ರಾಜಕೀಯ ರಂಗದಲ್ಲಿ ಇಂದು ಹೆಣ್ಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರಭುತ್ವದ ಯೋಜನೆಗಳ ಫಲಾನುಭವಿಯಾಗಿ ಮತ್ತು ಆ ಯೋಜನೆಗಳ ವಿಸ್ತರಣಾಕಾರಳಾಗಿಯೇ ಹೊರತು ಆ ರಾಜಕೀಯ ಯೋಜನೆಗಳ ನೀತಿ ನಿರೂಪಕಳಾಗಿ ಅಲ್ಲ. ಇಂತಹ ಸ್ಥಿತಿ ಬದಲಾಗಬೇಕಾದರೆ ಅವಳಿಗೆ ರಾಜಕೀಯ ಅಧಿಕಾರ ಚಲಾಯಿಸುವ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಇಡೀ ದೇಶದ ರಾಜಕಾರಣವನ್ನು ಗಮನಿಸಿದರೆ ಕರ್ನಾಟಕದ ಸ್ಥಿತಿ ಅತ್ಯಂತ ಶೋಚನೀಯ.
ಕರ್ನಾಟಕದಲ್ಲಿ ಇಲ್ಲಿಯವರೆಗೂ ಹದಿನೆಂಟು ರಾಜ್ಯಪಾಲರು ಆಗಿಹೋಗಿದ್ದಾರೆ. ಅದರಲ್ಲಿ ಒಬ್ಬರೇ ಮಹಿಳೆ. ಮೊದಲ ಮಹಿಳಾ ಚುನಾವಣಾ ಆಯುಕ್ತರೆಂಬ ಕೀರ್ತಿಗೆ ಪಾತ್ರರಾದ ವಿ.ಎಸ್. ರಮಾದೇವಿಯವರು 1999ರಿಂದ 2003ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದರು. ಆದರೆ ಇಲ್ಲಿಯವರೆಗೆ ಇಪ್ಪತ್ತಮೂರು ಮುಖ್ಯಮಂತ್ರಿಗಳನ್ನು ಹೊಂದಿರುವ ಕರ್ನಾಟಕದಲ್ಲಿ ಒಬ್ಬಳೇ ಒಬ್ಬ ಮಹಿಳಾ ಮುಖ್ಯ ಮಂತ್ರಿ ಬಂದಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಬೇರೆ ಬೇರೆ ರಾಜ್ಯಗಳು ಹದಿನೇಳು ಮಹಿಳಾ ಮುಖ್ಯ ಮಂತ್ರಿಗಳನ್ನು ಕಂಡಿವೆ. ಉತ್ತರ ಪ್ರದೇಶ, ಒರಿಸ್ಸಾ, ಗೋವಾ, ಅಸ್ಸಾಂ, ತಮಿಳುನಾಡು, ಪಂಜಾಬ್, ಬಿಹಾರ್, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್, ಜಮ್ಮು ಕಾಶ್ಮೀರದ ರಾಜ್ಯಗಳಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಮಹಿಳೆಯರು ಪಡೆದಿದ್ದಾರೆ. ಆದರೆ ಕರ್ನಾಟಕದಲ್ಲಿ ಏಕಿಲ್ಲ? ಮಾರ್ಗರೇಟ್ ಆಳ್ವರನ್ನು ಹೊರತುಪಡಿಸಿ ಕರ್ನಾಟಕ ಇತರ ಮಹಿಳೆಯರ್ಯಾರೂ ರಾಜ್ಯಪಾಲರಾಗಿ ಹೋಗಿಲ್ಲ.
ಇಲ್ಲಿಯವರೆಗೆ ಕರ್ನಾಟಕದ ಅಸೆಂಬ್ಲಿಗೆ 96 ಮಹಿಳಾ ಶಾಸಕಿಯರು ಚುನಾಯಿತರಾಗಿದ್ದಾರೆ. ಕರ್ನಾಟಕದಲ್ಲಿ ಮಹಿಳಾ ಮಂತ್ರಿಯ ಸ್ಥಾನ ಪಡೆದ ಮೊದಲ ಮಹಿಳೆ ಗ್ರೇಸ್ ಟಕ್ಕರ್. 1957ರಲ್ಲಿ ಎಸ್. ನಿಜಲಿಂಗಪ್ಪ ಸರ್ಕಾರದಲ್ಲಿ ಟಕ್ಕರ್ ಶಿಕ್ಷಣ ಸಚಿವೆಯಾಗಿದ್ದರು. ನಂತರ 1962ರಲ್ಲಿ ಎಸ್.ಆರ್. ಕಂಠಿ ಸರ್ಕಾರದಲ್ಲಿ ಯಶೋಧರಾ ದಾಸಪ್ಪ ಸಮಾಜ ಕಲ್ಯಾಣ ಇಲಾಖೆಯ ಸಚಿವೆಯಾಗಿದ್ದರು. ಪ್ರತಿ ಮಂತ್ರಿಮಂಡಲದಲ್ಲಿಯೂ ಮಂತ್ರಿಗಳಾಗುವುದು ಒಬ್ಬರು, ಹೆಚ್ಚೆಂದರೆ ಇಬ್ಬರು ಇರಬಹುದು. ಒಮ್ಮೆ ಮಾತ್ರ ಎಸ್.ಎಂ. ಕೃಷ್ಣ ಅವರ ಮಂತ್ರಿಮಂಡಲದಲ್ಲಿ ನಾಲ್ವರು ಮಹಿಳೆಯರು ಮಂತ್ರಿಗಳಾಗಿದ್ದರು. ಕರ್ನಾಟಕವು ಸುವರ್ಣ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ `ತೆನೆ ಹೊತ್ತ ಮಹಿಳೆಯ ಜಾತ್ಯತೀತ ಜನತಾಪಕ್ಷವು ಅಧಿಕಾರದಲ್ಲಿದ್ದಾಗ ಒಬ್ಬರೂ ಮಹಿಳಾ ಮಂತ್ರಿಗಳಿರಲಿಲ್ಲ. 1970ರ ದಶಕದಲ್ಲಿ ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸಭಾಪತಿ ಆದವರು ಕೆ.ಎಸ್. ನಾಗರತ್ನಮ್ಮ. ವಿಧಾನ ಪರಿಷತ್ತಿನ ಮೊದಲ ಮಹಿಳಾ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಬಸವರಾಜೇಶ್ವರಿ ಜಹಗೀರುದಾರ್ ಅವರಿಗೆ ಸಲ್ಲಬೇಕು. 2010ರಲ್ಲಿ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕಿಯ ಪಟ್ಟಕ್ಕೇರಿದ ಮೊದಲ ಮಹಿಳೆ ಮೋಟಮ್ಮ. ನಂತರದ ದಿನಗಳಲ್ಲಿ ಸುಮತಿ, ಎಂ.ಆರ್. ಲಕ್ಷಮ್ಮ, ರಾಣಿ ಸತೀಶ್, ವಿಮಲಾ ಗೌಡ, ಜಯಮಾಲಾ ಇವರುಗಳು ಸಭಾಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿರಿ: ಅಂದು ಎನ್‌ಇಪಿ, ಇಂದು ಯುಜಿಸಿ; ರಾಜ್ಯಗಳ ಮೇಲೆ ಕೇಂದ್ರದ ಗದಾಪ್ರಹಾರ!
