ವಿಧಿಸಲಾಗಿರುವ ಕಠಿಣ ಸಾಮಾಜಿಕ ನಿರ್ಬಂಧಗಳು ಎಂದು ಗುರುತಿಸಲಾಗಿದೆ.
ಸಾಕ್ಷರತಾ ಕೊರತೆ
ಭಾರತಕ್ಕೆ ಸ್ವಾತಂತ್ರ್ಯ ಬಂದ 1947ನೇ ಇಸವಿಯಲ್ಲಿ ಭಾರತದ ಒಟ್ಟಾರೆ ಸಾಕ್ಷರತಾ ಪ್ರಮಾಣ ಶೇ. 12ರಷ್ಟಿತ್ತು. ಅದರ ಪ್ರಮಾಣವೀಗ ಶೇ. 78ಕ್ಕೆ ಏರಿಕೆಯಾಗಿದೆ. ಆದರೆ, ಭಾರತದ ಸರಾಸರಿ ಸಾಕ್ಷರತೆ ಪ್ರಮಾಣಕ್ಕಿಂತ ಉತ್ತರ ಭಾರತದ ರಾಜ್ಯಗಳು ಹಿಂದೆ ಬಿದ್ದಿವೆ. ಉದಾಹರಣೆಗೆ ಉತ್ತರ ಪ್ರದೇಶದ ಸಾಕ್ಷರತಾ ಪ್ರಮಾಣ ಶೇ. 73ರಷ್ಟಿದ್ದರೆ, ಉತ್ತರ ಭಾರತದ ಉಳಿದ ಪ್ರಮುಖ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳ ಸಾಕ್ಷರತಾ ಪ್ರಮಾಣ ಕ್ರಮವಾಗಿ ಶೇ. 70.9, ಶೇ. 73.7 ಹಾಗೂ ಶೇ.69.7ರಷ್ಟಿದೆ. ಗಮನಾರ್ಹ ಸಂಗತಿಯೆಂದರೆ, ಉತ್ತರ ಭಾರತದ ಈ ರಾಜ್ಯಗಳಲ್ಲಿ ಸಾಮಾಜಿಕ ಕರ್ಮಠತೆ ಇನ್ನೂ ಗಂಭೀರವಾಗಿಯೇ ಮುಂದುವರಿದಿರುವುದರಿಂದ, ಮಹಿಳೆಯರ ಸಾಕ್ಷರತಾ ಪ್ರಮಾಣ ಸಾಕಷ್ಟು ಕಡಿಮೆ ಇದೆ. ಇದರಿಂದ ರಾಜಕೀಯ ಸಾಕ್ಷರತೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ.
ಕನಿಷ್ಠ ಪ್ರಮಾಣದ ತಲಾದಾಯ
2023-24ನೇ ಸಾಲಿನಲ್ಲಿ ಪ್ರತಿ ಭಾರತೀಯರ ಸರಾಸರಿ ತಲಾದಾಯ ವಾರ್ಷಿಕ 1.84 ಲಕ್ಷ ರೂ.ನಷ್ಟಿದೆ. ಆದರೆ, ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ತೆಲಂಗಾಣದ ತಲಾವಾರು ಆದಾಯ, ರಾಷ್ಟ್ರೀಯ ಸರಾಸರಿ ತಲಾವಾರು ಆದಾಯಕ್ಕಿಂತ ಕ್ರಮವಾಗಿ ಶೇ. 181, ಶೇ. 171, ಶೇ. 184, ಶೇ. 152.5 ಹಾಗೂ ಶೇ. 193.6ರಷ್ಟು ಹೆಚ್ಚಿದೆ.
