‘ಕರ್ನಾಟಕ’ ಎಂಬ ಹೆಸರಾಗಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಕಳೆದ 50 ವರ್ಷಗಳಲ್ಲಿ ಕರ್ನಾಟಕ ಸಾಧಿಸಿದ್ದನ್ನು ಸಂಭ್ರಮಿಸಲೇಬೇಕು. ಸಾಮಾನ್ಯವಾಗಿ ಇದರ ಶ್ರೇಯಸ್ಸನ್ನು ಈ ರಾಜ್ಯಕ್ಕೆ ಕೊಡುಗೆ ನೀಡಿದ ಅನೇಕ ಪ್ರಸಿದ್ಧ ಸಾಹಿತಿಗಳಿಗೆ, ಜನಪ್ರಿಯ ರಾಜಕಾರಣಿಗಳಿಗೆ ಹಾಗೂ ಪ್ರಖ್ಯಾತ ಮುಖಂಡರುಗಳಿಗೆ ಅರ್ಪಿಸಲಾಗುತ್ತದೆ. ಕರ್ನಾಟಕದ ಪ್ರಗತಿಯಲ್ಲಿ ಇವರೆಲ್ಲರ ಪಾತ್ರವೂ ಖಂಡಿತ ಇದೆ. ಆದರೆ ಈ ರಾಜ್ಯವನ್ನು ರೂಪಿಸುವುದರಲ್ಲಿ ಮಹಾಜನರಿಗಿಂತಲೂ ಹೆಚ್ಚಿನ ಪಾತ್ರ ನಿರ್ವಹಿಸಿರುವುದು ಈ ನಾಡಿನ ಸಾಮಾನ್ಯ ಜನರು. ಜನಚಳವಳಿಗಳ ರೂಪದಲ್ಲಿ ಜನಸಾಮಾನ್ಯರು ಬೃಹತ್ ತೇರನ್ನು ಎಳೆಯುವ ಮಹಾಶಕ್ತಿಯಂತೆ ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕದ ಜನಚಳವಳಿಗಳ ಪಕ್ಷಿನೋಟವನ್ನು ಕಟ್ಟಿಕೊಡುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಬೇಕೆಂದೇ ಈ ಚಳವಳಿಗಳನ್ನು ರೂಪಿಸುವುದರಲ್ಲಿ ಪಾತ್ರವಹಿಸಿದ ನಾಯಕ, ನಾಯಕಿಯರ ಹೆಸರುಗಳನ್ನು ಅವೈಡ್ ಮಾಡಲಾಗಿದೆ. ಎರಡು ಕಾರಣಗಳಿಗಾಗಿ; ಒಂದೋ ಕೆಲವು ಹೆಸರುಗಳನ್ನು ಉಲ್ಲೇಖಿಸಿದಾಗ ಹಲವು ಹೆಸರುಗಳು ಬಿಟ್ಟುಹೋಗುವ ಅಪಾಯವಿದೆ. ಎರಡನೆಯದಾಗಿ ಮತ್ತೆ ದೊಡ್ಡ ಜನರೇ ಕಣ್ಣ ಮುಂದೆ ಬಂದು, ಸಾಮಾನ್ಯರ ಹಾಗೂ ಚಳವಳಿಗಳ ಕೊಡುಗೆ ಗೌಣಗೊಳ್ಳುವ ಅಪಾಯವಿದೆ.
8 ಚಳವಳಿಗಳು ಕರ್ನಾಟಕಕ್ಕೆ ದೇಹ ಮತ್ತು ಜೀವಚೈತನ್ಯವನ್ನು ನೀಡುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದನ್ನು ಇಲ್ಲಿ ಗುರುತಿಸಲಾಗಿದೆ. ಅವುಗಳೆಂದರೆ 1. ಕನ್ನಡ ಚಳವಳಿ 2. ಕಮ್ಯುನಿಸ್ಟ್ ಚಳವಳಿ 3. ದಲಿತ ಚಳವಳಿ 4. ರೈತ ಚಳವಳಿ 5. ಪರಿಸರ ಚಳವಳಿ 6. ನಕ್ಸಲೈಟ್ ಚಳವಳಿ 7. ಮಹಿಳಾ ಚಳವಳಿ 8. ಸೌಹಾರ್ದ ಚಳವಳಿ. ಈ ಚಳವಳಿಗಳ ಸಾಧನೆ ಮತ್ತು ವೈಫಲ್ಯಗಳು ಕೊಟ್ಟು ಹೋಗಿರುವ ಪಾಠಗಳೇ ಭವಿಷ್ಯದ ಹಾದಿಗೆ ಅತ್ಯಗತ್ಯವಾದ ದೀಪಸ್ತಂಬಗಳು.
ಕನ್ನಡ ಚಳವಳಿ
ಕರುನಾಡು ‘ಕರ್ನಾಟಕ’ ರಾಜ್ಯವಾಗಿ ಹೆಸರು ಹಾಗೂ ರೂಪ ಪಡೆದದ್ದು 1973ರಲ್ಲಿ. ಆದರೆ ಅದಕ್ಕಾಗಿನ ದನಿ ರೂಪಗೊಂಡದ್ದು ಅದಕ್ಕೂ ನೂರು ವರ್ಷಗಳ ಹಿಂದಿನಿಂದ. 1890ರಲ್ಲಿ ಧಾರವಾಡದಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪನೆಗೊಂಡು ಕನ್ನಡವನ್ನು ಮರುಕಟ್ಟುವ ಕೆಲಸ ಸಾಂಸ್ಥಿಕ ರೂಪ ಪಡೆಯುತ್ತದೆ. 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡು ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸುವ ಪರಿಪಾಠ ಪ್ರಾರಂಭವಾಗುತ್ತದೆ. 1920ರಲ್ಲಿ ಸ್ವಾತಂತ್ರ್ಯ ಚಳವಳಿಗೆ ನೇತೃತ್ವ ನೀಡುತ್ತಿದ್ದ ಕಾಂಗ್ರೆಸ್ ಮುಂದಾಳತ್ವದ ಮೇಲೆ ಒತ್ತಡ ತಂದು “ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಕಮಿಟಿ’’ಯನ್ನು ರಚಿಸಲಾಗುತ್ತದೆ. ಇದರ ಮೂಲಕ ಮೊಟ್ಟಮೊದಲ ಬಾರಿಗೆ ಕರ್ನಾಟಕಕ್ಕೆ ಒಂದು ರಾಜಕೀಯ ಐಡೆಂಟಿಟಿಯನ್ನು ತಂದುಕೊಡಲಾಗುತ್ತದೆ.
ಬ್ರಿಟಿಷ್ ಭಾರತದಲ್ಲಿ ಕರ್ನಾಟಕ 20 ಆಡಳಿತ ವ್ಯವಸ್ಥೆಗಳಡಿ ಹಂಚಿಹೋಗಿತ್ತು. 1947ರ ನಂತರವೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಮುಂದುವರೆದಿರುತ್ತದೆ. ಹಾಗಾಗಿ ಕರ್ನಾಟಕವನ್ನು ಏಕೀಕರಣಗೊಳಿಸಬೇಕು ಎಂಬ ಚಳವಳಿ ಎಲ್ಲಾ ಭಾಗದ ಕನ್ನಡಿಗರ ಮನದಾಳದ ಬಯಕೆಯಾಗಿ ರೂಪ ಪಡೆಯುತ್ತದೆ. 1953ರಲ್ಲಿ ಹೈದರಾಬಾದಿನಲ್ಲಿ ನಡೆಯುವ ಕಾಂಗ್ರೆಸ್ ಅಧಿವೇಶನದಲ್ಲಿ ಆಂಧ್ರಪ್ರದೇಶ ರಚನೆಗೆ ಅನುಮೋದನೆ ನೀಡಲಾಗುತ್ತದೆ. ಆದರೆ ಕರ್ನಾಟಕದ ರಚನೆಯನ್ನು ನಿರ್ಲಕ್ಷಿಸಲಾಗುತ್ತದೆ. ಇದನ್ನು ಪ್ರತಿಭಟಿಸಿ ಧಾರವಾಡದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭವಾಗುತ್ತದೆ. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿ ಪ್ರತಿಭಟನೆಗಳು ಪ್ರಾರಂಭವಾಗುತ್ತವೆ. ಹುಬ್ಬಳ್ಳಿಯಲ್ಲಿ ಲಾಠಿ ಚಾರ್ಜ್ ನಡೆದು ಅನೇಕರು ಗಾಯಗೊಳ್ಳುತ್ತಾರೆ ಮತ್ತು ಬಂಧನಕ್ಕೊಳಗಾಗುತ್ತಾರೆ. ಇದು ಪ್ರತಿಭಟನೆಗಳ ಕಾವನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ಈ ಸಾಮಾಜಿಕ ಒತ್ತಡದ ಪರಿಣಾಮವಾಗಿ 1956ರಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯಗಳನ್ನೆಲ್ಲಾ ಒಟ್ಟುಗೂಡಿಸಿ ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಗುತ್ತದೆ. ಆದರೆ ಕಾಸರಗೋಡು ಮತ್ತಿತರ ಕೆಲವು ಭಾಗಗಳು ಹೊರಗುಳಿಯುತ್ತವೆ. ಹೋರಾಟ ಮುಂದುವರೆಯುತ್ತದೆ. ಕೊನೆಗೆ 1973ರ ನವೆಂಬರ್ 1ರಂದು ‘ಕರ್ನಾಟಕ’ ಎಂಬ ನಾಮಕರಣ ಮಾಡಲಾಗುತ್ತದೆ.

