‘ಪಾಕಿಸ್ತಾನ ಅಥವಾ ಭಾರತದ ವಿಭಜನೆ’ (Pakistan or Partition of India) ಬಾಬಾಸಾಹೇಬ್ ಡಾ. ಅಂಬೇಡ್ಕರ್ ಬರೆದಿರುವ ಅತ್ಯಂತ ಮಹತ್ವದ ಪುಸ್ತಕಗಳಲ್ಲಿ ಒಂದು. ಇದರಲ್ಲಿ ಬಹುವಿವಾದಿತ ಭಾರತದ ವಿಭಜನೆಯ ಕುರಿತಾಗಿ ಅಂಬೇಡ್ಕರ್ ಅವರು ಅಧ್ಯಯನ ಪೂರ್ಣವಾಗಿ ಮಂಡಿಸಿದ ವಿಚಾರಗಳಿವೆ. ಜತೆಗೆ ಆ ಕಾಲದ ಸಾಮಾಜಿಕ ಮತ್ತು ಮತೀಯ ಸಂಬಂಧಗಳ ಕುರಿತಾದ ಸೂಕ್ಷ್ಮ ವಿಶ್ಲೇಷಣೆ ಇದೆ. ಮೂಲತಃ ಈ ಪುಸ್ತಕ ಒಂದು ವರದಿಯ ರೂಪದಲ್ಲಿತ್ತು. ಮುಸ್ಲಿಂ ಲೀಗ್ 1940ರ ತನ್ನ ಲಾಹೋರ್ ಗೊತ್ತುವಳಿಯಲ್ಲಿ ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ಆಗಲೇಬೇಕು ಎನ್ನುವ ಠರಾವನ್ನು ಅಂಗೀಕರಿಸುತ್ತದೆ. ಮುಸ್ಲಿಂ ಲೀಗ್‌ನ ಈ ಬೇಡಿಕೆಯ ಬಗ್ಗೆ ತನ್ನ ನಿಲುವೇನಿರಬೇಕೆಂದು ನಿರ್ಣಯಿಸಲು ಆಗಿನ ಐ.ಎಲ್.ಪಿ. (ಸ್ವತಂತ್ರ ಲೇಬರ್ ಪಕ್ಷ) ಸಮಿತಿಯೊಂದನ್ನು ನೇಮಿಸಿ ಆ ಸಮಿತಿಗೆ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುತ್ತದೆ. ಸಮಿತಿಯ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡ ಅಂಬೇಡ್ಕರ್ ಪ್ರತ್ಯೇಕ ಪಾಕಿಸ್ತಾನ ಬೇಡಿಕೆಯ ಹಿನ್ನೆಲೆಯನ್ನು, ಅದರ ಸಾಧಕ ಭಾದಕಗಳನ್ನು ವಿದ್ವತ್ ಪೂರ್ಣವಾಗಿ ಅಧ್ಯಯನ ಮಾಡಿ ನೀಡಿದ ವರದಿ ಇಂದು 486 ಪುಟಗಳ ಈ ಪುಸ್ತಕದ ರೂಪದಲ್ಲಿ ನಮ್ಮ ಮುಂದಿದೆ. ಡಿಸೆಂಬರ್ 1940ರಲ್ಲಿ ಥಾಕರೆ&ಕಂ. ಈ ಪುಸ್ತಕದ ಮೊದಲ ಮುದ್ರಣ ಪ್ರಕಟಿಸಿತು. ಮತ್ತಷ್ಟು ಅಧಿಕೃತ ಮಾಹಿತಿಗಳೊಂದಿಗೆ ಫೆಬ್ರವರಿ 1945ರಲ್ಲಿ ಎರಡನೆ ಮುದ್ರಣ, 1946ರಲ್ಲಿ ಮೂರನೆ ಮುದ್ರಣ ಪ್ರಕಟವಾಯಿತು. 1990ರಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿದ ಅಂಬೇಡ್ಕರ್ ಬರೆಹ ಮತ್ತು ಭಾಷಣಗಳ ಸಂಪುಟ 8ರಲ್ಲಿ ಈ ಪುಸ್ತಕವನ್ನು ಸೇರಿಸಿಕೊಳ್ಳಲಾಗಿದೆ. ಬಾಬಾಸಾಹೇಬರು ಈ ಪುಸ್ತಕವನ್ನು ತಮ್ಮ ಪತ್ನಿ ರಮಾಬಾಯಿಯವರಿಗೆ ‘ರಾಮು ನೆನಪಿನಲ್ಲಿʼ ಎಂದು ಪ್ರೀತಿಯಿಂದ ಅರ್ಪಿಸಿದ್ದಾರೆ.
ಎರಡನೆ ಮುದ್ರಣದ ಮುನ್ನುಡಿಯಲ್ಲಿ ಅಂಬೇಡ್ಕರ್ ‘ಮಿ.ಗಾಂಧಿ, ಮಿ.ಜಿನ್ನಾ ಸಂಬಂಧಿತ ವಿಷಯದ ಕುರಿತು ಸಮಾಲೋಚನೆ ನಡೆಸಲು ಈ ಪುಸ್ತಕ ಅಧಿಕೃತ ದಾಖಲೆಯಾಗಿದೆ ಎಂದು ಹೇಳಿರುವುದು ಇದರ ಮಹತ್ವವನ್ನು ಸಾರುತ್ತದೆʼ ಎಂದು ಬರೆಯುತ್ತಾರೆ. ಜನಪ್ರಿಯತೆಯ ಪ್ರಚಾರಕ್ಕಿಂತಲೂ ‘ವ್ಯಕ್ತಿತ್ವದ ನೈತಿಕತೆʼ ಮುಖ್ಯ ಎಂದು ನಂಬಿದ್ದ ಅಂಬೇಡ್ಕರ್ ಎಂತಹ ಸಂದರ್ಭದಲ್ಲಿಯೂ ಕಹಿಸತ್ಯವನ್ನು ಹೇಳಲು ಹಿಂಜರಿಯಲಿಲ್ಲ. ದೇಶ ವಿಭಜನೆಗೆ ಏಳು ವರ್ಷಗಳ ಮುಂಚಿನ ಸಮಾಜೋ-ರಾಜಕೀಯ ಪರಿಸ್ಥಿತಿಯನ್ನು ಅರಿತುಕೊಳ್ಳಲು ಈ ಪುಸ್ತಕ ಪ್ರಮುಖ ಆಕರವಾಗಿದೆ. ಇತಿಹಾಸವನ್ನು ಓದುವಾಗ ಸತ್ಯಶೋಧನೆ ಮತ್ತು ವಸ್ತುನಿಷ್ಠತೆ ನಮ್ಮ ಆಯ್ಕೆಯಾಗಿರಬೇಕು ಎನ್ನುವ ತಿಳಿವಳಿಕೆಯನ್ನು ಈ ಪುಸ್ತಕ ನಿರೀಕ್ಷಿಸುತ್ತದೆ. ಆದರೆ ಈ ಎರಡೂ ಗುಣಗಳು ಸಂಘ ಪರಿವಾರಕ್ಕೆ ವಿರುದ್ಧವಾಗಿರುವುದರಿಂದ ಅವರು ಈ ಪುಸ್ತಕದ ಬಿಡಿ ಬಿಡಿಯಾದ ಕೆಲ ಸಾಲುಗಳನ್ನು ಆಯ್ದು ತಮ್ಮ ಅನುಕೂಲಕ್ಕೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಸ್ಲಿಮರ ವಿರುದ್ಧ ಸಂಘಿಗಳ ಈ ಅಪಪ್ರಚಾರವನ್ನು ವಿರೋಧಿಸಬೇಕಿದೆ, ಅಂಬೇಡ್ಕರ್ ಚಿಂತನೆಯನ್ನು ತಮ್ಮ ಬ್ರಾಹ್ಮಣವಾದಿ ಮತಧರ್ಮಾಂಧ ಸಿದ್ಧಾಂತಕ್ಕೆ ತಿರುಚಿ ಬಳಸಿಕೊಳ್ಳುವುದನ್ನು ಪ್ರಜ್ಞಾವಂತರು ಬಹಿರಂಗಗೊಳಿಸಬೇಕಾಗಿದೆ. ಈ ಕಾರಣಕ್ಕಾಗಿಯೂ ‘ಪಾಕಿಸ್ತಾನ’ ಪುಸ್ತಕದ ಓದು ಮತ್ತು ವಿಶ್ಲೇಷಣೆ ಅಗತ್ಯವಾಗಿದೆ.
