‘ಪಂಜಾಬ್ 95’ ಸಿನಿಮಾಕ್ಕೆ 120 ಕಡೆ ಕತ್ತರಿ: ಜಸ್ವಂತ್ ಸಿಂಗ್ ಖಲ್ರಾ ಬಗ್ಗೆ ಸರ್ಕಾರ ಹೆದರುತ್ತಿರುವುದೇಕೆ?

Date:

ಯಾವುದೇ ಸಿನಿಮಾ ಬಿಡುಗಡೆಗೆ ಸಿದ್ಧವಾದಾಗ ವಿವಾದ ಸೃಷ್ಟಿಯಾಗುವುದು ಅಥವಾ ಉದ್ದೇಶಪೂರ್ವಕವಾಗಿ ತಗಾದೆಯನ್ನು ಹುಟ್ಟಿಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ನೈಜ ಘಟನೆಗಳ ಆಧಾರಿತ ಚಲನಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದ್ದಂತೆ, ತೀವ್ರ ಚರ್ಚೆ, ವಿರೋಧ, ಸಿನಿಮಾಕ್ಕೆ ಕತ್ತರಿ – ಹೀಗೆ ಹಲವು ಹಂತಗಳು ಸಾಗುತ್ತದೆ, ಕೊನೆಗೆ ಆ ಚಿತ್ರದ ಜೀವಾಳವೇ ಸತ್ತು ಹೋಗುತ್ತದೆ. ಇಂತಹ ವಿವಾದಕ್ಕೆ ಕಾರಣವಾದ ಇತ್ತೀಚಿನ ಸಿನಿಮಾಗಳಲ್ಲಿ’ಫುಲೆ’ ಹೆಚ್ಚು ಸದ್ದು ಮಾಡುತ್ತಿದೆ. ಆದರೆ ಇದರ ನಡುವೆಯೇ ‘ಪಂಜಾಬ್ 95’  ಸಿನಿಮಾವು ಬರೋಬ್ಬರಿ 120 ಕಡೆ ಕತ್ತರಿ ಹಾಕಿಸಿಕೊಂಡಿರುವುದು ಕೊಂಚ ಮೂಲೆಗುಂಪಾದ ಸುದ್ದಿ. ಅದಕ್ಕೆ ಕಾರಣ ಇದು ಪಂಜಾಬಿ ಭಾಷೆಯ ಸಿನಿಮಾವಾಗಿ ಬರೀ ಆ ರಾಜ್ಯಕ್ಕೆ ಸೀಮಿತವಾಗಿರುವುದು ಆಗಿರಬಹುದು. ಆದರೆ ಈ ಸಿನೆಮಾ ಹಿಂದೀ ಆವೃತ್ತಿಯಲ್ಲೂ ಇದೆ. ನೈಜ ಘಟನೆ ಆಧಾರಿತ ಸಿನಿಮಾ ತೆರೆ ಕಾಣುವಾಗ ಇಷ್ಟೊಂದು ವಿವಾದ ಸೃಷ್ಟಿಯಾಗುವುದು ಯಾಕೆ? ಸರ್ಕಾರ ಆತಂಕ ಪಡುವಂತದ್ದು ಈ ಸಿನಿಮಾದಲ್ಲೇನಿದೆ? – ಹೀಗೆ ಹಲವು ಪ್ರಶ್ನೆಗಳು ಸದ್ಯ ಹುಟ್ಟಿಕೊಂಡಿದೆ.

ಹಲವು ಬಾರಿ ‘ಪಂಜಾಬ್ 95’ ಸಿನಿಮಾ ಬಿಡುಗಡೆ ದಿನಾಂಕವು ಮುಂದೂಡಿಕೆಯಾಗುತ್ತಲೇ ಬಂದಿದೆ. ಚಿತ್ರದ ವಿರುದ್ಧ ತಗಾದೆ ಹೆಚ್ಚಾಗುತ್ತಿದ್ದಂತೆ ಚಿತ್ರ ತಂಡ, ಭಾರತವನ್ನು ಹೊರತುಪಡಿಸಿ ಉಳಿದ ದೇಶಗಳಲ್ಲಿ ಯಾವುದೇ ಕತ್ತರಿ ಹಾಕದೆಯೇ ಸಿನಿಮಾವನ್ನು ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದೆ. ಈ ಹಿಂದೆ ಫೆಬ್ರವರಿ 7ರಂದು ತೆರೆಕಾಣುವ ಬಗ್ಗೆ ಸುದ್ದಿಯಾಗಿತ್ತು, ಆದರೆ ಬಿಡುಗಡೆ ದಿನಾಂಕವನ್ನು 2025ರ ಮೇ 16ಕ್ಕೆ ಮುಂದೂಡಿಕೆ ಮಾಡಲಾಗಿತ್ತು, ಬಿಡುಗಡೆಯನ್ನು ಪುನಃ ಮುಂದೂಡಿದ್ದು ದಿನಾಂಕವನ್ನು ಪ್ರಕಟಿಸಿಲ್ಲ.  

