ಕನ್ನಡ ನೆಲದಲ್ಲಿ ಧರ್ಮ & ಅಧ್ಯಾತ್ಯ: ನಡೆದ ದಾರಿ ಮರೆತಿದೆಯೇ ಕರ್ನಾಟಕ?

Date:

ಜಾಗತಿಕ ಭೂಪಟದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವೈವಿಧ್ಯತೆಗೆ ಭಾರತ ಹೆಸರುವಾಸಿಯಾಗಿದ್ದರೆ, ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭೂಪಟದಲ್ಲಿ ಕರ್ನಾಟಕದ ಸ್ಥಾನ ಎದ್ದು ತೋರುವಂಥದ್ದು. ಭಾರತದ ಮಟ್ಟಿಗೆ ಧರ್ಮ ಮತ್ತು ಅಧ್ಯಾತ್ಮಗಳ ಗೆರೆ ಅತ್ಯಂತ ತೆಳುವಾದ್ದರಿಂದ ಇಲ್ಲಿ ಅಧ್ಯಾತ್ಮ ಅನ್ನುವಾಗಲೇ ಧರ್ಮವೂ ಸೇರಿಕೊಂಡುಬಿಡುವುದು ಮತ್ತು ಧಾರ್ಮಿಕತೆಯೊಡನೆ ಗುರುತಿಸಿಕೊಂಡ ಸಾಧಕರು, ಅವಧೂತರು, ರಹಸ್ಯದರ್ಶಿಗಳು ಆಧ್ಯಾತ್ಮವಾದಿಗಳೆಂಬ ಗುರುತು ಪಡೆಯುವರು.

ವಾಸ್ತವದಲ್ಲಿ ಅಧ್ಯಾತ್ಮಕ್ಕೆ ಧರ್ಮದ ಅಗತ್ಯವಿಲ್ಲ. ದೇವರ ಅಗತ್ಯವೂ ಇಲ್ಲ. ಆದರೆ ಧಾರ್ಮಿಕತೆಗೆ ಅಧ್ಯಾತ್ಮದ ಅಗತ್ಯ ಇದೆ. ಈ ಜಗತ್ತು ಕೇವಲ ಮನುಷ್ಯರಿಗೆ ಸೀಮಿತವಲ್ಲ, ಈ ಜಗತ್ತಿನ ಒಡೆತನ ಮನುಷ್ಯರ ಕೈಯಲ್ಲಿಲ್ಲ. ಇದರ ಹುಟ್ಟಿಗೆ, ಕಟ್ಟುವಿಕೆಗೆ, ಕೊನೆಗೆ ಅಂತ್ಯಕ್ಕೂ ಮನುಷ್ಯರು ಕಾರಣರಲ್ಲ ಅನ್ನುವ ಅರಿವು ಅಧ್ಯಾತ್ಮ. ಹಾಗಾದರೆ ಈ ಎಲ್ಲಕ್ಕೂ ಕಾರಣ ಯಾರು ಅಥವಾ ಏನು ಅನ್ನುವ ಹುಡುಕಾಟದ ದಾರಿ ಅಧ್ಯಾತ್ಮ. ಈ ಪ್ರಶ್ನೆ ಕೇಳಿಕೊಳ್ಳುತ್ತಿರುವ ನಾನು ಯಾರು? ನಾನ್ಯಾಕೆ ಈ ಪ್ರಶ್ನೆಗಳನ್ನ ಕೇಳುತ್ತಿದ್ದೀನಿ ಅನ್ನುವ ವಿಚಾರ ಮಂಥನವೂ ಅಧ್ಯಾತ್ಮ. ಈ ಸೃಷ್ಟಿಯಲ್ಲಿ ನನ್ನಂತೆಯೇ ಎಷ್ಟೊಂದು ಜೀವಿಗಳಿವೆ, ಅವೆಲ್ಲವೂ ನನ್ನ ಹಾಗೇ ಪ್ರಶ್ನೆಗಳನ್ನು ಹೊತ್ತು ನಿಂತಿವೆ. ನಾವೆಲ್ಲರೂ ಒಂದೇ. ನನ್ನ ಕುರಿತು ನನಗಿರುವ ಕಾಳಜಿ ಅವರ ಮೇಲೂ ತೋರಬೇಕು. ನನ್ನನ್ನು ನಾನು ಪ್ರೀತಿಸಿಕೊಳ್ಳುವಂತೆ ಅವರನ್ನೂ ಪ್ರೀತಿಸಬೇಕು. ಅನಾದಿ- ಅನಂತದ ನಡುವೆ ನಡೆಯುತ್ತಿರುವ ನಾವು ಒಬ್ಬರಿಗೊಬ್ಬರು ಆಸರೆಯಾಗಬೇಕು, ಪೂರಕವಾಗಬೇಕು, ಜೊತೆಯಾಗಬೇಕು ಮತ್ತು ಈ ಎಲ್ಲ ಭಯ, ಆತಂಕ, ಆಲೋಚನೆಗಳಿಂದ ಮುಕ್ತರಾಗಿ ನಿತ್ಯಾನಂದ ಸ್ಥಿತಿ ತಲುಪಬೇಕು ಅನ್ನುವ ಚಿಂತನೆ ಅಧ್ಯಾತ್ಮ.

ಧರ್ಮದಲ್ಲೂ ಈ ಎಲ್ಲ ಪ್ರಶ್ನೆಗಳು ಬರುತ್ತವೆ. ಆದರೆ ಧರ್ಮಗಳು ಅವಕ್ಕೊಂದು ಉತ್ತರವನ್ನೂ ಹುಡುಕಿಕೊಳ್ಳುತ್ತವೆ. ಆ ಉತ್ತರವೇ, ದೇವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಧ್ಯಾತ್ಮಿಕತೆಯು ಪ್ರಶ್ನೆ ಮತ್ತು ವಿಚಾರಕ್ಕೆ ಒತ್ತು ಕೊಟ್ಟರೆ, ಧರ್ಮವು ಶ್ರದ್ಧೆ ಮತ್ತು ನಂಬಿಕೆಗೆ ಇಂಬು ಕೊಡುತ್ತದೆ. ಆಧ್ಯಾತ್ಮಿಕ ಸಾಧಕರು ಎತ್ತುವ ಎಲ್ಲ ಪ್ರಶ್ನೆಗಳಿಗೂ ಧಾರ್ಮಿಕರು ದೇವರ ಅಸ್ತಿತ್ವದಲ್ಲಿ ಉತ್ತರ ಹುಡುಕಿಕೊಳ್ಳುತ್ತಾರೆ. ಜಗತ್ತಿನ ಜವಾಬ್ದಾರಿಯನ್ನೆಲ್ಲ ಅವನ (ಶಾಕ್ತ ಪರಂಪರೆಯ ಸಂದರ್ಭದಲ್ಲಿ ಅವಳ) ಮೇಲೆ ಹೊರಿಸುತ್ತಾರೆ ಹಾಗೂ ಧರ್ಮದಲ್ಲಿ ಕಟ್ಟುಪಾಡುಗಳನ್ನು, ಆಚರಣೆಗಳನ್ನು ಮತ್ತು ಅದರ ಮೂಲತತ್ವಗಳನ್ನು ಮೀರುವುದು ನಿಷಿದ್ಧ. ಅಧ್ಯಾತ್ಮದಲ್ಲಿ ಹಾಗಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಚಿಂತನೆ ಮತ್ತು ವ್ಯಾಖ್ಯಾನ ಹೊಂದಲು ಅಲ್ಲಿ ಅವಕಾಶವಿದೆ.

ಹಲವು ನಂಬುಗೆಗಳ ಭಾರತದ ಸನಾತನ ಧರ್ಮ ಇದಕ್ಕೊಂದು ಅಪವಾದ. ಇಲ್ಲಿ ಯಾವುದನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸುವ ಮತ್ತು ವಿಮರ್ಶಿಸುವ ಅವಕಾಶ ಶಾಸ್ತ್ರ ಬದ್ಧವಾಗಿಯೇ ಇದೆ. ಇತ್ತೀಚಿನವರೆಗೂ ಇಂಥ ವಿಮರ್ಶೆಗಳನ್ನು ವಿರೋಧಿಸುತ್ತಿದ್ದ ಗುಂಪು ಬಹಳ ಸಣ್ಣದಿತ್ತು, ನಗಣ್ಯವಾಗಿತ್ತು. ಆದರೆ ಇತ್ತೀಚೆಗೆ ಈ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಕರ್ನಾಟಕ ಕೂಡ ಇದಕ್ಕೆ ಹೊರತಾಗಿಲ್ಲ.

WhatsApp Image 2025 05 01 at 17.01.42

ಸೆಮೆಟಿಕ್ ಮತಗಳಲ್ಲಿ ದೇವರನ್ನು ಪ್ರಶ್ನೆ ಮಾಡುವಂತಿಲ್ಲ, ಬೇಕಾದ ರೂಪ ಕೊಟ್ಟು ಚಿತ್ರಿಸುವಂತಿಲ್ಲ, ಪೂಜಿಸುವಂತಿಲ್ಲ. ದೇವರು ಇದ್ದಾನೆ ಅಂದರೆ ಇದ್ದಾನೆ; ಹೇಗಿದ್ದಾನೆಂದರೆ ಅವನು ನಮ್ಮ ನೋಟಕ್ಕೆ ಒದಗದಂತೆ ನಿರಾಕಾರನಾಗಿದ್ದಾನೆ. ಅಲ್ಲಿಂದಾಚೆ ಚರ್ಚೆ ಇಲ್ಲ.

ಭಾರತದಲ್ಲಿ ಹುಟ್ಟಿ ಬೆಳೆದ ಧರ್ಮಗಳಲ್ಲಿ ಧರ್ಮದ ಜೊತೆ ಅಧ್ಯಾತ್ಮ ಬೆರೆತು, ದೇವರ ಕುರಿತಾದ ಪ್ರಶ್ನೆಗಳು ಸಾಧ್ಯವಾದವು. ಅಧ್ಯಾತ್ಮವಾದದಲ್ಲಿ ಧರ್ಮ ಬೆರೆತು ಧ್ಯಾನಿಸಲು ಒಂದು ಚಿತ್ರ ಅನಿವಾರ್ಯವಾಯಿತು. ಇದು ಧರ್ಮದ ಸಹವಾಸದಿಂದ ಅಧ್ಯಾತ್ಮ ಚಿಂತನೆಗೆ ಉಂಟಾದ ನಷ್ಟ. ಆದರೆ, ಅಧ್ಯಾತ್ಮದ ಸಹವಾಸದಿಂದ ಧರ್ಮಕ್ಕೆ ಒದಗಿದ ಲಾಭ ಬಹಳ ದೊಡ್ಡದು.

ಈ ಕಾರಣದಿಂದಲೇ ನಮ್ಮ ದೇಶದ ಆಧ್ಯಾತ್ಮಿಕ ಪರಂಪರೆಗಳು ಧಾರ್ಮಿಕ ಪರಂಪರೆಗಳ ಜೊತೆ ಹಾಸುಹೊಕ್ಕಾಗಿಬಿಟ್ಟವು. ಇದಕ್ಕೊಂದು ನಿದರ್ಶನ, ನಮ್ಮ ಕನ್ನಡ ನೆಲದಲ್ಲಿ ಎದ್ದು ನಿಂತಿದ್ದ ಅನುಭವ ಮಂಟಪ.

ಇದನ್ನೂ ಓದಿರಿ: ಶೂದ್ರ ಧರ್ಮ, ವೈದಿಕ ಧರ್ಮ ಒಂದೇ ಅಲ್ಲ!

ಬೌದ್ಧ ಧರ್ಮದ ನಂತರ ಅತ್ಯಂತ ವೈಚಾರಿಕವಾದ, ಸಾಮಾಜಿಕವಾದ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಂಡ ಧರ್ಮವನ್ನು ಕಟ್ಟಿಕೊಟ್ಟಿದ್ದು ನಮ್ಮ ಕರ್ನಾಟಕದ ಶರಣರು. ಅನುಭವ ಮಂಟಪದಲ್ಲಿ ಕಲೆತು ತಮ್ಮ ತಮ್ಮ ಆಧ್ಯಾತ್ಮಿಕ ಕಾಣ್ಕೆಗಳನ್ನು ಹಂಚಿಕೊಳ್ಳುತ್ತಿದ್ದ ಶರಣರ ಚಿಂತನೆಗಳಿಗೆ ಲಿಂಗಾಯತದ ಚೌಕಟ್ಟು ತೊಡಿಸಿ ಅದಕ್ಕೊಂದು ಸಾಂಸ್ಥಿಕ ರೂಪ ಕೊಟ್ಟವರು ಬಸವಣ್ಣನವರು. ಅವರ ಮುಂದಾಳ್ತನದಲ್ಲಿ ಕರ್ನಾಟಕದ ಉದ್ದಗಲ ಹರಡಿದ ಶರಣ ಚಿಂತನೆಗಳು ಕಾರ್ಮಿಕರನ್ನು ಒಗ್ಗೂಡಿಸಿತು. ಶೋಷಿತರನ್ನು ಒಗ್ಗೂಡಿಸಿತು. ಹೆಣ್ಣುಗಳನ್ನು ಒಗ್ಗೂಡಿಸಿತು. ಈ ಚಳವಳಿಯ ಭಾಗವಾದ ಯಾರು ಬೇಕಾದರೂ ಭಿಡೆಯಿಲ್ಲದೆ ತಮ್ಮ ಚಿಂತನೆಯನ್ನು ಎಲ್ಲರ ಜೊತೆ ಸರಿಸಮನಾಗಿ ನಿಂತು ಹೇಳಿಕೊಳ್ಳುವ ಅವಕಾಶ ದೊರೆಯಿತು. ಈ ಚಿಂತನೆ ಕೇವಲ ಚಿಂತನೆಯಾಗಿ ಉಳಿಯದೆ ಚಳವಳಿಯಾಗಿ ಬೆಳೆಯಿತು. ತನ್ನ ಜೊತೆಗೆ ಕನ್ನಡ ಸಾಹಿತ್ಯವನ್ನೂ ಬೆಳೆಸಿದ್ದು ಎಲ್ಲರೂ ಅರಿತಿರುವಂಥದ್ದೇ.

ಬಸವಣ್ಣನವರ ಈ ಕಾಯಕ – ದಾಸೋಹ ಚಿಂತನೆ ಕರ್ನಾಟಕದ ಗಡಿಯನ್ನೂ ದಾಟಿ ತನ್ನ ಪ್ರಭಾವ ವಿಸ್ತರಿಸಿಕೊಂಡಿತು. ಕಸುಬುದಾರರನ್ನು. ಕಾರ್ಮಿಕರನ್ನು ಒಂದು ಚಿಂತನೆಯ ಸೂರಿನಡಿ ಕರೆತರಲು ಜಗತ್ತು 19ನೇ ಶತಮಾನದವರೆಗೂ ಕಾಯಬೇಕಾಯಿತಲ್ಲವೆ, ಬಸವಣ್ಣನವರ ಆಧ್ಯಾತ್ಮಿಕ ಚಿಂತನೆ? ಶರಣರ ಅನುಭಾವ ಅದನ್ನು 12ನೆ ಶತಮಾನದಲ್ಲೇ ಸಾಧಿಸಿತ್ತು ಮತ್ತು ಅದಕ್ಕೆ ನೆಲೆ ಒದಗಿಸಿದ್ದು ನಮ್ಮ ಕನ್ನಡದ ನೆಲ ಅನ್ನುವುದು ನಮ್ಮ ಹೆಮ್ಮೆಯ ಸಂಗತಿ.

ಧರ್ಮದಲ್ಲಿ ಆಧ್ಯಾತ್ಮಿಕ ಚಿಂತನೆ ಬೆರೆಸಿ ಕಟ್ಟಿದ ಕರ್ನಾಟಕದ ಇನ್ನೊಂದು ಕೊಡುಗೆ, ಭಕ್ತಿ ಚಳವಳಿ. ಇದರ ಮುಖ್ಯ ಸೂತ್ರ ನಿರ್ದಿಷ್ಟ ಪ್ರಬಲ ಜಾತಿಯ ಕೈಯಲ್ಲಿದ್ದರೂ ಧರ್ಮದೊಳಗಿನ ಹುಳುಕುಗಳ ವಿಮರ್ಶೆ ಮಾಡುತ್ತಲೇ ಸಮಾಜದ ಹುಳುಕಗಳ ವಿಮರ್ಶೆಗೂ ಇಳಿದ ದಾಸರು ಭಾವುಕ ಭಕ್ತಿಯ ಮೂಲಕವೂ ಪರಿವರ್ತನೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು.

ನಮ್ಮ ನೆಲದಲ್ಲಿ ಆಗಿ ಹೋದ ಸಿದ್ಧರು, ನಾಥರು, ಅವಧೂತರು ಆರೂಢರು, ಸೂಫಿಗಳು ಪ್ರತಿಯೊಬ್ಬರೂ ಒಂದಲ್ಲ ಒಂದು ಬಗೆಯಲ್ಲಿ ಸಮಾಜದ ಒಳಹೊಕ್ಕವರೇ. ಇವರ ಚಿಂತನೆಗಳು ಕೇವಲ ಪಠ್ಯಕ್ಕೆ ಸೀಮಿತವಾಗಿರಲಿಲ್ಲ. ಕೃತಿಗಿಳಿದು ಎಲ್ಲರನ್ನೂ ಒಳಗೊಳಿಸಿಕೊಳ್ಳುತ್ತ ಕರ್ನಾಟಕದ ಒಟ್ಟು ಪ್ರಜ್ಞೆ ರೂಪಿಸುತ್ತ ಸಾಗಿದವು. ಆಧ್ಯಾತ್ಮಿಕ ಪ್ರಜ್ಞೆ, ಕನ್ನಡಿಗರ ಅಸ್ಮಿತೆಗಳಲ್ಲಿ ಒಂದಾಗುವಂತೆ ಮಾಡಿದವು.

ಮಂಟೇಸ್ವಾಮಿ, ಜುಂಜಪ್ಪರಂಥ ನೆಲಮೂಲದ ರಹಸ್ಯದರ್ಶಿಗಳು ಕನ್ನಡ ನಾಡಿಗೆ ವಿಶಿಷ್ಟವಾದ ಹೊಸ ಪರಂಪರೆಯನ್ನೇ ಕಟ್ಟಿದರೆ, ಅಲ್ಲಮನಂಥವರು ಜನರ ನಡುವೆ ಅಡ್ಡಾಡುತ್ತಲೇ ಅತ್ಯುನ್ನತ ಆಧ್ಯಾತ್ಮಿಕ ದರ್ಶನಗಳನ್ನು ನೀಡಿದರು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮನಂಥವರು ಆಧ್ಯಾತ್ಮದ ಮೂಲಕ ತಮ್ಮ ಗುರುತು ಪಡೆದುಕೊಂಡರು.

ಕನ್ನಡ ನೆಲದ ಆಧ್ಯಾತ್ಮಿಕ ಪ್ರಜ್ಞೆ, ಉತ್ತರ – ದಕ್ಷಿಣವೆನ್ನದೆ ಭಾರತದ ಇತರ ಭಾಗಗಳಲ್ಲಿ ಹುಟ್ಟಿ ಬೆಳೆದ ಧರ್ಮ ಮತ್ತು ಪಂಥಗಳಿಗೂ ಜಾಗ ನೀಡಿದ್ದು, ಅವನ್ನು ಬೆಳೆಸಿದ್ದು ಮತ್ತೊಂದು ಮಹತ್ವ ಚರ್ಚೆ.

ಜೈನ ಮತವನ್ನು ಬರಮಾಡಿಕೊಂಡ ಕನ್ನಡದ ನೆಲ ಅದನ್ನು ತನ್ನೊಳಗೆ ಯಾವ ಪರಿ ಕರಗಿಸಿಕೊಂಡಿತೆಂದರೆ, ಜೈನ ಮತಾನುಯಾಯಿಗಳು ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಹಿತ್ಯ ಧಾರೆಯ ಮುಖ್ಯ ಭಾಗವೇ ಆಗಿಬಿಡುವಷ್ಟು.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಬಲಪಂಥದ ಬೇರುಗಳು (ಭಾಗ- 1)

ಐತಿಹಾಸಿಕವಾಗಿ ಕರ್ನಾಟಕದೊಂದಿಗೆ ಜೈನ ಧರ್ಮದ ಸಂಬಂಧ ಕನಿಷ್ಠ ಕ್ರಿ. ಪೂ. 6ನೇ ಶತಮಾನದಲ್ಲೇ ಆಗಿತ್ತೆಂದು ಹೇಳಲಾಗಿದೆ. ಪುರಾಣ ಕಾಲದಲ್ಲಿ ಮಹಾವೀರ ಕರ್ನಾಟಕಕ್ಕೆ ಭೇಟಿ ನೀಡಿ ಹೇಮನಗರ ದೇಶದ ಕುಂತಳ (ಕರ್ನಾಟಕ) ಪ್ರದೇಶದಲ್ಲಿನ ರಾಜ ಜೀವಂಧರನಿಗೆ ಉಪದೇಶ ನೀಡಿದ್ದನೆಂದು ಐತಿಹ್ಯವಿದೆ. ಕನ್ನಡಿಗರ ಸಹಜ ಸ್ವಭಾವ ಜೈನ ಧರ್ಮದ ಮೂಲತತ್ವಗಳು ಸಮೃದ್ಧವಾಗಿ ಬೆಳೆಯಲು ಪ್ರಶಸ್ತ ವೇದಿಕೆಯಾಗಿ ಹೊಮ್ಮಿತು. ಮೌರ್ಯ ವಂಶದ ಸ್ಥಾಪಕ ಚಂದ್ರಗುಪ್ತನಾದಿಯಾಗಿ 700 ಜೈನಮುನಿಗಳು ಸಲ್ಲೇಖನ ವ್ರತ ಸ್ವೀಕರಿಸಿ ದೇಹ ತ್ಯಜಿಸಿದ್ದು ಇದೇ ನೆಲದಲ್ಲಿ.

ಕ್ರಿ.ಪೂ. 3ನೇ ಶತಮಾನದಲ್ಲಿ ಕನ್ನಡ ನೆಲಕ್ಕೆ ಕಾಲಿಟ್ಟ ಬೌದ್ಧ ಧರ್ಮ, ಕ್ರಿ.ಶ.6ನೇ ಶತಮಾನದ ವೇಳೆಗೆ ಕರ್ನಾಟಕದ ಉದ್ದಗಲ ಆವರಿಸಿಕೊಂಡು ಸ್ಥಳೀಯ ಧಾರ್ಮಿಕ ಆಚರಣೆಗಳೊಡನೆ ಸಹಜವಾಗಿ ಬೆರೆತು ಹೋಯಿತು. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಕೆರೆಗಳು ಬೌದ್ಧ ಧರ್ಮೀಯರಿಂದಲೇ ನಿರ್ಮಾಣಗೊಂಡಿದ್ದೆಂದೂ, ತಾವರೆ ಕೆರೆ ಎಂದು ಕರೆಯಲ್ಪಡುವ ಕೆರೆಗಳು ವಾಸ್ತವದಲ್ಲಿ ತಾರೆ ಕೆರೆ – ಬೌದ್ಧ ದೇವತೆ ತಾರೆಯ ಹೆಸರು ಹೊತ್ತ ಕೆರೆಗಳೆಂದೂ ಪ್ರೊ. ರಹಮತ್ ತರೀಕೆರೆ ಅಭಿಪ್ರಾಯ ಪಡುತ್ತಾರೆ.

ಕನ್ನಡ ನೆಲ ಬೌದ್ಧ ಧರ್ಮವನ್ನೂ ಬೌದ್ಧ ಧರ್ಮ ಕನ್ನಡಿಗರನ್ನೂ ಬೆಳೆಸಿದ ಬಗೆ ಇಂಥದ್ದು.

ಇಸ್ಲಾಂ ಧರ್ಮೀಯರಿಂದ ಕನ್ನಡ ನೆಲದಲ್ಲಿ ಹರಡಿಕೊಂಡ ಸೂಫಿ ಪರಂಪರೆ, ನಂತರದ ದಿನಗಳಲ್ಲಿ ಧರ್ಮ ಭೇದವನ್ನೂ ಅಳಿಸಿಕೊಂಡು ಈ ನೆಲಮೂಲದ್ದೇ ಅನ್ನುವಷ್ಟು ಮಿಳಿತವಾಗಿಬಿಟ್ಟಿತು. ಕರ್ನಾಟಕದ ಉತ್ತರ ಭಾಗದಲ್ಲಿ ಸೂಫಿ ಸಂತರು ಸಮಾಜದ ಮುಖ್ಯವಾಹಿನಿಯ ಭಾಗವೇ ಆಗಿಬಿಟ್ಟಿದ್ದರು.

ಉತ್ತರ ಭಾರತದಿಂದ ಬಂದ ಧರ್ಮಗಳು ಮಾತ್ರವಲ್ಲ, ಕೇರಳದ ಶಂಕರಾಚಾರ್ಯರ ಅದ್ವೈತ ಮತವನ್ನೂ, ತಮಿಳುನಾಡಿನ ರಾಮಾನುಜರ ವಿಶಿಷ್ಟಾದ್ವೈತವನ್ನೂ ಪೊರೆದ ನೆಲ ನಮ್ಮದು. ಶಂಕರಾಚಾರ್ಯರು ಸಂಪೂರ್ಣ ಭಾರತದ ಯಾತ್ರೆ ನಡೆಸಿ ಹಲವು ಮಠಗಳನ್ನು ಸ್ಥಾಪಿಸಿದ್ದರೂ ಶೃಂಗೇರಿಯ ಶಾರದಾಪೀಠ ಮತ್ತು ಮಠ ಧಾರ್ಮಿಕ ಕ್ಷೇತ್ರದಾಚೆಗೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡು ಬೆಳೆಯಿತು. ಹೊಯ್ಸಳ ಸಾಮ್ರಾಜ್ಯದ ಸ್ಥಾಪಕ ವಿಷ್ಣುವರ್ಧನ ವಿಶಿಷ್ಟಾದ್ವೈತದ ಪ್ರಚಾರಕ್ಕೆ ಪ್ರೋತ್ಸಾಹ ಕೊಟ್ಟು ಅದು ತಮಿಳುನಾಡಿನಿಂದ ಈಚೆಗೂ ಬೆಳೆದು ಜನಪ್ರಿಯವಾಗುವಂತೆ ಮಾಡಿದ.

ಕನ್ನಡ ನೆಲಕ್ಕೆ ಕಾಲಿಟ್ಟ ಎಲ್ಲ ಧಾರ್ಮಿಕ- ಆಧ್ಯಾತ್ಮಿಕ ಚಿಂತನೆಗಳೂ ಪೋಷಣೆ ಪಡೆದು ಸಮೃದ್ಧಗೊಂಡಿವೆ. ಇದಕ್ಕೆ ಕಾರಣ, ನಮ್ಮ ನಾಡು ಈ ಚಿಂತನೆಗಳನ್ನು ಅವುಗಳ ಚೌಕಟ್ಟಿನಾಚೆ ಎಳೆದು ಜನಜೀವನದಲ್ಲಿ ಬೆರೆಸಿದ್ದು.

ಉತ್ತರ ಭಾರತದಲ್ಲಿ ಈ ವಿನ್ಯಾಸ ಅಷ್ಟಾಗಿ ತೋರುವುದಿಲ್ಲ. ಅದು ಕೇವಲ ಆಯಾ ಚಿಂತನೆಯ ನೇತಾರರನ್ನು, ಪ್ರವರ್ತಕರನ್ನು ಬೆಳೆಸಿತು. ಕನ್ನಡದ ನೆಲ ಒಟ್ಟು ಚಿಂತನೆಯನ್ನೇ ಬೆಳೆಸುವತ್ತ ಗಮನ ನೀಡಿತು. ಆದ್ದರಿಂದಲೇ ಭಾರತದ ಆಧ್ಯಾತ್ಮಿಕತೆಯ ಪ್ರಸ್ತಾಪ ಬಂದಾಗ ಕನ್ನಡ ನಾಡು ಮುಖ್ಯ ಸ್ಥಾನ ಪಡೆಯುವುದು.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಬಲಪಂಥದ ಬೇರುಗಳು (ಭಾಗ- 2)

ಸಾಂಸ್ಥಿಕ ರೂಪದಲ್ಲಿ ಆಧ್ಯಾತ್ಮಿಕ ಚಿಂತನೆ ಬಿತ್ತುವ ಕ್ರಿಯೆ ಒಂದಾದರೆ, ವೈಯಕ್ತಿಕವಾಗಿ ಆಧ್ಯಾತ್ಮಿಕ ಚಿಂತನೆ ಬಿತ್ತುವುದು ಇನ್ನೊಂದು ಬಗೆ. ತಮ್ಮನ್ನು ತಾವು ಒಬ್ಬ ಗುರುವಿನೊಡನೆ, ಒಂದು ಮುಖ್ಯಧಾರೆಯೊಡನೆ ಗುರುತಿಸಿಕೊಂಡೂ ತಮ್ಮಷ್ಟಕ್ಕೆ ತಾವು ಬಾಳುತ್ತಾ ತಮ್ಮ ಕಾಣ್ಕೆಯನ್ನು ಸುತ್ತಲಿನ ಜನಸಾಮಾನ್ಯರಿಗೆ ಹಂಚುತ್ತಾ ಬಾಳಿದ ಸಾಮಾನ್ಯ ಅಸಾಮಾನ್ಯರು ನಮ್ಮ ನೆಲದಲ್ಲಿ ಸಾಕಷ್ಟು ಆಗಿಹೋಗಿದ್ದಾರೆ.

ಅಂಥವರಲ್ಲಿ, ಆಧುನಿಕ ಕಾಲಘಟ್ಟದಲ್ಲಿ ಮುಕುಂದೂರು ಸ್ವಾಮಿಗಳು ಎಂದೇ ಖ್ಯಾತರಾದ ಬಸವಲಿಂಗ ಶಿವಯೋಗಿಗಳು, ಗಾಂಧಿ ಚಿಂತನೆಯನ್ನೇ ಉಸಿರಾಗಿಸಿಕೊಂಡಿದ್ದ ಪುತ್ತೂರು ಅಜ್ಜ ಮತ್ತು ವೆಂಕಟಾಚಲ ಅವಧೂತರು ಮುಖ್ಯರಾಗುತ್ತಾರೆ. ಜೊತೆಗೆ, ಇತ್ತೀಚಿನ ವರ್ಷಗಳವರೆಗೂ ಕರ್ನಾಟಕದಲ್ಲಿ ಸೂಫಿಗಳ ಪ್ರೇಮ ಸೌಹಾರ್ದ ಪರಂಪರೆಯನ್ನು ಜೀವಂತವಾಗಿರಿಸಿದ್ದ ಇಬ್ರಾಹಿಂ ಸುತಾರ ಕೂಡಾ ಈ ಸಾಲಿಗೆ ಸೇರುತ್ತಾರೆ.

ಈಗ ನಮ್ಮ ಕನ್ನಡ ನಾಡಿನ ಪರಿಸ್ಥಿತಿ ಏನಿದೆ? ನಮ್ಮ ಕನ್ನಡ ನೆಲದಲ್ಲಿ ಜಿನುಯ್ನ್ ಆದ ಆಧ್ಯಾತ್ಮಿಕ ವಿಚಾರಧಾರೆಗಳಿವೆಯೇ? ನಮ್ಮಲ್ಲಿ ಹೊಸ ಆಧ್ಯಾತ್ಮಿಕ ಚಿಂತಕರು ಹೊಮ್ಮಿದ್ದಾರೆಯೇ? ಅವರ ಆಲೋಚನೆಯ, ಉಪದೇಶಗಳ ಪ್ರಭಾವ ನಮ್ಮ ಜನರ ಮೇಲಾಗುತ್ತಿದೆಯೇ?

ಈ ಪ್ರಶ್ನೆ, ನಮ್ಮ ರಾಜ್ಯದ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯ ಅಣಕದಂತೆ ತೋರುತ್ತದೆ. ಇಡಿಯ ಭಾರತದಲ್ಲಿ ಈ ಪ್ರಶ್ನೆಗೆ ಸರಿಯಾದ ಉತ್ತರ ದೊರೆಯುವುದು ಕಷ್ಟ, ಅದು ಬೇರೆ ವಿಷಯ. ಹಲವು ಸಿದ್ಧಾಂತಗಳ, ಪಂಥಗಳ, ತತ್ವಗಳ, ಗುರುಪೀಠಗಳ, ಧರ್ಮಕ್ರಾಂತಿಗಳ ನೆಲೆಯಾಗಿದ್ದ ಕರ್ನಾಟಕದಲ್ಲೂ ಇದಕ್ಕೆ ಉತ್ತರ ಸಿಗುತ್ತಿಲ್ಲವೆಂದರೆ ಅದಕ್ಕಿಂತ ದುರಂತ ಬೇರೊಂದಿಲ್ಲ.

ಹಾಗೆ ನೋಡಿದರೆ ಇಂದಿಗೂ ನಮ್ಮ ರಾಜ್ಯದಲ್ಲಿ ಹಲವು ಆಧ್ಯಾತ್ಮಿಕ ನೇತಾರರ ಹೆಸರು ಎದ್ದು ಕಾಣುತ್ತವೆ. ಎರಡು ದಶಕಗಳ ಹಿಂದೆ ಒಂದು ವಿಶೇಷ ಬಗೆಯ ಧ್ಯಾನ ಪದ್ಧತಿಯಿಂದ ಒಬ್ಬ ಗುರು ಅಂತಾರಾಷ್ಟ್ರೀಯ ಮಟ್ಟದ ಹೆಸರು ಗಳಿಸಿದ್ದರು. ಕಳೆದೊಂದು ದಶಕದಿಂದ ಸ್ವಾಗ್ ಅವತಾರದ ಒಬ್ಬ ಗುರು ನಮ್ಮ ಬೆಂಗಳೂರಿನ ಹೊರವಲಯದಲ್ಲಿ ಮಿಂಚುತ್ತಿದ್ದಾರೆ. ಕಾವಿ ತೊಡುವ, ಬಿಳಿಯುಡುಗೆಯಲ್ಲೇ ಉಪದೇಶ ನೀಡುವ, ಅರ್ಬನ್ ಅವತಾರದಲ್ಲಿ ಕಾಣಿಸಿಕೊಂಡೇ ಸತ್ಸಂಗ ನಡೆಸುವ ಕೆಲವು ಆಧುನಿಕ ವ್ಯಕ್ತಿಗಳು ಗುರು ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ. ಒಬ್ಬರಂತೂ ನಮ್ಮ ರಾಜ್ಯದಲ್ಲಿ ದೊಡ್ಡ ಗುಲ್ಲೆಬ್ಬಿಸಿ ಈಗ ತಮ್ಮದೇ ದೇಶ ಕಟ್ಟಿಕೊಂಡು ಗುರುಪೀಠದಲ್ಲಿ ಕುಳಿತು ಆಳ್ವಿಕೆ ನಡೆಸುತ್ತಿದ್ದಾರೆ.

ಇದನ್ನೂ ಓದಿರಿ: ಉರ್ದು ಈ ನೆಲದ ಭಾಷೆ ಎಂದು ಸಾರಿದ ಸುಪ್ರೀಮ್ ಕೋರ್ಟ್ ತೀರ್ಪಿನ ಮುಖ್ಯಾಂಶಗಳೇನು?

ಆದರೆ ನಮ್ಮ ಸಮಾಜದಲ್ಲಿ ಶಾಂತಿ – ಸೌಹಾರ್ದ ಮೂಡಿಸಬಲ್ಲ, ನಮ್ಮ ಜನರನ್ನು ಹೊಸ ಚಿಂತನೆಗೆ ಹಚ್ಚಬಲ್ಲ, ತಾರತಮ್ಯ ಹೋಗಲಾಡಿಸಬಲ್ಲ, ಹೊಸಕಾಲದ ಸವಾಲುಗಳಿಗೆ ಪರಿಹಾರ ಹುಡುಕಿಕೊಡಬಲ್ಲ ಆಧ್ಯಾತ್ಮಿಕ ನಾಯಕರ ಕೊರತೆ ಇನ್ನೆಂದೂ ತುಂಬಲಾಗದಷ್ಟು ಆಳವಾಗಿದೆ.

ನಾವು ಇಂದಿಗೂ ನಮ್ಮ ಪ್ರಶ್ನೆಗಳಿಗೆ ಬಸವಣ್ಣನ ವಿಚಾರಧಾರೆಯಲ್ಲೇ ಉತ್ತರ ಹುಡುಕಬೇಕು. ನಮ್ಮ ಪಾರಮಾರ್ಥಿಕ ಚರ್ಚೆಗೆ ಅಲ್ಲಮನನ್ನೇ ಬಳಸಬೇಕು. ಹೆಣ್ಣುಗಳ ಆಧ್ಯಾತ್ಮಿಕ ಅಭಿವ್ಯಕ್ತಿ ಮತ್ತು ಕ್ರಾಂತಿಗೆ ಅಕ್ಕನ ಹೊರತು ನಿದರ್ಶನವಿಲ್ಲ. ಹಿಂದೂ – ಮುಸ್ಲಿಂ ಐಕ್ಯತೆಗೆ ಉತ್ತರ ಕರ್ನಾಟಕದಲ್ಲಿ ಆಗಿಹೋದ ದಾಸರು – ಸೂಫಿಗಳ ಬಾಂಧವ್ಯವನ್ನೇ ಉದಾಹರಣೆ ಕೊಡಬೇಕು. ಅಂತರ್ಜಾತಿ ವಿವಾಹದ ಮೂಲಕ ನಿಜಧರ್ಮ ಎತ್ತಿ ಹಿಡಿಯುವುದಕ್ಕೆ ಮತ್ತೆ ಶರಣರ ಬಳಗಕ್ಕೇ ಮರಳಬೇಕು.

ಅದ್ವೈತ, ವಿಶಿಷ್ಟಾದ್ವೈತ ಚಿಂತನೆಗಳೂ ಈಗ ಚೌಕಟ್ಟು ಕಟ್ಟಿಕೊಂಡು ಮಠಗಳ ಅಂಗಳಕ್ಕೆ ಸೀಮಿತವಾಗಿವೆ. ಅದು ಬಿಟ್ಟರೆ ರಾಜಕಾರಣಕ್ಕೆ.

ನಮ್ಮ ಕನ್ನಡ ನಾಡಿನಲ್ಲಿ ಕೋಮುದ್ವೇಷ ಮತ್ತು ಜಾತಿ ತಾರತಮ್ಯಗಳು ಇತ್ತೀಚಿನ ದಶಕಗಳಲ್ಲಿ ಅಸಹನೀಯ ಬಿಂದು ಮುಟ್ಟಿರುವುದಕ್ಕೆ ಅನಾಧ್ಯಾತ್ಮವಾದವೇ ಕಾರಣ.

ಕರ್ನಾಟಕದ, ಕರ್ನಾಟಕ ಮಾತ್ರವಲ್ಲ, ಭಾರತದ ಅತ್ಯಂತ ಸೂಕ್ಷ್ಮ ಚಿಂತನೆಯ ಬರಹಗಾರರಲ್ಲಿ ಒಬ್ಬರಾದ ದೇವನೂರ ಮಹಾದೇವರು ತಮ್ಮ ಭಾಷಣವೊಂದರಲ್ಲಿ “ನಾವು ಅನಾಧ್ಯಾತ್ಮವಾದಿಗಳಾಗದಿರೋಣ’’ ಎಂದು ಕರೆಕೊಟ್ಟಿದ್ದರು. ಧರ್ಮದ ಹುಳುಕುಗಳನ್ನು ಕತ್ತರಿಸಿ ಎಸೆಯೋಣ. ಒಳಿತನ್ನು ಉಳಿಸಿಕೊಳ್ಳೋಣ, ಆಧ್ಯಾತ್ಮಿಕತೆ ಬೆಳೆಸಿಕೊಳ್ಳೋಣ ಎಂದಿದ್ದರು.

devanur 1
ಹಿರಿಯ ಸಾಹಿತಿ ದೇವನೂರ ಮಹಾದೇವ

ಹಿಂದಿನ ಸಂತ – ಸಾಧಕರು ಮಾಡಿದ್ದು ಇದನ್ನೇ. ಅವರು ಧರ್ಮಗಳ ಚೌಕಟ್ಟು ತೊಟ್ಟುಕೊಂಡಿದ್ದರೂ ಅಧ್ಯಾತ್ಮವಾದಿಗಳಾಗಿದ್ದರು. ಹಾಗೆಂದೇ ಹುಳುಕನ್ನೆಲ್ಲ ಕತ್ತರಿಸಿ ಒಳಿತನ್ನಷ್ಟೆ ಸಮಾಜಕ್ಕೆ ಹಂಚಲು ಅವರಿಗೆ ಸಾಧ್ಯವಾಯಿತು.

ಇಂದು ಅಂಥ ಸಾಹಸ ಮಾಡಬಲ್ಲ ಆಧ್ಯಾತ್ಮಿಕ ನೇತಾರರು ನಮ್ಮ ನಡುವೆ ಇಲ್ಲ. ಇಂಥ ಈ ಆಧ್ಯಾತ್ಮಿಕ ಅರಾಜಕತೆಯ ಸಂದರ್ಭದಲ್ಲಿ ಕೆಡುಕನ್ನು ಕತ್ತರಿಸಿ ಒಳಿತನ್ನು ಎತ್ತಿಹಿಡಿಯುವ ಹೊಣೆ ನಾವೇ ಹೊರಬೇಕು. ನಮ್ಮ ನಾಡಿನ ಪ್ರತಿಯೊಬ್ಬ ಪ್ರಜೆಯೂ ಶಾಂತಿಯ, ಸೌಹಾರ್ದದ, ಎಲ್ಲರೂ ಒಂದೇ ಎಂಬ ಭಾವನೆಯನ್ನೆ ಉಸಿರಾಡಿದರೆ ಮಾತ್ರ, `ಮಾನವ ಜಾತಿ ತಾನೊಂದೇ ವಲಂ’ ಅನ್ನುವ ಮಾತು ಎಲ್ಲರ ಎದೆಗಳಲ್ಲೂ ಮೊಳಗಿದರೆ ಮಾತ್ರ, ಮತ್ತೆ ಆ ಗತಕಾಲದ ಆಧ್ಯಾತ್ಮಿಕ ವೈಭವ ಕಣ್ತುಂಬಿಕೊಳ್ಳಲು ಸಾಧ್ಯ.

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

chetan teerthahalli
ಗಾಯತ್ರಿ ಎಚ್. ಎನ್.
+ posts

ತೀರ್ಥಹಳ್ಳಿಯವರಾದ ಗಾಯತ್ರಿ ಎಚ್.ಎನ್ ಅವರು ಲೇಖಕಿಯಾಗಿ ಚೇತನಾ ತೀರ್ಥಹಳ್ಳಿ ಎಂಬ ಹೆಸರಿನಿಂದ ಚಿರಪರಿಚಿತರು. ಅಲಾವಿಕಾ ಹೆಸರಿನಲ್ಲಿ ಒಂದು `ಇ-ಪುಸ್ತಕ’ ಪ್ರಕಟಿಸಿದ್ದಾರೆ. ಉಫೀಟ್ (ಕವನ ಸಂಕಲನ), ಭಾಮಿನಿ ಷಟ್ಪದಿ (ಅಂಕಣ ಕಾದಂಬರಿ), ಗುಟ್ಟು ಬಚ್ಚಿಡಲು ಬರುವುದಿಲ್ಲ (ಕವನ ಸಂಕಲನ), ಸಿದ್ಧಾರ್ಥ (ಅನುವಾದಿತ ಕೃತಿ), ಬಿಸಿಲ ಚೂರಿನ ಬೆನ್ನು (ಪ್ರಬಂಧ ಸಂಕಲನ), ನೀಲಿಬಾನಿನಲ್ಲಿ ಕೆಂಪು ಸೂರ್ಯ (ಜೆ.ಎನ್.ಯು ಭಾಷಣಗಳ ಅನುವಾದ) ಸೇರಿದಂತೆ 15ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಿಸಿದ್ದಾರೆ. ಕೆಲ ವರ್ಷ ಪತ್ರಕರ್ತೆಯಾಗಿದ್ದ ಅವರು, ಪ್ರಸ್ತುತ ಫ್ರೀಲಾನ್ಸ್ ಕಂಟೆಂಟ್ ಕ್ರಿಯೇಟರ್ ಮತ್ತು ಅನುವಾದಕಿಯಾಗಿದ್ದಾರೆ. ಜೊತೆಗೆ Aralimara.com ಎಂಬ ಅಧ್ಯಾತ್ಮ - ಜೀವನ ಶೈಲಿ ಸಂಬಂಧಿತ ಜಾಲತಾಣ ನಿರ್ವಹಣೆ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಗಾಯತ್ರಿ ಎಚ್. ಎನ್.
ಗಾಯತ್ರಿ ಎಚ್. ಎನ್.
ತೀರ್ಥಹಳ್ಳಿಯವರಾದ ಗಾಯತ್ರಿ ಎಚ್.ಎನ್ ಅವರು ಲೇಖಕಿಯಾಗಿ ಚೇತನಾ ತೀರ್ಥಹಳ್ಳಿ ಎಂಬ ಹೆಸರಿನಿಂದ ಚಿರಪರಿಚಿತರು. ಅಲಾವಿಕಾ ಹೆಸರಿನಲ್ಲಿ ಒಂದು `ಇ-ಪುಸ್ತಕ’ ಪ್ರಕಟಿಸಿದ್ದಾರೆ. ಉಫೀಟ್ (ಕವನ ಸಂಕಲನ), ಭಾಮಿನಿ ಷಟ್ಪದಿ (ಅಂಕಣ ಕಾದಂಬರಿ), ಗುಟ್ಟು ಬಚ್ಚಿಡಲು ಬರುವುದಿಲ್ಲ (ಕವನ ಸಂಕಲನ), ಸಿದ್ಧಾರ್ಥ (ಅನುವಾದಿತ ಕೃತಿ), ಬಿಸಿಲ ಚೂರಿನ ಬೆನ್ನು (ಪ್ರಬಂಧ ಸಂಕಲನ), ನೀಲಿಬಾನಿನಲ್ಲಿ ಕೆಂಪು ಸೂರ್ಯ (ಜೆ.ಎನ್.ಯು ಭಾಷಣಗಳ ಅನುವಾದ) ಸೇರಿದಂತೆ 15ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಿಸಿದ್ದಾರೆ. ಕೆಲ ವರ್ಷ ಪತ್ರಕರ್ತೆಯಾಗಿದ್ದ ಅವರು, ಪ್ರಸ್ತುತ ಫ್ರೀಲಾನ್ಸ್ ಕಂಟೆಂಟ್ ಕ್ರಿಯೇಟರ್ ಮತ್ತು ಅನುವಾದಕಿಯಾಗಿದ್ದಾರೆ. ಜೊತೆಗೆ Aralimara.com ಎಂಬ ಅಧ್ಯಾತ್ಮ - ಜೀವನ ಶೈಲಿ ಸಂಬಂಧಿತ ಜಾಲತಾಣ ನಿರ್ವಹಣೆ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...