ದೇಶ ವಿಭಜನೆ ಪೂರ್ವದ ಘಟನೆಗಳನ್ನು ವಿಶ್ಲೇಷಿಸುವ ಈ ಪುಸ್ತಕದಲ್ಲಿ ಪರಿಚಯವನ್ನು ಒಳಗೊಂಡಂತೆ ಐದು ಭಾಗಗಳಿವೆ
1. ಪಾಕಿಸ್ತಾನ ಪರ ಮುಸ್ಲಿಂ ಕೇಸ್
2. ಪಾಕಿಸ್ತಾನದ ವಿರುದ್ಧ ಹಿಂದೂ ಕೇಸ್
3. ಒಂದು ವೇಳೆ ಪಾಕಿಸ್ತಾನ ಇಲ್ಲದಿದ್ದರೆ?
4. ಪಾಕಿಸ್ತಾನ ಮತ್ತು ಒಳಗುದಿ
5. ಪಾಕಿಸ್ತಾನ ಬೇಕೆ, ಪಾಕಿಸ್ತಾನದ ಸಮಸ್ಯೆಗಳು, ಯಾರು ನಿರ್ಧರಿಸುತ್ತಾರೆ: ಮೂರು ಅಧ್ಯಾಯಗಳನ್ನೊಳಗೊಂಡ ತೀರ್ಮಾನಗಳು ಮತ್ತು ಶಿಫಾರಸುಗಳು
‘ಎ ಪಾರ್ಟ್ ಅಪಾರ್ಟ್ʼ ಪುಸ್ತಕದ ಪುಟ 610ರಲ್ಲಿ ಲೇಖಕ ಅಶೋಕ್ ಗೋಪಾಲ್, ‘ತನ್ನ 1940ರ ಲಾಹೋರ್ ಗೊತ್ತುವಳಿಯಲ್ಲಿ ಮುಸ್ಲಿಂಲೀಗ್ ಪಕ್ಷವು ಯಾವುದೇ ಸಾಂವಿಧಾನಿಕ ಯೋಜನೆಯು ಮುಸ್ಲಿಮರಿಗೆ ಸಮ್ಮತಾರ್ಹವಲ್ಲ.. ಅಥವಾ ಸ್ವೀಕೃತವಲ್ಲʼ ಎಂದು ಉಲ್ಲೇಖಿಸಿದ್ದಾರೆ. ಈ ನಿರ್ಣಯದಲ್ಲಿ ಪಾಕಿಸ್ತಾನ ಎಂದು ಪ್ರಸ್ತಾಪಿಸದಿದ್ದರೂ ಪಾಕಿಸ್ತಾನ ಯೋಜನೆಯ ಪುನರ್ ಪರಿಶೀಲನೆ ಈ ಠರಾವಿನ ಉದ್ದೇಶವಾಗಿತ್ತು. 1930ರಲ್ಲಿ ಮಹಮ್ಮದ್ ಇಕ್ಬಾಲ್ ಈ ಯೋಜನೆಯನ್ನು ಪ್ರಸ್ತಾಪಿಸಿದರೆ ರೆಹಮತ್ ಅಲಿ ಪಂಜಾಬ್, ವಾಯುವ್ಯ ಗಡಿನಾಡು ಪ್ರದೇಶ, ಕಾಶ್ಮೀರ, ಸಿಂಧ್, ಬಲೂಚಿಸ್ತಾನ ಒಳಗೊಂಡ ಪ್ರದೇಶವನ್ನು ‘ಪಾಕಿಸ್ತಾನʼ ಎಂದು ಕರೆದರು. 1940ರ ಲಾಹೋರ್ ನಿಲುವಳಿಯಲ್ಲಿ ಬಂಗಾಳ ಮತ್ತು ಅಸ್ಸಾಂನ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳನ್ನು ಸೇರಿಸಿದರು ಎಂದು ಬರೆಯುತ್ತಾರೆ. ಪಾಕಿಸ್ತಾನದ ಕುರಿತು ಅಂಬೇಡ್ಕರ್ ಅವರ ನಿಲುವನ್ನು ಅರಿಯಲು ಇತಿಹಾಸದ ಈ ಮಾಹಿತಿ ಅವಶ್ಯಕವಾಗಿದೆ. ಯಾಕೆಂದರೆ ಇಂದಿನ ಭಾರತ-ಪಾಕಿಸ್ತಾನದ ಹಗೆತನದ ದಿನಗಳಲ್ಲಿ ಬಿಜೆಪಿ-ಆರ್‌ಎಸ್‌ಎಸ್ ಹರಡುತ್ತಿರುವ ಸುಳ್ಳುಗಳನ್ನು ಬಯಲುಗೊಳಿಸಲು 1940ರ ಕಾಲದ ಆಗಿನ ವಿದ್ಯಮಾನಗಳನ್ನು, ಬಿಕ್ಕಟ್ಟುಗಳನ್ನು ಆಗಿನ ಸಂದರ್ಭದ ಹಿನ್ನಲೆಯಲ್ಲಿ ಅಂಬೇಡ್ಕರ್ ದೃಷ್ಟಿಕೋನದ ಮೂಲಕ ಗ್ರಹಿಸಬೇಕಾಗುತ್ತದೆ.

ಇದನ್ನೂ ಓದಿರಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-1)
ತಮ್ಮ ಮುನ್ನುಡಿಯಲ್ಲಿ ಅಂಬೇಡ್ಕರ್ ‘ನನ್ನ ಪ್ರಕಾರ ಪಾಕಿಸ್ತಾನದ ಬೇಡಿಕೆಯು ಕಾಲ ಕಳೆದಂತೆ ಅಳಿಸಿಹೋಗುವ ರಾಜಕೀಯ ಬಣ್ಣ ಬಳಿದುಕೊಂಡಿಲ್ಲ.. ಪಾಕಿಸ್ತಾನದ ಬೇಡಿಕೆಯಿಂದ ನಾನು ಸ್ಥೈರ್ಯಗೆಡುತ್ತಿಲ್ಲ, ಕುಪಿತನಾಗುತ್ತಿಲ್ಲ, ಭಾರತದಲ್ಲಿ ಬಹುಸಂಖ್ಯಾತ ಮುಸ್ಲಿಮರ ಬೆಂಬಲವಿರುವ ಯಾವುದೇ ಯೋಜನೆಯನ್ನು ನಿರ್ಲಿಪ್ತತೆಯಿಂದ, ಎಲ್ಲಾ ದೃಷ್ಟಿಕೋನಗಳಿಂದ ಅಧ್ಯಯನ ಮಾಡಬೇಕು ಮತ್ತು ಇದರ ಒಳಾರ್ಥವನ್ನು ಬೌದ್ಧಿಕ ತಿಳಿವಳಿಕೆಯಿಂದ ತೀರ್ಮಾನಿಸಬೇಕು.. ಪಾಕಿಸ್ತಾನ ಯೋಜನೆಯನ್ನು ಪರಿಗಣಿಸಬೇಕು.. ಇದರಿಂದ ಬಿಡುಗಡೆ ಇಲ್ಲ… ನನ್ನ ಮನಸ್ಸಿನಲ್ಲಿ ಬರುವ ಮೊದಲ ವಿಚಾರವೆಂದರೆ ಹಿಂದೂ-ಮುಸ್ಲಿಮರು ಈ ಪ್ರಶ್ನೆ ಕುರಿತು ನಿರ್ಧರಿಸಬೇಕು.. ಬ್ರಿಟಿಷರು ತಮ್ಮ ಸೇನೆಯನ್ನು ಬಳಸಿಕೊಂಡು ಪಾಕಿಸ್ತಾನದ ಬೇಡಿಕೆಯನ್ನು ಹತ್ತಿಕ್ಕುತ್ತಾರೆ ಎಂದು ಹಿಂದೂಗಳು ಭಾವಿಸಿದರೆ ಅದು ಸಾಧ್ಯವಿಲ್ಲ. ಪಾಕಿಸ್ತಾನದ ಬೇಡಿಕೆಯನ್ನು ವಿರೋಧಿಸಲು ಬಲವಂತದ ಪ್ರಯೋಗವು ಪರ್ಯಾಯವಲ್ಲ. ಸ್ವಯಂ ನಿರ್ಣಯ ತೆಗೆದುಕೊಳ್ಳುವುದರಿಂದ ಮುಸ್ಲಿಮರನ್ನು ವಂಚಿತಗೊಳಿಸಬಾರದು.. ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಸ್ವಯಂ ನಿರ್ಣಯವನ್ನು ಪ್ರತಿಪಾದಿಸುವ ರಾಷ್ಟ್ರೀಯವಾದಿಗಳು ಅಲ್ಪಸಂಖ್ಯಾತರಿಗೂ ಇದೇ ಮಾನದಂಡ ಅನ್ವಯಿಸಬೇಕು. ಬ್ರಿಟಿಷರು ಬಲವಂತದಿಂದ ಪಾಕಿಸ್ತಾನ ಬೇಡಿಕೆಯನ್ನು ಹತ್ತಿಕ್ಕುತ್ತಾರೆ ಎಂದು ನಂಬುವ ರಾಷ್ಟ್ರೀಯವಾದಿಗಳು ಸಾಮ್ರಾಜ್ಯಶಾಹಿಯಿಂದ ಸ್ವಾತಂತ್ರ್ಯ ಪಡೆದುಕೊಳ್ಳುವುದು ರಾಷ್ಟ್ರೀಯತೆಯ ಹಕ್ಕು ಎಂದು ಹೇಗೆ ಭಾವಿಸುತ್ತಾರೋ ಹಾಗೆಯೇ ಅಲ್ಪಸಂಖ್ಯಾತರೂ ತೀವ್ರವಾದಿ ಬಹುಸಂಖ್ಯಾತ ರಾಷ್ಟ್ರೀಯವಾದದಿಂದ ಸ್ವಾತಂತ್ರ್ಯ ಬಯಸುತ್ತಾರೆ ಎನ್ನುವುದನ್ನು ಮರೆಯುತ್ತಾರೆ. ಇವೆರಡೂ ಬೇರೆ ಬೇರೆ ಸಂಗತಿಗಳಲ್ಲʼ ಎಂದು ದೀರ್ಘವಾಗಿ ಬರೆಯುತ್ತಾರೆ.
ಭಾಗ 1 – ‘ಪಾಕಿಸ್ತಾನದ ಪರ ಮುಸ್ಲಿಮರ ಕೇಸ್ʼ ಶೀರ್ಷಿಕೆಯಲ್ಲಿನ ಅಧ್ಯಾಯ 2 `ಮನೆಗಾಗಿ ಬಯಸುತ್ತಿರುವ ದೇಶ (ನೇಶನ್ ಕಾಲಿಂಗ್ ಫಾರ್ ಹೋಮ್) ಮತ್ತು ಅಧ್ಯಾಯ 3 ‘ಅಗೌರವದಿಂದ ಬಿಡುಗಡೆʼ ಬರಹಗಳಲ್ಲಿ ದೇಶ ಕಟ್ಟುವುದರ ಕುರಿತು ಮಾತನಾಡುತ್ತಾ ಕಾಂಗ್ರೆಸ್‌ನ ಧೋರಣೆಗಳ ಕುರಿತು ಬರೆಯುತ್ತಾರೆ. ಮುಂದುವರೆದು ‘ದೇಶ ಕಟ್ಟುವುದಕ್ಕೆ ದುಃಖ ದುಮ್ಮಾನಗಳ ಪಟ್ಟಿಯ ಬೆಂಬಲ ಬೇಕಿಲ್ಲ, ಜನರ ಇಚ್ಛಾಶಕ್ತಿ ಅವಶ್ಯಕ. ಮುಸ್ಲಿಮರ ಸಂಕಟ, ಕುಂದುಕೊರತೆಗಳು ಬೇಕಾದಷ್ಟಿವೆ. ಹಿಂದೂ ಬಹುಸಂಖ್ಯಾತರಿಂದ ನಮ್ಮ ಮೇಲಾಗುವ ದಾಳಿಯನ್ನು ನಿಯಂತ್ರಿಸಲು ಸಾಂವಿಧಾನಿಕ ರಕ್ಷಣೆ ವಿಫಲವಾಗಿದೆ ಎಂದು ಮುಸ್ಲಿಮರು ಹೇಳುತ್ತಾರೆ.. ಮುಸ್ಲಿಮರ ಏಕಮಾತ್ರ ಪ್ರತಿನಿಧಿ ಮುಸ್ಲಿಂ ಲೀಗ್ ಎಂದು ಮಾನ್ಯ ಮಾಡಲು ಕಾಂಗ್ರೆಸ್ ಸಿದ್ಧವಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ ಪ್ರಾಂತೀಯ ಸರ್ಕಾರಗಳಲ್ಲಿ ಲೀಗ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎನ್ನುವ ಸುದ್ದಿಯೂ ಲೀಗ್ ಮುಖಂಡರಲ್ಲಿ ಆತಂಕ ಮೂಡಿಸಿದೆ.. ಇದು ಹೀಗೆ ಮುಂದುವರೆದರೆ ಮುಸ್ಲಿಮರ ಪ್ರಾತಿನಿಧ್ಯವಿರುವುದಿಲ್ಲ ಅಥವಾ ಕಡಿಮೆ ಪ್ರಾತಿನಿಧ್ಯವಿರುತ್ತದೆ. ನಮ್ಮನ್ನು ಹಿಂದೂಗಳ ಅಧೀನಕ್ಕೆ ಒಳಪಡಿಸುತ್ತಾರೆ ಎನ್ನುವ ಭಯ ಮೂಡಿದೆ..’ ಎಂದು ಬರೆಯುತ್ತಾರೆ.
ಭಾಗ 2ರ ‘ಪಾಕಿಸ್ತಾನದ ವಿರುದ್ಧ ಹಿಂದೂ ಕೇಸ್ʼನಲ್ಲಿ ಪಾಕಿಸ್ತಾನ ಯೋಜನೆಯ ವಿರುದ್ಧ ಹಿಂದೂಗಳ ಆಕ್ಷೇಪಣೆಗಳನ್ನು ಪಟ್ಟಿ ಮಾಡುತ್ತಾರೆ.
ಇದು ಭಾರತದ ಏಕತೆಯನ್ನು ಭಗ್ನಗೊಳಿಸುತ್ತದೆ. ಭಾರತದ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ. ಮತೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗುತ್ತದೆ ಎನ್ನುತ್ತಾರೆ.
ಮುಂದುವರೆದು, ‘ಹಿಂದೂಗಳು ಅಖಂಡ ಭಾರತವನ್ನು ಪ್ರತಿಪಾದಿಸುತ್ತಾರೆ, ಮುಸ್ಲಿಮರು ಪ್ರತ್ಯೇಕಗೊಳ್ಳಲು ಬಯಸುವ ಪ್ರಾಂತ್ಯಗಳೂ ಭಾರತಕ್ಕೆ ಸೇರಿವೆ ಎಂದು ನಂಬಿದ್ದಾರೆ.. ಚಾರಿತ್ರಿಕವಾಗಿ ಇದು ಸತ್ಯ.. ಕ್ರಿ.ಶ. 7ನೇ ಶತಮಾನದಲ್ಲಿ ಭಾರತಕ್ಕೆ ಬಂದ ಚೀನಾ ಯಾತ್ರಿಕ ಹೂ ಯೆನ್ ತ್ಸಾಂಗ್ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಭೂ ಪ್ರದೇಶವು ಇತಿಹಾಸದ ಕಾಲವಾಗಿದ್ದರೆ ವರ್ತಮಾನದ ಪರಿಸ್ಥಿತಿ ಬೇರೆಯದಾಗಿದೆʼ ಎಂದು ಬರೆಯುತ್ತಾರೆ. ‘ಗತಕಾಲದ ವಿದ್ಯಮಾನಗಳನ್ನು ವರ್ತಮಾನದಲ್ಲಿ ಚರ್ಚಿಸುವುದು ವಿವೇಕಯುಕ್ತವಲ್ಲʼ ಎಂದು ಹೇಳುವ ಬಾಬಾಸಾಹೇಬರು ‘ಕ್ರಿ.ಶ. 711ರಲ್ಲಿ ಭಾರತಕ್ಕೆ ಬಂದು ಸಿಂಧ್ ಪ್ರಾಂತ್ಯವನ್ನು ವಶಪಡಿಸಿಕೊಂಡ ಮಹಮ್ಮದ್ ಖಾಸಿಂನಿಂದ ಮುಸ್ಲಿಮರ ಆಕ್ರಮಣವು ಶುರುವಾಗುತ್ತದೆ. ನಂತರ ಕ್ರಿ.ಶ. 9ರಲ್ಲಿ ಅಲ್ಲಿಂದ ನಿರ್ಗಮಿಸುತ್ತಾರೆ. ಮುಂದೆ 11ನೇ ಶತಮಾನದಲ್ಲಿ ಮಹಮ್ಮದ್ ಘಜನಿ ಹಾಗೂ ಮಹಮ್ಮದ್ ಘೋರಿ ದಾಳಿ ಮಾಡುತ್ತಾರೆ. ನಂತರ 16ನೇ ಶತಮಾನದಲ್ಲಿ ಬಾಬರನ ದಾಳಿ ಮೂಲಕ ಮೊಘಲರ ಆಡಳಿತ ಶುರುವಾಗುತ್ತದೆ. ಈ ಎಲ್ಲ ಆಕ್ರಮಣಗಳು ಅಧಿಕಾರದ ದುರಾಸೆಗಾಗಿ, ಸ್ಥಳೀಯ ಪ್ರಭುತ್ವ ವಶಪಡಿಸಿಕೊಳ್ಳುವುದಕ್ಕಾಗಿ ಮಾತ್ರ ನಡೆದಿರಲಿಲ್ಲ. ಭಾರತದ ಮೇಲಿನ ಮುಸ್ಲಿಮರ ದಾಳಿಯ ಸ್ವರೂಪವು ಮುಸ್ಲಿಮರು ಸ್ವತಃ ತಮ್ಮೊಳಗೆ ನಡೆಸುವ ಯುದ್ಧಗಳ ಸ್ವರೂಪಕ್ಕೆ ಭಿನ್ನವಾಗಿಲ್ಲ. ಎರಡರ ಉದ್ದೇಶವೂ ಒಂದೇ ಆಗಿರುತ್ತದೆ. ಇಲ್ಲಿ ಹಿಂದೂಗಳ ವಿರುದ್ಧ ಎನ್ನುವುದು ಮತಧರ್ಮದ ಆಧಾರದಲ್ಲಿರುವುದಿಲ್ಲ, ಯಾಕೆಂದರೆ ತಾರ್ತಾರ್, ಮಂಗೋಲಿಯನ್, ಅಫ್ಘನ್, ಮುಸ್ಲಿಂ ದೊರೆಗಳು, ಬಹುಮನಿ ಸುಲ್ತಾನರು ತಮ್ಮೊಳಗೂ ಯುದ್ಧ ಮಾಡಿದ್ದಾರೆ. ದಾಳಿ ಮಾಡಿದವರು ಮುಸ್ಲಿಮರು ಎನ್ನುವುದನ್ನು ಪ್ರಚಾರ ಮಾಡಲು ಮೇಲಿನ ಮಾಹಿತಿಯನ್ನು ಮುಚ್ಚಿಡಲಾಯಿತುʼ ಎಂದು ಹೇಳುತ್ತಾರೆ.

ಇದೇ ಸಂದರ್ಭದಲ್ಲಿ ಹಿಂದೂ ಅರಸರು ತಮ್ಮೊಳಗೆ ಯುದ್ಧ ಮಾಡಿದ ಹತ್ತಾರು ಉದಾಹರಣೆಗಳಿವೆ. ಬಾದಾಮಿ, ಬಾಗಲಕೋಟೆಯನ್ನು ರಾಜಧಾನಿಯಾಗಿ ಮಾಡಿಕೊಂಡ ಚಾಲುಕ್ಯರು ಪಲ್ಲವರೊಡನೆ, ಚೋಳರೊಡನೆ, ರಾಷ್ಟ್ರಕೂಟರೊಡನೆ, ಹೊಯ್ಸಳರೊಡನೆ ಯುದ್ಧ ಮಾಡಿದರು. ಹೊಯ್ಸಳರು ಯಾದವರು, ಕದಂಬರೊಡನೆ ಯುದ್ಧ ಮಾಡಿದರು. ಗಂಗರು ಪಲ್ಲವರು, ಚೋಳರ ವಿರುದ್ಧ ಯುದ್ಧ ಮಾಡಿದರು. ಇದರ ಪಟ್ಟಿ ಉದ್ದವಿದೆ. ರಾಜಪ್ರಭುತ್ವ ಎಂದರೆ ಅದು ಯುದ್ಧ, ಆಕ್ರಮಣಗಳ ನೀತಿಯಾಗಿತ್ತು, ಇಲ್ಲಿ ಮತಧರ್ಮಗಳ ನಡುವೆ ಪರಸ್ಪರ ಹೊಂದಾಣಿಕೆಯೂ ಇರಲಿಲ್ಲ, ಶಾಶ್ವತ ಹಗೆತನವೂ ಇರಲಿಲ್ಲ. ಈ ಸತ್ಯಾಂಶವನ್ನು ಚರ್ಚಿಸದೆ ಸಂಘ ಪರಿವಾರವು ಕೇವಲ ಮುಸ್ಲಿಮರ ಆಕ್ರಮಣವನ್ನು ಮಾತ್ರ ವೈಭವೀಕರಿಸಿ ದ್ವೇಷವನ್ನು ಬಿತ್ತಿರುವುದು ವರ್ತಮಾನದ ಕಥನವಾಗಿದೆ. ಘೋರಿ ಮುಂತಾದವರ ದಾಳಿಯನ್ನು ವಿವರಿಸುವಾಗ ಅಂಬೇಡ್ಕರ್ ತಟಸ್ಥ ಧೋರಣೆಯನ್ನು ಅನುಸರಿಸುತ್ತಾರೆ. ಆದರೆ ಆರ್‌ಎಸ್‌ಎಸ್ ಈ ವಸ್ತುನಿಷ್ಠತೆಯನ್ನು ಮರೆಮಾಚಿ ಈ ಪುಸ್ತಕದಲ್ಲಿ ಬರುವ ಮೊಘಲರು, ಮುಸ್ಲಿಮರ ದಾಳಿಯ ಪುಟಗಳನ್ನು ಮಾತ್ರ ಹೆಕ್ಕಿಕೊಂಡು ಮುಸ್ಲಿಂ ದ್ವೇಷದ ಪೂರ್ವಗ್ರಹವನ್ನು ಬಿತ್ತುತ್ತದೆ. ಹೀಗೆ ಅಂಬೇಡ್ಕರ್ ತಪ್ಪಾಗಿ ವ್ಯಾಖ್ಯಾನಿಸಲ್ಪಡುತ್ತಿದ್ದಾರೆ. ಮೊಟ್ಟ ಮೊದಲಿಗೆ ಇತಿಹಾಸವನ್ನು ಓದುವಾಗ ಸತ್ಯಶೋಧನೆ ಮೊದಲ ಆದ್ಯತೆಯಾಗಿರಬೇಕು, ಅಲ್ಲಿರುವ ಎಲ್ಲ ವಿವರಗಳನ್ನು ಸಮಗ್ರ ಸತ್ಯವೆಂದು ಏಕಪಕ್ಷೀಯವಾಗಿ ನಂಬಬಾರದು, ಪೂರ್ವಗ್ರಹಪೀಡಿತರಾಗಿರಬಾರದು, ವಸ್ತುನಿಷ್ಠ ಕ್ರಮವನ್ನು ಅಳವಡಿಸಿಕೊಳ್ಳಬೇಕು, ಪ್ರತಿ ಅಂಶವನ್ನೂ ಮತ್ತೆ ಮತ್ತೆ ಪರಿಶೀಲಿಸಿ ಗ್ರಹಿಸಬೇಕು ಎನ್ನುವ ಅಧ್ಯಯನ, ಸಂಶೋಧನ ಕ್ರಮವನ್ನು ರೂಪಿಸಬೇಕಿದೆ. ಕಲಿಸಬೇಕಿದೆ. ಈ ವ್ಯಾಸಂಗಕ್ರಮ(ಪೆಡಗಾಜಿ) ಕಟ್ಟದೆ ಹೋದರೆ ಆರ್‌ಎಸ್‌ಎಸ್‌ನ ಸುಳ್ಳುಗಳ ಪ್ರಚಾರವನ್ನು ತಡೆಹಿಡಿಯುವುದು ಕಷ್ಟವಾಗುತ್ತದೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)
ನಾವು ಇತಿಹಾಸವನ್ನು ಪುನರ್ ವ್ಯಾಖ್ಯಾನಿಸುವಾಗ ತಟಸ್ಥ ಧೋರಣೆ ಅನುಸರಿಸಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಅಂಬೇಡ್ಕರ್ ಮುಸ್ಲಿಂ ದಾಳಿಕೋರರ ಬರ್ಬರತೆ, ದೌರ್ಜನ್ಯಗಳನ್ನು ಸಹ ದಾಖಲಿಸುತ್ತಾರೆ. ಮುಂದುವರಿದು ‘ಭೌಗೋಳಿಕ ಐಕ್ಯತೆಯನ್ನು ಒಗ್ಗಟ್ಟು ಎಂದು ಹೇಳಲು ಸಾಧ್ಯವಿಲ್ಲ. ಇದು ನೈಸರ್ಗಿಕ ಕಾರಣದಿಂದ ರೂಪುಗೊಂಡಿದೆ. ಒಂದುವೇಳೆ ಭೌಗೋಳಿಕತೆಯನ್ನು ಆಧರಿಸಿ ರಾಷ್ಟ್ರೀಯತೆಯನ್ನು ಕಟ್ಟುವುದಾದರೆ ಅದು ಪ್ರಕೃತಿ ಶಿಫಾರಸು ಮಾಡುತ್ತದೆ, ಮನುಷ್ಯರು ಇತ್ಯರ್ಥಗೊಳಿಸುತ್ತಾರೆ ಎನ್ನುವ ಅರ್ಥದಲ್ಲಿರುತ್ತದೆ. ಆಡಳಿತಾತ್ಮಕ ಏಕತೆಯೂ ಒಗ್ಗಟ್ಟಲ್ಲ. ಅದು ಆಯಾ ಸಮಯ ಮತ್ತು ಸಂದರ್ಭವನ್ನು ಆಧರಿಸುತ್ತದೆ. ಅದು ಕ್ಷಣಿಕವಾಗಿರುತ್ತದೆ. ನೈಜವಾದ ಐಕ್ಯತೆಯೇ ಇಲ್ಲದಿರುವಾಗ ಅದನ್ನು ಭಗ್ನಗೊಳಿಸುವ ಪ್ರಶ್ನೆಯೇ ಇರುವುದಿಲ್ಲ. ‘ಪಾಕಿಸ್ತಾನ ಮತ್ತು ಹಿಂದೂಸ್ತಾನ’ ನಡುವಿನ ಒಗ್ಗಟ್ಟು ಒಂದು ಮಿಥ್ಯೆʼ ಎಂದು ಬರೆಯುತ್ತಾರೆ. ಇಂತಹ ಸಂಕೀರ್ಣತೆಯನ್ನು ಅರಿತುಕೊಂಡು ವಸ್ತುನಿಷ್ಠವಾದ ದೃಷ್ಟಿಕೋನ ಬೆಳೆಸಿಕೊಳ್ಳುವ ಅವಶ್ಯಕತೆಯಿದೆ. ಈ ಮೂಲಕಷ್ಟೇ ಸಂಘ ಪರಿವಾರದ ಇತಿಹಾಸದ ತಿರುಚುವಿಕೆಯನ್ನು ಮುಖಾಮುಖಿಯಾಗಬಹುದು.