ಕನ್ನಡ ಮಾತನಾಡುವ ಪ್ರಾಂತ್ಯಗಳು ಮೈಸೂರು ರಾಜ್ಯವಾಗಿ ರೂಪಗೊಂಡರೂ ಕನ್ನಡ ಭಾಷೆಗೆ ಆದ್ಯತೆಯ ಸ್ಥಾನ ದಕ್ಕಿರುವುದಿಲ್ಲ. ಸಂಸ್ಕೃತ ಪ್ರಥಮ ಭಾಷೆಯಾಗಿ ಮುಂದುವರೆಯುತ್ತದೆ. ದ್ವಿತೀಯ ಸ್ಥಾನಕ್ಕೆ ಇಂಗ್ಲಿಷ್ ಬಂದು, ಕನ್ನಡ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ. ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂಬ ಕೂಗು ಬಲಗೊಳ್ಳತೊಡಗುತ್ತದೆ. ಪರಿಣಾಮವಾಗಿ ದೇವರಾಜ ಅರಸು ಕಾಲದಲ್ಲಿ 1978ರಲ್ಲಿ ತ್ರಿಭಾಷಾ ಸೂತ್ರವನ್ನು ತಂದು ಪ್ರೌಢಶಾಲೆಯತನಕ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಭಾಷೆಯನ್ನಾಗಿ ಮಾಡಲಾಗುತ್ತದೆ. ಆದರೆ 1980ರಲ್ಲಿ ಗುಂಡೂರಾವ್ ಸರ್ಕಾರ ಅಧಿಕಾರಕ್ಕೆ ಬಂದು ಈ ನಿರ್ಣಯವನ್ನು ಬದಲಾಯಿಸಿ ಸಂಸ್ಕೃತಕ್ಕೆ ಮತ್ತೆ ಪ್ರಥಮ ಭಾಷೆಯ ಸ್ಥಾನ ಕಲ್ಪಿಸಲಾಗುತ್ತದೆ. ಇದರ ವಿರುದ್ಧ ಹೋರಾಟಗಳು ಸಿಡಿಯುತ್ತವೆ. ಜನರ ಹೋರಾಟಕ್ಕೆ ಮಣಿದು ವಿನಾಯಕ ಕೃಷ್ಣ ಗೋಕಾಕ್ ಅವರ ನೇತೃತ್ವದ ಸಮಿತಿಯನ್ನು ನೇಮಿಸಲಾಗುತ್ತದೆ. ಗೋಕಾಕ್ ವರದಿ ಸಂಸ್ಕೃತ ಪ್ರಥಮ ಭಾಷೆಯಾಗಿರಬಾರದು, ಪ್ರೌಢಶಾಲೆಯತನಕ ಕನ್ನಡವೇ ಪ್ರಥಮ ಭಾಷೆಯಾಗಿರಬೇಕು. ಮೂರನೇ ತರಗತಿಯಿಂದ ಅದು ಕಡ್ಡಾಯ ಭಾಷೆಯಾಗಿರಬೇಕು ಎಂಬ ಶಿಫಾರಸನ್ನು ಮುಂದಿಡುತ್ತದೆ. “ಗೋಕಾಕ್ ವರದಿ ಜಾರಿಯಾಗಲಿ’’ ಎಂಬ ನಿನಾದ ಇಡೀ ರಾಜ್ಯದಲ್ಲಿ ಮೊಳಗುತ್ತದೆ ಮತ್ತು 1982ರಲ್ಲಿ ಕಾಯ್ದೆಯಾಗುತ್ತದೆ.

ನಂತರ ಜಾಗತೀಕರಣದ ಶಕೆ ಪ್ರಾರಂಭವಾಗಿ ಇಂಗ್ಲಿಷಿನ ಅವಲಂಬನೆ ಹೆಚ್ಚಾಗುತ್ತದೆ. ಹಾಗಾಗಿ ಕನ್ನಡಕ್ಕಾಗಿನ ದನಿಯೂ ಕ್ರಮೇಣ ದುರ್ಬಲಗೊಳ್ಳುತ್ತದೆ. ಸರ್ಕಾರ ಹಂತಹಂತವಾಗಿ ಕನ್ನಡವನ್ನು ಕಡೆಗಣಿಸುವ, ಇಂಗ್ಲಿಷನ್ನು ಪ್ರೇರೇಪಿಸುವ ನೀತಿಗೆ ಹೊರಳಿಕೊಳ್ಳುತ್ತದೆ.
ಇಷ್ಟು ಹೊತ್ತಿಗೆ ಕನ್ನಡ ಚಳವಳಿಯಲ್ಲಿ ಒಡಕು ಪ್ರಾರಂಭವಾಗಿ ಅನೇಕ ವ್ಯಕ್ತಿ ಕೇಂದ್ರಿತ ಕನ್ನಡ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಜೊತೆಗೆ ಭಾಷಾ ದುರಭಿಮಾನದ ಧಾರೆಯೂ ಇದರೊಳಗೆ ಬೆಳೆಯತೊಡಗುತ್ತದೆ. ಈ ಚಳವಳಿಯಲ್ಲಿ ಸೇರಿಕೊಳ್ಳುವ ಬಲಪಂಥೀಯರು ಅದನ್ನು ಅಲ್ಪಸಂಖ್ಯಾತರ ವಿರುದ್ಧವಾಗಿ, ತಮಿಳು – ಮರಾಠಿ ಮುಂತಾದ ಭಾಷೆಗಳ ವಿರುದ್ಧವಾದ ಹೋರಾಟಗಳಾಗಿ ರೂಪಿಸಲು ಪ್ರಯತ್ನಿಸುತ್ತಾರೆ. ಕನ್ನಡ ಚಳವಳಿಯನ್ನು ಈ ದುರಭಿಮಾನದಿಂದ ಹೊರತಂದು ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಕರ್ನಾಟಕಕ್ಕೆ ಲಗ್ಗೆ ಇಡುತ್ತಿದ್ದ ಬಹು ರಾಷ್ಟ್ರೀಯ ಕಂಪನಿಗಳ ವಿರುದ್ಧ ತಿರುಗಿಸುವ ಪ್ರಯತ್ನಗಳು ನಡೆಯುತ್ತವೆ. ಡಂಕಲ್ ಪ್ರಸ್ತಾಪಗಳನ್ನು ವಿರೋಧಿಸಿ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟ ರೂಪಗೊಳ್ಳುತ್ತದೆ. ಜಪಾನ್ ಟೌನ್ ಶಿಪ್, ನಂದಿಹಳ್ಳಿ ಎಸ್‌ಇಜೆಡ್ ಮುಂತಾದವುಗಳ ವಿರುದ್ಧವಾಗಿ ದಿಟ್ಟ ಹೋರಾಟಗಳು ನಡೆಯುತ್ತವೆ. ಆದರೆ ಈ ಪ್ರಯತ್ನಗಳು ಒಂದು ಸಮಗ್ರ ಚಳವಳಿಯ ರೂಪ ಪಡೆಯುವುದರಲ್ಲಿ ವಿಫಲಗೊಳ್ಳುತ್ತವೆ. ಕನ್ನಡ ಚಳವಳಿ ಇಂದಿನ ಸಂದರ್ಭದಲ್ಲಿ ಮರು ಪ್ರಸ್ತುತತೆ ಕಂಡುಕೊಳ್ಳುವ ಹುಡುಕಾಟದಲ್ಲಿದೆ.
