ಮುಖ್ಯಮಂತ್ರಿ ಹುದ್ದೆಗೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಸಂಘರ್ಷ ಪೀಡಿತ ಮಣಿಪುರದಲ್ಲಿ ಫೆಬ್ರವರಿ 13ರಂದು ರಾಷ್ಟ್ರಪತಿ ಆಡಳಿತ ಜಾರಿಯಾಯಿತು. ಗುರುವಾರ (ಫೆಬ್ರುವರಿ 20ರಂದು) ಆದ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದ ರಾಜ್ಯಪಾಲ ಅಜಯ್‌ಕುಮಾರ್ ಭಲ್ಲಾ ಪ್ರಮುಖ ಆದೇಶವೊಂದನ್ನು ಹೊರಡಿಸಿದ್ದಾರೆ. ಮಣಿಪುರ ರಾಜ್ಯದ ಮುಖ್ಯ ದಿನಪತ್ರಿಕೆಗಳೆಲ್ಲವೂ ಮೊದಲ ಪುಟದಲ್ಲೇ ಆ ಸುದ್ದಿಯನ್ನು ಪ್ರಕಟಿಸಿವೆ. ರಾಜ್ಯಪಾಲರ ನಡೆ, ಮಣಿಪುರದಲ್ಲಿ 21 ತಿಂಗಳ ಬಳಿಕ ಶಾಂತಿ ಮರುಸ್ಥಾಪಿಸಬಹುದೆಂಬ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸಂಘರ್ಷದಲ್ಲಿ ಭಾಗಿಯಾಗಿರುವ ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳು ಗವರ್ನರ್ ಕರೆಗೆ ಹೇಗೆ ಸ್ಪಂದಿಸುತ್ತವೆ ಎಂಬುದರ ಮೇಲೆ ಮಣಿಪುರದ ಭವಿಷ್ಯ ಬದಲಾಗುವ ಸಾಧ್ಯತೆ ಇದೆ. ರಾಜ್ಯಪಾಲರ ಆದೇಶಕ್ಕೆ ಕ್ರಿಯೆ, ಪ್ರತಿಕ್ರಿಯೆಗಳು ಆರಂಭವಾಗಿವೆ.
ಇಂಫಾಲ ಕಣಿವೆಯಲ್ಲಿ ಪ್ರಧಾನವಾಗಿ ನೆಲೆಸಿರುವ ಮೈತೇಯಿಗಳನ್ನು, ಗುಡ್ಡಗಾಡಿನಲ್ಲಿ ವಾಸಿಸುವ ಕುಕಿಗಳನ್ನು ಉದ್ದೇಶಿಸಿ ಆದೇಶ ಹೊರಡಿಸಿರುವ ರಾಜ್ಯಪಾಲ ಭಲ್ಲಾ, “ಎಲ್ಲ ಸಮುದಾಯಗಳ ಜನರಲ್ಲಿ, ವಿಶೇಷವಾಗಿ ಕಣಿವೆ ಮತ್ತು ಗುಡ್ಡಗಾಡಿನ ಯುವಕರಲ್ಲಿ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಲೂಟಿ ಮಾಡಲ್ಪಟ್ಟ ಮತ್ತು ಅಕ್ರಮವಾಗಿ ಸಂಗ್ರಹಿಸಿರುವ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು ಮುಂದಿನ ಏಳು ದಿನಗಳಲ್ಲಿ ಹಿಂತಿರುಗಿಸಬೇಕೆಂದು ಕೋರುತ್ತೇನೆ. ಇಂದಿನಿಂದಲೇ (ಗುರುವಾರದಿಂದಲೇ) ಈ ಆದೇಶ ಜಾರಿಗೆ ಬರುತ್ತಿದೆ. ಏಳು ದಿನಗಳೊಳಗೆ ನಿಮ್ಮ ಹತ್ತಿರದ ಪೊಲೀಸ್ ಠಾಣೆ, ಹೊರಠಾಣೆ ಅಥವಾ ಭದ್ರತಾ ಪಡೆಗಳ ಶಿಬಿರಕ್ಕೆ ಶಸ್ತ್ರಗಳನ್ನು ನೀಡಬಹುದು. ಈ ಪ್ರಕ್ರಿಯೆಯಿಂದಾಗಿ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಖಾತ್ರಿಯ ಸೂಚನೆ ಸಿಗುತ್ತದೆ. ನಿಗದಿತ ಸಮಯದೊಳಗೆ ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸಿದರೆ ಯಾವುದೇ ದಂಡನಾತ್ಮಕ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂಬ ಭರವಸೆಯನ್ನು ನಿಮಗೆ ನೀಡಲು ಬಯಸುತ್ತೇನೆ. ಸೂಚಿತ ದಿನದೊಳಗೆ ಶಸ್ತ್ರಗಳನ್ನು ಹಿಂತಿರುಗಿಸದೆ ಹೋದರೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಉಜ್ವಲ ಭವಿಷ್ಯದ ಭರವಸೆ ಮತ್ತು ವಿಶ್ವಾಸದೊಂದಿಗೆ ನಮ್ಮ ರಾಜ್ಯವನ್ನು ಪುನರ್ ನಿರ್ಮಿಸೋಣ. ಮುಂದೆ ಬಂದು ಶಾಂತಿಯನ್ನು ಆರಿಸಿಕೊಳ್ಳಿರಿ” ಎಂದಿದ್ದಾರೆ. ಫೆಬ್ರವರಿ 27ರ ನಂತರ ಮಣಿಪುರ ರಾಜ್ಯದಲ್ಲಿ ಏನೆಲ್ಲ ಘಟಿಸಬಹುದೆಂಬುದು ಸದ್ಯದ ಆತಂಕ.

ಇದನ್ನೂ ಓದಿರಿ: ‘ದಿ ಇಂಡಿಯಾ ಹೇಟ್ ಲ್ಯಾಬ್’ ಬಿಚ್ಚಿಟ್ಟಿರುವ ದ್ವೇಷಭಾಷಣಗಳ ಆಘಾತಕಾರಿ ಸತ್ಯಗಳು!
2023ರ ಮೇ 3ರಂದು ರಾಜ್ಯದಲ್ಲಿ ಹಿಂಚಾಚಾರ ಆರಂಭವಾದಾಗ ಸರ್ಕಾರಿ ಶಸ್ತ್ರಾಗಾರಗಳಿಂದ ಆಯುಧಗಳನ್ನು ನಾಗರಿಕರು ಲೂಟಿ ಮಾಡಿದ್ದರು. ಪಂಗೈನಲ್ಲಿರುವ ಮಣಿಪುರ ಪೊಲೀಸ್ ತರಬೇತಿ ಕೇಂದ್ರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಿಂದ ಬಂದೂಕುಗಳನ್ನು ಹೊತ್ತೊಯ್ಯಲಾಯಿತು. ಉದ್ರಿಕ್ತ ಗುಂಪುಗಳಿಗೆ ಪೊಲೀಸರೇ ಸಹಕರಿಸಿದ್ದರು ಎಂಬುದಾಗಿ ನಾಗರಿಕರು ಹೇಳಿದ್ದುಂಟು. ಹಲವು ರಾಷ್ಟ್ರೀಯ ಮಾಧ್ಯಮಗಳು ಈ ಕುರಿತು ವರದಿಗಳನ್ನು ಮಾಡಿವೆ. ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಗ್ರೌಂಡ್ ರಿಪೋರ್ಟ್‌ಗಾಗಿ ಮಣಿಪುರಕ್ಕೆ ತೆರಳಿದ್ದ ‘ಈದಿನ.ಕಾಂ’ಗೆ ಪ್ರತಿಕ್ರಿಯಿಸಿದ್ದ ಅಲ್ಲಿನ ಅನೇಕ ನಾಗರಿಕರು, “ಶಸ್ತ್ರಾಸ್ತ್ರ ಲೂಟಿಗೆ ಪೊಲೀಸರೂ ಸಹಕರಿಸಿದ್ದರು” ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದುಂಟು.

ಸರ್ಕಾರವೇ ಹೇಳಿಕೊಂಡಿರುವ ಪ್ರಕಾರ, ಸುಮಾರು 5000 ಬಂದೂಕುಗಳು, ಲಕ್ಷಾಂತರ ಬುಲೆಟ್‌ಗಳು ನಾಪತ್ತೆಯಾಗಿವೆ. ಅವು ನಾಗರಿಕರ ಕೈಗಳಿಗೆ ಸೇರಿವೆ. ಆಯಾ ಸಮುದಾಯಗಳ ಬಂದೂಕು ಪರಿಣಿತರು ಸಾಮಾನ್ಯ ನಾಗರಿಕರಿಗೆ ತರಬೇತಿಯನ್ನೂ ನೀಡಿದ್ದಾಗಿದೆ. ಮಣಿಪುರ ಭೌತಿಕವಾಗಿ ಮತ್ತು ಮಾನಸಿಕವಾಗಿ ಇಬ್ಭಾಗವಾಗಿರುವ ರೀತಿಯನ್ನು ‘ಗ್ರೌಂಡ್ ರಿಪೋರ್ಟ್’ ಸಂದರ್ಭದಲ್ಲಿ ಕಣ್ಣಾರೆ ಕಂಡಿದ್ದೆವು. ಅತ್ತ ಕುಕಿ- ಇತ್ತ ಮೈತೇಯಿಗಳು ವಾಸಿಸುವ ಗ್ರಾಮಗಳ ಗಡಿಗಳಲ್ಲಿ ಬಂಕರ್‌ಗಳು ತಲೆ ಎತ್ತಿದ್ದವು, ಅವುಗಳಲ್ಲಿ ನಿಂತು ಹಳ್ಳಿಯ ಜನಗಳೇ ಬಂದೂಕುಗಳನ್ನು ಹಿಡಿದು ಕಾವಲು ಕಾಯುತ್ತಿದ್ದರು, ಪಾಳಿಯಲ್ಲಿ ಕೆಲಸ ಮಾಡುತ್ತಾ ಊರುಗಳನ್ನು ರಕ್ಷಿಸುತ್ತಿರುವುದಾಗಿ ಹೇಳುತ್ತಿದ್ದರು. ಕುಕಿ ಮತ್ತು ಮೈತೇಯಿ ಸಮುದಾಯಗಳ ಹದಿಹರೆಯದ ಯುವಕರು, ಅರೆಬರೆ ಬಂದೂಕು ತರಬೇತಿಯನ್ನು ಪಡೆದು, ಯಾವುದೇ ಗುಂಡು ರಕ್ಷಾ ಕವಚ ಇಲ್ಲದೆ ಪಹರೆಯಲ್ಲಿದ್ದರು. ಆದರೆ ಪರಿಸ್ಥಿತಿ ಈಗಲೂ ಬದಲಾಗಿಲ್ಲ ಎಂಬುದು ಇತ್ತೀಚೆಗೆ ಮಣಿಪುರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (MCPCR) ಅಧ್ಯಕ್ಷ ಕೀಶಮ್ ಪ್ರದೀಪ್‌ಕುಮಾರ್ ನಡೆಸಿದ ಸುದ್ದಿಗೋಷ್ಠಿಯಿಂದ ಸ್ಪಷ್ಟವಾಗುತ್ತದೆ.
“ಮಣಿಪುರದ ಸಶಸ್ತ್ರ ಗುಂಪುಗಳು ಬಾಲಕರನ್ನು ಮಿಲಿಟೆಂಟ್‌ಗಳಾಗಿ ಪರಿವರ್ತಿಸಿವೆ. ಬಾಲಕರ ನೇಮಕ ಹೆಚ್ಚಿದೆ. ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿವೆ ಮತ್ತು ಅವರನ್ನು ಮುಂಚೂಣಿಯ ಗ್ರಾಮ ರಕ್ಷಕರನ್ನಾಗಿ ಸೇರಿಸಿಕೊಳ್ಳುತ್ತಿವೆ. ಮೈತೇಯಿ, ಕುಕಿ ಎರಡೂ ಸಶಸ್ತ್ರ ಗುಂಪುಗಳು ಮಕ್ಕಳನ್ನು ಸೇರಿಸಿಕೊಳ್ಳುತ್ತಿವೆ. ಮಣಿಪುರದ ನಾಗಾ ಸಶಸ್ತ್ರ ಗುಂಪುಗಳು ಒಂದು ಹೆಜ್ಜೆ ಮುಂದೆ ಹೋಗಿ, ಮುಂಜಾಗೃತಾ ಕ್ರಮವಾಗಿ ಬಾಲಕರನ್ನು ಕರೆದು ತರಬೇತಿ ನೀಡುತ್ತಿವೆ” ಎಂದಿದ್ದಾರೆ ಕೀಶಮ್. ಅಲ್ಲಲ್ಲಿ ಶಾಲೆಗಳು ಪುನಾರಂಭ ಆಗಿರುವುದರಿಂದ ಬಂದೂಕು ಹಿಡಿದ ಮಕ್ಕಳು ಕಡಿಮೆಯಾಗಿರಬಹುದು. ಆದರೆ ಬಾಲರಿಂದ ವೃದ್ಧರವರೆಗೂ ಭಯದ ನಳಿಕೆಯಲ್ಲೇ ಬದುಕುತ್ತಿರುವುದರಿಂದ ರಾಜ್ಯಪಾಲರ ಆದೇಶ ಮಹತ್ವದ್ದಾಗಿದೆ. ಈ ಕ್ರಮ ಹೊರಬೀಳುವುದು ತಡವಾಯಿತು ಎಂಬುದು ಸತ್ಯ. ಪ್ರಧಾನಿ ಮೋದಿಯವರು ಈವರೆಗೂ ಮಣಿಪುರದ ಕಡೆ ತಲೆಹಾಕಿಲ್ಲ ಎಂಬುದೂ ವಿಪರ್ಯಾಸ.
ಇದನ್ನೂ ಓದಿರಿ: ಗ್ಯಾನೇಶ್ ಕುಮಾರ್ ಗುಪ್ತ ನೇಮಕ; ಪ್ರಪಾತದ ಅಂಚಿನಲ್ಲಿ ಚುನಾವಣಾ ಆಯೋಗ?
ಅಪ್ರಾಪ್ತರನ್ನು ಮಿಲಿಟೆಂಟ್‌ಗಳನ್ನಾಗಿ ಮಾಡಿದ್ದರಲ್ಲಿ ಉಭಯ ಸಮುದಾಯಗಳ ಕೆಲವು ಸಂಘಟನೆಗಳ ಪಾತ್ರ ದೊಡ್ಡದಿದೆ. ಉದಾಹರಣೆಗೆ ಮೈತೇಯಿಗಳ ಆರಂಬೈ ತೆಂಗೋಲ್ ಸಂಘಟನೆಯನ್ನೇ ನೋಡುವುದಾದರೆ, ಇಲ್ಲಿನ ಹುಡುಗರಲ್ಲಿ ಧಾರ್ಮಿಕ ಮತಾಂಧತೆಯನ್ನು ತುಂಬಲಾಗಿದೆ. ಮಣಿಪುರ ನೆಲದಲ್ಲಿ ಬೆಳೆದ ಬುಡಕಟ್ಟು ಜನರ ಸನಾಮಹಿ ಧರ್ಮ ಪ್ರಕೃತಿ ಆರಾಧನೆಯನ್ನೇ ತನ್ನ ತತ್ವವಾಗಿಸಿಕೊಂಡಿತ್ತು. ಆದರೆ ಇದನ್ನು ಹಿಂದೂವೀಕರಣಗೊಳಿಸಿ ರಾಜಕಾರಣದ ಅಸ್ತ್ರವಾಗಿಸಿಕೊಳ್ಳುವ ಪ್ರಯೋಗಗಳನ್ನು ಸಂಘಪರಿವಾರ ನಿರಂತರವಾಗಿ ಮಾಡುತ್ತಾ ಬಂದಿತು. ಅದರ ಭಾಗವಾಗಿ ಹುಟ್ಟಿದ್ದೇ ಆರಂಬೈ ತೆಂಗೋಲ್ (ಈ ಹೆಸರಿನ ಅರ್ಥ- ಭರ್ಜಿ ಚಲಾಯಿಸುವ ಅಶ್ವಸೇನೆ). ಸನಾಮಹಿಯ ಹಿಂದಿನ ವೈಭವವನ್ನು ಪ್ರೋತ್ಸಾಹಿಸಿ, ಪುನರುತ್ಥಾನ ಮಾಡುವ ಗುರಿಯೊಂದಿಗೆ ಚಾಲ್ತಿಗೆ ಬಂದ ಆರಂಬೈ ತೆಂಗೋಲ್‌ನಲ್ಲಿ ಇರುವ ಹೆಚ್ಚಿನವರು ಹದಿನಾರರಿಂದ ಇಪ್ಪತ್ತೈದು ವರ್ಷದ ಮೈತೇಯಿ ಯುವಕರು. ಇಂತಹ ಧರ್ಮಾಂಧತೆಗೆ ಕುಕಿ ಸಂಘಟನೆಗಳೂ ಹೊರತಲ್ಲ. ಹೀಗಿರುವ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲ್ಪಟ್ಟ ಬಳಿಕ ಏನೇನು ಬದಲಾವಣೆಗಳಾಗಬಹುದೆಂಬ ಕುತೂಹಲವಂತೂ ಇದ್ದೇ ಇದೆ.

ಮಣಿಪುರ ಹಿಂಸಾಚಾರದಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಿಶಸ್ತ್ರೀಕರಣಗೊಳಿಸುವ ಕೆಲಸಕ್ಕೆ ಗವರ್ನರ್ ಮುಂದಾಗಿದ್ದಾರೆ. ಬಂದೂಕು, ಸ್ಫೋಟಕಗಳನ್ನು ಇಟ್ಟುಕೊಂಡಿದ್ದ ಹಲವರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆಯುತ್ತಿದ್ದಾರೆ. ವಿವಿಧ ಸಂಘಟನೆಗೆ ಸೇರಲ್ಪಟ್ಟ 100ಕ್ಕೂ ಹೆಚ್ಚು ಜನರನ್ನು ಕಳೆದೆರಡು ವಾರಗಳಲ್ಲಿ ಬಂಧಿಸಲಾಗಿದೆ. ಪೀಪಲ್ಸ್ ಲಿಬರೇಷನ್ಸ್ ಆರ್ಮಿ, ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್, ಕಾಂಗ್ಲೈ ಯಾವೋಲ್ ಕನ್ನಾ ಲೂಪ್ (KYKL), ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿ, ಆರಂಬೈ ತೆಂಗೋಲ್ ಮೊದಲಾದ ಬಂಡುಕೋರ ಗುಂಪುಗಳ ಸದಸ್ಯರು ಅರೆಸ್ಟ್ ಆಗಿದ್ದಾರೆ.
“ರಾಜ್ಯ ಪೊಲೀಸ್ ಪಡೆ ಜೊತೆಗೆ ಮಣಿಪುರದಲ್ಲಿ ಮಿಲಿಟರಿ, ಪ್ಯಾರಾ ಮಿಲಿಟರಿ ಫೋರ್ಸ್ ಬೀಡುಬಿಟ್ಟಿವೆ. ಅಸ್ಸಾಂ ರೈಫಲ್ಸ್, ಭಾರತೀಯ ಸೇನೆ, ರ್ಯಾಪಿಡ್ ಆಕ್ಷನ್ ಫೋರ್ಸ್, ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಸುಮಾರು 17,000 ರಕ್ಷಣಾ ಸಿಬ್ಬಂದಿ ಬೀಡುಬಿಟ್ಟಿದ್ದಾರೆ” ಎಂಬುದು ಇಂಫಾಲದ ಮೈತೇಯಿ ಪತ್ರಕರ್ತ ಚೌಬಾ ಅವರು ನೀಡುವ ಮಾಹಿತಿ.
‘ಈದಿನ.ಕಾಂ’ ಜೊತೆ ಮಾತನಾಡಿದ ಅವರು, “ಕಣಿವೆಯಲ್ಲಿ ಸಕ್ರಿಯವಾಗಿರುವ ಕೆವೈಕೆಎಲ್, ಆರಂಬೈ ತೆಂಗೋಲ್ ಥರದ ಸಂಘಟನೆಗಳ ಕಾರ್ಯಕರ್ತರನ್ನು ಕಕ್ಚಿಂಗ್ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಿದ್ದನ್ನು ಖಂಡಿಸಿ, ಕೆಲವರು ಬೀದಿಗಿಳಿದಿದ್ದಾರೆ. ಆರಂಬೈ ತೆಂಗೋಲ್‌ನ ಗ್ರಾಮ ಸ್ವಯಂಸೇವಕರನ್ನು ಹೊರಗೆ ಬಿಡಬೇಕೆಂದು ಪ್ರತಿಭಟನೆಗಳ ಮೂಲಕ ಆಗ್ರಹಿಸಲಾಗುತ್ತಿದೆ. ನಂತರ ಬಂಧಿತ ಆರಂಬೈಗಳನ್ನು ಬಿಡುಗಡೆಯೂ ಮಾಡಲಾಗಿದೆ” ಎಂದರು.
ಇದನ್ನೂ ಓದಿರಿ: ಆಸಾರಾಂ ಬಾಪು: ಸಂತನೋ, ಪಾಪಿಯೋ?
“ಶಾಂತಿಯ ಬಹುಮುಖ್ಯ ಕಾರಣಕ್ಕಾಗಿ ಕುಕಿ ಮತ್ತು ಮೈತೇಯಿಗಳು ಶಸ್ತ್ರ ತ್ಯಜಿಸಬೇಕೆಂಬುದು ರಾಜ್ಯಪಾಲರ ಆಗ್ರಹ. ಎಷ್ಟು ಶಸ್ತ್ರಗಳು ಕಣಿವೆ ಮತ್ತು ಗುಡ್ಡಗಾಡು ಭಾಗದಲ್ಲಿ ಹಿಂತಿರುಗಿಸಲ್ಪಡುತ್ತವೆ ಎಂದು ಫೆಬ್ರುವರಿ 27ಕ್ಕೆ ಗೊತ್ತಾಗುತ್ತದೆ. ಆದರೆ ಹೀಗೆ ಶಸ್ತ್ರಗಳನ್ನು ವಾಪಸ್ ಕೊಟ್ಟ ಮೇಲೆ ನಿಧಾನಕ್ಕಾಗಿಯಾದರೂ ಅಧಿಕಾರಿಗಳು ನಮ್ಮ ಮೇಲೆ ಕ್ರಮ ಜರುಗಿಸಬಹುದು ಎಂಬ ಆತಂಕ ಜನರಲ್ಲಿದೆ” ಎನ್ನುತ್ತಾರೆ ಚೌಬಾ.

ರಾಜ್ಯಪಾಲರ ಕ್ರಮದ ಬಳಿಕ ಕುಕಿ- ಝೋ ಕೌನ್ಸಿಲ್ (ಕೆಝೆಡ್‌ಸಿ) ತಮ್ಮ ಮನವಿ ಪತ್ರವನ್ನು ಬಿಡುಗಡೆ ಮಾಡಿದೆ. ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಕಲ್ಪಿಸುವ ಪ್ರಸ್ತಾಪ ಇದ್ದೇ ಇದೆ. ಇದರ ಜೊತೆಗೆ ಜಿಲ್ಲಾವಾರು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸಾಮಾನ್ಯವಾಗಿ ಕೈಗೊಳ್ಳಬೇಕಾದ ತುರ್ತು ಅಗತ್ಯಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.
ನಿರಾಶ್ರಿತ ಶಿಬಿರಗಳಲ್ಲಿರುವ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಕೊಡಬೇಕು, ಚರ್ಚ್‌ಗಳ ಮೂಲಕ ರಕ್ಷಣೆ ಪಡೆದವರಿಗೆ ಅಥವಾ ಬಾಡಿಗೆ ಮನೆಯಲ್ಲಿ ಉಳಿದಿರುವ ನಿರಾಶ್ರಿತರಿಗೆ ಪರಿಹಾರ ನೀಡಬೇಕು. ಇಂತಹ ತ್ವರಿತ ಗಮನವು ನಮ್ಮ ಜನರ ನೋವನ್ನು ನಿವಾರಿಸಿ, ಶಾಶ್ವತ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ. ಸಮಗ್ರ ಪುನರ್ವಸತಿ ಮತ್ತು ಪುನರ್ವಸತಿ ಪ್ಯಾಕೇಜ್ ಜಾರಿಗೆ ತರುವವರೆಗೂ ಜೀವನಾಧಾರಕ್ಕೆ ಕೊರತೆ ಉಂಟಾಗಬಾರದು. ಮಿಜೋರಾಂ, ಮೇಘಾಲಯ, ದೆಹಲಿ, ಅಸ್ಸಾಂ ಮತ್ತು ಭಾರತದ ಇತರ ಮೆಟ್ರೋ ಸಿಟಿಗಳಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ನಿರಾಶ್ರಿತರಿಗೆ ಗಮನ ಕೊಡಬೇಕು ಎಂಬ ಆಗ್ರಹ ಸೇರಿದಂತೆ ಹತ್ತಾರು ಹಕ್ಕೊತ್ತಾಯಗಳನ್ನು ಕುಕಿ ಕೌನ್ಸಿಲ್ ಮುಂದಿಟ್ಟಿದೆ.

‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಕುಕಿ ಸ್ಟುಡೆಂಟ್ ಅಸೋಸಿಯೇಷನ್‌ನ ಗ್ರೇಸ್, “ಕುಕಿ ಸಮುದಾಯವನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದಕ್ಕೆ ಮತ್ತು ನರಮೇಧ ನಡೆದಿರುವುದಕ್ಕೆ ಭಾರತ ಸರ್ಕಾರ ಹೊಣೆ ಹೊರಬೇಕು. ಕುಕಿ ಸಮುದಾಯದ ಮೂಲ ಸಮಸ್ಯೆಗಳು ಮತ್ತು ಕಳವಳಗಳನ್ನು ಪರಿಹರಿಸಲು ಶಾಂತಿಯುತ ಹಾಗೂ ಸಮಗ್ರ ಸಂವಾದ ನಡೆಸಬೇಕು. ಕುಕಿಗಳಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವ ಪ್ರತ್ಯೇಕ ಆಡಳಿತ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಹಿಂಸಾಚಾರಕ್ಕೆ ತುತ್ತಾದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯಯುತ ಪುನರ್ವಸತಿ ಆಗಬೇಕು. ಈ ಪರಿಹಾರಗಳು ಸಿಕ್ಕ ತಕ್ಷಣ ನಮ್ಮ ಎಲ್ಲ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗಲು ನಾವು ಸಿದ್ಧರಿದ್ದೇವೆ. ಕೇವಲ ಸರ್ಕಾರಿ ಶಸ್ತ್ರಾಸ್ತ್ರಗಳನ್ನಷ್ಟೇ ಅಲ್ಲ, ವೈಯಕ್ತಿಕವಾಗಿ ಹೊಂದಿರುವ ಅಸ್ತ್ರಗಳನ್ನೂ ಒಪ್ಪಿಸುತ್ತೇವೆ” ಎಂದರು.
“ಕುಕಿಗಳು ಪ್ರತ್ಯೇಕ ಶಾಸಕಾಂಗ ಹೊಂದುವಂತೆ ಸಂವಿಧಾನದ 239 (ಎ) ವಿಧಿಯ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶ ಸ್ವರೂಪದ ಪ್ರತ್ಯೇಕ ಆಡಳಿತ ರೂಪಿಸಲೇಬೇಕು. ಅದುವೇ ನಮ್ಮ ನಿಜವಾದ ಬೇಡಿಕೆ” ಎಂಬುದು ಕುಕಿಗಳ ಮಾತು.
ಇದನ್ನೂ ಓದಿರಿ: ನಾಗಾ ಸಾಧುಗಳು ಬೆತ್ತಲಾಗುವುದೆಂದರೇನು?
2023ರ ಮೇ 3ರಂದು ಆರಂಭವಾದ ಹಿಂಸಾಚಾರದ ಬಳಿಕ ಈವರೆಗೆ 225ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. 60,000 ಜನರು ನಿರಾಶ್ರಿತ ಶಿಬಿರಗಳಲ್ಲಿ ಜೀವ ಉಳಿಸಿಕೊಂಡರು, 1500 ಮಂದಿ ಗಾಯಗೊಂಡರು, 28 ಜನರು ಕಾಣೆಯಾದರು ಅರ್ಥಾತ್ ನಿಗೂಢವಾಗಿ ಹತ್ಯೆಯಾದರು. 13,247 ಕಟ್ಟಡಗಳನ್ನು ನೆಲಸಮ ಮಾಡಲಾಯಿತು. ಇಂಫಾಲದಿಂದ ಕುಕಿ ಪ್ರದೇಶಗಳಿಗೆ ಯಾವುದೇ ಸೌಕರ್ಯಗಳು ಸರಬರಾಜಾಗದಂತೆ ತಡೆಯುವುದು ನಡೆಯಿತು. ಔಷಧಿಗಳಿಗಾಗಿ ಪಕ್ಕದ ಮಿಜೊರಾಂ ರಾಜ್ಯವನ್ನು ಕುಕಿಗಳು ಆಶ್ರಯಿಸಬೇಕಾಯಿತು. ಶಾಲೆಗಳಲ್ಲೇ ಶಿಬಿರಗಳನ್ನು ತೆರೆದಿದ್ದರಿಂದ ಮಕ್ಕಳ ಶಿಕ್ಷಣ ಮೂಲೆಗೆ ತಳ್ಳಲ್ಪಟ್ಟಿತು.

ಕುಕಿಗಳು ಪ್ರತ್ಯೇಕ ಆಡಳಿತ ವ್ಯವಸ್ಥೆಗಾಗಿ ಬೇಡಿಕೆ ಇಟ್ಟರು. ಆದರೆ ಮತ್ತೊಂದು ಪ್ರಬಲ ಬುಡಕಟ್ಟು ಸಮುದಾಯವಾದ ನಾಗಾಗಳು ಕುಕಿಗಳ ಬೇಡಿಕೆಗೆ ವಿರುದ್ಧ ನಿಂತರು. ಕುಕಿಲ್ಯಾಂಡ್ ಸ್ಥಾಪನೆಯಾದರೆ, ನಾಗಾಗಳ ಪ್ರಾಬಲ್ಯವಿರುವ ಉಕ್ರೂಲ್, ಸೇನಾಪತಿ ಜಿಲ್ಲೆಗಳನ್ನು ನಾಗಾಲ್ಯಾಂಡ್‌ಗೆ ಸೇರಿಸಬೇಕೆಂಬ ’ಗ್ರೇಟರ್ ನಾಗಲ್ಯಾಂಡ್’ ಹೋರಾಟ ಮರುಜೀವ ಪಡೆಯುವ ಸಾಧ್ಯತೆ ನಿಚ್ಚಳವಾಗಿತ್ತು. ಎಸ್‌ಟಿ ಸ್ಥಾನಮಾನವನ್ನು ಮೈತೇಯಿಗಳಿಗೆ ನೀಡಿದ್ದನ್ನು ವಿರೋಧಿಸಿದ್ದ ನಾಗಾಗಳು, ಪ್ರತ್ಯೇಕ ಆಡಳಿತ ವಿಚಾರದಲ್ಲಿ ಕುಕಿಗಳ ವಿರುದ್ಧ ನಿಲುವು ತಾಳಿದ್ದರು. ಬೂದಿ ಮುಚ್ಚಿದ ಕೆಂಡದಂತೆ ಮಣಿಪುರ 20 ತಿಂಗಳ ಕಾಲ ಇದೇ ಸ್ಥಿತಿಯಲ್ಲಿ ಮುಂದುವರಿಯಿತು.
ಮಣಿಪುರ ಪದೇ ಪದೇ ಹೇಗೆ ಉರಿದು ಹೋಗಿತ್ತು ಎಂಬುದಕ್ಕೆ ಅಲ್ಲಿ ವಿಧಿಸಲ್ಪಟ್ಟ ಇಂಟರ್‌ನೆಟ್ ಸ್ಥಗಿತವೇ ಅದಕ್ಕೆ ಸಾಕ್ಷಿ. ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್ ಇಂಡಿಯಾದ ಹೊಸ ವರದಿಯ ಪ್ರಕಾರ, 2024ರಲ್ಲಿ ಹರಿಯಾಣ ರಾಜ್ಯದಲ್ಲಿ 12 ಸಲ ಇಂಟರ್‌ನೆಟ್ ಸ್ಥಗಿತಗೊಳಿಸಿದ್ದರೆ, 11 ಸಲ ಮಣಿಪುರದಲ್ಲಿ ಇಂಟರ್‌ನೆಟ್ ಸ್ಥಗಿತ ಮಾಡಲಾಗಿತ್ತು. ಆದರೆ ಗಂಟೆಗಳ ಲೆಕ್ಕದಲ್ಲಿ ಹೇಳುವುದಾದರೆ ಹರಿಯಾಣದಲ್ಲಿ ಒಟ್ಟು 589 ಗಂಟೆಗಳು ಮತ್ತು ಮಣಿಪುರದಲ್ಲಿ 1,104 ಗಂಟೆಗಳು ಇಂಟರ್‌ನೆಟ್ ಸ್ಥಗಿತ ಮಾಡಲಾಗಿತ್ತು.
ಬಿರೇನ್ ರಾಜೀನಾಮೆ ದಿಢೀರನೇ ಆಗಿದ್ದೇನೂ ಅಲ್ಲ. ಇದು ಮಣಿಪುರದಲ್ಲಿ ಬಿಜೆಪಿ ಎದುರಿಸುತ್ತಿರುವ ಬಿಕ್ಕಟ್ಟಿನ ಪ್ರತಿರೂಪವಷ್ಟೇ ಆಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಮಣಿಪುರದಲ್ಲಿ ನೆಲಕಚ್ಚಿತ್ತು ಬಿಜೆಪಿ. ಇಲ್ಲಿರುವುದು ಎರಡು ಲೋಕಸಭಾ ಕ್ಷೇತ್ರಗಳು. ಒಂದು- ಇನ್ನರ್ (ಒಳ) ಮಣಿಪುರ, ಎರಡು- ಔಟರ್ (ಹೊರ ಮಣಿಪುರ) ಕ್ಷೇತ್ರ. ಎರಡರಲ್ಲೂ ಕಾಂಗ್ರೆಸ್ ಗೆದ್ದಿತ್ತು.
ಮಣಿಪುರದ ಫಲಿತಾಂಶದ ಬಳಿಕ ಬಿರೇನ್ ಮೇಲೆ ಸಚಿವ ಸಹೋದ್ಯೋಗಿಗಳೇ ಮುನಿಸು ಬೆಳೆಸಿಕೊಳ್ಳಲಾರಂಭಿಸಿದ್ದರು. ಬೆಲೆ ಏರಿಕೆ, ಅಸಮರ್ಪಕ ಆಡಳಿತ, ಬಗೆಹರಿಯದ ಹಿಂಸಾಚಾರ- ಇವೆಲ್ಲವೂ ಪೂರಕ ಅಂಶವಾಗಿ ಬೆಳೆದವು. ಹಿಂಸಾಚಾರ ಆರಂಭದ ದಿನಗಳವು. ಬಿರೇನ್ ಸಿಂಗ್ ತಕ್ಷಣವೇ ರಾಜೀನಾಮೆ ಕೊಡಬೇಕೆಂಬುದು ಕುಕಿ ಸಮುದಾಯದ ಬೇಡಿಕೆಯೂ ಆಗಿತ್ತು. ಆದರೆ ಒಮ್ಮೆ ರಾಜೀನಾಮೆ ಕೊಟ್ಟಾಗ ಮೈತೇಯಿ ಜನಾಂಗದವರು ಬಿರೇನ್ ಸಿಂಗ್ ಅವರ ಪತ್ರವನ್ನು ಹರಿದು ಹಾಕಿ ಬೆಂಬಲ ಸೂಚಿಸಿದ್ದರು. ಈ ರಾಜಕೀಯ ಹೈಡ್ರಾಮಾದಲ್ಲಿ ಬಿರೇನ್ ಮತ್ತೆ ಅಧಿಕಾರದಲ್ಲಿ ಮುಂದುವರಿದರು. ಆದರೆ ರಾಜಕೀಯ ಬೆಳವಣಿಗೆಯಲ್ಲಿ ಬಿರೇನ್ ಅವರು ತಮ್ಮ ಸಹೋದ್ಯೋಗಿಗಳ ವಿಶ್ವಾಸ ಕಳೆದುಕೊಂಡರು. ಅವಿಶ್ವಾಸ ಮಂಡನೆಯ ಪ್ರಸ್ತಾಪ ಮುಂದೆ ಬಂದಿತು.
ಇದನ್ನೂ ಓದಿರಿ: ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!
ಪ್ರಮುಖ ಎನ್‌ಡಿಎ ಪಾಲುದಾರರೂ ಬಿರೇನ್ ಮೇಲೆ ಕೋಪಗೊಂಡರು. ಏಳು ಮಂದಿ ಬಿಜೆಪಿ ಎಂಎಲ್‌ಎಗಳನ್ನು ಒಳಗೊಂಡ ಕುಕಿ ಗುಂಪಿನ 10 ಜನ ಎಂಎಲ್‌ಎಗಳು, “2023ರ ಮೇ 3ರಂದು ಶುರುವಾದ ಹಿಂಸಾಚಾರಕ್ಕೆ ಬಿರೇನ್ ಅವರೇ ಹೊಣೆಗಾರರು” ಎಂದು ಹೇಳುತ್ತಾ ಬಂದಿದ್ದರು. 2024ರ ಅಕ್ಟೋಬರ್‌ನಲ್ಲಿ ಪ್ರಧಾನಿ ಕಚೇರಿಗೂ ದೂರು ಹೋಗಿತ್ತು. ಆದರೂ ಬಿಜೆಪಿ ನಾಯಕತ್ವವು ಬಿರೇನ್ ಅವರನ್ನು ಬೆಂಬಲಿಸುತ್ತಲೇ ಇತ್ತು. ಆದರೆ ಅಂತಿಮವಾಗಿ ರಾಷ್ಟ್ರಪತಿ ಆಡಳಿತ ಹೇರದೆ ಬೇರೆ ಆಯ್ಕೆ ಕೇಂದ್ರ ಸರ್ಕಾರದ ಮುಂದೆ ಇರಲಿಲ್ಲ.
ಇದೆಲ್ಲವನ್ನೂ ನೋಡಿದರೆ ಮಣಿಪುರ ಇಂದಿಗೂ ಬೂದಿ ಮುಚ್ಚಿದ ಕೆಂಡ. ರಾಜ್ಯಪಾಲರ ಮನವಿಯನ್ನು ಅನುಮಾನಿಸದೆ, ಶಾಂತಿಯತ್ತ ಹೆಜ್ಜೆ ಇಟ್ಟರೆ ಒಳಿತಾಗಬಹುದು. ಒಂದು ವೇಳೆ ಆಜ್ಞೆಯನ್ನು ಪಾಲಿಸದಿದ್ದರೆ ಈಗಾಗಲೇ ಬೀಡು ಬಿಟ್ಟಿರುವ ಮಿಲಿಟರಿ ಪಡೆಗಳು ಹಿಂಸಾತ್ಮಕ ಕಾರ್ಯಾಚರಣೆಗೂ ಇಳಿಯಬಹುದು. ಒಟ್ಟಾರೆ ಮಣಿಪುರ ಮುಂದೇನಾಗುತ್ತದೆ ಎಂಬ ಅಂದಾಜು ಸದ್ಯಕ್ಕೆ ಯಾರಿಗೂ ಇಲ್ಲ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