ಇನ್ನು ಲೋಕಸಭೆಯನ್ನು ಪ್ರತಿನಿಧಿಸುವ ಮಹಿಳೆಯರ ಸಂಖ್ಯೆಯೇನೂ ಆಶಾದಾಯಕವಾಗಿಲ್ಲ. ಚಾರಿತ್ರಿಕವಾಗಿ ಸಂಸತ್‌ನಲ್ಲಿ ಕರ್ನಾಟಕದ ಮಹಿಳಾ ಪ್ರಾತಿನಿಧ್ಯ ಕಡಿಮೆಯೇ. 1962ರಲ್ಲಿ ಸರೋಜಿನಿ ಮಹಿಷಿಯವರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸತ್ ಭವನ ಪ್ರವೇಶಿಸಿದರು. ಪ್ರತಿಯೊಬ್ಬ ಸಂಸತ್ ಸದಸ್ಯೆಯೂ 26 ಲಕ್ಷ ಜನರನ್ನು ಪ್ರತಿನಿಧಿಸುತ್ತಾರೆ, ಎನ್ನುವುದಾದರೆ ಅದರ ಅರ್ಧದಷ್ಟು ಮಹಿಳಾ ಸಮುದಾಯವನ್ನು ಪ್ರತಿನಿಧಿಸುವ ಸಂಸತ್ ಸದಸ್ಯೆಯರ ಸಂಖ್ಯೆ 2024ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮೂವರು. ಪ್ರಿಯಾಂಕಾ ಜಾರಕಿಹೊಳಿ, ಪ್ರಭಾ ಮಲ್ಲಿಕಾರ್ಜುನ್ ಮತ್ತು ಶೋಭಾ ಕರಂದ್ಲಾಜೆ. ಮೂವತ್ತಮೂರು ವರ್ಷಗಳ ಹಿಂದೆ 1991ರಲ್ಲಿ ಇಂತಹ ಮೂವರ ಸಂಖ್ಯೆಯನ್ನು ಕರ್ನಾಟಕ ಕಂಡಿದ್ದು ಬಸವರಾಜೇಶ್ವರಿ, ತಾರಾದೇವಿ ಮತ್ತು ಚಂದ್ರಪ್ರಭಾ ಅರಸ್ ಅವರು ಪಾರ್ಲಿಮೆಂಟಿಗೆ ಚುನಾಯಿತರಾದಾಗ. 1990 ಮತ್ತು 1998ರಲ್ಲಿ ಯಾವುದೇ ಮಹಿಳೆಯು ಸಂಸತ್‌ಗೆ ಚುನಾಯಿತರಾಗಿರಲಿಲ್ಲ. ಇಂದು ಕರ್ನಾಟಕದಲ್ಲಿ ಮಹಿಳಾ ಮತದಾರರ ಸಂಖ್ಯೆ 2.7 ಕೋಟಿಯಿದೆ. ಆದರೆ ಇವರನ್ನು ಪ್ರತಿನಿಧಿಸಬಲ್ಲ ಮಹಿಳಾ ನಾಯಕಿಯರ ಕೊರತೆಯಿದೆ. ಇದು ಕರ್ನಾಟಕದ ಮಹಿಳಾ ಪ್ರಾತಿನಿಧ್ಯದ ಚಿತ್ರ. ಚಿಂತಿಸಲೇಬೇಕಾದ ಅತ್ಯಂತ ಗಂಭೀರವಾದ ವಿಷಯ.

1967ರಿಂದ ಈಚೆಗೆ ಶಾಸನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿರುವ 1297 ಮಹಿಳಾ ಸ್ಪರ್ಧಿಗಳಲ್ಲಿ ಗೆದ್ದವರು ಕೇವಲ 110. ಅಂದರೆ ಶೇಕಡಾ 8.48ರಷ್ಟು. 1962ರಿಂದೀಚೆಗೆ ಮಹಿಳಾ ಮತದಾರರ ಸಂಖ್ಯೆ ಗಮನಾರ್ಹವಾಗಿ ಏರಿದೆ. ಆಗ 55.13 ಲಕ್ಷ ಇದ್ದದ್ದು ಈಗ 2.63 ಕೋಟಿ ಸಂಖ್ಯೆಯನ್ನು ಮುಟ್ಟಿದೆ. ಹಲವಾರು ವಿಭಾಗಗಳಲ್ಲಿ ಅದು ಪುರುಷ ಮತದಾರರ ಸಂಖ್ಯೆಯನ್ನು ಮೀರಿದೆ. ದಕ್ಷಿಣದ ರಾಜ್ಯಗಳಲ್ಲಿನ ಮಹಿಳಾ ಪ್ರಾತಿನಿಧ್ಯದ ಪ್ರಮಾಣಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಇದು ಅತ್ಯಂತ ಕಡಿಮೆ. ಇದೇಕೆ ಹೀಗೆ?
ಕರ್ನಾಟಕದ ಮಹಿಳೆಯರು ರಾಜಕಾರಣಕ್ಕೆ ಹಿಂಜರಿದವರೇ? ಕನ್ನಡತಿ ಕಮಲಾದೇವಿ ಚಟ್ಟೋಪಾಧ್ಯಾಯ ಭಾರತದಲ್ಲಿಯೇ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹೋರಾಡಿ ಚುನಾವಣೆಗಿಳಿದ ಮಹಿಳೆ. ಮದ್ರಾಸ್ ಲೆಜಿಸ್ಲೇಟಿವ್ ಅಸೆಂಬ್ಲಿ ಚುನಾವಣೆಗೆ 1920ರಷ್ಟು ಹಿಂದೆಯೇ ಸ್ಪರ್ಧಿಸಿದ್ದರು. ಆದರೆ 55 ಮತಗಳಿಂದ ಸೋತಿದ್ದರು. ಆರ್. ಕಲ್ಯಾಣಮ್ಮ, ಪಿ. ಆರ್. ಜಯಲಕ್ಷಮ್ಮ ಮುಂತಾದವರು ಬೆಂಗಳೂರಿನ ಮೇಯರ್‌ಗಳಾಗಿ ಕೆಲಸ ಮಾಡಿ ಮಹಿಳೆಯರ ಸಾರ್ವಜನಿಕ ಜೀವನಕ್ಕೆ ನಾಂದಿ ಹಾಕಿದ್ದರು.
