ಪ್ರೀಮಿಯಂ ಲೇಖನ | ಹದಿಹರೆಯದ ಹೊಸ್ತಿಲಲ್ಲೇ ಹಳಿ ತಪ್ಪುತ್ತಿರುವ ಬದುಕು; ಬಾಲಾಪರಾಧದ ಆಳ-ಅಗಲ

Date:

ಇಂದು ಸಿನಿಮಾ, ಸಾಮಾಜಿಕ ಜಾಲತಾಣ ಹಾಗೂ ವಿಡಿಯೋ ಗೇಮ್‌ಗಳಲ್ಲಿ ಹಿಂಸೆಯನ್ನು ಒಂದು ಮಾರಾಟದ ಸರಕಾಗಿ ಬಳಸಲಾಗುತ್ತಿದೆ. ಇದು ಮಕ್ಕಳಲ್ಲಿ 'ಹಿಂಸೆಯೇ ವೀರತ್ವ' ಎಂಬ ತಪ್ಪು ಕಲ್ಪನೆಯನ್ನು ಬಿತ್ತುತ್ತಿದೆ. ಸಿನಿಮಾ ಪೋಸ್ಟರ್‌ಗಳಲ್ಲಿ ಕಾಣುವ ರಕ್ತಸಿಕ್ತ ನಾಯಕನ ಚಿತ್ರ ಮಕ್ಕಳ ವಿವೇಚನಾ ಶಕ್ತಿಯನ್ನು ಮಬ್ಬುಗೊಳಿಸಿ, ಅವರಲ್ಲಿನ ಸೃಜನಶೀಲತೆಯನ್ನು ಕ್ರೌರ್ಯಕ್ಕೆ ತಿರುಗಿಸುತ್ತಿದೆ.

ಬಾಲ್ಯವೆಂದರೆ ಅದೊಂದು ಮುಗ್ಧತೆಯ ಉತ್ತುಂಗ. ಕನಸುಗಳು ರೆಕ್ಕೆ ಬಿಚ್ಚಿ ಹಾರಬೇಕಾದ ವಸಂತಕಾಲ. ಸಂವೇದನೆಗಳು ಚಿಗುರಬೇಕಾದ ಈ ವಸಂತಕಾಲದ ಹೊಸ್ತಿಲಲ್ಲಿ ಹಲವು ಮೊಗ್ಗುಗಳು ಅಪರಾಧದ ಉರಿಬಿಸಿಲಿಗೆ ಸಿಲುಕಿ ಕಮರಿ ಹೋಗುತ್ತಿವೆ. ಕೈಗೆ ಲೇಖನಿ ಹಿಡಿಯಬೇಕಾದ ಬೆರಳುಗಳು ಹದಿಹರೆಯ ಮುಗಿಯುವ ಮೊದಲೇ ಮಾರಕಾಸ್ತ್ರಗಳನ್ನು ಹಿಡಿಯುತ್ತಿರುವುದು, ಹೊಸ ಜಗತ್ತನ್ನು ನೋಡಬೇಕಾದ ಕಣ್ಣುಗಳಲ್ಲಿ ದ್ವೇಷದ ಕೆಂಡ ತುಂಬಿಕೊಳ್ಳುತ್ತಿರುವುದು ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ತಿವಿಯುತ್ತಿದೆ.

ಕುಟುಂಬಗಳೆಂಬ ಗೂಡುಗಳು ಶಿಥಿಲಗೊಳ್ಳುತ್ತಿವೆ. ತಂದೆ-ತಾಯಿಯರ ನಡುವಿನ ಗಲಾಟೆ, ಪ್ರೀತಿಯ ಕೊರತೆ ಮತ್ತು ಪೋಷಕರ ಆರ್ಥಿಕ ಗಳಿಕೆಯ ಬೆನ್ನತ್ತಿದ ಜೀವನಶೈಲಿ ಮಕ್ಕಳನ್ನು ಭಾವನಾತ್ಮಕವಾಗಿ ಅನಾಥರನ್ನಾಗಿ ಮಾಡುತ್ತಿದೆ. ಮನೆಯಲ್ಲಿ ಸಿಗದ ಬೆಲೆ, ಮಾನ್ಯತೆ, ಪ್ರೀತಿ ಹುಡುಕುತ್ತಾ ಹೊರಬರುವ ಮಗು, ಅಡ್ಡದಾರಿಯಲ್ಲಿ ಸಿಗುವ ‘ಹೀರೋಯಿಸಂ’ಗೆ ಮರುಳಾಗುತ್ತಿದೆ. ಕೌಟುಂಬಿಕ ಹಿಂಸೆಯ ನೆರಳಿನಲ್ಲಿ ಬೆಳೆಯುವ ಬಾಲಕನಿಗೆ ‘ಶಕ್ತಿ’ ಎಂದರೆ ‘ಹಿಂಸೆ’ ಎಂಬ ತಪ್ಪು ವ್ಯಾಖ್ಯಾನ ಸೀದಾ ಎದೆಗೆ ಹೊಕ್ಕುತ್ತಿದೆ. ಆಧುನಿಕ ಜಗತ್ತು ಮೌಲ್ಯಗಳಿಗಿಂತ ಹೆಚ್ಚಾಗಿ ವಸ್ತುಗಳಿಗೆ ಬೆಲೆ ನೀಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ‘ಆಡಂಬರದ ಬದುಕು’ ಮಕ್ಕಳಲ್ಲಿ ಅತೃಪ್ತಿಯನ್ನು ಬಿತ್ತುತ್ತಿದೆ. ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಅಡ್ಡದಾರಿ ಹಿಡಿಯುವುದು ತಪ್ಪಲ್ಲ ಎಂಬ ಭಾವನೆ ಬೆಳೆಯುವಂತೆ ಮಾಡುತ್ತಿದೆ. ದೃಶ್ಯ ಮಾಧ್ಯಮಗಳಲ್ಲಿ, ಸಿನಿಮಾಗಳಲ್ಲಿ ಅಪರಾಧವನ್ನು ವಿಜೃಂಭಿಸುವ (Glorification of crime) ಪರಿಯೇ ಹದಿಹರೆಯದವರಲ್ಲಿ ಸರಿ-ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅಳಿಸಿಹಾಕುತ್ತಿದೆ. ‘ಗ್ಯಾಂಗ್‌ಸ್ಟರ್‌’ ಸಂಸ್ಕೃತಿಯು ಅವರಿಗೆ ಸಾಹಸವಾಗಿ ಕಾಣುತ್ತಿದೆಯೇ ಹೊರತು ಅಧಃಪತನದಂತೆ ಅನಿಸುವುದೇ ಇಲ್ಲ.

ಸಮಾಜದ ಸ್ವಾಸ್ಥ್ಯ ಕದಡುವ ಕೃತ್ಯಗಳಲ್ಲಿ 18 ವಯೋಮಾನದ ಕೆಳಗಿನ ಕಿಶೋರಾವಸ್ಥೆಯ ಮಕ್ಕಳು ತೊಡಗಿಸಿಕೊಳ್ಳುವುದನ್ನು ಕಾನೂನುಬದ್ಧವಾಗಿ ‘ಬಾಲಾಪರಾಧ’ (Juvenile Delinquency) ಎಂದು ಗುರುತಿಸಲಾಗುತ್ತದೆ. ಭಾರತದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯು ಇಂತಹ ಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸಲು ‘ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಕಾಯ್ದೆ, 2015’ ಅನ್ನು ಜಾರಿಗೆ ತಂದಿದೆ. ಈ ಕಾಯ್ದೆಯು ದಂಡನೆ ಜತೆಗೆ ಮಗುವಿನ ಮಾನಸಿಕ ಪರಿವರ್ತನೆಗೂ ಒತ್ತು ನೀಡುತ್ತದೆ. ಆದರೆ, ಬದಲಾಗುತ್ತಿರುವ ಅಪರಾಧಗಳ ಸ್ವರೂಪವನ್ನು ಮನಗಂಡು ಈ ಕಾಯ್ದೆಯಲ್ಲಿ ಒಂದು ಕಠಿಣವಾದ ತಿದ್ದುಪಡಿ ತರಲಾಗಿದೆ. ಅದರಂತೆ, 16ರಿಂದ 18 ವರ್ಷದೊಳಗಿನ ಬಾಲಕರು ಕೊಲೆ ಅಥವಾ ಅತ್ಯಾಚಾರದಂತಹ ಅತ್ಯಂತ ಭೀಕರ ಹಾಗೂ ಜಘನ್ಯ ಅಪರಾಧಗಳಲ್ಲಿ (Heinous Crimes) ಭಾಗಿಯಾದಾಗ, ಅವರ ಮಾನಸಿಕ ಪಕ್ವತೆಯನ್ನು ಪರಿಗಣಿಸಿ ಅವರನ್ನು ‘ವಯಸ್ಕರಂತೆ’ ವಿಚಾರಣೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2026 03 13 at 1.07.03 PM

ಬಾಲಾಪರಾಧದ ಕುರಿತು ಆಪ್ತಸಮಾಲೋಚಕ ವಸಂತ್‌ ನಡಹಳ್ಳಿ ಅವರು ಹೀಗೆನ್ನುತ್ತಾರೆ.. “ಯಾವುದೇ ಮಗು ಜನ್ಮತಃ ಕ್ರಿಮಿನಲ್ ಆಗಿರುವುದಿಲ್ಲ. ಸಮಾಜದಲ್ಲಿ ರಾರಾಜಿಸುವ ಹಿಂಸೆಯ ಪ್ರತಿಬಿಂಬ ಮಗುವಿನ ನಡವಳಿಕೆಯಲ್ಲಿ ವ್ಯಕ್ತವಾಗುತ್ತದೆ. ಇಂದು ಸಿನಿಮಾ, ಸಾಮಾಜಿಕ ಜಾಲತಾಣ ಮತ್ತು ವಿಡಿಯೋ ಗೇಮ್‌ಗಳಲ್ಲಿ ಹಿಂಸೆಯನ್ನು ಒಂದು ಮಾರಾಟದ ಸರಕಾಗಿ ಬಳಸಲಾಗುತ್ತಿದೆ. ಇದು ಮಕ್ಕಳಲ್ಲಿ ‘ಹಿಂಸೆಯೇ ವೀರತ್ವ’, ‘ಸಮಸ್ಯೆಗಳಿಗೆ ಅಂತಿಮ ಪರಿಹಾರ ಹಿಂಸೆ’ ಎಂಬ ತಪ್ಪು ಕಲ್ಪನೆಯನ್ನು ಬಿತ್ತುತ್ತಿದೆ. ಸಿನಿಮಾ ಪೋಸ್ಟರ್‌ಗಳಲ್ಲಿ ಕಾಣುವ ರಕ್ತಸಿಕ್ತ ನಾಯಕನ ಬಿಂಬ ಮಕ್ಕಳ ವಿವೇಚನಾ ಶಕ್ತಿಯನ್ನು ಮಬ್ಬುಗೊಳಿಸಿ, ಅವರಲ್ಲಿನ ಸೃಜನಶೀಲತೆಯನ್ನು ಕ್ರೌರ್ಯಕ್ಕೆ ತಿರುಗಿಸುತ್ತಿದೆ. ಮನೆಯಲ್ಲಿ ಪೋಷಕರು ಮಗುವಿನ ತಪ್ಪುಗಳಿಗೆ ದೈಹಿಕ ಶಿಕ್ಷೆ ನೀಡಿದಾಗ, ಮಗು ಸುಧಾರಿಸುವ ಬದಲು ಮೊಂಡುತನವನ್ನು ಮೈಗೂಡಿಸಿಕೊಳ್ಳುತ್ತದೆ. ಸಮಾಜದಲ್ಲಿ ರಾಜಕೀಯದ ಉದ್ರೇಕಕಾರಿ ಭಾಷೆ ಮತ್ತು ‘ಒಳ್ಳೆಯ ಕೆಲಸಕ್ಕೆ ಹಿಂಸೆ ಸಮರ್ಥನೀಯ’ ಎಂಬ ಅಪಾಯಕಾರಿ ಒಪ್ಪಿಗೆಯೂ ಬಾಲಾಪರಾಧಕ್ಕೆ ದೊಡ್ಡ ಪ್ರೇರಣೆಯಾಗುತ್ತಿದೆ.

ಬಾಲಾಪರಾಧ ತಡೆಯಲು ಕಠಿಣ ಕಾನೂನುಗಳಷ್ಟೇ ಸಾಲದು, ಅಸ್ತ್ರಗಳ ಲಭ್ಯತೆಯ ಮೇಲೆ ಸರ್ಕಾರದ ತೀವ್ರ ನಿಗಾ ಹಾಗೂ ಸಮುದಾಯ ಮಟ್ಟದ ಜಾಗೃತಿ ಅತ್ಯಗತ್ಯವಾಗಿದೆ. ಮುಖ್ಯವಾಗಿ ಸ್ಲಂನಂತಹ ಹಿಂದುಳಿದ ಪ್ರದೇಶಗಳಲ್ಲಿ ಹಸಿವು ಮತ್ತು ಅಸ್ತಿತ್ವಕ್ಕಾಗಿ ನಡೆಯುವ ಹೋರಾಟವೇ ಮಕ್ಕಳನ್ನು ಅನಿವಾರ್ಯವಾಗಿ ಅಪರಾಧದ ಹಾದಿಗೆ ತಳ್ಳುತ್ತಿದ್ದು, ಅಂತಹ ವಾತಾವರಣ ನಿರ್ಮಿಸಿದ ಸಮಾಜವೇ ಈ ಹೊಣೆ ಹೊರಬೇಕಿದೆ. ಶಾಲೆಗಳಲ್ಲಿ ನೈತಿಕ ಶಿಕ್ಷಣದ ಜೊತೆಗೆ ಪೋಷಕರು ಮನೆಯಲ್ಲಿ ಮಗುವಿಗೆ ಪ್ರೀತಿ ಮತ್ತು ಹಿತಕರ ವಾತಾವರಣ ನಿರ್ಮಿಸಿಕೊಡಬೇಕು. ಹಿಂಸೆಯು ಶಕ್ತಿಯ ಪ್ರದರ್ಶನವಲ್ಲ ಎಂಬ ಅರಿವು ಮೂಡಿಸುವ ಮೂಲಕ ಮಾತ್ರ ನಾವು ಸುಸ್ಥಿರ ಹಾಗೂ ಅಪರಾಧಮುಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯ.”

ಅಪರಾಧದ ಸ್ವರೂಪ ಮತ್ತು ತೀವ್ರತೆಯ ಆಧಾರದ ಮೇಲೆ ಬಾಲಾಪರಾಧವನ್ನು ಪ್ರಮುಖವಾಗಿ ಈ ರೀತಿ ವಿಂಗಡಿಸಲಾಗುತ್ತದೆ.

1. ಸ್ವರೂಪದ ಆಧಾರದ ಮೇಲಿನ ವಿಧಗಳು

  • ವ್ಯಕ್ತಿಗತ ಬಾಲಾಪರಾಧ(Individual Delinquency): ಇಲ್ಲಿ ಮಗು ಒಬ್ಬನೇ ಸ್ವತಂತ್ರವಾಗಿ ಅಪರಾಧ ಎಸಗುತ್ತಾನೆ. ಇದಕ್ಕೆ ಸಾಮಾನ್ಯವಾಗಿ ಕುಟುಂಬದ ಸಮಸ್ಯೆಗಳು ಅಥವಾ ಮಾನಸಿಕ ಕಾರಣಗಳು ಹಿನ್ನೆಲೆಯಾಗಿರುತ್ತವೆ.
  • ಗುಂಪು ಬಾಲಾಪರಾಧ(Group Delinquency): ಗೆಳೆಯರ ಗುಂಪು ಅಥವಾ ಗ್ಯಾಂಗ್‌ಗಳ ಪ್ರಭಾವದಿಂದ ಮಕ್ಕಳು ಒಟ್ಟಾಗಿ ಸೇರಿ ಅಪರಾಧ ಮಾಡುವುದು. ಇದು ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಅವಲಂಬಿಸಿರುತ್ತದೆ.
  • ಸಂಘಟಿತ ಬಾಲಾಪರಾಧ(Organized Delinquency): ವಯಸ್ಕ ಅಪರಾಧಿಗಳ ಗುಂಪುಗಳೊಂದಿಗೆ ಸೇರಿ ಶಿಸ್ತುಬದ್ಧವಾಗಿ ಅಪರಾಧ ಎಸಗುವುದು. ಉದಾಹರಣೆಗೆ ಮಾದಕ ದ್ರವ್ಯ ಸಾಗಾಟ ಅಥವಾ ಕಳ್ಳತನದ ಜಾಲಗಳು.

2. ಕಾನೂನು ಮತ್ತು ಕೃತ್ಯದ ಆಧಾರದ ಮೇಲಿನ ವಿಧಗಳು

  • ಆಸ್ತಿಪಾಸ್ತಿ ವಿರುದ್ಧದ ಅಪರಾಧಗಳು: ಸಣ್ಣಪುಟ್ಟ ಕಳ್ಳತನ, ಮನೆಗಳ್ಳತನ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಇತ್ಯಾದಿ.
  • ವ್ಯಕ್ತಿಗಳ ವಿರುದ್ಧದ ಅಪರಾಧಗಳು: ಹಲ್ಲೆ ಮಾಡುವುದು, ಬೆದರಿಕೆ ಹಾಕುವುದು ಅಥವಾ ಅತಿರೇಕದ ಸಂದರ್ಭದಲ್ಲಿ ಕೊಲೆ ಪ್ರಯತ್ನಗಳಂತಹ ಕೃತ್ಯಗಳು.
  • ಮಾದಕದ್ರವ್ಯ ವ್ಯಸನ: ಡ್ರಗ್ಸ್ ಸೇವನೆ, ಮಾರಾಟ ಅಥವಾ ಕಾನೂನುಬಾಹಿರ ವಸ್ತುಗಳ ಬಳಕೆಯಲ್ಲಿ ತೊಡಗುವುದು.
  • ಲೈಂಗಿಕ ಅಪರಾಧ: ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಅಶ್ಲೀಲ ಕೃತ್ಯಗಳಲ್ಲಿ ಭಾಗಿಯಾಗುವುದು.
  • ಸೈಬರ್ ಅಪರಾಧ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಧವಿದು. ಸಾಮಾಜಿಕ ಜಾಲತಾಣಗಳಲ್ಲಿ ಇತರರನ್ನು ಪೀಡಿಸುವುದು (Cyber Bullying) ಅಥವಾ ಹ್ಯಾಕಿಂಗ್ ಮಾಡುವುದು.

3. ಹವ್ಯಾಸದ ಆಧಾರದ ಮೇಲೆ

  • ಆಕಸ್ಮಿಕ ಅಪರಾಧಿಗಳು: ಮೊದಲ ಬಾರಿ ಅಥವಾ ಯಾವುದೋ ಒತ್ತಡಕ್ಕೆ ಮಣಿದು ಅಚಾನಕ್ಕಾಗಿ ತಪ್ಪು ಮಾಡುವವರು.
  • ಅಭ್ಯಾಸಬಲದ ಅಪರಾಧಿಗಳು: ಪದೇ ಪದೇ ತಪ್ಪುಗಳನ್ನು ಮಾಡುತ್ತಾ, ಅದನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಂಡಿರುವವರು.

ಮಗು ಒಂದು ಹಸಿಮಣ್ಣಿನಂತೆ, ಸಮಾಜ ಅದಕ್ಕೆ ರೂಪ ನೀಡುವ ಕುಂಬಾರ. ಅಪ್ರಾಪ್ತ ವಯಸ್ಕರು ಅಪರಾಧದ ಸುಳಿಗೆ ಸಿಲುಕದಂತೆ ತಡೆಯುವುದು ಇಡೀ ಸಮಾಜದ ಸಾಮೂಹಿಕ ಹಿತಾಸಕ್ತಿ ಹಾಗೂ ಹೊಣೆ. ಸಮಾಜವು ಒಂದು ಸುಭದ್ರ ಕವಚವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಮಗುವಿನ ವ್ಯಕ್ತಿತ್ವವು ಸನ್ಮಾರ್ಗದಲ್ಲಿ ವಿಕಸನಗೊಳ್ಳಲು ಸಾಧ್ಯ.

ಕೌಟುಂಬಿಕ ಪರಿಸರ ಮತ್ತು ಸಂಸ್ಕಾರ: ಕುಟುಂಬವೇ ಮಗುವಿನ ಪ್ರಥಮ ಪಾಠಶಾಲೆ. ಅಲ್ಲಿ ದೊರೆಯುವ ಸಂಸ್ಕಾರ ಜೀವನದ ದಿಕ್ಸೂಚಿಯಾಗುತ್ತದೆ. ಪೋಷಕರು ಕೇಳಿದ್ದನ್ನು ಕೊಡಿಸಲು ಮಾತ್ರ ಸೀಮಿತವಾಗದೆ, ಮಕ್ಕಳೊಂದಿಗೆ ಭಾವನಾತ್ಮಕ ಅನುಬಂಧ ವೃದ್ಧಿಸಿಕೊಳ್ಳಬೇಕು. ಸುಸಂಸ್ಕೃತ ನಡವಳಿಕೆ, ನೈತಿಕ ಮೌಲ್ಯಗಳು, ಸರಿ-ತಪ್ಪುಗಳ ವಿವೇಚನೆಯನ್ನು ಬಾಲ್ಯದಲ್ಲೇ ಬಿತ್ತಬೇಕು. ಅಸ್ಥಿರ ಕೌಟುಂಬಿಕ ಹಿನ್ನೆಲೆ ಅಥವಾ ಪೋಷಕರ ನಿರ್ಲಕ್ಷ್ಯ ಮಗುವನ್ನು ಅಸುರಕ್ಷತೆಯ ಭಾವನೆಗೆ ತಳ್ಳುತ್ತದೆ. ಇದು ಕಾಲಕ್ರಮೇಣ ಅವರನ್ನು ಸಮಾಜ ವಿರೋಧಿ ಚಟುವಟಿಕೆಗಳತ್ತ ಆಕರ್ಷಿತರಾಗುವಂತೆ ಮಾಡುತ್ತದೆ. ಪ್ರೀತಿ ಮತ್ತು ಶಿಸ್ತು ಮೈಗೂಡಿರುವ ಮನೆಯ ವಾತಾವರಣವು ಬಾಲಾಪರಾಧಕ್ಕೆ ಮೊದಲ ತಡೆಗೋಡೆ.

WhatsApp Image 2026 03 13 at 1.09.06 PM

ಶಿಕ್ಷಣ ಮತ್ತು ಜಾಗೃತಿ: ಶಾಲಾ ಹಂತದಲ್ಲಿಯೇ ಜೀವನ ಕೌಶಲಗಳು ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸುವುದು ಅತ್ಯಗತ್ಯ. ಸಮಾಜವು ಅಪಾಯದ ಅಂಚಿನಲ್ಲಿರುವ, ಅಂದರೆ ಶಾಲೆಯನ್ನು ಅರ್ಧಕ್ಕೆ ಬಿಟ್ಟ ಅಥವಾ ದುರ್ಬಲ ಆರ್ಥಿಕ ಹಿನ್ನೆಲೆಯುಳ್ಳ ಮಕ್ಕಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕ ಮತ್ತು ಆರ್ಥಿಕ ಬೆಂಬಲ ನೀಡಬೇಕು. ಮಾದಕ ವ್ಯಸನ ಹಾಗೂ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಂತಹ ಆಧುನಿಕ ಪಿಡುಗುಗಳ ಕುರಿತು ನಿರಂತರ ಜಾಗೃತಿ ಮೂಡಿಸುವುದು ಅತ್ಯಗತ್ಯ.

ಸಮುದಾಯದ ಪಾಲ್ಗೊಳ್ಳುವಿಕೆ: ಬಾಲಾಪರಾಧವನ್ನು ತಡೆಗಟ್ಟಲು ಸಮುದಾಯದ ಮಟ್ಟದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸೃಜನಾತ್ಮಕ ಹವ್ಯಾಸಗಳಿಗೆ ಪ್ರೋತ್ಸಾಹ ನೀಡುವ ವೇದಿಕೆಗಳು ಸೃಷ್ಟಿಯಾಗಬೇಕು. ಮಗುವಿನ ಶಕ್ತಿಯು ಸೃಜನಶೀಲ ಹಾದಿಯಲ್ಲಿ ಹರಿದಾಗ ಅಪರಾಧದ ಆಲೋಚನೆಗಳಿಗೆ ಆಸ್ಪದವಿರುವುದಿಲ್ಲ. ಅಲ್ಲದೆ, ದಾರಿ ತಪ್ಪಿದ ಮಕ್ಕಳನ್ನು ಸಮಾಜವು ಕಳಂಕಿತರಂತೆ ನೋಡುವ ಬದಲು, ಸಹಾನುಭೂತಿಯಿಂದ ಕಂಡು ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು. ಸಾಮಾಜಿಕ ಬಹಿಷ್ಕಾರ ಅಥವಾ ತಿರಸ್ಕಾರವು ಮಗುವನ್ನು ಮತ್ತಷ್ಟು ದೊಡ್ಡ ಅಪರಾಧಿಯಾಗಿ ಮಾಡಬಲ್ಲದು.

ಬಾಲಾಪರಾಧ ಮುಕ್ತ ಸಮಾಜದ ನಿರ್ಮಾಣವು ನಮ್ಮೆಲ್ಲರ ಆದ್ಯತೆಯಾಗಬೇಕು. ಸಂವೇದನಾಶೀಲ ಪೋಷಕರು, ಜವಾಬ್ದಾರಿಯುತ ಶಿಕ್ಷಕರು ಮತ್ತು ಜಾಗೃತ ನಾಗರಿಕರು ಒಂದಾದಾಗ ಮಾತ್ರ ಮಕ್ಕಳ ಹಾದಿಯನ್ನು ಬೆಳಗಲು ಸಾಧ್ಯ. ಮಗುವನ್ನು ಪ್ರೀತಿಸುವ ಸಮಾಜವಷ್ಟೇ ಪ್ರಗತಿಪರ ರಾಷ್ಟ್ರವನ್ನು ನಿರ್ಮಿಸಬಲ್ಲದು.

ಇದನ್ನೂ ಓದಿ: ಪ್ರೀಮಿಯಂ ಲೇಖನ | ‘ಶಿಯಾ-ಸುನ್ನಿ’ಯಾಗಿ ಚದುರಿದ ಇಸ್ಲಾಂ; ಲಾಭ ಮಾಡಿಕೊಂಡವರಾರು?

2012ರ ನಿರ್ಭಯಾ ಪ್ರಕರಣ, ಮುಂಬೈನ ಶಕ್ತಿ ಮಿಲ್‌ ಪ್ರಕರಣ, 2017ರಲ್ಲಿ ಗುರುಗ್ರಾಮದ ಪ್ರತಿಷ್ಠಿತ ಶಾಲೆಯೊಂದರಲ್ಲಿ 7ನೇ ತರಗತಿಯ ಬಾಲಕನೊಬ್ಬನನ್ನು ಅದೇ ಶಾಲೆಯ 11ನೇ ತರಗತಿಯ ವಿದ್ಯಾರ್ಥಿ ಕೊಲೆ ಮಾಡಿದ ಘಟನೆ, ಬಾಗಲಕೋಟೆ ಮುಧೋಳ ತಾಲೂಕಿನಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಬಾಲಕನೊಬ್ಬ ತನ್ನದೇ ಶಿಕ್ಷಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಬೆಂಗಳೂರಿನಂತಹ ಮಹಾನಗರಗಳ ಕೊಳಗೇರಿಗಳ ಬಾಲಕರು ಮಚ್ಚು, ಬಡಿಗೆ ಹಿಡಿದುಕೊಂಡು ರೀಲ್ಸ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿಕೊಳ್ಳುವುದು, ಶಾಲಾ ಮಕ್ಕಳೇ ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡು, ಹಣಕ್ಕಾಗಿ ಆನ್‌ಲೈನ್‌ನಲ್ಲಿ ಇತರರನ್ನು ಪೀಡಿಸುವುದು, ದೆಹಲಿಯಲ್ಲಿ ಮಗುವೊಂದನ್ನು ಅಪಹರಿಸಿದ್ದ ಅಪ್ರಾಪ್ತನೊಬ್ಬ ಒತ್ತೆಯ ಹಣ ಸಿಗಲಿಲ್ಲವೆಂದು ಮಗುವನ್ನೇ ಕೊಂದು ಜೈಲಿಗೆ ಹೋಗಿದ್ದ, ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡು ಎರಡು ತಿಂಗಳಲ್ಲಿ ಮತ್ತೆ ವೃದ್ಧೆಯೊಬ್ಬರನ್ನು ಕೊಂದ ಪ್ರಕರಣ… ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತದೆ. ಪ್ರತಿಯೊಂದು ಘಟನೆಯೂ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಈ ಕೃತ್ಯಗಳಿಗೆ ಕೇವಲ ಮಕ್ಕಳನ್ನೇ ಹೊಣೆ ಮಾಡದೆ, ಹಿಂಸಾತ್ಮಕ ವಾತಾವರಣ ನಿರ್ಮಿಸಿದ ಸಮಾಜವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬಾಲಾಪರಾಧ ತಡೆಯಲು ಸರ್ಕಾರದ ಮಟ್ಟದಲ್ಲಿ ಆಯುಧಗಳ ಲಭ್ಯತೆಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಶಾಲೆಗಳಲ್ಲಿ ಜೀವನ ಮೌಲ್ಯಗಳ ಬೋಧನೆ ಅನಿವಾರ್ಯವಾಗಿದೆ. ಪೋಷಕರು ಮನೆಯಲ್ಲಿ ಮಗುವಿಗೆ ಪ್ರೀತಿ ಮತ್ತು ಭದ್ರತೆಯ ವಾತಾವರಣ ನಿರ್ಮಿಸಿಕೊಡುವುದರ ಜೊತೆಗೆ, ಸಮುದಾಯ ಮಟ್ಟದಲ್ಲಿ ಹಿಂಸೆಯನ್ನು ತಿರಸ್ಕರಿಸುವ ಬೃಹತ್ ಜಾಗೃತಿ ಮೂಡಬೇಕು. ಮಗುವಿನ ಮನಸ್ಸನ್ನು ಪ್ರೀತಿಯಿಂದ ಗೆದ್ದಾಗ ಮಾತ್ರ ಅಪರಾಧದ ಹಾದಿಯನ್ನು ತಡೆಯಲು ಮತ್ತು ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....