ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ನಿಜಮುಖ 2024ರಲ್ಲಿ ಸಂಪೂರ್ಣ ಅನಾವರಣವಾಯಿತು. ದೇಶ ಹಿಂದೆಂದೂ ಕಂಡಿರದಷ್ಟು ದ್ವೇಷದ ಮಾತುಗಳನ್ನು ಕೇಳಬೇಕಾಯಿತು. ಇದರ ಮುಂದಾಳತ್ವವನ್ನು ವಹಿಸಿದ್ದು ನೇರವಾಗಿ ಈ ದೇಶದ ಪ್ರಧಾನಿ. ಸಾರ್ವತ್ರಿಕ ಚುನಾವಣೆ ಗೆಲ್ಲಲೆಂದು ಅವರು ಮುಖ್ಯವಾಗಿ ಬಳಸಿದ ಅಜೆಂಡಾ ಮುಸ್ಲಿಂ ದ್ವೇಷ. ಅಭಿವೃದ್ಧಿ ವಿಚಾರಗಳಿಗೆ ತಿಲಾಂಜಲಿ ಇತ್ತು, ಅವರು ಹೊರಟಿದ್ದು ಕೋಮು ಧ್ರುವೀಕರಣದ ಬೆನ್ನೇರಿ.
“ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಅವರು (ಕಾಂಗ್ರೆಸ್ ಪಕ್ಷದವರು) ಅಧಿಕಾರದಲ್ಲಿದ್ದಾಗ ಹೇಳಿದ್ದರು. ಇದರರ್ಥ ನಿಮ್ಮ ಸಂಪತ್ತು ಸಂಗ್ರಹಿಸಿ ಹೆಚ್ಚು ಮಕ್ಕಳನ್ನು ಹೆರುವವರಿಗೆ ನೀಡುತ್ತಾರೆ. ನುಸುಳುಕೋರರಿಗೆ ಹಂಚುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನುಸುಳುಕೋರರಿಗೆ ನೀಡಲು ಬಯಸುತ್ತೀರಾ? ಆದರೆ ನಮ್ಮ ತಾಯಂದಿರ, ಸಹೋದರಿಯರ ಮಂಗಳಸೂತ್ರವನ್ನು ಕಸಿಯಲು ಈ ನಗರ ನಕ್ಸಲರು ಹೊರಟಿದ್ದಾರೆ”- ಇವು ಪ್ರಧಾನಿ ಮೋದಿಯವರ ಆಣಿಮುತ್ತುಗಳು.
2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 21ರಂದು ರಾಜಸ್ಥಾನದ ಬನ್ಸ್‌ವಾಡದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮೋದಿ ಈ ನಂಜಿನ ಮಾತುಗಳನ್ನು ಆಡಿದ್ದರು. ನಂಜಿನ ನುಡಿಗಳನ್ನು ಉಗುಳುವುದು ಅವರಿಗೆ ಹೊಸದೇನೂ ಅಲ್ಲ. ಅವರ ಇಡೀ ರಾಜಕೀಯ ಬದುಕೇ ನಂಜಿನ ನುಡಿಗಳು, ದ್ವೇಷದ ಬೀಜಗಳನ್ನು ಜನಮನದಲ್ಲಿ ಬಿತ್ತುವುದರಲ್ಲಿ ಕಳೆದಿದೆ. 2024ರ ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೂ ಅವರ ದ್ವೇಷ ಭಾಷಣ ಹೆಚ್ಚಾಯಿತೇ ಹೊರತು, ಕಿಂಚಿತ್ತೂ ಕಡಿಮೆಯಾಗಲಿಲ್ಲ. ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತದಲ್ಲಿ ನಡೆದ ಚುನಾವಣೆ ಮುಗಿಯುವ ಹೊತ್ತಿಗೆ ದೇಶ ಹಿಂದೆಂದೂ ಕಂಡಿರದಷ್ಟು ದಟ್ಟ ದ್ವೇಷದ ಭಾಷಣಗಳನ್ನು ಕೇಳಿಸಿಕೊಳ್ಳಬೇಕಾಯಿತು.
ಮೇ 2 ರಂದು ಗುಜರಾತ್‌ನ ಆನಂದ್‌ನಲ್ಲಿ ಮಾತನಾಡುತ್ತಾ ಮೋದಿ, ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’, ‘ವೋಟ್ ಜಿಹಾದ್’ ಎಂಬ ಪದಗಳನ್ನು ಬಳಸುತ್ತಾರೆ. “ನಾನು ಲ್ಯಾಂಡ್ ಜಿಹಾದ್ ಮತ್ತು ಲವ್ ಜಿಹಾದ್ ಬಗ್ಗೆ ಕೇಳಿದ್ದೆ, ಆದರೆ ಈಗ ನನಗೆ ವೋಟ್ ಜಿಹಾದ್ ಬಗ್ಗೆ ಆತಂಕವಾಗುತ್ತಿದೆ” ಎನ್ನುತ್ತಾರೆ.
ಇದನ್ನೂ ಓದಿರಿ: ಆಸಾರಾಂ ಬಾಪು: ಸಂತನೋ, ಪಾಪಿಯೋ?
ಮೇ 7ರಂದು ಮಹಾರಾಷ್ಟ್ರದ ಬೀಡ್‌ನಲ್ಲಿ ಮೋದಿಯವರು, “ಪ್ರತಿಪಕ್ಷಗಳು ಎಲ್ಲ ಮೀಸಲಾತಿಗಳನ್ನು ಕಿತ್ತು ಮುಸ್ಲಿಮರಿಗೆ ನೀಡಬೇಕೆಂದು ಹೇಳುತ್ತಿವೆ. ಇದು ನಮ್ಮ ದೇಶದ ದಲಿತರು ಮತ್ತು ಒಬಿಸಿಗಳಿಗೆ ಮಾಡುತ್ತಿರುವ ಅನ್ಯಾಯ” ಎಂದು ಹಸಿಹಸಿ ಸುಳ್ಳನ್ನು ಹೇಳುತ್ತಾರೆ. ಆ ಮೂಲಕ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಮುಸ್ಲಿಮರ ವಿರುದ್ಧ ಪ್ರಚೋದಿಸಲು ಯತ್ನಿಸುತ್ತಾರೆ.
ಮೇ 14ರಂದು ಜಾರ್ಖಂಡ್‌ನಲ್ಲಿ ಮೋದಿಯವರು ಮುಸ್ಲಿಂ ವಿರೋಧಿ ಮಾತುಗಳನ್ನು ಪುನರುಚ್ಚರಿಸುತ್ತಾರೆ. “ಇಂದು ಜಾರ್ಖಂಡ್‌ನಲ್ಲಿ ನಮ್ಮ ಧಾರ್ಮಿಕ ಶ್ರದ್ಧೆ ಮತ್ತು ಆಸ್ತಿಕ ನಂಬಿಕೆ ಸಂಪ್ರದಾಯಗಳನ್ನು ಆಚರಿಸುವುದು ಕಷ್ಟಕರವಾಗಿದೆ. ನಮ್ಮ ದೇವರುಗಳ ವಿಗ್ರಹಗಳನ್ನು ನಾಶಪಡಿಸಲಾಗುತ್ತಿದೆ. ಜಿಹಾದಿ ಮನಸ್ಥಿತಿ ಹೊಂದಿರುವ ನುಸುಳುಕೋರರು ಗುಂಪುಗೂಡಿ ದಾಳಿ ಮಾಡುತ್ತಿದ್ದಾರೆ. ಆದರೆ ಜಾರ್ಖಂಡ್ ಸರ್ಕಾರ ಸುಮ್ಮನೆ ನಿಂತು ನೋಡುತ್ತಿದೆ. ದೂರ ನಿಂತುಕೊಂಡೇ ನುಸುಳುಕೋರರನ್ನು ಬೆಂಬಲಿಸುತ್ತಿದೆ. ಈ ನುಸುಳುಕೋರರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಭದ್ರತೆಗೆ ಬೆದರಿಕೆ ಹಾಕಿದ್ದಾರೆ” ಎನ್ನುವ ಮೋದಿ, ಈ ದೇಶದ ಒಂದು ಸಮುದಾಯವನ್ನು ನುಸುಳುಕೋರರು (‘ಇನ್‌ಫಿಲ್‌ಟ್ರೇಟರ್’) ಎಂದು ನೇರವಾಗಿ ಜರಿಯುತ್ತಾರೆ.
ಮೇ 17ರಂದು ಹರಿಯಾಣದ ಸೋನಿಪತ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ, “ಒಂದು ಕಡೆ ವಿಕಾಸ [ಅಭಿವೃದ್ಧಿ] ಇದೆ, ಮತ್ತೊಂದೆಡೆ ವೋಟ್ ಜಿಹಾದ್ ಇದೆ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ? ಅಭಿವೃದ್ಧಿ ಅಥವಾ ವೋಟ್ ಜಿಹಾದ್? ಜಿಹಾದ್‌ಗೆ ಮತ ಹಾಕುವ ಜನರನ್ನು ಮೆಚ್ಚಿಸಲು, ಅವರು ರಾಮ ಮಂದಿರ ತೀರ್ಪನ್ನು ವಿಳಂಬ ಮಾಡುತ್ತಲೇ ಇದ್ದರು” ಎಂದು ಆಪಾದಿಸುತ್ತಾರೆ. ಇವೆಲ್ಲವೂ ಈ ದೇಶದ ಪ್ರಧಾನಿ ಮುಸಲ್ಮಾನರ ಕುರಿತು ಹೊಂದಿರುವ ಅಸಹನೆಗೆ ಹಿಡಿದ ಕೈಗನ್ನಡಿ.
2024ನೇ ಇಸವಿಯು ನಿರ್ಣಾಯಕ ಚುನಾವಣೆಯನ್ನು ಎದುರಿಸಿತು. ಈ ಅವಧಿಯಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ನಂತರದಲ್ಲಿ, ಅತಿಹೆಚ್ಚು ದ್ವೇಷ ಭಾಷಣ ಮಾಡಿದವರು ಈ ದೇಶದ ಪ್ರಧಾನಿಯೆಂದರೆ ನಂಬಲೇಬೇಕು. ರಾಷ್ಟ್ರದ ನಾಯಕತ್ವ ಹಿಡಿದ ವ್ಯಕ್ತಿಯೇ ಮುಂದೆ ನಿಂತು ಪ್ರಚೋದನೆಗಳನ್ನು ಮಾಡಿದ್ದರು. ಒಂದೇ ವರ್ಷದಲ್ಲಿ ದ್ವೇಷ ಭಾಷಣಗಳು ಊಹಿಸಲಾಗದಷ್ಟು ಮಟ್ಟವನ್ನು ತಲುಪಿದವು. ಹೌದು, ‘ಸೆಂಟರ್ ಫಾರ್ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್’ ಸಂಸ್ಥೆಯ ‘ದಿ ಇಂಡಿಯಾ ಹೇಟ್ ಲ್ಯಾಬ್’ ಹೊರಬಿಟ್ಟಿರುವ ‘Hate Speech Events in India – Report 2024’ ಹಲವು ಆಘಾತಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದೆ.

2024ರ ಏಪ್ರಿಲ್ 21ರಿಂದ ಮೇ 30ರವರೆಗೆ ಪ್ರಧಾನಿ ಮೋದಿ 63 ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ಏಪ್ರಿಲ್ 21ರಂದು ರಾಜಸ್ಥಾನದ ಬನ್ಸ್‌ವಾಡದಲ್ಲಿ ಮೋದಿ ಮಾಡಿದ ಭಾಷಣವು ಪ್ರಚೋದನಕಾರಿ ಭಾಷಣಕ್ಕೆ ಕುಖ್ಯಾತಿ ಪಡೆದರೂ, ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಭಾರತದಾದ್ಯಂತ ಇದೇ ರೀತಿಯ ದ್ವೇಷ ಭಾಷಣಗಳನ್ನು ಪುನರಾವರ್ತಿಸಿದ್ದರು. ಹೇಳಿಕೊಳ್ಳುವ ಅಭಿವೃದ್ಧಿ ಯಾವುದೂ ಇಲ್ಲವಾಗಿದ್ದಾಗ, ಮುಸ್ಲಿಂ ದ್ವೇಷವೇ ಚುನಾವಣೆಯ ಅಸ್ತ್ರವಾಗಿ ಹೊಮ್ಮಿತ್ತು. ಇದಕ್ಕಿಂತ ರಸಾತಳಕ್ಕೆ ಇಳಿಯಲು ಸಾಧ್ಯವಿಲ್ಲ ಎನ್ನುವಷ್ಟು ಮೋದಿ ಮತ್ತು ಬಿಜೆಪಿ ನಾಯಕರು ಬೆತ್ತಲಾಗಿದ್ದರು. ಏಪ್ರಿಲ್ 22 ಮತ್ತು ಜೂನ್ 1ರ ನಡುವೆ (43 ದಿನಗಳಲ್ಲಿ) ದೇಶಾದ್ಯಂತ 312 ದ್ವೇಷ ಭಾಷಣ ಘಟನೆಗಳು ದಾಖಲಾಗಿದ್ದವು.
ಇದನ್ನೂ ಓದಿರಿ: ಗ್ಯಾನೇಶ್ ಕುಮಾರ್ ಗುಪ್ತ ನೇಮಕ; ಪ್ರಪಾತದ ಅಂಚಿನಲ್ಲಿ ಚುನಾವಣಾ ಆಯೋಗ?
ಅತಿಹೆಚ್ಚು ದ್ವೇಷ ಭಾಷಣ ಮಾಡಿದ ರಾಜಕೀಯ ನಾಯಕರ ಪೈಕಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಮಾಡಿದ ದ್ವೇಷ ಭಾಷಣಗಳ ಸಂಖ್ಯೆ 86. ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ (67), ಕೇಂದ್ರ ಗೃಹ ಸಚಿವ ಅಮಿತ್ ಶಾ (58), ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ (36), ತೆಲಂಗಾಣ ಬಿಜೆಪಿ ಎಂಎಲ್‌ಎ ಟಿ.ರಾಜಾ (32), ಮಹಾರಾಷ್ಟ್ರ ಮೀನುಗಾರಿಕಾ ಸಚಿವ ನಿತೇಶ್ ರಾಣೆ (29), ಉತ್ತರಖಾಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (17), ದೆಹಲಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ (14), ಕೇಂದ್ರ ಸಚಿವ ಗಿರಿರಾಜ್ ಸಿಂಗ್ (10), ಮಹಾರಾಷ್ಟ್ರ ಬಿಜೆಪಿ ನಾಯಕರಾದ ನವನೀತ್ ರಾಣಾ (08) ಅವರು ಟಾಪ್ 10 ದ್ವೇಷ ಭಾಷಣಕಾರರ ಪಟ್ಟಿಯಲ್ಲಿದ್ದಾರೆ.

ಒಬ್ಬರಿಗಿಂತ ಒಬ್ಬರು, ಪೈಪೋಟಿಗೆ ಬಿದ್ದವರಂತೆ ನಂಜುಭರಿತ ಮಾತುಗಳನ್ನು ಆಡುತ್ತಿರುವವರೇ ಆಗಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಮಾತುಗಳನ್ನೇ ನೋಡಿ. ಆಗಸ್ಟ್ 4ರಂದು ಅಸ್ಸಾಂನಲ್ಲಿ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಶರ್ಮಾ, ಮುಸ್ಲಿಮರಿಗೆ ಭೂಮಿ ಮಾರುವುದನ್ನು ನಿರ್ಬಂಧಿಸುವ ಕಾನೂನನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ. “ನಿರ್ದಿಷ್ಟ ಸಮುದಾಯದ ಜನರು ಸ್ಥಳೀಯ ಜನರಿಂದ ಭೂಮಿಯನ್ನು ಕಸಿದುಕೊಂಡು ನಮ್ಮ ಸ್ವಂತ ಭೂಮಿಯಲ್ಲಿ ನಮ್ಮನ್ನು ಅಲ್ಪಸಂಖ್ಯಾತರನ್ನಾಗಿ ಮಾಡಿದರು. ಆ ನಿರ್ದಿಷ್ಟ ಸಮುದಾಯದ ಜನರಿಗೆ ಭೂಮಿ ಮಾರಾಟವನ್ನು ನಿರ್ಬಂಧಿಸುವ ಕಾನೂನನ್ನು ತರಲು ನಾವು ನಿರ್ಧರಿಸಿದ್ದೇವೆ” ಎನ್ನುತ್ತಾರೆ.
ಅಕ್ಟೋಬರ್ 2 ರಂದು ಹರಿಯಾಣ ರಾಜ್ಯದಲ್ಲಿ ಚುನಾವಣಾ ಭಾಷಣ ಮಾಡುವಾಗ ಶರ್ಮಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ, “ಬಾಬರ್‌ಗಳನ್ನು (ಮೊಘಲ್ ಚಕ್ರವರ್ತಿಯ ಹೆಸರನ್ನು ಆಧರಿಸಿ ಮುಸ್ಲಿಮರಿಗೆ ಅವಹೇಳನಕಾರಿಯಾಗಿ ನಿಂದಿಸಲು ಬಳಸುವ ಪದ ಬಾಬರ್‌ಗಳು) ಭಾರತದಿಂದ ಹೊರಹಾಕಬೇಕು” ಎಂದು ಕರೆ ನೀಡುತ್ತಾರೆ. ಭಾರತೀಯ ಮುಸ್ಲಿಮರ ವಿರುದ್ಧದ ಹಿಂಸಾಚಾರಕ್ಕೆ ಪ್ರಚೋದಿಸುತ್ತಾರೆ.
2024ನೇ ಇಸವಿಯಲ್ಲಿ ನಡೆದ ಲೋಕಸಭೆ ಮತ್ತು ನಾನಾ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರವು ದ್ವೇಷ ಭಾಷಣವನ್ನೇ ತಮ್ಮ ಮುಖ್ಯ ಅಜೆಂಡಾವಾಗಿ ಇಟ್ಟುಕೊಂಡಿದ್ದದ್ದು ಏರುಗತಿಯಲ್ಲಿನ ದ್ವೇಷ ಪ್ರಕರಣಗಳಿಂದ ಸ್ಪಷ್ಟವಾಗುತ್ತದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಶೇ. 74.4ರಷ್ಟು ದ್ವೇಷ ಭಾಷಣಗಳು ಹೆಚ್ಚಾಗಿರುವುದಾಗಿ ವರದಿ ದಾಖಲಿಸಿದೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ದ್ವೇಷ ಭಾಷಣ ಘಟನೆಗಳ ಸಂಖ್ಯೆ 2023ರಲ್ಲಿ 668 ಇತ್ತು. ಇದು 2024ರಲ್ಲಿ 1,165ಕ್ಕೆ ಏರಿಕೆ ಕಂಡಿತು.
ರಾಜಕೀಯ ರ್ಯಾಲಿಗಳು, ಚುನಾವಣಾ ಪ್ರಚಾರ ಕಾರ್ಯಕ್ರಮಗಳು, ಧಾರ್ಮಿಕ ಮೆರವಣಿಗೆಗಳು, ಪ್ರತಿಭಟನೆಗಳು, ರಾಷ್ಟ್ರೀಯವಾದಿ ಸಾಂಸ್ಕೃತಿಕ ಒಗ್ಗೂಡುವಿಕೆ ಹೆಸರಲ್ಲಿ ನಡೆದ ಸಭೆಗಳು- ದ್ವೇಷ ಭಾಷಣದ ವೇದಿಕೆಗಳಾಗಿದ್ದವು. ಇನ್ನೊಂದು ಗುಂಪಿನ ಜನರ ವಿರುದ್ಧ ಹಿಂಸೆಯನ್ನು ಪ್ರಚೋದಿಸುವುದೇ ಇವುಗಳ ಉದ್ದೇಶವಾಗಿತ್ತು. ಲೋಕಸಭೆ ಮತ್ತು ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದ್ವೇಷದ ಮಾತುಗಳು ತಾರಕ್ಕೇರಿದ್ದನ್ನು ಸ್ಪಷ್ಟವಾಗಿ ಗುರುತಿಸಬಹುದು.
2023ಕ್ಕಿಂತ 2024ರಲ್ಲಿ ಒಂದು ಪಲ್ಲಟ ಕಂಡು ಬಂದಿದೆ. ಅದೇನೆಂದರೆ ರಾಷ್ಟ್ರೀಯ ನಾಯಕರೆನಿಸಿಕೊಂಡ ಬಿಜೆಪಿಯ ನೇತಾರರೇ ಪ್ರಚೋದನಕಾರಿ ಭಾಷಣಗಳ ಸಾರಥ್ಯ ವಹಿಸಿದ್ದಾರೆ. ಈವರೆಗೆ ಹಿಂದುತ್ವದ ‘ಫ್ರಿಂಜ್ ಎಲಿಮೆಂಟ್’ಗಳು ಮುನ್ನಡೆಸುತ್ತಿದ್ದ ದ್ವೇಷದ ಬಂಡಿಯನ್ನು ನಾಯಕರೇ ನಿಂತು ಓಡಿಸಿದ್ದನ್ನು 2024ನೇ ಇಸವಿ ತೋರಿಸುತ್ತದೆ.
ಇದನ್ನೂ ಓದಿರಿ: ನಾಗಾ ಸಾಧುಗಳು ಬೆತ್ತಲಾಗುವುದೆಂದರೇನು?
2024ರ ಆಗಸ್ಟ್‌ನಲ್ಲಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾರ ಅಧಿಕಾರ ಪತನದ ಬಳಿಕ ಭಾರತದಲ್ಲಿ ಎರಡನೇ ಹಂತದ ದ್ವೇಷ ಭಾಷಣ ಉಚ್ಛ್ರಾಯ ಸ್ಥಿತಿಗೆ ಏರಿತು. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಯಾಗುತ್ತಿದೆ ಎಂದು ಭಾರತದ ಮುಸ್ಲಿಮರ ಮೇಲೆ ವಿಷಕಾರಿ ಮಾತುಗಳನ್ನಾಡಲಾಯಿತು. ಹಿಂದುತ್ವ ಗುಂಪುಗಳು, ಅವುಗಳ ಬೆಂಬಲಿಗರು, ಬಿಜೆಪಿ ಮುಖಂಡರು, ಮಾಧ್ಯಮಗಳು ಅರೆಬರೆ ಮಾಹಿತಿಯನ್ನು ಹಂಚಿ ದ್ವೇಷ ಬಿತ್ತನೆಯ ಮತ್ತೊಂದು ಉಳುಮೆ ಮಾಡಲಾರಂಭಿಸಿದರು.
ಮುಸ್ಲಿಮರ ವಿರುದ್ಧ ಬಿಜೆಪಿ ರಾಜಕಾರಣಿಗಳು, ಹಿಂದೂ ಧರ್ಮಗುರುಗಳು ನೀಡಿರುವ ಹೇಳಿಕೆಗಳು ಹೆಚ್ಚಾಗಿವೆ. ಹಿಂಸಾಚಾರಕ್ಕೆ ಪ್ರಚೋದನೆ, ಆಯುಧ ಕೈಗೆತ್ತುಕೊಳ್ಳಲು ಕರೆ, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಇಸ್ಲಾಂ ಧರ್ಮದ ಧಾರ್ಮಿಕ ಗುರುತುಗಳ ದ್ವಂಸ, ಮುಸ್ಲಿಮರ ಮನೆಗಳ ನೆಲಸಮದಂತಹ ಕೃತ್ಯಗಳನ್ನು ನಡೆಸಲು ಅವರು ಕರೆಗಳನ್ನು ನೀಡಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್ಯಾಪ್, ಯೂಟ್ಯೂಬ್, ಟೆಲಿಗ್ರಾಮ್, ಎಕ್ಸ್ (ಟ್ವಿಟರ್)- ಮೊದಲಾದ ಸಾಮಾಜಿಕ ಮಾಧ್ಯಮಗಳನ್ನು ದ್ವೇಷಕಾರಲು ಶಸಕ್ತವಾಗಿ ಬಳಸಿಕೊಳ್ಳಲಾಗಿದೆ.

2024ರಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ 1,165 ವೈಯಕ್ತಿಕ ದ್ವೇಷ ಭಾಷಣಗಳ ಪೈಕಿ, 995 ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲೇ ಸಿಕ್ಕಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಮೊದಲು ಅಪ್‌ಲೋಡ್ ಮಾಡಲಾಗಿದೆ ಅಥವಾ ನೇರ ಪ್ರಸಾರ ಮಾಡಲಾಗಿದೆ. ಫೇಸ್‌ಬುಕ್ ಮತ್ತು ಯೂಟ್ಯೂಬ್ – ದ್ವೇಷ ಭಾಷಣ ಪ್ರಸಾರಕ್ಕೆ ಪ್ರಮುಖ ವೇದಿಕೆಗಳಾಗಿ ಬಳಕೆಯಾಗಿವೆ. ಫೇಸ್‌ಬುಕ್‌ನಲ್ಲಿ 495 ದ್ವೇಷ ಭಾಷಣ ವಿಡಿಯೊಗಳಿದ್ದರೆ, 211 ವಿಡಿಯೊಗಳು ಯೂಟ್ಯೂಬ್‌ನಲ್ಲಿ ಹಂಚಿಕೆಯಾಗಿವೆ. ಗಮನಿಸಬೇಕಾದ ಅಂಶವೆಂದರೆ ಹಿರಿಯ ಬಿಜೆಪಿ ನಾಯಕರು (ಮುಖ್ಯವಾಗಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ) 266 ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ಅವುಗಳನ್ನು ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಮತ್ತು ರಾಜಕೀಯ ನಾಯಕರ ಖಾತೆಗಳ ಮೂಲಕ ಏಕಕಾಲದಲ್ಲಿ (ಯೂಟ್ಯೂಬ್, ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ) ನೇರ ಪ್ರಸಾರ ಮಾಡಲಾಗಿದೆ.
ಸಂಶೋಧನೆಯಲ್ಲಿ ಪತ್ತೆಯಾದ ಪ್ರಮುಖ ಅಂಶಗಳು
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ 20 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,165 ದ್ವೇಷ ಭಾಷಣ ಕಾರ್ಯಕ್ರಮಗಳು ಮುಸ್ಲಿಂ, ಕ್ರಿಶ್ಚಿಯನ್ನರನ್ನು ಟಾರ್ಗೆಟ್ ಮಾಡಿ ನಡೆದಿವೆ. ದಿನಕ್ಕೆ ಸರಾಸರಿ ಮೂರು ಕಾರ್ಯಕ್ರಮಗಳು ಆಯೋಜನೆಯಾಗಿವೆ. ಅದರಲ್ಲಿ ಶೇ. 98.5ರಷ್ಟು ಭಾಷಣ (1050) ಮುಸ್ಲಿಮರನ್ನು, ಶೇ. 9.9ರಷ್ಟು ಭಾಷಣ (115) ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಇಬ್ಬರನ್ನೂ ಸೇರಿಸಿ ನಡೆಸಲಾಗಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ 79.9%ರಷ್ಟು ದ್ವೇಷ ಭಾಷಣಗಳು ಜರುಗಿವೆ. ಮೊದಲ ಸ್ಥಾನದಲ್ಲಿ ಉತ್ತರ ಪ್ರದೇಶ (242), ನಂತರ ಮಹಾರಾಷ್ಟ್ರ (210), ಮಧ್ಯಪ್ರದೇಶ (98) ರಾಜ್ಯಗಳಿವೆ.
ಶೇ.29.2ರಷ್ಟು ದ್ವೇಷ ಭಾಷಣ ಕಾರ್ಯಕ್ರಮಗಳು ಬಿಜೆಪಿಯಿಂದಲೇ ಜರುಗಿದ್ದರೆ ಶೇ. 58.8ರಷ್ಟು ಕಾರ್ಯಕ್ರಮಗಳು ವಿಶ್ವ ಹಿಂದೂ ಪರಿಷತ್, ಬಜರಂಗದಳ, ಸಕಾಲ್ ಹಿಂದೂ ಸಮಾಜ್, ದುರ್ಗಾ ವಾಹಿನಿಯಂತಹ ಸಂಘಪರಿವಾರದ ಶಾಖೆಗಳಿಂದ (ಆರ್‌ಎಸ್‌ಎಸ್) ಜರುಗಿವೆ.
ಶೇ.32ರಷ್ಟು ದ್ವೇಷ ಭಾಷಣಗಳು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಇದ್ದಾಗಲೇ ಜರುಗಿವೆ. ಶೇ. 9.8ರಷ್ಟು ದ್ವೇಷ ಭಾಷಣಗಳ ಪಾಲು ಹಿಂದುತ್ವ ಧರ್ಮಗುರುಗಳೆನಿಸಿಕೊಂಡ ಮಹಾಂತ್ ರಾಜುದಾಸ್, ಯತಿ ನರಸಿಂಗಾನಂದ, ಸಾಧ್ವಿ ಸರಸ್ವತಿಯರದ್ದಾಗಿದೆ.
ಇದನ್ನೂ ಓದಿರಿ: ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!
ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಪಾಪುಲೇಷನ್ ಜಿಹಾದ್, ವೋಟ್ ಜಿಹಾದ್ ರೀತಿಯ ಆರೋಪಗಳನ್ನು ಮಾಡಿ ಜನರನ್ನು ಪ್ರಚೋದಿಸಿರುವುದು ಶೇ. 49.9ರಷ್ಟು ಹೆಚ್ಚಿದೆ.
ಹಿಂದುತ್ವ ಗುಂಪಿನ ಕಲ್ಪಿತ ‘ಜಿಹಾದ್’ ಥಿಯರಿಗೆ ಎಲ್ಲೆಗಳೇ ಇಲ್ಲ. ಹಲವು ರೀತಿಯ ಜಿಹಾದ್‌ಗಳನ್ನು ಹಿಂದುತ್ವದ ಗುಂಪುಗಳು ಮತ್ತು ಬಿಜೆಪಿ ಹುಟ್ಟಿಹಾಕಿರುವುದನ್ನು ವರದಿ ಸರಣಿಯಾಗಿ ಪಟ್ಟಿ ಮಾಡಿದೆ.
ಅವುಗಳು ಹೀಗಿವೆ:
ಲವ್ ಜಿಹಾದ್: ಹಿಂದೂ ಮಹಿಳೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಮದುವೆಯಾಗುವ ಮುಸ್ಲಿಂ ಯುವಕರು, ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಿಸುತ್ತಾರೆ ಎಂಬ ಕಪೋಲ ಕಲ್ಪಿತ ಸಿದ್ಧಾಂತ.
ಲ್ಯಾಂಡ್ ಜಿಹಾದ್: ಇಸ್ಲಾಂ ಧಾರ್ಮಿಕ ಕೇಂದ್ರಗಳನ್ನು ಕಟ್ಟಿಯೋ ಅಥವಾ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲು ಸೇರಿಕೊಂಡೋ ಸಾರ್ವಜನಿಕ ಆಸ್ತಿಗಳನ್ನು ಮುಸ್ಲಿಮರು ಲಪಟಾಯಿಸುತ್ತಾರೆ ಎಂಬ ಕಲ್ಪಿತ ಪ್ರಚೋದನೆ.
ವೋಟ್ ಜಿಹಾದ್: ಪ್ರಧಾನಿ ಮೋದಿಯವರಿಂದ ಪ್ರಚಾರ ಮಾಡಲ್ಪಟ್ಟ ಆಧಾರ ರಹಿತ ಥಿಯರಿ ಇದು. ತಮ್ಮ ರಾಜಕೀಯ ಪ್ರಭಾವ ಹೆಚ್ಚಿಸಿಕೊಳ್ಳಲು, ಹಿಂದೂಗಳ ಪ್ರಾಬಲ್ಯವನ್ನು ದುರ್ಬಲಗೊಳಿಸಲು ಮುಸ್ಲಿಮರು ಚುನಾವಣೆಗಳನ್ನು ಬಹಳ ಚಾಣಾಕ್ಷತೆಯಿಂದ ನಿರ್ವಹಿಸಿ, ಮತ ಚಲಾಯಿಸುತ್ತಾರೆ ಎಂಬ ಕಲ್ಪಿತ ಸಿದ್ಧಾಂತವಿದು.
ಜನಸಂಖ್ಯಾ ಜಿಹಾದ್: ಹಿಂದೂಗಳ ಜನಸಂಖ್ಯೆಗಿಂತ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆಂಬ ಸುಳ್ಳು ಸಿದ್ಧಾಂತವಿದು. ಭಾರತದಲ್ಲಿ ಶೇ. 14ರಷ್ಟು ಮುಸ್ಲಿಮರಿದ್ದಾರೆಂಬುದಷ್ಟೇ ವಾಸ್ತವ.
ರೈಲ್ ಜಿಹಾದ್: ಜನರನ್ನು ಸಾಮೂಹಿಕವಾಗಿ ಕೊಲ್ಲಲು ರೈಲ್ವೆ ಹಳಿಗಳನ್ನು ಮುಸ್ಲಿಮರು ಅಸ್ತವ್ಯಸ್ತ ಮಾಡುತ್ತಾರೆಂಬ ಆಧಾರ ರಹಿತ ಆರೋಪ.
ಎಕನಾಮಿಕ್ ಜಿಹಾದ್: ಹಿಂದೂಗಳಿಗೆ ವ್ಯಾಪಾರದಲ್ಲಿ ನಷ್ಟ ಉಂಟು ಮಾಡಲು ಮುಸ್ಲಿಮರು ಸಂಚು ಹೂಡುತ್ತಾರೆಂಬ ಸುಳ್ಳು ಆಪಾದನೆ.
ಹಲಾಲ್ ಜಿಹಾದ್: ಹಿಂದೂಗಳನ್ನು ದುರ್ಬಲಗೊಳಿಸುವ, ಭಾರತೀಯ ಆರ್ಥಿಕತೆಗೆ ಹಾನಿ ಮಾಡುವ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಒಂದು ತಂತ್ರ ಹಲಾಲ್ ಪ್ರಮಾಣೀಕರಣ- ಎಂಬುದು ಸಂಘಪರಿವಾರದ ಕಲ್ಪಿತ ಜಿಹಾದ್ ಥಿಯರಿ.
ಮಜರ್ ಜಿಹಾದ್: ಪ್ರಾದೇಶಿಕ ವಿಸ್ತರಣಾ ತಂತ್ರವಾಗಿ ಸರ್ಕಾರಿ ಅಥವಾ ಅರಣ್ಯ ಭೂಮಿಯಲ್ಲಿ ಧಾರ್ಮಿಕ ಕಟ್ಟಡಗಳನ್ನು (ಮಜರ್‌ಗಳು) ಮುಸ್ಲಿಮರು ನಿರ್ಮಿಸುತ್ತಾರೆ ಎಂಬ ನಕಲಿ ಪ್ರತಿಪಾದನೆ.
ಥೂಕ್ ಜಿಹಾದ್: ಹಿಂದೂಗಳಿಗೆ ಕಲುಷಿತ ಆಹಾರ ಒದಗಿಸಿ, ಸಾಂಕ್ರಾಮಿಕ ರೋಗಗಳಿಗೆ ದೂಡಲು ಮುಸ್ಲಿಮರು ಆಹಾರದ ಮೇಲೆ ಉಗುಳುತ್ತಾರೆ ಎಂಬ ಆಧಾರರಹಿತ ಪಿತೂರಿ ಸಿದ್ಧಾಂತ.
ಯುಪಿಎಸ್‌ಸಿ ಜಿಹಾದ್: ದೇಶದ ಅಧಿಕಾರ ಸ್ಥಾನಕ್ಕೆ ನುಸುಳಲು ಮುಸ್ಲಿಮರು ನಾಗರಿಕ ಸೇವಾ ಪರೀಕ್ಷೆಗಳನ್ನು (ಯುಪಿಎಸ್‌ಸಿ) ಚಾಣಾಕ್ಷತೆಯಿಂದ ಎದುರಿಸುತ್ತಾರೆಂಬ ಆರೋಪ.
ರಾಸಾಯನಿಕ ಗೊಬ್ಬರ ಜಿಹಾದ್: ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮೊದಲ ಬಾರಿಗೆ ಪ್ರಚಾರ ಮಾಡಿದ ಪಿತೂರಿ ಸಿದ್ಧಾಂತವಿದು. ಮಣ್ಣನ್ನು ನಾಶಮಾಡಲು ಅತಿಯಾದ ರಾಸಾಯನಿಕ ಗೊಬ್ಬರವನ್ನು ಮುಸ್ಲಿಂ ರೈತರು ಬಳಸುತ್ತಾರೆ ಎಂದಿದ್ದರು ಶರ್ಮಾ.
ಪ್ಯಾನ್ ಕಾರ್ಡ್ ಜಿಹಾದ್: ನವೆಂಬರ್ 12ರಂದು ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಯೋಗಿ ಆದಿತ್ಯನಾಥ ಅವರು ‘ಪ್ಯಾನ್ ಕಾರ್ಡ್ ಜಿಹಾದ್’ ಎಂಬ ಹೊಸ ಕಲ್ಪಿತ ಥಿಯರಿಯನ್ನು ಮುನ್ನಲೆಗೆ ತಂದರು. “ಕಾನೂನು ಬಾಹಿರ, ದೇಶವಿರೋಧಿ ಚಟುವಟಿಕೆಗಳಿಗೆ ಪ್ಯಾನ್ ಕಾರ್ಡ್ ನಂಬರ್‌ಗಳನ್ನು ಬಳಸುತ್ತಿದ್ದಾರೆ. ಇದು ಪ್ಯಾನ್ ಕಾರ್ಡ್ ಜಿಹಾದ್ ಎಂದಿದ್ದರು” ಯೋಗಿ.
ಇದನ್ನೂ ಓದಿರಿ: ಬೆಂಗಳೂರಿನ ಮೇಲೆ ‘ಮೆಟ್ರೊ’ ಭಾರ; ತಿಳಿಯಲೇಬೇಕಾದ ಅಸಲಿ ಸಂಗತಿಗಳಿವು
ಹೀಗೆ ಎಲ್ಲಕ್ಕೂ ಜಿಹಾದ್ ಜೋಡಿಸುವ ವಿಷಕಾರಿ ಪ್ರವೃತ್ತಿಯನ್ನು ಬಿಜೆಪಿ ಮತ್ತು ಸಂಘಪರಿವಾರ ನಿರಂತರವಾಗಿ ಮಾಡುತ್ತಲೇ ಬಂದಿತು. ಹೊಸ ಹೊಸ ಜಿಹಾದ್ ಸರಣಿ ಮುಂದೆಯೂ ಹುಟ್ಟಿಕೊಳ್ಳಬಹುದು ಎಂಬುದು ಈ ವರದಿಯಲ್ಲಿ ಉಲ್ಲೇಖಿಸಿರುವ ಉದಾಹರಣೆಗಳನ್ನು ನೋಡಿದರೆ ಅನಿಸತೊಡಗುತ್ತದೆ.
ದ್ವೇಷ ಭಾಷಣಗಳನ್ನು ಹಂಚುವಲ್ಲಿ ಸಂಘಪರಿವಾರದ ಪಾತ್ರ ದೊಡ್ಡದಿದೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್, ಆರ್ಯ ಸಮಾಜ, ದೇವಭೂಮಿ ರಕ್ಷಾ ಅಭಿಯಾನ, ದೇವಭೂಮಿ ಸಂಘರ್ಷ ಸಮಿತಿ, ದುರ್ಗಾ ವಾಹಿನಿ, ಏಕ್ತಾ ಅಜ್ ಲಕ್ಷ್ಯ, ಗೋ ರಕ್ಷಾ ದಳ, ಹಿಂದೂ ಜಾಗರಣ್ ಮಂಚ್ (HJM), ಹಿಂದೂ ಜನಜಾಗೃತಿ ಸಮಿತಿ (HJS), ಮಾತ್ರಾ ಶಕ್ತಿ ಸಮ್ಮೇಳನ, ರಾಷ್ಟ್ರೀಯ ಹಿಂದೂ ಶೇರ್ ಸೇನಾ, ರುದ್ರ ಸೇನಾ ಉತ್ತರಾಖಂಡ, ಸನಾತನ ಹಿಂದೂ ಏಕತಾ ಪಾದಯಾತ್ರಾ, ಶಿವ ಪ್ರತಿಷ್ಠಾನ ಹಿಂದೂಸ್ತಾನ್, ಶಿವಶಕ್ತಿ ಅಖಾಡ, ಶ್ರೀ ರಾಮ ಸೇನೆ- ಹೀಗೆ ಪರಿವಾರದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಚುನಾವಣೆಗಳ ಮೇಲೆ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತಲೇ ಇರುವುದರಿಂದ ದ್ವೇಷದ ಕಾರ್ಯತಂತ್ರವು ಫಲ ಕೊಡುತ್ತಿದೆ ಎಂದು ಬಿಜೆಪಿ ಸ್ಪಷ್ಟವಾಗಿ ಗುರುತಿಸಿಕೊಂಡಂತೆ ಕಾಣುತ್ತಿದೆ. ಸಮುದಾಯಗಳ ನಡುವೆ ದ್ವೇಷ ಬೆಳೆದಷ್ಟು ದೇಶಕ್ಕೇನೂ ಲಾಭವಿಲ್ಲ ಎಂದು ಜನತೆ ಅರಿತುಕೊಳ್ಳುವವರೆಗೂ ಬದಲಾವಣೆ ಸಾಧ್ಯವಿಲ್ಲ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




