‘ರಾಹುಲ್ ದಾದಾ, ಬಂಗಾಳಕ್ಕೂ ಬನ್ನಿ..’ ಮತುವಾಗಳ ಮನವಿ, ಬಿಜೆಪಿಯಲ್ಲಿ ಆತಂಕ ತಂದಿದ್ದೇಕೆ?

Date:

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ- ಈ ಎರಡು ಪಕ್ಷಗಳಿಗೂ ವೋಟ್ ಬ್ಯಾಂಕ್‌ನಂತೆ ಕಾಣುವ ಸಮುದಾಯ- ಮತುವಾ. ನಮಸುದ್ರ ಜಾತಿಯ ಧಾರ್ಮಿಕ ಗುಂಪೆಂದೇ ಪರಿಗಣಿಸಲ್ಪಡುವ ಮತುವಾಗಳು ಚುನಾವಣಾ ಫಲಿತಾಂಶದ ದಿಕ್ಕನ್ನೇ ಬದಲಿಸುವಷ್ಟು ಸಂಖ್ಯಾಬಲವುಳ್ಳ ದಲಿತರೂ ಹೌದು. ಈ ಸಮುದಾಯದ ಮುಖಂಡರ ಒಂದು ನಿಯೋಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಬಿಹಾರದಲ್ಲಿ ಭೇಟಿಯಾಗಿ, “ರಾಹುಲ್ ದಾದಾ, ದಯವಿಟ್ಟು ಪಶ್ಚಿಮ ಬಂಗಾಳಕ್ಕೂ ಬನ್ನಿ” ಎಂದು ಕರೆದಿರುವುದು ಚರ್ಚೆಯನ್ನು ಹುಟ್ಟುಹಾಕಿದೆ.

ಮತುವಾಗಳ ಕೈಯಲ್ಲಿ ಕನಿಷ್ಠ 40 ವಿಧಾನಸಭಾ ಕ್ಷೇತ್ರಗಳ ಭವಿಷ್ಯವಿದೆ ಎಂದು ಅಂದಾಜಿಸಲಾಗುತ್ತದೆ. ವಿಶೇಷವಾಗಿ ಉತ್ತರ 24 ಪರಗಣಗಳು, ನಾಡಿಯಾ, ಕೂಚ್‌ಬೆಹಾರ್ ಮತ್ತು ಬರ್ದ್ವಾನ್ ಜಿಲ್ಲೆಗಳಲ್ಲಿ ಮತುವಾಗಳ ಮತಗಳೇ ನಿರ್ಣಾಯಕ. ಇಂತಹ ಸಮುದಾಯದ ಮೇಲೆ ಹಿಡಿತ ಹೊಂದಿರುವ ಇಲ್ಲಿನ ಠಾಕೂರ್ ಕುಟುಂಬದಲ್ಲಿ ನಾಯಕತ್ವದ ವಿಚಾರವಾಗಿ ಕಿತ್ತಾಟ ಶುರುವಾಗಿದೆ. ಇನ್ನೊಂದೆಡೆ ರಾಜ್ಯದಲ್ಲಿ ಕಾಲಿಡುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತುವಾಗಳಲ್ಲಿ ಆತಂಕವನ್ನು ಉಂಟು ಮಾಡಿದೆ. ಇಂತಹ ಬಿಕ್ಕಟ್ಟಿನಲ್ಲಿ ಮತುವಾ ಸಮುದಾಯದ ಒಂದು ಗುಂಪು ಸಹಾಯಕ್ಕಾಗಿ ಕಾಂಗ್ರೆಸ್ ಕಡೆಗೆ ತಿರುಗಿ ನಿಂತಿದೆ. ಬಿಹಾರದಲ್ಲಿ ರಾಹುಲ್‌ ಗಾಂಧಿಯವರು ನಡೆಸಿದ ಮತದಾರರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿರುವ ನಿಯೋಗವು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ರಾಹುಲ್ ಗಾಂಧಿ ಭೇಟಿಯ ಸುತ್ತಲಿನ ವಿವರಗಳಿಗೆ ಹೋಗುವ ಮುನ್ನ ಮತುವಾಗಳ ಹಿನ್ನೆಲೆಯನ್ನು ಒಮ್ಮೆ ನೋಡುವುದು ಸೂಕ್ತ. ರಾಜ್ಯದ ಜನಸಂಖ್ಯೆಯಲ್ಲಿ ಶೇ.17ರಷ್ಟಿದ್ದಾರೆಂದು ಅಂದಾಜಿಸಲಾಗಿರುವ ಇವರು ಮೂಲತಃ ಬಾಂಗ್ಲಾದೇಶದಿಂದ ವಲಸೆ ಬಂದ ನಿರಾಶ್ರಿತರು. ದೇಶ ವಿಭಜನೆಯ ಸಮಯದಲ್ಲಿ ಇವರ ಮೊದಲ ಹಂತದ ವಲಸೆ ಶುರುವಾಯಿತು. ನಂತರ 1971ರ ಯುದ್ಧದ ಸಮಯದಲ್ಲಿಯೂ ಎರಡನೇ ಹಂತದ ವಲಸೆ ನಡೆಯಿತು. ಸಮಾಜ ಸುಧಾರಕ ಗುರುಚಂದ್ ಠಾಕೂರ್ ಅವರ, “ಪಕ್ಷ/ಸಂಘಟನೆ ಇಲ್ಲದ ಸಮುದಾಯ ದುರ್ಬಲ” ಎಂಬ ಎಚ್ಚರಿಕೆಯ ಮಾತನ್ನು ಅನುಸರಿಸಿ, ಈ ಸಮುದಾಯ ಆರಂಭದಿಂದಲೇ ರಾಜಕೀಯ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಯತ್ನಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)

ಗುರುಚಂದ್ ಠಾಕೂರ್ ಅವರ ಮೊಮ್ಮಗ ಪ್ರಮಥ ರಂಜನ್ ಠಾಕೂರ್ ಅವರು 1962ರಲ್ಲಿ ಬಿ.ಸಿ. ರಾಯ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಿರಿಯ ಬುಡಕಟ್ಟು ಅಭಿವೃದ್ಧಿ ಸಚಿವರಾಗಿದ್ದರು. 1967ರಲ್ಲಿ ಬಾಂಗ್ಲಾ ಕಾಂಗ್ರೆಸ್ (ಕಾಂಗ್ರೆಸ್‌ನಿಂದ ಬೇರ್ಪಟ್ಟ ಬಣ) ಟಿಕೆಟ್‌ನಿಂದ ಸ್ಪರ್ಧಿಸಿ ನಬದ್ವೀಪ್‌ ಕ್ಷೇತ್ರದಿಂದ ಲೋಕಸಭೆಗೂ ಆಯ್ಕೆಯಾಗಿದ್ದರು. ರಂಜನ್ ಠಾಕೂರ್ ಅವರ ಕುಟುಂಬವೇ ಮತುವಾಗಳ ರಾಜಕೀಯ ನೇತೃತ್ವವನ್ನು ವಹಿಸುತ್ತಾ ಬಂದಿದೆ. ಆದರೆ ಈ ಕುಟುಂಬದೊಳಗೆ ರಾಜಕೀಯ ನಾಯಕತ್ವದ ಕಚ್ಚಾಟವಂತೂ ನಡೆಯುತ್ತಲೇ ಇದೆ. ಈಗ ಕೇಂದ್ರ ಸಚಿವರಾಗಿರುವ ಶಾಂತನು ಮತ್ತು ಬಿಜೆಪಿ ಶಾಸಕ ಸುಬ್ರತಾ ಠಾಕೂರ್ ಸಹೋದರರಾದರೂ ಕಿತ್ತಾಟ ಶುರು ಮಾಡಿಕೊಂಡಿದ್ದಾರೆ.

1971ರ ನಂತರ ಉತ್ತರ 24 ಪರಗಣಗಳು, ನಾಡಿಯಾ ಮತ್ತು ಇತರ ಜಿಲ್ಲೆಗಳಲ್ಲಿ ಮತುವಾ ನಿರಾಶ್ರಿತರ ಪುನರ್ವಸತಿಯನ್ನು  ಕಾಂಗ್ರೆಸ್ ಸರ್ಕಾರ ಮೇಲ್ವಿಚಾರಣೆ ಮಾಡಿದ್ದರೂ, ಅವರನ್ನು ಮೂಲಭೂತವಾಗಿ ‘ಗುರುತಿಸಲಾಗದ ನಿರಾಶ್ರಿತರು’ ಎಂದು ಪರಿಗಣಿಸಲಾಯಿತು. ಪೌರತ್ವವು ಅವರಿಗೆ ದೊರಕುವುದು ದುಸ್ತರವಾಯಿತು. ಎಡಪಂಥೀಯರ ಆಡಳಿತವಾಧಿಯಲ್ಲಿ ಮತುವಾಗಳು ಪಡಿತರ ಚೀಟಿಗಳನ್ನು ಪಡೆದರು ಹಾಗೂ ಮತದಾರರ ಪಟ್ಟಿಗಳಲ್ಲಿ ದಾಖಲಾದರು. ಆದರೆ ಪೌರತ್ವದ ಪ್ರಶ್ನೆಯು ಅಸ್ಪಷ್ಟವಾಗಿಯೇ ಉಳಿಯಿತು.

ಮತ್ತೊಂದೆಡೆ ಜಾತಿ ಪ್ರಾತಿನಿಧ್ಯದ ಬಗ್ಗೆ ಎಡಪಂಥೀಯರು ಅಸಡ್ಡೆ ತೋರಿದರು. ರಾಜಕೀಯ ಅಸ್ತಿತ್ವದ ಪ್ರಜ್ಞೆ ಮತುವಾಗಳಲ್ಲಿ ಬಲವಾಗುತ್ತಾ ಹೋಯಿತು. ಪೌರತ್ವದ ಪ್ರಶ್ನೆಯು ಅವರನ್ನು ಮತುವಾ ಮಹಾಸಂಘದ ಅಡಿಯಲ್ಲಿ ಸ್ವತಂತ್ರವಾಗಿ ಸಂಘಟನೆಗೊಳ್ಳಲು ಪ್ರೇರೇಪಿಸಿತು. ಮಾರ್ಚ್ 25, 1971ರ ನಂತರ ಸೂಕ್ತ ದಾಖಲೆಗಳಿಲ್ಲದೆ ದೇಶವನ್ನು ಪ್ರವೇಶಿಸಿದ ಯಾರನ್ನಾದರೂ ಅಕ್ರಮ ವಲಸಿಗರು ಮತ್ತು ಪೌರತ್ವಕ್ಕೆ ಅನರ್ಹರು ಎನ್ನುವಂತಹ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವು ಅಂಗೀಕರಿಸಿದಾಗ ಮತುವಾಗಳು ಮತ್ತಷ್ಟು ಆತಂಕಿತರಾಗಿ, ಒಂದುಗೂಡಲು ಶುರುವಾದರು. ತಿದ್ದುಪಡಿ ಮಾಡಿದ ಕಾನೂನು, ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಚೌಕಟ್ಟಿಗೂ ಒಳಪಟ್ಟಿತು. ಇಂತಹ ಸಂದರ್ಭದಲ್ಲಿ ಮತುವಾಗಳು ಟಿಎಂಸಿ ಜೊತೆ ಗುರುತಿಸಿಕೊಳ್ಳತೊಡಗಿದರು.

ಎಡ ಪ್ರಾಬಲ್ಯವು ಸಿಂಗೂರ್ ಮತ್ತು ನಂದಿಗ್ರಾಮ್‌ನಲ್ಲಿ ಕುಸಿಯುತ್ತಿದ್ದಂತೆ, ಟಿಎಂಸಿ ಚುನಾವಣಾ ಲಾಭವನ್ನು ಮನಸ್ಸಿನಲ್ಲಿಟ್ಟುಕೊಂಡು ಠಾಕೂರ್ ಕುಟುಂಬವನ್ನು ಆಕರ್ಷಿಸಿತು. ಕಮ್ಯುನಿಸ್ಟರ ಮೂರು ದಶಕಗಳ ಆಳ್ವಿಕೆಯ ಅಂತ್ಯದ ಆರಂಭವನ್ನು ಸೂಚಿಸಿದ 2009ರ ಲೋಕಸಭಾ ಚುನಾವಣೆಯಲ್ಲಿ, ಮತುವಾಗಳು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಕಡೆಗೆ ವಾಲಿದರು. ಐದು ವರ್ಷಗಳ ನಂತರ, ಪಿ.ಆರ್. ಠಾಕೂರ್ ಅವರ ಮಗ ಕಪಿಲ್ ಕೃಷ್ಣ ಠಾಕೂರ್ ಟಿಎಂಸಿ ಟಿಕೆಟ್‌ನಲ್ಲಿ ಬೊಂಗಾನ್ ಸಂಸದರಾಗಿ ಆಯ್ಕೆಯಾದರು. ಆದರೆ ಕೆಲವು ತಿಂಗಳುಗಳ ನಂತರ ಅವರು ಮರಣ ಹೊಂದಿದರು. ಬಳಿಕ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಎದುರಾದವು. ಇದರ ಪರಿಣಾಮವಾಗಿ ಕಪಿಲ್ ಕೃಷ್ಣ ಅವರ ಪತ್ನಿ ಮಮತಾ ಬಾಲಾ ಅವರು ಟಿಎಂಸಿಯಲ್ಲಿ ಗುರುತಿಸಿಕೊಂಡರು. ಕಪಿಲ್ ಕೃಷ್ಣ ಅವರ ಸಹೋದರ ಮಂಜುಲ್ ಕೃಷ್ಣ ಮತ್ತು ಸೋದರಳಿಯರಾದ ಶಾಂತನು, ಸುಬ್ರತಾ ಬಿಜೆಪಿ ಪರ ನಿಂತರು. ಒಟ್ಟಾರೆ ಠಾಕೂರ್ ಕುಟುಂಬ ರಾಜಕೀಯವಾಗಿ ವಿಭಜನೆಯಾಗುತ್ತಾ ಹೋಯಿತು.

111 6
ಮತುವಾ ಸಮುದಾಯ

ಮತುವಾಗಳು ಜಾತಿ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಗಳನ್ನು ಪಡೆಯಲು ಹಾಗೂ ರಾಜಕೀಯ ಪ್ರಾತಿನಿಧ್ಯವನ್ನು ದಕ್ಕಿಸಿಕೊಳ್ಳಲು ಟಿಎಂಸಿ ಸಹಾಯ ಮಾಡಿತು. ಆದರೆ 2019ರಲ್ಲಿ ಸಿಎಎ ಮುನ್ನೆಲೆಗೆ ಬಂದ ನಂತರ ಮತುವಾಗಳು ಬಿಜೆಪಿ ಜೊತೆ ಹೋದರು. ನೆರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ವಲಸೆ ಬಂದ ಮುಸ್ಲಿಮೇತರ ಧರ್ಮದ ನಿರಾಶ್ರಿತರಿಗೆ ಪೌರತ್ವ ಖಾತ್ರಿಯನ್ನು ಬಿಜೆಪಿ ನೀಡಿದ್ದು ಮತುವಾಗಳನ್ನು ಆಕರ್ಷಿಸಿತು. ಇನ್ನೊಂದೆಡೆ ಸಿಎಎ ವಿರುದ್ಧ ಟಿಎಂಸಿ ನಿಲುವು ತಾಳಿತು. ಟಿಎಂಸಿಯನ್ನು ಕೈಬಿಟ್ಟು, ಬಿಜೆಪಿಯತ್ತ ಮತುವಾಗಳು ಹೊರಳಿದರು. 2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಅತ್ಯುತ್ತಮ ಚುನಾವಣೆ ಫಲಿತಾಂಶವನ್ನು ದಾಖಲಿಸಿತು. 42 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿತು. 2024ರ ಲೋಕಸಭಾ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ಹೆಚ್ಚಿನ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯಗಳಿಸಿದಾಗಲೂ, ಬಿಜೆಪಿ ಅಭ್ಯರ್ಥಿಗಳು ಉತ್ತರ 24 ಪರಗಣ ಜಿಲ್ಲೆಯ ಬಂಗಾವ್ ಕ್ಷೇತ್ರ ಮತ್ತು ನಾಡಿಯಾ ಜಿಲ್ಲೆಯ ರಣಘಾಟ್ ಕ್ಷೇತ್ರ ಎರಡರಿಂದಲೂ ಗೆದ್ದರು. ಈ ಕ್ಷೇತ್ರಗಳು ಮತುವಾ ಪ್ರಾಬಲ್ಯದಲ್ಲಿವೆ ಎಂಬುದನ್ನು ಗಮನಿಸಬಹುದು. ಆದರೆ ಸಿಎಎ ಜೊತೆಯೇ ಬಂದ ಎನ್‌ಆರ್‌ಸಿ, ಮತುವಾಗಳ ಮೇಲೆ ತೂಗುಗತ್ತಿ ಬೀಸುತ್ತಲೇ ಇತ್ತು. ಈಗ ಎದುರಾಗಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್) ಮತುವಾಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)

