(ಮುಂದುವರಿದ ಭಾಗ…) ನಕ್ಸಲೈಟ್ ಚಳವಳಿ: ಕರ್ನಾಟಕದ ನಕ್ಸಲೈಟ್ ಚಳವಳಿ ಮೇಲಿನ ನಾಲ್ಕು ಚಳವಳಿಗಳಷ್ಟು ವಿಸ್ತಾರ ಹೊಂದಿದ್ದ ಚಳವಳಿಯಲ್ಲ. ಆದರೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಕರ್ನಾಟಕದ ಚಳವಳಿಗಳಲ್ಲಿ ಅದರ ಪಾತ್ರವೂ ಇದೆ. 70, 80, 90ರ ದಶಕಗಳಲ್ಲಿ ನೆರೆಯ ಆಂಧ್ರ ಮತ್ತು ಇಂದಿನ ತೆಲಂಗಾಣ ಭಾಗಗಳಲ್ಲಿ ಬಿರುಸಾಗಿ ನಡೆಯುತ್ತಿದ್ದ ನಕ್ಸಲೈಟ್ ಚಳವಳಿಯ ಪ್ರಭಾವ ಕರ್ನಾಟಕದ ಮೇಲೂ ಇತ್ತು. ವಿಶೇಷವಾಗಿ ದಲಿತ ಚಳವಳಿ ಇದರಿಂದ ಸಾಕಷ್ಟು ಪ್ರಭಾವಿತಗೊಂಡಿತು. ಜನನಾಟ್ಯ ಮಂಡಳಿಯ ಹಲವು ಕ್ರಾಂತಿಕಾರಿ ಹಾಡುಗಳು ಕನ್ನಡಕ್ಕೂ ಅನುವಾದಗೊಂಡವು. 90ರ ದಶಕದಲ್ಲಿ ನೇರವಾಗಿ ನಕ್ಸಲೈಟ್ ಸಂಘಟನೆಗಳು ಕಲ್ಯಾಣ ಕರ್ನಾಟಕದ ಗ್ರಾಮಗಳಲ್ಲಿ ಕೆಲಸವನ್ನು ಬಿರುಸುಗೊಳಿಸಿದವು. ಭೂಮಾಲೀಕರ ವಿರುದ್ಧ ಕೆಲವು ದಿಟ್ಟ ಹೋರಾಟಗಳು ನಡೆದವು. ಭೂ ಮಾಲೀಕರ ಗೂಂಡಾಗಳ ಜೊತೆ ಸಂಘರ್ಷ, ಕ್ರೂರ ಭೂಮಾಲೀಕರ ಮೇಲೆ ದಾಳಿ, ಪ್ರಜಾ ಪಂಚಾಯಿತಿಗಳಿಗೆ ಭೂಮಾಲೀಕರನ್ನು ಎಳೆದು ತಂದು ವಿಚಾರಣೆ, ದಂಡ, ಮುಂತಾದ ವಿದ್ಯಮಾನಗಳು ನಡೆದವು. ಆದರೆ ಪೊಲೀಸರ ದಮನಕಾಂಡ ಹೆಚ್ಚಿದ್ದರಿಂದ ಅದನ್ನು ಎದುರಿಸಿ ನಿಲ್ಲುವ ಶಕ್ತಿ ಮತ್ತು ವ್ಯಾಪ್ತಿ ಆ ಚಳವಳಿಗೆ ಇರಲಿಲ್ಲ. ಪಶ್ಚಿಮ ಘಟ್ಟದಲ್ಲಿ ರಾಷ್ಟ್ರೀಯ ಉದ್ಯಾನವನ ಮಾಡಿ ಆದಿವಾಸಿಗಳನ್ನು ಎತ್ತಂಗಡಿ ಮಾಡುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿದಾಗ ಅದಕ್ಕೆ ನಕ್ಸಲೈಟ್ ಸಂಘಟನೆಗಳು ತೀಕ್ಷ್ಣ ಪ್ರತಿರೋಧ ಒಡ್ಡಿದವು. 2003ರಿಂದ ಮಲೆನಾಡಿನಲ್ಲಿ ಸಶಸ್ತ್ರ ಚಟುವಟಿಕೆ ಪ್ರಾರಂಭಗೊಂಡಿತು. ಅದರ ಬೆನ್ನಲ್ಲೇ ಪೊಲೀಸ್ ಎನ್ಕೌಂಟರ್‌ಗಳೂ ಒಂದರ ಮೇಲೊಂದರಂತೆ ನಡೆದವು. ಮುಂದಿನ ಐದು ವರ್ಷಗಳು ಕರ್ನಾಟಕದ ಇತಿಹಾಸದಲ್ಲಿ ರಕ್ತಸಿಕ್ತ ವರ್ಷಗಳಾದವು. ಅನೇಕ ನಕ್ಸಲೈಟ್ ಹೋರಾಟಗಾರರು ಎನ್ಕೌಂಟರುಗಳಲ್ಲಿ ಹುತಾತ್ಮರಾದರು. ದಿಟ್ಟತನದ ಹೋರಾಟ ಕಟ್ಟುವ ಪ್ರಯತ್ನವನ್ನು ನಕ್ಸಲೈಟ್ ಚಳವಳಿ ಮಾಡಿತಾದರೂ ಕರ್ನಾಟಕದ ನಾಡಿಮಿಡಿತವನ್ನು ಹಿಡಿಯುವುದರಲ್ಲಿ ಅದು ಸೋತಿತು.