ಸಿನಿಮಾದ ಬಗ್ಗೆ ಅಷ್ಟೊಂದು ವಿವಾದವೇಕೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾನವ ಹಕ್ಕು ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನ ಆಧಾರಿತ ಸಿನಿಮಾ ‘ಪಂಜಾಬ್ 95’. ಗಾಯಕ, ನಟ
ದಿಲ್ಜಿತ್ ದೋಸಾಂಜ್ ಅವರು ಸಿನಿಮಾದಲ್ಲಿ ಜಸ್ವಂತ್ ಸಿಂಗ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹನಿ ತ್ರೆಹಾನ್ ಸಿನಿಮಾ ನಿರ್ದೇಶಿಸಿದ್ದು, ರೋನಿ ಸ್ಕ್ರೂವಾಲ ನಿರ್ಮಾಪಕರು. ಒಂದು ವರ್ಷಕ್ಕೂ ಅಧಿಕ ಕಾಲದಿಂದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಮಾಣಪತ್ರವನ್ನು ನೀಡುತ್ತಿಲ್ಲ. ಈ ಹಿಂದೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದ್ದ ಟ್ರೇಲರ್‌ ಕೂಡಾ ತೆಗೆದುಹಾಕಲಾಗಿದೆ. ಸಿಬಿಎಫ್‌ಸಿ ಸುಮಾರು 120 ಕಡೆ ಕತ್ತರಿ ಹಾಕುವಂತೆ ಸಿನಿಮಾ ತಂಡಕ್ಕೆ ಸೂಚಿಸಿದೆ. ಈ ಸಿನಿಮಾ ಸೂಕ್ಷ್ಮವಾಗಿದ್ದು ಕತ್ತರಿ ಅಗತ್ಯ ಎಂಬುದು ಸಿಬಿಎಫ್‌ಸಿ ಅಭಿಪ್ರಾಯ.

khalra12
ಮಾನವ ಹಕ್ಕು ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ

1990ರ ದಶಕದಲ್ಲಿ ಪಂಜಾಬ್ ಪೊಲೀಸರು ಸಿಖ್ ಯುವಕರ ‘ಅಕ್ರಮ’ ಹತ್ಯೆಗಳನ್ನು ನಡೆಸಿದ್ದರು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದವರು ಜಸ್ವಂತ್ ಸಿಂಗ್ ಖಲ್ರಾ. ಈ ಘಟನೆಯನ್ನೇ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ. ಸಿಖ್ ಯುವಕರ ಹತ್ಯೆ ನಡೆಯುತ್ತಿರುವ ಬಗ್ಗೆ ತನಿಖೆ ನಡೆಸಿದ ಖಲ್ರಾ ಅವರು ಪಂಜಾಬ್ ಪೊಲೀಸರು ನಡೆಸಿದ 25,000 ಅಕ್ರಮ ಹತ್ಯೆಗಳು ಮತ್ತು ಅಂತ್ಯಕ್ರಿಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಹತ್ಯೆಗೆ ಸಹಕರಿಸದ ಸುಮಾರು 2,000 ಪೊಲೀಸ್ ಅಧಿಕಾರಿಗಳನ್ನೂ ಕೊಲ್ಲಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ಮಾಹಿತಿಯನ್ನು ಹೊರತಂದ ಬಳಿಕ ಮಾನವ ಹಕ್ಕು ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ನಾಪತ್ತೆಯಾದರು. ಖಲ್ರಾ ಕೊನೆಯದಾಗಿ ಸಾರ್ವಜನಿಕವಾಗಿ ಕಂಡು ಬಂದದ್ದು1995ರ ಸೆಪ್ಟೆಂಬರ್‌ನಲ್ಲಿ ಅಮೃತಸರದಲ್ಲಿ ತಮ್ಮ ಮನೆಯ ಹೊರಗೆ ತಮ್ಮ ಕಾರಿನ ಗಾಜುಗಳನ್ನು ಉಜ್ಜಿ ಶುಚಿಗೊಳಿಸುತ್ತಿದ್ದಾಗ! ಅದಾದ ಬಳಿಕ ಖಲ್ರಾ ಪತ್ತೆಯಾಗಲಿಲ್ಲ. ಅವರ ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಆರು ಮಂದಿ ಪಂಜಾಬ್ ಪೊಲೀಸ್ ಅಧಿಕಾರಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಲಾಯಿತು, ಶಿಕ್ಷೆ ವಿಧಿಸಲಾಯಿತು.

ಇದನ್ನೂ ಓದಿರಿ: ನಕಲಿ ಎನ್‌ಕೌಂಟರ್ ಪ್ರಕರಣಗಳು: ಕಾನೂನು ಹೇಳುವುದೇನು?