ಭಾಗ 3- ‘ಒಂದು ವೇಳೆ ಪಾಕಿಸ್ತಾನ ಇಲ್ದದಿದ್ದರೆʼ ಶೀರ್ಷಿಕೆಯ ಅಧ್ಯಾಯ 7ರಲ್ಲಿ `ಪಾಕಿಸ್ತಾನಕ್ಕೆ ಹಿಂದೂ ಪರ್ಯಾಯʼ, ಅಧ್ಯಾಯ 8ರಲ್ಲಿ `ಪಾಕಿಸ್ತಾನಕ್ಕೆ ಮುಸ್ಲಿಂ ಪರ್ಯಾಯʼದ ಕುರಿತು ಬರೆಯುತ್ತಾರೆ. ಈ ಭಾಗದ ಕೊನೆಯಲ್ಲಿ ಮೊದಲ ಮಹಾ ಯುದ್ಧದ ನಂತರ ಟರ್ಕಿ ರಾಜಪ್ರಭುತ್ವದ ವಿಘಟನೆ ಝೆಕಸ್ಲೋವೇಕಿಯಾದ ಸ್ಥಾಪನೆಯಿಂದ ಕಲಿಯಬೇಕಾದ ಪಾಠಗಳ ಕುರಿತು ವಿವರಿಸುತ್ತಾರೆ. ಜೆಕ್ ಮತ್ತು ಸ್ಲೋವೇಕನ್ನರು ಪ್ರತ್ಯೇಕವಾಗಿದ್ದು ಮತ್ತು ಇಬ್ಬರೂ ಪರಸ್ಪರ ರಾಷ್ಟ್ರೀಯತೆಯನ್ನು ಗೌರವಿಸಿದ್ದನ್ನು ಬರೆಯುತ್ತಾರೆ.
ಪುಸ್ತಕದ ಭಾಗ 5, ಅಧ್ಯಾಯ 13, ಪುಟ 368ರಲ್ಲಿ ‘ಮುಸಲ್ಮಾನರು ಪಾಕಿಸ್ತಾನ ಬೇಕೆಂದು ನಿರ್ಧರಿಸಿದ್ದಾರೆಯೇ? ಅಥವಾ ಪಾಕಿಸ್ತಾನ ಒಂದು ಅರಣ್ಯರೋಧನವೇ? ಕೇವಲ ಹಾದುಹೋಗುವ ವಿಷಯವೇ? ಅಥವಾ ಅವರ ಶಾಶ್ವತ ಬೇಡಿಕೆಯೇ? ಈ ವಿಚಾರ ಕುರಿತಂತೆ ಅನೇಕ ಭಿನ್ನ ಅಭಿಪ್ರಾಯಗಳಿವೆ. ಮುಸ್ಲಿಮರಿಗೆ ಪಾಕಿಸ್ತಾನ ಬೇಕು ಎನ್ನುವುದು ಖಚಿತವಾದ ನಂತರ ಅದರ ತತ್ವವನ್ನು ಮನ್ನಿಸುವುದು ಜಾಣತನದ ಲಕ್ಷಣವಾಗಿದೆʼ ಎಂದು ಬರೆಯುತ್ತಾರೆ
ಸ್ವತಃ ಅಂಬೇಡ್ಕರ್ ಅವರು ಪಾಕಿಸ್ತಾನ ಅನಿವಾರ್ಯ ಎಂದು ಮೇಲಿನಂತೆ ಸ್ಪಷ್ಟವಾಗಿ ವಿವರಿಸಿದ್ದರೂ ಆರ್‌ಎಸ್‌ಎಸ್ ಮತ್ತು ಬಿಜೆಪಿ ಅವರ ಚಿಂತನೆಗಳನ್ನು ತಿರುಚುತ್ತಿವೆ. ದೇಶ ವಿಭಜನೆ ಕುರಿತಂತೆ ಪದೇ ಪದೇ ಗಾಂಧಿ, ಕಾಂಗ್ರೆಸ್, ನೆಹರೂ ಅವರನ್ನು ಟೀಕಿಸುವ, ಹೊಣೆಗಾರರನ್ನಾಗಿ ಮಾಡುವ ಸಂಘ ಪರಿವಾರವು ಉದ್ದೇಶಪೂರ್ವಕವಾಗಿಯೇ ಆ ಕಾಲಘಟ್ಟದ ಸಮಾಜೋ-ರಾಜಕೀಯ ಅನಿವಾರ್ಯತೆ, ಗೊಂದಲದ ವಿದ್ಯಮಾನಗಳನ್ನು ಮುಚ್ಚಿಡುತ್ತದೆ. ಬಾಬಾಸಾಹೇಬರ ಪುಸ್ತಕ `ಪಾಕಿಸ್ತಾನ…ʼ ಇವರ ಕುತ್ಸಿತ ಬುದ್ಧಿಯನ್ನು ಅನಾವರಣಗೊಳಿಸುತ್ತದೆ.…ಬಿಜೆಪಿಯು ಹಿಂದೂ ಮಹಾಸಭಾದ ಮುಖಂಡ ಸಾವರ್ಕರ್ ಸಹ ಎರಡು ದೇಶ ಸಿದ್ಧಾಂತದ ಪರವಾಗಿದ್ದರು ಎನ್ನುವ ಸತ್ಯವನ್ನು ಸಹ ಮುಚ್ಚಿಡುತ್ತಿದೆ. 1942ರಲ್ಲಿ ಕಾಂಗ್ರೆಸ್ ಪಕ್ಷವು ‘ದೇಶ ಬಿಟ್ಟು ತೊಲಗಿ’ ಚಳವಳಿ ಸಂಘಟಿಸುತ್ತಿರುವಾಗ ಹಿಂದೂ ಮಹಾಸಭಾ ಸಂಘಟನೆಯು ಸಿಂಧ್, ವಾಯುವ್ಯ ಗಡಿನಾಡು ಪ್ರದೇಶದಲ್ಲಿ ಮುಸ್ಲಿಂ ಲೀಗ್ ಜೊತೆಗೆ ಮೈತ್ರಿ ಸರ್ಕಾರದಲ್ಲಿ ಭಾಗಿಯಾಗಿತ್ತು. ಆಗ ಸಿಂಧ್ ವಿಧಾನಸಭೆಯು ‘ಪಾಕಿಸ್ತಾನದ ಪರವಾಗಿ ನಿಲುವಳಿ ಮಂಡಿಸಿದಾಗ ಮೈತ್ರಿ ಪಕ್ಷವಾಗಿದ್ದ ಹಿಂದೂ ಮಹಾಸಭಾ ಅದನ್ನು ಬೆಂಬಲಿಸಿತ್ತು.’ ಈ ಎಲ್ಲ ಚಾರಿತ್ರಿಕ ಸತ್ಯಗಳನ್ನು ಆರ್‌ಎಸ್‌ಎಸ್ ಮರೆ ಮಾಚಲು ಸಾಧ್ಯವಿಲ್ಲ.
ಪಾಕಿಸ್ತಾನ… ಪುಸ್ತಕದ 1941ರ ಎರಡನೇ ಮುದ್ರಣದಲ್ಲಿ ಅಂಬೇಡ್ಕರ್ ‘ಕೋಮು ಸಾಮರಸ್ಯ ಕಾಪಾಡಲು ಪಾಕಿಸ್ತಾನ ಮತ್ತು ಹಿಂದೂಸ್ತಾನ ಎರಡೂ ದೇಶಗಳ ಅಲ್ಪಸಂಖ್ಯಾತರು ಪರಸ್ಪರ ವರ್ಗಾವಣೆಯಾಗಬೇಕುʼ ಎಂದು ಬರೆಯುತ್ತಾರೆ. ಅಶೋಕ್ ಗೋಪಾಲ್ ಅವರು, ‘1945ರ ಮೂರನೆ ಮುದ್ರಣದಲ್ಲಿ ಮುಸ್ಲಿಂ ಬಹುಸಂಖ್ಯಾತರಿರುವ ಪ್ರಾಂತ್ಯಗಳಲ್ಲಿ ಎರಡು ಹಂತದ ಚುನಾವಣೆಗಳನ್ನು ನಡೆಸಬೇಕು ಎನ್ನುವ ಸಂಕೀರ್ಣವಾದ ಪರಿಹಾರ ಸೂಚಿಸುತ್ತಾರೆ.. ಆದರೆ ತಮ್ಮ ಪುಸ್ತಕ ಪ್ರಕಟವಾಗಿ ಮೂರೇ ತಿಂಗಳಲ್ಲಿ ಅಲ್ಪಸಂಖ್ಯಾತರಿಗೆ ಸಂಪೂರ್ಣ ರಕ್ಷಣೆ ಇರುವಂತಹ ಒಗ್ಗಟ್ಟಾಗಿರುವ ಐಕ್ಯ ಭಾರತದ ಯೋಜನೆ ಮಂಡಿಸುತ್ತಾರೆʼ ಎಂದು ಹೇಳುತ್ತಾರೆ.

