ಪ್ರಧಾನ ಮಂತ್ರಿ ಮೋದಿ ಅವರು ರಾಹುಲ್ ಅವರ ಮಾತುಗಳನ್ನು ಎದುರಿಸುವ ಧೈರ್ಯವನ್ನೇ ತೋರಿಸಲಿಲ್ಲ. ಸಂಸತ್ತಿಗೆ ಬರುವುದನ್ನೇ ತಪ್ಪಿಸಲು ನೋಡಿದರು. ಸ್ಪೀಕರ್ ಅವರ ನೆರವು ಪಡೆಯಲು ಪ್ರಯತ್ನಿಸಿದ್ದನ್ನು ಕೂಡಾ ಸಂಸತ್ತು ನೋಡಿತು. ಬಿಜೆಪಿಗೆ ಹಣವನ್ನು ಪೂರೈಸುತ್ತಿರುವ ಬಹುದೊಡ್ಡ ಲೇವಾದೇವಿಗಾರರು ಹೇಗೆ ಮೋದಿಯವರ ಮೇಲೆ ಹಿಡಿತ ಸಾಧಿಸಿದ್ದಾರೆ ಇತ್ಯಾದಿ ಹಲವು ವಿಚಾರಗಳು ರಾಹುಲ್ ಅವರ ಮಾತಿನಲ್ಲಿ ಸುಳಿದು ಬಂದವು.
ʼಪಪ್ಪುʼ, ʼಯುವರಾಜʼ ʼಅಪರಾಧ ಚಾಳಿಯ ವ್ಯಕ್ತಿ, ʼಹಿಟ್ ಅಂಡ್ ರನ್ ಮಾಸ್ಟರ್ʼ- ಈ ವಿಶೇಷಣಗಳನ್ನು ಯಾರು ಯಾರಿಗೆ ಹಚ್ಚಿದರು ಎಂಬುದನ್ನು ಭಾರತೀಯರಿಗೆ ಹೇಳಬೇಕಾಗಿಲ್ಲ.
ಇದರ ಜೊತೆಗೆ ಮೊನ್ನಿನ ಬಜೆಟ್ ಅಧಿವೇಶನದಲ್ಲಿ ಇನ್ನೂ ಕೆಲವು ಮಾತುಗಳೂ ಸೇರಿದವು; ʼಸಂಸತ್ತಿನ ಪಾವಿತ್ರ್ಯವನ್ನು ಹಾಳುಮಾಡುತ್ತಿರುವ ವ್ಯಕ್ತಿʼ, ʼಸಂಸತ್ತಿನ ಘನತೆಯನ್ನು ತಗ್ಗಿಸುತ್ತಿರುವ ಮನುಷ್ಯʼ ಇತ್ಯಾದಿ. ಇದು ಸಾಲದೋ ಎನ್ನುವಂತೆ, ಈ ವ್ಯಕ್ತಿಯನ್ನು ಸಂಸತ್ತಿನಿಂದ ಹೊರಹಾಕಬೇಕು, ಮುಂದೆ ಎಂದೂ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಮೊದಲಾದ ಪ್ರಯತ್ನಗಳೂ ನಡೆದವು.
ಇದಕ್ಕೆಲ್ಲ ಎದೆಗೊಟ್ಟು ನಿಂತಿರುವ, ದಿಟ್ಟತನದಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಒದಗಿರುವ ಅಪಾಯಗಳನ್ನು, ಬಿಕ್ಕಟ್ಟುಗಳನ್ನು, ದಿಕ್ಕೆಟ್ಟ ಸ್ಥಿತಿಯನ್ನು ಸಂಸತ್ತಿನಲ್ಲಿ ಮತ್ತು ಹೊರಗೆ ಗಟ್ಟಿ ದನಿಯಿಲ್ಲಿ ಹೇಳುತ್ತಿರುವ, ಪಾರ್ಲಿಮೆಂಟಿನಲ್ಲಿ ವಿರೋಧ ಪಕ್ಷಗಳ ನಾಯಕರಾಗಿರುವ ರಾಹುಲ್ ಗಾಂಧಿಯವರನ್ನು ಇಡೀ ರಾಷ್ಟ್ರದ ಪ್ರಜಾಪ್ರಭುತ್ವ ಪ್ರೇಮಿಗಳು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ನಮ್ಮ ಪ್ರಜಾಪ್ರಭುತ್ವ ಮುಗ್ಗರಿಸಬಹುದೆಂಬ ಆತಂಕದಲ್ಲಿರುವವರಿಗೆ ರಾಹುಲ್ ಅವರ ಪ್ರತಿಯೊಂದು ಮಾತು, ನಡೆ, ನಿಲುವು ಮತ್ತು ನೋಟಗಳು ದೊಡ್ಡ ಭರವಸೆಯಂತೆಯೇ ಕಾಣಿಸುತ್ತಿವೆ.
