ವಿಶೇಷ ಲೇಖನ | ದಲಿತರು ಹಿಂದೂ ದೇವಾಲಯಗಳನ್ನು ಬಹಿಷ್ಕರಿಸಬೇಕಿದೆ

Date:

1919ರ ಮಾಂಟೆಗ್ಯು ಚೆಲ್ಮ್‌ಫೋರ್ಡ್‌ ಸುಧಾರಣೆಯ ಭಾಗವಾಗಿ ಶಾಸನಸಭೆಗಳಲ್ಲಿ ಭಾರತೀಯರಿಗೆ ನಾಮನಿರ್ದೇಶನದ ಮೂಲಕ ಸ್ಥಾನ ನೀಡಲಾಯಿತು. ಹಾಗೆಯೇ ಅಸ್ಪೃಶ್ಯರಿಗೂ ದೊರಕಿತು. ಅಂದಿಗೆ ಸಾಮಾಜಿಕ ಸುಧಾರಣೆಯಲ್ಲಿ ಹೆಸರುವಾಸಿಯಾಗಿದ್ದ ದಕ್ಷಿಣ ಭಾರತದ ಅಬ್ರಾಹ್ಮಣ ಚಳವಳಿಯ ನಾಯಕರು, ಶಾಸನಸಭೆಗಳಲ್ಲಿ ಅಸ್ಪೃಶ್ಯರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡಬೇಕೆಂಬ ನಿರ್ಣಯಗಳನ್ನು ಮಂಡಿಸಿದರು. ಬಾಂಬೆ ಮತ್ತು ಮದ್ರಾಸ್‌ ಶಾಸನಸಭೆಗಳಲ್ಲಿ ಇಂತಹ ನಿರ್ಣಯಗಳನ್ನು ಮಂಡಿಸಿ ಬಹುಮತ ಪಡೆಯದೆ ವಿಫಲವಾದರು...

ನಮ್ಮ ಇಡೀ ಭವಿಷ್ಯವು ರಾಜಕಾರಣದ ಮೇಲೆ ನಿಂತಿದೆ ವಿನಾಃ ಬೇರೆ ಯಾವುದರ ಮೇಲೂ ಅಲ್ಲ. ಪಂಡರಪುರ, ತ್ರಂಬಕೇಶ್ವರ, ಕಾಶಿ, ಹರಿದ್ವಾರ ಇತ್ಯಾದಿಗಳ ತೀರ್ಥಯಾತ್ರೆಗಳಿಂದಾಗಲಿ ಅಥವಾ ಶನಿ ಮಹಾತ್ಮೆ, ಶಿವಲೀಲಾಮೃತ ಅಥವಾ ಗುರುಚರಿತ್ರೆಯಂತಹ ಉಪವಾಸದಿಂದಾಗಲಿ ನಿಮ್ಮ ಉದ್ಧಾರವಂತೂ ಆಗುವುದಿಲ್ಲ. ನಿಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಇವುಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೂ ನಿಮ್ಮ ಸ್ಥಿತಿಯಲ್ಲಿ ಒಂದಂಶವಾದರೂ ಬದಲಾಗಿದೆಯೇ? ನಿಮ್ಮ ಮೈಮೇಲೆ ಹಳೆಯ ಹರಿದ ಬಟ್ಟೆಗಳು, ಹೊಟ್ಟೆಗೆ ಅರೆಬೆಂದ ಅರ್ಧ ರೊಟ್ಟಿಯ ತುಂಡು, ದನದ ಕೊಟ್ಟಿಗೆಗಿಂತಲೂ ಗಲೀಜಾಗಿರುವ ಸ್ಥಳದಲ್ಲಿ ನಿಮ್ಮ ವಾಸ, ಕೋಳಿಗಳ ಹಾಗೆ ರೋಗ ರುಜಿನಗಳಿಗೆ ಬಲಿಯಾಗುವ ನಿಮ್ಮ ನಿಶಕ್ತತೆ- ಇಂತಹ ದುಸ್ಸಹನೀಯ ಪರಿಸ್ಥಿತಿ ಇಲ್ಲಿಯವರೆಗೆ ಏಕೆ ಬದಲಾಗಿಲ್ಲ? ನಾವು ತೆಗೆದುಕೊಳ್ಳುವ ಒಂದು ಔಷಧದಿಂದ ರೋಗ ಗುಣಮುಖವಾಗದಿದ್ದರೆ ನಾವು ಔಷಧ ಬದಲಿಸಬೇಕಲ್ಲವೆ? ವೈದ್ಯರನ್ನು ಬದಲಿಸುವುದು ಬೇಡವೆ? –ಡಾ. ಬಿ.ಆರ್.ಅಂಬೇಡ್ಕರ್

ದಲಿತರು ಹಾಗೂ ತಳಸಮುದಾಯಗಳು ಬಹುತೇಕ ಬ್ರಾಹ್ಮಣರ ಹಿಡಿತದಲ್ಲಿರುವ ದೇಗುಲಗಳಿಗೆ ಪ್ರವೇಶ ಕೇಳಿದ್ದು ಇಂದು ನಿನ್ನೆಯ ಸಂಗತಿಯಲ್ಲ. ಉಡುಪಿಯ ಕೃಷ್ಣ ದೇಗುಲಕ್ಕೆ ಸಂತಕವಿ ಕನಕದಾಸರ ಪ್ರವೇಶ ನಿರಾಕರಣೆಯು ಇದೇ ರೀತಿಯ ಹೋರಾಟದ ಭಾಗವಾಗಿದೆ. ಮತ್ತೊಂದು ಕಡೆಯಲ್ಲಿ ತಳಸಮುದಾಯಗಳ ಗುಡಿಗಳನ್ನು ʼಬ್ರಾಹ್ಮಣೀಕರಣʼದ ಭಾಗವಾಗಿ ಬ್ರಾಹ್ಮಣರು ಕೈವಶ ಮಾಡಿಕೊಂಡಿದ್ದಾರೆ. ಬ್ರಾಹ್ಮಣ ಶ್ರೇಷ್ಠತೆಯನ್ನು ಒಪ್ಪಿಕೊಂಡಂತಹ ಶೂದ್ರ ಜಾತಿಗಳೂ ತಮ್ಮ ದೇವಾಲಯಗಳನ್ನು ವೈದಿಕರಿಗೆ ಬಿಟ್ಟುಕೊಟ್ಟಿರುವುದು ವಿಪರ್ಯಾಸ. ಅದೇನೇ ಇರಲಿ, ಬ್ರಾಹ್ಮಣರು ಹಾಗೂ ಶೂದ್ರರು ಪೂಜಿಸುವ ದೇವಾಲಯಗಳಿಗೆ ಮೊದಲಿನಿಂದಲೂ ದಲಿತರ ಪ್ರವೇಶ ನಿರಾಕರಿಸಿರುವುದು  ಜಾತಿಪದ್ಧತಿ ಹಾಗೂ ಅಸ್ಪೃಶ್ಯತೆಯ ದುಷ್ಟ ಆಚರಣೆಯ ಭಾಗವಾಗಿದೆ. ಭಾರತದ ಸಂವಿಧಾನವು ಅಸ್ಪೃಶ್ಯತೆಯನ್ನು ನಿಷೇಧಿಸಿದ್ದರೂ ಈ ಅಮಾನವೀಯ ಆಚರಣೆ ಎಗ್ಗಿಲ್ಲದಂತೆ ನಡೆಯುತ್ತಿದೆ. ಇದಕ್ಕೆ ಕಾರಣ ಹಿಂದೂ ಧರ್ಮದ ತಾರತಮ್ಯ ನೀತಿಯಾಗಿದೆ.

ಬ್ರಿಟಿಷರು ಭಾರತವನ್ನು ವಸಾಹತುವನ್ನಾಗಿ ಮಾಡಿಕೊಂಡ ನಂತರ ಕೆಲವು ಸುಧಾರಣೆಗಳನ್ನು ತರಲೇಬೇಕಾಯಿತು. ಜಾತಿಯಾಧಾರಿತ ಕಾನೂನು/ಕಟ್ಟಳೆಗಳನ್ನು ಕೊನೆಗಾಣಿಸುವ ಪ್ರಯತ್ನ ಮಾಡಲಾಯಿತು. ಪ್ರಜಾಪ್ರಭುತ್ವ ಮೌಲ್ಯಗಳು ಜಗತ್ತಿನಾದ್ಯಂತ ಮನೆಮಾತಾದ ಮೇಲೆ ಭಾರತದಲ್ಲಿಯೂ ಅಸ್ಪೃಶ್ಯರಿಗೆ ಹಕ್ಕುಗಳು ಸಿಗಬೇಕೆಂಬ ಹೋರಾಟಗಳು ನಡೆದವು. 1919ರ ಮಾಂಟೆಗ್ಯು ಚೆಲ್ಮ್‌ಫೋರ್ಡ್‌ ಸುಧಾರಣೆಯ ಭಾಗವಾಗಿ ಶಾಸನಸಭೆಗಳಲ್ಲಿ ಭಾರತೀಯರಿಗೆ ನಾಮನಿರ್ದೇಶನದ ಮೂಲಕ ಸ್ಥಾನ ನೀಡಲಾಯಿತು. ಹಾಗೆಯೇ ಅಸ್ಪೃಶ್ಯರಿಗೂ ದೊರಕಿತು. ಅಂದಿಗೆ ಸಾಮಾಜಿಕ ಸುಧಾರಣೆಯಲ್ಲಿ ಹೆಸರುವಾಸಿಯಾಗಿದ್ದ ದಕ್ಷಿಣ ಭಾರತದ ಅಬ್ರಾಹ್ಮಣ ಚಳವಳಿಯ ನಾಯಕರು, ಶಾಸನಸಭೆಗಳಲ್ಲಿ ಅಸ್ಪೃಶ್ಯರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡಬೇಕೆಂಬ ನಿರ್ಣಯಗಳನ್ನು ಮಂಡಿಸಿದರು. ಬಾಂಬೆ ಮತ್ತು ಮದ್ರಾಸ್‌ ಶಾಸನಸಭೆಗಳಲ್ಲಿ ಇಂತಹ ನಿರ್ಣಯಗಳನ್ನು ಮಂಡಿಸಿ ಬಹುಮತ ಪಡೆಯದೆ ವಿಫಲವಾದರು. ಅಂತಹ ಪ್ರಯತ್ನಗಳಲ್ಲಿ 1923ರಲ್ಲಿ ಎಸ್.ಕೆ.ಬೋಲೆಯವರು (ಇವರು ಅಬ್ರಾಹ್ಮಣ ಚಳವಳಿಯ ನೇತಾರ) ಮಂಡಿಸಿ ಅಸ್ಪೃಶ್ಯರಿಗೆ ಸಾರ್ವಜನಿಕ ಸ್ಥಳಗಳಿಗೆ ಅವಕಾಶವನ್ನು ನೀಡಬೇಕೆಂಬ ನಿರ್ಣಯವು ಒಂದು. ಅದು ಬಾಂಬೆ ಶಾಸನಸಭೆಯಲ್ಲಿ ಪಾಸಾಯಿತು. ಈ ಕಾಯ್ದೆಯ ಜಾರಿಗಾಗಿಯೇ ಮುಂದೆ ಅಂಬೇಡ್ಕರ್‌ರವರ ನೇತೃತ್ವದಲ್ಲಿ ಮಹಾಡ್‌ ಚಳವಳಿ ನಡೆದದ್ದು. ಇದೇ ರೀತಿಯ ಕಾಯ್ದೆಯಿಂದಾಗಿಯೇ ವೈಕಂ ಚಳವಳಿ ನಡೆದದ್ದು. ಈ ಎರಡೂ ಚಳವಳಿಗಳು ಸಾರ್ವಜನಿಕ ಕೆರೆ ಮತ್ತು ರಸ್ತೆಗಳಿಗೆ ಸೀಮಿತವಾಗಿದ್ದರೂ ಮೂರರಿಂದ ಐದು ವರ್ಷಗಳ ಬೀದಿಯ ಹೋರಾಟ ಮತ್ತು ಕಾನೂನು ಹೋರಾಟದ ಫಲವಾಗಿ ಯಶಸ್ಸು ಪಡೆಯಬೇಕಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ನಾವು ಹಿಂದೂಗಳಷ್ಟೇ, ಕಾಂಗ್ರೆಸ್-ಬಿಜೆಪಿ ನಂತರದ ಮಾತು; ಮುಸ್ಲಿಂ ಭಯದ ಅಗ್ನಿಕುಂಡವಾದ ‘ಹಿಮಾಚಲ’

ಈ ಮೇಲಿನ ಒಟ್ಟಾರೆ ಬೆಳವಣಿಗೆಯಿಂದಾಗಿಯೇ ಅಸ್ಪೃಶ್ಯರು ಹಿಂದೂ ಧರ್ಮದ ದೇಗುಲ ಪ್ರವೇಶ ಚಳವಳಿಗೆ ಕೈಹಾಕಿದರು.

ಅಸ್ಪೃಶ್ಯರ ಧಾರ್ಮಿಕ ಹಕ್ಕು ಗಳಿಸುವ ಹೋರಾಟವನ್ನು ಮೂರು ಹಂತಗಳಲ್ಲಿ ನೋಡಬಹುದಾಗಿದೆ.

  1. ಹಿಂದೂ ದೇಗುಲ ಪ್ರವೇಶಕ್ಕೆ ಹೋರಾಟ
  2. ಪ್ರತ್ಯೇಕ ದೇಗುಲ ಸ್ಥಾಪನೆ
  3. ಮತಾಂತರ

ಮೊದಲ ಹಂತದ ಹೋರಾಟಗಳು ಮಹಾರಾಷ್ಟ್ರದಲ್ಲಿ, ಅಂಬೇಡ್ಕರ್‌ರವರ ಪ್ರತ್ಯಕ್ಷ/ಪರೋಕ್ಷ ಸಮ್ಮತಿಯಲ್ಲಿ ನಡೆದವು. ಚಿಂತಕಿ ಎಲೀನರ್‌ ಜೆಲಿಯಟ್‌ ದಾಖಲಿಸಿರುವಂತೆ ಮಹಾಡ್‌ ಚಳವಳಿ ನಡೆದ ವರ್ಷ 1927ರಿಂದಲೇ ಮಹಾರಾಷ್ಟ್ರದಲ್ಲಿ ಅಸ್ಪೃಶ್ಯರಿಂದ ಒಟ್ಟು ಮೂರು ದೇಗುಲ ಪ್ರವೇಶ ಹೋರಾಟ ನಡೆದವು. 1. ಅಮರಾವತಿಯ ಅಂಬಾದೇವಿ ದೇವಾಲಯ ಪ್ರವೇಶ ಹೋರಾಟ 2. ಪೂನಾದ ಪಾರ್ವತಿ ದೇವಾಲಯ ಪ್ರವೇಶ ಹೋರಾಟ 3. ನಾಸಿಕ್‌ ಕಾಳಾರಾಮ ದೇವಾಲಯ ಪ್ರವೇಶ ಹೋರಾಟ.