ಆ ಕಾಲಘಟ್ಟದಲ್ಲಿ ಪ್ರತ್ಯೇಕ ಪಾಕಿಸ್ತಾನದ ಪರ ಬೇಡಿಕೆ ಇಟ್ಟ, ಮುಸ್ಲಿಂ ಸಮುದಾಯದ ಏಕೈಕ ಪ್ರತಿನಿಧಿ ಜಿನ್ನಾ ಅವರಿಗೆ ನಿಜಕ್ಕೂ ತಮಗೇನು ಬೇಕೆಂದು ಖಚಿತವಾಗಿ ಗೊತ್ತಿರದೆ ದ್ವಂದ್ವ, ಗೊಂದಲದಲ್ಲಿರುತ್ತಾರೆ. ಇದೇ ಕಾರಣಕ್ಕೆ ಅಂಬೇಡ್ಕರ್ ನಿಲವು ಸಹ ಬದಲಾಗುತ್ತಿರುತ್ತದೆ. ಎಪ್ಪತ್ತೈದು ವರ್ಷಗಳ ನಂತರ ಇಂದು ನಾವು ಆಗಿನ ಆ ಸಂಕೀರ್ಣತೆ ಮತ್ತು ಅನಿಶ್ಚತೆಯನ್ನು ಅರ್ಥ ಮಾಡಿಕೊಳ್ಳದೆ ಕೇವಲ ಒಂದು ಹೇಳಿಕೆ, ಒಂದು ಆಯಾಮವನ್ನು ಮಾತ್ರ ಆಧರಿಸುವುದು ತಪ್ಪಾಗುತ್ತದೆ. ಆಗಿನ ವಿದ್ಯಮಾನಗಳನ್ನು ಅದರ ಸಂಕೀರ್ಣತೆಯಲ್ಲಿ ಸಮಗ್ರವಾಗಿ ಗ್ರಹಿಸಬೇಕಾಗುತ್ತದೆ. ಬಹುತೇಕರು ಮತ್ತು ಸಂಘ ಪರಿವಾರವು ಎಲ್ಲವನ್ನೂ ಸರಳೀಕರಿಸುವುದರಿಂದ ಇತಿಹಾಸವು ತಪ್ಪಾಗಿ ಮತ್ತು ದೋಷಪೂರಿತವಾಗಿ ವ್ಯಾಖ್ಯಾನಿಸಲ್ಪಡುತ್ತದೆ. ಇದಕ್ಕೆ ಸೂಕ್ತ ಉತ್ತರವಾಗಿ ‘ಪಾಕಿಸ್ತಾನ…ʼ ಪುಸ್ತಕವನ್ನು ಓದಬೇಕಾಗುತ್ತದೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-2)
ಅಂಬೇಡ್ಕರ್ ಅವರು ಜನಾಂಗೀಯ ಅಥವಾ ಭಾಷಾ ಐಕ್ಯತೆ ಆಧಾರದಲ್ಲಿ ರಾಷ್ಟ್ರೀಯತೆಯನ್ನು ಒಪ್ಪುವುದಿಲ್ಲ. ಚಾರಿತ್ರಿಕವಾದ ಪೂರ್ವಗತಗಳ ಆಧಾರದಲ್ಲಿ ರಾಷ್ಟ್ರೀಯತೆಯನ್ನು ವಿಶ್ಲೇಷಿಸುತ್ತಾರೆ. ಭಾಗ 2, `ಪಾಕಿಸ್ತಾನದ ವಿರುದ್ಧ ಹಿಂದೂ ಕೇಸ್ʼ ಶೀರ್ಷಿಕೆಯ ಅಧ್ಯಾಯ 4ರಲ್ಲಿ `ದೇಶ ಎಂದರೆ ಏನುʼ ಕುರಿತು ಫ್ರಾನ್ಸ್ ಇತಿಹಾಸಕಾರ ಮತ್ತು ಧಾರ್ಮಿಕ ವಿದ್ವಾಂಸ ಎರ್ನೆಸ್ಟ್ ರೇನನ್ ಮಾತುಗಳನ್ನು ಉಲ್ಲೇಖಿಸುತ್ತಾರೆ. ಹಿಂದೂ ಮತ್ತು ಮುಸ್ಲಿಮರ ನಡುವೆ ಎಂದಿಗೂ ರಾಜಿಯಾಗಲಾರದ, ಆಳವಾದ ಸಾಂಸ್ಕೃತಿಕ ವ್ಯತ್ಯಾಸಗಳು ಮತ್ತು ಭಿನ್ನವಾದ ಚಾರಿತ್ರಿಕ ನೆನಪುಗಳು ಪಾಕಿಸ್ತಾನದ ಬೇಡಿಕೆಗೆ ಮೂಲಕ ಕಾರಣ ಎಂದು ಹೇಳುತ್ತಾರೆ.
ಅಶೋಕ್ ಗೋಪಾಲ್ ಅವರ ಹೀಗೆ ಉಲ್ಲೇಖಿಸುತ್ತಾರೆ: “‘ಜಿನ್ನಾ ಮಾತ್ರವಲ್ಲ, ಹಿಂದೂ ಮಹಾಸಭಾದ ಅಧ್ಯಕ್ಷರಾಗಿ 1937ರಲ್ಲಿ ಸಾವರ್ಕರ್ ಸಹ ಭಾರತವು ಇಂದು ಏಕೀಕೃತ, ಏಕರೂಪ ದೇಶ ಎಂದು ಭಾವಿಸಲು ಸಾಧ್ಯವಿಲ್ಲ, ವಾಸ್ತವದಲ್ಲಿ ಹಿಂದೂ ಮತ್ತು ಮುಸ್ಲಿಮರು ಇರುವ ಎರಡು ದೇಶಗಳೆಂದು ಹೇಳುತ್ತಾರೆ’ ಎಂದು ಅಂಬೇಡ್ಕರ್ ವಿವರಿಸುತ್ತಾರೆ. ಏಕರೂಪಿಯಾದ, ರಾಜಿ ಮಾಡಲಾಗದ ಎರಡು ಪ್ರತ್ಯೇಕ ಮತಧರ್ಮಗಳ ಕುರಿತು ಬ್ರಿಟಿಷರು ಬರೆದ ಕಥನವನ್ನು ಅನುಸರಿಸುವ ಅಂಬೇಡ್ಕರ್, ಅದು ಹೇಗೆ ಬೃಹತ್ ಜನಸಂಖ್ಯೆಯ ಅನಕ್ಷರಸ್ಥ ಹಿಂದೂ, ಮುಸ್ಲಿಮರು ಈ ಕಥನವನ್ನು ಓದಿದರು? ಎನ್ನುವ ಪ್ರಶ್ನೆಯನ್ನು ಕೇಳಲಿಲ್ಲ ಮತ್ತು ಅದು ಹೇಗೆ ಇಂತಹ ಸಂಶಯಾಸ್ಪದ ನೆನಪುಗಳು ತಲೆಮಾರಿನಿಂದ ತಲೆಮಾರಿಗೆ ಹಬ್ಬಿಕೊಂಡಿವೆ? ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಬಹುಸಂಖ್ಯಾತರ ಬದುಕಿನಲ್ಲಿ ಚಿಂತಿಸಲಿಕ್ಕೆ ಬೇರೆಯದೇ ಅನೇಕ ಕಾರಣಗಳಿರುವಾಗ ಈ ಸಂಗತಿಗಳು ಮಾತ್ರ ಯಾಕೆ ಮುಖ್ಯ ವಿಚಾರಗಳಾದವು? ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿಯೇ ವೈರುಧ್ಯಗಳಿದ್ದವು. ಹಿಂದೂ ಮತ್ತು ಮುಸ್ಲಿಮರು ತಮ್ಮ ಮತಧರ್ಮಗಳ ಆಧಾರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದು ಹೇಳುವುದರ ಮೂಲಕ ಸಾಮಾಜಿಕ, ಆರ್ಥಿಕ, ಭಾಷೆ ಮುಂತಾದವುಗಳ ಕಾರಣದಿಂದ ಮೈಗೂಡಿಸಿಕೊಂಡ ಅವರ ಅಸ್ಮಿತೆಗಳನ್ನು ಧಾರ್ಮಿಕತೆಯು ಸ್ವಾಧೀನಪಡಿಸಿಕೊಂಡಿದೆ ಎನ್ನುವ ನಿಲುವು ತೆಗೆದುಕೊಳ್ಳುತ್ತಾರೆ.…ಆದರೆ ಕೆಲವೇ ವರ್ಷಗಳ ಹಿಂದೆ ತಮ್ಮ ‘ಜಾತಿ ವಿನಾಶʼ ಪುಸ್ತಕದಲ್ಲಿ ಹಿಂದೂಗಳ ವಿಷಯದಲ್ಲಿ ಇಂತಹ ಸ್ವಾಧೀನಪಡಿಸಿಕೊಳ್ಳುವಿಕೆ ಸಾಧ್ಯವಿಲ್ಲ, ಇಲ್ಲಿನ ಜಾತಿ ವ್ಯವಸ್ಥೆಯು ಎಲ್ಲರನ್ನೂ ಒಳಗೊಳ್ಳುವ ಐಕ್ಯ ಸಮಾಜವಾಗದಂತೆ ನಿಯಂತ್ರಿಸಿದೆ ಎಂದು ಬರೆಯುತ್ತಾರೆ. ಜಾತಿ ಹಿಂದೂಗಳು ‘ಅಸ್ಪೃಶ್ಯರು ಮತ್ತು ಮುಸ್ಲಿಮರ ವಿರುದ್ಧ ಒಂದಾಗಿದ್ದಾರೆ’ ಎನ್ನುವ ತಮ್ಮ ಚಿಂತನೆಯನ್ನು ‘ಪಾಕಿಸ್ತಾನ..’ ಪುಸ್ತಕದ ಸಂದರ್ಭದಲ್ಲಿ ಉಲ್ಲೇಖಿಸುವುದಿಲ್ಲ” ಎಂದು ಅಶೋಕ್ ಗೋಪಾಲ್ ಬರೆಯುತ್ತಾರೆ.
ಆದರೆ ಪ್ರತ್ಯೇಕ ದೇಶಕ್ಕಾಗಿ ಮುಸ್ಲಿಂ ಲೀಗ್‌ನ ಬೇಡಿಕೆಯು ಇತ್ತೀಚಿನದು(1930ರ ದಶಕದ್ದು) ಎಂದು ಅಂಬೇಡ್ಕರ್ ಗುರುತಿಸುತ್ತಾರೆ. 1937ರಲ್ಲಿ ಮುಸ್ಲಿಂ ಲೀಗ್‌ನ ನಾಯಕತ್ವ ವಹಿಸಿಕೊಂಡ ಜಿನ್ನಾ ಅದಕ್ಕೂ ಮೊದಲು ಪ್ರತ್ಯೇಕತೆಯನ್ನು ವಿರೋಧಿಸಿದ್ದರು. ಜಿನ್ನಾ ಅವರು 1906ರಲ್ಲಿ ಮಿಂಟೋ ಸಂಸದೀಯ ಸಮಿತಿಯ ಮುಂದೆ ಪ್ರತ್ಯೇಕ ಮತಕ್ಷೇತ್ರದ ಬೇಡಿಕೆಯಿಟ್ಟದ್ದ ಮುಸ್ಲಿಂ ನಿಯೋಗದ ಭಾಗವಾಗಿರಲಿಲ್ಲ. 1919ರ ಜಂಟಿ ಸಂಸದೀಯ ಸಮಿತಿಯ ಮುಂದೆ ‘ಭಾರತೀಯ ರಾಷ್ಟ್ರೀಯವಾದಿʼ ಎಂದು ತನ್ನನ್ನು ಕರೆದುಕೊಂಡಿದ್ದರು. 1925 & 1928ರಲ್ಲಿ ಬಹುತೇಕ ಮುಸ್ಲಿಂ ನಾಯಕರು ಪ್ರತ್ಯೇಕ ಮತಕ್ಷೇತ್ರದ ಪರವಾಗಿದ್ದರೆ ಜಿನ್ನಾ `ಜಂಟಿ ಮತಕ್ಷೇತ್ರ’ದ ಪರವಾಗಿದ್ದರು. ಹಾಗಿದ್ದಲ್ಲಿ 1940ರಲ್ಲಿ ಲೀಗ್‌ನ ಮುಂದಾಳತ್ವ ವಹಿಸಿದ್ದ ಜಿನ್ನಾ ಯಾಕೆ ದಿಢೀರನೆ ಪ್ರತ್ಯೇಕ ಮತಕ್ಷೇತ್ರದ ಬೇಡಿಕೆ ಇಟ್ಟರು? ಇದರ ಕುರಿತು ಅಶೋಕ ಗೋಪಾಲ್ ಅವರು, ‘ಇಲ್ಲಿ ಅಂಬೇಡ್ಕರ್ ಅವರ ವಿವರಣೆ ಗೊಂದಲ ಮೂಡಿಸುತ್ತದೆ.. ಒಂದು ಕಡೆ ತಮ್ಮ ಹಿಂದಿನ ಚಿಂತನೆಗಳಾದ ಚಾರಿತ್ರಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಿರೋಧಾಭಾಸಗಳ ಕುರಿತು ಮಾತನಾಡಿದರೆ, ಮತ್ತೊಂದೆಡೆ 1937ರ ಚುನಾವಣೆಯ ನಂತರವಷ್ಟೇ ಪ್ರತ್ಯೇಕ ದೇಶದ ಕುರಿತು ಬೇಡಿಕೆ ಶುರುವಾಯಿತೆಂದು ಬರೆಯುತ್ತಾರೆʼ ಎಂದು ಹೇಳುತ್ತಾರೆ.
(ಮುಂದುವರಿಯುತ್ತದೆ..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ




