ಪ್ರೀಮಿಯಂ ಲೇಖನ | ‘ಶಿಯಾ-ಸುನ್ನಿ’ಯಾಗಿ ಚದುರಿದ ಇಸ್ಲಾಂ; ಲಾಭ ಮಾಡಿಕೊಂಡವರಾರು?

Date:

ಮಧ್ಯಪ್ರಾಚ್ಯ ಇಂದು ಬೆಂಕಿಯ ಕಣಿವೆಯಾಗಿ ಪರಿಣಮಿಸಿರುವುದಕ್ಕೆ ಕ್ಷಿಪಣಿ, ಬಾಂಬ್‌ಗಳಷ್ಟೇ ಕಾರಣವಲ್ಲ. ಅದರ ಬೇರುಗಳು ಶತಮಾನಗಳ ಹಿಂದಿನ ಅಧಿಕಾರದ ಹೋರಾಟದಲ್ಲಿ, ಪಂಥೀಯ ವಿಭಜನೆಯ ರಾಜಕಾರಣದಲ್ಲಿ ಮತ್ತು ಆ ಬಿರುಕುಗಳನ್ನು ಸದಾ ಜೀವಂತವಾಗಿಟ್ಟ ಇಸ್ಲಾಂ ವಿರೋಧೀ ಶಕ್ತಿಗಳ ಲಾಭಾಸಕ್ತಿಯಲ್ಲಿದೆ.

ಮನೆಯಂಗಳಗಳಲ್ಲಿ ಬೆಂಕಿ ಉಂಡೆಗಳು, ಬಾನೆತ್ತರಕ್ಕೂ ಹಾಸು ಹೊದ್ದಿರುವ ಹೊಗೆ, ಕ್ಷಣ ಕ್ಷಣಕ್ಕೂ ಕಿವಿಗಡಚಿಕ್ಕುವ ಸದ್ದು, ತುರ್ತು ಸೈರನ್‌ಗಳು, ಕ್ಷಿಪಣಿ-ಬಾಂಬುಗಳು, ತಮ್ಮ ಸರದಿ ಯಾವಾಗ ಎಂದು ಎದೆ ಬಡಿತ ಬಿಗಿ ಹಿಡಿದು ಸಾವಿನ ಸರದಿಯಲ್ಲಿ ನಿಂತಿರುವ ನಾಗರಿಕರು.. ಇದು ಸದ್ಯ ಮಧ್ಯಪ್ರಾಚ್ಯದ ಹೃದಯ ವಿದ್ರಾವಕ ದೃಶ್ಯಗಳು. ಅಮೆರಿಕ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ಮೇಲೆ ದಾಳಿ ನಡೆಸಿ ಸರ್ವೋಚ್ಚ ನಾಯಕನನ್ನೂ ಸೇರಿ ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿವೆ. ಮುಸ್ಲಿಂ ರಾಷ್ಟ್ರವೊಂದನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಈ ರಕ್ತಪಾತಕ್ಕೆ ಕಾರಣಗಳು ಇಂದು ನಿನ್ನೆ ಹುಟ್ಟಿಕೊಂಡಿಲ್ಲ. ಮುಸ್ಲಿಂ ಸಮುದಾಯ ಶಿಯಾ-ಸುನ್ನಿಗಳಾಗಿ ಎಂದು ಒಡೆಯಿತೋ ಅಂದಿನಿಂದಲೇ ಶುರುವಾಗಿವೆ.

ದೇಶ-ದೇಶಗಳು ಪರಸ್ಪರ ಯುದ್ಧ ಸಾರಿಕೊಂಡು ಮಣ್ಣಾಗುವ ಹಿಂದಿರುವ ಕಾರಣಗಳು ಅನೇಕ. ಭೂಮಿ, ಸಂಪನ್ಮೂಲ, ಅಧಿಕಾರ, ರಾಜಕೀಯ ಮಹತ್ವಾಕಾಂಕ್ಷೆ.. ಇವೆಲ್ಲವು ಇತಿಹಾಸದಲ್ಲಿ ಯುದ್ಧಗಳನ್ನು ಹುಟ್ಟುಹಾಕಿವೆ. ಆದರೆ ಇಸ್ಲಾಮ್ ಧರ್ಮದೊಳಗಿನ ಒಂದು ದುರಂತವೇನೆಂದರೆ, ಆ ಧರ್ಮದ ಒಳಗೇ ಹುಟ್ಟಿದ ಎರಡು ಪಂಗಡಗಳು ಆ ಧರ್ಮವನ್ನ ಶತಮಾನಗಳ ಕಾಲ ವಿಭಜಿಸಿ ರಕ್ತಪಾತದ ಹಾದಿಗೆ ತಳ್ಳಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆರಂಭದಲ್ಲಿ ವಿಭಜನೆ ಎನ್ನುವುದು ನಾಯಕತ್ವದ ಪ್ರಶ್ನೆಯಾಗಿ ಮೊದಲುಗೊಂಡರೂ, ಕ್ರಮೇಣ ಅದು ಸಂಪೂರ್ಣ ಮುಸ್ಲಿಂ ಜಗತ್ತನ್ನು ಒಡೆಯುವ ಶಕ್ತಿಯಾಗಿ ಪರಿಣಮಿಸಿದೆ. ಒಂದು ಧರ್ಮದ ಒಳಗಿನ ಈ ಒಳಚೂರು, ಇಡೀ ಧರ್ಮವನ್ನು ಜಗತ್ತಿನ ಮುಂದೆ ಸಂಶಯದ ಕಣ್ಣಿನಿಂದ ನೋಡುವಂತೆ ಮಾಡಿದ್ದು, ಅದು ಇಂದಿಗೂ ಅನೇಕ ಯುದ್ಧದ ಮಷೀನ್‌ಗಳಿಗೆ ಅತ್ಯಂತ ಪರಿಣಾಮಕಾರಿ ಇಂಧನವಾಗಿಯೇ ಉಳಿದಿದೆ.

image 2026 03 02T183152.240

ಒಂದಿಡಿಯಾಗಿ ಬಿಗಿಯಾಗಿದ್ದ ಸಮುದಾಯ ವಿಭಜನೆಯಾದದ್ದು ಯಾವಾಗ?

ಇಸ್ಲಾಮಿನೊಳಗಿನ ಒಳಪಂಗಡಗಳ ವಿಭಜನೆಯ ಪರಿಣಾಮ ಶುರುವಾದದ್ದು ಕ್ರಿ.ಶ. 632ರಲ್ಲಿ ಪ್ರವಾದಿ ಮುಹಮ್ಮದ್ ಅವರ ನಿಧನದ ನಂತರ. ಪ್ರವಾದಿಯ ನಂತರ ಮುಸ್ಲಿಂ ಸಮುದಾಯವನ್ನು ಯಾರು ಮುನ್ನಡೆಸಬೇಕು ಎಂಬ ವಿಚಾರದಲ್ಲಿ ಒಮ್ಮತ ಮೂಡಲಿಲ್ಲ. ಇದರಿಂದ ಇಸ್ಲಾಮ್ ಧರ್ಮದೊಳಗೆ ಎರಡು ವಿಭಿನ್ನ ಚಿಂತನೆಗಳು ರೂಪುಗೊಂಡವು. ಅವೇ ಶಿಯಾ ಮತ್ತು ಸುನ್ನಿ.

ಸುನ್ನಿಗಳು, ಪ್ರವಾದಿಯ ನಂತರ ಸಮುದಾಯದ ಹಿರಿಯರು ಮತ್ತು ಸಹಚರರ ಒಪ್ಪಿಗೆಯಿಂದ ನಾಯಕನನ್ನು ಆಯ್ಕೆ ಮಾಡಬೇಕು ಎಂಬುದನ್ನು ಬಲವಾಗಿ ನಂಬುವವರಾಗಿದ್ದರು. ಈ ಚಿಂತನೆಯಂತೆ ಅಬೂಬಕರ್ ಅವರನ್ನು ಮೊದಲ ಖಲೀಫಾ (ನಾಯಕ) ನಾಗಿ ಆಯ್ಕೆ ಮಾಡಲಾಯಿತು. ನಾಯಕತ್ವವು ದೈವಿಕವಾಗಿ ನಿಗದಿಯಾಗದೆ, ಸಮುದಾಯದ ಒಮ್ಮತದಿಂದ ನಿರ್ಧಾರವಾಗಬೇಕು ಎಂಬುದು ಸುನ್ನಿಗಳ ನಂಬಿಕೆ. ಈ ಸಿದ್ಧಾಂತಕ್ಕೆ ವಿರುದ್ಧವಾಗಿ ಹುಟ್ಟಿಕೊಂಡವರು ಶಿಯಾ ಮುಸ್ಲಿಮರು. ಪ್ರವಾದಿಯ ಅಳಿಯ ಮತ್ತು ಮಾವನ ಮಗನಾದ ಅಲಿ ಇಬ್ನ್ ಅಬೀ ತಾಲಿಬ್ ಅವರೇ ಪ್ರವಾದಿಯ ನಿಜವಾದ ಉತ್ತರಾಧಿಕಾರಿ ಎಂದು ನಂಬಿದರು ಮತ್ತು ಅದನ್ನೇ ಘೋಷಿಸಿಕೊಂಡರು. ಅಲಿ ಅವರಿಗೆ ದೈವಿಕವಾಗಿ ನಾಯಕತ್ವ ನೀಡಲಾಗಿದೆ ಎಂಬ ನಂಬಿಕೆ ಶಿಯಾಗಳದ್ದು. ಈ ಮೂಲಭೂತ ಭಿನ್ನಾಭಿಪ್ರಾಯವೇ ಮುಂದಿನ ಶತಮಾನಗಳಲ್ಲಿ ಗಂಭೀರ ಸಂಘರ್ಷಗಳಿಗೆ ಕಾರಣವಾಯಿತು. ಇಂದಿಗೂ ಮುಂದುವರೆದಿದೆ.

ಈ ವಿಭಜನೆಯ ಪರಿಣಾಮವಾಗಿ ಇಸ್ಲಾಮಿನ ಇತಿಹಾಸದಲ್ಲಿ ಅನೇಕ ರಾಜಕೀಯ ಮತ್ತು ಸೈನಿಕ ಸಂಘರ್ಷಗಳು ನಡೆದವು. ಅದರಲ್ಲೂ ಕ್ರಿ.ಶ. 680ರಲ್ಲಿ ನಡೆದ ಕರ್ಬಲಾ ಯುದ್ಧ ಶಿಯಾ ಸಮುದಾಯಕ್ಕೆ ಅತ್ಯಂತ ಮಹತ್ವದ್ದು. ಈ ಯುದ್ಧದಲ್ಲಿ ಅಲಿ ಅವರ ಪುತ್ರ ಇಮಾಮ್ ಹುಸೇನ್ ಮತ್ತು ಅವರ ಕುಟುಂಬದವರು ಹತ್ಯೆಗೀಡಾದರು. ಈ ಘಟನೆ ಶಿಯಾಗಳ ಪಾಲಿಗೆ ಅನ್ಯಾಯ, ತ್ಯಾಗ ಮತ್ತು ಶಹಾದತ್‌ (ಹುತಾತ್ಮತೆ)ನ ಶಾಶ್ವತ ಸಂಕೇತವಾಗಿ ಉಳಿಯಿತು. ಇಂದಿಗೂ ಆಶೂರಾ (ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ ಮುಹರ್ರಮ್‌ನ 10ನೇ ದಿನ) ದಿನ ಈ ಘಟನೆಯನ್ನು ಶಿಯಾ ಸಮುದಾಯ ಭಾವನಾತ್ಮಕವಾಗಿ ಸ್ಮರಿಸುತ್ತದೆ.

ಜಗತ್ತು ಆಧುನಿಕ ಕಾಲಕ್ಕೆ ಜರುಗಿದಂತೆ ಈ ಸುನ್ನಿ-ಶಿಯಾ ವಿಭಜನೆಯ ಪರಿಣಾಮಗಳು ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಹೆಚ್ಚು ಕಾಣಿಸಿಕೊಳ್ಳಲಾರಂಭಿಸಿದವು. ಇರಾಕ್ ಮೇಲೆ 2003ರಲ್ಲಿ ಅಮೆರಿಕ ನಡೆಸಿದ ದಾಳಿಯ ನಂತರ, ಅಲ್ಲಿ ಸುನ್ನಿ, ಶಿಯಾ ಮತ್ತು ಕುರ್ಡ್ ಸಮುದಾಯಗಳ ನಡುವೆ ಅಧಿಕಾರಕ್ಕಾಗಿ ತೀವ್ರ ಹೋರಾಟ ಆರಂಭವಾಯಿತು. ಈ ಅಸ್ಥಿರತೆ ಇಡೀ ಪ್ರದೇಶದ ರಾಜಕೀಯ ಸಮತೋಲನವನ್ನು ಕದಡಿತು. ಇದೇ ರೀತಿ, ಸಿರಿಯಾ ಗೃಹಯುದ್ಧ ಮತ್ತು ನಂತರ ಉದ್ಭವಿಸಿದ ಐಸಿಸ್ ನಂತಹ ಉಗ್ರವಾದಿ ಸಂಘಟನೆಗಳು ಈ ವಿಭಜನೆಯನ್ನು ಇನ್ನಷ್ಟು ತೀವ್ರಗೊಳಿಸಿದವು. ಐಸಿಸ್‌, ಸುನ್ನಿ-ಶಿಯಾ ಎರಡೂ ಸಮುದಾಯಗಳನ್ನೂ ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಿತು. ಇದರಿಂದ ಈ ಸಂಘರ್ಷ ಕೇವಲ ಧಾರ್ಮಿಕವಾಗಿರದೆ, ರಾಜಕೀಯ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಅಂಶಗಳಿಂದ ಮತ್ತಷ್ಟು ಸಿಕ್ಕು ಸಿಕ್ಕಾಯಿತು.

WhatsApp Image 2026 03 02 at 6.56.49 PM

ಈ ಒಳಪಂಗಡಗಳ ನಡುವಿನ ಧಾರ್ಮಿಕ ವ್ಯತ್ಯಾಸದ ಮುಖ್ಯಾಂಶಗಳು…

ಪ್ರಮುಖಾಂಶಗಳುಸುನ್ನಿ ಪಂಥ (Sunni)ಶಿಯಾ ಪಂಥ (Shia)
ನಾಯಕಪ್ರವಾದಿಯವರ ನಂತರ ಅವರ ಆಪ್ತ ಅನುಯಾಯಿ ಅಬು ಬಕರ್ ಮೊದಲ ನಾಯಕ ಎಂದು ನಂಬುತ್ತಾರೆ.ಪ್ರವಾದಿಯವರ ಕುಟುಂಬದವರಾದ ಅಲಿ ಇಬ್ನ್ ಅಬಿ ತಾಲಿಬ್ ನನ್ನು ಮೊದಲ ಅಧಿಕೃತ ನಾಯಕ ಎಂದು ನಂಬುತ್ತಾರೆ.
ನಾಯಕತ್ವದ ಹೆಸರುನಾಯಕರನ್ನು ಖಲೀಫಾ’ ಎಂದು ಕರೆಯುತ್ತಾರೆ.ನಾಯಕರನ್ನು ‘ಇಮಾಮ್’ ಎನ್ನುತ್ತಾರೆ
ನಾಯಕತ್ವದ ಆಯ್ಕೆಸಮುದಾಯದ ಒಮ್ಮತ ಮತ್ತು ಅರ್ಹತೆಯ ಆಧಾರದ ಮೇಲೆ ಆಯ್ಕೆ.ನಾಯಕತ್ವವು ದೈವದತ್ತವಾದುದು ಮತ್ತು ಪ್ರವಾದಿಯವರ ರಕ್ತಸಂಬಂಧಿಗಳಿಗೆ ಮಾತ್ರ ಸೀಮಿತ ಎಂದು ನಂಬುತ್ತಾರೆ.
ನಮಾಜ್ (ಪ್ರಾರ್ಥನೆ)ದಿನಕ್ಕೆ 5 ಬಾರಿ ಪ್ರತ್ಯೇಕ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾರೆ.5 ಪ್ರಾರ್ಥನೆಗಳನ್ನು 3 ಅವಧಿಗಳಲ್ಲಿ ಸಂಯೋಜಿಸಿ ಮಾಡುತ್ತಾರೆ.
ಪ್ರಾರ್ಥನೆಯ ಭಂಗಿನಮಾಜ್ ಮಾಡುವಾಗ ಸಾಮಾನ್ಯವಾಗಿ ಕೈಗಳನ್ನು ಎದೆಯ ಮೇಲೆ ಅಥವಾ ಹೊಕ್ಕಳದ ಕೆಳಗೆ ಕಟ್ಟಿಕೊಳ್ಳುತ್ತಾರೆ.ನಮಾಜ್ ಮಾಡುವಾಗ ಕೈಗಳನ್ನು ನೇರವಾಗಿ ಪಕ್ಕಕ್ಕೆ ಬಿಟ್ಟಿರುತ್ತಾರೆ.
ಪ್ರಾರ್ಥನಾ ವಸ್ತುಕಾರ್ಪೆಟ್ ಅಥವಾ ಶುದ್ಧಗೊಳಿಸಿದ ನೆಲದ ಮೇಲೆ ಪ್ರಾರ್ಥನೆ ಮಾಡುತ್ತಾರೆ.ಹಣೆಯನ್ನು ಹೆಚ್ಚಾಗಿ ಕರ್ಬಲಾದ ಮಣ್ಣಿನಿಂದ ಮಾಡಿದ ಬಿಲ್ಲೆಯ (ಮೊಹರ್) ಮೇಲೆ ಇಡುತ್ತಾರೆ.
ಹದೀಸ್‌ (ಪ್ರವಾದಿ ಮುಹಮ್ಮದ್ ರ ಮಾತು, ಕಾರ್ಯ, ಅನುಮೋದನೆ ಅಥವಾ ಗುಣಲಕ್ಷಣಗಳ ವರದಿ/ದಾಖಲೆ) ಆರು ಪ್ರಮುಖ ಹದೀಸ್ ಸಂಗ್ರಹಗಳನ್ನು (ಕುತುಬ್ ಅಲ್-ಸಿತ್ತಾ) ನಂಬುತ್ತಾರೆ.ಪ್ರವಾದಿಯವರ ಕುಟುಂಬದಿಂದ (ಅಹ್ಲ್ ಅಲ್-ಬೈತ್) ಬಂದ ಹದೀಸ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.
ವಿಶೇಷ ಆಚರಣೆಆಶುರಾ ದಿನವನ್ನು ಉಪವಾಸ ಮತ್ತು ಪ್ರಾರ್ಥನೆಯ ದಿನವಾಗಿ ಆಚರಿಸುತ್ತಾರೆ.ಆಶುರಾ ದಿನವನ್ನು ಇಮಾಮ್ ಹುಸೇನ್ ಅವರ ಬಲಿದಾನಕ್ಕಾಗಿ ಶೋಕ ದಿನವನ್ನಾಗಿ ಆಚರಿಸುತ್ತಾರೆ.
ತಾತ್ಕಾಲಿಕ ವಿವಾಹಇದನ್ನು ಇಸ್ಲಾಂನಲ್ಲಿ ನಿಷೇಧಿಸಲಾಗಿದೆ (ಹರಾಮ್) ಎಂದು ನಂಬುತ್ತಾರೆ.‘ನಿಕಾ ಮುತ್ತಾ’ ಎಂಬ ತಾತ್ಕಾಲಿಕ ವಿವಾಹಕ್ಕೆ ಕೆಲವು ಸಂದರ್ಭಗಳಲ್ಲಿ ಮಾನ್ಯತೆ ನೀಡುತ್ತಾರೆ.
ಜನಸಂಖ್ಯೆಸುಮಾರು 85–87%ಸುಮಾರು 13–15%
ವಾಸಿಸುವ ಪ್ರದೇಶಗಳುಅರಬ್ ರಾಷ್ಟ್ರಗಳು, ಟರ್ಕಿ, ಇಂಡೋನೇಶಿಯಾಇರಾನ್, ಇರಾಕ್, ಲೆಬನಾನ್, ಯೆಮೆನ್ (ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿನಗರ)

ವಿಭಜನೆ ಬಳಿಕ ಏನಾಯಿತು?

ವಿಭಜನೆಯ ನಂತರ ಇಸ್ಲಾಮಿಕ್ ಜಗತ್ತು ಎರಡು ವಿಭಿನ್ನ ರಾಜಕೀಯ ಸಿದ್ಧಾಂತಗಳಾಗಿ ಸೀಳಲ್ಪಟ್ಟಿತು. ಸುನ್ನಿ ಪಂಥವು ಉಮಯ್ಯದ್, ಅಬ್ಬಾಸಿದ್ ಮತ್ತು ನಂತರ ಒಟ್ಟೋಮನ್ ಸಾಮ್ರಾಜ್ಯಗಳ ಮೂಲಕ ಸುದೀರ್ಘ ಕಾಲ ಅಧಿಕಾರ ವಹಿಸಿಕೊಂಡಿತ್ತು. ಮತ್ತೊಂದೆಡೆ, ಶಿಯಾ ಪಂಥವು ಸಫಾವಿದ್ ಮತ್ತು ಫಾತಿಮಿದ್ ಅರಸು ಮನೆತನಗಳ ಮೂಲಕ ತನ್ನದೇ ಆದ ಪ್ರಭಾವವನ್ನು ಬೆಳೆಸಿಕೊಂಡಿತು. ಈ ರಾಜಕೀಯ ಪೈಪೋಟಿ ಇಂದಿಗೂ ಸೌದಿ ಅರೇಬಿಯಾ (ಸುನ್ನಿ ಕೇಂದ್ರಿತ) ಮತ್ತು ಇರಾನ್ (ಶಿಯಾ ಕೇಂದ್ರಿತ) ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷಗಳಿಗೆ ಎಡೆಮಾಡಿಕೊಡುತ್ತಲೇ ಇದೆ.

ಧರ್ಮಶಾಸ್ತ್ರ ಮತ್ತು ಕಾನೂನು ವ್ಯವಸ್ಥೆಯಲ್ಲಿ (ಶರಿಯತ್)ನ ಮಹತ್ವದ ಬದಲಾವಣೆಗೂ ಈ ವಿಭಜನೆ ನಾಂದಿ ಹಾಡಿತು.  ಸುನ್ನಿಗಳು ಹನಾಫಿ, ಮಾಲಿಕಿ, ಶಾಫಿ ಮತ್ತು ಹನ್ಬಾಲಿ ಎಂಬ ನಾಲ್ಕು ಪ್ರಮುಖ ಕಾನೂನು ಪಂಥಗಳನ್ನು ರೂಪಿಸಿಕೊಂಡರೆ, ಶಿಯಾಗಳು ಇಮಾಮ್‌ಗಳ ಮಾರ್ಗದರ್ಶನವನ್ನೊಳಗೊಂಡ ‘ಜಾಫರಿ’ ಪಂಥವನ್ನು ಅನುಸರಿಸತೊಡಗಿದರು. ಇದು ಮದುವೆ, ಆಸ್ತಿ ಹಕ್ಕು ಮತ್ತು ದೈನಂದಿನ ಧಾರ್ಮಿಕ ವಿಧಿವಿಧಾನಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಮೂಡಲು ಕಾರಣವಾಯಿತು.

ಅನೇಕ ಶತಮಾನಗಳ ಕಾಲ ಈ ಎರಡು ಪಂಗಡಗಳು ಸಹಬಾಳ್ವೆಯಿಂದ ಬದುಕಿದ್ದರೂ, ರಾಜಕೀಯ ಲಾಭಕ್ಕಾಗಿ ಪಂಥೀಯ ಭಾವನೆಗಳನ್ನು ಕೆಲ ಇಸ್ಲಾಂ ವಿರೋಧಿ ಶಕ್ತಿಗಳು ಪ್ರಚೋದಿಸಿದಾಗ ಹಿಂಸಾಚಾರಗಳು ಸಂಭವಿಸಿದವು. ಇರಾಕ್, ಸಿರಿಯಾ ಮತ್ತು ಯೆಮನ್‌ನಂತಹ ದೇಶಗಳಲ್ಲಿ ಇಂದಿಗೂ ನಡೆಯುತ್ತಿರುವ ಆಂತರಿಕ ಸಂಘರ್ಷಗಳಿಗೆ ಈ ಪಂಥೀಯ ಭಿನ್ನಾಭಿಪ್ರಾಯಗಳೇ ಪ್ರಮುಖ ಕಾರಣವಾಗಿವೆ. ಇದು ಮುಸ್ಲಿಂ ಸಮುದಾಯದ ಒಳಗೇ ಸಾಮಾಜಿಕವಾಗಿ ಎರಡು ಗುಂಪುಗಳನ್ನು ಸೃಷ್ಟಿಸಿತು. ಆಡಿಕೊಳ್ಳುವವರ ಮುಂದೆ ಇಸ್ಲಾಂ ಸಮುದಾಯ ಎಡವಿ ಬಿದ್ದಿತು.

ಶಿಯಾ-ಸುನ್ನಿಗಳಲ್ಲಿ ಬಹಳ ಮುಖ್ಯವಾದ, ಒಡೆದುಕಾಣುವ ಅಂಶವೆಂದರೆ, ಶಿಯಾಗಳು ಪ್ರಾಣತ್ಯಾಗಕ್ಕೆ ಸಿದ್ಧರಾದ, ಆತ್ಮಹತ್ಯಾ ಪ್ರವೃತ್ತಿಯವರು. ಅಗ್ರಸ್ಸೀವ್ ಗುಣದವರು. ಸುನ್ನಿಗಳು ಅದಕ್ಕೆ ವಿರುದ್ಧ. ಇದೂ ಕೂಡ ಬಹುಸಂಖ್ಯಾತ ಸುನ್ನಿಗಳಿಗೆ ನಡುಕ ಹುಟ್ಟಿಸಿ, ಅವರನ್ನು ವಿರೋಧಿಸಲು ಕಾರಣವಾಗಿದೆ.

image 2026 03 02T190712.828

ಭಾರತದಲ್ಲಿರುವ ಶಿಯಾ-ಸುನ್ನಿಗಳೆಷ್ಟು?

ಭಾರತವು ವಿಶ್ವದಲ್ಲೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದು. ಇಲ್ಲಿ ಸುನ್ನಿಗಳು ಬಹುಸಂಖ್ಯಾತರಾಗಿದ್ದಾರೆ. ಒಟ್ಟು ಮುಸ್ಲಿಂ ಜನಸಂಖ್ಯೆಯ ಸುಮಾರು 80% ರಿಂದ 85% ರಷ್ಟು ಸುನ್ನಿ ಸಮುದಾಯದವರಿದ್ದರೆ, ಶಿಯಾ ಪಂಥದವರು ಸುಮಾರು 15% ರಿಂದ 20% ರಷ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದ ಅಧಿಕೃತ ಜನಗಣತಿಯಲ್ಲಿ ಪಂಗಡವಾರು ಅಂಕಿ ಅಂಶಗಳನ್ನು ಪ್ರತ್ಯೇಕವಾಗಿ ದಾಖಲಿಸದಿದ್ದರೂ, ಕೆಲವು ವರದಿಗಳ ಪ್ರಕಾರ ಇರಾನ್‌ ಬಿಟ್ಟರೆ, ಪಾಕಿಸ್ತಾನದಲ್ಲಿ ಅತಿ ಹೆಚ್ಚು ಶಿಯಾಗಳಿದ್ದಾರೆ. ಅಲ್ಲಿನ ಒಟ್ಟು ಮುಸ್ಲಿಂ ಜನಸಂಖ್ಯೆಯಲ್ಲಿ ಸುಮಾರು 2.5 ರಿಂದ 3 ಕೋಟಿ ಶಿಯಾಗಳಿದ್ದಾರೆ. ಕೆಲವು ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಶಿಯಾಗಳ ಸಂಖ್ಯೆ ಹೆಚ್ಚು ಕಡಿಮೆ ಪಾಕಿಸ್ತಾನದಷ್ಟೇ ಇದೆ. ಸುಮಾರು 2.5 ರಿಂದ 4 ಕೋಟಿ.

ಉತ್ತರ ಭಾರತದಲ್ಲಿ ಉತ್ತರ ಪ್ರದೇಶದ ಲಕ್ನೋ ನಗರವು ಶಿಯಾ ಸಂಸ್ಕೃತಿ ಮತ್ತು ಧಾರ್ಮಿಕ ಚಟುವಟಿಕೆಗಳ ಪ್ರಧಾನ ಕೇಂದ್ರ. ಇಲ್ಲಿನ ನವಾಬರ ಕಾಲದ ‘ಬಾರಾ ಇಮಾಂಬಾರ’ ಮತ್ತು ‘ಛೋಟಾ ಇಮಾಂಬಾರ’ಗಳು ಶಿಯಾ ಪಂಥದ ಐತಿಹಾಸಿಕ ಕುರುಹುಗಳಾಗಿವೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಶಿಯಾ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದಾರೆ. ಶ್ರೀನಗರ ಮತ್ತು ಬುಡ್ಗಾಮ್ ಭಾಗಗಳಲ್ಲೂ ಇವರು ಗಣನೀಯ ಸಂಖ್ಯೆಯಲ್ಲಿದ್ದಾರೆ.

ದಕ್ಷಿಣ ಭಾರತದಲ್ಲಿ ಹೈದರಾಬಾದ್ ಶಿಯಾ ಪಂಥದ ಪ್ರಮುಖ ನೆಲೆವೀಡಾಗಿದೆ. ಕುತುಬ್ ಶಾಹಿ ಅರಸರ ಪ್ರಭಾವದಿಂದಾಗಿ ಇಲ್ಲಿ ಶಿಯಾ ಸಂಸ್ಕೃತಿ ಆಳವಾಗಿ ಬೇರೂರಿದೆ. ಗುಜರಾತ್ ಮತ್ತು ಮಹಾರಾಷ್ಟ್ರ (ಮುಂಬೈ) ರಾಜ್ಯಗಳಲ್ಲಿ ಶಿಯಾ ಸಮುದಾಯದ ಉಪಪಂಗಡಗಳಾದ ‘ದಾವೂದಿ ಬೊಹ್ರಾ’ ಮತ್ತು ‘ಖೋಜಾ’ ಸಮುದಾಯದವರು ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಅತ್ಯಂತ ಪ್ರಬಲವಾಗಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿದ್ದ ಬೀದರ್ ಮತ್ತು ಕಲಬುರಗಿ ಭಾಗಗಳಲ್ಲಿ ಶಿಯಾ ಸಮುದಾಯದ ಸಾಂದ್ರತೆ ಹೆಚ್ಚಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ʼಅಲಿನಗರʼದಲ್ಲಿರುವ ಮುಸ್ಲಿಮರೂ ಶಿಯಾಗಳೇ.

ಶಿಯಾ ಮತ್ತು ಸುನ್ನಿ ಪಂಗಡಗಳ ನಡುವಿನ ವಿಭಜನೆಯು ಇಡೀ ಮುಸ್ಲಿಂ ಸಮುದಾಯವನ್ನು ಹೇಗೆ ಬಾಧಿಸಿದೆ ಮತ್ತು ಈ ಬಿರುಕನ್ನು ಹೊರಗಿನ ಶಕ್ತಿಗಳು ಹೇಗೆ ಬಳಸಿಕೊಳ್ಳುತ್ತಿವೆ ಎಂಬುದು ತಿಳಿಯಲೇಬೇಕಾದ ಅಂಶ. ಮುಸ್ಲಿಂ ರಾಷ್ಟ್ರಗಳು ಆಂತರಿಕವಾಗಿ ಕಿತ್ತಾಡಿಕೊಂಡಿದ್ದರೆ, ಅವು ಒಗ್ಗಟ್ಟಾಗಿ ಜಾಗತಿಕ ವೇದಿಕೆಗಳಲ್ಲಿ ದನಿ ಎತ್ತಲು ಸಾಧ್ಯವಾಗುವುದಿಲ್ಲ ಎಂಬುದು ಇಸ್ಲಾಂ ದ್ವೇಷಿಗಳ ಮುಖ್ಯ ತಂತ್ರ.

ಒಂದೇ ತಾಯಿಯ ಮಕ್ಕಳ ನಡುವೆ ಬಿರುಕು: ಇಸ್ಲಾಂ ಎನ್ನುವುದು ಶಾಂತಿ ಮತ್ತು ಸಹೋದರತ್ವದ ಸಂದೇಶ ಸಾರುವ ಧರ್ಮ. ಶಿಯಾ ಸುನ್ನಿಗಳು ಒಂದೇ ತಾಯಿಯ ಮಕ್ಕಳಿದ್ದಂತೆ. ಆದರೆ, ಶತಮಾನಗಳ ಹಿಂದೆ ಅಧಿಕಾರಕ್ಕಾಗಿ ನಡೆದ ಸಂಘರ್ಷಗಳು ಇಂದು ಸಾಮಾನ್ಯ ಜನರ ನಡುವೆಯೂ ಕಂದಕಗಳನ್ನು ನಿರ್ಮಿಸಿವೆ. ಒಂದೇ ಮಸೀದಿಯಲ್ಲಿ ಪ್ರಾರ್ಥಿಸುವಾಗಲೂ ಅನುಮಾನ ಮೂಡುವಂತಾದಾಗ, ಇಸ್ಲಾಂ ಕಲಿಸಿದ ವಿಶ್ವಭ್ರಾತೃತ್ವದ ಆಲದ ಬುಡಕ್ಕೆ ಕೊಡಲಿಪೆಟ್ಟು ಬಿದ್ದಂತಾಗುತ್ತದೆ. ಇರಾನ್ ಶಿಯಾ ರಾಷ್ಟ್ರಗಳ ನಾಯಕತ್ವವನ್ನು ವಹಿಸಿಕೊಂಡಿದ್ದರೆ, ಸೌದಿ ಅರೇಬಿಯಾ ಸುನ್ನಿ ರಾಷ್ಟ್ರಗಳ ಕೇಂದ್ರವಾಗಿದೆ. ಈ ಎರಡು ದೇಶಗಳ ನಡುವಿನ ಭೌಗೋಳಿಕ ರಾಜಕೀಯ ಪೈಪೋಟಿಯು ಸಿರಿಯಾ, ಇರಾಕ್ ಮತ್ತು ಯೆಮನ್‌ನಂತಹ ದೇಶಗಳಲ್ಲಿ ‘ಪ್ರಾಕ್ಸಿ ವಾರ್’ ಅಥವಾ ಪರೋಕ್ಷ ಯುದ್ಧಗಳಿಗೆ ಕಾರಣವಾಗಿದೆ. ಈ ಸಂಘರ್ಷಗಳಿಂದಾಗಿ ಲಕ್ಷಾಂತರ ಅಮಾಯಕ ಮುಸ್ಲಿಮರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಆ ದೇಶಗಳ ಆರ್ಥಿಕತೆ ಸಂಪೂರ್ಣವಾಗಿ ಕುಸಿದುಹೋಗಿರುವುದು ಕಣ್ಣಮುಂದಿದೆ.

ಉಗ್ರವಾದ ಮತ್ತು ಇಸ್ಲಾಮೋಫೋಬಿಯಾ: ಈ ಪಂಥೀಯ ದ್ವೇಷವನ್ನು ಬಳಸಿಕೊಂಡು ಕೆಲವು ತೀವ್ರಗಾಮಿ ಸಂಘಟನೆಗಳು ಹುಟ್ಟಿಕೊಂಡವು. ಒಂದು ಪಂಗಡದವರು ಮತ್ತೊಂದು ಪಂಗಡದವರನ್ನು ʼಧರ್ಮದ್ರೋಹಿಗಳುʼ ಎಂದು ಬಿಂಬಿಸುವ ಮೂಲಕ ಪರಸ್ಪರ ದಾಳಿಗಳನ್ನು ನಡೆಸುತ್ತಿವೆ. ಇಂತಹ ಹಿಂಸಾತ್ಮಕ ಘಟನೆಗಳು ಜಗತ್ತಿನಾದ್ಯಂತ ‘ಇಸ್ಲಾಮೋಫೋಬಿಯಾ’ (ಇಸ್ಲಾಂ ಧರ್ಮದ ಬಗ್ಗೆ ಭಯ) ಹೆಚ್ಚಾಗಲು ಪ್ರಮುಖ ಕಾರಣವಾಗಿವೆ. ಹೊರಗಿನ ಶಕ್ತಿಗಳು ಈ ಉಗ್ರವಾದದ ಘಟನೆಗಳನ್ನು ತೋರಿಸಿ, ಇಡೀ ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡುವಂತೆ ಮತ್ತು ಮುಸ್ಲಿಂ ದೇಶಗಳ ಮೇಲೆ ಆಕ್ರಮಣ ಮಾಡಲು ಕಾರಣಗಳನ್ನು ಹುಡುಕುವಂತೆ ಮಾಡುತ್ತಿವೆ. ಮುಸ್ಲಿಂ ಜಗತ್ತು ಇಂದು ಆಂತರಿಕವಾಗಿ ಕಚ್ಚಾಡುತ್ತಿರುವುದನ್ನು ನೋಡಿ ಇಸ್ಲಾಂ ದ್ವೇಷಿಗಳು ಮುಸಿ ಮುಸಿ ನಗುತ್ತಿದ್ದಾರೆ. ಸಹೋದರರ ನಡುವಿನ ಜಗಳ ನೋಡಿ ಆನಂದಿಸುವ ನೆರೆಮನೆಯವರಂತೆ!

ಸಂಪನ್ಮೂಲಗಳ ಲೂಟಿ: ಪಂಥೀಯ ಸಂಘರ್ಷಗಳಿಂದ ಅಸ್ಥಿರಗೊಂಡ ದೇಶಗಳ ನೈಸರ್ಗಿಕ ತೈಲ ಮತ್ತು ಅನಿಲ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವುದು ಹೊರಗಿನ ಬಲಾಢ್ಯ ರಾಷ್ಟ್ರಗಳಿಗೆ ಸುಲಭವಾಗುತ್ತದೆ. ಮುಸ್ಲಿಂ ಜಗತ್ತು ಆಂತರಿಕವಾಗಿ ಒಡೆದು ಹೋಗಿರುವುದರಿಂದ, ಪ್ಯಾಲೆಸ್ತೀನ್‌ನಂತಹ ಪ್ರಮುಖ ಜಾಗತಿಕ ವಿಷಯಗಳಲ್ಲಿ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟಕ್ಕೆ (OIC) ಸಾಧ್ಯವಾಗುತ್ತಿಲ್ಲ. ಈ ಭೇದಭಾವವು ಮುಸ್ಲಿಂ ಸಮುದಾಯದ ಬೌದ್ಧಿಕ ಮತ್ತು ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸಿ, ಅವರನ್ನು ಜಾಗತಿಕ ರಾಜಕೀಯದ ಆಟದ ಬೊಂಬೆಗಳನ್ನಾಗಿ ಮಾಡಿದೆ.

ಇದನ್ನೂ ಓದಿ: ಪ್ರೀಮಿಯಂ ಲೇಖನ | ಲೈಂಗಿಕ ಗುರುತು ಪಾಶ್ಚಾತ್ಯವಲ್ಲ, ವಾಸ್ತವ; ಇದಕ್ಕೆ ಪುರಾಣಗಳೇ ಸಾಕ್ಷಿ

ಮಧ್ಯಪ್ರಾಚ್ಯ ಇಂದು ಬೆಂಕಿಯ ಕಣಿವೆಯಾಗಿ ಪರಿಣಮಿಸಿರುವುದಕ್ಕೆ ಕ್ಷಿಪಣಿ, ಬಾಂಬ್‌ಗಳಷ್ಟೇ ಕಾರಣವಲ್ಲ. ಅದರ ಬೇರುಗಳು ಶತಮಾನಗಳ ಹಿಂದಿನ ಅಧಿಕಾರದ ಹೋರಾಟದಲ್ಲಿ, ಪಂಥೀಯ ವಿಭಜನೆಯ ರಾಜಕಾರಣದಲ್ಲಿ ಮತ್ತು ಆ ಬಿರುಕುಗಳನ್ನು ಸದಾ ಜೀವಂತವಾಗಿಟ್ಟ ಇಸ್ಲಾಂ ವಿರೋಧೀ ಶಕ್ತಿಗಳ ಲಾಭಾಸಕ್ತಿಯಲ್ಲಿದೆ. ಇಸ್ಲಾಂ ಶಾಂತಿ, ಸಹೋದರತ್ವ ಮತ್ತು ನ್ಯಾಯದ ಸಂದೇಶ ಸಾರಿದ ಧರ್ಮ. ಆದರೆ ಆ ಸಂದೇಶವನ್ನು ಮರೆಮಾಡಿ, ಪಂಥೀಯ ದ್ವೇಷವನ್ನು ಇಂಧನವಾಗಿಸಿಕೊಂಡು ಯುದ್ಧದ ಉಗಿಬಂಡಿ ಬಿಡುತ್ತಿರುವ ಹೊಲಸು ರಾಜಕಾರಣ ಇಂದು ಮುಸ್ಲಿಮರನ್ನೂ ಸೇರಿ ಇಡೀ ಜಗತ್ತಿನ ಮೇಲೆ ಮಂಕು ಕವಿಯುವಂತೆ ಮಾಡುತ್ತಿದೆ. ಧರ್ಮ ಯಾವುದೇ ಇರಲಿ, ಅಲ್ಲಿನ ಒಳಬಿರುಕುಗಳು ಮುಚ್ಚಿಕೊಳ್ಳದ ಹೊರತು, ಹೊರಗಿನ ಶಕ್ತಿಗಳ ಹಸ್ತಕ್ಷೇಪ ನಿಲ್ಲದು.

ಇಸ್ಲಾಂ ದ್ವೇಷಿಗಳು ಬಿತ್ತುತ್ತಿರುವ ‘ಇಸ್ಲಾಮೋಫೋಬಿಯಾ’ ಎಂಬ ವಿಷ ಬೀಜಕ್ಕೆ ಮದ್ದು ಅರೆಯಬೇಕೆಂದರೆ, ಮುಸ್ಲಿಂ ಸಮುದಾಯವು ತನ್ನ ಆಂತರಿಕ ಬಿರುಕುಗಳನ್ನು ಮುಚ್ಚಿಕೊಳ್ಳುವುದು ಅನಿವಾರ್ಯ. ಪಂಥೀಯ ಅಸ್ಮಿತೆಗಿಂತಲೂ ಮನುಷ್ಯತ್ವ ಮತ್ತು ಸಹಬಾಳ್ವೆಯ ಅಸ್ಮಿತೆ ದೊಡ್ಡದು ಎಂದು ಅರಿತಾಗ ಮಾತ್ರ, ಹೊರಗಿನ ಶಕ್ತಿಗಳ ‘ಒಡೆದು ಆಳುವ’ ನೀತಿಗೆ ಮಣ್ಣು ಮುಕ್ಕಿಸಲು ಸಾಧ್ಯ. ಇತಿಹಾಸದ ಗಾಯಗಳನ್ನು ಕೆರೆಯುವ ಬದಲು, ಭವಿಷ್ಯದ ಏಕತೆಗೆ ಅಡಿಪಾಯ ಹಾಕುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ. ಸಹಬಾಳ್ವೆಯ ಶಕ್ತಿಯೇ ಈ ಸಂಘರ್ಷದ ಮಷೀನ್‌ಗಳಿಗೆ ಬ್ರೇಕ್ ಹಾಕಬಲ್ಲದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....