ಕರ್ನಾಟಕದಲ್ಲಿ ನಕ್ಸಲೈಟ್ ಚಳವಳಿಗೆ ಮತ್ತೊಂದು ಮುಖವೂ ಇದೆ. ಗ್ರಾಮೀಣ ಭಾಗದಲ್ಲಿ ಭೂಮಾಲೀಕರ ವಿರೋಧಿ ಮಿಲಿಟೆಂಟ್ ಹೋರಾಟ ಕಟ್ಟುವ ಪ್ರಯತ್ನ ಒಂದೆಡೆಯಾದರೆ ನಗರದಲ್ಲಿ ಗಟ್ಟಿ ಹೋರಾಟಗಳನ್ನು ರೂಪಿಸುವ ಪ್ರಯತ್ನವನ್ನೂ ಅದು ಮಾಡಿತು. ಪ್ರಗತಿಪರ ವಿದ್ಯಾರ್ಥಿ ಕೇಂದ್ರ, ಕರ್ನಾಟಕ ವಿಮೋಚನಾ ರಂಗ, ಮಹಿಳಾ ಜಾಗೃತಿ ಎಂಬ ಸಮೂಹ ಸಂಘಟನೆಗಳು ಅದರಲ್ಲಿ ಪ್ರಮುಖವಾದವುಗಳು. ಕರ್ನಾಟಕ ವಿಮೋಚನಾ ರಂಗ ಒಂದು ರೀತಿಯಲ್ಲಿ ವಿನೂತನ ಪ್ರಯೋಗವಾಗಿತ್ತು. ಜಪಾನ್ ಟೌನ್‌ಶಿಪ್, ಬಿಎಂಐಸಿ, ತುಂಗಾ ಭದ್ರಾ ಉಳಿಸಿ, ಬಾಬಾ ಬುಡನ್‌ಗಿರಿ ಉಳಿಸಿ ಮುಂತಾದ ಜಂಟಿ ಹೋರಾಟಗಳನ್ನು ರೂಪಿಸುವುದರಲ್ಲಿ ಅದರ ಕೊಡುಗೆ ಗಮನಾರ್ಹವಾದುದು. ಕರ್ನಾಟಕದಲ್ಲಿ ನಕ್ಸಲೈಟ್ ಚಳವಳಿ ತುಳಿದ ಹಾದಿ, ಮಾಡಿದ ತಪ್ಪುಗಳು ಹಾಗೂ ಕ್ರಾಂತಿಯ ದಾರಿಗಳ ಕುರಿತು ನಕ್ಸಲೈಟ್ ಸಂಘಟನೆಯೊಳಗೆ ತೀವ್ರ ಭಿನ್ನಾಭಿಪ್ರಾಯಗಳು ಬೆಳೆದು 2006ರಲ್ಲಿ ಎರಡು ಪಂಥಗಳಾಗಿ ವಿಭಜಿತಗೊಂಡಿತು. ಒಂದು ಪಂಥ ಹಳೆಯ ಹಾದಿಯಲ್ಲೇ ಪ್ರಯತ್ನ ಮುಂದುವರೆಸಿ ಕರ್ನಾಟಕದಲ್ಲಿ ಹೆಚ್ಚು ಕಡಿಮೆ ಅಸ್ತಿತ್ವವನ್ನು ಕಳೆದುಕೊಂಡಿತು. ಮತ್ತೊಂದು ಪಂಥ ಹೊಸ ಹಾದಿಯ ಹುಡುಕಾಟದ ಭಾಗವಾಗಿ ಪ್ರಜಾತಾಂತ್ರಿಕ ಚಳವಳಿಗಳ ಭಾಗವಾಗಿ ಹೊಸ ಹೊಸ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದೆ.
ಮಹಿಳಾ ಚಳವಳಿ
ಕರ್ನಾಟಕದಲ್ಲಿ ಮಹಿಳಾ ಚಳವಳಿ ಸ್ವಾಯತ್ತ ಸಂಘಟಿತ ರೂಪ ಪಡೆದುಕೊಂಡದ್ದು 70ರ ದಶಕದಲ್ಲಿ. ಸಮತಾ ವೇದಿಕೆ, ಮಾನಸ, ಜನವಾದಿ ಮಹಿಳಾ ಸಂಘಟನೆ, AIDWO, MSS, ವಿಮೋಚನಾ, ಮಹಿಳಾ ಜಾಗೃತಿ, ಮಹಿಳಾ ಮುನ್ನಡೆ, ಗ್ರಾಕೂಸ ಮುಂತಾದ ಸಂಘಟನೆಗಳು ಮುಖ್ಯ ಭೂಮಿಕೆಯನ್ನು ನಿರ್ವಹಿಸಿವೆ. ಬ್ಯೂಟಿ ಪೆಜೆಂಟ್ ವಿರುದ್ಧ, ಆಸಿಡ್ ದಾಳಿಗಳ ವಿರುದ್ಧ, ಕ್ವಿನಾಕ್ರೈನ್ ವಿರುದ್ಧ ಜಂಟಿ ಹೋರಾಟಗಳೂ ನಡೆದಿವೆ. ನಿರ್ಭಯ ಪ್ರಕರಣದ ನಂತರ ಹಾಗೂ ಕರಾವಳಿಯಲ್ಲಿ ಮಾರೆಲ್ ಪೊಲೀಸಿಂಗ್ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ರೂಪುಗೊಂಡ “ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’’ ಮಹಿಳಾ ದನಿಗೆ ಒಂದು ವಿಶಾಲ ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಮಹಿಳಾ ಕೃಷಿ ಕಾರ್ಮಿಕರ ನೇತೃತ್ವದಲ್ಲಿ ಪ್ರಾರಂಭವಾದ “ಮದ್ಯಪಾನ ವಿರೋಧಿ ಹೋರಾಟ ವೇದಿಕೆ’’ ರಾಯಚೂರಿನಲ್ಲೂ, ಬೆಂಗಳೂರಿನಲ್ಲೂ ಹಲವು ಗುರುತರ ಹೋರಾಟಗಳನ್ನು ನಡೆಸಿದೆ.

ಮನೆಯೊಳಗಿನ ಹಿಂಸೆಯನ್ನು ಹಿಂಸೆಯೆಂದೇ ಪರಿಗಣಿಸದಿರುವ 70ರ ದಶಕದಲ್ಲಿ “ಪರ್ಸನಲ್ ಈಸ್ ಪೊಲಿಟಿಕಲ್’’ ಎಂಬ ಅರಿವಿನ ಆಧಾರದ ಮೇಲೆ ಕೌಟುಂಬಿಕ ಹಿಂಸೆಯ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾದವು. 1975ರಲ್ಲಿ ವರದಕ್ಷಿಣೆಯ ದಾಹಕ್ಕೆ ಬಲಿಯಾದ ಡಾ. ಮಂಜುಶ್ರೀ ಪ್ರಕರಣವು ಕೌಟುಂಬಿಕ ಹಿಂಸೆಯ ವಿರುದ್ಧದ ದನಿಯಾಗಿ ವ್ಯಾಪಕ ಚರ್ಚೆಗೆ ಒಳಗಾಯಿತು. ಕೌಟುಂಬಿಕ ಹಿಂಸೆಯ, ವರದಕ್ಷಿಣೆ ಕಿರುಕುಳದ, ಬಲವಂತದ “ಆತ್ಮಹತ್ಯೆ’’ಗಳ ಪ್ರಕರಣಗಳನ್ನು ಅಪರಾಧವೆಂದೇ ಪೊಲೀಸರು ದಾಖಲಿಸಿಕೊಳ್ಳುತ್ತಿರಲಿಲ್ಲ. ಸಾಕಷ್ಟು ಹೋರಾಟ ಮತ್ತು ಒತ್ತಡದ ನಂತರ ಸರ್ಕಾರದಿಂದಲೂ ಸುತ್ತೋಲೆಗಳು ಜಾರಿಯಾದವು, ಪೊಲೀಸ್ ಇಲಾಖೆಯಲ್ಲೂ ತಿಳಿವಳಿಕೆ ಒಂದು ಮಟ್ಟಕ್ಕೆ ಹೆಚ್ಚಾಯಿತು.
