ಪ್ರೀಮಿಯಂ ಲೇಖನ | ಲೈಂಗಿಕ ಗುರುತು ಪಾಶ್ಚಾತ್ಯವಲ್ಲ, ವಾಸ್ತವ; ಇದಕ್ಕೆ ಪುರಾಣಗಳೇ ಸಾಕ್ಷಿ

Date:

ನಮ್ಮ ನಡುವೆ ಬದುಕುತ್ತಿರುವ ವಿಭಿನ್ನ ಲಿಂಗ ಮತ್ತು ಲೈಂಗಿಕ ಗುರುತಿನ ಜನರನ್ನು ಒಪ್ಪಿಕೊಳ್ಳುವುದು ಸಂಸ್ಕೃತಿಗೆ ವಿರುದ್ಧವಲ್ಲ; ಅದು ಅದರ ಸಹಜ ಮುಂದುವರಿಕೆ. ಅರ್ಥಾತ್, ವೈವಿಧ್ಯತೆಯನ್ನು ಅಂದು ಕಥೆಗಳ ಮೂಲಕ ಒಪ್ಪಿಕೊಂಡಿದ್ದರೆ, ಇಂದು ಬದುಕಿನ ಮೂಲಕ ಒಪ್ಪಿಕೊಳ್ಳುವುದು ನಮ್ಮ ಸಾಮಾಜಿಕ ಜವಾಬ್ದಾರಿ.

ಪ್ರತಿಯೊಬ್ಬ ಮನುಷ್ಯ ಸಮಾಜದಲ್ಲಿ ತನ್ನನ್ನು ತಾನು ಹೇಗೆ ಗುರುತಿಸಿಕೊಳ್ಳುತ್ತಾನೋ ಅದೇ ಅವನ ಗುರುತು. ಅವನು/ಅವಳು ಎಂದು ಗುರುತಿಸಿಕೊಳ್ಳುವುದು ಲಿಂಗತ್ವದ ಗುರುತು. ಈ ಸೆಕ್ಷುವಲ್‌ ಐಡೆಂಟಿಟಿ ಎನ್ನುವುದು ಕೇವಲ ಲೈಂಗಿಕ ಆಕರ್ಷಣೆಯ ವ್ಯಾಖ್ಯಾನವಲ್ಲ; ಅದು ವ್ಯಕ್ತಿಯ ಅಸ್ತಿತ್ವ, ಅವನ/ಅವಳ ಸಾಮಾಜಿಕ ಸ್ಥಾನ ಮತ್ತು ಮಾನವ ಹಕ್ಕುಗಳೊಂದಿಗೆ ಬೆಸೆದುಕೊಂಡಿರುವ ವಿಷಯ.

ಆದರೆ ಭಾರತೀಯ ಸಮಾಜದಲ್ಲಿ ಇದಿನ್ನೂ ‘ವೈಯಕ್ತಿಕ ವಿಷಯ’, ‘ಪಾಶ್ಚಾತ್ಯ ಸಂಸ್ಕೃತಿ’ ಅಥವಾ ‘ದೇಸೀ ಸಂಸ್ಕೃತಿಗೆ ವಿರುದ್ಧ’ ಎನ್ನುವ ತಪ್ಪು ಕಲ್ಪನೆಗಳ ಚೌಕಟ್ಟಿದೆ. ಒಂದು ವೇಳೆ ತಾನಿರುವಂತೆ ಗುರುತಿಸಿಕೊಳ್ಳಲು ಆರಂಭಿಸಿಬಿಟ್ಟರೆ, ಅವರನ್ನು ನೋಡುವ ದೃಷ್ಟಿಯೇ ಬೇರೆ. ಅವರಿಗೆ ಸಾಮಾಜಿಕ ತಿರಸ್ಕಾರವಲ್ಲದೆ ಮತ್ತೇನೂ ಸಿಗುವುದಿಲ್ಲ. ಹಾಗಾಗಿಯೇ ಅನೇಕರು ತಮ್ಮ ನಿಜ ಗುರುತನ್ನು ಒಪ್ಪಿಕೊಳ್ಳಲು, ಬಹಿರಂಗಪಡಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಲೈಂಗಿಕ ದೃಷ್ಟಿಕೋನ/ಆಕರ್ಷಣೆ (Sexual Orientation) ಹಾಗೂ ಲಿಂಗ ಗುರುತು (Gender Identity) ಎರಡೂ ಒಂದೇ ಎಂದು ಭಾವಿಸಲಾಗುತ್ತದೆ. ಆದರೆ, ಲೈಂಗಿಕ ಗುರುತು ಮತ್ತು ಲಿಂಗ ಗುರುತು ಎರಡೂ ಒಂದೇ ಅಲ್ಲ ಎಂದು ತಜ್ಞರು ಸ್ಪಷ್ಟಪಡಿಸುತ್ತಾರೆ. ಲೈಂಗಿಕ ಗುರುತು ಎನ್ನುವುದು ವ್ಯಕ್ತಿ ಯಾರ ಕಡೆಗೆ ಭಾವನಾತ್ಮಕ ಅಥವಾ ದೈಹಿಕ ಆಕರ್ಷಣೆಯನ್ನು ಅನುಭವಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ಅಂದರೆ, ವ್ಯಕ್ತಿಗೆ ವಿರುದ್ಧ ಲಿಂಗದವರ ಮೇಲೋ, ಅದೇ ಲಿಂಗದವರ ಮೇಲೋ, ಎರಡೂ ಲಿಂಗಗಳ ಮೇಲೋ ಅಥವಾ ಯಾವುದೇ ಲಿಂಗದವರ ಮೇಲೂ ಆಕರ್ಷಣೆ ಇರಬಹುದು. ಇದು ಸಂಪೂರ್ಣವಾಗಿ ಆಕರ್ಷಣೆಯ ವಿಚಾರಕ್ಕೆ ಸಂಬಂಧಿಸಿದ್ದು. ವ್ಯಕ್ತಿ ಪುರುಷನಾ ಅಥವಾ ಮಹಿಳೆಯಾ ಎಂಬುದರಿಂದ ಲೈಂಗಿಕ ಗುರುತು ನಿರ್ಧಾರವಾಗುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ಲಿಂಗ ಗುರುತು ಎನ್ನುವುದು ವ್ಯಕ್ತಿ ತನ್ನನ್ನು ತಾನು ಯಾರು ಎಂದು ಅನುಭವಿಸುತ್ತಾನೋ ಅದು ಅವನ ಲಿಂಗ ಗುರುತು. ಜನನ ಸಮಯದಲ್ಲಿ ಬಂದ ಲಿಂಗದೊಂದಿಗೆ ಇದು ಹೊಂದಿಕೊಳ್ಳಬಹುದು ಅಥವಾ ಹೊಂದಿಕೊಳ್ಳದೇ ಇರಬಹುದು. ತಾನು ಪುರುಷ, ಮಹಿಳೆ, ಎರಡೂ ಅಲ್ಲ ಅಥವಾ ವಿಭಿನ್ನ ಲಿಂಗ ಗುರುತಿನವನು ಅಥವಾ ಯಾವ ಲಿಂಗದವನು ಎಂದು ಗುರುತಿಸಿಕೊಳ್ಳಲಾಗದ ಸ್ಥಿತಿಯ ಅನುಭವ ಕೂಡ ಲಿಂಗ ಗುರುತಿನ ಭಾಗ. ಲೈಂಗಿಕ ಗುರುತು ಮತ್ತು ಲಿಂಗ ಗುರುತು ಪರಸ್ಪರ ಸ್ವತಂತ್ರವಾಗಿದ್ದು, ಒಂದರಲ್ಲಿ ಇರುವ ವೈವಿಧ್ಯ ಮತ್ತೊಂದನ್ನು ನಿರ್ಧರಿಸುವುದಿಲ್ಲ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಸಮಾನತೆ, ಮಾನವೀಯತೆ ಮತ್ತು ಎಲ್ಲರನ್ನೂ ಒಪ್ಪಿಕೊಳ್ಳುವ ಸಮಾಜ ನಿರ್ಮಾಣಕ್ಕೆ ಅಗತ್ಯವೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

soo

ಲೈಂಗಿಕ ಆಕರ್ಷಣೆಯ ಪ್ರಕಾರಗಳು ಹೀಗಿರುತ್ತವೆ:

  1. ಹೇಟೆರೋಸೆಕ್ಷುವಲ್‌ (Heterosexual): ವ್ಯಕ್ತಿಗೆ ತನ್ನ ವಿರುದ್ಧ ಲಿಂಗದವರ ಮೇಲೆ ಭಾವನಾತ್ಮಕ, ಪ್ರೇಮ ಅಥವಾ ದೈಹಿಕ ಆಕರ್ಷಣೆ ಉಂಟಾಗುವುದನ್ನು ಹೇಟೆರೋಸೆಕ್ಷುವಲ್‌ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಪುರುಷನಿಗೆ ಮಹಿಳೆಯರ ಮೇಲಿನ ಅಥವಾ ಮಹಿಳೆಗೆ ಪುರುಷರ ಮೇಲಿನ ಆಕರ್ಷಣೆ. ಸಮಾಜದಲ್ಲಿ ಬಹುಸಂಖ್ಯಾತವಾಗಿ ಕಾಣುವ ಲೈಂಗಿಕ ಆಕರ್ಷಣೆಯ ರೂಪ ಇದು.

2. ಹೋಮೊಸೆಕ್ಷುವಲ್‌ (Homosexual): ವ್ಯಕ್ತಿಗೆ ತನ್ನದೇ ಲಿಂಗದವರ ಮೇಲೆ ಆಕರ್ಷಣೆ ಉಂಟಾಗುವುದನ್ನು ಹೋಮೊಸೆಕ್ಷುವಲ್‌ ಎಂದು ಹೇಳಲಾಗುತ್ತದೆ. ಪುರುಷರು ಪುರುಷರ ಮೇಲಿನ ಆಕರ್ಷಣೆಯನ್ನು ಹೊಂದಿದ್ದರೆ ಅವರನ್ನು ಗೇ ಎಂದು, ಮಹಿಳೆಯರು ಮಹಿಳೆಯರ ಮೇಲೆ ಆಕರ್ಷಣೀಯರಾದರೆ ಅವರನ್ನು ಲೆಸ್ಬಿಯನ್ ಎಂದು ಕರೆಯಲಾಗುತ್ತದೆ. ಇದು ಸಹಜ ಮಾನವೀಯ ವೈವಿಧ್ಯದ ಭಾಗವಾಗಿದ್ದು, ಯಾವುದೇ ರೋಗ ಅಥವಾ ಅಸಾಮಾನ್ಯತೆ ಅಲ್ಲ.

3. ಬೈಸೆಕ್ಷುವಲ್‌ (Bisexual): ಬೈಸೆಕ್ಷುವಲ್‌ ವ್ಯಕ್ತಿಗಳಿಗೆ ಪುರುಷ ಮತ್ತು ಮಹಿಳೆ ಎರಡೂ ಲಿಂಗಗಳ ಮೇಲೂ ಆಕರ್ಷಣೆ ಉಂಟಾಗಬಹುದು. ಈ ಆಕರ್ಷಣೆ ಒಂದೇ ಸಮಯದಲ್ಲಿ ಅಥವಾ ಜೀವನದ ವಿಭಿನ್ನ ಹಂತಗಳಲ್ಲಿ ವಿಭಿನ್ನವಾಗಿ ವ್ಯಕ್ತವಾಗಬಹುದು. ಇದರಿಂದ ಅವರ ಗುರುತು ಗೊಂದಲದಲ್ಲಿದೆ ಅಥವಾ ಅವರು ಹೆಣ್ಣೋ ಗಂಡೋ ನಿರ್ಧಾರವಾಗಿಲ್ಲ ಎಂದು ಅರ್ಥವಲ್ಲ; ಇದು ಸಹ ಒಂದು ಸಹಜ ಸ್ಪಷ್ಟ ಲೈಂಗಿಕ ಆಕರ್ಷಣೆಯ ಪ್ರಕಾರವೇ ಆಗಿದೆ.

4. ಪ್ಯಾನ್‌ಸೆಕ್ಷುವಲ್‌ (Pansexual): ಪ್ಯಾನ್‌ಸೆಕ್ಷುವಲ್‌ ವ್ಯಕ್ತಿಗಳಿಗೆ ಲಿಂಗ ಮುಖ್ಯವಾಗುವುದಿಲ್ಲ. ಪುರುಷ, ಮಹಿಳೆ, ಟ್ರಾನ್ಸ್‌ಜೆಂಡರ್ ಅಥವಾ ಲಿಂಗ ಗುರುತು ನಿರ್ಧಾರಕ್ಕೆ ಒಳಪಡದ ವ್ಯಕ್ತಿಗಳ ಮೇಲೂ ಆಕರ್ಷಣೆ ಉಂಟಾಗಬಹುದು. ಇಲ್ಲಿ ಆಕರ್ಷಣೆಗೆ ಕಾರಣ ಲಿಂಗವಲ್ಲ, ವ್ಯಕ್ತಿಯ ಸ್ವಭಾವ, ಭಾವನೆ ಮತ್ತು ವ್ಯಕ್ತಿತ್ವ.

5. ಏಸೆಕ್ಷುವಲ್‌ (Asexual): ಏಸೆಕ್ಷುವಲ್‌ ವ್ಯಕ್ತಿಗಳಿಗೆ ಲೈಂಗಿಕ ಆಕರ್ಷಣೆ ಇರುವುದಿಲ್ಲ ಅಥವಾ ಅತ್ಯಂತ ಕಡಿಮೆ ಇರಬಹುದು. ಆದರೆ ಇದರಿಂದ ಅವರು ಭಾವನಾತ್ಮಕ ಬಂಧ, ಸ್ನೇಹ ಅಥವಾ ಪ್ರೇಮವನ್ನು ಅನುಭವಿಸುವುದಿಲ್ಲ ಎಂದಲ್ಲ. ಲೈಂಗಿಕ ಆಸಕ್ತಿ ಇರುವುದು ಹೇಗೆ ಸಹಜ ಮಾನವ ಅನುಭವದ ರೂಪವೆಂದು ಒಪ್ಪಿಕೊಳ್ಳುತ್ತೇವೋ, ಹಾಗೆ ಲೈಂಗಿಕ ಆಸಕ್ತಿ ಇಲ್ಲದಿರುವುದೂ ಸಹಜ ಮಾನವ ಅನುಭವದ ಒಂದು ರೂಪವೇ ಎಂದು ತಜ್ಞರು ಹೇಳುತ್ತಾರೆ.

6. ಗ್ರೇಸೆಕ್ಷುವಲ್‌ / ಡೆಮಿಸೆಕ್ಷುವಲ್‌ (Gray sexual/Demi sexual): ಕೆಲವರು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಲೈಂಗಿಕ ಆಕರ್ಷಣೆ ಅನುಭವಿಸುತ್ತಾರೆ; ಇವರನ್ನು ಗ್ರೇಸೆಕ್ಷುವಲ್‌ ಎಂದು ಕರೆಯಲಾಗುತ್ತದೆ. ಇನ್ನು ಡೆಮಿಸೆಕ್ಷುವಲ್‌ ವ್ಯಕ್ತಿಗಳಿಗೆ ಬಲವಾದ ಭಾವನಾತ್ಮಕ ಸಂಬಂಧ ನಿರ್ಮಾಣವಾದ ಬಳಿಕ ಮಾತ್ರ ಲೈಂಗಿಕ ಆಕರ್ಷಣೆ ಉಂಟಾಗುತ್ತದೆ.

ಈ ಕುರಿತು ಸಾಮಾಜಿಕ ಹೋರಾಟಗಾರ್ತಿ, ಲಿಂಗತ್ವ ಅಲ್ಪಸಂಖ್ಯಾತೆ ಸೌಮ್ಯ ಪ್ರತಿಕ್ರಿಯಿಸಿ, “ಸಮಾಜದಲ್ಲಿ ಲೈಂಗಿಕ ಗುರುತು ಮತ್ತು ಲೈಂಗಿಕ ಆಸಕ್ತಿಗಳ ಕುರಿತು ಇನ್ನೂ ಸಮರ್ಪಕ ಅರಿವು ಮೂಡಿಲ್ಲ. ಯಾವ ಲಿಂಗದಲ್ಲಿ ಹುಟ್ಟುವರೋ ಅದೇ ಲಿಂಗದಲ್ಲಿ ಬದುಕಬೇಕು ಎಂಬ ಪಿತೃಪ್ರಧಾನ ಕಟ್ಟುಪಾಡು ಸಮಾಜದಲ್ಲಿ ಬೇರೂರಿದೆ. ಇದು ಈ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನೇ ಅಂಚಿಗೆ ತಳ್ಳಿದೆ. ಸಂವಿಧಾನವು ಸಮಾನ ಹಕ್ಕುಗಳನ್ನು ನೀಡಿದರೂ, ಲೈಂಗಿಕ ಅಲ್ಪಸಂಖ್ಯಾತರು ಕುಟುಂಬ, ಶಾಲೆ, ಸ್ನೇಹವಲಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯ ಮತ್ತು ಶೋಷಣೆಯನ್ನು ಎದುರಿಸುತ್ತಲೇ ಇದ್ದಾರೆ. ಆಕರ್ಷಣೆ ಯಾರಿಗೆ ಯಾರ ಮೇಲೆ ಬೇಕಾದರೂ ಆಗಬಹುದು ಅದು ಪ್ರಕೃತಿ ಸಹಜವೇ. ಆದರೆ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇನ್ನೂ ಬಂದಿಲ್ಲ. ಅದು ಬಂದಾಗ ನಿಜವಾದ ಕ್ರಾಂತಿಯೇ ಆಗುತ್ತದೆ. ಲೈಂಗಿಕ ಆಕರ್ಷಣೆಯನ್ನು ಅಪರಾಧ ಅಥವಾ ಪಾಪದಂತೆ ಬಿಂಬಿಸುವ ಮನಸ್ಥಿತಿಗಳಿಂದ ಬೇಸತ್ತ ಹಲವರು ಮಾನಸಿಕ ಒತ್ತಡ ಮತ್ತು ಆತ್ಮಹತ್ಯೆಯತ್ತ ದೂಡಲ್ಪಡುತ್ತಿದ್ದಾರೆ. ಶಾಲೆ ಮತ್ತು ಮನೆಗಳಲ್ಲಿ ಈ ಕುರಿತು ಸಂವೇದನಾಶೀಲ ಶಿಕ್ಷಣದ ಕೊರತೆಯೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇಂದಿಗೂ ಟ್ರಾನ್ಸ್‌ಜೆಂಡರ್ ಸಮುದಾಯ ಕನಿಷ್ಠ ಸೌಲಭ್ಯಗಳಿಂದಲೂ ವಂಚಿತವಾಗಿದೆ. ಬಾಡಿಗೆ ಮನೆ ಪಡೆಯುವುದೂ ದುಸ್ತರವಾಗಿದೆ. ಕಾನೂನು ಬದಲಾವಣೆಗಳಿಗಿಂತ ಹೆಚ್ಚಾಗಿ ಸಮಾಜದಲ್ಲಿನ ಜನರ ಮನಸ್ಥಿತಿ ಬದಲಾಗದ ವಿನಃ ನಿಜವಾದ ಬದಲಾವಣೆ ಸಾಧ್ಯವಿಲ್ಲ” ಎಂದರು.

ಇಂದು ಲಿಂಗ ವೈರುಧ್ಯಗಳನ್ನು, ಲೈಂಗಿಕ ಆಸಕ್ತಿಯ ವೈರುಧ್ಯಗಳನ್ನು ಅಸಹಜ, ಅಪರಾಧ, ಸ್ವಇಚ್ಛೆಯಿಂದ ಮಾಡಿಕೊಳ್ಳುವ ಅಸಹ್ಯ, ಸಮಾಜಕ್ಕೆ ಮಾರಕ ಇನ್ನೂ ಅನೇಕಾನೇಕ ಅಮಾನವೀಯ ರೀತಿಯಲ್ಲಿ ಅರ್ಥೈಸುವ ನಾವು ನಮ್ಮ ಪುರಾಣಗಳ ಇಂಥವೇ ಸಾಕಷ್ಟು ಪಾತ್ರಗಳನ್ನ, ಪ್ರಕಾರಗಳನ್ನ ಸಹಜವಾಗಿಯೇ ಒಪ್ಪಿಕೊಂಡಿದ್ದೇವೆ.

ಶಿವನ ಅರ್ಧನಾರೀಶ್ವರ ತತ್ವ ಯಾರಿಗೆ ಗೊತ್ತಿಲ್ಲ? ಅರ್ಧನಾರೀಶ್ವರ ಎಂಬುದು ಹಿಂದೂ ತತ್ವಚಿಂತನೆಯಲ್ಲಿನ ಅತ್ಯಂತ ಆಳವಾದ ಹಾಗೂ ಪ್ರಗತಿಪರ ಕಲ್ಪನೆ. ಇಲ್ಲಿ ಶಿವ ಮತ್ತು ಶಕ್ತಿ ಒಟ್ಟಾಗಿ ಒಂದೇ ದೇಹದಲ್ಲಿ ಅರ್ಧರ್ಧ ರೂಪದಲ್ಲಿ ವ್ಯಕ್ತವಾಗುತ್ತಾರೆ. ಒಂದು ಭಾಗ ಪುರುಷ (ಶಿವ), ಇನ್ನೊಂದು ಭಾಗ ಸ್ತ್ರೀ (ಪಾರ್ವತಿ). ಈ ರೂಪದ ಮೂಲಕ ಪುರಾಣಗಳು ಸೃಷ್ಟಿ, ಚಲನೆ ಮತ್ತು ಸಮತೋಲನಕ್ಕೆ ಪುರುಷ ಮತ್ತು ಸ್ತ್ರೀ ಇಬ್ಬರೂ ಅನಿವಾರ್ಯ; ಒಂದಿಲ್ಲದೆ ಮತ್ತೊಂದು ಅಪೂರ್ಣ, ಇದು ಜೀವನದ ತತ್ವವೂ ಹೌದು ಎನ್ನುವುದನ್ನು ಸಾರುತ್ತವೆ. ಲಿಂಗ ಎಂಬುದು ದೇಹ ಮತ್ತು ಮನಸುಗಳನ್ನು ಬಲವಾಗಿ ವಿಭಜಿಸಲ್ಪಟ್ಟ ಅಂಶವಲ್ಲ. ಅದು ಪರಸ್ಪರ ಪೂರಕ ಶಕ್ತಿಗಳ ಸಮನ್ವಯ. ಸೃಷ್ಟಿ (ಶಕ್ತಿ) ಮತ್ತು ಚೇತನ (ಶಿವ) ಒಂದಾಗಿದ್ದಾಗಲೇ ಜಗತ್ತು ಮುಂದುವರಿಯುತ್ತದೆ ಎಂಬ ಸಂದೇಶವನ್ನು ಅರ್ಧನಾರೀಶ್ವರ ತತ್ವ ನೀಡುತ್ತದೆ. ಈ ಪರಿಕಲ್ಪನೆ ಲಿಂಗ ಸಮಾನತೆ, ಪರಸ್ಪರ ಗೌರವ ಮತ್ತು ಮಾನವ ಗುರುತುಗಳ ಬಹುಮುಖತೆಯ ಸಂಕೇತವಾಗಿದೆ.

ಮೋಹಿನಿ-ವಿಷ್ಣು ಪ್ರಸಂಗ

ಮೋಹಿನಿ ಎಂಬುದು ವಿಷ್ಣುವಿನ ಸ್ತ್ರೀ ಅವತಾರ. ಅಮೃತ ಮಂಥನದ ಸಂದರ್ಭದಲ್ಲಿ ದೇವತೆಗಳನ್ನು ರಕ್ಷಿಸಿ, ಅಸುರರನ್ನು ಮೋಸಗೊಳಿಸಲು ವಿಷ್ಣು ಈ ಸ್ತ್ರೀ ರೂಪವನ್ನು ಧರಿಸುತ್ತಾನೆ. ಮೋಹಿನಿಯ ಸೌಂದರ್ಯ, ಆಕರ್ಷಣೆ ಮತ್ತು ಬುದ್ಧಿವಂತಿಕೆ ಎಷ್ಟೊಂದು ಪ್ರಬಲವಾಗಿರುತ್ತದೆ ಎಂದರೆ, ಅಸುರರು ತಾವೇ ಅಮೃತವನ್ನು ಕಳೆದುಕೊಂಡು ಸುರರಿಗೆ ಒಪ್ಪಿಸುವಂತಾಗಿಬಿಡುತ್ತದೆ. ಈ ಕಥೆಯಲ್ಲಿ ಆಕರ್ಷಣೆ ಎನ್ನುವುದು ಮನಸ್ಸು ಮತ್ತು ಚೇತನ ಎರಡರ ಮೇಲೆ ಬೀರುವ ಶಕ್ತಿಯನ್ನೂ ಸೂಚಿಸುತ್ತದೆ.

ಮೋಹಿನಿಯ ರೂಪಕ್ಕೆ ಶಿವನೇ ಆಕರ್ಷಿತನಾಗುತ್ತಾನೆ. ಪುರುಷ ದೇವನೊಬ್ಬ ಮತ್ತೊಂದು ಪುರುಷ ದೇವನ ಸ್ತ್ರೀ ರೂಪಕ್ಕೆ ಆಕರ್ಷಿತನಾಗುವುದು, ಲೈಂಗಿಕ ಆಕರ್ಷಣೆ ದೇಹಕ್ಕಿಂತ ರೂಪ, ಶಕ್ತಿ ಮತ್ತು ಚೇತನಕ್ಕೆ ಸಂಬಂಧಿಸಿದೆ ಎಂಬುದನ್ನು ತೋರಿಸುತ್ತದೆ. ಈ ಮೂಲಕ ಮೋಹಿನಿ ಕಥೆ, ಲಿಂಗ ವೈವಿಧ್ಯ ಮತ್ತು ಆಕರ್ಷಣೆಯ ಸಂಕೀರ್ಣತೆಯನ್ನು ಸಹಜವಾಗಿ ಒಪ್ಪಿಕೊಂಡಿರುವ ಪುರಾತನ ಭಾರತೀಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ಹರಿ-ಹರ ಸಂಯೋಗದಿಂದ ಅಯ್ಯಪ್ಪನ ಜನನ

ಅಮೃತ ಮಂಥನದ ನಂತರ ವಿಷ್ಣು ಮೋಹಿನಿಯಾಗಿ ಅವತರಿಸಿದಾಗ, ಶಿವ ಆಕರ್ಷಿತನಾಗುತ್ತಾನೆ. ಶಿವ ಹಾಗೂ ಮೋಹಿನಿ ಸಂಯೋಗದಿಂದ ಅಯ್ಯಪ್ಪನ ಜನನವಾಗುತ್ತದೆ ಎಂದು ಹೇಳಲಾಗುತ್ತದೆ. ಅಯ್ಯಪ್ಪನನ್ನು ‘ಹರಿಹರ ಪುತ್ರ’ ಎಂದೂ ಕರೆಯಲಾಗುತ್ತದೆ. ಇದರಿಂದ ಪುರಾಣಗಳು ಲಿಂಗ ಮಿತಿಗಳನ್ನು ಮೀರಿ ಸೃಷ್ಟಿ ಸಾಧ್ಯ ಎಂಬ ಸಂದೇಶ ನೀಡುತ್ತವೆ. ಭಾರತೀಯ ಪರಂಪರೆಯಲ್ಲಿ ಈ ಕಥೆಯನ್ನು ಅಸಹಜವೆಂದು ಕಂಡೇ ಇಲ್ಲ. ದೈವಿಕ ವೈವಿಧ್ಯದ ಸಹಜ ಅಭಿವ್ಯಕ್ತಿಯೆಂದು ಗೌರವದಿಂದ ಸ್ವೀಕರಿಸಲಾಗಿದೆ.

image 2026 02 16T184236.814

ಭಗೀರಥನ ಜನನ

ಪುರಾಣಗಳ ಪ್ರಕಾರ, ಸೂರ್ಯವಂಶದ ರಾಜ ದಿಲೀಪನಿಗೆ ಸಂತಾನ ಇರಲಿಲ್ಲ. ಅವರ ಮರಣಾನಂತರ, ಅವರ ಇಬ್ಬರು ಪತ್ನಿಯರು ದೈವಾನುಗ್ರಹದ ಮೂಲಕ ಸಂಯುಕ್ತವಾಗಿ ಒಂದು ಶಿಶುವನ್ನು ರೂಪಿಸುತ್ತಾರೆ. ಆ ಶಿಶುವೇ ಮುಂದೆ ಭಗೀರಥನಾಗಿ ಜನಿಸುತ್ತಾನೆ. ಈ ಕಥೆಯಲ್ಲಿ ಇಬ್ಬರು ಮಹಿಳೆಯರೂ ಮಾತೃತ್ವದ ಹೊಣೆ ಹೊತ್ತುಕೊಳ್ಳುತ್ತಾರೆ.

ಈ ಕಥೆ ಸಂತಾನೋತ್ಪತ್ತಿ ಮತ್ತು ಕುಟುಂಬ ರಚನೆ ಒಂದೇ ಮಾದರಿಯಲ್ಲಿ ಇರಬೇಕೆಂದಿಲ್ಲ ಎಂಬ ಸಂಕೇತಾತ್ಮಕ ಸಂದೇಶ ನೀಡುತ್ತದೆ. ಇದು ಮಹಿಳೆಯರ ಪರಸ್ಪರ ಸಹಕಾರ, ಮಾತೃತ್ವದ ವೈವಿಧ್ಯ ಮತ್ತು ಸಂಬಂಧಗಳ ವಿಭಿನ್ನ ರೂಪಗಳನ್ನು ಪುರಾತನ ಪರಂಪರೆಯಲ್ಲೇ ಒಪ್ಪಿಕೊಂಡಿರುವುದನ್ನು ತೋರಿಸುತ್ತದೆ.

ಭಗೀರತ

ಇಳಾ/ಸುದ್ಯುಮ್ನನ ಲಿಂಗ ಬದಲಾವಣೆ

ಪುರಾಣಗಳ ಪ್ರಕಾರ, ರಾಜ ಸುದ್ಯುಮ್ನ ಒಂದು ಶಾಪದ ಪರಿಣಾಮವಾಗಿ ಕೆಲ ಕಾಲ ಮಹಿಳೆಯಾಗಿ ಇಳಾ ಆಗಿ ಬದುಕುತ್ತಾಳೆ. ಮತ್ತೆ ಪುರುಷ(ಸುದ್ಯುಮ್ನ)ನಾಗಿ ಪರಿವರ್ತನೆಗೊಳ್ಳುತ್ತಾನೆ. ಈ ಕಥೆಯು ಲಿಂಗ ಮತ್ತು ರೂಪಾಂತರದ ಪರಿಕಲ್ಪನೆಯನ್ನು ಪರಿಶೋಧಿಸುತ್ತದೆ. ಲಿಂಗ ಬದಲಾವಣೆ ತಾತ್ಕಾಲಿಕವಾಗಿದ್ದರೂ, ಜೀವನದ ಅನುಭವ, ಸಂಬಂಧಗಳು ಮತ್ತು ಆಕರ್ಷಣೆಯ ದಿಕ್ಕು ಕೂಡ ಅದರೊಂದಿಗೆ ಬದಲಾಗುತ್ತದೆ. ಪುರುಷನಾಗಿರುವಾಗ ಪುರುಷರಲ್ಲಿರುವ ಸಹಜವಾದ ಸಾಮಾಜಿಕ ಅನುಭವ ಪಡೆದು, ದಾಂಪತ್ಯ ಜೀವನ ನಡೆಸಿದರೆ, ಮಹಿಳೆಯಾದಾಗ ಸ್ತ್ರೀ ಅನುಭವಗಳನ್ನು ಸಂಪೂರ್ಣವಾಗಿ ಅನುಭವಿಸುತ್ತಾರೆ. ಈ ಕಥೆಯು ಲಿಂಗ ಬದಲಾವಣೆಯೊಂದಿಗೆ ವ್ಯಕ್ತಿಯ ಗುರುತು ಮಾತ್ರವಲ್ಲ, ಭಾವನಾತ್ಮಕ ಮತ್ತು ಲೈಂಗಿಕ ಆಕರ್ಷಣೆಯ ಸ್ವರೂಪವೂ ಬದಲಾಗಬಹುದು ಎಂಬ ಆಳವಾದ ತಾತ್ವಿಕ ಅರ್ಥವನ್ನು ಹೊಂದಿದೆ.

WhatsApp Image 2026 02 16 at 6.54.47 PM

ಇದನ್ನೂ ಓದಿ: AI ಶೃಂಗಸಭೆ-2026 | ಅವಕಾಶ-ಅಪಾಯಗಳ ಜಾಗತಿಕ ಚರ್ಚೆ

ಈ ಪುರಾಣ ಕಥೆಗಳಲ್ಲಿರುವ ಘಟನೆಗಳು ಇಂದಿನ ವೈಜ್ಞಾನಿಕ ತರ್ಕಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆಯೇ ಎಂಬ ತರ್ಕಬದ್ಧ ಪ್ರಶ್ನೆ ಸಹಜವಾಗಿ ಉದ್ಭವಿಸಬಹುದು. ಆದರೆ ಅವುಗಳು ಹೇಳಿರುವ ಸಂದೇಶ ಮಾತ್ರ ಸ್ಪಷ್ಟವಾಗಿದೆ. ಮಾನವ ಗುರುತು, ಲಿಂಗ ಮತ್ತು ಆಕರ್ಷಣೆಗಳು ಒಂದೇ ರೂಪಕ್ಕೆ ಸೀಮಿತವಲ್ಲ, ಅಥವಾ ಸಾಮಾಜಿಕ ಕಟ್ಟುಪಾಡಿಗೆ ಜೋತುಬೀಳದೆ ನೀನು ನೀನಾಗಿರು ಎಂಬ ಅಂಶವನ್ನು ಸ್ಪಷ್ಟಪಡಿಸಿವೆ. ಲಿಂಗದ ಹರಿವು, ದ್ವಂದ್ವವಲ್ಲದ ಗುರುತು, ಆಕರ್ಷಣೆಯ ವೈವಿಧ್ಯ… ಇವೆಲ್ಲವೂ ಇಂದಿನ ಜೈವಿಕ, ಮಾನಸಿಕ ಮತ್ತು ಸಾಮಾಜಿಕ ಅಧ್ಯಯನಗಳು ಒಪ್ಪಿಕೊಳ್ಳುತ್ತಿರುವ ಅಂಶಗಳೇ. ಅಂದಿನ ಸಮಾಜವು ಇವನ್ನು ‘ವಿಚಲನ’ ಅಥವಾ ʼವಿಚಿತ್ರʼ ಎಂದು ತಳ್ಳಿಹಾಕದೆ, ಕಥೆಗಳ ಮೂಲಕ ಸಹಜವಾಗಿ ಅಳವಡಿಸಿಕೊಂಡಿತ್ತು ಎಂಬುದೇ ಗಮನಾರ್ಹ.

ಇಂತಹ ಪರಂಪರೆಯ ಹಿನ್ನೆಲೆ ಹೊಂದಿರುವ ನಾವು, ಇಂದಿನ ಮಾನವ ವೈವಿಧ್ಯತೆಯನ್ನು ಒಪ್ಪಿಕೊಳ್ಳಲು ಹಿಂಜರಿಯುವುದು ಒಂದು ವೈರುಧ್ಯ. ಪುರಾಣಗಳನ್ನು ಗೌರವಿಸುವ ಸಮಾಜ, ಅವು ಸಾರುವ ಮಾನವೀಯತೆಯನ್ನು ಮರೆಯಬಾರದು. ಇಂದಿನ ಕಾಲದಲ್ಲಿ ಜೀವಂತ ವ್ಯಕ್ತಿಗಳಾಗಿ ನಮ್ಮ ನಡುವೆ ಬದುಕುತ್ತಿರುವ ವಿಭಿನ್ನ ಲಿಂಗ ಮತ್ತು ಲೈಂಗಿಕ ಗುರುತಿನ ಜನರನ್ನು ಒಪ್ಪಿಕೊಳ್ಳುವುದು ಸಂಸ್ಕೃತಿಗೆ ವಿರುದ್ಧವಲ್ಲ; ಅದು ಅದರ ಸಹಜ ಮುಂದುವರಿಕೆ. ಅರ್ಥಾತ್, ವೈವಿಧ್ಯತೆಯನ್ನು ಅಂದು ಕಥೆಗಳ ಮೂಲಕ ಒಪ್ಪಿಕೊಂಡಿದ್ದರೆ, ಇಂದು ಬದುಕಿನ ಮೂಲಕ ಒಪ್ಪಿಕೊಳ್ಳುವುದು ನಮ್ಮ ಸಾಮಾಜಿಕ ಜವಾಬ್ದಾರಿ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...