ಮಹಿಳಾ ಪ್ರಾತಿನಿಧ್ಯಕ್ಕಾಗಿ ಮೀಸಲಾತಿಯ ಬೀಜಗಳು
ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳೆಗೆ ಶಾಸನಬದ್ಧ ಮೀಸಲಾತಿ ನೀಡುವ ಕ್ರಾಂತಿಕಾರಿ ಪ್ರಯತ್ನ ಮೊದಲು ನಡೆದದ್ದು ಕರ್ನಾಟಕದಲ್ಲಿ. 1983ರಲ್ಲಿ ಜನತಾದಳ ಸರ್ಕಾರ ಜಾರಿಗೆ ತಂದ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆ ಮಹಿಳೆಯರಿಗೆ 25% ಮೀಸಲಾತಿ ನೀಡಿತ್ತು. 1987ರ ಚುನಾವಣೆಯಲ್ಲಿ ಇದು ಜಾರಿಗೆ ಬಂದಾಗ ದೇಶದಲ್ಲೇ ಮೊದಲ ಬಾರಿಗೆ ನೂರಾರು ಮಹಿಳೆಯರು ಪಂಚಾಯತ್‌ಗೆ ಆಯ್ಕೆಯಾಗಿ ಬಂದರು. ಈ ವ್ಯವಸ್ಥೆಯಲ್ಲಿ ಎರಡು ಸ್ತರಗಳಿದ್ದವು: ಜಿಲ್ಲಾ ಪರಿಷತ್ ಮತ್ತು ಮಂಡಲ್ ಪಂಚಾಯತ್. ಈ ಪಂಚಾಯತ್ ವ್ಯವಸ್ಥೆಯಲ್ಲಿ ಶೇಕಡ 25ರಷ್ಟು ಮಹಿಳೆಯರಿರಬೇಕು ಅಂತ ಮಾಡಿದ್ದು ರಾಮಕೃಷ್ಣ ಹೆಗಡೆ ಸರ್ಕಾರ. ಈ ಜಿಲ್ಲಾ ಪಂಚಾಯತಿಯಲ್ಲೂ ಮಹಿಳೆಯರು ಯಾರೂ ಅಧ್ಯಕ್ಷರಾಗಿರಲಿಲ್ಲ. ಪಂಚಾಯತಿಯಲ್ಲಿ ಮಹಿಳೆಯರು ಹೆಚ್ಚಾಗಿ ಕಾರ್ಯಕ್ರಮ ನಿರ್ವಹಣೆಯ ಹಂತದಲ್ಲಿರುತ್ತಾರೆಯೇ ಹೊರತು ನೀತಿ ನಿರೂಪಕರಾಗಿ ಅಲ್ಲ. ಕಾರ್ಯಕ್ರಮ ನಿರ್ವಹಣೆಯಲ್ಲಿ ದಕ್ಷತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ತೋರಿಸಬಯಸುವ ಮಹಿಳೆಯರು ಎದುರಿಸಬೇಕಾದ ಕಷ್ಟ, ನಷ್ಟಗಳು ಈಗಲೂ ಹಲವಾರಿವೆ.
ಇದನ್ನೂ ಓದಿರಿ: ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!
1993ರ ಏಪ್ರಿಲ್‌ನಲ್ಲಿ ಜಾರಿಗೆ ಬಂದ ’73ನೇ ಸಂವಿಧಾನ ತಿದ್ದುಪಡಿ ಮಸೂದೆ’ ಮತ್ತು `74ನೇ ತಿದ್ದುಪಡಿ ಮಸೂದೆ’ ಎಲ್ಲ ರಾಜ್ಯಗಳಲ್ಲಿ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಏಕರೂಪ ಮೀಸಲಾತಿಯನ್ನು ಜಾರಿಗೆ ತಂದಿತು. ಇದರ ಫಲವಾಗಿ ಇಂದು ದೇಶಾದ್ಯಂತ ಹತ್ತು ಲಕ್ಷ ಮಹಿಳೆಯರು ಗ್ರಾಮಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ ಅಧಿಕಾರದ ಸೂತ್ರ ಹಿಡಿದಿದ್ದಾರೆ; ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಾಗಿದ್ದಾರೆ. ಈ ಮಹಿಳಾ ಮೀಸಲಾತಿಯ ದಿಕ್ಕಿನಲ್ಲಿ ಕರ್ನಾಟಕ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದೆ. 2010ರ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆಯನ್ವಯ ಈಗ ಕರ್ನಾಟಕದಲ್ಲಿ ಗ್ರಾಮಪಂಚಾಯತಿ ಚುನಾವಣೆಗಳಲ್ಲಿ ಶೇಕಡ 50ರಷ್ಟು ಮಂದಿ ಮಹಿಳೆಯರಿಗೆ ಮೀಸಲಾತಿಯು ಶಾಸನಬದ್ಧವಾಗಿ ದೊರೆತಿದೆ.

ವಯಸ್ಸಿನ ಮಿತಿಯಿಲ್ಲದೆ ಮಹಿಳೆಯರು ಗ್ರಾಮಪಂಚಾಯತಿ ಚುನಾವಣೆಯಲ್ಲಿ ಭಾಗವಹಿಸಿರುವುದನ್ನು ನೋಡಿದರೆ ಮಹಿಳೆಯರ ಸಾಮರ್ಥ್ಯಗಳ ವಿಶ್ವರೂಪ ದರ್ಶನವಾಗುತ್ತದೆ. ಇಲ್ಲಿ ಚುನಾಯಿತ ಮಹಿಳೆಯರ ವೈವಿಧ್ಯ ನೋಡಿದರೆ, ಕಲಿಯದವರ ಜೊತೆಗೆ ಪದವೀಧರರೂ, ಸ್ನಾತಕೋತ್ತರ ಪದವಿ ಹೊಂದಿದವರೂ, ವೈದ್ಯರೂ, ಇಂಜನಿಯರ್‌ಗಳು ಮತ್ತು ಕಾನೂನು ಪದವಿ ಹೊಂದಿದವರು ಭಾಗವಹಿಸಿದ್ದಾರೆ. 31 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಚುನಾಯಿತರಾಗಿದ್ದಾರೆ ಮತ್ತು ಅವರಲ್ಲಿ ಒಬ್ಬರು ಮೈಸೂರು ಜಿಲ್ಲೆಯ ಕೆ.ಆರ್. ತಾಲ್ಲೂಕಿನ ಸಾಲಿಗ್ರಾಮ ಪಂಚಾಯತಿಯ ಅಧ್ಯಕ್ಷೆಯಾಗಿರುವುದು ಒಂದು ಸ್ವಾಗತಾರ್ಹ ನಿಲುವು.
ಶಾಸನ ಸಭೆಗಳಲ್ಲಿ ಮೀಸಲಾತಿ
ಪ್ರಜಾಪ್ರಭುತ್ವವನ್ನು ತಳಮಟ್ಟದಿಂದ ತರಲು ಪಂಚಾಯತ್ ರಾಜ್ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿಯ ಮೂಲಕ ಶಾಸನವಾಗಿಸಿ ಯಶಸ್ವಿಯಾದ ಮಾದರಿಯು ಶಾಸನ ಸಭೆಯಲ್ಲಿ ಮಹಿಳಾ ಮೀಸಲಾತಿಗಾಗಿ ಹೋರಾಡಲು ಮಹಿಳೆಯರಿಗೆ ಸ್ಫೂರ್ತಿ ನೀಡಿತ್ತು. ಸಮಾಜ ಮತ್ತು ರಾಜಕೀಯ ಪರಿವರ್ತನೆಯಲ್ಲಿ ತನ್ನದು ಮಹತ್ವದ ಪಾತ್ರ ಇದೆ ಎಂಬುದನ್ನು ಮನಗಂಡ ಮಹಿಳಾ ಚಳವಳಿ ಮಹಿಳಾ ಮೀಸಲಾತಿಯ ಬೇಡಿಕೆಯನ್ನು ತನ್ನ ಹೋರಾಟದ ಮುಖ್ಯ ಅಜೆಂಡಾ ಆಗಿ ಬದಲಾಯಿಸಿಕೊಂಡಿತು.
ಕೇಂದ್ರದಲ್ಲಿ ಸಂಯುಕ್ತ ರಂಗ ಸರ್ಕಾರವು ಅಧಿಕಾರದಲ್ಲಿದ್ದಾಗ ಸಂವಿಧಾನದ 81ನೇ ತಿದ್ದುಪಡಿಯಾಗಿ ಮೊದಲ ಬಾರಿಗೆ ಮಹಿಳಾ ಮೀಸಲಾತಿ ಮಸೂದೆಯು ಸಿದ್ಧವಾಯಿತು. ಅಂದಿನ ಪ್ರಧಾನ ಮಂತ್ರಿಯಾಗಿದ್ದವರು ಕರ್ನಾಟಕದ ದೇವೇಗೌಡರು. 1996ರಿಂದ ಹದಿನಾಲ್ಕು ವರ್ಷಗಳ ಕಾಲ ನಡೆದ ಮೀಸಲಾತಿಯ ಪ್ರಹಸನ 2010ರಲ್ಲಿ ರಾಜ್ಯಸಭೆಯಲ್ಲಿ ಅನುಮೋದನೆಗೊಂಡಾಗ ಅದು ಹೊಸ ಚರಿತ್ರೆಯನ್ನೇ ಸೃಷ್ಟಿಸಿತು. 2010ರ ಮಾರ್ಚ್ 8, ವಿಶ್ವ ಮಹಿಳಾ ದಿನದ ಶತಮಾನೋತ್ಸವದ ದಿನವೂ ಹೌದು. ಭಾರತದ ಸಂಸತ್ತು ಒಂದು ಇತಿಹಾಸವನ್ನೇ ಸೃಷ್ಟಿಸಿತು. ಮಾರ್ಚ್ 8, 2010ರಂದು ಈ ಮಸೂದೆ ಚರ್ಚೆಗೆಂದು ಮಂಡಿತವಾದಾಗ ಎಸ್ಪಿ, ಬಿಎಸ್ಪಿ ಪಕ್ಷಗಳು ರಾಜ್ಯಸಭೆಯಲ್ಲಿ ದಾಂಧಲೆ ನಡೆಸಿದವು. ನಂತರ ಲೋಕಸಭೆಯಲ್ಲಿ ಈ ಮಸೂದೆ ಮಂಡಿತವಾಗದೆ ಬಿದ್ದು ಹೋಯಿತು. ಈ ಎಲ್ಲ ಹೋರಾಟಗಳಲ್ಲಿ ಕರ್ನಾಟಕದ ಮಹಿಳೆಯರು ಮುಂದೆಯೇ ಇದ್ದಾರೆ. ಇಷ್ಟೆಲ್ಲ ಹೋರಾಟದ ನಡುವೆಯೂ ಮಹಿಳಾ ಮೀಸಲಾತಿ ಕನಸಿನ ಗಂಟಾಗಿ ಉಳಿದಿದೆ.
ಮಹಿಳಾ ರಾಜಕಾರಣಿಗಳು ಮಹಿಳಾ ಪ್ರತಿನಿಧಿಗಳಾಗಬಲ್ಲರೇ?
ಮಹಿಳಾ ಶಾಸಕಿಯರು ಮತ್ತು ಮಹಿಳಾ ರಾಜಕಾರಣಿಗಳು ಅವರ ಪುರುಷ ಸಹವರ್ತಿಗಳಿಗಿಂತ ಭಿನ್ನರಾಗಿ ಕಾರ್ಯನಿರ್ವಹಿಸಬಲ್ಲರೇ? ಈಗಿನ ಅವರ ಕಾರ್ಯ ವೈಖರಿಯನ್ನು ನೋಡಿದರೆ ಪ್ರಸ್ತುತ ಆಚರಣೆಯಲ್ಲಿರುವ ರಾಜಕೀಯ ವ್ಯವಸ್ಥೆಯ ಚಹರೆಗಳನ್ನು ತಮ್ಮಲ್ಲಿಯೂ ಮೂಡಿಸಿಕೊಂಡು ಯಾವುದೇ ಪುರುಷ ರಾಜಕಾರಣಿಯಂತೆ ಕಾರ್ಯನಿರ್ವಹಿಸುವುದನ್ನು ಕಾಣಬಹುದಾಗಿದೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಕ್ಕಿಬಿಟ್ಟರೆ ಮಹಿಳೆಯರ ಸಮಸ್ಯೆಗಳು ಇಲ್ಲವಾಗಿ ಬಿಡುತ್ತದೆಯೆ? ಇದು ಸಂಪೂರ್ಣ ಸತ್ಯವಲ್ಲ. ಮೀಸಲಾತಿ ಸಿಕ್ಕರೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸೆ ಹಾಗೂ ಅಸಮಾನತೆಯ ನಿವಾರಣೆಯತ್ತ ಶ್ರಮಿಸಿ ಮಹಿಳಾ ಸಮಾನತೆಯ ಹಾದಿಯಲ್ಲಿ ಒಂದು ದಿಟ್ಟ ಹೆಜ್ಜೆ ಇಡಬಲ್ಲರು ಎಂಬುದು ಒಂದು ಧನಾತ್ಮಕ ನಂಬಿಕೆ. ಆದ್ದರಿಂದ ಮೀಸಲಾತಿ ಮಸೂದೆ ನಮ್ಮ ಭಾರತದ ರಾಜಕೀಯ ಸಂಸ್ಕೃತಿಯನ್ನೇ ಬದಲಾಯಿಸಿಬಿಡಬಹುದು ಎಂಬ ಯೋಚನೆಯೇ ಸಂಪೂರ್ಣ ವಾಸ್ತವವಲ್ಲವಾದರೂ ಮೀಸಲಾತಿಯಿಂದಾಗಿ ರಾಜಕೀಯ ಕ್ಷೇತ್ರದಲ್ಲಿ ನಿರ್ಧಾರ ತೆಗೆದುಕೊಳ್ಳಬಲ್ಲ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇಂತಹ ಹೆಚ್ಚುವ ಮಹಿಳೆಯರ ಇರವು ತನ್ನದೇ ಆದ ಬದಲಾದ ಮಹಿಳಾ ಸಂಸ್ಕೃತಿಯ ಸೃಷ್ಟಿಗೆ ನಾಂದಿ ಹಾಡುತ್ತದೆ.
