ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 1)

Date:

ಈ ಲೇಖನ ಬರೆಯುವ ಸಂದರ್ಭದಲ್ಲಿ ಎರಡು ಪ್ರಮುಖ ಸಂಗತಿಗಳು ಹೊರಬಂದಿವೆ. ಒಂದು,  ಐಎಂಎಫ್‌ನ ಮುಖ್ಯಸ್ಥೆ ಕ್ರಿಸ್ಟಲಿನಾರವರು ಹೇಳಿದಂತೆ ವಿವಿಧ ದೇಶಗಳ ಆರ್ಥಿಕತೆ ಕುಸಿಯುತ್ತಿದೆ. ಭಾರತದ ಆರ್ಥಿಕತೆ ಹೆಚ್ಚು ಕುಸಿಯಲು ಕಾರ್ಮಿಕರ ಮತ್ತು ಮಾಲೀಕರ ನಡುವಿನ ಸಂಬಂಧದಲ್ಲಿನ ಸಮಸ್ಯೆಗಳು, ವೇತನ, ಸವಲತ್ತುಗಳಲ್ಲಿನ ಕೊರತೆ, ವಲಸೆ ಕಾರ್ಮಿಕರ ಸಮಸ್ಯೆಗಳು ಮತ್ತು ಇಳಿಯುತ್ತಿರುವ ಸರಾಸರಿ ಜೀವಾವಧಿ, ಕುಸಿಯುತ್ತಿರುವ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳು ಪ್ರಮುಖ ಕಾರಣವೆಂದು ತಿಳಿಸಿದ್ದಾರೆ. ಎರಡನೇ ಸಂಗತಿ: ಹಸಿವಿನ ಸೂಚ್ಯಂಕದ್ದು. ಈ ವಿಚಾರದಲ್ಲಿ 127 ದೇಶಗಳ ಪೈಕಿ ಭಾರತವು 105ನೇ ಸ್ಥಾನದಲ್ಲಿದೆ.

ಈ ಎರಡು ಪ್ರಮುಖ ಅಂಶಗಳು ಜಗತ್ತಿನ ಆರ್ಥಿಕತೆಯ ಪರಿಣಾಮ ಭಾರತದ ಮೇಲೂ, ಭಾರತದ ಆರ್ಥಿಕತೆಯ ಪರಿಣಾಮ ಜನರ ಉದ್ಯೋಗ ಮತ್ತು ಬದುಕಿನ ಮೇಲೆಯೂ ಪರಿಣಾಮ ಬೀರಲಿದೆ.

ಬೆಳಿಗ್ಗೆ ಎದ್ದ ಕೂಡಲೇ ಬರುವ ದಿನಪತ್ರಿಕೆ ಓದುತ್ತಾ ಕುಡಿಯುವ ಕಾಫಿ ಅಥವಾ ಟೀ ಕುಡಿಯುತ್ತಾ ಸೇದುವ ಸಿಗರೇಟ್ ಅಥವಾ ಬೀಡಿ, ಗರಿಗರಿ ಬಟ್ಟೆಗೆ ಹಾಕುವ ಗಂಜಿ ಹಾಗೂ ಇಸ್ತ್ರೀ, ಸಣ್ಣ-ಪುಟ್ಟ ವಸ್ತುಗಳನ್ನು ನಮಗೆ ಮಾರುವ ಸಣ್ಣ ಅಂಗಡಿಗಳು, ದೇವರಿಗೆ ಹಾಕುವ ಹೂವಿನ ಹಾರ, ಗಮ್ಮೆಂದು ವಾಸನೆ ಬಡಿಯುವ ಅಗರಬತ್ತಿ, ಮನೆಯಿಂದ ಮೆಟ್ರೋ ಅಥವಾ ಬಸ್ ನಿಲ್ದಾಣಕ್ಕೆ ಸಹಾಯಕವಾಗುವ ಆಟೋ, ಮನೆಯ ಕಸ ಸಂಗ್ರಹಿಸಲು ಬರುವ ಕಸ ಸಂಗ್ರಾಹಕರು, ಜನ ಓಡಾಡುವ ರಸ್ತೆಗಳನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರು, ಮಹಿಳೆಯರು ಹಣೆಗಿಡುವ ಕುಂಕುಮ, ಸ್ಟಿಕ್ಕರ್, ಬಳೆ, ಉಮಾಗೋಲ್ಡ್ ಒಡವೆಗಳು, ಸೀರೆಗಳಿಗೆ ಬಣ್ಣ ಹಾಕುವವರು, ಕುಂಚ ಹೊಲಿಯುವವರು, ವಿವಿಧ ಆಕಾರಗಳ ಚಾಸ್ಸ್‌ಗಳನ್ನು ಹೊಲಿಯುವವರು, ಕಿತ್ತುಹೋದ ಚಪ್ಪಲಿ ಹೊಲಿಯುವವರು, ಶೂಗೆ ಪಾಲೀಶ್‌ ಹಾಕುವವರು, ಬಿಳಿ ಬಟ್ಟೆಗಳಿಗೆ ಹಾಕುವ ನೀಲಿ ತಯಾರಿಸುವವರು, ಅಂಗಡಿಗಳಲ್ಲಿ ವಸ್ತುಗಳನ್ನು ಹಾಕಿ ಕೊಡುವ ಪೊಟ್ಟಣಗಳನ್ನು ತಯಾರಿಸುವವರು, ಮದುವೆ ಮನೆಯಲ್ಲಿ ರುಚಿಯಾದ ಅಡುಗೆ ಮಾಡಿ ಬಡಿಸುವವರು, ಮದುವೆ ಮನೆಯ ಅಲಂಕಾರ ಮಾಡುವವರು, ಪೆಟ್ರೋಲ್ ಬಂಕ್‌ಗಳಲ್ಲಿ ಗಾಡಿಗಳಿಗೆ ಪೆಟ್ರೋಲ್-ಡೀಸೆಲ್ ಹಾಕುವವರು, ಗಾಳಿ ತುಂಬಿಸುವವರು, ಮಕ್ಕಳಾಟದ ಸಾಮಾನು ತಯಾರಿಸುವವರು – ಅಸಂಘಟಿತ ಕಾರ್ಮಿಕರೆಂದರೆ ನಮ್ಮ ತಲೆಯಲ್ಲಿ ಕೆಲವರಷ್ಟೇ ಮನಸ್ಸಿಗೆ ಬರುತ್ತಾರಾದ್ದರಿಂದ ಈ ಪಟ್ಟಿಯನ್ನು ಕೊಟ್ಟಿದ್ದೇನೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಈ ‘ಅನೌಪಚಾರಿಕ ವಲಯದ ಕಾರ್ಮಿಕರ’ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಬ್ಬ ಬಡ ಮನುಷ್ಯರಿಂದ ಹಿಡಿದು ಶ್ರೀಮಂತ ಮನುಷ್ಯರ ತನಕ ಎಲ್ಲರ ದಿನನಿತ್ಯದ ಬೇಕು ಬೇಡಗಳನ್ನು ಪೂರೈಸುವವರು ಸಮಾಜದೊಳಗೆ ಹಾಸುಹೊಕ್ಕಾಗಿರುವವರೇ ಅಸಂಘಟಿತ ಕ್ಷೇತ್ರದ ಕಾರ್ಮಿಕರು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರೂ ಇದೇ ವಿಭಾಗಕ್ಕೆ ಸೇರಿಕೊಳ್ಳುತ್ತಾರೆ. ಹಾಗಾಗಿ ಅಸಂಘಟಿತ ವಲಯಕ್ಕೆ ಸೇರದ ಯಾವುದೇ ವಿಭಾಗಗಳು ಇಲ್ಲ. ಏಕೆಂದರೆ ಗುತ್ತಿಗೆ ಕಾರ್ಮಿಕರು ಇಲ್ಲದ ಯಾವ ಖಾಸಗಿ, ಸಾರ್ವಜನಿಕ ಮತ್ತು ಸರ್ಕಾರಿ ಕಾರ್ಖಾನೆಗಳು, ನಿಗಮ-ಮಂಡಳಿಗಳು ಮತ್ತು ಕಚೇರಿಗಳು ಇಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಭಾಷೆ ಮತ್ತು ಲಿಂಗತ್ವ; ಹೆಣ್ಣಿಗಿಲ್ಲವೇ ಸ್ವತಂತ್ರ ಅಸ್ತಿತ್ವ? (ಭಾಗ- 1)

ಕಳೆದ 50 ವರ್ಷಗಳಲ್ಲಿ ಕರ್ನಾಟಕದಲ್ಲಿ ಅವರ ಸ್ಥಿತಿಗತಿ ಏನಾಗಿದೆ ಎಂಬುದನ್ನು ತಿಳಿಯಬೇಕೆಂದರೆ, ಅದಕ್ಕಿಂತ ಹಿಂದಿನಿಂದ ಈ ವಲಯ ಹೇಗೆ ಬೆಳೆದುಬಂತು ಎಂಬುದನ್ನು ನೋಡಬೇಕು.

