ಬೆಂಗಳೂರಿನ ಮೇಲೆ ‘ಮೆಟ್ರೊ’ ಭಾರ; ತಿಳಿಯಲೇಬೇಕಾದ ಅಸಲಿ ಸಂಗತಿಗಳಿವು

Date:

ದರ ಏರಿಕೆಯ ಮೂಲಕ ಬೆಂಗಳೂರಿನ ಜನತೆಗೆ ಬಿಸಿತುಪ್ಪವಾಗಿದೆ ‘ನಮ್ಮ ಮೆಟ್ರೊ’. ಒಮ್ಮೆಲೆ ಶೇ.80ರಿಂದ 100ರಷ್ಟು ಏರಿಕೆ ಕಂಡ ದರದಿಂದಾಗಿ ಪ್ರಯಾಣಿಕರು ಆಘಾತಗೊಂಡರು. ಒಂದು ಕಡೆ ಬಸ್‌ ಟಿಕೆಟ್‌ ಬಿಸಿ, ಮತ್ತೊಂದು ಕಡೆ ಮೆಟ್ರೊ ಬರೆ! ಅಧಿಕಾರಿಗಳು, ರಾಜಕಾರಣಿಗಳು ನಿತ್ಯವೂ ಮೆಟ್ರೊದಲ್ಲಿ ಓಡಾಡಿದ್ದರೆ ಜನರ ಕಷ್ಟ ಅರ್ಥವಾಗುತ್ತಿತ್ತೇನೋ. ಆದರೆ ಅವರಿಗೆ ಸಾಮಾನ್ಯರ ಬವಣೆ ತಿಳಿಯುವುದಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿದವರು ಒಬ್ಬರಿಗೊಬ್ಬರ ಮೇಲೆ ಗೂಬೆ ಕೂರಿಸುತ್ತಾ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

‘ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ’ (ಬಿಎಂಆರ್‌ಸಿಎಲ್‌) ಪ್ರಕಾರ ಶೇ.50ರಷ್ಟು ದರ ಹೆಚ್ಚಾಗಿದೆ. ಆದರೆ ಕೆಲವು ನಿಲ್ದಾಣಗಳಲ್ಲಿ ಶೇ. 50ರಷ್ಟಲ್ಲ, ಶೇ. 70ರಿಂದ ಶೇ.80, ಕೆಲವೆಡೆ ಶೇ.100ರಷ್ಟು ದರ ಹೆಚ್ಚಳ ಕಂಡಿದೆ.

ದರ ಹೆಚ್ಚಳ ಸಂಬಂಧ ಕಾಂಗ್ರೆಸ್‌ನವರು ಬಿಜೆಪಿಯವರ ಮೇಲೆ, ಬಿಜೆಪಿಯವರು ಕಾಂಗ್ರೆಸ್‌ನವರ ಮೇಲೆ ಆರೋಪ- ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಹಾಗಾದರೆ ಈ ನಿರ್ಧಾರಕ್ಕೆ ಕಾರಣ ಯಾರು? ಯಾಕೆ ಈ ಗೊಂದಲ? ಅಸಲಿ ಸಂಗತಿಗಳನ್ನು ಚರ್ಚಿಸಬೇಕಿದೆ. ದರ ಏಕೆ ಹೆಚ್ಚಾಗಿದೆ? ಅದನ್ನು ತಗ್ಗಿಸಬಹುದಾ?- ಇತ್ಯಾದಿ ಪ್ರಶ್ನೆಗಳನ್ನು ನಾವು ಗಂಭೀರವಾಗಿ ಅವಲೋಕಿಸಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿಎಂಆರ್‌ಸಿಎಲ್‌- ಸರ್ಕಾರದ ಇಲಾಖೆಯಲ್ಲ. ಅದೊಂದು ಪ್ರತ್ಯೇಕವಾದ ಸರ್ಕಾರಿ ಕಂಪನಿ. ಇದಕ್ಕೆ ಬೋರ್ಡ್ ಆಫ್ ಡೈರೆಕ್ಟರ್ಸ್ ಇದ್ದಾರೆ. ಇದರಲ್ಲಿ ಒಕ್ಕೂಟ ಸರ್ಕಾರದಿಂದ ಆಯ್ಕೆಯಾದ ಐವರು, ರಾಜ್ಯ ಸರ್ಕಾರದಿಂದ ಆಯ್ಕೆಯಾದ ಐವರು ಇರುತ್ತಾರೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯು ಅದರ ಅಧ್ಯಕ್ಷರಾಗಿರುತ್ತಾರೆ. ಮ್ಯಾನೇಜಿಂಗ್ ಡೈರೆಕ್ಟರ್‌ ಆಗಿರುವವರು ರಾಜ್ಯ ಸರ್ಕಾರದ ನಾಮನಿರ್ದೇಶಿತರು. ಹಾಗಾದರೆ ದರ ಹೆಚ್ಚಿಸಿರುವುದು ಬಿಜೆಪಿಯಾ? ಅಥವಾ ಕಾಂಗ್ರೆಸ್ಸಾ?- ಇಬ್ಬರು ಸೇರಿಯೇ ದರ ಹೆಚ್ಚಿಸಿದ್ದಾರೆ ಎಂಬುದಷ್ಟೇ ಸತ್ಯ.

metro 1 1
ಮೆಟ್ರೊ ದರ ಏರಿಕೆ ಖಂಡಿಸಿ ‘ಜಾಗೃತ ಕರ್ನಾಟಕ’ ಸಂಘಟನೆಯ ಸದಸ್ಯರಾದ ರಾಜಶೇಖರ ಅಕ್ಕಿ ಅವರು ಪ್ರಯಾಣದ ಸಂದರ್ಭದಲ್ಲಿ ಮೆಟ್ರೊದೊಳಗೆ ಪ್ರತಿಭಟಿಸಿರುವುದು ಹೀಗೆ..

ದರ ಹೆಚ್ಚಿಸಿದ್ದು ಹೇಗೆ?

‘ದಿ ಮೆಟ್ರೊ ರೈಲ್ವೇಸ್ ಆಪರೇಷನ್ ಅಂಡ್ ಮೇನ್‌ಟೈನ್‌ನೆಸ್ ಆಕ್ಟ್ 2002’- ಮೆಟ್ರೊ ರೈಲುಗಳಿಗಾಗಿಯೇ ರೂಪಿಸಲಾದ ಕಾನೂನು. ಈ ಕಾಯ್ದೆಯ ಸೆಕ್ಷನ್ 33, 34 ಪ್ರಕಾರ, ಮೆಟ್ರೊಗೆ ದರ ನಿಗದಿ ಮಾಡಲು ಒಂದು ‘ದರ ನಿಗದಿ ಸಮಿತಿ’ ಇರಬೇಕಾಗುತ್ತದೆ, ಸಮಿತಿ ನೀಡಿದ ದರಕ್ಕೆ ಬೋರ್ಡ್ ಬದ್ಧವಾಗಿರುತ್ತದೆ.

ದರ ನಿಗದಿ ಸಮಿತಿಯಲ್ಲಿ ಕಾನೂನಿನ ಪ್ರಕಾರ, ‘ಒಬ್ಬರು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ, ಒಕ್ಕೂಟ ಮತ್ತು ರಾಜ್ಯ ಸರ್ಕಾರದಿಂದ ಒಬ್ಬೊಬ್ಬರು ಪ್ರತಿನಿಧಿಗಳು ಇರಬೇಕು’. ಕಾಯ್ದೆಯ ಅನ್ವಯ ಒಕ್ಕೂಟ ಸರ್ಕಾರದ ಆದೇಶದಂತೆ ನಮ್ಮ ಮೆಟ್ರೊದ ‘ದರ ನಿಗದಿ ಸಮಿತಿ’ ರಚನೆಯಾಯಿತು. ಇದು ವಿದೇಶಗಳಿಗೂ ಹೋಗಿ ಅಧ್ಯಯನ ಮಾಡಿಕೊಂಡು ಬಂದಿತು. ಸಾರ್ವಜನಿಕರ ಒಪ್ಪಿಗೆಗಾಗಿ ಜಾಹೀರಾತನ್ನೂ ನೀಡಿ ಜನಾಭಿಪ್ರಾಯವನ್ನು ಸಮಿತಿ ಕೇಳಿತ್ತು. ನಂತರ ವರದಿಯನ್ನು ಬೋರ್ಡ್ ಮುಂದೆ ಇಡಲಾಯಿತು. ಇವರು ಹೇಳಿದ ದರವನ್ನು ಬೋರ್ಡ್‌ ಒಪ್ಪಿಕೊಂಡಿದೆ. ದರ ಏರಿಕೆಗೆ ಬಿಜೆಪಿ, ಕಾಂಗ್ರೆಸ್- ಇಬ್ಬರೂ ಕಾರಣವಾಗಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ರಾಜಕೀಯ ಪ್ರಾತಿನಿಧ್ಯ ಮತ್ತು ಮಹಿಳೆ; ಮೂಡಬೇಕಿದೆ ಸ್ವತಂತ್ರ ವ್ಯಕ್ತಿತ್ವ

ಮುಖ್ಯವಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳೆರಡರ ಪ್ರತಿನಿಧಿಗಳಾಗಿ ಅಧಿಕಾರಿಗಳಿದ್ದರೇ ಹೊರತು, ಜನಪ್ರತಿನಿಧಿಗಳಲ್ಲ. ದರ ಏರಿಕೆಯಲ್ಲಿ ಜನಾಭಿಪ್ರಾಯದ ಪಾತ್ರವೇನೆಂದು ತಿಳಿದಿಲ್ಲ. ಈ ಕ್ರಮದಲ್ಲಿ ಪಾರದರ್ಶಕತೆಯಂತೂ ಕಾಣುತ್ತಿಲ್ಲ.

ದರ ನಿಗದಿ ಸಮಿತಿಯು ವಿದೇಶಗಳಿಗೆ ಹೋಗಿ ಅಧ್ಯಯನ ಮಾಡಿತ್ತಂತೆ. ಆದರೆ ಅವರ ಅಧ್ಯಯನ ವರದಿ ಎಲ್ಲಿಯೂ ಸಾರ್ವಜನಿಕವಾಗಿ ಪ್ರಕಟವಾಗಿಲ್ಲ. ಬಿಎಂಆರ್‌ಸಿಎಲ್‌ನ ಬೋರ್ಡ್ ಸಭೆಯ ಮಾಹಿತಿ ಲಭ್ಯವಿಲ್ಲ. ಬೋರ್ಡ್ ಮೀಟಿಂಗ್‌ನಲ್ಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳಿರುತ್ತಾರೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ, ಉಪಮುಖ್ಯಮಂತ್ರಿಗಳ ಕಚೇರಿಯ ಕಾರ್ಯದರ್ಶಿ ಭಾಗವಹಿಸುತ್ತಾರೆ. ಇವರೆಲ್ಲರೂ ಏನು ಹೇಳಿದ್ದಾರೆ? ಯಾರು ಒಪ್ಪಿದ್ದಾರೆ ಮತ್ತು ಯಾರು ವಿರೋಧಿಸಿದ್ದಾರೆ? – ಇವೆಲ್ಲವೂ ಜನರಿಗೆ ಗೊತ್ತಾಗಬೇಕಲ್ಲವೇ? ಆ ಪಕ್ಷದವರು ಈ ಪಕ್ಷದವರ ಮೇಲೆ, ಈ ಪಕ್ಷದವರು ಆ ಪಕ್ಷದವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಅಷ್ಟೇ. ಆದರೆ ಸರ್ಕಾರಗಳ ಪ್ರತಿನಿಧಿಗಳಾಗಿದ್ದವರು ಯಾವ ಅಭಿಪ್ರಾಯ ಹೇಳಿದರು ಎಂಬುದು ಜನರಿಗೆ ತಿಳಿಯುವುದು ಮುಖ್ಯ. ಸಮಿತಿಯು ಜನಾಭಿಪ್ರಾಯ ಕೇಳಿತ್ತಲ್ಲವೇ? ಜನರು ಏನು ಹೇಳಿದ್ದರು ಎಂಬುದು ನಮಗೆ ತಿಳಿಯಬೇಕಲ್ಲವೇ? ಶೇ.80ರಷ್ಟು, 90ರಷ್ಟು ದರ ಹೆಚ್ಚಿಸಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ? ಹಾಗಾದರೆ ಸಾರ್ವಜನಿಕರು ಮೆಟ್ರೊಗೆ ತಿಳಿಸಿರುವ ಅಭಿಪ್ರಾಯವನ್ನು ಪ್ರಕಟಿಸುತ್ತಿಲ್ಲವೇಕೆ?

“ನಮ್ಮಿಂದ ಮೆಟ್ರೊ ರೈಲು ವಿಸ್ತರಣೆಯಾಯಿತು, ಹೊಸ ಟ್ರೈನ್ ಚಾಲನೆಯಾಗುತ್ತಿದೆ” ಎಂದು ಬಿಜೆಪಿಯ ಸಂಸದರು ಟ್ವೀಟ್ ಮಾಡುತ್ತಾರೆ. “ಒಕ್ಕೂಟ ಸರ್ಕಾರ ದರ ಹೆಚ್ಚು ಮಾಡಲು ಹೊರಟಿತ್ತು. ನಾವು ಸರ್ಕಾರಕ್ಕೆ ಹೇಳಿ ನಿಲ್ಲಿಸಿದ್ದೇವೆ” ಎಂದು ಸಂಸದ ಪಿ.ಸಿ.ಮೋಹನ್ ಪ್ರತಿಕ್ರಿಯಿಸಿದ್ದರು. ದರ ಹೆಚ್ಚಳವನ್ನು ನಿಲ್ಲಿಸುವ ಶಕ್ತಿ ತಮಗಿದೆ ಎಂದು ಅವರು ಒಪ್ಪಿಕೊಂಡಿದ್ದರು. ಆ ನಂತರದಲ್ಲಿ, ದರ ಹೆಚ್ಚಳವನ್ನು ಖಂಡಿಸಿ ಬಿಜೆಪಿಯವರೇ ಮೆಟ್ರೊ ಸ್ಟೇಷನ್ ಹೊರಗೆ ಪ್ರತಿಭಟನೆಯನ್ನೂ ಮಾಡಿದರು. ದರ ನಿಗದಿ ಸಮಿತಿಯನ್ನು ರಚಿಸಿದ್ದೇ ಒಕ್ಕೂಟ ಸರ್ಕಾರ. ಅದರಲ್ಲಿ ಒಕ್ಕೂಟ ಸರ್ಕಾರದ ಪ್ರತಿನಿಧಿಗಳೂ ಇದ್ದಾರೆ. ಬಿಜೆಪಿಯವರು ಪ್ರತಿಭಟನೆ ಮಾಡುವುದರಲ್ಲಿ ಅರ್ಥವೇ ಇಲ್ಲ.

ದರ ಹೆಚ್ಚಿಸಿದ್ದು ಏಕೆ?

‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿ ಫೆ. 11ರಂದು ವರದಿಯಾದ ಪ್ರಕಾರ, “105%ರಷ್ಟು ದರ ಹೆಚ್ಚಿಸುವಂತೆ ಬಿಎಂಆರ್‌ಸಿಎಲ್‌ ಹೇಳಿತ್ತು” ಎಂದು ತಿಳಿಯುತ್ತದೆ. ನಿರ್ವಹಣೆ, ಎನರ್ಜಿ ಖರೀದಿ, ಸಿಬ್ಬಂದಿ ನಿರ್ವಹಣೆ ಇವೆಲ್ಲವೂ ಹೆಚ್ಚಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳುತ್ತದೆ. (ಇಲ್ಲಿ ಕೆಲಸ ಮಾಡುವ ಬಹುತೇಕರು ಕಾಯಂ ಸಿಬ್ಬಂದಿ ಅಲ್ಲ. ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರೇ ಹೆಚ್ಚು. ಅವರ ಸ್ಥಿತಿ ಬಗ್ಗೆ ಯೋಚಿಸಿದರೆ ಮತ್ತೊಂದು ಗಂಭೀರ ಸಮಸ್ಯೆ ಅನಾವರಣವಾಗುತ್ತದೆ.)

ಅಸಲಿ ಸಂಗತಿ ಬೇರೆಯದ್ದೇ ಆಗಿದೆ. ಮುಂಬರುವ ಐದು ವರ್ಷಗಳಲ್ಲಿ ಬಿಎಂಆರ್‌ಸಿಎಲ್‌ 10,000 ಕೋಟಿ ರೂ.ಗಳಷ್ಟು ಸಾಲವನ್ನು (ಅಸಲು ಮತ್ತು ಬಡ್ಡಿ ಸೇರಿ) ಕಟ್ಟಬೇಕಾಗಿದೆ. ಜನರು ಖರೀದಿಸುವ ಟಿಕೆಟ್ ಮತ್ತು ಕಾರ್ಡ್‌ನಿಂದ ಅಷ್ಟು ಆದಾಯ ಸದ್ಯಕ್ಕೆ ಸಿಗುತ್ತಿಲ್ಲ. ಹಾಗಾಗಿ ದರ ಹೆಚ್ಚಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಬಿಎಂಆರ್‌ಸಿಎಲ್ ಯಾಕೆ ಇಷ್ಟೊಂದು ಸಾಲ ಮಾಡಿದೆ? ಕಾರಣ ಇಷ್ಟೇ- ಮೆಟ್ರೊ ಎಂಬುದು ದುಬಾರಿ ಯೋಜನೆ. ಹಲವಾರು ತಜ್ಞರು ವರ್ಷಗಳಿಂದಲೂ ಈ ಬಗ್ಗೆ ಎಚ್ಚರಿಸುತ್ತಲೇ ಇದ್ದಾರೆ.

ಇದನ್ನೂ ಓದಿರಿ: ಅಂದು ಎನ್‌ಇಪಿ, ಇಂದು ಯುಜಿಸಿ; ರಾಜ್ಯಗಳ ಮೇಲೆ ಕೇಂದ್ರದ ಗದಾಪ್ರಹಾರ!

ಭಾರತದಂತೆಯೇ ಜನಸಂಖ್ಯೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಾಗಿರುವ ಲ್ಯಾಟೀನ್ ಅಮೆರಿಕದ ದೇಶಗಳು ಮೆಟ್ರೊ ಬದಲು ಬಸ್‌ಗಳನ್ನೇ ಬಳಸುತ್ತಿವೆ. ‘ನಮ್ಮ ಮೆಟ್ರೊ’ದ ಮೊದಲ ಹಂತಕ್ಕೆ 6,000 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಅದು ಮುಗಿಯುವ ವೇಳೆಗೆ 14,000 ಕೋಟಿ ರೂ. ಖರ್ಚಾಗಿತ್ತು. ಮೆಟ್ರೊ ಎರಡನೇ ಹಂತದ ಕಾಮಗಾರಿಗೆ 26,000 ಕೋಟಿ ರೂ. ಅಂದಾಜಿಸಲಾಗಿತ್ತು. ಅದೀಗ 40,000 ಕೋಟಿ ರೂ.ಗೆ ಏರಿಕೆಯಾಗಿದೆ. ಎರಡು ಹಂತದ ಕಾಮಗಾರಿಗೆ ಒಟ್ಟು 54,000 ಕೋಟಿ ರೂ. ವಿನಿಯೋಗವಾಗಿದೆ. ಅದರಲ್ಲಿ ಮೂರನೇ ಒಂದು ಭಾಗ ಅಥವಾ ಅದಕ್ಕಿಂತ ಕಡಿಮೆ ಹಣ ಒಕ್ಕೂಟ ಸರ್ಕಾರದಿಂದ ಬರುತ್ತದೆ. ಶೇ. 40ರಷ್ಟು ಹಣ ರಾಜ್ಯ ಸರ್ಕಾರದ್ದಾಗಿರುತ್ತದೆ. ಮಿಕ್ಕಿದ್ದೆಲ್ಲ ಸಾಲದ ಹಣ! ಅಷ್ಟು ಸಾಲವನ್ನು ಈಗ ಬಡ್ಡಿ ಸಮೇತ ತೀರಿಸಲೇಬೇಕಾಗಿದೆ.

namma metro project

ಇದರ ನಡುವೆ ಬಿಎಂಆರ್‌ಸಿಎಲ್ ಮತ್ತೊಂದು ಮೆಟ್ರೊ ರೈಲು ಮಾರ್ಗವನ್ನು ವಿಸ್ತರಿಸುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ, ಅದು ವಿಮಾನ ನಿಲ್ದಾಣ ತಲುಪುತ್ತಿದೆ. ಸಿಲ್ಕ್ ಬೋರ್ಡ್‌ನಿಂದ ಏರ್‌ಪೋರ್ಟ್‌ವರೆಗೆ ನಿರ್ಮಾಣ ಮಾಡಲಾಗುತ್ತಿರುವ ಮೆಟ್ರೊ ಲೈನ್‌ಗೆ 15,000 ಕೋಟಿ ರೂ. ಬಜೆಟ್ ಅಂದಾಜಿಸಲಾಗಿದೆ. ಅದು ಮುಗಿಸುವಷ್ಟರಲ್ಲಿ ಮತ್ತಷ್ಟು ಹೆಚ್ಚಾಗಿರುತ್ತದೆ. ಮೂರನೇ ಹಂತ ಮತ್ತು ಮೂರನೇ ‘ಎ’ ಹಂತ ಕಾಮಗಾರಿಯೂ ಬರುತ್ತಿದೆ. ಜೆ.ಪಿ.ನಗರ ಮಾರ್ಗದಲ್ಲಿ ಫೇಸ್ -3, ಹೆಬ್ಬಾಳದಿಂದ- ಸರ್ಜಾಪುರದವರೆಗೆ ಫೇಸ್ 3ಎ ಆಗಲಿದೆ. ಮೂರನೇ ಹಂತಕ್ಕೆ 14,000 ಕೋಟಿ ರೂ., ಮೂರನೇ ಹಂತ ‘ಎ’ಗೆ 28,405 ಕೋಟಿ ಅಂದಾಜು ಮಾಡಲಾಗಿದೆ. ಅಂದರೆ ಉಳಿದ ಹಂತದ ಕಾಮಗಾರಿಗೆ 50ರಿಂದ 60 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ಬಿಎಂಆರ್‌ಸಿಎಲ್ ಮೇಲೆ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಹೀಗಿದ್ದಾಗ ಮತ್ತೆ ದರ ಹೆಚ್ಚಳ ಮಾಡುತ್ತಾರಾ?

ಉತ್ತರ ಸಿಗುವುದೇ?

ಮೆಟ್ರೊ ಬಜೆಟ್ ವರ್ಷದಿಂದ ವರ್ಷಕ್ಕೆ ಹೆಚ್ಚಿದ್ದು ಹೇಗೆಂದು ಎಲ್ಲ ಪಕ್ಷಗಳು ಉತ್ತರ ಕೊಡಬೇಕಿದೆ. ಪ್ರತಿ ಹಂತದ ಕಾಮಗಾರಿಯಲ್ಲೂ ಅಂದಾಜಿಸಿದ್ದಕ್ಕಿಂತ ಹೆಚ್ಚು ಖರ್ಚಾಗಿದ್ದು ಹೇಗೆ? ಯಾರಾದರೂ ನುಂಗಿ ಹಾಕಿದರೆ, ಅದಕ್ಷತೆ ಕಾರಣವಾ? ಭ್ರಷ್ಟಾಚಾರ ನಡೆದಿದೆಯೇ? ಇದಕ್ಕೆ ರಾಜಕಾರಣಿಗಳು ಉತ್ತರ ಕೊಡಬೇಕು. ಆದರೆ ಅವರು ಮಾತನಾಡುವುದಿಲ್ಲ.

ಉಳಿದ ಹಂತದ ಮೆಟ್ರೊ ವಿಸ್ತರಣೆಗೆ 55,000 ಕೋಟಿ ರೂ. ವಿನಿಯೋಗಿಸಲು ಹೊರಟಿದ್ದಾರೆ. ಆದರೆ ನಿಜಕ್ಕೂ ಇದು ಸಮಂಜಸವೇ? ಸುಸ್ಥಿರವೇ?- ಈ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ನಮ್ಮ ಮೆಟ್ರೊಗೆ ಬೇರೆ ಮೂಲಗಳಿಂದ ಆದಾಯ ಬರುತ್ತಿದೆಯೇ? ಹಾಂಕಾಂಗ್ ದೇಶವನ್ನು ಉದಾಹರಣೆಯಾಗಿ ನೋಡಿ. ಅಲ್ಲಿನ ಮೆಟ್ರೊಗಳು ಮಾಲ್‌ಗಳ ಒಳಗೆ ಜನಸಂಪರ್ಕ ಕಲ್ಪಿಸುತ್ತವೆ. ಮಾಲ್ ಮಾಲೀಕರು ತಮ್ಮ ಲಾಭದ ಒಂದು ಭಾಗವನ್ನು ಮೆಟ್ರೊಕ್ಕೆ ಕೊಡುತ್ತಾರೆ. ಬೆಂಗಳೂರಿನಲ್ಲಿ ಮಂತ್ರಿ ಮಾಲ್‌ ಒಳಗೆಯೇ ಮೆಟ್ರೊ ಸಾಗುತ್ತದೆ. ಅಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ಮೆಟ್ರೊಗೆ ಸೇರಿದ್ದ ಜಾಗವನ್ನು ಮಂತ್ರಿ ಮಾಲ್‌ನವರಿಗೆ ನೀಡಲಾಯಿತು. ಮಾಲ್‌ನವರು ಸ್ಟೇಷನ್ ಮಾತ್ರ ಕಟ್ಟಿಕೊಟ್ಟರು. ಉಳಿದಂತೆ ಆ ಜಾಗವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮೆಟ್ರೊಗೆ ಲಾಭವಾಗಿದ್ದೇನು? ಈ ಸಂಬಂಧ ಹಲವು ಸಲ ಸಾರ್ವಜನಿಕರು ಪ್ರತಿಭಟನೆಯನ್ನು ಮಾಡಿದ್ದರು. ಮಂತ್ರಿ ಮಾಲ್ ಮತ್ತು ಮೆಟ್ರೊ ನಡುವೆ ಡೀಲ್ ಯಾವ ರೀತಿಯಲ್ಲಿ ಆಯಿತೆಂದು ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ. ಮಂತ್ರಿಮಾಲ್‌ಗೆ ಜನರು ಹೋಗುವುದರಿಂದ ಅದರ ಲಾಭದ ಒಂದಿಷ್ಟು ಪಾಲು ಮೆಟ್ರೊಗೆ ಬರಬೇಕಲ್ಲವೇ? ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಬೇಕಾಗಿದೆ.

ಇದನ್ನೂ ಓದಿರಿ: ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!

ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸಲಿರುವ ಮೆಟ್ರೊದಿಂದಾಗಿ ಐಟಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಔಟರ್ ರಿಂಗ್‌ ರೋಡ್‌ನಲ್ಲಿ ಐಟಿ ಕಂಪನಿಗಳಿವೆ. ಒಂದೆರಡು ಐಟಿ ಕಂಪನಿಗಳು ಸುಮಾರು 100 ಕೋಟಿ ರೂ.ಗಳನ್ನು ಕೊಟ್ಟಿರಬಹುದಷ್ಟೇ. ಆದರೆ ಒಟ್ಟು ಕಾಮಗಾರಿಯೇ ಸುಮಾರು 15,000 ಕೋಟಿ ರೂಪಾಯಿ. ಹೀಗಿರುವಾಗ ಹಣವನ್ನು ಕಂಪನಿಗಳಿಂದ ಪಡೆಯಬಹುದಿತ್ತು. ಅದಾಗುತ್ತಿಲ್ಲ. ಟಿಕೆಟ್ ದರದಿಂದಲೇ ಎಲ್ಲ ಆರ್ಥಿಕ ಕೊರತೆಯನ್ನು ತುಂಬಿಕೊಳ್ಳಲು ಹೊರಟಿದ್ದಾರೆ. ಕಂಪನಿಗಳಿಂದ ಹಣ ವಸೂಲಿ ಮಾಡಬಹುದಲ್ಲವೇ? ಮಂತ್ರಿಮಾಲ್‌ ನಂಥವರಿಗೆ ಭೂಮಿ ಕೊಟ್ಟಿದ್ದರಿಂದ ಲಾಭವಾಗಿಲ್ಲವೆಂದು ಯೋಚಿಸಬಹುದಲ್ಲವೇ?

ದರ ನಿಗದಿ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗಳಿದ್ದಾರೆ. ಆದರೆ ಪ್ರಯಾಣಿಕರ ಪ್ರತಿನಿಧಿಗಳು ಏಕಿಲ್ಲ? ಬೋರ್ಡ್‌ನಲ್ಲಿ ಚುನಾಯಿತ ಜನಪ್ರತಿನಿಧಿಗಳು ಇದ್ದಿದ್ದರೆ ನಾವು ಪ್ರಶ್ನೆ ಮಾಡಬಹುದಿತ್ತಲ್ಲವೇ? ಪ್ರಯಾಣಿಕರಾದ ನಮಗೆ ಮತ ಚಲಾಯಿಸುವ ಹಕ್ಕು ಇಲ್ಲವಾದರೂ ನಡೆಯುವ ಚರ್ಚೆಗಳ ಪರಿವೀಕ್ಷಣೆಗೆ ಅವಕಾಶ ನೀಡಬೇಕಲ್ಲವೇ?

ದುಬಾರಿ ಮೆಟ್ರೊ ಬೇಕೆ?

ಬೆಂಗಳೂರಿಗರು ಯೋಚಿಸಬೇಕಾದ ಕಾಲ ಬಂದಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಮಾಡುತ್ತಿರುವ ಈ ಮೆಟ್ರೊ ಯೋಜನೆ ನಮಗೆ ಬೇಕೆ? ‘ವಲ್ಡ್‌ ರಿಸೋರ್ಸ್ ಇನ್‌ಸ್ಟಿಟ್ಯೂಟ್’ (ಡಬ್ಲ್ಯುಆರ್‌ಐ) ಅಧ್ಯಯನದ ಪ್ರಕಾರ, “ಮಧ್ಯಮ ವರ್ಗದವರು ಮೆಟ್ರೊವನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ. ಬಡವರಿಗೆ ಹಳೆಯ ಮೆಟ್ರೊ ದರವೇ ಭಾರವಾಗಿತ್ತು. ಅವರು ಮೆಟ್ರೊ ಉಪಯೋಗಿಸುತ್ತಿಲ್ಲ. ಶ್ರೀಮಂತರು ಕಾರುಗಳಲ್ಲಿ ತಿರುಗಾಡುತ್ತಾರೆ. ಮಧ್ಯಮ ವರ್ಗದವರೇ ಹೆಚ್ಚು ಮೆಟ್ರೊ ಅವಲಂಬಿಸಿದ್ದಾರೆ”.

ಸುಮಾರು 50,000 ಕೋಟಿ ರೂ. ಖರ್ಚು ಮಾಡಿ ಮಾಡಲಾಗಿರುವ ಮೆಟ್ರೊದಲ್ಲಿ ಎಷ್ಟು ಜನ ಪ್ರತಿದಿನ ಪ್ರಯಾಣ ಮಾಡುತ್ತಿದ್ದಾರೆ ಗೊತ್ತೆ? ದಿನಕ್ಕೆ 8.5 ಲಕ್ಷ ಜನ. ಆದರೆ ಬಿಎಂಟಿಸಿಯಲ್ಲಿ 38 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಬಸ್‌ಗಳ ಸಂಖ್ಯೆ ಹೆಚ್ಚಿಸಿ ಎಂದು ‘ಬಸ್ ಪ್ರಯಾಣಿಕರ ವೇದಿಕೆ’ ಕಳೆದ ಐದಾರು ವರ್ಷಗಳಿಂದ ಒತ್ತಾಯಿಸುತ್ತಲೇ ಇದೆ. ಬೆಂಗಳೂರಿನಲ್ಲಿ 6500 ಬಸ್‌ಗಳಿವೆ. 10 ವರ್ಷಗಳಲ್ಲಿ ಕಾರುಗಳ ಸಂಖ್ಯೆ 11.5 ಲಕ್ಷದಿಂದ 20 ಲಕ್ಷ ದಾಟಿದೆ. ದಿಚಕ್ರ ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ. ಬಸ್‌ಗಳ ಸಂಖ್ಯೆ ಕುಸಿದಿದೆ. ಬಸ್‌ಗಳಿಗೆ ಖರ್ಚು ಮಾಡದೆ, ಟ್ರಾಫಿಕ್ ಹೆಚ್ಚಾಯಿತು ಎನ್ನುತ್ತಿದ್ದಾರೆ!

BMTC 4

ಸಿಲ್ಕ್ ಬೋರ್ಡ್‌ನಿಂದ ಏರ್ಪೋರ್ಟ್‌ಗೆ ಸಂಪರ್ಕ ಕಲ್ಪಿಸಲು ಮೆಟ್ರೊಕ್ಕಾಗಿ 15,000 ಕೋಟಿ ಖರ್ಚು ಮಾಡುತ್ತಿದ್ದಾರಲ್ಲ, ಇದರಲ್ಲಿ ಒಂದು ಸಾವಿರ ಕೋಟಿಯನ್ನು ಬಿಎಂಟಿಸಿಗೆ ವಿನಿಯೋಗಿಸಿದ್ದರೆ ಬಸ್‌ಗಳ ಸಂಖ್ಯೆ 2,000-3000ರಷ್ಟು ಹೆಚ್ಚಾಗುತ್ತದೆ. ಇವುಗಳಲ್ಲಿ ಕನಿಷ್ಠ 10 ಲಕ್ಷ ಜನ ಪ್ರತಿದಿನ ಓಡಾಡುತ್ತಾರೆ. ಆದರೆ ಮೆಟ್ರೊಕ್ಕೆ 15,000 ಕೋಟಿ ರೂ. ವಿನಿಯೋಗಿಸಿ, ದಿನಕ್ಕೆ ಆರೇಳು ಲಕ್ಷ ಜನ ಪ್ರಯಾಣಿಸುತ್ತಾರೆಂದು ಅಂದಾಜಿಸಲಾಗಿದೆ. ಮೊದಲ ಹಂತದ ಮೆಟ್ರೊ ಮಾಡುವಾಗ 10 ಲಕ್ಷ ಜನ ಓಡಾಡುತ್ತಾರೆಂದು ಅಂದಾಜಿಸಲಾಗಿತ್ತು. ಕೊನೆಗೆ ಆದದ್ದು 5 ಲಕ್ಷ ಜನ. ಬಿಎಂಟಿಸಿಗೆ 1,000 ಸಾವಿರ ಖರ್ಚು ಮಾಡಿದರೆ 10 ಲಕ್ಷ ಜನ ಹೆಚ್ಚಾಗಬಹುದು. ಆದರೆ 15,000 ಕೋಟಿ ಖರ್ಚು ಮಾಡುವ ಮೆಟ್ರೊದಿಂದ ಹೆಚ್ಚೆಂದರೆ ಎರಡೂವರೆಯಿಂದ ಮೂರು ಲಕ್ಷ ಜನ ಮಾತ್ರ ಓಡಾಡಬಹುದು. ಯಾವುದು ಆದ್ಯತೆ ಆಗಬೇಕು ಎಂಬ ಪ್ರಶ್ನೆ ನಮ್ಮ ಮುಂದಿದೆ.

ಮೆಟ್ರೊ ಬೇಕೆಂದರೆ ಆ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಪಾತ್ರ, ಬಿಬಿಎಂಪಿಯ ಪಾತ್ರ, ನಮ್ಮ ನಿಮ್ಮ  ಪಾತ್ರ ಇರಬೇಕು. ಇಷ್ಟು ಸಾವಿರ ಕೋಟಿ ಸುರಿಯುವ ಮನ್ನ ನಮ್ಮನ್ನು ಕೇಳಬೇಕು ಅಲ್ಲವೇ?

ಇದನ್ನೂ ಓದಿರಿ: ಕರ್ನಾಟಕ 50 | ಒಕ್ಕೂಟ ವ್ಯವಸ್ಥೆಗೆ ಮಾರಕವಾದ ರಾಜ್ಯಪಾಲರ ರಾಜಕಾರಣ

ವಸತಿ, ಶಿಕ್ಷಣ, ಆರೋಗ್ಯ, ಸಾರಿಗೆ – ಈ ಮೂರು ಪ್ರಮುಖ ದೈನಂದಿನ ಅಗತ್ಯಗಳು. ಸಾರಿಗೆ ಒಂದು ಭಾಗವಷ್ಟೇ. ಬೆಂಗಳೂರಿನ ಒಂದು ಸಮಸ್ಯೆಯ, ಒಂದು ಭಾಗವಾಗಿರುವ ಮೆಟ್ರೊಗೆ ಹೀಗಾಗಲೇ 50,000 ಕೋಟಿ ಖರ್ಚು ಮಾಡಿದ್ದಾರೆ! ಇದಕ್ಕೆ ಇನ್ನೂ 50,000 ಕೋಟಿ ಖರ್ಚು ಮಾಡುತ್ತಿದ್ದಾರೆ! ಕಲಬುರಗಿ, ಮಂಗಳೂರು, ಬೀದರ್, ಚಾಮರಾಜನಗರ ಮೊದಲಾದ ಜಿಲ್ಲೆಗಳು ಏನು ಅನ್ಯಾಯ ಮಾಡಿವೆ? ಆ ನಗರಗಳಿಗೂ ಒಂದಿಷ್ಟು ಹಣ ವಿನಿಯೋಗವಾಗಿದ್ದರೆ, ಅವುಗಳು ಅಭಿವೃದ್ಧಿ ಆಗುತ್ತವೆಯಲ್ಲವೇ? ಅಲ್ಲಿನ ಜನರಿಗೆ ಒಂದಿಷ್ಟು ಉದ್ಯೋಗ ದೊರೆತು, ವಲಸೆ ಹೋಗುವುದು ತಪ್ಪುತ್ತದೆ ಅಲ್ಲವೇ?

ಮೆಟ್ರೊ ದರ ಹೆಚ್ಚಾಗಿರುವುದನ್ನು ಖಂಡಿಸುತ್ತಲೇ, ಕಡಿಮೆ ಮಾಡಿಸಲು ಒತ್ತಾಯಿಸೋಣ. ಆದರೆ ಸಾಲದ ಹೊರೆಯಿಂದಾಗಿ ಬರುವ ದಿನಗಳಲ್ಲಿ ಮತ್ತಷ್ಟು ದರ ಏರಿಕೆ ಮಾಡುವುದು ಖಚಿತ. ಹೀಗಾಗಿ ಮೆಟ್ರೊ ವಿಸ್ತರಣೆ ಬೇಕೆ, ಬೇಡವೇ ಎಂಬ ಚರ್ಚೆಯಾಗಬೇಕಿದೆ. ಮೆಟ್ರೊ ಕೇವಲ ಹಣದ ಸಮಸ್ಯೆಯೂ ಅಲ್ಲ. ಗುಡ್ಡಗಳನ್ನು ಕಡಿದು ಗ್ರಾನೇಟ್ ತರಬೇಕು, ನದಿಗಳ ತೀರದಿಂದ ಮರಳು ತರಬೇಕು, ಮರಗಳನ್ನು ಕಡಿಯಬೇಕು; ಮೆಟ್ರೊ ಕಾಮಗಾರಿಯಿಂದ ಪರಿಸರದ ಮೇಲಿನ ಭಾರವೂ ಹೆಚ್ಚಾಗುತ್ತದೆ.

ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳಿಂದಾಗಿಯೇ ಮೆಟ್ರೊ ದರ ಹೆಚ್ಚಾಗಿದೆ ಎಂಬ ಸತ್ಯವನ್ನು ಸರ್ಕಾರಗಳಿಗೆ ಹೇಳಬೇಕಾಗಿದೆ. ದರ ಏರಿಕೆಯನ್ನು ತೆಗೆಯದಿದ್ದರೆ ಜನರು ಮತ್ತೆ ದ್ವಿಚಕ್ರ ವಾಹನ ಮತ್ತು ಆಟೋಗಳನ್ನು ಹತ್ತುತ್ತಾರೆ. ಮತ್ತೆ ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತದೆ.

ಈ ನಗರದಲ್ಲಿ ಕಾರಲ್ಲಿ ಹೋಗುವವರಿಗೆ ನೀವು ಅನುಕೂಲ ಮಾಡಿಕೊಡುತ್ತಿದ್ದೀರಿ. ಇನೋವಾ ಕಾರು ಉಳ್ಳವರು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದನ್ನು ನೋಡಿದ್ದೇವೆ. ಒಂದು ಪೈಸೆ ಪಾರ್ಕಿಂಗ್ ಚಾರ್ಜ್ ಕಟ್ಟಿಸಿಕೊಳ್ಳುವುದಿಲ್ಲ. ಆದರೆ ಬಸ್ ಮತ್ತು ಮೆಟ್ರೋ ದರ ಹೆಚ್ಚಾಗಿದೆ. ಬಡವರಿಗೆ ಹೊರೆ ಹಾಕುವ ಬದಲು ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಬೇಕಿದೆ. ಪಾರ್ಕಿಂಗ್ ಚಾರ್ಜ್‌ ವಿಧಿಸಬೇಕಿದೆ. ಮುಖ್ಯವಾಗಿ ಕರ್ನಾಟಕ ವಿಧಾನಸಭೆಯಲ್ಲಿ ವಿಶೇಷ ಚರ್ಚೆ ಹಮ್ಮಿಕೊಂಡು ಬೆಂಗಳೂರಿನ ಸಾರಿಗೆ ಸಮಸ್ಯೆ ಬಗ್ಗೆ ಮಾತನಾಡಬೇಕಿದೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಸ್ವೀಕರಿಸಬೇಕಿದೆ. ತಕ್ಷಣವೇ ಬಿಬಿಎಂಪಿ ಚುನಾವಣೆ ನಡೆಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

vinay 1
ವಿನಯ್ ಶ್ರೀನಿವಾಸ್
+ posts

ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಿನಯ್ ಶ್ರೀನಿವಾಸ್ ಅವರು ಜನಪರ ಹೋರಾಟಗಳ ದಿಟ್ಟ ದನಿಯೂ ಹೌದು. ವಕೀಲರಾಗಿ, ಬರಹಗಾರರಾಗಿ, ಬೆಂಗಳೂರಿನ ನಾಡಿಮಿಡಿತ ಬಲ್ಲವರಾಗಿ ಅವರು ನೀಡುವ ಒಳನೋಟಗಳು ಅಪರೂಪದ್ದಾಗಿವೆ

ಪೋಸ್ಟ್ ಹಂಚಿಕೊಳ್ಳಿ:

ವಿನಯ್ ಶ್ರೀನಿವಾಸ್
ವಿನಯ್ ಶ್ರೀನಿವಾಸ್
ಪರ್ಯಾಯ ಕಾನೂನು ವೇದಿಕೆಯಲ್ಲಿ ಸಕ್ರಿಯರಾಗಿರುವ ವಿನಯ್ ಶ್ರೀನಿವಾಸ್ ಅವರು ಜನಪರ ಹೋರಾಟಗಳ ದಿಟ್ಟ ದನಿಯೂ ಹೌದು. ವಕೀಲರಾಗಿ, ಬರಹಗಾರರಾಗಿ, ಬೆಂಗಳೂರಿನ ನಾಡಿಮಿಡಿತ ಬಲ್ಲವರಾಗಿ ಅವರು ನೀಡುವ ಒಳನೋಟಗಳು ಅಪರೂಪದ್ದಾಗಿವೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...