ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

Date:

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ ಕಡಿಮೆ ಸುಂಕ (18%) ಹೊಂದಿದ್ದ ಭಾರತವು ಬಾಂಗ್ಲಾದೇಶದ ಮಾರುಕಟ್ಟೆಯೊಂದಿಗೆ ಸ್ಪರ್ಧಿಸುವ ಮೂಲಕ ಅಮೆರಿಕದೊಂದಿಗೆ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಕನಸು ಕಂಡಿತ್ತು. ಆದರೆ, ಅಮೆರಿಕ-ಬಾಂಗ್ಲಾ ನಡುವಿನ ಶೂನ್ಯ ಸುಂಕದ ನೀತಿಯು ಭಾರತಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸದ್ಯದ ನಮ್ಮ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದ ಅಡಕೆಯಂತಾಗಿದೆ; ಭಾರತವು ಶೂನ್ಯ ಸುಂಕದ ಸೌಲಭ್ಯ ಪಡೆಯಬೇಕಿದ್ದರೆ, ಹೆಚ್ಚಿನ ಹತ್ತಿಯನ್ನು ಅಮೆರಿಕದಿಂದ ಕೊಳ್ಳುವ ಷರತ್ತಿಗೆ ಒಪ್ಪಬೇಕಾಗುತ್ತದೆ.


ಬರುವ ಎಪ್ರಿಲ್‍ನಲ್ಲಿ ಸಹಿ ಆಗಬಹುದಾದ ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಮತ್ತು ಇದೇ ಫೆಬ್ರುವರಿ 6ರಂದು ಸಹಿ ಆಗಿರುವ ಅಮೆರಿಕ-ಬಂಗ್ಲಾದೇಶದ ವ್ಯಾಪಾರ ಒಪ್ಪಂದಗಳಲ್ಲಿ ಅಮೆರಿಕ ಹೇರುತ್ತಿರುವ ಶೋಷಿತ ಸುಂಕ ಮತ್ತು ಷರತ್ತುಗಳಿಂದಾಗಿ ಭಾರತದ ಹತ್ತಿ ಬೆಳೆಗಾರರು ಹಾಗೂ ಜವಳಿ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಲಿವೆ.

ನಂತರ, ಫೆಬ್ರುವರಿ 20ರಂದು ಅಮೆರಿಕದ ಸುಪ್ರೀಂ ಕೋರ್ಟ್ 1977ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯ (IEEPA) ಅಡಿಯಲ್ಲಿ ಹೆಚ್ಚಿನ ಆಮದು ಸುಂಕ ಹೇರುವ ಅಧ್ಯಕ್ಷರ ಅಧಿಕಾರವನ್ನು ರದ್ದುಗೊಳಿಸಿದೆಯಾದರೂ, ಭಾರತಕ್ಕೆ ಸಂಕಷ್ಟ ತಪ್ಪಿತು ಎನ್ನಲಾಗದು. ಈಗ, ಅಮೆರಿಕವು ಎಲ್ಲಾ ದೇಶಗಳಿಗೂ ಸಮನಾದ 10% ಸುಂಕ ಘೋಷಿಸಿದ್ದರೂ, ಭಾರತದ ವಿಷಯದಲ್ಲಿ ಅದು ಹಿಂದಿನಂತೆ 18% ಇರಲಿದ್ದು, ಯಾವುದೇ ಬದಲಾವಣೆ ಇಲ್ಲ ಎಂದು ಟ್ರಂಪ್ ಹೇಳಿರುತ್ತಾರೆ. ಇದಲ್ಲದೆ, ಕೋರ್ಟ್‍ನ ಈ ತೀರ್ಮಾನದ ಹೊರತಾಗಿಯೂ ಟ್ರಂಪ್‍ರವರು ಬೇರೆ ಕಾನೂನು ಮಾರ್ಗಗಳ ಮೂಲಕ (ಉದಾ: ಸೆಕ್ಷನ್ 232 ಅಥವಾ ಸೆಕ್ಷನ್ 301) ಹೆಚ್ಚಿನ ಸುಂಕ ಮತ್ತು ಕಠಿಣ ಷರತ್ತುಗಳನ್ನು ಹೇರುವ ಸಾಧ್ಯತೆ ದಟ್ಟವಾಗಿದೆ ಎಂಬುದು ತಜ್ಞರ ಅಭಿಮತವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಹತ್ತಿ ಬೆಳೆಗಾರರು ಮತ್ತು ಜವಳಿ ಉಧ್ಯಮವನ್ನು ರಕ್ಷಿಸುವ ಕಾರ್ಯತಂತ್ರಗಳ ಅನಿವಾರ್ಯತೆ ಇಂದಿಗೂ ಇದೆಯಾದ ಕಾರಣ ಈ ಲೇಖನ ಔಚಿತ್ಯತೆ ಕಂಡುಬಂದಿತು.