ಕಮ್ಯುನಿಸ್ಟ್ ಚಳವಳಿ
ಕರ್ನಾಟಕದ ಶ್ರಮಜೀವಿ ವರ್ಗವನ್ನು ಸಂಘಟಿಸುವುದರಲ್ಲಿ, ಅವರ ಬದುಕಿನ ಆಶಯಗಳನ್ನು ಹಕ್ಕೊತ್ತಾಯಗಳನ್ನಾಗಿ ರೂಪಿಸುವುದರಲ್ಲಿ, ಎಡೆಬಿಡದ ಹೋರಾಟಗಳನ್ನು ಸಂಘಟಿಸಿ ಅವರ ಬದುಕಿನ ಘನತೆಯನ್ನು ಮೇಲೆತ್ತುವುದರಲ್ಲಿ ಕಮ್ಯುನಿಸ್ಟ್ ಚಳವಳಿಯ ಪಾತ್ರ ಬಹಳ ಮುಖ್ಯವಾದುದು. ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ ಸ್ವಲ್ಪ ಲೇಟ್ ಎಂಟ್ರಿ ಎಂದೇ ಹೇಳಬಹುದು. ಆದರೆ ಸುತ್ತಮುತ್ತಲ ಮುಂಬೈ ಮತ್ತು ಮದ್ರಾಸಿನಲ್ಲಿ ಕಮ್ಯುನಿಸ್ಟರ ನೇತೃತ್ವದಲ್ಲಿ ಪ್ರಬಲ ಕಾರ್ಮಿಕ ಚಳವಳಿ ನಡೆಯುತ್ತಿತ್ತು. ತೆಲಂಗಾಣ ಹಾಗೂ ಮಲಬಾರ್ ಪ್ರಾಂತ್ಯದಲ್ಲಿ ಭೂ ಹೋರಾಟಗಳು ಬಿರುಸಾಗಿ ಸಾಗುತ್ತಿದ್ದವು. 1943ರಲ್ಲಿ ಕಮ್ಯುನಿಸ್ಟ್ ಪಾರ್ಟಿಯ ರಚನೆಯೂ ಆಯಿತು. ಆಗ ಇದ್ದದ್ದು ಒಂದೇ ಕಮ್ಯುನಿಸ್ಟ್ ಪಕ್ಷ ಸಮೈಕ್ಯ- “ಭಾರತ ಕಮ್ಯನಿಸ್ಟ್ ಪಕ್ಷ’’. ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಿಜಾಪುರ, ಬೆಂಗಳೂರು ಮತ್ತು ಕೆಜಿಎಫ್ ಮುಖ್ಯ ಕಮ್ಯುನಿಸ್ಟ್ ನೆಲೆಗಳಾಗಿದ್ದವು. ನೇಕಾರ ಕಾರ್ಮಿಕರು, ಹೆಂಚು ಕಾರ್ಮಿಕರು, ಬೀಡಿ ಕಾರ್ಮಿಕರು, ಗೋಡಂಬಿ ಫ್ಯಾಕ್ಟರಿ ಕಾರ್ಮಿಕರು ಹಾಗೂ ಗಣಿ ಕಾರ್ಮಿಕರ ನಡುವೆ ಕಮ್ಯುನಿಸ್ಟ್ ಚಳವಳಿ ಭದ್ರ ನೆಲೆಯಾಗಿ ರೂಪಗೊಂಡು ಈ ಜನ ವರ್ಗಗಳ ಬದುಕಿನ ರಕ್ಷಣೆಗಾಗಿ ಅನೇಕ ಹೋರಾಟಗಳನ್ನು ಸಂಘಟಿಸುತಿತ್ತು.
ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)
ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಕಮ್ಯುನಿಸ್ಟ್ ಚಳವಳಿ ಮೂರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿತು. 1. ಕರ್ನಾಟಕದ ಏಕೀಕರಣ. 2. ಕಾರ್ಮಿಕರ ವೇತನ ಹೆಚ್ಚಳ 3. ಉಳುವವರಿಗೇ ಭೂಮಿ. ಏಕೀಕರಣ ಚಳವಳಿಯನ್ನು ಕಮ್ಯುನಿಸ್ಟರು ಬೆಂಬಲಿಸಿದರು. “ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್’’ ಎಂಬ ವೇದಿಕೆಯ ಮೂಲಕ ಎಲ್ಲಾ ಹೋರಾಟಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇದೇ ಹೊತ್ತಿನಲ್ಲಿ ಟ್ರೇಡ್ ಯೂನಿಯನ್ ಚಳವಳಿಯನ್ನು ರಾಜ್ಯದ ಬಹುತೇಕ ಭಾಗಗಳಿಗೆ ವಿಸ್ತರಿಸಿ ಎಐಟಿಯುಸಿ ಹೆಸರಿನಲ್ಲಿ ಕಾರ್ಮಿಕ ಚಳವಳಿಯನ್ನು ಬಲಪಡಿಸುತ್ತಾರೆ. ವೇತನ ಹೆಚ್ಚಳಕ್ಕಾಗಿ, ರಜೆ, ಅಪಘಾತ ಪರಿಹಾರ, ಬೋನಸ್, ಪಿಎಫ್ ಮುಂತಾದ ಸವಲತ್ತುಗಳಿಗಾಗಿ ಅನೇಕ ಹೋರಾಟಗಳನ್ನು ಮಾಡುತ್ತಾರೆ. ಬೆಂಗಳೂರು, ಭದ್ರಾವತಿ, ದಾವಣಗೆರೆ, ಹುಬ್ಬಳ್ಳಿ ಹಾಗೂ ಮಂಗಳೂರು ಕಾರ್ಮಿಕ ಹೋರಾಟದ ಹೊಸ ಕೇಂದ್ರಗಳಾಗಿ ರೂಪಗೊಳ್ಳುತ್ತವೆ. ಆ ಸಂದರ್ಭದಲ್ಲೇ ಗ್ರಾಮೀಣ ಭಾಗದಲ್ಲೂ ಗೇಣಿ ರೈತರು ಹಾಗೂ ಕೃಷಿ ಕೂಲಿಗಳ ನಡುವೆ ರೈತ ಸಂಘಟನೆಯನ್ನು ಕಟ್ಟುವ ಕೆಲಸ ವಿಸ್ತಾರ ಪಡೆಯುತ್ತದೆ. ಗೇಣಿ ವಿರೋಧಿ ಹೋರಾಟ ಬಿರುಸು ಪಡೆಯುವುದರಲ್ಲಿ ಕಮ್ಯುನಿಸ್ಟ್ ಚಳವಳಿಯ ದೊಡ್ಡ ಪಾತ್ರವಿದೆ. ತೀರ್ಥಹಳ್ಳಿ ಗೇಣಿ ಹೋರಾಟದ ಕೇಂದ್ರವಾಗಿರುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅನೇಕ ರೈತ ಹೋರಾಟಗಳಿಗೆ ಕಮ್ಯುನಿಸ್ಟರು ನೇತೃತ್ವ ನೀಡುತ್ತಾರೆ.
ಕಮ್ಯುನಿಸ್ಟ್ ಚಳವಳಿಗೆ ಮೊದಲ ಪೆಟ್ಟು ಬೀಳುವುದು 1964ರಲ್ಲಿ ನಡೆದ ಅದರ ವಿಭಜನೆಯಲ್ಲಿ. ಇದಕ್ಕೆ ಪ್ರಧಾನವಾಗಿ ಮೂರು ಕಾರಣಗಳಿರುತ್ತವೆ. ಮೊದಲನೆಯದು ಬ್ರಿಟೀಷೋತ್ತರ ಭಾರತದ ಕ್ರಾಂತಿಯ ಹಾದಿ ಯಾವುದು ಎಂಬ ವಿಚಾರ. ಚುನಾವಣೆಗಳ ಮೂಲಕ ಕ್ರಾಂತಿ ಸಾಧ್ಯವೋ ಇಲ್ಲವೋ ಎಂಬ ಜಿಜ್ಞಾಸೆ. ಎರಡನೆಯದು ನೆಹರೂ ಸರ್ಕಾರದ ಬಗ್ಗೆ ನಮ್ಮ ಧೋರಣೆ ಏನಾಗಿರಬೇಕು ಎಂಬ ವಿಚಾರ. ಮೂರನೆಯದಾಗಿ 1962ರಲ್ಲಿ ಭಾರತ – ಚೀನಾ ಯುದ್ಧ ಪ್ರಾರಂಭವಾದಾಗ ಏನು ನಿಲುವು ತಾಳಬೇಕು ಎಂಬ ವಿಚಾರ. ಈ ಸಂಬಂಧ ವಾಗ್ವಾದ ನಡೆದು ಕಮ್ಯುನಿಸ್ಟ್ ಪಕ್ಷ CPI ಮತ್ತು CPM ಎಂದು ಇಬ್ಭಾಗವಾಗುತ್ತದೆ. ಬೆಳವಣಿಗೆಯ ದಿಕ್ಕಿನಲ್ಲಿದ್ದ ಕಮ್ಯುನಿಸ್ಟ್ ಚಳವಳಿ ಕುಸಿತದತ್ತ ಮುಖಮಾಡುತ್ತದೆ.