ಇದೇ ವೇಳೆ ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣ, ಬಿಹಾರ, ಮಧ್ಯಪ್ರದೇಶದಂತಹ ರಾಜ್ಯಗಳ ತಲಾವಾರು ಆದಾಯ ಏರಿಕೆ ಕನಿಷ್ಠ ಪ್ರಮಾಣದಲ್ಲಿದೆ. 2023-24ನೇ ಸಾಲಿನಲ್ಲಿ ಉತ್ತರ ಪ್ರದೇಶದ ತಲಾವಾರು ಆದಾಯ ಶೇ. 77.4ರಷ್ಟು ಹೆಚ್ಚಾಗಿದ್ದರೆ, ರಾಜಸ್ಥಾನ, ಹರ್ಯಾಣ, ಬಿಹಾರ ಹಾಗೂ ಮಧ್ಯಪ್ರದೇಶದ ತಲಾವಾರು ಆದಾಯ ರಾಷ್ಟ್ರೀಯ ಸರಾಸರಿಗಿಂತ ತೀರಾ ಕಡಿಮೆ ಇದೆ. ಈ ಪೈಕಿ ಹರ್ಯಾಣ ರಾಜ್ಯದ ತಲಾವಾರು ಆದಾಯ ಮಾತ್ರ ತೃಪ್ತಿದಾಯಕವಾದ ಶೇ.176.8ರಷ್ಟು ಸರಾಸರಿಯನ್ನು ಹೊಂದಿದೆ. ಇದಕ್ಕೆ ಪ್ರಮುಖ ಕಾರಣ ಜನಸಂಖ್ಯಾ ಸ್ಫೋಟ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಮಿತಿಮೀರಿದ ಸಾಮಾಜಿಕ ತಾರತಮ್ಯ
1990ರಲ್ಲಿ ರಾಮ ರಥಯಾತ್ರೆ ನಡೆಯುವವರೆಗೂ ಭಾರತದ ರಾಜಕೀಯ ಚರ್ಚೆ ಅಭಿವೃದ್ಧಿಯ ಸುತ್ತ ಸುತ್ತುತ್ತಿತ್ತು. ಹೀಗಾಗಿಯೇ ಬಂಡವಾಳಶಾಹಿಗಳ ಪರವಾಗಿ ಮೃದು ಧೋರಣೆ ಹೊಂದಿದ್ದ ಕಾಂಗ್ರೆಸ್ ಹಾಗೂ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಕಠಿಣ ನಿಲುವು ಹೊಂದಿದ್ದ ಎಡಪಕ್ಷಗಳು ಹಾಗೂ ಸಮಾಜವಾದಿ ಪಕ್ಷಗಳ ನಡುವೆ ನೇರಾನೇರ ಹಣಾಹಣಿಯಿತ್ತು. ಆದರೆ, ರಾಮ ರಥಯಾತ್ರೆ ಆ ಎಲ್ಲ ಸಮೀಕರಣ ಮತ್ತು ಪ್ರತಿಸ್ಪರ್ಧೆಯನ್ನು ಅಂತ್ಯಗೊಳಿಸಿತು. ರಾಮ ರಥಯಾತ್ರೆ ಹಾಗೂ ಅದರ ಬೆನ್ನಿಗೇ ನಡೆದ ಬಾಬ್ರಿ ಮಸೀದಿ ಧ್ವಂಸ ಘಟನೆ, ಇಡೀ ಉತ್ತರ ಭಾರತವನ್ನು ಧರ್ಮೋನ್ಮಾದದಲ್ಲಿ ಅದ್ದಿ ತೆಗೆಯಿತು. ಈಗಲೂ ಧರ್ಮೋನ್ಮಾದದಿಂದ ಉತ್ತರ ಭಾರತ ಹೊರ ಬಾರದೆ ಇರುವುದರಿಂದ ಅಲ್ಲಿನ ಸಾಮಾಜಿಕ ತಾರತಮ್ಯ ಮತ್ತಷ್ಟು ಆಳವಾಗತೊಡಗಿದೆ; ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರತೊಡಗಿವೆ. ಇದರೊಂದಿಗೆ ಅಲ್ಪಸಂಖ್ಯಾತರು, ಮುಖ್ಯವಾಗಿ ಮುಸ್ಲಿಮರ ಮೇಲಿನ ಗುಂಪು ಹಲ್ಲೆ ಪ್ರಕರಣಗಳೂ ನಿರಂತರವಾಗಿ ಏರಿಕೆಯಾಗತೊಡಗಿವೆ. ಇದೆಲ್ಲದರ ಪರಿಣಾಮ ಉತ್ತರ ಭಾರತದ ಆರ್ಥಿಕ ಪ್ರಗತಿ ಇಂದಿಗೂ ಚಿಂತಾಜನಕವಾಗಿಯೇ ಮುಂದುವರಿದಿದೆ.