ಮಹಿಳಾ ಮೀಸಲಾತಿಗಾಗಿ ಹಾಗೂ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿಯೂ ಮಹಿಳಾ ಚಳವಳಿಗಳು ಬಲವಾಗಿ ದನಿ ಎತ್ತಿದವು. ಇದರ ಪರಿಣಾಮವಾಗಿ ಕರ್ನಾಟಕ ಸರ್ಕಾರವು ಪಂಚಾಯತಿ ಹಾಗೂ ಕಾರ್ಪೊರೇಟ್ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. 50ರ ಮೀಸಲಾತಿಯನ್ನು ಜಾರಿಗೊಳಿಸಿತು.
ಇದನ್ನೂ ಓದಿರಿ: ಕರ್ನಾಟಕದ ಜನ ಚಳವಳಿಗಳು: ಗತದ ನೋಟ- ಭವಿಷ್ಯಕ್ಕೆ ಪಾಠ (ಭಾಗ-1)
ಮಹಿಳೆಯನ್ನು ಸರಕೀಕರಣಗೊಳಿಸುವ, ಸಿನಿಮಾಗಳಲ್ಲಿ – ಜಾಹೀರಾತುಗಳಲ್ಲಿ ಅಶ್ಲೀಲವಾಗಿ ಬಿಂಬಿಸುವ ಮಾರುಕಟ್ಟೆ ಧೋರಣೆ ವಿರುದ್ಧವೂ ಮಹಿಳಾ ಸಂಘಟನೆಗಳು ದನಿ ಎತ್ತಿದವು. ಬೆಂಗಳೂರಿನಲ್ಲಿ ವಿಶ್ವ ಸೌಂದರ್ಯ ಸ್ಪರ್ಧೆ ಏರ್ಪಟ್ಟಾಗ ಅದನ್ನು ತೀವ್ರವಾಗಿ ಪ್ರತಿಭಟಿಸಿ ಬಂಧನಕ್ಕೂ ಒಳಗಾದರು, ಸೆರೆವಾಸವನ್ನೂ ಅನುಭವಿಸಿದರು.
ಸಾಮೂಹಿಕ ಅತ್ಯಾಚಾರಗಳು, ಆಸಿಡ್ ದಾಳಿಗಳು, ಪ್ರೇಮಿಯಿಂದಲೇ ಬರ್ಬರ ಕೊಲೆಗಳು, ಕುಟುಂಬದವರಿಂದಲೇ ಮರ್ಯಾದೆಗೇಡು ಹತ್ಯೆಗಳು, ಹೆಣ್ಣು ಭ್ರೂಣಹತ್ಯೆಗಳು ತೀವ್ರವಾಗಿ ಹೆಚ್ಚಾದವು. ಇವೆಲ್ಲದರ ವಿರುದ್ಧ ಮಹಿಳಾ ಚಳವಳಿ ಸತತ ಹೋರಾಟಗಳನ್ನು ನಡೆಸಿತು. ಸರ್ಕಾರದ ಕಡೆಯಿಂದ ಕೆಲವು ಕ್ರಮಗಳು ಜಾರಿಯಾಗಲು ಈ ಪ್ರಯತ್ನಗಳು ಕಾರಣವಾದವು.
ಮಹಿಳಾ ಪ್ರಜ್ಞೆಯನ್ನು ಹರಿತಗೊಳಿಸುವುದರಲ್ಲಿ ಹಾಗೂ ಸರ್ಕಾರಿ ಯಂತ್ರಾಂಗದಲ್ಲಿ ಒಂದು ಮಟ್ಟದ ಜೆಂಡರ್ ಅರಿವನ್ನು ಮೂಡಿಸುವದರಲ್ಲಿ ಮಹಿಳಾ ಚಳವಳಿಗೆ ಪಾತ್ರವಿದೆ. ಆದರೆ ಸರ್ಕಾರವನ್ನ ಕ್ರಿಯೆಗೆ ಹಚ್ಚುವಂತಹ ಚಳವಳಿಯಾಗಿ ಅದು ರೂಪ ಪಡೆಯುತ್ತಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಮದ್ಯಪಾನದ ನಿಯಂತ್ರಣಕ್ಕಾಗಿ ಎರಡು ಗಟ್ಟಿ ದನಿ ಎದ್ದವಾದರೂ ಅವನ್ನು ತಾರ್ಕಿಕ ಮಟ್ಟಕ್ಕೆ ಒಯ್ಯಲು ಸಾಧ್ಯವಾಗಿಲ್ಲ. ಗಂಭೀರ ಅವಲೋಕನದ, ಐಕ್ಯ ಹಾಗೂ ಫೋಕಸ್ಡ್ ಪ್ರಯತ್ನಗಳ ಅಗತ್ಯವಂತೂ ಇದೆ.
ಇತ್ತೀಚಿನ ಎರಡು ದಶಕಗಳಲ್ಲಿ ಕರ್ನಾಟಕದ ಲೈಂಗಿಕ ಅಲ್ಪಸಂಖ್ಯಾತರು ಸಂಘಟಿತಗೊಂಡ ಪರಿ, ತಮ್ಮ ಅಸ್ಮಿತೆಯನ್ನು ಅಸರ್ಟ್ ಮಾಡಿಕೊಳ್ಳುತ್ತಾ, ತಮ್ಮ ರಕ್ಷಣೆಗಾಗಿ ಹೋರಾಡುತ್ತಾ, ಸಮಾಜದಲ್ಲಿ ತಮ್ಮ ಪಾಲಿಗಾಗಿ ಆಗ್ರಹಿಸುತ್ತಾ, ಲೈಂಗಿಕ ಅಲ್ಪಸಂಖ್ಯಾತರ ಸಂಕೀರ್ಣ ಸಮಸ್ಯೆಗಳನ್ನು ಅರ್ಥಪಡಿಸುತ್ತಾ ತಮ್ಮ ಬದುಕನ್ನು ಘನತೆಯುತವಾಗಿ ಮರುಕಟ್ಟಿಕೊಳ್ಳಲು ನಡೆಸಿರುವ ಪ್ರಯತ್ನ ಪ್ರಖರವಾದದ್ದು, ಅಪಾರ ಮೆಚ್ಚುಗೆಗೆ ಅರ್ಹವಾದುದು.
