ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 2)

Date:

(ಮುಂದುವರಿದ ಭಾಗ..) ಗುತ್ತಿಗೆ ಕಾರ್ಮಿಕರು: ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿಷೇಧ ಕಾಯ್ದೆ) 1970ರಲ್ಲಿಯೇ ಬಂದಿದೆ. ಈ ಕಾಯ್ದೆ ಪ್ರಕಾರ ನಿರಂತರ ಕೆಲಸಗಳನ್ನು ಗುತ್ತಿಗೆ ಪದ್ಧತಿಯ ಮುಖಾಂತರ ಮಾಡಿಸಬಾರದು ಎಂಬುದಾಗಿದೆ. ಮೊದಲು ಕಾರ್ಖಾನೆಗಳ ಗಾರ್ಡನ್‌ಗಳಲ್ಲಿ ಮತ್ತು ಕ್ಯಾಂಟೀನ್‌ಗಳಲ್ಲಿ ಮಾತ್ರ ಗುತ್ತಿಗೆ ಕೊಡಲಾಗುತಿತ್ತು. ಆದರೆ, ಖಾಸಗಿ ಕ್ಷೇತ್ರದಲ್ಲಿ ಬಂಡವಾಳಶಾಹಿಯ ಉತ್ಪಾದನಾ ವಿಧಾನ ಬದಲಾಗಿದೆ. ಲಾಭಗಳಿಸಬೇಕಾದರೆ ಕಾರ್ಮಿಕರ ಮೇಲಾಗುವ ಖರ್ಚು ಕಡಿಮೆ ಮಾಡಬೇಕು ಎಂಬ ಪರಿಕಲ್ಪನೆಯ ನಂತರ 1970ರ ಈ ಕಾಯ್ದೆಯನ್ನು ತರಲಾಗಿದೆ. ಎಲ್ಲಾ ಕಾಯ್ದೆಗಳಿಗೂ ಮನಸೋಇಚ್ಛೆ ತಿದ್ದುಪಡಿಯನ್ನು ತಂದು ಎಲ್ಲ ನಿರಂತರವಾದ ಕೆಲಸಗಳಿಗೂ ಗುತ್ತಿಗೆ, ಟ್ರೇನಿ, ಅಪ್ರಂಟೀಸ್, ನಿಗದಿತ ಸಮಯದ ಕಾರ್ಮಿಕ, ಆಡಳಿತ ಮಂಡಳಿ ಸಿಬ್ಬಂದಿ ಮುಂತಾದ ಹೆಸರುಗಳಲ್ಲಿ ದುಡಿಸಲಾಗುತ್ತದೆ. ಈ ಕಾರ್ಮಿಕರಿಗೂ ಮಾಲೀಕರಿಗೂ ನೇರವಾದ ಸಂಬಂಧಗಳು ಇರುವುದಿಲ್ಲ; ಈ ಕಾರ್ಮಿಕರ ನೇಮಕಾತಿಗೆ ಯಾವುದೇ ನೇಮಕಾತಿ ಕರಾರುಗಳಿರುವುದಿಲ್ಲ. ಕಾನೂನಿನ ಪ್ರಕಾರ ಕಾರ್ಮಿಕ ಇಲಾಖೆಯಲ್ಲಿ ಈ ಗುತ್ತಿಗೆದಾರರೂ ನೋಂದಾವಣಿ ಮಾಡಿಕೊಳ್ಳಬೇಕು. ನಿಬಂಧನೆಗಳಿಗೆ ಒಳಪಡಬೇಕು. ಆದರೆ, ಅವ್ಯಾವುವೂ ಜಾರಿಗೆ ಬರುವುದಿಲ್ಲ. ಉದಾಹರಣೆಗೆ ಕೋಲಾರದಲ್ಲಿರುವ ವಿಸ್ಟ್ರಾನ್ ಕಂಪನಿ; ಆ ಕಂಪನಿಯಲ್ಲಿ ಕನಿಷ್ಠ 8-9 ಸಾವಿರ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಕಾರ್ಮಿಕ ಇಲಾಖೆಯ ಅನುಮತಿ ಪಡೆದದ್ದು 1 ಸಾವಿರ ಕಾರ್ಮಿಕರಿಗೆ ಮಾತ್ರ. 3 ಪಾಳಿಗಳಲ್ಲಿ ದುಡಿಯಬೇಕಿತ್ತು. ಬೆಳಗಿನ 6 ಗಂಟೆಗೆ ಯಂತ್ರದ ಮೇಲೆ ಕಾರ್ಮಿಕರು ಇರಬೇಕು. ಕಾರ್ಮಿಕ ಕನಿಷ್ಠ ಬೆಳಗ್ಗೆ 3-4 ಗಂಟೆಗೆ ಎದ್ದೇಳಬೇಕು. ಮಹಿಳಾ ಕಾರ್ಮಿಕರು ಶೌಚಾಲಯಕ್ಕೆ ಹೋಗಿ ಬರಲು ಪುರುಷ ಮೇಲ್ವಿಚಾರಕನ ಅನುಮತಿ ಪಡೆಯಬೇಕು. ಏಕೆಂದರೆ ಯಂತ್ರಗಳು ನಿಲ್ಲುವ ಹಾಗಿಲ್ಲ. ಹಾಗಾಗಿ ಬೇರೊಬ್ಬರನ್ನು ಅಲ್ಲಿಗೆ ಹಾಕಿದ ನಂತರವೇ ಆ ಕಾರ್ಮಿಕರು ಶೌಚಾಲಯಕ್ಕೆ ಹೋಗಬೇಕು, ಮುಟ್ಟಾಗಿರುವ ಮಹಿಳಾ ಕಾರ್ಮಿಕರ ಪಾಡನ್ನು ನೆನಪಿಸಿಕೊಳ್ಳಿ. ಕೊರೊನಾ ಸಂದರ್ಭದಲ್ಲಿ ಕಾರ್ಖಾನೆಯ ಕೆಲಸ ನಿಲ್ಲಿಸಲಾಗಿತ್ತು, 2 ತಿಂಗಳ ವೇತನವಿಲ್ಲ. ನಂತರ ಕೊಟ್ಟ ವೇತನದಲ್ಲಿ 6 ರಿಂದ 8 ಸಾವಿರ ವೇತನ ಕಡಿತ. ಈ ರೀತಿಯ ಅಮಾನವೀಯ ಶೋಷಣೆಯಿಂದ ಸಂಘಟನೆಯ ತರಬೇತಿಯಿಲ್ಲದ ಕಾರ್ಮಿಕರು ಹಿಂಸೆಯತ್ತ ವಾಲಿದ್ದರು. ಆ ಕಾರ್ಖಾನೆ ತಯಾರಿಸುವುದು ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಫೋನ್‌ಗಳನ್ನು. ದುಡಿಮೆ ಮಾಡಿಸುವ ರೀತಿ ಪುರಾತನ ಜೀತಗಾರಿಕೆಯದ್ದು.

ಈ ರೀತಿಯಾಗಿ ಇಂದು ಉತ್ಪಾದನೆ ಮಾಡುವ ಎಲ್ಲ ಕಾರ್ಖಾನೆಗಳಲ್ಲಿ 100ಕ್ಕೆ 60ರಷ್ಟು ಖಾಯಂ ಅಲ್ಲದ ಕಾರ್ಮಿಕರೇ ದುಡಿಯುತ್ತಿದ್ದಾರೆ. ಸಾರ್ವಜನಿಕ ಕೈಗಾರಿಕೆಗಳಾದ BEL, BEML, HAL, BHEL ಮುಂತಾದವುಗಳಲ್ಲಿ ಖಾಯಂ ಕಾರ್ಮಿಕರ ಸಂಖ್ಯೆ 30%ಗೆ ಇಳಿದಿದೆ. ಇಲ್ಲಿಯ ವಿಶೇಷ ಏನೆಂದರೆ ಗುತ್ತಿಗೆ ಕಾರ್ಮಿಕರು ಅನ್ನುವ ಬದಲಿಗೆ Administrative ಪದವಿಗಳನ್ನು ಕೊಟ್ಟು ದುಡಿಸಲಾಗುತ್ತದೆ. ಅವರು ಕಾರ್ಮಿಕರ ಸಂಘ ಸೇರುವ ಹಾಗಿಲ್ಲ; ಕಾರ್ಯಕ್ಷಮತೆಯಲ್ಲಿ ಸಮಾಧಾನವಿಲ್ಲದಿದ್ದರೆ ಕೆಲಸದಿಂದ ತೆಗೆಯುತ್ತಾರೆ. ಈ ರೀತಿಯಾಗಿ ಇಂದು ಒಟ್ಟು ಉತ್ಪಾದನೆಯ ಮೌಲ್ಯದಲ್ಲಿ 42%ರಷ್ಟು ಗುತ್ತಿಗೆ ಕಾರ್ಮಿಕರ ಶ್ರಮದ ಪಾಲಿದೆ. ಕೇಂದ್ರ ಸರ್ಕಾರದ ಕನಿಷ್ಠ ವೇತನವು ಅತ್ಯಂತ ಕಡಿಮೆ ಇರುವುದರಿಂದ ಇವರಿಗೆ ಕನಿಷ್ಠ ವೇತನವು 18,000 ದಾಟಿಲ್ಲ.

ಸರ್ಕಾರಿ ಸೇವೆಯಲ್ಲಿಯೂ ಕೂಡಾ ದಿನಗೂಲಿ ನೌಕರರು ಮತ್ತು ICDS ಯೋಜನೆಯಲ್ಲಿದ್ದ ಅಂಗನವಾಡಿ ನೌಕರರು ಮಾತ್ರವೇ ಅಸಂಘಟಿತ ಕಾರ್ಮಿಕರಾಗಿ ಇದ್ದರು. ಗುತ್ತಿಗೆ ಪದ್ಧತಿ ಇರಲಿಲ್ಲ. ನಂತರ ಸರ್ಕಾರಿ ವೆಚ್ಚ ನೌಕರರ ಸಂಬಳ ಸವಲತ್ತುಗಳಿಗೆ ಕಡಿಮೆ ಮಾಡಬೇಕೆಂಬ ಪರಿಕಲ್ಪನೆಯಾಧಾರದಲ್ಲಿ ಹಾರ್ನಳ್ಳಿ ರಾಮಸ್ವಾಮಿ ಮತ್ತು ಸಿ.ಎಸ್. ವಿಜಯಭಾಸ್ಕರ್‌ರವರ “ಆಡಳಿತ ಸುಧಾರಣಾ ಆಯೋಗದ’’ ವರದಿಯ ಪರಿಣಾಮದಿಂದ ರಾಜ್ಯ ಸೇವೆ, ನಿಗಮ, ಮಂಡಳಿಗಳಲ್ಲಿರುವ ಸಿ ಮತ್ತು ಡಿ ಗ್ರೂಪ್ ಹುದ್ದೆಗಳ ರದ್ದತಿ, ನೇಮಕಾತಿ ಸ್ಥಗಿತ, ಹೊಸ ಹುದ್ದೆಗಳ ಸೃಷ್ಟಿಗೆ ನಿರ್ಬಂಧ, ಸ್ವಯಂ ನಿವೃತ್ತಿ, ಕಡ್ಡಾಯ ನಿವೃತ್ತಿಗಳನ್ನು ತಂದ ಪರಿಣಾಮ ಇಂದು 40% ಗಿಂತಲೂ ಹೆಚ್ಚು ಖಾಯಂ ಅಲ್ಲದ ನೌಕರರು ಸೃಷ್ಟಿಯಾಗಿದ್ದಾರೆ. ಮಕ್ಕಳ ಹಕ್ಕುಗಳ ಘಟಕದಂತಹ ‘ಬಿ’ ಗ್ರೂಪ್ ಹುದ್ದೆಗಳು ಕೂಡಾ ಇಂದು ಹೊರಗುತ್ತಿಗೆಯಾಗಿ ಬದಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 1)

ರಾಜ್ಯ ಮತ್ತು ಕೇಂದ್ರ ಸರ್ಕಾರದಡಿಯಲ್ಲಿ ಎಲ್ಲ ಇಲಾಖೆಗಳಲ್ಲಿಯೂ ಖಾಯಂ ನೌಕರರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ, ಅರೆಕಾಲಿಕ, ಹಂಗಾಮಿ, ತಾತ್ಕಾಲಿಕ, ಅತಿಥಿ, ಗೌರವಧನ, ಪ್ರೋತ್ಸಾಹಧನ, ಸಂಭಾವನೆಯ ಹೆಸರಿನಲ್ಲಿ ಲಕ್ಷಾಂತರ ಉನ್ನತ ವ್ಯಾಸಂಗ ಮಾಡಿರುವ ಯುವಕ-ಯುವತಿಯರನ್ನು ದುಡಿಸಲಾಗುತ್ತಿದೆ. ಇವರಿಗೆ ಕಾನೂನು ಬದ್ಧವಾದ ವೇತನಸಹಿತ ರಜೆ, ಹೆರಿಗೆ ರಜೆ, ಇಎಸ್‌ಐ, ಪಿಎಫ್, ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲದೆ, ದುಡಿಸಿಕೊಳ್ಳಲಾಗುತ್ತಿದೆ. ಈ ಜನರಿಗೆ ನಿರ್ದಿಷ್ಟ ಕೆಲಸದ ಅವಧಿ ಹಾಗೂ ಸೇವಾ ನಿಯಮಗಳೇ ಇಲ್ಲವಾಗಿದೆ.

ಇವರು ಸರ್ಕಾರದ ಇಲಾಖೆಗಳಾದ ವಿದ್ಯುತ್ ಉತ್ಪಾದನೆ, ವಿತರಣೆ, ರಸ್ತೆಸಾರಿಗೆ, ಅರಣ್ಯ, ಕೃಷಿ, ಪ್ರವಾಸೋದ್ಯಮ, ಗಣಿ, ಡೈರಿಗಳು, ಕೈಗಾರಿಕಾ ಅಭಿವೃದ್ಧಿ ನಿಗಮ, ಮೂಲಸೌಕರ್ಯ ಅಭಿವೃದ್ಧಿ ನಿಗಮ ಸ್ಥಳೀಯ ಸಂಸ್ಥೆಗಳಾದ ಗ್ರಾಮ-ತಾಲ್ಲೂಕು-ಜಿಲ್ಲಾ ಪಂಚಾಯ್ತಿಗಳಲ್ಲಿ, ಮುನ್ಸಿಪಾಲಿಟಿ-ಕಾರ್ಪೋರೇಷನ್‌ಗಳು, ವಿಶ್ವವಿದ್ಯಾನಿಲಯಗಳು, ಕೃಷಿ-ವಿಶ್ವವಿದ್ಯಾನಿಲಯಗಳು, ಸರ್ವ ಶಿಕ್ಷಣ ಅಭಿಯಾನ, ಎನ್‌ಹೆಚ್‌ಎಂ, ಏಡ್ಸ್ ನಿಯಂತ್ರಣ ಯೋಜನೆಗಳಲ್ಲಿ ದುಡಿಯುವ ಹೊರಗುತ್ತಿಗೆ ನೌಕರರು, ವಿಧಾನಸೌಧ, ವಿಕಾಸಸೌಧ, ಮಲ್ಟಿಸ್ಟೋರ್ ಬಿಲ್ಡಿಂಗ್‌ಗಳಲ್ಲಿ, ಸಾವಿರಾರು ಡಾಟಾ ಎಂಟ್ರಿ ಆಪರೇಟರುಗಳು, ಡ್ರೆವರ್‌ಗಳು, ಕೃಷಿ ಇಲಾಖೆಗಳ ಸಂಪರ್ಕ ಕೇಂದ್ರಗಳಲ್ಲಿ ಅಕೌಂಟಂಟ್‌ಗಳು, ಮಣ್ಣನ್ನು ಪರೀಕ್ಷಿಸುವ ಎಟಿಎಂ-ಪಿಟಿಎಂಗಳು, ರೈತ ಅನುವುಗಾರರಾಗಿ ಈ ಖಾಯಮೇತರ ನೌಕರರನ್ನು ದುಡಿಸಿಕೊಳ್ಳಲಾಗುತ್ತಿದೆ.

ಖಾಯಂ ನೌಕರರು ಮುಂಬಡ್ತಿಯಾಗುವಾಗ, ವರ್ಗಾವಣೆಯಾಗುವಾಗ ಮತ್ತು ಹೊಸ ನೇಮಕಾತಿಯಾಗುವ ಸಂದರ್ಭಗಳಲ್ಲಿ ಈ ಖಾಯಮೇತರ ನೌಕರರು ಎಷ್ಟೇ ವರ್ಷ ಕೆಲಸಮಾಡಿದ್ದರೂ, ಅವರ ದೀರ್ಘಕಾಲದ ಸೇವೆಯನ್ನು ಪರಿಗಣಿಸದೇ, ಸಾಮಾಜಿಕ ಸಹಜ ನ್ಯಾಯದ ಅವಕಾಶಗಳನ್ನು ನೀಡದೇ ಇವರುಗಳನ್ನು ಕೆಲಸದಿಂದ ವಜಾ ಮಾಡುವುದು ಸಾಮಾನ್ಯ ಕ್ರಮವಾಗುತ್ತಿದೆ. ಮಾತ್ರವಲ್ಲದೇ ಗುತ್ತಿಗೆದಾರರು ಬದಲಾದಾಗ ಇದೇ ನೌಕರರು ಮುಂದುವರೆಯಲು ಲಂಚ ಕೊಟ್ಟು ಪುನಃ ಅದೇ ಕೆಲಸದಲ್ಲಿ ಮುಂದುವರೆಯಬೇಕಾದ ದುಃಸ್ಥಿತಿ ಇದೆ.

2024ಮೇ 20ರಂದು ರಾಜ್ಯ ಸರ್ಕಾರ ಹೊರಗುತ್ತಿಗೆ ಕೆಲಸಗಳಲ್ಲಿ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಲು ಮೀಸಲಾತಿಯನ್ನು ಜಾರಿಗೆ ತರುವ ಆದೇಶವನ್ನು ಹೊರಡಿಸಿದೆ. ಇದೇ ಆದೇಶದಲ್ಲಿ ಹೊರಗುತ್ತಿಗೆ ಕಾರ್ಮಿಕರು ಖಾಯಮಾತಿಯನ್ನು ಕೋರುವ ಹಕ್ಕನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಖಾಯಮಿಲ್ಲದ ಉದ್ಯೋಗ ಎಂಬುದೇ ಸಾಮಾಜಿಕ ನ್ಯಾಯದ ವಂಚನೆ ಎಂಬುದನ್ನು ಸರ್ಕಾರ ಮನಗಾಣದಿರುವುದು ಹಾಸ್ಯಾಸ್ಪದವಾಗಿದೆ. ಖಾಲಿ ಇರುವ ಖಾಯಂ ಹುದ್ದೆಗಳನ್ನು ತುಂಬುವ ಬದಲು ಆ ಸ್ಥಾನಗಳಲ್ಲಿ ಖಾಯಮೇತರ ನೌಕರರನ್ನು ತುಂಬುವುದು ಯಾವ ರೀತಿಯ ಸಾಮಾಜಿಕ ನ್ಯಾಯ ಎಂಬ ಸಹಜ ಪ್ರಶ್ನೆಯು ಸಾಮಾನ್ಯ ಜನರಲ್ಲಿ ಕೇಳಿ ಬರುತ್ತಿದೆ. ಈ ಸದ್ಯ ಖಾಲಿಯಿರುವ 2.80 ಲಕ್ಷ ಹುದ್ದೆಗಳನ್ನು ಕೂಡಲೇ ತುಂಬಿಸಲು ಸರ್ಕಾರವು ಕ್ರಮವಹಿಸಬೇಕು. ಈ ಆದೇಶದ ಜಾರಿಯಿಂದಾಗಿ ಈಗಾಗಲೇ ಕೆಲಸ ಮಾಡುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕವು ಇದೆ. ಈಗಾಗಲೇ ಕೆಲಸದಲ್ಲಿರುವ ಬಡ ನೌಕರರ ಉದ್ಯೋಗಕ್ಕೆ ಹಾನಿಯಾಗದಂತೆ ನಿಗಾ ವಹಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ.

ಕಳೆದ 50 ವರ್ಷಗಳಲ್ಲಿ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯೂ ಹೆಚ್ಚಾಗಿದೆ. ಆದರೆ, ಅಸಂಘಟಿತ ವಲಯ ವಿಪರೀತ ಬೆಳೆದಿದೆ. ಕೆಲಸದ ಸ್ವರೂಪದಲ್ಲೂ ಆದ ಈ ಬೆಳವಣಿಗೆಯಿಂದ ಹಿಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಕಾರ್ಮಿಕರು ಹಕ್ಕುಗಳಿಲ್ಲದೇ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿರಿ: ಭಾಷೆ ಮತ್ತು ಲಿಂಗತ್ವ; ಹೆಣ್ಣಿಗಿಲ್ಲವೇ ಸ್ವತಂತ್ರ ಅಸ್ತಿತ್ವ? (ಭಾಗ- 1)

1991ರ ನಂತರ ನವಉದಾರೀಕರಣ ನೀತಿಗಳು ಜಾರಿಯಾದವು. ಈ ನೀತಿಗಳ ಪರಿಣಾಮ ಜಾಗತಿಕ ಉತ್ಪಾದನೆ ಮತ್ತು ಉತ್ಪಾದನೆಯ ಜಾಲಗಳು ಬೆಳವಣಿಗೆಯಾದವು. ಕೃಷಿ ಬಿಕ್ಕಟ್ಟಿನಿಂದ 2004ರಿಂದ 2005ರ ಒಳಗೆ ಕರ್ನಾಟಕವೂ ಸೇರಿದಂತೆ 36.7 ದಶಲಕ್ಷದಷ್ಟು ಜನರು ಕೃಷಿಯಿಂದ ಹೊರ ಬಂದು ದೊಡ್ಡ ಪ್ರಮಾಣದ ನಿರುದ್ಯೋಗದ ಸೈನ್ಯದಂತೆ ತಯಾರಾದರು.

ಉತ್ಪಾದನಾ ವಲಯದಲ್ಲಿ ಸಂಘಟಿತ ಕ್ಷೇತ್ರ ಅಸಂಘಟಿತವಾಗಿ ಮಾರ್ಪಾಡಾಯಿತು. ಉದ್ಯೋಗ ಸಂಬಂಧಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಯಿತು. ಖಾಸಗಿ, ಸಾರ್ವಜನಿಕ ಮತ್ತು ಸರ್ಕಾರಿ ವಿಭಾಗಗಳಲ್ಲಿ ಮಾಲೀಕ ಮತ್ತು ನೌಕರರ ಸಂಬಂಧಗಳು ಬದಲಾದವು. ಸಂಘಟಿತ ಕ್ಷೇತ್ರದಲ್ಲೂ ಅಸಂಘಟಿತ ವಿಭಾಗದ ಕಾರ್ಮಿಕರು ಅಂದರೆ ಅನಿಶ್ಚಿತ ಕೆಲಸದ ಪರಿಸ್ಥಿತಿ, ಕೆಲಸದ ಕರಾರುಗಳಲ್ಲಿ ಭದ್ರತೆ ಇಲ್ಲದ, ಆದಾಯದ ಭದ್ರತೆ ಇಲ್ಲದ ಕಾರ್ಮಿಕರ ಸಂಖ್ಯೆ ಹೆಚ್ಚಾಯಿತು.

ಅಸಂಘಟಿತರ ಕಲ್ಯಾಣ ಕಾರ್ಯಕ್ರಮಗಳು: ಹೋರಾಟಗಳ ಫಲವಾಗಿ ಇಡೀ ಅಸಂಘಟಿತ ವಲಯವನ್ನು ಕವರ್ ಮಾಡುವ ಕೆಲವು ಕಲ್ಯಾಣ ಕಾಯ್ದೆಗಳು ಬಂದವು. ಉದಾಹರಣೆಗೆ, 2008ರ ಅಸಂಘಟಿತ ಕ್ಷೇತ್ರದ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ ಇದೆ. ಇದರಲ್ಲಿ ಮುಖ್ಯವಾಗಿ ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಸಿಗಬೇಕಿತ್ತು. ಆದರೆ ಈ ಮಂಡಳಿಗೆ ಯಾವುದೇ ಹಣಕಾಸು ನೆರವು ಸಿಕ್ಕಿಲ್ಲ. ಅಂಬೇಡ್ಕರ್ ಸಹಾಯ ನಿಧಿಯ ಮುಖಾಂತರ 20 ಅಸಂಘಟಿತ ವರ್ಗಗಳನ್ನು ಸೇರಿಸಲಾಗಿದೆ. ಕೆಲವು ಯೋಜನೆಗಳನ್ನೂ ಜಾರಿಗೆ ತರಲಾಗಿದೆ. ಅಂತಾರಾಷ್ಟ್ರೀಯ ವಲಸೆ ಕಾರ್ಮಿಕರು, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ, ಕರ್ನಾಟಕ ಗಿಗ್ ಕಾರ್ಮಿಕರ ವಿಮಾ ಯೋಜನೆ, ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ, ಆಶಾದೀಪ ಯೋಜನೆ (ಮಾಲೀಕರು ನೇಮಸಿಕೊಂಡ SC, ST ಕಾರ್ಮಿಕರಿಗೆ ESI, PEಗೆ ಖರ್ಚಾದ ಹಣ ಮರುಪಾವತಿ, 1961 ಅಪ್ರಂಟೀಸ್ ಕಾಯ್ದೆಗೆ ಮಾಸಿಕ ಶಿಷ್ಯ ವೇತನದಲ್ಲಿ ಮಾಸಿಕ 5000 ಹಣ ಮರುಪಾವತಿ, ಅಪ್ರಂಟೀಸ್ ತರಬೇತಿ ಪೂರ್ಣಗೊಂಡ ನಂತರ 2 ವರ್ಷಗಳ ಅವಧಿಗೆ 7000 ಮರುಪಾವತಿ, ಹೊಸದಾಗಿ ಖಾಯಂ ಹುದ್ದೆಗೆ ನೇಮಕಗೊಂಡ SC, ST ಅಭ್ಯರ್ಥಿಗಳಿಗೆ 2 ವರ್ಷಕಾಲ 6000 ರೂಗಳ ಮರುಪಾವತಿ) ಈ ಯೋಜನೆಯಲ್ಲಿ SC, ST ಅಭ್ಯರ್ಥಿಗಳ ನೇಮಕಾತಿ ಉತ್ತೇಜಿಸುವ ಯೋಜನೆ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ (PM-SYM). ನಿವೃತ್ತಿಯ ನಂತರ 3000 ರೂ. ಪಿಂಚಣಿ, ಇದನ್ನು ಪಡೆಯಲು ಬೇರೆ ಯಾವುದೇ ಯೋಜನೆಗಳಲ್ಲಿರಬಾರದು. ಇದು ರಾಜ್ಯ-ಕೇಂದ್ರ ಸರ್ಕಾರಗಳ ಸಮಾನಾಂತರ ವಂತಿಗೆಯಿಂದ 60 ವರ್ಷದ ನಂತರ ಸವಲತ್ತು ಸಿಗುತ್ತದೆ ಎಂದು ಹೇಳಲಾಗುತ್ತದೆ.

ನ್ಯೂ ಪೆನ್ಷನ್ ಸ್ಕೀಮ್ ಫಾರ್ ಟ್ರೇಡರ್ಸ್‌ ಆ್ಯಂಡ್ ಸೆಲ್ಪ್ ಎಂಪ್ಲಾಯ್ಡ್ ಪರ್ಸನ್ಸ್: ಸ್ವಯಂ ವೃತ್ತಿಯಲ್ಲಿ ತೊಡಗಿರುವವರಿಗೆ ಈ ಎಲ್ಲ ಯೋಜನೆಗಳು ಅಕರ್ಷಕವಾಗಿವೆ, ಆದರೆ ಇದರ ಸೌಲಭ್ಯ ಕೈಗೆಟುಕುವುದಿಲ್ಲ. ಈ ಎಲ್ಲ ಯೋಜನೆಗಳಲ್ಲಿ ಇರುವ ಆ ವಿಭಾಗದ ಜನರು ಅಪಘಾತದಲ್ಲಿ ನಿಧನರಾದರೆ, ಕೆಲವು ಯೋಜನೆಗಳಲ್ಲಿ ನಿವೃತ್ತಿಯಾದರೆ(?) ಈ ಸವಲತ್ತುಗಳು ಸಿಗುತ್ತವೆ. ಉದಾಹರಣೆಗೆ ಸ್ವಯಂ ನಿವೃತ್ತಿಯಲ್ಲಿರುವವರಿಗೆ, ಆಟೋ ಡ್ರೈವರ್‌ಗಳಿಗೆ ನಿವೃತ್ತಿ ಮಾಡುವವರು ಯಾರು? ಎಂಬ ಪ್ರಶ್ನೆ ಇದೆ. ಪ್ರಭುತ್ವಗಳು ಕಲ್ಯಾಣ ಕಾರ್ಯಕ್ರಮದ ಹೆಸರಿನಲ್ಲಿ ತಮ್ಮ ಶ್ರಮವನ್ನು ಹಾಕುವ ಬದಲಿಗೆ ಈಗಾಗಲೇ ಇರುವ ಕಾನೂನುಗಳನ್ನು ಹೇಗೆ ವಿಸ್ತರಿಸಬೇಕು ಎಂಬ ಚರ್ಚೆಯನ್ನು ಗಹನವಾಗಿ ಮಾಡಬೇಕಿದೆ. 2008ರ ಸಾಮಾಜಿಕ ಭದ್ರತಾ ಕಾಯ್ದೆಯನ್ನು ಜೀವಂತಗೊಳಿಸಲು ಇ ಪೋರ್ಟಲ್‌ನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ, ನರೇಗಾದಲ್ಲಿ ನೊಂದಣಿಯಾಗಿರುವ ಕಾರ್ಮಿಕರಿಗೆ ಮೊದಲ ಆದ್ಯತೆಯಾಗಿ ಪಿಂಚಣಿ, ಅವರ ಮಕ್ಕಳಿಗೆ ಸ್ಕಾಲರ್‌ಶಿಪ್, ಅಪಘಾತದ ಪರಿಹಾರ, ಮರಣ ಪರಿಹಾರ ಮತ್ತು ಆ ವಿಭಾಗಗಳಲ್ಲಿ ನಿಗದಿತ ಕೆಲಸ, ಕೆಲಸದ ಖಾತ್ರಿ, ಕೆಲಸಕ್ಕೆ ತಕ್ಕನಾದ ಕನಿಷ್ಠ ವೇತನವನ್ನು ಖಾತ್ರಿಗೊಳಿಸಿದರೆ ಸದ್ಯಕ್ಕೆ ದೊಡ್ಡ ಪರಿಹಾರ ಈ ಕಾರ್ಮಿಕರಿಗೆ ಸಿಗುತ್ತದೆ. ಹಾಗೆಯೇ ಗುತ್ತಿಗೆ ಕಾರ್ಮಿಕರ ಶೋಷಣೆಯನ್ನು ತಪ್ಪಿಸಲು, ಗುತ್ತಿಗೆ ಪದ್ಧತಿಯಲ್ಲಿರುವ ಏಜೆಂಟ್‌ಗಳ ಕಾಟ ತಪ್ಪಿಸಲು “ಕನ್ಫರ್ಮೆಂಟ್ ಆಫ್ ಪರ್ಮೆನೆಂಟ್ ಸ್ಟೇಟಸ್ ಟು ಟೆಂಪರರಿ ವರ್ಕಮೆನ್’’ ಕಾಯ್ದೆ ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿದೆ. ಇದನ್ನು ಜಾರಿಗೊಳಿಸಬೇಕು. ಸಮಾನ ಕೆಲಸಕ್ಕೆ-ಸಮಾನ ವೇತನ ನೀಡಬೇಕು. ಈಗಾಗಲೇ ಇರುವ ಗುತ್ತಿಗೆ ಕಾರ್ಮಿಕ ಸಂಘಗಳೊಂದಿಗೆ ಒಪ್ಪಂದಗಳನ್ನು ಮಾಡುವ ಕ್ರಮ ಜಾರಿಯಾಗಬೇಕು. ಸರ್ಕಾರಿ ವಲಯದ ಖಾಯಂ ಅಲ್ಲದ ನೌಕರರನ್ನು ಖಾಯಂ ಮಾಡಲು “ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿ’’ಗಳಿಗೆ ತಿದ್ದುಪಡಿ ತರಬೇಕು. ಇದನ್ನು ಜಾರಿ ಮಾಡಿದರೆ ಸ್ವಲ್ಪ ಮಟ್ಟಿಗೆ ಕರ್ನಾಟಕದಲ್ಲಿ ಈ ಎರಡು ವಿಭಾಗಗಳ ಕಾರ್ಮಿಕರಿಗೆ/ನೌಕರರಿಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯವಾಗುತ್ತದೆ.

ಇನ್ನು ಸ್ಕೀಮುಗಳಲ್ಲಿ ಕೆಲಸ ಮಾಡುವ ಅಂಗನವಾಡಿ, ಬಿಸಿಯೂಟ & ಆಶಾ ನೌಕರರನ್ನು ಕನಿಷ್ಠ ವೇತನ ಕಾಯ್ದೆಯಡಿ ಅಥವಾ ವೇತನಾ ಆಯೋಗಗಳಡಿ ತರಬೇಕು. ಈ ಯೋಜನೆಗಳನ್ನು ಖಾಯಂ ಮಾಡುವ ಕಾಯ್ದೆಗಳನ್ನು ತರಬೇಕು. ಅದಕ್ಕಾಗಿ ದೀರ್ಘಾವದಿ ಹೋರಾಟಗಳು, ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗಬೇಕಿದೆ. ಇತ್ತೀಚೆಗೆ ಗಿಗ್ ಕಾರ್ಮಿಕರ ವಿಚಾರವಾಗಿ ಪ್ರಜ್ಞಾವಂತರೂ ಸೆಲೆಬ್ರೆಟಿಗಳು ಸಹ ಅಲ್ಲಲ್ಲಿ ದನಿಯೆತ್ತುತ್ತಿದ್ದಾರೆ. ಇದು ಮತ್ತಷ್ಟು ಹೆಚ್ಚಾಗಿ ನಿರಂತರವಾಗಿ ನಡೆದಾಗ ಮಾತ್ರ ಕಾರ್ಮಿಕರ ಬವಣೆಗಳು ನೀಗಲು ಸಾಧ್ಯ. ಅಲ್ಲದೇ ಅವರು ತಕ್ಕಮಟ್ಟಿಗೆ ನೆಮ್ಮದಿಯಿಂದ ದುಡಿದು ಬದುಕಲು ಸಾಧ್ಯ. ಇದು ದೇಶದ ಆರ್ಥಿಕ ಬೆಳವಣಿಗೆಯನ್ನು ಸ್ಥಿರವಾಗಿಸುವ ಜೊತೆಗೆ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ, ಹ್ಯಾಪಿನೆಸ್ ಇಂಡೆಕ್ಸ್‌ನಲ್ಲಿ ಭಾರತ ಮೇಲೆ ಬರಲು ಸಾಧ್ಯ. ಆ ಮೂಲಕ ನಿಜವಾದ ಅಭಿವೃದ್ಧಿಯ ದಿಕ್ಕಿನೆಡೆಗೆ ಸಾಗಬಹುದು. ಆಗಷ್ಟೇ ಕರ್ನಾಟಕದಲ್ಲಿ ಸದ್ಯಕ್ಕಿರುವ ತಾರತಮ್ಯ ಹೋಗಲಾಡಿಸಿ ಸಮತೆಯ ಬೀಡನ್ನಾಗಿಸಲು ಸಾಧ್ಯ.

ಇದನ್ನೂ ಓದಿರಿ: ಭಾಷೆ ಮತ್ತು ಲಿಂಗತ್ವ; ಹೆಣ್ಣಿಗಿಲ್ಲವೇ ಸ್ವತಂತ್ರ ಅಸ್ತಿತ್ವ? (ಭಾಗ- 2)

ವರಲಕ್ಷ್ಮಿಯವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಎಂಬ ಊರಿನವರು. ವಯಸ್ಕರ ಶಿಕ್ಷಣ ಯೋಜನೆಯಡಿ ಪಾಠ ಮಾಡುತ್ತಿದ್ದ ಅವರು ಜೀವನೋಪಾಯಕ್ಕಾಗಿ ಗಾರ್ಮೆಂಟ್ಸ್ ಸೇರಿದರು. ಅಲ್ಲಿ ವೇತನ ತಾರತಮ್ಯ ಪ್ರಶ್ನಿಸಿ ಹೋರಾಟ ನಡೆಸಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡರು. ನಂತರ 1994ರಲ್ಲಿ ಅಂಗನವಾಡಿ ನೌಕರರ ಸಂಘ ಸ್ಥಾಪಿಸಿದ ಅವರು ಸದ್ಯ 128 ತಾಲ್ಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರ ಹೋರಾಡುತ್ತಿದ್ದಾರೆ. ಸಿಐಟಿಯು ಕಾರ್ಮಿಕ ಸಂಘಟನೆಯ ನಾಯಕಿಯಾಗಿರುವ ಅವರು 2 ದಶಕಕ್ಕೂ ಹೆಚ್ಚು ಕಾಲ ಹತ್ತಾರು ಯಶಸ್ವಿ ಹೋರಾಟಗಳನ್ನು ಮುನ್ನಡೆಸಿದ್ದಾರೆ.

(ಮುಗಿಯಿತು)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

s varalaskhmi
ಎಸ್. ವರಲಕ್ಷ್ಮಿ
+ posts

ವರಲಕ್ಷ್ಮಿಯವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಎಂಬ ಊರಿನವರು. ವಯಸ್ಕರ ಶಿಕ್ಷಣ ಯೋಜನೆಯಡಿ ಪಾಠ ಮಾಡುತ್ತಿದ್ದ ಅವರು ಜೀವನೋಪಾಯಕ್ಕಾಗಿ ಗಾರ್ಮೆಂಟ್ಸ್ ಸೇರಿದರು. ಅಲ್ಲಿ ವೇತನ ತಾರತಮ್ಯ ಪ್ರಶ್ನಿಸಿ ಹೋರಾಟ ನಡೆಸಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡರು. ನಂತರ 1994ರಲ್ಲಿ ಅಂಗನವಾಡಿ ನೌಕರರ ಸಂಘ ಸ್ಥಾಪಿಸಿದ ಅವರು ಸದ್ಯ 128 ತಾಲ್ಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರ ಹೋರಾಡುತ್ತಿದ್ದಾರೆ. ಸಿಐಟಿಯು ಕಾರ್ಮಿಕ ಸಂಘಟನೆಯ ನಾಯಕಿಯಾಗಿರುವ ಅವರು 2 ದಶಕಕ್ಕೂ ಹೆಚ್ಚು ಕಾಲ ಹತ್ತಾರು ಯಶಸ್ವಿ ಹೋರಾಟಗಳನ್ನು ಮುನ್ನಡೆಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಎಸ್. ವರಲಕ್ಷ್ಮಿ
ಎಸ್. ವರಲಕ್ಷ್ಮಿ
ವರಲಕ್ಷ್ಮಿಯವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಎಂಬ ಊರಿನವರು. ವಯಸ್ಕರ ಶಿಕ್ಷಣ ಯೋಜನೆಯಡಿ ಪಾಠ ಮಾಡುತ್ತಿದ್ದ ಅವರು ಜೀವನೋಪಾಯಕ್ಕಾಗಿ ಗಾರ್ಮೆಂಟ್ಸ್ ಸೇರಿದರು. ಅಲ್ಲಿ ವೇತನ ತಾರತಮ್ಯ ಪ್ರಶ್ನಿಸಿ ಹೋರಾಟ ನಡೆಸಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡರು. ನಂತರ 1994ರಲ್ಲಿ ಅಂಗನವಾಡಿ ನೌಕರರ ಸಂಘ ಸ್ಥಾಪಿಸಿದ ಅವರು ಸದ್ಯ 128 ತಾಲ್ಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರ ಹೋರಾಡುತ್ತಿದ್ದಾರೆ. ಸಿಐಟಿಯು ಕಾರ್ಮಿಕ ಸಂಘಟನೆಯ ನಾಯಕಿಯಾಗಿರುವ ಅವರು 2 ದಶಕಕ್ಕೂ ಹೆಚ್ಚು ಕಾಲ ಹತ್ತಾರು ಯಶಸ್ವಿ ಹೋರಾಟಗಳನ್ನು ಮುನ್ನಡೆಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...