ಪ್ರೀಮಿಯಂ ಲೇಖನ | ಗಾಂಧಿ ಹತ್ಯೆಗೆ ನಿಜವಾದ ಕಾರಣವೇ ಬೇರೆ: ‘ಮುಸ್ಲಿಮರ ಪರ’ ಆರೋಪದಾಚೆಗಿನ ಸತ್ಯ ಏನು?

Date:

ಗಾಂಧಿಯವರ ಮೇಲೆ ದ್ವೇಷದ ಬೇರುಗಳನ್ನು ಅರಿಯಲು ಅವರ ರಾಜಕೀಯದ ಸ್ವರೂಪವನ್ನು ಅರಿಯಬೇಕು. ಅವರು ಕೇವಲ ಬ್ರಿಟಿಷ್ ವಿರೋಧಿ ನಾಯಕನಲ್ಲ. ಅವರು ಸಮಾಜದ ಒಳಗಿನ ಅಸಮಾನತೆಯನ್ನು ಪ್ರಶ್ನಿಸಿದ ಸುಧಾರಕ. ಅಸ್ಪೃಶ್ಯತೆ ವಿರುದ್ಧ ಹೋರಾಡಿದಾಗ ಜಾತಿ ಆಧಾರಿತ ಶ್ರೇಷ್ಠತೆಯ ಮನೋಭಾವಕ್ಕೆ ಅವರು ಸವಾಲು ಹಾಕಿದರು.

ಮಹಾತ್ಮ ಗಾಂಧಿಯನ್ನು ‘ಮುಸ್ಲಿಂ ಪಕ್ಷಪಾತ’ ಕಾರಣಕ್ಕೆ ಕೊಂದೆ ಎಂದು ನಾಥೂರಾಮ್ ಗೋಡ್ಸೆ ತನ್ನ ಹೇಳಿಕೆಗಳಲ್ಲಿ ವಿವರಿಸಿದ್ದಾನೆ. ಅವನ ಹೆಸರಿನ ಪುಸ್ತಕವೂ ಅದನ್ನೇ ಪುನರಾವರ್ತಿಸುತ್ತದೆ. ಗಾಂಧಿ ವಿರೋಧಿಗಳೂ ಇದೇ ವಾದವನ್ನು ಮುಂದಿಡುತ್ತಾರೆ. ಆದರೆ ಇತಿಹಾಸದ ಕ್ರಮಪಥವನ್ನು ಗಮನಿಸಿದರೆ ಬೇರೆ ಚಿತ್ರ ಸ್ಪಷ್ಟವಾಗುತ್ತದೆ. ಗಾಂಧಿಯವರ ಮೇಲಿನ ದ್ವೇಷ ಮತ್ತು ಹತ್ಯೆ ಯತ್ನಗಳು ವಿಭಜನೆಯ ನಂತರ ಹುಟ್ಟಿದವುಗಳಲ್ಲ. ಅವರು ಅಸ್ಪೃಶ್ಯತೆ ನಿರ್ಮೂಲನೆ, ಜಾತಿ ಸಮಾನತೆ, ಧರ್ಮ ಸೌಹಾರ್ದ ಮತ್ತು ಅಹಿಂಸೆಯ ರಾಜಕೀಯವನ್ನು ಮುನ್ನಡೆಸಿದ ಕ್ಷಣದಿಂದಲೇ ವಿರೋಧ ಸಂಘಟಿತ ರೂಪ ಪಡೆಯತೊಡಗಿತ್ತು. ‘ಮುಸ್ಲಿಮರ ಪರ’ಎಂಬ ಆರೋಪ ಹತ್ಯೆಗೆ ನಂತರದ ರಾಜಕೀಯ ಸಮರ್ಥನೆ. ಮೂಲ ದ್ವೇಷ ಅದರ ಹಿಂದೆಯೇ ಬೆಳೆದಿತ್ತು.

ಈ ವಿರೋಧ ಮಾತಿನ ಮಟ್ಟದಲ್ಲಿ ನಿಲ್ಲಲಿಲ್ಲ. ಅದು ಕ್ರಮೇಣ ಹತ್ಯೆ ಯತ್ನಗಳ ಸರಣಿಯಾಗಿ ರೂಪುಗೊಂಡಿತು. 1934ರ ಪುಣೆಯ ಬಾಂಬ್ ದಾಳಿ, 1944ರ ಪಂಚಗಣಿಯಲ್ಲಿ ನಡೆದ ಚೂರಿ ಯತ್ನ, 1946ರ ಜೂನ್ 30ರಂದು ಪುಣೆಯಲ್ಲಿ ನಡೆದ ವಿಫಲ ಹತ್ಯೆ ಪ್ರಯತ್ನ, 1948ರ ಜನವರಿ 20ರಂದು ಪ್ರಾರ್ಥನಾ ಸಭೆಯಲ್ಲಿ ನಡೆದ ಬಾಂಬ್ ಯತ್ನ ಇವು ಪ್ರತ್ಯೇಕ ಘಟನೆಗಳಲ್ಲ. ಒಂದೇ ದ್ವೇಷದ ನಿರಂತರ ಹಾದಿಯ ಹಂತಗಳು. 1946ರ ದಾಳಿ ಬಳಿಕ ಗಾಂಧಿಯವರು “ನಾನು ಸಾವಿನ ದವಡೆಯಿಂದ ಹಲವು ಸಲ ತಪ್ಪಿಸಿಕೊಂಡಿದ್ದೇನೆ. ನಾನು ಇನ್ನೂ ಸಾಯಲು ಸಿದ್ಧನಿಲ್ಲ” ಎಂದು ಹೇಳಿದ್ದರು. ತಮ್ಮ ಮೇಲೆ ‘ಏಳು ಸಲ’ ಹತ್ಯಾಯತ್ನ ನಡೆಯಿತೆಂದು ಗಾಂಧಿ ಹೇಳಿದ್ದರು. ತಮ್ಮ ಮೇಲೆ ಮತ್ತೆ ಮತ್ತೆ ನಡೆದ ಜೀವಾಪಾಯ ಸಂದರ್ಭಗಳನ್ನು ಅವರು ಸ್ವತಃ ಒಪ್ಪಿಕೊಂಡಿದ್ದರು.

ಇದನ್ನು ಓದಿದ್ದೀರಾ? ಮೋದಿ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆಗೆ ಹೆದರಿದ್ದೇಕೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗಾಂಧಿಯವರ ಮೇಲೆ ದ್ವೇಷದ ಬೇರುಗಳನ್ನು ಅರಿಯಲು ಅವರ ರಾಜಕೀಯದ ಸ್ವರೂಪವನ್ನು ಅರಿಯಬೇಕು. ಅವರು ಕೇವಲ ಬ್ರಿಟಿಷ್ ವಿರೋಧಿ ನಾಯಕನಲ್ಲ. ಅವರು ಸಮಾಜದ ಒಳಗಿನ ಅಸಮಾನತೆಯನ್ನು ಪ್ರಶ್ನಿಸಿದ ಸುಧಾರಕ. ಅಸ್ಪೃಶ್ಯತೆ ವಿರುದ್ಧ ಹೋರಾಡಿದಾಗ ಜಾತಿ ಆಧಾರಿತ ಶ್ರೇಷ್ಠತೆಯ ಮನೋಭಾವಕ್ಕೆ ಅವರು ಸವಾಲು ಹಾಕಿದರು. “ಹರಿಜನ” ಎಂಬ ಪದ ಬಳಸಿ ಅಸ್ಪೃಶ್ಯರಿಗೆ ಘನತೆ ನೀಡಲು ಪ್ರಯತ್ನಿಸಿದಾಗ ಕೆಲವು ವಲಯಗಳು ಅದನ್ನು ಧರ್ಮದ ಪರಂಪರೆಯ ಮೇಲೆ ದಾಳಿ ಎಂದು ಭಾವಿಸಿದವು. 1934ರ ಜೂನ್ 25ರಂದು ಪುಣೆಯಲ್ಲಿ ಗಾಂಧಿಯವರು ಸಭೆಗೆ ತೆರಳುತ್ತಿದ್ದಾಗ ಅವರ ಕಾರಿನ ಮೇಲೆ ಬಾಂಬ್ ಎಸೆದು ದಾಳಿ ನಡೆಸಲಾಯಿತು. ಗಾಂಧಿ ಗಾಯಗೊಳ್ಳಲಿಲ್ಲ. ಆದರೆ ಅವರೊಂದಿಗೆ ಇದ್ದ ಕೆಲವರು ಗಾಯಗೊಂಡರು. ದೇಶ ವಿಭಜನೆಯ ವಿಚಾರವೇ ಆಗಿರದ ಕಾಲದಲ್ಲಿ ನಡೆದ ಈ ದಾಳಿ ದ್ವೇಷದ ಮೂಲವನ್ನು ಸ್ಪಷ್ಟಪಡಿಸುತ್ತದೆ.

ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ಗಾಂಧಿ ವಿರೋಧವನ್ನು ಎದುರಿಸಿದ್ದರು. ಭಾರತೀಯರ ಹಕ್ಕುಗಳಿಗಾಗಿ ಹೋರಾಡಿದಾಗ ದೈಹಿಕ ಹಲ್ಲೆ ಮತ್ತು ಜೀವ ಬೆದರಿಕೆಗಳನ್ನು ಎದುರಿಸಿದರು. ಭಾರತಕ್ಕೆ ಮರಳಿ 1917ರಲ್ಲಿ ಚಂಪಾರಣ್ ಸತ್ಯಾಗ್ರಹ ಆರಂಭಿಸಿದಾಗ ಬ್ರಿಟಿಷ್ ಇಂಡಿಗೋ ಜಮೀನ್ದಾರರ ಆರ್ಥಿಕ ಹಿತಾಸಕ್ತಿಗೆ ಹೊಡೆತ ಬಿತ್ತು. ವಿಷಪ್ರಯತ್ನದ ಉಲ್ಲೇಖಗಳೂ ಇತಿಹಾಸದ ಚರ್ಚೆಗಳಲ್ಲಿ ಬರುತ್ತವೆ. ಅಂದರೆ ಗಾಂಧಿಯ ವಿರುದ್ಧದ ಹಿಂಸೆ ವಿಭಜನೆಯ ರಾಜಕೀಯದಿಂದ ಹುಟ್ಟಿದದ್ದಲ್ಲ. ಅದು ಅವರ ಸಾಮಾಜಿಕ ಹೋರಾಟಗಳ ಪರಿಣಾಮ.

1944ರ ಜುಲೈನಲ್ಲಿ ಪಂಚಗಣಿಯಲ್ಲಿ ನಡೆದ ಘಟನೆ ಮತ್ತೊಂದು ತಿರುವು. ಪ್ರಾರ್ಥನಾ ಸಭೆಯ ಸಂದರ್ಭ ನಾಥೂರಾಮ್ ಗೋಡ್ಸೆ ಚೂರಿಯೊಂದಿಗೆ ಮುನ್ನುಗ್ಗಿದನು. ಸ್ಥಳದಲ್ಲಿದ್ದವರು ತಡೆದರು. ಗಾಂಧಿ ತಾನೇ ಮಾತುಕತೆಗೆ ಆಹ್ವಾನಿಸಿದರೂ ಅದು ನಿರಾಕೃತವಾಯಿತು. ವಿರೋಧ ಕೇವಲ ಆಕ್ರೋಶವಲ್ಲ. ಅದು ಸಂಘಟಿತ ಮನೋಭಾವವಾಗಿತ್ತು ಎಂಬುದನ್ನು ಈ ಘಟನೆ ಸೂಚಿಸುತ್ತದೆ.

1948ರ ಜನವರಿ 20ರಂದು ದೆಹಲಿಯ ಪ್ರಾರ್ಥನಾ ಸಭೆಯಲ್ಲಿ ಬಾಂಬ್ ಸ್ಫೋಟದ ಯತ್ನ ನಡೆಯಿತು. ಅದು ವಿಫಲವಾಯಿತು. ಆದರೆ ಜನವರಿ 30ರಂದು ಬಿರ್ಲಾ ಭವನದಲ್ಲಿ ನಾಥೂರಾಮ್ ಗೋಡ್ಸೆ ಹಾರಿಸಿದ ಮೂರು ಗುಂಡುಗಳು ಗಾಂಧಿಯವರ ಜೀವವನ್ನು ಕೊನೆಗೊಳಿಸಿತು. ಈ ಹತ್ಯೆ ಒಂದು ದಿನದ ಆಕ್ರೋಶವಲ್ಲ. ವರ್ಷಗಳಿಂದ ಬೆಳೆದ ದ್ವೇಷದ ಅಂತಿಮ ಫಲಿತಾಂಶ.

ಗೋಡ್ಸೆ ತನ್ನ ಹೇಳಿಕೆಗಳಲ್ಲಿ ಗಾಂಧಿಯನ್ನು ‘ಮುಸ್ಲಿಮರ ಪರ’ ಎಂದು ಆರೋಪಿಸಿದ. ಪಾಕಿಸ್ತಾನಕ್ಕೆ ಹಣ ಬಿಡುಗಡೆ ವಿಷಯವನ್ನೂ ಕಾರಣವನ್ನಾಗಿ ಉಲ್ಲೇಖಿಸಿದ. ಆದರೆ ಇತಿಹಾಸದ ಕ್ರಮವನ್ನು ನೋಡಿದಾಗ ಗಾಂಧಿಯವರ ಮೇಲೆ ನಡೆದ ಅನೇಕ ಹತ್ಯೆ ಯತ್ನಗಳು ವಿಭಜನೆಯ ಮುಂಚೆಯೇ ನಡೆದಿರುವುದು ಸ್ಪಷ್ಟ. ಹೀಗಾಗಿ ‘ಮುಸ್ಲಿಂಪರ’ ಎಂಬ ಆರೋಪ ಹತ್ಯೆಗೆ ನಂತರದ ರಾಜಕೀಯ ನ್ಯಾಯೀಕರಣದಂತೆ ಕಾಣುತ್ತದೆ. ಮೂಲ ಕಾರಣ ಗಾಂಧಿಯವರ ಸಮಾನತೆಯ ರಾಜಕೀಯ ಮತ್ತು ಧರ್ಮಸೌಹಾರ್ದದ ನಿಲುವು.

“ನಾನಿನ್ನೂ ಸಾಯಲು ಸಿದ್ಧನಿಲ್ಲ” ಎಂಬ ಗಾಂಧಿಯ ಮಾತು ಜೀವದ ಮೇಲಿನ ನಂಬಿಕೆಯಷ್ಟೇ ಅಲ್ಲ. ಹಿಂಸೆಯ ಎದುರು ಅಹಿಂಸೆಯ ದೃಢತೆ. ಅವರ ದೇಹವನ್ನು ಗುಂಡುಗಳು ಕೊಂದರೂ ಅವರ ಚಿಂತನೆ ಜೀವಂತವಾಗಿದೆ. ಗಾಂಧಿ ಹತ್ಯೆಯನ್ನು ಸರಳ ಕಾರಣಕ್ಕೆ ಸೀಮಿತಗೊಳಿಸುವುದರಿಂದ ಇತಿಹಾಸದ ಸಂಕೀರ್ಣತೆ ಮರೆಯಾಗುತ್ತದೆ. ದ್ವೇಷದ ಮೂಲಗಳನ್ನು ಅರಿಯುವುದು ಮತ್ತು ಅಹಿಂಸೆಯ ಮೌಲ್ಯವನ್ನು ಮರುಪರಿಶೀಲಿಸುವುದು ಇಂದಿಗೂ ಅಗತ್ಯವಾಗಿದೆ.

WhatsApp Image 2026 02 03 at 2.27.16 PM
ಪಿಎಂ ಇಕ್ಬಾಲ್, ಕೈರಂಗಳ
+ posts

ಹವ್ಯಾಸಿ ಲೇಖಕರು, ಪತ್ರಕರ್ತರು, ಮಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಪಿಎಂ ಇಕ್ಬಾಲ್, ಕೈರಂಗಳ
ಪಿಎಂ ಇಕ್ಬಾಲ್, ಕೈರಂಗಳ
ಹವ್ಯಾಸಿ ಲೇಖಕರು, ಪತ್ರಕರ್ತರು, ಮಂಗಳೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...