ಯುದ್ಧದಲ್ಲಿ ಮನುಕುಲ ಅನುಭವಿಸುವ ನಷ್ಟ ಲೆಕ್ಕಕ್ಕೇ ಸಿಗದಷ್ಟು ಆಳವಾದುದ್ದು. ಇದು ನಿರಾಕರಿಸುವಂಥದ್ದು ಅಲ್ಲವೇ ಅಲ್ಲ, ಆದರೆ ಈ ದುಃಖದ ಅಗಾಧತೆಯ ನಡುವೆ ಪರಿಸರ ಅನುಭವಿಸುವ ಪರಿಣಾಮ ಹಿನ್ನಲೆಗೆ ಸರಿದುಬಿಡುತ್ತದೆ. ಯುದ್ಧದಿಂದ ಪರಿಸರದ ಮೇಲಾಗುವ ಪರಿಣಾಮವು, ಜಾಗತಿಕ ಮಟ್ಟದಲ್ಲಿ ಗಮನಹರಿಸಬೇಕಾದ ಸಂಕೀರ್ಣ ಮತ್ತು ತುರ್ತು ಸಮಸ್ಯೆಯಾಗಿದೆ ಎಂಬ ಕೂಗು ರಣಕೇಕೆಯ ನಡುವೆ, ವಿಜಯೋತ್ಸವಗಳ ಜಯಕಾರಗಳ ಮುಂದೆ ಕ್ಷೀಣವಾಗಿಬಿಡುತ್ತದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯದವರೊಬ್ಬರು ಹೀಗೊಂದು ಪೋಸ್ಟ್ ಹಾಕಿದ್ದರು, “ನಾನು ನೋಡಿದರೆ ಪರಿಸರ ಸಂರಕ್ಷಣೆಗಾಗಿ ಪಣತೊಟ್ಟವರ ಹಾಗೆ ಜ್ಯೂಸ್ ಕುಡಿಯಲು ಕಾಗದದ ಸ್ಟ್ರಾವನ್ನೇ ಬಳಸುತ್ತೇನೆ. ಆದರೆ, ನಮ್ಮ ವಿಶ್ವ ನಾಯಕರು…” ಎಂದು ಅದರಡಿಯಲ್ಲಿ ಒಂದಷ್ಟು ಬಾಂಬ್‌ಗಳು ಸಿಡಿಯುವ ದೃಶ್ಯಗಳ ಫೋಟೋವನ್ನು ಹಾಕಿಕೊಂಡಿದ್ದರು. ಈ ಪೋಸ್ಟ್ ಕೇವಲ ಒಂದು ವಾಕ್ಯದ್ದಾಗಿರಬಹುದು ಆದರೆ ಅದರ ಒಳಾರ್ಥ ನಿಜಕ್ಕೂ ಗಂಭೀರವಾಗಿ ಚಿಂತಿಸಬೇಕಾದ್ದೇ.
ಪ್ರಕೃತಿಯ ಸೂಕ್ಷ್ಮ ಸಮತೋಲನವನ್ನು ಯುದ್ಧಗಳು ಹಲವು ವಿಧಗಳಲ್ಲಿ ಅಡ್ಡಿಪಡಿಸುತ್ತವೆ. ಯುದ್ದಗಳು ಒಳಗೊಳ್ಳುವ ಭಾರೀ ಪ್ರಮಾಣದ ಇಂಧನದ ಬಳಕೆಯು ಹವಾಮಾನ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತದೆ. ಸಶಸ್ತ್ರ ಸಮರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸುವ ಯುದ್ಧಸಾಮಗ್ರಿಗಳು; ಅದರಲ್ಲಿರುವ ಲೋಹಗಳು, ಯುರೇನಿಯಂ ಮತ್ತು ಸ್ಫೋಟಕ ರಾಸಾಯನಿಕಗಳು; ಇವೆಲ್ಲವೂ ಅತ್ಯಂತ ವಿಷಕಾರಿಯೇ. ಕಡಿಮೆ ಪ್ರಮಾಣದಲ್ಲಿದ್ದರೂ ಸಹ, ಇವು ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಬಲ್ಲವು. ಕಲುಷಿತ ಭೂಮಿಗಳು ಮತ್ತು ಕಲುಷಿತ ಜಲಮೂಲಗಳಿಂದ ಹಿಡಿದು ವಿಷಕಾರಿ ವಸ್ತುಗಳು ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯವರೆಗೆ, ಯುದ್ಧದಲ್ಲಿ ವಿಜಯವಾಗಲೀ ಪರಾಭವವಾಗಲೀ ಹೊತ್ತು ತರುವ ಪರಿಸರ ಹಾನಿ ಅಪಾರ ಮತ್ತು ದೂರಗಾಮಿಯಾಗಿದೆ.
