ಕರ್ನಾಟಕ 50 | ಬಂಡೆಗಳ ಮೇಲೆ ಚಿಗುರೊಡೆದ ದಲಿತ ಚಳವಳಿ (ಭಾಗ-1)

Date:

ಯಾವುದೇ ಚಳವಳಿಗಳು ಆ ಕಾಲದ ಒತ್ತಡಗಳಿಂದ ರೂಪುಗೊಳ್ಳುತ್ತವೆ. ಕಾಲ ಗರ್ಭದಲ್ಲಿ ಹೂತುಹೋದ ಪ್ರತಿರೋಧದ ದನಿಗಳು ಮೊಳಕೆಯೊಡೆಯಲೂ ತಕ್ಕ ಕಾಲಕ್ಕೆ ಕಾಯುತ್ತವೆ ಎಂದು ಕಾಣುತ್ತದೆ. ಶತಮಾನಗಳ ದಲಿತ ಸಮುದಾಯದ ನೋವು-ಯಾತನೆಗಳು ಸ್ವಾಭಿಮಾನಿ, ಸಾಂಸ್ಕೃತಿಕ, ಸಾಮಾಜಿಕ ಚಳವಳಿಯಾಗಿ ಬೆಳೆಯಲು ಅಂಥ ಅವಕಾಶಕ್ಕಾಗಿ ಕಾಯುತ್ತಿದ್ದವು. ಅಂಥ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಒತ್ತಡ ಎಪ್ಪತ್ತರ ದಶಕದಲ್ಲಿ ನಿರ್ಮಾಣವಾಗಿತ್ತು. ದಲಿತ ಚಳವಳಿ ಹುಟ್ಟಿದ ಆ ದಿನಗಳನ್ನು ಮೆಲುಕು ಹಾಕಿದರೆ ಇದು ನಿಜ ಎನಿಸುತ್ತದೆ. ನೂರಾರು ಸನ್ನಿವೇಶಗಳು, ಘಟನೆಗಳು, ನೋವು-ನಲಿವುಗಳು ಮನಸ್ಸಿನ ಪರದೆ ಮೇಲೆ ಹಾಗೇ ಸುಳಿದಾಡುತ್ತವೆ. ಚಳವಳಿಯ ಹುಟ್ಟು, ಅದು ಕ್ರಮಿಸಿದ ದಾರಿಯ ಅವಲೋಕನ ಮಾಡಿದರೆ ಭಾವುಕತೆ ಆವರಿಸುತ್ತದೆ. ಗಾಢ ನೆನಪುಗಳು ಮರುಕಳಿಸುತ್ತವೆ. ಕರುಳ ಸಂಬಂಧ ಬೆಸೆದ, ಕರ್ನಾಟಕದ ತಳಸಮುದಾಯಗಳಲ್ಲಿ ಜಾಗೃತಿ ಮತ್ತು  ಎಚ್ಚರಿಕೆಯನ್ನು ಮೂಡಿಸಿದ ಘಟನೆಗಳು ಹಾಗೂ ಐತಿಹಾಸಿಕ ಪಲ್ಲಟಗಳನ್ನು ಈ ಕ್ಷಣಕ್ಕೆ ನೆನಪಿಗೆ ಬಂದಷ್ಟು ಇಲ್ಲಿ ದಾಖಲಿಸುತ್ತಿರುವೆ.

ಕರ್ನಾಟಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಳವಳಿಗಳ ತವರೂರು. ಸಮಾನತೆಯ ಹರಿಕಾರ ಬಸವಣ್ಣನವರಿಂದ ಹಿಡಿದು ಕನಕದಾಸರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರವರೆಗೆ ಕೂಡ ಸ್ವಾಭಿಮಾನ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಕರ್ನಾಟಕ ಸದಾ ತುಡಿಯುತ್ತಲೇ ಬಂದಿದೆ. ವೈದಿಕ ಸನಾತನಿಗಳು ಮತ್ತು ಚಾರ್ವಾಕರು, ಅಜೀವಿಕರು, ಅವಧೂತರ ನಡುವೆ ಭಾರತದ ನೆಲದಲ್ಲಿ ಸದಾ ವೈಚಾರಿಕ ಸಂಘರ್ಷ, ಹುಡುಕಾಟ ನಡೆಯುತ್ತಲೇ ಇದೆ. ಆಧುನಿಕ ಭಾರತದ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯಿಂದ ಹಿಡಿದು, ಶಾಹು ಮಹಾರಾಜ್, ಜ್ಯೋತಿಬಾ ಫುಲೆ, ಬಾಬಾಸಾಹೇಬ್ ಅಂಬೇಡ್ಕರ್‌ವರೆಗೆ ವಿಸ್ತರಿಸಿದೆ.  ಲೋಹಿಯಾ, ಜಯಪ್ರಕಾಶ್ ನಾರಾಯಣರ ಸಮಾಜವಾದಿ ಚಿಂತನೆಗಳವರೆಗೂ ಈ ಪರಂಪರೆ ಮುಂದುವರೆಯುತ್ತಲೇ ಇದೆ.

ಸ್ವಾತಂತ್ರ್ಯಾ ನಂತರದ ಆಧುನಿಕ ಭಾರತದಲ್ಲಿ ನೆಹರೂ ಪ್ರಣೀತ ಸಮಾಜವಾದಿ ರಾಜಕೀಯ ವ್ಯವಸ್ಥೆ ಆರಂಭವಾಗಿದ್ದ ಕಾಲ ಅದು. ಅರವತ್ತನೇ ದಶಕದ ಕೊನೆಯ ಭಾಗ ಮತ್ತು ಎಪ್ಪತ್ತರ ದಶಕದ ಮೊದಲ ಭಾಗದಲ್ಲಿ ಸಾಮಾಜಿಕ ಚಳವಳಿಗಳ ಪ್ರಭಾವ ಸಮಾಜದ ಮೇಲೆ ಪ್ರವಹಿಸಲು ಆರಂಭಿಸಿತ್ತು. ಆಗಿನ್ನೂ ದಲಿತ ಚಳವಳಿಗೆ ರೂಪ ಬಂದಿರಲಿಲ್ಲ. ದಲಿತ ಚಳವಳಿ ಎಂಬ ಹೆಸರೂ ಇರಲಿಲ್ಲ. ಅಂದು ಇದ್ದಂತಹ ಕರ್ನಾಟಕದ ಬೇರೆ ಬೇರೆ ಚಳವಳಿಗಳೆಂದರೆ- ಮಾರ್ಕ್ಸ್‌ವಾದಿ ಚಳವಳಿ, ಸಮಾಜವಾದಿ ಚಳವಳಿ, ವಿಚಾರವಾದಿ ಚಳವಳಿ. ಇವು ದಲಿತ ಚಳವಳಿಗೆ ಒಂದು ಪೂರಕ ವಾತಾವರಣ ಒದಗಿಸಿಕೊಟ್ಟಿದ್ದವು. ಸ್ವಾತಂತ್ರ್ಯ ಬಂದು ಎರಡು ದಶಕವಾಗಿತ್ತು. ದಲಿತ ಸಮುದಾಯದಲ್ಲಿ ಮೊದಲನೇ ತಲೆಮಾರು ಅಕ್ಷರಕ್ಕೆ ಕಣ್ಣು ಬಿಡುತ್ತಿತ್ತು. ಕರ್ನಾಟಕದ ಮಟ್ಟಿಗೆ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಚಯವೂ ಅಷ್ಟಾಗಿ ಇರಲಿಲ್ಲ. ಒಂದಿಷ್ಟು ಓದಿದವರು, ವಿಚಾರಗಳನ್ನು ತಿಳಿದುಕೊಂಡವರು ಅಂಬೇಡ್ಕರ್ ಹೆಸರು ಹೇಳುತ್ತಿದ್ದದ್ದು ಬಿಟ್ಟರೆ, ಇಂದಿನಂಥ ಪರಿಸ್ಥಿತಿ ಇರಲಿಲ್ಲ. ಬಾಬಾಸಾಹೇಬರ ಇತಿಹಾಸ ಮಹಾರಾಷ್ಟ್ರಕ್ಕೆ ಸೀಮಿತವಾಗಿತ್ತು. ಯಾವುದೇ ಪಠ್ಯಪುಸ್ತಕದಲ್ಲಿ ಅವರ ಬಗ್ಗೆ ಪಾಠ ಇರಲಿಲ್ಲ, ಊರುಗಳಲ್ಲಿ ಪ್ರತಿಮೆಗಳಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Devaraj urs and indiara gandi
ಡಿ.ದೇವರಾಜ ಅರಸು ಮತ್ತು ಇಂದಿರಾ ಗಾಂಧಿ

ಚಳವಳಿಯ ಹಿನ್ನಲೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ಹೊತ್ತಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭಗಳನ್ನು ನೋಡಬೇಕಾಗುತ್ತದೆ. ಅಂದು ಕಾಂಗ್ರೆಸ್ ಅಧಿಕಾರದಲ್ಲಿತ್ತು. ಪಕ್ಷದೊಳಗೆ ಭಿನ್ನಮತ ಸ್ಫೋಟಿಸಿ ಕಾಂಗ್ರೆಸ್ ಇಬ್ಭಾಗವಾಗಿತ್ತು. ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿ ಮುಂದುವರಿದಿದ್ದರು. 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ದೇಶದ ಸರ್ವವನ್ನೂ ಕೊಳ್ಳೆ ಹೊಡೆದಿದ್ದರು. ಜತೆಯಲ್ಲೇ ಜಡ್ಡುಗಟ್ಟಿದ್ದ ಸಮಾಜದಲ್ಲಿ ಆಧುನಿಕತೆಯ ಹೊಸ ಬೀಜಗಳನ್ನೂ ಬಿತ್ತಿ ಹೋಗಿದ್ದರು. ಹೀಗಾಗಿ ದೇಶದ ಬಡವರಿಗೆ, ದಲಿತರಿಗೆ, ದುರ್ಬಲ ವರ್ಗದವರಿಗೆ ಆತ್ಮವಿಶ್ವಾಸವನ್ನು ಹುಟ್ಟಿಸುವಂತಹ ಕೆಲಸ ಮಾಡುವುದು ಆಳುವವರಿಗೆ ಅಗತ್ಯವಾಗಿತ್ತು. ಅದರ ಭಾಗವಾಗಿ ಇಂದಿರಾ ಗಾಂಧಿಯವರು `ಗರೀಬಿ ಹಠಾವೋ’ (ಬಡತನ ನಿರ್ಮೂಲನೆ) ಘೋಷಣೆ ಕೊಟ್ಟರು. ಅದೇ ಕಾಲದಲ್ಲಿ ಡಿ. ದೇವರಾಜ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದರು. ಆ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಹಲವು ಸ್ಥಿತ್ಯಂತರಗಳು ಆಗಲಾರಂಭಿಸಿದವು. ರಾಜಕೀಯ ಮತ್ತು ಸಾಮಾಜಿಕ ಅಸ್ತಿತ್ವವೇ ಇಲ್ಲದಂತಹ ಸಮುದಾಯಗಳು ಸಮಾಜದಲ್ಲಿ ನಾವು ಬದುಕಿದ್ದೇವೆ ಎಂದು ಹೇಳುವಂತಹ ವಾತಾವರಣ ಅಂಕುರಿಸತೊಡಗಿತ್ತು. 

ಇದನ್ನೂ ಓದಿರಿ: ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ

ಅರಸು ಮಂತ್ರಿ ಮಂಡಲದಲ್ಲಿ ಸ್ವಾಭಿಮಾನಕ್ಕೆ ಹೆಸರಾಗಿದ್ದ ಬಿ.ಬಸವಲಿಂಗಪ್ಪ ಮತ್ತು ಎನ್. ರಾಚಯ್ಯ ಅವರು ಇದ್ದರು. ಬಸವಲಿಂಗಪ್ಪನವರು ಮತ್ತು ಎನ್. ರಾಚಯ್ಯನವರು ಹತ್ತರಲ್ಲಿ ಹನ್ನೊಂದನೇ ರಾಜಕಾರಣಿಗಳಂತೆ ಇರಲಿಲ್ಲ. ಅವರು ದಲಿತರ ಪರವಾಗಿ ನಿರ್ಭಿಡೆಯಿಂದ ದುಡಿಯುತ್ತಿದ್ದರು. ಬಸವಲಿಂಗಪ್ಪನವರಂತೂ ಕಂದಾಚಾರ, ಧಾರ್ಮಿಕ ಶೋಷಣೆ ವಿರುದ್ಧ ನಿರಂತರವಾಗಿ ಪ್ರತಿಭಟಿಸುತ್ತಿದ್ದರು. ಸರ್ಕಾರದಲ್ಲಿ ಮಂತ್ರಿಯಾಗಿದ್ದುಕೊಂಡೇ, `ದೇವರುಗಳನ್ನೆಲ್ಲ ಗಟಾರಕ್ಕೆ ಹಾಕಿ, ಹಿಂದೂ ದೇವರುಗಳನ್ನು ಪೂಜಿಸಬೇಡಿ, ನಿಮಗೆ ಅವರು ಅನ್ಯಾಯ ಮಾಡಿದ್ದಾರೆ’ ಎಂದು ಗುಡುಗುತ್ತಿದ್ದರು. ಅಕ್ಷರ ಲೋಕಕ್ಕೆ ತೆರೆದುಕೊಳ್ಳುತ್ತಿದ್ದ ನಮ್ಮ ತಲೆಮಾರಿನ ಜನಕ್ಕೆ ಅವರು ಆಶಾಕಿರಣವಾಗಿದ್ದರು ಮತ್ತು ಆತ್ಮಾಭಿಮಾನ ಉಂಟು ಮಾಡುತ್ತಿದ್ದರು.

ನನಗೆ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಬರವಣಿಗೆ ಮೇಲೆ ವಿಪರೀತ ಆಸಕ್ತಿ ಇತ್ತು. ಪತ್ರಿಕೆಗಳನ್ನು ಓದುವುದು, ಕಥೆ-ಕಾದಂಬರಿಗಳನ್ನು ಓದುವುದು, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವುದು ನನ್ನ ಹವ್ಯಾಸ. ಮನಸ್ಸಿನಲ್ಲಿ ಮೂಡಿದ ಹಲವು ಆಲೋಚನೆ ಮತ್ತು ಸಂಗತಿಗಳನ್ನು ಬರೆದು ಇಡುತ್ತಿದ್ದೆ. ಹುಟ್ಟಿನ ಕಾರಣಕ್ಕೆ ಅನುಭವಿಸುತ್ತಿದ್ದ ಜಾತಿ ತಾರತಮ್ಯ ಮತ್ತು ಅಸಮಾನತೆಗಳು ನನ್ನನ್ನು ಗಾಢವಾಗಿ ಕಾಡುತ್ತಿದ್ದವು. ಸಹಜವಾಗಿಯೇ ಸಾಮಾಜಿಕ ವ್ಯವಸ್ಥೆ ಬಗೆಗೆ ತೀವ್ರ ಅಸಹನೆ ಮತ್ತು ಸಿಟ್ಟು ಮೂಡುತ್ತಿತ್ತು. ಏನಾದರೂ ಮಾಡಿ ಈ ಜಾತಿ ವ್ಯವಸ್ಥೆಯನ್ನು ನಾಶಪಡಿಸಲೇಬೇಕೆಂದು ಯೋಚಿಸುತ್ತಿದ್ದೆ. ಹೈಸ್ಕೂಲಿನಿಂದಲೇ ವ್ಯಾಸಂಗಕ್ಕೆಂದು ಮೈಸೂರಿಗೆ ಬಂದಿದ್ದರಿಂದ ಅಂತಹ ವಾತಾವರಣವೂ ನನಗೆ ದೊರಕಿತ್ತು. ಹಾಗಾಗಿ ಪಿಯುಸಿ ಹೊತ್ತಿಗೆಲ್ಲ ನಾನು ಚಳವಳಿಗಳ ಭಾಗವಾಗಿ ಹೋಗಿದ್ದೆ. ಮೈಸೂರಿನಲ್ಲಿ ನಡೆಯುವ ಎಲ್ಲ ಚಳವಳಿಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದೆ.

