ವರ್ತಮಾನಕ್ಕೆ ಕನ್ನಡಿ ಹಿಡಿಯುವ ‘ರಾನಡೆ, ಗಾಂಧಿ ಮತ್ತು ಜಿನ್ನಾ’ ಕೃತಿ (ಭಾಗ-1)

Date:

‘ರಾನಡೆ, ಗಾಂಧಿ ಅಂಡ್ ಜಿನ್ನಾ’ (Ranade, Gandhi and Jinnah) ಬಾಬಾಸಾಹೇಬ್ ಅಂಬೇಡ್ಕರ್ ಅವರ ಒಂದು ಪುಟ್ಟ ಮತ್ತು ಅಷ್ಟೇ ಮಹತ್ವದ ಕೃತಿ. ಡಾ.ಅಂಬೇಡ್ಕರ್ ಅವರು ಕೃತಿಯಲ್ಲಿ ಮಂಡಿಸಿರುವ ಸಾರ್ವಕಾಲಿಕ ಸಂಗತಿಗಳು ಮುಖ್ಯವಾಗುತ್ತವೆ. ವ್ಯಕ್ತಿಯೋರ್ವ, ಅದು ವರ್ತಮಾನ ಇರಲಿ, ಭವಿಷ್ಯವಿರಲಿ, ಇತಿಹಾಸವಿರಲಿ ಹೇಗೆ ಬದುಕಬೇಕು ಮತ್ತು ಸಾಮಾಜಿಕ ಹೋರಾಟಗಾರರು, ರಾಜಕೀಯ ನೇತಾರರು ಹೇಗೆ ಇರಬೇಕೆಂದು ಈ ಕೃತಿ ಜಾಗತಿಕ ದಾಖಲೆಗಳೊಂದಿಗೆ ಚರ್ಚಿಸುತ್ತದೆ. ಇದಿಷ್ಟೆ ಅಲ್ಲಾ, ಈ ಕೃತಿಯಲ್ಲಿ ಬರುವ ಹಿಂದೂ ಧರ್ಮ ಕುರಿತ ಅಂಬೇಡ್ಕರ್ ಅವರ ವಿಮರ್ಶೆಗಳು ಗಮನಾರ್ಹ. ಸೈದ್ಧಾಂತಿಕ ವಿರೋಧವನ್ನು ವೈಚಾರಿಕತೆಯ ಹಿನ್ನೆಲೆಯಲ್ಲಿ ಸಾಕ್ಷೀಭೂತವಾಗಿ ಬಾಬಾ ಸಾಹೇಬರು ಮಂಡಿಸುತ್ತಾರೆ. ಅನಾಇಲೇಷನ್ ಆಫ್ ಕ್ಯಾಸ್ಟ್, ಫಿಲಾಸಫಿ ಆಫ್ ಹಿಂದೂಯಿಸಂ, ರಿಡಲ್ಸ್ ಇನ್ ಹಿಂದೂಯಿಸಂ… ಹೀಗೆ ಅವರ ಇತರೆ ಕೃತಿಗಳು ಈ ಕೆಲಸವನ್ನು ಮಾಡಿರಬಹುದಾದರೂ `ರಾನಡೆ ಗಾಂಧಿ ಮತ್ತು ಜಿನ್ನಾ’ ಕೃತಿ ಮತ್ತಷ್ಟು ಅದರ ವಿಸ್ತರಣೆಯಾಗಿ ಕಾಣುತ್ತದೆ. ಹಿಂದೂ ಧರ್ಮ ಕುರಿತ ಅಂಬೇಡ್ಕರರ ಪ್ರಬಲ ಸಾರ್ವಕಾಲಿಕ ಪ್ರತಿರೋಧವನ್ನು ಸ್ಪಷ್ಟವಾಗಿ ಎತ್ತಿ ಹಿಡಿಯುತ್ತದೆ. ಆ ಕಾರಣಕ್ಕೆ ಇದು ಪುಟ್ಟ ಕೃತಿ ಮಹತ್ವದ್ದಾಗಿದೆ.

ಈ ಕೃತಿ ರಚನೆಯ ಹಿನ್ನೆಲೆಯನ್ನು ಡಾ.ಅಂಬೇಡ್ಕರ್ ಅವರ ವಿಚಾರಗಳ ಹಿನ್ನಲೆಯಿಂದ ತಿಳಿಯುವುದು ಮುಖ್ಯ. ರಾನಡೆ ಅವರ ಪೂರ್ಣ ಹೆಸರು ಮಹದೇವ ಗೋವಿಂದ ರಾನಡೆ ಅಥವಾ ಎಂ.ಜಿ.ರಾನಡೆ. ರಾನಡೆಯವರು ಮಹಾರಾಷ್ಟ್ರದ ಓರ್ವ ಸಮಾಜ ಸುಧಾರಕರು. 1842ರಲ್ಲಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಆ ಕಾಲದಲ್ಲಿ ಓರ್ವ ಬುದ್ಧಿಜೀವಿಯಾಗಿ, ಪತ್ರಕರ್ತರಾಗಿ, ಮುಖ್ಯವಾಗಿ ಓರ್ವ ನ್ಯಾಯಾಧೀಶರಾಗಿ ಜನಪ್ರಿಯರಾದವರು. ಅದಕ್ಕಿಂತಲೂ ಮುಖ್ಯವೇನೆಂದರೆ ಮಹಾತ್ಮ ಜ್ಯೋತಿಬಾ ಪುಲೆಯವರಿಂದ ಆ ಸಮಕಾಲ ಘಟ್ಟದಲ್ಲಿ ಆರಂಭವಾದ ಸಾಮಾಜಿಕ ಸುಧಾರಣೆಯಿಂದ ಪ್ರಭಾವಿತರಾದವರು. ಆ ಹಾದಿಯಲ್ಲಿ ಮುನ್ನಡೆದವರು. ಈ ಹಿನ್ನೆಲೆಯಲ್ಲಿ 1942ರಲ್ಲಿ ಅವರ 101ನೇ ಜನ್ಮ ಶತಮಾನೋತ್ಸವ ಬರುತ್ತದೆ. ತನ್ನಿಮಿತ್ತ ಅಂದಿನ ಪೂನಾದ `ಡೆಕ್ಕನ್ ಸಭಾ’ ಎಂಬ ಸಂಘಟನೆ ಆ ವರ್ಷ ರಾನಡೆಯವರನ್ನು ಕುರಿತು ವಿಚಾರಸಂಕಿರಣ ಏರ್ಪಡಿಸುತ್ತದೆ. `ಡೆಕ್ಕನ್ ಸಭಾ’ ಮುಖ್ಯ ಭಾಷಣಕಾರರಾಗಿ ಡಾ.ಅಂಬೇಡ್ಕರ್ ಅವರನ್ನು ಆಹ್ವಾನಿಸುತ್ತದೆ. ಈ ಹಿನ್ನೆಲೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಂಡಿಸಿದ ಭಾಷಣವೇ- `ರಾನಡೆ, ಗಾಂಧಿ ಮತ್ತು ಜಿನ್ನಾ’ ಕೃತಿಯಾಗಿ ಪ್ರಕಟವಾಗಿದೆ.

mg ranade

ಕೃತಿಯಲ್ಲಿ ಕಂಡುಬರುವ ಮೊದಲ ವಿಚಾರ ಶ್ರೇಷ್ಠ ವ್ಯಕ್ತಿ ಎಂದರೆ ಯಾರು ಎಂಬ ಪ್ರಶ್ನೆ. ಡಾ.ಅಂಬೇಡ್ಕರ್ ಅವರು, ಓರ್ವ ವ್ಯಕ್ತಿಯಾಗಿ ರಾನಡೆ ಅವರು ಹೇಗೆ ಶ್ರೇಷ್ಠ ಎಂದು ಚರ್ಚಿಸುತ್ತಾ ಹೋಗುತ್ತಾರೆ. “ಮಿಲಿಟರಿ ಹೀರೋಗಳಾದ ಅಲೆಕ್ಸಾಂಡರ್, ಅಟ್ಟಿಲಿ, ಸೀಸರ್ ಮತ್ತು ಟೇಮರ್‌ಲೇನ್ ಇವರುಗಳ ಬಗ್ಗೆ ಹೇಳುವುದಾದರೆ, ಇವರುಗಳು ಶ್ರೇಷ್ಠ ವ್ಯಕ್ತಿಗಳಾ ಎಂದು ಕೇಳಿದರೆ ಖಂಡಿತ ಉತ್ತರಿಸುವುದು ಕಷ್ಟವಿಲ್ಲ. ಯಾಕೆಂದರೆ ಸೇನಾ ದಂಡನಾಯಕರುಗಳು ಒಂದು ಹೊಸ ಯುಗವನ್ನು ಸೃಷ್ಟಿಸಿರುತ್ತಾರೆ ಮತ್ತು ಒಂದು ವಿಶಾಲ ಬದಲಾವಣೆಗೆ ಕಾರಣರಾಗಿರುತ್ತಾರೆ. ಹಾಗಾಗಿ ಅವರುಗಳು ತಮ್ಮ ರೋಚಕ ಗೆಲುವುಗಳ ಮೂಲಕ ತಮ್ಮ ಸಮಕಾಲೀನ ಸಮಾಜದ ಜನರಲ್ಲಿ ದಿಗಿಲು ಹುಟ್ಟಿಸಿರುತ್ತಾರೆ, ಬೆರಗುಗೊಳಿಸಿರುತ್ತಾರೆ. ಪರಿಣಾಮ ಶ್ರೇಷ್ಠ ಎಂದು ಕರೆಯುವುದಕ್ಕೆ ಮುಂಚೆಯೇ ಅವರು ಶ್ರೇಷ್ಠರಾಗಿರುತ್ತಾರೆ; ಜಿಂಕೆಗಳ ಮಧ್ಯೆ ಸಿಂಹಗಳು ಇದ್ದ ಹಾಗೆ. ಅಂಥವರು ಮನುಷ್ಯರ ನಡುವೆ ಇದ್ದರೆ ಶ್ರೇಷ್ಠರಾಗಿಯೇ ಆಗುತ್ತಾರೆ. ಆದರೆ ಒಂದು ವಿಚಾರ, ಇತಿಹಾಸದ ಮೇಲೆ ಅಂಥವರು ಬೀರುವ ಪರಿಣಾಮ ತೀರಾ ಕ್ಷಣಿಕ. ಏಕೆಂದರೆ ಅವರು ಆಕ್ರಮಿಸುವ ಪ್ರದೇಶಗಳು ಅವರ ಎದುರೇ ಆ ಕ್ಷಣವೇ ಅವರು ನೋಡಿದ್ದಕ್ಕಿಂತಲೂ ಹೆಚ್ಚು ಕುಗ್ಗಿಹೋಗಿರುತ್ತವೆ! ಉದಾಹರಣೆಗೆ ಫ್ರಾನ್ಸ್‌ನ ಶ್ರೇಷ್ಠ ದಂಡನಾಯಕ ನೆಪೋಲಿಯನ್ ತನ್ನೆಲ್ಲ ಅಕ್ರಮಣಗಳ ಬಳಿಕ ತನ್ನೆದುರೇ ಪ್ರಾನ್ಸ್ ಕೊಂಚ ಕರಗಿದ್ದನ್ನು ನೋಡಿದ! ಈ ನಿಟ್ಟಿನಲ್ಲಿ ಮಿಲಿಟರಿ ದಂಡನಾಯಕರುಗಳನ್ನು ಒಂದು ನಿರ್ದಿಷ್ಟ ಅಂತರ ಇಟ್ಟು ನೋಡಿದಾಗ ಏನನಿಸುತ್ತದೆ? ಅವರು ಬೀರುವ ಪರಿಣಾಮ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತ ಅನಿಸುತ್ತದೆ. ಅವರುಗಳು ತಾವು ಬದುಕಿದ್ದ ಸಮಕಾಲೀನ ಸಮಾಜದ ಮೇಲೆ ಯಾವುದೇ ಶಾಶ್ವತ ಪರಿಣಾಮ ಬೀರದೆ ಜಾಗತಿಕ ಚಲನೆಯಲ್ಲಿ ಜರುಗುವ ಒಂದೆರಡು ಘಟನೆಗಳಾಗುತ್ತಾರಷ್ಟೆ. ಹೀಗಿದ್ದರೂ ಅವರುಗಳ ಬದುಕು ಮತ್ತು ಹೋರಾಟದ ವಿವರಣೆ ಆಸಕ್ತಿಕರ ಇರಬಹುದು. ಆದರೆ ವಾಸ್ತವ ಅಂದರೆ ಇಡೀ ಪ್ರಪಂಚದ ಸ್ಥಿತಿಗತಿ ಮತ್ತು ತಾವು ಬದುಕಿದ್ದ ಸಾಮಾಜಿಕ ಕಾಲಘಟ್ಟದ ಮೇಲೆ ಅವರು ಯಾವುದೇ ಪರಿಣಾಮ ಬೀರಿರುವುದಿಲ್ಲ”.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೀಗೆ ಡಾ.ಅಂಬೇಡ್ಕರ್ ಅವರು ಶ್ರೇಷ್ಠತೆ ಎಂಬುದರ ವಿವರಣೆ ನೀಡುತ್ತಾರೆ. ಅವರ ದೃಷ್ಟಿಯಲ್ಲಿ ಶ್ರೇಷ್ಠ ವ್ಯಕ್ತಿಗಳು ತಾವು ಬದುಕಿರುವ ಸಮಾಜದ ಮೇಲೆ ಶಾಶ್ವತವಾದ ಪರಿಣಾಮ ಬೀರಿರಬೇಕು, ಜನ ಅದನ್ನು ಸದಾ ನೆನಪಿಸಿಕೊಳ್ಳುತ್ತಿರಬೇಕು. ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಕಾರ್ಲೈಲ್ ಎಂಬ ಚಿಂತಕರ ವಿಚಾರಗಳನ್ನು ಉಲ್ಲೇಖಿಸುತ್ತಾರೆ. “ಯಾವುದನ್ನಾದರೂ ಸರಿ ಸಾಧಿಸುತ್ತೇನೆ ಎನ್ನುವಷ್ಟು ಸಮರ್ಥರು ಯಾವುದೇ ಮನುಷ್ಯರು ಆಗಿರಲು ಸಾಧ್ಯವಿಲ್ಲ. ಆದರೆ ಯಾವುದರ ಬಗ್ಗೆಯಾದರೂ ಸರಿ ಮನುಷ್ಯನಲ್ಲಿ ಇರಬೇಕಾದ ಮೊದಲ ಗುಣ ಅದು ಬದ್ಧತೆ. ಬದ್ಧತೆ ಇರುವ ವ್ಯಕ್ತಿಗಳನ್ನು ನಾನು ಪ್ರಾಮಾಣಿಕರು ಎಂದು ಕರೆಯುತ್ತೇನೆ. ಪ್ರಾಮಾಣಿಕತೆ, ಅದರಲ್ಲೂ ಆಳವಾದ ಪ್ರಾಮಾಣಿಕತೆ ಶ್ರೇಷ್ಠ ವ್ಯಕ್ತಿಯೊಬ್ಬನ ಪ್ರಮುಖ ಗುಣಲಕ್ಷಣ ಎಂಬುದನ್ನು ನಾನು ತಿಳಿಯಲಿಚ್ಛಿಸುತ್ತೇನೆ” ಎಂದಿದ್ದನು ಕಾರ್ಲೈಲ್.

ಕಾರ್ಲೈಲ್ ಅವರ ಈ ಚಿಂತನೆಯನ್ನು ಅನುಮೋದಿಸಿ ಡಾ. ಅಂಬೇಡ್ಕರ್, “ನನ್ನ ದೃಷ್ಟಿಯಲ್ಲಿ ಪ್ರಾಮಾಣಿಕತೆಯು ಶ್ರೇಷ್ಠತೆಯ ಮೊದಲ ಪರೀಕ್ಷೆ. ಹಾಗಿದ್ದರೆ ಪ್ರಾಮಾಣಿಕತೆಯಷ್ಟೇ ಸಾಕೆ? ಖಂಡಿತ ಇಲ್ಲ. ಮನುಷ್ಯ ಶ್ರೇಷ್ಠನಾಗಬೇಕು ಎಂದರೆ ಆತನಿಗೆ ಕೇವಲ ಪ್ರಾಮಾಣಿಕತೆಯೊಂದೇ ಸಾಲುವುದಿಲ್ಲ. ಮನುಷ್ಯನೋರ್ವ ಪ್ರಾಮಾಣಿಕನಾಗಿರಬಹುದು. ಹಾಗಿದ್ದರೂ ಆತ ಮೂರ್ಖನೂ ಆಗಿರಬಹುದು! ಮೂರ್ಖತನವು ಶ್ರೇಷ್ಠತೆಗೆ, ವ್ಯಕ್ತಿ ಶ್ರೇಷ್ಠತೆಗೆ ತಡೆಯೊಡ್ಡುತ್ತದೆ. ಆದ್ದರಿಂದ ವ್ಯಕ್ತಿಯೋರ್ವ ಶ್ರೇಷ್ಠನಾಗಬಲ್ಲ, ಯಾವಾಗ ಅಂದರೆ ಆತ ಗಂಡಾಂತರದ ಸನ್ನಿವೇಶದಲ್ಲಿಯೂ ಸಮಕಾಲೀನ ಸಮಾಜವನ್ನು ರಕ್ಷಿಸಿದಾಗ. ಆತನ ಇಂತಹ ಕೆಲಸಕ್ಕೆ ಸಾಥ್ ನೀಡುವ ಅಂಶ-ಬೌದ್ಧಿಕತೆ. ಬೌದ್ಧಿಕತೆ ಅಥವಾ ವೈಚಾರಿಕತೆಯಿಂದ ಮಾತ್ರ ಆತ ಇದನ್ನು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಬೌದ್ಧಿಕತೆ ಎಂಬುದು ಬೆಳಕು. ಅದಿಲ್ಲದೆ ಏನೂ ಸಾಧ್ಯವಿಲ್ಲ. ಪ್ರಾಮಾಣಿಕತೆ ಮತ್ತು ಬೌದ್ಧಿಕತೆ(ವಿಚಾರವಂತಿಕೆ)ಗಳ ಸಂಯೋಗದಿಂದ ಮಾತ್ರ ವ್ಯಕ್ತಿಯೋರ್ವ ಶ್ರೇಷ್ಠನಾಗುತ್ತಾನೆ”. ಹೀಗೆ ಹೇಳುತ್ತಾ ಅಂಬೇಡ್ಕರ್ ಅವರು ಜಸ್ಟಿಸ್ ರಾನಡೆಯವರಲ್ಲಿ ಪ್ರಾಮಾಣಿಕತೆ ಮತ್ತು ವಿಚಾರವಂತಿಕೆ ಎರಡು ಕೂಡ ಇತ್ತು. ಆ ಕಾರಣದಿಂದ ಅವರದು ಶ್ರೇಷ್ಠ ವ್ಯಕ್ತಿತ್ವದವರು ಎಂಬ ಅಭಿಪ್ರಾಯಕ್ಕೆ ಬರುತ್ತಾರೆ.

mg

ಇದನ್ನೂ ಓದಿರಿ: ‘ಟ್ರಾನ್ಸ್‌ ಸಮುದಾಯ’; ಗ್ರಹಿಕೆಯ ತೊಡಕುಗಳೇನು? (ಭಾಗ-1)

ಈ ಕೃತಿಯಲ್ಲಿ ಬರುವ ಪ್ರಮುಖ ಅಂಶ ಹಿಂದೂ ಧರ್ಮ ಕುರಿತದ್ದು. ಹಿಂದೂ ಧರ್ಮ ಕುರಿತು ಯಾಕೆ ಡಾ.ಅಂಬೇಡ್ಕರ್ ಅವರು ಈ ಕೃತಿಯಲ್ಲಿ ವಿವರಿಸುತ್ತಾರೆ? ಎಂಬುದನ್ನು ಗಮನಿಸಬೇಕು. ಜಸ್ಟಿಸ್ ರಾನಡೆಯವರ ಜನಿಸಿದ್ದು 1842ರಲ್ಲಿ.  ಅಂದರೆ 1818ರಲ್ಲಿ ಘಟಿಸಿದ ಕಿರ್ಕಿ ಅಥವಾ ಕೊರೆಗಾಂವ್ ಯುದ್ಧದ 22 ವರ್ಷಗಳ ನಂತರ. ಕಿರ್ಕಿ ಅಥವಾ ಕೋರೆಗಾಂವ್ ಯುದ್ಧ ಮಹಾರಾಷ್ಟ್ರದಲ್ಲಿ ದೌರ್ಜನ್ಯಕೋರ ಮರಾಠ ಪೇಶ್ವೆಗಳ ಆಡಳಿತವನ್ನು ಕೊನೆಗಾಣಿಸಿತು. ರಾನಡೆಯವರು, ಮರಾಠರ ಈ ಅವನತಿಗೆ ಕಾರಣ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿರುವ ದೌರ್ಬಲ್ಯಗಳು ಎಂಬುದನ್ನು ಗ್ರಹಿಸಿದರು. ಆ ನಿಟ್ಟಿನಲ್ಲಿ ಗ್ರಹಿಸಿದ್ದ ಇಂತಹ ದೌರ್ಬಲ್ಯಗಳನ್ನು ಕೊನೆಗಾಣಿಸದೆ ಹಿಂದೂ ಧರ್ಮಕ್ಕೆ ಭವಿಷ್ಯವಿಲ್ಲ ಎಂದು ಅವರು ಹಿಂದೂ ಧಾರ್ಮಿಕ ಸುಧಾರಣೆಗೆ ಮುಂದಾಗುತ್ತಾರೆ. ಇದನ್ನು ತಮ್ಮ ಈ ಕೃತಿಯಲ್ಲಿ ಡಾ.ಅಂಬೇಡ್ಕರ್‌ರವರು ದಾಖಲಿಸುತ್ತಾರೆ.

“ಹಿಂದೂ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಹೇಗಿದೆ ಅಂದರೆ ಅದರ ಆದರ್ಶ ರೂಪವನ್ನು ವಾಸ್ತವಕ್ಕಿಳಿಸಲು ಸಾಧ್ಯವಾ ಎಂದು ಯಾರಾದರೂ ಮುಂದಾದರೆ ಅದು ಅಕ್ಷರಶಃ ಅಸಾಧ್ಯ ಎಂಬುದು ತಿಳಿಯುತ್ತದೆ. ಅದರ ಆದರ್ಶ ರೂಪವೇ ಕೆಟ್ಟದ್ದಾಗಿದೆ. ಹಾಗೆ ಇರುವ ವಾಸ್ತವವನ್ನಾದರೂ ಆದರ್ಶ ರೂಪಕ್ಕೆ ಏರಿಸಲು ಸಾಧ್ಯವೇ ಎಂದರೆ ಅದು ಕೂಡ ಸಾಧ್ಯವಿಲ್ಲ. ಯಾಕೆಂದರೆ ಅಸ್ತಿತ್ವದಲ್ಲಿರುವ ವಾಸ್ತವವೇ ಬೇರೆ. ಅದು ಈಗಿರುವ ಸ್ಥಿತಿ ಕೆಟ್ಟದ್ದಕ್ಕಿಂತಲೂ ಕೆಟ್ಟದ್ದಾಗಿದೆ. ಅಂದಹಾಗೆ ಹೀಗೆ ಹೇಳುವುದು ಅದು ಅತಿಶಯೋಕ್ತಿಯೇನಲ್ಲ. ಹಿಂದೂ ಸಾಮಾಜಿಕ ಸ್ಥಿತಿ ಮತ್ತು ಹಿಂದೂ ಧಾರ್ಮಿಕ ಸ್ಥಿತಿಗಳನ್ನು ಅವುಗಳ ಸಾಮಾಜಿಕ ಉಪಯೋಗ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪರೀಕ್ಷಿಸುವುದಾದರೆ… ಧರ್ಮದ ಬಗ್ಗೆ ಎಲ್ಲರೂ ಒಂದು ಮಾತು ಹೇಳುತ್ತಾರೆ. ಗಿಡದಿಂದ ಕಿತ್ತಾಗ ಒಂದು ಮಸಾಲೆ ಎಷ್ಟು ಫ್ರೆಶ್ ಆಗಿರುತ್ತದೆಯೋ ಹಾಗೆ ಅದು ಒಳ್ಳೆಯದಾಗಿರುತ್ತದೆ ಎಂಬುದು ಅವರ ಮಾತು. ಆದರೆ ಆರಂಭದಲ್ಲೇ ಗಮನಿಸುವುದಾದರೆ ಹಿಂದೂ ಧರ್ಮ ಅದೊಂದು ಕೆಟ್ಟ ನಾಣ್ಯವಾಗಿದೆ. ಹಿಂದೂ ಧರ್ಮವು ಹೇಳುವ ಹಿಂದೂ ಸಾಮಾಜಿಕ ಆದರ್ಶ ಹಿಂದೂ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂದರೆ- ದಯನೀಯ ಮತ್ತು ಇಡೀ ವ್ಯವಸ್ಥೆಯನ್ನು ನೈತಿಕ ಅಧಃಪತನದೆಡೆಗೆ ದೂಡುವ ರೀತಿ ಕೆಲಸ ಮಾಡಿದೆ! ಹಾಗೆ ಅದರ ರೂಪ ಮತ್ತು ಮೂಲತತ್ವವು ನೀಷೆಯ ಮಾದರಿಯದ್ದಾಗಿದೆ (ನೀಷೆಯು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನನ್ನು ಪ್ರಭಾವಿಸಿದ ಫ್ಯಾಸಿಸ್ಟ್ ಚಿಂತಕ). ಈ ನಿಟ್ಟಿನಲ್ಲಿ ನೀಷೆಗಿಂತ ಬಹಳ ಹಿಂದೆಯೇ ಮೊದಲು ಭಾರತದಲ್ಲಿ ಜನಿಸಿದ್ದು ಮನು. ನೀಷೆ ಯಾವ ಸಿದ್ಧಾಂತವನ್ನು ಬೋಧಿಸಿದನೋ ಆ ಥರದ ಬೋಧನೆಯನ್ನು ಆ ಕಾಲದಲ್ಲೇ ಮನು ರೂಪಿಸಿದ್ದ! ಇದರಿಂದ ಅರ್ಥವಾಗುವುದು ಹಿಂದೂ ಧರ್ಮವು- ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯನ್ನು ಸ್ಥಾಪಿಸುವ ಉದ್ದೇಶ ಹೊಂದಿಲ್ಲದ ಧರ್ಮ. ಅದು ಬ್ರಾಹ್ಮಣ ಎಂಬ ಸೂಪರ್ ಮ್ಯಾನ್ ಅನ್ನು ಹಿಂದೂ ಸಮಾಜದ ಇತರರು ಪೂಜಿಸುವಂತೆ ತಿಳಿಸುವ ಬೋಧನೆಯಾಗಿದೆ. ಆ ಸೂಪರ್ ಮ್ಯಾನ್ ಮತ್ತು ಆತನ ವರ್ಗ ಮಾತ್ರ ಈ ಜಗತ್ತಿನಲ್ಲಿ ಬದುಕಲು ಸಾಧ್ಯ. ಈ ಜಗತ್ತಿನಲ್ಲಿ ಆಳಲು ಅರ್ಹ ಎಂಬ ಸಿದ್ಧಾಂತವನ್ನು ಅದು ಬೋಧಿಸುತ್ತದೆ. ಉಳಿದ ಇತರರು ಅವರ ಸೇವೆ ಮಾಡಬೇಕು ಮತ್ತು ಅದಕ್ಕಿಂತ ಹೆಚ್ಚೇನನ್ನು ಹೊಂದಲು ಸಾಧ್ಯವಿಲ್ಲ ಎಂದು ಅದು ಹೇಳುತ್ತದೆ. ಆ ಉಳಿದ ಇತರರು ತಮ್ಮದೇ ಸ್ವಂತ ಬದುಕನ್ನು ಹೊಂದುವ, ತಮ್ಮದೇ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ. ಇದೇ ಹಿಂದೂ ಧರ್ಮದ ಧಾರ್ಮಿಕ ಬೋಧನೆಯಾಗಿದೆ. ಹಿಂದೂ ತತ್ವವಾಗಿದೆ” ಎನ್ನುತ್ತಾರೆ ಅಂಬೇಡ್ಕರ್.

ಮುಂದುವರಿದು ಡಾ. ಅಂಬೇಡ್ಕರ್‌ರವರು, “ಜಾತಿ ವ್ಯವಸ್ಥೆಯು ಅದು ಚಾತುರ್ವರ್ಣ ಪದ್ಧತಿಯ ವಿರೂಪಗೊಂಡ ರೂಪ. ಅದೇ ಹಿಂದೂ ಧರ್ಮದ ಆದರ್ಶ. ಅಂದಹಾಗೆ ಆನುವಂಶಿಕ ಮೂರ್ಖನೊಬ್ಬನನ್ನು ಹೊರತುಪಡಿಸಿ ಮತ್ತ್ಯಾರು ತಾನೇ ಚಾತುರ್ವರ್ಣವನ್ನು ಸಮಾಜವೊಂದರ ಆದರ್ಶ ರೂಪ ಎನ್ನಲು ಸಾಧ್ಯ? ಆದ್ದರಿಂದ ವ್ಯಕ್ತಿ ದೃಷ್ಟಿಯಿಂದ ಮತ್ತು ಸಾಮಾಜಿಕ ದೃಷ್ಟಿಯಿಂದ ಅದೊಂದು {ಚಾತುರ್ವರ್ಣ} ಮೂರ್ಖ ನಂಬಿಕೆಯಾಗಿದೆ, ಅಪರಾಧವಾಗಿದೆ. ಏಕೆಂದರೆ ಒಂದು ವರ್ಗ ಕೇವಲ ಒಂದು ವರ್ಗ ಮಾತ್ರ ಶಿಕ್ಷಣವನ್ನು ಮತ್ತು ಕಲಿಕೆಯನ್ನು ಪಡೆಯಲು ಸಾಧ್ಯ! ಒಂದು ವರ್ಗ ಕೇವಲ ಒಂದು ವರ್ಗ ಮಾತ್ರ ಆಯುಧಗಳನ್ನು ಹಿಡಿಯಲು ಸಾಧ್ಯ! ಒಂದು ವರ್ಗ ಕೇವಲ ಒಂದು ವರ್ಗ ಮಾತ್ರ ವ್ಯಾಪಾರ -ವ್ಯವಹಾರಗಳನ್ನು ಮಾಡಲು ಸಾಧ್ಯ! ಒಂದು ವರ್ಗ ಕೇವಲ ಒಂದು ವರ್ಗ ಮಾತ್ರ ಇತರರ ಸೇವೆಗಳನ್ನು ಮಾಡಲು ಸಾಧ್ಯ!” ಎಂದು ಕುಟುಕುತ್ತಾರೆ.

ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಹುಟ್ಟು, ವಿಕಾಸವನ್ನು ಬಾಬಾಸಾಹೇಬರು ನೋಡಿದ್ದು ಹೇಗೆ?

ಇಂತಹ “ಆ ಒಂದು ವರ್ಗ ಮಾತ್ರ” ಎಂಬ ಥಿಯರಿಯ ಕಾರಣಕ್ಕೆ ಆದ ಪರಿಣಾಮ? ಅದನ್ನು ಕೂಡ ಅಂಬೇಡ್ಕರ್ ಅವರು ಹೇಳುತ್ತಾರೆ. ಭಾರತಕ್ಕೆ ಪರಕೀಯ ದಾಳಿಗಳು ಆ ಕಾಲದಿಂದಲೂ ಆದವು. ಆದರೆ ಕೇವಲ ಒಂದು ವರ್ಗ ಮಾತ್ರ (ಕ್ಷತ್ರಿಯ ವರ್ಗ) ಆಯುಧ ಹಿಡಿಯುವ ನಿಯಮ ಇದ್ದಿದ್ದರಿಂದ ಇತರೆ ಎಲ್ಲ ವರ್ಗಗಳು ಅಂತಹ ದಾಳಿಗಳ ಸಂದರ್ಭದಲ್ಲಿ ಮೌನವಾದವು, ಜವಾಬ್ದಾರಿಯಿಂದ ನುಣುಚಿಕೊಂಡವು. ಪರಿಣಾಮ ಭಾರತ ನಿರಂತರ ದಾಳಿಗಳಿಗೆ ಗುರಿಯಾಯಿತು. “ವಿದೇಶಿ ಆಕ್ರಮಣದ ಬಿರುಗಾಳಿಯನ್ನು ಭೀಕರತೆಯನ್ನು ಹಿಂದೂ ಜಾತಿ ವ್ಯವಸ್ಥೆಗೆ ತಡೆಯಲು ಸಾಧ್ಯವಾಯಿತೆ? ಇಲ್ಲ. ಸಮಾಜವೊಂದು ತನ್ನ ರಕ್ಷಣೆಗಾಗಿ ಅಥವಾ ಪ್ರತಿದಾಳಿ ಮಾಡಲಿಕ್ಕಾಗಲಿ ಒಂದು ಶಕ್ತಿಯಾಗಿ ಪ್ರಬಲವಾಗಿ ಒಂದುಗೂಡಬೇಕು. ಆದರೆ ಇಂತಿಂಥ ವರ್ಗಗಳಿಗೆ ಇಂತಿಂಥ ಕರ್ತವ್ಯ ಎಂದು ಹಂಚಿಕೆ ಮಾಡಿದ್ದರಿಂದ, ಉಲ್ಲಂಘಿಸದ ರೀತಿಯ ಕಾನೂನು ರೂಪಿಸಿದ್ದರಿಂದ ವಿದೇಶಿ ದಾಳಿಯ ಸಂದರ್ಭದಲ್ಲಿ ಇಡೀ ಹಿಂದೂ ಸಮಾಜ ಒಂದಾಗಲಿಕ್ಕೆ ಸಾಧ್ಯವಾಗಲಿಲ್ಲ. ಬ್ರಾಹ್ಮಣರು, ವೈಶ್ಯರು ಮತ್ತು ಶೂದ್ರರು ಸೇರಿದಂತೆ ಹಿಂದೂ ಧರ್ಮದ ಶೇಕಡ 90ರಷ್ಟು ಜನ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಶಸ್ತ್ರವನ್ನು ಹೊಂದುವ ಆಗಿರಲಿಲ್ಲ. ಹೀಗಿರುವಾಗ ಗಂಡಾಂತರದ ಸಂದರ್ಭದಲ್ಲಿ ಒಂದು ದೇಶ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ ಹಿಂದೂ ಸಮಾಜವನ್ನು ದುರ್ಬಲಗೊಳಿಸಿದ್ದು ತನ್ನ ಅಹಿಂಸಾ ಸಿದ್ಧಾಂತದ ಕಾರಣಕ್ಕಾಗಿ ಬುದ್ಧನಲ್ಲ. ಅದು ಬ್ರಾಹ್ಮಣರ ಚಾತುರ್ವರ್ಣ ಪದ್ಧತಿ. ಅದೇ ಹಿಂದೂ ಸಮಾಜದ ಸೋಲಿಗೆ ಮತ್ತು ಅವನತಿಗೆ ಮೂಲ ಕಾರಣ” ಎನ್ನುತ್ತಾರೆ ಅಂಬೇಡ್ಕರ್.

(ಮುಂದುವರಿಯುತ್ತದೆ…)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 11 17 at 5.14.55 PM
ರಘೋತ್ತಮ ಹೊ.ಬ
+ posts

ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...