ತದನಂತರವೂ ಎರಡೂ ಪಕ್ಷಗಳ ನೇತೃತ್ವದಲ್ಲಿ ಕಾರ್ಮಿಕ ಹಾಗೂ ಕೃಷಿ ಕೂಲಿಗಳ ನಡುವಿನ ಹೋರಾಟಗಳು ಮುಂದುವರೆಯುತ್ತವೆ. ಸಾರ್ವಜನಿಕ ಉದ್ದಿಮೆಗಳು ಬೆಳೆಯುತ್ತಿರುತ್ತವೆ. ಅದರ ಜೊತೆಜೊತೆಯಲ್ಲೇ ಕಾರ್ಮಿಕ ವರ್ಗದ ಹೋರಾಟ ಸಹ. ದುಡಿಯುವ ಜನರು ಪಡೆದುಕೊಂಡಿರುವ ಅನೇಕ ಹಕ್ಕುಗಳು, ಲಕ್ಷಾಂತರ ಗ್ರಾಮೀಣ ಕುಟುಂಬಗಳು ಪಡೆದುಕೊಂಡ ಭೂಮಿ ಮತ್ತು ಇತರೆ ಸವಲತ್ತುಗಳು ಈ ಹೋರಾಟಗಳ ಕೊಡುಗೆಗಳಾಗಿವೆ. ಎಮರ್ಜೆನ್ಸಿ ತರುವಾಯ ಎರಡೂ ಪಕ್ಷಗಳು ಕೆಲಕಾಲ ಕಾಂಗ್ರೆಸ್ ವಿರೋಧಿ ನಿಲುವನ್ನು ತಾಳುತ್ತವೆ. 1983ರಲ್ಲಿ ಜನತಾ ಪಕ್ಷದ ಜೊತೆಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಿ 6 ಸ್ಥಾನಗಳಲ್ಲಿ ಜಯಗಳಿಸುತ್ತಾರೆ. 1985ರಲ್ಲಿ ನಡೆಯುವ ಮರು ಚುನಾವಣೆಯಲ್ಲಿ 5 ಸ್ಥಾನಗಳಲ್ಲಿ ಜಯ ಕಾಣುತ್ತಾರೆ. ಆದರೆ ಇದರ ನಂತರ ರಾಜಕೀಯವಾಗಿಯೂ ಕಮ್ಯುನಿಸ್ಟ್ ಪಕ್ಷ ದುರ್ಬಲಗೊಳ್ಳುತ್ತಾ ಸಾಗುತ್ತದೆ. ಚುನಾವಣಾ ರಾಜಕೀಯದ ಪ್ರಭಾವ ಪಕ್ಷದ ಆಂತರಿಕ ಸಂಬಂಧಗಳ ಮೇಲೂ, ರಾಜಕೀಯ ಹಿನ್ನೆಡೆಯ ಪ್ರಭಾವ ಅದರ ಸಾಮಾಜಿಕ ಪಾತ್ರದ ಮೇಲೂ ಬೀಳುತ್ತದೆ.
ಇದೇ ಹೊತ್ತಿಗೆ ಜಾಗತೀಕರಣದ ಶಕೆ ಪ್ರಾರಂಭವಾಗುತ್ತದೆ. ಸರ್ಕಾರಗಳು ಬಿಗಿಯಾದ ಕಾರ್ಮಿಕ ವಿರೋಧಿ ನಿಲುವುಗಳನ್ನು ತಾಳುತ್ತವೆ. ಕಾರ್ಮಿಕ ಸಂಘಟನೆಗಳನ್ನು ನಿಸ್ತೇಜಗೊಳಿಸುವ, ಕಾರ್ಮಿಕ ಮುಖಂಡರನ್ನು ಶಿಕ್ಷಿಸುವ, ದಿಟ್ಟ ಹೋರಾಟಕ್ಕೆ ಇಳಿಯುವ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವ ಪರಿಪಾಠಗಳು ಹೆಚ್ಚಾಗುತ್ತವೆ. ಇದನ್ನು ಮುರಿದು ಹೇಗೆ ಮುಂದೆ ಸಾಗಬೇಕು ಎಂಬ ಸ್ಪಷ್ಟತೆಗೆ ಬರಲಾಗದೆ ಕಾರ್ಮಿಕ ಚಳವಳಿ ಕ್ರಮೇಣ ಸೌಮ್ಯ ರೂಪವನ್ನು ಪಡೆದುಕೊಳ್ಳುತ್ತದೆ. ಕಾರ್ಮಿಕರ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರಭಾವವೂ ಬೆಳೆಯುತ್ತದೆ. ಕಾರ್ಮಿಕ ಹೋರಾಟದ ಪ್ರಖರತೆ ಕಡಿಮೆಯಾದಂತೆ ಕಾರ್ಮಿಕ ವರ್ಗದ ರಾಜಕೀಯ ಪ್ರಜ್ಞೆಯೂ ದುರ್ಬಲಗೊಳ್ಳುತ್ತದೆ. ಈ ಎಲ್ಲಾ ಗೆಲುವು ಸೋಲುಗಳ ನಡುವೆಯೂ ಕಮ್ಯುನಿಸ್ಟ್ ಚಳವಳಿ ಕೈ ಸೋಲದೆ ತನ್ನ ಪ್ರಯತ್ನವನ್ನು ಮುಂದುವರೆಸಿದೆ, ಮರುಕಟ್ಟಿಕೊಳ್ಳುವ ಪ್ರಯತ್ನಗಳನ್ನು ನಡೆಸುತ್ತಿದೆ.
ದಲಿತ ಚಳವಳಿ
60-70ರ ದಶಕಗಳಲ್ಲಿ ಶೈಕ್ಷಣಿಕ ರಂಗದಲ್ಲಿ ಬಂದ ಸುಧಾರಣೆಗಳು, ಮೀಸಲಾತಿಯ ಜಾರಿ ಹಾಗೂ ಭೂ ಸುಧಾರಣೆಯ ಭಾಗವಾಗಿ ಪ್ರಾರಂಭವಾದ ಭೂ ಹಂಚಿಕೆ ದಲಿತರ ಬದುಕಿನಲ್ಲಿ ಚಲನೆ ತರತೊಡಗಿತು. ಇದನ್ನು ಸಹಿಸಲಾಗದ ಮೇಲ್ಜಾತಿ ಮನಸ್ಥಿತಿಗಳಿಂದ ದಲಿತರ ಮೇಲಿನ ದಾಳಿಗಳೂ ಹೆಚ್ಚಾದವು. ಇದು ಸ್ಫೋಟಗೊಳ್ಳಲು ಬೂಸಾ ಚಳವಳಿ ಒಂದು ಕಾರಣವಾಯಿತು. 1973ರಲ್ಲಿ ಆಗಿನ ದಲಿತ ಹಿನ್ನೆಲೆಯ ಸಚಿವರಾಗಿದ್ದ ಬಸವಲಿಂಗಪ್ಪನವರು ಪ್ರಾಸಂಗಿಕವಾಗಿ ಆಡಿದ “ಕನ್ನಡದಲ್ಲೇನಿದೆ… ಅದರಲ್ಲಿರುವುದು ಬೂಸಾ” ಎನ್ನುವ ಮಾತು ಭಾರಿ ವಾದವಿವಾದಕ್ಕೆ ಕಾರಣವಾಯಿತು. ಮೇಲ್ಜಾತಿ ಹಿನ್ನೆಲೆಯ ಸಾಹಿತಿ ಕಲಾವಿದರನ್ನು ಕೆರಳಿಸಿದರೆ, ದಲಿತ ಮತ್ತು ಶೂದ್ರ ಹಿನ್ನೆಲೆಯ ಸಾಹಿತಿ ಕಲಾವಿದರು ಹಾಗೂ ವಿದ್ಯಾರ್ಥಿಗಳು ಬಸವಲಿಂಗಪ್ಪನವರ ಪರ ವಹಿಸಿದರು. ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳೂ ಆದವು. ಈ ಪ್ರಕ್ರಿಯೆಯ ಫಲವಾಗಿ 1974ರ ಕೊನೆಯಲ್ಲಿ ಭದ್ರಾವತಿಯಲ್ಲಿ ಮೂರು ದಿನಗಳ “ದಲಿತ ಲೇಖಕರು ಹಾಗೂ ಕಲಾವಿದರ ಸಮ್ಮೇಳನ” ನಡೆಯಿತು. ಇದು ಜಾಗೃತ ದಲಿತ ಪ್ರಜ್ಞೆಗೆ ಒಂದು ವೇದಿಕೆ ಮತ್ತು ಚೌಕಟ್ಟನ್ನು ಒದಗಿಸಿಕೊಟ್ಟಿತು. ಇದರಿಂದ ಪ್ರೇರೇಪಣೆ ಪಡೆದ ವಿದ್ಯಾರ್ಥಿಗಳು ದಲಿತ ಸಮುದಾಯವನ್ನು ಜಾಗೃತಗೊಳಿಸಲು “ಹಳ್ಳಿಗಳಿಗೆ ಹೋಗೋಣ” ಅಭಿಯಾನ ಪ್ರಾರಂಭಿಸಿದರು. ಮುಂದುವರೆದು ಪೂರ್ಣಪ್ರಮಾಣದಲ್ಲಿ “ಕರ್ನಾಟಕ ದಲಿತ ಸಂಘರ್ಷ ಸಮಿತಿ’’ಯಾಗಿ ಚಳವಳಿ ರೂಪ ಪಡೆಯಿತು. ಈ ಜಾಗೃತಿಯ ಸಾಹಿತ್ಯಕ ದನಿಯಾಗಿ ‘ಪಂಚಮ’ ತದ ನಂತರ ‘ಸುದ್ದಿ ಸಂಗಾತಿ’ ಪತ್ರಿಕೆಗಳು ಪ್ರಕಟಗೊಳ್ಳತೊಡಗಿದವು. ದಲಿತ ಚಳವಳಿ “ದಲಿತರೆಂದರೆ ಎಲ್ಲಾ ಜಾತಿಯ ಬಡವರು’’ ಎಂಬಂತಹ ವಿಶಾಲ ಕರೆಯನ್ನು ಕೊಟ್ಟಿತು. “ಹೆಂಡ ಬೇಡ – ಭೂಮಿ ಬೇಕು’’ ಎಂಬ ಘೋಷಣೆ ನೀಡಿತು. ‘ಶಿಕ್ಷಣ, ಸಂಘಟನೆ, ಹೋರಾಟ’ ಅದರ ನಿನಾದಗಳಾದವು. ಜಿಲ್ಲೆಗೊಂದು ವಸತಿ ಶಾಲೆಗಾಗಿ ಹೋರಾಟಗಳು ನಡೆದವು. ಈ ಚಳವಳಿ ದಲಿತ ಸಮುದಾಯದ ಸ್ವಾಭಿಮಾನದಲ್ಲಿ ತಂದ ಗರಿಮೆ, ಶೂದ್ರ ಪ್ರಜ್ಞೆಗೆ ಕೊಟ್ಟ ಶಕ್ತಿ ಅಷ್ಟಿಷ್ಟಲ್ಲ.

ಚಳವಳಿ ಬೆಳೆದಂತೆ ಇದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಜನತಾ ಪಾರ್ಟಿಯ ಕಡೆಯಿಂದ ಪ್ರಯತ್ನಗಳು ಪ್ರಾರಂಭವಾದವು. ದಲಿತ ಚಳವಳಿಯೊಳಗಡೆಯೂ ಚುನಾವಣೆಗಳಲ್ಲಿ ಭಾಗವಹಿಸಬೇಕೇ ಬೇಡವೇ ಎಂಬ ವಾದವಿವಾದಗಳು ಪ್ರಾರಂಭವಾದವು. “ಭಾಗವಹಿಸಬೇಕು’’ ಎಂಬ ಒಂದು ಬಣದ ತೀರ್ಮಾನದ ಜೊತೆಗೆ ದಸಂಸ ವಿಭಜನೆಗೊಂಡಿತು. ಒಂದಷ್ಟು ಭಾಗ ಬಿಎಸ್‌ಪಿ ರಾಜಕಾರಣದಿಂದ ಪ್ರಭಾವಿತಗೊಂಡು ಒಂದಿಷ್ಟು ಮಂದಿ ಅತ್ತ ಹೆಜ್ಜೆ ಹಾಕಿದರು. ರಾಜಕೀಯ ಹಿತಾಸಕ್ತಿ, ರಾಜಕೀಯ ಪಕ್ಷಗಳ ಜೊತೆಗಿನ ಸಖ್ಯ, ದಲಿತ ಚಳವಳಿಯ ಕಾರ್ಯಕರ್ತರ ಮನೋಬಲದ ಮೇಲೆ ದೊಡ್ಡ ಹೊಡೆತ ನೀಡಿದವು. ಕೇರಿ ಕೇಂದ್ರಿತ ಚಳವಳಿ ಕ್ರಮೇಣ ಕಚೇರಿ ಕೇಂದ್ರಿತ ಚಳವಳಿಯಾಗಿ ರೂಪಾಂತರಗೊಂಡಿತು. ಈ ಹೊಡೆತದಿಂದಾಗಿ ದಲಿತ ಚಳವಳಿ ಝರ್ಜರಿತವಾದರೂ ಜೀವ ಕಳೆದುಕೊಂಡಿಲ್ಲ. ಅದರಲ್ಲಿರುವ ಅನೇಕ ಕಟಿಬದ್ಧ ಮುಂದಾಳುಗಳು ಹಾಗೂ ಕಾರ್ಯಕರ್ತ ತಂಡಗಳು ತಮ್ಮ ಕೆಲಸವನ್ನು ಮುಂದುವರೆಸಿವೆ. ಯುವ ದಲಿತ ನಾಯಕತ್ವದಲ್ಲಿ ನಡೆದ ‘ಉಡುಪಿ ಚಲೋ’, ‘ಗುಡಿಬಂಡೆ ಚಲೋ’, ‘ತುಮಕೂರು ಚಲೋ’ಗಳು ಜಾತಿ ದೌರ್ಜನ್ಯದ ವಿರುದ್ಧದ ಪ್ರತಿಧ್ವನಿಗಳಾಗಿ ಮೂಡಿಬಂದಿವೆ. ದಲಿತ ಚಳವಳಿಯನ್ನು ಪುನರ್ ಚಾಲನೆಗೊಳಿಸುವ ಕನಸುಗಳೊಂದಿಗೆ ದಸಂಸ ಒಕ್ಕೂಟ ರೂಪ ಪಡೆದಿದೆ. ಹಲವು ದಲಿತ ಬಣಗಳು ಮತ್ತೆ ಹತ್ತಿರವಾಗಿ ಸಮನ್ವಯದ ಜೊತೆ ಹೆಜ್ಜೆ ಹಾಕುವ ಸಕಾರಾತ್ಮಕ ಪ್ರಯತ್ನ ಪ್ರಾರಂಭಿಸಿವೆ.
ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)
ಇದೇ ಸಂದರ್ಭದಲ್ಲಿ ದಲಿತ ಚಳವಳಿಯ ಒಂದು ಕವಲಾಗಿ ಹುಟ್ಟಿದ ಒಳಮೀಸಲಾತಿ ಚಳವಳಿ ಮಾದಿಗ ಸಮುದಾಯವನ್ನು ಸಕ್ರಿಯಗೊಳಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಈ ಚಳವಳಿಯೊಳಗೆ ಸೇರಿಕೊಂಡ ಜಾತಿವಾದಿ ಹಾಗೂ ಕೋಮುವಾದಿ ಶಕ್ತಿಗಳು ಇದನ್ನು ‘ಎಡ’ – ‘ಬಲ’ ಸಮುದಾಯಗಳ ನಡುವಿನ ಸಂಘರ್ಷವಾಗಿ, ಪಕ್ಷ ರಾಜಕಾರಣದ ದಾಳವಾಗಿ ಬಿಂಬಿಸುವ ಪ್ರಯತ್ನ ಮಾಡಿದರಾದರೂ, ಮಾದಿಗ ಸಮುದಾಯದ ಹೆಚ್ಚಿನ ನಾಯಕತ್ವ ಅಪಾರ ಪರಿಶ್ರಮದ ಮೂಲಕ ಅದನ್ನು ನ್ಯಾಯಸಮ್ಮತ ಹಕ್ಕೊತ್ತಾಯವಾಗಿ ರೂಪಿಸಿ ಬೆಳೆಸಿವೆ. ಎಡೆಬಿಡದ ಹೋರಾಟ, ಚರ್ಚೆ, ಸಂವಾದಗಳ ಮೂಲಕ ಇಡೀ ಪ್ರಗತಿಪರ ವಲಯ ಮತ್ತು ಬಹುತೇಕ ದಲಿತ ಸಂಘಟನೆಗಳು ಒಳ ಮೀಸಲಾತಿಯ ಪರವಾಗಿ ನಿಲುವು ತೆಗೆದುಕೊಳ್ಳುವ ವಾತಾವರಣವನ್ನು ಸೃಷ್ಟಿಸುವುದರಲ್ಲಿ ಮತ್ತು ಪಕ್ಷಗಳು ಹಾಗೂ ಸರ್ಕಾರ ಅದಕ್ಕೆ ಮಾನ್ಯತೆ ನೀಡುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ಆದರೆ ನಮಗೆಲ್ಲಾ ತಿಳಿದಿರುವಂತೆ ಸರ್ಕಾರಿ ಕ್ಷೇತ್ರವೇ ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿ ಮೀಸಲಾತಿಯ ಮರು ಹಂಚಿಕೆ ಮಾತ್ರವೇ ದಲಿತ ಹಾಗೂ ಹಿಂದುಳಿದ ಸಮುದಾಯಗಳ ಬದುಕಿನಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯವಿಲ್ಲ.
ದಲಿತ ಚಳವಳಿಯನ್ನು ಮತ್ತೆ ಐಕ್ಯ ಶಕ್ತಿಯನ್ನಾಗಿಸುವುದು ಹೇಗೆ? ಪ್ರಸ್ತುತ ಸಂದರ್ಭದಲ್ಲಿ ದಲಿತ ಸಮುದಾಯದ ಪ್ರಮುಖ ಹಕ್ಕೊತ್ತಾಯಗಳು ಏನಾಗಿರಬೇಕು? ಎಂಬ ಎರಡು ಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೆಕಿರುವುದು ದಲಿತ ಚಳವಳಿಯ ಮುಂದಿನ ಜರೂರಾಗಿದೆ.
ರೈತ ಚಳವಳಿ
ಸಾಮಾನ್ಯವಾಗಿ ರೈತ ಚಳವಳಿಯ ಹುಟ್ಟನ್ನು ನರಗುಂದ ರೈತ ಬಂಡಾಯದ ಜೊತೆಗೆ ಗುರುತಿಸಲಾಗುತ್ತದೆ. ಆದರೆ ಅದು ಅಷ್ಟು ಸರಿಯಲ್ಲ. ಕರ್ನಾಟಕದ ರೈತ ಚಳವಳಿಗೆ ದೊಡ್ಡ ಇತಿಹಾಸವೇ ಇದೆ. ಮೈಸೂರು ಒಡೆಯರು ಹಾಕಿದ ತೆರಿಗೆಗೆ ವಿರುದ್ಧವಾಗಿ ನಡೆದ ಪ್ರಸಿದ್ಧ ನಗರ ಬಂಡಾಯ ಮೂಲಭೂತವಾಗಿ ರೈತ ಬಂಡಾಯವಾಗಿದೆ. ಬ್ರಿಟಿಷರ ವಿರುದ್ಧವಾಗಿಯೂ ಧೀರೋದಾತ್ತ ಹೋರಾಟಗಳನ್ನು ನಡೆಸಿದ ಇತಿಹಾಸ ಕರ್ನಾಟಕದ ರೈತರಿಗಿದೆ. ಬ್ರಿಟೀಶೋತ್ತರ ಭಾರತದಲ್ಲೂ ಭೂಮಿಗಾಗಿ, ಗೇಣಿ ರದ್ದತಿಗಾಗಿ ಅನೇಕ ರೈತ ಹೋರಾಟಗಳು ಕರ್ನಾಟಕದಲ್ಲಿ ನಡೆದಿವೆ. ಹಾಗಾಗಿ ನರಗುಂದ ಬಂಡಾಯ ರೈತ ಹೋರಾಟದ ಆರಂಭ ಬಿಂದುವಲ್ಲ. ಆದರೆ ಹೊಸ ಚಂಡಮಾರುತವನ್ನು ಸೃಷ್ಟಿ ಮಾಡಿದ್ದು ನರಗುಂದ ರೈತ ಬಂಡಾಯ.

ಮಲಪ್ರಭಾ ಅಣೆಕಟ್ಟು ನಿರ್ಮಾಣವಾಗಿ 1976ರಿಂದ ರೈತರ ಹೊಲಗಳಿಗೆ ನೀರು ಹರಿಸಲ್ಪಟ್ಟಿತು. ಆದರೆ ನೀರಿನ ವಿತರಣೆ ಸಮರ್ಪಕವಾಗಿರಲಿಲ್ಲ. ಅಲ್ಲದೆ ಈ ಅವಧಿಯಲ್ಲಿ ಕರ್ನಾಟಕ ಭೀಕರ ಬರಕ್ಕೆ ತುತ್ತಾಗಿತ್ತು. ಅಣೆಕಟ್ಟಿನಲ್ಲೂ ಹೆಚ್ಚು ನೀರಿರಲಿಲ್ಲ. ಅಲ್ಲದೆ ಸರ್ಕಾರದ ನೀತಿಯಿಂದಾಗಿ ಹತ್ತಿಯ ಬೆಲೆ ನೆಲಕಚ್ಚಿತ್ತು. ಈ ಸಂದರ್ಭದಲ್ಲಿ 1980ರಲ್ಲಿ ಸರ್ಕಾರವು ರೈತರ ಮೇಲೆ ನೀರಿನ ತೆರಿಗೆಯನ್ನು ಹೇರಿದ್ದು ಮಾತ್ರವಲ್ಲದೆ 1974ರಿಂದ ಲೆಕ್ಕ ಹಿಡಿದು ತೆರಿಗೆ ನೀಡಬೇಕೆಂದು ಆದೇಶ ಕಳಿಸಿತು. ಸಿಟ್ಟಿಗೆದ್ದ ರೈತರು ಹೋರಾಟಕ್ಕಿಳಿದರು. 93 ದಿನ ಶಾಂತಿಯುತ ಧರಣಿ ನಡೆಸಿದರೂ ಸರ್ಕಾರ ಜಗ್ಗಲಿಲ್ಲ. ಬದಲಿಗೆ ಬಲವಂತದಿಂದಾದರೂ ಸರಿ ತೆರಿಗೆ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಕಳಿಸಿತು. ಇದರ ಕುರಿತು ಡಂಗೂರ ಸಾರುತ್ತಿದ್ದಂತೆ ರೈತರು ಕೆರಳಿದರು. ಪ್ರತಿಭಟಿಸಿ ಬಂದ್‌ಗೆ ಕರೆ ನೀಡಿದರು. 1980ರ ಜುಲೈ 21ರಂದು ಸುಮಾರು 10,000 ರೈತರು ನರಗುಂದ ತಹಸಿಲ್ದಾರ್ ಕಚೇರಿಗೆ ಕಾಲ್ನಡಿಗೆ ಜಾಥಾ ಹೊರಟರು. ಸರ್ಕಾರ ಲಾಠಿ ಚಾರ್ಜ್ ಮತ್ತು ಗೋಲಿಬಾರಿಗೆ ಆದೇಶಿಸಿತು. ಮೂವರು ರೈತರು ಪೊಲೀಸ್ ಗೋಲಿಬಾರಿನಲ್ಲಿ ಮಡಿದರು. ರೈತರು ತಿರುಗಿಬಿದ್ದಿದ್ದರಿಂದ ಮೂರು ಜನ ಪೊಲೀಸರೂ ಸಾವನ್ನಪ್ಪಿದರು. ಈ ಘಟನೆ ರಾಜ್ಯದಾದ್ಯಂತ ರೈತರ ತೀವ್ರತರನಾದ ಹೋರಾಟಗಳಿಗೆ ದಾರಿ ಮಾಡಿತು. ಅನೇಕ ಕಡೆ ಲಾಠಿಚಾರ್ಜ್, ಗೋಲಿಬಾರ್, ಸಾವು ನೋವು, ಬಂಧನಗಳಿಗೆ ಕಾರಣವಾಯಿತು. ಇದೇ ವರ್ಷದ ಸೆಪ್ಟೆಂಬರ್ 1ರಂದು ಶಿವಮೊಗ್ಗದಲ್ಲಿ ರೈತ ಜಾಥಕ್ಕೆ ಕರೆ ನೀಡಲಾಯಿತು. ಹಸಿರು ಟವಲ್ ಹಿಡಿದು ಬರಲು ಕರೆ ನೀಡಲಾಗಿತ್ತು. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಎಲ್ಲಾ ದಿಕ್ಕುಗಳಿಂದಲೂ ರೈತರು ಸಹಸ್ರಾರು ಸಂಖ್ಯೆಯಲ್ಲಿ ಶಿವಮೊಗ್ಗಕ್ಕೆ ಬಂದು ಸೇರಿದರು. ರೈತರ ಪ್ರಮುಖ ಹತ್ತು ಹಕ್ಕೊತ್ತಾಯಗಳನ್ನು ಪಟ್ಟಿ ಮಾಡಲಾಯಿತು. “ಕರ್ನಾಟಕ ರಾಜ್ಯ ರೈತ ಸಂಘ’’ದ ಹೆಸರಿನಲ್ಲಿ ರಾಜ್ಯವ್ಯಾಪಿ ಆಂದೋಲನಕ್ಕೆ ಕರೆ ನೀಡಲಾಯಿತು.
ಎಲ್ಲೆಡೆ ರೈತರು ಬೀದಿಗಿಳಿದರು. ಬಂಧಿಸುವ ತನಕ ಹಿಂದೆ ಸರಿಯುವುದಿಲ್ಲ ಎಂದು ಜೈಲ್ ಭರೋ ಪ್ರಾರಂಭಿಸಿದರು. ಈ ಪ್ರಮಾಣದ ರೈತರನ್ನು ಯಾವ ಜೈಲುಗಳಲ್ಲಿ ಇಡುವುದಪ್ಪ ಎಂಬ ಚಿಂತೆ ಪೊಲೀಸರಿಗೆ ಶುರುವಾಯಿತು. ಬೇರೆ ದಾರಿ ಕಾಣದ ಸರ್ಕಾರ ಮಾತುಕತೆಗೆ ಮುಂದಾಯಿತು. 19 ಬೇಡಿಕೆಗಳ ಪೈಕಿ 11 ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿತು. ಈ ಗೆಲುವು ರೈತರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು, ರೈತ ಪ್ರಜ್ಞೆ ಜಾಗೃತಗೊಂಡಿತು. 1983ರ ಚುನಾವಣೆಯಲ್ಲಿ ಗುಂಡೂರಾವ್ ಸರ್ಕಾರ ಪತನಗೊಳ್ಳುವುದರಲ್ಲೂ ರೈತ ಚಳವಳಿ ಪ್ರಮುಖ ಪಾತ್ರ ನಿರ್ವಹಿಸಿತು.
ಹಸಿರು ಕ್ರಾಂತಿಯಿಂದ ಬಂದ ಹೈ ಯೀಲ್ಡ್ ಬೆಳೆಗಳು, ರಾಸಾಯನಿಕ ಕೃಷಿ, ಸುಸ್ಥಿರ ಕೃಷಿಯನ್ನು ಹಾಳುಗೆಡವಿ ರೈತರನ್ನು ಸಾಲಗಾರರನ್ನಾಗಿ, ಪರಾವಲಂಬಿಗಳನ್ನಾಗಿ ಪರಿವರ್ತಿಸಿರುತ್ತದೆ. ಹಸಿರು ಕೃಷಿಯ ಉತ್ತೇಜನಕ್ಕೆ ಸಾಲ ಕೊಟ್ಟ ಬ್ಯಾಂಕುಗಳು ರೈತರನ್ನು ಪೀಡಿಸುವ, ಅವಮಾನಿಸುವ, ರೈತರ ಮನೆ ಮತ್ತು ಆಸ್ತಿಗಳನ್ನು ಜಪ್ತಿ ಮಾಡುವ ಕೆಲಸಕ್ಕೆ ಇಳಿದಿರುತ್ತವೆ. ರೈತ ಹೋರಾಟ ಈ ಅವಮಾನವನ್ನು ಆಕ್ರೋಶವನ್ನಾಗಿ ಪರಿವರ್ತಿಸಿತು. “ರೈತರು ಸಾಲಗಾರರಲ್ಲ – ಸರ್ಕಾರವೇ ರೈತರಿಗೆ ಬಾಕಿದಾರ’’, “ನ್ಯಾಯಯುತ ಬೆಲೆ ಕೊಡುವ ತನಕ ಸಾಲ ಮರುಪಾವತಿ ಮಾಡುವುದಿಲ್ಲ’’ ಎಂದು ಘೋಷಿಸುತ್ತದೆ. “ರೈತ ಸಂಘದ ಅನುಮತಿ ಇಲ್ಲದೆ ಹಳ್ಳಿಗಳಲ್ಲಿ ಪ್ರವೇಶವಿಲ್ಲ’’ ಎಂಬ ಬೋರ್ಡುಗಳು ಪ್ರತಿ ಗ್ರಾಮದ ಮುಂದೆ ಕಾಣಿಸಿಕೊಳ್ಳುತ್ತವೆ. ಇದರ ಫಲವಾಗಿ ಸರ್ಕಾರಿ ಕಚೇರಿಗಳಲ್ಲಿ ರೈತರಿಗೆ ಗೌರವ ಸಿಗಲು ಶುರುವಾಗುತ್ತದೆ.
ಕೇವಲ ಆರ್ಥಿಕ ಹೋರಾಟಗಳಲ್ಲದೆ ಸಾಮಾಜಿಕ ಸುಧಾರಣೆಯ ಚಟುವಟಿಕೆಗಳನ್ನೂ ಇದರ ಜೊತೆಗೆ ಜೋಡಿಸಲಾಗುತ್ತದೆ. ಕುವೆಂಪು ಅವರ ಮಂತ್ರ ಮಾಂಗಲ್ಯ, ಸರಳ ವಿವಾಹ, ಅಂತರ್ಜಾತಿ ವಿವಾಹ, ವಿಧವಾ ವಿವಾಹಗಳು ಹಳ್ಳಿಗಳಲ್ಲೂ ಆದರ್ಶ ವಿವಾಹಗಳಾಗುತ್ತವೆ. ಜಡ್ಡುಗಟ್ಟಿದ್ದ ಗ್ರಾಮ ವ್ಯವಸ್ಥೆಯಲ್ಲಿ ಚಲನೆ ಕಂಡು ಬರುತ್ತದೆ, ಜಾತಿ ತಕ್ಕಮಟ್ಟಿಗೆ ಸಡಿಲಗೊಳ್ಳುತ್ತದೆ. ಸಮಾಜವಾದಿ ಚಿಂತನೆಗಳನ್ನು ಹಳ್ಳಿಹಳ್ಳಿಗಳಿಗೂ ಒಯ್ದ ಕೀರ್ತಿ ರೈತ ಚಳವಳಿಗೆ ಸಲ್ಲುತ್ತದೆ.
