ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

Date:

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ ಸರಬರಾಜಾಗುವ ನೀರು ಸುಮಾರು 2,000 ಮಿಲಿಯನ್ ಲೀಟರ್‌ಗಳಿಗೆ ಸೀಮಿತವಾಗಿದೆ. ಇಡೀ ನಗರ ದಿನಕ್ಕೆ ಸುಮಾರು 775 ಮಿಲಿಯನ್ ಲೀಟರ್ ನೀರಿನ ಕೊರತೆ ಎದುರಿಸುತ್ತಿದೆ.

ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI)ಯು ಶರವೇಗದಲ್ಲಿರುವ ಹೊತ್ತಿನಲ್ಲಿ ಡೇಟಾ ಸೆಂಟರ್‌ಗಳು ತಂತ್ರಜ್ಞಾನ ಕ್ಷೇತ್ರದ ನಾಡಿಮಿಡಿತವೇ ಆಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ತಂತ್ರಜ್ಞಾನ ತಾನು ಬೆಳೆಯುವುದರೊಂದಿಗೆ ತನ್ನೊಡನೆ ಹಲವು ಸಮಸ್ಯೆಗಳನ್ನೂ ಬೆಳೆಸುತ್ತಿದೆ. ಈಗದು ಜೀವಜಲ ನೀರಿನ ಬುಡಕ್ಕೆ ಬಂದು ನಿಂತಿದೆ. ಐಟಿ ರಾಜಧಾನಿ ಬೆಂಗಳೂರು ಸದ್ಯ ಈ ಸಂಕಟದಿಂದ ಬಳಲುತ್ತಿದೆ.

ನೀರಿನ ಸಮಸ್ಯೆಗೂ ಡೇಟಾ ಸೆಂಟರ್‌ಗಳಿಗೂ ಸಂಬಂಧ ಏನು ಅಂದ್ರೆ, ಡೇಟಾ ಸೆಂಟರ್‌ಗಳು ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುವಾಗ ಒಳಗಿನ ಸಾವಿರಾರು ಸರ್ವರ್‌ಗಳು ಭಾರೀ ಪ್ರಮಾಣದಲ್ಲಿ ಹೀಟ್ ಉತ್ಪತ್ತಿ ಮಾಡುತ್ತವೆ. ಈ ಬಿಸಿಯನ್ನು ನಿಯಂತ್ರಿಸದೇ ಇದ್ದರೆ ಯಂತ್ರಗಳು ಹಾನಿಗೊಳಗಾಗುತ್ತವೆ, ಕೆಲಸ ಸ್ಥಗಿತವಾಗುತ್ತದೆ. ಅದಕ್ಕಾಗಿಯೇ ಎಲ್ಲಾ ಡೇಟಾ ಸೆಂಟರ್‌ಗಳಿಗೆ ಈ ತಣ್ಣಗಾಗಿಸುವ (cooling system) ವ್ಯವಸ್ಥೆ ಅತ್ಯಗತ್ಯವಾಗುತ್ತದೆ. ಬಹುತೇಕ ಡೇಟಾ ಸೆಂಟರ್‌ಗಳಲ್ಲಿ ಈ ಸರ್ವರ್ ತಣಿಸುವ ಕೆಲಸಕ್ಕೆ ಮುಖ್ಯವಾಗಿ ನೀರನ್ನೇ ಬಳಸಲಾಗುತ್ತದೆ. ಡೇಟಾ ಸೆಂಟರ್‌ಗಳು ಕಾರ್ಯನಿರ್ವಹಿಸುವಷ್ಟೂ ಕಾಲ ನೀರಿನ ಬಳಕೆಯೂ ಮುಂದುವರೆಯಲೇಬೇಕು. ಈ ಪ್ರಕ್ರಿಯೆಯಲ್ಲಿ ನೀರು ಪುನಃ ಪುನಃ ಬಳಕೆಯಾಗುತ್ತದೆಯಾದರೂ ದೊಡ್ಡ ಪ್ರಮಾಣದ ನೀರು ಆವಿಯಾಗಿ ನಷ್ಟವಾಗುತ್ತದೆ. ಇದರಿಂದ ದೈನಂದಿನ ಕಾರ್ಯಾಚರಣೆಗೆ ಕೋಟ್ಯಂತರ ಲೀಟರ್ ನೀರು ಬೇಕಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಾಸ್ತವದಲ್ಲಿ AI ಆಗಿರಬಹುದು ಅಥವಾ ಯಾವುದೇ ಒಂದು ತಾಂತ್ರಿಕ ವ್ಯವಸ್ಥೆಯಾಗಿರಬಹುದು. ಅದು ಡಿಜಿಟಲ್‌ ವಸ್ತು ಎನ್ನುವುದಕ್ಕಿಂತ ಅದೊಂದು ಭೌತಿಕ ಪ್ರಕ್ರಿಯೆ. ಸಿಲಿಕಾನ್ ಚಿಪ್‌ಗಳಲ್ಲಿ ಎಲೆಕ್ಟ್ರಾನ್‌ಗಳನ್ನು ಚಲಾಯಿಸುವ ಒಂದು ಪ್ರಯಾಸ. ಪ್ರತಿಯೊಂದು ಚಲನೆಯೂ ಹೀಟ್ ಉತ್ಪತ್ತಿ ಮಾಡುತ್ತದೆ. ಆ ಹೀಟ್ ಹೊರಹಾಕದೇ ಇದ್ದರೆ ಯಂತ್ರಗಳು ಕೆಲಸ ಮಾಡುವುದಿಲ್ಲ.

image 2026 02 26T165111.297

ನಾವು ChatGPT, Grok, Geminiಗಳಿಗೆ ಏನೇ ಕೇಳಿದರೂ ಕ್ಷಣಾರ್ಧದಲ್ಲಿ ಪರದೆಯ ಮೇಲೆ ಬಂದಿರುತ್ತದೆ ಅಲ್ಲವೇ? ಈ ಮಿಲಿ ಸೆಕೆಂಡ್ಸ್‌ ಕೆಲಸದ ಹಿಂದೆ ಭಾರೀ ಯಂತ್ರೋಪಕರಣಗಳು ಮತ್ತು ಸಂಪನ್ಮೂಲಗಳ ಬಳಕೆ ನಡೆಯುತ್ತಿರುತ್ತದೆ ಹೌದಲ್ಲವೇ? ನಾವು ಕೀಬೋರ್ಡ್‌ನಲ್ಲಿ ʼಎಂಟರ್ʼ ಒತ್ತಿದ ಕ್ಷಣದಿಂದಲೇ ಅವುಗಳ ಕೆಲಸ ಆರಂಭವಾಗುತ್ತದೆ. ನಮ್ಮ ಬೇಡಿಕೆ ಕ್ಷಣಾರ್ಧದಲ್ಲೇ ಒಂದು ಡೇಟಾ ಸೆಂಟರ್‌ಗೆ ತಲುಪುತ್ತದೆ. ಅಲ್ಲಿ ಸಾವಿರಾರು ಪ್ರೊಸೆಸರ್‌ಗಳು ವಿದ್ಯುತ್ ಬಳಸಿ ನಮಗೆ ಕೊಡಬೇಕಾದ್ದರ ಕುರಿತು ಲೆಕ್ಕಾಚಾರ ಮಾಡುತ್ತವೆ. ಈ ವಿದ್ಯುತ್ ಗಣನೆಗಳ ಪರಿಣಾಮವಾಗಿ ಉಷ್ಣತೆ (ಹೀಟ್) ಉತ್ಪತ್ತಿಯಾಗುತ್ತದೆ. ಆ ಬಿಸಿಯನ್ನು ತಣಿಸಲು ನೀರು ಮತ್ತು ಶಕ್ತಿಯನ್ನು ಬಳಸಬೇಕಾಗುತ್ತದೆ.

ಈಗ ರಾಜಧಾನಿಯ ಜಲಗಂಡಾಂತರಕ್ಕೆ ಬರೋಣ. ನಗರಕ್ಕೆ ನಿತ್ಯ 2,600ರಿಂದ 3,000 ಮಿಲಿಯನ್ (30,000 ಲಕ್ಷ ಅಥವಾ 300 ಕೋಟಿ) ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ ಸರಬರಾಜಾಗುವ ನೀರು ಸುಮಾರು 2,000 ಮಿಲಿಯನ್ ಲೀಟರ್‌ಗಳಿಗೆ ಸೀಮಿತವಾಗಿದೆ. ಅದರಲ್ಲಿ ಸುಮಾರು ನಾಲ್ಕನೇ ಒಂದು ಭಾಗ ಅಂದರೆ ಕಾಲುಭಾಗ ನೀರು ವಿತರಣೆ ಮಾಡುವ ಸಮಯದಲ್ಲೇ ವ್ಯರ್ಥವಾಗುತ್ತಿದೆ. ಐದನೇ ಹಂತದ ಕಾವೇರಿ ಯೋಜನೆ ಕಾರ್ಯಾರಂಭ ಮಾಡಿದ್ದರೂ, ಇಡೀ ನಗರ ದಿನಕ್ಕೆ ಸುಮಾರು 775 ಮಿಲಿಯನ್ ಲೀಟರ್ ನೀರಿನ ಕೊರತೆ ಎದುರಿಸುತ್ತಿದೆ. ಸರ್ಕಾರದ ಪ್ರಮುಖ ಆಧಾರವಾಗಿದ್ದ 14,000 ಬೋರ್‌ವೆಲ್‌ಗಳ ಪೈಕಿ ಬಹುಪಾಲು ಈಗಾಗಲೇ ಬತ್ತಿಹೋಗಿವೆ.

ಇಂತಹ ಸಂದರ್ಭದಲ್ಲಿ ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ಸ್ ಸಿಟಿ, ಐಟಿಪಿಎಲ್, ಸರಜಾಪುರ ರಸ್ತೆ ಸೇರಿದಂತೆ ಹಲವಾರು ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಪ್ರಸ್ತುತ ಒಂದು ಟ್ಯಾಂಕರ್ ನೀರಿಗೆ ₹2,000ರಿಂದ ₹2,500ವರೆಗೆ ಪಾವತಿಸುತ್ತಿದ್ದಾರೆ. ಬೇಸಿಗೆಯಲ್ಲಿ ಇದು ₹4,000ವರೆಗೂ ಏರುತ್ತದೆ. ಕಳೆದ ವರ್ಷ ಸರಾಸರಿ ಕುಟುಂಬಗಳು ದಿನಕ್ಕೆ 10ರಿಂದ 12 ಟ್ಯಾಂಕರ್‌ಗಳಷ್ಟು ನೀರು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೆಚ್ಚದ ಒತ್ತಡ ನೇರವಾಗಿ ಮನೆಮಂದಿಯ ಮೇಲೆ ಬೀಳುತ್ತಿದೆ.

ಕುಡಿಯುವ ನೀರಿಗೂ ದುಡ್ಡು ಕೊಡಬೇಕಾದ ಪರಿಸ್ಥಿತಿ ಇರುವಾಗಲೇ ನಗರದಲ್ಲಿ ಡೇಟಾ ಸೆಂಟರ್‌ಗಳ ವಿಸ್ತರಣೆ ವೇಗ ಪಡೆದಿದೆ. ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೇಳುವಂತೆ, ರಾಜ್ಯದಲ್ಲಿ ಸದ್ಯ ಕಾರ್ಯನಿರ್ವಹಣೆಯಲ್ಲಿರುವ 32 ಡೇಟಾ ಸೆಂಟರ್‌ಗಳ ಪೈಕಿ 31 ಬೆಂಗಳೂರಿನಲ್ಲೇ ಇವೆ. ಇನ್ನೂ 10 ಹೊಸ ಘಟಕಗಳು ಶೀಘ್ರದಲ್ಲೇ ಆರಂಭಗೊಳ್ಳಲಿವೆ. ವೈಟ್‌ಫೀಲ್ಡ್‌ನಲ್ಲೇ ಸುಮಾರು 120 ಮೆಗಾವ್ಯಾಟ್ ಸಾಮರ್ಥ್ಯದ ಏಳು ದೊಡ್ಡ ಡೇಟಾ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ನವರತ್ನ ಅಗ್ರಹಾರದಲ್ಲಿ 67.2 ಮೆಗಾವ್ಯಾಟ್ ಹೈಪರ್‌ಸ್ಕೇಲ್ ಘಟಕಗಳು ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಎಂಟು AI ಕೇಂದ್ರಗಳು ರೂಪುಗೊಂಡಿವೆ.

ವೆಲ್ ಲ್ಯಾಬ್ಸ್‌ನ ಹೈಡ್ರಾಲಜಿಸ್ಟ್ ಶಶಾಂಕ್ ಪಲೂರ್ ಅವರ ಪ್ರಕಾರ, ಪ್ರತಿ ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ವರ್ಷಕ್ಕೆ ಸರಾಸರಿ 26 ಮಿಲಿಯನ್ ಲೀಟರ್ ನೀರನ್ನು ಬಳಸುತ್ತದೆ. 40 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಘಟಕವೇ ವರ್ಷಕ್ಕೆ ಸಾವಿರ ಮಿಲಿಯನ್ ಲೀಟರ್‌ಗಿಂತ ಹೆಚ್ಚು ನೀರನ್ನು ಖರ್ಚುಮಾಡುತ್ತದೆ. ನಗರಗಳಲ್ಲಿ ಇದನ್ನು ಅಂದಾಜಿಸಿದರೆ, ದಿನದ ನೀರಿನ ಬೇಡಿಕೆ ಲಕ್ಷಾಂತರ ಜನರ ದಿನಸಿ ಅಗತ್ಯಕ್ಕೆ ಸಮಾನವಾಗುತ್ತದೆ. ಬಹುತೇಕ ಡೇಟಾ ಸೆಂಟರ್‌ಗಳು ದುಬಾರಿ ನಗರ ನೀರಿನ ಬದಲು ಭೂಗರ್ಭದ ನೀರು ಅಥವಾ ಟ್ಯಾಂಕರ್ ನೀರನ್ನೇ ಅವಲಂಬಿಸುತ್ತಿವೆ. ಇದು ಸಾಮಾನ್ಯ ನಾಗರಿಕರಿಗೆ ಬೇಕಾದ ನೀರಿನ ಲಭ್ಯತೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

image 2026 02 26T165158.662

ಇನ್ನೊಂದು ಗಂಭೀರ ಅಂಶವೆಂದರೆ ಬೆಂಗಳೂರಿನ ನೀರಿನ ಗುಣಮಟ್ಟ. ಇಲ್ಲಿನ ನೀರು ಹೆಚ್ಚಿನ ಖನಿಜಾಂಶ ಹೊಂದಿರುವ ʼಹಾರ್ಡ್ ವಾಟರ್ʼ (ಗಡಸು ನೀರು). ಸರ್ವರ್‌ಗಳನ್ನು ತಣಿಸುವ ವ್ಯವಸ್ಥೆಗಳಲ್ಲಿ ಈ ನೀರನ್ನು ಬಳಸಿದಾಗ, ಪೈಪುಗಳಲ್ಲಿ ಸ್ಕೇಲ್ ಜಮೆಯಾಗುತ್ತದೆ. ಲೋಹದ ಭಾಗಗಳಲ್ಲಿ ಜಂಗು ಹಿಡಿಯುತ್ತದೆ ಮತ್ತು ಯಂತ್ರಗಳ ಕಾರ್ಯಕ್ಷಮತೆ ಕುಗ್ಗುತ್ತದೆ. ಈ ಕಾರಣದಿಂದ ಡೇಟಾ ಸೆಂಟರ್‌ಗಳು ನೀರನ್ನು ನೇರವಾಗಿ ಬಳಸಲು ಸಾಧ್ಯವಿಲ್ಲ. ಅವುಗಳು ಮೊದಲು ನೀರನ್ನು ಶೋಧಿಸಬೇಕು, ನಂತರ ಕೆಲವು ಹಂತಗಳಲ್ಲಿ ಮರುಬಳಕೆಗೆ ಒಳಪಡಿಸಬೇಕು. ಈ ಪ್ರಕ್ರಿಯೆಗಳು ನೀರನ್ನು ಉಳಿಸುವಂತೆ ಕಂಡರೂ, ವಾಸ್ತವದಲ್ಲಿ ಹೆಚ್ಚುವರಿ ನೀರಿನ ಬಳಕೆ ಮತ್ತು ಹೆಚ್ಚುವರಿ ವೆಚ್ಚವನ್ನುಂಟುಮಾಡುತ್ತವೆ.

ಡೇಟಾ ಸೆಂಟರ್‌ಗಳಿಗೆ ಬೇಕಾಗುವಷ್ಟು ನೀರನ್ನು ಕೇವಲ ನಗರದಲ್ಲಿ ಲಭ್ಯವಿರುವ ಸರಬರಾಜಿನಿಂದ ಪಡೆಯಲು ಸಾಧ್ಯವಿಲ್ಲ. ಅಲ್ಲದೆ ನೀರು ದುಬಾರಿ ಮತ್ತು ಮಿತ ಪ್ರಮಾಣದಲ್ಲಿರುವುದರಿಂದ, ಹೆಚ್ಚಿನ ಡೇಟಾ ಸೆಂಟರ್‌ಗಳು ಭೂಗರ್ಭದ ನೀರು ಅಥವಾ ಟ್ಯಾಂಕರ್ ನೀರಿನ ಮೇಲೆಯೇ ಅವಲಂಬಿತವಾಗಿವೆ. ಬೋರ್‌ವೆಲ್‌ಗಳಿಂದ ನಿರಂತರವಾಗಿ ನೀರನ್ನು ಎಳೆಯುವುದು ಸಾಮಾನ್ಯ ಪದ್ಧತಿ. ಜೊತೆಗೆ, ಅಗತ್ಯ ಬಿದ್ದಾಗ ದೊಡ್ಡ ಪ್ರಮಾಣದಲ್ಲಿ ಟ್ಯಾಂಕರ್ ನೀರನ್ನೂ ಖರೀದಿಸಲಾಗುತ್ತದೆ. ಈ ಎರಡೂ ಮೂಲಗಳು ನಗರ ನಿವಾಸಿಗಳಿಗೂ ಅಗತ್ಯವಿರುವ ಅದೇ ನೀರಿನ ಮೂಲಗಳು. ಡೇಟಾ ಸೆಂಟರ್‌ಗಳು ದಿನವಿಡೀ ಬೋರ್‌ವೆಲ್‌ಗಳಿಂದ ನೀರನ್ನು ಸೆಳೆದುಕೊಳ್ಳುವುದರಿಂದ ಸುತ್ತಮುತ್ತಲಿನ ಪ್ರದೇಶಗಳ ಭೂಗರ್ಭದ ನೀರಿನ ಮಟ್ಟ ವೇಗವಾಗಿ ಕುಸಿಯುತ್ತದೆ. ಮನೆಮಂದಿ ಬಳಸುತ್ತಿದ್ದ ಬೋರ್‌ವೆಲ್‌ಗಳು ಒಂದೊಂದಾಗಿ ಒಣಗುತ್ತವೆ. ನೀರು ಸಿಗದ ಕಾರಣ ಜನರು ಟ್ಯಾಂಕರ್ ನೀರಿನತ್ತ ತಿರುಗುವುದು ಅನಿವಾರ್ಯವಾಗುತ್ತದೆ.

ಟ್ಯಾಂಕರ್ ನೀರಿನ ಮೇಲಿನ ಒತ್ತಡ ಇದರಿಂದ ಮತ್ತಷ್ಟು ಹೆಚ್ಚುತ್ತದೆ. ಡೇಟಾ ಸೆಂಟರ್‌ಗಳು ತಮ್ಮ ಅಗತ್ಯಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಟ್ಯಾಂಕರ್ ನೀರನ್ನು ಖರೀದಿಸುವುದರಿಂದ, ಟ್ಯಾಂಕರ್ ನೀರಿನ ಮೇಲೆ ಸ್ಪರ್ಧೆ ತೀವ್ರವಾಗುತ್ತದೆ. ಬೇಡಿಕೆ ಹೆಚ್ಚಿದಂತೆ ಸಹಜವಾಗಿ ದರವೂ ಏರುತ್ತದೆ. ಡೇಟಾ ಸೆಂಟರ್‌ಗಳ ಅತಿಯಾದ ನೀರಿನ ಬಳಕೆಯಿಂದ ಭೂಗರ್ಭದ ನೀರು ಕಡಿಮೆಯಾಗುತ್ತದೆ, ಟ್ಯಾಂಕರ್ ನೀರಿನ ಅವಲಂಬನೆ ಹೆಚ್ಚುತ್ತದೆ ಮತ್ತು ಮನೆಗಳಿಗೆ ಟ್ಯಾಂಕರ್ ನೀರು ಖರೀದಿಸುವುದು ಅನಿವಾರ್ಯವಾಗುತ್ತದೆ. ಇದರ ಫಲವಾಗಿ ತಿಂಗಳಿಗೆ ಸಾವಿರಾರು ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತದೆ. ಈ ವೆಚ್ಚವೇ ಜನರಿಗೆ ನೀರಿನ ಬಿಲ್ ಏರಿಕೆಯ ಬಿಸಿ ತಾಕಿಸುತ್ತದೆ.

ಇದನ್ನೂ ಓದಿ: ಪ್ರೀಮಿಯಂ ಲೇಖನ | ಆಲ್ಕೋಹಾಲ್ ಹಿಂದಿನ ಕಥೆ-ವ್ಯಥೆ

ಇತ್ತೀಚಿನ ವರದಿಯೊಂದರ ಪ್ರಕಾರ, ದೇಶದಲ್ಲಿ 80 ಕೋಟಿಗೂ ಹೆಚ್ಚು ಇಂಟರ್‌ನೆಟ್ ಬಳಕೆದಾರರಿದ್ದಾರೆ. ಡಿಜಿಟಲ್ ಬೇಡಿಕೆ ದೊಡ್ಡದಾಗಿದೆ. ಆದರೆ, ಡೇಟಾ ಸೆಂಟರ್ ಸಾಮರ್ಥ್ಯ ಕಡಿಮೆ. ಅದನ್ನು ತುಂಬಲು ಹೊಸ ಡೇಟಾ ಸೆಂಟರ್‌ಗಳು ಬರುತ್ತಿವೆ. ಜೊತೆಗೆ ದೊಡ್ಡ ಪ್ರಮಾಣದ AI ಮತ್ತು ಸಾಫ್ಟ್‌ವೇರ್ ತಜ್ಞರು ಇದ್ದಾರೆ. ಗ್ಲೋಬಲ್ ಕಂಪನಿಗಳ GCC ಕೇಂದ್ರಗಳು 24×7 AI ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುತ್ತಿವೆ. ಕಡಿಮೆ ಕಾರ್ಯಾಚರಣಾ ವೆಚ್ಚ, ಕಡಿಮೆ ವಿದ್ಯುತ್ ದರ, ಸರ್ಕಾರದ ಪ್ರೋತ್ಸಾಹ ಮತ್ತು ಡೇಟಾ ಲೊಕಲೈಜೇಶನ್ ನಿಯಮಗಳು ಇದನ್ನು ಇನ್ನಷ್ಟು ಉತ್ತೇಜಿಸುತ್ತಿವೆ. ಈ ಮಟ್ಟಿಗೆ ತಂತ್ರಜ್ಞಾನ ಕ್ಷೇತ್ರದ ಚಟುವಟಿಗಳಿರುವಾಗ ಅದು ಮೊದಲು ಶುರುವಾಗುವುದು ಹಾಗೂ ಅತಿ ಹೆಚ್ಚು ಪರಿಣಾಮ ಬೀರುವುದು ಬೆಂಗಳೂರಿನಂತಹ ಐಟಿ ಹಬ್‌ಗಳಲ್ಲಿ.

AI ಆರ್ಥಿಕತೆಗೆ ದೊಡ್ಡ ಲಾಭ ನೀಡಬಹುದು. ಆದರೆ ಅದೇ ಸಮಯದಲ್ಲಿ, ಈ ಡೇಟಾ ಸೆಂಟರ್‌ಗಳು ಬಳಸುವ ವಿದ್ಯುತ್, ನೀರು ಮತ್ತು ಭೂಮಿಯ ಒತ್ತಡ ಸಾಮಾನ್ಯ ಜನರ ಮೇಲೆ ಬೀಳುತ್ತಿದೆ. ಸರಳವಾಗಿ ಹೇಳುವುದಾದರೆ, AI ಅಥವಾ ಯಾವುದೇ ತಾಂತ್ರಿಕ ಪ್ರಗತಿಗಳು ಕೇವಲ ಪರದೆಯೊಳಗೆ ಕಾಣಿಸಿಕೊಳ್ಳುವ ಡಿಜಿಟಲ್ ವಸ್ತುವಂತೂ ಅಲ್ಲ. ಅವು ನಿರಂತರವಾಗಿ ವಿದ್ಯುತ್ ಹೀರುವ, ತಣ್ಣಗೆ ಕೆಲಸ ಮಾಡುವ ಮತ್ತು ಪರಿಸರದ ಮೇಲೆ ನೇರ ಪರಿಣಾಮ ಬೀರುವ ಭೌತಿಕ ವ್ಯವಸ್ಥೆ. ಈ ವಾಸ್ತವವನ್ನು ಅರ್ಥಮಾಡಿಕೊಳ್ಳದೇ ತಂತ್ರಜ್ಞಾನ ಅಭಿವೃದ್ಧಿಯ ಬಗ್ಗೆ ಹೇಳಿದರೆ, ಅದರ ನಿಜವಾದ ಬೆಲೆಯನ್ನು ಯಾರು ತೆತ್ತುತ್ತಿದ್ದಾರೆ ಎಂಬ ಪ್ರಶ್ನೆ ಮರೆತೇ ಹೋಗುತ್ತದೆ.

ಆದರೂ ಕೆಲವು ಕಂಪನಿಗಳು ನೀರಿನ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಕೊಡಿಗೆಹಳ್ಳಿಯ ಡೇಟಾಸಾಮುದ್ರಾ ಸಂಸ್ಥೆಯ 5 ಮೆಗಾವಾಟ್ ಘಟಕದಲ್ಲಿ ನೀರಿನ ಬದಲು ಗಾಳಿಯಿಂದ ತಣ್ಣಗಾಗಿಸುವ ವ್ಯವಸ್ಥೆ ಅಳವಡಿಸಲಾಗಿದೆ. ಇದು ದುಬಾರಿಯಾದರೂ ನೀರನ್ನು ಉಳಿಸುತ್ತದೆ. ಇನ್ನು ಬ್ರೂಕ್ಫೀಲ್ಡ್ ಇನ್ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಜಂಟಿಯಾಗಿ ‘ಶೂನ್ಯ ನೀರು’ ಬಳಕೆಯ ಡೇಟಾ ಸೆಂಟರ್ ಮಾದರಿಯನ್ನು ಅಭಿವೃದ್ಧಿಪಡಿಸಿವೆ.

ಇದನ್ನೂ ಓದಿ: ಪ್ರೀಮಿಯಂ ಲೇಖನ | ಎಐ ಕಣ್ಣಲ್ಲೂ ಜೀವಂತವಾಗಿದೆ ಜಾತಿ ವ್ಯವಸ್ಥೆ: ಡಿಜಿಟಲ್ ಲೋಕದ ಕರಾಳ ಮುಖ ಅನಾವರಣ

ಡೇಟಾ ಸೆಂಟರ್‌ಗಳ ನೀರಿನ ನಿರಂತರ ಬಳಕೆ, ಭೂಗರ್ಭದ ನೀರನ್ನು ವೇಗವಾಗಿ ಖಾಲಿ ಮಾಡುತ್ತಿದ್ದು, ನಗರವನ್ನು ಟ್ಯಾಂಕರ್ ನೀರಿನತ್ತ ತಳ್ಳುತ್ತಿದೆ. ಪರಿಣಾಮವಾಗಿ ಕುಡಿಯುವ ನೀರಿಗೂ ದುಡ್ಡು ಕಟ್ಟಬೇಕಾದ ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿದೆ. ತಂತ್ರಜ್ಞಾನದಿಂದ ಲಾಭ ಪಡೆಯುವವರು ಒಂದೆಡೆ ಇದ್ದರೆ, ಅದರಿಂದಾಗುವ ಪರಿಸರ ಹಾನಿ ಮತ್ತು ಸಂಪನ್ಮೂಲ ಹಾನಿಗೆ ಬೆಲೆ ಕಟ್ಟುವವರು ಮತ್ತೊಂದೆಡೆ.

ಕೆಲವು ಕಂಪನಿಗಳು ಗಾಳಿ ಆಧಾರಿತ ತಣಿಸುವ ವ್ಯವಸ್ಥೆ ಅಥವಾ ಶೂನ್ಯ ನೀರಿನ ಮಾದರಿಗಳತ್ತ ಹೆಜ್ಜೆ ಇಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಆದರೆ ಐಟಿ ಪ್ರದೇಶಗಳೆಲ್ಲವೂ ಈ ನಿರ್ಧಾರಕ್ಕೆ ಬಂದಾಗ ಮಾತ್ರ ಸಮಸ್ಯೆಯಿಂದ ಕೊಂಚ ಚೇತರಿಸಿಕೊಳ್ಳಬಹುದು. ಡೇಟಾ ಸೆಂಟರ್‌ಗಳ ವಿಸ್ತರಣೆ ಯಾವ ನಗರದಲ್ಲಿ, ಯಾವ ಪರಿಸ್ಥಿತಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆ ಗಂಭೀರ ಚರ್ಚೆಯ ಅಗತ್ಯವಿದೆ. ನೀರಿನ ಭದ್ರತೆಯನ್ನು ಖಚಿತಪಡಿಸಿಕೊಂಡು ತಂತ್ರಜ್ಞಾನ ಅಭಿವೃದ್ಧಿಯ ನೀತಿಗಳನ್ನು ರೂಪಿಸದಿದ್ದರೆ, ಎಲ್ಲಾ ಅಭಿವೃದ್ಧಿಯೂ ʼಮರುಭೂಮಿಯಲ್ಲೊಂದು ಮನೆ ಕಟ್ಟಿʼದಂತಾಗುವ ಅಪಾಯವಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...

ಪ್ರೀಮಿಯಂ ಲೇಖನ | ಗಾಂಧಿ ಹತ್ಯೆಗೆ ನಿಜವಾದ ಕಾರಣವೇ ಬೇರೆ: ‘ಮುಸ್ಲಿಮರ ಪರ’ ಆರೋಪದಾಚೆಗಿನ ಸತ್ಯ ಏನು?

ಗಾಂಧಿಯವರ ಮೇಲೆ ದ್ವೇಷದ ಬೇರುಗಳನ್ನು ಅರಿಯಲು ಅವರ ರಾಜಕೀಯದ ಸ್ವರೂಪವನ್ನು ಅರಿಯಬೇಕು....