ಪ್ರಶ್ನಿಸುವ ಮತ್ತು ಹಕ್ಕು ಕೇಳುವ ಸ್ಥೈರ್ಯವನ್ನು ಶಿಕ್ಷಣ ನೀಡುತ್ತದೆ. ಈ ಸತ್ಯವನ್ನು ಸ್ಪಷ್ಟವಾಗಿ ಅರಿತಿರುವ ಉತ್ತರ ಭಾರತದ ರಾಜಕಾರಣಿಗಳು, ತಮ್ಮ ರಾಜ್ಯಗಳಲ್ಲಿನ ಶಿಕ್ಷಣ ಸುಧಾರಣೆಗೆ ಹೆಚ್ಚು ಆದ್ಯತೆ ನೀಡುವುದಕ್ಕಿಂತ ಧರ್ಮೋನ್ಮಾದ ಸೃಷ್ಟಿಸುವುದರಲ್ಲೇ ಹೆಚ್ಚು ಮಗ್ನರಾಗಿದ್ದಾರೆ. ಹೀಗಾಗಿಯೇ ಉತ್ತರ ಭಾರತದಲ್ಲಿನ ಸಾಕ್ಷರತಾ ಸರಾಸರಿ ರಾಷ್ಟ್ರೀಯ ಸಾಕ್ಷರತಾ ಸರಾಸರಿಗಿಂತಲೂ ಕಳಪೆಯಾಗಿರುವುದು. ಇದರಿಂದಾಗಿ, ಉತ್ತರ ಭಾರತದ ಜನರಲ್ಲಿ ಇಂದಿಗೂ ಸಾಮಾಜಿಕ ಗುಲಾಮಗಿರಿ ಮನಸ್ಥಿತಿ ಆಳವಾಗಿ ಬೇರೂರಿದೆ. ಹೀಗಾಗಿಯೇ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಉತ್ತರ ಭಾರತದ ರಾಜ್ಯಗಳೇ ಹೆಚ್ಚು ಮುಂಚೂಣಿಯಲ್ಲಿರುವುದು.
ಹುಸಿ ದೇವಮಾನವರ ಹಿಡಿತ
ಉತ್ತರ ಭಾರತ ಇಂದಿಗೂ ಧಾರ್ಮಿಕ ನಾಯಕರು, ಸಂತರು, ಸನ್ಯಾಸಿಗಳ ಹಿಡಿತದಲ್ಲಿರುವುದೇ ಹೆಚ್ಚು. ಹೀಗಾಗಿಯೇ ರಾಮಜನ್ಮ ಭೂಮಿ ವಿವಾದದ ಮುಂಚೂಣಿ ನೇತೃತ್ವ ವಹಿಸಿದ್ದದ್ದು ಸಂತರು, ಸನ್ಯಾಸಿಗಳಂತಹ ಧಾರ್ಮಿಕ ನಾಯಕರು. ಹೀಗಾಗಿಯೇ, ಇಲ್ಲಿ ನಕಲಿ ದೇವಮಾನವರಿಗೆ ಅಡ್ಡ ಬೀಳುವ, ನೂಕುನುಗ್ಗಲಿನ ಸಾಯುವ ಜನರಿಗೇನೂ ಕಡಿಮೆ ಇಲ್ಲ. ಉತ್ತರ ಭಾರತದಲ್ಲಿ ಮೌಢ್ಯ ಹಾಸು ಹೊಕ್ಕಾಗಿದ್ದು, ಜನರಲ್ಲಿ ಶಿಕ್ಷಣದ ಮಹತ್ವವನ್ನು ಮನಗಾಣಿಸಬೇಕಿದ್ದ ರಾಜಕಾರಣಿಗಳೇ ಇಂತಹ ನಕಲಿ ದೇವಮಾನವರ ಕಾಲಿಗೆ ಅಡ್ಡ ಬೀಳುವುದರಿಂದ, ಇಲ್ಲಿನ ಮೌಢ್ಯ ಹಂತಹಂತವಾಗಿಯಾದರೂ ಅಂತ್ಯವಾಗುವ ಬದಲು ದಿನದಿನಕ್ಕೂ ಗಾಢವಾಗುತ್ತಲೇ ಸಾಗುತ್ತಿದೆ.

ದಕ್ಷಿಣ ಭಾರತದ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳು
ರಾಮ ರಥಯಾತ್ರೆಯ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಅವಿಭಜಿತ ಆಂಧ್ರಪ್ರದೇಶ ರಾಜ್ಯಗಳೂ ಧಾರ್ಮಿಕ ಸನ್ನಿಗೆ ಹೊರತಾಗಿರಲಿಲ್ಲ. ಇದರ ಹೊರತಾಗಿಯೂ, ಈ ರಾಜ್ಯಗಳಲ್ಲಿ ಬಸವಣ್ಣ, ಪೆರಿಯಾರ್, ನಾರಾಯಣ ಗುರು, ಕೈವಾರ ತಾತಯ್ಯರಂತಹ ದಾರ್ಶನಿಕರು ಹಾಗೂ ಸಮಾಜ ಸುಧಾರಕರ ಪ್ರಭಾವ ಗಾಢವಾಗಿದ್ದುದರಿಂದ, ಕರ್ನಾಟಕ ಹೊರತುಪಡಿಸಿ, ಮತ್ಯಾವ ರಾಜ್ಯಗಳಲ್ಲೂ ಬಿಜೆಪಿ ತನ್ನ ಅಧಿಕಾರದ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅದಕ್ಕೆ ಇಲ್ಲಿನ ಸಾಕ್ಷರತಾ ಪ್ರಮಾಣವೂ ಹೆಚ್ಚಿದ್ದದ್ದು, ಸಾಮಾಜಿಕ ಹೋರಾಟಗಳು ದೊಡ್ಡ ಪ್ರಮಾಣದಲ್ಲಿ ನಡೆದಿದ್ದದ್ದೂ ಪ್ರಮುಖ ಕಾರಣ.
ಇದನ್ನೂ ಓದಿರಿ: ಒಂದೇ ಕಲ್ಲಿನಿಂದ ಮೂರು ಹಕ್ಕಿ ಹೊಡೆದ ಬಿ.ಎಲ್ ಸಂತೋಷ್ ಷಡ್ಯಂತ್ರ ಗೌಡರಿಗೆ ಅರ್ಥವಾಗಿಲ್ಲವೇ?
ಹೀಗಿದ್ದೂ, ಇಡೀ ದೇಶದಲ್ಲಿ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಹೆಗ್ಗಳಿಕೆಯಿರುವ ಕರ್ನಾಟಕ ಎರಡು ಬಾರಿ ಕೋಮುವಾದಿ ಬಿಜೆಪಿಗೆ ಮಣೆ ಹಾಕಿತು. ಆದರೆ, ಈ ಎರಡು ಬಾರಿಯೂ ಬಿಜೆಪಿಗೆ ಸಂಪೂರ್ಣ ಬಹುಮತ ನೀಡಲಿಲ್ಲ ಎಂಬುದಿಲ್ಲಿ ಗಮನಾರ್ಹ. 2008 ಹಾಗೂ 2018ರಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ, ಇಡೀ ದೇಶದಲ್ಲೇ ಪ್ರಪ್ರಥಮ ಬಾರಿಗೆ ‘ಆಪರೇಷನ್ ಕಮಲ’ ಎಂಬ ಅನೈತಿಕ ರಾಜಕಾರಣವನ್ನು ಪರಿಚಯಿಸಿ, ಒಟ್ಟು 10 ವರ್ಷಗಳ ಕಾಲ ಆಡಳಿತ ನಡೆಸಿದ್ದು ಕರ್ನಾಟಕ ರಾಜಕಾರಣದಲ್ಲಿ ದಾಖಲಾಗಿರುವ ಬಹು ದೊಡ್ಡ ದುರಂತ ಎಂಬುದರಲ್ಲಿ ಎರಡು ಮಾತಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಪರಿಚಯಿಸಿದ ‘ಆಪರೇಷನ್ ಕಮಲ’ ಇಂದು ಇಡೀ ದೇಶದ ರಾಜಕಾರಣವನ್ನು ಆಕ್ರಮಿಸಿದೆ. ಕೇಂದ್ರದಲ್ಲಿ ಕಳೆದ 11 ವರ್ಷಗಳಿಂದ ಆಡಳಿತಾರೂಢವಾಗಿರುವ ಬಿಜೆಪಿ, ಈ ಅನೈತಿಕ ಕಾರ್ಯಾಚರಣೆಯನ್ನು ನಡೆಸಿಯೇ ಮಹಾರಾಷ್ಟ್ರ, ಬಿಹಾರ, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ವಿರೋಧ ಪಕ್ಷಗಳ ಅಸ್ತಿತ್ವವೇ ಇಲ್ಲದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸ್ವಾತಂತ್ರ್ಯಪೂರ್ವದಿಂದಲೂ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತ ಕರ್ನಾಟಕ, ತಮಿಳುನಾಡು, ಕೇರಳ, ಅವಿಭಜಿತ ಆಂಧ್ರಪ್ರದೇಶವನ್ನು ಹೊಂದಿರುವ ದಕ್ಷಿಣ ಭಾರತ, ಸ್ವಾತಂತ್ರ್ಯ ಪೂರ್ವದಿಂದಲೂ ತನ್ನ ಬಲಿಷ್ಠ ಆರ್ಥಿಕತೆಗೆ ಹೆಸರುವಾಸಿಯಾಗಿದೆ. ಸ್ವಾತಂತ್ರ್ಯಾನಂತರವೂ ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಗಮನಾರ್ಹ ಕೊಡುಗೆ ನೀಡುತ್ತಾ ಬರುತ್ತಿರುವ ದಕ್ಷಿಣ ಭಾರತದ ರಾಜ್ಯಗಳು, 1991ರ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನಂತರ, ಭಾರತದ ಜಿಡಿಪಿಗೆ ಶೇ. 30ರಷ್ಟು ಕೊಡುಗೆ ನೀಡುತ್ತಿವೆ. ಭಾರತವು 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿದ್ದು, ಈ ಪೈಕಿ ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಆಂಧ್ರಪ್ರದೇಶಗಳೇ ದೇಶದ ಜಿಡಿಪಿ ಬೆಳವಣಿಗೆಗೆ ಶೇ. 30ರಷ್ಟು ಕೊಡುಗೆ ನೀಡುತ್ತಿವೆ ಎಂದರೆ, ಅವು ಹೊಂದಿರುವ ಬಲಿಷ್ಠ ಆರ್ಥಿಕತೆಯನ್ನು ಯಾರಾದರೂ ಅಂದಾಜಿಸಬಹುದು.
ಜನಸಂಖ್ಯಾ ಸ್ಫೋಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿರುವುದೂ ಕೂಡಾ ದಕ್ಷಿಣ ಭಾರತದ ರಾಜ್ಯಗಳು ಬಲಿಷ್ಠ ಆರ್ಥಿಕತೆ ಹೊಂದಿರಲು ಪ್ರಮುಖ ಕಾರಣ. ಭಾರತದ ಒಟ್ಟಾರೆ ಜನಸಂಖ್ಯೆ ಸುಮಾರು 145 ಕೋಟಿಯಷ್ಟಿದ್ದರೂ, ದಕ್ಷಿಣ ಭಾರತದ ಐದು ರಾಜ್ಯಗಳು ಹೊಂದಿರುವ ಜನಸಂಖ್ಯೆಯ ಪ್ರಮಾಣ ಕೇವಲ ಸುಮಾರು 26 ಕೋಟಿ ಮಾತ್ರ. ಈ ಪೈಕಿ ಉತ್ತರ ಭಾರತದ ವಲಸಿಗರೂ ಸೇರಿದ್ದಾರೆ ಎಂಬುದಿಲ್ಲಿ ಉಲ್ಲೇಖಾರ್ಹ. ಸಾಕ್ಷರತಾ ಪ್ರಮಾಣದಲ್ಲೂ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕೇರಳ ಇಡೀ ದೇಶದಲ್ಲೇ ಸಾಕ್ಷರತೆಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳ ಪೈಕಿಯೂ ದಕ್ಷಿಣ ಭಾರತದ ರಾಜ್ಯಗಳೇ ಮೇಲುಗೈ ಸಾಧಿಸಿವೆ.
ಆರೋಗ್ಯಕರ ತಲಾವಾರು ಆದಾಯ
ಭಾರತದ ತಲಾವಾರು ವಾರ್ಷಿಕ ಆದಾಯವಾದ 1.84 ಲಕ್ಷ ರೂಪಾಯಿಗಿಂತ ಸರಿಸುಮಾರು ಎರಡು ಪಟ್ಟು ತಲಾವಾರು ಆದಾಯವನ್ನು ದಕ್ಷಿಣ ಭಾರತದ ರಾಜ್ಯಗಳು ಹೊಂದಿವೆ. ಅದಕ್ಕೆ ಪ್ರಮುಖ ಕಾರಣ: ಉದ್ಯಮ ಸ್ನೇಹಿ ಆರ್ಥಿಕ ನೀತಿಗಳು ಹಾಗೂ ನುರಿತ ಮಾನವ ಸಂಪನ್ಮೂಲಗಳ ಲಭ್ಯತೆ. ಹೀಗಾಗಿಯೇ ಕೈಗಾರಿಕಾ ಬೆಳವಣಿಗೆ ಹಾಗೂ ಉದ್ಯೋಗ ನೇಮಕಾತಿಯಲ್ಲೂ ದಕ್ಷಿಣ ಭಾರತದ ರಾಜ್ಯಗಳು ಮೇಲ್ಪಂಕ್ತಿಯಲ್ಲಿವೆ.
