(ಮುಂದುವರಿದ ಭಾಗ..) ತಮ್ಮ ‘ಪಾಕಿಸ್ತಾನ ಅಥವಾ ಭಾರತ ವಿಭಜನೆ’ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಬಹುಸಂಖ್ಯಾತವಾದಿಗಳ ನಿರ್ದೇಶನದಲ್ಲಿ ಪ್ರಜಾಪ್ರಭುತ್ವ ದೇಶ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಖಚಿತವಾಗಿ ಬರೆಯುತ್ತಾರೆ. ಪಾಕಿಸ್ತಾನ ಪರವಾದ ಬೇಡಿಕೆಯ ಸಂದರ್ಭದಲ್ಲಿಯೂ ವಿರುದ್ಧ ಪಕ್ಷಗಳ ನಡುವೆ ಒಡಂಬಡಿಕೆ(ಎರಡು ದೇಶಗಳ ನಡುವೆ ಗಡಿಗಳನ್ನು ಗುರುತಿಸುವುದು) ಅಗತ್ಯವೇ ಹೊರತು ನಿರ್ದಿಷ್ಟ ಸಮುದಾಯದ ತುಷ್ಟೀಕರಣವಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ.
ಭಾಗ 3- ‘ಪಾಕಿಸ್ತಾನ ಇಲ್ಲದೇ ಹೋದರೆ ಮತ್ತೇನುʼ ಶೀರ್ಷಿಕೆಯ ಅಧ್ಯಾಯ 7ರ ‘ಪಾಕಿಸ್ತಾನಕ್ಕೆ ಪರ್ಯಾಯವಾಗಿ ಹಿಂದೂʼ ಲೇಖನದಲ್ಲಿ 1920-1940ರ ಎರಡು ದಶಕಗಳಲ್ಲಿ ಹಿಂದೂ ಮುಸ್ಲಿಂ ಗಲಭೆಯಲ್ಲಿ ಸತ್ತವರು, ಗಾಯಗೊಂಡವರ ವಿವರಗಳ ಕುರಿತು ವಿಸ್ತೃತವಾಗಿ ಚರ್ಚಿಸುತ್ತಾರೆ. ಇದರ ಜೊತೆ ಜೊತೆಗೆ ಗಾಂಧಿಯವರ ಹಿಂದೂ-ಮುಸ್ಲಿಂ ಐಕ್ಯತೆ ಕುರಿತು ಭಾವೋದ್ವೇಗದ ಪ್ರಯತ್ನಗಳನ್ನು ಉಲ್ಲೇಖಿಸುತ್ತಾರೆ. ಭಾರತದ ಹಿಂದೂ-ಮುಸ್ಲಿಮರ ನಡುವಿನ ಇಪ್ಪತ್ತು ವರ್ಷಗಳ ನಾಗರಿಕ ಯುದ್ಧದಲ್ಲಿ ಶಸ್ತ್ರಸಜ್ಜಿತ ಶಾಂತಿಯಿತ್ತು ಎಂದು ಬರೆಯುತ್ತಾ, ‘ಇದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳದೇ ಹೋದರೆ ರಾಷ್ಟ್ರೀಯ ಅಸ್ವಸ್ಥತೆ ಉಂಟಾಗುತ್ತದೆʼ ಎಂದು ಎಚ್ಚರಿಸುತ್ತಾರೆ. ಮುಂದುವರಿದು, ‘ಮೊದಲನೆಯದಾಗಿ ಎರಡೂ ಸಮುದಾಯಗಳಲ್ಲಿ ಸಾಮಾಜಿಕ ಜಡತ್ವ ಮೈಗೂಡುತ್ತದೆ, ಎರಡನೆಯದಾಗಿ ಮುಸ್ಲಿಂ ಮುಖಂಡರಿಂದ ರಾಜಕೀಯ ಬೇಡಿಕೆಗಳು ಹೆಚ್ಚಾಗುತ್ತವೆ, ಮೂರನೆಯದಾಗಿ ಹಿಂದೂ-ಮುಸ್ಲಿಮರಿಗೆ ತಾವು ನಿರೀಕ್ಷಿಸಿದ ಮಟ್ಟದಲ್ಲಿ ರಾಜಕೀಯ ಮೇಲುಗೈ ಸಾಧಿಸದಿರುವ ಕಾರಣಕ್ಕೆ ರಾಷ್ಟ್ರಿಯ ಹತಾಶೆಯ ವಾತಾವರಣ ಸೃಷ್ಟಿಯಾಗುತ್ತದೆʼ ಎಂದು ಬರೆಯುತ್ತಾರೆ.

ಅಶೋಕ್ ಗೋಪಾಲ್ ಅವರು, ‘ಮೇಲಿನ ಮೂರು ಬಿಕ್ಕಟ್ಟುಗಳಲ್ಲಿ ಮೊದಲನೆಯದು ಅಂಬೇಡ್ಕರ್ ಅವರಿಗೆ ಅತಿ ಹೆಚ್ಚು ಬಾಧಿಸುತ್ತದೆ, ಯಾಕೆಂದರೆ ಸಾಮಾಜಿಕ ಸುಧಾರಣೆ ಅವರ ಮುಖ್ಯ ಆದ್ಯತೆಯಾಗಿತ್ತು. ಹಿಂದೂ ಸಮಾಜದ ಸುಧಾರಣೆ ಹಿಂದೆಂದಿಗಿಂತಲೂ ಅಗತ್ಯವಿದೆ, ಆದರೆ ಮುಸ್ಲಿಂ ಸಮುದಾಯಕ್ಕೂ ಇದೇ ಮಟ್ಟದ ಸುಧಾರಣೆಯ ಅಗತ್ಯವಿದೆಯೆಂದು ನಂಬಿದ್ದರು, ಹಿಂದೂ ಸಮಾಜದ ಎಲ್ಲ ಕುರೂಪಗಳು ಭಾರತೀಯ ಮುಸ್ಲಿಮರಲ್ಲಿದೆಯೆಂದು ಹೇಳಿದ್ದರುʼ ಎಂದು ಬರೆಯುತ್ತಾರೆ.
ಈ ಭಾಗದಲ್ಲಿ ಪಾಕಿಸ್ತಾನಕ್ಕೆ ಇತರೆ ಪರ್ಯಾಯಗಳನ್ನು ಹುಡುಕುತ್ತಾರೆ. ಮೊದಲಿಗೆ ಹಿಂದೂ ಪರ್ಯಾಯದ ಕುರಿತು ಚಿಂತಿಸುತ್ತಾರೆ. ಲಾಲಾ ಹರದಯಾಳ್ ಅವರ ಹಿಂದೂ ಯೋಜನೆಗಳನ್ನು ಹಿಂದೂ ಸಂಘಟನ್, ಹಿಂದೂ ರಾಜ್, ಮುಸ್ಲಿಮರ ಶುದ್ಧಿ (ಹಿಂದೂಯಿಸಂಗೆ ಮರು ಮತಾಂತರ), ಅಫಘಾನಿಸ್ತಾನ ಮತ್ತು ಇತರ ಪ್ರಾಂತ್ಯಗಳ ವಶಪಡಿಸಿಕೊಳ್ಳುವುದು ಮತ್ತು ಶುದ್ಧಿ ಎಂದು ಪಟ್ಟಿ ಮಾಡುತ್ತಾರೆ. ಅಂಬೇಡ್ಕರ್ ಅವರು, ‘ಹರದಯಾಳ್ ಅವರ ಈ ಯೋಜನೆಗಳು ಸಮಸ್ಯಾತ್ಮಕವಾಗಿವೆ. ಮರು ಮತಾಂತರಕ್ಕೆ ಹಿಂದೂಯಿಸಂ ಸೂಕ್ತವಾದ ಧರ್ಮವಲ್ಲ. ಇಲ್ಲಿಗೆ ಮತಾಂತರ ಸಾಧ್ಯವೇ ಇಲ್ಲ. ಮಿಷನರಿ ಬಳಿ ಇರುವ ಹಣಕಾಸು ವ್ಯವಸ್ಥೆಯನ್ನು ಹಿಂದೂ ವ್ಯಾಪಾರಿಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಅಫ್ಘನ್ನ ಪಠಾಣರು ಇಸ್ಲಾಮಿನಲ್ಲಿ ಗಾಢ ನಂಬಿಕೆ ಉಳ್ಳವರು, ಮತಾಂತರವಾಗುವುದಿಲ್ಲ. ಮುಖ್ಯವಾಗಿ ಯಾವ ಜಾತಿಗೆ ಮರು ಮತಾಂತರಗೊಳ್ಳಬೇಕು? ಹಿಂದೂಗಳ ಪ್ರಕಾರ ಅವರು ಹುಟ್ಟಿದ ಜಾತಿಗೆ ಎಂದುತ್ತರಿಸುತ್ತಾರೆ. ಮತಾಂತರಗೊಂಡವರು ಯಾವುದೇ ಜಾತಿಗೆ ಸೀಮಿತವಾಗಿರುವುದಿಲ್ಲ, ಹೀಗಾಗಿ ಅವರಿಗೆ ಜಾತಿ ಇರುವುದಿಲ್ಲ.. ಮತ್ತದೇ ಪ್ರಶ್ನೆ ಯಾವ ಜಾತಿಗೆ ಮತಾಂತರವಾಗಬೇಕು? ಮನುಷ್ಯರು ಮೂಲಭೂತವಾಗಿ ಸಾಮಾಜಿಕ ಜೀವಿಗಳು. ಧರ್ಮವಿಲ್ಲದೆ, ರಾಜಕೀಯವಿಲ್ಲದೆ ಬದುಕಬಲ್ಲರು, ಆದರೆ ಸಮಾಜವಿಲ್ಲದೆ ಬದುಕುವುದಿಲ್ಲ.. ಹಿಂದೂಗಳಿಗೆ ಜಾತಿ ಇಲ್ಲ ಎಂದರೆ ಅವರಿಗೆ ಸಮಾಜವಿಲ್ಲ ಎಂದರ್ಥ. ಮತಾಂತರಗೊಳ್ಳಲು ಯಾವುದೇ ಸಮಾಜವಿಲ್ಲ ಎಂದಾದಾಗ ಮರು ಮತಾಂತರ ಹೇಗೆ ಸಾಧ್ಯವಾಗುತ್ತದೆ? ಹಿಂದೂ ಧರ್ಮವು ಅನೇಕ ಸಣ್ಣ ಸಣ್ಣ ಜಾತಿಗಳಾಗಿ ಹಂಚಿ ಹೋಗಿದೆ. ಅದು ಮಿಷನರಿ ಧರ್ಮವಾಗಲು ಸಾಧ್ಯವಿಲ್ಲ. ಇಲ್ಲಿ ಹಣಕಾಸಿನ ಸಮಸ್ಯೆಯಿದೆ. ಚಾತುರ್ವರ್ಣ ವ್ಯವಸ್ಥೆಯಲ್ಲಿನ ಎರಡನೇ ಶ್ರೇಣಿಯಲ್ಲಿರುವ ಬನಿಯಾಗಳು ಇಂತಹ ಮರು ಮತಾಂತರಕ್ಕೆ ಹಣಕಾಸಿನ ಬೆಂಬಲ ಕೊಡುವುದಿಲ್ಲʼ ಎಂದು ಬರೆಯುತ್ತಾರೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-1)
ಹಿಂದೂ ಮಹಾಸಭಾ ಮತ್ತು ಸಾವರ್ಕರ್ ಅವರ, ‘ಹಿಂದೂ, ಹಿಂದೂಯಿಸಂ ಮತ್ತು ಹಿಂದುತ್ವʼ ಸಿದ್ಧಾಂತದ ಕುರಿತು ಅಂಬೇಡ್ಕರ್ ಅವರು, ‘ಸಾವರ್ಕರ್ ಹಿಂದೂ ಶಬ್ದವನ್ನು ತಂತ್ರಗಾರಿಕೆಯಿಂದ, ಎರಡು ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ. ಮೊದಲನೆಯದಾಗಿ ಭಾರತವು ಪುಣ್ಯಭೂಮಿ ಎಂದು ವರ್ಣಿಸಿ ಅದು ಹಿಂದೂಗಳಿಗೆ ಮಾತ್ರ ಎನ್ನುವ ಪ್ರಚಾರದ ಮೂಲಕ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಮತ್ತು ಜ್ಯೂಗಳನ್ನು ಇದರಿಂದ ಹೊರಗಿಡುವ ಯೋಜನೆ. ಎರಡನೆಯದಾಗಿ ವೇದಗಳ ಪಾವಿತ್ರ‍್ಯತೆ ಕುರಿತು ನಿಮ್ಮ ನಂಬಿಕೆಯನ್ನು ಸಾಬೀತುಪಡಿಸಬೇಕಿಲ್ಲ ಎಂದು ಹೇಳುತ್ತಾ ಬೌದ್ಧ, ಸಿಖ್, ಜೈನ್ ಧರ್ಮದವರನ್ನು ಹಿಂದೂ ತೆಕ್ಕೆಯೊಳಗೆ ಸೆಳೆದುಕೊಳ್ಳುವುದು. ಇದರಲ್ಲಿ ಸಮಸ್ಯೆಗಳಿವೆ. ಮುಖ್ಯವಾಗಿ ಹಿಂದೂಗಳು ಸ್ವಾಭಾವಿಕವಾಗಿ ಭಾರತೀಯರು ಎನ್ನುವ ವಿಚಾರದ ಕಾರಣ ಸಹಜವಾಗಿ ಮುಸ್ಲಿಮರು ಪ್ರತ್ಯೇಕ ದೇಶದವರು ಎಂದು ಪರಿಗಣಿಸಲ್ಪಡುತ್ತಾರೆ. ಒಂದು ದೇಶ ವರ್ಸಸ್ ಎರಡು ದೇಶ ಸಿದ್ದಾಂತದ ಹಿನ್ನಲೆಯಲ್ಲಿ ಸಾವರ್ಕರ್ ಮತ್ತು ಜಿನ್ನಾ ವಿರುದ್ಧ ಧ್ರುವಗಳಲ್ಲಿ ನಿಲ್ಲಬೇಕಾಗುತ್ತದೆ, ಆದರೆ ವಿಚಿತ್ರವೆಂದರೆ ಇಬ್ಬರೂ ಈ ವಿಚಾರದಲ್ಲಿ ಒಮ್ಮತದಲ್ಲಿರುವುದು ಕಂಡುಬರುತ್ತದೆ. ಇವರಿಬ್ಬರೂ ಭಾರತದಲ್ಲಿ ಹಿಂದೂ ದೇಶ ಮತ್ತು ಮುಸ್ಲಿಂ ದೇಶ ಎನ್ನುವ ಎರಡು ದೇಶಗಳಿರುವುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಯಾರ ಮೇಲುಸ್ತುವಾರಿಯಲ್ಲಿ ಮತ್ತೊಬ್ಬರ ಅಸ್ತಿತ್ವ ನಿರ್ಣಯಿಸಲ್ಪಡುತ್ತದೆ ಎನ್ನುವ ವಾಗ್ವಾದ ಇವರಿಬ್ಬರ ನಡುವಿನ ವೈಮನಸ್ಸಾಗಿದೆ. ಎರಡು ದೇಶಗಳ ಭಾರತವನ್ನು ವಿಭಜಿಸಬೇಕು ಎಂದು ಜಿನ್ನಾ ಬಯಸಿದರೆ ಸಾವರ್ಕರ್ ಒಂದು ದೇಶದಲ್ಲಿ ಹಿಂದೂ ಪರಂಪರೆ ಆಚರಣೆಯ ಸಂವಿಧಾನವು ಜಾರಿಯಲ್ಲಿರುತ್ತದೆ. ಇದರ ಅಡಿಯಲ್ಲಿ ಮುಸ್ಲಿಮರು ಎರಡನೇ ದರ್ಜೆಯ ನಾಗರಿಕರಾಗಿ ಬದುಕಬೇಕು ಎಂದು ತಾಕೀತು ಮಾಡುತ್ತಾರೆ. ಆದರೆ ಸಾವರ್ಕರ್ ತಮ್ಮ ಇಂತಹ ಸಿದ್ಧಾಂತವನ್ನು ಬೋಧಿಸುವುದರ ಮೂಲಕ ಭಾರತದಲ್ಲಿ ಅಪಾಯಕಾರಿ, ಅಭದ್ರತೆಯ ವಾತಾವರಣ ಸೃಷ್ಟಿಸುತ್ತಾರೆ. ತಮ್ಮ ಈ ಯೋಜನೆಗೆ ಮುಸ್ಲಿಮರ ಪ್ರತಿಕ್ರಿಯೆ ಕುರಿತು ಸಾವರ್ಕರ್‌ಗೆ ಆಸಕ್ತಿ ಇಲ್ಲ. ಇದನ್ನು `ಬೇಕಿದ್ದರೆ ಸ್ವೀಕರಿಸಿ, ಬೇಡವಾಗಿದ್ದರೆ ಬಿಡಿʼ ಎನ್ನುವ ಧೋರಣೆಯನ್ನು ಅವರ ಮೇಲೆ ಹೇರಲಾಗುತ್ತದೆʼ ಎಂದು ಬರೆಯುತ್ತಾರೆ.

ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)
ಮುಂದಿನ ಪುಟಗಳಲ್ಲಿ ಗಾಂಧಿ, ಖಿಲಾಫತ್ ಚಳವಳಿ ಮತ್ತು ಮುಸ್ಲಿಮರ ಕುರಿತು ದೀರ್ಘವಾಗಿ ವಿವರಿಸುತ್ತಾರೆ. ಸಂಘ ಪರಿವಾರದವರು ಈ ಭಾಗದ ಗಾಂಧಿ ಮತ್ತು ಖಿಲಾಫತ್ ಚಳವಳಿ ಕುರಿತು ಅಂಬೇಡ್ಕರ್ ಅವರ ಟಿಪ್ಪಣೆಗಳನ್ನು ಪ್ರಚಾರ ಮಾಡುತ್ತಿದ್ದಾರೆ, ಆದರೆ ಸಾವರ್ಕರ್ ಮತ್ತು ಹಿಂದೂ ಮಹಾಸಭಾದ ಕುರಿತ ಟೀಕೆಗಳನ್ನು ಮರೆ ಮಾಚುತ್ತಾರೆ. ಇದರಿಂದ ಕಲಿಯಬೇಕಾದ ಪಾಠವೆಂದರೆ ಇತಿಹಾಸವನ್ನು ವರ್ತಮಾನದಲ್ಲಿ ಮಂಡಿಸುವಾಗ ವಿಚಾರಗಳ ಆಧಾರದಲ್ಲಿ ಪರ ವಿರೋಧ ನಿಲುವು ತೆಗೆದುಕೊಳ್ಳಬಾರದು, ಗತಕಾಲದ ಸಮಾಜೋ- ಸಾಂಸ್ಕೃತಿಕ-ಆರ್ಥಿಕ- ರಾಜಕೀಯ ಹಿನ್ನಲೆಯಲ್ಲಿ ವಸ್ತುನಿಷ್ಠವಾಗಿ ಅಧ್ಯಯನ ಮಾಡಬೇಕು ಎನ್ನುವ ತಿಳಿವಳಿಕೆ ಮುಖ್ಯವಾಗುತ್ತದೆ.
ಬಾಬಾ ಸಾಹೇಬರನ್ನು ಹಿಂದೂಯಿಸಂಗೆ ಜೀರ್ಣಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸಿರುವ ಆರ್‌ಎಸ್‌ಎಸ್ ಚಿತಾವಣೆಗೆ ವ್ಯತಿರಿಕ್ತವಾಗಿ ಪುಸ್ತಕದ ‘ಪಾಕಿಸ್ತಾನ ಅಗತ್ಯವಿದೆಯೆ’ ಎನ್ನುವ ಅಧ್ಯಾಯ 13ರಲ್ಲಿ ಅಭಿಪ್ರಾಯಗಳು ದಾಖಲಾಗಿವೆ. ಪುಟ 354-355ರಲ್ಲಿ, ಅಂಬೇಡ್ಕರ್ `ಹಿಂದೂ ರಾಜ್ ಜಾರಿಗೊಂಡರೆ ಈ ದೇಶಕ್ಕೆ ಬಲು ದೊಡ್ಡ ಅಪಾಯ ಎದುರಾಗುತ್ತದೆ. ಸ್ವಾತಂತ್ರ್ಯ, ಸಮಾನತೆ, ಬಂಧುತ್ವಕ್ಕೆ ಹಿಂದೂಯಿಸಂ ಬೆದರಿಕೆಯಾಗಿದೆ. ಪ್ರಜಾಪ್ರಭುತ್ವಕ್ಕೆ ಹೊಂದಿಕೊಳ್ಳುವುದಿಲ್ಲ. ಹಿಂದೂ ರಾಜ್‌ಅನ್ನು ಯಾವುದೇ ಬೆಲೆ ತೆತ್ತಾದರೂ ಪ್ರತಿಬಂಧಿಸಬೇಕು’ ಎಂದು ಎಚ್ಚರಿಸುತ್ತಾರೆ. ಸಂಘ ಪರಿವಾರ ಈ ಭಾಗದ ಕುರಿತು ಮಾತನಾಡುವುದಿಲ್ಲ. ಪ್ರಜಾಪ್ರಭುತ್ವವಾದಿಗಳು ಮಾತನಾಡಬೇಕಿದೆ. ಅವರ ಇತಿಹಾಸದ ತಿರುಚುವಿಕೆಯನ್ನು ಬಹಿರಂಗಗೊಳಿಸಬೇಕಿದೆ.
ಕೊನೆಯಿಲ್ಲದ ಚರ್ಚೆಗಳು…
ಒಂದು ಸೋಜಿಗದ ಸಂಗತಿಯೆಂದರೆ ಅಂಬೇಡ್ಕರ್ ಅವರು ‘ಪಾಕಿಸ್ತಾನ..’ ಪುಸ್ತಕ ಪ್ರಕಟಣೆಗೂ ಮೊದಲು ಜಾತಿ ವಿನಾಶ ಕೃತಿ, ಬಹಿಷ್ಕೃತ ಭಾರತ, ಮೂಕ ನಾಯಕ ಪತ್ರಿಕೆಗಳು, ಸಾರ್ವಜನಿಕ ಭಾಷಣಗಳಲ್ಲಿ ತೀವ್ರವಾಗಿ ಹಿಂದೂ ಧರ್ಮವನ್ನು ಕಟು ವಿಮರ್ಶೆಗೆ ಒಳಪಡಿಸುತ್ತಾರೆ. ಜಾತಿ ವ್ಯವಸ್ಥೆಯೇ ಇಲ್ಲಿನ ನಿರ್ಣಾಯಕ ಪಾತ್ರ ವಹಿಸುತ್ತದೆ, ಧರ್ಮವಲ್ಲ ಎಂದು ವಿಶ್ಲೇಷಿಸುತ್ತಾರೆ. ಆದರೆ ಪಾಕಿಸ್ತಾನ… ಪುಸ್ತಕದಲ್ಲಿ ತಮ್ಮ ಈ ಚಿಂತನೆಗಳಿಗೆ ಸ್ವಲ್ಪ ಬ್ರೇಕ್ ಕೊಟ್ಟು ಹಿಂದೂ ಧರ್ಮದ ಹುಳುಕುಗಳನ್ನು ಬಹಿರಂಗಗೊಳಿಸುತ್ತಲೇ ಅದರ ಅನಿವಾರ್ಯತೆ ಮತ್ತು ನಕಾರಾತ್ಮಕವಾಗಿಯೂ ಅದರ ಪ್ರಾಮುಖ್ಯತೆ ಕುರಿತು ಬರೆಯುತ್ತಾರೆ. ಇದು ಮತ್ತಷ್ಟು ಚರ್ಚೆಗಳನ್ನು ಬಯಸುತ್ತದೆ. ಆ ಕಾಲದ ಸಂದಿಗ್ಧತೆ ಮತ್ತು ಬಿಕ್ಕಟ್ಟುಗಳ ಹಿನ್ನಲೆಯಲ್ಲಿ ಈ ರೀತಿ ಸಮತೋಲನದಲ್ಲಿ ಬರೆದರೋ ಎನ್ನುವುದು ಸಹ ಚರ್ಚಿಸಬೇಕಾಗಿದೆ. ಪಾಕಿಸ್ತಾನದ ಬೇಡಿಕೆಯ ಹಿನ್ನಲೆಯಲ್ಲಿ ಎರಡೂ ಕಡೆಗೆ ಅನ್ಯಾಯವಾಗದಂತೆ ಸಂಧಾನಕಾರರಾಗಿ ಅವರೇ ಹೇಳಿಕೊಂಡಂತೆ `ಪ್ರಾಕ್ಸಿ ಸ್ಟೈಲ್ʼ ಅಳವಡಿಸಿಕೊಂಡು ತಮ್ಮ ಜವಬ್ದಾರಿ ನಿರ್ವಹಿಸಿದರು ಎನ್ನುವುದು ಸೂಕ್ತವೇನೋ. ಅಂಬೇಡ್ಕರ್, ‘ಈ ಪುಸ್ತಕವು ಭಾರತದ ರಾಜಕಾರಣ ಏನು? ಮತ್ತು ಎತ್ತʼ ಎಂಬುದರ ಕುರಿತಾಗಿದೆ ಎಂದು ಹೇಳಿರುವುದು ಸಹ ಕುತೂಹಲಕಾರಿಯಾಗಿದೆ. ಇಡೀ ಪುಸ್ತಕದಲ್ಲಿ ಪಾಕಿಸ್ತಾನದ ಪರವಾಗಿರುವವರನ್ನು ‘ಮುಸ್ಲಿಮರುʼ ಮತ್ತು ಇಂಡಿಯಾದ ಪರವಾಗಿರುವವರನ್ನು `ಹಿಂದೂಗಳುʼ ಎಂದು ಕರೆದಿರುವುದು ಇಂದಿನ ಸತ್ಯೋತ್ತರ ಕಾಲದಲ್ಲಿ ಅಸಹಜ ಎನಿಸುತ್ತದೆ ನಿಜ, ಆದರೆ ವಿಭಜನೆ ಪೂರ್ವದ ಯುಗಧರ್ಮವೇ ಬೇರೆಯಾಗಿತ್ತು ಎನ್ನುವ ಸತ್ಯದ ಹಿನ್ನಲೆಯಲ್ಲಿ ಈ ಕಥನವನ್ನು ನೋಡುವ ಕ್ರಮವನ್ನು ಓದುಗರು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. 16ನೇ ಶತಮಾನದ ಭಕ್ತಿಪಂಥ, 19ನೇ ಶತಮಾನದ ಸುಧಾರಣೆಯ ಕಾಲಘಟ್ಟವನ್ನು ಕಡೆಗಣಿಸಿ ಮಧ್ಯಯುಗೀನ ಕಾಲದ ಇತಿಹಾಸವನ್ನು ಹೆಚ್ಚು ಆಧರಿಸಿ ಬರೆದಿರುವುದು ಸಹ ಅಚ್ಚರಿ ಎನಿಸುತ್ತದೆ.

‘ಪಾಕಿಸ್ತಾನ..’ ಪುಸ್ತಕದಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್, ಹಿಂದೂ ಮಹಾಸಭಾ ಮತ್ತು ಬ್ರಿಟಿಷ್ ಸರ್ಕಾರವನ್ನು ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಬಹುಸಂಖ್ಯಾತ ಹಿಂದೂಗಳ ಮತಾಂಧತೆಯ ಕಾರಣ ತಾವು ದಮನಕ್ಕೆ ಒಳಗಾಗುತ್ತೇವೆ ಎಂದು ಮುಸ್ಲಿಮರ ಪ್ರತಿನಿಧಿಯಾಗಿರುವ ಮುಸ್ಲಿಂ ಲೀಗ್‌ನ ಆತಂಕವಾಗಿದ್ದರೆ, ತಾನು ಇವರ ರಾಜಕೀಯ ಪ್ರತಿನಿಧಿ ಎಂದು ಹೇಳಿಕೊಂಡ ಕಾಂಗ್ರೆಸ್ ನಂತರ ಇವರನ್ನು ನಿರ್ಲಕ್ಷಿಸಿದ ಸಂದರ್ಭಗಳು ಮತ್ತು ಹಿಂದೂಮಹಾಸಭಾದ ಬಹುಸಂಖ್ಯಾತವಾದದ ಮತಧರ್ಮಾಂಧತೆ- ಈ ಮೂರು ರಾಜಕೀಯ ಸಂಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ವಿಸ್ತೃತವಾಗಿ ಚರ್ಚಿಸುವ ಬಾಬಾಸಾಹೇಬರು, ಇಲ್ಲಿ ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸಿದರು ಎನ್ನುವ ಜನಪ್ರಿಯ ಕಥನಕ್ಕೆ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ. ಹಿಂದೂ-ಮುಸ್ಲಿಂ ನಡುವಿನ ಕೋಮು ಗಲಭೆಗಳು, ಕಾಂಗ್ರೆಸ್, ಹಿಂದೂ ಮಹಾಸಭಾ ಮತ್ತು ಮುಸ್ಲಿಂಲೀಗ್ ಪಕ್ಷಗಳ ಮಿತಿಗಳು, ಸಣ್ಣತನಗಳು ಮತ್ತು ಬ್ರಿಟಿಷರ ವಸಾಹತುಶಾಹಿ ನೀತಿಗಳು ಈ ಮೂರು ನೆಲೆಯಲ್ಲಿ ಅಧ್ಯಯನ ಮಾಡುವ ಅಂಬೇಡ್ಕರ್ ಅಂತಿಮವಾಗಿ ದೇಶ ವಿಭಜನೆಯನ್ನು ಬೆಂಬಲಿಸುತ್ತಾರೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)
ಇದರ 486 ಪುಟಗಳಿಂದ ಬಿಡಿ ಬಿಡಿಯಾದ ಸಾಲುಗಳನ್ನು ಆಯ್ಕೆ ಮಾಡಿಕೊಂಡು ತಮಗೆ(ಹಿಂದುತ್ವವಾದಿಗಳು) ಹಿತವೆನಿಸುವ ಕೆಲವನ್ನು ಪೂರ್ವಗ್ರಹಪೀಡಿತರಾಗಿ ಓದಿದಾಗ ಅಂಬೇಡ್ಕರ್ ಮುಸ್ಲಿಮರ ಟೀಕಾಕಾರರಾಗಿದ್ದರು ಎಂದು ಅನಿಸುವುದು ಸಹಜ. ಆದರೆ ‘ಪಾಕಿಸ್ತಾನ..’ ಪುಸ್ತಕವನ್ನು ಅದರ ಸಮಗ್ರತೆಯಲ್ಲಿ, ಬಹು ಆಯಾಮಗಳಲ್ಲಿ ಅಧ್ಯಯನ ಮಾಡಿದಾಗ ಅಂಬೇಡ್ಕರ್ ಮುಸ್ಲಿಮರನ್ನು `ರಾಷ್ಟ್ರೀಯತೆಯ ಆಕಾಂಕ್ಷಿಗಳುʼ ಎಂದು ವಿವರಿಸಿರುವುದು ಸ್ಪಷ್ಟವಾಗುತ್ತದೆ. ಸಾಮಾಜಿಕ ಸುಧಾರಣೆಗೆ ಸಂಬಂಧಿಸಿದಂತೆ ಹಿಂದೂಗಳು, ಮುಸ್ಲಿಮರು ಇಬ್ಬರೂ ಉತ್ತರಿಸಲು ತಪ್ಪಿಸಿಕೊಳ್ಳುತ್ತಾರೆ ಎಂದು ಅಂಬೇಡ್ಕರ್ ಹೇಳುತ್ತಾರೆ. ಆದರೆ ಹಿಂದುತ್ವವಾದಿಗಳು ಇಲ್ಲಿ ಕೇವಲ `ಮುಸ್ಲಿಮರುʼ ಎನ್ನುವುದನ್ನು ಮಾತ್ರ ಆಯ್ಕೆ ಮಾಡಿಕೊಂಡು ಅಪಪ್ರಚಾರ ಮಾಡುತ್ತಿರುವುದು ಅಂಬೇಡ್ಕರ್ ಅವರಿಗೂ ಮಾಡುವ ಅಪಚಾರವಾಗಿದೆ. ಪದೇ ಪದೇ ಕೋಮು ಗಲಭೆಗಳಿಗೆ ಕಾರಣವಾಗುವ ಹಿಂದೂ-ಮುಸ್ಲಿಂ ಸಂಬಂಧಗಳ ನಡುವಿನ ಅನುಮಾನಗಳು, ಸಾಮಾಜಿಕ-ಮಾನಸಿಕ ಒತ್ತಡಗಳನ್ನು ಗ್ರಹಿಸುವ ಅಂಬೇಡ್ಕರ್ ಪಕ್ಷಪಾತವಿಲ್ಲದೆ ಬರೆಯಬೇಕೆಂದು ನಿರ್ಧರಿಸಿರುವುದು ಸ್ಪಷ್ಟವಾಗುತ್ತದೆ. ಈ ಕಾರಣಕ್ಕೆ ಈ ಪುಸ್ತಕವು ಹಿಂದೂ, ಮುಸ್ಲಿಂ ಎರಡೂ ಕಡೆಯ ಧರ್ಮಾಭಿಮಾನಿಗಳಿಗೆ ಬೇಸರ ಉಂಟು ಮಾಡಿರುವುದು ಇದರ ಮಹತ್ವವನ್ನು ತೋರಿಸುತ್ತದೆ. ಆರಂಭದಲ್ಲಿ ಹೇಳಿದಂತೆ ಗಾಂಧಿ ಮತ್ತು ಜಿನ್ನಾ ಪ್ರತ್ಯೇಕ ಸಂದರ್ಭಗಳಲ್ಲಿ ‘ಪಾಕಿಸ್ತಾನ..’ ಪುಸ್ತಕವನ್ನು ರೆಫರ್ ಮಾಡುತ್ತಾರೆ. ಇದು ಸಹ ಮುಖ್ಯವಾಗುತ್ತದೆ. ಅಥವಾ ಈ ಹಿಂದೂ-ಮುಸ್ಲಿಂ ಸಂಘರ್ಷ ಆದಷ್ಟು ಬೇಗ ಅಂತ್ಯವಾದರೆ ಎಲ್ಲರೂ ‘ಸಾಮಾಜಿಕ ಸುಧಾರಣೆʼ ಕಡೆಗೆ ಗಮನವನ್ನು ಕೇಂದ್ರೀಕರಿಸಬಹುದು ಎಂದು ಬಾಬಾಸಾಹೇಬರು ಚಿಂತಿಸಿದ್ದರೇ?
1920-40ರವರೆಗಿನ ಎರಡು ದಶಕಗಳಲ್ಲಿ ಹಿಂದೂ-ಮುಸ್ಲಿಂ ಗಲಭೆಗಳು ಅಂಬೇಡ್ಕರ್ ಅವರಿಗೆ ಆತಂಕ ಉಂಟು ಮಾಡುತ್ತವೆ. ಈ ಪುಸ್ತಕದಲ್ಲಿ ಈ ಗಲಭೆಗಳನ್ನು ವಿವರವಾಗಿ ವಿಶ್ಲೇಷಿಸುತ್ತಾರೆ. ಈ ಕಾರಣಕ್ಕಾಗಿಯೂ ಆರಂಭದಲ್ಲಿ ದೇಶ ವಿಭಜನೆಯನ್ನು ವಿರೋಧಿಸುತ್ತಾರೆ. ಆರಂಭದ ಅಧ್ಯಾಯಗಳಲ್ಲಿ ಕೆನಡಾದಲ್ಲಿ ಫ್ರೆಂಚರು ಬ್ರಿಟಿಷರ ಜೊತೆ ರಾಜಕೀಯ ಒಗ್ಗಟ್ಟಿನಿಂದಿದ್ದರು, ಇಂಗ್ಲಿಷರು ದಕ್ಷಿಣ ಆಫ್ರಿಕಾದಲ್ಲಿ ಡಚ್ಚರ ಜೊತೆಗೆ ರಾಜಕೀಯ ಐಕ್ಯತೆಯಿಂದ ಇದ್ದರು, ಫ್ರೆಂಚರು ಮತ್ತು ಇಟಾಲಿಯನ್ನರು ಸ್ವಿಜರ್ರಲೆಂಡಿನಲ್ಲಿ ಜರ್ಮನಿಗಳ ಜೊತೆಗೆ ರಾಜಕೀಯ ಒಗ್ಗಟ್ಟಿನಿಂದಿದ್ದರು. ನಮಗೇಕೆ ಇಂಡಿಯಾದ ಸಂವಿಧಾನದ ಅಡಿಯಲ್ಲಿ ಒಗ್ಗಟ್ಟಾಗಿ ಜೀವಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸುತ್ತಾರೆ. ನಂತರ ಕ್ರಮೇಣ ಎರಡು ದೇಶ ಸಿದ್ಧಾಂತದ ಪ್ರಬಲ ಪ್ರತಿಪಾದಕರಾಗುವ ಆ ಪ್ರಕ್ರಿಯೆ ಇಂದಿನ ಸತ್ಯೋತ್ತರ ಕಾಲದಲ್ಲಿ ಮುಖ್ಯವಾದ ಆಕರ ಭಾಗವಾಗಿದೆ. ಪ್ರತಿಯೊಬ್ಬ ಸಂಶೋಧಕರೂ ಇದು ಅಧ್ಯಯನ ಮಾಡಬೇಕಾದ ಕೃತಿಯಾಗಿದೆ. ತಮ್ಮ ಚಿಂತನೆಗಳಿಗೆ ಅಂಥೆಟಿಸಿಟಿ ಪಡೆದುಕೊಳ್ಳಲು ಪದೇ ಪದೇ ಟರ್ಕಿ, ಜೆಕಸ್ಲೋವೇಕಿಯಾ, ಬರ್ಮಾ ಮುಂತಾದ ದೇಶಗಳ ವಿಘಟನೆಯನ್ನು ಪ್ರಸ್ತಾಪಿಸುತ್ತಾರೆ. ಇದು ಇತಿಹಾಸವನ್ನು ವರ್ತಮಾನದ ಜೊತೆಗೆ ಪಕ್ಕಕ್ಕಿಟ್ಟು ವಸ್ತುನಿಷ್ಠವಾಗಿ ಅಧ್ಯಯನ ಮಾಡುವ ಮಾದರಿಗೆ ಸಾಕ್ಷಿಯಾಗಿದೆ.
ಇದನ್ನೂ ಓದಿರಿ: ‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-2)
4 ನವೆಂಬರ್ 1948ರಲ್ಲಿ ಅಂಬೇಡ್ಕರ್ ಸಂವಿಧಾನ ದಸ್ತಾವೇಜನ್ನು ಸದನದಲ್ಲಿ ಮಂಡಿಸುತ್ತಾ, ‘ಬಹುಸಂಖ್ಯಾತರು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುವಂತಿಲ್ಲ, ಅಲ್ಪಸಂಖ್ಯಾತರ ರಕ್ಷಣೆಯ ಹೊಣೆಗಾರಿಕೆ ಅವರ ಮೇಲಿದೆʼ ಎಂದು ಹೇಳುತ್ತಾರೆ. ಆಗ ಗಾಂಧಿಯವರ ಅನುಯಾಯಿ, ಜಬ್ಬಲಪುರ ಸಂಸದ ಸೇಥ್ ಗೋಬಿನ್ ದಾಸ್, ‘ನಾವು ಯಾವುದೇ ಅಲ್ಪಸಂಖ್ಯಾತರನ್ನು ಅಂಗವಿಕಲರು ಎಂದು ಕರೆಯಬೇಕಿಲ್ಲ.. ಅದರಲ್ಲಿಯೂ ಎರಡು ದೇಶ ನೀತಿ ಪ್ರತಿಪಾದಿಸಿದವರನ್ನು ತುಷ್ಟೀಕರಿಸಬೇಕಿಲ್ಲ, ಇಲ್ಲಿ ಒಂದು ಸಂಸ್ಕೃತಿ ಮಾತ್ರ ಆಚರಣೆಯಲ್ಲಿರುತ್ತದೆʼ ಎಂದು ಹೇಳುತ್ತಾರೆ. ಆದರೆ ದಾಸ್ ಅವರು ಅಂಬೇಡ್ಕರ್ ಅವರ ಅಲ್ಪಸಂಖ್ಯಾತರು ಎಂದರೆ ಶೋಷಿತ ಸಮುದಾಯಗಳು ಎನ್ನುವ ಅರ್ಥವನ್ನು ಮನಗಾಣದೆ ಕೇವಲ ಮುಸ್ಲಿಮರು ಎಂದು ಭಾವಿಸಿ ತಮ್ಮ ಅಜ್ಞಾನವನ್ನು ಪ್ರಕಟಿಸುತ್ತಾರೆ. ಇದನ್ನು ವಿರೋಧಿಸುವ ನೆಹರೂ ಅವರು, `ಒಂದು ಸಂಸ್ಕೃತಿ ಎಂದರೆ ಅದು ಏಕರೂಪಿಯನ್ನು ಸಮರ್ಥಿಸುತ್ತದೆ.. ʼ ಎಂದು ಟೀಕಿಸುತ್ತಾರೆ. ಈ ಎಲ್ಲ ಹಿನ್ನಲೆಯಲ್ಲಿ `ಪಾಕಿಸ್ತಾನ..’ ಪುಸ್ತಕವನ್ನು ಸಂವಿಧಾನ ರಚನಾ ಸಭೆಯ ಚರ್ಚೆಗಳ ಜೊತೆಗಿಟ್ಟು ಅಧ್ಯಯನ ಮಾಡಬೇಕಾಗುತ್ತದೆ. ಆಗಲೇ ನಮಗೆ ಅಂಬೇಡ್ಕರ್ ಆಶಯಗಳ ಸಮಗ್ರತೆಯ ಚಿತ್ರಣ ದೊರಕುತ್ತದೆ. ಇದರ ಜೊತೆಗೆ 1947ರಲ್ಲಿ ಪ್ರಕಟವಾದ ಅಂಬೇಡ್ಕರ್ ಅವರ `ಸ್ಟೇಟ್ಸ್ ಅಂಡ್ ಮೈನಾರಿಟೀಸ್ʼ(ಪ್ರಭುತ್ವ ಮತ್ತು ಅಲ್ಪಸಂಖ್ಯಾತರು) ಪುಸ್ತಕವನ್ನು ಸಹ ಓದಬೇಕಿದೆ. ಎಲ್ಲ ಶೋಷಿತರು ಅಲ್ಪಸಂಖ್ಯಾತರು ಎಂದು ಪರಿಗಣಿಸಿದ ಬಾಬಾಸಾಹೇಬರು ಅವರಿಗಾಗಿ ಸಂವಿಧಾನ ಪರಿಕಲ್ಪನೆಯನ್ನು ರೂಪಿಸುತ್ತಾರೆ. ಇದನ್ನು ಅರಿತರೆ `ಪಾಕಿಸ್ತಾನ ಅಥವಾ ಭಾರತದ ವಿಭಜನೆ’ ಪುಸ್ತಕದಲ್ಲಿನ ಹೊಳಹುಗಳನ್ನು ಗ್ರಹಿಸಬಹುದು.
(ಮುಗಿಯಿತು..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ




