ಪ್ರೀಮಿಯಂ ಲೇಖನ | ದೇವೇಗೌಡರು ಪತ್ರ ಬರೆಯಬೇಕಿರೋದು ಪ್ರಧಾನಿ ಮೋದಿಯವರಿಗೆ

Date:

93 ವರ್ಷದ ದೇವೇಗೌಡರ ಅನುಭವ ಇನ್ನೂ ಶ್ರೀಮಂತವಾದದ್ದು. ಸಂಸದೀಯ ನಡೆಗಳನ್ನು ಅವರು ಚೆನ್ನಾಗಿ ಬಲ್ಲರು. ಪ್ರಜಾಪ್ರಭುತ್ವ ರಾಷ್ಟ್ರ ನಡೆಯಬೇಕಾದ ದಿಕ್ಕು ದೆಸೆಗಳನ್ನೂ ಅವರು ಬಲ್ಲರು. ಅವರಿಗೆ ವಿರೋಧ ಪಕ್ಷದ ಮಹತ್ವ ಚೆನ್ನಾಗಿಯೇ ಗೊತ್ತಿದೆ. ಹೀಗಿರುವಾಗ ಸೋನಿಯಾ ಅವರಿಗೆ ಪತ್ರಬರೆದು ನೆರವು ಕೇಳುತ್ತಿದ್ದಾರೆ. ಯಾತಕ್ಕೆ ನೆರವು? ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವುದಕ್ಕಾ?

ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಅಪಾರ ಅನುಭವವುಳ್ಳ ಹಿರಿಯ ರಾಜಕಾರಣಿ. ಕರ್ನಾಟಕದ ರಾಜಕಾರಣದಲ್ಲಿ ಅವರು ವಹಿಸಿದ ಪಾತ್ರ ಕೂಡಾ ದೊಡ್ಡದೇ. ಒದಗಿ ಬಂದ ರಾಜಕೀಯ ಅವಕಾಶದಲ್ಲಿ ಈ ರಾಷ್ಟ್ರದ ಪ್ರಧಾನಿಯಾಗಿ ಹನ್ನೊಂದು ತಿಂಗಳು ರಾಷ್ಟ್ರದ ರಾಜಕಾರಣದಲ್ಲಿ ಬೆಳಗಿದವರು. ಮಣ್ಣಿನ ಮಗನೊಬ್ಬ ಪ್ರಧಾನಿಯಾಗಿದ್ದಾನೆಂದು, ದೇವೇಗೌಡರನ್ನು ನೋಡಲು ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶಗಳಿಂದ ರೈತರು ತಂಡ ತಂಡವಾಗಿ ಬರುತ್ತಿದ್ದರೆಂಬುದೂ ಇತಿಹಾಸ. ಪ್ರಧಾನಿ ಹುದ್ದೆಯಿಂದ ದೇವೇಗೌಡರು ಕೆಳಗಿಳಿಯುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಅವರು ಮಾಡಿದ ಭಾಷಣ ಅವರ ಪ್ರಬುದ್ಧತೆಯನ್ನೂ, ರಾಜಕೀಯ ಅನುಭವವನ್ನೂ ತೋರುವಂತಿತ್ತು. ಹಳ್ಳಿಯಿಂದ ಆರಂಭಿಸಿದ ದೇವೇಗೌಡರ ರಾಜಕೀಯ ಜೀವನ ದಿಲ್ಲಿಯನ್ನು ಮುಟ್ಟಿದ್ದು ಬಹುದೊಡ್ಡ ಸಾಧನೆಯೇ.

ಹಾಗೆಯೇ ಕರ್ನಾಟಕದ ರಾಜಕೀಯದಲ್ಲಿ ದೇವೇಗೌಡರು ವಹಿಸಿದ ಪಾತ್ರವನ್ನೂ ಮರೆಯಲಾಗುವುದಿಲ್ಲ. ವಿರೋಧ ಪಕ್ಷದ ನಾಯಕರಾಗಿ, ವಿರೋಧಪಕ್ಷಗಳನ್ನು ಒಗ್ಗೂಡಿಸುವಲ್ಲಿ, ವಿರೋಧ ಪಕ್ಷದ ಪಾತ್ರವೇನೆಂಬುದನ್ನು ತೋರಿಸಿಕೊಡುವಲ್ಲಿಯೂ ದೇವೇಗೌಡರ ಕ್ರಿಯಾಶೀಲತೆಯೂ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿಮಾಲಯದೆತ್ತರಕ್ಕೆ ಏರಿದ್ದ ದೇವೇಗೌಡರು ಪ್ರಪಾತಕ್ಕೆ ಬಿದ್ದದ್ದು ಅವರ ಬದುಕಿನ ಬಹುದೊಡ್ಡ ದುರಂತಕ್ಕೆ ಕನ್ನಡಿ ಹಿಡಿಯುತ್ತದೆ.

ಜಾತ್ಯತೀತ ಜನತಾದಳವನ್ನು ರಾಷ್ಟ್ರಮಟ್ಟದಲ್ಲಿ ನಿಲ್ಲಿಸಲು ಹೋದ ದೇವೇಗೌಡರು ನಿಧಾನಕ್ಕೆ ಈ ಪಕ್ಷ ಕುಗ್ಗುತ್ತಾ ಹೋಗುವುದಕ್ಕೂ ಕಾರಣರಾದರು. ಅನೇಕರು ಪಕ್ಷವನ್ನು ಬಿಟ್ಟು ದೇವೇಗೌಡರಿಂದ ದೂರ ಹೋದರು. ಇದಕ್ಕೆ ಮುಖ್ಯ ಕಾರಣ, ದೇವೇಗೌಡರ ಕುಟುಂಬ

ಪ್ರೀತಿ. ಮಕ್ಕಳು, ಮೊಮ್ಮಕ್ಕಳು, ಅಳಿಯ, ಸೊಸೆ ಹೀಗೆ ಕುಟುಂಬ ವ್ಯಾಮೋಹಿತರಾದ ದೇವೇಗೌಡರು ಈ ಮೋಹದಿಂದ ತಪ್ಪಿಸಿಕೊಳ್ಳಲಾರದೆ ಹೋದರು. ಜಾತ್ಯತೀತವಾಗಿ ಮುನ್ನಡೆಯಬೇಕಾಗಿದ್ದ ರಾಜಕೀಯ ಪಕ್ಷವೊಂದು ಜಾತಿಯ ಸೀಮಾರೇಖೆಗಳನ್ನು ಮೀರಲಾಗದೆ ಕುಗ್ಗುತ್ತ ಹೋಯಿತು. ಕೊನೆಗೆ ಕುಟುಂಬಕ್ಕೆ ಮಾತ್ರ ಸೀಮಿತವಾದ ಪಕ್ಷವೂ ಆಯಿತು. ಈ ಹಂತದಲ್ಲಿ ಪಕ್ಷದ ಉಳಿವೇ ದೊಡ್ಡ ಸವಾಲಾಗಿ ದೇವೇಗೌಡರ ಮುತ್ಸದ್ದಿತನ ಪಕ್ಷವನ್ನು ಉಳಿಸಿಕೊಳ್ಳುವುದಕ್ಕೇ ಬಗೆಬಗೆಯ ಸರ್ಕಸ್‌ ಮಾಡುವುದಕ್ಕಷ್ಟೇ ಸೀಮಿತವಾಯಿತು. ಅಧಿಕಾರದ ಲಾಲಸೆಯೂ ಗೌಡರಿಂದ ದೂರವಾಗಲಿಲ್ಲ. ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಚುನಾವಣಾ ಕಣಕ್ಕೆ ಇಳಿಸುವುದು, ಅವರನ್ನು ಗೆಲ್ಲಿಸುವುದು, ಸಾಧ್ಯವಾದರೆ ಸರ್ಕಾರದಲ್ಲಿಅಧಿಕಾರ ಸೂತ್ರವನ್ನು ಹಿಡಿಯುವುದು- ಇಂಥ ಸರ್ಕಸ್ಸಿನಲ್ಲಿ ತೊಡಗಿದ್ದ ಗೌಡರಿಗೆ ಪಕ್ಷವನ್ನು ವಿಶಾಲ ತಳಹದಿಯಲ್ಲಿ ಕಟ್ಟುವುದು, ಪಕ್ಷದ ಘನತೆ, ಗೌರವ ಕಾಪಾಡುವುದು ಇತ್ಯಾದಿ ಬಹುಮುಖ್ಯ ಸಂಗತಿಗಳು ಅಷ್ಟಾಗಿ ಕಾಡಲಿಲ್ಲ. ಕಾಡಿದ್ದರೂ, ಅವನ್ನು ಗೌಣಮಾಡಿದರು. ಇದು ಅವರ ದುರಂತಕ್ಕೆ ಕಾರಣವಾಯಿತು.

kharge rahul

ಮೊನ್ನೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮಾಷೆಯಾಗಿ ಒಂದು ಮುಖ್ಯ ಮಾತನ್ನು ಹೇಳಿದರು- ಗೌಡರ ಪ್ರೀತಿ ನಮ್ಮೊಂದಿಗೆ (ಕಾಂಗ್ರೆಸ್‌ ಪಕ್ಷದೊಂದಿಗೆ), ವಿವಾಹ ಮಾತ್ರ ಮೋದಿ (ಎನ್ ಡಿ ಎ) ಅವರೊಂದಿಗೆ.

ಇದಕ್ಕೆ ದೇವೇಗೌಡರೂ ಉತ್ತರ ಕೊಟ್ಟರು. ಹೌದು, ಸುದೀರ್ಘಕಾಲದ ಹಳೆಯ ಪಕ್ಷವಾದ ಕಾಂಗ್ರೆಸ್‌ ಜೊತೆಗೆ ನನ್ನ ಸಂಬಂಧವಿತ್ತು. ಆದರೆ, ಅದು ನಿಂದಿಸುವ, ಅಪಮಾನಿಸುವ ಪಕ್ಷವಾದದ್ದರಿಂದ ಅದರ ಜೊತೆಗೆ ಸಂಬಂಧವನ್ನು ಹರಿದುಕೊಂಡು ಮೋದಿಯವರೊಂದಿಗೆ ಸಂಬಂಧ ಕಟ್ಟಿಕೊಳ್ಳುವುದು ಅನಿವಾರ್ಯವಾಯಿತು.

ಇವು ತಮಾಷೆಯ ಮಾತುಗಳಾದರೂ, ರಾಜಕೀಯ ಸತ್ಯ ಏನೆಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ತಮ್ಮ ಕುಟುಂಬದ ಹಿತಕಾಯ್ದುಕೊಳ್ಳಲು ದೇವೇಗೌಡರು ಏನನ್ನೂ ಮಾಡಬಲ್ಲರು ಎಂಬ ಸತ್ಯ ಈ ಮಾತುಗಳ ಹಿಂದೆ ಅಡಗಿರುವುದು ತಿಳಿಯುತ್ತದೆ. ಹಾಗೆ ಸಂಬಂಧವನ್ನು ಕಟ್ಟಿಕೊಳ್ಳುವುದಕ್ಕೆ ಜಾತಿ ಧರ್ಮಗಳನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಅಧಿಕಾರವನ್ನು ಗಳಿಸಿಕೊಂಡಿರುವ ಬಿಜೆಪಿಯೇ ಆಗಬೇಕಾಗಿರಲಿಲ್ಲ. ಅಧಿಕಾರದ ಆಸೆಯನ್ನು ಬಿಟ್ಟಿದ್ದರೆ ದೇವೇಗೌಡರು ಚಿಕ್ಕದಾಗಿ ಕುಗ್ಗಿದ್ದರೂ ತಮ್ಮ ಪಕ್ಷವನ್ನು ಸ್ವತಂತ್ರವಾಗಿ ಜಾತ್ಯತೀತ ಪಕ್ಷವಾಗಿ ಮುನ್ನಡೆಸಬಹುದಾಗಿತ್ತು. ದೇವೇಗೌಡರ ಜಾತ್ಯತೀತ ಪದಕ್ಕೆ ಏನು ಅರ್ಥವೊ ಜನರಿಗೆ ತಿಳಿಯುವುದಿಲ್ಲ. ಮಕ್ಕಳಿಗಾಗಿಯೊ, ಮೊಮ್ಮಕ್ಕಳಿಗಾಗಿಯೊ ಮತ್ತೊಮ್ಮೆ ಮತದಾರರ ಬಳಿಗೆ ಬರುವ ದೇವೇಗೌಡರು ತಮ್ಮ ಕಣ್ಣೀರಿನಲ್ಲಿಯೇ ಈ ಪದದ ಅರ್ಥವನ್ನು ತಿಳಿಸಬಹುದು.

ಎರಡನೆಯದಾಗಿ, ಸಂಸತ್ತು ಎನ್ನುವುದು ವಿರೋಧ ಪಕ್ಷಗಳಿಗೆ ಸೇರಿದ್ದು. ಆಡಳಿತ ಪಕ್ಷದ ಕೆಲಸವೇನಿದ್ದರೂ, ಸಂಸತ್ತು ಸರಿಯಾದ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು- ಎಂಬ ಮಾತನ್ನು ಬಾಬಾಸಾಹೇಬ್‌ ಅಂಬೇಡ್ಕರ್‌ ಹೇಳಿದ್ದರು. ಹಾಗೆಯೇ ಇನ್ನೊಂದು ಮುಖ್ಯ ಮಾತನ್ನೂ ಬಾಬಾಸಾಹೇಬ್‌, ಲೋಕಸಭೆಯ ಸ್ಪೀಕರ್‌ ಬಗ್ಗೆ ಹೇಳಿದ್ದರು. ಸ್ಪೀಕರ್‌ ತಟಸ್ಥರಾಗಿರಬೇಕು. ಸರ್ಕಾರದ ಪರವಾಗಿಯೂ ಇರಬಾರದು, ವಿರೋಧ ಪಕ್ಷಗಳ ಪರವಾಗಿಯೂ ಇರಬಾರದು.

ನಮ್ಮ ಸ್ಪೀಕರ್‌ ಓಂ ಬಿರ್ಲಾ ಬಿಜೆಪಿಯವರು. ಆದರೂ, ಅವರು ಅಲಂಕರಿಸುವ ಸ್ಥಾನ ಸ್ಪೀಕರ್‌ ಸ್ಥಾನ. ಇದರ ಮೌಲ್ಯವನ್ನು ಕಾಪಾಡುವ ಹೊಣೆ ಬಿರ್ಲಾ ಅವರದು. ಆದರೆ ಲೋಕಸಭೆಯ ಕಲಾಪಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಓಂ ಬಿರ್ಲಾ ನಡೆ ಅವರ ಸ್ಥಾನಕ್ಕೆ ಒಪ್ಪುವಂತಿದೆಯೇ ಎಂಬ ಪ್ರಶ್ನೆ ಮೇಲಿಂದ ಮೇಲೆ ಎದುರಾಗುವುದು ಸಹಜ.

ʼನೋ, ನೋ, ನೋʼ ಇದು ಬಿರ್ಲಾ ಅವರ ಬಾಯಿಂದ ಸದಾ ಹೊಮ್ಮುವ ಮಾತು. ಇದು ವಿರೋಧ ಪಕ್ಷಗಳ ಸಂಸದರು, ವಿಶೇಷವಾಗಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮಾತು ಆರಂಭಿಸುತ್ತಿದ್ದಂತೆ ಬಿರ್ಲಾ ಅವರು ತಡೆಯೊಡ್ಡುವುದು ಈ ʼನೋ ನೋ ನೋʼಗಳ ಮೂಲಕವೇ. ಯಾರು ಏನನ್ನು ಬೇಕಾದರೂ ಮಾತನಾಡಬಹುದು. ಆದರೆ ಮೋದಿಯವರನ್ನು, ಸರ್ಕಾರವನ್ನು ಪೇಚಿಗೆ ಸಿಕ್ಕಿಸುವಂಥ ಮಾತನ್ನು ಆಡಬಾರದು. ಆಡಳಿತ ಪಕ್ಷದ ಸದಸ್ಯರು ಏನನ್ನೂ ಮಾತನಾಡಬಹುದು. ಅದಕ್ಕೆ ಯಾವ ಸಂಸದೀಯ ನಿಯಮಗಳೂ ಅಡ್ಡಿಬರುವುದಿಲ್ಲ. ಅಗತ್ಯವಿರಲಿ, ಇಲ್ಲದಿರಲಿ ನೆಹರೂ ಹೆಸರನ್ನು ತಂದು ನೆಹರೂ ತೇಜೋವಧೆ ಕಾರ್ಯದಲ್ಲಿ ಪ್ರಧಾನಿಯಾಗಲಿ, ಆಡಳಿತ ಪಕ್ಷದ ಸದಸ್ಯರಾಗಲಿ ತೊಡಗಬಹುದು. ಅದನ್ನು ಸ್ಪೀಕರ್‌ ತಡೆಯುವುದಿಲ್ಲ. ವಿರೋಧ ಪಕ್ಷಗಳು ಮಾತ್ರ ಇಂಥ ಮಾತುಗಳನ್ನು ತಡೆಯಲು ನೋಡಿದಾಗ, ಸ್ಪೀಕರ್‌ ಅವರಿಗೆ ಇದು ದೊಂಬಿಯಾಗಿ ಕಾಣುತ್ತದೆ. ಇದು ನಮ್ಮ ಸ್ಪೀಕರ್‌ ಅವರ ತಾಟಸ್ಥ್ಯ ನೀತಿ.

Om Birla

ಲೋಕಸಭೆಯಲ್ಲಿ ಯಾಕೆ ಗದ್ದಲವಾಯಿತು. ʼದೊಂಬಿʼಯಾಯಿತು?
ವಿರೋಧಪಕ್ಷದ ನಾಯಕರಾಗಿ ರಾಹುಲ್‌ ಗಾಂಧಿ ಎತ್ತಿದ ಪ್ರಶ್ನೆಗಳಾದರೂ ಯಾವುವು?

ಜನರಲ್‌ ಮನೋಜ್‌ ಮುಕುಂದ್‌ ನರವಣೆ, ಅಮೆರಿಕದ ಲೇವಾದೇವಿಗಾರ ಮತ್ತು ಮಕ್ಕಳ ಲೈಂಗಿಕ ಕಿರುಕುಳದ ಅಪರಾಧಿ ಜೆಫ್ರಿ ಎಪ್‌ಸ್ಟೇನ್‌, ನೀರವ್‌ ಮೋದಿ, ಅನಿಲ್‌ ಅಂಬಾನಿ ಮೊದಲಾದವರನ್ನು ಕುರಿತು ರಾಹುಲ್‌ ಗಾಂಧಿ ಅವರು ಬಾಯಿಬಿಡಲು ಅವಕಾಶವೇ ಸಿಕ್ಕದಂತಾಯಿತು. ಆಡಳಿತ ಪಕ್ಷದ ಸಂಸದರು ಗದ್ದಲ ಮಾಡಿದರೆ, ಸ್ಪೀಕರ್‌ ತಮ್ಮದೇ ಆದ ಶೈಲಿಯಲ್ಲಿ, ʼನೋ…ನೋ..ನೋʼ ಹಾಡಿದರು.

ಎಪ್‌ಸ್ಟೀನ್‌ ಫೈಲುಗಳು ಅಪಾಯಕಾರಿಯಾದ ದಾಖಲೆಗಳು. ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಒಮ್ಮೆ ಎಪ್‌ಸ್ಟೀನ್‌ ಅವರನ್ನು ಒಮ್ಮೆ ಭೇಟಿಮಾಡಿದ್ದರು. ಈ ಎಳೆಯನ್ನೇ ಹಿಡಿದು ರಾಹುಲ್‌ ಗಾಂಧಿ ಮಾತನಾಡಲು ನೋಡಿದರು. ಅವರ ಮಾತುಗಳಿಗೆ ಅವಕಾಶವೇ ಸಿಕ್ಕಲಿಲ್ಲ. ಅನಿಲ್‌ ಅಂಬಾನಿ ಎಪ್‌ಸ್ಟೀನ್‌ ಫೈಲುಗಳಲ್ಲಿರುವ ವ್ಯಕ್ತಿ. ಅವರನ್ನು ಇನ್ನೂ ಯಾಕೆ ಜೈಲಿಗೆ ಕಳಿಸಿಲ್ಲ? ಪ್ರಧಾನಿ ಮೋದಿ ಅವರ ಮೇಲೆ ಕೈಗಾರಿಕೋದ್ಯಮದ ಹಿಡಿತ ಬಲವಾಗಿದೆಯೇ ? ಹಾಗೆಯೇ ನೀರವ್‌ ಮೋದಿಯ ವಿಚಾರ. ಇದು ಯಾವುದನ್ನೂ ಮಾತನಾಡಲು ರಾಹುಲ್‌ ಅವರನ್ನು ಬಿಡಲಾಗಲಿಲ್ಲ.