ಪರಿಸರ ಚಳವಳಿ
1987ರಲ್ಲಿ ಕರ್ನಾಟಕ ಸರ್ಕಾರವು “ಪಲ್ಪ್ ವುಡ್ ಕಂಪನಿ’’ಯನ್ನು ಸ್ಥಾಪಿಸಿ 30,000 ಎಕರೆ ಸಿ ಅಂಡ್ ಡಿ ಭೂಮಿಗಳಲ್ಲಿ ನೀಲಗಿರಿ ಬೆಳೆಸಲು ಮುಂದಾದಾಗ ಅದನ್ನು ವಿರೋಧಿಸಿ “ಕಿತ್ತಿಕೋ -ಹಚ್ಚಿಕೋ ಚಳವಳಿ’’ ಪ್ರಾರಂಭವಾಯಿತು. ನೀಲಗಿರಿ ಸಸಿಗಳನ್ನು ಕಿತ್ತು ಅದರ ಜಾಗದಲ್ಲಿ ಸಮುದಾಯ ಉಪಯೋಗಿ ಸಸಿಗಳನ್ನು ನೆಡುವ ಸೃಜನಶೀಲ ಹೋರಾಟ ರೂಪ ರೈತರ ಮತ್ತು ಸಮಾಜದ ಅರಿವನ್ನು ಸಂವೇದನಾಶೀಲಗೊಳಿಸಿತು. ಸರಿಸುಮಾರು ಇದೇ ಹೊತ್ತಿಗೆ ಕೈಗಾ ಅಣುಸ್ಥಾವರವನ್ನು ವಿರೋಧಿಸಿ ರೂಪುಗೊಂಡ ಕೈಗಾ ಚಳವಳಿ ಕರ್ನಾಟಕದಲ್ಲಿ ಹೊಸ ಚರ್ಚೆಯನ್ನು ಹುಟ್ಟಿ ಹಾಕಿತು. ಇದರ ಮುಂದುವರಿಕೆಯಾಗಿ ಪಶ್ಚಿಮ ಘಟ್ಟ ಆಂದೋಲನ ರೂಪ ಪಡೆಯಿತು. ಇದರ ಭಾಗವಾಗಿ ಕೆಐಓಸಿಎಲ್ ಗಣಿಗಾರಿಕೆಯ ವಿರುದ್ಧವಾಗಿ ಅನೇಕ ಹೋರಾಟಗಳು ನಡೆದವು. ಕಾನೂನು ಪ್ರಯತ್ನಗಳೂ ನಡೆದು ಅದನ್ನು ಬಂದ್ ಮಾಡಿಸಲಾಯಿತು. 90ರ ದಶಕದ ಆರಂಭದಲ್ಲಿ ಕೊಪ್ಪ ಬಳಿಯ ಕಾಡನ್ನು ರಕ್ಷಿಸಲು ನಡೆದ ಗುಬ್ಬಗದ್ದೆ ಹೋರಾಟದಲ್ಲಿ ಯುವಜನರು ಉತ್ಸಾಹದೊಂದಿಗೆ ಪಾಲ್ಗೊಂಡರು. 1997ರಲ್ಲಿ ಶೃಂಗೇರಿ ಬಳಿ ತುಂಗಾ ನದಿ ಹುಟ್ಟುವ ಗಂಗಡಿಕಲ್ಲು ಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಪರವಾನಗಿ ಕೊಟ್ಟಿದ್ದನ್ನು ವಿರೋಧಿಸಿ “ತುಂಗಾ ಉಳಿಸಿ ಹೋರಾಟ’’ ವ್ಯಾಪಕ ಚಳವಳಿಯಾಗಿ ರೂಪತಾಳಿತು. ಬೆಂಗಳೂರು ನಗರದ ತ್ಯಾಜ್ಯ ವಿಲೇವಾರಿಯ ವಿರುದ್ಧವೂ ಸಾಕಷ್ಟು ಹೋರಾಟಗಳು ನಡೆದು ಸರ್ಕಾರ ರಚನಾತ್ಮಕ ಕ್ರಮಗಳಿಗೆ ಮುಂದಾಗಲೇಬೇಕಾದ ಒತ್ತಡವನ್ನು ಸೃಷ್ಟಿಸಿದವು. ನೀರಿನ ಸೆಲೆಗಳನ್ನು ಉಳಿಸುವ, ಮರಗಳನ್ನು ಬೆಳೆಸುವ, ಕಾಡನ್ನು ಉಳಿಸುವ ಅನೇಕ ಅಭಿಯಾನಗಳು ಸತತವಾಗಿ ನಡೆದುಕೊಂಡು ಬರುತ್ತಿವೆ. ಇದರಲ್ಲಿ ಅನೇಕ ಸಹೃದಯಿ ಮನಸ್ಸುಗಳು, ವಿಶೇಷವಾಗಿ ಯುವಜನರು ತೊಡಗಿಸಿಕೊಂಡಿದ್ದಾರೆ.

ಇಷ್ಟೆಲ್ಲ ಪ್ರಯತ್ನಗಳ ಹೊರತಾಗಿಯೂ ಪರಿಸರದ ಪ್ರಶ್ನೆ ಬಹಳ ಜಟಿಲ ಸಮಸ್ಯೆಯಾಗಿ ಬೆಳೆದು ನಿಂತಿದೆ. ಪರಿಸರ ರಕ್ಷಣೆಯ ಹೆಸರಿನಲ್ಲಿ ಕೋರ್ಟುಗಳು ಸಂವೇದನಾ ಶೂನ್ಯ ತೀರ್ಪುಗಳನ್ನು ನೀಡುತ್ತಿವೆ. ಸರ್ಕಾರ ಅರಣ್ಯವಾಸಿಗಳನ್ನು ಎತ್ತಂಗಡಿ ಮಾಡಿಸುವ, ಅವರ ಒತ್ತುವರಿಗಳನ್ನು ತೆರವುಗೊಳಿಸುವ ಕೆಲಸಕ್ಕೆ ಕೈಹಾಕುತ್ತಿದೆ. ಇದು ತೀವ್ರತರನಾದ ಆತಂಕಕ್ಕೆ, ಸಂಘರ್ಷಕ್ಕೆ ದಾರಿ ಮಾಡಿದೆ. ಪರಿಸರವೂ ಉಳಿಯಬೇಕು. ಅರಣ್ಯದಲ್ಲಿ ಬದುಕುತ್ತಿರುವ ಜನರೂ ಉಳಿಯಬೇಕು. ಪರಿಸರ ಎಂದರೆ ಕೇವಲ ಪಶ್ಚಿಮ ಘಟ್ಟದ ಸಮಸ್ಯೆಯಾಗಿರದೆ ಇಡೀ ರಾಜ್ಯದ ಎಲ್ಲಾ ಭಾಗಗಳ ಜವಾಬ್ದಾರಿಯಾಗಬೇಕಾಗಿದೆ.
ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)
ಸೌಹಾರ್ದ ಚಳವಳಿ
ಆರ್‌ಎಸ್‌ಎಸ್‌ನ ಮನುವಾದ ಹಾಗೂ ಬಿಜೆಪಿಯ ರಾಜಕೀಯ ಅಜೆಂಡಾದ ಭಾಗವಾಗಿ ರಾಮ ಮಂದಿರ ವಿವಾದವನ್ನು ಹುಟ್ಟುಹಾಕಿ 1990ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕ ಕೋಮು ರಾಜಕಾರಣ ದೇಶದ ಪ್ರಮುಖ ಸಮಸ್ಯೆಗಳಲ್ಲೊಂದಾಗಿ ಪರಿವರ್ತನೆಯಾಯಿತು. ಬಿಜೆಪಿ ಪಕ್ಷವು ದಕ್ಷಿಣ ಭಾರತದಲ್ಲಿ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳಲು ಕರ್ನಾಟಕವನ್ನು ಪ್ರವೇಶ ದ್ವಾರವಾಗಿ ಪರಿಗಣಿಸಿತು. ಬಾಬರಿ ಮಸೀದಿಯಂತೆ ಬಾಬಾಬುಡನ್‌ಗಿರಿ ದರ್ಗಾವನ್ನು ವಿವಾದದ ಕೇಂದ್ರವನ್ನಾಗಿ ಮಾರ್ಪಡಿಸಿತು. ಇದನ್ನು ವಿರೋಧಿಸಿ 2000ನೇ ಇಸವಿಯಲ್ಲಿ “ಬಾಬಾ ಬುಡನ್‌ಗಿರಿ ಉಳಿಸಿ ಹೋರಾಟ ಸಮಿತಿ’’ ರೂಪಗೊಂಡಿತು. 2002ರ ನಂತರ ಇದನ್ನು “ಕರ್ನಾಟಕ ಕೋಮು ಸೌಹಾರ್ದ ವೇದಿಕೆ’’ಯನ್ನಾಗಿ ರೂಪಾಂತರಿಸಲಾಯಿತು. ರಾಜ್ಯದ ಅನೇಕ ಸಂಘಸಂಸ್ಥೆಗಳು, ಸಾಹಿತಿ – ಬುದ್ದಿಜೀವಿಗಳು ಈ ವೇದಿಕೆಯ ಭಾಗವಾಗಿದ್ದರು. ಅಲ್ಲಿಂದ ಮುಂದಿನ 15 ವರ್ಷಗಳ ಕಾಲ ಕೋಮು ಸೌಹಾರ್ದ ವೇದಿಕೆಯು ಕೋಮು ಅಜೆಂಡಾಗಳನ್ನು ವಿರೋಧಿಸುವ ಪ್ರಬಲ ವೇದಿಕೆಯಾಗಿ ಕೆಲಸ ಮಾಡಿತು. ಕರಾವಳಿಯಲ್ಲಿ ನಡೆಯುತ್ತಿದ್ದ ಕೋಮು ಗಲಭೆ ಹಾಗೂ ಹಲ್ಲೆಗಳ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ಸಂಘಟಿಸಿತು. ಕ್ರೈಸ್ತರ ಮೇಲಿನ ದಾಳಿ, ಜಾನುವಾರು ಹತ್ಯೆ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಅನೇಕ ಹೋರಾಟಗಳು ನಡೆದವು. ಸಮಾನ ಮನಸ್ಕರನ್ನು ಒಗ್ಗೂಡಿಸಲು ಮತ್ತು ಜನಜಾಗೃತಿ ಮೂಡಿಸಲು “ಎಚ್ಚರಿಕಾ ಸಮಾವೇಶ’’, “ಸೌಹಾರ್ದ ಸಮಾವೇಶ’’, “ಸಹಬಾಳ್ವೆ ಸಂಗಮ’’, “ಸಹಬಾಳ್ವೆ ಸಾಗರ’’, “ಐಕ್ಯತಾ ಸಮಾವೇಶ’’ಗಳು ನಡೆದವು. ಕೋಮು ಸೌಹಾರ್ದ ವೇದಿಕೆಯಷ್ಟೇ ಅಲ್ಲದೆ “ನ್ಯಾಯಕ್ಕಾಗಿ ನಾವು’’, “ದ್ವೇಷ ಬಿಟ್ಟು – ದೇಶ ಕಟ್ಟು’’, “ಕರ್ನಾಟಕ ಸೌಹಾರ್ದ ವೇದಿಕೆ’’, “ನಮ್ಮ ಧ್ವನಿ’’, “ಸಂವಿಧಾನ ಸಂರಕ್ಷಣಾ ವೇದಿಕೆ’’- ಹೀಗೆ ಹೆಸರಿಸಬಹುದಾದ ಹಲವು ಪ್ರಯತ್ನಗಳಿವೆ. ಮಂಗಳೂರಿನ “ಜನನುಡಿ ಸಮಾವೇಶ’’ಗಳು ಹಲವು ಜಾತ್ಯತೀತ ಸಾಹಿತಿ ಮತ್ತು ಚಿಂತಕರ ಸಮಾಗಮವಾಗಿ ಕೆಲಸ ಮಾಡಿತು. ಜಾತ್ಯತೀತತೆಯ ಈ ದನಿಯನ್ನು ಅಡಗಿಸಲಿಕ್ಕಾಗಿಯೇ ಕಲ್ಬುರ್ಗಿ ಮತ್ತು ಗೌರಿ ಲಂಕೇಶರ ಹತ್ಯೆ ನಡೆಯಿತು. ಆದರೆ ಈ ಹತ್ಯೆಗಳು ಸೌಹಾರ್ದ ಪ್ರಿಯರನ್ನು ಧೃತಿಗೆಡಿಸುವ ಬದಲಿಗೆ ಮತ್ತಷ್ಟು ನಿಕಟಗೊಳಿಸಿತು, ಗಟ್ಟಿಗೊಳಿಸಿತು. “ನಾನು ಗೌರಿ – ನಾವೆಲ್ಲಾ ಗೌರಿ’’ ಎಂಬ ನಿನಾದ ಮನುಷ್ಯ ಪ್ರೇಮಿಗಳ ಪ್ರತಿಜ್ಞೆಯಾಗಿ ಕೆಲಸ ಮಾಡಿತು. ಸಂಘಪರಿವಾರದ ಕೋಮು ಪ್ರಯೋಗಗಳ ಕುರಿತು ಬೆಂಗಳೂರಿನಲ್ಲಿ ರೂಪತಳೆದ “ಬಹುತ್ವ ಕರ್ನಾಟಕ’’ ಅನೇಕ ಸತ್ಯಶೋಧನೆಗಳನ್ನು ನಡೆಸಿತು. 2018ರ ಚುನಾವಣೆಯ ಸಂದರ್ಭದಲ್ಲಿ “ಸಂವಿಧಾನ ಉಳಿವಿಗಾಗಿ ಕರ್ನಾಟಕ’’ ಎಂಬ ವೇದಿಕೆ ರೂಪಗೊಂಡು ರಾಜ್ಯವ್ಯಾಪಿಯಾಗಿ ಪ್ರಚಾರಾಂದೋಲನವನ್ನು ನಡೆಸಿತು. 2020ರಲ್ಲಿ ಸಿಎಎ, ಎನ್‌ಆರ್‌ಸಿ ವಿರುದ್ಧವಾಗಿ ನಡೆದ ಹೋರಾಟದಲ್ಲೂ ಕರ್ನಾಟಕದ ಸೌಹಾರ್ದ ಮನಸ್ಸುಗಳು ಸಕ್ರಿಯವಾಗಿ ತೊಡಗಿಸಿಕೊಂಡವು. ಕೋಮು ರಾಜಕಾರಣ ಅತಿಯಾದಾಗ 2022ರಲ್ಲಿ ಉಡುಪಿಯಲ್ಲಿ “ಸಾಮರಸ್ಯ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶ’’ವನ್ನು ಆಯೋಜಿಸಲಾಯಿತು. 2023ರ ವಿಧಾನ ಸಭಾ ಚುನಾವಣೆಗಳ ಸಂದರ್ಭದಲ್ಲಿ ರೂಪತಳೆದ “ಎದ್ದೇಳು ಕರ್ನಾಟಕ’’ವು ಜನರಾಜಕಾರಣದ ಹೊಸ ಮಾದರಿಯಾಗಿ ಕೆಲಸ ಮಾಡಿತು.

ಮೇಲ್ಕಂಡ ಎಲ್ಲಾ ಪ್ರಯತ್ನಗಳು ಕರ್ನಾಟಕವನ್ನು ಕೋಮುವಾದಿಗಳಿಗೆ ಬಲಿಯಾಗದಂತೆ ತಡೆದಿವೆ, ಪ್ರಜಾತಾಂತ್ರಿಕ ಪ್ರಜ್ಞೆಯನ್ನು ಜಾಗೃತಗೊಳಿಸಿವೆ, ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ ಶಕ್ತಿಗಳನ್ನು ಸೋಲಿಸುವ ಕೆಲಸದಲ್ಲೂ ಗಮನಾರ್ಹ ಪಾತ್ರ ನಿರ್ವಹಿಸಿವೆ. ಆದರೆ ದ್ವೇಷ ರಾಜಕಾರಣವನ್ನೇ ಪ್ರಮುಖ ದಾಳವನ್ನಾಗಿ ಮಾಡಿಕೊಂಡಿರುವ ಫ್ಯಾಸಿಸಂ ಇಂದು ಭಾರತದ ಅತಿದೊಡ್ಡ ಪಿಡುಗಾಗಿದೆ. ಇದನ್ನು ಹಿಮ್ಮೆಟ್ಟಿಸಬೇಕಿದೆ.
ಭವಿಷ್ಯಕ್ಕೆ ಪಾಠ
1. ಜನಮಾನಸದಲ್ಲಿನ ಸಂಕಟವನ್ನು ಸಂಘರ್ಷಕ್ಕೆ ಹೊರಳಿಸುವುದರಲ್ಲಿ, ಸಾಮಾನ್ಯರನ್ನು ಒಟ್ಟುಗೂಡಿಸಿ ಅಸಾಮಾನ್ಯ ಶಕ್ತಿಯನ್ನಾಗಿಸುವುದರಲ್ಲಿ, ಸಮಾಜದ ಅರಿವನ್ನು ವಿಸ್ತರಿಸಿ, ಎತ್ತರಿಸುವುದರಲ್ಲಿ, ಸರ್ಕಾರಗಳನ್ನು ಬದಲಾಯಿಸುವುದರಲ್ಲಿ, ಸರ್ಕಾರಗಳು ಜನಪರ ಕ್ರಮಗಳಿಗೆ ಮುಂದಾಗಲೇಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಿಸುವುದರಲ್ಲಿ, ಅನೇಕ ಸಾಮಾಜಿಕ ಸುಧಾರಣೆಗಳನ್ನು ಜಾರಿ ಮಾಡಿಸುವುದರಲ್ಲಿ ಜನ ಚಳವಳಿಗಳು ನಿರ್ಣಾಯಕ ಪಾತ್ರವಹಿಸಿವೆ. ಪಾಠ: ಭವಿಷ್ಯದಲ್ಲೂ ಸಮಾಜವನ್ನು ಬದಲಾಯಿಸಬೇಕಾದರೆ ಪ್ರಬಲ ಜನಚಳವಳಿ ಕಟ್ಟುವುದೇ ನಮ್ಮ ಪ್ರಧಾನ ಗುರಿಯಾಗಿರಬೇಕು.