ರೈತ ಚಳವಳಿಯ ಈ ಉಚ್ಛ್ರಾಯ ಘಟ್ಟದಲ್ಲಿ ಅದರ ಮತ್ತೊಂದು ಮುಖ್ಯ ನೈತಿಕ ಶಕ್ತಿಯಾಗಿದ್ದದ್ದು ಅದು ಎಲ್ಲಾ ರಾಜಕೀಯ ಪಕ್ಷಗಳನ್ನು ಸಮಾನವಾಗಿ ದೂರವಿಟ್ಟಿದ್ದು. 1982ರಲ್ಲಿ ರಾಜಕೀಯಕ್ಕೆ ಹೋಗಬೇಕೋ ಬೇಡವೋ ಎಂಬ ಭಿನ್ನಾಭಿಪ್ರಾಯ ಆರಂಭವಾಗಿ ಸಿದ್ದರಾಮಯ್ಯ ಒಳಗೊಂಡಂತೆ ಕೆಲವರು ಹೊರ ಹೋಗುತ್ತಾರೆ. ಜನತಾ ಪಾರ್ಟಿ ಅಧಿಕಾರಕ್ಕೆ ಬಂದ ಕೂಡಲೇ ರೈತ ಸಂಘದೊಳಗೆ ಬಿರುಕುಮೂಡಿಸಿ ಕೆಲವು ಮುಖಂಡರನ್ನು ಸೆಳೆದುಕೊಳ್ಳುವ ಪ್ರಯತ್ನಗಳು ಪ್ರಾರಂಭವಾಗುತ್ತವೆ. ರೈತ ಸಂಘವನ್ನು ದುರ್ಬಲಗೊಳಿಸಲು, ಮುಂದಾಳುಗಳಿಗೆ ಇಲ್ಲದ ಸಲ್ಲದ ಕಳಂಕ ಹಚ್ಚಲು ಪ್ರಯತ್ನ ಮಾಡಲಾಗುತ್ತದೆ. ಇದರ ವಿರುದ್ಧ ಸೆಟೆದು ನಿಂತು ನಾವೇ ರಾಜಕಾರಣ ಮಾಡಬೇಕು ಎಂದು ರೈತ ಸಂಘದ ಮುಂದಾಳುಗಳು ತೀರ್ಮಾನಿಸುತ್ತಾರೆ. 1989ರ ಚುನಾವಣೆಯಲ್ಲಿ 137 ವಿಧಾನ ಸಭಾ ಕ್ಷೇತ್ರಗಳಿಗೂ, 10 ಲೋಕಸಭಾ ಸ್ಥಾನಗಳಿಗೂ ಸ್ಪರ್ಧಿಸುತ್ತಾರೆ. 29 ಕಡೆ ಐದು ಸಾವಿರಕ್ಕೂ ಕಡಿಮೆ ಓಟುಗಳ ಅಂತರದಿಂದ ಸೋಲಾಗುತ್ತದೆ. ಬಾಬಾಗೌಡರು ಮಾತ್ರ ಗೆಲ್ಲುತ್ತಾರೆ. ಉಪಚುನಾವಣೆಯಲ್ಲಿ ನಂಜುಂಡಸ್ವಾಮಿ ಅವರು ಗೆಲ್ಲುತ್ತಾರೆ. ಆದರೆ 1994 ರ ಚುನಾವಣೆಯಲ್ಲಿ ಇಬ್ಬರೂ ಸೋತು ಪುಟ್ಟಣ್ಣಯ್ಯ ಗೆಲ್ಲುತ್ತಾರೆ. ಇದು ನಾಯಕತ್ವದ ಸಂಬಂಧಗಳನ್ನು ಹದಗೆಡಿಸುತ್ತದೆ. ರಾಜಕೀಯ ಸೋಲಿನ ಪರಿಣಾಮ ಚಳವಳಿಯ ಮನೋಬಲಕ್ಕೆ ದೊಡ್ಡ ಪೆಟ್ಟು ನೀಡುತ್ತದೆ. ಜಾಗತೀಕರಣದ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ರೈತ ವಿರೋಧಿ ನೀತಿಗಳು ಹೆಚ್ಚಾಗುತ್ತವೆ. ರೈತ ಸಂಘ ಅದರ ವಿರುದ್ಧ ದನಿ ಎತ್ತಿದರೂ ಸರ್ಕಾರ ಮಣಿಯುವುದಿಲ್ಲ. ಹೋರಾಟಗಳಿಗೆ ಯಶಸ್ಸು ಸಿಗುವುದಿಲ್ಲ. ರೈತ ಚಳವಳಿಯನ್ನು ಮುಂದಕ್ಕೆ ಒಯ್ಯುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಿವಿಧ ನಾಯಕರು ಅವರ ರಾಜಕೀಯ, ಸಾಮಾಜಿಕ ಹಿನ್ನೆಲೆಗೆ ತಕ್ಕಂತೆ ಭಿನ್ನ ಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ನಾಯಕತ್ವದ ನಡವಳಿಕೆಯಲ್ಲೂ ಧೋರಣಾತ್ಮಕ ಸಮಸ್ಯೆಗಳು ಬೆಳೆದಿರುತ್ತವೆ. ಎಲ್ಲವೂ ಸೇರಿ ಪರಿಸ್ಥಿತಿ ಜಟಿಲಗೊಳ್ಳುತ್ತದೆ. ನೋಡನೋಡುತ್ತಿದ್ದಂತೆ ರೈತ ಸಂಘ ಹಲವು ಬಣಗಳಾಗಿ ಒಡೆದು ಚೂರಾಗುತ್ತದೆ.
ಇದು ದುರಂತ ಕಥೆಯಾಗಿ ಪರಿವರ್ತನೆಯಾದದ್ದು ಹೌದಾದರೂ ಈ ಚಳವಳಿ ಎರಡು ದಶಕಗಳಲ್ಲಿ ಮಾಡಿದ ಸಾಧನೆ, ರೈತ ಸಮುದಾಯಕ್ಕೆ ತಂದುಕೊಟ್ಟ ಚೈತನ್ಯ ಅಷ್ಟಿಷ್ಟಲ್ಲ. ಈಗ ರೈತ ಸಂಘಟನೆಗಳು ಒಟ್ಟುಗೂಡಿ ಹೋರಾಡುವ ಹೊಸ ಪರಂಪರೆ ದೇಶ ಮಟ್ಟದಲ್ಲೂ, ರಾಜ್ಯ ಮಟ್ಟದಲ್ಲೂ ಶುರುವಾಗಿದೆ. 547 ರೈತ ಸಂಘಟನೆಗಳನ್ನು ಒಟ್ಟುಗೂಡಿ, “ಸಂಯುಕ್ತ ಕಿಸಾನ್ ಮೋರ್ಚಾ’’ ಹೆಸರಿನಲ್ಲಿ, ಒಂದು ವರ್ಷಕ್ಕೂ ಹೆಚ್ಚು ಕಾಲ ಧೀರೋದಾತ್ತ ಹೋರಾಟ ನಡೆಸಿ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಿದ ಪರಿ ಚರಿತ್ರೆಯಲ್ಲಿ ದಾಖಲಾಗುವಂತಹುದು. ಇದೇ ಹೊತ್ತಿನಲ್ಲಿ ಕರ್ನಾಟಕದಲ್ಲಿ “ಐಕ್ಯ ಹೋರಾಟ’’, ತದನಂತರ “ಸಂಯುಕ್ತ ಹೋರಾಟ’’ ಎಂಬ ಹೆಸರಿನಲ್ಲಿ ಹೆಚ್ಚಿನ ಪಾಲು ರೈತ ಸಂಘಟನೆಗಳು ಒಟ್ಟುಗೂಡಿ ಹೋರಾಡುವ ಹೊಸ ಪರಂಪರೆ ಪ್ರಾರಂಭವಾಗಿರುವುದು ಬಹುದೊಡ್ಡ ವಿದ್ಯಮಾನ.
(ಮುಂದುವರಿಯುತ್ತದೆ..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ನೂರ್ ಶ್ರೀಧರ್
ಚಿತ್ರದುರ್ಗದ ಇಂಜಿನಿಯರಿಂಗ್ ವಿದ್ಯಾರ್ಥಿ ನೂರ್ ಜುಲ್ಫೀಕರ್, ನೂರ್ ಶ್ರೀಧರ್ ಆಗಿದ್ದು ಭೂಗತ ಕ್ರಾಂತಿಕಾರಿ ಚಳವಳಿಯ ಪೂರ್ಣಾವಧಿ ಕಾರ್ಯಕರ್ತನಾಗಿದ್ದರಿಂದ. ಭಾರತದ ಸಂದರ್ಭದಲ್ಲಿ ಈ ರೀತಿಯ ಭೂಗತ ಸಶಸ್ತ್ರ ಚಳವಳಿಯಿಂದ ಕ್ರಾಂತಿ ಮಾಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ತೀವ್ರ ವೈಚಾರಿಕ ಸಂಘರ್ಷ ನಡೆಸಿ, 2014ರಿಂದ ಮುಖ್ಯವಾಹಿನಿ ಪ್ರಜಾತಾಂತ್ರಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕ ಜನಶಕ್ತಿ ಮತ್ತು ಎದ್ದೇಳು ಕರ್ನಾಟಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಇವರು 'ನನ್ನೊಳಗಿನ ಸೂಫಿ’ ಹಾಗೂ 'ಭಾರತದ ಕ್ರಾಂತಿ ಮತ್ತು ಮಾವೋವಾದಿ ಚಳವಳಿ' ಎಂಬ ಕೃತಿಗಳನ್ನು ರಚಿಸಿದ್ದಾರೆ.




