(ಮುಂದುವರಿದ ಭಾಗ..) ಕಳೆದ ಐದು ದಶಕಗಳಲ್ಲಿ ಕ್ರೈಸ್ತ ಕೊಂಕಣಿಯ ಸುಗಮ ಸಂಗೀತ ಕ್ಷೇತ್ರವು ಹುಲುಸಾಗಿ ಬೆಳೆಯುತ್ತಿದೆ. ವಿದೇಶಗಳಲ್ಲೂ ಕಾರ್ಯಕ್ರಮಗಳು ನಡೆಯುತ್ತಿವೆ. ಬಹಳಷ್ಟು ಸಂಗೀತ ಆಲ್ಬಂಗಳೂ ಜನಪ್ರಿಯವಾಗುತ್ತಿವೆ. ಕೊಂಕಣಿ ಮತ್ತು ತುಳು ಭಾಷೆಗಳಲ್ಲಿ ಹಾಡಿ ದಂತಕತೆಯಾಗಿದ್ದ ವಿಲ್ಫಿ ರೆಬಿಂಬಸ್ ಮೊದಲಾದವರು ಇದಕ್ಕೆ ಅಡಿಪಾಯ ಹಾಕಿದವರು. ಕೊಂಕಣಿ ನಾಟಕ ರಂಗದಲ್ಲಿಯೂ ಕ್ರೈಸ್ತರದ್ದೇ ಕಾರುಬಾರು. 60, 70, 80ರ ದಶಕಗಳಲ್ಲಿ ಮಂಗಳೂರಿನ ಡಾನ್‌ಬೋಸ್ಕೋ ಹಾಲ್ ಕೊಂಕಣಿ ನಾಟಕಗಳಿಗೇ ಮೀಸಲಾಗಿದೆಯೊ ಎಂಬಂತಿದ್ದು, ಈಗ ಕಡಿಮೆಯಾಗಿದ್ದರೂ, ನಾಟಕಗಳು, ಟಿವಿ ಸೀರಿಯಲ್‌ಗಳು ಬರುತ್ತಲೇ ಇವೆ.
ಕೊಂಕಣಿ ಸಿನೆಮಾರಂಗದಲ್ಲೂ ಗೋವಾ ಬಿಟ್ಟರೆ, ಇಲ್ಲಿನ ಕ್ರೈಸ್ತರೇ ಇರುವುದು. ತುಳು ಚಿತ್ರರಂಗದಷ್ಟು ಜೋರಾಗಿ ಇಲ್ಲದಿದ್ದರೂ, ಜೀವಂತ ಇದೆ. 1949ರಲ್ಲಿ ಗೋವಾದಲ್ಲಿ “ಸುಖೀ ಕೋಣ್” ಎಂಬ ಕೊಂಕಣಿ ಚಿತ್ರ ತಯಾರಾಗಿದ್ದರೂ, ಬಿಡುಗಡೆ ಆಗಿರಲಿಲ್ಲ. 1975ರ “ಬೋಗ್ಳಾಂತ್” ಚಿತ್ರದಲ್ಲಿ ಕರ್ನಾಟಕ ಮತ್ತು ಗೋವದ ಕ್ರೈಸ್ತರೇ ಇದ್ದರು. ಬಹುಶಃ 1977ರ “ಮೋಗ್ ಅಣಿ ಮಯ್ಪಾಸ್” ಎಂಬ ಕೊಂಕಣಿ ಚಿತ್ರವೇ ಕರಾವಳಿ ಕರ್ನಾಟಕದ ಕ್ರೈಸ್ತರು ತಯಾರಿಸಿದ ಮೊದಲ ಚಿತ್ರ ಎಂದು ನನ್ನ ಅನಿಸಿಕೆ. ಇಲ್ಲಿ ಚಿತ್ರ ನಿರ್ಮಾಪಕ ರಿಚರ್ಡ್ ಕ್ಯಾಸ್ಟಲಿನೊ ಅವರನ್ನು ನೆನಪಿಸಬೇಕಾಗಿಲ್ಲ! ಒಂದೇ ದಿನದಲ್ಲಿ ಶೂಟಿಂಗ್ ನಡೆಸಿ, ಒಂದು ರೀತಿಯ ವಿಶ್ವದಾಖಲೆ ಸ್ಥಾಪಿಸಿದ್ದ “ಸೆಪ್ಟೆಂಬರ್ 8” ಎಂಬ ಚಿತ್ರದಲ್ಲಿ ವಯೋವೃದ್ಧರಾಗಿದ್ದ ಡಾ. ಶಿವರಾಮ ಕಾರಂತರನ್ನೇ ಚಿತ್ರಕ್ಕೆ ಎಳೆದುತಂದದ್ದು ಅದಕ್ಕಿಂತ ದೊಡ್ಡ ಸಾಧನೆ.
ಕಳೆದ ಐವತ್ತು ವರ್ಷಗಳಲ್ಲಿ ಇನ್ನೊಂದು ಬೆಳವಣಿಗೆಯನ್ನು ಗುರುತಿಸಲೇಬೇಕು. ಅದೆಂದರೆ, ಕ್ರೈಸ್ತ ಹೆಸರು, ಕುಲನಾಮಗಳ ಜೊತೆಗೆ ಧಾರ್ಮಿಕವಲ್ಲದ ಭಾರತೀಯ ಹೆಸರುಗಳನ್ನು ಇಡುವುದು. ಉದಾಹರಣೆಗೆ ದೇವಾನಂದ ಕರ್ಕಡ, ಮೇರಿ ಸುಶೀಲ, ರೋಶನ್ ವಲೇರಿಯನ್ ಸಿಕ್ವೇರ, ಜ್ಯೋತಿ ಮರೀನಾ ಪಿಂಟೋ ಇತ್ಯಾದಿ ಹೆಸರುಗಳು ಸಾಮಾನ್ಯ. ಸಾಂಪ್ರದಾಯಿಕತೆಯ ನಡುವೆ ಇದೇನೂ ಸಾಮಾನ್ಯ ವಿಷಯವಲ್ಲ. ಅದು ಸೌಹಾರ್ದವನ್ನೂ, ನೆಲದ ನಂಟನ್ನೂ ಸೂಚಿಸುತ್ತದೆ.
ಇಡೀ ಜಿಲ್ಲೆಗಳಿಗೆ ಕಳಂಕ ತಂದ ಘಟನೆಗಳು ಎಂದರೆ, ಹಿಂದುತ್ವವಾದಿ ಸಂಘಟನೆಗಳು ಚರ್ಚುಗಳ ಮೇಲೆ ನಡೆಸಿದ ಹಿಂಸಾತ್ಮಕ ದಾಳಿಗಳು. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ, 2008ರ ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಬಜರಂಗದಳ ಮತ್ತು ಶ್ರೀರಾಮ ಸೇನೆಯ ಸದಸ್ಯರು ಮಂಗಳೂರು, ಸುರತ್ಕಲ್ , ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಚರ್ಚ್‌ಗಳು, ಪೂಜಾಸ್ಥಳಗಳ ಮೇಲೆ ಬಿಜೆಪಿ ಸರಕಾರದ ಕೃಪಾಶ್ರಯದಲ್ಲಿ ನಡೆಸಿದ ಹೇಯ ದಾಳಿಗಳು ಅಂತಾರಾಷ್ಟ್ರೀಯ ಸುದ್ದಿಯಾಗಿದ್ದವು. ಕಾರ್ಕಳದಲ್ಲಂತೂ 2008, ಸೆಪ್ಟೆಂಬರ್ 18ರಂದು ಪೊಲೀಸರು ಕ್ರೈಸ್ತರ ಪ್ರತಿಭಟನೆಗೆ ನುಗ್ಗಿ, ಬಿಜೆಪಿಯ ಗೂಂಡಾಗಳಂತೆ ವರ್ತಿಸಿ, ಬ್ರಿಟಿಷರಿಗಿಂತ ನಿರ್ದಯವಾಗಿ ಹೆಂಗಸರು, ಮಕ್ಕಳೆನ್ನದೇ ಥಳಿಸುವ ದೃಶ್ಯ ಎಲ್ಲೆಡೆ ಹರಡಿತ್ತು. ಈ ಘಟನೆಯಲ್ಲಿ 150ರಷ್ಟು ಜನರನ್ನು ಬಂಧಿಸಲಾಗಿತ್ತು ಮತ್ತು 40ರಷ್ಟು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇಲ್ಲಿ ಈ ಕುರಿತು ವಿವರಗಳನ್ನು ನೀಡುವುದಿಲ್ಲ. ಬಾಂಬೆ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎಂ.ಎಫ್. ಸಲ್ದಾನ ಅವರು 2011ರ ಸೆಪ್ಟೆಂಬರ್ 18ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಎಲ್ಲಾ ವಿವರಗಳಿವೆ.
ಇಷ್ಟಾದರೂ, ಸ್ವಾರ್ಥಿ ಉದ್ಯಮಿಯೊಬ್ಬನ ಹಣಬಲದಿಂದ ಕೆಲವು ಲಾಲಸಿ ಕ್ರೈಸ್ತರು ಬಿಜೆಪಿಯ ಬಾಲ ಹಿಡಿದ್ದಾರೆ. ಅವರಲ್ಲಿ ಕೆಲವರು ಸೋಲಲೆಂದೇ ಸ್ಪರ್ಧಿಸಿದ್ದ ಪರಿಣಾಮವಾಗಿ, ಕಳೆದ ಮಂಗಳೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲೂ ಕ್ರೈಸ್ತ “ಪಕ್ಷೇತರ” ಅಭ್ಯರ್ಥಿಗಳು ನಿಂತು, ಬಿಜೆಪಿಗೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ರಾಜ್ಯದ ಕ್ರೈಸ್ತರ ಅಂದರೆ, ಸಂಖ್ಯೆಯ ಆಧಾರದಲ್ಲಿ ಕರಾವಳಿ ಕ್ರೈಸ್ತರ ರಾಜಕೀಯ ಸಾಧನೆಗಳನ್ನೂ, ಅದರ ದೌರ್ಬಲ್ಯಗಳನ್ನೂ, ಪ್ರಸ್ತುತ ಚಿತ್ರಣಗಳನ್ನೂ ನೋಡೋಣ.
ಇದನ್ನೂ ಓದಿರಿ: ಕರ್ನಾಟಕಕ್ಕೆ ಕ್ರೈಸ್ತರು ಕೊಟ್ಟ ಕೊಡುಗೆಗಳ ಮರೆಯಲಾದೀತೆ? (ಭಾಗ- 1)
ರಾಜಕೀಯ ರಂಗದಲ್ಲೂ ರಾಜ್ಯದ, ಅದರಲ್ಲೂ ಕರಾವಳಿಯ ಕ್ರೈಸ್ತರು ಹಿಂದೆ ಬಿದ್ದಿಲ್ಲ. ಹಾಗೆ ನೋಡಿದರೆ, ಮಂಗಳೂರಿನಲ್ಲಿ ಮೊದಲ ಮುನಿಸಿಪಾಲಿಟಿ ಸ್ಥಾಪಿಸಿದ್ದೇ ಬಾಸೆಲ್ ಮಿಶನ್‌ನವರು. ಕರ್ನಾಟಕ ಮೊದಲ ಪ್ರಮುಖ ಕ್ರೈಸ್ತ ರಾಜಕಾರಣಿ ಎಂದರೆ ಬಹುಶಃ ಉಡುಪಿ ಕ್ಷೇತ್ರದಿಂದ ನಾಲ್ಕನೇ ಲೋಕಸಭೆಗೆ ಸ್ವತಂತ್ರ ಪಾರ್ಟಿಯಿಂದ ಚುನಾಯಿತರಾಗಿದ್ದ ಜೆ.ಎಂ. ಲೋಬೋಪ್ರಭು. ಕೇಂದ್ರ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರು ಮಂಗಳೂರು ಮೂಲದವರೆಂಬುದನ್ನು ಇಲ್ಲಿ ನೆನಪಿಸಬಹುದು. ಮುಂಬಯಿಯಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಪ್ರಬಲ ಕಾರ್ಮಿಕ ನಾಯಕರಾಗಿದ್ದ ಅವರು, ಕನ್ನಡ, ತುಳು, ಕೊಂಕಣಿ ಬಲ್ಲವರಾಗಿದ್ದರೂ, ಕರ್ನಾಟಕದಿಂದ ಎಂದೂ ರಾಜಕೀಯ ಮಾಡಲಿಲ್ಲ! ಕೊನೆಯ ದಿನಗಳಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ ಅವರು, ಕರ್ನಾಟಕದ ಕ್ರೈಸ್ತರು ಇಟ್ಟಿದ್ದ ಅತೀವ ಅಭಿಮಾನವನ್ನು ಕಳೆದುಕೊಂಡರು.

ಕರ್ನಾಟಕದಲ್ಲಿ ಮೊದಲ ಕ್ಯಾಬಿನೆಟ್ ಸಚಿವರೆಂದರೆ ಪಿ.ಎಫ್. ರೋಡ್ರಿಗಸ್. 1976ರಲ್ಲಿ ಮಂಗಳೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ, ಪ್ರಚಾರ ಎಂದರೆ ದೂರ ಓಡುತ್ತಿದ್ದ ವಕೀಲ ರೋಡ್ರಿಗಸ್ ಅವರು, ದೇವರಾಜ ಅರಸು ಸಂಪುಟದಲ್ಲಿ ವಸತಿ, ಬಂದರು ಮತ್ತು ಮೀನುಗಾರಿಕಾ ಸಚಿವರಾದರು. ಇವರ ಅವಧಿಯಲ್ಲಿಯೇ ಮಂಗಳೂರಿನ ಮಂಗಳಾ ಸ್ಟೇಡಿಯಂ, ಹೊಸ ಕೆಸ್‌ಆರ್‌ಟಿಸಿ ಬಸ್ ನಿಲ್ದಾಣ ಇತ್ಯಾದಿ ಅಭಿವೃದ್ಧಿ ಕಾರ್ಯಗಳು ನಡೆದದ್ದು.
ಮಂಗಳೂರಿನ ಜೋಕಿಂ ಆಳ್ವ ಮತ್ತು ಅವರ ಪತ್ನಿ ವಯಲೆಟ್ ಆಳ್ವ ಅವರು 50-60ರ ದಶಕಗಳಲ್ಲೇ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದರು ಎಂಬುದು ಗಮನಾರ್ಹ. ಅವರಲ್ಲಿ ವಯಲೆಟ್ ಆಳ್ವ ಅವರು 1960ರಲ್ಲಿ ರಾಜ್ಯಸಭಾ ಉಪಾಧ್ಯಕ್ಷರೂ ಆಗಿದ್ದರು. ಅವರ ಸೊಸೆಯೇ ಮಾರ್ಗರೆಟ್ ನಾಜರೆತ್ ಆಳ್ವ. 1969ರಲ್ಲಿ ಅತ್ತೆ ವಯಲೆಟ್ ಅವರ ನಿಧನದ ನಂತರ ರಾಜಕೀಯಕ್ಕೆ ಬಂದರು. 1974ರಲ್ಲಿ ರಾಜ್ಯಸಭೆಯ ಸದಸ್ಯರಾದ ಅವರು ನಂತರ ನಿರಂತರ ಮೂರು ಬಾರಿ 1980, 86 ಮತ್ತು 92ರಲ್ಲಿ ಪುನರಾಯ್ಕೆಯಾದರು. 1984-85ರಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿ ರಾಜ್ಯ ಸಚಿವೆಯೂ ಆಗಿದ್ದರು. 1983 ಮತ್ತು 85ರಲ್ಲಿ ಅತ್ತೆಯಂತೆಯೇ ರಾಜ್ಯಸಭಾ ಉಪಾಧ್ಯಕ್ಷರೂ ಆದರು. ಮತ್ತೊಮ್ಮೆ 1991 ಮತ್ತು 1993-94ರಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವೆಯಾದರು. ಅವರ ಮೇರು ಸಾಧನೆ ಎಂದರೆ, 1999ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದು, ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದು. ಆದರೆ, ಅವರ ದೊಡ್ಡ ಕೊಡುಗೆ ಎಂದರೆ, ರಾಜೀವ್ ಗಾಂಧಿ ಅವರ 28 ಅಂಶಗಳ ಮಕ್ಕಳು ಮತ್ತು ಮಹಿಳಾ ಸಶಕ್ತೀಕರಣ ಕಾರ್ಯಕ್ರಮದ ಮೇಲುಸ್ತುವಾರಿಯಾಗಿ ಮೊದಲ ಬಾರಿಗೆ ಮಹಿಳೆಯರಿಗೆ 33 ಶೇಕಡಾ ಮೀಸಲಾತಿಯ ಪ್ರಸ್ತಾಪ ಎತ್ತಿದ್ದು. 1983ರಲ್ಲಿ ಅವರು ಸಲ್ಲಿಸಿದ್ದ 33 ಶೇಕಡಾ ಮೀಸಲಾತಿ ಪ್ರಸ್ತಾಪ, 1993ರಲ್ಲಿ ಕಾನೂನಾಯಿತು. ಅವರೇ ರಾಜಕೀಯವಾಗಿ ಅತ್ಯಂತ ಉನ್ನತಿಗೇರಿದ ಕ್ರೈಸ್ತ, ಅಷ್ಟೇ ಏಕೆ, ಕರ್ನಾಟಕದ ಮಹಿಳೆ ಎನ್ನಬಹುದು.
ಇನ್ನೊಬ್ಬರು ಆಸ್ಕರ್ ಫೆರ್ನಾಂಡಿಸ್-ಪ್ರಭು. ಉಡುಪಿ ಕ್ಷೇತ್ರದಿಂದ 1980, 1984, 1989, 1991 ಮತ್ತು 1996ರವರೆಗೆ ಸತತವಾಗಿ ಐದು ಬಾರಿ ಲೋಕಸಭೆಗೆ ಆಯ್ಕೆಯಾದ ಸಾಧನೆ ಇವರದ್ದು. ನಂತರ 1998 ಮತ್ತು 2004ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಗಾಂಧಿ ಕುಟುಂಬದ ಆಪ್ತರೆನಿಸಿಕೊಂಡ ಅವರು ಆರಂಭದ ವರ್ಷಗಳಲ್ಲಿ ಸಚಿವರಾಗುವುದಕ್ಕಿಂತ ಪಕ್ಷದ ಸಂಘಟನೆ ಮತ್ತು ಧೋರಣೆಗಳ ಅನುಷ್ಠಾನದಲ್ಲೇ ನಿರತರಾಗಿದ್ದುದರಿಂದ ಸಚಿವರುಗಳಿಗಿಂತಲೂ ಪ್ರಭಾವಿಯಾಗಿದ್ದರು. ಕೊನೆಗೆ, 2004-09ರಲ್ಲಿ ಕಾರ್ಯಕ್ರಮ ಅನುಷ್ಠಾನ ಸ್ವತಂತ್ರ ರಾಜ್ಯ ಸಚಿವ ಮತ್ತು 2013-2014ರಲ್ಲಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಸಜ್ಜನಿಕೆ, ಪ್ರಭಾವಿ ಮೊಗವೀರರೂ ಸೇರಿದಂತೆ ಎಲ್ಲರ ಜೊತೆಗೂ ಆಪ್ತ ಸಂಬಂಧ ಇವರ ಯಶಸ್ಸಿಗೆ ಕಾರಣ. ಇವರ ಮರಣಾನಂತರವೇ ಮೊಗವೀರರು ಬಿಜೆಪಿ ತೆಕ್ಕೆಗೆ ಸೇರಿ, ಅದು ಬಹಳ ಪ್ರಭಾವಿಯಾಯಿತು ಎಂಬುದು ರಾಜಕೀಯವಾಗಿ ಗಮನಾರ್ಹ.
ಇನ್ನೊಬ್ಬರು ಗಮನಾರ್ಹ ವ್ಯಕ್ತಿಯೆಂದರೆ ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್. ಬಾಲ್ಯದಲ್ಲಿಯೇ ರಾಜ್ಯಕ್ಕೆ ಬಂದಿದ್ದ ಕೇಳಚಂದ್ರ ಜೋಸೆಫ್ ಜಾರ್ಜ್, ವೀರೇಂದ್ರ ಪಾಟೀಲ್ ಸರಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವರಾದರು. ಎಸ್. ಬಂಗಾರಪ್ಪ ಸರಕಾರದಲ್ಲಿ ಅವರು ವಸತಿ ಮತ್ತು ನಗರಾಭಿವೃದ್ಧಿ ಸಚಿವರೂ, ನಂತರ ಕುಮಾರಸ್ವಾಮಿ ಸರಕಾರದಲ್ಲಿ ದೊಡ್ಡ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮತ್ತು ಬೆಂಗಳೂರು ಅಭಿವೃದ್ಧಿ ಮತ್ತು ಯೋಜನಾ ಸಚಿವರೂ ಆದರು. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಅವರು ಗೃಹ ಸಚಿವರಾಗಿದ್ದರು.
ಇದನ್ನೂ ಓದಿರಿ: ‘ಕರ್ನಾಟಕ, ಕ್ರಿಕೆಟ್ ಮತ್ತು ನಾನು’: ಯೋಗೇಂದ್ರ ಯಾದವ್ ನೆನಪುಗಳು
ಮಂಗಳೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಬ್ಲೇಸಿಯಸ್ ಡಿಸೋಜ, 1991ರಲ್ಲಿ ವೀರಪ್ಪ ಮೊಯ್ಲಿ ಸರಕಾರದಲ್ಲಿ ಕಾನೂನು ಸಚಿವರಾದರು. ಆಗ ತಿಂಗಳಲ್ಲಿ ಸರಾಸರಿ 25,000 ಕಡತಗಳ ವಿಲೇವಾರಿ ಮಾಡಿಸಿದ್ದು ಒಂದು ದಾಖಲೆ. 1992ರಿಂದ 1994ರ ವರೆಗೆ ಅವರು ಕಾರ್ಮಿಕ ಸಚಿವರಾದರು. ಇನ್ನೊಬ್ಬರು ಗಮನಾರ್ಹ ಕ್ರೈಸ್ತ ಮಹಿಳೆ ಎಂದರೆ, ವಿನ್ನಿಫ್ರೆಡ್ ಫೆರ್ನಾಂಡಿಸ್. 1967-72ರ ತನಕ ಕುಂದಾಪುರ ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಶಾಸಕಿಯಾಗಿದ್ದರು. ಬಹುತೇಕ, ಶಾಸಕರಾಗಿ ಈಗಿನ ಕರ್ನಾಟಕ ವಿಧಾನ ಸಭೆ ಪ್ರವೇಶಿಸಿದ ಮೊದಲ ಕ್ರೈಸ್ತ ಮಹಿಳೆಯಾಗಿದ್ದರು. ನಂತರ ಅವರು 2001ರಿಂದ 2017ರ ತನಕ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅದಕ್ಕಿಂತ ಗಮನಾರ್ಹ ಎಂದರೆ, ಅದಕ್ಕಿಂತಲೂ ಮೊದಲು ಅವರು 33 ವರ್ಷಗಳ ಕಾಲ ಕುಂದಾಪುರ ಪಟ್ಟಣ ಪಂಚಾಯತ್/ ಪುರಸಭೆ ಇತ್ಯಾದಿಗಳಲ್ಲಿ ಸದಸ್ಯರಾಗಿದ್ದರು ಹಾಗೂ 17 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಇದು ಹೇಗೆ ಸಾಧ್ಯ ಎಂದು ಯೋಚಿಸಿ.
ಉಳಿದಂತೆ ಮಂಗಳೂರು ಮಹಾನಗರಪಾಲಿಕೆ ಕಮೀಷನರ್ ಆಗಿ, ನಂತರ ಶಾಸಕರಾಗಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಜೆ.ಆರ್. ಲೋಬೋ, ಎರಡು ಬಾರಿಯ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಮುಂತಾದವರು ಕಳೆದ ಐದು ದಶಕಗಳಲ್ಲಿ ಕರ್ನಾಟಕದಲ್ಲಿ ಕ್ರೈಸ್ತರಿಗೆ ಸಿಕ್ಕಿರುವ ರಾಜಕೀಯ ಪ್ರಾತಿನಿಧ್ಯವನ್ನು ಸೂಚಿಸುತ್ತಾರೆ. ಅದೇ ರೀತಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಲೆಕ್ಕವಿಲ್ಲದಷ್ಟು ಮಂದಿ ಆಯ್ಕೆಯಾಗಿದ್ದಾರೆ. ಕರಾವಳಿಯಲ್ಲಿ ಎರಡು ಶೇಕಡಾಕ್ಕಿಂತ ಕಡಿಮೆ ಇರುವ ಕ್ರೈಸ್ತರು ಗೆಲ್ಲುವುದಕ್ಕೆ ಅವರು ಪರಂಪರಾಗತವಾಗಿ ಅನುಸರಿಸಿಕೊಂಡು ಬರುತ್ತಿರುವ ಸೇವಾ ಮನೋಭಾವ, ಸಾಮರಸ್ಯ, ಸೌಹಾರ್ದತೆ ಮತ್ತು ಇತರ ಸಮುದಾಯಗಳ ನಡುವೆ ಅವರಿಗಿರುವ ಗೌರವ ಹಾಗೂ ಸ್ವೀಕಾರಾರ್ಹತೆಯೇ ಕಾರಣವಾಗಿತ್ತು. ಇಲ್ಲವಾದಲ್ಲಿ ಎರಡು ಶೇಕಡಾಕ್ಕೂ ಕಡಿಮೆ ಇರುವ ಸಮುದಾಯದ ಆಸ್ಕರ್ ಐದು ಬಾರಿ, ಆಳ್ವ ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಲು ಹೇಗೆ ಸಾಧ್ಯವಿತ್ತು, ಯೋಚಿಸಿ.
ಉಳಿದಂತೆ ಕಳೆದ ಐವತ್ತು ವರ್ಷಗಳಲ್ಲಿ- ನ್ಯಾಯಾಂಗ, ಆಡಳಿತ ಮತ್ತು ಸೇನೆಯಲ್ಲಿಯೂ ಕರ್ನಾಟಕದ ಕ್ರೈಸ್ತರು ತಮ್ಮ ಗುರುತು ಮೂಡಿಸಿದ್ದಾರೆ. ಕೋಮುವಾದದ ಅಪಾಯವು ಸಂವಿಧಾನವನ್ನೇ ಬುಡಮೇಲು ಮಾಡಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಧಾರ್ಮಿಕರಾಗಿದ್ದರೂ, ಜಾತ್ಯತೀತವಾದಿಗಳಾಗಿರುವ ಕ್ರೈಸ್ತರು, ತಾವು ಸುರಕ್ಷಿತರು ಎಂಬ ಭ್ರಮೆ ಬಿಟ್ಟು, ಇತರ ಕೋಮುಗಳಲ್ಲಿ ತಮ್ಮಂತೆಯೇ ಇರುವ ಜನರ ಜೊತೆ ಸೇರಿ ಫ್ಯಾಸಿಸಂ ವಿರುದ್ಧ ಹೋರಾಡಬೇಕು. ಹಾಗಾಗುತ್ತದೆ ಎಂದು ಆಶಿಸೋಣ.
(ಮುಗಿಯಿತು)

ನಿಖಿಲ್ ಕೋಲ್ಪೆ
ದಕ್ಷಿಣ ಕನ್ನಡದ ಬಂಟ್ವಾಳದವರಾದ ನಿಖಿಲ್ ಕೋಲ್ಪೆಯವರು ಅಪಾರ ಅನುಭವ ಹೊಂದಿರುವ ಹಿರಿಯ ಪತ್ರಕರ್ತರು. 80ರ ದಶಕದಲ್ಲಿ ಮುಂಬೈನಲ್ಲಿ ಹಲವು ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು ನಂತರ ದಕ್ಷಿಣ ಕನ್ನಡದ ಪ್ರಜ್ಞಾವಂತ ಪತ್ರಿಕೆಗಳಾದ ಮುಂಗಾರು ಮತ್ತು ಜನವಾಹಿನಿ ಪತ್ರಿಕೆಗಳಲ್ಲಿ ದುಡಿದವರು. ಇಂದಿಗೂ ವಾರ್ತಾಭಾರತಿ, ನ್ಯಾಯಪಥ ಸೇರಿದಂತೆ ಹಲವು ಪತ್ರಿಕೆಗಳಿಗೆ ನಿರಂತರವಾಗಿ ಲೇಖನಗಳನ್ನು ಬರೆಯುತ್ತಾ, ಅನುವಾದ ಮಾಡುವ ವೃತ್ತಿಯನ್ನೂ ಮುಂದುವರಿಸಿದ್ದಾರೆ.