ಮತುವಾಗಳ ಮೂಲ ಸಮಸ್ಯೆಗೆ ಸರಿಯಾದ ಗಮನ ನೀಡಲಾಗಿಲ್ಲ ಮತ್ತು ಬಿಜೆಪಿ, ಟಿಎಂಸಿ ಪಕ್ಷಗಳು ತಮ್ಮನ್ನು ಚುನಾವಣಾ ಸಾಧನವಾಗಿ ಮಾತ್ರ ಪರಿಗಣಿಸಿವೆ ಎಂಬುದು ಸಮುದಾಯದ ಆತಂಕ. ಈಗ, ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ದನಿ ಎತ್ತಿರುವ ರೀತಿಯಿಂದ ಸಮುದಾಯದಲ್ಲಿ ಭರವಸೆ ಮೂಡಿದೆ. ಇದರಿಂದ ಪ್ರೇರಿತರಾಗಿ ಅವರು ಕಾಂಗ್ರೆಸ್ ಅನ್ನು ಬೆಂಬಲಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.

“ಬಂಗಾಳದಲ್ಲಿ ಆಡಳಿತದಲ್ಲಿರುವ ಟಿಎಂಸಿ ಮತ್ತು ದೆಹಲಿಯ ಅಧಿಕಾರ ಗದ್ದುಗೆಯಲ್ಲಿರುವ ಬಿಜೆಪಿ ಮೇಲೆ ಮತುವಾ ಸಮುದಾಯದ ಕೆಲವು ಜನರು ನಿರಾಶೆಯಾಗಿದ್ದಾರೆ. ಹೀಗಾಗಿ ಮುರ್ಷಿದಾಬಾದ್‌ನಲ್ಲಿ ನನ್ನನ್ನು ಮತುವಾಗಳು ಭೇಟಿಯಾಗಿದ್ದರು” ಎಂದು ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ತಿಳಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

 “ನಾನು ರಾಹುಲ್ ಜಿ ಅವರಿಗೆ ಸಂದೇಶವನ್ನು ತಲುಪಿಸಿ, ಮತುವಾಗಳನ್ನು ಪಾಟ್ನಾಗೆ ಕಳುಹಿಸಿದೆ. ರಾಹುಲ್‌ ಅವರನ್ನು ಸಮುದಾಯದ ಮುಖಂಡರು ಭೇಟಿಯಾದರು, ಯಾತ್ರೆಯಲ್ಲಿ ಭಾಗವಹಿಸಿದರು. ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು” ಎಂದೂ ತಿಳಿಸಿದ್ದಾರೆ.

24 ಸದಸ್ಯರ ಮತುವಾ ನಿಯೋಗ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನಡುವಿನ ಸಭೆ ಆಗಸ್ಟ್ 30ರಂದು ಸರನ್ ಜಿಲ್ಲೆಯ ಎಕ್ಮಾ ಪಟ್ಟಣದಲ್ಲಿ ನಡೆಯಿತು. “ರಾಹುಲ್ ಗಾಂಧಿಯವರು ನಮ್ಮೊಂದಿಗೆ ಸುಮಾರು 15 ನಿಮಿಷಗಳ ಕಾಲ ಆತ್ಮೀಯವಾಗಿ ಮಾತನಾಡಿದರು. ಅವರು ನಮ್ಮ ಎಲ್ಲಾ ಕಳವಳಗಳನ್ನು ಆಲಿಸಿದರು. ಭವಿಷ್ಯದಲ್ಲಿ ನಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು” ಎಂದು ನಿಯೋಗದ ಸದಸ್ಯರು ಪ್ರತಿಕ್ರಿಯಿಸಿದ್ದಾರೆ. ‘ಪಶ್ಚಿಮ ಬಂಗಾಳದ ಮತುವಾ ಮಹಾಸಂಘ’ ಎಂದು ಕರೆದುಕೊಂಡಿರುವ ಈ ಗುಂಪು, ರಾಹುಲ್ ಅವರೊಂದಿಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದೆ. ಮುಖಂಡರು ಹಿಡಿದುಕೊಂಡಿದ್ದ ಬ್ಯಾನರ್‌ನಲ್ಲಿ “ರಾಹುಲ್ ದಾದಾ, ಬಂಗಾಳಕ್ಕೆ ಬನ್ನಿ .. ಎಸ್.ಐ.ಆರ್ ಒಂದು ಅಪಾಯ, ನಾವು ಕಾಂಗ್ರೆಸ್‌ನೊಂದಿಗೆ ಸುರಕ್ಷಿತರು” ಎಂದು ಬರೆಯಲಾಗಿತ್ತು.

ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಹೊಂದಿದ್ದರೂ, ನೆಲೆಯನ್ನು ಕಳೆದುಕೊಂಡಿರುವುದು ವಾಸ್ತವ. ಕಾಂಗ್ರೆಸ್‌ನಿಂದ ಒಬ್ಬ ಸಂಸದ ಮಾತ್ರ ಇದ್ದರೆ, ಒಬ್ಬನೇ ಒಬ್ಬ ಶಾಸಕನಿಲ್ಲ. ಈಗ ಮತುವಾಗಳ ವಿಶ್ವಾಸವನ್ನು ಕಾಂಗ್ರೆಸ್ ಪಡೆದುಕೊಳ್ಳಬಹುದೇ? ಎಂಬ ಪ್ರಶ್ನೆ ಹುಟ್ಟಿದೆ. ಠಾಕೂರ್ ಕುಟುಂಬದಲ್ಲಿ ನಡೆಯುತ್ತಿರುವ ಜಿದ್ದಾಜಿದ್ದಿ ಕಾಂಗ್ರೆಸ್‌ ವರದಾನವೂ ಆಗಬಹುದು.

WhatsApp Image 2025 09 04 at 16.44.16
ರಾಹುಲ್ ಗಾಂಧಿ ಅವರೊಂದಿಗೆ ಮತುವಾ ನಿಯೋಗ

ಕೇಂದ್ರ ಸಚಿವ ಶಾಂತನು ಠಾಕೂರ್ ಮತ್ತು ಅವರ ಸಹೋದರ, ಬಿಜೆಪಿ ಶಾಸಕ ಸುಬ್ರತಾ ನಡುವೆ ನಾಯಕತ್ವದ ಕಚ್ಚಾಟ ಮುಗಿಲು ಮುಟ್ಟಿದೆ. ಕಳೆದ ತಿಂಗಳು ಸುಬ್ರತಾ ಅವರು ತಮ್ಮ ಚಿಕ್ಕಮ್ಮ, ಟಿಎಂಸಿ ರಾಜ್ಯಸಭಾ ಸಂಸದೆ ಮಮತಾ ಬಾಲಾ ಠಾಕೂರ್ ಅವರನ್ನು ಭೇಟಿಯಾಗಿದ್ದರು. ಶಾಂತನು ಅವರು ಆರೋಪವನ್ನು ಮಾಡಿ, “ನನ್ನ ಸಹೋದರ ರಾಜ್ಯದ ಆಡಳಿತ ಪಕ್ಷದಲ್ಲಿ ಸ್ಥಾನ ಪಡೆಯಲು ಶ್ರಮಿಸುತ್ತಿದ್ದಾರೆ” ಎಂದು ಆರೋಪಿಸಿದರು. ಈ ಕಿತ್ತಾಟದ ನಡುವೆ ಒಂದು ಗುಂಪು ರಾಹುಲ್ ಗಾಂಧಿಯವರನ್ನು ಭೇಟಿಯಾಯಿತು. ಬಿಜೆಪಿಯನ್ನು ಹೆಚ್ಚು ಕೆರಳಿಸಿದ ವಿಷಯವೆಂದರೆ, ಪಕ್ಷದ ಸ್ಥಳೀಯ ಕಾರ್ಯಕರ್ತರಲ್ಲಿ ಒಬ್ಬರಾದ ತಪನ್ ಹಲ್ದಾರ್ ಅವರು ಬಿಹಾರಕ್ಕೆ ನಿಯೋಗವನ್ನು ಕರೆದುಕೊಂಡು ಹೋಗಿದ್ದು!