ಕಳೆದ ವರ್ಷ ಭಾರತದ ಗಾರ್ಮೆಂಟ್ಸ್ ರಫ್ತಿನ ಮೇಲೆ ಅಮೆರಿಕ ವಿಧಿಸಿದ್ದ 50% ಸುಂಕದಿಂದಾಗಿ ಇಲ್ಲಿನ ಗಾರ್ಮೆಂಟ್ ಮತ್ತು ಜವಳಿ ಉದ್ಯಮಗಳು ತತ್ತರಿಸುತ್ತವೆ. ಈ ಭಾರದಿಂದ ಉದ್ಯಮಗಳನ್ನು ರಕ್ಷಿಸಲು ಸರ್ಕಾರವು ಕಳೆದ ವರ್ಷ ಆಗಸ್ಟ್ ನಿಂದ ಡಿಸೆಂಬರ್ ಅಂತ್ಯದವರೆಗೆ ಹತ್ತಿಯ ಮೇಲಿದ್ದ 11% ಆಮದು ಸುಂಕವನ್ನು ರದ್ದುಗೊಳಿಸಿದಾಗ ಹೊರದೇಶಗಳ ಹತ್ತಿಯು ಅಗ್ಗವಾಗುತ್ತದೆ. ಇದರಿಂದ ಅಕ್ಟೋಬರ್-ಸೆಪ್ಟೆಂಬರ್ 2025ರ ಅವಧಿಯಲ್ಲಿ ಅದರ ಹಿಂದಿನ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚು ಹತ್ತಿಯು ಭಾರತಕ್ಕೆ ಆಮದಾಗುತ್ತದೆ. ಇದರ ಪರಿಣಾಮವಾಗಿ, ಸ್ಥಳೀಯ ಹತ್ತಿಗೆ ಬೇಡಿಕೆ ಇಲ್ಲದಂತಾಗಿ, ಪ್ರತಿ ಕ್ವಿಂಟಾಲಿಗೆ ರೂ.7500-8000 ಇದ್ದ ಬೆಲೆಯು ಸುಮಾರು ರೂ.4,500 ರಿಂದ 5,000ಕ್ಕೆ ಕುಸಿಯುತ್ತದೆ. ಈ ಸಂದರ್ಭದಲ್ಲಿ ಸರ್ಕಾರ ಬೆಂಬಲ ಬೆಲೆ ನೀಡಿತಾದರೂ, ಅದು ಒಟ್ಟು ಉತ್ಪಾದನೆಯ ಕೇವಲ 38% ರಷ್ಟು ಹತ್ತಿಯನ್ನು ಮಾತ್ರ ಖರೀದಿಸಲು ಸಾಧ್ಯವಾಗುತ್ತದೆ. ಅನೇಕ ರೈತರು ಬೆಂಬಲ ಬೆಲೆಗಾಗಿ ಅಲೆದು ಸೋತು, ಕೊನೆಗೆ ಲೇವಾದೇವಿದಾರರ ಮೊರೆ ಹೋದ ಘಟನೆಗಳು ವರದಿಯಾಗಿವೆ. ರದ್ದಾಗಿದ್ದ 11% ಆಮದು ಸುಂಕವು ಇದೇ ಜನವರಿಯಲ್ಲಿ ಮತ್ತೆ ಜಾರಿಗೆ ಬಂದು, ಹತ್ತಿ ಬೆಳೆಗಾರರು ನಿರಾಳರಾದರೂ ಅನ್ನುವಷ್ಟರಲ್ಲಿ ಮತ್ತೊಂದು ಆಪತ್ತು ಎದುರಾಗಿದೆ!
ಅಮೆರಿಕದಿಂದ ಬಾಂಗ್ಲಾವು ಹತ್ತಿ ಖರೀದಿಸುವುದು, ಮತ್ತು ಅದನ್ನೇ ಬಳಸಿ ತಯಾರಿಸಿದ ಉತ್ಪನ್ನಗಳನ್ನು (ಸಿದ್ಧ ಉಡುಪು, ಹತ್ತಿ ನೂಲು ಮತ್ತು ಬಟ್ಟೆ ಇತ್ಯಾದಿ) ಅಮೆರಿಕವು ಶೂನ್ಯ ಸುಂಕದಲ್ಲಿ ಕೊಳ್ಳಲು ಮಾಡಿಕೊಂಡಿರುವ ಒಪ್ಪಂದವೇ ಈ ಆಪತ್ತಿನ ಮೂಲವಾಗಿದೆ. ಭಾರತದಿಂದ ಅತಿ ಹೆಚ್ಚು ಹತ್ತಿ ಖರೀದಿಸುತ್ತಿದ್ದ ಬಾಂಗ್ಲಾ ಅದನ್ನೀಗ ಕಡಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ನಿಲ್ಲಿಸುವ ಸಾಧ್ಯತೆಗಳಿವೆ. ಇದು ಎರಡಲಗಿನ ಕತ್ತಿಯಾಗಿದ್ದು, ಕೇವಲ ಹತ್ತಿ ಬೆಳೆಗಾರರ ಮೇಲಷ್ಟೇ ಅಲ್ಲದೆ, ಇಲ್ಲಿನ ಗಾರ್ಮೆಂಟ್ ಮತ್ತು ಜವಳಿ ವ್ಯಾಪಾರಕ್ಕೂ ದೊಡ್ಡ ಹೊಡೆತ ನೀಡಲಿದೆ.