ಇದನ್ನೂ ಓದಿರಿ: ಕರ್ನಾಟಕ 50 | ಪ್ರಾದೇಶಿಕ ರಾಜಕಾರಣದ ಪ್ರಯೋಗಗಳು; ಒಂದು ಹೆಣ್ಣೋಟ
ತೊಂಬತ್ತರ ದಶಕದಿಂದೀಚೆಗೆ ರಾಜಕಾರಣದ ಚಹರೆಯೇ ಬದಲಾಗಿ ಹೋಗಿದೆ. ಹಿಂಸೆ ಸಾರ್ವಜನಿಕ ಜೀವನದಲ್ಲಿ ಪ್ರಖರವಾಗಿ ಎದ್ದು ಕಾಣುತ್ತಿದೆ. ಜಾತಿ ರಾಜಕಾರಣ, ಗೂಂಡಾಗಿರಿ, ಹಣದ ಹೊಳೆ ಚುನಾವಣೆಯ ಭಾಗವಾಗಿವೆ. ಚುನಾವಣಾ ಅಭ್ಯರ್ಥಿಗಳಲ್ಲಿ ಹಲವಾರು ಮಂದಿ ಕ್ರಿಮಿನಲ್ ಪ್ರಕರಣಗಳ ಆರೋಪಿಗಳನ್ನು ಹೊಂದಿರುವುದು ಗಾಬರಿ ಹುಟ್ಟಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಕುಟುಂಬದಿಂದ ಬಂದವರಿಗೆ ಇರುವ ಅನುಕೂಲ ಸಾಮಾನ್ಯ ಮಹಿಳೆಯರಿಗೆ ಇರುವುದಿಲ್ಲ. ಪುರುಷಾಹಂಕಾರದ ಪಿತೃಶಾಹಿಯೇ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಅಡ್ಡಿಯಾಗಿದೆಯೆಂಬುದನ್ನು ಹೆಚ್ಚು ಸ್ಫುಟವಾಗಿ ತೋರಿಸಿದ್ದು ಹಾಸನದ ಪ್ರಜ್ವಲನ ಪೆನ್‌ಡ್ರೈವ್ ಪ್ರಕರಣ. ಪರಂಪರಾಗತವಾಗಿ ಅಧಿಕಾರವನ್ನು ಅನುಭವಿಸಿರುವ ಪಾಳೇಗಾರಿ ಕುಟುಂಬದೊಳಗೆ ಬೇರು ಬಿಟ್ಟಿರುವ ಪುರುಷಪ್ರಧಾನತೆಯ ಅಧಿಕಾರ ಮದದ ಉನ್ಮತ್ತ ಸ್ಥಿತಿಯ ಜೊತೆಗೆ, ಈ ದೌರ್ಜನ್ಯಗಳನ್ನು ಚಿತ್ರೀಕರಿಸಿ, ಅದನ್ನು ಬೆದರಿಕೆ, ಬ್ಲಾಕ್‌ಮೇಲ್ ತಂತ್ರವಾಗಿ ಬಳಸಿ ಇನ್ನಷ್ಟು ಭೂಮಿದಾಹ, ಕಾಮದಾಹ, ಅಧಿಕಾರವನ್ನು ಪ್ರದರ್ಶಿಸಿರುವ ಘೋರ ಕುಟುಂಬದ ವಿಕೃತ ನಡವಳಿಕೆಯು ಇಂದಿನ ಪರಿಸ್ಥಿತಿಯ ಕನ್ನಡಿಗೆ ಅತ್ಯುತ್ತಮ ರೂಪಕವಾಗಿದೆ. ಮಹಿಳೆಯರಿಗೆ ಪ್ರತಿಭೆ, ಸಾಮರ್ಥ್ಯಗಳಿದ್ದರೂ ಈ ವಿಷವ್ಯೂಹವನ್ನು ಭೇದಿಸುವುದು ಕಷ್ಟವಾಗುತ್ತಿದೆ.
ಆರಂಭದ ದಿನಗಳಲ್ಲಿ ಮಹಿಳೆಯರ ಸಾಮಾಜಿಕ ಕ್ರಿಯಾಶೀಲತೆಯನ್ನು ನೋಡಿ ಪಕ್ಷಗಳು ಅವರಿಗೆ ಚುನಾವಣೆಗೆ ಟಿಕೆಟ್ ಕೊಡುತ್ತಿದ್ದವು. ಆದರೆ ಇತ್ತೀಚೆಗೆ ಅಧಿಕಾರದಲ್ಲಿರುವವರ ಕುಟುಂಬದ ಮಹಿಳೆಯರಿಗೆ ಚುನಾವಣೆಯ ಟಿಕೆಟ್ ಕೊಡುವ ಪದ್ಧತಿ ಬಂದಿದೆ. ಇಲ್ಲವೆ ಗತಿಸಿದ ರಾಜಕಾರಣಿಯ ಹೆಂಡತಿ, ಮಗಳು, ಮುಂತಾದವರಿಗೆ ಟಿಕೀಟು ಕೊಟ್ಟು ಅನುಕಂಪದ ಆಧಾರದ ಮೇಲೆ ಗೆಲ್ಲುವಂತೆ ಮಾಡುವ ಕೆಟ್ಟ ಪದ್ಧತಿಯೊಂದು ಬೆಳೆದಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಪ್ರಭಾವವೂ ಇಲ್ಲದ, ಹಿನ್ನೆಲೆಯೂ ಇಲ್ಲದ ಸಾಮಾನ್ಯ ಮಹಿಳೆಯು ಚುನಾವಣೆಗೆ ಸ್ಪರ್ಧಿಸುವುದಾದರೂ ಹೇಗೆ?

ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ಮಹಿಳಾ ಹೋರಾಟಗಾರರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೂ ಗೆದ್ದ ಶಾಸಕಿಯರು ಮತ್ತು ಸಂಸತ್ ಸದಸ್ಯೆಯರು ಮಹಿಳಾ ಸಮುದಾಯದ ಆಶೋತ್ತರಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಈಗ ಚುನಾಯಿತರಾಗಿರುವ ಬಹುಪಾಲು ಮಹಿಳಾ ಪ್ರತಿನಿಧಿಗಳು ತಮ್ಮ ಪಕ್ಷಗಳಿಗೆ ನಿಷ್ಠೆ ತೋರುತ್ತಾ ಮಹಿಳಾ ಸಮುದಾಯದ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿಲ್ಲವೆನ್ನುವುದು ಅತ್ಯಂತ ನೋವಿನ ಸಂಗತಿ. ರಾಷ್ಟ್ರಪತಿ ಮುರ್ಮು ಅವರನ್ನು ಯಾವುದೋ ಕಾಂಗ್ರೆಸ್ ಶಾಸಕ `ರಾಷ್ಟ್ರಪತ್ನಿ’ ಎಂದದ್ದಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಶೋಭಾ, ನಿರ್ಮಲಾ, ಶೃತಿ ಎಲ್ಲರೂ ಪ್ರಜ್ವಲ್ ಪ್ರಕರಣ ನಡೆದಾಗ ಏಕೆ ದನಿಯೆತ್ತಲಿಲ್ಲ? ಇಷ್ಟು ದೊಡ್ಡ ಮಹಿಳಾ ದೌರ್ಜನ್ಯದ ಕಾಮಕಾಂಡ ನಡೆದಿರುವಾಗ ಮಹಿಳಾ ರಾಜಕಾರಣಿಗಳ ಮೌನಕ್ಕೇನು ಅರ್ಥ? ವಿರೋಧ ಪಕ್ಷಗಳ ತಪ್ಪುಗಳನ್ನು ಎತ್ತಿ ಅಬ್ಬರಿಸುವಾಗ ಇರುವ ಶಕ್ತಿ ಏಕೆ ಸಾರ್ವತ್ರಿಕವಾಗಿ ಇರುವುದಿಲ್ಲ. ಶಾಸಕಿಯರು ತಮ್ಮ ಮಹಿಳಾ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಪಕ್ಷಗಳ ಅಜೆಂಡಾಗಳಿಗೆ ತಲೆದೂಗುವುದೇ ಹೆಚ್ಚು.