ಯುನೈಟೆಡ್ ಕಿಂಗ್‌ಡಮ್‌ನ ಸ್ವತಂತ್ರ ಸಂಸ್ಥೆಗಳಾದ Scientists for Global Responsibility ಮತ್ತು Conflict and Environment Observatory ನಡೆಸಿದ ಅಧ್ಯಯನಗಳು, ಯುದ್ಧ ಕಾಲದ ಹೊರತಾಗಿಯೂ, ಸೈನ್ಯವು ತರಬೇತಿ, ಉಪಕರಣಗಳ ಉತ್ಪಾದನೆ, ಸಾಗಾಣಿಕೆ ಮುಂತಾದ ಚಟುವಟಿಕೆಗಳು ಸೇರಿದಂತೆ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಶೇಕಡಾ 5.5ರಷ್ಟು ಪಾಲನ್ನು ಹೊಂದಿವೆ ಎಂದು ಅಂದಾಜಿಸುತ್ತದೆ. ಆದರೆ, ಮಿಲಿಟರಿ ಚಟುವಟಿಕೆಗಳಿಂದ ಆಗುವ ಮಾಲಿನ್ಯವನ್ನು ಕ್ಯೋಟೋ ಪ್ರೋಟೋಕಾಲ್ ಆಗಲಿ ಅಥವಾ ಪ್ಯಾರಿಸ್ ಒಪ್ಪಂದವಾಗಲಿ ಸ್ಪಷ್ಟವಾಗಿ ಉಲ್ಲೇಖಿಸುವುದಿಲ್ಲ. ರಾಷ್ಟ್ರೀಯ ಭದ್ರತೆಯಡಿಯಲ್ಲಿ ಅದಕ್ಕೆ ವಿನಾಯಿತಿ ದೊರೆತಿದೆ.
ಜಾಗತಿಕ ಯುದ್ಧಗಳು ಮತ್ತು ಪರಿಸರ ಹಾನಿ
1945ರಲ್ಲಿ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಬಿದ್ದ ಅಣುಬಾಂಬ್‌ಗಳು ಯುದ್ಧದಿಂದ ಪರಿಸರದ ಮೇಲಾಗುವ ದಾಳಿಗೆ ಅತಿದೊಡ್ಡ ಉದಾಹರಣೆಯಾಗಿವೆ. ಅಣುಬಾಂಬ್ ಸ್ಫೋಟದ ನಂತರ ಕಾಣಿಸಿಕೊಂಡ ಭಾರೀ ಬೆಂಕಿ, ಹೊಗೆ, ಧೂಳು ವಾತಾವರಣದಲ್ಲಿ ವ್ಯಾಪಿಸಿ, ಮೋಡಗಳ ಜೊತೆ ಬೆರೆತು ಕಪ್ಪು ಬಣ್ಣದ ಮಳೆ – ಬ್ಲ್ಯಾಕ್ ರೈನ್ ರೂಪದಲ್ಲಿ ಭೂಮಿಗೆ ಹಿಂದಿರುಗಿತು. ಇದು ರೇಡಿಯೋಸಕ್ರಿಯ ಕಣಗಳು ಮಣ್ಣು, ನೀರು ಮತ್ತು ಗಾಳಿಯಲ್ಲಿ ಹರಡಿ ದೀರ್ಘಕಾಲದ ಪರಿಸರ ಮಾಲಿನ್ಯಕ್ಕೆ ಕಾರಣವಾಗುವಂತೆ ಮಾಡಿತು. ಯುದ್ಧಗಳು ಪರಿಸರದ ಮೂಲವನ್ನೇ ಹಾಳು ಮಾಡುತ್ತವೆ ಮತ್ತು ಅದರ ಪರಿಣಾಮಗಳು ತಲೆಮಾರುಗಳವರೆಗೆ ಮುಂದುವರಿಯುತ್ತವೆ ಎಂಬುದನ್ನು ಈ ದಾಳಿ ತೋರಿಸಿತು.

1991ರಲ್ಲಿ ನಡೆದ ಮೊದಲ ಕೊಲ್ಲಿ ಯುದ್ಧದ ಸಮಯದಲ್ಲಿ, ಕುವೈಟ್‌ನಲ್ಲಿ1991ರಲ್ಲಿ ಇರಾಕಿ ಆಕ್ರಮಣ ಪಡೆಗಳಿಂದ ತೈಲ ನಿಕ್ಷೇಪಗಳು ಸುಟ್ಟುಹೋದವು. 600ಕ್ಕೂ ಹೆಚ್ಚು ತೈಲ ಬಾವಿಗಳು ಬೆಂಕಿಗೆ ಆಹುತಿಯಾದವು. ಇದರ ಪರಿಣಾಮವಾಗಿ ಪ್ರತಿದಿನ ಲಕ್ಷಾಂತರ ಟನ್‌ಗಳಷ್ಟು ಮಾಲಿನ್ಯಕಾರಕಗಳು ಬಿಡುಗಡೆಯಾಗುತ್ತಿದ್ದವು. ಗಾಳಿ, ನೀರು ಮತ್ತು ಮಣ್ಣಿನಲ್ಲಿ ಸೇರಿಕೊಳ್ಳುತ್ತಿದ್ದ ಈ ಮಾಲಿನ್ಯಕಾರಕಗಳು ದೀರ್ಘಕಾಲದವರೆಗೂ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಅಪಾಯವನ್ನು ಉಂಟುಮಾಡುತ್ತಲೇ ಇತ್ತು. ಕೇವಲ ಕುವೈಟ್ ಮಾತ್ರವಲ್ಲದೆ ಇದು ಸುತ್ತಮುತ್ತಲಿನ ರಾಜ್ಯಗಳ ಗಾಳಿಯ ಗುಣಮಟ್ಟದ ಮೇಲೂ ಸಾಕಷ್ಟು ಪರಿಣಾಮ ಬೀರಿತು.
2006 ರಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ನಡೆದ 34 ದಿನಗಳ ಕಾಲದ ಯುದ್ಧದಲ್ಲಿ, ಲೆಬನಾನ್‌ನಲ್ಲಿರುವ ವಿದ್ಯುತ್ ಸ್ಥಾವರದ ಮೇಲೆ ನಡೆದ ಬಾಂಬ್ ದಾಳಿಯು ಅಲ್ಲಿನ ತೈಲ ಸಂಗ್ರಹಾಗಾರದಲ್ಲಿದ್ದ 10,000 ದಿಂದ 15,000 ಟನ್‌ಗಳಷ್ಟು ತೈಲವನ್ನು ಮೆಡಿಟರೇನಿಯನ್ ಸಮುದ್ರದ ಪಾಲಾಗುವಂತೆ ಮಾಡಿತು. ಈ ಸಮುದ್ರದಲ್ಲಿ ಸುಮಾರು 10 ಕಿಮೀ ಅಗಲದವರೆಗೆ ತೈಲಪದರ ನಿರ್ಮಾಣವಾಗುವುದರೊಂದಿಗೆ, ಲೆಬನಾನಿನ ಕರಾವಳಿಯ ಹೆಚ್ಚಿನ ಪ್ರದೇಶದ ಮೇಲೆ ದುಷ್ಪರಿಣಾಮ ಬೀರಿತು ಮತ್ತು ಇದು ಸಿರಿಯಾಕ್ಕೂ ವಿಸ್ತರಿಸಿತು. ಈ ತೈಲಸೋರಿಕೆಯು ಸಮುದ್ರ ಪಕ್ಷಿಗಳು ಮತ್ತು ಸಮುದ್ರ ಜೀವಿಗಳ ಸಾವಿಗೆ ಕಾರಣವಾಯಿತು. ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಸಮುದ್ರ ಜೀವಿಗಳ ವಾಸಸ್ಥಾನ ದೀರ್ಘಕಾಲ ಹಾನಿಗೊಳಗಾಯಿತು. ಆದರೆ, ಇಂದೂ ತೈಲ ಟ್ಯಾಂಕರ್‌ಗಳನ್ನು ಹೊತ್ತು ಸಾಗುವ ಹಡಗುಗಳ ಮೇಲೆ ದಾಳಿ ಅವ್ಯಾಹತವಾಗಿ ನಡೆಯುತ್ತಲೇ ಇದೆ.
ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಯುಎಸ್ ಮತ್ತು ಇಸ್ರೇಲಿ ವಿಮಾನಗಳು ಕೊಲ್ಲಿಯನ್ನು ತಲುಪಲು ಮತ್ತು ಇರಾನ್ ಮೇಲೆ ಹಾರಲು ಗಣನೀಯ ಪ್ರಮಾಣದ ಇಂಧನವನ್ನು ಬಳಸುತ್ತಿವೆ. ರಹಸ್ಯ ಬಾಂಬರ್‌ಗಳು ಮತ್ತು ಫೈಟರ್ ಜೆಟ್‌ಗಳನ್ನು ನಿಯೋಜಿಸುವುದರಿಂದ ವಾತಾವರಣಕ್ಕೆ ಗಮನಾರ್ಹ ಪ್ರಮಾಣದ ಭೂಗ್ರಹ-ತಾಪಮಾನಗೊಳಿಸುವ ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಾಗುತ್ತದೆ.
ಮೂಲಗಳ ಪ್ರಕಾರ ಒಂದು ಲೀಟರ್ ಜೆಟ್ ಇಂಧನವನ್ನು ದಹಿಸಿದಾಗ ಅದು ಸುಮಾರು 2.5 ರಿಂದ 2.7 ಕೆಜಿಯಷ್ಟು ಇಂಗಾಲದ ಡೈಆಕ್ಸೈಡನ್ನು ಹೊರಸೂಸುತ್ತದೆ. ಫೈಟರ್ ಜೆಟ್‌ಗಳು, ಸ್ಟೆಲ್ತ್ ಬಾಂಬರ್‌ಗಳು, ಟ್ರಾನ್ಸ್‌ಪೋರ್ಟ್ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಸೇರಿದಂತೆ ಎಲ್ಲಾ ಆಧುನಿಕ ಜೆಟ್ ವಿಮಾನಗಳಲ್ಲಿ ಜೆಟ್ ಇಂಧನವನ್ನು ಬಳಸಲಾಗುತ್ತದೆ. ಕೆಲವೊಂದು ಹೈ ಎಂಡ್ ಫೈಟರ್ ಜೆಟ್‌ಗಳು ಕೆಲವೇ ಕೆಲವು ಗಂಟೆಗಳಲ್ಲಿ ಸಾಮಾನ್ಯ ಕಾರು ಒಂದು ವರ್ಷದಲ್ಲಿ ಹೊರಸೂಸುವ ಪ್ರಮಾಣದಷ್ಟೇ ಇಂಗಾಲದ ಡೈ ಆಕ್ಸೈಡ್ ಅನ್ನು ಹೊರಸೂಸಬಲ್ಲವು.
ಬಾಂಬ್ ದಾಳಿಗಳಲ್ಲಿ ಬಳಸುವ ಜೆಟ್ ವಿಮಾನಗಳ ಇಂಧನದಿಂದ ಹಿಡಿದು ಅವು ಸುಡುವ ತೈಲ ಸಂಗ್ರಹಾಗಾರಗಳಿಂದ ಬರುವ ತೀವ್ರವಾದ ಹೊಗೆಯವರೆಗೆ, ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಪ್ರಕೃತಿ ಮತ್ತು ಹವಾಮಾನದ ಮೇಲೆ ಗಂಭೀರ ಹಾನಿಯನ್ನುಂಟು ಮಾಡುತ್ತಿದೆ. ಮತ್ತು ಕೆಲವು ಅಂದಾಜುಗಳ ಪ್ರಕಾರ, ಕೇವಲ ಉಕ್ರೇನ್ ಯುದ್ಧವೊಂದೇ 300 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಹೆಚ್ಚುವರಿ ಇಂಗಾಲದ ಹೊರಸೂಸುವಿಕೆಯನ್ನು ಉಂಟುಮಾಡಿದೆ.
ಉಕ್ರೇನ್‌ನಲ್ಲಿ, ದೊಡ್ಡ ಪ್ರಮಾಣದ ಭೂ ಪ್ರದೇಶವು ನೆಲಬಾಂಬುಗಳು ಮತ್ತು ಸ್ಫೋಟಗೊಳ್ಳದ ಶಸ್ತ್ರಾಸ್ತ್ರಗಳಿಂದ ಕಲುಷಿತಗೊಳ್ಳುವ ಅಪಾಯದಲ್ಲಿದೆ. ಅದರ ಮಣ್ಣು, ಜಲಮೂಲಗಳು ಮತ್ತು ಅರಣ್ಯಗಳು ಶೆಲ್ ದಾಳಿ, ಬೆಂಕಿ ಮತ್ತು ಪ್ರವಾಹಗಳಿಂದ ಕಲುಷಿತಗೊಂಡಿವೆ. ನೆಲಬಾಂಬುಗಳು ಮತ್ತು ಸ್ಫೋಟಗೊಳ್ಳದ ಶಸ್ತ್ರಾಸ್ತ್ರಗಳನ್ನು ತೆರವುಗೊಳಿಸಲು ದಶಕಗಳೇ ಬೇಕಾಗಬಹುದು ಮತ್ತು ಇದಕ್ಕೆ ಭಾರೀ ಪ್ರಮಾಣದ ಹೂಡಿಕೆಯ ಅಗತ್ಯವಿದೆ. ಈ ತೆರವು ಕಾರ್ಯಾಚರಣೆಗೆ ಸುಮಾರು US$34.6 ಬಿಲಿಯನ್ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈಗಾಗಲೇ ವರ್ಷಗಟ್ಟಲೆ ಯುದ್ಧದಿಂದ ಜರ್ಜರಿತಗೊಂಡಿರುವ ಉಕ್ರೇನ್‌ನಲ್ಲಿ ಪರಿಸರ ಸಂರಕ್ಷಣೆ ಆದ್ಯತೆಯಾದೀತೇ?
ಇದೀಗ ಯುದ್ಧದ ಆರ್ಥಿಕ ಪರಿಣಾಮಗಳು ಪರಿಸರದ ಸಂರಕ್ಷಣೆ ಅಥವಾ ಹವಾಮಾನದ ಬದಲಾವಣೆ ಕುರಿತಾದ ಯಾವುದೇ ಬದ್ಧತೆಗಳನ್ನು ಯುದ್ಧಪೀಡಿತ ದೇಶಗಳು ಹೊರದಂತೆ ಮಾಡಿಬಿಡುತ್ತವೆ. ಈ ರಾಷ್ಟ್ರಗಳು ತಮ್ಮ ಹೊರಸೂಸುವಿಕೆಯ ನಿಯಮಗಳನ್ನು ಇನ್ನಷ್ಟು ಸಡಲಿಸುತ್ತವೆ. ದೇಶಗಳ ಆರ್ಥಿಕ ಅಭಿವೃದ್ಧಿಗೆ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಇನ್ನಷ್ಟು ಜಾಸ್ತಿಯಾಗುತ್ತದೆ. ರಾಷ್ಟ್ರಗಳು ತಮಗಾದ ನಷ್ಟವನ್ನು ಭರಿಸಲು ಇನ್ನಷ್ಟು ಹೆಚ್ಚು ಪಳೆಯುಳಿಕೆ ಇಂಧನಗಳ ರಫ್ತಿಗೆ ಮುಂದಾಗುತ್ತವೆ.
ಯುದ್ಧ ಕಾಲದ ಪರಿಸರ ನೀತಿ ಸಂಹಿತೆ
ಪರಿಸರದ ಮೇಲಾಗುವ ತೀವ್ರ ದಾಳಿಯನ್ನುಗಮನಿಸಿ ಇದನ್ನು ʻಪರಿಸರ ಹತ್ಯಾಕಾಂಡʼ ʻಇಕೋಸೈಡ್ʼ (Ecocide) ಎಂದೇ ಕರೆಯಲಾಯಿತು. ಅಮೆರಿಕದ ಪ್ರಸಿದ್ಧ ಜೀವಶಾಸ್ತ್ರಜ್ಞ ಮತ್ತು ವಿಶೇಷವಾಗಿ ಸಸ್ಯ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ ಆರ್ಥರ್ ಗ್ಯಾಲ್ಸ್ಟನ್ ಈ ಕಲ್ಪನೆಯನ್ನು ಮುಂದಿಟ್ಟ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು.
1970ರಲ್ಲಿ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಸಮಯದಲ್ಲಿ, ಅಮೆರಿಕ ಸೇನೆ ಶತ್ರುಗಳು ಅಡಗಿಕೊಳ್ಳದಂತೆ ಕಾಡುಗಳನ್ನು ನಾಶಮಾಡಲು ʻಏಜೆಂಟ್ ಆರೆಂಜ್ʼ ಎಂಬ ವಿಷಕಾರಿ ರಾಸಾಯನಿಕವನ್ನು ಬಳಸಿತು. ಇದರಿಂದಾಗಿ ಭಾರೀ ಮಟ್ಟದ ಪರಿಸರ ಹಾನಿ ಉಂಟಾಯಿತು. ಮಣ್ಣು ಮತ್ತು ನೀರು ವಿಷಪೂರಿತವಾಯಿತು. ಜನರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು (ಕ್ಯಾನ್ಸರ್, ಜನನ ವೈಕಲ್ಯಗಳು) ಕಾಣಿಸಿಕೊಂಡವು. ಅಪಾರ ಪ್ರಮಾಣದ ಜೀವ ವೈವಿಧ್ಯತೆ (wildlife) ಹಾನಿಗೊಳಗಾಯಿತು̤. ಆರ್ಥರ್ ಗ್ಯಾಲ್ಸ್ಟನ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ವಾಷಿಂಗ್ಟನ್‌ನಲ್ಲಿ ನಡೆದ ಸಭೆಯಲ್ಲಿ ಈ ಪರಿಸರ ನಾಶದ ಭೀಕರತೆಯನ್ನು ಅರ್ಥ ಮಾಡಿಸಲು ಇದಕ್ಕೆ “ecocide” ಪದಬಳಕೆ ಮಾಡಿದರು.
ಇದರ ನಂತರದಲ್ಲಿ ಯುದ್ಧ ಕೇವಲ ಮನುಕುಲ ಮಾತ್ರವಲ್ಲ ಇಡೀ ಜೀವಗೋಳಕ್ಕೇ ಸಂಕಷ್ಟ ತಂದೊಡ್ಡಬಲ್ಲುದು ಎಂಬ ಸತ್ಯ ಎಲ್ಲರ ಅರಿವಿಗೆ ಬಂತು. ಇದರ ನಂತರದಲ್ಲಿ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲು ವಿಶ್ವಸಂಸ್ಥೆ ನಡೆಸಿದ ಮಹತ್ವದ ಸಮ್ಮೇಳನ ರಿಯೋ ಅರ್ಥ್ ಸಮಿಟ್, ಯುದ್ಧವು ಉಂಟುಮಾಡಬಹುದಾದ ಪರಿಸರ ನಾಶದ ಬಗ್ಗೆ ಗಮನಹರಿಸಿತು. ಇಲ್ಲಿ ರೂಪಿಸಲಾದ 21 ನೇ ಶತಮಾನದ ಅಭಿವೃದ್ಧಿ ಯೋಜನೆ ಅಥವಾ ಅಜೆಂಡಾ 21- ʻಯುದ್ಧವು ಸ್ವಭಾವತಃ ಸ್ಥಿರ ಅಭಿವೃದ್ಧಿಗೆ ಹಾನಿಕಾರಕವಾಗಿದೆ. ಆದ್ದರಿಂದ ದೇಶಗಳು ಯುದ್ಧದ ಸಮಯದಲ್ಲಿ ಪರಿಸರವನ್ನು ರಕ್ಷಿಸುವ ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸಬೇಕು ಮತ್ತು ಅಗತ್ಯವಿದ್ದರೆ ಇನ್ನಷ್ಟು ಕಾನೂನುಗಳನ್ನು ರೂಪಿಸಲು ಪರಸ್ಪರ ಸಹಕಾರ ನೀಡಬೇಕುʼ ಎಂದು ಸೂಚಿಸಿತು.

ಯುದ್ಧ ನಿಯಮಗಳನ್ನು ಉಲ್ಲಂಘಿಸಿ ನಡೆದ ಎರಡನೇ ಮಹಾಯುದ್ಧದಲ್ಲಿ ಮಾನವೀಯತೆಯೇ ಇಲ್ಲದೆ ಗಾಯಾಳುಗಳನ್ನು ಮತ್ತು ಸೆರೆಯಾಳುಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿತ್ತು. ಯುದ್ಧಕ್ಕೂ ಒಂದು ಸಂಹಿತೆಬೇಕು, ಅದಕ್ಕೂ ಮಾನವೀಯ ಸ್ಫರ್ಶ ಕೊಡಬೇಕು ಎಂದು 1949ರಲ್ಲಿ ಜಿನೀವಾ ಸಮಾವೇಶವನ್ನು ನಡೆಸಿ ಅಲ್ಲಿ ಕೆಲವೊಂದು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ನಂತರದಲ್ಲಿ ಬದಲಾದ ಯುದ್ಧದ ಸನ್ನಿವೇಶ, ಬಳಸಲಾಗುವ ಆಯುಧಗಳು ಹಾಗು ಸ್ವರೂಪಕ್ಕೆ ಅನುಗುಣವಾಗಿ ಒಪ್ಪಂದಗಳಿಗೆ ಇನ್ನಷ್ಟು ವಿಷಯಗಳನ್ನು 1977ರಲ್ಲಿ ಸೇರಿಸಲಾಯಿತು. ಅದರಲ್ಲಿ ಪ್ರಕೃತಿಗೆ ವ್ಯಾಪಕ , ದೀರ್ಘಕಾಲೀನ ಮತ್ತು ಗಂಭೀರ ಹಾನಿ ಉಂಟುಮಾಡುವ ಉದ್ದೇಶವಿರುವ ಅಥವಾ ಅಂತಹ ಹಾನಿ ಉಂಟಾಗುವ ಸಾಧ್ಯತೆಯಿರುವ ಯುದ್ಧ ವಿಧಾನಗಳು ಅಥವಾ ಆಯುಧಗಳನ್ನು ಬಳಸುವುದನ್ನು ನಿಷೇಧಿಸಲಾಯಿತು.
ಇದೆಲ್ಲದಕ್ಕಿಂತ ಭೀಕರವಾದುದು 1967ರಿಂದ 1972ರವರೆಗೆ ನಡೆದ ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಹವಾಮಾನವನ್ನು ಬದಲಾಯಿಸಿ ಯುದ್ಧದಲ್ಲಿ ಲಾಭ ಪಡೆಯಲುಅಮೇರಿಕಾ ನಡೆಸಿದ ಒಂದು ರಹಸ್ಯ ಕಾರ್ಯಾಚರಣೆ ಆಪರೇಷನ್ ಪಾಪ್ಐಯ್ (Operation Popeye). ಮಳೆಯನ್ನು ಹೆಚ್ಚಿಸಿ, ಮಳೆಗಾಲದ ಅವಧಿಯನ್ನು ವಿಸ್ತರಿಸಿ, ರಸ್ತೆಗಳಲ್ಲಿ ಶತ್ರುಗಳ ಸರಕು ಸಾಗಾಣಿಕೆಯನ್ನು ಅಸ್ತವ್ಯಸ್ತಗೊಳಿಸುವುದು ಇದರ ಮುಖ್ಯ ಗುರಿ. ಇದಕ್ಕಾಗಿ ಅಮೆರಿಕಾ ತನ್ನ ವಿಶೇಷ ವಿಮಾನಗಳ ಮೂಲಕ ಮೋಡಗಳಲ್ಲಿ ರಾಸಾಯನಿಕಗಳನ್ನು ಹರಡಿತು. ಕೆಲವು ವರದಿಗಳ ಪ್ರಕಾರ ಇದರಿಂದಾಗಿ ಮಳೆಯ ಪ್ರಮಾಣ 30 ರಿಂದ 40 ಶೇಕಡಾದವರೆಗೂ ಹೆಚ್ಚಿತು. ಮಳೆಗಾಲ 45 ದಿನಗಳ ಕಾಲ ವಿಸ್ತರಿಸಿತು. ನೆರೆ ಸಮಸ್ಯೆ ಎದುರಾಯಿತು. ಮೊದಲಿಗೆ ಗೋಪ್ಯವಾಗಿದ್ದ ಈ ಕಾರ್ಯಾಚರಣೆ ನಂತರ ಮಾಧ್ಯಮದ ಮೂಲಕ ಬೆಳಕಿಗೆ ಬಂತು. ಹವಾಮಾನವನ್ನೇ ಆಯುಧವನ್ನಾಗಿ ಬಳಸಿದ ಈ ಯುದ್ಧದ ನೈತಿಕತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು.
ನಂತರ 1976ರಲ್ಲಿ ನಡೆದ ENMOD Conventionನಲ್ಲಿ ಯುದ್ಧದಲ್ಲಿ ಅಥವಾ ಯಾವುದೇ ಶತ್ರುತ್ವದ ಉದ್ದೇಶಕ್ಕಾಗಿ ಪರಿಸರವನ್ನು ಆಯುಧವಾಗಿ ಬಳಸುವುದನ್ನು ತಡೆಯಲು ಅಂತರರಾಷ್ಟ್ರೀಯ ಒಪ್ಪಂದವನ್ನೇ ರೂಪಿಸಲಾಯಿತು. ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ಪರಿಸರ ಒಂದು ಮೂಲಭೂತ ವಿಷಯ,ಯುದ್ಧದಲ್ಲೂ ಪರಿಸರವನ್ನು ಪರಿಗಣಿಸಬೇಕು ಎಂದಿದೆ. ಆದರೆ ಈ ಯಾವ ಷರತ್ತು, ಕಾನೂನು, ಕಟ್ಟಳೆ, ಒಪ್ಪಂದ ಯಾವುದನ್ನೂ ತೃಣ ಮಾತ್ರವೂ ಲೆಕ್ಕಿಸದೆ ಯುದ್ಧೋನ್ಮಾದದ ಅಶ್ವಮೇಧ ಓಡುತ್ತಲೇ ಇದೆ.
ಯುದ್ಧದಲ್ಲಿ ಮನುಕುಲ ಅನುಭವಿಸುವ ನಷ್ಟ ಲೆಕ್ಕಕ್ಕೇ ಸಿಗದಷ್ಟು ಆಳವಾದುದ್ದು. ಇದು ನಿರಾಕರಿಸುವಂಥದ್ದು ಅಲ್ಲವೇ ಅಲ್ಲ ಆದರೆ ಈ ದುಃಖದ ಅಗಾಧತೆಯ ನಡುವೆ ಪರಿಸರ ಅನುಭವಿಸುವ ಪರಿಣಾಮ ಹಿನ್ನಲೆಗೆ ಸರಿದುಬಿಡುತ್ತದೆ. ಯುದ್ಧದಿಂದ ಪರಿಸರದ ಮೇಲಾಗುವ ಪರಿಣಾಮವು, ಜಾಗತಿಕ ಮಟ್ಟದಲ್ಲಿ ಗಮನಹರಿಸಬೇಕಾದ ಸಂಕೀರ್ಣ ಮತ್ತು ತುರ್ತು ಸಮಸ್ಯೆಯಾಗಿದೆ ಎಂಬ ಕೂಗು ರಣಕೇಕೆಯ ನಡುವೆ, ವಿಜಯೋತ್ಸವಗಳ ಜಯಕಾರಗಳ ಮುಂದೆ ಕ್ಷೀಣವಾಗಿಬಿಡುತ್ತದೆ. ʻಬಾಂಬ್ ಸ್ಫೋಟʼ ಎಂದರೆ ದೇಶದ ಹೆಮ್ಮೆ ಎನ್ನುವ ಜಿಂಗೋಇಸಂ (ಅಂಧ ದೇಶಭಕ್ತಿ)ಗಳೂ ಪ್ರಕೃತಿಗೆ ಉಂಟಾಗುತ್ತಿರುವ ಹಾನಿ ಕಾಣದಂತೆ ನಮ್ಮ ಕಣ್ಣನ್ನು ಮಂಜಾಗಿಸಿವೆ.
ಯುದ್ಧದಲ್ಲಿ ಗೆಲುವು ಯಾರಿಗೂ ಇಲ್ಲ. ಎವರಿಥಿಂಗ್ ಈಸ್ ಫೇರ್ ಇನ್ ವಾರ್ ಅಲ್ಲ ನಂಥಿಂಗ್ ಈಸ್ ಫೇರ್ ಇನ್ ವಾರ್.

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ




