ಒಂದು ವ್ಯವಸ್ಥೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಅಧ್ಯಯನ ಮಾಡುವಾಗ ಸಮಗ್ರವಾದ ದೃಷ್ಟಿಕೋನ ಅತ್ಯಗತ್ಯ. ಸಮಾಜದ ಒಟ್ಟು ವ್ಯವಸ್ಥೆ; ಅಂದರೆ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳು ಶಿಕ್ಷಣದ ಬೆಳವಣಿಗೆ ಮತ್ತು ಏಳು-ಬೀಳುಗಳನ್ನು ಪ್ರಭಾವಿಸುತ್ತವೆ. ಶಿಕ್ಷಣ ಮಾನವನ ಮೂಲಭೂತ ಹಕ್ಕು, ಶಿಕ್ಷಣ ಸಮಕಾರಿ (Equaliser), ಸಾಮಾಜಿಕ ಒಳಿತಿನ ಸಾಧನ, ಸಾಮಾಜಿಕ ಪರಿವರ್ತನೆಯ ಅಸ್ತ್ರ ಇತ್ಯಾದಿ ಮೂಲಭೂತ ತತ್ವಗಳನ್ನು ಒಪ್ಪುತ್ತಲೇ, ಶಿಕ್ಷಣ ಆಯಾ ಸಮಾಜಗಳಲ್ಲಿನ ನೀಳ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕತೆ ವ್ಯವಸ್ಥೆಯ ಕೂಸಾಗಿದ್ದು, ಶಿಕ್ಷಣದ ಸಂರಚನೆ, ಸ್ವರೂಪ ಹಾಗೂ ಅದನ್ನು ಕಟ್ಟಿಕೊಡಬೇಕಾದ ನೀತಿ, ಕಾನೂನು ಮತ್ತು ಕಾರ್ಯಕ್ರಮಗಳು ನೀಳ ವ್ಯವಸ್ಥೆಯ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಒಟ್ಟು ಆಶಯಗಳನ್ನು ಅವಲಂಬಿಸಿರುತ್ತವೆ ಎಂಬುದು ಒಪ್ಪಿತ ಸಾರ್ವತ್ರಿಕ ಸತ್ಯ.
ಶಿಕ್ಷಣ ವ್ಯವಸ್ಥೆ, ಈ ನೀಳ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯ ಒಂದು ಉಪ ವ್ಯವಸ್ಥೆಯಾಗಿರುತ್ತದೆ. ಉದಾಹರಣೆಗೆ, ಪ್ರಸ್ತುತ ಸಮಾಜದಲ್ಲಿ, ಸಾಮಾಜಿಕವಾಗಿ ಅಸಮಾನತೆ, ತಾರತಮ್ಯ, ಶ್ರೇಣೀಕೃತ ವಿಭಜನೆ, ಜಾತಿ ವ್ಯವಸ್ಥೆ ಮತ್ತು ವ್ಯಾಪಕ ಭ್ರಷ್ಟಾಚಾರ; ಆರ್ಥಿಕವಾಗಿ ಖಾಸಗೀಕರಣ, ವ್ಯಾಪಾರೀಕರಣ, ಕಾರ್ಪೋರೇಟರೀಕರಣ, ಕೊಳ್ಳಬಾಕುತನ, ಲಾಭಕೋರತನ, ಸಂಪತ್ತಿನ ಅಸಮಾನ ಹಂಚಿಕೆ ಮತ್ತು ರಾಜಕೀಯವಾಗಿ ಪಕ್ಷಗಳಲ್ಲಿ ಸೈದ್ಧಾಂತಿಕ ದಿವಾಳಿತನ, ಸಂವಿಧಾನವನ್ನು ಗೌಣಗೊಳಿಸಿ ಒಂದು ಧರ್ಮ, ಜನಾಂಗ ಮತ್ತು ಕೋಮುವಾದಿ ನೆಲೆಯ ರಾಜಕೀಯ ಬೆಳವಣಿಗೆಗಳು ನೀಳ ವ್ಯವಸ್ಥೆಯ ಪ್ರಮುಖ ಸೂಚ್ಯಂಕಗಳಾಗಿವೆ. ಈ ಎಲ್ಲ ಸೂಚ್ಯಂಕಗಳು ನಮಗೆ ಶಿಕ್ಷಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ ಇವು ಮಾನದಂಡಗಳಾಗಿವೆ. ಉದಾಹರಣೆಗಾಗಿ, ರಾಷ್ಟ್ರೀಯ ಶಿಕ್ಷಣ ನೀತಿ (2020), ಎನ್‌ಸಿಇಆರ್‌ಟಿಇ ವತಿಯಿಂದ ಹೊಸ ಪಠ್ಯಕ್ರಮ ರಚನೆ (2000 ಮತ್ತು 2023), ಪಠ್ಯ ಪುಸ್ತಕಗಳ ಪುನರ್‌ರಚನೆಯ ಮೂಲಕ ಇತಿಹಾಸವನ್ನು ತಿರುಚುವುದು ಹಾಗೂ ವೈಜ್ಞಾನಿಕ ಶಿಕ್ಷಣವನ್ನು ಪಲ್ಲಟಗೊಳಿಸುವ ಹಲವು ಬೆಳವಣಿಗೆಗಳು (1998ರಿಂದ 2004 ಮತ್ತು 2014ರಿಂದ ಇಲ್ಲಿಯವರೆಗೆ), ಕರ್ನಾಟಕದಲ್ಲಿ ಪಠ್ಯಪುಸ್ತಗಳಲ್ಲಿನ ಪಾಠಗಳನ್ನು ತಿರುಚುವ ಪ್ರಯತ್ನ (2021-22) ಇತ್ಯಾದಿಗಳು.
ಪಿಕೆಟ್ಟಿ (2020) ಅವರ ಇತ್ತೀಚಿನ ಪುಸ್ತಕ, ಕ್ಯಾಪಿಟಲ್ ಅಂಡ್ ಐಡಿಯಾಲಜಿಯಲ್ಲಿ ಅವರು ಶಿಕ್ಷಣದ ದೃಷ್ಟಿಕೋನದಲ್ಲಿ ಈ ಸೂಕ್ಷ್ಮತೆಯನ್ನು ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ, ಶಿಕ್ಷಣದ ಪ್ರವೇಶ ಮತ್ತು ಅದಕ್ಕಾಗಿದ್ದ ಹಣಕಾಸಿನ ಹೂಡಿಕೆಯ ಮಾದರಿಗಳು ನಾವು ಇಂದು ಕಾಣುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಉಲ್ಬಣಗೊಳಿಸುವುದರಲ್ಲಿ ಆಳವಾಗಿ ತೊಡಗಿಸಿಕೊಂಡಿವೆ ಎಂಬುದನ್ನು ಅವರು ತೋರಿಸಿದ್ದಾರೆ. ಈ ಅರ್ಥದಲ್ಲಿ, ಶಿಕ್ಷಣವು ಸವಲತ್ತುಗಳನ್ನು ಜಯಿಸುವ ಸಾಧನವಾಗುವ ಬದಲು ಸವಲತ್ತುಗಳನ್ನು ರಕ್ಷಿಸುವ ಸಾಧನವಾಗಿದೆ. ಅಂದರೆ, ಶಿಕ್ಷಣ ಇಂದಿಗೂ ಒಂದು ಸವಲತ್ತಾಗಿಯೇ ಉಳಿದಿದೆ. ಒಂದು ಉಲ್ಲೇಖಿತ ಕಾಲಘಟ್ಟದಲ್ಲಿ ಶಿಕ್ಷಣದ ಬೆಳವಣಿಗೆಯ ವಿಶ್ಲೇಷಣೆ ಮಾಡುವಾಗ ಈ ಬಗೆಯ ಪ್ರಮಾಣೀಕರಿಸದ ಚೌಕಟ್ಟು ನಮ್ಮನ್ನು ಹೆಚ್ಚು ವಾಸ್ತವದ ಕಡೆಗೆ ಕರೆದೊಯ್ಯುತ್ತದೆ.
ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣದ ಸಂಕ್ಷಿಪ್ತ ಇತಿಹಾಸ
1833ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರಿನಲ್ಲಿ ಉಚಿತ ಆಂಗ್ಲ ಶಾಲೆಯನ್ನು ಪ್ರಾರಂಭಿಸುವ ಮೂಲಕ ರಾಜ್ಯದಲ್ಲಿ ಆಧುನಿಕ ವಿದ್ಯಾಭ್ಯಾಸವು ಆರಂಭಗೊಂಡಿತು. 1840ರಲ್ಲಿ ಲಂಡನ್ ಮಿಷನ್‌ನಿಂದ ಬಾಲಕಿಯರಿಗಾಗಿ ಮೊದಲ ಶಾಲೆಯು ಬೆಂಗಳೂರು ನಗರದಲ್ಲಿ ಪ್ರಾರಂಭವಾಯಿತು. ಶಾಲೆಗಳನ್ನು ತೆರೆಯುವ ಕ್ರೈಸ್ತ ಮಿಷನರಿಗಳ ಪ್ರಯತ್ನಕ್ಕೆ ಸರ್ಕಾರ ನೆರವು ನೀಡಿದ ಕಾರಣ 1840ರಿಂದ 1854ರ ಅವಧಿಯಲ್ಲಿ, ವೆಸ್ಲಿಯನ್ ಮಿಷನ್ ಹಲವು ಜಿಲ್ಲಾ ಕೇಂದ್ರಗಳಲ್ಲಿ ಇಂಗ್ಲಿಷ್ ಶಾಲೆಗಳನ್ನು ಸ್ಥಾಪಿಸಿತು.
ಇದೇ ವೇಳೆಗೆ ಬ್ರಿಟಿಷರ ಆಳ್ವಿಕೆಯಲ್ಲಿ 1854ರಲ್ಲಿ ವುಡ್ಸ್ ಡಿಸ್ಪ್ಯಾಚ್ ಪ್ರಕಟಗೊಂಡ ಮೇಲೆ, 1857ರಲ್ಲಿ ಮೈಸೂರಿನ ಮುಖ್ಯ ಆಯುಕ್ತರಾಗಿದ್ದ ಸರ್ ಮಾರ್ಕ್ ಕಬ್ಬನ್‌ರವರು, ಮೈಸೂರು ಮತ್ತು ಕೊಡಗಿನಲ್ಲಿ ವಿದ್ಯಾಭ್ಯಾಸದ ವಿಸ್ತರಣೆಗೆ ಒಂದು ಯೋಜನೆಯನ್ನು ಸಿದ್ಧಗೊಳಿಸಿದರು. ಈ ಯೋಜನೆಗೆ ಈಸ್ಟ್ ಇಂಡಿಯಾ ಕಂಪನಿ ಅನುಮತಿ ನೀಡಿತು. ಈ ಯೋಜನೆಯ ಅಡಿ ಮೈಸೂರು ಮತ್ತು ಕೊಡಗಿಗಾಗಿ 1857ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಲಾಯಿತು. ಸಾರ್ವಜನಿಕ ಶಿಕ್ಷಣದ ನಿರ್ದೇಶಕರಾಗಿದ್ದ ಲೂಯಿಸ್ ರೈಸ್ ಅವರ ಯೋಜನೆಯಂತೆ 1861ರಿಂದ 1880ರ ನಡುವೆ ಹಂತ ಹಂತವಾಗಿ ಹೋಬಳಿ ಕೇಂದ್ರದಲ್ಲಿ 645 ಹೋಬಳಿ ಶಾಲೆಗಳು ಆರಂಭವಾದವು. ಇವು ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸುವ ಸಾರ್ವಜನಿಕ ಶಾಲೆಗಳಾಗಿದ್ದವು. ನಮ್ಮ ರಾಜ್ಯದ ಶಿಕ್ಷಣ ಚರಿತ್ರೆಯಲ್ಲಿ ಇದು ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು.
ಇದನ್ನೂ ಓದಿರಿ: ಕೊಳೆಗೇರಿಗಳೆಂದರೆ ‘ಪುಟ್ಟ ಭಾರತ’
ಹಳೆಯ ಮೈಸೂರಿನಲ್ಲಿ ಚಾಲ್ತಿಯಲ್ಲಿದ್ದ ಪ್ರಾಥಮಿಕ ಶಿಕ್ಷಣದ ಅರ್ಥ ಮತ್ತು ವ್ಯಾಪ್ತಿಯು ಸ್ವಾತಂತ್ರ್ಯಾ ನಂತರ ಬದಲಾವಣೆಗೆ ಒಳಗಾಯಿತು. 1955-56ರಲ್ಲಿ ನಾಲ್ಕು ವರ್ಷಗಳ ಪ್ರಾಥಮಿಕ ಮತ್ತು ನಾಲ್ಕು ವರ್ಷಗಳ ಮಾಧ್ಯಮಿಕ ಶಿಕ್ಷಣವನ್ನು ಸಂಯೋಜಿಸಿ 8 ವರ್ಷಗಳ ಸಮಗ್ರ ಪ್ರಾಥಮಿಕ ಶಿಕ್ಷಣವನ್ನು ರೂಪಿಸಲಾಯಿತು. 1ರಿಂದ 4ನೇ ತರಗತಿಯವರೆಗೆ ಕಿರಿಯ ಪ್ರಾಥಮಿಕ ಶಾಲೆ ಮತ್ತು ಮುಂದಿನ ನಾಲ್ಕು ತರಗತಿಗಳನ್ನು ಹೊಂದಿರುವ ಶಾಲೆಗಳು ಹಿರಿಯ ಪ್ರಾಥಮಿಕ ಶಾಲೆಗಳಾದವು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಹೊಸದಾಗಿ ಪ್ರಾರಂಭವಾದ ಮಾಧ್ಯಮಿಕ ಶಿಕ್ಷಣದ ಶಾಲೆಗಳು ಎಲ್ಲಾ ಎಂಟು ತರಗತಿಗಳನ್ನು ಹೊಂದಿದ್ದವು. ಆದಾಗ್ಯೂ, ಬೆಳಗಾವಿ ಹಾಗು ಹಿಂದಿನ ಹೈದರಾಬಾದ್ ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣದ ಅವಧಿ ಏಳು ವರ್ಷಗಳಾಗಿತ್ತು; 1ರಿಂದ 4ನೇ ತರಗತಿ ಕಿರಿಯ ಪ್ರಾಥಮಿಕ ಮತ್ತು 5ರಿಂದ 7ನೇ ತರಗತಿ ಹಿರಿಯ ಪ್ರಾಥಮಿಕವಾಗಿತ್ತು. ಮದ್ರಾಸ್ ಮತ್ತು ಕೊಡಗಿನಲ್ಲಿ ಪ್ರಾಥಮಿಕ ಶಿಕ್ಷಣದ ಅವಧಿ ಎಂಟು ವರ್ಷಗಳಾಗಿತ್ತು. ನಂತರ, ಶಿಕ್ಷಣ ಏಕೀಕರಣ ಸಲಹಾ ಸಮಿತಿಯು ಪ್ರಾಥಮಿಕ ಶಿಕ್ಷಣವನ್ನು ಏಳು ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್ ಆಗಿರಬೇಕೆಂದು ಶಿಫಾರಸು ಮಾಡಿತು. ಈ ಶಿಫಾರಸು 1959-60ರಿಂದ ಪ್ರಾರಂಭವಾಗಿ 1962-63ರವರೆಗೆ ಹಂತಹಂತವಾಗಿ ಜಾರಿಗೆ ತರಲಾಯಿತು. ಪ್ರಾಥಮಿಕ ಶಿಕ್ಷಣದಲ್ಲಿ ಏಕರೂಪತೆಯನ್ನು ತರುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿತ್ತು ಎಂಬುದು ಗಮನಿಸಬೇಕಾದ ಅಂಶ.
ಪ್ರಾಥಮಿಕ ಶಿಕ್ಷಣದ ಪ್ರಗತಿಯ ವೇಗ ನಂತರದ ಎಲ್ಲಾ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿತು. 1955-56ರಿಂದ 1970-71ರವರೆಗೆ ಪ್ರಾಥಮಿಕ ಶಿಕ್ಷಣದ ವಿಸ್ತರಣೆಯನ್ನು ಕೆಳಗಿನ ಕೋಷ್ಟಕದಿಂದ ತಿಳಿಯಬಹುದು.
ಕೋಷ್ಟಕ 1: 1955-56ರಿಂದ 1970-71ರವರೆಗೆ ಪ್ರಾಥಮಿಕ ಶಿಕ್ಷಣದ ವಿಸ್ತರಣೆ.