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ ಕಡಿಮೆ ಸುಂಕ (18%) ಹೊಂದಿದ್ದ ಭಾರತವು ಬಾಂಗ್ಲಾದೇಶದ ಮಾರುಕಟ್ಟೆಯೊಂದಿಗೆ ಸ್ಪರ್ಧಿಸುವ ಮೂಲಕ ಅಮೆರಿಕದೊಂದಿಗೆ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಕನಸು ಕಂಡಿತ್ತು. ಆದರೆ, ಅಮೆರಿಕ-ಬಾಂಗ್ಲಾ ನಡುವಿನ ಶೂನ್ಯ ಸುಂಕದ ನೀತಿಯು ಭಾರತಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸದ್ಯದ ನಮ್ಮ ಪರಿಸ್ಥಿತಿ ಅಡಕತ್ತಿನಲ್ಲಿ ಸಿಲುಕಿದ ಅಡಕೆಯಂತಾಗಿದೆ; ಭಾರತವು ಶೂನ್ಯ ಸುಂಕದ ಸೌಲಭ್ಯ ಪಡೆಯಬೇಕಿದ್ದರೆ, ಹೆಚ್ಚಿನ ಹತ್ತಿಯನ್ನು ಅಮೆರಿಕದಿಂದ ಕೊಳ್ಳುವ ಷರತ್ತಿಗೆ ಒಪ್ಪಬೇಕಾಗುತ್ತದೆ. ಆಗ ಬೇರೆ ದೇಶಗಳಿಂದ ಖರೀದಿಸುವ ಎಲ್ಲಾ ELS (ಅತಿ ಉದ್ದದ ಎಳೆಯುಳ್ಳ ಹತ್ತಿ) ಹತ್ತಿಯನ್ನು ಅಮೆರಿಕದಿಂದ ಖರೀದಿಸಿದರೆ, ಅದು ‘ಏಕ-ಮೂಲ’ದ ಅಪಾಯಗಳನ್ನು ತಂದೊಡ್ಡುತ್ತದೆ. ಅಥವಾ, ಭಾರತದಲ್ಲಿ ಬೆಳೆಯುವಂತಹ ಹತ್ತಿಯನ್ನೂ ಸಹ ಅಮೆರಿಕದಿಂದ ಖರೀದಿಸಲು ಒಪ್ಪಿದರೆ, ಇಲ್ಲಿನ ಹತ್ತಿ ಬೆಳೆಗಾರರು ಮಾರುಕಟ್ಟೆ ಕಳೆದುಕೊಳ್ಳುತ್ತಾರೆ. ಅಥವಾ, ಹತ್ತಿ ಖರೀದಿಯನ್ನು ಹೆಚ್ಚಿಸಲು ಒಪ್ಪದಿದ್ದಲ್ಲಿ 18% ಸುಂಕ ತೆರುವ ಕಾರಣ ಇಲ್ಲಿನ ಗಾರ್ಮೆಂಟ್ ಉದ್ಯಮಗಳು ಶೂನ್ಯ ಸುಂಕವಿರುವ ಬಾಂಗ್ಲಾದೇಶದ ಜೊತೆಗೆ ಸ್ಪರ್ಧಿಸಲಾಗದೆ ಸಾಯುತ್ತವೆ!! ಒಂದು ವೇಳೆ ಅಮೆರಿಕ ನ್ಯಾಯಾಲಯದ ಅದೇಶದಂತೆ, ಭಾರತದ ಸುಂಕವು 10%ಗೆ ಇಳಿಕೆಯಾದರೂ ಸಹ ಶೂನ್ಯ ಸುಂಕ ಹೊಂದಿರುವ ಬಾಂಗ್ಲಾದ ಜೊತೆ ಸೆಣಸಲು ಸಾಧ್ಯವಿರುವುದಿಲ್ಲ.

ಭಾರತವು ಈ ಬಿಕ್ಕಟ್ಟಿನಿಂದ ಹೊರಬರದಿದ್ದರೆ, ಸುಮಾರು 130 ಲಕ್ಷ ಹೆಕ್ಟರ್ ಭೂಮಿಯಲ್ಲಿ ಹತ್ತಿ ಬೆಳೆಯುತ್ತಿರುವ ಅಂದಾಜು 6 ಕೋಟಿ ರೈತರು ತಮ್ಮ ಬೆಳೆಗೆ ಬೆಲೆ ಸಿಗದೆ ನಷ್ಟ ಅನುಭವಿಸಲಿದ್ದಾರೆ. ಕೃಷಿಯ ನಂತರ ಅತಿ ದೊಡ್ಡ ಉದ್ಯೋಗದಾತ ಗಾರ್ಮೆಂಟ್ಸ್‌ನ ಸುಮಾರು 4.5 ಕೋಟಿ ಹಾಗೂ ಸಂಬಂಧಿತ ಉದ್ಯೋಗಗಳಲ್ಲಿ (ಜಿನ್ನಿಂಗ್, ಸ್ಪಿನ್ನಿಂಗ್, ನೇಯ್ಗೆ, ಸಂಸ್ಕರಣೆ ಇತ್ಯಾದಿ) ತೊಡಗಿರುವ ಸುಮಾರು 10 ಕೋಟಿ ಜನರ ಜೀವನೋಪಾಯವು ಅಪಾಯಕ್ಕೆ ಸಿಲುಕಬಹುದಾಗಿದೆ.

ಭಾರತದ 11 ರಾಜ್ಯಗಳು ಹತ್ತಿ ಉತ್ಪಾದೆನೆಯಲ್ಲಿ ತೊಡಗಿಕೊಂಡಿವೆ. 2024-25ರಲ್ಲಿ ಸುಮಾರು 300 ಲಕ್ಷ ಬೇಲ್‍ಗಳಷ್ಟು ಹತ್ತಿ (170ಕೆಜಿ/ಬೇಲ್) ಉತ್ಪಾದನೆಯಾಗಿದ್ದು, ಇದರ ಬಹುಪಾಲು ಸ್ಥಳೀಯ ಮಾರುಕಟ್ಟೆಗಳಿಗೆ ಪೂರೈಕೆಯಾಗುತ್ತಿದೆ. ಕಾಟನ್ ಅಸೋಸಿಯೇಷನ್ ಆಫ್ ಇಂಡಿಯಾ (CAI ) ಮಾಹಿತಿ ಪ್ರಕಾರ, 2024-25ರಲ್ಲಿ 9.80 ಲಕ್ಷ ಬೇಲ್ಗಳಷ್ಟು ಹತ್ತಿಯನ್ನು ಇದರ ಹಿಂದಿನ ವರ್ಷಕ್ಕಿಂತ ಹೆಚ್ಚುವರಿ ಆಮದು ಮಾಡಿಕೊಳ್ಳಲಾಗಿದೆ. ಭಾರತದಿಂದ ಅತಿ ಹೆಚ್ಚು ಹತ್ತಿ ಖರೀದಿಸುತ್ತಿದ್ದ ಬಾಂಗ್ಲಾದೇಶವು ಕಳೆದ ವರ್ಷ ಸುಮಾರು 4 ಲಕ್ಷ ಬೇಲ್ಗಳಷ್ಟು ಖರೀದಿಯನ್ನು ಕಡಿತಗೊಳಿಸಿದೆ. ಈಗ, ಅಮೆರಿಕದ ಒಪ್ಪಂದದ ಕಾರಣ, ಬಾಂಗ್ಲಾದೇಶವು ಭಾರತದಿಂದ ಹತ್ತಿ ಖರೀದಿಸುವುದನ್ನು ಮತ್ತಷ್ಟು ಕಡಿತಗೊಳಿಸಬಹುದು ಅಥವಾ ಸಂಪೂರ್ಣ ನಿಲ್ಲಿಸಬಹುದೆಂದು ಅಂದಾಜಿಸಲಾಗಿದೆ.

ವಾಸ್ತವದಲ್ಲಿ, ಸ್ಥಳೀಯ ಮಾರುಕಟ್ಟೆಯ ಎಲ್ಲಾ ವಿಧದ ಬೇಡಿಕೆಗಳನ್ನು ಪೂರೈಸುವಷ್ಟು ಹತ್ತಿಯನ್ನು ನಮ್ಮ ರೈತರು ಬೆಳೆಯುತ್ತಿಲ್ಲ. ವಿಶೇಷವಾಗಿ ಗಾರ್ಮೆಂಟ್ ಉದ್ಯಮಕ್ಕೆ ಬೇಕಾದ ಉತ್ತಮ ಗುಣಮಟ್ಟದ ಮತ್ತು ಅತಿ ಉದ್ದದ ಎಳೆಯುಳ್ಳ ಹತ್ತಿಯನ್ನು (ELS – 32-35 MM) ಇಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿಲ್ಲ. ಈ ಕಾರಣಕ್ಕೆ, ಭಾರತವು ಅದನ್ನು ಅಮೆರಿಕ, ಬ್ರೇಜಿಲ್, ಆಸ್ಟ್ರೇಲಿಯಾ, ಈಜೀಪ್ಟ್ ಮತ್ತು ಕೆಲವು ಆಫ್ರಿಕನ್ ದೇಶಗಳಿಂದ ಇಗಾಗಲೇ ಖರೀದಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಅಮೆರಿಕಾದಿಂದ ಹೆಚ್ಚು ಪ್ರಮಾಣದ ಹತ್ತಿ ಖರೀದಿಸಿರುವ ಕುರಿತು ಕೇಂದ್ರ ಜವಳಿ ಸಚಿವರು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಎಲ್ಲಾ ದೇಶಗಳ ಈ ಆಮದಿನ ಮೇಲೆ 11% ಸುಂಕವಿದ್ದ ಕಾರಣ ಸ್ಥಳೀಯ ಮಾರುಕಟ್ಟೆಯ ಬೇಡಿಕೆಯಲ್ಲಿ ಕೊರತೆ ಇರಲಿಲ್ಲ (ಸುಂಕ ತೆರವಾಗಿದ್ದ ಸಮಯವನ್ನು ಬಿಟ್ಟು).

ಆದರೆ, ಇದೇ ಫೆಬ್ರುವರಿಯಲ್ಲಿ ನಡೆದ ಬಂಗ್ಲಾ – ಅಮೆರಿಕ ಒಪ್ಪಂದವು ಪರಿಸ್ಥಿತಿಯನ್ನು ಬದಲಿಸಿದೆ. ಅಮೆರಿಕವು ಬಾಂಗ್ಲಾದೇಶದ ಮೇಲಿನ 20% ಪ್ರತಿಸುಂಕವನ್ನು 19%ಕ್ಕೆ ಇಳಿಸಿದ್ದಲ್ಲದೆ, ಅಮೆರಿಕದಿಂದ ಕೊಂಡ ಹತ್ತಿಯನ್ನು ಬಳಸಿ ತಯಾರಿಸಿದ ಸಿದ್ಧ ಉಡುಪು, ನೂಲು ಮತ್ತು ಬಟ್ಟೆಗಳನ್ನು ಯಾವುದೇ ಸುಂಕವಿಲ್ಲದೆ ಕೊಳ್ಳುವ ಆಮಿಷವೊಡ್ಡಿ ತನ್ನಲ್ಲಿ ಹೇರಳವಾಗಿ ಬೆಳೆಯುತ್ತಿರುವ ಹತ್ತಿಯನ್ನು ಖರೀದಿಸುವಂತೆ ಬಂಗ್ಲಾದೇಶವನ್ನು ಮಣಿಸಿದೆ.

ಇನ್ನೂ ಸಹಿಯಾಗದ ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಯಾವೆಲ್ಲಾ ಕೃಷಿ ಉತ್ಪನ್ನಗಳನ್ನು ಒಳಗೊಂಡಿದೆ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ. ಆದರೆ, ವಿದೇಶಿ ಮುಕ್ತ ಮಾರುಕಟ್ಟೆಗೆ ಕೃಷಿ ವಲಯವನ್ನು ತೆರೆಯಬಾರದೆಂಬ ಭಾರತದ ದೀರ್ಘಕಾಲದ ನೀತಿಯು ಈ ಒಪ್ಪಂದದಲ್ಲಿ ಬದಲಾಗಿರುವ ಸುಳಿವುಗಳಿವೆ. ಕೃಷಿ ಮತ್ತು ಡೈರಿ ವಲಯವು ರಕ್ಷಿತವಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ಸುಂಕದ ಒತ್ತಡದ ಈ ವ್ಯಾಪಾರ ಒಪ್ಪಂದದಲ್ಲಿ ಹತ್ತಿಯು ಹೊರತಾಗಿಲ್ಲ. ಅಮೆರಿಕದ ವ್ಯಾಪಾರ ಒಪ್ಪಂದದಲ್ಲಿ ಹತ್ತಿಯನ್ನು ಸೇರಿಸಲಾಗಿಲ್ಲ ಎಂಬ ಬಗ್ಗೆ ಸರ್ಕಾರ ಈವರೆಗೆ ಖಚಿತ ಮಾಹಿತಿ ನೀಡಿಲ್ಲ. ಬದಲಿಗೆ, ಅಮೆರಿಕದ ಹತ್ತಿಯನ್ನು ಕೊಂಡು ಅದರಿಂದ ಸಿದ್ಧ ಉಡುಪುಗಳನ್ನು ತಯಾರಿಸಿದರೆ, ಗಾರ್ಮೆಂಟ್ ಮೇಲಿನ ಸುಂಕ ನಮಗೂ ಇಲ್ಲವಾಗುತ್ತದೆಂಬ ಮಾತುಗಳು ಸರ್ಕಾರಿ ವಲಯದಿಂದ ಕೇಳಿಬರುತ್ತಿವೆ. ಈಗಾಗಲೇ ಭಾರತವು ತನ್ನ ಒಟ್ಟು ಆಮದಿನ ಸುಮಾರು 20% ELS ಹತ್ತಿಯನ್ನು  ಅಮೆರಿಕದಿಂದಲೇ ಕೊಳ್ಳುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದ ಹತ್ತಿಯನ್ನು ಅಲ್ಲಿಂದ ಕೊಳ್ಳುವುದಾದರೆ, ಭಾರತವು ಇತರೆ ರಾಷ್ಟ್ರಗಳಿಂದ ಮಾಡಿಕೊಳ್ಳುತ್ತಿರುವ ಆಮದನ್ನು ನಿಲ್ಲಿಸಬೇಕಾಗುವುದು. ತನಗೆ ಅಗತ್ಯವಿರುವ ಒಟ್ಟು ELS  ಹತ್ತಿಯನ್ನು (ಸುಮಾರು 17-18 ಲಕ್ಷ ಬೇಲ್ಸ್) ಕೇವಲ ಅಮೆರಿಕದಿಂದಲೇ ಖರೀದಿಸಿದರೆ, ಅದು ‘ಏಕ-ಮೂಲ’ ವ್ಯಾಪಾರದಿಂದ ಉಂಟಾಗುವ ಅನೇಕ ಸಮಸ್ಯೆಗಳನ್ನು ತೆರೆದಿಡುತ್ತದೆ. ಒಂದು ವೇಳೆ, ಭಾರತವು ELS ಮಾತ್ರವಲ್ಲದೆ, ಇತರೆ ಸಾಮಾನ್ಯ ತಳಿಯ ಹತ್ತಿಯನ್ನೂ ಸಹ ಖರೀದಿಸಲು ನಿರ್ಣಯಿಸಿದರೆ, ಅದು ನೇರವಾಗಿ ಭಾರತದ ಹತ್ತಿ ಬೆಳೆಗಾರರ ಹಿತಾಸಕ್ತಿಯನ್ನು ಬಲಿಕೊಟ್ಟಂತಾಗುತ್ತದೆ. ಜೊತೆಗೆ, ಇಲ್ಲಿಯವರೆಗೆ ಭಾರತದಿಂದ ಹೆಚ್ಚು ಪ್ರಮಾಣದಲ್ಲಿ ELS ಅಲ್ಲದ ಕಚ್ಚಾ ಹತ್ತಿಯನ್ನು ಖರೀದಿಸುತ್ತಿದ್ದ ಬಾಂಗ್ಲಾದೇಶವು ಮುಂದಿನ ದಿನಗಳಲ್ಲಿ ಸಂಪೂರ್ಣ ನಿಲ್ಲಿಸುವ ಸಂಭವವಿದೆ. ಇದರಿಂದ ದೇಶದ ಒಳಗಿನ ಹತ್ತಿ ದಾಸ್ತಾನು ಹೆಚ್ಚಾಗಿ, ಸ್ಥಳೀಯ ಬೆಲೆಗಳು ಮತ್ತಷ್ಟು ಕುಸಿಯುತ್ತವೆ. ಈ ಎಲ್ಲಾ ಬೆಳವಣಿಗೆಗಳು ಒಟ್ಟಾಗಿ, ಇಗಾಗಲೇ ಸಂಕಷ್ಟದಲ್ಲಿರುವ ಹತ್ತಿ ಬೆಳೆಗಾರರ ಜೀವನವನ್ನು ಮತ್ತಷ್ಟು ಆಳದ ಸುಳಿಗೆ ತಳ್ಳಲಿವೆ.

ಒಂದು ವೇಳೆ ಸರ್ಕಾರವು ಹತ್ತಿ ಬೆಳೆಗಾರರ ಕೈಹಿಡಿಯ ಹೊರಟರೆ, ಜವಳಿ ಮತ್ತು ಗಾರ್ಮೆಂಟ್ ಉದ್ಯಮಗಳು ನೆಲಕಚ್ಚುವ ಅಪಾಯವಿದೆ. ಸದ್ಯಕ್ಕೆ ಭಾರತವು ಸಿದ್ಧಉಡುಪು ಮತ್ತು ಆಭರಣಗಳ ರಫ್ತಿನಲ್ಲಿ ಅಮೆರಿಕ ಮಾರುಕಟ್ಟೆಯ 5.8% ಪಾಲು ಹೊಂದಿದೆ. ಆದರೆ, ಚೀನಾ, ಬಾಂಗ್ಲಾದೇಶ, ಮತ್ತು ವಿಯೆಟ್ನಾಂ ದೇಶಗಳು ಭಾರತಕ್ಕಿಂತಲೂ ಹೆಚ್ಚಿನ ಪಾಲನ್ನು ಹೊಂದಿವೆ.

ಅಮೆರಿಕದ ಮಾರುಕಟ್ಟೆಯಲ್ಲಿ ಈಗಾಗಲೇ 20%ರಷ್ಟು ಪಾಲು ಹೊಂದಿರುವ ಬಾಂಗ್ಲಾದೇಶವು ಮುಂದಿನ ದಿನಗಳಲ್ಲಿ ಸಿದ್ಧ ಉಡುಪು, ಹತ್ತಿ ನೂಲು ಮತ್ತು ಜವಳಿ ಉತ್ಪನ್ನಗಳನ್ನು ಸುಂಕರಹಿತವಾಗಿ ರಫ್ತು ಮಾಡಲಿರುವ ಕಾರಣ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಸುಂಕರಹಿತವಾದ ಬಾಂಗ್ಲಾದ ಈ ಸರಕುಗಳು ಅಮೆರಿಕದಲ್ಲಿ ಅಗ್ಗವಾಗಿ ಬಿಕರಿಯಾಗುವ ಕಾರಣ, ಬಾಂಗ್ಲಾವು ಅಮೆರಿಕದಿಂದ ಹೆಚ್ಚು ಹೆಚ್ಚು ಹತ್ತಿ ಖರೀದಿಸಿ, ಮತ್ತಷ್ಟು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ತನ್ನ ಮಾರುಕಟ್ಟೆಯ ಪಾಲನ್ನು ಇನ್ನಷ್ಟು ವೃದ್ಧಿಸಿಕೊಳ್ಳಲಿದೆ. ಹೀಗೆ ವಿಸ್ತಾರಗೊಳ್ಳುವ ಬಾಂಗ್ಲಾ ಮಾರುಕಟ್ಟೆಯೊಂದಿಗೆ ಭಾರತವು ಸ್ಪರ್ಧಿಸಲಾಗದ ಕಾರಣ, ಇಲ್ಲಿನ ಹತ್ತಿ ನೂಲು, ಬಟ್ಟೆ ಮತ್ತು ಸಿದ್ಧ ಉಡುಪಿನ ರಫ್ತುದಾರರಿಗೆ ಭಾರಿ ಹೊಡೆತ ಬೀಳಲಿದೆ.

ಪ್ರಸ್ತುತ, ಬಾಂಗ್ಲಾದೇಶಕ್ಕೆ ಹೆಚ್ಚಿನ ಪ್ರಮಾಣದ ಹತ್ತಿ ನೂಲನ್ನು ರಫ್ತು ಮಾಡುತ್ತಿರುವ ಭಾರತವು ಆ ಮಾರುಕಟ್ಟೆಯನ್ನೂ ಸಹ ಕಳೆದುಕೊಳ್ಳುವ ಸಾಧ್ಯತೆಯಿದೆ. ಅಮೆರಿಕದ ಹತ್ತಿಯನ್ನು ಬಳಸಿ ನೂಲನ್ನು ಸ್ಥಳೀಯವಾಗಿಯೇ ತಯಾರಿಸಿ, ಸುಂಕ ರಹಿತವಾಗಿ ರಫ್ತು ಮಡುವ ಅವಕಾಶ ಬಾಂಗ್ಲಾದೇಶಕ್ಕೆ ಇರುವುದರಿಂದ, ಅದಕ್ಕೆ ಭಾರತದ ಹತ್ತಿ ನೂಲನ್ನು ಖರೀದಿಸುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಮುಖ್ಯವಾಗಿ ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರದ ಹತ್ತಿ ನೂಲಿನ ಉದ್ಯಮಗಳು ಮಾರುಕಟ್ಟೆ ಕಳೆದುಕೊಳ್ಳಲಿವೆ.

ಹೀಗೆ, ಬಾಂಗ್ಲಾದೇಶವು ಅಮೆರಿಕದಿಂದ ಹೆಚ್ಚಿನ ಹತ್ತಿ ಕೊಳ್ಳುವುದು, ಅದರಿಂದ ಹೆಚ್ಚು ಉತ್ಪಾದನೆ ಮಾಡುವುದು, ಹಾಗೂ ಶೂನ್ಯ ಸುಂಕದ ರಿಯಾಯಿತಿಯಿಂದ ತನ್ನ ಮಾರುಕಟ್ಟೆÀಯನ್ನು ವಿಸ್ತರಿಸಿದಂತೆಲ್ಲಾ, ಭಾರತದ ಗಾರ್ಮೆಂಟ್ ಮತ್ತು ಜವಳಿ ಉದ್ಯಮವನ್ನು ಅವಲಂಬಿಸಿರುವ ಸುಮಾರು 14.5 ಕೋಟಿ ಕುಟುಂಬಗಳ ಜೀವನೋಪಾಯದ ಅಡಿಪಾಯವೇ ಕುಸಿಯುವ ಆಪಾಯವಿದೆ. ಅಮೆರಿಕ ನಡೆಸುತ್ತಿರುವ ಈ ‘ವ್ಯಾಪಾರ ಭಯೋತ್ಪಾದನೆ’ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಇಡೀ ದೇಶವೇ ಕಳಕಳಿಯನ್ನು ವ್ಯಕ್ತಪಡಿಸುತ್ತಿದ್ದರೂ, ಸರ್ಕಾರವು ಪೂರಕವಾಗಿ ಸ್ಪಂದಿಸುತ್ತಿರುವಂತೆ ಕಾಣುತ್ತಿಲ್ಲ. ಬದಲಿಗೆ, ಗಾರ್ಮೆಂಟ್ ಉದ್ಯಮಕ್ಕೆ ಮೊದಲಿಗಿದ್ದ 11-12%ರಷ್ಟು ಸುಂಕವು 50%ಕ್ಕೆ ಏರಿ, ಅದೀಗ 18%ಕ್ಕೆ ಇಳಿದಿದ್ದನ್ನೇ ದೊಡ್ಡ ಸಾಧನೆಯೆಂಬಂತೆ ಸಂಭ್ರಮಿಸಲಾಗುತ್ತಿದೆ. ಶೂನ್ಯ ಸುಂಕದ ರಿಯಾಯತಿ ಪಡೆಯಲು ಅಮೆರಿಕದಿಂದ ಹೆಚ್ಚಿನ ಹತ್ತಿ ಖರೀದಿಸಲು ಮುಂದಾದರೆ ಆಶ್ಚರ್ಯಪಡಬೇಕಾಗಿಲ್ಲ. ಸರಿಯಾದ ಮಾಹಿತಿ ನೀಡದಿರುವುದು, ಒಪ್ಪಂದದ ಷರತ್ತುಗಳನ್ನು ಸಾರ್ವಜನಿಕರಿಗೆ ತಿಳಿಸದಿರುವುದು ಹಾಗೂ ಕೃಷಿ ವಲಯವು ಸುಭದ್ರವಾಗಿದೆ ಎಂಬಂತಹ ತಿಪ್ಪೆ ಸಾರಿಕೆ ಮಾತುಗಳಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ. ಎಲ್ಲವೂ ಕ್ಷೇಮವೆಂಬ ಈ ಕೂಗುಮಾರಿ ಧೋರಣೆಗಳು ಬೆತ್ತಲೆ ರಾಜನು ತಾನು ಅತ್ಯಂತ ಸುಂದರವಾದ ಅಂಗಿಯನ್ನು ಧರಿಸಿದ್ದೆನೆಂದು ಜನರನ್ನು ನಂಬಿಸುವ ಕಥೆಯಂತಾಗುತ್ತದೆ.

ಒಮ್ಮೆ ಮಿತ್ರರಾಗಿದ್ದ ಟ್ರಂಪ್‍ರವರು, ಈಗ ಭಾರತದ ಬೆನ್ನು ಹತ್ತಿದ ಬೇತಾಳನಾಗಿರುವ ಹಿಂದಿನ ಕಾರಣಗಳು ಸಾಮಾನ್ಯರಾದ ನಮ್ಮ ಬುದ್ಧಿಗೆ ನಿಲುಕದ ವಿಷಯವಾದರೂ, ಅವರ ದಬ್ಬಾಳಿಕೆಯ ವ್ಯಾಪಾರ ನೀತಿಯಿಂದಾಗಿ ಭಾರತವು ಇಕ್ಕಟ್ಟಿಗೆ ಸಿಲುಕಿರುವ ಕಟು ಸತ್ಯವು ಮಾತ್ರ ಅರ್ಥವಾಗುತ್ತಿದೆ. ಎಲ್ಲವೂ ಕ್ಷೇಮವೆಂಬ ಭ್ರಮೆ ಹುಟ್ಟಿಸುವ ಪ್ರಯತ್ನಗಳನ್ನು ಬಿಟ್ಟು, ಸರ್ಕಾರವೂ ಸಹ ನಿಜ ಸ್ಥಿತಿಯನ್ನು ಒಪ್ಪಿಕೊಳ್ಳಬೇಕಿದೆ. ರೈತರು, ಉದ್ಯಮಿಗಳು, ತಜ್ಞರ ಸಲಹೆ ಹಾಗೂ ವಿರೋಧ ಪಕ್ಷಗಳ ವಿಶ್ವಾಸವನ್ನು ಗಳಿಸುವ ಮೂಲಕ ಸರ್ಕಾರವು ತನ್ನ ಸಂಧಾನ (Bargaining) ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಅಮೆರಿಕದ ಸಂಬಂಧ ಮುಖ್ಯವಾದರೂ, ತುಳಿದಷ್ಟು ಬಗ್ಗುವ ಊಳಿಗತನದ ಮನಸ್ಥಿತಿ ಇರಬೇಕಾಗಿಲ್ಲ; ಬದಲಿಗೆ ಸಮಾನ ಮಟ್ಟದ ರಾಜತಾಂತ್ರಿಕತೆಯನ್ನು ತೋರಬೇಕಿದೆ.

ಹತ್ತಿ ಬೆಳೆಗಾರರೊಂದಿಗೆ ಜವಳಿ ಉದ್ಯಮವನ್ನೂ ಏಕಕಾಲದಲ್ಲಿ ಉಳಿಸಲು ಯುರೋಪಿಯನ್ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದವು ತ್ವರಿತವಾಗಿ ಊರ್ಜಿತವಾಗುವಂತೆ ಮಾಡುವ ಜೊತೆಗೆ, ಇತರೆ ರಾಷ್ಟ್ರಗಳೊಂದಿಗೆ ಹೆಚ್ಚಿನ ವ್ಯಾಪಾರ ಒಪ್ಪಂದಗಳನ್ನು ವಿಸ್ತರಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಅಗ್ಗದ ಹತ್ತಿ ಆಮದಿನ ಮೇಲೆ ನಿಯಂತ್ರಣ ಹೇರುವ ಜೊತೆಗೆ, ಹತ್ತಿ ನಿಗಮದ ಖರೀದಿ ಪ್ರಕ್ರಿಯೆಗಳು ತ್ವರಿತವಾಗಿ ಪ್ರತಿ ರೈತನಿಗೂ ತಲುಪುವಂತೆ ಬಲಗೊಳಿಸಬೇಕು. ಜಾಗತಿಕ ಮಾರುಕಟ್ಟೆಗೆ ಪೂರಕವಾದ ಉತ್ಪನ್ನ ಗುಣಮಟ್ಟ ಮತ್ತು ಸುಸ್ಥಿರತೆಯೆ ಪ್ರಮಾಣೀಕರಣಗಳನ್ನು ಹೊಂದಿರುವ ಹತ್ತಿ ಬೆಳೆಯಲು ರೈತರಿಗೆ ಬೆಂಬಲ ನೀಡಬೇಕಿದೆ.

ಅಂತೆಯೇ, ನೂಲು, ನೇಯ್ಗೆ ಮತ್ತು ಸಿದ್ಧ ಉಡುಪು ಘಟಕಗಳಿಗೆ ಆಧುನೀಕರಣ, ಕಡಿಮೆ ಸಾರಿಗೆ ವೆಚ್ಚ, ಮತ್ತು ಸುಲಭ ಸಾಲದ ಸೌಲಭ್ಯಗಳನ್ನು ಒದಗಿಸಬೇಕು. ರಫ್ತು ಗುಣಮಟ್ಟ ಹೆಚ್ಚಿಸಲು ಶುದ್ಧ ಹತ್ತಿ ಬಳಕೆ, ಕಾರ್ಮಿಕರ ಕೌಶಲ್ಯಾಭಿವೃದ್ಧಿ ಮತ್ತು ಮೌಲ್ಯವರ್ಧಿತ ಕಲೆಗಳಿಗೆ ಆದ್ಯತೆ ನೀಡುವುದನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕಿದೆ. ‘ಅಗ್ಗದ ಕೂಲಿ – ಕೈಕಾಲು ಸವೆದರೂ ನಿಲ್ಲದ ಕೆಲಸ’ ವೆಂಬ ಜಮಿನ್ದಾರಿ ಅಲೋಚನೆಗಳನ್ನು ಬಿಟ್ಟು, ಕಾರ್ಮಿಕರ ಘನತೆಯನ್ನು ಎತ್ತಿಹಿಡಿಯುವಂತಹ ಕೆಲಸ ತಾಣಗಳ ಸಂಸ್ಕøತಿಯನ್ನು ಸರ್ಕಾರ ಒತ್ತಾಯಿಸಬೇಕಿದೆ. ಮುಖ್ಯವಾಗಿ, ಅಮೆರಿಕಾದ ಸುಪ್ರೀಂ ಕೋರ್ಟ್ ತೀರ್ಮಾನದ ಹಿನ್ನೆಲೆಯಲ್ಲಿ, ಅಲ್ಲಿನ ವ್ಯಾಪಾರ ಒಪ್ಪಂದದ ಮರುಚರ್ಚೆಗೆ ವ್ಯಾಪಕ ಅವಕಾಶವಿದ್ದು, ‘ನ್ಯಾಯೋಚಿತ ವ್ಯಾಪಾರ ನೀತಿ’ಯ ಅಳವಡಿಕೆಗೆ ಭಾರತವು ಆದ್ಯತೆ ನೀಡಬೇಕಿದೆ. ಅಂತಿಮವಾಗಿ, ಒಪ್ಪಂದಕ್ಕೆ ಸಹಿ ಮಾಡುವಾಗ ‘ರೈತ – ಕಾರ್ಮಿಕ’ ಇಬ್ಬರ ಹಿತಾಸಕ್ತಿಯನ್ನು ರಕ್ಷಿಸುವ ಸಮತೋಲಿತ ನೀತಿಯನ್ನು ಸರ್ಕಾರ ಕಾಯ್ದುಕೊಳ್ಳಲಿ ಎಂಬುದು ಜನತೆಯ ಒತ್ತಾಸೆಯಾಗಿದೆ.
***

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬರುವ ಎಪ್ರಿಲ್‍ನಲ್ಲಿ ಸಹಿ ಆಗಲಿರುವ ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಇಲ್ಲಿನ ಕೃಷಿ ಮತ್ತು ಡೈರಿ ವಲಯಕ್ಕೆ ಹೇಗೆ ವಿಪತ್ತನ್ನು ತರಬಹುದಾಗಿದೆ ಎಂಬ ವಿವರಗಳಿಗಾಗಿ ಇದೇ ಲೇಖಕಿಯ ಫೆ.9ರ ಈದಿನ.ಕಾಮ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವನ್ನು ಓದಬಹುದಾಗಿದೆ ಲಿಂಕ್‌ ಇಲ್ಲಿದೆ. https://eedina.com/premium-articles/what-are-the-interests-of-farmers-in-the-india-us-trade-deal/2026-02-09/

WhatsApp Image 2025 11 17 at 5.18.52 PM
ಲತಾಮಾಲ
+ posts

ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...

ಪ್ರೀಮಿಯಂ ಲೇಖನ | ಗಾಂಧಿ ಹತ್ಯೆಗೆ ನಿಜವಾದ ಕಾರಣವೇ ಬೇರೆ: ‘ಮುಸ್ಲಿಮರ ಪರ’ ಆರೋಪದಾಚೆಗಿನ ಸತ್ಯ ಏನು?

ಗಾಂಧಿಯವರ ಮೇಲೆ ದ್ವೇಷದ ಬೇರುಗಳನ್ನು ಅರಿಯಲು ಅವರ ರಾಜಕೀಯದ ಸ್ವರೂಪವನ್ನು ಅರಿಯಬೇಕು....