ಅಮೆರಿಕ ಭಾರತದ ಸ್ನೇಹಿತನಾಗಿ ವರ್ತಿಸುತ್ತಿಲ್ಲ, ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ನಾವು ತೈಲವನ್ನು ಯಾರಿಂದ ಕೊಳ್ಳಬೇಕು, ಯಾರಿಂದ ಕೊಳ್ಳಬಾರದು ಎಂದು ನಿರ್ಧರಿಸುವ ಹಂತಕ್ಕೂ ಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಥ ವಿಚಾರಗಳಲ್ಲಿ ಸಮರ್ಥವಾಗಿ ನಡೆದುಕೊಳ್ಳುತ್ತಿಲ್ಲ ಎಂಬ ಟೀಕೆಯನ್ನೂ ಆಡಳಿತ ಪಕ್ಷ ಸಹಿಸಲಿಲ್ಲ. ಸ್ಪೀಕರ್‌ ವಿರೋಧ ಪಕ್ಷದ ನಾಯಕನಿಗೆ ಕೊಡಬೇಕಾದ ಅವಕಾಶವನ್ನು ಕೊಡಲಿಲ್ಲ. ಇದನ್ನು ವಿರೋಧಿಸಿ ವಿರೋಧ ಪಕ್ಷಗಳ ಸಂಸದರು ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು. ಈ ಪ್ರತಿಭಟನೆಯನ್ನು ಗದ್ದಲ ಎಂದು ಪರಿಗಣಿಸಿ ಓಂ ಬಿರ್ಲಾ ಅವರು ವಿರೋಧ ಪಕ್ಷಗಳು ಎಂಟು ಸಂಸದರನ್ನು ಅಮಾನತುಗೊಳಿಸಿದರು. (ಕೆಲವು ದಿನಗಳ ನಂತರ ಈ ಅಮಾನತನ್ನು ತೆಗೆದುಹಾಕಲಾಯಿತು)

ವಿರೋಧ ಪಕ್ಷಗಳು ಬೇರೆ ದಾರಿ ಕಾಣದೆ ರಾಹುಲ್‌ ಅವರ ಮುಂದಾಳುತನದಲ್ಲಿ ಸಂಸತ್ತಿನಲ್ಲಿ ಮತ್ತು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ಮಾಡಿದವು.

ವಿರೋಧ ಪಕ್ಷಗಳು ಮಾಡಬೇಕಾದ ಕೆಲಸವೇ ಇರು. ವಿರೋಧ ಪಕ್ಷಗಳ ನಾಯಕ ರಾಹುಲ್‌ ಗಾಂಧಿ ಎತ್ತಬೇಕಾದ ಪ್ರಶ್ನೆಗಳೂ ಈ ಮಾದರಿಯವೇ. ಇಂಥ ವಿಚಾರಗಳ ಚರ್ಚೆ ಸಂಸತ್ತಿನಲ್ಲಿ ನಡೆಯಬೇಕು. ರಾಹುಲ್‌ ಗಾಂಧಿ ಅವರು ಪ್ರಸ್ತಾಪಿಸುತ್ತಿರುವ ಇಂಥ ಸಂಗತಿಗಳ ಹಿಂದೆ ಏನೇನು ಅಡಗಿದೆ ಎಂಬುದು ದೇಶದ ಜನತೆಯ ಮುಂದೆ ಬರಬೇಕು.

ಈ ಹಂತದಲ್ಲಿ ದೇವೇಗೌಡರು ಕಾಂಗ್ರೆಸ್‌ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ನಿಜಕ್ಕೂ ದೇವೇಗೌಡರಿಗೆ ಸಂಸತ್ತಿನಲ್ಲಿ ನಿಜವಾದ ಚರ್ಚೆ ಆಗುತ್ತಿಲ್ಲ ಎನಿಸಿದ್ದರೆ ಅದು ಯಾಕಾಗಿ, ಯಾರು ಅಡ್ಡಿಪಡಿಸುತ್ತಿದ್ದಾರೆ ಎಂಬುದು ತಿಳಿಯಬೇಕಾಗಿತ್ತು. ಖಂಡಿತಾ ಗೌಡರಿಗೆ ತಿಳಿದಿರುತ್ತದೆ. ಹಾಗಾದಾಗ ಅವರು ಪತ್ರ ಬರೆಯಬೇಕಾದದ್ದು ಪ್ರಧಾನಿ ಮೋದಿಯವರಿಗೆ. ಅಥವಾ ಆಡಳಿತ ಪಕ್ಷದ ನಾಯಕರಿಗೆ. “ನಿಮ್ಮ ಸದಸ್ಯರಿಗೆ ಬುದ್ಧಿಹೇಳಿ ಕಲಾಪವನ್ನು ಸುಗಮಗೊಳಿಸಿ…” ಎಂದು ಹೇಳಬೇಕಾಗಿತ್ತು. ಅದು ಮಾಡದೇ ಸೋನಿಯಾ ಅವರಿಗೆ ಪತ್ರ ಬರೆದಿದ್ದಾರೆ.

“ನಿಮ್ಮ ಶ್ರೀಮಂತ ಅನುಭವವನ್ನು ಬಳಸಿ ಕಾಂಗ್ರೆಸ್‌ ಪಕ್ಷದ ಸಂಸದರಿಗೆ ಮತ್ತು ವಿರೋಧ ಪಕ್ಷದ ಸಂಸದರಿಗೆ ತಿಳಿಯ ಹೇಳಿ, ಸಂಸತ್ತಿನ ಘನತೆ ಮತ್ತು ಗೌರವವನ್ನು ಕಾಯ್ದುಕೊಳ್ಳಲು ನೆರವಾಗಿ” ಎಂಬುದು ಗೌಡರ ಪತ್ರದ ಸಾರಾಂಶ.

93 ವರ್ಷದ ದೇವೇಗೌಡರ ಅನುಭವ ಇನ್ನೂ ಶ್ರೀಮಂತವಾದದ್ದು. ಸಂಸದೀಯ ನಡೆಗಳನ್ನು ಅವರು ಚೆನ್ನಾಗಿ ಬಲ್ಲರು. ಪ್ರಜಾಪ್ರಭುತ್ವ ರಾಷ್ಟ್ರ ನಡೆಯಬೇಕಾದ ದಿಕ್ಕು ದೆಸೆಗಳನ್ನೂ ಅವರು ಬಲ್ಲರು. ಅವರಿಗೆ ವಿರೋಧ ಪಕ್ಷದ ಮಹತ್ವ ಚೆನ್ನಾಗಿಯೇ ಗೊತ್ತಿದೆ. ಹೀಗಿರುವಾಗ ಸೋನಿಯಾ ಅವರಿಗೆ ಪತ್ರಬರೆದು ನೆರವು ಕೇಳುತ್ತಿದ್ದಾರೆ. ಯಾತಕ್ಕೆ ನೆರವು? ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವುದಕ್ಕೆ.

ಅದರ ಮೇಲೆ ತೆರೆ ಎಳೆದು ಗೌಡರು ಹೇಳುವುದೇನು? ʼಸಂಸತ್ತಿನ ಘನತೆ, ಗೌರವʼದ ಮಾತು.

ಗೌಡರು ಒಮ್ಮೆ ಏಕಾಂತದಲ್ಲಿ ಕುಳಿತು ತಮ್ಮ ಒಳಗನ್ನು ಪರೀಕ್ಷಿಸಿಕೊಳ್ಳಬೇಕು. ತಮ್ಮ ಮಕ್ಕಳು, ಮೊಮ್ಮಕ್ಕಳು, ಕುಟುಂಬದವರು ತಮ್ಮ ಕುಟುಂಬದ ಘನತೆ ಗೌರವವನ್ನು ಎಷ್ಟು ಉಳಿಸಿದ್ದಾರೆ ಮತ್ತು ಅದನ್ನು ಎಲ್ಲಿಗೆ ತಂದಿದ್ದಾರೆ. ತಮ್ಮ ಕುಟುಂಬ, ತಮ್ಮ ಸಮಾಜ, ತಮ್ಮ ರಾಜ್ಯ, ನಂತರ ತಮ್ಮ ರಾಷ್ಟ್ರ- ಇವುಗಳ ಘನತೆ ಗೌರವ ಎಲ್ಲಿ, ಯಾರಿಂದ ಹಾಳಾಗಿದೆ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.

ಸೋನಿಯಾ ಅವರಿಗೆ ಬರೆದ ಪತ್ರ, ಕಾಂಗ್ರೆಸ್ಸಿನಲ್ಲಿ ಮಾತ್ರವಲ್ಲ, ವಿರೋಧ ಪಕ್ಷಗಳಲ್ಲಿ ನಗೆ ಉಕ್ಕಿಸಬಹುದು.

ದೇವೇಗೌಡರ ವರ್ಚಸ್ಸು, ಘನತೆಗಳು ಉಳಿದಿದ್ದರೆ, ಅವರು ಮುತ್ಸದ್ದಿಯೇ ಆಗಿದ್ದರೆ. ಅವರು ನೇರವಾಗಿ ವಿರೋಧ ಪಕ್ಷಗಳಿಗೆ ಈ ಪತ್ರ ಬರೆಯಬಹುದಿತ್ತು. ತಮ್ಮ ಮಾತಿನ ಬೆಲೆ ಎಷ್ಟು ಎಂಬುದು ಗೌಡರಿಗೆ ಗೊತ್ತಾಗಿರಬೇಕು.

ಹಾಗಾದರೆ ಸೋನಿಯಾ ಅವರಿಗೆ ಪತ್ರ ಬರೆಯುವ ನಾಟಕ ಗೌಡರು ಯಾಕೆ ಮಾಡಿದರು? ಅದು ಮೋದಿ ಅವರಿಗೆ ಕೊಡೆ ಹಿಡಿಯುವ ನಾಟಕ. ಮೋದಿಯವರ ಸಖ್ಯವನ್ನು ಇನ್ನೂ ಗಟ್ಟಿಮಾಡಿಕೊಳ್ಳುವ ಒಳ ಉದ್ದೇಶ. ಇಂಥ ನಡೆಗಳಿಂದ ಮೋದಿಯವರು ಸಂಪ್ರೀತರಾಗುತ್ತಲೇ ಬಂದಿದ್ದಾರೆಂಬುದು ರಾಜಕೀಯ ಬಲ್ಲವರಿಗೆ ತಿಳಿದಿದೆ.

ಇಂಥ ರಾಜಕೀಯ ಪ್ರಹಸನಗಳು ನಡೆಯುತ್ತಲೇ ಇರುತ್ತವೆ. ರಾಜ್ಯಸಭೆಯಿಂದ ನಿವೃತ್ತರಾಗಿರುವ, ದೇವೇಗೌಡರ ಪ್ರಹಸನ ನಗೆ ಉಕ್ಕಿಸುವುದು ವಿಷಾದದ ಸಂಗತಿ.

G P Basavaraj
ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...

ಪ್ರೀಮಿಯಂ ಲೇಖನ | ಗಾಂಧಿ ಹತ್ಯೆಗೆ ನಿಜವಾದ ಕಾರಣವೇ ಬೇರೆ: ‘ಮುಸ್ಲಿಮರ ಪರ’ ಆರೋಪದಾಚೆಗಿನ ಸತ್ಯ ಏನು?

ಗಾಂಧಿಯವರ ಮೇಲೆ ದ್ವೇಷದ ಬೇರುಗಳನ್ನು ಅರಿಯಲು ಅವರ ರಾಜಕೀಯದ ಸ್ವರೂಪವನ್ನು ಅರಿಯಬೇಕು....