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಅನಾಇಲೇಷನ್ ಆಫ್ ಕಾಸ್ಟ್’ ಎಂಬ ಜಾತಿ ಮೂಲಗಳ ‘ಎರಿಯೊಪೆಗಿಟಿಕ’

“ಮತುವಾಗಳ ನಿಯೋಗವನ್ನು ಸುಳ್ಳು ನೆಪದಲ್ಲಿ ಬಿಹಾರಕ್ಕೆ ಕಾಂಗ್ರೆಸ್ ಕೊಂಡೊಯ್ದಿದಿದೆ” ಎಂದು ಬಿಜೆಪಿ ಆರೋಪಿಸಿದೆ. ಜೊತೆಗೆ ಹಲ್ದಾರ್‌ಗೆ ಶೋ-ಕಾಸ್ ನೋಟಿಸ್‌ ನೀಡಿದೆ. “ಪಾಟ್ನಾದಲ್ಲಿರುವ ಆಶ್ರಮಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಮತುವಾಗಳಿಗೆ ತಿಳಿಸಲಾಗಿತ್ತು. ಶುಲ್ಕವನ್ನು ಪಾವತಿಸಿ ಹಣ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತು. ಮತುವಾಗಳಲ್ಲಿ ನೆಲೆ ಕಂಡುಕೊಳ್ಳಲು ಕಾಂಗ್ರೆಸ್ ಯಶಸ್ವಿಯಾಗುವುದಿಲ್ಲ” ಎಂದು ಅಖಿಲ ಭಾರತ ಮತುವಾ ಮಹಾಸಂಘದ ಮುಖ್ಯಸ್ಥರೂ ಆಗಿರುವ ಶಾಂತನು ಠಾಕೂರ್ ಪ್ರತಿಕ್ರಿಯಿಸಿದ್ದಾರೆ. ಹಲ್ದಾರ್ ಅವರಲ್ಲಿ ವಿವರಣೆ ಕೇಳಲಾಗುವುದು ಎಂದು ಬಿಜೆಪಿಯ ಬೊಂಗಾನ್ ಜಿಲ್ಲಾ ಅಧ್ಯಕ್ಷ ಬಿಕಾಶ್ ಘೋಷ್ ಹೇಳಿದ್ದಾರೆ.

ಕೇಂದ್ರ ಸಚಿವರ ಆರೋಪಗಳನ್ನು ತಳ್ಳಿಹಾಕಿದ ಕಾಂಗ್ರೆಸ್ ವಕ್ತಾರ ಕೇತನ್ ಜೈಸ್ವಾಲ್, “ಶಾಂತನು ಠಾಕೂರ್ ಹೇಳುತ್ತಿರುವುದು ಆಧಾರ ರಹಿತವಾಗಿದೆ… ಮತುವಾಗಳು ಬಿಜೆಪಿ ಮತ್ತು ಟಿಎಂಸಿಯ ಸುಳ್ಳು ಭರವಸೆಗಳಿಂದ ಬೇಸತ್ತಿದ್ದಾರೆ. ಮತುವಾ ಬೆಂಬಲ ಕಾಂಗ್ರೆಸ್ ಕಡೆಗೆ ಬದಲಾಗುತ್ತಿರಬಹುದು ಎಂದು ಬಿಜೆಪಿ ಭಯಭೀತವಾಗಿದೆ” ಎಂದು ಕುಟುಕಿದ್ದಾರೆ. ಅಂತೂ ಮತುವಾಗಳು ರಾಜಕೀಯವಾಗಿ ಯಾವಾಗ ಬೇಕಾದರೂ ಪಲ್ಲಟ ಹೊಂದುವ ಭಯ ಬಿಜೆಪಿಗಿದೆ.

ಈಗ ಮತುವಾಗಳು ತಮ್ಮ ದಾಖಲಾತಿಯನ್ನು ಖಾತ್ರಿಪಡಿಸಿಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಳ್ಳುವಂತಾಗಿದೆ. ಚುನಾವಣಾ ಆಯೋಗವು ಮತಪಟ್ಟಿ ವಿಶೇಷ ಪರಿಷ್ಕರಣೆಯನ್ನು ಬಂಗಾಳದಲ್ಲೂ ನಡೆಸುವ ಸೂಚನೆ ಸಿಕ್ಕ ಬಳಿಕ ‘ಮತುವಾ ಕಾರ್ಡ್’ ಅಥವಾ ‘ಹಿಂದೂ ಕಾರ್ಡ್/ಪ್ರಮಾಣಪತ್ರ’ವನ್ನು ವಿತರಿಸುವುದು ಶುರುವಾಗಿದೆ. ಅಖಿಲ ಭಾರತ ಮತುವಾ ಮಹಾಸಂಘ ನಡೆಸುವ ಈ ಶಿಬಿರದಲ್ಲಿ ಗೋಲ್‌ಮಾಲ್ ನಡೆಯುತ್ತಿರುವ ಆರೋಪಗಳೂ ಬಂದಿವೆ.

“ಆರಂಭದಲ್ಲಿ, ಹೆಚ್ಚಿನವರು CAA ಬಗ್ಗೆ ಆಸಕ್ತಿ ತೋರಿಸಲಿಲ್ಲ ಎಂಬುದು ನಿಜ. ಆದರೆ ಜನರು ತಮ್ಮ ಮತದಾನದ ಹಕ್ಕುಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅದಕ್ಕಾಗಿಯೇ ದೊಡ್ಡಸಂಖ್ಯೆಯಲ್ಲಿ ಮತುವಾ ಸರ್ಟಿಫಿಕೇಟ್ ಪಡೆಯಲು ಮುಂದಾಗಿದ್ದಾರೆ” ಎಂಬುದು ಶಿಬಿರ ನಡೆಸಿದವರ ಅಭಿಪ್ರಾಯ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಭಾರತೀಯ ಪೌರತ್ವಕ್ಕೆ ಅರ್ಹರಲ್ಲದ ಬಾಂಗ್ಲಾದೇಶಿ ವಲಸಿಗರಿಗೆ ಶಾಂತನು ಠಾಕೂರ್ ನೇತೃತ್ವದ ಅಖಿಲ ಭಾರತ ಮಾತುವಾ ಮಹಾಸಂಘ (ಎಐಎಂಎಂ) ಹಣದಾಸೆಗೆ ಸಂಘದ ಗುರುತಿನ ಚೀಟಿಗಳನ್ನು ನೀಡಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಇತ್ತೀಚೆಗೆ ಆರೋಪಿಸಿದೆ. “ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಪ್ರವೇಶಿಸಿದ ಬಾಂಗ್ಲಾದೇಶಿಗಳಿಗೆ ಈ ಗುರುತಿನ ಚೀಟಿಗಳು ಮತ್ತು ಪ್ರಮಾಣಪತ್ರಗಳನ್ನು ದುಡ್ಡು ಕೊಟ್ಟು ನೀಡಲಾಗುತ್ತಿರುವ ಶಿಬಿರಗಳನ್ನು ಶಾಂತನು ನಡೆಸುತ್ತಿದ್ದಾರೆ” ಎಂದು ಟಿಎಂಸಿ ನಾಯಕ ಗೋಪಾಲ್ ಸೇಠ್ ದೂರಿದ್ದಾರೆ.

ಇದನ್ನೂ ಓದಿರಿ: ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?

ಹೀಗೆ ಮತುವಾ ಸಮುದಾಯವು ರಾಜಕೀಯ ಕಾರಣಕ್ಕಾಗಿ ಎಲ್ಲ ಪಕ್ಷಗಳಿಗೂ ಮುಖ್ಯವಾಗಿದೆ. “ಎಲ್ಲ ಸೌಲಭ್ಯವನ್ನು ಟಿಎಂಸಿಯಿಂದ ಪಡೆದು ಕೊನೆಗೆ ನಮ್ಮನ್ನು ಮತುವಾಗಳು ಬೆಂಬಲಿಸಲಿಲ್ಲ” ಎಂದು ಟಿಎಂಸಿ ಸಂಸದೆ ಮೊಹುವ ಮೊಯಿತ್ರಾ ಇತ್ತೀಚೆಗೆ ಹೇಳಿಕೆ ನೀಡಿ, ಸ್ವಪಕ್ಷದಿಂದಲೇ ಟೀಕೆಗೆ ಒಳಗಾಗಿದ್ದಾರೆ. ಆದರೆ ಕಾಂಗ್ರೆಸ್‌ ನಿಧಾನಕ್ಕೆ ಮತುವಾಗಳ ನಡುವೆ ನೆಲೆಗೊಳ್ಳುತ್ತದೆಯೇ ಎಂಬುದಷ್ಟೇ ಸದ್ಯದ ಕುತೂಹಲ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...