ಮೈಸೂರು ಕರ್ನಾಟಕವಾದ ನಂತರ ಪ್ರಾಥಮಿಕ ಶಿಕ್ಷಣ
ನಮಗೆಲ್ಲ ಗೊತ್ತಿರುವಂತೆ ನವಂಬರ್ 1, 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಲಾಯಿತು. ಈ ಐತಿಹಾಸಿಕ ನಿರ್ಧಾರ ಕರ್ನಾಟಕದ ಅಭಿವೃದ್ಧಿಗೆ ಹೊಸ ‘ಕ’ ಭಾಷ್ಯದ ಮೂಲಕ; ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಅಭಿವೃದ್ಧಿಗೆ ಅನನ್ಯತೆಯನ್ನು ಹಾಗೂ ಹೆಚ್ಚಿನ ಪುಷ್ಟಿಯನ್ನು ತಂದುಕೊಟ್ಟಿತು. ಮೈಸೂರು ಕರ್ನಾಟಕವಾಗಿ ನೇಮಕಗೊಂಡ ಮೊದಲ 15 ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತಷ್ಟು ವಿಸ್ತರಿಸಿ ಬಲಪಡಿಸಲು ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ಕೇಂದ್ರದ ಸಹಯೋಗದಲ್ಲಿ ಕೈಗೊಂಡಿತು. ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಜಾರಿಯಾದ ರಾಷ್ಟೀಯ ಶಿಕ್ಷಣ ನೀತಿ 1968, 1986 ಮತ್ತು 1992 (ಪರಿಷ್ಕೃತ)ರ ಅನ್ವಯ ಹಲವು ಕಾರ್ಯಕ್ರಮಗಳು ಈ ವಿಸ್ತರಣೆಗೆ ಸಹಾಯಕವಾದವು. 1973-74ರಿಂದ 1999-2000ರವರೆಗೆ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕೆ ಅವಕಾಶದ ಲಭ್ಯತೆಗಳು ಪರಿಮಾಣಾತ್ಮಕ ಹಾಗೂ ಗುಣಾತ್ಮಕವಾಗಿ ವಿಸ್ತರಣೆಯಾದವು. ಆ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಾದ ಬೆಳವಣಿಗೆಗಳನ್ನು ಕೆಳಗಿನ ಕೋಷ್ಠಕದಲ್ಲಿ ನೀಡಲಾಗಿದೆ.
ಕೋಷ್ಟಕ 2: 1973-74ರಿಂದ 1999-2000ದವರೆಗೆ ಪ್ರಾಥಮಿಕ ಶಿಕ್ಷಣದ ಬೆಳವಣಿಗೆ

ಶಿಕ್ಷಣದ ಸಾರ್ವತ್ರೀಕರಣಕ್ಕೆ ಪರಿಮಾಣಾತ್ಮಕವಾಗಿ ಆದ ಈ ಎಲ್ಲ ಬೆಳವಣಿಗೆಗಳನ್ನು ದಾಖಲಿಸುತ್ತಲೇ ಕೆಲವು ಮುಖ್ಯವಾದ ಅಂಶಗಳನ್ನು ವಿಮರ್ಶಾತ್ಮಕವಾಗಿ ಅವಲೋಕಿಸಬೇಕಿದೆ. ಈ ಎಲ್ಲ ಪ್ರಾಥಮಿಕ ಶಿಕ್ಷಣದ ಕಾರ್ಯಕ್ರಮಗಳಲ್ಲಿ ಮುಂಗಾಣ್ಕೆಯ ಕೊರತೆ, ಸಂವಿಧಾನದ ಆಶಯಗಳಾದ ಸಮಾನ ಅವಕಾಶ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯರಹಿತ ಸಮ-ಸಮಾಜದ ಪರಿಕಲ್ಪನೆಯ ಕೊರತೆಯಿಂದ, ಈ ಹಿಂದೆ ಪ್ರಾಥಮಿಕ ಶಿಕ್ಷಣದಲ್ಲಿದ್ದ ಅಸಮಾನತೆ, ತಾರತಮ್ಯ ಮತ್ತು ಶ್ರೇಣೀಕೃತ ವ್ಯವಸ್ಥೆಯನ್ನು ಸಮಾನತೆಯ ಕಡೆಗೆ ಕೊಂಡೊಯ್ಯವ ಬದಲು ಅಸಮಾನತೆ, ತಾರತಮ್ಯ ಮತ್ತು ಶ್ರೇಣೀಕೃತ ವ್ಯವಸ್ಥೆಯನ್ನು ಪೋಷಿಸಿ ಬೆಳೆಸುವ ಕೆಲಸಗಳು ಕರ್ನಾಟಕವೆಂದು ನಾಮಕರಣಗೊಂಡ ಮೇಲೂ ನಿರಂತರವಾಗಿ ಮುಂದುವರೆದವು ಎಂಬುದು ಗಮನಾರ್ಹ ಸಂಗತಿ. ಈ ಹಿಂದೆ ಹಳೆ ಮೈಸೂರು, ಮದ್ರಾಸ್ ಪ್ರಾಂತ್ಯ, ಮುಂಬಯಿ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕದಲ್ಲಿನ ತಾರತಮ್ಯಗಳು ಇಂದಿಗೂ ಮುಂದುವರೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಜೊತೆಗೆ, ಕೊಥಾರಿ ಆಯೋಗದ ಶಿಫಾರಸ್ಸಿನಂತೆ ಒಕ್ಕೂಟ ಸರ್ಕಾರವು ಶಿಕ್ಷಣಕ್ಕೆ ತನ್ನ ಜಿಡಿಪಿಯ ಶೇಕಡಾ 6ರಷ್ಟನ್ನು ವಿನಿಯೋಗಿಸುವ ಬದಲು ವಿಶ್ವ ಬ್ಯಾಂಕ್ ಮತ್ತು ಐಎಮ್‌ಎಫ್ ಸಂಸ್ಥೆಗಳಿಂದ ಸಾಲ ಪಡೆಯುವ ಮೂಲಕ, 90ರ ದಶಕದಲ್ಲಿ ಪ್ರಾರಂಭವಾದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಕ್ಕೆ ಮುನ್ನುಡಿ ಬರೆಯುವ ಮೂಲಕ ಶಿಕ್ಷಣದ ಖಾಸಗೀಕರಣವನ್ನು ಮತ್ತಷ್ಟು ಪ್ರಭಾವಿಸಿತು. ಇದರ ಭಾಗವಾಗಿಯೇ ಡಿಪಿಇಪಿ (DPEP), ಸರ್ವ ಶಿಕ್ಷಣ ಅಭಿಯಾನದ (SSA) ಮತ್ತು ಇತ್ತೀಚಿನ ಸ್ಟಾರ್ಸ್ (STARS) ಇಂದು, ಖಾಸಗೀಕರಣದ ಲಾಬಿ ಸರ್ಕಾರಗಳನ್ನು ನಡೆಸುವ ಮತ್ತು ನಿರ್ದೇಶಿಸುವ ಮಟ್ಟಿಗೆ ಬೆಳೆದು ನಿಂತಿದೆ. ಒಂದು ಕಾಲದಲ್ಲಿ ಹೆಂಡದ ಲಾಬಿ ಸರ್ಕಾರಗಳನ್ನು ನಿಯಂತ್ರಿಸುತ್ತಿತ್ತು. ಇಂದು, ಇವುಗಳ ಜೊತೆಗೆ ಖಾಸಗಿ ಶಿಕ್ಷಣ, ಆರೋಗ್ಯ ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಒಡೆಯರು ಸರ್ಕಾರಗಳನ್ನು ರಚಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ ಎಂಬುದು ನಗ್ನ ಸತ್ಯವಾಗಿದೆ.
ನಮಗೆಲ್ಲ ತಿಳಿದಿರುವಂತೆ ಶಿಕ್ಷಣ ಆಯೋಗ (ಕೊಥಾರಿ ಆಯೋಗ) 1966ರಲ್ಲಿಯೇ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರಗಳು ಶ್ರಮಿಸಬೇಕೆಂದು ಮಹತ್ವದ ಶಿಫಾರಸ್ಸನ್ನು ಮಾಡಿತ್ತು. ಈ ಮಹತ್ವದ ಶಿಫಾರಸ್ಸು 1968, 1986 ಮತ್ತು 1992 (ಪರಿಷ್ಕೃತ) ರಾಷ್ಟ್ರೀಯ ಶಿಕ್ಷಣ ನೀತಿಗಳಲ್ಲಿಯೂ ಸ್ಪಷ್ಟವಾಗಿ ದಾಖಲಾಗಿತ್ತು. ಉದಾಹರಣೆಗೆ, ಸ್ವತಂತ್ರ ಭಾರತದ ಮೊದಲ ಸಮಗ್ರ ಹಾಗು ವಿಸ್ತೃತ ನೀತಿಯಾದ, 1986ರ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ಯಾರಾ 3.2ರಲ್ಲಿ ಈ ಕೆಳಗಿನಂತೆ ಘೋಷಿಸಲಾಗಿತ್ತು.
ಇದನ್ನೂ ಓದಿರಿ: ವಿಶ್ಲೇಷಣೆ | ತೆಲಂಗಾಣ, ಆಂಧ್ರದಲ್ಲಿ ಒಳಮೀಸಲಾತಿ ಹಂಚಿಕೆ ಹೇಗೆ ಮಾಡಲಾಗಿದೆ?
ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯ ಅರ್ಥದಲ್ಲಿ, ಎಲ್ಲ ವಿದ್ಯಾರ್ಥಿಗಳಿಗೆ ಜಾತಿ, ಮತ, ಪ್ರದೇಶ ಅಥವಾ ಲಿಂಗ ಭೇದಗಳಿಲ್ಲದೆ ಒಂದು ಹಂತದವರೆಗೆ ಸಮಾನರೂಪದ ಶಿಕ್ಷಣದ ಅವಕಾಶವನ್ನು ಕಲ್ಪಿಸುವುದಾಗಿದೆ. ಈ ಗುರಿಯನ್ನು ಮುಟ್ಟಲು ಸರ್ಕಾರವು ನಿಗದಿತ ಹಣಕಾಸಿನ ಬೆಂಬಲವುಳ್ಳ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತದೆ. 1968ರ ನೀತಿಯ ಶಿಫಾರಸ್ಸಿನ ಅನ್ವಯ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು.
ದುರಾದೃಷ್ಟವೆಂದರೆ, ಒಕ್ಕೂಟ ಸರ್ಕಾರವಾಗಲಿ ಅಥವಾ ಕರ್ನಾಟಕವನ್ನೂ ಒಳಗೊಂಡಂತೆ ದೇಶದ ಯಾವ ರಾಜ್ಯಗಳೂ ಸಮಾನತೆಯ ನೆಲೆಯಲ್ಲಿ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡುವ ಕಾರ್ಯಕ್ಕೆ ಮುಂದಾಗಲಿಲ್ಲ. ಹೀಗಾಗಿ, ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯರಹಿತ ಸಮಸಮಾಜ ಇಂದಿಗೂ ಕನಸಾಗಿಯೇ ಉಳಿದಿದೆ. ಬದಲಾಗಿ, ಇಂದು ನಾವು ಸಮತಲ ಮತ್ತು ಲಂಬತಲದ ತಾರತಮ್ಯ ಶ್ರೇಣೀಕೃತ ಅಸಮಾನತೆಯ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗೆ ಸಾಕ್ಷಿಯಾಗಿದ್ದೇವೆ. ಇದು ಹಲವು ಬಗೆಯ ವರ್ಗಾಧಾರಿತ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದೆ. ಉಳ್ಳವರಿಗೊಂದು ಇಲ್ಲದವರಿಗೊಂದು, ಶ್ರೀಮಂತರಿಗೊಂದು, ಬಡವರಿಗೊಂದು ಮತ್ತು ನಗರಕ್ಕೊಂದು ಗ್ರಾಮೀಣಕ್ಕೊಂದು ಬಗೆಯ ಶಿಕ್ಷಣದ ಮೂಲಕ ಸಂವಿಧಾನದಲ್ಲಿನ ಸಮಾನತೆಯ ಆಶಯವನ್ನು ದಿನನಿತ್ಯ ಉಲ್ಲಂಘಿಸುತ್ತಿದ್ದೇವೆ. ಈ ಶ್ರೇಣೀಕೃತ ಅಸಮಾನ ತಾರತಮ್ಯ ವ್ಯವಸ್ಥೆಯನ್ನು ನಾವು ಈ ಕೆಳಗಿನಂತೆ ವರ್ಗೀಕರಿಸಬಹುದಾಗಿದೆ:
ಕೋಷ್ಟಕ 3: ಅಸಮಾನ ಶ್ರೇಣೀಕೃತ ವರ್ಗಾಧಾರಿತ ಶಾಲೆಗಳು

ಮುಚ್ಚುತ್ತಿರುವ ಸರ್ಕಾರಿ ಕನ್ನಡ ಶಾಲೆಗಳು
ಮೇಲೆ ವಿವರಿಸಿದ ಕಾರಣಗಳಿಂದಾಗಿ, ಇಂದು ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕಾರ್ಪೋರೇಟೀಕರಣ ನಾಗಾಲೋಟದಿಂದ ಸಾಗಿದೆ. ಸರ್ಕಾರಿ ಕನ್ನಡ ಶಾಲೆಗಳು ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲದೆ ವರ್ಷದಿಂದ ವರ್ಷಕ್ಕೆ ಮುಚ್ಚುತ್ತಿವೆ. ಕಳೆದ 23 ವರ್ಷಗಳಲ್ಲಿ ಬರೋಬ್ಬರಿ 6803 ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಿವೆ. ಸರ್ಕಾರಿ ಪ್ರಾಥಮಿಕ ಶಾಲೆಗಳ ಸಂಖ್ಯೆಯ ಇಳಿಕೆಯನ್ನು ಕೆಳಗಿನ ಕೋಷ್ಠಕದಿಂದ ತಿಳಿಯಬಹುದಾಗಿದೆ.
ಕೋಷ್ಟಕ 4: 1999-2000ರಿಂದ 2023-24ರ ಅವಧಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಂಖ್ಯೆ

ದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ
ಮುಚ್ಚಿದ ಶಾಲೆಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಲೇ, ಹಾಲಿ ಇರುವ ಶಾಲೆಗಳಲ್ಲಿಯೂ ಗುಣಾತ್ಮಕ ಶಿಕ್ಷಣ ಒದಗಿಸಲು ಶಿಕ್ಷಕರ ಲಭ್ಯತೆ ಇದೆಯೇ ಎಂದು ನೋಡಿದರೆ, ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಗುಣಾತ್ಮಕ ಶಿಕ್ಷಣಕ್ಕೆ ದೊಡ್ಡ ಸವಾಲಾಗಿದೆ. ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಒಟ್ಟು ಮಂಜೂರಾದ ಹುದ್ದೆಗಳು 1,87,993. ಆದರೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ 1,44,747. ಸರಿ ಸುಮಾರು 43,246 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅತಿಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಮೊದಲ ಹತ್ತು ಜಿಲ್ಲೆಗಳು ಈ ಕೆಳಗಿನಂತಿವೆ .
ಕೋಷ್ಟಕ-5: ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಮೊದಲ ಹತ್ತು ಜಿಲ್ಲೆಗಳ ಪಟ್ಟಿ (2023-24ರಲ್ಲಿದ್ದಂತೆ)

ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳುವ ಬದಲು ರಾಜ್ಯ ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿಯ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಅನಿಶ್ಚಿತತೆಗೆ ದೂಡಿ ದುರ್ಬಲಗೊಳಿಸಿದೆ. ಅತಿಥಿ ಶಿಕ್ಷಕರಿಗೆ ಯಾವುದೇ ರೀತಿಯ ಸೇವಾಭದ್ರತೆಯಾಗಲಿ ಅಥವಾ ಕನಿಷ್ಟ ವೇತನವನ್ನಾಗಲಿ ನೀಡುತ್ತಿಲ್ಲ. ಜೊತೆಗೆ ಈ ಹಿಂದೆ, 1ರಿಂದ 7ನೇ ತರಗತಿಗೆ ನೇಮಕವಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ತರಗತಿಗೆ ಸೀಮಿತಗೊಳಿಸುವ ಮೂಲಕ ಹಿಂಬಡ್ತಿ ನೀಡಿ ಅವರ ಉತ್ಸಾಹವನ್ನು ಕುಗ್ಗಿಸಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ಸಹ ಶಿಕ್ಷಕರಾಗಿ ವೃತ್ತಿಗೆ ಸೇರುವ ಶಿಕ್ಷಕರಿಗೆ ಜೇಷ್ಠತೆ ಅಥವಾ ಸೇವೆಗೆ ಸೇರಿದ ನಂತರ ಪಡೆದ ವಿದ್ಯಾರ್ಹತೆಗಳನ್ನು ಪರಿಗಣಿಸಿ ಅವರ ವೃತ್ತಿ ಬದುಕಿನಲ್ಲಿ ಮುಂಬಡ್ತಿ ನೀಡಬೇಕಾಗಿದ್ದ ಸರ್ಕಾರ ಅವರಿಗೆ ಅನ್ಯಾಯವೆಸಗುವ ಮೂಲಕ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಆಸಕ್ತಿ ಕಳೆದುಕೊಳ್ಳುವಂತಾಗಿದೆ. ಒಟ್ಟಾರೆ, ಶಿಕ್ಷಕರ ನೇಮಕಾತಿ, ವರ್ಗಾವಣೆ, ಬಡ್ತಿ ಮತ್ತು ಸೇವಾಭದ್ರತೆ ವಿಷಯದಲ್ಲಿ ಸಾಕಷ್ಟು ನ್ಯೂನತೆ ಗೊಂದಲದಿಂದಾಗಿ ಗುಣಾತ್ಮಕ ಕಲಿಕೆ ನೆನೆಗುದಿಗೆ ಬಿದ್ದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನೇಮಕವಾದ ಅತಿಥಿ ಶಿಕ್ಷಕರ ವಿವರವನ್ನು ಕೆಳಗೆ ನೀಡಲಾಗಿದೆ.
ಕೋಷ್ಟಕ 6: ಕಳೆದ ನಾಲ್ಕು ವರ್ಷದಲ್ಲಿ ವರ್ಷದಿಂದ ವರ್ಷಕ್ಕೆ ಅತಿಥಿ ಶಿಕ್ಷಕರ ಸಂಖ್ಯೆ ಹೆಚ್ಚುತ್ತಿದೆ

ಹಳಿ ತಪ್ಪಿದ ಶಿಕ್ಷಣ ಹಕ್ಕು ಕಾಯಿದೆ-2009.
ದೇಶದ ಎಲ್ಲಾ ಮಕ್ಕಳಿಗೆ ಶಿಕ್ಷಣದ ಮೂಲಭೂತ ಹಕ್ಕನ್ನು ಕೊಡಮಾಡುವ ಸಂವಿಧಾನದ ವಿಧಿ 21ಎ ಅನ್ನು ಜಾರಿಗೊಳಿಸಲು 2009ರಲ್ಲಿ ಯುಪಿಎ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ಅನ್ನು ರೂಪಿಸಿ 2010ರಲ್ಲಿ ಜಾರಿಗೊಳಿಸಿತು. ಈ ಮಹತ್ವದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ ಸಂದರ್ಭದಲ್ಲಿ, ಮಸೂದೆಯ ಉದ್ದೇಶ ಮತ್ತು ಕಾರಣಗಳನ್ನು ವಿವರಿಸುವ 4ನೇ ಪ್ಯಾರಾದಲ್ಲಿ ಈ ಕೆಳಕಂಡಂತೆ ಹೇಳಲಾಗಿತ್ತು.
ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!
“ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ಮಾನವೀಯ ನೆಲೆಯಲ್ಲಿ ಸಮ ಸಮಾಜವನ್ನು ಕಟ್ಟಿಕೊಳ್ಳುವ ಕೆಲಸ ಎಲ್ಲರನ್ನೂ ಒಳಗೊಳ್ಳುವ ಪ್ರಾಥಮಿಕ ಶಿಕ್ಷಣವನ್ನು ಕಲ್ಪಿಸುವ ಅವಕಾಶದಿಂದ ಮಾತ್ರ ಸಾಧ್ಯವೆಂಬ ಬಲವಾದ ನಂಬಿಕೆಯಿಂದ ಈ ಉದ್ದೇಶಿತ ಕಾನೂನನ್ನು ತರುತ್ತಿದ್ದೇವೆ.’’
ಆದರೆ, ಈ ಆಶಯ ಕರ್ನಾಟಕದಲ್ಲಿ ನೆರವೇರಲೇ ಇಲ್ಲ. 2010ರಿಂದ ಇಲ್ಲಿಯವರೆಗೆ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೊಳಿಸುವ ಯಾವ ನೀಲಿ ನಕಾಶೆಯನ್ನೂ ರಾಜ್ಯ ಸರ್ಕಾರ ರೂಪಿಸಲಿಲ್ಲ. ಕಾಯ್ದೆಯ ಮಹತ್ವದ ಭಾಗವಾಗಿ, ಎಲ್ಲ ಶಾಲೆಗಳಲ್ಲೂ ಕಾಯಿದೆ ಜಾರಿಯಾದ ಮೂರು ವರ್ಷದ ಒಳಗಾಗಿ ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ 9 ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿತ್ತು. ಆದರೆ, 14 ವರ್ಷಗಳ ನಂತರ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಅನುಪಾಲನೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ (8ನೇ ತರಗತಿ ಪ್ರೌಢಶಾಲೆಯ ಭಾಗವಾಗಿದೆ) ಕ್ರಮವಾಗಿ 26.27, 30.19 ಮತ್ತು 26.72. ಅಂದರೆ, ಕಾಯ್ದೆ ಜಾರಿಯಾಗಿ 14 ವರ್ಷ ಕಳೆದರೂ 100ಕ್ಕೆ 74 ಕಿರಿಯ ಪ್ರಾಥಮಿಕ, 70 ಹಿರಿಯ ಪ್ರಾಥಮಿಕ ಮತ್ತು 73 ಪ್ರೌಢಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆ ಕಡ್ಡಾಯವಾಗಿ ನಿಗದಿಪಡಿಸಿರುವ ಎಲ್ಲಾ 9 ಸೌಲಭ್ಯಗಳು; ಶಿಕ್ಷಕರು, ತರಗತಿ ಕೋಣೆ, ಅಂಗವಿಕಲ ಮಕ್ಕಳಿಗೆ ಪ್ರತಿಬಂಧರಹಿತ ಅವಕಾಶ, ಹೆಣ್ಣು-ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ ಮತ್ತು ಕಾಂಪೌಂಡ್ ಗೋಡೆಯ ಮೂಲಭೂತ ಸೌಕರ್ಯಗಳು ಇಲ್ಲ. ನಾವು ರೂಪಿಸಿ ಜಾರಿಗೊಳಿಸಿದ ಕಾಯಿದೆಯನ್ನು ನಾವೇ ಹಳಿತಪ್ಪಿಸಿದ್ದು ದೊಡ್ಡ ದುರಂತ.
ಕಾಯಿದೆಯ ಅಸಮರ್ಪಕ ಜಾರಿಯಿಂದಾಗಿ, ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. 2023-24ರ ಅನ್ವಯ ರಾಜ್ಯದಲ್ಲಿ 6400 ಏಕೋಪಾಧ್ಯಾಯ ಶಾಲೆಗಳಿವೆ. ಅಂದರೆ, 1ರಿಂದ 5 ಅಥವಾ 1ರಿಂದ 7/8ನೇ ತರಗತಿಗೆ ಒಬ್ಬರೇ ಶಿಕ್ಷಕರು ಪಾಠ ಮಾಡಬೇಕಾದ ಸ್ಥಿತಿ ಒದಗಿ ಬಂದಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರಿ ಕನ್ನಡ ಶಾಲೆಗಳು ಉಳಿಯುವುದಾದರೂ ಹೇಗೆ? ಇದರ ಪರಿಣಾಮ, ರಾಜ್ಯದಲ್ಲಿ ಸುಮಾರು 17639 ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 30 ಅಥವಾ 30ಕ್ಕಿಂತ ಕಡಿಮೆ. ಇನ್ನು ಮಕ್ಕಳ ದಾಖಲಾತಿ ನೋಡುವುದಾದರೆ, 2012-13ರಲ್ಲಿ 1ರಿಂದ 10ನೇ ತರಗತಿಯವರೆಗೆ ಮಕ್ಕಳ ದಾಖಲಾತಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಕ್ರಮವಾಗಿ 51.00, 15.36 ಮತ್ತು 32.40 ಲಕ್ಷಗಳಿತ್ತು. 2023-24ರಲ್ಲಿ ಈ ದಾಖಲಾತಿ ಕ್ರಮವಾಗಿ 42.7, 12.1 ಮತ್ತು 46.8 ಲಕ್ಷ. 10 ವರ್ಷಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬರೋಬರಿ 11.56 ಲಕ್ಷ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಅದೇ ಖಾಸಗಿ ಶಾಲೆಗಳಲ್ಲಿ 14.4 ಲಕ್ಷ ಮಕ್ಕಳ ಸಂಖ್ಯೆ ಹೆಚ್ಚಿದೆ. ಇದು ಶಿಕ್ಷಣದ ಖಾಸಗೀಕರಣವಲ್ಲದೆ ಮತ್ತೇನು? ಶಿಕ್ಷಣ ಆಯೋಗ ಹೇಳಿದಂತೆ, ನೆರೆಹೊರೆಯ ಸರ್ಕಾರಿ ಶಾಲೆಗಳು ಉತ್ತಮವಾಗಿದ್ದು ಎಲ್ಲ ಬಗೆಯ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸಿದ್ದರೆ, ಮಕ್ಕಳು ಖಾಸಗಿ ಶಾಲೆಗಳಿಗೆ ವಲಸೆ ಹೋಗಬೇಕಾದ ಪ್ರಮೇಯವೇ ಉದ್ಭವಿಸುತ್ತಿರಲಿಲ್ಲ.
ಈ ವಿಷಯದಲ್ಲಿ ನಾವು ಗಂಭೀರವಾಗಿ ಆಲೋಚಿಸುವ ಕಾಲ ಬಂದಿದೆ. ಸರ್ಕಾರಿ ಶಾಲೆಗಳ ಅಂತ್ಯಕಾಲ ಬಹಳ ಹಿಂದೆಯೇ ಆರಂಭವಾಗಿ ಕೊನೆಮುಟ್ಟುವ ಕಾಲ ಸನ್ನಿಹಿತವಾಗಿದೆ. ಸಾರ್ವಜನಿಕ ಪ್ರಾಥಮಿಕ ಶಿಕ್ಷಣ ಇನ್ನು ಹದಗೆಡುವುದಕ್ಕಾಗದಷ್ಟು ಹೀನವಾಗಿದೆ. ನಮ್ಮ ರಾಜಕಾರಣಿಗಳ, ಅಧಿಕಾರಶಾಹಿಗಳ ಮತ್ತು ಮಧ್ಯಮ ವರ್ಗದ ಜನರು ಈ ಶಾಲೆಗಳಿಂದ ದೂರಸರಿದು ಹಲವು ದಶಕಗಳೇ ಕಳೆದಿವೆ. ಆದರೆ, ಸರ್ಕಾರಿ ಶಾಲೆಗಳನ್ನೇ ನಂಬಿ ಸೇರಿರುವ ಲಕ್ಷಾಂತರ ಬಡ ಮತ್ತು ಅವಕಾಶವಂಚಿತ ಸಮುದಾಯದ ಮಕ್ಕಳಿಗೆ ಈ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ.
ಇಂಥ ಸ್ಥಿತಿಯಲ್ಲಿ ಎಲ್ಲ ನಾಗರಿಕರಿಗೆ ಶಿಕ್ಷಣ ಮತ್ತು ಆರೋಗ್ಯವನ್ನು ಕೊಡಮಾಡದಿರುವ ಸರ್ಕಾರಗಳು ಬೇಕಾ ಎಂಬ ಮೂಲಭೂತ ರಾಜಕೀಯ ಪ್ರಶ್ನೆಯನ್ನು ನಾವು ಎತ್ತಬೇಕಿದೆ. ಕೇವಲ ಅಧಿಕಾರ, ಅಂತಸ್ತು ಮತ್ತು ಹಣಕ್ಕಾಗಿ ಸ್ಪರ್ಧೆಗಿಳಿದು ಪಕ್ಷ ರಾಜಕಾರಣಕ್ಕೆ ಸೀಮಿತವಾಗಿರುವ ನಮ್ಮ ಇಂದಿನ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಿ ಸಂವಿಧಾನಬದ್ಧ ಪರ್ಯಾಯ ರಾಜಕಾರಣದತ್ತ ಯೋಚಿಸಬೇಕಿದೆ. ಈ ಹಿನ್ನೆಲೆಯಲ್ಲಿ, ಶಿಕ್ಷಣವನ್ನು ಸಾಮಾಜಿಕ ಒಳಿತು ಮತ್ತು ಸಾಮಾಜಿಕ ಪರಿವರ್ತನೆಯ ಸಾಧನವೆಂದು ಸರ್ಕಾರಗಳಿಗೆ ಮನವರಿಕೆ ಮಾಡಿಕೊಡುವ ಕೆಲಸ ಪ್ರಾರಂಭವಾಗಬೇಕಿದೆ. ಅದು ಹಾಲಿ ಇರುವ ಸರ್ಕಾರಗಳಿಗೆ ಮನವರಿಕೆಯಾಗದಿದ್ದರೆ, ಮನವರಿಕೆ ಮಾಡಿಕೊಳ್ಳಬಹುದಾದ ಹೊಸ ಸರ್ಕಾರವನ್ನು ತರುವ ಶಕ್ತಿ ಜನಸಾಮಾನ್ಯರಿಗಿದೆ ಎಂಬುದನ್ನಾದರೂ ಗಟ್ಟಿ ಧ್ವನಿಯಲ್ಲಿ ಹೇಳುವ ಎದೆಗಾರಿಕೆಯನ್ನು ತೋರಬೇಕಿದೆ.

ನಿರಂಜನಾರಾಧ್ಯ ವಿ ಪಿ
ಅಭಿವೃದ್ಧಿ ಶಿಕ್ಷಣ ತಜ್ಞ