ರಾಹುಲ್ ಅವರು ಸಂಸತ್ತಿನಲ್ಲಿ ಆಡಿದ ಮಾತುಗಳು ತೀರ ಗಂಭೀರ ಸ್ವರೂಪದ ಮಾತುಗಳು. ಅವರು ಎತ್ತಿದ ಪ್ರಶ್ನೆಗಳು ರಾಷ್ಟ್ರದ ಹಿತದೃಷ್ಟಿಯಿಂದ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಎತ್ತಿದ ಪ್ರಶ್ನೆಗಳು. ಇವುಗಳನ್ನು ಸುಲಭವಾಗಿ ತಳ್ಳಿಹಾಕಲು ಬರುವುದಿಲ್ಲ. ಸಂಸತ್ತಿನಲ್ಲಿ ಹೆಚ್ಚಿನ ಸಂಖ್ಯಾಬಲ ಪಡೆದಿರುವ ಬಿಜೆಪಿ, ಗದ್ದಲದ ಮೂಲದ ರಾಹುಲ್ ಮಾತುಗಳಿಗೆ ತಡೆಯೊಡ್ಡಬಹುದು. ಹಾಗೆಯೇ ಸ್ಪೀಕರ್ ಬೆಂಬಲದಿಂದ ರಾಹುಲ್ ಮಾತುಗಳು ಕಡತಕ್ಕೆ ಹೋಗದಂತೆ ನೋಡಿಕೊಳ್ಳಬಹುದು. ಆದರೆ ರಾಹುಲ್ ಮಾತುಗಳನ್ನು ಭಾರತೀಯರ ಮನಸ್ಸಿನಿಂದ ಅಳಿಸಿ ಹಾಕಲು ಸಾಧ್ಯವಿಲ್ಲ. ಕೆಲವು ಮಾಧ್ಯಮಗಳ ಮೂಲಕ ಈ ಎಲ್ಲ ಮಾತುಗಳನ್ನು ಜನ ಕೇಳಿಸಿಕೊಂಡಿದ್ದಾರೆ. ಅವರಿಗೆ ಈಗಾಗಲೇ ಗೊತ್ತಾಗಿದೆ, ಈತನನ್ನು ʼಪಪ್ಪುʼ ಎನ್ನಬೇಕೊ ಅಥವಾ ನಮ್ಮ ಬಹುಮುಖ್ಯವಾದ ಯುವ ನಾಯಕ ಎನ್ನಬೇಕೊ ಎನ್ನುವುದು.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡುವ ಹಕ್ಕು ನಮ್ಮ ಸಂವಿಧಾನದಿಂದ ದತ್ತವಾದದ್ದು. ಆದರೆ ರಾಹುಲ್ ಬಾಯಿ ತೆರೆಯದಂತೆ ಬಿಜೆಪಿ ಸದಸ್ಯರು ಗದ್ದಲ ಏಳಿಸಿದರು. ಸ್ಪೀಕರ್ ಓಂ ಬಿರ್ಲಾ ನಿಯಮಗಳ ಹೆಸರಿನಲ್ಲಿ ರಾಹುಲ್ ಬಾಯಿಯನ್ನು ಕಟ್ಟಿಹಾಕಲು ನೋಡಿದರು. ಅವರು ಮಾತನ್ನೇ ಆಡದಂತೆ ಮಾಡಲು ಎಲ್ಲ ಪ್ರಯತ್ನಗಳನ್ನು ಸಂಸತ್ತಿನಲ್ಲಿ ಮಾಡಲಾಯಿತು. ಆಡಳಿತ ಪಕ್ಷದ ಸದಸ್ಯರು ತಮಗೆ ಬೇಕಾದ ರೀತಿಯಲ್ಲಿ ಮಾತನಾಡಬಹುದು, ಅವರನ್ನು ಯಾವ ನಿಯಮಾವಳಿಯೂ ತಡೆಯುವುದಿಲ್ಲ ಎಂಬುದೂ ಈ ದೇಶದ ಜನರಿಗೆ ತಿಳಿದು ಹೋಯಿತು.
ರಾಹುಲ್ ಅವರನ್ನು ಕಟ್ಟಿಹಾಕಲು ಕಾರಣವೇನು?
ಭಾರತವನ್ನು ನುಂಗಲು ಸದಾ ಸಜ್ಜಾಗಿ ನಿಂತಿರುವ ನೆರೆಯ ರಾಷ್ಟ್ರ ಚೀನಾ, ಭಾರತ-ಚೀನಾ ಗಡಿಯಲ್ಲಿ ನಡೆಸುತ್ತಿರುವ ಚಟುವಟಿಕೆಗಳು ಎಷ್ಟು ಅಪಾಯಕಾರಿಯಾಗಿವೆ ಎಂಬುದನ್ನು ಮತ್ತು ಇಂಥ ಹೊತ್ತಿನಲ್ಲಿ ನಮ್ಮ ಕೇಂದ್ರ ಸರ್ಕಾರ, ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ಮತ್ತು ನಿರ್ಧಾರಗಳು ಹೇಗೆ ಅಪಾಯಕಾರಿಯಾಗಿವೆ, ಹೇಗೆ ಹೊಣೆಗೇಡಿತನದಿಂದ ಕೂಡಿವೆ ಎಂಬುದನ್ನು ರಾಹುಲ್ ಗಾಂಧಿ ವಿವರಿಸಲು ನೋಡಿದರು. ತಮ್ಮ ಮಾತಿಗೆ ಸಾಕ್ಷ್ಯ ಒದಗಿಸಲು ಈ ಬಗ್ಗೆ ಕಾರವಾನ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ಉಲ್ಲೇಖಿಸಲು ನೋಡಿದರು. ರಾಹುಲ್ ಮಾತಿನ ಸುಳಿವು ಸಿಗುತ್ತಿದ್ದಂತೆಯೇ ಬಜೆಪಿ ಸದಸ್ಯರು ದೊಡ್ಡ ಗದ್ದಲ ಏಳಿಸಿದರು. ಇದನ್ನು ಪ್ರಮಾಣೀಕರಿಸಬೇಕು ಎಂದು ಕೊಕ್ಕೆ ಹಾಕಿದರು. ಸ್ಪೀಕರ್ ಕೂಡಾ ನಿಯಮವನ್ನು ಮುಂದು ಮಾಡಿ ಪ್ರಮಾಣೀಕರಿಸಬೇಕು ಎಂದು ಹೇಳಿದರು. ನಾನು ಪ್ರಮಾಣೀಕರಿಸುತ್ತೇನೆ ಎಂದು ರಾಹುಲ್ ಕೂಗಿ ಹೇಳಿದರೂ ರಾಹುಲ್ ಮಾತನಾಡಲು ಅವಕಾಶ ಸಿಕ್ಕದಂತೆ ಮಾಡಲಾಯಿತು.

ಕಾರವಾನ್ ಪತ್ರಿಕೆಯ ಲೇಖನಕ್ಕೆ ಆಧಾರವೆಂದರೆ, ಸೇನಾ ಮುಖ್ಯಸ್ಥರಾಗಿದ್ದ, ಈಗ ನಿವೃತ್ತರಾಗಿರುವ ನರವಣೆ ಅವರ ಆತ್ಮಕಥೆ- ʼಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿʼ ಪ್ರಕಟವಾಗದ ಈ ಕೃತಿಯನ್ನು ಉಲ್ಲೇಖಿಸುವಂತಿಲ್ಲ ಎಂದು ಹೇಳಲಾಯಿತು. ಈ ಕೃತಿ ಪ್ರಕಟವಾಗಿದೆ; ಭಾರತದಲ್ಲಿ ಪ್ರಕಟವಾಗಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ರಾಹುಲ್ ಸಮಜಾಯಿಷಿ ಕೊಟ್ಟರೂ ಅದರಿಂದ ಪ್ರಯೋಜನವಾಗಲಿಲ್ಲ. ಮಾರನೆಯ ದಿನ ರಾಹುಲ್ ಈ ಕೃತಿಯ ಒಂದು ಪ್ರತಿಯನ್ನು ಕೈಲಿ ಹಿಡಿದು ಬಂದರು. ಪ್ರಧಾನಿಯವರಿಗೆ ನಾನೇ ಕೊಡುತ್ತೇನೆ ಎಂದೂ ಸಂಸತ್ತಿನ ಹೊರಗೆ ಮಾಧ್ಯಮದವರಿಗೆ ಹೇಳಿದರು.
ಈ ಆತ್ಮಕಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮುಜುಗರವಾಗುವಂಥದು ಏನಿದೆ? ಸೇನಾಮುಖ್ಯಸ್ಥರಾಗಿದ್ದ ಜನರಲ್ ಮನೋಜ್ ಮುಕುಂದ್ ನರವಣೆ ತಮ್ಮ ಅಧಿಕಾರಾವಧಿಯ ಒಂದು ಗಂಭೀರ ಸಂದರ್ಭವನ್ನು ಉಲ್ಲೇಖಿಸುತ್ತಾರೆ. ಒಂದೊಂದು ಇಂಚಿನಂತೆ ಭಾರತದೊಳಕ್ಕೆ ನುಗ್ಗಿಬರುತ್ತಿದ್ದ ಚೀನಾ ಸೈನಿಕರನ್ನು ಗಮನಿಸುತ್ತಿದ್ದ ಭಾರತೀಯ ಸೇನೆ ಒಂದು ಹಂತದಲ್ಲಿ, ಇನ್ನು ಚೀನಾ ಸೇನೆಯನ್ನು ತಡೆಯುವುದು ಅನಿವಾರ್ಯ ಎಂಬ ಹೊತ್ತಿನಲ್ಲಿ, ಸರ್ಕಾರದ ಗಮನ ಸೆಳೆಯುತ್ತದೆ. ನರವಣೆ ಅವರು ರಕ್ಷಣಾಮಂತ್ರಿಗಳಿಗೆ ಈ ಎಲ್ಲ ಬೆಳವಣಿಗೆಗಳನ್ನು ವಿವರಿಸಿ ಏನು ಮಾಡುವುದು? ಎಂದು ಕೇಳುತ್ತಾರೆ. ರಕ್ಷಣಾ ಸಚಿವರು ಪ್ರಧಾನಿಯವರಿಗೆ ಪರಿಸ್ಥಿತಿಯನ್ನು ವಿವರಿಸಿ ಏನು ಮಾಡಬೇಕು? ಎಂದು ಕೇಳುತ್ತಾರೆ. ಇಡೀ ರಾಷ್ಟ್ರಕ್ಕೇ ಅಪಾಯಕಾರಿಯಾದ ಈ ಸನ್ನಿವೇಶವನ್ನು ಎದುರಿಸಲು ಪ್ರಧಾನಿ ದಿಟ್ಟನಿಲುವನ್ನು ತಳೆಯಬೇಕು. ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ತಂದುಕೊಂಡು ಅವರ ಮುಂದೆಯೂ ಈ ಪ್ರಶ್ನೆಯನ್ನು ಇಡಬೇಕು, ಅವರ ಸಲಹೆಯನ್ನು ಗಮನಿಸಬೇಕು. ಆದರೆ ಅದೇನೂ ಆಗದೆ, ʼನಿಮಗೆ ಸರಿಕಂಡಂತೆ ಮಾಡಿʼ ಎಂದು ಸೇನಾ ಮುಖ್ಯಸ್ಥರಿಗೆ ಹೇಳಿ ಪ್ರಧಾನಿ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಾರೆ.
ಇದು ಇಡೀ ದೇಶಕ್ಕೆ ಗೊತ್ತಾದರೆ ತಮ್ಮ ವರ್ಚಸ್ಸಿಗೇ ಪೆಟ್ಟುಬೀಳುತ್ತದೆ ಎಂಬುದನ್ನು ಬಲ್ಲ ಪ್ರಧಾನಿ, ಕೇಂದ್ರ ಸರ್ಕಾರ ಮತ್ತು ಆಡಳಿತ ಪಕ್ಷದ ಸದಸ್ಯರು ಸಂಸತ್ತಿನಲ್ಲಿ ಗದ್ದಲ ಎಬ್ಬಿಸುತ್ತಾರೆ. ರಾಹುಲ್ ಬಾಯಿ ಬಿಡುವುದಕ್ಕೇ ಅವಕಾಶವಿಲ್ಲದಂತೆ ಮಾಡುತ್ತಾರೆ.
ಆದರೂ ಇದನ್ನು ಮುಚ್ಚಿಹಾಕಲು ಸಾಧ್ಯವಾಗುವುದಿಲ್ಲ. ʼದಿ ವೈರ್ʼ ಮತ್ತು ದಿಲೀಪ್ ಸರ್‌ದೇಸಾಯಿಯವರಂಥ ದಿಟ್ಟ ಮಾಧ್ಯಮಗಳು ಮತ್ತು ಪತ್ರಕರ್ತರು ಇದನ್ನು ಮುಚ್ಚಿಹಾಕದಂತೆ ನೋಡಿಕೊಳ್ಳುತ್ತಾರೆ. ತಮ್ಮ ಚಾನೆಲ್‌ಗಳ ಮೂಲಕ ಚರ್ಚೆಯನ್ನು, ಸಂದರ್ಶನವನ್ನು ಏರ್ಪಡಿಸುತ್ತಾರೆ. ಸೇನಾಮುಖ್ಯಸ್ಥರ ಆತ್ಮಕಥೆಯ ಈ ಭಾಗ ಬಯಲಾಗುವಂತೆ ಮಾಡುತ್ತಾರೆ. ಇದು ಪ್ರಜಾಪ್ರಭುತ್ವದ ಶಕ್ತಿಯಂತೆಯೂ ಕಾಣಿಸುತ್ತದೆ.
ಮತ್ತೊಂದು ದಿನ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆ: ಸೂಪರ್ ಪವರ್ ಎನಿಸಿಕೊಂಡಿರುವ ಅಮೆರಿಕ ಭಾರತದ ಬಗ್ಗೆ ತಳೆದಿರುವ ನಿಲುವು ಮತ್ತು ಧೋರಣೆಗೆ ಸಂಬಂಧಿಸಿದ್ದು. ಟ್ರಂಪ್ ಅವರು ಭಾರತದ ಮೇಲೆ ಹೇರುತ್ತಿರುವ ತೆರಿಗೆಗಳು, ಪಕ್ಕದ ಪಾಕ್ ಮತ್ತು ಬಾಂಗ್ಲಾಗಳ ಬಗ್ಗೆ ಅನುಸರಿಸುತ್ತಿರುವ ಮೃದು ಧೋರಣೆ, ಇದಕ್ಕೆ ಪ್ರತಿಯಾಗಿ ಭಾರತ ಶರಣಾಗುತ್ತಿರುವ ರೀತಿಯನ್ನು ರಾಹುಲು ಎಳೆಎಳೆಯಾಗಿ ಬಿಡಿಸಿ ತೋರಿಸಿದರು. ಅಮೆರಿಕವು ಭಾರತದ ಮೇಲೆ ಹೇರುತ್ತಿರುವ ತೆರಿಗೆ ನೀತಿಯಿಂದ ನಮ್ಮ ಜವುಳಿ ಉದ್ಯಮ ನೆಲಕಚ್ಚುತ್ತಿದೆ. ಹಾಗೆಯೇ ನಮ್ಮ ಕೃಷಿ ಕ್ಷೇತ್ರ ಕೂಡಾ ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದಿಂದ ನಾಶವಾಗುತ್ತಿದೆ. ನಾವು ಯಾರಿಂದ ಇಂಧನವನ್ನು ಖರೀದಿಸಬೇಕು, ಯಾರಿಂದ ಖರೀದಿಸಬಾರದು ಇತ್ಯಾದಿ ಕಟ್ಟುಪಾಡುಗಳನ್ನು ಅಮೆರಿಕ ವಿಧಿಸುತ್ತಿದೆ; ನಮ್ಮ ಸ್ವಾತಂತ್ರ್ಯವನ್ನು ಕಸಿಯಲು ನೋಡುತ್ತಿದೆ. ಪ್ರಧಾನಿ ಮೋದಿಯವರು ಇದಕ್ಕೆ ಪ್ರತಿರೋಧ ಒಡ್ಡದೆ ಮೌನವಾಗಿ ಸಮ್ಮತಿಸುತ್ತಿರುವುದು, ಭಾರತಕ್ಕೆ ಮಾರಕವಾಗುತ್ತಿರುವ ಒಪ್ಪಂದಗಳಿಗೆ ಸಹಿ ಹಾಕುತ್ತಿರುವುದು ʼಶರಣಾಗತಿʼಯಾಗಿದೆ. ಇದು ಕೇವಲ ಪ್ರಧಾನಿಯವರ ಶರಣಾಗತಿಯಲ್ಲ, ನಮ್ಮ ೧೪೦ ಕೋಟಿ ಜನರ ಶರಣಾಗತಿ. ನಮ್ಮ ರಾಷ್ಟ್ರದ ಬಹುದೊಡ್ಡ ಶಕ್ತಿಯಾಗಿರುವ ೧೪೦ ಕೋಟಿ ಜನರ ದತ್ತಾಂಶವನ್ನು ಅಮೆರಿಕಕ್ಕೆ ಒಪ್ಪಿಸುವ ಶರಣಾಗತಿ. ಮೋದಿ ಅವರು ದೇಶವನ್ನು, ಜನರನ್ನು, ಭಾರತ ಮಾತೆಯನ್ನು ಶರಣಾಗಿಸುತ್ತಿದ್ದಾರೆ, ಮಾರುತ್ತಿದ್ದಾರೆ ಎಂದು ರಾಹುಲ್ ಕಟುವಾಗಿ ಟೀಕಿಸಿದರು. ಆಡಳಿತಪಕ್ಷದ ಸದಸ್ಯರು ದೊಡ್ಡ ಗಲಾಟೆ ಎಬ್ಬಿಸಿದರು.

ಪ್ರಧಾನ ಮಂತ್ರಿ ಮೋದಿ ಅವರು ರಾಹುಲ್ ಅವರ ಮಾತುಗಳನ್ನು ಎದುರಿಸುವ ಧೈರ್ಯವನ್ನೇ ತೋರಿಸಲಿಲ್ಲ. ಸಂಸತ್ತಿಗೇ ಬರುವುದನ್ನೇ ತಪ್ಪಿಸಲು ನೋಡಿದರು. ಸ್ಪೀಕರ್ ಅವರ ನೆರವು ಪಡೆಯಲು ಪ್ರಯತ್ನಿಸಿದ್ದನ್ನು ಕೂಡಾ ಸಂಸತ್ತು ನೋಡಿತು.
ಎಪ್‌ಸ್ಟಿನ್ ಫೈಲ್‌ಗಳ ವಿಚಾರವನ್ನು ರಾಹುಲ್ ಪ್ರಸ್ತಾಪಿಸುವುದಕ್ಕೂ ಅವಕಾಶ ಸಿಕ್ಕಲಿಲ್ಲ. ಕೇಂದ್ರ ಸಚಿವ ಹರಿದೀಪ್ ಸಿಂಗ್ ಪುರಿ ಅವರು ಲೈಂಗಿಕ ಅಪರಾಧಿಯಾಗಿರುವ ಅಮೆರಿಕದ ಲೇವಾದೇವಿಗಾರ ಜೆಫ್ರಿ ಎಪ್ಸ್ಟಿನ್ ಜೊತೆಯಲ್ಲಿ ನಡೆಸಿದ ಇ-ಮೇಲ್ ಸಂದೇಶಗಳು, ಈ ಅಪರಾಧಿಯೊಂದಿಗಿನ ಭೇಟಿ ಯಾವುದರ ವಿಚಾರವೂ ಸಂಸತ್ತಿನಲ್ಲಿ ಬರೆದಂತೆ ಆಡಳಿತ ಪಕ್ಷದ ಸದಸ್ಯರು ನೊಡಿಕೊಂಡರು. ಅದಾನಿ ಅವರ ವಿಚಾರಗಳೂ ಈ ಫೈಲ್‌ಗಳಲ್ಲಿವೆ. ಅವರು ಈ ಹೊತ್ತಿಗೆ ಅಮೆರಿಕದ ಜೈಲಿನಲ್ಲಿರಬೇಕಾಗಿತ್ತು ಇತ್ಯಾದಿ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದಂತೆಯೇ, ಅವರು ಈ ಸಂಸತ್ತಿನ ಸದಸ್ಯರಲ್ಲ, ಅವರ ಹೆಸರನ್ನು ಪ್ತಸ್ತಾಪಿಸಬಾರದು ಎಂದು ಸ್ಪೀಕರ್ ಸಂಸತ್ತಿನ ನಿಯಮಾವಳಿಯನ್ನು ಮುಂದುಮಾಡಿದರು.
ಬಿಜೆಪಿಗೆ ಹಣವನ್ನು ಪೂರೈಸುತ್ತಿರುವ ಬಹುದೊಡ್ಡ ಲೇವಾದೇವಿಗಾರರು ಹೇಗೆ ಮೋದಿಯವರ ಮೇಲೆ ಹಿಡಿತ ಸಾಧಿಸಿದ್ದಾರೆ ಇತ್ಯಾದಿ ಹಲವು ವಿಚಾರಗಳು ರಾಹುಲ್ ಅವರ ಮಾತಿನಲ್ಲಿ ಸುಳಿದು ಬಂದವು.
ಬಿಜೆಪಿ ಸದಸ್ಯರು ʼಪಪ್ಪುʼ ಎಂದು ಕರೆಯುವ ರಾಹುಲ್ ಗಾಂಧಿ ಈಗ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಬಿಜೆಪಿಯ ರಾಜಕೀಯದಿಂದಾಗಿ ಒಡೆದು ತುಂಡಾದ, ಇವತ್ತಿಗೂ ಒಡೆದು ಛಿದ್ರಛಿದ್ರವಾಗುತ್ತಿರುವ ಭಾರತವನ್ನು ಒಂದು ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ʼಭಾರತ್ ಜೋಡೋʼ ಯಾತ್ರೆಯನ್ನು ಮಾಡಿದ ವ್ಯಕ್ತಿಯೂ ಈ ರಾಹುಲ್ ಗಾಂಧಿಯೇ; ಚುನಾವಣೆಗಳಲ್ಲಿ ಬಿಜೆಪಿ ಮತ್ತು ಸಂಘ ಪರಿವಾರಗಳು ನಡೆಸುತ್ತಿರುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿ ʼಓಟ್ ಚೋರಿʼ ಎಂದು ಉತ್ತರ ಭಾರತದಲ್ಲಿ ಗದ್ದಲ ಎಬ್ಬಿಸಿ, ನಮ್ಮ ಚುನಾವಣಾ ವ್ಯವಸ್ಥೆಯನ್ನು ಭಾರತೀಯ ಮತದಾರರು ಎಚ್ಚರದಿಂದ ಗಮನಿಸುವಂತೆ ಮಾಡಿದ ವ್ಯಕ್ತಿಯೂ ಈ ರಾಹುಲ್ ಗಾಂಧಿಯೇ; ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದವರೂ ಇವರೇ. ಜ್ವಲಂತವಾಗಿ ಉರಿಯುತ್ತಿರುವ ನೂರಾರು ಸಮಸ್ಯೆಗಳ ಬಗ್ಗೆ ದಿಟ್ಟತನದಿಂದ ಧ್ವನಿ ಎತ್ತುತ್ತಿರುವ, ಭಾರತೀಯ ಪ್ರಜಾಪ್ರಭುತ್ವಕ್ಕೆ ಯಾವ ಅಪಾಯ ಎದುರಾದರೂ ಎಚ್ಚರದ ಗಂಟೆಯನ್ನು ಮೊಳಗಿಸುವವರೂ ಈ ರಾಹುಲ್ ಗಾಂಧಿಯೇ.
ಈ ಯುವ ನಾಯಕ ಬೆಂಕಿಯ ಚೆಂಡಿನಂತೆ ಪುಟಿಯುತ್ತಿದ್ದಾರೆ; ಕೇಂದ್ರ ಸರ್ಕಾರ ತೆರೆಮರೆಯಲ್ಲಿ ನಡೆಸುತ್ತಿರುವ, ದೇಶಕ್ಕೆ ಗಂಡಾಂತರಕಾರಿಹಾಗಿರುವ ಅನೇಕ ಸಂಗತಿಗಳನ್ನು ಬಯಲು ಮಾಡುತ್ತಿದ್ದಾರೆ. ಇವರನ್ನು ತಡೆಯುವುದೇ ಕೇಂದ್ರ ಸರ್ಕಾರಕ್ಕೆ ದೊಡ್ಡ ಚಿಂತೆಯಾಗಿದೆ. ಆದರೆ ರಾಹುಲ್ ಗಾಂಧಿ ನಮ್ಮ ಪ್ರಜಾಪ್ರಭುತ್ವದ ದೊಡ್ಡ ಭರವಸೆಯಾಗಿದ್ದಾರೆ; ಯುವಜನರ ಕಣ್ಮಣಿಯೂ ಆಗಿದ್ದಾರೆ.