ಈ ಮೂರೂ ಹೋರಾಟವನ್ನು ಅಲ್ಲಿನ ಸ್ಥಳೀಯ ದಲಿತ ನಾಯಕರು ಸಂಘಟಿಸಿದ್ದರು. ಈ ಹೋರಾಟಗಳ ಬಗ್ಗೆ ಅಂಬೇಡ್ಕರ್‌ ಅವರಿಗೆ ತಿಳಿದಿತ್ತು ಹಾಗೂ ಸಭೆಗಳಿಗೆ ಆಹ್ವಾನಿಸಲಾಗಿತ್ತು. ಆದರೆ ಅಂಬೇಡ್ಕರ್‌ರವರು ಹೋರಾಟದ ಆರಂಭಿಕ ಹಂತದಲ್ಲಿ ಉಪಸ್ಥಿತರಿದ್ದರಷ್ಟೆ, ಯಾವುದಕ್ಕೂ ನಾಯಕತ್ವ ವಹಿಸಿಕೊಳ್ಳಲಿಲ್ಲ. ಹಾಗೆಂದು ಆರಂಭದಲ್ಲಿ ಈ ಹೋರಾಟಗಳನ್ನು ವಿರೋಧಿಸಲಿಲ್ಲ. ಏಕೆಂದರೆ ಆಧುನಿಕ ಭಾರತದಲ್ಲಿ ನಡೆದ ಮೊದಲ ಅಸ್ಪೃಶ್ಯರ ದೇವಾಲಯ ಪ್ರವೇಶ ಹೋರಾಟಗಳು ಇವಾಗಿದ್ದವು. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ, ಗಾಂಧಿಯವರು ಈ ಮೂರೂ ಹೋರಾಟಗಳಲ್ಲಿ ಪಾಲ್ಗೊಳ್ಳಲಿಲ್ಲ. ಕಾಂಗ್ರೆಸ್ಸಿಗರು ಆರಂಭದಲ್ಲಿ ಹಿಂದೂ ಮೇಲ್ಜಾತಿಗಳು ಮತ್ತು ಅಸ್ಪೃಶ್ಯರ ನಡುವೆ ಸಂಧಾನ ಮಾಡಲು ಯತ್ನಿಸಿ ತಟಸ್ಥರಾದರು. ಆದರೆ ಹಿಂದೂ ಸನಾತನವಾದಿಗಳು ಅಸ್ಪೃಶ್ಯರ ಹೋರಾಟದ ವಿರುದ್ಧವಾಗಿ ಹಿಂದೂ ಮೇಲ್ಜಾತಿಗಳಿಗೆ ಸಹಾಯ ಮಾಡಿದರು.

1927ರಲ್ಲಿ ಆರಂಭವಾದ ಅಮರಾವತಿಯ ದೇವಾಲಯ ಪ್ರವೇಶ ಹೋರಾಟದ ನಾಯಕತ್ವ ವಹಿಸಿಕೊಂಡಿದ್ದವರು ಬ್ರಾಹ್ಮಣೇತರ ಚಳವಳಿಯಲ್ಲಿದ್ದ ಡಾ.ಪಂಜಾಬ್‌ ರಾವ್‌ ದೇಶಮುಖ್‌ ಹಾಗೂ ಅಸ್ಪೃಶ್ಯ ನಾಯಕ ಜಿ.ಎ.ಗವಾಯಿ. ಈ ದೇವಾಲಯದ ಪ್ರವೇಶಕ್ಕಾಗಿ ಯತ್ನಿಸಿದ ಇಬ್ಬರು ಅಸ್ಪೃಶ್ಯ ವೃದ್ಧರನ್ನು ಹಿಂದೂ ಮೇಲ್ಜಾತಿಗಳು ಥಳಿಸಿ ಜೈಲಿಗೆ ಕಳಿಸಿದರು. ಅಸ್ಪೃಶ್ಯರ ಪರವಾಗಿ ತಿಂಗಳಾನುಗಟ್ಟಲೆ ದೇವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರವೂ ಅಸ್ಪೃಶ್ಯರಿಗೆ ಪ್ರವೇಶ ದೊರಕಲಿಲ್ಲ. ಎರಡು ವರ್ಷಗಳ ಕಾಲ ಗುಟುಕು ಜೀವ ಇಟ್ಟುಕೊಂಡಿದ್ದ ಹೋರಾಟವು ನಂತರ ತಣ್ಣಗಾಗಿತ್ತು. ಹಿಂದೂ ಮೇಲ್ಜಾತಿಗಳು ಸ್ವಲ್ಪವೂ ಅಲುಗಾಡಲಿಲ್ಲ. ಸತ್ಯಾಗ್ರಹಕ್ಕೂ ಆಸ್ಪದ ನೀಡಲಿಲ್ಲ.

1929ರಲ್ಲಿ ಪೂನಾದ ಪಾರ್ವತಿ ದೇವಾಲಯ ಪ್ರವೇಶ ಹೋರಾಟ ನಡೆಯಿತು. ಹಿಂದಿನ ಹೋರಾಟಕ್ಕೆ ಹೋಲಿಸಿದರೆ ಇದರಲ್ಲಿ ಅಸ್ಪೃಶ್ಯರು ಬಲವಾಗಿ ನಿಂತಿದ್ದರು. ಹಿರಿಯ ಅಸ್ಪೃಶ್ಯ ನಾಯಕರಾದ ಶಿವರಾಮ್‌ ಜಾನ್ಬಾ ಕಾಂಬಳೆ ಈ ಸತ್ಯಾಗ್ರಹದ ಮುಂಚೂಣಿಯಲ್ಲಿದ್ದರು. ಹಲವು ಬ್ರಾಹ್ಮಣೇತರ ಚಳವಳಿಯ ನಾಯಕರು ಹಾಗೂ ಉದಾರವಾದಿ ಬ್ರಾಹ್ಮಣರು ಕೈಜೋಡಿಸಿದ್ದರು. ಆ ದಿನ ಪಾರ್ವತಿ ಬೆಟ್ಟದ ಕೆಳಗೆ ನೂರಾರು ಅಸ್ಪೃಶ್ಯರು ಸೇರಿದರು. ಈ ಬೆಟ್ಟದ ತುದಿಯಲ್ಲಿ ಪೇಶ್ವೆಗಳು ನಿರ್ಮಿಸಿದ್ದ ದೇವಾಲಯವಿತ್ತು. ನಾಲ್ವರು ಮಹಿಳೆಯರೂ ಸೇರಿದಂತೆ 12 ಸತ್ಯಾಗ್ರಹಿಗಳ ಗುಂಪು ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ಹಿಂದೂ ಮೇಲ್ಜಾತಿಗಳು ಅವರನ್ನು ಥಳಿಸಲು ಆರಂಭಿಸಿದರು. ಚಂಬಾರ್‌ ನಾಯಕ ರಾಜಬೋಜ್‌ ಸೇರಿದಂತೆ ಹಲವು ಅಸ್ಪೃಶ್ಯರನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿಕೊಳ್ಳಲಾಯಿತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಲೆಕ್ಟರ್‌ ಹಾಗೂ ಪೊಲೀಸರು ದೇವಾಲಯದ ಬಾಗಿಲುಗಳನ್ನು ಮುಚ್ಚಿದರು. ಅಂದಿನಿಂದ ಹಗಲಿರುಳು ನಾಲ್ಕು ತಿಂಗಳುಗಳ ಕಾಲ 5 ಜನ ಅಸ್ಪೃಶ್ಯರ ತಂಡವು ಮುಚ್ಚಿದ ದೇವಾಲಯದ ಬಾಗಿಲ ಬಳಿ ಸತ್ಯಾಗ್ರಹಕ್ಕೆ ಕುಳಿತುಕೊಂಡಿತು. ನಾಲ್ಕು ತಿಂಗಳಾದರೂ ಯಾರು ಕ್ಯಾರೇ ಎನ್ನದ ಪರಿಣಾಮವಾಗಿ ಸತ್ಯಾಗ್ರಹ ಅಂತ್ಯಗೊಂಡಿತು. ಮರಾಠಿಯ ಲಾವಣಿಯೊಂದು ಈ ಹೋರಾಟವನ್ನು ಹೀಗೆ ನೆನಪು ಮಾಡಿಕೊಳ್ಳುತ್ತದೆ:

ಎದ್ದು ಬನ್ನಿ ಸೋದರರೇ ಪಾರ್ವತಿ ದೇಗುಲಕ್ಕೆ ಹೋಗೋಣ.
ಸತ್ಯ ಸಾರುವ ಪತಾಕೆ ಹಿಡಿದು ಶಂಕರನ ಭೇಟಿಯಾಗೋಣ.
ಸಾತ್ವಿಕ ಶಂಕರ ಸದಾಶಿವ ತನ್ನ ಭಕ್ತರಿಗಾಗಿ ಕಾಯುವನು.
ಬಡವ ಶ್ರೀಮಂತ ಭೇದ ಮಾಡದೆ ಸಮಾನವಾಗಿ ಸಲಹುವನು.
ಸತ್ಯವ ರಕ್ಷಣೆ ಮಾಡಲು ಬನ್ನಿ ಸಾಂಬಾ ಬಳಿಗೆ ಹೋಗೋಣ.
ನಮ್ಮ ಮನಸ್ಸಿನ ದುಃಖವನ್ನು ತಾಯಿ ಪಾರ್ವತಿಗೆ ಹೇಳೋಣ.
ನಮ್ಮ ಸಂಕಲ್ಪ ಬಲದಿಂದ ಗಣಪತಿಯ ಮನವನು ಒಲಿಸೋಣ.
ಸತ್ಯವನ್ನೇ ಹೇಳೋಣ.. ಸತ್ಯವನ್ನೇ ಹೇಳೋಣ..

ಅಸ್ಪೃಶ್ಯರ ದೇವಾಲಯ ಪ್ರವೇಶ ಹೋರಾಟಕ್ಕೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಹೋರಾಟ ನಾಸಿಕ್‌ ಕಾಳಾರಾಮ್‌ ದೇವಾಲಯ ಪ್ರವೇಶ ಹೋರಾಟವಾಗಿದೆ. 1930ರಿಂದ 1934ರವರೆಗೆ ಸುಮಾರು 5 ವರ್ಷಗಳ ಕಾಲ ಈ ಸತ್ಯಾಗ್ರಹ ನಡೆಯಿತು. ಈ ಸಮಯದಲ್ಲಿ ಲಂಡನ್ನಿನಲ್ಲಿ ದುಂಡುಮೇಜಿನ ಸಭೆಗಳು ನಡೆದದ್ದರಿಂದ ಅಂಬೇಡ್ಕರ್‌ರವರು ಈ ಸತ್ಯಾಗ್ರಹದ ಪತ್ರಿಕಾ ವರದಿಗಳನ್ನು ಅಸ್ಪೃಶ್ಯರ ʼಪ್ರತ್ಯೇಕ ಚುನಾವಣಾ ಮತಕ್ಷೇತ್ರʼದ ಒತ್ತಾಯಕ್ಕೆ ಪೂರಕವಾಗಿ ಬಳಸಿಕೊಂಡರು. ಅಸ್ಪೃಶ್ಯ ನಾಯಕರಾದ ಗಾಯಕ್ವಾಡ್‌ ಇದರ ನೇತೃತ್ವ ವಹಿಸಿದ್ದರು. ಮಾರ್ಚ್‌ 4, 1930ರಂದು ಆರಂಭವಾದ ಈ ಸತ್ಯಾಗ್ರಹದಲ್ಲಿ ಅಂಬೇಡ್ಕರ್‌ ಹೀಗೆ ನುಡಿದಿದ್ದರು:

“ನಿಮ್ಮ ಸಮಸ್ಯೆಗಳು ದೇವಾಲಯ ಪ್ರವೇಶದಿಂದ ಪರಿಹಾರವಾಗುವುದಿಲ್ಲ. ರಾಜಕೀಯ, ಆರ್ಥಿಕತೆ, ಶಿಕ್ಷಣ, ಧರ್ಮ-ಎಲ್ಲವೂ ಸಮಸ್ಯೆಯ ಭಾಗವಾಗಿವೆ. ಇಂದಿನ ಸತ್ಯಾಗ್ರಹ ಹಿಂದೂ ಮನಸ್ಸಿಗೆ ಹಾಕಿರುವ ಸವಾಲಾಗಿದೆ. ಹಿಂದೂಗಳು ನಮ್ಮನ್ನು ಮನುಷ್ಯರೆಂದು ಪರಿಗಣಿಸಲು ಸಿದ್ಧರಿದ್ದಾರೋ ಇಲ್ಲವೋ ಎಂಬುದನ್ನು ಇಂದು ಕಂಡುಕೊಳ್ಳಲಿದ್ದೇವೆ… ದೇವಾಲಯದಲ್ಲಿರುವ ದೇವರು ಕಲ್ಲಿನಿಂದಾಗಿದೆ ಎಂಬುದು ನಮಗೆ ತಿಳಿದಿದೆ. ದರ್ಶನ ಮತ್ತು ಪೂಜೆ ನಮ್ಮ ಸಮಸ್ಯೆಗಳನ್ನು ಪರಿಹರಿಸಲಾರವು. ಆದರೂ ಹಿಂದೂಗಳ ಮನಸ್ಸಿನಲ್ಲಿ ಬದಲಾವಣೆ ತರಲು ನಾವು ಪ್ರಯತ್ನಿಸುತ್ತೇವೆ ಮತ್ತು ಪ್ರಾರಂಭಿಸುತ್ತೇವೆ.”

ಇದನ್ನೂ ಓದಿರಿ: ಸಂವಿಧಾನ ಸುಡುವ ಚಳವಳಿಯನ್ನು ಪೆರಿಯಾರ್ ನಡೆಸಿದ್ದೇಕೆ?

ಅಂಬೇಡ್ಕರ್‌ರವರು ದೇಗುಲ ಪ್ರವೇಶ ಹೋರಾಟದಲ್ಲಿ ಭಾಗವಹಿಸಲು ಮನಸ್ಸು ಮಾಡಿದ್ದು, ಅಸ್ಪೃಶ್ಯರು ಹಿಂದೂಗಳಂತೆಯೇ ಮನುಷ್ಯರೆಂಬುದನ್ನು ಹಿಂದೂಗಳು ಒಪ್ಪಿಕೊಳ್ಳುವ ಮನಸ್ಸು ಮಾಡುವರೇ ಎಂಬ ಸವಾಲನ್ನು ಹಾಕಲು ಮಾತ್ರವಾಗಿತ್ತು. ದೇವರ ಬಗೆಗಿನ ಭಕ್ತಿಯು ಅಸ್ಪೃಶ್ಯರ ಬದುಕನ್ನು ಎಂದಿಗೂ ಬದಲು ಮಾಡದು ಎಂಬುದು ಅವರಿಗೆ ತಿಳಿದಿತ್ತು.

ನಾಸಿಕ್‌ ಸತ್ಯಾಗ್ರಹ ಆರಂಭವಾದ ಒಂದು ತಿಂಗಳ ನಂತರ ಕಾಳಾರಾಮ ರಥೋತ್ಸವ ನಡೆಯಿತು. ದೇವಾಲಯದ ಅಧಿಕಾರಿಗಳೊಂದಿಗಿನ ಮಾತುಕತೆಯ ಪ್ರಕಾರ ರಥವನ್ನು ಎಳೆಯಲು ಅಸ್ಪೃಶ್ಯರಿಗೂ ಅವಕಾಶ ನೀಡಬೇಕೆಂದು ತೀರ್ಮಾನವಾಗಿತ್ತು. ಆದರೆ ರಥೋತ್ಸವ ಆರಂಭವಾದಾಗ ಅಸ್ಪೃಶ್ಯರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಅಸ್ಪೃಶ್ಯರು ಇದರ ವಿರುದ್ಧ ಅಲ್ಲಿಯೇ ಪ್ರತಿಭಟಿಸಿದ ಕಾರಣ ಅವರ ಮೇಲೆ ಹಿಂದೂ ಸನಾತನವಾದಿಗಳು ಹಲ್ಲೆ ಮಾಡಿದರು. ದೇವಾಲಯವನ್ನು ಮುಚ್ಚಿದರು. ಅಲ್ಲಿಂದ 5 ವರ್ಷಗಳ ಕಾಲ ಅಸ್ಪೃಶ್ಯರ ಸಣ್ಣ ಗುಂಪು ಪ್ರವೇಶಕ್ಕಾಗಿ ಆಗ್ರಹಿಸಿ ದೇಗುಲದ ಮುಂದೆಯೇ ಸತ್ಯಾಗ್ರಹಕ್ಕೆ ಮನೆ, ಕೆಲಸ ಬಿಟ್ಟು ಕುಳಿತುಕೊಂಡರು. ಬ್ರಿಟಿಷ್‌ ಸರ್ಕಾರ ಹಿಂದೂ ಮೇಲ್ಜಾತಿಗಳ ಪರವಾಗಿ ವಾದಿಸುತ್ತಾ ಸತ್ಯಾಗ್ರಹ ನಿಲ್ಲಿಸಲು ಸೂಚಿಸಿತು. ಆಗ ಅಂಬೇಡ್ಕರ್‌ರವರು ಬ್ರಿಟಿಷ್‌ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿ ಹೀಗೆ ಬರೆದರು:

“ನಾವು ನಿಲ್ಲಿಸಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಲಿದ್ದೇನೆ. ನಾವು ನಮ್ಮ ಆದೇಶಗಳನ್ನು ಸಂಪ್ರದಾಯಬದ್ಧ ಹಿಂದೂಗಳಿಂದ ಹೇಗೆ ತೆಗೆದುಕೊಳ್ಳುವುದಿಲ್ಲವೋ ಹಾಗೆಯೇ ಸರ್ಕಾರದಿಂದಲೂ ತೆಗೆದುಕೊಳ್ಳಬಾರದು. ಅಸ್ಪೃಶ್ಯತೆಯನ್ನು ತೊಡೆದುಹಾಕಲು ನಾವು ಸಾಕಷ್ಟು ಕಾಲ ಸರ್ಕಾರವನ್ನು ನಂಬಿದ್ದೇವೆ. ಆದರೆ ಈ ವಿಷಯದಲ್ಲಿ ಏನಾದರೂ ಮಾಡಲು ತನ್ನ ಬೆರಳನ್ನೂ ಸರ್ಕಾರ ಮೇಲೆತ್ತಲಿಲ್ಲ. ಹಾಗಾಗಿ ನಮ್ಮನ್ನು (ಸತ್ಯಾಗ್ರಹ) ನಿಲ್ಲಿಸಿ ಎಂದು ಕೇಳುವ ಹಕ್ಕು ಅದಕ್ಕಿಲ್ಲ. ನಾವು ನಮ್ಮ ಹೆಗಲ ಮೇಲೆ ಈ ಭಾರವನ್ನು ತೆಗೆದುಕೊಳ್ಳಬೇಕು ಹಾಗೂ ಯಾವುದೇ ಬೆಲೆ ತೆತ್ತಾದರೂ ಸರಿ ಈ ಶಾಪದಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಲು ಸಾಧ್ಯವಾಗಬಹುದಾದದ್ದನ್ನು ಮಾಡಬೇಕು. ಸರ್ಕಾರದಿಂದ ನಮಗೆ ಏನೊಂದೂ ಸಹಾಯ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ; ಅದು ನಮಗೆ ಅಡ್ಡಿಯಾಗಬಾರದಷ್ಟೆ. ವಿವಿಧ ವರ್ಗಗಳು ಮತ್ತು ಸಮುದಾಯಗಳ ನಡುವೆ ಕೆಟ್ಟ ಭಾವನೆಗಳನ್ನು ಸೃಷ್ಟಿಸಬಾರದು ಎಂದು ನಮಗೆ ಹೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ನಮಗೆ ಮಾತ್ರವಲ್ಲದೆ ಎಲ್ಲ ಸಮುದಾಯಗಳನ್ನೂ ಉದ್ದೇಶಿಸಿ ಮನವಿ ಮಾಡಿಕೊಳ್ಳಬೇಕು. ಅದರಲ್ಲಿಯೂ ವಿಶೇಷವಾಗಿ, ಈ ವಿಷಯದಲ್ಲಿ ತಪ್ಪು ಮಾಡುತ್ತಿರುವ ಹಾಗೂ ಪಾಪ ಮಾಡುತ್ತಿರುವ ಸಮುದಾಯಗಳನ್ನು ಉದ್ದೇಶಿಸಿ ಮನವಿ ಮಾಡಿಕೊಳ್ಳಬೇಕು.”

5 ವರ್ಷಗಳ ಕಾಲ ನಾಸಿಕ್‌ ಹೋರಾಟ ನಡೆದರೂ ಹಿಂದೂ ಮೇಲ್ಜಾತಿಗಳ ಹೃದಯ ಕರಗಲಿಲ್ಲ. ಗಾಂಧಿಯವರಾಗಲೀ, ಕಾಂಗ್ರೆಸ್‌ ಧುರೀಣರಾಗಲೀ, ಹಿಂದೂ ಮಹಾಸಭಾದ ಸನಾತನಿಗಳಾಗಲೀ ಅಸ್ಪೃಶ್ಯರ ಈ ಬೇಡಿಕೆಯನ್ನು ಕಿವಿಗೊಟ್ಟು ಸಹ ಕೇಳಿಸಿಕೊಳ್ಳಲಿಲ್ಲ. ಹಾಗಿದ್ದರೂ ಗಾಯಕ್ವಾಡ್‌ ಅವರು 1934ರಲ್ಲಿ ಮತ್ತೆ ಕಾಳಾರಾಮ ದೇವಾಲಯ ಸತ್ಯಾಗ್ರಹ ಆರಂಭಿಸಲು ಅಂಬೇಡ್ಕರ್‌ರವರ ಸಲಹೆ ಕೇಳಿದಾಗ ಅಂಬೇಡ್ಕರ್‌ ಬಹಳ ಸ್ಪಷ್ಟವಾಗಿ ಹೀಗೆ ಹೇಳಿದ್ದರು:

“ಮುಂಬರುವ ರಾಮನವಮಿ ದಿನದಂದು ನಾಸಿಕ್‌ ಕಾಳಾರಾಮ ಮಂದಿರದಲ್ಲಿ ದಮನಿತ ವರ್ಗಗಳು ಸತ್ಯಾಗ್ರಹವನ್ನು ಪ್ರಾರಂಭಿಸುವ ಔಚಿತ್ಯದ ಬಗ್ಗೆ ನನ್ನ ಅಭಿಪ್ರಾಯಗಳನ್ನು ಕೇಳಿರುವುದಕ್ಕೆ ನಾನು ನಿಮಗೆ ಆಭಾರಿಯಾಗಿದ್ದೇನೆ. ಅಂತಹ ಕ್ರಮವು ಖಂಡಿತವಾಗಿಯೂ ಅನಪೇಕ್ಷಿತವಾಗಿದೆ ಹಾಗೂ ಇದನ್ನು ಕೇವಲ ಮುಂದೂಡಬಾರದು; ಬದಲಾಗಿ ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಈ ಸತ್ಯಾಗ್ರಹದ ಜನಕರಲ್ಲಿ ಒಬ್ಬನಾದ ವ್ಯಕ್ತಿಯಿಂದ ಇಂತಹ ಮಾತುಗಳು ಕೇಳಿಬರುತ್ತಿರುವುದು ವಿಚಿತ್ರ ಹಾಗೂ ಆಶ್ಚರ್ಯಕರವಾಗಿ ಕಾಣಬಹುದು. ಆದರೆ ಈ ಮುಂಚೂಣಿಯ ಬದಲಾವಣೆಯನ್ನು ಘೋಷಿಸಲು ನಾನು ಹೆದರುವುದಿಲ್ಲ. ನಾನು ದೇವಾಲಯ ಪ್ರವೇಶ ಚಳವಳಿಯನ್ನು ಪ್ರಾರಂಭಿಸಿದ್ದು ಏಕೆಂದರೆ, ಯಾವ ವಿಗ್ರಹಗಳನ್ನು ಅಸ್ಪೃಶ್ಯ ವರ್ಗಗಳು ಪೂಜಿಸಬಾರದೆಂದು ತಡೆಯಲಾಗಿತ್ತೋ ಅವುಗಳನ್ನು ಪೂಜಿಸುವಂತಾಗಬೇಕಿತ್ತು ಅಥವಾ ದೇವಾಲಯ ಪ್ರವೇಶ ಅವರನ್ನು ಹಿಂದೂ ಸಮಾಜದ ಸಮಾನ ಸದಸ್ಯರನ್ನಾಗಿ ಮತ್ತು ಅದರ ಅವಿಭಾಜ್ಯ ಅಂಗವಾಗಿ ಮಾಡುತ್ತದೆ ಎಂದು ನಾನು ನಂಬಿದ್ದೆ. ಇದುವರೆಗಿನ ಈ ಪ್ರಕರಣದ ಸ್ವರೂಪಕ್ಕೆ ಸಂಬಂಧಿಸಿದಂತೆ, ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಲು ಸಮ್ಮತಿಸುವ ಮೊದಲು ಹಿಂದೂ ಸಮಾಜ ಮತ್ತು ಹಿಂದೂ ಧರ್ಮಶಾಸ್ತ್ರವನ್ನು ಸಂಪೂರ್ಣವಾಗಿ ಕೂಲಂಕಷವಾಗಿ ಪರಿಶೀಲಿಸಬೇಕೆಂದು ದಮನಿತ ವರ್ಗಕ್ಕೆ ನಾನು ಸಲಹೆ ನೀಡುತ್ತೇನೆ. ದಮನಿತ ವರ್ಗಕ್ಕೆ ಶಕ್ತಿ ತುಂಬಲು ಮತ್ತು ಅವರಿಗಿರುವ ಸ್ಥಾನದ ಬಗ್ಗೆ ಅರಿವು ಮೂಡಿಸಲು ಇರುವ ಅತ್ಯುತ್ತಮ ಮಾರ್ಗವೆಂದು ಭಾವಿಸಿದ ಕಾರಣಕ್ಕಾಗಿ ನಾನು ದೇವಾಲಯ ಪ್ರವೇಶ ಸತ್ಯಾಗ್ರಹವನ್ನು ಪ್ರಾರಂಭಿಸಿದೆ. ನಾನದನ್ನು ಸಾಧಿಸಿದ್ದೇನೆ ಎಂದು ನಂಬುತ್ತೇನೆ. ಆದ್ದರಿಂದ ನನಗೀಗ ದೇವಾಲಯ ಪ್ರವೇಶದಿಂದ ಯಾವುದೇ ಪ್ರಯೋಜನವಿಲ್ಲ. ದಮನಿತ ವರ್ಗವು ರಾಜಕೀಯ ಮತ್ತು ಶಿಕ್ಷಣದ ಮೇಲೆ ತಮ್ಮ ಶಕ್ತಿ ಮತ್ತು ಸಂಪನ್ಮೂಲಗಳನ್ನು ಕೇಂದ್ರೀಕರಿಸಬೇಕೆಂದು ನಾನು ಬಯಸುತ್ತೇನೆ ಹಾಗೂ ಈ ಎರಡರ ಮಹತ್ವವನ್ನು ಅರಿತುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ.”

ಅಂಬೇಡ್ಕರ್‌ರವರು ಮುಂದೆ ನಡೆದ ಯಾವುದೇ ದೇಗುಲ ಪ್ರವೇಶಗಳಲ್ಲಿ ಪಾಲ್ಗೊಳ್ಳಲಿಲ್ಲ. 1935ರಷ್ಟೊತ್ತಿಗೆ ದೇವಾಲಯ ಪ್ರವೇಶ ಹೋರಾಟಗಳು ನಿಷ್ಪ್ರಯೋಜಕವೆಂದು ಸಾಬೀತಾಗಿದ್ದವು. ಅಸ್ಪೃಶ್ಯರಿಗೆ ಬೆಂಬಲ ನೀಡುತ್ತಿದ್ದ ಅಬ್ರಾಹ್ಮಣ ನಾಯಕರು ಹಾಗೂ ಉದಾರವಾದಿ ಬ್ರಾಹ್ಮಣರು ಹಿಂದೂ ಮೇಲ್ಜಾತಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರನ್ನು ಸಮಾಜದಿಂದ ಬಹಿಷ್ಕರಿಸುವ ಮಾತುಗಳನ್ನಾಡುತ್ತಿದ್ದರು ಹಾಗೂ ಕೆಲವರನ್ನು ಬಹಿಷ್ಕರಿಸಿಯೂ ಆಗಿತ್ತು. ಅಂಬೇಡ್ಕರ್‌ರವರ ನೇತೃತ್ವದಲ್ಲಿ ದುಂಡು ಮೇಜಿನ ಸಭೆಯಲ್ಲಿ ಪಡೆದುಕೊಂಡಿದ್ದ ʼಪ್ರತ್ಯೇಕ ಚುನಾವಣಾ ಮತಕ್ಷೇತ್ರʼವು ಗಾಂಧಿಯವರ ಉಪವಾಸ ಸತ್ಯಾಗ್ರಹ ಹಾಗೂ ಹಿಂದೂ ಮಹಾಸಭಾದ ವಿರೋಧದಿಂದ ಕೈತಪ್ಪಿತು. ಈ ಸಂದರ್ಭದಲ್ಲಿಯೇ ಅಸ್ಪೃಶ್ಯರನ್ನು 5 ವರ್ಷಗಳ ಕಾಲ ಸತಾಯಿಸಿ ದೇಗುಲ ಪ್ರವೇಶ ನೀಡದೆ ಥಳಿಸಿ ಅವಮಾನಿಸಿದ್ದ ಅದೇ ನಾಸಿಕ್‌ನ ʼಯವೋಲಾʼ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರು, ʼಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಮಾತ್ರ ಸಾಯಲಾರೆʼ ಎಂಬ ಮತಾಂತರದ ಘೋಷಣೆ ನೀಡಿದರು. ಅಷ್ಟರವರೆಗೆ ಅಸ್ಪೃಶ್ಯರ ಕುರಿತು ಕಿಂಚಿತ್‌ ಒಳಿತನ್ನೂ ಬಯಸದ ಹಿಂದೂ ಮೇಲ್ಜಾತಿ ಧುರೀಣರು, ಹಿಂದೂ ಮಹಾಸಭಾದವರು, ಸನಾತನವಾದಿಗಳು, ಸಾವರ್ಕರ್‌ ಸೇರಿದಂತೆ ಬಲಪಂಥೀಯ ಚಿಂತಕರು ಹಾಗೂ ಗಾಂಧೀಜಿ-ಕಾಂಗ್ರೆಸ್‌ ಅಸ್ಪೃಶ್ಯರಿಗಾಗಿ ಸಾಲು ಸಾಲಾಗಿ ಮೊಸಳೆ ಕಣ್ಣೀರು ಸುರಿಸಿದರು. ಸಾವರ್ಕರ್‌, ʼಹಿಂದೂ ಧರ್ಮದಿಂದ ಹೊರಹೋಗಲಿರುವ ಅಸ್ಪೃಶ್ಯರು ನಮಗೆ ಲಾಭದಾಯಕವಾಗಿ ಉಳಿಯಲಾರರು. ಅಷ್ಟೇ ಅಲ್ಲದೆ ನಮ್ಮ ಮನೆಯ ವಿಘಟನೆಗೆ ಸರಳ ಸಾಧನಗಳಾಗಿ ಮಾರ್ಪಟ್ಟು ನಮಗೆ ಅಗಾಧ ನಷ್ಟವಾಗುತ್ತದೆʼ ಎಂದು ಗೋಳಾಡಿದರು. ಕಾಂಗ್ರೆಸ್‌ ಮತ್ತು ಗಾಂಧಿಯವರು ಪೂನಾ ಒಪ್ಪಂದದ ನಂತರ ಸ್ಥಾಪಿಸಿದ್ದ ʼಡಿಪ್ರೆಸ್ಡ್‌ ಕ್ಲಾಸಸ್‌ ಲೀಗ್‌ʼ ಹೆಸರನ್ನು ʼಹರಿಜನ ಸೇವಕ ಸಂಘʼ ಎಂದು ಬದಲಾಯಿಸಿ ಅಸ್ಪೃಶ್ಯರನ್ನು ದೇವರ ಮಕ್ಕಳೆಂದು ಕರೆದರು. ಅಸ್ಪೃಶ್ಯತೆಯನ್ನು ನಿವಾರಿಸುವ ಮಾತುಗಳು ಹೆಚ್ಚಾದವು. ಇಷ್ಟಾದರೂ ಮತ್ತೊಂದು ಕಡೆ ʼಸನಾತನ ಧರ್ಮ ಸಭಾʼದ ಸನಾತನವಾದಿಗಳು (ಇವರೊಂದಿಗೆ ಸಾವರ್ಕರ್‌ ಸಂಪರ್ಕದಲ್ಲಿದ್ದು ಸಹಮತ ಹೊಂದಿದ್ದರು) ಅಸ್ಪೃಶ್ಯರಿಗೆ ಯಾವುದೇ ರೀತಿಯ ರಿಯಾಯಿತಿಗಳನ್ನು ನೀಡಬಾರದೆಂದು, ಅಸ್ಪೃಶ್ಯರು ನೀಚಕುಲದವರೆಂದು ಪ್ರತಿಪಾದಿಸುತ್ತಿದ್ದರು.

ಅಂಬೇಡ್ಕರ್‌ರವರು ಬೌದ್ಧಧಮ್ಮಕ್ಕೆ ಮರಳುವುದಾಗಿ 1935ರಲ್ಲಿ ಘೋಷಿಸಿದ ಬಳಿಕ ಅಸ್ಪೃಶ್ಯರನ್ನು ಒಲಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಯಿತು. ಅದರ ಜೊತೆಗೆ ಅಂಬೇಡ್ಕರ್‌ರವರು ಸಮಸ್ತ ಅಸ್ಪೃಶ್ಯರ ನಾಯಕರಲ್ಲ ಎಂದು ಬಿಂಬಿಸಲು ಪ್ರಯತ್ನಿಸಲಾಯಿತು. ಕಾಂಗ್ರೆಸ್‌ ಬಾಬು ಜಗಜೀವನ್‌ ರಾಮ್‌ ಅವರನ್ನೂ, ಹಿಂದೂ ಮಹಾಸಭಾ ಎಂ.ಸಿ.ರಾಜಾರವರನ್ನು ಅಂಬೇಡ್ಕರ್‌ರವರ ವಿರುದ್ಧ ನಿಲ್ಲಿಸಲು ಪ್ರಯತ್ನಿಸಿದವು. ಹಿಂದೂ ಮಹಾಸಭಾವಂತೂ ʼರಾಜಾ-ಮೂಂಜೆʼ (ಅಸ್ಪೃಶ್ಯರು ಮತ್ತು ಹಿಂದೂ ಮೇಲ್ಜಾತಿ) ಒಪ್ಪಂದ ಮಾಡಿಕೊಳ್ಳುವ ಹಂತಕ್ಕೆ ಹೋದರು. ಈ ಎಲ್ಲ ಪರಿಣಾಮಗಳಿಂದಾಗಿ ಅಂಬೇಡ್ಕರ್‌ರವರ ದೂರದೃಷ್ಟಿಯನ್ನು ಅರಿತುಕೊಳ್ಳುವಲ್ಲಿ ಅಮಾಯಕ ಅಸ್ಪೃಶ್ಯ ಜಾತಿಗಳು ಹಿಂದೆ ಬಿದ್ದವು. ಮೇಲ್ಜಾತಿ ಬ್ರಾಹ್ಮಣ-ಬನಿಯಾ ರಾಜಕೀಯದ ಬಲೆಯಲ್ಲಿ ಬಿದ್ದು ಬಲಿಪಶುಗಳಾದವು. ಇಂದಿಗೂ ಅದೇ ಬಲೆಯಲ್ಲಿಯೇ ಹೊರಳಾಡುತ್ತಾ ಹಿಂದೂ ದೇವಾಲಯದ ಪ್ರವೇಶ ಹೋರಾಟವನ್ನು ಮಾಡುತ್ತಿವೆ. ಆದರೆ ಅದೆಷ್ಟೇ ಮಿತಿಗಳನ್ನು ಹೊಂದಿದ್ದರೂ ಮಹಾರಾಷ್ಟ್ರದ ಮಹಾರರು ಅಂಬೇಡ್ಕರ್‌ರವರ ದಾರಿಯಲ್ಲಿ ನಡೆದು ಬೌದ್ಧ ಧಮ್ಮಕ್ಕೆ ಮರಳಿ ʼನವ ಬೌದ್ಧʼರಾಗಿದ್ದಾರೆ. ಅವರ ಮನವೊಲಿಸಲು ಇಂದಿಗೂ ರಾಜಕೀಯ ಪಕ್ಷಗಳು ಯಾವುದೇ ಗುಡಿ ಗೋಪುರಗಳ ಆಶ್ವಾಸನೆ ನೀಡುವುದಿಲ್ಲ. ಏಕೆಂದರೆ ಅಲ್ಲಿನ ಮಹಾರ್‌ ದಲಿತರಿಗೆ ಅವು ಬೇಕಾಗಿಲ್ಲ. 19ನೇ ಶತಮಾನದಲ್ಲಿ ಮಹಾರರಿಗಿಂತಲೂ ಬಹಳ ಮುಂದಿದ್ದ ಚಂಬಾರರು ಇಂದು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದಕ್ಕೆ ಕಾರಣ ಅವರು ಹಿಂದೂ ಧರ್ಮದ ಬಲೆಯಲ್ಲಿರುವುದೂ ಒಂದು ಕಾರಣವಾಗಿದೆ.

