ಸಂವಹನಕ್ಕೆ ಹೊಸಹೊಸ ಆಯಾಮಗಳನ್ನು ತಂದುಕೊಟ್ಟದ್ದು ಹಾಗೂ ಸಂವಹನದ ಇಡೀ ಪ್ರಕ್ರಿಯೆಯನ್ನು ಸುಲಭವಾಗಿಸಿದ್ದು ಮಾಹಿತಿ ತಂತ್ರಜ್ಞಾನದ ಅತಿದೊಡ್ಡ ಸಾಧನೆ. ಈ ಕ್ಷೇತ್ರದ ಬೆಳವಣಿಗೆಗಳ ಪರಿಣಾಮವಾಗಿ ಹಿಂದೊಮ್ಮೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಿದ್ದ ಸಂಗತಿಗಳೆಲ್ಲ ಈಗ ಸರ್ವೇಸಾಮಾನ್ಯ ಸಂಗತಿಗಳಾಗಿ ಹೋಗಿವೆ. ಕಂಪ್ಯೂಟರು-ಸ್ಮಾರ್ಟ್ಫೋನುಗಳಲ್ಲಿ ಟೈಪಿಸುವ ಅಕ್ಷರಗಳನ್ನು, ಕ್ಯಾಮೆರಾಗೆ ಸೆರೆಸಿಕ್ಕ ಚಿತ್ರಗಳನ್ನು ಕ್ಷಣಾರ್ಧದಲ್ಲೇ ಪ್ರಪಂಚ ಪರ್ಯಟನೆಗೆ ಕಳುಹಿಸಿಕೊಡುವುದೇನು ಕಡಿಮೆ ಸಾಧನೆಯೇ?
ಇದನ್ನೆಲ್ಲ ಸಾಧ್ಯವಾಗಿಸಿರುವುದು ಅಂತರ್ಜಾಲ (ಇಂಟರ್‌ನೆಟ್). ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕಂಪ್ಯೂಟರು-ಮೊಬೈಲ್ ಫೋನುಗಳನ್ನೆಲ್ಲ ಪರಸ್ಪರ ಸಂಪರ್ಕಿಸಿ, ಅವುಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾಗಿಸಿದ್ದು ಅದರ ಸಾಧನೆ. ವಿಶ್ವವ್ಯಾಪಿ ಜಾಲವನ್ನು (ವರ್ಲ್ಡ್ ವೈಡ್ ವೆಬ್) ರೂಪಿಸಿದವರಲ್ಲಿ ಪ್ರಮುಖರಾದ ಟಿಮ್ ಬರ್ನರ್ಸ್-ಲೀ ಹಿಂದೊಮ್ಮೆ ಹೇಳಿದಂತೆ, “ಈ ಜಾಲ ಕೇವಲ ಯಂತ್ರಗಳನ್ನಷ್ಟೇ ಸಂಪರ್ಕಿಸುವುದಿಲ್ಲ, ಅದು ಜನರನ್ನು ಬೆಸೆಯುತ್ತದೆ!”.
ತನ್ನ ವ್ಯಾಪ್ತಿಯಲ್ಲಿರುವ ಜನರನ್ನು ಒಟ್ಟಿಗೆ ಸೇರಿಸುವಾಗಲೂ ಅದು ಎಲ್ಲರನ್ನು ಹೆಚ್ಚೂಕಡಿಮೆ ಒಂದೇ ರೀತಿಯಾಗಿ ನೋಡುತ್ತದೆ. ದೊಡ್ಡವರು, ಚಿಕ್ಕವರು, ಪ್ರತಿಷ್ಠಿತರು, ಸಾಮಾನ್ಯರು ಎಂದೆಲ್ಲ ಭೇದವೆಣಿಸದೆ ತಟಸ್ಥವಾಗಿ ಉಳಿದು, ಎಲ್ಲರಿಗೂ ಒಂದೇ ರೀತಿಯ ಅವಕಾಶಗಳನ್ನು ಕೊಡುವುದು ಜಾಲಲೋಕದ ವೈಶಿಷ್ಟ್ಯ. ನೆಟ್ ನ್ಯೂಟ್ರಾಲಿಟಿ ಎಂದು ಕರೆಯುವುದು ಇದನ್ನೇ.
ಜನರನ್ನು ಬೆಸೆಯುವ ಹಾಗೂ ತನ್ನ ಬಳಕೆದಾರರೆಲ್ಲರಿಗೂ ಸಮಾನ ಅವಕಾಶಗಳನ್ನು ಕೊಡುವ ಅಂತರ್ಜಾಲದ ಈ ವೈಶಿಷ್ಟ್ಯಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ).
ಸಾಮಾಜಿಕ ಮಾಧ್ಯಮ ಎಂದರೇನು?
ಪುಸ್ತಕ, ಪತ್ರಿಕೆಗಳು, ಚಲನಚಿತ್ರ, ರೇಡಿಯೋ, ಟೀವಿ ಮುಂತಾದ ಅನೇಕ ಬಗೆಯ ಸಮೂಹ ಮಾಧ್ಯಮಗಳು ಹಲವು ವರ್ಷಗಳಿಂದ ನಮ್ಮನ್ನು ಪ್ರಭಾವಿಸುತ್ತ ಬಂದಿವೆ, ನಿಜ. ಆದರೆ ಅವೆಲ್ಲವುಗಳಿಗಿಂತ ಕಡಿಮೆ ಸಮಯದಲ್ಲಿ ನಮ್ಮನ್ನು ಅಪಾರವಾಗಿ ಪ್ರಭಾವಿಸಿರುವುದು ಸಾಮಾಜಿಕ ಮಾಧ್ಯಮ. ಅಂತರ್ಜಾಲ ಹಾಗೂ ವಿಶ್ವವ್ಯಾಪಿ ಜಾಲದ ನೇರ ಕೊಡುಗೆಯಾಗಿ ನಮಗೆ ಪರಿಚಯವಾದ ಈ ಮಾಧ್ಯಮ ಈಚಿನ ವರ್ಷಗಳಲ್ಲಿ ತನ್ನ ಶಕ್ತಿಯನ್ನು ಹಲವು ಸಂದರ್ಭಗಳಲ್ಲಿ, ಹಲವು ರೂಪಗಳಲ್ಲಿ ತೋರಿಸಿಕೊಟ್ಟಿದೆ.
ಸಾಮಾಜಿಕ ಮಾಧ್ಯಮ ಎಂದರೇನು? ನಿಘಂಟಿನಲ್ಲಿರುವಂತಹ ಅರ್ಥವೇ ಬೇಕು ಎನ್ನುವುದಾದರೆ, ಇದನ್ನು “ಆಲೋಚನೆಗಳು, ವೈಯಕ್ತಿಕ ಸಂದೇಶಗಳು ಸೇರಿದಂತೆ ವಿವಿಧ ಬಗೆಯ ಮಾಹಿತಿಯನ್ನು ಅಂತರ್ಜಾಲದಲ್ಲಿ ಸುಲಭವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುವ ಸಮೂಹ ಮಾಧ್ಯಮ” ಎಂದು ಕರೆಯಬಹುದೋ ಏನೋ.
ಇದನ್ನೂ ಓದಿರಿ: ನಾವು ನೀವು ಅರಿಯದ ಬೆಂಗಳೂರಿನ ‘ಬಡವರ ಜಗತ್ತು’ (ಭಾಗ- 1)
ಸುದ್ದಿ ಪ್ರಸಾರಕ್ಕೆ ರೇಡಿಯೋ-ಟೀವಿಗಳನ್ನೂ, ಉಭಯ ಕುಶಲೋಪರಿಗೆ ಅಂಚೆ ಹಾಗೂ ದೂರವಾಣಿಯನ್ನೂ ಕಡ್ಡಾಯವಾಗಿ ಅವಲಂಬಿಸಬೇಕಾದ ಕಾಲವೊಂದಿತ್ತು. ಇವಿಷ್ಟೂ ಕೆಲಸಗಳನ್ನು ಮೊಬೈಲ್ ಅಥವಾ ಕಂಪ್ಯೂಟರಿನ ಮೂಲಕವೇ ಮಾಡಿ ಮುಗಿಸುವ ಅವಕಾಶ ಒದಗಿಸಿಕೊಟ್ಟಿದ್ದು ಸಾಮಾಜಿಕ ಮಾಧ್ಯಮ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್, ಲಿಂಕ್ಡ್ಇನ್, ಯೂಟ್ಯೂಬ್, ವಾಟ್ಸ್ಯಾಪ್ ಸೇರಿದಂತೆ ನಾವು ಹತ್ತಾರು ಸವಲತ್ತುಗಳನ್ನು ಹತ್ತಾರು ಉದ್ದೇಶಗಳಿಗಾಗಿ ಬಳಸುತ್ತೇವಲ್ಲ, ಸಾಮಾಜಿಕ ಮಾಧ್ಯಮ ಎನ್ನುವುದು ಅವೆಲ್ಲವನ್ನೂ ಸೇರಿಸಿದ ಗುಂಪಿನ ಹೆಸರು.
ಅರ್ಥ-ವ್ಯಾಪ್ತಿ ಏನೇ ಇದ್ದರೂ ಸಾಮಾಜಿಕ ಮಾಧ್ಯಮಗಳ ಜನಪ್ರಿಯತೆ ಅಗಾಧವಾಗಿದೆ ಎನ್ನುವುದಂತೂ ನಿಜ. ಹಳೆ ಪರಿಚಯದವರೊಡನೆ ಸಂಪರ್ಕ ಉಳಿಸಿಕೊಳ್ಳಲು, ಹೊಸಬರ ಸಂಪರ್ಕ ಬೆಳೆಸಿಕೊಳ್ಳಲು ನೆರವಾಗುವ ಹಲವು ಜಾಲತಾಣಗಳು-ಆಪ್‌ಗಳು ಅನೇಕ ವರ್ಷಗಳಿಂದಲೇ ನಮ್ಮ ಪ್ರೀತಿಗೆ ಪಾತ್ರವಾಗಿವೆ. ಜನಸಂಪರ್ಕದ ಖುಷಿಯ ಜೊತೆಗೆ ಹೊಸ ಅವಕಾಶಗಳನ್ನೂ ಅವು ರೂಪಿಸಿಕೊಟ್ಟಿವೆ. ಸಾಮಾನ್ಯವಾಗಿ ಕೈಗೆ ಸಿಗದವರ ಜೊತೆ ಮಾತನಾಡುವುದು, ಜಗಳವಾಡುವುದು, ಸಂಬಂಧಪಟ್ಟ/ಪಡದ ವಿಷಯಗಳ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸುವುದೆಲ್ಲ ಇವುಗಳಿಂದಾಗಿ ಸಾಧ್ಯವಾಗಿದೆ.
ಸಾಮಾಜಿಕ ಮಾಧ್ಯಮದ ವಿಕಾಸ
ಬಹುತೇಕ ಹೊಸ ತಂತ್ರಜ್ಞಾನಗಳ ಹುಟ್ಟು – ಬೆಳವಣಿಗೆಯೆಲ್ಲ ಆದದ್ದು ಇಂಗ್ಲಿಷಿನ ವಾತಾವರಣದಲ್ಲಿ. ಹಾಗಾಗಿ ಒಂದಷ್ಟು ಕಾಲ ಅವುಗಳ ಬಳಕೆಯೂ ಇಂಗ್ಲಿಷ್ ಮೂಲಕವೇ ಆಗುತ್ತಿತ್ತು. ಅಂತರ್ಜಾಲ-ವಿಶ್ವವ್ಯಾಪಿ ಜಾಲಗಳ ಕತೆಯೂ ಇದೇ. ಹಾಗಾಗಿ, ಸಾಮಾಜಿಕ ಮಾಧ್ಯಮ ಬಳಸಬೇಕೆಂದರೆ ಕೊಂಚವಾದರೂ ಇಂಗ್ಲಿಷ್ ಗೊತ್ತಿರಬೇಕು ಎನ್ನುವ ಮನೋಭಾವ ಬೆಳೆದಿದ್ದೂ ಉಂಟು. ಈ ಮಾಧ್ಯಮ ಇತರ ಭಾಷೆಗಳತ್ತ ಮುಖಮಾಡುವುದು ತಡವಾದುದಕ್ಕೂ ಇದೇ ಕಾರಣ ಇರಬಹುದೇನೋ.
ಕನ್ನಡದ ವಿಷಯಕ್ಕೆ ಬರುವುದಾದರೆ, ಜಾಲಲೋಕದಲ್ಲಿ ಕನ್ನಡ ಬಳಸುವುದಕ್ಕೆ ಪ್ರಾರಂಭದ ದಿನಗಳಲ್ಲಿ ಕೆಲ ಅಡೆತಡೆಗಳಿದ್ದವು. ಬೇರೆಬೇರೆ ತಂತ್ರಾಂಶಗಳು ಬೇರೆಬೇರೆ ಸಂಕೇತೀಕರಣ (ಎನ್‌ಕೋಡಿಂಗ್) ವ್ಯವಸ್ಥೆಗಳನ್ನು, ಬೇರೆಬೇರೆ ಅಕ್ಷರಶೈಲಿಗಳನ್ನು (ಫಾಂಟ್) ಆಧರಿಸಿದ್ದರಿಂದ ನಿರ್ದಿಷ್ಟ ಫಾಂಟನ್ನು ನಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳದೆ ಕನ್ನಡದ ಪಠ್ಯ ಓದುವುದು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಕನ್ನಡ ತಂತ್ರಾಂಶ ಬಳಸಿ ನೀವೊಂದಷ್ಟು ಪಠ್ಯ ಸಿದ್ಧಪಡಿಸಿದ್ದರೆ ಅದನ್ನು ಓದುವವರಲ್ಲೂ ಆ ತಂತ್ರಾಂಶ ಅಥವಾ ಕನಿಷ್ಠಪಕ್ಷ ಅದರ ಫಾಂಟುಗಳಾದರೂ ಇರಬೇಕಿದ್ದದ್ದು ಅನಿವಾರ್ಯವಾಗಿತ್ತು.
ಸರಿಯಾದ ಫಾಂಟುಗಳಿಲ್ಲದ ಕಂಪ್ಯೂಟರಿನಲ್ಲಿ ಕನ್ನಡ ತಾಣಗಳಲ್ಲಿದ್ದ ಪಠ್ಯವೆಲ್ಲ ಇಂಗ್ಲಿಷ್ ಅಕ್ಷರಗಳ ಅಸಂಬದ್ಧ ಜೋಡಣೆಯಂತೆಯೇ ಕಾಣುತ್ತಿದ್ದವು. ಮೊದಲ ಮೊಬೈಲುಗಳಲ್ಲಂತೂ ಕನ್ನಡ ಕಾಣಿಸುತ್ತಿದ್ದದ್ದೇ ಅಪರೂಪ!
ಈ ಪರಿಸ್ಥಿತಿ ಬದಲಿಸಲು ಹಲವು ಪ್ರಯತ್ನಗಳು ನಡೆದವಾದರೂ ದೊಡ್ಡಪ್ರಮಾಣದಲ್ಲಿ ಯಶಸ್ಸು ಸಿಕ್ಕಿದ್ದು ಮಾತ್ರ ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ. ಇಮೇಲ್ ಕಳುಹಿಸುವುದು, ಕನ್ನಡದ ಮಾಹಿತಿಯನ್ನು ಸರ್ಚ್ ಇಂಜನ್‌ಗಳಲ್ಲಿ ಕನ್ನಡದಲ್ಲೇ ಹುಡುಕುವುದು, ಜಾಲತಾಣಗಳಿಗೆ-ಬ್ಲಾಗುಗಳಿಗೆ ಮಾಹಿತಿ ಸೇರಿಸುವುದು, ಅವನ್ನು ಓದುವುದು – ಇದೆಲ್ಲವನ್ನೂ ನಿರ್ದಿಷ್ಟ ತಂತ್ರಾಂಶದ ಮೇಲೆ ಅವಲಂಬಿತರಾಗದೆ ಮಾಡಲು ಸಾಧ್ಯವಾಗಿಸಿದ್ದು ಯುನಿಕೋಡ್‌ನ ಸಾಧನೆ.
ಇದನ್ನೂ ಓದಿರಿ: ನಾವು ನೀವು ಅರಿಯದ ಬೆಂಗಳೂರಿನ ‘ಬಡವರ ಜಗತ್ತು’ (ಭಾಗ- 2)
ಯುನಿಕೋಡ್ ಬಳಕೆ ವ್ಯಾಪಕವಾಗುತ್ತಿದ್ದಂತೆ ಕನ್ನಡವೂ ಸಾಮಾಜಿಕ ಮಾಧ್ಯಮದ ಜಗತ್ತಿಗೆ ತೆರೆದುಕೊಂಡಿತು.
ಕಂಪ್ಯೂಟರಿನಲ್ಲಿ, ಮೊಬೈಲ್ ಫೋನಿನಲ್ಲೆಲ್ಲ ಕನ್ನಡ ಅಕ್ಷರಗಳನ್ನು ಮೂಡಿಸುವ ಸೌಲಭ್ಯ ದೊರೆತದ್ದು ಈ ಬೆಳವಣಿಗೆಗೆ ಇನ್ನಷ್ಟು ಬಲ ನೀಡಿತು. ಮೊದಲಿಗೆ ಬಂದ ಬರಹ, ನುಡಿ ತಂತ್ರಾಂಶಗಳ ಜೊತೆಗೆ ಪದ ತಂತ್ರಾಂಶ, ಗೂಗಲ್ ಇನ್‌ಪುಟ್ ಟೂಲ್ಸ್ ಮುಂತಾದ ಸಾಧನಗಳು ಕಂಪ್ಯೂಟರಿನಲ್ಲಿ ಕನ್ನಡ ಬಳಕೆಯನ್ನು ಸರಾಗಗೊಳಿಸಿದವು. ಜಸ್ಟ್ ಕನ್ನಡ, ಜಿಬೋರ್ಡ್ ಮುಂತಾದ ತಂತ್ರಾಂಶಗಳು ಕನ್ನಡ ಅಕ್ಷರಗಳನ್ನು ಮೊಬೈಲಿನಲ್ಲೂ ಸುಲಭವಾಗಿ ಮೂಡಿಸಿದವು.
ವಿಶ್ವವ್ಯಾಪಿ ಜಾಲದ ಮೂಲಕ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇರುವ ಪ್ರಭಾವಶಾಲಿ ಮಾಧ್ಯಮ ಬ್ಲಾಗ್. ಇದು ವೆಬ್ ಲಾಗ್ (ವೆಬ್ = ಜಾಲ, ಲಾಗ್ = ದಿನಚರಿ) ಎಂಬುದರ ಅಪಭ್ರಂಶ. ಓದಿದ ಪುಸ್ತಕ, ಇಷ್ಟವಾದ ತಿಂಡಿ, ಇಷ್ಟವಾಗದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸಗಳು, ಬರವಣಿಗೆ, ಅಭಿಪ್ರಾಯಗಳು – ಹೀಗೆ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಇಡೀ ಜಗತ್ತಿನೊಡನೆ ಹಂಚಿಕೊಳ್ಳಲು ಬ್ಲಾಗುಗಳು ಅನುವು ಮಾಡಿಕೊಡುತ್ತವೆ.
ಕನ್ನಡದಲ್ಲಿ ಹೆಚ್ಚು ಜನರನ್ನು ತಲುಪಿದ ಮೊದಲ ಸಾಮಾಜಿಕ ಮಾಧ್ಯಮವೆಂಬ ಹೆಚ್ಚುಗಾರಿಕೆ ಈ ಬ್ಲಾಗುಗಳಿಗೇ ಸಲ್ಲುತ್ತದೆ. ತೊಂಬತ್ತರ ದಶಕದಲ್ಲಿ ಮೊದಲಿಗೆ ಕಾಣಿಸಿಕೊಂಡ ಬ್ಲಾಗುಗಳು, ಈ ಶತಮಾನದ ಆರಂಭದ ವೇಳೆಗೆ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡವು. ಉಚಿತವಾಗಿ ಬ್ಲಾಗ್ ತೆರೆಯಲು ಅನುವು ಮಾಡಿಕೊಟ್ಟ ಸೇವೆಗಳನ್ನು ಬಳಸಿ ವಿವಿಧ ವಿಷಯಗಳನ್ನು ಕುರಿತ ನೂರಾರು ಬ್ಲಾಗುಗಳು ರೂಪುಗೊಂಡವು. ಹಲವು ಬ್ಲಾಗುಗಳಲ್ಲಿರುವ ಮಾಹಿತಿಯನ್ನು ಒಟ್ಟುಸೇರಿಸಿ ಪ್ರಕಟಿಸುವ ತಾಣಗಳೂ ಪ್ರಾರಂಭವಾದವು. 2005ರಲ್ಲಿ ಪ್ರಾರಂಭವಾದ ‘ಸಂಪದ’ ಜಾಲತಾಣ, ಕನ್ನಡದ ಬಳಕೆದಾರರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ವಿಶಿಷ್ಟ ವೇದಿಕೆಯೊಂದನ್ನು ಒದಗಿಸಿಕೊಟ್ಟಿತು. ಸರಿಸುಮಾರು ಅದೇ ಸಮಯದಲ್ಲಿ ಪ್ರಾರಂಭವಾದ ‘ನಿಂಗ್’ ಎಂಬ ಸೇವೆಯನ್ನು ಬಳಸಿಕೊಂಡು ಕನ್ನಡದ ಬಳಕೆದಾರರಿಗೇ ಮೀಸಲಾದ ಇನ್ನೂ ಕೆಲ ಸಾಮಾಜಿಕ ಮಾಧ್ಯಮಗಳೂ ರೂಪುಗೊಂಡವು.
2004ರಲ್ಲಿ ಪ್ರಾರಂಭವಾದ ಆರ್ಕುಟ್, ಭಾರತದಲ್ಲಿ ಅಗಾಧ ಜನಪ್ರಿಯತೆ ಗಳಿಸಿಕೊಂಡ ಸಾಮಾಜಿಕ ಮಾಧ್ಯಮಗಳ ಸಾಲಿನಲ್ಲಿ ಅಗ್ರಗಣ್ಯವಾದದ್ದು. ನಂತರದ ವರ್ಷಗಳಲ್ಲಿ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್, ಲಿಂಕ್ಡ್ಇನ್, ಯೂಟ್ಯೂಬ್, ವಾಟ್ಸ್ಯಾಪ್ ಮುಂತಾದ ಹತ್ತಾರು ಸಾಮಾಜಿಕ ಮಾಧ್ಯಮಗಳು ನಮ್ಮ ಡಿಜಿಟಲ್ ಜೀವನದ ಅಂಗಗಳಾಗಿವೆ. ಬೆಂಗಳೂರಿನ ಸಂಸ್ಥೆಯೇ ಪ್ರಾರಂಭಿಸಿದ್ದು ಎಂದು ಸುದ್ದಿಮಾಡಿದ್ದ ‘ಕೂ’, ‘ಶೇರ್‌ಚಾಟ್’ ಮುಂತಾದ ಕೆಲವೇ ಸಾಮಾಜಿಕ ಮಾಧ್ಯಮಗಳನ್ನು ಹೊರತುಪಡಿಸಿದರೆ, ಕನ್ನಡದ್ದೇ ವೇದಿಕೆ ಎನ್ನುವ ಪರಿಕಲ್ಪನೆಯನ್ನೇನೂ ಬೆಳೆಸಿಕೊಳ್ಳದ ನಾವು ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಸಾಮಾಜಿಕ ಮಾಧ್ಯಮಗಳನ್ನೇ ಖುಷಿಯಿಂದ ಬಳಸುತ್ತಿದ್ದೇವೆ.
2024ನೇ ಸಾಲಿನ ಪ್ರಾರಂಭದ ಅಂಕಿ-ಅಂಶಗಳ ಪ್ರಕಾರ, ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರಂತೆ. ಪ್ರತಿದಿನವೂ ಸರಾಸರಿ ನಾಲ್ಕರಿಂದ ಐದು ಗಂಟೆಗಳ ಕಾಲ ಮೊಬೈಲ್ ಫೋನ್ ಬಳಸುವ ನಾವು, ಅದರಲ್ಲಿ ದೊಡ್ಡ ಭಾಗವನ್ನು ಸಾಮಾಜಿಕ ಮಾಧ್ಯಮಗಳಲ್ಲೇ ಕಳೆಯುತ್ತೇವಂತೆ!
ಸಾಮಾಜಿಕ ಮಾಧ್ಯಮದಲ್ಲಿ ನಾವು
ಸಾಮಾಜಿಕ ಮಾಧ್ಯಮಗಳ ವ್ಯಾಪ್ತಿ ಹೆಚ್ಚಿದಂತೆ, ಹಳೆ ಪರಿಚಯದವರೊಡನೆ ಸಂಪರ್ಕ ಉಳಿಸಿಕೊಳ್ಳುವುದು, ಹೊಸಬರ ಸಂಪರ್ಕ ಬೆಳೆಸಿಕೊಳ್ಳುವುದು ಬಹಳ ಸುಲಭವಾಗಿದೆ. ಜನಸಂಪರ್ಕದ ಖುಷಿಯ ಜೊತೆಗೆ ಹೊಸ ಅವಕಾಶಗಳೂ ಸೃಷ್ಟಿಯಾಗಿವೆ. ಸಾಮಾನ್ಯವಾಗಿ ಕೈಗೆ ಸಿಗದವರ ಜೊತೆ ಮಾತನಾಡುವುದು, ಜಗಳವಾಡುವುದು, ಸಂಬಂಧಪಟ್ಟ/ಪಡದ ವಿಷಯಗಳ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸುವುದೆಲ್ಲ ಸಾಮಾಜಿಕ ಮಾಧ್ಯಮಗಳಿಂದಾಗಿ ಸಾಧ್ಯವಾಗಿದೆ.
ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?
ನಮಗನಿಸಿದ್ದನ್ನು- ನಾವು ಬರೆದಿದ್ದನ್ನು ಲೋಕಕ್ಕೆಲ್ಲ ತಿಳಿಸುವುದೂ ಇದೀಗ ಬಲು ಸುಲಭವಾಗಿದೆ. ಬರವಣಿಗೆ ಪೂರ್ತಿಯಾದಾಗಿನಿಂದ ಅದು ಪ್ರಕಟವಾಗುವವರೆಗೆ ಮುದ್ರಣ ಮಾಧ್ಯಮದಲ್ಲಿರುತ್ತಿದ್ದ ಅನಿರ್ದಿಷ್ಟ ಅವಧಿಯ ವಿಳಂಬ ಈಗಿಲ್ಲ. ನಾನು ಬರೆದದ್ದು ಪ್ರಕಟವಾಗುವ ಮುನ್ನ ಅದನ್ನು ಪತ್ರಿಕೆಯ ಸಂಪಾದಕರೋ ಮತ್ತೊಬ್ಬರೋ ಓದಿ ಅನುಮೋದಿಸಬೇಕು ಎಂಬ ಅನಿವಾರ್ಯತೆಯೂ ಇಲ್ಲ. ಹಾಗೆ ನೋಡಿದರೆ ಸಾಂಪ್ರದಾಯಿಕ ಮಾಧ್ಯಮಗಳಿಗೇ ಸಾಮಾಜಿಕ ಮಾಧ್ಯಮದಿಂದ ಮಾಹಿತಿಯ ಪೂರೈಕೆಯಾಗುವಂತಹ ಸನ್ನಿವೇಶವೂ ಇದೀಗ ಸೃಷ್ಟಿಯಾಗಿದೆ.
ಪ್ರಕಟಿಸುವುದಷ್ಟೇ ಅಲ್ಲ, ಪ್ರಕಟವಾದುದನ್ನು ಓದುಗರು ತಕ್ಷಣವೇ ಓದಿ ಪ್ರತಿಕ್ರಿಯಿಸುವುದು, ಅದಕ್ಕೆ ಲೇಖಕರು ಅದೇ ಕ್ಷಣದಲ್ಲಿ ಉತ್ತರಿಸುವುದು ಕೂಡ ಸುಲಭ. ಬರೆದದ್ದನ್ನು ಪರಿಷ್ಕರಿಸಬೇಕು, ಹೊಸ ಮಾಹಿತಿ ಸೇರಿಸಿ ವಿಸ್ತರಿಸಬೇಕೆಂದರೆ ಅದೂ ಆದೀತು. ಬರೆಯಲು ಬೇಸರವಾದರೆ ಧ್ವನಿ ರೂಪದಲ್ಲೋ ವೀಡಿಯೋ ರೂಪದಲ್ಲೋ ನಮ್ಮ ಅನಿಸಿಕೆಗಳನ್ನು ತಿಳಿಸುವುದು ಕೂಡ ಇದೀಗ ಸಾಧ್ಯವಾಗಿದೆ. ಈ ಹಿಂದೆ ಅವಕಾಶವಂಚಿತರಾಗಿದ್ದ ಅದೆಷ್ಟೋ ಪ್ರತಿಭಾವಂತರು ಬೆಳಕಿಗೆ ಬರುವಲ್ಲೂ ಸಾಮಾಜಿಕ ಮಾಧ್ಯಮದ ಕೊಡುಗೆಯನ್ನು ನಾವು ಕಾಣಬಹುದು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂತಾದವುಗಳ ಪ್ರಸಾರದಲ್ಲೂ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ಒಂದನ್ನೇ ಉದಾಹರಣೆಯಾಗಿ ತೆಗೆದುಕೊಂಡರೂ ಇಂತಹ ಅನೇಕ ಚಟುವಟಿಕೆಗಳನ್ನು ನಾವು ಗಮನಿಸಬಹುದು. ಕನ್ನಡದ ಸಾಧಕರನ್ನು ನಿರಂತರವಾಗಿ ಪರಿಚಯಿಸುತ್ತಿರುವ ‘ಕನ್ನಡ ಸಂಪದ’, ಕರ್ನಾಟಕದ ಶಿಲ್ಪಕಲೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಅರಿವು ಮೂಡಿಸುವ ‘ಏನ್ಷಿಯೆಂಟ್ ಟೆಂಪಲ್ಸ್ ಆಂಡ್ ಮಾನ್ಯುಮೆಂಟ್ಸ್ ಆಫ್ ಕರ್ನಾಟಕ’, ಹೊಯ್ಸಳ ದೇಗುಲಗಳ ಪರಿಚಯಕ್ಕೆ ಮೀಸಲಾದ ‘ಹೊಯ್ಸಳ ದೇಗುಲ ಮಾಲಿಕೆ’, ಕನ್ನಡ ಪದಗಳನ್ನು ಕುರಿತು ಚರ್ಚಿಸುವ ವೇದಿಕೆ ‘ಪದಾರ್ಥ ಚಿಂತಾಮಣಿ’, ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ‘ಕುತೂಹಲಿ’ ಹಾಗೂ ‘ವಿಜ್ಞಾನ ಡಾಟ್ ಕಾಮ್’ ಮೊದಲಾದವು ಇದಕ್ಕೆ ಕೆಲ ಉದಾಹರಣೆಗಳು.
ಅಂದಹಾಗೆ ಸಾಮಾಜಿಕ ಮಾಧ್ಯಮದ ಅನುಕೂಲಗಳು ಅವುಗಳ ಬಳಕೆದಾರರಿಗೆ ಮಾತ್ರ ಸೀಮಿತವೇನಲ್ಲ. ಅವುಗಳ ನಿರ್ಮಾಪಕರು ಕೂಡ ಜಾಹೀರಾತುಗಳಿಂದ ಸಾಕಷ್ಟು ದುಡ್ಡುಮಾಡುತ್ತಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮುಂತಾದ ಪ್ರಮುಖ ಸೇವೆಗಳ ಹಿಂದಿರುವ ಮೆಟಾ ಸಂಸ್ಥೆಯ 2023ನೇ ಸಾಲಿನ ಒಟ್ಟು ಆದಾಯ ಸುಮಾರು ಹತ್ತು ಲಕ್ಷ ಕೋಟಿ ರೂಪಾಯಿಗಳ ಆಸುಪಾಸಿನಲ್ಲಿತ್ತಂತೆ! ತಮ್ಮ ಆದಾಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಇಂತಹ ಸಂಸ್ಥೆಗಳು ಇನ್ನಷ್ಟು ಹೊಸ ಆಕರ್ಷಣೆಗಳನ್ನು ಪರಿಚಯಿಸುತ್ತಿವೆ, ನಮ್ಮ ಇನ್ನಷ್ಟು ಸಮಯವನ್ನು ಸೆಳೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿವೆ.
ಸಾಮಾಜಿಕ ಮಾಧ್ಯಮ ಮತ್ತು ಭಾಷೆ
ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಹೆಚ್ಚಿದ್ದು ತಂತ್ರಜ್ಞಾನದ ಬೆಳವಣಿಗೆಯ ದೃಷ್ಟಿಯಿಂದಲೂ ಸಹಕಾರಿಯಾಗಿದೆ. ಕನ್ನಡದ ಬಳಕೆದಾರರಿಗೆ ತಂತ್ರಜ್ಞಾನದ ಹೊಸ ಸವಲತ್ತುಗಳು ದೊರಕುತ್ತಿರುವುದಕ್ಕೆ ಹೆಚ್ಚಿದ ಬಳಕೆಯೂ ಒಂದು ಪ್ರಮುಖ ಕಾರಣವೇ ತಾನೇ? ಆಪಲ್ ಐಓಎಸ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಸಾಧನಗಳಲ್ಲಿ ಕನ್ನಡ ಅಕ್ಷರ ಮೂಡಿಸಲು ಪರದಾಡಬೇಕಿದ್ದ ಕಾಲ ಹೋಗಿ, ಕನ್ನಡ ಮೂಡಿಸುವ ಹಲವು ಆಯ್ಕೆಗಳು ಐಫೋನ್ ಬಳಕೆದಾರರಿಗೂ ದೊರಕುತ್ತಿವೆ. ಕೀಲಿಮಣೆಯ ಮೂಲಕವಷ್ಟೇ ಅಲ್ಲ, ಧ್ವನಿಯ ಮೂಲಕವೂ ಕನ್ನಡ ಅಕ್ಷರಗಳನ್ನು ಮೂಡಿಸುವುದು (ಸ್ಪೀಚ್ ಟು ಟೆಕ್ಸ್ಟ್), ನಮಗೆ ಬೇಕಾದ ಮಾಹಿತಿ ಹುಡುಕಿಕೊಳ್ಳುವುದು ಇದೀಗ ಸಾಧ್ಯವಾಗಿದೆ.
ಇದನ್ನೂ ಓದಿರಿ: ‘ಕರ್ನಾಟಕ, ಕ್ರಿಕೆಟ್ ಮತ್ತು ನಾನು’: ಯೋಗೇಂದ್ರ ಯಾದವ್ ನೆನಪುಗಳು
ಸಾಮಾಜಿಕ ಮಾಧ್ಯಮಗಳಿಗೆ ಒಗ್ಗಿಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮ ಭಾಷಾ ಬಳಕೆಯೂ ಅಷ್ಟಿಷ್ಟು ಬದಲಾಗಿದೆ ಎನ್ನಿಸುತ್ತಿದೆ. ತಂತ್ರಜ್ಞಾನಕ್ಕೆ, ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದ ಹಲವಾರು ಹೊಸ ಪದಗಳು ನಮ್ಮ ಆಡುನುಡಿಗೆ ಸೇರಿಕೊಂಡುಬಿಟ್ಟಿವೆ. ಮೊಬೈಲ್ ಬಂದಾಗ ಸಿಮ್ಮು, ಮಿಸ್ಕಾಲುಗಳೆಲ್ಲ ಕನ್ನಡ ಪದಗಳೇ ಆದ ಹಾಗೆ ಸಾಮಾಜಿಕ ಮಾಧ್ಯಮಗಳಿಂದಾಗಿ ಸ್ಟೇಟಸ್ಸು, ವಾಟ್ಸಾಪು, ವಾಯ್ಸ್ ಮೆಸೇಜುಗಳು ನಮ್ಮ ಭಾಷೆಯ ಪದಗಳಷ್ಟೇ ಸರಾಗವಾಗಿ ಬಳಕೆಯಾಗುತ್ತಿವೆ. ಚಿತ್ರಾಕ್ಷರಗಳು (ಎಮೋಜಿ) ಜನಪ್ರಿಯವಾದಾಗಿನಿಂದ ಬೇರೆಬೇರೆ ರೀತಿಯ ಸನ್ನಿವೇಶಗಳಿಗೆ ಒಂದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಅಭ್ಯಾಸ ಬೆಳೆದಿದೆ, ಇದರಿಂದಾಗಿ ಭಾಷೆಯ ಸೊಗಸು ಮರೆಯಾಗುತ್ತಿದೆ ಎನ್ನುವ ಆಪಾದನೆ ಕೂಡ ಇದೆ. ಜನರೇಟಿವ್ ಎಐ ತಂತ್ರಜ್ಞಾನ ಬಳಸಿಕೊಂಡು ವಿವಿಧ ಸಂದೇಶಗಳಿಗೆ ತಕ್ಕ ಪ್ರತಿಕ್ರಿಯೆಗಳನ್ನು ತಾವೇ ಸೂಚಿಸುವ ವ್ಯವಸ್ಥೆಗಳು ಇಂಗ್ಲಿಷಿನಲ್ಲಿ ಈಗಾಗಲೇ ಬಳಕೆಗೆ ಬಂದಿವೆ. ಮುಂದಿನ ದಿನಗಳಲ್ಲಿ ಇಂತಹ ವ್ಯವಸ್ಥೆಗಳು ಕನ್ನಡಕ್ಕೂ ಬಂದರೆ ಅವು ನಮ್ಮ ಭಾಷಾ ಬಳಕೆಯ ಮೇಲೆ ಯಾವ ಪರಿಣಾಮ ಬೀರಬಹುದು ಎನ್ನುವುದನ್ನೂ ಕಾದುನೋಡಬೇಕಿದೆ.
ಆದದ್ದೆಲ್ಲ ಒಳಿತೇ ಆಯಿತೇ?
ಸಾಮಾಜಿಕ ಮಾಧ್ಯಮದ ಬಳಕೆ ಹೆಚ್ಚಿದಂತೆ ಹೊರಗಿನ ಸಮಾಜವನ್ನು ಕಾಡುವ ಸಮಸ್ಯೆಗಳು ಅಲ್ಲಿಯೂ ವ್ಯಾಪಕವಾಗಿ ಕಾಣುತ್ತಿವೆ. ಇತರ ಮಾಧ್ಯಮಗಳಲ್ಲಿ ಪ್ರಕಟಣೆಗೆ ಯೋಗ್ಯವಲ್ಲದ ಮಾಹಿತಿಯ ಪ್ರಕಟಣೆ ಅಲ್ಲಿ ಸುಲಭವಾಗಿದೆ. ಸಂವಾದದ ಹೆಸರಿನಲ್ಲಿ ಗುಂಪುಗಾರಿಕೆ, ವೈಯಕ್ತಿಕ ನಿಂದನೆ, ಅವಹೇಳನಗಳೂ ವ್ಯಾಪಕವಾಗಿ ಕಾಣಿಸಿಕೊಂಡಿವೆ. ತಪ್ಪು ಮಾಹಿತಿ, ಸುಳ್ಳುಗಳೂ ವ್ಯಾಪಕವಾಗಿ ಹರಡುತ್ತಿವೆ. ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವ ಭರದಲ್ಲಿ ಹಿಂದೆಮುಂದೆ ಯೋಚಿಸದೆ ಮಾತುಗಳನ್ನು ಹರಿಬಿಡುವ ಅಪಾಯಕಾರಿ ಅಭ್ಯಾಸ ಕೂಡ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ವೈಯಕ್ತಿಕ ದ್ವೇಷಸಾಧನೆ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಕೆಲಸಗಳಲ್ಲೂ ಸಾಮಾಜಿಕ ಮಾಧ್ಯಮದ ಬಳಕೆ ಹೆಚ್ಚಿದೆ. ಡೀಪ್ ಫೇಕ್‌ನಂತಹ ತಂತ್ರಜ್ಞಾನಗಳು ಕೈಗೆ ಸಿಕ್ಕಿದಮೇಲಂತೂ ಸಾಮಾಜಿಕ ಮಾಧ್ಯಮದಲ್ಲಿ ನಿಜ ಯಾವುದು ಸುಳ್ಳು ಯಾವುದು ಎಂದು ಗುರುತಿಸುವುದೇ ಕಷ್ಟವಾಗಿದೆ.
ಊರು ಎಂದ ಮೇಲೆ ಅಲ್ಲಿ ಎಲ್ಲ ಬಗೆಯ ಜನರೂ ಇರುತ್ತಾರೆ, ಎಲ್ಲ ಬಗೆಯ ಚಟುವಟಿಕೆಗಳೂ ನಡೆಯುತ್ತವೆ. ಸಾಮಾಜಿಕ ಮಾಧ್ಯಮ ಕೂಡ ಒಂದು ಊರಿನಂತೆ ಎಂದುಕೊಳ್ಳುವುದಾದರೆ, ಆ ಊರಿನಲ್ಲಿ ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಹೇಗೆ? ಅಂತರಜಾಲದ ಅಗಾಧ ವ್ಯಾಪ್ತಿ ಹಾಗೂ ಸ್ವರೂಪವನ್ನು ಗಮನಿಸಿದಾಗ ಈ ಪ್ರಶ್ನೆಗೆ ಉತ್ತರಿಸುವುದು ಎಷ್ಟು ಕಷ್ಟ ಎನ್ನುವುದು ಅರಿವಾಗುತ್ತದೆ. ಊರಿನಲ್ಲಾದರೆ ಅಕ್ಕಪಕ್ಕದ ಮನೆಯವರೋ ಅಕ್ಕಪಕ್ಕದ ಬೀದಿಯವರೋ ಜಗಳವಾಡುತ್ತಾರೆ, ಮನೆಯ ಹಿರಿಯರೋ ಪೋಲೀಸರೋ ಬಂದು ಜಗಳ ಬಿಡಿಸುತ್ತಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಜಗಳವಾಡುವವರ ಪೈಕಿ ಒಬ್ಬರು ಈ ಊರಿನಲ್ಲಿದ್ದರೆ ಇನ್ನೊಬ್ಬರು ಇನ್ನೊಂದು ರಾಜ್ಯದಲ್ಲೋ ದೇಶದಲ್ಲೋ ಇರಬಹುದು. ಸತ್ಯದ ತಲೆಯಮೇಲೆ ಹೊಡೆದಂತೆ ಸುಳ್ಳನ್ನು ಪೋಸ್ಟ್ ಮಾಡುವವರ ಹೆಸರೇ ಸುಳ್ಳಿರಬಹುದು!
ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ವಿಶ್ವದೆಲ್ಲೆಡೆಯ ಸರ್ಕಾರಗಳು ಈ ನಿಟ್ಟಿನಲ್ಲಿ ತಲೆಕೆಡಿಸಿಕೊಂಡಿವೆ. ನಿಮಗಿಷ್ಟವಿದೆಯೋ ಇಲ್ಲವೋ ನೀವೂ ತಲೆಕೆಡಿಸಿಕೊಳ್ಳಿರೆಂದು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೂ ತಾಕೀತು ಮಾಡುತ್ತಿವೆ. ನಮ್ಮ ದೇಶದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಬಳಕೆದಾರರ ನಡುವಿನ ಸಂವಹನವನ್ನು ಸಾಧ್ಯವಾಗಿಸುವ ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಮಧ್ಯವರ್ತಿಗಳೆಂದು ಪರಿಗಣಿಸಿ The Information Technology (Intermediary Guidelines and Digital Media Ethics Code) Rules, 2021ಅನ್ವಯ ಅವರ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. ಸ್ಥೂಲವಾಗಿ ಹೇಳುವುದಾದರೆ -ಅಶ್ಲೀಲವಾದ, ಅವಹೇಳನಕರವಾದ, ಪ್ರಚೋದನಕಾರಿಯಾದ, ತಪ್ಪು ದಾರಿಗೆಳೆಯುವ, ಇತರರ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಬೇರಾವುದೇ ರೀತಿಯಲ್ಲಿ ಕಾನೂನುಬಾಹಿರವಾದ ಮಾಹಿತಿ ತಮ್ಮ ವೇದಿಕೆಯಲ್ಲಿ ಪ್ರಕಟವಾಗದಂತೆ ಮಾಡಲು ಸಾಧ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದು ಇದೀಗ ಈ ಮಧ್ಯವರ್ತಿಗಳ ಜವಾಬ್ದಾರಿಯಾಗಿದೆ.
ಸಾಮಾಜಿಕ ಮಾಧ್ಯಮ ಮತ್ತು ಎಐ
ಹೇಳುವುದಕ್ಕೆ-ಕೇಳುವುದಕ್ಕೆ ಇದು ಬಹಳ ಸರಳವಾದ ವಿಷಯ. ಲಕ್ಷಾಂತರ ಜನರು ಬಳಸುವ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿಮಿಷಕ್ಕೆ ಹತ್ತಾರು ಸಾವಿರ ಸಂದೇಶಗಳು ಪ್ರಕಟವಾಗುತ್ತಿರುತ್ತವೆ, ಅವುಗಳನ್ನು ಬೇರೆಯವರೂ ಹಂಚಿಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಿದಾಗ ಮಾತ್ರ ಇದು ಎಷ್ಟು ಕಷ್ಟದ ಕೆಲಸ ಎನ್ನುವುದು ಸ್ಪಷ್ಟವಾಗುತ್ತದೆ. ಇಷ್ಟೆಲ್ಲ ಪೋಸ್ಟುಗಳನ್ನು ಯಾರಾದರೂ ನೋಡಿ, ಆಕ್ಷೇಪಾರ್ಹವಾದದ್ದೇನಾದರೂ ಇದೆಯೇ ಎಂದು ತೀರ್ಮಾನಿಸುವುದು ಅಸಾಧ್ಯವೇ ಸರಿ. ಹಾಗಾಗಿಯೇ, ತಮ್ಮಲ್ಲಿ ಪ್ರಕಟವಾಗುವ ಮಾಹಿತಿಯ ಮೇಲೆ ಒಂದು ಕಣ್ಣಿಡಲು ಬಹುತೇಕ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಹಾಯ ಪಡೆದುಕೊಳ್ಳುತ್ತವೆ. ಮೇಲ್ನೋಟಕ್ಕೆ ಆಕ್ಷೇಪಾರ್ಹವೆಂದು ಕಂಡುಬರುವ ಮಾಹಿತಿಯನ್ನು ತಂತ್ರಜ್ಞಾನದ ನೆರವಿನಿಂದಲೇ ತೆಗೆದುಹಾಕುತ್ತವೆ. ಸಂದೇಹಾಸ್ಪದ ಮಾಹಿತಿಯನ್ನು ಪರಿಶೀಲಕರ ಗಮನಕ್ಕೆ ತರುವ ಕೆಲಸವನ್ನೂ ಎಐ ವ್ಯವಸ್ಥೆ ಮಾಡುತ್ತದೆ.
ಇದನ್ನೂ ಓದಿರಿ: ಪರಿಷ್ಕೃತ ನೀತಿಗಳು ಕೈಗಾರಿಕೆಗೆ ಮಾರಕವಾಗಿದ್ದು ಹೇಗೆ?
ಇಂಗ್ಲಿಷಿನ ಮಟ್ಟಿಗೆ ಎಐ ತಂತ್ರಜ್ಞಾನ ಅಗಾಧವಾಗಿ ಬೆಳೆದಿದೆ. ಇಂಗ್ಲಿಷಿನಲ್ಲಿ ನೀವೊಂದು ಸಂದೇಶ ಕಳಿಸಿದರೆ ಅದರಲ್ಲಿ ಆಕ್ಷೇಪಾರ್ಹವಾದದ್ದೇನಾದರೂ ಇದೆಯೋ ಇಲ್ಲವೋ ಎನ್ನುವುದನ್ನು ಎಐ ವ್ಯವಸ್ಥೆಗಳು ಥಟ್ಟನೆ ಗುರುತಿಸಬಲ್ಲವು. ಆಕ್ಷೇಪಾರ್ಹ ಚಿತ್ರ ಹಾಗೂ ವೀಡಿಯೊಗಳನ್ನೂ ಅವು ಸುಲಭವಾಗಿ ಪತ್ತೆಹಚ್ಚಬಲ್ಲವು. ಆದರೆ ಕನ್ನಡದಂತಹ ಭಾಷೆಗಳಲ್ಲಿ ಈ ವ್ಯವಸ್ಥೆಗಳಿನ್ನೂ ಪರಿಣತಿ ಪಡೆದುಕೊಂಡಿಲ್ಲ. ಹಾಗಾಗಿಯೇ ನಮ್ಮ ಭಾಷೆಯಲ್ಲಿ ಬರಬಹುದಾದ ಆಕ್ಷೇಪಾರ್ಹ ಮಾಹಿತಿಯನ್ನು ಗುರುತಿಸುವುದು ಅಷ್ಟು ಸುಲಭದ ಸಂಗತಿಯಲ್ಲ.
ಹಾಗೆಂದು ಇಂಗ್ಲಿಷೇತರ ಭಾಷೆಗಳಲ್ಲಿ ಆಕ್ಷೇಪಾರ್ಹ ಮಾಹಿತಿ ಪ್ರಕಟವಾಗುವುದೇನು ನಿಂತುಹೋಗುತ್ತದೆಯೇ? ಇಂತಹ ಮಾಹಿತಿಯನ್ನು ಗುರುತಿಸಿ ನಿಯಂತ್ರಿಸಲೇಬೇಕಾದ ಅನಿವಾರ್ಯತೆ ನಮ್ಮ ಭಾಷೆಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರೋತ್ಸಾಹಿಸುವಂತಾದರೆ ಅದನ್ನು ಸಾಮಾಜಿಕ ಮಾಧ್ಯಮದ ಒಳ್ಳೆಯ ಅಡ್ಡಪರಿಣಾಮ ಎನ್ನಬಹುದೋ ಏನೋ. ಉದಾಹರಣೆಗೆ, ಮೆಟಾ ಸಂಸ್ಥೆ ರೂಪಿಸುತ್ತಿರುವ No Language Left Behind (NLLB) ಎನ್ನುವ ಎಐ ಮಾಡೆಲ್ ಜಗತ್ತಿನ ಇನ್ನೂರು ಭಾಷೆಗಳ ಪಠ್ಯವನ್ನು ಅನುವಾದಿಸಬಲ್ಲದಂತೆ. ಅದನ್ನು ರೂಪಿಸುವುದರ ಹಿಂದೆ ಮೆಟಾದ ಉದ್ದೇಶ ಏನೇ ಇರಲಿ, ಇದು ಭಾಷಾ ತಂತ್ರಜ್ಞಾನದ ಬೆಳವಣಿಗೆಗೆ ಸಹಕಾರಿ ಎನ್ನುವುದಂತೂ ನಿಜವೇ!
ನಮ್ಮ ಮುನ್ನೆಚ್ಚರಿಕೆಯೂ ಇರಲಿ!
ಸಾಮಾಜಿಕ ಮಾಧ್ಯಮ ನಿಜಕ್ಕೂ ಒಂದು ಮಾಯಾಲೋಕ. ನಿಜ ಜಗತ್ತಿನಲ್ಲಿ ನಮಗೆ ಕಾಣಲು ಸಿಗದವರು, ನಮ್ಮ ಕೈಗೆಟುಕದವರು ಎಲ್ಲರೂ ಅಲ್ಲಿ ನಮ್ಮಂತೆಯೇ – ನಮ್ಮ ಜೊತೆಗೇ ಇರುತ್ತಾರೆ. ಹೊಸ ಅವಕಾಶಗಳೂ ಅಷ್ಟೇ, ನಮ್ಮ ಕೈಯಳತೆಯಲ್ಲಿಯೇ ಸಿಗುತ್ತವೆ. ಅಲ್ಲಿರುವಷ್ಟೂ ಕಾಲ ಏನಾದರೊಂದು ಹೊಸದು ನಮ್ಮ ಕಣ್ಣಿಗೆ ಬೀಳುತ್ತಲೇ ಇರುತ್ತದೆ.
ಇಷ್ಟೆಲ್ಲ ಇದ್ದರೂ, ಅಲ್ಲಿರುವ ಅಗಾಧ ಪ್ರಮಾಣದ ಮಾಹಿತಿಯಲ್ಲಿ ನಮಗೆ ಬೇಕಾದದ್ದು – ಉಪಯುಕ್ತವಾದದ್ದು ಸುಲಭಕ್ಕೆ ಸಿಗುವುದಿಲ್ಲ; ಸಿಗುವ ಮಾಹಿತಿಯಲ್ಲಿ ನಿಜ ಯಾವುದು ಸುಳ್ಳು ಯಾವುದು ಎನ್ನುವುದು ಥಟ್ಟನೆ ತಿಳಿಯುವುದಿಲ್ಲ; ಇಲ್ಲಿ ಸ್ನೇಹಿತರಂತೆ ಕಾಣುವವರು ಸ್ನೇಹಿತರೋ ಅಲ್ಲವೋ ಎನ್ನುವುದು ಹೋಗಲಿ, ನಿಜಕ್ಕೂ ಅವರು ಯಾರು ಎನ್ನುವುದೂ ಗೊತ್ತಾಗುವುದಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ವ್ಯವಹರಿಸುವಾಗ ನಾವು ನಮ್ಮ ಎಚ್ಚರದಲ್ಲಿರಬೇಕು ಎನ್ನುವುದರ ಹಿನ್ನೆಲೆಯಲ್ಲಿರುವುದೂ ಇದೇ ಆತಂಕ. ಇಲ್ಲಿನ ವ್ಯವಹಾರ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಗಾಡಿ ಓಡಿಸಿದಷ್ಟೇ ಕಷ್ಟದ ಕೆಲಸವಾದ್ದರಿಂದ, ಚಿಕ್ಕ ಮಕ್ಕಳು ಆ ಸಾಹಸ ಮಾಡುವುದೇ ಬೇಡ ಎನ್ನುವ ನಿಬಂಧನೆಗಳನ್ನು ರೂಪಿಸಲಾಗಿದೆ. ಸೋಶಿಯಲ್ ಮೀಡಿಯಾ ತಾಣಗಳಲ್ಲಿ ಖಾತೆ ತೆರೆಯಲು ಕನಿಷ್ಠ 13 ವರ್ಷ ವಯಸ್ಸಾಗಿರಬೇಕು ಎನ್ನುವುದು ಇಂತಹ ನಿಬಂಧನೆಗಳಲ್ಲೊಂದು. ಹನ್ನೆರಡು ವರ್ಷ ತುಂಬುವ ವೇಳೆಗೆ ಮಕ್ಕಳ ಬೌದ್ಧಿಕ ಬೆಳವಣಿಗೆ ಒಂದು ಹಂತಕ್ಕೆ ಬಂದಿರುತ್ತದೆ ಎನ್ನುವುದು ಇದರ ಕಾರಣ.
ಹಾಗೆಂದಮಾತ್ರಕ್ಕೆ ಹದಿಮೂರು ವರ್ಷಕ್ಕೆ ಮೇಲ್ಪಟ್ಟವರೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ಜವಾಬ್ದಾರಿಯುತವಾಗಿ, ಸುರಕ್ಷಿತವಾಗಿ ಇರುತ್ತಾರೆ ಎನ್ನಬಹುದೇ? ಖಂಡಿತಾ ಇಲ್ಲ. ಇಲ್ಲಿನ ಅಪಾಯ ಸಾಧ್ಯತೆಗಳು ಕಿರಿಯರಿಂದ ಹಿರಿಯರವರೆಗೆ ಎಲ್ಲರನ್ನೂ ಬಾಧಿಸುತ್ತವೆ. ಹಾಗಾಗಿ ಮಕ್ಕಳು-ದೊಡ್ಡವರ ಭೇದವಿಲ್ಲದೆ ಎಲ್ಲರೂ ತಮ್ಮ ಎಚ್ಚರಿಕೆಯಲ್ಲೇ ಇರಬೇಕು.
ಬಳಕೆಯ ಬಗೆಗಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮದ ಅತಿಬಳಕೆಯ ಬಗೆಗೂ ನಮಗೆ ತಿಳಿದಿರಬೇಕಾಗುತ್ತದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾ ಹೋದಂತೆ ಅವುಗಳನ್ನು ಬಿಟ್ಟಿರುವುದು ಕಷ್ಟವೆನಿಸುತ್ತಾ ಹೋಗುತ್ತದೆ. ಸ್ವಲ್ಪಹೊತ್ತು ಅದರಿಂದ ದೂರವಿದ್ದರೆ ಏನೋ ಕಳೆದುಕೊಳ್ಳುತ್ತೇವೇನೋ ಎನ್ನುವ ಭಾವನೆ ಕಾಡುತ್ತದೆ (ಇದಕ್ಕೆ ಫಿಯರ್ ಆಫ್ ಮಿಸ್ಸಿಂಗ್ ಔಟ್ ಎಂಬ ಹೆಸರಿದೆ). ಈ ಅಂಜಿಕೆಯಿಂದ ನಾವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯ ಕಳೆಯುತ್ತಲೇ ಹೋಗುತ್ತೇವೆ, ಅದೊಂದು ಚಟವಾಗಿಬಿಡುವ ಅಪಾಯವನ್ನೂ ಎದುರಿಸುತ್ತೇವೆ.
ಇದನ್ನೂ ಓದಿರಿ: ರಾಜ್ಯಪಾಲ ಹುದ್ದೆಯ ರಾಜಕಾರಣ; ತಿಳಿಯಲೇಬೇಕಾದ ಐತಿಹಾಸಿಕ ಸಂಗತಿಗಳಿವು!
ಸಾಮಾಜಿಕ ಮಾಧ್ಯಮದ ಅತಿಬಳಕೆ ಒಂದು ಚಟವೋ ಅಲ್ಲವೋ ಎನ್ನುವುದರ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತದ ಅಭಿಪ್ರಾಯ ಇಲ್ಲ. ಆದರೆ, ಸಾಮಾಜಿಕ ಮಾಧ್ಯಮವನ್ನು ನಾವು ಹೆಚ್ಚುಹೆಚ್ಚಾಗಿ ಬಳಸುತ್ತಿರುವುದನ್ನು ತೋರಿಸುವ ಅಂಕಿಅಂಶಗಳು ಹೇರಳವಾಗಿವೆ. ಸಾಮಾಜಿಕ ಮಾಧ್ಯಮದಲ್ಲಿ ನಾವೆಷ್ಟು ಸಮಯ ಕಳೆಯುತ್ತಿದ್ದೇವೆಂದು ಗಮನಿಸಿಕೊಳ್ಳುವ, ಅಗತ್ಯಬಿದ್ದರೆ ಸ್ವಯಂನಿರ್ಬಂಧಗಳನ್ನೂ ವಿಧಿಸಿಕೊಳ್ಳುವ ಆಯ್ಕೆಯನ್ನೂ ಹಲವು ವೇದಿಕೆಗಳು ಒದಗಿಸುತ್ತಿವೆ.
ಅತಿಯಾದರೆ ಅಮೃತವೂ ವಿಷ ಎನ್ನುತ್ತಾರಲ್ಲ, ಇದು ಅಮೃತವೋ ವಿಷವೋ ಎಂದು ಪ್ರತ್ಯೇಕಿಸಿ ನೋಡಲೂ ಆಗದ ಮಟ್ಟಿಗೆ ಸಾಮಾಜಿಕ ಮಾಧ್ಯಮ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ ಎನ್ನುವುದು ಆಶ್ಚರ್ಯ – ಗಾಬರಿಗಳೆರಡನ್ನೂ ಒಟ್ಟಿಗೆ ಉಂಟುಮಾಡುವ ಸಂಗತಿ. ಈ ಪರಿಸ್ಥಿತಿಯನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ನಾವೇ ಕೈಗೊಳ್ಳುತ್ತೇವೆಯೋ, ಸಾಮಾಜಿಕ ಮಾಧ್ಯಮದ ಪುಟಗಳನ್ನು ಸ್ಕ್ರಾಲ್ ಮಾಡುತ್ತಲೇ ಕುಳಿತಿರುತ್ತೇವೆಯೋ ಎನ್ನುವುದು ಮಾತ್ರ ನಾವೇ ತೀರ್ಮಾನಿಸಬೇಕಾದ ವಿಷಯ.

ಟಿ.ಜಿ. ಶ್ರೀನಿಧಿ
ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿರುವ ಟಿ. ಜಿ. ಶ್ರೀನಿಧಿ ಕಳೆದ ಎರಡು ದಶಕಗಳಿಂದ ಕನ್ನಡದಲ್ಲಿ ವಿಜ್ಞಾನ ಸಂವಹನ ನಡೆಸುತ್ತಿದ್ದು, 3000ಕ್ಕೂ ಹೆಚ್ಚು ಲೇಖನ ಹಾಗೂ 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಹಲವು ದಿನಪತ್ರಿಕೆಗಳಿಗೆ ಲೇಖನ ಬರೆಯುತ್ತಲೆ, ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ಕನ್ನಡ ಜಾಲತಾಣ ejnana.com ಅನ್ನು ನಡೆಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಮಯೂರವರ್ಮ ಸಾಹಿತ್ಯ ಪ್ರಶಸ್ತಿ’, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ‘ಶ್ರೇಷ್ಠ ಲೇಖಕ’ ಪ್ರಶಸ್ತಿ ಮುಂತಾದ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.