ಆರಂಭದಲ್ಲಿ ಈ ಸಿನಿಮಾಕ್ಕೆ ‘ಘಲುಘರ’ ಅಂದರೆ ಹತ್ಯಾಕಾಂಡ ಎಂದು ಹೆಸರಿಡಲಾಗಿತ್ತು. ಆದರೆ ಸೆನ್ಸಾರ್ ಬೋರ್ಡ್ 120 ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿ, ಸಿನಿಮಾದ ಹೆಸರಿಗೂ ವಿರೋಧ ವ್ಯಕ್ತಪಡಿಸಿತು. ಈ ಹಿನ್ನೆಲೆಯಿಂದಾಗಿ ಸಿನಿಮಾ ಹೆಸರನ್ನು ‘ಪಂಜಾಬ್ 95’ ಎಂದು ಬದಲಾಯಿಸಲಾಯಿತು. ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ಮಧ್ಯಪ್ರವೇಶಿಸಿದ ಬಳಿಕ ಸಿನಿಮಾದ ಯಾವುದೇ ದೃಶ್ಯವನ್ನು ತೆಗೆದುಹಾಕದಿರಲು ನಿರ್ಧರಿಸಲಾಗಿದೆ. ಅಷ್ಟೆಂದ ಮಾತ್ರಕ್ಕೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡುತ್ತದೆ ಎಂದಲ್ಲ. ಸಿನಿಮಾ ತಂಡ ಮಾತ್ರ ಸಿನಿಮಾದಲ್ಲಿ ಯಾವುದೇ ದೃಶ್ಯ ತೆಗೆದುಹಾಕದಿರುವ ತೀರ್ಮಾನಕ್ಕೆ ಬಂದಿದೆ. ಇಂದಿಗೂ ಸೆನ್ಸಾರ್ ಮಂಡಳಿ ಸಿನಿಮಾಕ್ಕೆ ಪ್ರಮಾಣಪತ್ರ ನೀಡಿಲ್ಲ.

2023ರಲ್ಲಿ ಈ ಸಿನಿಮಾ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಾಣಲು ಸಿದ್ಧವಾಗಿತ್ತು. ಈ ಪ್ರೀಮಿಯರ್ ದಿನಾಂಕಕ್ಕೆ ಕೇವಲ ಒಂದು ದಿನಕ್ಕೆ ಮೊದಲು ಸಿನಿಮಾವನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಭಾರತದ ನಂತರ ಸಿಖ್ಖರ ಅತ್ಯಧಿಕ ಜನಸಂಖ್ಯೆಯ ದೇಶ ಕೆನಡಾ. ಈ ಸಿನಿಮಾ ಸಿಖ್ ಸಮುದಾಯದ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಕೈಬಿಡಲಾಗಿದೆ ಎಂಬ ಸುದ್ದಿಗಳು ಬಳಿಕ ಹರಿದಾಡಿದ್ದವು. ಆದರೆ ಇದರ ಆಯೋಜಕರು ಇಂದಿಗೂ ಈ ಸುದ್ದಿಯನ್ನು ದೃಢಪಡಿಸಿಲ್ಲ ಅಥವಾ ನಿರಾಕರಣೆಯನ್ನೂ ಮಾಡಿಲ್ಲ.

ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಮಧ್ಯಪ್ರವೇಶಿಸಿರುವುದೇಕೆ?

ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಗುರುದ್ವಾರಗಳ ನಿರ್ವಹಣೆ ಮಾಡುತ್ತದೆ. ಪಂಜಾಬ್, ಹಿಮಾಚಲ ಪ್ರದೇಶ, ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಗುರುದ್ವಾರಗಳು ಮತ್ತು ಸಿಖ್ ಪೂಜಾ ಸ್ಥಳಗಳ ಉಸ್ತುವಾರಿ ಜವಾಬ್ದಾರಿಯನ್ನು ಹೊಂದಿರುವ ಸಂಸ್ಥೆ SGPC. ಅಮೃತಸರದಲ್ಲಿ ದರ್ಬಾರ್ ಸಾಹಿಬ್ ಅನ್ನು ಇದೇ ಸಂಸ್ಥೆ ನಿರ್ವಹಿಸುತ್ತದೆ. ಗುರುದ್ವಾರದ ಭದ್ರತೆ, ಹಣಕಾಸು, ಇತರೆ ಸೌಲಭ್ಯಗಳು, ಧಾರ್ಮಿಕ ಅಂಶಗಳನ್ನು ಇದು ನೋಡಿಕೊಳ್ಳುತ್ತದೆ. ಹಾಗೆಯೇ ಸಿಖ್ ಗುರುಗಳ ಶಸ್ತ್ರಾಸ್ತ್ರಗಳು, ಬಟ್ಟೆಬರೆಗಳು, ಪುಸ್ತಕಗಳು ಹಾಗೂ ಬರಹಗಳು ಸೇರಿದಂತೆ ಪುರಾತತ್ವಶಾಸ್ತ್ರೀಯವಾಗಿ ಅಪರೂಪವಾದ ಹಾಗೂ ಪವಿತ್ರವೆಂದು ನಂಬಲಾದ ಕಲಾಕೃತಿಗಳನ್ನು ಕಾಪಿಟ್ಟುಕೊಳ್ಳುತ್ತದೆ. ಇದೀಗ ಸಿಖ್ ಯುವಕರ ಹತ್ಯೆಗೆ ಸಂಬಂಧಿಸಿದ ಸಿನಿಮಾಕ್ಕೂ ಬೆಂಬಲ ಸೂಚಿಸಿದೆ.

“ಈ ಸಿನಿಮಾದಲ್ಲಿ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಬಾರದು. 120 ದೃಶ್ಯಗಳನ್ನು ತೆಗೆದುಹಾಕಿದರೆ ಸಿನಿಮಾದಲ್ಲಿ ಉಳಿಯುವುದೇನು? ಈ ಜೀವನ ಚರಿತ್ರೆ ಆಧಾರಿತ ಸಿನಿಮಾದಲ್ಲಿ ಯಾವುದೇ ಬದಲಾವಣೆ ಮಾಡುವುದೆಂದರೆ ಇತಿಹಾಸವನ್ನೇ ಬದಲಾವಣೆ ಮಾಡಿದಂತೆ” ಎನ್ನುತ್ತಾರೆ ಎಸ್‌ಜಿಪಿಸಿಯ ಪ್ರಧಾನ ಕಾರ್ಯದರ್ಶಿ ಗುರುಚರಣ್ ಸಿಂಗ್ ಗ್ರೆವಾಲ್.

“ಸಿಖ್ ವಿರೋಧಿ ಗಲಭೆ,  ಪೊಲೀಸರ ದೌರ್ಜನ್ಯದ ವಿರುದ್ಧವಾಗಿ ಧ್ವನಿ ಎತ್ತಿದವರು ಖಲ್ರಾ. ಇವರು ನಡೆಸಿದ ತನಿಖೆಯಿಂದಾಗಿ ಅನೇಕ ಸತ್ಯಗಳು ಹೊರಬಿದ್ದವು. ಪೊಲೀಸರು ಹಲವು ವಿಚಾರಗಳನ್ನು ಮುಚ್ಚಿ ಹಾಕಿದ್ದಾರೆ, ಸಿಖ್ ಯುವಕರಿಗೆ ಚಿತ್ರಹಿಂಸೆ ನೀಡಿದ್ದಾರೆ, ಯಾರಿಗೂ ತಿಳಿಸದೆ ಯುವಕರ ಶವ ಸಂಸ್ಕಾರ ಮಾಡಿದ್ದಾರೆ ಎಂಬ ಸಂಗತಿಗಳೆಲ್ಲವೂ ಬೆಳಕಿಗೆ ಬಂದವು. ಅಮೃತಸರದಲ್ಲೇ 2000 ಸಿಖ್ ಯುವಕರು ಎಲ್ಲಿ ಹೋಗಿದ್ದಾರೆ, ಏನಾಗಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಖಲ್ರಾ ಮಾಡಿದ ಈ ತನಿಖೆಯಿಂದ ಅದೆಷ್ಟೋ ಮಂದಿಗೆ ಕೋರ್ಟ್‌ನಿಂದ ಪರಿಹಾರ ಲಭಿಸಿದೆ. ಹಾಗಿರುವಾಗ ಈ ಎಲ್ಲ ನೈಜ ಘಟನೆಗಳನ್ನು ಸಿನಿಮಾದಲ್ಲಿ ತೋರಿಸಲೇಬೇಕು. ಎಲ್ಲಿಯೂ ಕತ್ತರಿ ಹಾಕಬಾರದು” ಎಂಬುದು ಗುರುಚರಣ್ ಸಿಂಗ್ ಗ್ರೆವಾಲ್ ವಾದ.

ಇದನ್ನೂ ಓದಿರಿ: ಶೂದ್ರ ಧರ್ಮ, ವೈದಿಕ ಧರ್ಮ ಒಂದೇ ಅಲ್ಲ!

“ಪ್ರಸ್ತುತ ಕಲೆಯೂ ಕೂಡಾ ಆಡಳಿತ ಪಕ್ಷದ ರಾಜಕೀಯ ಅಸ್ತ್ರವಾಗಿದೆ. ಜನಪರ ವ್ಯಕ್ತಿಯ ಕುರಿತ ಈ ಸಿನಿಮಾ ಮಹತ್ವದ್ದು. ಇದು ಕಾಶ್ಮೀರ ಫೈಲ್ಸ್ (2022) ಅಥವಾ ಕೇರಳ ಸ್ಟೋರಿ (2023) ಥರದ ಸಿನಿಮಾವಲ್ಲ. ನರೇಂದ್ರ ಮೋದಿ ಮತ್ತು ವಿನಾಯಕ ದಾಮೋದರ್ ಸಾರ್ವಕರ್ ಅವರ ಜೀವನಾಧರಿತ ಸಿನಿಮಾದಿಂದ ಅವರ ಹೆಸರುಗಳನ್ನು ತೆಗೆಯುವ ಸಲಹೆ ನೀಡಲಾಗಿದೆಯೇ?” ಎಂದು ಅವರು ಗಟ್ಟಿಯಾಗಿ ಪ್ರಶ್ನಿಸಿದ್ದಾರೆ.

ಈ ಎಲ್ಲಾ ನೈಜ ಘಟನೆಗಳಿಗೆ ಕತ್ತರಿ ಹಾಕಿಸುವುದೇ ಸದ್ಯ ಸರ್ಕಾರದ ಕೆಲಸವಾಗಿದೆಯೇ? ಅಷ್ಟಕ್ಕೂ ಗ್ರೆವಾಲ್ ಹೇಳುವಂತೆ 120 ದೃಶ್ಯಗಳಿಗೆ ಕತ್ತರಿ ಹಾಕಿದರೆ ಕೊನೆಗೆ ಉಳಿಯುವುದೇನು? ನಿರ್ದೇಶಕರು ಹೇಳಲು ಹೊರಟಿರುವ ಮೂಲ ಕಥೆಯೇ ಬದಲಾಯಿಸಿದಂತೆ ಅಲ್ಲವೇ? ಇತಿಹಾಸವನ್ನೇ ಬದಲಾಯಿಸಿದಂತೆ ಅಲ್ಲವೇ? ಯಾವ ವ್ಯಕ್ತಿಯ ಜೀವನದ ಬಗ್ಗೆ ಸಿನಿಮಾ ಮಾಡಲಾಗುತ್ತಿದೆಯೋ ಆ ವ್ಯಕ್ತಿಯ ಹೆಸರನ್ನೇ ಸಿನಿಮಾದಿಂದ ತೆಗೆದು ಹಾಕಿದರೆ ಹೇಗೆ? ಜಸ್ವಂತ್ ಸಿಂಗ್ ಖಲ್ರಾ ಬಗ್ಗೆ ಸರ್ಕಾರ ಹೆದರುತ್ತಿರುವುದೇಕೆ? – ಹೀಗೆ ಹಲವು ಪ್ರಶ್ನೆಗಳು ಎದ್ದಿವೆ.

ಈ ಎಲ್ಲ ಪ್ರಶ್ನೆಗಳ ನಡುವೆ ಸಿಬಿಎಫ್‌ಸಿಯ ಸೆನ್ಸಾರ್ ನಿಯಮಗಳ ವಿರುದ್ಧದ ಧ್ವನಿಯೂ ಎದ್ದಿದೆ. ಇತ್ತೀಚೆಗೆ ‘ಎಲ್‌ 2 ಎಂಪುರಾನ್’ ಸಿನಿಮಾದ 17 ದೃಶ್ಯಗಳನ್ನು ತೆಗೆದುಹಾಕುವಂತೆ ಮಂಡಳಿ ಹೇಳಿತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರದ ರಾಜಕೀಯ ಕಾರ್ಯಸೂಚಿಗಳನ್ನು ಕೇರಳದ ಸಚಿವರು ಖಂಡಿಸಿದ್ದಾರೆ. ಕೇರಳವನ್ನು ಕೀಳಾಗಿ ಚಿತ್ರೀಕರಿಸಿದ ‘ಕೇರಳ ಸ್ಟೋರಿ’ಗೆ ಯಾವುದೇ ಕತ್ತರಿ ಹಾಕಿಲ್ಲ. ಆದರೆ ಎಂಪುರಾನ್‌ಗೆ ಯಾಕೆ ಕತ್ತರಿ ಎಂಬುದು ಕೇರಳ ಶಿಕ್ಷಣ ಸಚಿವ ವಿ ಸಿವಕುಟ್ಟಿಯವರ ಪ್ರಶ್ನೆ.

empuran
ವಿವಾದಕ್ಕೆ ಗುರಿಯಾಗ ‘ಎಲ್ 2 ಎಂಪುರಾನ್’ ಸಿನಿಮಾ

ಮಾರ್ಚ್‌ 27ರಂದು ಎಂಪುರಾನ್ ಸಿನಿಮಾ ಬಿಡುಗಡೆಯಾಗಿತ್ತು. ಗುಜರಾತ್ ಗಲಭೆ ಹೋಲುವ ಚಿತ್ರಣವಿದ್ದ ಕಾರಣ ಕೆಲವು ದೃಶ್ಯಗಳು ಕಾಲ್ಪನಿಕ ಎಂದು ಉಲ್ಲೇಖಿಸಿತ್ತು. ಆದರೆ ಬಲರಾಜ್ ಪಟೇಲ್ ಯಾನೆ ಬಾಬಾ ಬಜರಂಗಿ ಎಂಬ ಪಾತ್ರವು ಬಾಬುಭಾಯಿ ಪಟೇಲ್ ಅಲಿಯಾಸ್ ಬಾಬು ಬಜರಂಗಿಗೆ ಹೋಲುವ ಕಾರಣದಿಂದಾಗಿ ಬಲಪಂಥೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ 2002ರ ಗುಜರಾತ್ ಗಲಭೆಯಲ್ಲಿ ಪ್ರಮುಖ ಅಪರಾಧಿ. ವಿಶೇಷವಾಗಿ 97 ಮುಸ್ಲಿಮರನ್ನು ಕೊಂದ ನರೋಡಾ ಪಾಟ್ಯ ಹತ್ಯಾಕಾಂಡದ ನೇತೃತ್ವವನ್ನು ವಹಿಸಿದ್ದ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಅನಾರೋಗ್ಯದ ಆಧಾರದ ಮೇಲೆ ವೈದ್ಯಕೀಯ ಜಾಮೀನು ನೀಡಲಾಗಿದೆ. ಈ ಸಿನಿಮಾದಲ್ಲಿರುವ ಕೆಲವು ದೃಶ್ಯಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ 17 ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.

ಇದನ್ನೂ ಓದಿರಿ: ಐದು ದಶಕಗಳ ಲಿಂಗಾನುಪಾತ; ಆತಂಕಕಾರಿ ಸಂಗತಿಗಳೇನು?

“ಗುಜರಾತ್ ಗಲಭೆ ಮತ್ತು ಗೋದ್ರಾ ಹತ್ಯಾಕಾಂಡ ಭಾರತದ ಇತಿಹಾಸದ ಒಂದು ಭಾಗ. ಈ ಇತಿಹಾಸವನ್ನು ಮರೆಮಾಚಲು, ಈ ಘಟನೆ ಆಧಾರಿತ ಸಿನಿಮಾವನ್ನು ಬದಲಾಯಿಸಲು ಎಷ್ಟು ಪ್ರಯತ್ನ ಮಾಡಿದರೂ ಈ ನೈಜ ಇತಿಹಾಸವನ್ನು ಮುಂದಿನ ಪೀಳಿಗೆಯಿಂದ ಮುಚ್ಚಿಡಲು ಬರುವುದಿಲ್ಲ” ಎಂಬುದು ಕೇರಳ ಶಿಕ್ಷಣ ಸಚಿವರ ವಾದ.

2024ರಲ್ಲಿ ಸೆನ್ಸಾರ್ ಕೆಂಗಣ್ಣಿಗೆ ಗುರಿಯಾದ ಸಿನಿಮಾಗಳು

ಭಾರತದಲ್ಲಿ ಅತಿ ಹೆಚ್ಚಾಗಿ ಸೆನ್ಸಾರ್ ಮಂಡಳಿ ಕೆಂಗಣ್ಣಿಗೆ ಗುರಿಯಾಗಿರುವುದು ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಚಲನಚಿತ್ರಗಳು. ಈ ಪೈಕಿ ಪಾಂಚ್, ಉಡ್ತಾ ಪಂಜಾಬ್ ಮತ್ತು ಬಾಂಬೆ ವೆಲ್ವೆಟ್ ಅತಿ ಹೆಚ್ಚು ಸದ್ದು ಮಾಡಿವೆ. ಕಶ್ಯಪ್ ಅವರ ನಿರ್ದೇಶನದ ಚೊಚ್ಚಲ ಚಿತ್ರ ಪಾಂಚ್ 2023ರಲ್ಲಿ ಪೂರ್ಣಗೊಂಡಿದೆ. ಆದರೆ ಈವರೆಗೂ ಬಿಡುಗಡೆಯಾಗಿಲ್ಲ. 1976ರ ಕುಖ್ಯಾತ ಜೋಶಿ-ಅಭ್ಯಂಕರ್ ಸರಣಿ ಕೊಲೆಗಳನ್ನು ಆಧಾರಿಸಿದ ಕ್ರೈಮ್ ಥ್ರಿಲ್ಲರ್ ಸಿನಿಮಾ ಇದು. ಹಿಂಸೆಯನ್ನು ವೈಭವೀಕರಿಸಲಾಗಿದೆ ಎಂಬ ಕಾರಣಕ್ಕೆ ಈ ಸಿನಿಮಾಗೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಿಲ್ಲ. ಮರುಚಿತ್ರೀಕರಣ ಮಾಡಲಾಗದೆ ಕೊನೆಗೆ ಸಿನಿಮಾವನ್ನೇ ಕೈಬಿಟ್ಟರು. ಆದರೂ ಜರ್ಮನಿಯ ಫಿಲ್ಮ್‌ಫೆಸ್ಟ್ ಹ್ಯಾಂಬರ್ಗ್ ಮತ್ತು ಲಾಸ್ ಏಂಜಲೀಸ್‌ನ ಭಾರತೀಯ ಚಲನಚಿತ್ರೋತ್ಸವ ಸೇರಿದಂತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ  ಪಾಂಚ್ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. 2025ರಲ್ಲಿ ಈ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಇತ್ತೀಚೆಗೆ ನಿರ್ಮಾಪಕ ಟುಟು ಶರ್ಮಾ ಘೋಷಿಸಿದ್ದಾರೆ.

2024ರಲ್ಲಿ ಪ್ರಮುಖವಾಗಿ ಹತ್ತು ಸಿನಿಮಾಗಳು ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆಯಲು ಒದ್ದಾಡಿವೆ. ಹಲವು ದೃಶ್ಯಗಳಿಗೆ ಕತ್ತರಿ ಹಾಕಿಸಿಕೊಂಡು ತೆರೆ ಮೇಲೆ ಬಂದಿವೆ. ರೋಹಿತ್ ಶೆಟ್ಟಿಯವರ ‘ಸಿಂಘಮ್ ಅಗೇನ್’ ಸಿನಿಮಾದಲ್ಲಿ ರಾಮಾಯಣ ಸಂಬಂಧಿತ ದೃಶ್ಯಗಳಿಗೆ ಕತ್ತರಿ ಬಿದ್ದಿದೆ. ಬರೋಬ್ಬರಿ 7.12 ನಿಮಿಷದ ಅವಧಿಯ ದೃಶ್ಯಗಳನ್ನು ತೆಗೆದುಹಾಕಬೇಕಾಯಿತು. ಹಾಗೆಯೇ ತನ್ನನ್ನು ತಾನು ರಾವಣ ಎಂದು ಹೇಳಿಕೊಳ್ಳುವ ಅರ್ಜುನ್ ಕಪೂರ್ ಡೈಲಾಗ್‌ಗಳನ್ನು ಕೂಡಾ ಕಿತ್ತೆಸೆಯಲಾಗಿದೆ.

ಇದನ್ನೂ ಓದಿರಿ: ಆರ್‌ಬಿಐ ಸ್ಥಾಪನೆ; ಅಂಬೇಡ್ಕರ್ ಮಹತ್ವದ ಪಾತ್ರ ಅಳಿಸಿ ಹೋಯಿತೇಕೆ?

‘ದಿ ಕ್ರೀವ್’ ಸಿನಿಮಾದಲ್ಲಿ ಹಲವು ಅವಾಚ್ಯ ಪದಗಳಿಗೆ ಕತ್ತರಿ ಪ್ರಯೋಗ ನಡೆದಿದೆ. ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ನಟಿಸಿರುವ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಸಿಖ್ಖರನ್ನು ಕೆಟ್ಟದಾಗಿ ಚಿತ್ರೀಸಲಾಗಿದೆ ಎಂದು ಸಿಖ್ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು. ಕೊನೆಗೆ ಒಂದು ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕಿ ಬಿಡುಗಡೆ ಮಾಡಲಾಗಿದೆ. ‘Girl You Know It’s True’ ಸಿನಿಮಾದಲ್ಲಿಯೂ ಕೆಲವು ಪದಗಳನ್ನು ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ತಿಳಿಸಿದೆ. LGBTQIAD+ ಸಮುದಾಯಕ್ಕೆ ಸಂಬಂಧಿಸಿದ ಸಿನಿಮಾ ಇದಾಗಿದೆ. ವೇದಾ, ಮಂಕಿ ಮ್ಯಾನ್, ವಿದುತ್ತಲೈ ಪಾರ್ಟ್‌ 2, ಬೇಬಿ ಜಾನ್, ಫೈಟರ್ – ಹೀಗೆ ಹಲವು ಸಿನಿಮಾಗಳ ದೃಶ್ಯಗಳಿಗೆ ಕತ್ತರಿ ಬಿದ್ದಿದೆ.

2025ರ ಈ ನಾಲ್ಕು ತಿಂಗಳುಗಳ ಅವಧಿಯಲ್ಲಿ ರಾಜಕೀಯ, ಧಾರ್ಮಿಕ, ಹಿಂಸೆ, ಇತಿಹಾಸ – ಹೀಗೆ ಹಲವು ಕಾರಣಗಳಿಂದಾಗಿ ಸೆನ್ಸಾರ್‌ ಮಂಡಳಿಯ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಸಿನಿಮಾಗಳು ಒದ್ದಾಡಿವೆ. ಅದರಲ್ಲೂ ಮುಖ್ಯವಾಗಿ ಚರ್ಚೆಗೆ ಗ್ರಾಸವಾಗಿರುವುದು ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾ ಫುಲೆ ಅವರ ಜೀವನಾಧಾರಿತ ‘ಫುಲೆ’ ಎಂಬ ಬಹುನಿರೀಕ್ಷೆಯ ಸಿನಿಮಾ. ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಅವಕಾಶವೇ ಇಲ್ಲದ ಕಾಲದಲ್ಲಿ ಪ್ರತ್ಯೇಕ ಶಾಲೆಗಳನ್ನು ತೆರೆದು, ದಲಿತರು ಸೇರಿದಂತೆ ಎಲ್ಲಾ ಜಾತಿ, ಧರ್ಮದ ಮಹಿಳೆಯರಿಗೆ ವಿದ್ಯೆ ನೀಡಿದವರು ಈ ದಂಪತಿ. ಬ್ರಾಹ್ಮಣರ ವಿರೋಧದ ನಡುವೆಯೂ ಮಹಿಳೆಯ ಶಿಕ್ಷಣಕ್ಕೆ ಒತ್ತು ನೀಡಿದವರು ಫುಲೆ. ಆದರೆ ಈ ಸಿನಿಮಾದಲ್ಲಿ ಬ್ರಾಹ್ಮಣರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದು ಬ್ರಾಹ್ಮಣ ಸಂಘಗಳ ವಾದ. ಈ ಎಲ್ಲಾ ವಿವಾದಗಳ ಬೆನ್ನಲ್ಲೇ ಏಪ್ರಿಲ್ 25ರಂದು ತೆರೆಕಾಣಲು ‘ಫುಲೆ’ ಸಿನಿಮಾ ಸಿದ್ಧವಾಗಿದೆ.

ಅಂತಿಮವಾಗಿ ಹೇಳುವುದಾದರೆ- ರಾಜಕೀಯ, ಜಾತಿವಾದ, ದ್ವೇ‍ಷ, ಅನವಶ್ಯಕ ವದಂತಿಗಳ ನಡುವೆ ನಲುಗುವುದು ಸಿನಿಮಾಕ್ಕಾಗಿ ಕೋಟ್ಯಂತರ ರೂಪಾಯಿ ಸುರಿದ ನಿರ್ಮಾಪಕರು ಮತ್ತು ಇಡೀ ಚಿತ್ರತಂಡ. ನಿಜದ ಇತಿಹಾಸ ತೆರೆದುಕೊಳ್ಳುವ ಆತಂಕದಲ್ಲಿ ಹೀಗೆಯೇ ಹಲವು ಸಿನಿಮಾಗಳಿಗೆ ಕತ್ತರಿ ಹಾಕುವ ಪ್ರಯತ್ನ ನಡೆಯುತ್ತಲೇ ಇದೆ. ಪ್ರಭುತ್ವದ ದಬ್ಬಾಳಿಕೆಯಿಂದಾಗಿ ಅತಿಹೆಚ್ಚು ನಲುಗಿ ಹೋಗಿರುವ ಸಿನಿಮಾ ‘ಪಂಜಾಬ್ 95’.

1.5 ಕೋಟಿಯಿಂದ 3.5 ಕೋಟಿ ರೂಪಾಯಿ ‘ಪಂಜಾಬ್ 95’ ಸಿನಿಮಾದ ಒಟ್ಟು ಬಜೆಟ್‌. ಸಿನಿಮಾ ಬಿಡುಗಡೆಯಾಗದಿದ್ದರೆ ಅಷ್ಟು ಹೂಡಿಕೆಯೂ ನಷ್ಟವಾಗುತ್ತದೆ. ಇದು ಆರ್ಥಿಕ ಆಯಾಮವಾದರೆ ಇಲ್ಲಿರುವ ರಾಜಕೀಯವೇ ಬೇರೆ. ಕಲೆಯು ಇಂದು ಕಲೆಯಾಗಿ ಉಳಿದಿಲ್ಲ. ಸರ್ಕಾರಗಳ ಅಜೆಂಡಾದ ಪ್ರಚಾರದ ದಾಳವಾಗಿದೆ. ವಿಪಕ್ಷ ನಾಯಕರುಗಳ ಮೇಲೆ ಕೇಂದ್ರ ಏಜೆನ್ಸಿಗಳ ಪ್ರಯೋಗದ ಜೊತೆಗೆಯೇ ಸಿನಿಮಾ ಲೋಕದಲ್ಲೂ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಆಯಾ ರಾಜ್ಯಗಳು ತಮ್ಮ ಹಿಡಿತವನ್ನು ಕಾಯ್ದುಕೊಂಡಿವೆ. ಬಿಜೆಪಿಯ ಸೈದ್ಧಾಂತಿಕ ನಿಲುವಿಗಿಂತ ಭಿನ್ನವಾದ, ಕರಾಳ ಇತಿಹಾಸವನ್ನು ಹೇಳುವ ಸಿನಿಮಾಗಳು ಕಂಡರೆ ಅದಕ್ಕೆ ಕತ್ತರಿ ನಿಶ್ಚಿತ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...