2. ಕಳೆದ 50 ವರ್ಷದಲ್ಲಿ ಕರ್ನಾಟಕದಲ್ಲಿ ಬಂದಿರುವ ಬದಲಾವಣೆ ಯಾವುದೋ ಒಂದು ಸಂಘಟನೆ ಅಥವಾ ಒಂದು ಚಳವಳಿಗೆ ಮಾತ್ರ ಸೀಮಿತವಾಗಿಲ್ಲ. ಪಾಠ: ನಾನು, ನಮ್ಮ ಸಂಘಟನೆ, ನಮ್ಮ ಸಮಸ್ಯೆ ಎಂಬ ಸಂಕುಚಿತ ಕವಚವನ್ನು ದಾಟಿ ಎಲ್ಲರೊಡಗೂಡಿ, ಎಲ್ಲರ ಭಾಗವಾಗಿ ಚಳವಳಿ ನಿರ್ಮಾಣ ಮಾಡುವುದು ನಮ್ಮ ಪ್ರವೃತ್ತಿಯಾಗಬೇಕು.
3. ಸಮಾಜದೊಳಗೆ ಮಡುಗಟ್ಟಿದ ಅಥವಾ ಸ್ಫೋಟಗೊಳ್ಳತೊಡಗಿದ ಸಂಕಟಕ್ಕೆ, ಸಕಾಲಿಕವಾಗಿ ಸ್ಪಂದಿಸಿ, ಸೂಕ್ತ ಕರೆ ನೀಡಿದಾಗ ಅದು ಸಾಮಾಜಿಕ ಶಕ್ತಿಯಾಗಿ, ಪ್ರಬಲ ಜನಚಳವಳಿಯಾಗಿ ಹೊರಹೊಮ್ಮಿದೆ. ಪಾಠ: ಪ್ರಸ್ತುತ ಕಾಲದ ನಾಡಿ ಹಿಡಿಯಬೇಕು. ಇಂದಿನ ಸಮಸ್ಯೆಗಳಿಗೆ ಸಂಕಟಗಳಿಗೆ ಪರಿಹಾರ ಒದಗಿಸಬಲ್ಲ ಕರೆ ಮತ್ತು ಹೋರಾಟ ರೂಪ ನೀಡಲು ಪ್ರಯತ್ನ ಹಾಕಬೇಕು.
4. 70-80ರ ದಶಕಗಳು ಜನಚಳವಳಿಗಳ ಉಬ್ಬರದ ದಶಕಗಳು. 90ರ ದಶಕದಲ್ಲಿ ಈ ಎಲ್ಲಾ ಚಳವಳಿಗಳು ವಿಘಟನೆಗೊಂಡಿವೆ ಅಥವಾ ಇಳಿಮುಖಗೊಂಡಿವೆ. 90ರ ದಶಕದಲ್ಲಿ ಸರ್ಕಾರದ ನೀತಿಗಳು ದೊಡ್ಡ ಮಟ್ಟದಲ್ಲಿ ಬದಲಾವಣೆಯಾದವು. ಖಾಸಗೀಕರಣ ಹಾಗೂ ಕೋಮುವಾದೀಕರಣದ ಪ್ರಕ್ರಿಯೆಗಳು ಹೊಸ ಸಮಸ್ಯೆಗಳನ್ನು, ಸವಾಲುಗಳನ್ನು ಸಮಾಜದ ಮುಂದೆ ತಂದವು. ಹೊಸ ಸಂದರ್ಭಕ್ಕೆ ಹೊರಳಿಕೊಳ್ಳಲಾಗದೆ ಚಳವಳಿಗಳ ಪರಿಣಾಮ ಮತ್ತು ಪ್ರಭಾವ ತಗ್ಗತೊಡಗಿತು. ಪಾಠ: ಚಳವಳಿ ಸದಾ ಚಲನಶೀಲವಾಗಿರಬೇಕು. ಹೊರಗೆ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಬದಲಾವಣೆಗಳಿಗೆ ಕಣ್ಣು ತೆರೆದಿಟ್ಟುಕೊಳ್ಳಬೇಕು. ಹೊಸ ಪರಿಸ್ಥಿತಿಗಳಿಗೆ ತಕ್ಕಂತೆ ತನ್ನ ಗುರಿಗಳನ್ನು, ಹಕ್ಕೊತ್ತಾಯಗಳನ್ನು, ಹೋರಾಟದ ರೂಪಗಳನ್ನು ಮಾರ್ಪಡಿಸಿಕೊಳ್ಳಬಲ್ಲ ಹೊಂದಾಣಿಕೆ ಗುಣವನ್ನು ತನ್ನದಾಗಿಸಿಕೊಳ್ಳಬೇಕು.
ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)
5. ರಾಜಕೀಯ ಮಧ್ಯಪ್ರವೇಶದ ಚರ್ಚೆ, ರಾಜಕೀಯದಲ್ಲಿ ಬಂದ ಗೆಲುವು -ಸೋಲುಗಳು ಚಳವಳಿಯೊಳಗಿನ ಚಿಂತನೆಯನ್ನು, ಮೌಲ್ಯಗಳನ್ನು, ನಾಯಕತ್ವದ ಗುಣವನ್ನು, ನಾಯಕತ್ವದ ನಡುವಿನ ಸಂಬAಧಗಳನ್ನು ತೀವ್ರವಾಗಿ ಬಾಧಿಸಿದವು. ಪಾಠ: ರಾಜಕೀಯದ ಜೊತೆಗಿನ ಆಟ ಬೆಂಕಿಯ ಜೊತೆಗಿನ ಸರಸವಿದ್ದಂತೆ. ಪ್ರಸ್ತುತ ರಾಜಕೀಯ ಮಾದರಿ ಬಲಾಢ್ಯರಿಗೆ ಪೂರಕವಾದ ಮಾದರಿ. ದುಡುಕಿನ ರಾಜಕೀಯ ನಡೆಗಳು ಜನಚಳವಳಿಗಳಿಗೆ ನಷ್ಟವನ್ನಷ್ಟೇ ತರುತ್ತವೆ. ಜನ ರಾಜಕಾರಣದ ಹೊಸ ಮಾದರಿಯನ್ನು ಆವಿಷ್ಕರಿಸಬೇಕಿದೆ, ಸಮಾನ ಮನಸ್ಕರೆಲ್ಲರೂ ಜೊತೆಗೂಡಿ ಅಭಿವೃದ್ಧಿಪಡಿಸಬೇಕಿದೆ.