ಕಳೆದ ದಶಕದಿಂದೀಚೆಗೆ ಮಹಿಳಾ ನಾಯಕತ್ವದ ಪ್ರತಿರೋಧದ ಹೊಸ ಶಕ್ತಿ ಮುಂಚೂಣಿಗೆ ಬಂದಿದೆ. ಅಧಿಕಾರ ಕೊಡುವ ಮೀಸಲಾತಿ ರಾಜಕಾರಣದಲ್ಲಿ ತಮಗೆ ನ್ಯಾಯ ದೊರಕಿಲ್ಲದಿದ್ದರೂ ಇಂದಿನ ಪ್ರತಿಭಟನಾ ರಾಜಕೀಯದಲ್ಲಿ ಮಹಿಳೆ ಸಿಂಹಪಾಲು ಆವರಿಸಿಕೊಂಡಿದ್ದಾಳೆ. ರಾಜಕೀಯ ಭವಿಷ್ಯ ಬರೆಯುವ ಮಹಾನ್ ಕಾಯಕದಲ್ಲಿ ಮುಂಚೂಣಿಯಲ್ಲಿದ್ದಾಳೆ. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಗಾರ್ಮೆಂಟ್ ಮಹಿಳಾ ಕಾರ್ಮಿಕರ ಮಿಂಚಿನ ಮುಷ್ಕರ ಮತ್ತು ಪ್ರತಿಭಟನೆ ಸ್ತ್ರೀ ಸಂಘಟಿತ ಶಕ್ತಿಯನ್ನು ಪರಿಚಯಿಸಿತು. ಗಾರ್ಮೆಂಟ್ ಮಹಿಳೆಯರು ಕಷ್ಟಪಟ್ಟು ಸಂಪಾದಿಸಿದ್ದ ತಮ್ಮ ಭವಿಷ್ಯನಿಧಿಯ ಹಣವನ್ನು ಹಿಂತೆಗೆಯಲು ಸರ್ಕಾರ ವಿಧಿಸಿದ ಕಠಿಣ ನಿಯಮಗಳ ಸುತ್ತೋಲೆ ಹೊರಬಿದ್ದದ್ದೇ ಮಿಂಚಿನಂತೆ ಮುಷ್ಕರ ಹೂಡಿ, ಉಗ್ರ ಪ್ರತಿಭಟನೆ ಮಾಡಿ ಬೀದಿಗಿಳಿದು ಜಯಗಳಿಸಿದ ಘಟನೆ ಎಲ್ಲರ ಗಮನ ಸೆಳೆಯಿತು. 1.25 ಲಕ್ಷ ಮಹಿಳೆಯರು ಹತ್ತು ದಿನಗಳ ಕಾಲ ನಡೆಸಿದ ಈ ಧೀರೋದಾತ್ತ ಹೋರಾಟದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ತೀವ್ರ ಗಾಯಗೊಂಡರು. ಕೇಂದ್ರ ಸರ್ಕಾರ ತನ್ನ ದಮನಕಾರಿ ಶಾಸನವನ್ನು ಹಿಂತೆಗೆದುಕೊಂಡಿತು. ಬೆಂಗಳೂರಿನ ಈ ಮಹಿಳೆಯರ ಹೋರಾಟದ ಜಯದ ಫಲವನ್ನು ಇಡೀ ದೇಶದ ಮಹಿಳೆಯರೆಲ್ಲರೂ ಅನುಭವಿಸುವಂತಾದದ್ದು ಒಂದು ಮಹತ್ವದ ಮೈಲಿಗಲ್ಲು. ದೇಶದ ರಾಜಧಾನಿಯಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಹೋರಾಟ, ಕೃಷಿ ಮಸೂದೆಯನ್ನು ಧಿಕ್ಕರಿಸಲು ನಡೆದ ರೈತರ ಹೋರಾಟ, ಪ್ರತಿಭಟನೆಗಳಲ್ಲಿ ಕರ್ನಾಟಕದ ಮಹಿಳೆಯರೂ ದನಿಗೂಡಿಸುತ್ತಿದ್ದಾರೆ. ಪ್ರತಿಭಟನಾನಿರತ ಯುವತಿಯರ ಸಂಖ್ಯೆ ಮತ್ತು ಆಕ್ರೋಶ ಎದ್ದುಕಾಣುತ್ತಿದೆ. ರಾಜ್ಯದಲ್ಲೂ ಸಂಘಟಿತ ಪ್ರತಿಭಟನೆಯ ದನಿಗಳು ಸದ್ದು ಮಾಡುತ್ತಿವೆ. ಆದರೆ ಈ ಶಕ್ತಿ ಅಧಿಕಾರ ಪಡೆಯುವ ದಿಕ್ಕಿನಲ್ಲಿ ಏನು ಮಾಡಬೇಕು? ರಾಜಕಾರಣದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಲೇ ಬೇಕು. ಏಕೆಂದರೆ ಅದು ಅವರ ಮಾನವಹಕ್ಕು. ಸಮಾನ ನಾಗರಿಕತ್ವವನ್ನು ಹೊಂದುವುದು ಸಂವಿಧಾನಾತ್ಮಕ ಹಕ್ಕು. ಇದು ಸಾಧ್ಯವಾಗಬೇಕಾದರೆ, ರಾಜಕಾರಣ ಜಗತ್ತಿನಲ್ಲಿ ಪುರುಷಾಧಿಪತ್ಯದ ಎಳೆಗಳು ಕಡಿಮೆಯಾಗಬೇಕು.
ದೇಶವು ಚುನಾವಣೆಯ ಹೊಸ್ತಿಲಲ್ಲಿರುವಾಗ 2024ರ ಲೋಕಸಭಾ ಚುನಾವಣೆಯ ಗಿಮಿಕ್ ಆಗಿ ನಮ್ಮ ಪ್ರಧಾನಿಯು ದೇಶದ ನಾರೀವೃಂದಕ್ಕೆ ನೀಡುತ್ತಿರುವ ಕೊಡುಗೆಯೆಂದು 2023ರ ಸಂವಿಧಾನದ 128ನೇ ತಿದ್ದುಪಡಿ ಕಾಯಿದೆ “ನಾರೀ ಶಕ್ತಿ ವಂದನ್ ಅಧಿನಿಯಮ್’’ ಎಂಬ ಮಸೂದೆಯನ್ನು ಮಂಡಿಸಿದ್ದು ಮಹಿಳೆಯರ ಬಗೆಗಿನ ಕಾಳಜಿಯಿಂದಲ್ಲ. ಅದರ ಪ್ರಕಾರ 2029 ರವರೆಗೆ ಮಹಿಳಾ ಮೀಸಲಾತಿಯನ್ನು ಕುರಿತು ಮಾತನಾಡದಂತೆ ಮಾಡುವುದೇ ಆಗಿದೆ.
ಮುಂದಿನ ಹೆಜ್ಜೆಗಳು
ಶಾಸನಾತ್ಮಕವಾಗಿಯಲ್ಲದಿದ್ದರೂ ಸ್ವಇಚ್ಛೆಯಿಂದಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒರಿಸ್ಸಾದ ಬಿಜು ಪಟ್ನಾಯಕ್ ಅವರ ನಡೆ ಸ್ವಾಗತಾರ್ಹವಾದ್ದು. 2014ರ ಲೋಕಸಭಾ ಚುನಾವಣೆಯಲ್ಲಿ ಪಟ್ನಾಯಕ್ ತಮ್ಮ ಪಕ್ಷದಿಂದ ಶೇಕಡಾ 33ರಷ್ಟು ಸ್ಥಾನವನ್ನು ಮಹಿಳೆಯರಿಗೆ ಮೀಸಲಿರಿಸಿದ್ದರೆ, ಬಂಗಾಲದ ಮಮತಾ ತಮ್ಮ ಪಕ್ಷದಿಂದ ಶೇಕಡಾ 40ರಷ್ಟು ಸ್ಥಾನವನ್ನು ಮಹಿಳೆಯರಿಗಾಗಿ ಮೀಸಲಿಟ್ಟರು. ಮಹಿಳಾ ಮಸೂದೆಯು ಜಾರಿಯಾಗುವ ಸಾಧ್ಯತೆಗಳೇ ಕ್ಷೀಣವಾಗಿರುವಾಗ ಈ ಎರಡು ಪಕ್ಷಗಳು ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹವಾದ್ದು ಮತ್ತು ಅನುಕರಣೀಯವಾದ್ದು. ಇತರ ರಾಜಕೀಯ ಪಕ್ಷಗಳೂ ಈ ಮೇಲ್ಪಂಕ್ತಿಯನ್ನು ಅನುಸರಿಸುವಂತೆ ಒತ್ತಡ ತರಬೇಕು.
ಇದನ್ನೂ ಓದಿರಿ: ‘ಕೆಪಿಎಸ್‌ಸಿ’ ಎಂದರೆ ಕರ್ನಾಟಕ ‘ಲೋಪ’ಸೇವಾ ಆಯೋಗವೇ?
ಭಾರತದ ಮಹಿಳಾ ಚಳವಳಿಗಳು ಹಾಗೂ ಸಂಘಟನೆಗಳಿಗೆ ಮಹಿಳಾ ಮತದಾರರನ್ನು ಸಂಘಟಿಸಿ ಅವರನ್ನು ಒಂದು ಶಕ್ತಿಯನ್ನಾಗಿ ಪರಿವರ್ತಿಸುವ ರಾಜಕೀಯ ತಂತ್ರಗಾರಿಕೆ ಗೊತ್ತಿಲ್ಲದಿರುವುದು ಇಂದು ಒಂದು ಸಮಸ್ಯೆಯಾಗಿದೆ. ಮತದಾರರ ನಿರ್ದಿಷ್ಟ ಬೇಡಿಕೆಯನ್ನು ಈಡೇರಿಸದೆ ಹೋದಲ್ಲಿ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬಂತಹ ತಂತ್ರವನ್ನು ಬಳಸದಿದ್ದಲ್ಲಿ ಅವರ ಶ್ರಮ ಮತಗಳಾಗಿ ಪರಿವರ್ತಿತವಾಗುವುದಿಲ್ಲ ಎಂಬುದಾಗಿ ಕರ್ನಾಟಕದ ಯೋಜನಾ ಮಂಡಳಿಯ ಅಧ್ಯಕ್ಷೆಯಾಗಿದ್ದ ದೇವಕಿ ಜೈನ್ ಅಭಿಪ್ರಾಯಪಡುತ್ತಾರೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕಿದೆ.
ಮಹಿಳೆಯರಲ್ಲಿ ಸ್ವತಂತ್ರ ವ್ಯಕ್ತಿತ್ವ ಮೂಡದ ಹೊರತು ಅವರು ನಿಜವಾದ ಪ್ರತಿನಿಧಿಗಳಾಗಲು ಸಾಧ್ಯವಿಲ್ಲ. ಕುಟುಂಬದೊಳಗೆ ಮತ್ತು ಹೊರಗೆ ತಮ್ಮ ಬದುಕನ್ನು ತಾವೇ ನಿಯಂತ್ರಿಸಿಕೊಳ್ಳಬಲ್ಲ ಶಕ್ತಿ ಮತ್ತು ತನ್ನ ಸ್ವಸಾಮರ್ಥ್ಯದ ಬಗ್ಗೆ ಅರಿವು ಮೂಡದ ಮಹಿಳೆಯರು ಅಧಿಕಾರ ಹಿಡಿಯುವುದರಿಂದ ಹೆಚ್ಚು ಪ್ರಯೋಜನವಾಗದು. ದೆಹಲಿಯ ಮುಖ್ಯ ಮಂತ್ರಿಯಾಗಿ ಅತಿಶಿ ಪ್ರದರ್ಶಿಸಿದ ಮಾನಸಿಕ ದಾಸ್ಯ ಆಶ್ಚರ್ಯ ಹುಟ್ಟಿಸುತ್ತದೆ. ರಾಮನ ಪಾದುಕೆಯನ್ನಿಟ್ಟುಕೊಂಡು ರಾಜ್ಯಭಾರ ಮಾಡಿದ ಭರತನಿಗೆ ತನ್ನನ್ನು ಹೋಲಿಸಿಕೊಂಡ ಅತಿಶಿ ಖಂಡಿತವಾಗಿಯೂ ಮಹಿಳೆಯರಿಗೆ ಮಾದರಿಯಾಗುವುದಿಲ್ಲ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಕಲಿತು ಬಂದ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಎಳೆಯ ವಯಸ್ಸಿನ ಅತ್ಯಂತ ಸಮರ್ಥ ಕ್ರಿಯಾಶೀಲೆಯಾಗಿ ಶಾಸಕಿಯಾಗಲು ಅರ್ಹತೆ ಪಡೆದಿದ್ದಾರೆ ಎಂದು ಹೇಳಬಹುದಾದರೂ ಮಹಿಳೆಯರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮನಸ್ಥಿತಿಯ ಕೊರತೆ ಗಾಬರಿ ಹುಟ್ಟಿಸುತ್ತದೆ.

‘ಕಾರು ಓಡಿಸೋಕೆ ಬರದೆ ಇರೋ ಹೆಂಗಸರೆಲ್ಲಾ ಕಾರು ತೆಗೆದುಕೊಂಡು ಬಂದ್ಬಿಡುತ್ತಾರೆ, ಟ್ರಾಫಿಕ್ ಜಾಮ್ ಮಾಡುತ್ತಾರೆ’ ಎನ್ನುವ ಆಟೋ ಚಾಲಕನಿಂದ ಹಿಡಿದು, `ಮಹಿಳೆಯರ ಜಗತ್ತು ಮನೆಯಲ್ಲಿ, ಗಂಡ ಮತ್ತು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿರಲಿ’ ಎಂದು ಸಾರ್ವಜನಿಕವಾಗಿ ಹೇಳುವ ರಾಜಕಾರಣಿಗಳು, ಅಧಿಕಾರಿಗಳು ನ್ಯಾಯಮೂರ್ತಿಗಳು ಮತ್ತು ಮಠಾಧೀಶರು – ಪುರುಷ ಶ್ರೇಷ್ಠತೆಯ ಭ್ರಮೆಯಲ್ಲಿ ಇರುವವರೆಗೂ ಮಹಿಳೆಯರಿಗೆ ಅಧಿಕಾರ ಸಿಕ್ಕುವುದಿಲ್ಲ. ಈ ಪಿತೃಶಾಹಿಯ ಕುತಂತ್ರವನ್ನು ಒಡೆಯಲು ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಕ್ರಿಮಿನಲ್ ಹಿನ್ನೆಲೆಯ ಪ್ರಜ್ವಲ್, ಮುನಿರತ್ನರಂತಹ ಇನ್ನು ಹಲವರನ್ನು ಚುನಾಯಿಸುವ ಮನಸ್ಥಿತಿಯು ಹುಟ್ಟು ಹಾಕುವ ಆತಂಕದ ಬಗ್ಗೆ ಜನರ ನಡುವೆ ಚರ್ಚಿಸಬೇಕು. ಅದು ಕೇವಲ ಜ್ಞಾನ ಪ್ರಸಾರವಷ್ಟೇ ಆಗಿರದೆ, ಕ್ರಿಯಾತ್ಮಕ ಮಧ್ಯಪ್ರವೇಶವೂ ಆಗಬೇಕು.
ಚುನಾವಣೆಯ ಸಮಯದಲ್ಲಿ ಮಾತ್ರವೇ ಸಡಗರದಿಂದ ಕ್ರಿಯಾಶೀಲವಾಗುವುದನ್ನು ಬಿಟ್ಟು ಸತತವಾಗಿ ಮತದಾರನೊಂದಿಗೆ ಸಂಪರ್ಕವಿಟ್ಟುಕೊಳ್ಳುವಂತಹ ಕಾರ್ಯಕ್ರಮ ರೂಪಿಸಿಕೊಳ್ಳಬೇಕು. ಆಡಳಿತದ ಎಲ್ಲ ಸ್ತರಗಳಲ್ಲಿ ವಿಶೇಷವಾದ ಸ್ತ್ರೀ ಕೇಂದ್ರಿತ ತಿಳುವಳಿಕೆಯ ಅಗತ್ಯತೆಯನ್ನು ಒಪ್ಪಬೇಕಾದ ಮನೋನಿರ್ಣಯಕ್ಕೆ ಕ್ರಿಯಾಸ್ವರೂಪ ಕೊಡುವ ಕೆಲಸವನ್ನು ಮಾಡಲು ಮಹಿಳಾ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಮಾಡಬೇಕು. ಎಲ್ಲ ಸಾರ್ವಜನಿಕ ಚಟುವಟಿಕೆಗಳಲ್ಲಿ, ಸರ್ಕಾರದ ಕಾರ್ಯಕ್ರಮಗಳಲ್ಲಿ ಒತ್ತಾಯಪೂರ್ವಕವಾಗಿಯಾದರೂ ಈ ಅಂಶವನ್ನು ಅನುಷ್ಠಾನಕ್ಕೆ ತರುವಂತೆ ಮಾಡಬೇಕು. ಯಾವುದೇ ಕಲೆ, ಸಾಹಿತ್ಯ, ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳಿರಲಿ, ವೇದಿಕೆಯ ಮೇಲೆಲ್ಲಾ ಬರೀ ಪುರುಷರೇ ಕಾಣುತ್ತಾರೆ. ಮಹಿಳೆಯರನ್ನು ಒಳಗೊಳ್ಳದ ಈ ಕಾರ್ಯಕ್ರಮಗಳು, ಇಲ್ಲಿ ಉತ್ಪಾದಿತವಾಗುವ ಜ್ಞಾನ, ಅನುಭವವೂ ಏಕಮುಖವಾಗಿರುತ್ತದೆ, ಪಕ್ಷಪಾತದಿಂದ ಕೂಡಿರುತ್ತದೆ. ಲಿಂಗ ಸೂಕ್ಷ್ಮತೆ ಮತ್ತು ಲಿಂಗ ಸಮಾನತೆಯ ತತ್ವವು ಇಡೀ ಸಮಾಜದ ಎಲ್ಲರ ಭಾವಕೋಶದ ಭಾಗವಾಗುವಂತಹ ಅರಿವಿನ ಕಾರ್ಯಕ್ರಮಗಳನ್ನು ನಡೆಸುವ ಪ್ರಯತ್ನ ಮಾಡಬೇಕು.
ಕೊನೆಯದಾಗಿ ಅತ್ಯಂತ ಕಷ್ಟದ ಮತ್ತು ಅನಿವಾರ್ಯವಾಗಿ ಆಗಲೇ ಬೇಕಾದ ಕಾರ್ಯವೆಂದರೆ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಸರಳವಾಗಿ, ಪಾರದರ್ಶಕವಾಗಿ ನಡೆಯುವಂತೆ ಮಾಡುವುದು. ಇದಕ್ಕಾಗಿ ದೊಡ್ಡ ಹೋರಾಟವನ್ನೇ ಮಾಡಬೇಕಾಗುತ್ತದೆ. ಇದು ಎಲ್ಲರ ಜವಾಬ್ದಾರಿ. ಪ್ರಜಾಪ್ರಭುತ್ವ ಉಳಿಸುವ ಮೊಟ್ಟ ಮೊದಲ ಕೆಲಸ. ಪ್ರಜಾಪ್ರಭುತ್ವ ಉಳಿದರೆ, ಸುಭದ್ರವಾಗಿದ್ದರೆ ಮಹಿಳಾ ಪ್ರಾತಿನಿಧ್ಯವು ಸಾಕಾರವಾಗುತ್ತದೆ.
(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಬರಹ)

ಡಾ.ಎನ್. ಗಾಯತ್ರಿ
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. ಮಹಿಳಾ ಪರ ಚಿಂತಕಿಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು, ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ಜೋಲಿಯೂ ಕ್ಯೂರಿ (ಅನುವಾದ), ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು (ವ್ಯಕ್ತಿ ಚಿತ್ರ), ನಾನೇಕ ನಾಸ್ತಿಕ (ಅನುವಾದ), ತ್ರಿವೇಣಿಯವರ ಬಗ್ಗೆ ಬರೆದ ಲೇಖನಗಳ ಸಂಗ್ರಹ (ಸಂಪಾದಿತ).