ಇದರ ಜೊತೆಗೆ ಅಸ್ಪೃಶ್ಯರು ಪ್ರತ್ಯೇಕ ದೇವಾಲಯಗಳನ್ನು ನಿರ್ಮಿಸುವ ಯೋಚನೆಯನ್ನೂ ಮಾಡಿದ್ದರು. ಚೋಕಾಮೇಳ ದೇವಾಲಯವನ್ನು ನಿರ್ಮಿಸಲು ಹೊರಟಾಗ ಅಂಬೇಡ್ಕರ್‌ ಅದನ್ನು ತಡೆದರು. ಹಿಂದೂ ಧರ್ಮದ ಚೌಕಟ್ಟಿನ ಒಳಗೆ ಕೈಗೊಳ್ಳುವ ಯಾವುದೇ ಸುಧಾರಣೆಯು ಅಸ್ಪೃಶ್ಯರನ್ನು ಮತ್ತೆ ಅಸ್ಪೃಶ್ಯರನ್ನಾಗಿಯೇ ಇರಿಸುತ್ತದೆ ಎಂಬುದು ಅವರಿಗೆ ಮನದಟ್ಟಾಗಿತ್ತು. ಹಾಗಾಗಿ 1956 ಅಕ್ಟೋಬರ್‌ 14 ರಂದು ಬೌದ್ಧ ಧಮ್ಮವನ್ನು ಸ್ವೀಕರಿಸಿ ತಮ್ಮ ಮನೆಗೆ ಮತ್ತೆ ಮರಳಿದರು. ಮರಳುತ್ತಾ ಹಿಂದೂ ದೇವತೆಗಳನ್ನು ಯಾವುದೇ ಕಾರಣಕ್ಕೂ ಪೂಜಿಸಬಾರದೆಂದು ಪ್ರತಿಜ್ಞೆ ಮಾಡಿ, ನವಬೌದ್ಧರಿಂದ ಮಾಡಿಸಿ ಆಧುನಿಕ ಭಾರತದ ಬೌದ್ಧ ಧಮ್ಮದ ಭೋದಿಸತ್ವರಾದರು.

ಇದನ್ನೂ ಓದಿರಿ: ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?

ಇಂದಿಗೂ ದೇವಾಲಯ ಪ್ರವೇಶಕ್ಕಾಗಿ ದಲಿತರು ಮಾಡುತ್ತಿರುವ ಹೋರಾಟಗಳು ಫಲವಿಲ್ಲದ ವ್ಯರ್ಥ ಪ್ರಯತ್ನಗಳೇ ಆಗಿವೆ. ಆಕಸ್ಮಿಕವಾಗಿ ದೇಗುಲ ಪ್ರವೇಶಿಸಿದ ದಲಿತ ಬಾಲಕನನ್ನೇ ಬಿಡದೆ ಥಳಿಸುವ ಹಿಂದೂ ಮೇಲ್ಜಾತಿಗಳು ದಲಿತರ ದೇಗುಲ ಪ್ರವೇಶಕ್ಕಾಗಿನ ಸ್ವಾಭಿಮಾನಿ ಹೋರಾಟವನ್ನು ಎಂದಿಗೂ ಅರ್ಥಮಾಡಿಕೊಳ್ಳಲಾರರು, ಅವಕಾಶ ನೀಡಲಾರರು. ಇಂತಹ ಹೋರಾಟವನ್ನು ಮರೆತುಬಿಡುವುದೇ ದಲಿತ ಸಮೂಹಕ್ಕೆ ಒಳಿತು. ಅಂಬೇಡ್ಕರ್‌ರವರು 1956ರಲ್ಲಿಯೇ ಬುದ್ಧನ ಪ್ರಜ್ಞೆ, ಕರುಣೆ ಮತ್ತು ಮೈತ್ರಿಯನ್ನು ನಮಗೆಲ್ಲ ನೀಡಿ ಹೋಗಿದ್ದಾರೆ. ದಲಿತ ಪ್ರಜ್ಞಾವಂತರು, ಯುವಜನತೆ ಕೇರಿ ಕೇರಿಗಳಲ್ಲಿ ಸಣ್ಣದಾದ ಬುದ್ಧ ವಿಹಾರಗಳನ್ನು ಈಗಿನಿಂದಲೇ ನಿರ್ಮಿಸಿಕೊಂಡು ನಮ್ಮ ಮುಂದಿನ ತಲೆಮಾರಿಗೆ ಬುದ್ಧನಪ್ಪುಗೆಯನ್ನು ಬಿಟ್ಟು ಹೋಗಬೇಕಿದೆ. ಮುಂದಿನ ಪೀಳಿಗೆ ಹಾದಿತಪ್ಪಿ ದೇಗುಲ ಪ್ರವೇಶವೆಂಬ ಔಟ್‌ಡೇಟೆಡ್ ಚಳವಳಿಯನ್ನು ಮಾಡದಂತೆ ನೋಡಿಕೊಳ್ಳಬೇಕಿದೆ. ಶಿಕ್ಷಣ, ರಾಜಕೀಯ, ಆರ್ಥಿಕ ಬೆಳವಣಿಗೆಗಾಗಿ ಹೋರಾಟಗಳನ್ನು ರೂಪಿಸಬೇಕಿದೆ.

ಹಿಂದೊಮ್ಮೆ ದಲಿತ ಸಂಘರ್ಷ ಸಮಿತಿಯ ಹೋರಾಟಗಾರರಿಗೆ ದೇಗುಲ ಪ್ರವೇಶ ಸಿಗದೇ ಇದ್ದಾಗ, ದೇಗುಲದ ಕಡೆ ಮುಖ ಮಾಡಿ ʼದೇವರೇ ನಿನಗೆ ನಮ್ಮ ದರ್ಶನ ಮಾಡುವ ಭಾಗ್ಯವಿಲ್ಲʼ ಎಂದು ತಿರುಗಿ ನೋಡದೆ ಬಂದಿದ್ದರಂತೆ. ಈ ನಡೆ ನಮಗೆಲ್ಲ ಆದರ್ಶವಾಗಬೇಕಿದೆ. ಬಾಬಾಸಾಹೇಬರನ್ನು ದೇಗುಲದ ಹೊರಗೆ ನಿಲ್ಲಿಸಿ ಮೌಂಟ್‌ ಬ್ಯಾಟನ್‌ನನ್ನು ದೇಗುಲಕ್ಕೆ ಬಿಟ್ಟುಕೊಂಡ, ಬಾಬು ಜಗಜೀವನ್‌ ರಾಮ್‌ ಜಿಯವರು ಉದ್ಘಾಟಿಸಿದ ದೇವರ ಮೂರ್ತಿಯನ್ನು ನಂತರ ಗೋಗಂಜಲದಿಂದ ಶುಭ್ರಗೊಳಿಸಿ ಪವಿತ್ರಗೊಳಿಸಿಕೊಂಡ ಹಿಂದೂ ದೇವಾಲಯಗಳು ದಲಿತರಿಗೆ ಅಗತ್ಯವಿಲ್ಲ. ಈ ತಲೆಮಾರಿಗೇ ಸಾಕು.. ದೇವಾಲಯ ಪ್ರವೇಶ ಹೋರಾಟ ನಿಲ್ಲಿಸಬೇಕಿದೆ. ದಲಿತರ ದೇವಾಲಯ ಪ್ರವೇಶ ಹೋರಾಟವನ್ನು ಸಂಘಟಿಸುತ್ತಿರುವ ಕಮ್ಯುನಿಸ್ಟರು, ದ್ರಾವಿಡ ಕಳಗಂ, ದಲಿತ ಸಂಘಟನೆಗಳು ಇನ್ಯಾವುದೇ ಕಾರಣಕ್ಕೂ ದಲಿತರು ಬ್ರಾಹ್ಮಣ್ಯದ ಬಲೆಯಲ್ಲಿ ಬಳಲುವಂತೆ ಮಾಡುವ ದೇವಾಲಯ ಪ್ರವೇಶ ಹೋರಾಟಗಳನ್ನು ಮಾಡದಿರಲಿ. ʼದಲಿತರು ಇನ್ನು ಮುಂದೆ ಹಿಂದೂ ದೇಗುಲಗಳನ್ನೇ ಬಹಿಷ್ಕರಿಸುವಂತಾಗಲಿʼ.

vikas r mourya
ವಿಕಾಸ್‌ ಆರ್‌ ಮೌರ್ಯ
+ posts

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು

ಪೋಸ್ಟ್ ಹಂಚಿಕೊಳ್ಳಿ:

ವಿಕಾಸ್‌ ಆರ್‌ ಮೌರ್ಯ
ವಿಕಾಸ್‌ ಆರ್‌ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...