ಕೋಮುಗಲಭೆಗಳಿಗೆ ಹರಿದ ‘ಒಬಿಸಿ’ಗಳ ನೆತ್ತರು; ಕರ್ನಾಟಕ ಕಂಡ ರಕ್ತ ಚರಿತ್ರೆ ಬಲ್ಲಿರಾ?

Date:

ದೇಶ ಸ್ವಾತಂತ್ರ್ಯ ಪಡೆಯುವ ವೇಳೆಯಲ್ಲಿ ಕೋಮುಗಲಭೆಗಳು ನಡೆದವು. ಒಂದು ವೈವಿಧ್ಯಮಯವಾದ, ವಿವಿಧತೆಯಲ್ಲಿ ಏಕತೆಯ ದೇಶ ಇರಕೂಡದು ಎಂಬ ಪಿತೂರಿಯ ಭಾಗವಾಗಿಯೇ 1947ರಲ್ಲಿ ಕೋಮುಗಲಭೆಗಳು ನಡೆದವು. ಒಂದು ಕಡೆ ಸ್ವಾತಂತ್ರ್ಯ ಪಡೆದ ಸಂಭ್ರಮವಾದರೆ, ಇನ್ನೊಂದೆಡೆ ಅಲ್ಪಸಂಖ್ಯಾತರು, ದಲಿತರು ಭಯದ ವಾತಾವರಣದಲ್ಲಿ ಕಳೆಯುವ ಮೂಲಕ ದೇಶದೊಳಗೆ ಅಭದ್ರತೆಯನ್ನು ಸೃಷ್ಟಿಸಲಾಯಿತು. `ಕರ್ನಾಟಕ’ ಎಂಬ ರಾಜ್ಯ ಉದಯಿಸಿದಾಗಲೂ ಇದೇ ಪಿತೂರಿಯನ್ನು ಕರ್ನಾಟಕದಲ್ಲೂ ಮಾಡಲಾಯಿತು.

1972 ಜುಲೈ 25ರಂದು ಅಂದಿನ ಮೈಸೂರು ವಿಧಾನಸಭೆಯಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು `ಹೆಸರು ಬದಲಾಯಿಸುವ ನಿರ್ಣಯ’ವನ್ನು ಮುಖ್ಯಮಂತ್ರಿ ಡಿ.ದೇವರಾಜ ಅರಸು ಮಂಡಿಸಿದ್ದರು. ಮೈಸೂರು ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ನಿರ್ಣಯ ಅಂಗೀಕಾರಗೊಂಡ ಬಳಿಕ, 1973ರ ಆಗಸ್ಟ್‌ನಲ್ಲಿ ಭಾರತದ ಸಂಸತ್ತಿನಲ್ಲಿ `ಮೈಸೂರು ರಾಜ್ಯ (ಹೆಸರಿನ ಬದಲಾವಣೆ) ಅಧಿನಿಯಮ, 1973’ ಅಂಗೀಕೃತವಾಗಿತ್ತು. 1973 ನವೆಂಬರ್ 01ರಂದು ಮುಖ್ಯಮಂತ್ರಿ ದೇವರಾಜ ಅರಸ್ ಅವರು ಮೈಸೂರು ರಾಜ್ಯದ ಹೆಸರನ್ನು `ಕರ್ನಾಟಕ’ ಎಂದು ಘೋಷಿಸಿದರು. ಹಾಗಾಗಿ 2024 ನವೆಂಬರ್ 01ರಂದು ಕರ್ನಾಟಕ ಎಂಬ ಹೆಸರಿನ ಘೋಷಣೆಯಾಗಿ 50 ವರ್ಷಗಳು ಪೂರ್ಣಗೊಳ್ಳುತ್ತವೆ. ಅಂದಿನ ರಾಜಕಾರಣಿಗಳು, ಹೋರಾಟಗಾರರು, ಚಿಂತಕರು, ಸಾಹಿತಿಗಳು ಸೌಹಾರ್ದ, ಸಹೋದರತೆಯ ವಿಶಾಲ ಕರ್ನಾಟಕದ ಕನಸನ್ನು ಹೊಂದಿದ್ದರು. ಆ ಕನಸುಗಳಿಗೆ ಅಂದಿನಿಂದ ಇಂದಿನವರೆಗೆ ಬೆಂಕಿ ಇಡುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿದೆ.

ಕರಾವಳಿಯಲ್ಲಿ 1968ರಲ್ಲೇ ಕೋಮುಗಲಭೆಗಳು ನಡೆದಿದ್ದವು ಎಂದು ದಾಖಲೆಗಳು ಹೇಳುತ್ತವೆ. ಮುಸ್ಲಿಮರು ಮತ್ತು ಮೊಗವೀರರ ಮಧ್ಯೆ ನಡೆದ ವೈಮನಸ್ಸು ಕೋಮುಗಲಭೆಗೆ ತಿರುಗಿತ್ತು. ಇದರ ಹಿಂದೆ ಕರಾವಳಿಯಲ್ಲಿ ಆಗಷ್ಟೇ ಬೆಳೆಯುತ್ತಿದ್ದ ಸಂಘಪರಿವಾರದ ಕೈವಾಡವಿತ್ತು. ಮೀನು ಹಿಡಿದು ಮಾರಾಟ ಮಾಡುವ ಮೊಗವೀರ ಮಹಿಳೆಯರ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೀನು ವ್ಯಾಪಾರಿ ಕೈ ಮಾಡಿದ ಎಂಬ ವದಂತಿಯು ಗಲಭೆಗೆ ಕಾರಣವಾಗಿತ್ತು. ಇಂಥದ್ದೊಂದು ವದಂತಿಯನ್ನು ವ್ಯವಸ್ಥಿತವಾಗಿ ಹರಡಿ ಕೋಮುಗಲಭೆಯನ್ನು ಸೃಷ್ಟಿಸಲಾಯಿತು. ಆಗಿನ್ನು ಕರ್ನಾಟಕ ರಾಜ್ಯವೇ ಆಗಿರಲಿಲ್ಲ. ಬ್ರಿಟೀಷರ ಕಾಲದಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಮಂಗಳೂರು ‘ಮೈಸೂರು ರಾಜ್ಯ’ದ ಭಾಗವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಂದರ್ಭದಲ್ಲಿ ನೆಲ-ಜಲ-ಭಾಷೆಯ ಹೆಸರಲ್ಲಿ ಒಗ್ಗಟ್ಟಾಗಿದ್ದ ಜನರನ್ನು ಒಡೆಯುವ ಕೃತ್ಯವನ್ನು ಸಂಘಪರಿವಾರವು ವ್ಯವಸ್ಥಿತವಾಗಿ ನಡೆಸಿತ್ತು. ಸರ್ಕಾರಿ ದಾಖಲೆಗಳು ಹೇಳುವಂತೆ, 1973 ಸೆಪ್ಟೆಂಬರ್‌ನ ಒಂದು ಗುರುವಾರ ಮಧ್ಯಾಹ್ನ 12.30ರ ವೇಳೆಗೆ ಮಂಡ್ಯದಲ್ಲಿ ವಿದ್ಯಾರ್ಥಿಗಳು ಶಾಂತವಾದ ರೀತಿಯಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಕೇಂದ್ರ ಸರ್ಕಾರದ ಹಲವು ಜನವಿರೋಧಿ ಧೋರಣೆ ಖಂಡಿಸಿ ನಡೆಯುತ್ತಿದ್ದ ಮಂಡ್ಯ ಬಂದ್‌ನ ಭಾಗವಾಗಿ ವಿದ್ಯಾರ್ಥಿಗಳ ಮೆರವಣಿಗೆ ನಡೆಯುತ್ತಿತ್ತು. ಇದೇ ಮೆರವಣಿಗೆಯಲ್ಲಿ ಕೆಲ ಸಂಘಪರಿವಾರದ ದುಷ್ಕರ್ಮಿಗಳು ಸೇರಿಕೊಂಡಿದ್ದರು. ಬಂದ್ ಆಗಿದ್ದ ಮಂಡ್ಯದ ಪೇಟೆಯಲ್ಲಿ ಮೆರವಣಿಗೆ ಹೋಗುವಾಗ ಹಬೀಬ್ ಟ್ರೇಡರ್ಸ್ ಎಂಬ ಅಂಗಡಿಯ ಮಾಲೀಕರು ಬಾಗಿಲನ್ನು ಮುಚ್ಚುವುದಿಲ್ಲ ಎಂದಾಗ ವಿದ್ಯಾರ್ಥಿಗಳ ಮಧ್ಯೆ ಸೇರಿದ್ದ ಕೋಮುವಾದಿಗಳು ಅಂಗಡಿಯೊಳಗೆ ನುಗ್ಗಿದರು. ಈ ಸಂದರ್ಭದಲ್ಲಿ ಅಂಗಡಿ ಮಾಲೀಕರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ, ಅಂಗಡಿ ಮಾಲೀಕನಿಗೆ ಎರಡೆರಡು ಬಾರಿ ಚಾಕುವಿನಿಂದ ತಿವಿದು ಹಲ್ಲೆ ಮಾಡಲಾಯಿತು. ಆಸ್ಪತ್ರೆಗೆ ದಾಖಲಿಸಿದರೂ ಆತ ಬದುಕುಳಿಯಲಿಲ್ಲ. ಮೈಸೂರು ರಾಜ್ಯ ಕರ್ನಾಟಕವಾಗಬೇಕು ಎಂಬ ಬೇಡಿಕೆಯಲ್ಲಿ ದೊಡ್ಡ ಧ್ವನಿ ಮಂಡ್ಯದ್ದಾಗಿತ್ತು. ಇನ್ನೊಂದೇ ತಿಂಗಳಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯ ಎಂದು ಘೋಷಣೆಯಾಗುವುದರಲ್ಲಿತ್ತು. ಆದರೆ ಅದೇ ಸಂದರ್ಭದಲ್ಲಿ ಮಂಡ್ಯದಲ್ಲಿ ಹಿಂದೂ-ಮುಸ್ಲಿಂ ಎಂದು ಒಡೆಯುವ ಪ್ರಯತ್ನ ನಡೆಯಿತು.

ಗುರುವಾರ ಮಧ್ಯಾಹ್ನ ಆರಂಭವಾದ ಗಲಾಟೆ ಮಂಡ್ಯದಲ್ಲಿ ದೊಡ್ಡ ಗಲಭೆಯನ್ನು ಸೃಷ್ಟಿಸಿತ್ತು. ಮುಸ್ಲಿಂ ವ್ಯಾಪಾರಿಯನ್ನು ಕೊಂದ ಆರೋಪಿಯನ್ನು ಪೊಲೀಸರು ಅಂದೇ ಬಂಧಿಸಿದ್ದರೆ ಗಲಾಟೆ ಅಲ್ಲಿಗೇ ತಣ್ಣಗಾಗುತ್ತಿತ್ತು. ಆದರೆ ಪೊಲೀಸರು ಆರೋಪಿಯನ್ನು ಬಂಧಿಸಲಿಲ್ಲ. ಮರುದಿನ ಶುಕ್ರವಾರದ ದಿನವಾದ್ದರಿಂದ ಮಧ್ಯಾಹ್ನದ ನಂತರ ಕೊಲೆ ಪ್ರತಿಭಟಿಸಿ ಜನ ಸೇರಿದರು. ಮಂಡ್ಯ ಪೊಲೀಸರಿಗೆ ಇದು ಬಹುಶಃ ಮೊದಲ ದೊಂಬಿ ಗಲಾಟೆ.

WhatsApp Image 2025 05 03 at 16.05.57
ಕೋಮುಗಲಭೆ (ಎಐ ಸೃಷ್ಟಿಸಿರುವ ಸಾಂದರ್ಭಿಕ ಚಿತ್ರ)

`ಮಂಡ್ಯದ ಗಲಭೆಗ್ರಸ್ತ ಯಾವ ಬೀದಿಯಲ್ಲೂ ಪೊಲೀಸರು ಇರಲಿಲ್ಲ. ಪೊಲೀಸರನ್ನು ಶ್ರೀಮಂತರ, ಅಧಿಕಾರಿಗಳ ಆಸ್ತಿಪಾಸ್ತಿ-ಮನೆ ಕಾಯಲು ನಿಯೋಜನೆ ಮಾಡಲಾಗಿತ್ತು. ಹಾಗಾಗಿ ಮಧ್ಯಾಹ್ನ 12.30ಕ್ಕೆ ಆರಂಭವಾದ ದೊಂಬಿ ಮತ್ತು ಬೆಂಕಿ ಅನಾಹುತ ಪ್ರಕರಣಗಳು ಯಾವ ಅಡೆತಡೆ ಇಲ್ಲದೆ ಸಾಯಂಕಾಲ ಐದು ಗಂಟೆಯವರೆಗೂ ನಡೆದವು. ಸುಮಾರು 130ರಿಂದ 140 ಗುಡಿಸಲುಗಳನ್ನು ಸುಟ್ಟು ಹಾಕಿದರು. ಒಬ್ಬರು ಸತ್ತು ಹೋದರೆ ಹತ್ತಾರು ಜನ ಗಾಯಗೊಂಡರು. ಪೇಟೆ ಪೂರ್ತಿ ಬೆಂಕಿ, ಆಸ್ತಿಪಾಸ್ತಿ ನಾಶದಿಂದ ಬರ್ಬರವಾಗಿತ್ತು’ ಎಂದು 1973ರ ಮೈಸೂರು ವಿಧಾನಸಭೆಯಲ್ಲಿ ಮಂಡ್ಯದ ಅಂದಿನ ಶಾಸಕರು ವಿವರಿಸಿದ್ದರು.

ಇದನ್ನೂ ಓದಿರಿ: ಲಂಡನ್ ಪ್ರೊಫೆಸರ್ ಕಣ್ಣಲ್ಲಿ ಅರಸು ಕಾಲ ಮತ್ತು ಭವಿಷ್ಯದ ಕರ್ನಾಟಕ ರಾಜಕಾರಣ

1976ರಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕ ಕಲ್ಲಡ್ಕ ಇಸ್ಮಾಯಿಲ್‌ರನ್ನು ಹಿಂದುತ್ವವಾದಿಗಳು ಅಪಹರಿಸಿ ಕೊಲೆ ಮಾಡಿದರು. ಈ ಕೊಲೆಯ ನೇತೃತ್ವವನ್ನು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರೇ ವಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದು ಕರಾವಳಿಯಲ್ಲಿ ಹಿಂದೂ ಮುಸ್ಲಿಮರ ವಿಘಟನೆಗೆ ಕಾರಣವಾಯಿತು.

kalladka prabhakara bhat
ಕಲ್ಲಡ್ಕ ಪ್ರಭಾಕರ ಭಟ್

1977ರಲ್ಲಿ ಇಂದಿರಾ ಗಾಂಧಿಯವರನ್ನು ಬಂಧಿಸಿದಾಗ ಕಾಂಗ್ರೆಸ್ ಜಿಲ್ಲಾ ಬಂದ್‌ಗೆ ಕರೆ ನೀಡಿತ್ತು. ಅಂಗಡಿ ಮುಂಗಟ್ಟುಗಳನ್ನು ಕಾಂಗ್ರೆಸ್ಸಿಗರು ಮುಚ್ಚಿಸುವ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಘರ್ಷಣೆ ಪ್ರಾರಂಭವಾಯಿತು. ಇದು ಕೋಮುಗಲಭೆಯಾಗಿ ಪರಿವರ್ತನೆಯಾಗಿ, ಇಡೀ ಜಿಲ್ಲೆಯಾದ್ಯಂತ ವ್ಯಾಪಿಸಿತು. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಮಸೀದಿಗಳಿಗೆ ಹಿಂದುತ್ವವಾದಿಗಳು ಕಲ್ಲು ತೂರಾಟ ನಡೆಸಿದರು. ಹಲವರು ಗಾಯಗೊಂಡರು. ಹಲವರನ್ನು ಬಂಧಿಸಲಾಯಿತು. ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದ ಕೋಮುಗಲಭೆ ಇದು. ಕಲ್ಲಡ್ಕ ಇಸ್ಮಾಯಿಲ್ ಕೊಲೆ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ನಡೆದುಕೊಂಡಿದ್ದರೆ, ಹಿಂದುತ್ವವಾದಿಗಳ ಕೊಲೆ ರಾಜಕಾರಣವನ್ನು ನಿಲ್ಲಿಸಿದ್ದರೆ 1977ರ ಕೋಮುಗಲಭೆ ನಡೆಯುತ್ತಿರಲಿಲ್ಲ. ಪೊಲೀಸರು ಮತ್ತು ಹಿಂದುತ್ವವಾದಿಗಳ ಅಕ್ರಮ ಸಂಬಂಧ ಮತ್ತು ನಿಷ್ಕ್ರಿಯತೆಗಳೇ ಕೋಮುಗಲಭೆಗೆ, ಸಾವು ನೋವುಗಳಿಗೆ ಕಾರಣವಾಗಿತ್ತು.

ಕರ್ನಾಟಕದ ಇತಿಹಾಸದಲ್ಲೇ ಅತೀ ದೊಡ್ಡ ಕೋಮುಗಲಭೆ ಎನ್ನಿಸಿಕೊಂಡಿದ್ದು 1998ರಲ್ಲಿ ನಡೆದ ಗಲಭೆ. 1998ರ ಡಿಸೆಂಬರ್ 29ರಂದು ಆರಂಭವಾದ ಸುರತ್ಕಲ್ ಕೋಮುಗಲಭೆ ನಿಂತಿದ್ದು 1999 ಜನವರಿ ತಿಂಗಳಲ್ಲಿ! ಇಷ್ಟು ಸುದೀರ್ಘ ಅವಧಿಯಲ್ಲಿ ನಡೆದ ಕೋಮುಗಲಭೆಯಲ್ಲಿ ಮಂಗಳೂರಿನ ಸುರತ್ಕಲ್, ಪಣಂಬೂರು, ಮಂಗಳೂರು, ಕಂಕನಾಡಿ ಠಾಣೆಗಳಲ್ಲಿ 261 ಎಫ್‌ಐರ್‌ಗಳು ದಾಖಲಾದವು. ಬಹುಶಃ ಇದು ಎಫ್‌ಐಆರ್‌ಗಳ ಇತಿಹಾಸದಲ್ಲೇ ಮೊದಲಿರಬೇಕು! ಪೊಲೀಸ್ ದಾಖಲೆಗಳ ಪ್ರಕಾರ ಈ ಗಲಭೆಯಲ್ಲಿ ಏಳು ಮಂದಿ ಮುಸ್ಲಿಮರು, ಓರ್ವ ಹಿಂದೂ ಪ್ರಾಣ ಕಳೆದುಕೊಂಡಿದ್ದ. ಜನರ ಮಾಹಿತಿಯ ಪ್ರಕಾರ 16 ಜನ ಪ್ರಾಣ ಕಳೆದುಕೊಂಡಿದ್ದರು. ಸುಮಾರು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ, 200ಕ್ಕೂ ಹೆಚ್ಚು ಮನೆಗಳನ್ನು ಜಖಂಗೊಳಿಸಲಾಗಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗಳು, ಪ್ರಾರ್ಥನಾಲಯಗಳನ್ನು ಹಾಳುಗೆಡವಲಾಗಿತ್ತು. ಇಂತಹ ಭೀಭತ್ಸ ರೀತಿಯ ಕೋಮುಗಲಭೆ ನನ್ನೂರು ಸುರತ್ಕಲ್‌ನಲ್ಲಿ ನಡೆದಿತ್ತು.

ಆ ಬಳಿಕ ಕರಾವಳಿ ಕೋಮುವಾದದ ಪ್ರಯೋಗಶಾಲೆಯಾಗಿ ಇನ್ನಷ್ಟೂ ಗಟ್ಟಿಯಾಯಿತು. 1999ರಲ್ಲಿ ರಾಜ್ಯದಲ್ಲಿ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದರು. ರೋಶನ್ ಬೇಗ್ ಅವರು ಗೃಹ ಸಚಿವರಾಗಿದ್ದರು. ಪ್ರಗತಿಪರವಾಗಿ ಚಿಂತಿಸುವ ಬಿ.ಎ. ಮೊಹಿಯುದ್ದೀನ್ ಎಂಬ ಮುತ್ಸದ್ದಿ ರಾಜಕಾರಣಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಯಕ್ಷಗಾನದ ಮೂಲಕವೇ ರಾಜಕಾರಣಕ್ಕೆ ಬಂದ ಕುಂಬ್ಳೆ ಸುಂದರರಾವ್ ಸುರತ್ಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು. ಆಗ ಸುರತ್ಕಲ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬ ಹಿಂದೂ ವಿದ್ಯಾರ್ಥಿನಿಗೆ ಚುಡಾಯಿಸಿದನೆಂದು ವಿದ್ಯಾರ್ಥಿಗಳ ಮಧ್ಯೆ ಗಲಾಟೆ ಶುರುವಾಗಿತ್ತು. ಇದು ಕಾಲೇಜು ಆವರಣದಲ್ಲಿ ಇತ್ಯರ್ಥವಾಗಬೇಕಾದ ಹುಡುಗ-ಹುಡುಗಿಯರ ಕೋಳಿ ಜಗಳವಷ್ಟೆ! ಆದರೆ ಇದನ್ನೇ ಬಳಸಿಕೊಂಡ ಭಜರಂಗದಳವು ಮುಸ್ಲಿಮರ ಮೇಲೆ ಹಲ್ಲೆ ನಡೆಸಲು ಮುಂದಾಯಿತು. ಇಷ್ಟಕ್ಕೆ ಸುಮ್ಮನಾಗದ ಭಜರಂಗದಳವು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ವಾಹನಗಳ ಮೇಲೆ ಕಲ್ಲು ತೂರಾಟ, ಮುಸ್ಲಿಮರ ಮೇಲೆ ದಾಳಿಗಳನ್ನು ನಡೆಸಿತು. ಪೊಲೀಸರು ಗಲಾಟೆ ನಡೆಸಿದ ಹಿಂದುತ್ವವಾದಿಗಳ ಮೇಲೆ ಜಾಮೀನು ರಹಿತ ಸೆಕ್ಷನ್‌ಗಳಡಿಯಲ್ಲಿ ಎಫ್‌ಐಆರ್ ದಾಖಲಿಸಿ ಬಂಧಿಸಿದರು. ಹಿಂದುತ್ವವಾದಿಗಳ ಮೇಲೆ ಎಫ್‌ಐಆರ್ ಆಗಿದ್ದೇ ತಡ, ಬಿಜೆಪಿ ಶಾಸಕ ಕುಂಬ್ಳೆ ಸುಂದರರಾವ್ ಅವರು ಮೆರವಣಿಗೆ ನಡೆಸಿ ಸುರತ್ಕಲ್ ಠಾಣೆಗೆ ಮುತ್ತಿಗೆ ಹಾಕಿದರು. ಸಾವಿರಾರು ಹಿಂದುತ್ವವಾದಿಗಳು ಸುರತ್ಕಲ್ ಠಾಣೆ ಮೇಲೆ ದಾಳಿ ನಡೆಸಿದರು. ಕುಂಬ್ಳೆ ಸುಂದರರಾವ್ ಅವರೇ ಶಾಸಕರಾಗಿದ್ದುಕೊಂಡು ಪೊಲೀಸ್ ಠಾಣೆಯ ಜೀಪು ಹತ್ತಿ ಪ್ರಚೋದನಾತ್ಮಕ ಭಾಷಣ ಮಾಡಿದರು. ಹಿಂದುತ್ವವಾದಿಗಳ ಮೇಲೆ ಹಾಕಿರುವ ಜಾಮೀನು ರಹಿತ ಸೆಕ್ಷನ್‌ಗಳನ್ನು ರದ್ದುಗೊಳಿಸಿ `ಬೇಲೇಬಲ್’ ಸೆಕ್ಷನ್ ಹಾಕಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸದೇ ಠಾಣೆಯಲ್ಲೇ ಬಿಡುಗಡೆ ಮಾಡಬೇಕು ಎಂದು ಶಾಸಕ ಕುಂಬ್ಳೆ ಸುಂದರರಾವ್ ಒತ್ತಡ ಹಾಕಿದರು. ಪೊಲೀಸರು ವಿಧಿಯಿಲ್ಲದೇ ಗಲಭೆಕೋರರ ಮೇಲೆ ಹಾಕಿದ್ದ ಸೆಕ್ಷನ್ ಬದಲಿಸಿ ಠಾಣೆಯಲ್ಲೇ ಜಾಮೀನು ನೀಡಿ ಹೊರ ಕಳಿಸಿದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಇಡೀ ಸುರತ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಬೆಂಕಿ ಬೆಂಕಿ ಬೆಂಕಿ ಅಷ್ಟೆ. ಅಪಾರ ಆಸ್ತಿಪಾಸ್ತಿ ನಾಶವಾಯಿತು. ಕರ್ಫ್ಯೂ ವಿಧಿಸಲಾಯಿತು (ನಾನು ಆಗ ಹತ್ತನೇ ತರಗತಿಯ ವಿದ್ಯಾರ್ಥಿ. ಗಲಭೆಯ ದೃಶ್ಯಗಳು ಅಸ್ಪಷ್ಟವಾಗಿ ನೆನಪಿದೆ).

ಈ ಎರಡು ಕೋಮುಗಲಭೆಗಳು ಕರಾವಳಿಯಲ್ಲಿ ಹಿಂದುತ್ವ ನಾಯಕ ಸತ್ಯಜಿತ್ ಸುರತ್ಕಲ್‌ರನ್ನು ಬೆಳೆಸಿದವು. ಎರಡೂ ಕೋಮುಗಲಭೆಯಲ್ಲಿ ಸತ್ಯಜಿತ್ ಸುರತ್ಕಲ್ ವಿರುದ್ಧ 50ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾದವು.

satyajit suratkal
ಸತ್ಯಜಿತ್ ಸುರತ್ಕಲ್

1999ರ ಕೋಮುಗಲಭೆಯವರೆಗೆ ಕರಾವಳಿಯ ಮೊಗವೀರ ಸಮುದಾಯದ ಯುವಕರು ಕೋಮುಗಲಭೆಗಳಲ್ಲಿ ಸಕ್ರಿಯರಾಗಿದ್ದರು. ಆದರೆ ಕಡಲಿನಲ್ಲಿ ಮೀನು ಹಿಡಿದು ದಕ್ಕೆಯಲ್ಲಿ ಹರಾಜು ಹಾಕಿ, ಮೀನುಗಳನ್ನು ಮನೆಮನೆಗೆ ಗ್ರಾಹಕರಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ಮೊಗವೀರರು ಮತ್ತು ಮುಸ್ಲಿಮರ ಒಗ್ಗಟ್ಟಿನ ಶ್ರಮವಿತ್ತು. ಅದಲ್ಲದೇ, ಕರಾವಳಿಯ ಮೀನು ಗ್ರಾಹಕರ ದೊಡ್ಡ ಸಂಖ್ಯೆಯೇ ಮುಸ್ಲಿಮರದ್ದು! ಕೋಮುಗಲಭೆಗಳು ನಮ್ಮ ಅನ್ನಕ್ಕೆ ಕಲ್ಲು ಹಾಕುತ್ತದೆ ಎಂದು ಅರಿಯಲು ಮೊಗವೀರರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. 1999ರ ಕೋಮುಗಲಭೆಯ ಬಳಿಕ ನಡೆದ ಗಲಭೆಗಳಲ್ಲಿ ಮೊಗವೀರರ ಭಾಗವಹಿಸುವಿಕೆಯ ಸಂಖ್ಯೆ ಬಹಳ ನಗಣ್ಯವಾಯಿತು. ಆದರೆ ಬಿಲ್ಲವರು ಮಾತ್ರ ಕೋಮುವಾದಕ್ಕಾಗಿ ಕೊಲ್ಲುವವರೂ, ಕೊಲ್ಲಲ್ಪಡುವವರೂ ಆದರು.

ಹಿಂದುತ್ವ ರಾಜಕಾರಣದ ಮೊದಲ ಗುರಿ ಮುಸ್ಲಿಮರು ಎಂದು ಮೇಲ್ನೋಟಕ್ಕೆ ಭಾಸವಾಗುವಂತಿದ್ದರೂ ನಿಜವಾಗಿ ಹಿಂದುತ್ವದ ಮೊದಲ ಗುರಿ ಬಿಲ್ಲವ ಸೇರಿದಂತೆ ಹಿಂದೂ ಸಮುದಾಯದ ಹಿಂದುಳಿದ ವರ್ಗಗಳು. ಬಿಲ್ಲವ ಸೇರಿದಂತೆ ಹಿಂದುಳಿದ ವರ್ಗಗಳನ್ನು ಕಾಲಾಳುಗಳನ್ನಾಗಿ ಬಳಸಿಕೊಂಡು ಮುಸ್ಲಿಂ, ಕ್ರಿಶ್ಚಿಯನ್ನರ ವಿರುದ್ಧ ಕೊಲ್ಲು ಮತ್ತು ಕೊಲ್ಲಲ್ಪಡು ಎಂಬ ಸೂತ್ರದಂತೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಹಿಂದುತ್ವ ಶಕ್ತಿಗಳು ನಡೆಸುವ ಕೋಮುಗಲಭೆಗಳಲ್ಲಿ ಕೊಲ್ಲುವವರು ಮತ್ತು ಕೊಲ್ಲಲ್ಪಡುವವರು ಬಿಲ್ಲವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದುತ್ವ ನಾಯಕರಿಗೆ ಹಿಂದುಳಿದ ವರ್ಗಗಳೆಂದರೆ ಒಂದು ರೀತಿಯಲ್ಲಿ ಮೇಲ್ವರ್ಗದ ಕೈಯ್ಯಲ್ಲಿರುವ ಅಂಕದ ಕೋಳಿಯಂತೆ!

ಇದನ್ನೂ ಓದಿರಿ: ನಕಲಿ ಎನ್‌ಕೌಂಟರ್ ಪ್ರಕರಣಗಳು: ಕಾನೂನು ಹೇಳುವುದೇನು?

ಕರಾವಳಿಯ ಕೋಮುಗಲಭೆಯಲ್ಲಿ ಸತ್ತವರ ಪಟ್ಟಿ ನೋಡಿ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್‌ಪೂಜಾರಿ, ಹೇಮಂತ್, ಪ್ರವೀಣ್ ಪೂಜಾರಿ ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದಲ್ಲದೆ ಹರೀಶ್ ಭಂಡಾರಿ, ಸುಖಾನಂದ ಶೆಟ್ಟಿ, ಕೋಡಿಕೆರೆ ಶಿವರಾಜ್, ಪ್ರಕಾಶ್ ಕುಳಾಯಿ, ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್ ಹೀಗೆ ಸಾವಿಗೀಡಾದ ಬ್ರಾಹ್ಮಣೇತರ ವರ್ಗಗಳ ಯುವಕರ ಪಟ್ಟಿ ಸಿಗುತ್ತದೆ. ಸುಖಾನಂದ ಶೆಟ್ಟಿಯ ಶವಯಾತ್ರೆಯಲ್ಲಿ ಮತ್ತೆ ಪೊಲೀಸ್ ಶೂಟೌಟ್ ಆಗಿ ಇಬ್ಬರು ಬಿಲ್ಲವ ಯುವಕರು ನನ್ನೆದುರೇ ಪ್ರಾಣ ಕಳೆದುಕೊಂಡಿದ್ದರು. ಬಂಟ್ವಾಳದಲ್ಲಿ ಸಾವಿಗೀಡಾದ ಶರತ್ ಮಡಿವಾಳ ಕೂಡಾ ಅತ್ಯಂತ ಹಿಂದುಳಿದ ಅಗಸ ಸಮುದಾಯಕ್ಕೆ ಸೇರಿದವರು. ಶರತ್ ಮಡಿವಾಳ ಶವಯಾತ್ರೆಯ ಸಂದರ್ಭ ಮುಸ್ಲಿಂ ಯುವಕನಿಗೆ ಇರಿದ ಪ್ರಕರಣಗಳಲ್ಲಿ ಪೊಲೀಸರು ನಿತಿನ್ ಪೂಜಾರಿ, ಪ್ರಾಣೇಶ್ ಪೂಜಾರಿ ಹಾಗೂ ಕಿಶನ್ ಪೂಜಾರಿ ಮೊದಲಾದವರನ್ನು ಬಂಧಿಸಿದ್ದರು.

ಎಲ್ಲಾ ಕೋಮುಗಲಭೆ, ಆ ಬಳಿಕ ನಡೆಯುವ ಪ್ರತಿಕಾರಗಳಲ್ಲಿ ಬಿಲ್ಲವರು ಸೇರಿದಂತೆ ಹಿಂದುಳಿದ ವರ್ಗಗಳೇ ಕೊಲೆಗಾರರ ಪಟ್ಟಿಯಲ್ಲೂ, ಸಾವಿಗೀಡಾದವರ ಪಟ್ಟಿಯಲ್ಲೂ ಏಕಕಾಲದಲ್ಲಿ ಯಾಕಿರುತ್ತಾರೆ? ಯಾಕೆ ಬಂಟ ನಾಯಕರು ಈ ಎರಡೂ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುವುದಿಲ್ಲ? ಯಾಕೆ ಹಿಂದುತ್ವ ನಾಯಕತ್ವವನ್ನು ವಹಿಸಿಕೊಂಡ, ಹಿಂದುತ್ವದ ನೇರ ಲಾಭದಾರ ಸಮುದಾಯವಾಗಿರುವ ಬ್ರಾಹ್ಮಣರ ಹೆಸರುಗಳು ಈ ಪಟ್ಟಿಯಲ್ಲಿಲ್ಲ ಎಂಬುದನ್ನು ಯೋಚಿಸಿದರೆ ಉತ್ತರ ಸಿಗುತ್ತದೆ.

ಮಂಗಳೂರಿನ ಪಡೀಲ್‌ನಲ್ಲಿ ನಡೆದ ಹೋಂಸ್ಟೇ ಅಟ್ಯಾಕ್‌ನಲ್ಲಿ ಹಿಂದೂ ಜಾಗರಣಾ ವೇದಿಕೆಯ 43 ಯುವಕರನ್ನು ಬಂಧಿಸಲಾಯ್ತು. ಅದರಲ್ಲಿ ಎಷ್ಟು ಬಂಟರು? ಎಷ್ಟು ಬ್ರಾಹ್ಮಣರಿದ್ದರು ಎಂಬುದನ್ನು ಲೆಕ್ಕ ಹಾಕಿಕೊಳ್ಳಿ. ಕೇವಲ ಇಬ್ಬರು ಬಂಟರು ಮತ್ತು ದೊಡ್ಡ 0 ಸಂಖ್ಯೆಯ ಬ್ರಾಹ್ಮಣರು. 43 ಆರೋಪಿಗಳ ಪೈಕಿ 39 ಯುವಕರು ಬಿಲ್ಲವರಾಗಿದ್ದರು. ಅದಕ್ಕೂ ಮೊದಲು ಅಮ್ನೇಶಿಯಾ ಪಬ್ ದಾಳಿ ಪ್ರಕರಣ ನಡೆಯಿತು. ಅಮ್ನೇಶಿಯಾ ಪಬ್ ಅಟ್ಯಾಕ್ ಪ್ರಕರಣದಲ್ಲಿ 30 ಶ್ರೀರಾಮ ಸೇನೆಯ ಯುವಕರನ್ನು ಬಂಧಿಸಲಾಗುತ್ತದೆ. ಆ ಪಟ್ಟಿಯಲ್ಲೂ ಮೂವರು ಬಂಟರು ಮತ್ತು 28 ಜನ ಬಿಲ್ಲವರು. ಸಂಪತ್ ಪೂಜಾರಿ, ಸುರೇಶ್ ಪೂಜಾರಿ, ಮಿಥುನ್ ಪೂಜಾರಿ, ರಮೇಶ್ ಕೋಟ್ಯಾನ್ ಎಂದು ಆರೋಪಿಗಳ ಪಟ್ಟಿಯಲ್ಲಿ ಹೆಸರು ಕಣ್ಣಿಗೆ ರಾಚುತ್ತದೆ.

ಸೆಪ್ಟೆಂಬರ್ 14, 2008ರಂದು ಭಜರಂಗದಳದ ಕಾರ್ಯಕರ್ತರು ಮಂಗಳೂರಿನಲ್ಲಿ ಚರ್ಚುಗಳ ಮೇಲೆ ದಾಳಿ ನಡೆಸಿದರು. ಈ ಕುಕೃತ್ಯದ ಬಗ್ಗೆ ಸೆಪ್ಟೆಂಬರ್ 15ರಂದು ಭಜರಂಗದಳದ ಅಂದಿನ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹಾಗೂ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಂ.ಬಿ. ಪುರಾಣಿಕ್ ಪತ್ರಿಕಾಗೋಷ್ಠಿ ಕರೆದಿದ್ದರು. ಅಲ್ಲಿ ಅವರಿಬ್ಬರೂ “ಚರ್ಚ್ ದಾಳಿಯನ್ನು ಮಾಡಲು ನಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದು ನಾವೇ. ಚರ್ಚ್‌ಗಳಲ್ಲಿ ಮತಾಂತರ ನಡೆಯುತ್ತಿದ್ದರಿಂದ ದಾಳಿ ಮಾಡಬೇಕಾಯಿತು’’ ಎಂದಿದ್ದರು. ಮರುದಿನ ಪೊಲೀಸರು ಭಜರಂಗದಳದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದರು. ಆದರೆ ಪತ್ರಿಕಾಗೋಷ್ಟಿಯಲ್ಲಿ ಮಹೇಂದ್ರ ಕುಮಾರ್ ಅವರ ಪಕ್ಕದಲ್ಲೇ ಇದ್ದ, ಭಜರಂಗದಳದ ಮಾತೃ ಸಂಘಟನೆಯಾಗಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಎಂ.ಬಿ. ಪುರಾಣಿಕ್ ವಿರುದ್ಧ ಕೇಸೂ ದಾಖಲಾಗಲಿಲ್ಲ, ಬಂಧನವೂ ಆಗಲಿಲ್ಲ. ಇಬ್ಬರೂ ಒಂದೇ ವೇದಿಕೆಯಲ್ಲಿ, ಒಂದೇ ಕೃತ್ಯಕ್ಕೆ ಸಂಬಂಧಿಸಿ ಒಂದೇ ರೀತಿಯ ಹೇಳಿಕೆ ನೀಡಿದ್ದರು. ದಾಳಿಯಲ್ಲಿ ಇಬ್ಬರ ಪಾತ್ರವೂ ಒಂದೇ ಆಗಿತ್ತು. ಆದರೆ ಪ್ರಕರಣದಲ್ಲಿ ಬಂಧನವಾಗಿದ್ದು, ಫಿಕ್ಸ್ ಆಗಿದ್ದು ಹಿಂದುಳಿದ ವರ್ಗಕ್ಕೆ ಸೇರಿದ ಮಹೇಂದ್ರ ಕುಮಾರ್ ಮಾತ್ರ. ಎಂ.ಬಿ. ಪುರಾಣಿಕ್ ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆರ್‌ಎಸ್‌ಎಸ್ ಮುಖಂಡನ ಮೇಲೆ ಕೇಸು ದಾಖಲಾಗಲೇ ಇಲ್ಲ.

ಇದನ್ನೂ ಓದಿರಿ: ಕಳೆದ 50 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ‘ಪ್ರಗತಿಪರ ಚಿಂತನೆ’ ಎಡವಿದ್ದೆಲ್ಲಿ? (ಭಾಗ- 1)

ಕೋಮುಗಲಭೆ ಹಾಗೂ ನೈತಿಕ ಪೊಲೀಸುಗಿರಿಯಂತಹ ಪ್ರಕರಣಗಳಲ್ಲಿ ಮತ್ತು ಅವುಗಳ ವಿಚಾರಣೆಗಳಲ್ಲಿ ಗೋಚರಿಸುವ ಜಾತಿ ಸಮೀಕರಣದ ನೆರಳು ಪಬ್ ದಾಳಿ (2009) ಮತ್ತು ಹೋಂ ಸ್ಟೇ ದಾಳಿ (2012) ಪ್ರಕರಣಗಳಲ್ಲಿ ಇನ್ನಷ್ಟು ಸ್ಪಷ್ಟವಾಗಿ ಗೋಚರವಾಗುತ್ತದೆ.

ಜನವರಿ 24, 2009ರಂದು ಮಂಗಳೂರಿನಲ್ಲಿ ಪಬ್ ದಾಳಿ ನಡೆಯಿತು. ಅಂಬೇಡ್ಕರ್ ಸರ್ಕಲ್‌ನಿಂದ ಹಂಪನಕಟ್ಟೆಗೆ ಹೋಗುವ ರಸ್ತೆಯಲ್ಲಿರುವ ಅಮ್ನೇಶಿಯಾ ಪಬ್‌ನಲ್ಲಿ ಹುಡುಗ ಹುಡುಗಿಯರು ಕುಣಿತ-ಕುಡಿತದಲ್ಲಿ ತೊಡಗಿಕೊಂಡು ಭಾರತೀಯ ಸಂಸ್ಕೃತಿಗೆ ಅಪಚಾರ ಎಸಗುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ದಾಳಿ ನಡೆಸಿತು. ಅಂದು ಪಬ್ ಒಳಗೆ ನುಗ್ಗಿ ದಾಳಿ ನಡೆಸಿದ್ದು ಶ್ರೀರಾಮ ಸೇನೆಯ ಕಾರ್ಯಕರ್ತರು. ಆದರೆ ಘಟನೆಯ ನಂತರದಲ್ಲಿ ಪೋಲೀಸರು ದಾಳಿ ನಡೆಸಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಮಾತ್ರವಲ್ಲದೇ ದಾಳಿಯಲ್ಲಿ ನೇರವಾಗಿ ಭಾಗಿಯಾಗದೆ, ಆದರೆ ದಾಳಿ ನಡೆಸುವಂತೆ ಸೂಚಿಸಿದ್ದ, ಪ್ರಚೋದಿಸಿದ್ದ ಶ್ರೀರಾಮ ಸೇನೆಯ ಅಂದಿನ ಅಧ್ಯಕ್ಷನಾಗಿದ್ದ, ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪ್ರಸಾದ್ ಅತ್ತಾವರನನ್ನು ಕೂಡಾ ಬಂಧಿಸಿದ್ದರು.

ಜುಲೈ 28, 2012ರಂದು ಪಬ್ ಅಟ್ಯಾಕ್ ಮಾದರಿಯಲ್ಲೇ ಹಿಂದೂ ಜಾಗರಣಾ ವೇದಿಕೆಯು ಹೋಂ ಸ್ಟೇ ದಾಳಿ ನಡೆಸಿತು. ಮಾರ್ನಿಂಗ್ ಮಿಸ್ಟ್ ಎಂಬ ಹೋಂ ಸ್ಟೇಯಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಅಮಾನವೀಯ ದಾಳಿ ಅದಾಗಿತ್ತು. ಪಬ್ ಅಟ್ಯಾಕ್ ಮಾಡಿದಾಗ ಶ್ರೀರಾಮ ಸೇನೆಯಲ್ಲಿದ್ದ ಕಾರ್ಯಕರ್ತರೇ ಅಲ್ಲಿಂದ ಸಿಡಿದು ಬಂದು ಹಿಂದೂ ಜಾಗರಣಾ ವೇದಿಕೆ ಸೇರಿದ್ದರು. ಬಹುಪಾಲು ಪಬ್ ಮೇಲೆ ನಡೆದ ದಾಳಿಯಲ್ಲೂ ಭಾಗಿಯಾಗಿದ್ದರು. ದಾಳಿ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಮಾಧ್ಯಮಗಳ ದೃಶ್ಯಾವಳಿಯನ್ನು ಆಧರಿಸಿ ದಾಳಿಕೋರ ಹಿಂದೂ ಜಾಗರಣಾ ವೇದಿಕೆಯ ಸದಸ್ಯರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ರಾಜ್ಯಾಧ್ಯಕ್ಷ ಜಗದೀಶ ಕಾರಂತ ಪತ್ರಿಕಾಗೋಷ್ಠಿಯನ್ನು ಮಾಡಿ, ದಾಳಿಯನ್ನು ಸಮರ್ಥಿಸಿದ್ದಲ್ಲದೇ ಹಿಂದೂ ಜಾಗರಣಾ ವೇದಿಕೆಯೇ ದಾಳಿಯನ್ನು ಸಂಘಟಿಸಿತ್ತು ಎಂದು ಹೇಳಿಕೆ ನೀಡಿದ್ದರು. ಆದರೆ ಪಬ್ ದಾಳಿ ಸಂದರ್ಭದಲ್ಲಿ ಆ ದಾಳಿಗೆ ಪ್ರಚೋದನೆ ನೀಡಿದ್ದ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪ್ರಸಾದ್ ಅತ್ತಾವರ ಬಂಧಿಸಲ್ಪಟ್ಟಂತೆ ಹೋಂ ಸ್ಟೇ ದಾಳಿಯ ಹಿನ್ನಲೆಯಲ್ಲಿದ್ದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜಗದೀಶ ಕಾರಂತ್ ಪೊಲೀಸ್ ಬಂಧನಕ್ಕೆ ಒಳಗಾಗಲೇ ಇಲ್ಲ; ಅವರ ಮೇಲೆ ಕನಿಷ್ಠ ಕೇಸು ಕೂಡಾ ದಾಖಲಾಗಿಲ್ಲ.

ಶರತ್ ಮಡಿವಾಳ ಶವ ಮೆರವಣಿಗೆಯ ಅಹಿತಕರ ಘಟನೆಯಲ್ಲೂ ಹೀಗೇ ಆಯಿತು. ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜಿತ್ ಸುರತ್ಕಲ್ ಅವರು ಹಿಂದೊಮ್ಮೆ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಸಂಚಾಲಕರಾಗಿ ಕೆಲಸ ಮಾಡಿದವರು. ಹಾಗೆಯೇ ಕೊಟ್ಟಾರಿ ಎಂಬ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ಶರಣ್ ಪಂಪ್‌ವೆಲ್ ಭಜರಂಗದಳದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದವರು. ಸದ್ಯ ಶರಣ್ ಪಂಪ್‌ವೆಲ್ ವಿಶ್ವ ಹಿಂದೂ ಪರಿಷತ್‌ನಲ್ಲಿ ಇದ್ದಾರೆ. ಇವರಿಬ್ಬರೂ ಶವ ಮೆರವಣಿಗೆಯ ವೇಳೆ ಕಲ್ಲು ತೂರಾಟ ಮಾಡಲು ಪ್ರಚೋದಿಸಿದ್ದರು ಎಂದು ಕೇಸು ದಾಖಲಾಗಿತ್ತು. ಇದೇ ಪ್ರಕರಣದಡಿಯಲ್ಲಿ ಶವ ಮೆರವಣಿಗೆ ಆಯೋಜಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಯಾವ ಪ್ರಕರಣವೂ ದಾಖಲಾಗಿಲ್ಲ. ಇಡೀ ಕೋಮುಗಲಭೆಗೆ ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪ್‌ವೆಲ್ ಹಾಗೂ ಸತ್ಯಜಿತ್ ಸುರತ್ಕಲ್- ಮೂವರೂ ಸಮಾನ ಜವಾಬ್ದಾರರಾಗಿದ್ದಾರೆ. ಮೂವರೂ ಒಂದೇ ರೀತಿಯ ಕೃತ್ಯಗಳನ್ನು ನಡೆಸಿದ್ದಾರೆ. ಆದರೆ ಪ್ರಕರಣ ದಾಖಲಾಗಿರುವುದು ಹಿಂದುಳಿದ ಸಮುದಾಯದಿಂದ ಬಂದ ಆರ್.ಎಸ್.ಎಸ್ ಮುಖಂಡರ ಮೇಲೆ ಮಾತ್ರವೇ.

ಇಡೀ ದಕ್ಷಿಣ ಕನ್ನಡ ಮಾತ್ರವಲ್ಲದೇ, ಕರ್ನಾಟಕದ ಮತೀಯವಾದಿ ರಕ್ತ ಚರಿತೆಯಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಾರ್ಯಕರ್ತನಾಗಲೀ, ನಾಯಕನಾಗಲೀ ಜೈಲು ಸೇರಿಲ್ಲ ಅಥವಾ ಹಿಂದುತ್ವಕ್ಕಾಗಿ ಪ್ರಾಣ ಕಳೆದುಕೊಂಡಿಲ್ಲ ಎಂಬುದು ಬಹಳ ಮುಖ್ಯವಾಗುತ್ತದೆ. ಹಿಂದುಳಿದ ವರ್ಗದಿಂದ ಬಂದ ಆರ್.ಎಸ್.ಎಸ್ ಮುಖಂಡರು ಮತ್ತು ಕಾರ್ಯಕರ್ತರು ಒಂದೋ ಕೊಲೆ ಮಾಡಿ ಜೈಲು ಸೇರಬೇಕು ಅಥವಾ ಕೊಲೆಯಾಗಬೇಕು ಎಂಬ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯನ್ನು ಯಾಕೆ ಆರ್‌ಎಸ್‌ಎಸ್ ಸೃಷ್ಟಿಸಿದೆ ಎಂಬುದನ್ನು ಹಿಂದುಳಿದ ವರ್ಗ ಮತ್ತು ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು.

ಇದನ್ನೂ ಓದಿರಿ: ಕಳೆದ 50 ವರ್ಷಗಳ ಕರ್ನಾಟಕ ರಾಜಕಾರಣದಲ್ಲಿ ‘ಪ್ರಗತಿಪರ ಚಿಂತನೆ’ ಎಡವಿದ್ದೆಲ್ಲಿ? (ಭಾಗ- 2)

`ಕರ್ನಾಟಕ’ವಾಗಿ ಈಗ ಐವತ್ತು ತುಂಬಿದೆ. ಹೆಸರಿನಲ್ಲೇನಿದೆ ಎಂದು ಕೇಳಬಹುದು. ನಾವು ಯಾಕೆ ಮೈಸೂರು ರಾಜ್ಯವನ್ನು ಕಳಚಿಕೊಂಡು ಕರ್ನಾಟಕವೆಂದು ಹೆಸರು ಬದಲಿಸಿಕೊಂಡೆವು ಎಂಬ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಗಳನ್ನು ಗಮನಿಸಬೇಕು. ಅದರಲ್ಲಿ ಸರ್ವರಿಗೂ ಸಮಬಾಳಿನ ಆಶಯವಿತ್ತು. ಊಳಿಗಮಾನ್ಯ, ರಾಜಪ್ರಭುತ್ವದ ಎಲ್ಲ ಸಂಕೇತಗಳಿಂದ ಹೊರ ಬಂದು ಎಲ್ಲರಿಗೂ ಉದ್ಯೋಗ, ಸೂರು, ಭೂಮಿ, ಅನ್ನ ಸಿಗಬೇಕು ಎಂಬ ಪ್ರಾಮಾಣಿಕ ಆಶಯವಿತ್ತು. ಆ ಕಾರಣಕ್ಕಾಗಿಯೇ ಕರ್ನಾಟಕ ಎಂಬ ಹೆಸರು ಬದಲಿಸಿದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು, ಇಂದಿರಾ ಗಾಂಧಿ ಮತ್ತು ಕಮ್ಯುನಿಸ್ಟ್- ಸಮಾಜವಾದಿಗಳ ಕನಸಿನ `ಉಳುವವನೇ ಹೊಲದೊಡೆಯ’ ಕಾನೂನನ್ನು ಜಾರಿಗೆ ತಂದರು. ಹಿಂದುಳಿದ ವರ್ಗಗಳು ಭೂಮಿ ಪಡೆದು, ಶಿಕ್ಷಣ ಪಡೆದು ಉನ್ನತಿ ಹೊಂದಲು ಮೆಟ್ಟಿಲುಗಳನ್ನು ಹತ್ತಬೇಕಾದ ಕಾಲದಲ್ಲೇ ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ವೈಷಮ್ಯಗಳನ್ನು ಬೆಳೆಸಲಾಯಿತು. ಕೋಮುಗಲಭೆಗಳಲ್ಲಿ ನಿರತರಾಗಿರುವಂತೆ ನೋಡಿಕೊಳ್ಳಲಾಯಿತು. ಹಾಗಾಗಿಯೇ ಇಂದು ಭೂಮಿ ಪಡೆದುಕೊಂಡ ಹಿಂದುಳಿದ ವರ್ಗಗಳ ಸಾಮಾಜಿಕ ಸ್ಥಿತಿ ಏನಾಗಿದೆ? ಭೂಮಿ ಕಳೆದುಕೊಂಡ ಬಳಿಕವೂ ಕೋಮುರಾಜಕಾರಣ ಮಾಡಿಕೊಂಡು ಹಿಂದುಳಿದ ವರ್ಗಗಳನ್ನು ತುಳಿದ ಮೇಲ್ವರ್ಗಗಳ ಸಾಮಾಜಿಕ ಸ್ಥಿತಿಗತಿ ಏನಿದೆ ಎಂಬುದನ್ನು ನಾವು ವಿಮರ್ಶೆಗೆ ಒಳಪಡಿಸಬೇಕಿದೆ. ಇಲ್ಲದೇ ಇದ್ದರೆ ಮುಸ್ಲಿಮರನ್ನು ನಾಶ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿರುವ ಆರ್‌ಎಸ್‌ಎಸ್‌ನ ಹಿಂದುಳಿದ ವರ್ಗವು ಕೋಮುರಾಜಕಾರಣದ ರಕ್ತ ಚರಿತೆಯಲ್ಲಿ ಕಳೆದು ಹೋಗುತ್ತದೆ ಎಂಬುದಂತೂ ಸತ್ಯ!

Naveen suringe
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...