ಲಿಂಗಾಯತ ಮಠಗಳ ಅಕ್ಷರ ದಾಸೋಹ
ಕರ್ನಾಟಕ ಹಾಗೂ ಇಡೀ ದೇಶ ಕಂಡ ಕ್ರಾಂತಿಕಾರಿ ಸುಧಾರಣಾವಾದಿ ಬಸವಣ್ಣನ ಅನುಯಾಯಿಗಳಾದ ವಿರಕ್ತರು ಸ್ಥಾಪಿಸಿದ ಮಠಗಳು, ಹಾಗೂ ಆ ಮಠಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಅಕ್ಷರ ದಾಸೋಹದಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸಿವೆ. ಹೀಗಾಗಿಯೇ ಕರ್ನಾಟಕದಲ್ಲಿ ಹುಸಿ ಧಾರ್ಮಿಕ ಗುರುಗಳಿಗಿಂತ ವೈಚಾರಿಕ ಪ್ರಜ್ಞೆಯ ವಿರಕ್ತ ಮಠಾಧೀಶರು ಜನರ ನಡುವೆ ಭಾರಿ ಪ್ರಭಾವಶಾಲಿಗಳಾಗಿದ್ದಾರೆ. ವೈಚಾರಿಕ ತಳಹದಿಯ ಶಿಕ್ಷಣವನ್ನು ಇಂತಹ ವಿರಕ್ತ ಮಠಾಧೀಶರು ಶಿಕ್ಷಣಾರ್ಥಿಗಳಿಗೆ ನೀಡುತ್ತಿರುವುದರಿಂದ, ಅವರಲ್ಲಿ ಧಾರ್ಮಿಕ ಕಂದಾಚಾರಗಳನ್ನು ಪ್ರಶ್ನಿಸುವ, ಧಿಕ್ಕರಿಸುವ ಎದೆಗಾರಿಕೆ ಬೆಳೆಯುತ್ತಿದೆ. ಹೀಗಾಗಿಯೇ ಕರ್ನಾಟಕ ಒಳಗೊಂಡಂತೆ ಯಾವುದೇ ದಕ್ಷಿಣ ಭಾರತ ರಾಜ್ಯಗಳಲ್ಲಿ ಧಾರ್ಮಿಕ ಕಂದಾಚಾರದ ಆಚರಣೆಗಳು ಉತ್ತರ ಪ್ರದೇಶಕ್ಕೆ ಹೋಲಿಸಿದರೆ ತೀರಾ ವಿರಳ ಎಂದೇ ಹೇಳಬಹುದು.
ಜನಸಂಖ್ಯಾ ಸ್ಫೋಟ ಹಾಗೂ ಸಾಕ್ಷರತಾ ಪ್ರಮಾಣ ಸೃಷ್ಟಿಸಿರುವ ರಾಜಕೀಯ ಮತ್ತು ಆರ್ಥಿಕ ತಲ್ಲಣಗಳು ಭಾರತದ ರಾಜಕೀಯ ಪರಿಭಾಷೆ ಧಾರ್ಮಿಕ ಕೇಂದ್ರಿತವಾಗುವುದರಲ್ಲಿ ಎಲ್.ಕೆ.ಅಡ್ವಾಣಿ ನೇತೃತ್ವದ ರಾಮ ರಥಯಾತ್ರೆಯ ಪಾಲು ಎಷ್ಟಿದೆಯೊ, ಅದರ ಎರಡು ಪಟ್ಟು ಪಾಲು ಜನಸಂಖ್ಯಾ ಸ್ಫೋಟ ಹಾಗೂ ಸಾಕ್ಷರತಾ ಪ್ರಮಾಣದ್ದೂ ಇದೆ. ಭೌಗೋಳಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತಗಳೆರಡೂ ಪರಸ್ಪರ ವಿರುದ್ಧ ಧ್ರುವಗಳಂತೆಯೆ ಇದೆ. ಹೀಗಾಗಿಯೇ ದಕ್ಷಿಣ ಭಾರತದಲ್ಲಿ ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕೆ ಬಂದಿದ್ದರೆ, ಉತ್ತರ ಪ್ರದೇಶದ ಜನಸಂಖ್ಯಾ ಸ್ಫೋಟ ಅಂಕೆ ಮೀರಿದೆ. ಇದಕ್ಕೆ ಪ್ರಮುಖ ಕಾರಣ: ಉತ್ತರ ಭಾರತ ರಾಜ್ಯಗಳಲ್ಲಿನ ಕಳಪೆ ಸಾಕ್ಷರತಾ ಪ್ರಮಾಣ. ಉತ್ತರ ಭಾರತದ ಜನರು ಪ್ರಶ್ನಿಸುವ ಸ್ಥೈರ್ಯ ನೀಡುವ ಗುಣಮಟ್ಟದ ಹಾಗೂ ವೈಜ್ಞಾನಿಕ ಶಿಕ್ಷಣದಿಂದಲೇ ವಂಚಿತರಾಗಿರುವುದರಿಂದ, ಅದು ಅವರ ರಾಜಕೀಯ ಆಯ್ಕೆ ಮತ್ತು ನಿರ್ಧಾರಗಳ ಮೇಲೂ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ. ಆದರೆ, ಇದರ ನೇರ ಸಂತ್ರಸ್ತನಾಗುತ್ತಿರುವುದು ಮಾತ್ರ ದಕ್ಷಿಣ ಭಾರತ.
ಉತ್ತರ ಭಾರತದಲ್ಲಿನ ಮಿತಿಮೀರಿದ ಜನಸಂಖ್ಯಾ ಸ್ಫೋಟ, ಸಾಕ್ಷರತೆಯ ಕೊರತೆ, ಸಾಮಾಜಿಕ ತಾರತಮ್ಯ ಹಾಗೂ ನಿರುದ್ಯೋಗ ಪ್ರಮಾಣವು ದಕ್ಷಿಣ ಭಾರತದ ರಾಜ್ಯಗಳು ವಲಸೆಯ ಪಿಡುಗಿಗೆ ತುತ್ತಾಗುವಂತೆ ಮಾಡಿವೆ. ಒಂದು ಅಂದಾಜಿನ ಪ್ರಕಾರ, ಇಡೀ ದಕ್ಷಿಣ ಭಾರತದ ಎಲ್ಲ ಹೋಬಳಿ ಕೇಂದ್ರಗಳಿಗೂ ಉತ್ತರ ಭಾರತೀಯರು ವಲಸೆ ಬಂದಿದ್ದಾರೆ ಹಾಗೂ ವಲಸೆ ಬರುವುದನ್ನು ಮುಂದುವರಿಸಿದ್ದಾರೆ. ಇದರಿಂದ ಮಾರಕ ಪರಿಣಾಮವಾಗುತ್ತಿರುವುದು ದಕ್ಷಿಣ ಭಾರತದ ಸ್ಥಳೀಯ ರಾಜಕಾರಣದ ಮೇಲೆ. ಮೂಲತಃ ಜಾತ್ಯತೀತ ರಾಜಕಾರಣಕ್ಕೆ ಪಕ್ಕಾಗಿರುವ ದಕ್ಷಿಣ ಭಾರತದ ರಾಜ್ಯಗಳು ಉತ್ತರ ಭಾರತದಿಂದ ವಲಸೆ ಬರುತ್ತಿರುವವರ ಪ್ರಮಾಣ ಏರುಗತಿಯಲ್ಲಿರುವುದರಿಂದ, ಅವೂ ಕೂಡಾ ಧಾರ್ಮಿಕ ಮೂಲಭೂತವಾದಕ್ಕೆ ಬಲಿಯಾಗುವ ಅಪಾಯ ಎದುರಿಸುತ್ತಿವೆ. ಇದಕ್ಕೆ ಕಳಶವಿಟ್ಟಂತೆ, ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡಣೆ ಮಾಡಲು ಕೇಂದ್ರದಲ್ಲಿ ಆಡಳಿತಾರೂಢವಾಗಿರುವ ಬಿಜೆಪಿ ಚಿಂತಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗೇನಾದರೂ ಆದರೆ, ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ರಾಜ್ಯಗಳ ಕ್ಷೇತ್ರಾವಾರು ಹಿಡಿತ ದುಪ್ಪಟ್ಟಾಗಿ, ದಕ್ಷಿಣ ಭಾರತದ ರಾಜ್ಯಗಳು ತಮ್ಮ ದನಿಯನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಕ್ಕೆ ದಕ್ಷಿಣ ಭಾರತದ ರಾಜ್ಯಗಳು ಪಡೆಯಲಿರುವ ಉಡುಗೊರೆ ಇದು. ಹಾಗೇನಾದರೂ ಆದರೆ, ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಮತ್ತು ಆರ್ಥಿಕ ಸ್ವಾಯತ್ತತೆಯ ಮೇಲೆ ನಿಶ್ಚಿತ ಪರಿಣಾಮವುಂಟಾಗಲಿದೆ. ಕೇಂದ್ರದಲ್ಲಿ ಆಡಳಿತಾರೂಢವಾಗುವ ಸರಕಾರಗಳ ಮರ್ಜಿಯನ್ನು ದಕ್ಷಿಣ ಭಾರತದ ರಾಜ್ಯಗಳು ಕಾಯುವಂತಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಆಯ್ಕೆಗಳು ಹಾಗೂ ಆರ್ಥಿಕ ಸ್ವಾಯತ್ತತೆ ಡೋಲಾಯಮಾನವಾಗಲಿದೆ. ಕೊನೆಗೆ, ಇಡೀ ದೇಶದಲ್ಲೇ ಸಮಗ್ರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ರಾಜ್ಯಗಳು ಉತ್ತರ ಭಾರತ ರಾಜ್ಯಗಳಿಗಿಂತ ಹಿಂದುಳಿಯವುದು ನಿಶ್ಚಿತ.
ಇದನ್ನೂ ಓದಿರಿ: ಜೀವ ಹಿಂಡುವ ಜಿಎಸ್‌ಟಿ : ಬಡವರ ಹಣ ಕಿತ್ತು ಶ್ರೀಮಂತರಿಗೆ ನೀಡುತ್ತಿರುವ ನಿರ್ಮಲಾ ಸೀತಾರಾಮನ್
ಈಗಾಗಲೇ ಇಂತಹ ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳು ಕೇಂದ್ರ ಸರಕಾರದ ಜಿಎಸ್ಟಿ ಹಂಚಿಕೆಯಲ್ಲಿನ ತಾರತಮ್ಯದಲ್ಲಿ ಸ್ಪಷ್ಟವಾಗಿ ಪ್ರತಿಫಲನಗೊಂಡಿವೆ. ಅತಿ ಹೆಚ್ಚು ಜಿಎಸ್ಟಿ ಪಾವತಿಸುತ್ತಿರುವ ದಕ್ಷಿಣ ಭಾರತದ ರಾಜ್ಯಗಳು ಅತಿ ಕಡಿಮೆ ಪ್ರಮಾಣದ ಜಿಎಸ್ಟಿ ಹಂಚಿಕೆಯನ್ನು ಪಡೆಯುತ್ತಿದ್ದರೆ, ದೇಶದ ಜಿಎಸ್ಟಿ ಮತ್ತು ಜಿಡಿಪಿಗೆ ನಗಣ್ಯ ಕೊಡುಗೆ ನೀಡುತ್ತಿರುವ ಉತ್ತರ ಪ್ರದೇಶ, ಬಿಹಾರದಂತಹ ‘ಬಿಮಾರು’ ರಾಜ್ಯಗಳಿಗೆ ಗರಿಷ್ಠ ಪ್ರಮಾಣದ ಜಿಎಸ್ಟಿ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂಬ ಗೋಡೆ ಶಾಶ್ವತವಾಗಿ ಎದ್ದು ನಿಲ್ಲುವುದು ನಿಶ್ಚಿತ. ಇದು ಹೀಗೆಯೇ ಮುಂದುವರಿದರೆ, ಪ್ರತ್ಯೇಕ ದಕ್ಷಿಣ ಭಾರತದ ಕೂಗು ಎದ್ದರೂ ಅಚ್ಚರಿಯಿಲ್ಲ.
ಯಾವುದೇ ದೇಶದ ದಿಕ್ಕು ದೆಸೆಯನ್ನು ನಿರ್ಧರಿಸುವುದು ಆಯಾ ದೇಶದ ಜನರ ರಾಜಕೀಯ ಆಯ್ಕೆಗಳು ಎಂಬುದು ಸಂಶಯಕ್ಕೆಡೆ ಇಲ್ಲದಂತೆ ಸಾಬೀತಾಗಿದೆ. ಆದರೆ, ಮೊದಲಿನಿಂದಲೂ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಭಿನ್ನತೆಯನ್ನು ಹೊಂದಿರುವ ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳು, ಒಂದು ಭೂಪ್ರಾಂತ್ಯದ ಜನರ ಇಷ್ಟಾನಿಷ್ಟಗಳ ಕಾರಣಕ್ಕೆ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗುವಂತಾಗಿರುವುದು ಕಣ್ಣು ಮುಂದಿನ ವಾಸ್ತವ. ಸಾಕ್ಷರತೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿರುವ ಉತ್ತರ ಭಾರತದ ರಾಜಕಾರಣಿಗಳಿಂದ, ಸಾಕ್ಷರತೆ ಪ್ರಮಾಣವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿರುವ ದಕ್ಷಿಣ ಭಾರತದ ರಾಜಕಾರಣಿಗಳು ಹಾಗೂ ರಾಜ್ಯಗಳು ಹೆಚ್ಚು ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಲಿರುವುದು ನಮ್ಮ ದೇಶದ ನಿಜ ಚೋದ್ಯಗಳಲ್ಲೊಂದು.

ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ




