ಕೊಳೆಗೇರಿಗಳೆಂದರೆ ‘ಪುಟ್ಟ ಭಾರತ’

Date:

ಭಾರತದ ಜಾತಿವ್ಯವಸ್ಥೆ ಹಾಗೂ ಅಭಿವೃದ್ಧಿ ತಾರತಮ್ಯದ ಮುಂದುವರೆದ ರೂಪವೇ ನಗರದಲ್ಲಿರುವ ಕೊಳೆಗೇರಿಗಳು. ಹಳ್ಳಿಗಳಲ್ಲಿ ಬಿಟ್ಟಿ ಚಾಕರಿ ಮಾಡಲು ಹೇಗೆ ಕೇರಿಗಳಿವೆಯೋ ಹಾಗೆ ನಗರಗಳಲ್ಲಿ ನಾಗರಿಕ ಸಮಾಜಕ್ಕೆ ಸೇವೆ ನೀಡಲು ಅಥವಾ ನಗರಗಳಿಗೆ ಬಿಟ್ಟಿ ಚಾಕರಿ ಮಾಡಲು ಕೊಳೆಗೇರಿಗಳು ಜೀವಂತವಾಗಿವೆ. ಊರು ಬೆಳೆದಂತೆ ಪಟ್ಟಣವಾಗಿ ಪರಿಪರ್ತನೆಯಾಗಿ ಊರಿನಲ್ಲಿದ್ದ ಎಸ್.ಸಿ, ಎಸ್.ಟಿ/ಒಬಿಸಿ ಕೇರಿಗಳೇ ಇಂದು ನಗರಗಳಲ್ಲಿ ಕೊಳೆಗೇರಿಗಳಾಗಿವೆ ಹಾಗೂ ನಗರಗಳಿಗೆ ಬದುಕು ಕಟ್ಟಿಕೊಳ್ಳಲು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಅನ್ಯ ರಾಜ್ಯಗಳಿಂದ ಕೂಲಿ ಕೆಲಸಕ್ಕಾಗಿ ವಲಸೆ ಬರುವ ಜನರ ಆಶ್ರಯ ತಾಣಗಳೇ ಕೊಳೆಗೇರಿಗಳಾಗಿವೆ. ಇಂತಹ ಪ್ರದೇಶಗಳಲ್ಲಿ ಎಲ್ಲಾ ಜಾತಿಯ ಜನರು, ಧರ್ಮ, ವಿವಿಧ ರೀತಿಯ ಆಚಾರ, ವಿಚಾರ ಮತ್ತು ಹಲವು ಬಗೆಯ ಸಂಪ್ರದಾಯಗಳಿಂದ ಕೂಡಿರುವ ಸೌಹಾರ್ದ ಪರಂಪರೆಯ ಬಹುಸಂಸ್ಕೃತಿಗಳನ್ನು ಹೊಂದಿರುವ ಪುಟ್ಟ ಭಾರತವೇ ಕೊಳೆಗೇರಿಗಳು.

ಕೊಳೆಗೇರಿಗಳೆಂದರೆ ರಾಜಕಾರಣಿಗಳಿಗೆ ವೋಟ್‌ಬ್ಯಾಂಕ್, ನಗರದ ನಾಗರಿಕರಿಗೆ ಅವರ ಕೆಲಸಗಳನ್ನು ಮಾಡುವುದಕ್ಕಾಗಿಯೇ ದೇವರು ಸೃಷ್ಟಿಸಿರುವ ಮನುಷ್ಯ ಪ್ರಾಣಿಗಳು, ಕಳ್ಳರು-ಕಾಕರು ವಾಸಿಸುವ ಮತ್ತು ನಗರಗಳ ಅಂದಗೆಡಿಸುತ್ತಿರುವ ದೃಶ್ಯಮಾಲಿನ್ಯದ ತಾಣಗಳು ಹಾಗೂ ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಬಡತನದ ಹೆಸರಿನಲ್ಲಿ ವ್ಯವಹಾರ ನಡೆಸಲು, ಬಡ್ಡಿವ್ಯಾಪಾರಿಗಳಿಗೆ ತಮ್ಮ ಹಣವನ್ನು ದುಪ್ಪಟ್ಟುಗೊಳಿಸಲು ಇರುವ ಪ್ರದೇಶ. ನಗರದ ಮುಖ್ಯವಾಹಿನಿಯ ಮಾಫಿಯಾಗಳಿಗೆ ಅಗ್ಗದ ದರಕ್ಕೆ ಕಿರಿಯ ಮರಿ ಗೂಂಡಾಗಳು ಸಿಗುವಂತ ಪ್ರದೇಶಗಳು. ಪಾಪದ ಪ್ರಜ್ಞೆ ಅಥವಾ ಸ್ವರ್ಗಕ್ಕೆ ಹೋಗಲು ಇಚ್ಛಿಸುವ ಶ್ರೀಮಂತರಿಗೆ ಸಮಾಜ ಸೇವೆ ಮಾಡಲು ಸೃಷ್ಟಿಯಾಗಿರುವ ಪ್ರದೇಶ, NGOಗಳಿಗೆ ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರಯೋಗ ಮಾಡಲು ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಂಘಟನೆಗಳ ಹೋರಾಟಕ್ಕೆ, ಮೆರವಣಿಗೆಗಳಿಗೆ ಘೋಷಣೆ ಕೂಗಲು ಕಡಿಮೆ ದರಕ್ಕೆ ಜನರು ಸಿಗುವ ಜಾಗಗಳು ಎಂಬಂತೆ ನಮ್ಮ ಸುತ್ತಲು ಇರುವ ಜಗತ್ತಿಗೆ ಯಾವುದೋ ಒಂದು ರೀತಿಯಲ್ಲಿ ಉಪಯುಕ್ತವಾಗಿರುವ ನಗರದ ಆರ್ಥಿಕತೆಗೆ ಹಾಗೂ ದೇಶದ GDPಗೆ ಅಂದರೆ ವಿಕಸಿತ ಭಾರತದ 5 ಟ್ರಿಲಿಯನ್ ಎಕಾನಮಿಗೆ ಮಾನವ ಸಂಪತ್ತಿನ ಬಂಡವಾಳವನ್ನು ಹೊಂದಿರುವ ಒಟ್ಟಾರೇ ನಗರಗಳ ಅವಶ್ಯಕತೆಯನ್ನು ಪೂರೈಸುವ ಎರಡು ಕಾಲಿನ ಪ್ರಾಣಿಗಳಷ್ಟೇ ಎಂದು ಭಾರತದ ಅಭಿವೃದ್ಧಿ ಹಾಗೂ ನಾಗರಿಕ ಸಮಾಜ ಹೊಂದಿರುವ ದೃಷ್ಟಿಯಾಗಿದೆ.

ನಗರಗಳು ಬೆಳದಂತೆ ಕೊಳೆಗೇರಿಗಳು ಬೆಳೆದವು ಇದರಿಂದ ಸಾರ್ವಜನಿಕ ಆರೋಗ್ಯ ಹಾನಿಯಾಗುತ್ತಿದೆ ಎಂದು 1965ರ ಅಸುಪಾಸಿನಲ್ಲಿ ಕೊಳೆಗೇರಿಗಳ ಉತ್ತಮೀಕರಣ ಕಾಯಿದೆಯನ್ನು ಭಾರತ ಸರ್ಕಾರ ಜಾರಿಗೆ ತಂದಿತ್ತು. ಕೊಳೆಗೇರಿಗಳ ಸುಧಾರಣೆ ಮತ್ತು ಬಡತನ ನಿರ್ಮೂಲನೆ ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಿಲಾಗಿದೆಯಾದರೂ ಕರ್ನಾಟಕದಲ್ಲಿ 1973ರಲ್ಲಿ ದಿವಂಗತ ದೇವರಾಜ್ ಅರಸುರವರ ಅವಧಿಯಲ್ಲಿ ಸ್ಲಂ ಕಾಯಿದೆಯನ್ನು ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಆರ್ಟಿಕಲ್-47ರ ಅನ್ವಯ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ದೃಷ್ಟಿಯಲ್ಲಿ ಜಾರಿಗೆ ತರಲಾಯಿತು. ಅಂದರೆ ಮೂಲದಲ್ಲೇ ಕೊಳೆಗೇರಿಗಳು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸರ್ಕಾರಗಳು ಕೊಳೆಗೇರಿಗಳೆಂದರೆ ವಸತಿ ಸಮಸ್ಯೆ ಅಥವಾ ಬಡವರು, ನಿರಾಶ್ರಿತರು ಇರುವ ಜಾಗಗಳು ಎಂಬ ಯೋಚನೆಗಳಲ್ಲಿ ಯೋಜನೆಗಳನ್ನು ಜಾರಿಗೆ ತರಲು ಆಲೋಚಿಸಿ ವಿಫಲಗೊಂಡಿವೆ. ಏಕೆಂದರೆ ಕೊಳೆಗೇರಿಗಳು ಸಮಸ್ಯೆಯಲ್ಲ, ಬದಲಿಗೆ ವ್ಯವಸ್ಥೆಯಿಂದ ನ್ಯಾಯ ಸಿಗದಿದ್ದಾಗ ಜನರೇ ಕಂಡುಕೊಂಡಿರುವ ಪರ್ಯಾಯವಾಗಿದೆ. 1973ರಲ್ಲಿ ಕರ್ನಾಟಕದಲ್ಲಿ ಸ್ಲಂ ಕಾಯಿದೆ ಜಾರಿಗೆ ಬಂದು 1975ರಲ್ಲಿ ನಿಯಮ ರೂಪಿಸಿ ಮೊದಲಿಗೆ ಕರ್ನಾಟಕ ಪುರಸಭೆ ಮತ್ತು ಮುನಿಸಿಪಾಲಿಟಿ ಅಧೀನದಲ್ಲಿ ಪ್ರಾರಂಭವಾಗಿ 1980ರಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ರಚನೆ ಮಾಡಿ ವಸತಿ ಇಲಾಖೆ ಅಧೀನಕ್ಕೆ ಒಳಪಡಿಸಲಾಯಿತು. ಪ್ರಾರಂಭದಲ್ಲಿ ಕಾಯಿದೆ ಅನ್ವಯ ಕರ್ನಾಟಕದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಮನುಷ್ಯ ವಾಸಕ್ಕೆ ಯೋಗ್ಯವಲ್ಲದ ಅನೈರ್ಮಲ್ಯದ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಪ್ರದೇಶಗಳನ್ನು ಗುರುತಿಸಿ ಕಾಯಿದೆಯ ಕಲಂ 3ರಲ್ಲಿ ಘೋಷಿಸಿ ರಸ್ತೆ, ಚರಂಡಿ, ಬೀದಿದೀಪ, ಸ್ನಾನಗೃಹಗಳು, ಶೌಚಾಲಯಗಳನ್ನು ನಿರ್ಮಿಸಿಕೊಡಲಾಯಿತು. ನಂತರ 2003ರಲ್ಲಿ ಹುಡ್ಕೋ ನೆರವಿನಿಂದ ವಾಲ್ಮೀಕಿ ಅಂಬೇಡ್ಕರ್ (ವಾಂಬೆ) ವಸತಿಯನ್ನು ಜಾರಿಗೆ ತಂದು ಘಟಕ ವೆಚ್ಚವನ್ನು 40 ಸಾವಿರಗಳಲ್ಲಿ 250 ಚದುರದ ವಸತಿ ನಿರ್ಮಾಣ ಮಾಡಲು ಅಂದಿನ ಎಸ್.ಎಂ ಕೃಷ್ಣ ಸರ್ಕಾರ ಮುಂದಾಯಿತು. ನಂತರ 2002ರಲ್ಲಿ ಕಾಯಿದೆಗೆ ತಿದ್ದುಪಡಿ ತಂದು ಮಂಡಳಿಯ ಕಾರ್ಯದರ್ಶಿಯನ್ನು ಆಯುಕ್ತರನ್ನಾಗಿ ಮಾರ್ಪಡಿಸಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಯಿತು. 2010ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಯನ್ನಾಗಿ ಬದಲಾಯಿಸಿ 2016ರಲ್ಲಿ ಕರ್ನಾಟಕ ಕೊಳೆಗೇರಿಗಳ ಸಮಗ್ರ ಅಭಿವೃದ್ಧಿ ನೀತಿಯನ್ನು ಜಾರಿಗೆ ತರಲಾಯಿತು.

ಇದನ್ನೂ ಓದಿರಿ: ವಿಶ್ಲೇಷಣೆ | ತೆಲಂಗಾಣ, ಆಂಧ್ರದಲ್ಲಿ ಒಳಮೀಸಲಾತಿ ಹಂಚಿಕೆ ಹೇಗೆ ಮಾಡಲಾಗಿದೆ?

2010ರಿಂದ 2015ರವರೆಗೆ RAY ರಾಜೀವ್ ಅವಾಸ್ ಯೋಜನೆಯನ್ನು ಜಾರಿಗೆ ತಂದ UPA ಸರ್ಕಾರ ಕೊಳಚೆ ನಿವಾಸಿಗಳಿಗೆ ವಸತಿ ನಿರ್ಮಿಸಲು ಘಟಕ ವೆಚ್ಚವನ್ನು 5 ಲಕ್ಷಕ್ಕೆ ಏರಿಸಿ, ಇದರಲ್ಲಿ ಶೇ. 90% ಸಬ್ಸಿಡಿ, ಉಳಿದ 10% ಫಲಾನುಭವಿ ವಂತಿಕೆಗೆ ನಿಗದಿಗೊಳಿಸಲಾಯಿತು. ನಂತರ 2015ರಲ್ಲಿ NDA ಸರ್ಕಾರ PMAY ಪ್ರಧಾನಮಂತ್ರಿ ಅವಾಸ್ ಯೋಜನೆ ಜಾರಿಗೆ ತಂದು ಸರ್ವರಿಗೂ ಸೂರು “Housing For All’’ನಲ್ಲಿ ಘಟಕ ವೆಚ್ಚಕ್ಕೆ 1.5 ಲಕ್ಷ ಸಬ್ಸಿಡಿ ನೀಡಿ ಇದರಲ್ಲಿ 24% GST ಕಡಿತ ಮಾಡುವುದಲ್ಲದೇ ಘಟಕ ವೆಚ್ಚದ ಮೇಲೆ GST ಎಂಬ ಕರಿನೆರಳು ಬೀಳುವಂತೆ ಮಾಡಿ ನಗರದ ಮಧ್ಯ ಭಾಗದಲ್ಲಿರುವ ಸ್ಲಂ ಭೂಮಿಯನ್ನು ಸಾರ್ವಜನಿಕ ಸಂಪತ್ತು ಎಂದು ಘೋಷಿಸಿರುವ ಕೀರ್ತಿ ಈಗಿನ NDA ಸರ್ಕಾರಕ್ಕೆ ಸಲ್ಲುತ್ತದೆ. ಹಾಗೆಯೇ ವಸತಿ ಸಬ್ಸಿಡಿಯನ್ನು 2025ಕ್ಕೆ ಕೊನೆಗೊಳಿಸಲು ಸಜ್ಜುಗೊಳಿಸಲಾಗಿದೆ.

ಕರ್ನಾಟಕದಲ್ಲಿ 80ರ ದಶಕದಲ್ಲಿ ತೀವ್ರವಾಗಿದ್ದ ದಲಿತ, ರೈತ ಮತ್ತು ಕಾರ್ಮಿಕ ಚಳವಳಿಗಳು ಇಂದು ಚೂರಾಗಿದ್ದರೂ ಶೋಷಿತ ದಮನಿತ ಜನರ ಸ್ವಾಭಿಮಾನವನ್ನು ಎಚ್ಚರಗೊಳಿಸಿದ್ದು ನಿಜ. ಈ ಎಲ್ಲಾ ಚಳವಳಿಗಳನ್ನು ನೋಡಿದರೆ ಭಾರತದಲ್ಲಿ ಸ್ಲಂ ನಿವಾಸಿಗಳ ಬದುಕಿನ ಸ್ಥಿರತೆಗಾಗಿ ನಡೆದ ಒಂದು ಚಳವಳಿಯೂ ಕಂಡುಬರುವುದಿಲ್ಲ. ನಗರ ವಂಚಿತ ಜನರ ಸಮಸ್ಯೆಯನ್ನು ಆರ್ಥಿಕವಾದ ಮತ್ತು ಜಟಿಲವಾದ ರಾಜಕೀಯ ಸಮಸ್ಯೆಯೆಂದೇ ಪರಿಗಣಿಸಿದಾಗಿದ್ದು, ಇದನ್ನು ಒಳಹೊಕ್ಕಿದ್ದಂತೆಲ್ಲಾ ಅದೇ ಜಾತಿ ಅಸಮಾನತೆಯ ವಾಸನೆ ಮೂಗಿಗೆ ಬಡಿಯುತ್ತದೆ. ಇಲ್ಲಿ ದಲಿತ, ಮುಸ್ಲಿಂ, ಕ್ರಿಶ್ಚಿಯನ್, ಹಿಂದುಳಿದ ಮತ್ತು ಅಲೆಮಾರಿ ಸಮುದಾಯದ ಅಳಿವಿನಂಚಿನಲ್ಲಿರುವ ಇತರೆ ಜನ ಸಮುದಾಯಗಳು ವಾಸಿಸುವ ಬಹು ಸಂಸ್ಕೃತಿಯ ಮತ್ತು ಬಹುಧಾರ್ಮಿಕತೆಗಳ ಸಂಕೀರ್ಣತೆಯನ್ನು ತನ್ನ ಒಡಲಾಳದಲ್ಲಿಟ್ಟುಕೊಂಡಿರುವುದಕ್ಕೆ ಸ್ಲಂ ಎಂಬ ಹಣೆಪಟ್ಟಿ ಕಟ್ಟಲಾಗಿದೆ.

ಇತ್ತೀಚಿನ ನಗರೀಕರಣ ಮತ್ತು ನಗರಾಭಿವೃದ್ಧಿ ಯೋಜನೆಗಳು ಬಡವರಿಗೆ ಸಿಗುತ್ತಿದ್ದ ಸಣ್ಣಪುಟ್ಟ ಸಮಾಜ ಕಲ್ಯಾಣಗಳನ್ನು ಸಮಾಧಿ ಮಾಡುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ ಸ್ಲಂ ಯುವಜನರು ಒಂದೆಡೆ ಸೇರಿ ಸಾಮೂಹಿಕ ಪ್ರಯತ್ನದಿಂದ ಸ್ಲಂ ನಿವಾಸಿಗಳ ನಾಯಕತ್ವದಲ್ಲಿ ಸ್ಲಂ ಜನಾಂದೋಲನ ಸಂಘಟನೆಯನ್ನು ಅಸ್ತಿತ್ವಕ್ಕೆ ತಂದು ತಮ್ಮ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಸಾಮೂಹಿಕವಾಗಿ ನಗರವಂಚಿತ ಸಮುದಾಯಗಳ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸುವುದು ಇಂದಿನ ಜನವಿರೋಧಿ ಸಮಾಜ ವ್ಯವಸ್ಥೆಗೆ ಪೂರಕವಾದ ವೇದಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೊಳೆಗೇರಿ ನಿವಾಸಿಗಳು ಒಟ್ಟಾಗಿ ಸೇರಿ ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದು ಸಂವಿಧಾನದ ಸಮಪಾಲು ಸಮಬಾಳು ಆಶಯಕ್ಕಾಗಿ ಜನಾಭಿಪ್ರಾಯ ಮೂಡಿಸಲಾಗುತ್ತಿದೆ. 2030ಕ್ಕೆ ನಗರೀಕರಣದ ವೇಗ ಶೇ. 50%ರಷ್ಟು ತಲುಪಲಿದ್ದು ಕೊಳೆಗೇರಿಗಳು ಸಹ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಲಿವೆ. ಇದರಿಂದ ನಗರಗಳಲ್ಲಿ ಕೈಗೆಟುಕುವ ಧಾರಣೆಯ ಅಭಿವೃದ್ಧಿ ಕಾರ್ಪೋರೇಟ್ ಆಡಳಿತದಿಂದ ಅಸಮಾನತೆ, ಬಡತನ ಪ್ರಮಾಣ ದ್ವಿಗುಣಗೊಳ್ಳಲಿದ್ದು ನಗರ ಕೇಂದ್ರಿತವಾದ ಚಳವಳಿಗಳೇ ಭಾರತದ ದಿಕ್ಕನ್ನು ಬದಲಾಯಿಸಲಿವೆ.

ಸ್ಲಂ ಜನರು ವಿಶಿಷ್ಟವಾದ ಮತ್ತು ವಿಭಿನ್ನವಾದ ಅಸಂಘಟಿತ ವಲಯದ ಬಗ್ಗೆ ಒಳಿತನ್ನು ಯೋಚನೆ ಮಾಡುವಂತವರು, ಈ ದೇಶ ಮತ್ತು ಸಮಾಜವನ್ನು ತಮ್ಮ ದುಡಿಮೆಯ ಬೆವರಿನಿಂದ ಕಟ್ಟಿದವರು. ವಿಕಸಿತ ಭಾರತಕ್ಕೆ ಬೇಕಿರುವ ದೊಡ್ಡ ದೊಡ್ಡ ಮಾಲ್, ಅಣೆಕಟ್ಟು, ಫ್ಲೈ ಓವರ್, ಸ್ಮಾರ್ಟ್ ಸಿಟಿಗಳನ್ನು ಕಟ್ಟುತ್ತಿರುವವರು ಇದೇ ಸ್ಲಂ ಜನರು. ಇದೇ ಬೆವರಿನ ಸಂಸ್ಕೃತಿ, ಇದು ಸ್ಲಂ ಜನರಲ್ಲಿದೆ. ಯಾವ ಅಭಿವೃದ್ಧಿಗೆ ಹಸಿವಿನ ಭಾಷೆ ಅರ್ಥವಾಗುವುದಿಲ್ಲವೋ ಅದು ಅಭಿವೃದ್ಧಿ ಎಂದು ಕರೆಸಿಕೊಳ್ಳುವುದಿಲ್ಲ. ನಗರಗಳು ಸುಂದರವಾಗಿ ಇರಬೇಕೆಂದು ಸರ್ಕಾರ, ರಾಜಕಾರಣಿಗಳು ಮತ್ತು ಇಡೀ ವ್ಯವಸ್ಥೆ ಇಷ್ಟಪಡುತ್ತದೆ. ಆದರೆ ಬೆವರಿನ ಜನರ ಬದುಕು ಹಸನಾದರೆ ಅದು ನಿಜವಾದ ಸೌಂದರ್ಯ. ಕೊಳೆಗೇರಿಗಳು ಕೇವಲ ಬಡತನ ಸಮಸ್ಯೆ ಅಷ್ಟೇ ಅಲ್ಲ ಜಾತಿಯ ಸಮಸ್ಯೆ ಕೂಡ ಕೆಲಸ ಮಾಡುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಜಾತಿವಾದ ಪ್ರಬಲವಾಗಿ ಮುಂಚೂಣಿಯಲ್ಲಿದೆ. ಜಾತಿಯ ಮತ್ತೊಂದು ಮುಖ ಕೋಮುವಾದ, ಇಂದು ಕೊಳೆಗೇರಿಗಳಲ್ಲಿರುವ ಯುವಜನರನ್ನು ಉದ್ರೇಕಗೊಳಿಸಿ ಹಿಂದುತ್ವದ ನಶೆಯಲ್ಲಿ ತೇಲುವಂತೆ ಮಾಡಿದೆ.

ಕರ್ನಾಟಕದಲ್ಲಿನ ನಗರೀಕರಣದ ಪ್ರಮಾಣ 39.3%ರಷ್ಟಿದ್ದು ಭಾರತದಲ್ಲಿ ಕರ್ನಾಟಕ ನಗರೀಕರಣದಲ್ಲಿ 5ನೇ ರ‍್ಯಾಂಕ್‌ನಲ್ಲಿದೆ. 2011 ಜನಗಣತಿ ಪ್ರಕಾರ 6.10 ಕೋಟಿ ಜನಸಂಖ್ಯೆಯಲ್ಲಿ 3.74 ಕೋಟಿ ಗ್ರಾಮೀಣ ವಾಸಿಗಳು 61.33%ರಷ್ಟಿದ್ದು, ನಗರವಾಸಿಗಳ ಸಂಖ್ಯೆ 2.36 ಕೋಟಿ ಅಂದರೆ ಶೇ 33.7ರಷ್ಟಿದ್ದು ಪ್ರಸ್ತುತ ನಗರ ಅಭಿವೃದ್ಧಿಯ ಪರಿಕಲ್ಪನೆಗಳು ಅಗ್ರಹಾರಗಳ ಪುನರ್ ನಿರ್ಮಾಣವಾಗಿದೆ. ನಗರದ ನೀಲನಕ್ಷೆಯನ್ನು ನಾಲ್ಕು ಭಾಗವಾಗಿ ವಿಂಗಡನೆ ಮಾಡಿದ ಮೊದಲನೆಯದ್ದು ಸೆಂಟರ್ ಬಿಸ್ನೆಸ್ ಡ್ರಿಸ್ಟಿಕ್: ಇಲ್ಲಿ ಒಪನ್ ಲ್ಯಾಂಡ್ ಪಾರ್ಕ್, ಕ್ರೀಡಾಂಗಣಗಳು, ಹೌಸ್ ಅಂಡ್ ಪ್ಲಾಟ್ಸ್, ಮಾಲ್‌ಗಳು, ಸರ್ಕಾರಿ ಇಲಾಖೆಗಳು, ವಿಶೇಷವಾದ ಮಾಲ್‌ಗಳು, ಜ್ಯೂವೆಲ್ಸ್, ಬ್ಯಾಂಕ್ ಮತ್ತು ಆಡಳಿತಾತ್ಮಕ ಕೇಂದ್ರಗಳು, ಟೌನ್ ಹಾಲ್ ಮತ್ತು ಫ್ಯಾಕ್ಟರಿಗಳಿಗೆ ಬೇಕಾಗುವ ಗೋಡೌನ್‌ಗಳು. ಎರಡನೆಯದ್ದು ಇನ್ನರ್ ಸಿಟಿಗಳು: ಇಲ್ಲಿ ಸಿ.ಬಿ.ಡಿಗೆ ಬೇಕಾಗುವ ಸೇವಾ ವಲಯಗಳನ್ನು ಸೃಷ್ಟಿಸುವುದು. ಅಂದರೆ ಸಾಮಾಜಿಕ, ಆರ್ಥಿಕ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸುವಂತಹ ಚಟುವಟಿಕೆಗಳನ್ನ ಕೈಗೊಳ್ಳುವುದು, ಯುವಜನರಿಗೆ ಕೌಶಲ್ಯಾಭಿವೃದ್ಧಿ ದೊರಕಿಸುವುದು, ಸೇವಾ ವಲಯದ ಕಾರ್ಮಿಕರಿಗೆ ವಸತಿ ಸಮುಚ್ಛಯಗಳ ನಿರ್ಮಾಣ. ಮೂರನೆಯದ್ದು ಸಬ್ ಅರ್ಬನ್: ಸಿಬಿಡಿಗೆ ಬೇಕಿರುವ ಅಗತ್ಯ ರಸ್ತೆ, ರೈಲ್ವೆ, ರಿಯಲ್ ಎಸ್ಟೇಟ್, ಕೈಗಾರಿಗಳಿಗಾಗಿ ಭೂ ಸ್ವಾಧೀನ. ನಾಲ್ಕನೆಯದ್ದು ರೂರಲ್ ಅರ್ಬನ್ ಟ್ರಿಂಚ್: ಇಲ್ಲಿ ವಿಮಾನ ನಿಲ್ದಾಣ, ಸಾಮಾನ್ಯ ವಲಯಗಳು, ಮಿಶ್ರಿತವಾದ ಭೂ ಬಳಕೆ, ಅಸಂಘಟಿತ ವಲಯದ ನಿವಾಸಿಗಳಿಗೆ ಮತ್ತು ಸ್ಲಂ ನಿವಾಸಿಗಳಿಗಾಗಿ ವಸತಿ ನಿರ್ಮಾಣ ಮಾಡುವ ಸಾಮಾನ್ಯ ಪ್ರದೇಶವಾಗಿದೆ. ವ್ಯವಸ್ಥಿತವಾಗಿ ಸ್ಲಂ ಜನರನ್ನು ನಗರಗಳಿಂದ ಹೊರಗಿಡುವುದು ನಗರೀಕರಣದ ಸ್ಮಾರ್ಟ್ ಸಿಟಿಯ ವಾಸ್ತವ ರೂಪವಾಗಿದೆ.

ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!

ಮುಂದಿನ ಎರಡು ದಶಕಗಳು ಸ್ಲಂಗಳನ್ನು ಕಾರ್ಪೋರೇಟ್ ವ್ಯವಹಾರಕ್ಕೆ ಪೂರಕವಾದ ಮತ್ತು ವ್ಯಾಪಾರ ವಲಯಕ್ಕೆ ಪ್ರಮುಖ ಕೇಂದ್ರವನ್ನಾಗಿಸಿಕೊಂಡು ಲಾಭದಾಯವಾಗಿ ಮಾರ್ಪಾಟು ಮಾಡಿಕೊಳ್ಳುವ ಸಂಚು ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಗ್ರಾಹಕೀಕರಣದಿಂದ ಸಂವಿಧಾನ ಖಾತ್ರಿ ಪಡಿಸಿದ ಮೂಲಭೂತ ಹಕ್ಕುಗಳನ್ನು ಹಂತಹಂತವಾಗಿ ಕಸಿದು ಸ್ಲಂಗಳನ್ನು ನಗರಗಳ ಸೇವಾವಲಯಗಳಾಗುವಂತೆ ಮಾಡುವ ಜೊತೆ ನಮ್ಮ ಮಾನವ ಸಂಪತ್ತನ್ನು ಬಂಡವಾಳ ಮಾಡಿಕೊಳ್ಳುವುದು ಸೇರಿದಂತೆ ಹಿಂದು ರಾಷ್ಟ್ರ ನಿರ್ಮಾಣಕ್ಕೆ ಬೇಕಿರುವ ಕಾಲಾಳುಗಳನ್ನು ಸಿದ್ದಗೊಳಿಸುವ ಕೇಂದ್ರವಾಗಿ ಭವಿಷ್ಯದಲ್ಲಿ ಸ್ಲಂಗಳನ್ನು ನೋಡಲಾಗುವುದು. ಮತ್ತೊಂದೆಡೆ ಆಕ್ರಮ ವಲಸಿಗರು ಎಂಬ ಕಾರಣ ನೀಡಿ ದೇಶದ ಸಂಪತ್ತಿನಿಂದ ವಂಚಿಸಿ ನಮ್ಮ ನಾಗರಿಕತ್ವವನ್ನು/ಪೌರತ್ವವನ್ನು ಧೃಢೀಕರಿಸಲು ಹೇಳಲಾಗುತ್ತದೆ. ಸರಿಯಾದ ದಾಖಲಾತಿ ಇಲ್ಲದವರನ್ನು ಅಕ್ರಮ ವಲಸಿಗರು ಎಂಬ ಹಣೆಪಟ್ಟಿ ಕಟ್ಟಿ ಸಂವಿಧಾನದ ಎಲ್ಲಾ ಹಕ್ಕಗಳನ್ನು ಕಸಿದುಕೊಳ್ಳುವ ವ್ಯವಸ್ಥಿತವಾದ ಜಾಲ ನಿರ್ಮಾಣವಾಗಿದೆ ಹಾಗೂ ಎಲ್ಲ ತರದ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ವಿದ್ಯುತ್, ವಸತಿ ಮತ್ತು ಭೂಮಿಯನ್ನು ಕೈಗೆಟಕುವ ದರದಲ್ಲಿ ನೀಡಿ ಕೊಂಡುಕೊಳ್ಳುವ ಸಂಸ್ಕೃತಿಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಅಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅಗತ್ಯವಿರುವ ಗ್ರಾಹಕರನ್ನಾಗಿ ಸ್ಲಂ ನಿವಾಸಿಗಳನ್ನು ಪರಿವರ್ತಿಸಲಾಗುತ್ತಿದೆ ಅಥವಾ ಹಿಂದಿನ ಗುಲಾಮತನವನ್ನು ಒಪ್ಪಿಕೊಳ್ಳುವಂತೆ ಮಾಡಲಾಗುತ್ತದೆ. ಇದರಿಂದ ಸಿಡಿಯುವ ಹೋರಾಟದ ಕಿಡಿ ಭಾರತದ ಭವಿಷ್ಯವನ್ನು ನಿರ್ಧಾರ ಮಾಡಲಿದೆ.

ಸ್ಲಂ ಜನರ ಭವಿಷ್ಯದ ಹಕ್ಕೋತ್ತಾಯಗಳು

1. ಕೊಳೆಗೇರಿಗಳ ಮತ್ತು ಸ್ಲಂ ನಿವಾಸಿಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು.

2. ಸ್ಲಂ ಜನರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು.

3. ಸ್ಲಂ ನಿವಾಸಿಗಳಿಗೆ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಬೇಕು.

4. ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆ ಜಾರಿಯಾಗಬೇಕು.

5. ರಾಜ್ಯದಲ್ಲಿನ ಸ್ಲಂ ಕುಟುಂಬಗಳಿಗೆ ಹಕ್ಕುಪತ್ರವನ್ನು ಕ್ರಯ ಮಾಡುವ ಮೂಲಕ ಭೂ ಮಾಲೀಕತ್ವ ನೀಡಬೇಕು.

6. ರಾಜ್ಯದಲ್ಲಿರುವ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ನೀಡಬೇಕು.

7. ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಯಾಗಬೇಕು ಮತ್ತು ನೆಲಬಾಡಿಗೆ ಸ್ಲಂಗಳಿಗೆ ನೀತಿ ರೂಪಿಸಬೇಕು.

8. ಕರ್ನಾಟಕ ಸಮಗ್ರ ಸ್ಲಂ ಅಭಿವೃದ್ಧಿ ಕಾಯಿದೆ 2018ರ ಕರಡನ್ನು ಜಾರಿ ಮಾಡಬೇಕು.

9. ಸ್ಲಂ ಜನರಿಗೆ ಉಚಿತವಾಗಿ ಮನೆ ನಿರ್ಮಾಣ ಮತ್ತು ರಾಜ್ಯ ಸರ್ಕಾರದಿಂದಲೇ ಸಬ್ಸಿಡಿ ನೀಡಿ ಜನರೇ ಮನೆಗಳನ್ನು ನಿರ್ಮಿಸಿಕೊಳ್ಳುವ ಯೋಜನೆಗಳು ಜಾರಿಯಾಗಬೇಕು.

10. ರಾಜ್ಯದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಗೊಳಿಸಬೇಕು ಹಾಗೂ ಕಾಂಗ್ರೆಸ್‌ನ 5 ಗ್ಯಾರಂಟಿಗಳನ್ನು ಸ್ಲಂ ನಿವಾಸಿಗಳಿಗೆ ಅನ್ವಯಿಸಬೇಕು.

11. ಸರ್ಕಾರಿ ಶಾಲೆಗಳ ಸಬಲೀಕರಣವಾಗಬೇಕು ಮತ್ತು ಜಿಲ್ಲಾಸ್ಪತ್ರೆಗಳ ಖಾಸಗೀಕರಣ ನಿಲ್ಲಬೇಕು.

12. ನಗರ ಬಡತನದ ಪ್ರಮಾಣವನ್ನು ಇಳಿಕೆ ಮಾಡಬೇಕು.

narasimha murti
ಎ. ನರಸಿಂಹಮೂರ್ತಿ
+ posts

ತಮ್ಮ ವಿದ್ಯಾರ್ಥಿ ಜೀವನದಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟಗಳಿಂದ ಪ್ರಭಾವಿತರಾಗಿ ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸಾಕ್ಷರತ ಮಿಷನ್‌ನಲ್ಲಿ ಸ್ವಯಂ ಸೇವಕರಾಗಿ ದುಡಿದ ಎ.ನರಸಿಂಹಮೂರ್ತಿಯವರು ಸ್ಲಂ ಜನಾಂದೋಲನ ಸಂಘಟನೆ ಕಟ್ಟಿ 2 ದಶಕಕ್ಕೂ ಹೆಚ್ಚು ಕಾಲ ಸ್ಲಂ ನಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ಜೊತೆಗೆ ತುಮಕೂರು ಗುತ್ತಿಗೆ ಪೌರಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಮತ್ತು ತೃತೀಯ ಲಿಂಗಿಗಳು, ಬೀದಿಬದಿ ಲೈಂಗಿಕ ಕಾರ್ಯಕರ್ತರ ಘನತೆಯ ಬದುಕಿಗಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಎ. ನರಸಿಂಹಮೂರ್ತಿ
ಎ. ನರಸಿಂಹಮೂರ್ತಿ
ತಮ್ಮ ವಿದ್ಯಾರ್ಥಿ ಜೀವನದಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟಗಳಿಂದ ಪ್ರಭಾವಿತರಾಗಿ ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸಾಕ್ಷರತ ಮಿಷನ್‌ನಲ್ಲಿ ಸ್ವಯಂ ಸೇವಕರಾಗಿ ದುಡಿದ ಎ.ನರಸಿಂಹಮೂರ್ತಿಯವರು ಸ್ಲಂ ಜನಾಂದೋಲನ ಸಂಘಟನೆ ಕಟ್ಟಿ 2 ದಶಕಕ್ಕೂ ಹೆಚ್ಚು ಕಾಲ ಸ್ಲಂ ನಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ಜೊತೆಗೆ ತುಮಕೂರು ಗುತ್ತಿಗೆ ಪೌರಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಮತ್ತು ತೃತೀಯ ಲಿಂಗಿಗಳು, ಬೀದಿಬದಿ ಲೈಂಗಿಕ ಕಾರ್ಯಕರ್ತರ ಘನತೆಯ ಬದುಕಿಗಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...