ಭಾರತದಲ್ಲಿ ಅಸಂಘಟಿತ ಕಾರ್ಮಿಕರ ಉಗಮ

ಅಸಂಘಟಿತ ವಲಯ ಎಂದರೆ, ಅವರಿಗೆ ಯಾವುದೇ ನಿಗದಿತ ವೇತನ, ಕೆಲಸದ ಸ್ಥಳಗಳಲ್ಲಿನ ನಿರ್ಬಂಧಗಳು ಮತ್ತು ಕಾನೂನುಗಳು ಅನ್ವಯವಾಗುವುದಿಲ್ಲ. 19ನೇ ಶತಮಾನದ ಕೊನೆಯವರೆಗೆ ಕಾರ್ಮಿಕ ಹಕ್ಕುಗಳು ಎಂಬ ಒಂದು ಪರಿಕಲ್ಪನೆಯೇ ಇಲ್ಲಿರಲಿಲ್ಲ. ಬಹುತೇಕ ಕೃಷಿ ಪ್ರಧಾನವಾಗಿದ್ದ ದೇಶದಲ್ಲಿ ಜೀತ ಮತ್ತು ಕೃಷಿ ಕೂಲಿಗಳ ದೊಡ್ಡ ಪಡೆ ಇತ್ತು. ನಿಧಾನಕ್ಕೆ 19ನೇ ಶತಮಾನದಲ್ಲೇ ವಿವಿಧ ಸರಕು ಹಾಗೂ ಸೇವೆಗಳ ಉದ್ಯಮ ಬೆಳೆದ ಹಾಗೆ ಕಾರ್ಮಿಕ ವರ್ಗವೂ ಬೆಳೆಯಿತು. ಉದಾಹರಣೆಗೆ ಗೋಡಂಬಿ, ಸೆಣಬು, ನೇಕಾರಿಕೆ, ಜವಳಿ, ಗಣಿಗಾರಿಕೆ, ಕುಂಬಾರಿಕೆ, ಪವರಲೂಂ, ಬೀಡಿ, ಅಗರಬತ್ತಿ, ಹೆಂಚು ತಯಾರಿಕೆ, ಇಟ್ಟಿಗೆ ತಯಾರಿಕೆ, ರೈಲ್ವೆ ಗೂಡ್ಸ್ಶೆಡ್, ಮೀನುಗಾರಿಕೆ, ಕಟ್ಟಡ, ಸಾರಾಯಿ ತಯಾರಿಕೆ, ಸಣ್ಣ ಸಣ್ಣ ಅಂಗಡಿಗಳಲ್ಲಿ ವ್ಯಾಪಾರಸ್ಥರಾಗಿ, ಸ್ವಯಂ ಉದ್ಯೋಗಿಗಳಾಗಿ, ಮುನ್ಸಿಪಾಲ್ಟಿಗಳಲ್ಲಿ ಪೌರ ಕಾರ್ಮಿಕರಾಗಿ, ದಿನಗೂಲಿಗಳಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ದುಡಿಯಲಾರಂಭಿಸಿದ ಮೇಲೆ ಕಾರ್ಮಿಕ ವರ್ಗದ ವಿಸ್ತರಣೆ ಆಗತೊಡಗಿತು. ಆಗ ನಿರಂತರ ಹೋರಾಟದ ಫಲವಾಗಿ ಕಾರ್ಮಿಕ ಹಕ್ಕುಗಳು ಎಂಬ ಪರಿಕಲ್ಪನೆ ಭಾರತದಲ್ಲೂ ಶುರುವಾಯಿತು. ಈ ದೇಶದಲ್ಲಿ ನಡೆದ ಹೋರಾಟದ ಜೊತೆಗೆ, ಯೂರೋಪಿನ ಕಾರ್ಮಿಕ ಹೋರಾಟದ ಫಲವಾಗಿಯೂ ಟ್ರೇಡ್ ಯೂನಿಯನ್ ಆಕ್ಟ್, ಇಎಸ್‌ಐ-ಪಿಎಫ್ ಹೀಗೆ ಹಲವು ಕಾಯ್ದೆಗಳು ಭಾರತದಲ್ಲೂ ಬಂದವು.

sangatita
ಅಸಂಘಟಿತ ಕಾರ್ಮಿಕರು

ಸ್ವಾತಂತ್ರ ನಂತರದಲ್ಲಿ ಭಾರತ ಗಣರಾಜ್ಯವಾದ ನಂತರ ಒಪ್ಪಿಕೊಂಡ ಸಂವಿಧಾನದಲ್ಲಿ “ಮನುಷ್ಯನ ಘನತೆಯ’’ ಬದುಕು ಹಕ್ಕಿನ ಭಾಗವಾಯಿತು. ಇದರಿಂದ ಹಂತಹಂತವಾಗಿ ಕೆಲವು ಹಕ್ಕುಗಳಿಗಾಗಿ ಹೋರಾಟ ನಡೆದು, ಕಾರ್ಖಾನೆಗಳಲ್ಲಿ ದುಡಿಯುವವರಿಗೆ ಹಕ್ಕುಗಳು ಹೆಚ್ಚಲಾರಂಭಿಸಿದವು. ಆದರೆ, ಕೆಲವೊಮ್ಮೆ ‘ಉದ್ಯೋಗದ ಸ್ವರೂಪ’ವೇ ಬದಲಾಗಿಬಿಟ್ಟು ಅಂತಹ ಹಕ್ಕುಗಳೂ ಇಲ್ಲವಾದವು. ಉದಾಹರಣೆಗೆ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಹೋರಾಟದಿಂದ ಬೀಡಿ ಮತ್ತು ಸಿಗಾರ್ ಕಾಯ್ದೆ 1966ರಲ್ಲಿ ಬಂದಿತು. ಇದರ ಜಾರಿಗೆ ಹೋರಾಟಗಳ ನಂತರ ಕಾರ್ಖಾನೆಗಳಲ್ಲಿದ್ದ ಬೀಡಿ ಉದ್ಯಮ ಮನೆಗಳಿಗೆ ಸ್ಥಳಾಂತರವಾಗಿ ಈಗ ಕುಟುಂಬದ ಎಲ್ಲರ ಕೆಲಸವಾಗಿ ಮಾರ್ಪಟ್ಟಿದೆ.

ನೇಕಾರಿಕೆ, ಪವರ್ ಲೂಂಗಳು ಈಗಲೂ ಮನೆಯಲ್ಲಿ ನಡೆಯುತ್ತಿದ್ದರೂ ಕೆಲವೆಡೆ ಕಂಪನಿಗಳಾಗಿ ಮಾರ್ಪಡಾಗಿದೆ. ಟೈಲ್ಸ್ ಬಂದಿದ್ದರಿಂದ ಹೆಂಚು ಮತ್ತು ಇಟ್ಟಿಗೆ ಗೂಡುಗಳು ಕಾಣೆಯಾಗುತ್ತಿವೆ, ಜವಳಿ ಗಿರಣಿಗಳು, ಮಾಯವಾಗಿ ಸಿದ್ಧ ಉಡುಪು ತಯಾರಿಕೆಯ ಘಟಕಗಳಾಗಿ ಬದಲಾಗಿವೆ. ಲಕ್ಷಾಂತರ ಕುಟುಂಬಗಳು ನಂಬಿದ್ದ ಸಾಂಪ್ರದಾಯಿಕ ನೇಕಾರಿಕಾ ಕುಟುಂಬಗಳು ಇಂದು ಅಕ್ಷರಶಃ ಬೀದಿ ಪಾಲಾಗಿವೆ. ಹಳೆಯ ಸ್ವರೂಪದ ಗೃಹಕೈಗಾರಿಕೆಗಳು ಇಂದು ದೊಡ್ಡ ಕೈಗಾರಿಕೆಗಳಾಗಿ ಬದಲಾದ ತಕ್ಷಣ ಹಕ್ಕುಗಳು ಸಿಗಲಿಲ್ಲ. ಹಕ್ಕುಗಳು ಸಿಗುತ್ತಿದ್ದ ಕೈಗಾರಿಕೆಗಳಲ್ಲಿ ಹಲವು ಇಂದು ಹಳೆಯ ರೂಪದಲ್ಲಿ ಅಸ್ತಿತ್ವದಲ್ಲೇ ಇಲ್ಲ. ಹೀಗಾಗಿ ಅಸಂಘಟಿತ ವಲಯ ಹಿಂದಿಗಿಂತ ಹೆಚ್ಚಾಯಿತು. 1991ರ ನಂತರ ನವಉದಾರೀಕರಣ ನೀತಿಗಳು ಬಂದ ಮೇಲಂತೂ ಅಸಂಘಟಿತ ವಲಯದ ವಿಸ್ತರಣೆ ಹೆಚ್ಚುತ್ತಾ ಸಾಗಿದೆ.

ಕಳೆದ 50 ವರ್ಷಗಳಲ್ಲಿ ಅಸಂಘಟಿತ ಕಾರ್ಮಿಕರ ಪರಿಸ್ಥಿತಿ:

ಸಂಖ್ಯೆಯಲ್ಲಿ ಈ ಕಾರ್ಮಿಕರು ಎಷ್ಟಿದ್ದಾರೆ ಎಂಬುದನ್ನು ಅಳೆಯುವುದು ಸುಲಭವಲ್ಲ. ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ 70 ಲಕ್ಷ ಕೃಷಿ ಕೂಲಿಕಾರರು ಇದ್ದಾರೆ. ನರೇಗಾದಲ್ಲಿ ಸುಮಾರು 28 ಲಕ್ಷ ಇದ್ದಾರೆ. ಇ- ಶ್ರಮ್‌ಪೋರ್ಟಲ್‌ನಲ್ಲಿ 79.41 ಲಕ್ಷ ಜನರು ನೊಂದಾವಣಿಯಾಗಿದ್ದಾರೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸುಮಾರು 40 ಲಕ್ಷ ಜನರು ನೋಂದಾವಣಿಯಾಗಿದ್ದಾರೆ. ಆದರೆ, ನೋಂದಾವಣಿಯಾಗದೆ ಇರುವವರು ಇನ್ನೂ ಹೆಚ್ಚಿದ್ದಾರೆ. ಏಕೆಂದರೆ, ನೋಂದಾವಣಿಯಾಗಲು ಕಾರ್ಮಿಕರೇ ಕೈಯಿಂದ ಹಣ ಖರ್ಚು ಮಾಡಬೇಕು. ನೋಂದಾವಣಿಗೆ ಕೂಡಾ ಹಲವಾರು ತಾಂತ್ರಿಕ ತೊಂದರೆಗಳಿವೆ. ನೊಂದಾವಣಿಯಾಗಲು ಆ ಕಾರ್ಮಿಕ ಅರ್ಧ ದಿನದ ಕೆಲಸ ಬಿಟ್ಟು ಹೋಗಬೇಕು ಮತ್ತು ನೋಂದಾವಣಿ ಮಾಡುವುದರಿಂದ ನರೇಗಾ ಮತ್ತು ಕಟ್ಟಡ ಕಾರ್ಮಿಕರಿಗೆ ಒಂದಷ್ಟು ಸವಲತ್ತು ಬಿಟ್ಟರೆ ಬೇರೆ ಸವಲತ್ತುಗಳು ಕಾರ್ಮಿಕರ ಅಗತ್ಯಗಳಿಗನುಸಾರವಾಗಿ ಇಲ್ಲದಿರುವುದರಿಂದ ಹೆಚ್ಚಿನ ಅಸಕ್ತಿಯೂ ತೋರಿಸದ ಪರಿಸ್ಥಿತಿ ಇದೆ. ಆದ್ದರಿಂದ ನಮ್ಮ ಸಂಘಟನೆಗಳೂ ಗ್ರಾಮ ಪಂಚಾಯ್ತಿ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳ ವಾರ್ಡ್ವಾರು ನಿಗದಿತ ಮಾಸಿಕ ವೇತನವಿಲ್ಲದೇ ದುಡಿಯುವವರಿಗೆ ನೋಂದಾವಣೆ ಮಾಡುವುದು ಅಥವಾ ಗುರುತಿಸುವ ಕೆಲಸ ಮಾಡಬೇಕಿದೆ. ಆದರೆ ಅವೈಜ್ಞಾನಿಕ ಮಾನದಂಡಗಳು ಮತ್ತು ಮಾರ್ಗಗಳನ್ನು ಅನುಸರಿಸುವುದು, ಒಂದೊಂದು ಸರ್ಕಾರ ಬಂದಾಗ ಒಂದೊಂದು ರೀತಿಯ ಮಾನದಂಡಗಳನ್ನು ನಿಗದಿ ಮಾಡುವುದರಿಂದ ನಿಖರವಾಗಿ ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಎಷ್ಟ್ತು ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ರಾಜ್ಯದಲ್ಲಿ ವರ್ಷಕ್ಕೆ 1ಲಕ್ಷ 20 ಸಾವಿರಕ್ಕಿಂತ ಕಡಿಮೆ ವರಮಾನ ಇರುವ 1 ಕೋಟಿ 20 ಲಕ್ಷ ಬಿಪಿಎಲ್ ಕಾರ್ಡ್‌ದಾರರ ಸಂಖ್ಯೆ ಇದ್ದು, ಅವರಲ್ಲಿ ವಯಸ್ಕರ ಸಂಖ್ಯೆ 4 ಕೋಟಿ ಆಗುತ್ತದೆ. ಈ ಮಾನದಂಡ ಪ್ರಕಾರ 6-7 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರಾದರೂ ಅಸಂಘಟಿತ, ಗುತ್ತಿಗೆ, ಖಾಯಂ ಅಲ್ಲದ ಮತ್ತು ಗ್ರಾಮೀಣ ಕಾರ್ಮಿಕರು ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕಿದೆ.

ಇದನ್ನೂ ಓದಿರಿ: ಭಾಷೆ ಮತ್ತು ಲಿಂಗತ್ವ; ಹೆಣ್ಣಿಗಿಲ್ಲವೇ ಸ್ವತಂತ್ರ ಅಸ್ತಿತ್ವ? (ಭಾಗ- 2)

ರಾಜ್ಯದಲ್ಲಿ ಬಯೋಟೆಕ್ ನವೋದ್ಯಮ, ಐಟಿ, ಬಿಟಿ ವಿಶೇಷ ಆರ್ಥಿಕ ವಲಯ, ಸೇರಿದಂತೆ ಬೃಹತ್ ಉದ್ಯಮಗಳಲ್ಲಿ 5.10 ಲಕ್ಷ ಕಾರ್ಮಿಕರಿದ್ದಾರೆ. ನೋಂದಾವಣಿಯಾದ 17894 ಕಾರ್ಖಾನೆಗಳಲ್ಲಿ 17.63 ಲಕ್ಷ, 11.76 ಲಕ್ಷ ಸಣ್ಣ ಮತ್ತು ಸೂಕ್ಷ್ಮ (ಎಂಎಸ್‌ಎಂಇ) ಕಾರ್ಖಾನೆಗಳಲ್ಲಿ 108.45 ಲಕ್ಷ ಕಾರ್ಮಿಕರು ಇದ್ದಾರೆ.

ಇವರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಲು ಕೆಲವು ವಲಯಗಳನ್ನಷ್ಟೇ ಗಮನಿಸೋಣ:

ಬೀಡಿ ಕಾರ್ಮಿಕರು: ಈ ಅವಧಿಯಲ್ಲಿ ಕಾರ್ಖಾನೆಯಲ್ಲಿದ್ದ ಬೀಡಿ ಕೈಗಾರಿಕೆ ಸಂಪೂರ್ಣ ಮನೆಗಳಿಗೆ ಬಂತು. ಸುಮಾರು 10 ಲಕ್ಷ ಮಹಿಳೆಯರು ಬೀಡಿಯ ಮೇಲೆ ಅವಲಂಬನೆಯಾಗಿದ್ದರು. ದ. ಕನ್ನಡ, ಉಡುಪಿ, ತುಮಕೂರು, ಬೆಂಗಳೂರು, ದಾವಣಗೆರೆ, ಬೆಳಗಾವಿ, ಪ್ರದೇಶಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ಬೀಡಿ ಕೈಗಾರಿಕೆ ಕೊಟ್ಟಿದೆ. ಆದರೆ WHO ತಂಬಾಕಿನ ಮೇಲೆ ನಿಷೇಧ ಹೇರಿದ್ದರಿಂದ ಮತ್ತು GST ಹಾಕಿದ್ದರಿಂದ ಇಂದು ಈ ಕೈಗಾರಿಕೆ ಮುಚ್ಚುತ್ತಿದೆ. ಮನೆಯಲ್ಲೇ ಕೂತು ಮಾಡುವ ಕೆಲಸವಾದ್ದರಿಂದ ದೊಡ್ಡ ಸಂಖ್ಯೆಯ ಮಹಿಳೆಯರು ಬೇರೆ ಕೆಲಸ ಸಿಗುವುದಿಲ್ಲ ಎಂಬ ಅತಂಕದಲ್ಲಿ 1000 ಬೀಡಿಗೆ ಈಗಲೂ 263.80 ರೂ.ಗಳಿಗೇ ದುಡಿಯುತ್ತಿದ್ದಾರೆ. 1000 ಬೀಡಿ ಕಟ್ಟುವ ಕೆಲಸಕ್ಕೆ 2-3 ದಿನ ತೆಗೆದುಕೊಳ್ಳುತ್ತದೆ. ಜೊತೆಗೆ ತಿಂಗಳಲ್ಲಿ 10 ರಿಂದ 20 ದಿನ ಮಾತ್ರ ಕೆಲಸವಿರುತ್ತದೆ. ಈ ಹಿಂದಿನ ರೀತಿಯಲ್ಲಿ ಸಂಘಟನೆಯಾಗುವುದೂ ಸಾಧ್ಯವಿಲ್ಲದೇ, ವೇತನ ಹಾಗೂ ಇನ್ನಿತರ ಸವಲತ್ತುಗಳೂ ಇಲ್ಲದೇ ದುಡಿಯುತ್ತಿರುವ ದೊಡ್ಡ ಸಮೂಹ ಇದಾಗಿದೆ.

beedi karmikaru
ಬೀಡಿ ಕಾರ್ಮಿಕರು

ಕಟ್ಟಡ ಕಾರ್ಮಿಕರು: ಮನುಷ್ಯರು ಮನೆ ಕಟ್ಟಲು, ರಸ್ತೆ ನಿರ್ಮಿಸಲು, ಅಣೆಕಟ್ಟು ಕಟ್ಟಲು, ವಾಣಿಜ್ಯ ಮಳಿಗೆ, ಸಮುಚ್ಚಯಗಳನ್ನು ಕಟ್ಟಲು ಯಾವಾಗ ಪ್ರಾರಂಭಿಸಿದರೋ ಅಲ್ಲಿಂದ ಇಲ್ಲಿಯತನಕ ಕಟ್ಟಡ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 59 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರಿಗೂ ಸೌಲಭ್ಯ ಕಲ್ಪಿಸಲು ಏನು ಮಾಡಬಹುದು ಎಂಬುದಕ್ಕೆ ಇದೊಂದು ದೊಡ್ಡ ಉದಾಹರಣೆ. ನಿರ್ಮಾಣ ಕಾಮಗಾರಿಯ ಮೇಲೆ ಸೆಸ್ ವಿಧಿಸಿ ಹಣ ಸಂಗ್ರಹಿಸಲಾಗುತ್ತದೆ. ಇದರಿಂದ ಮಂಡಳಿಯಲ್ಲಿ ಪ್ರಸ್ತುತ ಸುಮಾರು 6000 ಕೋಟಿ ಹಣವಿದೆ. ಆದರೆ, ಈ ಕಾರ್ಮಿಕರ ಪಾಲಿನ ಹಣವನ್ನು ಪಡೆಯಲು ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಮುಂದೆ ಮಾಡಿ, ಕಾರ್ಮಿಕರ ಮಕ್ಕಳಿಗೆ ಕೊಡಬೇಕಾದ ಶೈಕ್ಷಣಿಕ ಧನಸಹಾಯ, ಮಕ್ಕಳ ಮದುವೆಗೆ ನೀಡಬೇಕಾದ ಸಹಾಯಧನಗಳನ್ನು ಕಡಿತಗೊಳಿಸಿ, ಆಡಳಿತ ವೆಚ್ಚವನ್ನು ಹೆಚ್ಚು ಮಾಡಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಈ ಹಣವನ್ನು ಒಟ್ಟು ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ನೀಡಿದ ಆಹಾರದ ಪೊಟ್ಟಣಗಳಿಗೂ ಬಳಸಲಾಗಿತ್ತು.

ಮನೆ ಕೆಲಸಗಾರರು: ಸುಮಾರು 10 ಲಕ್ಷ ಕಾರ್ಮಿಕರು ಇದ್ದಾರೆ. ಇವರಿಗೆ ಕನಿಷ್ಠವೇತನ ಕಾಯ್ದೆ ಇದೆ, ಜಾರಿಯಿಲ್ಲ. ಏಕೆಂದರೆ ಇವರನ್ನು ನೇಮಕ ಮಾಡಿಕೊಳ್ಳುತ್ತಿರುವ ಜನರ ಆದಾಯ ಕುಸಿಯುತ್ತಿರುವ ಸಂದರ್ಭದಲ್ಲಿ ಕನಿಷ್ಠವೇತನ ಪ್ರಶ್ನೆ ಉದ್ಭವಿಸುವುದಿಲ್ಲ, ಪ್ರಶ್ನಿಸಿದರೆ ಕೆಲಸವಿಲ್ಲ, ನಿಗದಿತ ಕೆಲಸವಿಲ್ಲ ಮತ್ತು ಕೆಲಸಕ್ಕೆ ಖಾತ್ರಿಯೂ ಇಲ್ಲ.

ಗಿಗ್ ಕಾರ್ಮಿಕರು: ಸಂವಹನ ಮತ್ತು ತಂತ್ರಜ್ಞಾನದ ಪ್ರಗತಿಯಿಂದಾಗಿ ಮೊಬೈಲ್ ಫೋನ್ ಎಂಬ ಸಾಧನವನ್ನು ಉಪಯೋಗಿಸಿ ಪ್ರಯಾಣ, ವಸತಿ, ಆಹಾರ, ಸರಕುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡುವ ವ್ಯವಸ್ಥೆಯಿದೆ. 10- 15 ವರ್ಷಗಳ ಹಿಂದೆ ಟೆಲಿಫೋನ್ ಬೂತ್‌ಗಳಿದ್ದವು, ಈಗವು ಮುಚ್ಚಿ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಈಗ ಟೆಲಿಫೋನ್‌ಗಳ ಬದಲಾಗಿ ಮೊಬೈಲ್ ಫೋನ್ ಸ್ವರೂಪ ಪಡೆದ ಮೇಲೆ ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್‌ಬಾಸ್ಕೆಟ್, ಪೋರ್ಟರ್, ಜೆಪ್ಟೋ, ಫಾರ್ಮ್ಈಸಿ, ಬ್ಲಿಂಕಿಟ್, ಡಾಮಿನೋಜ್, ಊಬರ್, ವೋಲಾ, ಸ್ವಿಗ್ಗಿ ಮತ್ತು ಜಮೊಟೋ ಇತ್ಯಾದಿ ಹೆಸರುಗಳ ದೇಶಿ ಮತ್ತು ವಿದೇಶಿ ಕಂಪನಿಗಳು ಒಂದು ವಿಚಿತ್ರ ರೀತಿಯಲ್ಲಿ ಜನರನ್ನು ದುಡಿಸುತ್ತಿದ್ದಾರೆ.

ಇದನ್ನೂ ಓದಿರಿ: ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ

ಇಡೀ ಪ್ರಪಂಚದಲ್ಲಿ ಇವರು ಯಾವುದೇ ರೀತಿಯ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳದೇ, ಅವರನ್ನು ಪಾಲುದಾರರು ಎಂದು ಕರೆದು, ಲಕ್ಷಾಂತರ ಕೋಟಿ ರೂ. ವಹಿವಾಟು ನಡೆಸುವ ವಲಯದಲ್ಲಿ ವ್ಯವಹರಿಸುತ್ತಿವೆ. ಈ ಕಂಪನಿಗಳು ಪ್ಲಾಟ್‌ಫಾರ್ಮ್ ಒದಗಿಸಿ, ಸ್ವಂತ ವಾಹನ, ಕಾನೂನುಬದ್ಧ ಡ್ರೈವಿಂಗ್ ಲೈಸನ್ಸ್ ಇರುವ ಆನ್‌ಲೈನ್‌ನಲ್ಲಿ ಕೆಲಸ ಮಾಡುವ ಕೌಶಲ್ಯ ಇದ್ದರೆ ಡಿಜಿಟಲ್ ವೇದಿಕೆಗೆ ಪ್ರವೇಶ ಪಡೆಯಬಹುದು. ಈ ಕಂಪನಿಗಳು ಹೆಚ್ಚಿನ ಬಂಡವಾಳ ಹಾಕದೇ, ಕೇವಲ ಒಂದು ಸಾಫ್ಟ್ವೇರ್ ಒದಗಿಸುವ ಮೂಲಕ ಪ್ರಪಂಚದಾದ್ಯಂತ 40 ಕೋಟಿ ಕಾರ್ಮಿಕರನ್ನು ದುಡಿಸುತ್ತಿದ್ದಾರೆ. ಒಂದು ವಸ್ತುವನ್ನು ಹೇಳಿದ ಸಮಯಕ್ಕೆ, ಹೇಳಿದ ಹಾಗೆಯೇ ತಲುಪಿಸಬೇಕು. ಒಂದು ವೇಳೆ ಟ್ರಾಫಿಕ್ ಜಾಮ್ ಆಗಿ ಆ ತಿಂಡಿ ತಿನಿಸನ್ನು ತಡವಾಗಿ ತಲುಪಿಸಿದರೆ, ಅದನ್ನು ಗ್ರಾಹಕರು ತೆಗೆದುಕೊಳ್ಳದೇ ನಿರಾಕರಿಸಿದರೆ ಅದರ ದಂಡ ಆ ಕಾರ್ಮಿಕನೇ ಭರಿಸಬೇಕು, ತಿನಿಸನ್ನು ಮುಟ್ಟಿಸಲೇಬೇಕು ಎಂಬ ಧಾವಂತದಲ್ಲಿ ಬರುವಾಗ ಅವನಿಗೆ ಅಪಘಾತವಾದರೆ ಅದಕ್ಕೆ ಜವಾಬ್ದಾರಿ ಯಾರೂ ಇಲ್ಲ. ಆ ಕಾರ್ಮಿಕನ ಮೇಲೆ ದೂರುಗಳು ದಾಖಲಾದರೆ ಅವನಿಗೆ ಡಿಜಿಟಲ್ ವೇದಿಕೆಯಲ್ಲಿ ಸೇರಿಸಿಕೊಳ್ಳುವುದಿಲ್ಲ. ಇಂತಹ ವಿಪರೀತವಾದ ಮಾನಸಿಕ ಒತ್ತಡಗಳಲ್ಲಿ ದುಡಿಯಬೇಕಾದ ಸ್ಥಿತಿ ಇದೆ. ಅವರ ಸಂಖ್ಯೆಯ ಕುರಿತು ರಾಜ್ಯದಲ್ಲಿ ನಿಖರವಾದ ಮಾಹಿತಿಗಳಿಲ್ಲ; ಅಂದಾಜಿನ ಪ್ರಕಾರ 5 ಲಕ್ಷಕ್ಕಿಂತಲೂ ಹೆಚ್ಚಿನವರು ಸಮಯದ ಪರಿವೆಯೇ ಇಲ್ಲದೇ ದುಡಿಯುತ್ತಿದ್ದಾರೆ.

(ಮುಂದುವರಿಯುತ್ತದೆ..)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

s varalaskhmi
ಎಸ್. ವರಲಕ್ಷ್ಮಿ
+ posts

ವರಲಕ್ಷ್ಮಿಯವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಎಂಬ ಊರಿನವರು. ವಯಸ್ಕರ ಶಿಕ್ಷಣ ಯೋಜನೆಯಡಿ ಪಾಠ ಮಾಡುತ್ತಿದ್ದ ಅವರು ಜೀವನೋಪಾಯಕ್ಕಾಗಿ ಗಾರ್ಮೆಂಟ್ಸ್ ಸೇರಿದರು. ಅಲ್ಲಿ ವೇತನ ತಾರತಮ್ಯ ಪ್ರಶ್ನಿಸಿ ಹೋರಾಟ ನಡೆಸಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡರು. ನಂತರ 1994ರಲ್ಲಿ ಅಂಗನವಾಡಿ ನೌಕರರ ಸಂಘ ಸ್ಥಾಪಿಸಿದ ಅವರು ಸದ್ಯ 128 ತಾಲ್ಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರ ಹೋರಾಡುತ್ತಿದ್ದಾರೆ. ಸಿಐಟಿಯು ಕಾರ್ಮಿಕ ಸಂಘಟನೆಯ ನಾಯಕಿಯಾಗಿರುವ ಅವರು 2 ದಶಕಕ್ಕೂ ಹೆಚ್ಚು ಕಾಲ ಹತ್ತಾರು ಯಶಸ್ವಿ ಹೋರಾಟಗಳನ್ನು ಮುನ್ನಡೆಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಎಸ್. ವರಲಕ್ಷ್ಮಿ
ಎಸ್. ವರಲಕ್ಷ್ಮಿ
ವರಲಕ್ಷ್ಮಿಯವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಎಂಬ ಊರಿನವರು. ವಯಸ್ಕರ ಶಿಕ್ಷಣ ಯೋಜನೆಯಡಿ ಪಾಠ ಮಾಡುತ್ತಿದ್ದ ಅವರು ಜೀವನೋಪಾಯಕ್ಕಾಗಿ ಗಾರ್ಮೆಂಟ್ಸ್ ಸೇರಿದರು. ಅಲ್ಲಿ ವೇತನ ತಾರತಮ್ಯ ಪ್ರಶ್ನಿಸಿ ಹೋರಾಟ ನಡೆಸಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡರು. ನಂತರ 1994ರಲ್ಲಿ ಅಂಗನವಾಡಿ ನೌಕರರ ಸಂಘ ಸ್ಥಾಪಿಸಿದ ಅವರು ಸದ್ಯ 128 ತಾಲ್ಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರ ಹೋರಾಡುತ್ತಿದ್ದಾರೆ. ಸಿಐಟಿಯು ಕಾರ್ಮಿಕ ಸಂಘಟನೆಯ ನಾಯಕಿಯಾಗಿರುವ ಅವರು 2 ದಶಕಕ್ಕೂ ಹೆಚ್ಚು ಕಾಲ ಹತ್ತಾರು ಯಶಸ್ವಿ ಹೋರಾಟಗಳನ್ನು ಮುನ್ನಡೆಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...