ಘಟಾನುಘಟಿ ರಾಜಕಾರಣಿಗಳ ಜೈಲಿಗಟ್ಟಿದ ಸಮರ ಸೇನಾನಿ ‘ಎಸ್.ಆರ್. ಹಿರೇಮಠ’ (ಭಾಗ-1)

Date:

ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್ ಏರಿಯಾದ ತೀರಾ ಸಾಧಾರಣವಾದ ಲಾಡ್ಜ್ ವೊಂದರಲ್ಲಿ ಸಿಂಗಲ್ ರೂಮಿನಲ್ಲಿ ಉಳಿದುಕೊಳ್ಳುವ, ಕೋರ್ಟು ಕಚೇರಿಗಳಿಗೆ ಓಡಾಡಲು ಆಟೋ ಅಥವಾ ಸಿಟಿ ಬಸ್ ಬಳಸುವ, ಸಾಧಾರಣ ಶರ್ಟ್, ಪ್ಯಾಂಟ್ ಧರಿಸುವ ಎಸ್.ಆರ್. ಹಿರೇಮಠ ಮೆದು ಮಾತಿನ ಸಜ್ಜನರು. ಆದರೆ ಇವರ ಕ್ರಿಯೆಗಳು ಬಲಾಢ್ಯರ ಬುಡ ಅಲ್ಲಾಡಿಸಿಬಿಟ್ಟಿವೆ. ಅಂತಹ ಕೆಲವು ಉದಾಹರಣೆಗಳೆಂದರೆ…

ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಿಬಿಐ ದಾಳಿಗೊಳಗಾದ ಮುಖ್ಯಮಂತ್ರಿ ಎಂಬ ಅಪಖ್ಯಾತಿಗೆ ಬಿ.ಎಸ್.ಯಡಿಯೂರಪ್ಪನವರು ಗುರಿಯಾಗಿದ್ದರೆ, ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದು ಜೈಲು ವಾಸ ಅನುಭವಿಸಿದ್ದರೆ, ಮತ್ತೆ ಕೋರ್ಟು, ಕಚೇರಿ, ಬಂಧನಗಳ ಭೀತಿಯಲ್ಲಿ ಬದುಕುತ್ತಿದ್ದರೆ, ಅದರ ಹಿಂದೆ ಎಸ್.ಆರ್. ಹಿರೇಮಠರ ಸತತ ಶ್ರಮ ಮತ್ತು ಪ್ರಾಮಾಣಿಕ ಹೋರಾಟವಿದೆ.

ಕರ್ನಾಟಕ-ಆಂಧ್ರಪ್ರದೇಶ ರಾಜ್ಯ ಸರ್ಕಾರಗಳನ್ನು ತಮ್ಮ ಬೆರಳ ತುದಿಯಲ್ಲಿ ಆಡಿಸುತ್ತಿದ್ದ ಬಳ್ಳಾರಿಯ ಗಣಿಧಣಿಗಳ ಸದ್ದಡಗಿದ್ದರೆ, ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಪ್ರವಾಸೋದ್ಯಮ ಮಂತ್ರಿಯಾಗಿ ಮೆರೆಯುತ್ತಿದ್ದ ಜನಾರ್ದನ ರೆಡ್ಡಿ ಇವತ್ತು ಜೈಲು ಸೇರುವಂತಾಗಿದ್ದರೆ, ಗಣಿರೆಡ್ಡಿ ಸಾಮ್ರಾಜ್ಯ ಪತನದ ಅಂಚಿಗೆ ಸರಿದಿದ್ದರೆ ಅದರ ಹಿಂದೆ ಹಿರೇಮಠರ ಸಾಮಾಜಿಕ ಕಳಕಳಿ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2009ರಿಂದ 2010ರವರೆಗೆ 17 ತಿಂಗಳ ಅವಧಿಯಲ್ಲಿ ಸುಮಾರು 37 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಬೇಲೆಕೇರಿ ಬಂದರಿನಿಂದ ನಾಪತ್ತೆಯಾದ ಪ್ರಕರಣದಲ್ಲಿ ಪ್ರವಾಸೋದ್ಯಮ ಮಾಜಿ ಮಂತ್ರಿಗಳಾದ ಆನಂದ್ ಸಿಂಗ್, ಶ್ರೀರಾಮುಲು ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಭಾಗಿಯಾಗಿರುವುದನ್ನು ದಾಖಲೆಗಳ ಸಮೇತ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ, ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸುವಂತೆ ಮಾಡಿದ್ದರೆ, ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ್ದರ ಹಿಂದೆ ಹಿರೇಮಠರ ಸಮಾಜವನ್ನು ಎಚ್ಚರಿಸುವ ಇರಾದೆ ಇದೆ.

ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಅಕ್ರಮವಾಗಿ 71 ಎಕರೆ 30 ಗುಂಟೆ ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹಿರೇಮಠರು ಆರೋಪಿಸಿದ್ದಾರೆ. ಲೋಕಾಯುಕ್ತ ವರದಿಯ ಮೇಲೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಸರ್ಕಾರ ಎಸ್ಐಟಿ ರಚಿಸಿ, ಮರುಸರ್ವೆ ಮಾಡಲು ಆದೇಶಿಸಿದೆ. ಭೂಮಿ ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್‌, ಒತ್ತುವರಿ ಮಾಡಿಕೊಂಡಿರುವ ಕುಮಾರಸ್ವಾಮಿ ಮತ್ತವರ ಸಂಬಂಧಿಕರಿಗೆ ನೋಟಿಸ್‌ ನೀಡಿದ್ದಾರೆ. ಇದರ ಹಿಂದೆ ಸರ್ಕಾರಿ ಭೂಮಿ ಉಳಿಸುವ ಇಚ್ಛಾಶಕ್ತಿ ಇದೆ.

ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?

ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿರುವ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ 2007 ಮತ್ತು 2009ರ ನಡುವೆ ಅಂತರರಾಜ್ಯ ಗಡಿ ಗುರುತುಗಳನ್ನು ನಾಶ ಮಾಡಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿತ್ತು. ಆ ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 884 ಕೋಟಿ ನಷ್ಟ ಉಂಟಾಗಿತ್ತು. ಆ ಪ್ರಕರಣದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಇತರ ಮೂವರನ್ನು ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ದೋಷಿಗಳೆಂದು ತೀರ್ಪು ನೀಡಿದೆ. ಅಪರಾಧಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಿದ್ದು, ಬಲಾಢ್ಯರನ್ನೂ ಬಗ್ಗುಬಡಿಯಬಹುದೆಂಬ ಪಾಠ ಕಲಿಸಿದೆ.

ಇವು ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಜನ ಕಂಡ, ಕೇಳಿದ ಕೆಲವು ಹಗರಣಗಳು. ಕರ್ನಾಟಕದ ಚಹರೆಯನ್ನು ಬದಲಿಸಿದ ಘಟನೆಗಳು.

ದೇಶದಲ್ಲಿರುವ ಕಾನೂನು, ನ್ಯಾಯ ವ್ಯವಸ್ಥೆಯನ್ನು ನಂಬಿಯೇ ಬದಲಾವಣೆಯನ್ನು ತರಬಹುದು; ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಕೂಡ ಮುಖ್ಯಮಂತ್ರಿಯಂತಹ ಬಲಾಢ್ಯನನ್ನೂ ಕುರ್ಚಿಯಿಂದ ಕೆಳಗಿಳಿಸಬಹುದು ಎಂಬುದನ್ನು ಹಿರೇಮಠರು ಸಾಬೀತು ಮಾಡುತ್ತಿದ್ದಾರೆ. ಭಂಡರ, ಬಲಾಢ್ಯರ, ಭ್ರಷ್ಟರ ಮುಖದಲ್ಲಿ ಆತಂಕದ ಗೆರೆಗಳನ್ನು ಮೂಡಿಸುತ್ತಿದ್ದಾರೆ.  

hire mat
ಎಸ್.ಆರ್. ಹಿರೇಮಠ

ಹಾಗಾದರೆ ಈ ಹಿರೇಮಠರು ಯಾರು, ಎಂತಹವರು, ಅವರು ಮಾಡಿದ್ದೇನು, ಮಾಡುತ್ತಿರುವುದೇನು? ಮುಂದೆ ಓದಿ…

ಹುಟ್ಟಿದ್ದು ಹಳ್ಳಿಯಲ್ಲಿ, ಬಡ ಕುಟುಂಬದಲ್ಲಿ

ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದ ರಾಚಯ್ಯ ಮತ್ತು ರಾಚವ್ವ ದಂಪತಿಗಳಿಗೆ ನವೆಂಬರ್ 5, 1944ರಲ್ಲಿ ಜನಿಸಿದ ಸಂಗಯ್ಯ ರಾಚಯ್ಯ ಹಿರೇಮಠ್, ಕಡುಬಡತನವನ್ನು ಕಂಡುಂಡವರು.

ತಂದೆ ರಾಚಯ್ಯ ಹಿರೇಮಠ್ ಕೃಷಿಕರು, ಸಹಕಾರಿ ಕ್ಷೇತ್ರದ ಮುಖಂಡರು ಮತ್ತು ಸ್ವಾತಂತ್ರ್ಯ ಹೋರಾಟಗಾರರು. ಆ ಕಾಲಕ್ಕೇ ಹಳ್ಳಿಯ ಬಡವರ ಪರವಾಗಿ ಹೋರಾಡಿ ಊರಿನ ಶ್ರೀಮಂತರ ವಿರೋಧ ಕಟ್ಟಿಕೊಂಡಿದ್ದರು. ಹಳ್ಳಿಯ ಜನಗಳಿಗೆ ಸಹಕಾರಿ ತತ್ವ ಸಾರುವುದು, ಖಾದಿ ನೂಲುವ ಮಹತ್ವ ತಿಳಿಸುವುದು, ಆ ಮೂಲಕ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಾರ್ಗದರ್ಶಿಗಳಾಗಿದ್ದರು. ಸಹಕಾರಿ ಸಂಘದ ಕೇಸೊಂದರಲ್ಲಿ ರಾಚಯ್ಯನವರು ಜಯ ಪಡೆದು, ಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಲು ಪೊಲೀಸರು ಮುಂದಾದಾಗ, ಊರಿನ ಶ್ರೀಮಂತರು ರಾಚಯ್ಯನವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಆಗ ರಾಚಯ್ಯನವರು ತಲೆಮರೆಸಿಕೊಂಡು ತಾಯಿಯ ತವರೂರಾದ ಬಿಜಾಪುರಕ್ಕೆ ತೆರಳಿದ್ದರು. ಅಲ್ಲಿ ಕಟ್ಟಡದ ಕಂಟ್ರಾಕ್ಟರ್ ಕೆಲಸ ನಿರ್ವಹಿಸುವಾಗ ಕ್ಷಯ ರೋಗಕ್ಕೆ ತುತ್ತಾಗಿ ಇಹಲೋಹ ತ್ಯಜಿಸಿದರು.

ಇದನ್ನೂ ಓದಿರಿ: ‘ಕರ್ನಾಟಕ, ಕ್ರಿಕೆಟ್ ಮತ್ತು ನಾನು’: ಯೋಗೇಂದ್ರ ಯಾದವ್ ನೆನಪುಗಳು

ಇಂತಹ ಸ್ವಾತಂತ್ರ್ಯ ಹೋರಾಟಗಾರ ರಾಚಯ್ಯ ಹಿರೇಮಠರ ಮಗನಾಗಿ ಜನಿಸಿದ ಸಂಗಯ್ಯ ರಾಚಯ್ಯ ಹಿರೇಮಠ್, ತಮ್ಮ 5 ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು. ಜೊತೆಗೆ ಏಳು ಜನ ಅಣ್ಣ-ತಮ್ಮಂದಿರಲ್ಲಿ ನಾಲ್ವರು ಅಕಾಲಿಕ ಮರಣ ಹೊಂದಿದ್ದರು. ಉಳಿದವರಲ್ಲಿ ಒಬ್ಬ ಅಣ್ಣ, ಒಬ್ಬ ಅಕ್ಕನನ್ನು ಹೊಂದಿದ್ದ ಹಿರೇಮಠರಿಗೆ ಆಡುವ ವಯಸ್ಸಲ್ಲಿ ಶೇಂಗ ಆರಿಸುವ, ಖಾದಿ ನೂಲುವ ದಿನಗೂಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಆದರೂ ಕೆಲಸ ಮಾಡಿಕೊಂಡೇ ಶಾಲೆಗೆ ಹೋಗುತ್ತಿದ್ದ ಹಿರೇಮಠ್, ಓದಿನಲ್ಲಿ ಸದಾ ಮುಂದಿದ್ದರು. ಬಸ್ ಕಂಡಕ್ಟರ್ ಆಗಿದ್ದ ಸಹೋದರ ಮನೆಯನ್ನು ನಿಭಾಯಿಸಿದರೆ, ದಿನಗೂಲಿಯಿಂದ ಶಾಲೆಯ ಖರ್ಚು ವೆಚ್ಚವನ್ನೆಲ್ಲ ಹಿರೇಮಠರು ಸಂಭಾಳಿಸಿದರು.  

ಮೆರಿಟ್ ಸ್ಟೂಡೆಂಟ್

ಬಿಜಾಪುರದ ಶಾಲೆಯ ವಿದ್ಯಾಭ್ಯಾಸದಲ್ಲಿ ತರಗತಿಗೆ ಮೊದಲಿಗನಾಗಿದ್ದ ಬಾಲಕ ಹಿರೇಮಠರು, ಅಲ್ಲಿಂದ ಕಲಿತದ್ದು ಅಪಾರ. ಹಿರೇಮಠರು ಹೈಸ್ಕೂಲ್ ಓದುವಾಗಲೇ, ಬಿಜಾಪುರದ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಪ್ರವಚನಗಳ ಸಾರವನ್ನು ಲೇಖನವನ್ನಾಗಿ ಬರೆದು ಬಹುಮಾನಗಳನ್ನು ಗಳಿಸಿದ್ದರು. ಇಲ್ಲಿ ಓದುತ್ತಿರುವಾಗಲೇ, ಕನ್ನಡದ ಹೆಸರಾಂತ ಸಾಹಿತಿ ಶಿವರಾಮ ಕಾರಂತರು ಶಾಲೆಯ ಕಾರ್ಯಕ್ರಮವೊಂದಕ್ಕೆ ಬಂದು, “ನಾವು ತಂದೆ-ತಾಯಿಗಳ ಋಣ, ಗುರು-ಹಿರಿಯರ ಋಣ ತೀರಿಸುವ ಬಗೆಗೆ ಮಾತನಾಡುತ್ತಿದ್ದೇವೆ. ಆದರೆ ಸಮಾಜದ ಋಣ ತೀರಿಸುವ ಬಗೆಗೆ ಚಿಂತಿಸುವುದಿಲ್ಲ’’ ಎಂದು ಹೇಳಿದ್ದು ಬಾಲಕ ಹಿರೇಮಠರನ್ನು ಚಿಂತನೆಯ ಹಾದಿಗೆ ಹಚ್ಚಿತು.  

ಆ ಕಾಲಕ್ಕೇ ಹಿರೇಮಠರು ನ್ಯಾಷನಲ್ ಮೆರಿಟ್ ಸ್ಟೂಡೆಂಟ್ ಎಂದು ಹೆಸರು ಗಳಿಸಿದ್ದರು. ಎಸ್ಎಸ್‌ಸಿ(1961)ಯಲ್ಲಿ ರಾಜ್ಯ ಮಟ್ಟದಲ್ಲಿ ಎರಡನೇ ರ್ಯಾಂಕ್ (rank) ಗಳಿಸಿದ್ದರು. ಆಗ ಸಹಜವಾಗಿಯೇ ಸಮಾಜದ ಗಣ್ಯರ ಗಮನ ಹಿರೇಮಠರತ್ತ ಹರಿಯಿತು. ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ, ಮುಖ್ಯಮಂತ್ರಿಗಳಾಗಿದ್ದ ಬಿ.ಡಿ. ಜತ್ತಿಯವರು ಶಾಲಾ ವಾರ್ಷಿಕೋತ್ಸವಕ್ಕೆ ವಿಶೇಷ ಆಹ್ವಾನಿತರಾಗಿ ಬಂದು ಹಿರೇಮಠರನ್ನು ಬಾಯ್ತುಂಬ ಹೊಗಳಿ, ಪ್ರೋತ್ಸಾಹಿಸಿದ್ದರು. ಆ ನಂತರ ಪಿಯೂಸಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ತೇರ್ಗಡೆಯಾದರು. ಪಿಯೂಸಿ ಮುಗಿಸಿ ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜ್ ಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಗೆ ಸೇರಿ, ತರಗತಿಗೇ ಮೊದಲನೆಯರಾಗಿ ಉತ್ತೀರ್ಣರಾದರು.

1967ರಲ್ಲಿ ಬಿಇ ಪದವಿ ಮುಗಿಸಿದ ಹಿರೇಮಠರು, ಒಂದು ವರ್ಷ ಕಾಲ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಮೊದಲ ದರ್ಜೆಯಲ್ಲಿ ಎಂಜಿನಿಯರಿಂಗ್ ಪಾಸು ಮಾಡಿದ್ದ ಹಿರೇಮಠರಿಗೆ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾದಲ್ಲಿದ್ದ ಸ್ನೇಹಿತರಿಂದ ಒತ್ತಡ ಹೆಚ್ಚಾಗತೊಡಗಿತು. ಆ ಕಾಲಕ್ಕೇ ಅಮೆರಿಕಾದಲ್ಲಿ ವಾಸವಾಗಿದ್ದ ಶರಣ ನಂದಿ ಎಂಬ ಸ್ನೇಹಿತರ ಸಹಕಾರದಿಂದ ಹಿರೇಮಠರು, ಅಮೆರಿಕಾದ ಮ್ಯಾನ್ ಹಟನ್‌ನ ಕ್ಯಾನ್ ಸಾಸ್ ಸ್ಟೇಟ್ ವಿವಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ (MS) ಪರೀಕ್ಷೆಯನ್ನು ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ನಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು. ಮುಂದೆ ಶಿಕಾಗೋದಲ್ಲಿ ಇಲಿನಾಯ್ಸ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಬಿಎ (MBA) ಮಾಡಿದರು.

ಅಮೆರಿಕಾದಲ್ಲಿ ಎಂಎಸ್ ಮುಗಿಸುವ ಮುಂಚೆಯೇ ಹಿರೇಮಠರನ್ನು ಕೆಲಸಗಳು ಅರಸಿ ಬಂದವು. ಅವುಗಳನ್ನು ಆರಿಸಿಕೊಂಡ ಹಿರೇಮಠರು ಆಪರೇಷನ್ಸ್ ರೀಸರ್ಚ್ ಅನಲಿಸ್ಟ್, ಇಲಿನಾಯ್ಸ್ ಬ್ಯಾಂಕ್ ಟ್ರಸ್ಟ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಫೆಡರಲ್ ರಿಸರ್ವ್ ಬ್ಯಾಂಕ್ ನ ಮ್ಯಾನೇಜರ್- ಹೀಗೆ ಮೂರು ಉನ್ನತ ಹುದ್ದೆಯ ಕೆಲಸಗಳಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ನ್ಯೂಸ್ ಮೇಕರ್ಸ್ ಇನ್ ಅಮೆರಿಕಾ

ಹಿರೇಮಠರು ಅಮೆರಿಕಾದಲ್ಲಿ ಎಂಎಸ್ ಮತ್ತು ಎಂಬಿಎ ಮಾಡಿ, ಹಲವಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿಯೇ, ಸ್ನೇಹಿತರು ಒಟ್ಟುಗೂಡಿದಾಗ ಚಿಂತನೆಗೆ ಒಳಗಾಗುತ್ತಿದ್ದ ಭಾರತೀಯ ಗ್ರಾಮೀಣ ಬಡಜನರ ಬಗೆಗಿನ ಕಳಕಳಿ 1974ರಲ್ಲಿ ‘ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್’ ಸಂಸ್ಥೆಯಾಗಿ ರೂಪುಗೊಳ್ಳಲು ಕಾರಣವಾಯಿತು. 1975ರಲ್ಲಿ, ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಇಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಸೋಷಲಿಸ್ಟ್ ಪಾರ್ಟಿಯ ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದರೆ, ಅತ್ತ ಅಮೆರಿಕಾದಲ್ಲಿ ಭಾರತದ ಮೇಲೆ ವಿಧಿಸಿದ ಕರಾಳ ಕಾನೂನಿನ ವಿರುದ್ಧ ಧ್ವನಿಯೆತ್ತಿ ನ್ಯೂಸ್ ಮೇಕರ್‌ಗಳಾದವರು ಇದೇ ಹಿರೇಮಠ್ ಮತ್ತವರ ಗೆಳೆಯರು. ಇವರ ಪ್ರತಿಭಟನೆಯಿಂದಾಗಿ ನಾಲ್ಕು ಜನರ ಪಾಸ್ ಪೋರ್ಟ್ ಕಿತ್ತುಕೊಂಡಿದ್ದರು. ಒಟ್ಟು 12 ಸಿಟಿಗಳಲ್ಲಿ ಇವರು ನ್ಯೂಸ್ ಮೇಕರ್ಸ್ ಆಗಿ ಖ್ಯಾತಿ ಗಳಿಸಿದ್ದರು.

ಆ ಸಂದರ್ಭದಲ್ಲಿಯೇ ಹಿರೇಮಠರೊಂದಿಗೆ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರಾದ ರಾಮ್ ಜೇಠ್ಮಲಾನಿ, ಸುಬ್ರಮಣಿಯನ್ ಸ್ವಾಮಿ, ಎಚ್.ವಿ. ಕಾಮತ್, ರಾಮಧನ್, ನಾಗಾ ಘೋರೆ, ಚಂದ್ರಶೇಖರ್, ಜಯಪ್ರಕಾಶ್ ನಾರಾಯಣ್‌ರ ಜೊತೆ ಸಂಪರ್ಕ ಬೆಳೆದಿತ್ತು. 1977ರಲ್ಲಿ ಜಯಪ್ರಕಾಶ್ ನಾರಾಯಣ್ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಬಂದಾಗ, ಅವರನ್ನು ಮುಖತಃ ಭೇಟಿಯಾಗಿ ಭಾರತದ ಗ್ರಾಮೀಣಾಭಿವೃದ್ಧಿಯ ಬಗ್ಗೆ ಚರ್ಚಿಸಿದ್ದು, ಮುಂದೆ ಭಾರತದಲ್ಲಿ ಬಡವರ ಬಗ್ಗೆ ಕೆಲಸ ಮಾಡಲಿಕ್ಕೆ ಭದ್ರಬುನಾದಿ ಹಾಕಿಕೊಟ್ಟಿತ್ತು.

WhatsApp Image 2025 05 08 at 16.41.02
ಹೋರಾಟದಲ್ಲಿ ಎಸ್.ಆರ್. ಹಿರೇಮಠ

ಇದೇ ಸಮಯದಲ್ಲಿ, ಭಾರತದ ಗ್ರಾಮೀಣ ಬಡಜನರ ಬಗ್ಗೆ ಚಿಂತಿಸುತ್ತಿದ್ದಾಗ, ಅವರ ಸರ್ವೋತೋಮುಖ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾಗ, ಆ ನಿಟ್ಟಿನಲ್ಲಿ ಕಾರ್ಯನಿರತವಾಗಿದ್ದ ಅಮೆರಿಕಾ ಮತ್ತು ಇಂಗ್ಲೆಂಡ್‌ನ ಕೆಲ ಎನ್‌ಜಿಒ ಸಂಸ್ಥೆಗಳು ಇವರ ಸಂಪರ್ಕಕ್ಕೆ ಬಂದವು. ಹಾಗೆಯೇ ಹಿರೇಮಠರು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾಗ, ಭಾರತದಲ್ಲಿದ್ದ ಕೆಲ ಐಐಟಿ ಗೆಳೆಯರು ಬಡವರ ಬಗ್ಗೆ ಕೆಲಸ ಮಾಡುತ್ತಿದ್ದರು. ಅವರಿಗೆ ಹಿರೇಮಠರು ಧನಸಹಾಯ ಮಾಡುತ್ತಿದ್ದರು. ಭಾರತಕ್ಕೆ ಬರುವ ಮುಂಚೆ ಹಿರೇಮಠರು ಈ ಐಐಟಿ ಗೆಳೆಯರನ್ನು ಸಂಪರ್ಕಿಸಿದರು. ಅವರು ಭಾರತದ ನಿರುದ್ಯೋಗದ ಬಗ್ಗೆ ಸವಿಸ್ತಾರ ವಿವರಣೆ ನೀಡಿ, ಆ ಬಗ್ಗೆ ಪ್ರಕಟವಾಗಿದ್ದ ಲೇಖನವೊಂದನ್ನು ಕೊಟ್ಟರು. ಆ ಲೇಖನದ ಮೂಲ ಹಿಡಿದು ಹೋದಾಗ ಸಿಕ್ಕಿದ್ದು, ಆ ಕಾಲಕ್ಕೇ ಎಕಲಾಜಿಕಲ್ ಚೇಂಜಸ್ ಬಗ್ಗೆ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಎಂಬ ಪುಸ್ತಕ ಬರೆದು ಖ್ಯಾತಿ ಗಳಿಸಿದ್ದ ಲಂಡನ್ ಮೂಲದ ಲೇಖಕ ಡಾ. ಇ.ಎಫ್. ಷೂಮೇಕರ್. ನಂತರ ಅವರ ಪರಿಚಯವಾಯಿತು. ಅವರ ಪ್ರಭಾವ ಹಿರೇಮಠರ ಮೇಲೆ ಎಷ್ಟರಮಟ್ಟಿಗೆ ಆಯಿತೆಂದರೆ, ಭಾರತದ ಬಗೆಗಿನ ಅವರ ಕನಸಿಗೆ ಆ ಪುಸ್ತಕ ಕಣ್ಣಾಯಿತು.  

ಮಾವಿಸ್ ಮಡದಿಯಾದದ್ದು

1969-79ರಲ್ಲಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾಗ, ಭಾರತದಿಂದ ಹೋದವರು, ಅಲ್ಲಿ ಪರಿಚಯವಾದವರು ಆಗಾಗ ಒಂದು ಕಡೆ ಕಲೆಯುವುದು ರೂಢಿಯಾಗಿತ್ತು. ಹೀಗೆಯೇ ಒಂದು ಸಲ ಸ್ನೇಹಿತರೊಬ್ಬರ ಮನೆಗೆ ಊಟಕ್ಕೆ ಹೋದಾಗ, ಅಲ್ಲಿ ಅಮೆರಿಕಾದ ಹುಡುಗಿ ಮಾವಿಸ್ ಸಿಗ್ವಾಲ್ಟ್ (Mavisas Sigwalt) ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಬೆಳೆದು ಮದುವೆಯ ಹಂತಕ್ಕೆ ಮುಟ್ಟಿತು.

ಹಿರೇಮಠರ ಮೇಲೆ ತಾಯಿಯ ಪ್ರಭಾವ ಹೆಚ್ಚಾಗಿದ್ದರಿಂದ, ಮಾವಿಸ್‌ರೊಂದಿಗಿನ ಪ್ರೀತಿಯನ್ನು ತಾಯಿಯೊಂದಿಗೆ ಹಂಚಿಕೊಂಡರು. ಮದುವೆಗೆ ಒಪ್ಪಿದ ತಾಯಿ, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಸೂಚಿಸಿದರು. ಅದರಂತೆ 1972 ರ ಡಿಸೆಂಬರ್ 24ರಂದು ಹುಬ್ಬಳ್ಳಿಯಲ್ಲಿ ಲಿಂಗಾಯತ ಸ್ವಾಮೀಜಿಗಳ ಸಮ್ಮುಖದಲ್ಲಿ ಮದುವೆಯಾಯಿತು. ಆ ಮುಂಚೆ ಕುಮಾರಿ ಮಾವಿಸ್ ಆಗಿದ್ದವರು ಎಸ್.ಆರ್. ಹಿರೇಮಠರನ್ನು ಮದುವೆಯಾದ ನಂತರ, ತಮ್ಮ ಹೆಸರುನ್ನು ಶ್ಯಾಮಲಾ ಹಿರೇಮಠ್ ಎಂದು ಬದಲಿಸಿಕೊಂಡರು.

ಇದನ್ನೂ ಓದಿರಿ: ಪರಿಷ್ಕೃತ ನೀತಿಗಳು ಕೈಗಾರಿಕೆಗೆ ಮಾರಕವಾಗಿದ್ದು ಹೇಗೆ?

ಮಾವಿಸ್ ಮೂಲತಃ ಅಮೆರಿಕಾದವರು, ಸಮಾಜಪರ ಚಿಂತನೆಯ ಒಲವುಳ್ಳವರು, ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಶಾಂತಿಸೇನೆಯಲ್ಲಿ ಸ್ವಯಂಸೇವಕಿಯಾಗಿ ಪಶ್ಚಿಮ ಆಫ್ರಿಕಾದ ಸಿರಿಲಿಯೋನಾ ದೇಶದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿ ಬಂದಿದ್ದರು. ಸಮಾನ ಮನಃಸ್ಥಿತಿಯುಳ್ಳವರಾದ್ದರಿಂದ ಸಹಜವಾಗಿಯೆ ಬೆರೆತರು, ಸಮಾಜಪರ ಹೋರಾಟಗಳಲ್ಲಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತರು. ಇಲ್ಲಿಯೇ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಜನಿಸಿದರು. ಮಗ- ರಾಜ್, ಮಗಳು-ಶೀಲಾ.

ಭಾರತದಿಂದ ಅಮೆರಿಕಾಕ್ಕೆ ಹೋಗುವಾಗಲೇ ಹಿರೇಮಠರು ತಿರುಗಿ ಬರುವ ಯೋಚನೆಯನ್ನೂ ಮಾಡಿದ್ದರು. ಆ ಕಾರಣದಿಂದಾಗಿಯೇ ಭಾರತಕ್ಕೆ ವಾಪಸಾಗಿ ಕೆಲ ಸ್ನೇಹಿತರ ಜೊತೆಗೂಡಿ ಉದ್ಯಮ ಸ್ಥಾಪಿಸುವ, ಆ ಮೂಲಕ ಕೆಲವು ಜನಕ್ಕೆ ಉದ್ಯೋಗ ಕಲ್ಪಿಸುವ ಚಿಂತನೆಯೂ ಇತ್ತು. ಆದರೆ ಹಿರೇಮಠರಿಗೆ ಇದು ಒಂದಷ್ಟು ಜನಕ್ಕೆ ಉದ್ಯೋಗ ನೀಡುವ ಸೀಮಿತ ಉದ್ದೇಶದಂತೆ ಕಂಡು ಕೈಬಿಟ್ಟರು. ಬದಲಿಗೆ ಭಾರತದ ಕಡುಬಡವರು, ಅವರ ಕರುಣಾಜನಕ ಸ್ಥಿತಿ, ಶೋಷಣೆ, ಆರ್ಥಿಕ-ಸಾಮಾಜಿಕ ಅಸಮತೋಲನಗಳೆಲ್ಲ ಕಣ್ಮುಂದೆ ಬಂದು, ಆ ನಿಟ್ಟಿನಲ್ಲಿ ಮಹತ್ವದ್ದಾದ ಏನಾದರೂ ಮಾಡಬೇಕೆಂಬ ಮಹದಾಸೆ ಹುಟ್ಟಿತು. ಅದನ್ನೇ ತಲೆ ತುಂಬಿಕೊಂಡು ಅಮೆರಿಕಾ ತೊರೆದು ತಾಯ್ನಾಡಿಗೆ ಬಂದರು.

(ಮುಂದುವರಿಯುತ್ತದೆ..)

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...