ಘಟಾನುಘಟಿ ರಾಜಕಾರಣಿಗಳ ಜೈಲಿಗಟ್ಟಿದ ಸಮರ ಸೇನಾನಿ ‘ಎಸ್.ಆರ್. ಹಿರೇಮಠ’ (ಭಾಗ-2)

Date:

ಘಟನಾನುಘಟಿ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿರುವ ಎಸ್‌.ಆರ್. ಹಿರೇಮಠರ ಹೋರಾಟದ ಬದುಕಿನ ಚಿತ್ರಣ ಎಂದಿಗೂ ಸ್ಫೂರ್ತಿದಾಯಕ. ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಬಡಕುಟುಂಬದಲ್ಲಿ ಹಟ್ಟಿ, ಬಾಲ್ಯದಲ್ಲೇ ಮೆರಿಟ್ ಸ್ಟುಡೆಂಟ್ ಆಗಿ ಗುರುತಿಸಿಕೊಂಡು, ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿ, ಬಳಿಕ ಉಪನ್ಯಾಸಕರಾಗಿಯೂ ಕೆಲಸ ಮಾಡಿದ ಹಿರೇಮಠರು, ಅಮೆರಿಕದಲ್ಲಿ ನ್ಯೂಸ್ ಮೇಕರ್ಸ್ ಆಗಿ ಖ್ಯಾತಿ ಗಳಿಸಿದ್ದನ್ನು ಲೇಖನದ ಮೊದಲ ಭಾಗದಲ್ಲಿ ವಿವರಿಸಿದ್ದೆವು. ಅಮೆರಿಕದ ಮಾವಿಸ್ ಅವರನ್ನು ಮದುವೆಯಾದ ಬಳಿಕ ಮತ್ತೆ ಮರಳಿ ಮಣ್ಣಿಗೆ ಬಂದ ಹಿರೇಮಠರ ಬದುಕು ರೋಚಕವಾದದ್ದೇ ಸರಿ..

(ಮುಂದುವರಿದ ಭಾಗ..)

ಮರಳಿ ಮಣ್ಣಿಗೆ, ಮೆಡ್ಲೇರಿಗೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜುಲೈ 1, 1979 ರಂದು ಹಿರೇಮಠರ ಸಂಸಾರ ಅಮೆರಿಕಾ ತೊರೆದು ತಾಯ್ನಾಡಿಗೆ ಕಾಲಿಟ್ಟಿತು. ಜೊತೆಯಲ್ಲಿ ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್ ಎಂಬ ಸಂಸ್ಥೆಯಿತ್ತು. ಇದಲ್ಲದೆ ಹಿರೇಮಠರ ಚಿಂತನೆಗೆ ಬೆಂಬಲವಾಗಿ ನಿಂತ ಅಮೆರಿಕಾದ ಸ್ನೇಹಿತರು ಕೊಟ್ಟ 33 ಸಾವಿರ ಡಾಲರ್ ನಷ್ಟು ಭಾರಿ ಮೊತ್ತದ ಫಂಡಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಏನಾದರೂ ಸಾಧನೆ ಮಾಡಿಯೇ ತೀರಬೇಕೆಂಬ ಛಲವಿತ್ತು.

ಮೊದಲಿಗೆ ಧಾರವಾಡಕ್ಕೆ ಬಂದ ಹಿರೇಮಠರು, ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರದ ಕೇಂದ್ರ ಸ್ಥಾನವನ್ನಾಗಿ ಆರಿಸಿಕೊಂಡರು. ಆ ಹಳ್ಳಿಯಲ್ಲಿಯೇ 90 ರೂಪಾಯಿಗೆ ಪುಟ್ಟ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸಿಸತೊಡಗಿದರು. ತಮ್ಮ ಮಕ್ಕಳನ್ನು ಅಲ್ಲಿನ ಸರ್ಕಾರಿ ಶಾಲೆಗೆ ಸೇರಿಸಿದರು. ಆನಂತರ `ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್ (ಅಂತಾರಾಷ್ಟ್ರೀಯ)’ ಎಂಬ ಸಂಸ್ಥೆ ಸ್ಥಾಪಿಸಿದರು. ಈ ಸೇವಾ ಸಂಸ್ಥೆಯ ಮುಖ್ಯ ಗುರಿ ಗ್ರಾಮೀಣಾಭಿವೃದ್ಧಿ, ಮಹಿಳಾ ಸಶಕ್ತಿಕರಣ. ಮೊದಲಿಗೆ ಸಂಸ್ಥೆಯ ಕಾರ್ಯಕ್ಷೇತ್ರಕ್ಕಾಗಿ ಮೆಡ್ಲೇರಿ ಸುತ್ತಮುತ್ತಲ 30 ಹಿಂದುಳಿದ ಹಳ್ಳಿಗಳನ್ನು ಆರಿಸಿಕೊಂಡು ಕೆಲಸ ಪ್ರಾರಂಭಿಸಿದರು. ಆ ನಂತರ ಸಮಾಜದ ಎಲ್ಲ ಕ್ಷೇತ್ರಗಳ ಜನರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿದರು, ಅವರ ಸಲಹೆ, ಸಹಕಾರ ಪಡೆದರು.

“ನಾವು ಹಳ್ಳಿಗೆ ಹೋಗದೆ, ಸಿಟಿಯಲ್ಲಿದ್ದುಕೊಂಡು ಗ್ರಾಮೀಣ ಜನರನ್ನು ಉದ್ಧಾರ ಮಾಡುತ್ತೇವೆಂದರೆ, ಅದು ಆಗದ ಕೆಲಸ. ಅಭಿವೃದ್ಧಿ ಕಾರ್ಯ ಮಾಡಬೇಕೆನ್ನುವವರು ಗ್ರಾಮೀಣ ಜನರ ಜೊತೆಗೇ ಇದ್ದು ಪರಿಸ್ಥಿತಿಯ ನೈಜತೆಯನ್ನು ಅರಿಯಬೇಕು. ಆ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು. ಆ ಕಾರಣಕ್ಕಾಗಿಯೇ ನಾನು, ನನ್ನ ಹೆಂಡತಿ ಮಕ್ಕಳು ಆ ಹಳ್ಳಿಗೇ ಹೋಗಿ ನೆಲೆಸಿದೆವು. ಅಮೆರಿಕಾ ದೇಶದ ಮಹಿಳೆ ತನ್ನ ಮಕ್ಕಳೊಂದಿಗೆ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸಿಸುತ್ತ, ತಮ್ಮೆಲ್ಲರ ಜೊತೆಗೆ ಬೆರೆತು ಬದುಕುತ್ತಿರುವುದನ್ನು ನೋಡಿ ಗ್ರಾಮಸ್ಥರಲ್ಲಿ, ಅದರಲ್ಲೂ ಹಳ್ಳಿಯ ಮಹಿಳೆಯರಲ್ಲಿ ನಮ್ಮ ಬಗ್ಗೆ ವಿಶ್ವಾಸ ಬೆಳೆಯಿತು, ಅವರು ನಮ್ಮೊಂದಿಗೆ ಬೆರೆಯುವುದಕ್ಕೆ ಸುಲಭವಾವಾಯಿತು. ಅವರಲ್ಲಿ ಹೊಸ ಬದುಕಿಗೆ, ಬದಲಾವಣೆಗೆ ಕಾರಣವಾಯಿತು. ಹಳ್ಳಿಗರು ಸ್ವಾವಲಂಬಿಗಳಾಗಿದ್ದು ನಮಗೂ ಸಮಾಧಾನ ತಂದಿತು’’ ಎನ್ನುತ್ತಾರೆ ಹಿರೇಮಠರು.

ಸ್ನೇಹಿತರು ಕೊಟ್ಟ ಫಂಡಿನಿಂದ ಮೆಡ್ಲೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಜನರಿಗೆ ಉಪಯುಕ್ತವಾಗುವಂತಹ ಅನೇಕ ಕಾರ್ಯಗಳು- ಗ್ರಾಮ ನೈಮರ್ಲೀಕರಣ, ಹೈನುಗಾರಿಕೆ, ಆರೋಗ್ಯ ಯೋಜನೆ, ಗ್ರಾಮೀಣ ಕೈಗಾರಿಕೆ, ವಯಸ್ಕರ ಶಿಕ್ಷಣ, ಕುರಿ ಸಾಕಾಣಿಕೆ, ಪರಿಸರ ಯೋಜನೆ, ಒಣ ಬೇಸಾಯ ಮತ್ತು ತೋಟಗಾರಿಕೆಗಳನ್ನು ಹಮ್ಮಿಕೊಂಡರು. ಈ ಎಲ್ಲ ಕಾರ್ಯಕ್ರಮಗಳನ್ನು ಮಹಿಳೆಯರೇ ಮಾಡುವಂಥದ್ದು ವಿಶೇಷವಾಗಿತ್ತು.  

ಇದನ್ನೂ ಓದಿರಿ: ಘಟಾನುಘಟಿ ರಾಜಕಾರಣಿಗಳ ಜೈಲಿಗಟ್ಟಿದ ಸಮರ ಸೇನಾನಿ ‘ಎಸ್.ಆರ್. ಹಿರೇಮಠ’ (ಭಾಗ-1)

ಹಿರೇಮಠರ ಕುಟುಂಬ ಮತ್ತು ಸೇವಾ ಸಂಸ್ಥೆಯ ಪರಿಶ್ರಮದ ಫಲವಾಗಿ ಪ್ರಾಜೆಕ್ಟ್‌ಗೆ ಮೀಸಲಿರಿಸಿದ್ದ ಮೂರು ವರ್ಷಗಳಲ್ಲಿ ಐಡಿಎಸ್‌ಗೆ ದುಡಿಯಲು ಹಲವು ಸ್ವಯಂಸೇವಕರು ಮುಂದೆ ಬಂದರು. ಸಂಸ್ಥೆಯ ಕೆಲಸಗಳು ಜನರಲ್ಲಿ ವಿಶ್ವಾಸ ಹುಟ್ಟಿಸತೊಡಗಿದವು. ನಿಧಾನವಾಗಿ ಹಳ್ಳಿಯ ಜನ ಸ್ವಾವಲಂಬಿಗಳಾಗತೊಡಗಿದರು. 1982ರಲ್ಲಿ ನೆದರ್ ಲ್ಯಾಂಡ್ ದೇಶದ ಹಿವೋಸ್ (Hivos) ಸಂಸ್ಥೆ ಅಂತಾರಾಷ್ಟ್ರೀಯ ಪ್ರಶಸ್ತಿಯಾದ `ಜಾಪ್ ವ್ಯಾನ್ ಪ್ರಾಗ್’ (Jaap Van Praag) ಬಹುಮಾನ ನೀಡಿ, ಸಂಸ್ಥೆಯ ಕೆಲಸವನ್ನು ಹೊಗಳಿತು. ಪ್ರಜಾವಾಣಿ ಸಂಸ್ಥೆಯ `ಸುಧಾ’ ಕನ್ನಡ ವಾರಪತ್ರಿಕೆ `ಶಿಕಾಗೋದಿಂದ ಮೆಡ್ಲೇರಿಗೆ’ ಎಂಬ ಕವರ್ ಸ್ಟೋರಿ ಮಾಡಿ, ಹಿರೇಮಠರ ಸಮಾಜ ಕಲ್ಯಾಣ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿತು.

ಜನಪರ ಹೋರಾಟಕ್ಕೆ ದುಮುಕಿದ್ದು

ಮೂರು ವರ್ಷಗಳ ಫಂಡಿಂಗ್ ಮುಗಿದು, ಹಳ್ಳಿಗಳ ಜನ ಸ್ವಶಕ್ತಿಯಿಂದ ಬದುಕು ಸಾಗಿಸುತ್ತಿದ್ದಂತೆ, ಹಿರೇಮಠರು ನೈರ್ಮಲ್ಯ ಕುರಿತ ಜನಪರ ಹೋರಾಟವನ್ನು ಕೈಗೆತ್ತಿಕೊಂಡರು. 1983ರಲ್ಲಿ ತುಂಗಭದ್ರಾ ನದಿಗೆ `ಹರಿಹರ ಪಾಲಿಫೈಬರ್ ಕಾರ್ಖಾನೆ’ ಮಾಲಿನ್ಯಪೂರಿತ ನೀರನ್ನು ಬಿಡುತ್ತಿತ್ತು. ಅದರಿಂದ ಸಾವಿರಾರು ಸಂಖ್ಯೆಯ ಮೀನುಗಳು ಸತ್ತು ಬೀಳುತ್ತಿದ್ದವು. ಹರಿಹರ ಮತ್ತು ರಾಣೆಬೆನ್ನೂರಿನ 16 ಹಳ್ಳಿಗಳು ಕಲುಷಿತ ನೀರಿನಿಂದ ತೊಂದರೆಗೊಳಗಾಗಿದ್ದವು. ಕಾರ್ಖಾನೆಯ ವಿರುದ್ಧ ಹೋರಾಟಕ್ಕಿಳಿದಿದ್ದ `ತುಂಗಭದ್ರಾ ನದಿಮಾಲಿನ್ಯ ಸಮಿತಿ’ಯವರ ಜೊತೆ ಸೇರಿದ ಹಿರೇಮಠರು, ಹೋರಾಟಕ್ಕೊಂದು ಹೊಸ ತಿರುವು ಕೊಟ್ಟರು. ಅಷ್ಟೇ ಅಲ್ಲದೆ, ದೇಶದ ಶ್ರೀಮಂತರ ಪೈಕಿ ಒಬ್ಬರಾದ ಬಿರ್ಲಾರನ್ನು ಎದುರು ಹಾಕಿಕೊಂಡು, ಅವರ ಒಡೆತನದ ಹರಿಹರ ಪಾಲಿಫೈಬರ್ ಕಂಪನಿಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದರು. ಇದು ನಿಜಕ್ಕೂ ಕರ್ನಾಟಕದಲ್ಲಾದ ಬಹಳ ದೊಡ್ಡ ಜನಪರ ಹೋರಾಟಗಳಲ್ಲೊಂದು.

ಆ ನಂತರ, 1984ರಲ್ಲಿ, ಹಿರೇಮಠರು ಸಮಾನಮನಸ್ಕ ಗೆಳೆಯರೊಂದಿಗೆ ಸೇರಿ ಧಾರವಾಡದಲ್ಲಿ `ಸಾಮಾಜಿಕ ಪರಿವರ್ತನಾ ಸಮುದಾಯ’ವನ್ನು ಸ್ಥಾಪಿಸಿದರು. ಈ ಸಂಸ್ಥೆಗೆ ಭಾರತದಾದ್ಯಂತ ಅನೇಕರು ಸ್ವಯಂಸೇವಕರಾಗಿ ಕೆಲಸ ಮಾಡಲು ಮುಂದೆ ಬಂದರು. ಈ ಸಂಸ್ಥೆಯ ಮೂಲಕ ಹಿರೇಮಠರು ಕರ್ನಾಟಕದಲ್ಲಿ ಪರಿಸರ ಮಾಲಿನ್ಯ, ಸಾಮೂಹಿಕ ಭೂ ಸಂರಕ್ಷಣೆ, ಉದ್ಯೋಗಖಾತ್ರಿ ಯೋಜನೆ, ಪುನರ್ವಸತಿ ಇತ್ಯಾದಿ ಜನಪರ ಸಮಸ್ಯೆಗಳ ಬಗೆಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಿದರು. ಈ ಜನಪರ ಹೋರಾಟಗಳಿಗಾಗಿ `ಸಮಾಜ ಪರಿವರ್ತನಾ ಸಮುದಾಯ’ ಸಂಸ್ಥೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಯಿತು. ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆ 1989ರಲ್ಲಿ `ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರ’ ನೀಡಿ ಗೌರವಿಸಿತು.

ಕುಸ್ನೂರು ಸತ್ಯಾಗ್ರಹ

ಹರಿಹರ ಪಾಲಿಫೈಬರ್ ಕಾರ್ಖಾನೆಯ ವಿರುದ್ಧ ಹೋರಾಡುವಾಗ ಹಿರೇಮಠರಿಗೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಾದ ಜ್ಞಾನಪೀಠ ಪುರಸ್ಕೃತರಾದ ಶಿವರಾಮ ಕಾರಂತರು, ಚಿಪ್ಕೋ ಚಳವಳಿಯ ನೇತಾರ ಚಂಡಿಪ್ರಸಾದ್ ಭಟ್, ಮಾಜಿ ಸಿಎಂ ಕಡಿದಾಳು ಮಂಜಪ್ಪ, ನ್ಯಾಯಮೂರ್ತಿಗಳಾದ ಡಿ.ಎಂ. ಚಂದ್ರಶೇಖರ್, ಜಸ್ಟೀಸ್ ವಿ.ಎಂ. ತಾರ್ಕುಂಡೆ, ಪತ್ರಕರ್ತ ಕುಲದೀಪ್ ನಯ್ಯರ್ ಅವರುಗಳ ಪರಿಚಯವಾಯಿತು. ಇವರೊಡಗೂಡಿ ಪಶ್ಚಿಮ ಘಟ್ಟ ಉಳಿಸಿ ಚಳವಳಿಯನ್ನು ಕೈಗೆತ್ತಿಕೊಂಡರು.

hiremata
ಸಾಹಿತಿ ಶಿವರಾಮ ಕಾರಂತರ ಜೊತೆಯಲ್ಲಿ ಎಸ್.ಆರ್.ಹಿರೇಮಠ

ಸಾಮೂಹಿಕ ಒಡೆತನದ ಅರಣ್ಯ ಭೂಯಿಯನ್ನು ಸರ್ಕಾರ ಉದ್ಯಮಗಳಿಗೆ ಕೊಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದರಲ್ಲದೆ, 1992ರಲ್ಲಿ `ನ್ಯಾಷನಲ್ ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರ್ಸಸ್’ ಎಂಬ ಸಮಿತಿಯನ್ನು ಸಂಘಟಿಸಿದರು. ಈ ಸಮಿತಿ ಪ್ರಕೃತಿ ಸಂಪನ್ಮೂಲಗಳ ಕಾಯಿದೆ, ಅರಣ್ಯನೀತಿ ರೂಪಿಸುವಲ್ಲಿ ಮತ್ತು ಜನರ ಪುನರ್ವಸತಿ ಕಲ್ಪಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಈ ಸಮಿತಿಯಲ್ಲಿ ಹಿರೇಮಠರು ಮುಂಚೂಣಿಯ ನಾಯಕರಾಗಿದ್ದರು.

ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?

ಧಾರವಾಡ ಜಿಲ್ಲೆಯ ಕುಸ್ನೂರು ಗ್ರಾಮದ ಹತ್ತಿರದಲ್ಲಿರುವ 30 ಸಾವಿರ ಎಕರೆ ಸಾಮೂಹಿಕ ಭೂಮಿಯನ್ನು ಕರ್ನಾಟಕ ಸರ್ಕಾರ `ಕರ್ನಾಟಕ ಪಲ್ಪ್ ವುಡ್’ ಕಂಪನಿಯೊಂದಿಗೆ ಕಡಿಮೆ ಬೆಲೆಗೆ ಒಪ್ಪಂದ ಮಾಡಿಕೊಂಡು, ನೀಲಗಿರಿ ಗಿಡಗಳನ್ನು ಬೆಳೆಸಲು ಅನುಮತಿ ನೀಡಿತ್ತು. ಇದನ್ನು ವಿರೋಧಿಸಿ ಎಸ್ಪಿಎಸ್ ಸಂಸ್ಥೆ ಸ್ಥಳೀಯ ಜನರನ್ನು ಸಂಘಟಿಸಿ, `ಕಿತ್ತಿಕೋ, ಹಚ್ಚಿಕೋ’ (pluck-and-plant satyagraha) ಚಳವಳಿ ಹಮ್ಮಿಕೊಂಡಿತು. ಉದ್ಯಮಪತಿಗಳು ನೆಟ್ಟ ನೀಲಗಿರಿ ಗಿಡಗಳನ್ನು 100 ಜನ ಯುವ ಹೋರಾಟಗಾರರು ಕಿತ್ತು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಅಹಿಂಸಾತ್ಮಕ ಹೋರಾಟಕ್ಕೆ ನಾಂದಿ ಹಾಡಿದರು. ದಿನದಿಂದ ದಿನಕ್ಕೆ ಚಳವಳಿ ತೀವ್ರಗೊಳ್ಳತೊಡಗಿತು. ಜೊತೆಗೆ ಶ್ರೀಮಂತ ಉದ್ಯಮಿ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಿಸಿ, 1991ರಲ್ಲಿ ಗೆದ್ದಿದ್ದೂ ಆಯಿತು.

ಈ ಜನಪರ ಹೋರಾಟದ ಗೆಲುವನ್ನು ನ್ಯಾಷನಲ್ ನೆಟ್ ವರ್ಕ್ ನವರು `ಕುಸ್ನೂರು ಸತ್ಯಾಗ್ರಹ’ ಎಂಬ ಹೆಸರಿನಲ್ಲಿ ಅರ್ಧಗಂಟೆಯ ಕಾರ್ಯಕ್ರಮವಾಗಿ ಪ್ರಚಾರಪಡಿಸಿದರು. ಆ ನಂತರ ಇಂಗ್ಲೆಂಡಿನ ಚಾನಲ್ 4, ಡಿಸ್ಕವರಿ ಚಾನಲ್‌ಗಳು 90 ನಿಮಿಷಗಳ ವಿಶೇಷ ಕಾರ್ಯಕ್ರಮವನ್ನಾಗಿಸಿ ಪ್ರಪಂಚದಾದ್ಯಂತ ಪ್ರಸಾರ ಮಾಡಿದವು. ಇದು ಚಳವಳಿನಿರತ ಹೋರಾಟಗಾರರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಯಿತು. ಇಂಥವೇ ಇನ್ನಷ್ಟು ಹೋರಾಟಗಳನ್ನು ಮಾಡಲು ಪ್ರೇರೇಪಿಸಿತು.  

ಜೆವಿಎ ಮತ್ತು ಜಿಜಿವಿ

ಜನವಿಕಾಸ ಆಂದೋಲನ ಹಾಗೂ ಗ್ರಾಮ ಗಣರಾಜ್ಯ ವೇದಿಕೆ- ಇವೆರಡು ಹಿರೇಮಠರು ಭಾಗವಹಿಸಿದ ಜನಪರ ಹೋರಾಟಗಳು. ಜನವಿಕಾಸ ಆಂದೋಲನವು `ಆಜಾದಿ ಸೇ ಸ್ವರಾಜ್’ ಎನ್ನುವ ಪರಿಕಲ್ಪನೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಜನರ ಒಡೆತನವನ್ನು ಪ್ರತಿಪಾದಿಸುವ ವೇದಿಕೆಯಾಯಿತು. ಜೊತೆಗೆ ಗ್ರಾಮ ಸಭಾ, ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲಗೊಳಿಸುವ ಜನಾಂದೋಲನವಾಗಿತ್ತು.

ಗ್ರಾಮ ಗಣರಾಜ್ಯ ವೇದಿಕೆ- ಈ ವೇದಿಕೆ ಹುಟ್ಟಿದ್ದೆ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಿಂದ. ಗ್ರಾಮ ಸಭೆಗೆ ಪರಮಾಧಿಕಾರ ಕೊಡಬೇಕೆಂಬ ನಿಟ್ಟಿನಲ್ಲಿ. ಈ ವೇದಿಕೆಯ ಮುಖ್ಯ ಕೆಲಸವೆಂದರೆ ಕರ್ನಾಟಕದಲ್ಲಿ `ಪಂಚಾಯತಿ ರಾಜ್ ಆಕ್ಟ್-1993’ಕ್ಕೆ ಅನೇಕ ಬದಲಾವಣೆಗಳನ್ನು ತಂದು `ಪಂಚಾಯತ್ ರಾಜ್ ಅಮೆಂಡ್ಮೆಂಟ್ ಆಕ್ಟ್-2003’ ಅನ್ನು ಜಾರಿಗೆ ತರುವಂತೆ ಮಾಡಿದುದಾಗಿದೆ. ಅಲ್ಲದೆ ಐತಿಹಾಸಿಕವಾದ ಕುಸ್ನೂರು ಸತ್ಯಾಗ್ರಹದಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದುದಾಗಿದೆ.  

WhatsApp Image 2025 05 10 at 18.12.59 1
ಕೆಪಿಎಲ್‌ ವಿರುದ್ಧ ಸೈಕಲ್ ಜಾಥಾ.. ಕುಸನೂರಿನಿಂದ ಬೆಂಗಳೂರಿಗೆ (ಕೃಪೆ: ಮಹಾಸಂಗ್ರಾಮಿ ಕೃತಿ)

ಮಾಲಿಕ್ ಮಖಬೂಜ ಸ್ಕ್ಯಾಂಡಲ್

ಮಧ್ಯಪ್ರದೇಶ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿ ಹುಟ್ಟಿದ ಆದಿವಾಸಿ ಹೋರಾಟವಿದು. ಬಸ್ತರ್ ಜಿಲ್ಲೆ ಈಗ ಛತ್ತಿಸ್‌ಗಡ್ ರಾಜ್ಯಕ್ಕೆ ಸೇರಿದೆ. ಬಸ್ತರ್ ಜಿಲ್ಲೆಯಲ್ಲಿದ್ದವರು ಹಿಂದುಳಿದ ಆದಿವಾಸಿಗಳು. ಇವರಲ್ಲಿಯೇ ಕೆಲವರು ಸಮಾಜದ ದುಷ್ಟಶಕ್ತಿಗಳೊಂದಿಗೆ ಕೈ ಜೋಡಿಸಿದ್ದರು. ಇವರ ನೆರವಿನಿಂದ ಆದಿವಾಸಿಗಳಿಗೆ ಸೇರಿದ್ದ ಅರಣ್ಯಭೂಮಿಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಟಿಂಬರ್ ಮಾಫಿಯಾ ಒಂದಾಗಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದು ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಆದಿವಾಸಿಗಳನ್ನು ಶೋಷಿಸಿ, ಅರಣ್ಯ ನಾಶದಲ್ಲಿ ಮುಳುಗಿದ್ದರು.

ಈ ಬಗ್ಗೆ ಬಸ್ತರ್ ಜಿಲ್ಲೆಯ ಕಲೆಕ್ಟರ್ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

ಕಲೆಕ್ಟರ್ ಕೊಟ್ಟ ದೂರಿಗೆ, ಮಾಡಿಕೊಂಡ ಮನವಿಗೆ ಸರ್ಕಾರದ ಮಟ್ಟದಲ್ಲಿ ಮನ್ನಣೆ ಸಿಗಲಿಲ್ಲ. ಆಗ ಅಲ್ಲಿಯ ಕೆಲವರು ಸಮಾಜ ಪರಿವರ್ತನಾ ಸಮುದಾಯ ಈ ಹೋರಾಟವನ್ನು ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಇದೇ ಹಿರೇಮಠರು ಛತ್ತೀಸ್‌ಗಡ್‌ಗೆ ಹೋಗಿ ಅಲ್ಲಿಯ ಮೂಲನಿವಾಸಿಗಳೊಂದಿಗೆ ಒಡನಾಡಿ, ಅವರಲ್ಲಿ ಅರಿವು ಮೂಡಿಸುವ, ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸದಲ್ಲಿ ನಿರತರಾದರು. ಮುಂದುವರೆದು ಸಾಮೂಹಿಕ ಅರಣ್ಯನಾಶದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದರು. ಆ ದಾವೆಯ ಪರಿಣಾಮವಾಗಿ ಸುಪ್ರೀಂ ಕೋರ್ಟ್ ಸಿಬಿಐ ತನಿಖೆ ಆದೇಶಿಸಿತು. ಕೊನೆಗೆ ಗೆಲುವು ಆದಿವಾಸಿಗಳ ಪರವಾಯಿತು. ಅದರ ಪರಿಣಾಮವಾಗಿ ಮರ ಕಡಿಯುವುದಕ್ಕೆ ಮೂರು ವರ್ಷಗಳ ನಿಷೇಧ ಹೇರಲಾಯಿತು. ಮರಗಳನ್ನು ಕಡಿಯುವುದು ನಿಂತು ಅರಣ್ಯ ಸಂಪತ್ತು ಜನರ ಸ್ವತ್ತಾಯಿತು.

ಇದನ್ನೂ ಓದಿರಿ: ಪರಿಷ್ಕೃತ ನೀತಿಗಳು ಕೈಗಾರಿಕೆಗೆ ಮಾರಕವಾಗಿದ್ದು ಹೇಗೆ?

“ಈ ಅನುಭವ ಇದೆಯಲ್ಲ, ಇದು ನಮಗೆ ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ವಿರುದ್ಧದ ಹೋರಾಟಕ್ಕೆ ತುಂಬಾ ಸಹಕಾರಿಯಾಯಿತು. ಜನರನ್ನು ಸಂಘಟಿಸುವುದು, ಚಳವಳಿ ರೂಪಿಸುವುದು, ಬಲಾಢ್ಯರ ವಿರುದ್ಧ ಹೋರಾಡುವುದಕ್ಕೆ ಇದು ಮೊದಲ ಮೆಟ್ಟಿಲಾಯಿತು. ಇದ್ದ, ಬೇಕಾದ ಕಾನೂನು ಕ್ರಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಈ ಹಿಂದಿನ ಹೋರಾಟಗಳೆಲ್ಲ ಒಂದೊಂದು ರೀತಿಯ ಅನುಭವ ನೀಡಿ, ನೆರವಿಗೆ ಬಂದವು’’ ಎಂದು ನೆನಪಿಸಿಕೊಳ್ಳುವ ಹಿರೇಮಠರು ಆ ನಂತರ ಕೈಗೆತ್ತಿಕೊಂಡಿದ್ದು ಕರ್ನಾಟಕದ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿದ ಗಣಿಮಾಫಿಯಾ ವಿರುದ್ಧದ ಹೋರಾಟ.

ಗಣಿಗಾರಿಕೆಯ ವಿರುದ್ಧ ಹೋರಾಟ

ಬಿಜೆಪಿ ಸರ್ಕಾರ ಬಂದ ನಂತರ, ಗಣಿರಾಜಕಾರಣದಿಂದಾಗಿ ಪ್ರಕೃತಿ ಸಂಪತ್ತಿನ ಲೂಟಿ ಎಲ್ಲೆ ಮೀರಿ ಹೋಗಿತ್ತು. ಅಕ್ರಮ ಗಣಿಗಾರಿಕೆಯ ಬಗ್ಗೆ ರಾಜಕೀಯ ಪಕ್ಷಗಳಿಂದ ಆರೋಪ ಪ್ರತ್ಯಾರೋಪ, ಮಾಧ್ಯಮಗಳಲ್ಲಿ ಕಂಡೂ ಕಾಣದಂತಹ ವರದಿಗಳಷ್ಟೇ ಕಾಣಸಿಗುತ್ತಿದ್ದವು. ಒಂದು ಗಟ್ಟಿ ಧ್ವನಿ ಯಾರಿಂದಲೂ ಕೇಳಿಬರುತ್ತಿರಲಿಲ್ಲ. ಗಣಿ ಧೂಳು ಬಿಜೆಪಿಗಿಂತಲೂ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಮೆತ್ತಿಕೊಂಡಿತ್ತು. ಈ ಪಕ್ಷಗಳಿಗೆ ಗಣಿ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇರಲಿಲ್ಲ. ಗಣಿಕುಳ ಜನಾರ್ದನ ರೆಡ್ಡಿಯ ಲೂಟಿಯನ್ನು ಖಂಡಿಸಿ ಬರೆಯುವ ಪತ್ರಕರ್ತರಿಗಿಂತ, ಬರೆಯದ ಪತ್ರಕರ್ತರೇ ಹೆಚ್ಚಾಗಿದ್ದರು. ಸಾಹಿತಿಗಳು, ಕಲಾವಿದರು, ಬುದ್ಧಿಜೀವಿಗಳು, ಪ್ರಗತಿಪರರು, ಹೋರಾಟಗಾರರು ಟೋಕನ್ ಪ್ರೊಟೆಸ್ಟ್ ಮಾಡಿ ಸುಮ್ಮನಾಗಿದ್ದರು. ಕೆಲವರು ಅದನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಗ್ಗಿಸಿಕೊಂಡು, ಲಾಭದ ಮಾರ್ಗ ಕಂಡುಕೊಂಡಿದ್ದರು.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಜನಾರ್ದನ ರೆಡ್ಡಿಗೆ ಕಾನೂನು ಹೋರಾಟದ ಮೂಲಕ ಪಾಠ ಕಲಿಸಲು ಹೊರಟವರು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್. 2008ರಿಂದಲೇ ಅಕ್ರಮ ಗಣಿಗಾರಿಕೆಯ ಬಗೆಗೆ ಕ್ಷೇತ್ರಕಾರ್ಯ, ಅಧ್ಯಯನದಲ್ಲಿ ತೊಡಗಿ ದಾಖಲೆಗಳನ್ನು ಸಂಗ್ರಹಿಸತೊಡಗಿದರು. ನವೆಂಬರ್ 17, 2009ರಲ್ಲಿ ಖ್ಯಾತ ವಕೀಯ ಪ್ರಶಾಂತ್ ಭೂಷಣ್ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಅದರೊಂದಿಗೆ 1274 ಪುಟಗಳಷ್ಟು ದಾಖಲೆ, ಪುರಾವೆಗಳನ್ನು ಕೋರ್ಟಿನ ಮುಂದಿಟ್ಟರು. ಎಲ್ಲವನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ‘ಕೇಂದ್ರ ಉನ್ನತಾಧಿಕಾರ ಸಮಿತಿ’ಯನ್ನು ರಚಿಸಿ ವಸ್ತುಸ್ಥಿತಿಯ ಪರಾಮರ್ಶೆ ಮತ್ತು ಸಾಕ್ಷ್ಯಗಳ ಸಂಗ್ರಹಣೆಗೆ ಆದೇಶ ನೀಡಿತು.

ಆದರೆ, ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳೇ ಮೈನಿಂಗ್ ಮಾಫಿಯಾ ಜೊತೆ ಕೈಜೋಡಿಸಿದ್ದರಿಂದ ಹಿರೇಮಠರ ಪ್ರಯತ್ನಕ್ಕೆ ಹಿನ್ನಡೆಯಾಯಿತು. ಛಲ ಬಿಡದ ಹಿರೇಮಠ್, ರೆಡ್ಡಿಗೆ ನೀಡಿರುವ ಮೈನಿಂಗ್ ಪರವಾನಗಿಯನ್ನು ರದ್ದು ಮಾಡಬೇಕೆಂದು 499 ಪುಟಗಳ ಕಾರಣಸಹಿತ ಮನವಿಯನ್ನು ಮತ್ತೆ ಸುಪ್ರೀಂ ಕೋರ್ಟಿನ ಮುಂದಿಟ್ಟರು. ಕರ್ನಾಟಕ-ಆಂಧ್ರ ಗಡಿ ಕುರುಹುನಾಶ, ಸುಗ್ಗುಲಮ್ಮ ದೇವಾಲಯವನ್ನೇ ಇಲ್ಲದಂತೆ ಮಾಡಿದ್ದು, ಸರ್ಕಾರಿ ಯಂತ್ರದ ದುರುಪಯೋಗ, ಅಧಿಕಾರ ದುರ್ಬಳಕೆ… ಇವೆಲ್ಲವನ್ನು ಪುರಾವೆ ಸಮೇತ ಕೋರ್ಟಿಗೆ ಸಲ್ಲಿಸಿದರು. ಕೊನೆಗೆ ಕೇಂದ್ರ ಉನ್ನತಾಧಿಕಾರ ಸಮಿತಿ ಹಿರೇಮಠರ ಸಾಕ್ಷ್ಯಗಳಿಗೆ ತಲೆದೂಗಿ ಪರವಾನಗಿ ರದ್ದಿಗೆ ಶಿಫಾರಸು ಮಾಡಿತು. ಜನಾರ್ದನ ರೆಡ್ಡಿ ಮತ್ತವರ ಸಹೋದರರ ಮೈನಿಂಗ್ ಲೈಸೆನ್ಸ್ ರದ್ದಾಯಿತು. ರೆಡ್ಡಿ ಮನೆ ಮೇಲೆ ಸಿಬಿಐ ದಾಳಿಯಾಗಿ, ರೆಡ್ಡಿಯ ಬಂಧನವಾಯಿತು. ಚಂಚಲಗುಡ ಜೈಲು ಸೇರುವಂತಾಯಿತು. ಅದರ ಮುಂದುವರೆದ ಭಾಗವಾಗಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕುರ್ಚಿಯಿಂದ ಕೆಳಗಿಳಿದು ಜೈಲಿಗೆ ಹೋಗುವಂತಾಯಿತು.

ಬಲಾಢ್ಯರನ್ನು ಬೆನ್ನಟ್ಟಿದಾಗ, ಅನ್ಯಾಯ ಅಕ್ರಮಗಳನ್ನು ಕೆದಕಿ ಬಹಿರಂಗಗೊಳಿಸಿದಾಗ, ಅಧಿಕಾರಸ್ಥರೇ ಜೈಲು ಸೇರುವಂತಹ ಪರಿಸ್ಥಿತಿ ಎದುರಾದಾಗ ನಿಮಗೆ ಪ್ರಾಣ ಬೆದರಿಕೆಗಳೇನು ಬರಲಿಲ್ಲವೇ ಎಂದರೆ, ಹಿರೇಮಠರು, “ಅದು ಸ್ವಾಭಾವಿಕ. ಇಂಥವನ್ನೆಲ್ಲ ನಾವು ಫೇಸ್ ಮಾಡ್ಕೊಂಡೇ ಬಂದಿರೋದು. ಪಾರದರ್ಶಕವಾಗಿ, ಅಹಿಂಸಾತ್ಮಕವಾಗಿ ಹೋರಾಟ ಮಾಡ್ತಿದ್ದಾಗ ಜನ ನಮ್ಮ ಕಡೆ ಇರ್ತಾರೆ. ನಮ್ಮ ಹೋರಾಟದಲ್ಲಿ ದ್ವೇಷವಾಗಲಿ, ಸಿಟ್ಟಾಗಲಿ, ವೈಯಕ್ತಿಕ ಈರ್ಷ್ಯೆಗಳಾಗಲಿ ಇಲ್ಲದಿರುವುದರಿಂದ ಅವರಿಗೂ ಹೆದರಿಕೆ ಇರುತ್ತದೆ. ಗಣಿ ರೆಡ್ಡಿಗಳ ಕೇಸಿನಲ್ಲಿ ಅವರು ನಮ್ಮನ್ನು ಅಂಡರ್ ಎಸ್ಟಿಮೇಟ್ ಮಾಡಿದ್ದರು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳೆಲ್ಲ ನಮ್ಮ ಕೈಯಲ್ಲಿರುವಾಗ, ಇವರೆಲ್ಲ ಕೆಲವು ದಿನ ಕೂಗಾಡಿ ಹೋಗ್ತಾರೆ ಎಂದುಕೊಂಡಿದ್ದರು. ಅದು ನಮಗೆ ಅನುಕೂಲವಾಯಿತು. ಹಾಗೆ ನೋಡಿದರೆ, ಯಡಿಯೂರಪ್ಪನವರ ಮೇಲೆ ಸಿಬಿಐ ದಾಳಿಯಾದಾಗ, ಅವರ ಬೆಂಬಲಿಗರಿಂದ ಬೆದರಿಕೆ ಕರೆಗಳಿದ್ದವು. ಆದರೆ ಅವು ಕೂಡ ದಿನಗಳೆದಂತೆ ನಿಂತುಹೋದವು. ಜೊತೆಗೆ ನಮ್ಮ ಜನಪರ ಹೋರಾಟವನ್ನು ನೋಡಿರುವ ನ್ಯಾಯಾಧೀಶರು, ವಕೀಲರು, ಪತ್ರಕರ್ತರು ನಮ್ಮ ಪರವಿರುವುದು ನಮಗೆ ಹೋರಾಟಗಳಿಗೆ ಬಲ ಬಂದಿದೆ’’ ಎನ್ನುವುದನ್ನು ಮರೆಯುವುದಿಲ್ಲ.  

ಸ್ಫೂರ್ತಿ ಮತ್ತು ಪ್ರೇರಣೆ

ಅಮೆರಿಕಾದಲ್ಲಿ ಎಂಎಸ್, ಎಂಬಿಎಗಳಂತಹ ಉನ್ನತ ವ್ಯಾಸಂಗ ಮಾಡಿ ಪ್ರತಿಷ್ಠಿತ ಹುದ್ದೆಗಳನ್ನು ನಿರ್ವಹಿಸಿದವರು ಮತ್ತೆ ಭಾರತಕ್ಕೆ ಬರುತ್ತಾರೆ, ಬಂದು ಗ್ರಾಮೀಣ ಬಡಜನರ ಅಭಿವೃದ್ಧಿಗಾಗಿ, ಸಾಮಾಜಿಕ ನ್ಯಾಯಪರ ಹೋರಾಟಗಳಿಗಾಗಿ ಈ ಕಾಲದಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಡುತ್ತಾರೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ಹಿರೇಮಠರು ಅದನ್ನು ಮಾಡಿ ತೋರಿಸಿದ್ದಾರೆ. ತೋರುತ್ತಲೂ ಇದ್ದಾರೆ. ಸರಳವಾಗಿ ಬದುಕುವ, ಜನಶಕ್ತಿಯಲ್ಲಿ ನಂಬಿಕೆ ಇಟ್ಟಿರುವ, ನ್ಯಾಯ ವ್ಯವಸ್ಥೆಯನ್ನು ಅಸ್ತ್ರದಂತೆ ಬಳಸಿಕೊಂಡಿರುವ, ಭ್ರಷ್ಟರ ವಿರುದ್ಧ ಸಮರ ಸಾರಿರುವ ಈ ಹಿರೇಮಠರು ಮೆದುಮಾತಿನ ಸಜ್ಜನರು. ಇವರ ಇಂತಹ ನಿಸ್ವಾರ್ಥ ಸಮಾಜಸೇವೆಗೆ ಸ್ಫೂರ್ತಿಯಾದವರು, ಸಮಾಜ ಕಲ್ಯಾಣ ಕಾರ್ಯಗಳಿಗೆ ಪ್ರೇರಣೆಯಾದವರು ಯಾರು? ಎಂದರೆ, ಅವರು ಹಲವು ವ್ಯಕ್ತಿಗಳನ್ನು, ಪುಸ್ತಕಗಳನ್ನು, ಘಟನೆಗಳನ್ನು, ಭಾಷಣಗಳನ್ನು ನೆನಪು ಮಾಡಿಕೊಳ್ಳುತ್ತಾರೆ.

“ಮೊದಲಿಗೆ ನನ್ನ ತಾಯಿ. ನಮ್ತಂದೆ ಸತ್ತಾಗ ನಮ್ಮ ಕುಟುಂಬವನ್ನು ನಿಭಾಯಿಸಿದ ಆಕೆಯ ಧೈರ್ಯ ನನ್ನನ್ನು ಪ್ರಭಾವಿಸಿತು. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲಳು ಎಂಬುದನ್ನು ನನ್ನ ತಾಯಿ ತೋರಿಸಿಕೊಟ್ಟಳು. ಆಮೇಲೆ ನನ್ನ ಹಳ್ಳಿಯ ಜನ, ನನ್ನ ವಿದ್ಯಾಭ್ಯಾಸಕ್ಕೆ ನೆರವಾದ ರೀತಿ. ಆ ನಂತರ ಬಾಲ್ಯದಲ್ಲಿಯೇ ಶಿವರಾಮ ಕಾರಂತರು, `ನಾವು ಹುಟ್ಟಿದ್ದು ಬೆಳೆದದ್ದು, ಪಡೆದದ್ದು ಸಮಾಜದಿಂದ, ಹಾಗಾಗಿ ಈ ಸಮಾಜದ ಬಗ್ಗೆ ಕಾಳಜಿ ವಹಿಸಬೇಕು, ವಹಿಸದಿದ್ದರೆ ಅದರ ಆರೋಗ್ಯ ಕೆಡುತ್ತದೆ, ಆಗ ದೇಶ ಕೆಡುತ್ತದೆ. ಹಾಗಾಗಿ ಸ್ವಸ್ಥ ಸಮಾಜಕ್ಕಾಗಿ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು’ ಎಂಬ ಮಾತು ನನ್ನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿತು. ಯಾಕೆಂದರೆ ನಾನು ಬೆಳೆದು ಬಂದಿದ್ದೇ ಈ ಸಮಾಜದಿಂದ. ಹಾಗಾಗಿ ಈ ಮಾತು ನನ್ನನ್ನು ಕುರಿತೇ ಹೇಳಿದಂತಿತ್ತು.”

ಇದನ್ನೂ ಓದಿರಿ: ರಾಜ್ಯಪಾಲ ಹುದ್ದೆಯ ರಾಜಕಾರಣ; ತಿಳಿಯಲೇಬೇಕಾದ ಐತಿಹಾಸಿಕ ಸಂಗತಿಗಳಿವು!

“ಆಮೇಲೆ ಜಯಪ್ರಕಾಶ್ ನಾರಾಯಣ ಮತ್ತು ಎಚ್.ವಿ. ಕಾಮತ್‌ರ ಜನಪರ ಚಿಂತನೆಗಳು, ಭಾರತದ ಬಡವರಿಗಾಗಿ ಕೆಲಸ ಮಾಡುತ್ತಿದ್ದ ನನ್ನ ಐಐಟಿ ಗೆಳೆಯರು, ಷೂ ಮೇಕರ್ ಅವರ ಸ್ಮಾಲ್ ಈಸ್ ಬ್ಯೂಟಿಫುಲ್ ಪುಸ್ತಕ, ನ್ಯೂಟನ್‌ನ  “If I have seen further than other men, it is because I have stood upon the shoulders of giants” ಫಾರ್ಮುಲಾ, ಗಾಂಧೀಜಿಯವರ `ಫ್ರೀಡಂ ಅಟ್ ಮಿಡ್ ನೈಟ್’ ಪುಸ್ತಕ, ಸರ್ವಜ್ಞನ ವಚನಗಳು, ಜಾಮ್ಖೇಡ್‌ನ ಡಾ. ರಜನೀಕಾಂತ್ ದಂಪತಿಗಳು ಹಳ್ಳಿ ಹೆಂಗಸರ ಆರೋಗ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಬಗೆ, ಕೇರಳದಲ್ಲಿ ಕಂಡುಬಂದ ಮಾದರಿ ಕೃಷಿ…. ಇವೆಲ್ಲವೂ ನನಗೆ ಸ್ಫೂರ್ತಿ ನೀಡಿವೆ.”

“ಇವೆಲ್ಲಕ್ಕಿಂತಲೂ ಮುಖ್ಯವಾಗಿ ನನ್ನನ್ನು ಆಳವಾಗಿ ಕಲಕಿದ್ದು, ಪ್ರಭಾವಿಸಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರು ನವಂಬರ್ 26, 1949 ರಂದು ಮಾಡಿದ ಕೊನೆಯ ಭಾಷಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಗ್ಗೆ ಅವರಿಗಿದ್ದ ಕಾಳಜಿ, ಕಳಕಳಿ ಮತ್ತು ಪ್ರೀತಿ ನನ್ನನ್ನು ಮತ್ತೆ ಗ್ರಾಮಗಳತ್ತ ಮುಖ ಮಾಡಲು ಪ್ರೇರೇಪಿಸಿತು…”

“ಜನಪರ ಹೋರಾಟಗಳಲ್ಲಿ ತತ್ವ-ಸಿದ್ಧಾಂತಗಳಿಗಿಂತಲೂ ನಂಬಿಕೆ, ಪ್ರಾಮಾಣಿಕತೆ ಬಹಳ ಮುಖ್ಯ. ಅದಿದ್ದರೆ ಜನ ತಾನೇ ತಾನಾಗಿ ನಮ್ಮ ಬೆನ್ನ ಹಿಂದೆ ಇರುತ್ತಾರೆ. ನಮ್ಮ ಹೋರಾಟಗಳನ್ನು ಬೆಂಬಲಿಸುತ್ತಾರೆ. ಇಷ್ಟಿದ್ದರೆ, ಯಾವ ಬಲಾಢ್ಯ ಶಕ್ತಿಗಳಿಗೂ ಹೆದರಬೇಕಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದು ಹಾಗೂ ಕೆಟ್ಟದು- ಏನು ಬೇಕಾದರೂ ಆಗಬಹುದು. ಸಮಾಜದಲ್ಲಿ ಮೌಲ್ಯ, ನೈತಿಕತೆ ಇನ್ನೂ ಇದೆ. ಒಳ್ಳೆಯವರು, ಮಾನವಂತರು, ಪ್ರಾಮಾಣಿಕರು ಈಗಲೂ ಇದ್ದಾರೆ. ಅವರಿಂದಲೇ ನಮ್ಮ ಹೋರಾಟಗಳಿಗೆ ಜಯ ದೊರಕುತ್ತಿರುವುದು. ನಾನು-ನಮ್ಮ ಸಂಸ್ಥೆ ಇಲ್ಲಿ ನೆಪಮಾತ್ರವಷ್ಟೆ. ಸಮಾಜದ ಸಲುವಾಗಿ ಮಾಡುವ ಕೆಲಸಗಳಿಂದ ಸಂತೃಪ್ತಿ, ಸಮಾಧಾನ ಸಿಕ್ಕಿದೆ. ನ್ಯಾಯ ನೀತಿ ಧರ್ಮಗಳಿಗೆ ಬೆಲೆ ಬಂದಿದೆ. ಇದಕ್ಕಿಂತ ಇನ್ನೇನೂ ಬೇಕಿಲ್ಲ’’ ಎನ್ನುವ ಎಸ್.ಆರ್. ಹಿರೇಮಠರನ್ನು ಮುಂದಿನ ಪೀಳಿಗೆ ಮಾದರಿಯಾಗಿಟ್ಟುಕೊಂಡರೆ, ಆರೋಗ್ಯವಂತ ಸಮಾಜ ಮತ್ತು ಅಭಿವೃದ್ಧಿಶೀಲ ರಾಷ್ಟ್ರದ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ, ಅಲ್ಲವೆ?

(ಮುಗಿಯಿತು..)

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...