ಶೂದ್ರ ಧರ್ಮ, ವೈದಿಕ ಧರ್ಮ ಒಂದೇ ಅಲ್ಲ!

Date:

ಇದೀಗ ಸಾಂಸ್ಕೃತಿಕ ವಸಾಹತುಶಾಹಿ ವಿಜೃಂಭಿಸುತ್ತಿದೆ. ಇದು ಏಕಾಏಕಿ ಸಂಭವಿಸಿದ ಸಂಗತಿಯಲ್ಲ. ಇದಕ್ಕೆ ಅನೇಕ ದಶಕಗಳ ಚರಿತ್ರೆ ಇದೆ. ಬಹು ವೇಗವಾಗಿ ನಮ್ಮ ಸಾಂಸ್ಕೃತಿಕ ಚಹರೆಗಳು ಪರಾಸ್ತವಾಗುತ್ತಲೇ ಇವೆ. ಕಳಕೊಂಡದ್ದಾದರೂ ಏನು ಎಂಬುದೂ ಶೂದ್ರ ಸಮೂಹಗಳಿಗೆ ಗೊತ್ತಾಗುತ್ತಿಲ್ಲ. ಈ ನಾಡಿನ ಜನಸಂಖ್ಯೆಯ ಶೇಕಡಾ 62ರಷ್ಟಿರುವ ಹಿಂದುಳಿದ ವರ್ಗಗಳು ತಮ್ಮ ಸಾಂಸ್ಕೃತಿಕ ಚಹರೆಗಳನ್ನು ಕಳೆದುಕೊಂಡಿರುವ ಕಾರಣಕ್ಕೆ ತಮಗೆ ನ್ಯಾಯವಾಗಿ ದೊರಕಬೇಕಾಗಿರುವ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪ್ರಾತಿನಿಧ್ಯದಿಂದ ವಂಚಿತವಾಗಿವೆ. ಸಂವಿಧಾನ, ಅಕ್ಷರ, ಆರ್ಥಿಕತೆಗಳು ದೊರಕಿಸಿಕೊಡಬೇಕಾಗಿದ್ದ ಸಾಮಾಜಿಕ ರಾಜಕೀಯ ಪ್ರಾತಿನಿಧ್ಯವನ್ನು ಸಾಂಸ್ಕೃತಿಕ ರಾಜಕಾರಣದ ಮೂಲಕ ವಂಚಿಸಿ ನಿರಾಕರಿಸಲಾಗುತ್ತಿದೆ. ಸಾಮಾನ್ಯವಾಗಿ ಒಂದೇ ಸ್ತರದ ಆಚರಣೆ, ಊಟೋಪಚಾರಗಳು, ಸಮಾನ ದೈವಗಳು ಮತ್ತು ಹೆಚ್ಚು ಕಡಿಮೆ ಒಂದೇ ರೀತಿಯ ಸಾಮಾಜಿಕ ಅಪಮಾನಗಳಿಗೆ ಒಳಗಾದ ಈ ದೊಡ್ಡ ಸಮೂಹವೇ ನಿಜವಾಗಿ ಭಾರತದ ತಾತ್ವಿಕ ವಾರಸುದಾರರು. ಇವರೆಲ್ಲರಿಗೆ ತಮ್ಮದೇ ಆದ ಸೂಕ್ತ ಜೀವನಕ್ರಮಗಳಿವೆ. ಅದನ್ನು ಹೊರಗಿನಿಂದ ಬಂದವರು ವ್ಯಾಖ್ಯಾನಿಸಿಕೊಡಬೇಕಾಗಿಲ್ಲ.  ಹಾಗೆಂದು ಅವರೇನು ಯಾರನ್ನೂ ಕೇಳಿಕೊಂಡಿರಲಿಲ್ಲ.  ಆದರೆ ತಮ್ಮದಲ್ಲದ ವ್ಯಾಖ್ಯಾನಗಳಿಗೆ ಈಡಾದ ಈ ಬಹು ಸಂಖ್ಯೆಯ ಸಮೂಹಗಳು ಎಲ್ಲವನ್ನೂ ಕೊಟ್ಟು, ಕಳಕೊಂಡು ಬರಿಗೈಯಾಗಿ ನಿಂತಿವೆ. ಸಾಂಸ್ಕೃತಿಕ ರಾಜಕಾರಣವನ್ನು ನಿರ್ವಹಿಸಲರಿಯದ ಯಾವುದೇ ಸಮೂಹ ಶಕ್ತಿ ರಾಜಕಾರಣವನ್ನು ಸಮರ್ಥವಾಗಿ ನಿರ್ವಹಿಸಲಾರದು. ಹಾಗಾಗಿ ಹಿಂದುಳಿದ ವರ್ಗಗಳ ಶಕ್ತಿ ರಾಜಕಾರಣದ ಸಂದರ್ಭದಲ್ಲಿ ಅದು ಅನಿವಾರ್ಯವಾಗಿ ನಿರ್ವಹಿಸಲೇಬೇಕಾದ ಸಾಂಸ್ಕೃತಿಕ ರಾಜಕಾರಣವನ್ನು ನಿರ್ವಹಿಸುವಲ್ಲಿ  ದಯನೀಯವಾಗಿ ಸೋತಿದೆ.  ಸಂಖ್ಯೆಯ ದೃಷ್ಟಿಯಿಂದ ತುಂಬ ಬಲಶಾಲಿಯಾದ ಹಿಂದುಳಿದ ವರ್ಗಗಳ ದೊಡ್ಡ ದೌರ್ಬಲ್ಯವೆಂದರೆ ಇದೇ ಆಗಿದೆ. ತಮ್ಮ ಸಾಂಸ್ಕೃತಿಕ ಚಹರೆಗಳನ್ನು ಕಳೆದುಕೊಂಡಿರುವ ಈ  ಸಮೂಹಕ್ಕೆ ಅಗತ್ಯವಾದ ಸಮಾಜೋ-ರಾಜಕೀಯ ಎಚ್ಚರವನ್ನು ಪಡೆದುಕೊಳ್ಳಲು ಮೊದಲು ಅವರು ತಮ್ಮನ್ನು ತಾವು ಕಂಡುಕೊಳ್ಳಬೇಕಾಗಿದೆ.  ಸಾಂಸ್ಕೃತಿಕವಾಗಿ ಛಿದ್ರವಾಗಿರುವ ಸಮೂಹಗಳನ್ನು ಸಾಂಸ್ಕೃತಿಕವಾಗಿ ಒಂದಾಗಿರುವ ಸಮೂಹಗಳು ತಮ್ಮ ಕೈಗೊಂಬೆಗಳನ್ನಾಗಿಸಿಕೊಂಡು ವಂಚಿಸುತ್ತಿವೆ, ಅಪಮಾನಿಸುತ್ತಿವೆ ಮತ್ತು ರಾಜಕೀಯ ಅಧಿಕಾರವನ್ನು ನಿರಾಕರಿಸುತ್ತ ಬಂದಿವೆ.

ನಾವು ತಿನ್ನುವ ಅನ್ನ, ಕಟ್ಟುವ ಮನೆ, ಮದುವೆಯಾಗುವ ಸಂಗಾತಿ, ಆಚರಿಸುವ ಆಚರಣೆಗಳು, ಪೂಜಿಸುವ ದೇವರುಗಳು ಇತ್ಯಾದಿ ನಮ್ಮ ನಿತ್ಯದ ಬದುಕಿನ ಕ್ರಮವನ್ನು ನಾವೇ ನಿರ್ಧರಿಸಿಕೊಳ್ಳುವ ಕಾಲವೊಂದು ಇತ್ತು.  ಈಗ ಅವುಗಳನ್ನು ನಿಯಂತ್ರಿಸುವ ಸಾಂಸ್ಕೃತಿಕ ರಾಜಕಾರಣವನ್ನು ನಿರ್ವಹಿಸಬಲ್ಲ ಕೆಲವೇ ಜನಗಳ ವರ್ಗದ ಕೈಯಲ್ಲಿನ ನಿಯಂತ್ರಣಕ್ಕೆ ಅವು ಹೊರಟು ಹೋಗಿವೆ. ನಮ್ಮ ಬದುಕಿನ ತಾತ್ವಿಕತೆಯನ್ನು ನಿರ್ಣಯಿಸಿಕೊಟ್ಟಿದ್ದ ತಾತ್ವಿಕ ಆಕರಗಳನ್ನು ನಾವು ಕಳೆದುಕೊಂಡಿದ್ದೇವೆ. ನಾವು ವಾರಸುದಾರರಾಗಿರುವ ಜಾತಿಯ ಅಸಮಾನತೆಯನ್ನು ಒಪ್ಪದ ಭಾರತದ ಶ್ರಮಣ ಪಂಥಗಳಾದ ನಾಥ, ಸೂಫಿ, ಸಿದ್ಧ, ಶಾಕ್ತ ಪರಂಪರೆಗಳನ್ನು ಮೂಲೆಗಟ್ಟಿ, ಉಸಿರುಗಟ್ಟಿಸಿ ನಿರ್ಜೀವಗೊಳಿಸಲಾಗಿದೆ. ದೀರ್ಘಕಾಲೀನ ಭಾರತೀಯ ಚರಿತ್ರೆಯಲ್ಲಿ ಯಾರ್ಯಾರು ದೀನರ ಪರ, ಸಮಾನತೆಯ ಪರ, ದಲಿತರ ಪರ, ಹಿಂದುಳಿದವರ ಪರ, ಅಶಕ್ತರ ಪರ ನಿಂತಿದ್ದಾರೋ ಅವರೆಲ್ಲರಿಗೆ ಮತ್ತು ಅವರ ತಾತ್ವಿಕತೆಗೆ ಆದ ಅವಸಾನವನ್ನು ಕಂಡರೆ ಅಂತಹ ಯಾರನ್ನೂ ಇಲ್ಲಿ ಉಳಿಯಗೊಟ್ಟಿಲ್ಲ. ಹಾಗಾಗಿ ನಮ್ಮ ಸಾಂಸ್ಕೃತಿಕ ಸಂವಿಧಾನವನ್ನು ನಾವೀಗ ಕಳೆದುಕೊಂಡಿದ್ದೇವೆ. ಸಾಂಸ್ಕೃತಿಕ ಸಂವಿಧಾನದ ನೆರವಿಲ್ಲದೆ ರಾಜಕೀಯ ಸಂವಿಧಾನವನ್ನು ನಾವು ಅನಿಯಂತ್ರಿತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಶಕ್ತಿ ರಾಜಕಾರಣಕ್ಕೆ ಬಲ ಒದಗಿಬರುವುದೇ ಸಾಂಸ್ಕೃತಿಕ ಸಂವಿಧಾನದ ಮೂಲಕ.  ಹಾಗಾಗಿ ಅದರ ಮಹತ್ವವನ್ನು ನಾವು ಅರಿತುಕೊಳ್ಳಬೇಕಾಗಿದೆ.

ಮೇಲುಸ್ತರದ ಧಾರ್ಮಿಕ ರಾಜಕಾರಣವನ್ನು ಬುಡಕಟ್ಟುಗಳು, ನಿರ್ಲಕ್ಷಿತ ಸಮೂಹಗಳು ಸರಿಯಾಗಿ ಗ್ರಹಿಸದೇ ಹೋದರೆ ಅನೇಕ ಇಕ್ಕಟ್ಟುಗಳಿಗೆ ಕಾರಣವಾಗುತ್ತದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಆರ್‌ಬಿಐ ಸ್ಥಾಪನೆ; ಅಂಬೇಡ್ಕರ್ ಮಹತ್ವದ ಪಾತ್ರ ಅಳಿಸಿ ಹೋಯಿತೇಕೆ?

ಇದೆಲ್ಲ ಅನೇಕ ಹಂತಗಳಲ್ಲಿ ಅವತರಿಸುವ ಸಾಂಸ್ಕೃತಿಕ ರಾಜಕಾರಣ. ಎಲ್ಲವೂ ಛದ್ಮವೇಶದ ನಡೆಗಳೇ ಆಗಿರುತ್ತವೆ. ಉದಾಹರಣೆಗೆ ಮೇಲುಸ್ತರದ ಧಾರ್ಮಿಕ ಅಧಿಕಾರ ಕೇಂದ್ರಗಳು ಕೆಳ ಶೂದ್ರ ಸಮೂಹಗಳಿಗೆ ಸಮಾಜೋ ಧಾರ್ಮಿಕ ಗುರುತುಗಳನ್ನು ಪ್ರದಾನ ಮಾಡುವುದರ ಮೂಲಕ ತನ್ನ ಪರವಾಗಿ ಒಗ್ಗೂಡಿಸುವ ಪ್ರಯತ್ನ ಮಾಡುತ್ತವೆ.  ಉದಾಹರಣೆಗೆ ಅಂಬಿಗರ ಚೌಡಯ್ಯ ಪೀಠ, ಕನಕ ಪೀಠ, ಸೇವಾಲಾಲ್ ಪೀಠ, ಮಡಿವಾಳ ಮಾಚಿದೇವ ಪೀಠ ಇತ್ಯಾದಿ ಪೀಠಗಳನ್ನು ಸ್ಥಾಪಿಸಿಕೊಡುವ ಹಿಂದೆ ಇರುವ ಹುನ್ನಾರುಗಳು ಸರಳವಲ್ಲ. ಇಲ್ಲೆಲ್ಲ ಇತಿಹಾಸದ ವೈಭವೀಕರಣವಿದೆ. ಆದರೆ ಇತಿಹಾಸ ಕೆಳಸ್ತರಗಳ ಪಾಲಿಗೆ ಅಪಮಾನದ, ನೋವಿನ, ಮೋಸದ ಸಂಗತಿ. ಅದನ್ನು ನಾವು ಅಪರಾಧಿಯನ್ನಾಗಿ ಪರಿಗಣಿಸಬೇಕೆ ಹೊರತು ಸಂಭ್ರಮಿಸಬೇಕಾದ್ದಲ್ಲ. ಇವರು ಒದಗಿಸುತ್ತಿರುವ ಐಕನ್ನುಗಳಾಗಿರುವ ಇವರಾರನ್ನೂ ಇತಿಹಾಸ ಸಮಾನರನ್ನಾಗಿ ಕಂಡಿಲ್ಲ. ಬದಲಿಗೆ ಇವರೆಲ್ಲ ಅಪಮಾನದ ನೋವುಂಡವರೇ. ಹಾಗಾಗಿ ಇತಿಹಾಸಕ್ಕೆ ಮರುಳುವುದಾದರೆ ಎಷ್ಟು ಹಿಂದಕ್ಕೆ? ಎಂಬುದನ್ನು ಉತ್ತರಿಸಿಕೊಳ್ಳದೆ ಅದನ್ನು ಒಪ್ಪಬಾರದು. ಇಡೀ ಭಾರತದ ಮೂಲ ಜನಾಂಗಗಳಾದ ದನಗಾಹಿಗಳು, ಪಶುಸಂಗೋಪನೆಯ ಸಮೂಹಗಳಾದ ಕುರುಬರು, ಗೊಲ್ಲರು, ಬೇಡರು, ಬೆಸ್ತರ ಹಿರಿತನವನ್ನು ಮೇಲುಸ್ತರದವರು ಒಪ್ಪುವರೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕಾಗಿದೆ. ಏಕೆಂದರೆ ಇವರು ಕೊಡುತ್ತಿರುವ ಐಕನ್ನುಗಳೆಲ್ಲ  ಮತ್ತಾವುದೋ ಬ್ಯಾನರಿನಡಿಯಲ್ಲಿ ದುಡಿದವರು. ಆದುದರಿಂದ ಇದು ಆ ಬ್ಯಾನರಿನ ಯಜಮಾನಿಕೆಗೆ ನಮ್ಮನ್ನು ತಳ್ಳುವ ಪ್ರಯತ್ನವಾಗಿದೆಯೆ ಎಂಬುದನ್ನು ಪರಿಶೀಲಿಸಬೇಕಾಗಿದೆ. ಹಿಂದಕ್ಕೆ ನಮ್ಮನ್ನು ಕರೆದೊಯ್ಯುವುದಾದರೆ ಅವರಿಗೆ ಅನುಕೂಲವಾಗುವಷ್ಟು ಹಿಂದಕ್ಕೆ ಅಲ್ಲ ಎಂಬುದು ನಮಗೆ ಗೊತ್ತಾಗಬೇಕಿದೆ.

Kanakadasara pratime
ಕನಕದಾಸರ ಪ್ರತಿಮೆ

ಒಂದು ಉದಾಹರಣೆಯ ಮೂಲಕ ಇದನ್ನು ಪರಿಶೀಲಿಸಬಹುದು. ಕನಕನನ್ನು ಕರ್ನಾಟಕದ ಒಂದು ಸಮೂಹ ತಮ್ಮ ಸಮಾಜೋರಾಜಕೀಯ ಬಲಸಂವರ್ಧನೆಗೆ ಒದಗಿಬರುವ ಸಂಕೇತವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಕುರುಬಸಮೂಹವು ಭಾರತದ ಮೂಲಕುಲಗಳಲ್ಲಿ ಒಂದು. ಸುಮಾರು ಮೂರು ಸಾವಿರ ವರುಷಗಳ ಭಾರತೀಯ ತಾತ್ವಿಕ ಸಂಘರ್ಷಗಳಿಗೆ ಸಾಕ್ಷಿಯಾಗಿದೆ. ವಿಶ್ವಮಟ್ಟದ ಮಹಾಕವಿ ಕಾಳಿದಾಸನು ಕೂಡ ಈ ಸಮೂಹದ ಒಳಗಿದ್ದಾನೆ. ಮೂಲತ: ಸಿದ್ಧಪರಂಪರೆಯ, (ರೇವಣಸಿದ್ಧನ ಅನುಯಾಯಿಗಳು) ಪಾಶುಪತಶೈವ-ಶಾಕ್ತಪರಂಪರೆಯ, ಹಾಲು-ರಸ-ಜಲಸಂಸ್ಕೃತಿಯ, ತಾಯಿಪ್ರಧಾನದ, ನಾಗಾರಾಧನೆಯ, ಕುರಿಹಿಕ್ಕೆ-ಬಳ್ಳಗಳನ್ನೂ ಪಶುಪತಿಯೆಂದು ಆರಾಧಿಸಿದ, ಒಟ್ಟಾರೆಯಾಗಿ ದ್ವೈತ ಅದ್ವೈತಗಳನ್ನು ದಾಟಿ ಬದುಕಿನ ಸಮೂಹವು  ಇತ್ತೀಚಿನ ಕನಕರ ತಾತ್ವಿಕತೆಯನ್ನು ತನ್ನ ಅಸ್ಮಿತೆಯ ಆಕರವನ್ನಾಗಿ ಬಳಸಿಕೊಳ್ಳುವಾಗ ಕಾಯ್ದುಕೊಳ್ಳಬೇಕಾದ ಎಚ್ಚರವನ್ನು ಅದು ತನ್ನ ಸಾಂಸ್ಕೃತಿಕ ರಾಜಕಾರಣದಲ್ಲಿ ನಿಭಾಯಿಸಬೇಕಾಗುತ್ತದೆ. ಅವರು ಕಳೆದುಕೊಳ್ಳುತ್ತಿರುವುದು ಏನೇನನ್ನು ಎಂಬುದನ್ನು ಪರಿಶೀಲಿಸಿಕೊಳ್ಳಬೇಕಾಗುತ್ತದೆ. ಇಲ್ಲದೇ ಹೋದರೆ ನಮಗೆ ಒಡ್ಡಿದ ಗಾಳವನ್ನು ನಾವಾಗಿ ನುಂಗಿದಂತಾಗುತ್ತದೆ.

ಅಗಸರು ಮಡಿವಾಳ ಮಾಚಿದೇವನ ಮೂಲಕ, ಬೆಸ್ತರು ಅಂಬಿಗರ ಚೌಡಯ್ಯನ ಮೂಲಕ, ಮಾದಿಗರು ಮಾದಾರ ಚೆನ್ನಯ್ಯನ ಮೂಲಕ, ತಮ್ಮ ಸಾಂಸ್ಕೃತಿಕ ಚಹರೆಗಳನ್ನು ಹುಡುಕಲು ಹೊರಟರೆ, ಸಮಾಜೋರಾಜಕೀಯಕ್ಕೆ ಐಕನ್ ಮಾಡಿಕೊಂಡರೆ ಇಂಥದೇ ಎಚ್ಚರವನ್ನು ನಿಭಾಯಿಸಬೇಕಾಗುತ್ತದೆ. ಇಲ್ಲೆಲ್ಲ ಮೇಲೊಬ್ಬ ಯಜಮಾನನೋ ಅವನ ಪ್ರತಿನಿಧಿಯ ಕಣ್ಗಾವಲೋ ಇದ್ದೇ ಇರುತ್ತದೆ.  ಕುರುಬರು ವೈಷ್ಣವರಲ್ಲ ಆದ್ದರಿಂದ ಅವರು ಶೈವರು ಎನ್ನುವ ಅಗತ್ಯವಿಲ್ಲ. ಶೈವರು ವೈಷ್ಣವ ಎರಡೂ ಅಲ್ಲದ ಸಿದ್ಧ ಪರಂಪರೆಯ ಸ್ವಂತಿಕೆ ಉಳ್ಳವರನ್ನು ಹೀಗೆ ಮತ್ತೊಂದು ಕಂಪಾರ್ಟ್ಮೆಂಟಿಗೆ ವರ್ಗಾಯಿಸುತ್ತಿರುವವರು ಯಾರು? ಏಕೆ? ಎಂಬ ಪ್ರಶ್ನೆಗಳನ್ನು ಇದಿರಾಗಬೇಕು. ಜುಂಜಪ್ಪನನ್ನು ಕೃಷ್ಣನೆಂದೋ ಶಿವನೆಂದೋ, ಬೀರಪ್ಪನನ್ನು ವೀರಭದ್ರನೆಂದೋ ಶಿವನೆಂದೋ ಸಮೀಕರಿಸುವುದೂ ಅನೇಕ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಬೀರಪ್ಪ ಬೀರಪ್ಪನಾಗಿರಲಿ, ಜುಂಜಪ್ಪ ಜುಂಜಪ್ಪನಾಗಿರಲಿ. ಶಂಕರರನ್ನೋ, ಮಧ್ವರನ್ನೋ, ರಾಮಾನುಜರನ್ನೋ ಆಯ್ಕೆ ಮಾಡಿಕೊಂಡವರು ಯಾವ ಕಾರಣಕ್ಕೂ ಮತ್ತೊಂದು ತಾತ್ವಿಕತೆಯ ಅಥವಾ ತಾತ್ವಿಕರ ಅಂಕೆಯನ್ನು ಎಂದಿಗೂ ಸಹಿಸುವುದಿಲ್ಲ ಎನ್ನುವ ಮಾದರಿಯನ್ನು ಗಮನಿಸಬೇಕಾಗಿದೆ. ನಮಗೆ ನಿಮ್ಮ ನವಿಲುಗರಿಯೂ ಬೇಡ, ಉಂಡೆ ನಾಮವೂ ಬೇಡ. ನಮಗೆ ನಮ್ಮ ಬೀರಪ್ಪ ಸಾಕು,  ಬಂಡಾರ ಸಾಕು ಕರಿ ಕಂಬಳಿ ಸಾಕು – ಎನ್ನುವುದೇ ಸರಿಯಾದ ನಿಲುವು.

ಇದನ್ನೂ ಓದಿರಿ: ಗಂಗೆಯ ಒಡಲಿಗೆ ‘ವಿಷ’ದ ಸಂಕಟ; ವೈಜ್ಞಾನಿಕ ಸತ್ಯಗಳಿಗೆ ಬೆನ್ನು ತಿರುಗಿಸಲಾದೀತೆ?

ಕಳೆದುಕೊಂಡ ಸಾಂಸ್ಕೃತಿಕ ಬಲಗಳು/ ಚಹರೆಗಳು: ಇಡಿಯಾಗಿ ಶೂದ್ರ ಭಾರತವನ್ನು ಅನೇಕ ರೀತಿಯ ಇಕ್ಕಟ್ಟಿಗೆ ಸಿಕ್ಕಿಸಲಾಗಿದೆ. ಮಧ್ಯಯುಗೀನ ಶೂದ್ರ ಭಾರತದ ನಿಜವಾದ ನಾಡಿಮಿಡಿತವನ್ನು ಆಲಿಸಬೇಕಾದರೆ ನಾವು ಶ್ರಮಣಧಾರೆಗಳಲ್ಲಿಗೇ ಹೋಗಬೇಕು.  ಅವುಗಳ ಮೂಲಕ ಹೋದರೆ ಮಾತ್ರ ಭಾರತೀಯ ಸಮಾಜಗಳ ಅಂತರಂಗಕ್ಕೆ ಹೋಗಲು ಸಾಧ್ಯ. ಸ್ಥೂಲವಾಗಿ ಬೌದ್ಧ, ಜೈನ, ಸಿದ್ಧ, ನಾಥ, ಶರಣ, ಸೂಫಿ, ಅಚಲ, ವಚನ, ತತ್ತ್ವಪದಕಾರರು, ಅನೇಕ ಶೈವ ಪಂಥಗಳು ಮತ್ತು ಶಾಕ್ತ ಪಂಥಗಳನ್ನು ಶ್ರಮಣಧಾರೆಗಳೆಂದು ಸೂಚಿಸುತ್ತಾರೆ. ಇವುಗಳು ರೂಪುಗೊಳ್ಳುವಲ್ಲಿ ಕರ್ನ್ನಾಟಕದ ದೊಡ್ಡ ಪಾಲಿದೆ. ಭಾರತದ ತಾತ್ವಿಕ ನಕಾಶೆಯೊಂದನ್ನು ಬಿಡಿಸಿದರೆ ಅದರಲ್ಲಿ ಕರ್ನಾಟಕ ಆಯಕಟ್ಟಿನ ಭಾಗ. ಅಖಿಲಭಾರತೀಯ ದರ್ಶನಗಳಲ್ಲಿ ಹಲವು ಕರ್ನಾಟಕದ ಕೊಡುಗೆ. ಮಂಗಳೂರಿನ ಕರಾವಳಿಯ  ನೆಲದಿಂದ ಇಡೀ ಭಾರತ ಮತ್ತು ಅದರಾಚೆಗೂ ವ್ಯಾಪಿಸಿರುವ ನಾಥಪಂಥವು ಈ ನೆಲದ ಕೊಡುಗೆ.  ಇಂದಿಗೂ ಭಾರತದ ಬಹಳದೊಡ್ಡ ಪಂಥ, ದರ್ಶನವೆಂದರೆ ನಾಥ ಪಂಥವೆ.  ಧರ್ಮಸ್ಥಳದ ಮಂಜುನಾಥನಿಂದ ಹಿಡಿದು ಕಾಶಿವಿಶ್ವನಾಥ, ನೇಪಾಳದ ಪಶುಪತಿನಾಥನವರೆಗೆ ಅದರ ವ್ಯಾಪ್ತಿ ಇದೆ. ಭಾರತದ ಮೂಲ ನಿವಾಸಿಗಳ ಸ್ವತಂತ್ರ ಚಹರೆಗಳಲ್ಲಿ ಮುಖ್ಯವಾದ ಜಲಸಂಸ್ಕೃತಿ,  ಶೈವಪರಂಪರೆ,  ನಾಗಾರಾಧನೆ, ತಾಯಿ ಆರಾಧನೆಗಳನ್ನು, ಚಾಂದ್ರ ಸಂಸ್ಕೃತಿಗಳನ್ನು ವ್ಯವಸ್ಥಿತವಾಗಿ ಅಡಗಿಸಲಾಗುತ್ತಿದೆ. ಅಲ್ಲಲ್ಲಿ ಕೆಂಡಕೊಂಡಗಳನ್ನು ಮಾಡಿ ನಾವೂ ನಿಮ್ಮನ್ನು ತುಳಿಯುತ್ತೇವೆ ಎಂಬ ಸಂಕೇತ ರೂಪದ ಕೆಲವೇ ಪ್ರತಿಭಟನಾ ಮಾದರಿಗಳು ಮಾತ್ರ ಇಲ್ಲಿಯವರೆಗೆ ಉಳಿದುಬಂದಿವೆ.

ಹಾಗೆಯೇ, ಭಾರತದ ದಾರ್ಶನಿಕ ಚರಿತ್ರೆಯನ್ನು ದ್ವೈತ ಅದ್ವೈತಗಳ ಮೂಲಕ ಮಾತ್ರವೇ ದಾಖಲಿಸಿ ಅವುಗಳ ಮೂಲಕ ಮಾತ್ರ ನೋಡಲು ಒತ್ತಾಯಿಸುವ ಓದುಗಳು ಕೂಡಾ ಚಾಲ್ತಿಯಲ್ಲಿವೆ.  ಇಲ್ಲೆಲ್ಲ ನಿರಾಕರಣೆಗೊಳ್ಳುವ ಅಥವಾ ನಿರ್ಲಕ್ಷಕ್ಕೀಡಾಗುವ ‘ಬಹುತ್ವ’ ದೃಷ್ಟಿಕೋನವು ಮಾತ್ರ ನಿಜವಾದ ಭಾರತವನ್ನು ಕಾಣಿಸಿಕೊಡಬಲ್ಲದು.  ಈಗ ನಮ್ಮ ಮುಂದಿರುವ ಸಮಸ್ಯೆಯೆಂದರೆ ನಮ್ಮ ಚರಿತ್ರೆಯನ್ನು ಇಂತಹ ಬಹುತ್ವದ ಮೂಲಕ ಕಟ್ಟಿಕೊಳ್ಳಬೇಕಾಗಿರುವುದು. ದ್ವೈತ ಅದ್ವೈತಗಳ ಸಾಂಸ್ಕೃತಿಕ ಯಜಮಾನಿಕೆಯನ್ನು ಮೊದಲು ನಿರಾಕರಿಸಬೇಕು. ತಾತ್ವಿಕ ಭಾರತವನ್ನು ಶ್ರಮದ ಮೂಲಕ ಕಟ್ಟಿದ ನಮ್ಮವೇ ಆದ ಶ್ರಮಣಧಾರೆಗಳಾದ ಬೌದ್ಧ, ನಾಥ, ಸಿದ್ಧ, ಮುಂತಾದ ಪ್ರಜಾಸತ್ತಾತ್ಮಕ ನಿಲುವಿನ ಪಂಥಗಳನ್ನು ಪೋಷಿಸಬೇಕು. ಇಂತಹ ಸಾಂಸ್ಕೃತಿಕ ರಾಜಕಾರಣವನ್ನು ನಿರ್ವಹಿಸುವ ಅರಿವನ್ನು ಕೆಳವರ್ಗಗಳು ರೂಢಿಸಿಕೊಂಡರೆ ಮಾತ್ರ ಶಕ್ತಿ ರಾಜಕಾರಣವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಬುಡವನ್ನು ನಿರಾಕರಿಸಿ ಕೊಂಬೆಯನ್ನು ನಿರ್ವಹಿಸುವ ವಿಫಲ ಪ್ರಯತ್ನ ಮಾಡಿದಂತಾಗುತ್ತದೆ. ಇದನ್ನು ನಿರ್ವಹಿಸದೆ ಸುಮ್ಮನೆ ನೋಡುತ್ತ ಕೂರುವುದು ಮತ್ತೂ ಅಪಾಯಕಾರಿಯಾಗಿ ಕಾಣಿಸುತ್ತಿದೆ. ಈ ಎಚ್ಚರಿಕೆಯ ಗಂಟೆಯನ್ನು ನಾವೀಗ ಮೊಳಗಿಸಬೇಕಾಗಿದೆ.

ಇಸ್ಲಾಂ, ಕ್ರೈಸ್ತ ಮುಂತಾದ ಅನ್ಯ ಧರ್ಮಗಳ ಹೊರತಾಗಿ ಇಡಿಯಾಗಿ ಭಾರತದ ಬದುಕು ಬ್ರಾಹ್ಮಣಧರ್ಮ (ವೈದಿಕ) ಮತ್ತು ಶೂದ್ರ ಧರ್ಮ (ಶ್ರಮಣ) ಎಂದು  ತನ್ನನ್ನೇ ಸೀಳಿಕೊಂಡಿದೆ. ಹೀಗೆ  ಸೀಳಿಕೊಂಡ ಬಾಳನ್ನು ಭಾರತ ಬದುಕುತ್ತಿದೆ. ಈ ಎರಡು ಸೀಳುಗಳನ್ನು ವೈದಿಕ-ಶ್ರಮಣ ಅಥವಾ ಬ್ರಾಹ್ಮಣಧರ್ಮ-ಶೂದ್ರಧರ್ಮ ಎಂದು ನೋಡಬಹುದು. ಈ ವರ್ಗೀಕರಣವನ್ನ್ಳು ಶ್ರಮಣಧಾರೆಗಳು ಒಪ್ಪುತ್ತವೆ; ಆದರೆ ಬ್ರಾಹ್ಮಣಧರ್ಮಕ್ಕೆ ಇದು ಮಾನ್ಯವಲ್ಲ. ಬ್ರಾಹ್ಮಣಧರ್ಮಕ್ಕೆ ಭಾರತೀಯ ಬದುಕು ಹೇಗೇ ಕಾಣಿಸಲಿ, ನಮ್ಮ ನಡುವಿನ ಮೇಲು-ಕೀಳುಗಳಂತೂ ನಿತ್ಯ ಬದುಕಿನ ವಾಸ್ತವವಾಗಿರುವುದರಿಂದ, ಇಂತಹ ವಿಭಜನೆ ಅನಿವಾರ್ಯ. ನಮ್ಮ ನಮ್ಮೊಳಗೇ ಇರುವ ಈ ಕೊಳಕು ತಾರತಮ್ಯಗಳಿಗೆ ಕಾರಣ ಯಾರೆಂದು ಗೊತ್ತಿರುವ ಸಾಂಸ್ಕೃತಿಕ ವಸಾಹತಶಾಹಿಯು ತನ್ನಿಂದಾಗುತ್ತಿರುವ ಈ ಅನ್ಯಾಯಗಳನ್ನು ಮರೆಮಾಚಲು ಬೇರೊಂದು ಧರ್ಮದಿಂದ ಅಪಾಯವಾಗುವ ಬೆದರುಬೊಂಬೆಯನ್ನು ಮುಂದಿಡುತ್ತಲೇ ಇರುತ್ತದೆ. ಶೂದ್ರ ಧರ್ಮವು ಅನುಭವಿಸುತ್ತಿರುವ  ತರತಮಗಳು ಎಲ್ಲಿಂದ ಮೂಡಿ ಬರುತ್ತಿವೆ? ತಮಗೆ ಅನ್ಯಾಯವಾಗುತ್ತಿರುವುದು ಶೂದ್ರ ಸಮೂಹಗಳಿಗೆ ಗೊತ್ತಿದ್ದರೂ ಅನುಭವಿಸುತ್ತಿರುವುದು ಯಾಕೆ? ಚರಿತ್ರೆಯಲ್ಲಿ ಈ ಅನ್ಯಾಯಗಳನ್ನು ಪ್ರತಿಭಟಿಸಿದವರು ಯಾರು? ಪರಿಣಾಮಗಳೇನಾಯಿತು? ಇಂತಹ ತರತಮಗಳಿಗೆ ಎಲ್ಲರನ್ನೂ ಹೇಗೆ ಒಪ್ಪಿಸಲಾಗುತ್ತದೆ? ಮುಂತಾದ ಕೆಲವು ಪ್ರಾಥಮಿಕ ಸಂಗತಿಗಳನ್ನು ವಿವರಿಸಿಕೊಳ್ಳುವುದು ಒಳಿತು.

ಇದನ್ನೂ ಓದಿರಿ: ಕರ್ನಾಟಕ 50 | ಎಡಪಂಥೀಯರು ಅಂಬೇಡ್ಕರರಿಂದ ದೂರಾದರೆಂಬುದು ಸುಳ್ಳು- ಜಿ.ಆರ್

ಮೊದಲಿಗೆ ಇಂತಹ ಹೀನ ಆಚರಣೆಗಳ ತಾರತಮ್ಯಗಳನ್ನು ಸಮಾಜಕ್ಕೆ ಹೇಗೆ ಒಪ್ಪಿಸಲಾಗುತ್ತದೆ? ಶೂದ್ರರೇಕೆ ಬ್ರಾಹ್ಮಣ ಯಜಮಾನಿಕೆಯನ್ನು ಒಪ್ಪಿಕೊಳ್ಳಬೇಕು? ತಮ್ಮನ್ನು ತಾವೇ ಅಪಮಾನಿಸಿಕೊಳ್ಳಬೇಕು? ಗಂಭೀರವಾಗಿ ಯೋಚಿಸಿದರೆ ಮಾತ್ರ ಇದು ಅರಿವಿಗೆ ಬರುವ ಸಂಗತಿ. ಕಳೆದ ಐದಾರು ದಶಕಗಳಲ್ಲಿ  ತೀವ್ರ ಗತಿಯಲ್ಲಿ ಮುನ್ನೆಲೆಗೆ ಬಂದ ಸಾಂಸ್ಕೃತಿಕ ವಸಾಹತುಶಾಹಿಯು ಮೊದಲಿಗೆ ಕೆಲವು ದುಷ್ಟ ಸಮೀಕರಣಗಳನ್ನು ಸೃಷ್ಟಿಸಿ ಮುಂದಿಟ್ಟು ಅವುಗಳಿಗೆ ಅನೇಕ ತಂತ್ರಗಾರಿಕೆಗಳ ಮೂಲಕ ಶೂದ್ರ ಸಮೂಹಗಳ ಒಪ್ಪಿಗೆಯನ್ನು ಉತ್ಪಾದಿಸಿಕೊಳ್ಳುತ್ತದೆ. ವೈದಿಕರ ಯಜಮಾನಿಕೆಯನ್ನು ಒಪ್ಪಿಕೊಂಡರೆ ಲೋಕಕ್ಕೆ ಒಳಿತಾಗುತ್ತದೆ; ಅದೇ ಸತ್ಯ, ಇದೆಲ್ಲ ದೇವರೇ ಮುಂದಿಟ್ಟ ಸತ್ಯಗಳು ಇತ್ಯಾದಿ ಸುಳ್ಳುಗಳನ್ನು ಮೇಲಿಂದ ಮೇಲೆ ಹೇಳಿ ಭಾವನಾತ್ಮಕವಾಗಿ ಶೂದ್ರ ಸಮೂಹಗಳನ್ನು  ಅಡಿಯಾಳುಗಳನ್ನಾಗಿಸಿಕೊಳ್ಳುತ್ತಾರೆ. ಅಂತಹ ಕೆಲವು ದುಷ್ಟ ಸಮೀಕರಣಗಳ ಮೂಲಕ ನಿತ್ಯದ ಬದುಕನ್ನು ಅವು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತವೆ. ಸಾರ್ವಜನಿಕ ಬದುಕನ್ನು ಮತ್ತು ಅಧಿಕಾರ ಕೇಂದ್ರಗಳನ್ನೂ ಅವು ತಮ್ಮ ಹಿಡಿತಕ್ಕೆ ತೆಗೆದುಕೊಂಡಿವೆ. ಅಂತಹ ಕೆಲವು ದುಷ್ಟ ಸಮೀಕರಣಗಳ ಒಂದೆರಡು ಉದಾಹರಣೆಗಳನ್ನು ಕೊಡುವುದಾದರೆ:

ಅ) ವೈದಿಕ ಧರ್ಮವೇ ನಿಜವಾದ ಹಿಂದೂ ಧರ್ಮ. ಶೂದ್ರ ಹಿಂದೂಧರ್ಮವು ಅದರ ಅಡಿಯಾಳು.

ಆ) ವೈದಿಕ ಆಚರಣೆಗಳೇ ಹಿಂದೂ ಧರ್ಮದ ಆಚರಣೆಗಳು. ಅನ್ನಾಹಾರಗಳಿಂದ ಹಿಡಿದು ಎಲ್ಲ ವೈದಿಕ ಆಚರಣೆಗಳೂ ಮಾದರಿ ಆಚರಣೆಗಳು. (ಉದಾ: ಮೀನು/ಮಾಂಸ ತಿಂದು ದೇವಸ್ಥಾನಗಳಿಗೆ ಹೋಗಬಾರದು, ಸಸ್ಯಾಹಾರ ಶ್ರೇಷ್ಠವಾದುದು ಮಾಂಸಾಹಾರ ಮೈಲಿಗೆ, ಸಂಸ್ಕೃತ ಶ್ರೇಷ್ಠವಾದುದು ಕನ್ನಡ ಅದರ ಅಡಿಯಾಳು ಇತ್ಯಾದಿ)

ಇ) ವೈದಿಕತೆಗೆ ಅಪಮಾನ ಮಾಡಿದರೆ ಮುಕ್ತಿ ದೊರಕುವುದಿಲ್ಲ.

ಈ) ಜಾತಿ/ವರ್ಣ ವ್ಯವಸ್ಥೆ ಮನುಷ್ಯ ಮಾಡಿದ್ದಲ್ಲ. ಶಾಸ್ತ್ರ ನಿರ್ಮಿತ/ದೈವ ನಿರ್ಮಿತ. ಅದನ್ನು ಪ್ರಶ್ನಿಸಬಾರದು.

ಈ) ಸಂಸ್ಕೃತಿಯ ವ್ಯಾಖ್ಯಾನದ ಯಜಮಾನಿಕೆ ಇರುವುದು ವೈದಿಕತೆಗೆ ಹೊರತು ಶೂದ್ರ ಧರ್ಮಕ್ಕಲ್ಲ. (ಉದಾಹರಣೆಗೆ ಮಕ್ಕಳಿಗೆ ಯಾವ ಆಹಾರ ಶ್ರೇಷ್ಠ? ಮೊಟ್ಟೆ ಮಾಂಸ, ಮೀನು ಮುಂತಾದುವುಗಳೋ ಈರುಳ್ಳಿ ಇಲ್ಲದ ಉಪ್ಪಿಟ್ಟೋ?)

ಉ)ಮೇಲುಜಾತಿಗಳ ಶ್ರೇಷ್ಠತೆಯನ್ನು ಪ್ರಶ್ನಿಸಬಾರದು. ಮೇಲು-ಕೀಳನ್ನು ಪಾಲಿಸಿದರೆ ಲೋಕಕ್ಕೆ ಒಳಿತಾಗುತ್ತದೆ. ಇತ್ಯಾದಿ.

ವೈದಿಕ ಧರ್ಮವು ಅಲ್ಲಲ್ಲಿ ಎಷ್ಟು ಬೇಕೋ ಅಷ್ಟು ಉದಾರ ನೀತಿಗಳನ್ನೂ ಇಟ್ಟುಕೊಂಡಿದೆ. ಏನೇ ಆದರೂ ಸಮಾನ ಸ್ಥಾನಮಾನಗಳನ್ನು ಮಾತ್ರ ಕೊಡದ ತಾರತಮ್ಯಗಳು ಎಂದಿಗೂ ಇರುವಂತೆ ತಮ್ಮ ಯಜಮಾನಿಕೆಯನ್ನು ಉಳಿಸಿಕೊಂಡೇ ಬಂದಿದೆ. ಉದಾಹರಣೆಗೆ ಭಕ್ತಿಪಂಥಗಳ ಕೆಲವು ಉದಾರ ನಿಲುವುಗಳು ಆಕರ್ಷಕವಾಗಿ ಕಂಡರೂ ಒಟ್ಟಾರೆ ವೈದಿಕ ಯಜಮಾನಿಕೆಯನ್ನು ಅವು ತಿರಸ್ಕರಿಸುವುದಿಲ್ಲ.  ಶೂದ್ರ ಧರ್ಮವು ಬೌದ್ಧ, ಜೈನ, ನಾಥ, ಸಿದ್ಧ, ಶೈವ, ವೀರಶೈವ, ಆರೂಢ, ಅಚಲ, ಅವಧೂತ, ಶರಣ, ಆಜೀವಿಕ, ಕಾಪಾಲಿಕ, ವಿವಿಧ ಧಾರೆಗಳ ತತ್ವಪದಕಾರರು ಹಾಗೂ ವಿವಿಧ ಧಾರೆಗಳ ವಚನಕಾರರು ಮುಂತಾದ ಧಾರೆಗಳಿಂದ ಪ್ರಣೀತವಾದ ಅನೇಕ ಆಕರಗಳನ್ನಾಧರಿಸಿವೆ. ಇವುಗಳನ್ನು ಎಂದಿನಿಂದಲೂ ವೈದಿಕ ಧರ್ಮ ಮತ್ತು ಶ್ರಮಣಧರ್ಮ (ಶೂದ್ರ ಧರ್ಮ) ಎಂದು ಕರೆದುಕೊಂಡೇ ಬಂದಿದ್ದಾರೆ. ಹಿಂದೆಲ್ಲ ಇವು ಚಿಂತನಾ ಧಾರೆಗಳಾಗಿದ್ದವು. ಹಾಗಾಗಿ ತಾತ್ವಿಕರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೋಗಿ ಬರಲು ಅವಕಾಶವಿತ್ತು. ಹಾಗಾಗಿಯೇ ಅನೇಕ ಶೂದ್ರರೂ ಉಪನಿಷತ್ತುಗಳನ್ನು, ವೇದಗಳನ್ನು ಅನುಸಂಧಾನ ಮಾಡಿದ್ದಾರೆ. ಇವುಗಳನ್ನು ‘ಹಿಂದೂ ಧರ್ಮ’ ಎಂಬ ಒಂದೇ ಹೆಸರಿನಿಂದ ಕರೆಯಲು ಆರಂಭಿಸಿದ್ದು ತೀರಾ ಇತ್ತೀಚೆಗೆ. ಒಂದಿನ್ನೂರು ಮುನ್ನೂರು ವರ್ಷಗಳ ಈಚೆಗೆ.  ಹೀಗೆ ಒಂದೇ ಹೆಸರಿನಿಂದ ಒಂದೇ ಧಾರ್ಮಿಕ  ಗುಂಪು ಎಂದು, ಒಂದೇ ಧರ್ಮ ಎಂದು, ಒಂದೇ ಬದುಕಿನ ಕ್ರಮ ಎಂದು ಗುರುತಿಸುವುದರಿಂದಾಗಿ ಶೂದ್ರ ಸಮೂಹಗಳಿಗೆ ತಮ್ಮ ಧರ್ಮದ ಒಳಗೇ ತಮಗೇ ಆಗುತ್ತಿರುವ ಅನ್ಯಾಯವನ್ನು ವಿರೋಧಿಸದಂತಾಗಿದೆ. ಆ ‘ಒಂದು’ ಯಾವುದು ಅಂದರೆ ವೈದಿಕ ಧರ್ಮ ಎಂಬಂತೆ ಆಗಿದೆ.

vachanakararu
ವಚನಕಾರರು

ವೈದಿಕ ಧರ್ಮವು ಶೂದ್ರ ಧರ್ಮವನ್ನು ತನ್ನ ವಸಾಹತುವನ್ನಾಗಿಸಿಕೊಂಡಿದೆ. ಈ ಬೆಳವಣಿಗೆಗೆ ದೀರ್ಘಕಾಲೀನ ಇತಿಹಾಸ ಇದೆ. ಈ ಬ್ರಾಹ್ಮಣ ಯಜಮಾನಿಕೆಯ ವಿರುದ್ಧ ಬುದ್ಧನಿಂದ ಹಿಡಿದು ಅಂಬೇಡ್ಕರ್‌ವರೆಗೆ ನಾನಾ ರೀತಿಯ ಪ್ರತಿಭಟನೆಗಳು, ಚಳವಳಿಗಳು ನಡೆದೇ ಇವೆ. ಆದರೂ ಅದರ ಯಜಮಾನಿಕೆಯ ಕಾಲ ಇನ್ನೂ ಮುಗಿದಿಲ್ಲ. ಹಾಗಾದರೆ ಈ ಎರಡೂ ಧರ್ಮಗಳ ನಡುವೆ ಇರುವ ಸಂಬಂಧ ಯಾವ ರೀತಿಯದ್ದು? ಒಂದೊಂದರ ತಾತ್ವಿಕ ನಿಲುವುಗಳು ಯಾವುದು? ಒಂದೇ ಧರ್ಮ ಎಂದು ಕರೆದುಕೊಂಡಿದ್ದರೂ ಅವೇಕೆ ಒಂದೇ ಧರ್ಮ ಅಲ್ಲ, ಮುಂತಾದ ಸಂಗತಿಗಳನ್ನು ಪರಿಶೀಲಿಸಬಹುದು.

  • * ವೈದಿಕ ಧರ್ಮವು ವರ್ಣಾಶ್ರಮ, ಜಾತಿಯನ್ನಾಧರಿಸಿದ ತಾರತಮ್ಯ, ಲಿಂಗ ತಾರತಮ್ಯ, ಅಸ್ಪೃಶ್ಯತೆ, ಮೇಲು-ಕೀಳು ಇತ್ಯಾದಿ ತಾರತಮ್ಯಗಳನ್ನಾಧರಿಸಿವೆ. ಶೂದ್ರ ಧರ್ಮದಲ್ಲಿಯೂ ಅನೇಕ ರೀತಿಯ ತಾರತಮ್ಯಗಳು ಆಚರಣೆಯಲ್ಲಿವೆ.
  • * ವೈದಿಕ ಧರ್ಮವು ತನ್ನ ಧರ್ಮಗ್ರಂಥಗಳನ್ನು ಪ್ರಶ್ನಿಸುವುದನ್ನು ಒಪ್ಪುವುದಿಲ್ಲ. ಶೂದ್ರ ಧರ್ಮವು ವೈದಿಕ ತಾತ್ವಿಕ ಆಕರಗಳು ಸೇರಿದಂತೆ ಶಬ್ದ ಪ್ರಮಾಣವನ್ನು ನಿರಾಕರಿಸುತ್ತವೆ. (ಉದಾಹರಣೆಗೆ ವೇದವೆಂಬುದು ಓದಿನ ಮಾತು, ಶಾಸ್ತ್ರ ವೆಂಬುದು ಸಂತೆಯ ಸುದ್ದಿ…  ಇತ್ಯಾದಿ)
  • * ವೈದಿಕ ಧಾರೆ ಯಜ್ಞ, ಪೂಜೆ ಇತ್ಯಾದಿ ಆಚರಣಾ  ಪ್ರಧಾನ ಶ್ರಮಣಧಾರೆ ಕಸುಬು, ಶ್ರಮ, ಕಾಯಕ ಪ್ರಧಾನ
  • * ವೈದಿಕ ಧಾರೆ ಕರ್ಮ ಸಿದ್ಧಾಂತವನ್ನಾಧರಿಸಿದ್ದು ಶ್ರಮಣಧಾರೆ ನಿಸರ್ಗನಿ ಯಮವನ್ನಾಧರಿಸಿದ್ದು
  • * ವೈದಿಕ ಧಾರೆ ವಿಧಿವಾದಿ ಶ್ರಮಣಧಾರೆಯಲ್ಲಿನ ಅನೇಕ ಪ್ರಸ್ಥಾನಗಳು ಕಾರ್ಯಕಾರಣವಾದವನ್ನು ಮುಂದಿಡುತ್ತವೆ.
  • * ವೈದಿಕ ಧಾರೆ ದ್ವೆತ ಅದ್ವೈತಗಳನ್ನು ಮುಂದಿಟ್ಟರೆ ಶ್ರಮಣಧಾರೆ ಬಯಲನ್ನು, ಶೂನ್ಯತೆಯನ್ನು, ಅದ್ವಯವನ್ನು ಮುಂದಿಡುತ್ತದೆ.
  • * ವೈದಿಕ ಧಾರೆ ಮುಕ್ತಿಯ ಸಾಧ್ಯತೆ ಎಲ್ಲರಿಗೂ ಇಲ್ಲವೆಂದರೆ ಶ್ರಮಣಧಾರೆ ಎಲ್ಲರಿಗೆ ಮುಕ್ತಿ ಸಾಧ್ಯ ಎನ್ನುತ್ತದೆ.

    ಕರ್ನಾಟಕದ ಮಟ್ಟಿಗೆ ಶ್ರಮಣಧಾರೆಗಳ ಚಾರಿತ್ರಿಕ ಬೆಳವಣಿಗೆಗೆ ಅತ್ಯಂತ ದೀರ್ಘಕಾಲೀನ ಚರಿತ್ರೆ ಇದೆ. ಆದರೆ ಅದೆಲ್ಲ ಮರವಿಗೆ ಸಂದಿದೆ. ಶೂದ್ರ ಧರ್ಮಕ್ಕೂ ಕರ್ನಾಟಕಕ್ಕೂ ಅತ್ಯಂತ ಗಾಢ ಸಂಬಂಧಗಳಿವೆ. ಹಾಗೆ ನೋಡಿದರೆ ಶೂದ್ರ ಧರ್ಮದ ಎಲ್ಲ ಧರ್ಮಗಳ ಸಂಗಮಭೂಮಿಯಾಗಿ ಕರ್ನಾಟಕವನ್ನು ಗುರುತಿಸಬಹುದು. ಅಂತಹ ಒಂದು ಶ್ರಮಣ ತಾತ್ವಿಕ ಆಕರವಾದ ತತ್ವಪದಗಳನ್ನು ಒಂದು ದಶಕದ ಹುಡುಕಾಟದ ಫಲವಾಗಿ ಐವತ್ತು ಸಂಪುಗಳ ರೂಪದಲ್ಲಿ ಮುಂದಿಡಲಾಗಿದೆ. ತತ್ವಪದಗಳನ್ನು ಅವಲೋಕಿಸಿದರೆ ನಾವು ಕಳೆದುಕೊಂಡಿರುವ ಸಾಂಸ್ಕೃತಿಕ ಅಸ್ಮಿತೆಯ ಸ್ವರೂಪ ಅರಿವಾಗುತ್ತದೆ.

    ಇದನ್ನೂ ಓದಿರಿ: ಭಾರತ ‘ಮುಸ್ಲಿಂ ರಾಷ್ಟ್ರ’ವಾಗಲು ಸಾಧ್ಯವೇ? ಅಸಲಿ ಸಂಗತಿಗಳೇನು?

    ಇಂದು ಉದಾರಿ ಅದ್ವೈತವು ಭಾರತವನ್ನು ವಿಶ್ವ ಮಾರುಕಟ್ಟೆಗೆ ಸಿದ್ಧಪಡಿಸುವ ಕೆಲಸವನ್ನು ನಿರ್ವಹಿಸುತ್ತಿದೆ. ಇದಕ್ಕೆಂದೇ ಅನೇಕ ದೇವಮಾನವರು ನಿಯೋಜಿತರಾಗಿದ್ದಾರೆ. ಉಸಿರು ಬಿಡುವುದನ್ನು ಮತ್ತು ತೆಗೆದುಕೊಳ್ಳುವುದನ್ನು ಹೇಳಿಕೊಟ್ಟು ಸಾವಿರಾರು ಕೋಟಿ ಹಣ ಮಾಡುವವರಿದ್ದಾರೆ. ಅದಕ್ಕೆ ಅಗತ್ಯವಾದ ಜೀವನಕ್ರಮವನ್ನು, ಚಿಂತನಾಕ್ರಮಗಳನ್ನು, ಸಂಸ್ಕೃತಿ ಸಂರಚನೆಗಳನ್ನು, ಧಾರ್ಮಿಕತೆಯನ್ನು ತಮಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿಕೊಳ್ಳುತ್ತಾರೆ ಮತ್ತು ಪ್ರಚೋದಿಸುತ್ತಾರೆ.  ನಮ್ಮ ಪಾರಂಪರಿಕ ಅರಿವು ಕೂಡ ಅದಕ್ಕೆ ತಾನು ಮಾರಬಲ್ಲ ಸರಕಾಗುತ್ತದೆ. ಈ ವೈದಿಕಕೇಂದ್ರಿತ ಧಾರ್ಮಿಕ ಸಂರಚನೆಗಳು ಸ್ಥಳೀಯ ಧಾರ್ಮಿಕತೆಯ ಮೇಲೆ ನಡೆಸುತ್ತಿರುವ ನಿರಂತರ ಯಜಮಾನಿಕೆಯನ್ನು ದಾಟಿ ಆಚೆಗೆ ನೋಡುವುದು ಒಂದು ಸವಾಲೇ ಸರಿ. ಅಧಿಕಾರ ಕೇಂದ್ರಗಳೊಡನೆ ನಿರಂತರವಾದ ಅಪವಿತ್ರಮೈತ್ರಿಯನ್ನು ಸಾಧಿಸುತ್ತಲೇ ಬಂದಿರುವ ವೈದಿಕ ಧಾರ್ಮಿಕತೆಯು ಸ್ಥಳೀಯವಾದ ಯಾವುದನ್ನೂ ಬಾಳಗೊಟ್ಟಿಲ್ಲ.

    ಈ ಸಾಂಸ್ಕೃತಿಕ ವಸಾಹತುಶಾಹಿಗೆ ಅಗತ್ಯವಾದ ಒಪ್ಪಿಗೆಗಳನ್ನು ಉತ್ಪಾದಿಸಿಕೊಡುವ ಕೆಲಸವನ್ನು ಈಗ ನಿರ್ವಹಿಸುತ್ತಿರುವವರು ಯಾರು? ಈ ಪ್ರಶ್ನೆಗೆ ಉತ್ತರವನ್ನು ಹುಡುಕಿ ತೆಗೆಯಬೇಕಿಲ್ಲ. ಬದಲಿಗೆ ಕಣ್ಣಿಗೆ ರಾಚುವಂತೆ ಅದನ್ನು ‘ಭಾರತೀಯ’ ಎನ್ನುವ ಹೆಸರಿನಡಿಯಲ್ಲಿ ಅದೇ ವೈದಿಕತೆಯೆ ನಿರ್ವಹಿಸುತ್ತಿದೆ. ಅದಕ್ಕಾಗಿ ಕೆಲವು ಹತಾರುಗಳನ್ನು ಹೊಂದಿಸಿಕೊಂಡಿದೆ. ಸಮೂಹದ ಒಪ್ಪಿಗೆಯನ್ನು ಉತ್ಪಾದಿಸಿಕೊಡುವ ಕೆಲಸವನ್ನು ಹಿಂದೆ ಪ್ರಮಾಣಗಳು ನಿರ್ವಹಿಸುತ್ತಿದ್ದವು. ಪುರಾಣದಲ್ಲಿ ಅದನ್ನು ವಿಷ್ಣು ನಿರ್ವಹಿಸಿದರೆ, ಚರಿತ್ರೆಯಲ್ಲಿ ಚಾಣಕ್ಯ ನಿರ್ವಹಿಸಿದನು.  ಈಗ ಅದನ್ನು ಮಾಧ್ಯಮಗಳು ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು, ಕಾರ್ಪೊರೇಟ್ ವಲಯಗಳು ನಿರ್ವಹಿಸುತ್ತಿವೆ.

    ಈ ಸಾಂಸ್ಕೃತಿಕ ರಾಜಕಾರಣವನ್ನು ನಿಭಾಯಿಸದೆ ಹೋದರೆ ಸಮಾನ ಅವಕಾಶಗಳ ಪ್ರಜಾಸತ್ತೆ ಕೇವಲ ಕನಸಾಗಿ ಉಳಿಯುತ್ತದೆ. ಸಾಂಸ್ಕೃತಿಕ ರಾಜಕಾರಣ ನೇರವಾಗಿ ನಿತ್ಯದ ಬದುಕಿನೊಡನೆ ಸಂಘರ್ಷಕ್ಕಿಳಿಯುತ್ತದೆ. ಅದು ದೇಹಸಮಾನತೆಯನ್ನು ನಿರಾಕರಿಸುವ ಮೂಲಕ, ಅನ್ನ ಸಮಾನತೆಯನ್ನು ನಿರಾಕರಿಸುವ ಮೂಲಕ, ನೀರಿನ ಸಮಾನತೆಯನ್ನು ನಿರಾಕರಿಸುವ ಮೂಲಕ, ಭೂಮಿ, ಗಾಳಿ, ಬೆಳಕಿನ ಸಮಾನತೆಯನ್ನು ನಿರಾಕರಿಸುವ ಮೂಲಕ ಅಸಮಾನತೆಯನ್ನು ಮುಂದುಮಾಡುತ್ತದೆ. ಜಾತಿಯ ಅಸಮಾನತೆಯನ್ನು ಒಪ್ಪದ ಭಾರತದ ಅನೇಕ ತಾತ್ವಿಕ ಪಂಥಗಳಾದ ನಾಥ, ಸೂಫಿ, ಸಿದ್ಧ ಪರಂಪರೆಗಳನ್ನು ಮೂಲೆಗಟ್ಟಿ, ಉಸಿರುಗಟ್ಟಿಸಿ ನಿರ್ಜೀವಗೊಳಿಸಲಾಗಿದೆ. ಮಹಾಮಾನವ ಬುದ್ಧಗುರುವಿನ ಕರುಣಾ ಮೈತ್ರಿಯ ಸಮಾನತೆಗೆ ವಿಶ್ವದ ದೊಡ್ಡ ಸಮೂಹ ಸ್ಪಂದಿಸಿತು.  ಆದರೆ ಈ ನೆಲದಿಂದಲೇ ಅದನ್ನು ಹೊರಗೆ ಅಟ್ಟಲಾಯಿತು.  ಹೊರಗೆ ನಿಲ್ಲಿಸುವವರಿಗೆ ಇದೇನೂ ಹೊಸದಲ್ಲ. ಕನಕದಾಸನನ್ನು ಹೊರಗೆ ನಿಲ್ಲಿಸಿದ್ದೊಂದನ್ನೆ ಮಾತನಾಡುತ್ತ ಬಂದಿದ್ದೇವೆ. ಇಡಿಯಾಗಿ ಶೂದ್ರ ಸಮೂಹಗಳು ಒಂದಲ್ಲ ಒಂದು ಆವರಣದಲ್ಲಿ ಒಂದಲ್ಲ ಒಂದು ಹಂತದಲ್ಲಿ ಹೊರಗೆ ನಿಂತಿರುವುದು ಗೊತ್ತಾಗುತ್ತಿಲ್ಲ. ನಮ್ಮ ದೇವರುಗಳದ್ದೂ ಇದೇ ಪಾಡು. ಇದೆಲ್ಲ ಅಚಾನಕ್ಕಾಗಿ ನಡೆದಿರುವ ಸಂಗತಿಗಳಲ್ಲ.  ಇಲ್ಲಿಯ ಎಲ್ಲ ಆಯ್ಕೆ ಮತ್ತು ನಿರಾಕರಣೆಗಳ ಹಿಂದೆ ಬಲವಾದ ಸಾಂಸ್ಕೃತಿಕ ರಾಜಕಾರಣವಿದೆ.

    ಒಂದಂತೂ ನಿಶ್ಚಿತ. ನಾವು ಭಾರತೀಯರು ಊನಗೊಂಡ ಜೀವನಕ್ರಮವೊಂದನ್ನು ಅನ್ವಯಿಸಿಕೊಂಡು ಬಾಳುತ್ತಿದ್ದೇವೆ. ಈ ಊನ ಎಲ್ಲಿಂದ ಬಂದದ್ದು? ಇದನ್ನು ನಾವೇಕೆ ಒಪ್ಪಿ ಬಾಳುತ್ತಿದ್ದೇವೆ? ಹಾಗಾದರೆ ಭಾರತೀಯ ಸಮಾಜದ ಈ ಊನಗೊಂಡ ಜೀವನ ಮೀಮಾಂಸೆಯ ಆಕರ ಯಾವುದು? ನಮ್ಮ ಬದುಕಿನ ಈ ಅಪಾರ ಸಂಕಟಗಳಿಗೆ ಅದೇ ಕಾರಣವೆ? – ಈ ಪ್ರಶ್ನೆಗಳನ್ನು ಶ್ರಮಣಧಾರೆಗಳ ಸಾಧಕರು, ತಾತ್ವಿಕರು ಗಂಭೀರವಾಗಿ ಶೋಧಿಸಿದ್ದಾರೆ. ಈ ಹೊತ್ತು ಶೂದ್ರ ಶೂದ್ರರ ನಡುವೆ ದಲಿತ ಸಮೂಹಗಳ ನಡುವೆ ಗಂಭೀರವಾದ ತಾರತಮ್ಯದ ಆಚರಣೆಗಳಿವೆ. ಸಂವಿಧಾನವನ್ನು ಒಪ್ಪಿಕೊಂಡಿರುವ ನಾವು ಅವುಗಳನ್ನು ಇಚ್ಛಾಪೂರ್ವಕವಾಗಿ ತೊಡೆದು ಹಾಕಬೇಕೆ ಹೊರತು ಬೇರೊಬ್ಬರ ಮಾದರಿಗಳನ್ನು ಮುಂದಿಟ್ಟುಕೊಂಡು ಅವುಗಳನ್ನು ಜೀವಂತ ಇಟ್ಟುಕೊಳ್ಳುವುದು ಒಪ್ಪುವ ಮಾತಲ್ಲ. ಆದರೂ ಅವೆಲ್ಲ ಅಣ್ಣತಮ್ಮಂದಿರ ನಡುವಿನ ಸಂಗತಿಗಳು. ಶೂದ್ರ ಧರ್ಮದ ಪ್ರಮುಖ ಲಕ್ಷಣವಾದ ಅನ್ಯಮತ ಸಹಿಷ್ಣುತೆಯನ್ನು ಕಾಪಾಡಿಕೊಳ್ಳುವ ಮತ್ತು ನಮ್ಮ ಆಚರಣೆಗಳನ್ನು ಸಂವಿಧಾನದ ಬೆಳಕಿನಲ್ಲಿ ಮತ್ತು ವಿಜ್ಞಾನದ ಬೆಳಕಿನಲ್ಲಿ ಮರುರೂಪಿಸಿಕೊಳ್ಳುವ ಅಗತ್ಯವಿದೆ. ನಮ್ಮ ಸಾಂಸ್ಕೃತಿಕ ಜೀವಂತಿಕೆಯನ್ನು ಕಾಪಾಡಿಕೊಳ್ಳುವುದು ಈ ಹೊತ್ತಿನ ತುರ್ತು.

    boodalu e1733894753134
    ಎಸ್. ನಟರಾಜ ಬೂದಾಳು
    + posts

    ಎಸ್.ನಟರಾಜ ಬೂದಾಳು ಅವರು ಕನ್ನಡದ ಪ್ರಮುಖ ಚಿಂತಕರಲ್ಲಿ ಒಬ್ಬರು. ಬೌದ್ಧತಾತ್ವಿಕತೆಯ ನೆಲೆಗಳನ್ನು ಮನಮುಟ್ಟುವಂತೆ ಓದುಗರಿಗೆ ಒದಗಿಸಿಕೊಟ್ಟ ಅಗ್ರಗಣ್ಯ ಬರಹಗಾರರು. ಶ್ರಮಣ ಪರಂಪರೆಗಳ ಚರ್ಚೆಗೆ ಹೊಸ ಆಯಾಮ ಒದಗಿಸಿಕೊಟ್ಟ ಇವರು, 'ಸರಹಪಾದ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಕಾವ್ಯಮೀಮಾಂಸೆ, ನಾಗಾರ್ಜುನನ ಮೂಲಮಧ್ಯಮಕಕಾರಿಕಾ, ನಾಗಾರ್ಜುನ ಅಲ್ಲಮಪ್ರಭು, ಪ್ರತ್ಯೇಕ ಬುದ್ಧ ಅಲ್ಲಮಪ್ರಭು, ಹಿಂದಣ ಹೆಜ್ಜೆಯನ್ನರಿತಲ್ಲದೆ, ಪ್ರಜ್ಞಾ ಪಾರಮಿತ ಹೃದಯ ಸೂತ್ರ, ಬೌದ್ಧ ಮಧ್ಯಮ ವರ್ಗ, ಪ್ರತೀತ್ಯಾ ಸಮುತ್ಪಾದ, ಮಾತಿನ ಮೊದಲು, ದಾವ್ ದ ಚಿಂಗ್, ಈ ಕ್ಷಣದ ಶಕ್ತಿ ಮನ ಮಗ್ನತೆ ಮೊದಲಾದ ಕೃತಿಗಳನ್ನು ಬರೆದಿದ್ದಾರೆ.

    ಪೋಸ್ಟ್ ಹಂಚಿಕೊಳ್ಳಿ:

    ಎಸ್. ನಟರಾಜ ಬೂದಾಳು
    ಎಸ್. ನಟರಾಜ ಬೂದಾಳು
    ಎಸ್.ನಟರಾಜ ಬೂದಾಳು ಅವರು ಕನ್ನಡದ ಪ್ರಮುಖ ಚಿಂತಕರಲ್ಲಿ ಒಬ್ಬರು. ಬೌದ್ಧತಾತ್ವಿಕತೆಯ ನೆಲೆಗಳನ್ನು ಮನಮುಟ್ಟುವಂತೆ ಓದುಗರಿಗೆ ಒದಗಿಸಿಕೊಟ್ಟ ಅಗ್ರಗಣ್ಯ ಬರಹಗಾರರು. ಶ್ರಮಣ ಪರಂಪರೆಗಳ ಚರ್ಚೆಗೆ ಹೊಸ ಆಯಾಮ ಒದಗಿಸಿಕೊಟ್ಟ ಇವರು, 'ಸರಹಪಾದ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಕಾವ್ಯಮೀಮಾಂಸೆ, ನಾಗಾರ್ಜುನನ ಮೂಲಮಧ್ಯಮಕಕಾರಿಕಾ, ನಾಗಾರ್ಜುನ ಅಲ್ಲಮಪ್ರಭು, ಪ್ರತ್ಯೇಕ ಬುದ್ಧ ಅಲ್ಲಮಪ್ರಭು, ಹಿಂದಣ ಹೆಜ್ಜೆಯನ್ನರಿತಲ್ಲದೆ, ಪ್ರಜ್ಞಾ ಪಾರಮಿತ ಹೃದಯ ಸೂತ್ರ, ಬೌದ್ಧ ಮಧ್ಯಮ ವರ್ಗ, ಪ್ರತೀತ್ಯಾ ಸಮುತ್ಪಾದ, ಮಾತಿನ ಮೊದಲು, ದಾವ್ ದ ಚಿಂಗ್, ಈ ಕ್ಷಣದ ಶಕ್ತಿ ಮನ ಮಗ್ನತೆ ಮೊದಲಾದ ಕೃತಿಗಳನ್ನು ಬರೆದಿದ್ದಾರೆ.

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

    ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

    ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

    ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

    ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

    ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

    ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

    'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...