6. ಚಳವಳಿ ಬೆಳೆದಂತೆ ಕೆಲವರು ನಾಯಕರು ಸಂಘಟನೆಗಿಂತ ಮೇಲೆಂಬಂತೆ ಬೆಳೆದರು. ಇದು ಸಂಘಟನೆಯ ಸಾಮೂಹಿಕ ಪ್ರಜ್ಞೆಯನ್ನು ಮತ್ತು ಐಕ್ಯತೆಯ ಮನೋಭಾವವನ್ನು ದುರ್ಬಲಗೊಳಿಸಿತು. ಸಂಘಟನೆಗಳು ವಿಘಟನೆಗಳಾದವು. ಪಾಠ: ಸಮಷ್ಟಿ ನಾಯಕತ್ವ ಮತ್ತು ಸಂಘಟನಾ ಐಕ್ಯತೆ ಚಳವಳಿಯ ಉಳಿವು ಮತ್ತು ಬೆಳವಣಿಗೆಗೆ ಮೂಲ ಸ್ತಂಭಗಳು.
7. 90ರ ದಶಕದಲ್ಲಿ ಕೋಮು ರಾಜಕಾರಣ ಬಿರುಸು ಪಡೆಯಿತು. ಇದನ್ನು ವಿರೋಧಿಸಿ ನಡೆದ ಅನೇಕ ಹೋರಾಟಗಳು ನಮಗೇ ತಿಳಿಯದಂತೆ ಅವರ ಕೋಮು ಅಜೆಂಡಾವನ್ನೇ ಸಮಾಜದ ಮುಖ್ಯ ಅಜೆಂಡವನ್ನಾಗಿಸುವುದರಲ್ಲಿ ನಾವೂ ಪಾತ್ರವಹಿಸಿದೆವು. ಪಾಠ: ರಿಯಾಕ್ಟಿವ್ ವಿಧಾನಗಳನ್ನು ಕೈಬಿಟ್ಟು ಪ್ರೋಆಕ್ಟಿವ್ ಮಾದರಿಯನ್ನು ಕಂಡುಕೊಳ್ಳಬೇಕು. ಅವರ ಅಜೆಂಡಾಗೆ ಕೇವಲ ಪ್ರತಿಕ್ರಿಯಿಸುವ ಕೆಲಸ ಮಾಡುವುದಲ್ಲ. ನಾವೇ ಅಜೆಂಡಾ ಸೆಟ್ ಮಾಡಬೇಕು. ಉತ್ತರಿಸಲಾಗದೆ ತತ್ತರಿಸುವಂತೆ ಮಾಡಬೇಕು.
ಕೊನೆಯ ಮಾತು: ಈ ಲೇಖನ ಸಮಗ್ರ ಚೌಕಟ್ಟಿನಲ್ಲಿ ಕರ್ನಾಟಕದ ಜನಚಳವಳಿಗಳನ್ನು ಅವಲೋಕಿಸುವ ಪ್ರಯತ್ನ. ಇದರಲ್ಲಿ ಮಾಹಿತಿಯ ಕೊರತೆಗಳು, ತಪ್ಪು ಉಲ್ಲೇಖಗಳು, ಕೆಲವು ಕಡೆಗಣನೆಗಳೂ ಇರಲಿಕ್ಕೆ ಸಾಕು. ಅನ್ಯಥಾ ಭಾವಿಸದೆ ಅವನ್ನು ಗಮನಕ್ಕೆ ತರಲು ಮನವಿ. ಮೂಲ ಉದ್ದೇಶ ನಮ್ಮನ್ನು, ನಮ್ಮ ನಾಡನ್ನು ಮುನ್ನಡೆಸಿದ ಅದಮ್ಯ ಶಕ್ತಿ ಕೇಂದ್ರಗಳಾದ ಚಳವಳಿಗಳಿಂದ ಸ್ಪೂರ್ತಿ ಮತ್ತು ಪಾಠಗಳನ್ನು ಪಡೆದು ಮುಂದಿನ ಮಾಹಾಯಾನಕ್ಕೆ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳುವುದು. ಜನಚಳವಳಿಗಳು ಕಟ್ಟಿಕೊಟ್ಟಿರುವ ಅನುಭವದ ಈ ಅಮೂಲ್ಯ ಪಾಠಗಳೇ ಮುಂದಿನ ನಮ್ಮ ದೀರ್ಘ ಪಯಣದ ಹಾದಿಯ ಬೆಳಕು.
(ಮುಗಿಯಿತು)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ನೂರ್ ಶ್ರೀಧರ್
ಚಿತ್ರದುರ್ಗದ ಇಂಜಿನಿಯರಿಂಗ್ ವಿದ್ಯಾರ್ಥಿ ನೂರ್ ಜುಲ್ಫೀಕರ್, ನೂರ್ ಶ್ರೀಧರ್ ಆಗಿದ್ದು ಭೂಗತ ಕ್ರಾಂತಿಕಾರಿ ಚಳವಳಿಯ ಪೂರ್ಣಾವಧಿ ಕಾರ್ಯಕರ್ತನಾಗಿದ್ದರಿಂದ. ಭಾರತದ ಸಂದರ್ಭದಲ್ಲಿ ಈ ರೀತಿಯ ಭೂಗತ ಸಶಸ್ತ್ರ ಚಳವಳಿಯಿಂದ ಕ್ರಾಂತಿ ಮಾಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ತೀವ್ರ ವೈಚಾರಿಕ ಸಂಘರ್ಷ ನಡೆಸಿ, 2014ರಿಂದ ಮುಖ್ಯವಾಹಿನಿ ಪ್ರಜಾತಾಂತ್ರಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕ ಜನಶಕ್ತಿ ಮತ್ತು ಎದ್ದೇಳು ಕರ್ನಾಟಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಇವರು 'ನನ್ನೊಳಗಿನ ಸೂಫಿ’ ಹಾಗೂ 'ಭಾರತದ ಕ್ರಾಂತಿ ಮತ್ತು ಮಾವೋವಾದಿ ಚಳವಳಿ' ಎಂಬ ಕೃತಿಗಳನ್ನು ರಚಿಸಿದ್ದಾರೆ.