ಶೂದ್ರ ಬ್ರಾಹ್ಮಣ ಸಂಘರ್ಷ

ಅದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಚಳವಳಿ ವ್ಯಾಪಕವಾಗಿತ್ತು. ಬ್ರಾಹ್ಮಣರ ವಿರುದ್ಧ ಎಚ್ಚೆತ್ತ ಶೂದ್ರ ಸಮುದಾಯ ಒಂದಾಗಿತ್ತು. ಆ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಜಾತಿವಾದಿ ಕರ್ಮಠ ಬ್ರಾಹ್ಮಣರು ತಲೆಮರೆಸಿಕೊಂಡು ಓಡಾಡುವ ಸ್ಥಿತಿ ಎದುರಾಗಿತ್ತು. ಇದರ ಜೊತೆಗೆ ಸಮಾಜವಾದಿ ಚಳವಳಿ, ಮಾರ್ಕ್ಸ್‌ವಾದಿ ಚಳವಳಿ, ವಿಚಾರವಾದಿ ಚಳವಳಿ ಮುಂಚೂಣಿಯಲ್ಲಿದ್ದವು. ವಿದ್ಯಾರ್ಥಿ ಸಮುದಾಯದಲ್ಲಿ ಎಸ್.ಎಫ್.ಐ ಸಕ್ರಿಯವಾಗಿತ್ತು. ಕಾಂಗ್ರೆಸ್‌ನಲ್ಲಿ ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕ ಕೆಲಸ ಮಾಡುತ್ತಿತ್ತು. ಆಗ ಸಮಾಜವಾದಿ ಪಕ್ಷವೂ ಬಲವಾಗಿತ್ತು. ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡರು ಯುವಸಮೂಹದ ಆದರ್ಶವಾಗಿದ್ದರು. ಸಮಾಜವಾದಿ ಪಕ್ಷದಲ್ಲಿ ಯುವಜನರಿಗಾಗಿಯೇ ‘ಸಮಾಜವಾದಿ ಯುವಜನ ಸಭಾ’ ಸಂಘಟನೆ ಇತ್ತು. ಇದು ಕರ್ನಾಟಕದ ಹಲವಾರು ಭಾಗದಲ್ಲಿ ಬಲಿಷ್ಠವಾಗಿ ಕೆಲಸ ಮಾಡುತ್ತಿತ್ತು. ಈ ಎಲ್ಲ ಚಳವಳಿಗಳು ವಿಶಾಲವಾಗಿ ಒಂದೇ ದಿಕ್ಕಿನಲ್ಲಿ ನಡೆಯುತ್ತಿದ್ದವು. ದಲಿತ ಚಳವಳಿಯನ್ನು ಕಟ್ಟಿಬೆಳೆಸಿದ ನಾವೆಲ್ಲ ಸಮಾಜವಾದಿ ಯುವಜನ ಸಭಾ ಮತ್ತು ಮಾರ್ಕ್ಸ್‌ವಾದಿ ಚಳವಳಿಯ ಹಿನ್ನೆಲೆಯಿಂದ ಬಂದವರಾಗಿದ್ದೆವು.

1973ನೇ ಇಸವಿಯ ಆರಂಭದಲ್ಲಿ ಇರಬೇಕು. ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ‘ಜಾತಿ ವಿನಾಶ ಸಮ್ಮೇಳನ’ ಆಯೋಜನೆಯಾಗಿತ್ತು. ಬೆಂಗಳೂರಿನ ಪ್ರೊ. ಧರ್ಮಲಿಂಗಂ ಮತ್ತು ಮೈಸೂರಿನ  ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರು ಈ ಸಮ್ಮೇಳನವನ್ನು ಆಯೋಜಿಸಿದ್ದರು. ನಾನಾಗ ಬಿ.ಎ ವಿದ್ಯಾರ್ಥಿಯಾಗಿದ್ದೆ. ನಮ್ಮ ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ‘ಜಾತಿವಿನಾಶ ಸಮ್ಮೇಳನ’ದ ಕರಪತ್ರ ಅಂಟಿಸಿದ್ದರು. ನನ್ನ ತಲೆಮಾರಿನ ಬಹುತೇಕರು ಹಳ್ಳಿಯಿಂದ ನಗರಕ್ಕೆ ಬಂದು ತಬ್ಬಲಿತನವನ್ನು ಅನುಭವಿಸುತ್ತಿದ್ದ ಸಮಯವದು. ನಮಗೆ ಹೇಳುವವರು, ಕೇಳುವವರು, ಮಾರ್ಗದರ್ಶನ ಮಾಡುವವರು ಯಾರೂ ಇರಲಿಲ್ಲ. ಆ ಸಂದರ್ಭದಲ್ಲಿ ಆ ಕರಪತ್ರವನ್ನು ನೋಡಿದಾಗ ದೊಡ್ಡ ಸಾಮ್ರಾಜ್ಯವೇ ನನ್ನ ಕೈಗೆ ಸಿಕ್ಕ ಸಂತೋಷವಾಗಿತ್ತು. ಈ ಸಮಾಜದಲ್ಲಿ ಜಾತಿ ವಿರುದ್ಧ ಮಾತನಾಡುವವರು ಇದ್ದಾರಲ್ಲ ಅನಿಸಿತ್ತು. ಈ ಕಾರ್ಯಕ್ರಮ ನಮ್ಮಂಥ ಯುವಕರಿಗೆ ಪ್ರೇರಣಾಶಕ್ತಿಯಾಗಿ ಕಂಡಿತು.

books 2
ಕನ್ನಡ ಸಾಹಿತ್ಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ ‘ಹೊಲೆ ಮಾದಿಗರ ಹಾಡು’ ಮತ್ತು ‘ದ್ಯಾವನೂರು’ ಕೃತಿಗಳ ಹಳೆಯ ಕವರ್ ಪೇಜ್

ಕರ್ನಾಟಕದ ಶೂದ್ರ ಚಳವಳಿಯಲ್ಲಿ ಇದ್ದ ಒಕ್ಕಲಿಗರು, ಲಿಂಗಾಯತರು, ತಳ ಸಮುದಾಯಗಳು, ಸಮಾಜವಾದಿ ಹಿನ್ನೆಲೆಯಿಂದ ಬಂದ ಜಾತಿವಿರೋಧಿ ಬ್ರಾಹ್ಮಣರೂ ಸಮಾವೇಶದ ಭಾಗವಾಗಿದ್ದರು. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಿಂದ ಅಧ್ಯಾಪಕರು, ವಿದ್ಯಾರ್ಥಿಗಳು ಆಗಮಿಸಿದ್ದರು. ಜಾತಿ ವಿರುದ್ಧ ಹೋರಾಟ ಮಾಡಬೇಕು ಎಂಬ ಅದಮ್ಯ ಚೈತನ್ಯ ಈ ಸಮ್ಮೇಳನದಲ್ಲಿ ಹೊಮ್ಮಿತು. ಅದೇ ಕಾಲಘಟ್ಟದಲ್ಲಿ ಆದಂತಹ ಎರಡು ವಿದ್ಯಮಾನಗಳು ಕರ್ನಾಟಕದ ಸಾಮಾಜಿಕ, ಸಾಹಿತ್ಯಿಕ ವಲಯವನ್ನು ಅಲ್ಲೋಲ ಕಲ್ಲೋಲ ಮಾಡಿದವು. ಒಂದು- ದೇವನೂರ ಮಹಾದೇವ ಅವರ `ದ್ಯಾವನೂರು’ ಕಥಾಸಂಕಲನ 1973ರಲ್ಲಿ ಮೈಸೂರಿನಿಂದ ಹೊರಬಂದರೆ, ಎರಡು- ಸಿದ್ದಲಿಂಗಯ್ಯನವರ `ಹೊಲೆ ಮಾದಿಗರ ಹಾಡು’ ಕವನ ಸಂಕಲನ 1975ರ ವೇಳೆಗೆ ಬೆಂಗಳೂರಿನಿಂದ ಪ್ರಕಟವಾಯಿತು. ಇವುಗಳನ್ನು ನಾನು ವಿದ್ಯಮಾನ ಎಂದು ಕರೆಯುತ್ತೇನೆ. ಯಾಕೆಂದರೆ ಅವು ಸಾಮಾನ್ಯ ಪ್ರಕಟಣೆಗಳಾಗಿರಲಿಲ್ಲ. ಕರ್ನಾಟಕದ ಸಾಮಾಜಿಕ ಇತಿಹಾಸದ ಭಾಗವಾಗಿ ಇವುಗಳಿಗೆ ಮಹತ್ವದ ಸ್ಥಾನವಿದೆ. ಈ ಎರಡು ಕೃತಿಗಳು ಬೀರಿದ ಪರಿಣಾಮವನ್ನು ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಿಂತ ನೀರಾಗಿದ್ದ ಸಾಹಿತ್ಯದಲ್ಲಿ ದೊಡ್ಡ ತಲ್ಲಣ, ತಳಮಳ ಸೃಷ್ಟಿಯಾಯಿತು. ದಲಿತ ಚಳವಳಿಗೆ ಶಕ್ತಿಯನ್ನು ಮತ್ತು ತಳಹದಿಯನ್ನು ಇವುಗಳು ಸೃಷ್ಟಿಸಿದವು.

ಇದನ್ನೂ ಓದಿರಿ: ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ: ಚಾತುರ್ವರ್ಣದ ಮರುಸೃಷ್ಟಿ

ಇದರ ಜೊತೆಗೆ ಸಾಮಾಜಿಕ ಪಲ್ಲಟ ತಂದ ನಾಲ್ಕು ಕಾನೂನುಗಳನ್ನು ಶ್ರೀಮತಿ ಇಂದಿರಾ ಗಾಂಧಿ ಅವರ ಆಶಯದಂತೆ ದೇವರಾಜ ಅರಸು ನೇತೃತ್ವದ ಸರ್ಕಾರ ಜಾರಿಗೊಳಿಸಿತ್ತು. ಅವುಗಳೆಂದರೆ- ಜೀತ ಪದ್ಧತಿ ರದ್ದು ಕಾಯ್ದೆ, ಸಾಲ ಪಡೆದವರು ಪಾಪಸ್ ಕೊಡುವಂತಿಲ್ಲ ಎಂಬ `ಋಣಮುಕ್ತ ಕಾಯ್ದೆ’, ಉಳುವವನೇ ಭೂಮಿಯ ಒಡೆಯ ಎಂದು ಸಾರಿದ `ಭೂ ಸುಧಾರಣಾ ಕಾಯ್ದೆ’ ಮತ್ತು ಬಸವಲಿಂಗಪ್ಪನವರ ಒತ್ತಾಸೆಯಲ್ಲಿ ಜಾರಿಗೆ ಬಂದ `ತಲೆಯ ಮೇಲೆ ಮಲ ಹೊರುವ ಪದ್ಧತಿ ರದ್ದು ಕಾಯ್ದೆ’. ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮಲ ಹೊರುವ ಪದ್ಧತಿ ರದ್ದು ಮಾಡಿದ ಕೀರ್ತಿ ಬಸವಲಿಂಗಪ್ಪನವರಿಗೆ ಸಲ್ಲುತ್ತದೆ. ಸಮಾಜಕ್ಕೆ ನವಚೈತನ್ಯ ತಂದ ಈ ಕಾಯ್ದೆಗಳಿಂದಾಗಿ ಹಳ್ಳಿಗಳಲ್ಲಿ ಇದ್ದ ಭೂಮಾಲೀಕ ವರ್ಗ, ನಗರಗಳಲ್ಲಿ ಇದ್ದ ಬಡ್ಡಿ ಲೇವಾದೇವಿದಾರರು ತಲ್ಲಣಿಸಿದರು. ಗೇಣಿದಾರರು ಭೂ ಒಡೆಯರಾದರು. ತಳ ಸಮುದಾಯಗಳಲ್ಲಿ ಚಲನೆ ಶುರುವಾಯಿತು, ಆತ್ಮಸ್ಥೈರ್ಯ ಬಂದಿತು. ನಮಗೂ ಒಂದು ದನಿ ಇದೆ, ನಾವು ತಲೆ ಎತ್ತಿ ಬದುಕಬಹುದು ಅನಿಸಿತು.

ಬೂಸಾ ಚಳವಳಿ

ಅದೇ 1973ನೇ ಇಸವಿ, ನವೆಂಬರ್ 19ನೇ ತಾರೀಖು ದಲಿತ ಚಳವಳಿಗೆ ನಾಂದಿ ಹಾಡಿದ ಬೆಳವಣಿಗೆಯಾಯಿತು. `ಜಾತಿ ವಿನಾಶ ಸಮ್ಮೇಳನ’ ನಡೆದಿದ್ದ ಮೈಸೂರಿನ ಮಹಾರಾಜ ಕಾಲೇಜಿನ ಅದೇ ಶತಮಾನೋತ್ಸವ ಭವನದಲ್ಲಿ `ಹೊಸ ಅಲೆ’ ಎಂಬ ವಿಚಾರಸಂಕಿರಣ ಅಂದು ಆಯೋಜನೆಯಾಗಿತ್ತು. ಎನ್. ಸಂಜೀವನ್ ಎಂಬ ವಕೀಲರು ಕಾರ್ಯಕ್ರಮದ ಆಯೋಜಕರಾಗಿದ್ದರು. ವಿಚಾರಸಂಕಿರಣಕ್ಕೆ ಮುಖ್ಯ ಅತಿಥಿಯಾಗಿ ಸಚಿವ ಬಸವಲಿಂಗಪ್ಪನವರು ಬಂದಿದ್ದರು. ಸಂಜೀವನ್ ಅವರು ದೊಡ್ಡ ಅಂಬೇಡ್ಕರ್‌ವಾದಿ. ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ. ಯಾವುದೇ ರೀತಿಯ ಅಸಮಾನತೆಯನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಸಂಜೀವನ್ ಅವರ ಪ್ರಕಾರ ಕನ್ನಡ ಎಂದರೆ ಅಸಮಾನತೆ. ಕನ್ನಡದಲ್ಲಿ ನಮ್ಮನ್ನು ಬೈಯುತ್ತಾರೆ, ಹೊಲೆಯ-ಮಾದಿಗ ಅಂತಾರೆ, ಇಂಗ್ಲಿಷ್‌ನಲ್ಲಿ ಇದು ಸಾಧ್ಯವಿಲ್ಲ ಎಂಬುದು ಅವರ ಕಲ್ಪನೆ. ಹೀಗಾಗಿ ಅವರು ಅಂದಿನ ಕಾರ್ಯಕ್ರಮದಲ್ಲಿ ಮಾತನಾಡುವಾಗ ಇಂಗ್ಲಿಷ್‌ನಲ್ಲಿ ಭಾಷಣ ಶುರು ಮಾಡಿದರು. ಸಭೆಯಲ್ಲಿದ್ದ ಕೆಲವು ಹುಡುಗರು `ಕನ್ನಡ ಕನ್ನಡ’ ಎಂದು ಕೂಗಲಾರಂಭಿಸಿದರು. ಸಂಜೀವನ್ ಹುಡುಗರ ಮಾತು ಕೇಳದೆ ಇಂಗ್ಲಿಷ್‌ನಲ್ಲೇ ಮಾತು ಮುಂದುವರಿಸಿದರು. ಸ್ವಲ್ಪ ಗದ್ದಲವಾಯಿತು. ಆಗ ಎದ್ದು ನಿಂತ ಬಸವಲಿಂಗಪ್ಪನವರು ಸಮಾಧಾನ ಮಾಡಿದರು.

basavalingappa
ಬಿ.ಬಸವಲಿಂಗಪ್ಪ

ಸಂಜೀವನ್ ಭಾಷಣ ಮುಗಿದ ಮೇಲೆ ಬಸವಲಿಂಗಪ್ಪನವರು ಭಾಷಣ ಆರಂಭಿಸಿದರು. ಸಾಮಾಜಿಕ ನ್ಯೂನತೆಗಳು, ಧರ್ಮ, ದೇವರು, ಅನ್ಯಾಯ, ಮೂಢನಂಬಿಕೆ ಮೊದಲಾದ ವಿಚಾರವನ್ನು ಪ್ರಸ್ತಾಪಿಸಿದರು. ಹೀಗೆ ಮಾತನಾಡುತ್ತಾ, `ಕನ್ನಡ ಕನ್ನಡ’ ಎಂದು ಕೂಗಿದ್ದ ಯುವಕರನ್ನು ಉದ್ದೇಶಿಸಿ, `ಕನ್ನಡ ಸಾಹಿತ್ಯದಲ್ಲಿ ಏನಪ್ಪ ಇದೆ. ನಿಮ್ಮ ಕಷ್ಟ ಸುಖ ಇದೆಯಾ? ಸಮಾಜದ ನೋವು, ಸಂಕಷ್ಟಗಳು ಇವೆಯಾ? ಅದರಲ್ಲಿ ಇರೋದೆಲ್ಲ ಬರೀ ಬೂಸಾ’ ಎಂದರು. `ಕನ್ನಡದಲ್ಲಿ ಬೂಸಾವೂ ಇದೆ. ಕನ್ನಡ ಕನ್ನಡ ಎಂದು ಏಕೆ ಬಾಯಿ ಬಡಿಯುತ್ತೀರಿ, ಇಂಗ್ಲಿಷ್‌ನಲ್ಲಿಯೂ ಓದಿ, ಜಗತ್ತಿಗೆ ನಿಮ್ಮನ್ನು ನೀವು ತೆರೆದುಕೊಳ್ಳಬೇಕಾಗಿದೆ’ ಎಂದು ಕಿವಿಮಾತು ಹೇಳಿದರು. ಸಾಂದರ್ಭಿಕವಾಗಿ ಆಡಿದ ಮಾತುಗಳು ಅವಾಗಿದ್ದವು. `ಕನ್ನಡ ಕನ್ನಡ’ ಎಂದು ಕೂಗಿದ್ದವರು ಕೂಡ ಬಸವಲಿಂಗಪ್ಪನವರ ಭಾಷಣದ ವೇಳೆ ಮೌನವಾಗಿಯೇ ಆಲಿಸಿದರು. ಸಭೆ ಶಾಂತವಾಗಿ ಮುಗಿಯಿತು. ಮಾರನೇ ದಿನ ಆದ ಬೆಳವಣಿಗೆ ಬೇರೆಯದ್ದೇ ಆಗಿತ್ತು.

‘ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಬಸವಲಿಂಗಪ್ಪನವರು ಹೀಗಳೆದರು’ ಎಂದು ಪತ್ರಿಕೆಗಳು ಮೊದಲ ಪುಟದಲ್ಲಿ ವರದಿ ಪ್ರಕಟಿಸಿದ್ದವು. ಅವರು ಒಂದು ಗಂಟೆ ಮಾತನಾಡಿದ್ದರಲ್ಲಿ ಎರಡು- ಮೂರು ನಿಮಿಷ ಸಾಂದರ್ಭಿಕವಾಗಿ ಕನ್ನಡದ ಬಗ್ಗೆ ಆಡಿದ್ದ ಮಾತುಗಳನ್ನೇ ದೊಡ್ಡದ್ದಾಗಿ ವರದಿ ಮಾಡಿದ್ದರಿಂದ ಒಂದೇ ದಿನದಲ್ಲಿ ಬೆಂಗಳೂರು, ಮೈಸೂರಿನಲ್ಲಿ ಬೆಂಕಿ ಹತ್ತಿಕೊಂಡಿತು. ನಂತರ ಇಡೀ ರಾಜ್ಯಕ್ಕೆ ಹಬ್ಬಿತು. ಈ ದಳ್ಳುರಿಗೆ ಪ್ರಧಾನ ಕಾರಣವೇ ಬೇರೆಯದ್ದಾಗಿತ್ತು. ಬಸವಲಿಂಗಪ್ಪನವರು ಬೂಸಾ ಎಂದದ್ದು ಕೇವಲ ನೆಪವಾಗಿತ್ತು. ಆದರೆ ಬಸವಲಿಂಗಪ್ಪನವರು ಆ ಕಾಲದಲ್ಲಿ ವೈದಿಕಶಾಹಿಯ ವಿರುದ್ಧ, ಮೂಢನಂಬಿಕೆ, ಮಠಾಧಿಪತಿಗಳ ವಿರುದ್ಧ, ಎಲ್ಲ ಬಗೆಯ ಶೋಷಣೆಗಳ ವಿರುದ್ಧ ಒಬ್ಬ ಮಂತ್ರಿಯಾಗಿ ಮಾತನಾಡುತ್ತಿದ್ದರು. ಅವರನ್ನು ಬಲಿಹಾಕಲು ಮೇಲ್ಜಾತಿಯ ಬಲಿಷ್ಠರು ಹೊಂಚು ಹಾಕುತ್ತಿದ್ದರು. ಕನ್ನಡ ಸಾಹಿತ್ಯವನ್ನು ‘ಬೂಸಾ’ ಎಂದಿದ್ದಾರೆಂಬುದು ಒಂದು ಅಸ್ತ್ರವಾಯಿತು.

ವಿಶೇಷವಾಗಿ ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ದೊಡ್ಡ ಮಟ್ಟದ ಜಾತಿ ಯುದ್ಧ ಶುರುವಾಯಿತು. ಅದರಲ್ಲಿ ನಮ್ಮಂಥವರು ಬಲಿಪಶುಗಳಾದೆವು. ಬೆಂಗಳೂರು, ಮೈಸೂರಿನಲ್ಲಿ ಬೀದಿಬೀದಿಯಲ್ಲಿ ದಲಿತ ವಿದ್ಯಾರ್ಥಿಗಳನ್ನು ಹಿಡಿದುಕೊಂಡು ಹೊಡೆದರು. ಮುಖ್ಯವಾಗಿ ಒಕ್ಕಲಿಗ ವಿದ್ಯಾರ್ಥಿಗಳು ಈ ಹಿಂಸಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಿಂಗಳುಗಟ್ಟಲೆ ನಾವುಗಳು ಕಾಲೇಜಿಗೆ ಹೋಗಲು ಹೆದರಿದ್ದೆವು. ಬಸವಲಿಂಗಪ್ಪನವರ ಹೇಳಿಕೆಯ ಪರವಾಗಿ ಮತ್ತೊಂದು ಚಳವಳಿ ನಡೆಯಿತು. ಮೈಸೂರಿನಲ್ಲಿ ವಿ. ಶ್ರೀನಿವಾಸ ಪ್ರಸಾದ್ ಅವರು ಈ ಹೋರಾಟದ ಮುಂಚೂಣಿಯಲ್ಲಿದ್ದರೆ, ಬೆಂಗಳೂರಿನಲ್ಲಿ ಸಿದ್ದಲಿಂಗಯ್ಯ ಮತ್ತಿತರ ಗೆಳೆಯರು ಮುಂಚೂಣಿಯಲ್ಲಿದ್ದರು. ಬೂಸಾ ಗಲಾಟೆಯ ಬಳಿಕ ದಲಿತ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಯಿತು. ಈ ಚಳವಳಿಯು ಅಂತರ್‌ವಾಹಿನಿ ರೀತಿ ರಾಜ್ಯಾದ್ಯಂತ ಹಬ್ಬಿ ದಲಿತ ವಿದ್ಯಾರ್ಥಿಗಳನ್ನು ಎಚ್ಚರಿಸಿತ್ತು.

ಈ ಘಟನೆಯಿಂದಾಗಿ ಬಸವಲಿಂಗಪ್ಪ ಅವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕೆಂಬ ಒತ್ತಡ ಹೆಚ್ಚಾಯಿತು. ಬಸವಲಿಂಗಪ್ಪನವರು ರಾಜೀನಾಮೆ ಕೊಡಲು ಸಿದ್ಧವಿರಲಿಲ್ಲ. ದೇವರಾಜ ಅರಸು ಅವರಿಗೂ ರಾಜೀನಾಮೆ ಪಡೆಯಲು ಇಷ್ಟವಿರಲಿಲ್ಲ. ಆದರೆ ಒತ್ತಡ ದೊಡ್ಡಮಟ್ಟದಲ್ಲಿ ಸೃಷ್ಟಿಯಾಗಿತ್ತು. ಇಡೀ ಮಂತ್ರಿಮಂಡಲವೇ ರಾಜೀನಾಮೆ ಕೊಟ್ಟು, `ಬಸವಲಿಂಗಪ್ಪನವರು ಮಂತ್ರಿಮಂಡಲದಲ್ಲಿ ಇರುವುದಾದರೆ ನಾವ್ಯಾರೂ ಮುಂದುವರಿಯುವುದಿಲ್ಲ’ ಎಂದಿತ್ತು. ಅನಿವಾರ್ಯವಾಗಿ ಬಸವಲಿಂಗಪ್ಪನವರನ್ನು ಕೈಬಿಟ್ಟು ಮಂತ್ರಿಮಂಡಲವನ್ನು ಅರಸು ಪುನಾರಚನೆ ಮಾಡಿದರು. ಶೂದ್ರ-ಬ್ರಾಹ್ಮಣ ಚಳವಳಿಯಲ್ಲಿದ್ದು ನಮ್ಮ ಜೊತೆ ಗುರುತಿಸಿಕೊಂಡಿದ್ದ ಮೇಲ್ಜಾತಿಯ ಕೆಲ ಬರಹಗಾರರು ಬೂಸಾ ಗಲಾಟೆಯ ಬಳಿಕ ಬಸವಲಿಂಗಪ್ಪನವರ ವಿರುದ್ಧ ನಿಂತರು. ಅವರ ವಿರುದ್ಧ ಹೇಳಿಕೆ ಕೊಡಲು ಶುರುಮಾಡಿದರು. ಇದು ನಮಗೆ ಆಘಾತ ತಂದಿತ್ತು. ಇದರ ನಡುವೆ ಬಸವಲಿಂಗಪ್ಪನವರ ಪರ ನಿಂತ ಮೊದಲಿಗರು ಯು.ಆರ್.ಅನಂತಮೂರ್ತಿ, ಎರಡನೆಯದಾಗಿ ದನಿ ಎತ್ತಿದವರು ರಾಷ್ಟ್ರಕವಿ ಕುವೆಂಪು.

ಶೋಷಿತ-ಪಂಚಮ

ಬೂಸಾ ಗಲಾಟೆಯ ನಂತರ 1974ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲೇ ‘ಕರ್ನಾಟಕ ಬರಹಗಾರರ ಒಕ್ಕೂಟ’ದ ಅಡಿಯಲ್ಲಿ ಶೂದ್ರ ಬರಹಗಾರರ ಸಮಾವೇಶ ನಡೆಯಿತು. ಕುವೆಂಪು ಅವರು ಉದ್ಘಾಟಕರಾಗಿ ಬಂದಿದ್ದರು. ಅಂದು ಅವರು ಬಸವಲಿಂಗಪ್ಪನವರ ಬೂಸಾ ಹೇಳಿಕೆಯನ್ನು ಸಮರ್ಥಿಸಿದ್ದರು. ಇಂದು ದಿನಪತ್ರಿಕೆಯಾಗಿರುವ ‘ಆಂದೋಲನ’, ಆಗ ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ಪ್ರಕಟವಾಗುತ್ತಿತ್ತು. ಧಾರವಾಡದಲ್ಲಿ ಇದ್ದು ಆಂದೋಲನ ನಡೆಸುತ್ತಿದ್ದ ಸಂಪಾದಕ ರಾಜಶೇಖರ ಕೋಟಿಯವರು ಅಲ್ಲಿಂದ ಪತ್ರಿಕೆ ನಡೆಸುವುದು ಕಷ್ಟವಾಗಿ ಮೈಸೂರಿಗೆ ಬಂದಿದ್ದರು. ನಾವೆಲ್ಲ ‘ಆಂದೋಲನ’ಕ್ಕಾಗಿ ಕೆಲಸಮಾಡುತ್ತಿದ್ದೆವು.

ಇದನ್ನೂ ಓದಿರಿ: ‘ದಲಿತ’ ಪದದ ಅಪಾರ್ಥ: ದಲಿತ ಚಳವಳಿಗೇ ಅಪಾಯ

ಈ ನಡುವೆ 1975 ಜೂನ್ 26ರಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಎಲ್ಲಕಡೆ ರಾಜಕೀಯ ಪ್ರತಿಭಟನೆಗಳು ಹೆಚ್ಚಾದವು. ಜಯಪ್ರಕಾಶ್ ನಾರಾಯಣ್ ಅವರು ಆರಂಭಿಸಿದ್ದ ನವನಿರ್ಮಾಣ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ನಾವುಗಳೆಲ್ಲ ಚಳವಳಿಯ ಭಾಗವೇ ಆಗಿದ್ದೆವು. ಹೋರಾಟದ ಮುಂಚೂಣಿಯಲ್ಲಿದ್ದ ಬಹುತೇಕ ರಾಜಕೀಯ ಹಾಗೂ ಸಾಮಾಜಿಕ ಚಳವಳಿಯ ಮುಖಂಡರುಗಳೆಲ್ಲ ಭೂಗತರಾದರು. ಋಣಮುಕ್ತ ಕಾಯಿದೆ ಜಾರಿಗೆ ಬಂದಿದ್ದರಿಂದ ಗಿರವಿ ಅಂಗಡಿಗಳ ಮಾಲೀಕರು, ಲೇವಾದೇವಿಗಾರರೆಲ್ಲ ಕಂಗಾಲಾಗಿದ್ದರು. ಬಡವರು ಗಿರವಿ ಇಟ್ಟಿದ್ದ ಸಾಮಾನುಗಳನ್ನು ರಾಜಾರೋಷವಾಗಿ ಅಂಗಡಿಗಳಿಗೆ ನುಗ್ಗಿ ಕೊಂಡೊಯ್ದರು. ಪತ್ರಿಕೆಗಳು ಸಂಪಾದಕೀಯ ಪುಟಗಳನ್ನು ಖಾಲಿ ಬಿಟ್ಟು ಪ್ರಕಟವಾದವು. ಇಷ್ಟೆಲ್ಲಾ ಆದರೂ ನಾವುಗಳು ರಾಜಾರೋಷವಾಗಿ ಓಡಾಡುತ್ತಿದ್ದೆವು. ಚಳವಳಿಯ ಕೆಲಸಗಳನ್ನು ಕದ್ದು ಮುಚ್ಚಿ ಮಾಡುತ್ತಿದ್ದೆವು. ಪೊಲೀಸರು ನಮ್ಮಗಳಿಗ್ಯಾರಿಗೂ ತೊಂದರೆ ಕೊಡಲಿಲ್ಲ. ಒಮ್ಮೆ ಆಂದೋಲನ ಮುದ್ರಣಾಲಯದ ಮೇಲೆ ದಾಳಿ ಮಾಡಿದರಾದರೂ ಕೆಲಸ ಕಾರ್ಯಗಳಿಗೆ ಅಡಚಣೆಯಾಗಲಿಲ್ಲ.

1975ರ ಅಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ವಿವಿಧ ದಲಿತ ಗುಂಪುಗಳು ಒಗ್ಗೂಡಿಸುವ ಪ್ರಯತ್ನವಾಗಿ ಮೈಸೂರಿನ ಸಿದ್ಧಾರ್ಥ ಹಾಸ್ಟೆಲ್‌ನಲ್ಲಿ ಸಭೆಯೊಂದು ನಡೆಯಿತು. ಪರಸ್ಪರರಲ್ಲಿ ಒಮ್ಮತ ಮೂಡದ ಕಾರಣ ಸಭೆ ಯಶಸ್ವಿಯಾಗಲಿಲ್ಲ. ಇದರಿಂದ ನೊಂದ ನಾವುಗಳು ದಲಿತರಿಗಾಗಿ ಪತ್ರಿಕೆಯೊಂದನ್ನು ಮಾಡಬೇಕೆಂದು ನಿರ್ಧರಿಸಿದೆವು. ಆ ಪ್ರಯತ್ನದ ಭಾಗವಾಗಿ 1975ರ ಡಿಸೆಂಬರ್ 6ನೇ ತಾರೀಖು (ಬಾಬಾ ಸಾಹೇಬರ ಪರಿನಿಬ್ಬಾಣದ ದಿನ) `ಶೋಷಿತ’ ಎಂಬ ಪತ್ರಿಕೆಯನ್ನು ಶುರು ಮಾಡಿದೆವು. ಕೋಟಿಯವರು ಕನ್ನೇಗೌಡನಕೊಪ್ಪಲಿನಲ್ಲಿ ಸಣ್ಣ ಕಂಪೋಜಿಂಗ್ ಘಟಕ ಮತ್ತು ಕಾಲಲ್ಲಿ ತುಳಿದು ಮುದ್ರಣಮಾಡುವ ಸಣ್ಣ ಪ್ರಿಂಟಿಂಗ್ ಯಂತ್ರವನ್ನು ಇಟ್ಟುಕೊಂಡಿದ್ದರು. ನಾವು ‘ಆಂದೋಲನ’ದಲ್ಲಿ ಕೆಲಸ ಮಾಡುತ್ತಿದ್ದುದರಿಂದ ನಮಗೆ ಅಚ್ಚುಮೊಳೆ ಜೋಡಿಸುವುದು ಗೊತ್ತಿತ್ತು, ಪ್ರಿಂಟ್ ಮಾಡುವುದು ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಪ್ರಯೋಗಕ್ಕೆ ಮುಂದಾದೆವು. ದೇವನೂರ ಮಹಾದೇವ ಅವರು ಮಾರ್ಗದರ್ಶಕರಾಗಿದ್ದರು. ನಾನು ಸಂಪಾದಕನಾದೆ. ಗೋವಿಂದಯ್ಯ ಪ್ರಕಾಶಕರಾದರು. ಶಿವಾಜಿ ಗಣೇಶನ್, ರಾಮದೇವ್ ರಾಕೆ, ದೇವನೂರು ಶಿವಮಲ್ಲು ಸಂಪಾದಕೀಯ ಬಳಗದಲ್ಲಿ ಜೊತೆಗೆ ನಿಂತರು. ನಾವು ಐದೂ ಜನ ಪತ್ರಿಕೆಯನ್ನು ನಿರ್ವಹಣೆ ಮಾಡುತ್ತಿದ್ದೆವು. ದಲಿತರ ಮೇಲೆ ಎಲ್ಲೇ ದೌರ್ಜನ್ಯ ನಡೆದರೂ ವರದಿ ಮಾಡುತ್ತಿದ್ದೆವು.

ಅದೇ ಸಂದರ್ಭದಲ್ಲಿ ಭದ್ರಾವತಿ ವಿ.ಐ.ಎಸ್.ಎಲ್ ಫ್ಯಾಕ್ಟರಿಯಲ್ಲಿ ಆದ ದಲಿತ ದೌರ್ಜನ್ಯದ ಮಾಹಿತಿ ಬಂದಿತು. ಅಲ್ಲಿನ ಕ್ಯಾಂಟೀನ್‌ನಲ್ಲಿ ದಲಿತ ನೌಕರರಿಗೆ ಪ್ರತ್ಯೇಕವಾಗಿ ಟೀ ಲೋಟ ಹೊರಗಿಟ್ಟು, ಟೀಯನ್ನ ಮೇಲಿನಿಂದ ಸುರಿಯುತ್ತಿದ್ದಾರೆ ಎಂದು ಅದೇ ಕಾರ್ಖಾನೆಯಲ್ಲಿ ಫೋರ್ಮನ್ ಆಗಿದ್ದ ಬರೆಹಗಾರ ಬಿ. ರಾಜಣ್ಣ ಎಂಬವರು ನನಗೆ ಪತ್ರ ಬರೆದಿದ್ದರು. ಚಂದ್ರಪ್ರಸಾದ್ ತ್ಯಾಗಿಯವರು ಆಗ ಫ್ಯಾಕ್ಟರಿಯಲ್ಲಿ ನೌಕರರಾಗಿದ್ದರು. ನಾನು ಭದ್ರಾವತಿಗೆ ಹೋಗಿ, ವಿಚಾರ ತಿಳಿದುಕೊಂಡು ಬಂದು ಪತ್ರಿಕೆಯಲ್ಲಿ ವರದಿ ಮಾಡಿದೆ. ಮತ್ತೆ ಭದ್ರಾವತಿಗೆ ಹೋಗಿ ಪತ್ರಿಕೆಯ ಪ್ರತಿಗಳನ್ನು ಕಾರ್ಖಾನೆಯಲ್ಲಿ ಹಂಚಿದಾಗ ಗಲಾಟೆಯೂ ಆಯಿತು, ಒಂದು ದಿನ ಕಾರ್ಖಾನೆ ಬಂದ್ ಕೂಡ ಆಯಿತು. ನಂತರ ಕ್ಯಾಂಟೀನ್‌ನಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆ ನಿಂತಿತು. ಇದರಿಂದಾಗಿ ದಲಿತ ನೌಕರರೆಲ್ಲ ಸಂಘಟಿತರಾಗಿ ನಿಂತರು.

‘ಶೋಷಿತ’ ಹೆಸರಿಗೆ ಕೇಂದ್ರ ಸರ್ಕಾರದಿಂದ ನೋಂದಣಿ ಸಿಗಲಿಲ್ಲ. ಹೀಗಾಗಿ ಶೋಷಿತ ಪತ್ರಿಕೆ ಬದಲಾಗಿ `ಪಂಚಮ’ ಎಂಬ ಹೆಸರು ಕಳುಹಿಸಿದೆವು. ಅದಕ್ಕೆ ಅನುಮತಿ ದೊರಕಿತು. 1976ರ ಮಾರ್ಚ್ 7ನೇ ತಾರೀಕು `ಪಂಚಮ’ ಆರಂಭವಾಯಿತು. ಅದಕ್ಕೂ ನಮ್ಮ ಈ ಐದು ಜನರ ಟೀಂ ಮುಂದುವರೆಯಿತು. ಕರ್ನಾಟಕದ ಮೂಲೆ ಮೂಲೆಯಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ವರದಿ ಮಾಡುತ್ತಿದ್ದೆವು. ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಪರಿಚಯಿಸತೊಡಗಿದೆವು. ‘ಅನುಭವದ ಗಣಿಯಿಂದ’ ಎಂಬ ಅಂಕಣವನ್ನು ಆರಂಭಿಸಿ ಅಸ್ಪೃಶ್ಯತೆಯ ಅನುಭವಗಳನ್ನು ಹಂಚಿಕೊಳ್ಳತೊಡಗಿದೆವು.  ‘ಪಂಚಮ’ ದಲಿತ ವಿದ್ಯಾವಂತ ಯುವಕರ ಅಭಿವ್ಯಕ್ತಿ ಮತ್ತು ಸ್ವಾಭಿಮಾನದ ವೇದಿಕೆಯಾಯಿತು. ಲಕ್ಷಾಂತರ ಪ್ರಸಾರವುಳ್ಳ ಪತ್ರಿಕೆಗಳು ಮಾಡಲು ಅಸಾಧ್ಯವಾದ ಜನ ಜಾಗೃತಿಯ ಕೆಲಸವನ್ನು ‘ಪಂಚಮ’ ಮಾಡತೊಡಗಿತ್ತು. ‘ಶೋಷಿತ’ ಮತ್ತು ‘ಪಂಚಮ’ ಪತ್ರಿಕೆಯಲ್ಲಿ ಬರೆದವರು ಇಂದು ಪ್ರಖ್ಯಾತ ಸಾಹಿತಿಗಳಾಗಿದ್ದಾರೆ. ಅನುಭವ ಇದ್ದು, ಬರವಣಿಗೆ ಗೊತ್ತಿದ್ದೂ ಕೀಳರಿಮೆಯಿಂದ ಬಳಲುತ್ತಿದ್ದ ಆ ತಲೆಮಾರಿನ ದಲಿತ ಬರೆಹಗಾರರಿಗೆ ಆರಂಭದ `ಶೋಷಿತ’ ಮತ್ತು ನಂತರದ `ಪಂಚಮ’ ಪತ್ರಿಕೆಗಳು ಅಸಾಧಾರಣವಾದ ವಿಶ್ವಾಸವನ್ನು ತುಂಬಿ ಬರೆಯಲು ಪ್ರೇರೇಪಿಸಿದವು. ರಾಜ್ಯದಾದ್ಯಂತ ದಲಿತ ಬರೆಹಗಾರರು ಹುಟ್ಟಿಕೊಂಡರು.  ದಲಿತ ಚಳವಳಿಯ ಆರಂಭದ ಮುನ್ನುಡಿಯನ್ನ ‘ಪಂಚಮ’ ಹೀಗೆ ಬರೆಯತೊಡಗಿತ್ತು.

panchama 1
1976ರ ಮಾರ್ಚ್ 7ನೇ ತಾರೀಕಿನಂದು ಆರಂಭವಾದ ‘ಪಂಚಮ’ ಪತ್ರಿಕೆ ಹೊಸ ಲೇಖಕರನ್ನು ನಾಡಿಗೆ ಪರಿಚಯಿಸಿತು

ಬಹುತೇಕ ಬರೆಹಗಾರರೇ ಆಗಿದ್ದ ನಮಗೆಲ್ಲ ಆಗಿನ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳವಳಿ ಮತ್ತು ಅಲ್ಲಿನ ಸಾಹಿತ್ಯದ ಪರಿಚಯವಾಗುತ್ತಿತ್ತು. ನಾಮದೇವ ಡಸಾಳ, ರಾಜಾ ದಲೆ, ಅರ್ಜುನ ಡಾಂಗಳೆ ಮುಂತಾದವರ ಬರೆಹಗಳನ್ನು ಓದುತ್ತಿದ್ದೆವು. ಇದೇ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು `ದಲಿತ್ ಪ್ಯಾಂಥರ್ಸ್ ಪ್ರಣಾಳಿಕೆ’ಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದರು. ಇದು ನಮಗೆಲ್ಲ ದಲಿತ ಚಳವಳಿಯ ರೂಪುರೇಷೆಗಳು, ಕಾರ್ಯಕ್ರಮಗಳು, ಸೈದ್ಧಾಂತಿಕ ಸ್ಪಷ್ಟತೆ, ಗುರಿ ಮತ್ತು ಮಾರ್ಗ ಇವುಗಳ ಸ್ಪಷ್ಟಚಿತ್ರಣವನ್ನು ನೀಡಿತು. ಕೆಲವು ಇಂಗ್ಲಿಷ್ ಪತ್ರಿಕೆಗಳಲ್ಲಿ ಮಹಾರಾಷ್ಟ್ರದ ದಲಿತ ಲೇಖಕರ ಅನುವಾದಿತ ಬರೆಹಗಳು ಪ್ರಕಟವಾಗುತ್ತಿದ್ದವು. ಅವುಗಳನ್ನು ಓದಿ ಚರ್ಚಿಸುತ್ತಿದ್ದೆವು.

ದಲೇಕಯುಸಂ-ದಸಂಸ

‘ಪಂಚಮ’ ಕೆಲಸದ ಜೊತೆಯಲ್ಲಿಯೇ ‘ಕರ್ನಾಟಕ ಬರಹಗಾರರ ಒಕ್ಕೂಟ’ದ ಮಾದರಿಯಲ್ಲಿ ‘ದಲಿತ ಲೇಖಕ ಕಲಾವಿದರ ಯುವ ಸಂಘಟನೆ’ ಎಂಬ ಸಂಘಟನೆಯನ್ನು ಹುಟ್ಟಿಹಾಕಿದೆವು. ಇದನ್ನು `ದಲೇಕಯುಸಂ’ ಎಂದು ಕರೆದೆವು. ಸಣ್ಣಪುಟ್ಟ ಸಾಹಿತ್ಯ, ಸಾಂಸ್ಕೃತಿಕ, ವೈಚಾರಿಕ ಹಾಗೂ ರಾಜಕೀಯ ಚರ್ಚೆಗೆ ಸೀಮಿತವಾಗಿದ್ದ ಈ ಚಟುವಟಿಕೆಯ ಮುಂದುವರಿದ ಭಾಗವಾಗಿ ರಾಜ್ಯಮಟ್ಟದ ಸಮಾವೇಶ ಮಾಡಲು ನಿರ್ಧರಿಸಿದೆವು. ಹಣಕಾಸಿನ ಸೌಲಭ್ಯವಿಲ್ಲದೆ ಖಾಲಿ ಕೈನಲ್ಲಿದ್ದ ನಾವುಗಳು ಎಲ್ಲಿ ಸಮಾವೇಶ ಮಾಡಬೇಕು ಎಂದು ಯೋಚಿಸಿದಾಗ ನಮಗೆ ಆಶ್ರಯವಾಗಿ ಬಂದವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್), ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ)ಯಲ್ಲಿ ಕೆಲಸದಲ್ಲಿದ್ದ ದಲಿತ ನೌಕರರು. ಅವರು ಆ ವೇಳೆಗಾಗಲೇ ಸಂಘ ಮಾಡಿಕೊಂಡಿದ್ದರು. 1976ರ ಡಿಸೆಂಬರ್ 18, 19ರಂದು ಭದ್ರಾವತಿಯಲ್ಲಿ ಎರಡು ದಿನಗಳ ‘ದಲೇಕಯುಸಂ’ ಸಮಾವೇಶ ಆಯೋಜನೆಯಾಯಿತು.

ಎರಡೂ ದಿನ ಕಿಕ್ಕಿರಿದ ಸಭಾಂಗಣದಲ್ಲಿ ಸಮಾವೇಶ ನಡೆಯಿತು. ಮಾನ್ಯ ಬಿ. ಬಸವಲಿಂಗಪ್ಪನವರು, ಡಾ. ಬಿ.ಎಂ ತಿಪ್ಪೇಸ್ವಾಮಿ ಅವರು ಮತ್ತು ಖ್ಯಾತ ಪತ್ರಕರ್ತ ವಿ.ಟಿ. ರಾಜಶೇಖರ ಶೆಟ್ಟಿ ಅವರು ಸಮಾವೇಶಕ್ಕೆ ಬಂದಿದ್ದು ವಿಶೇಷವಾಗಿತ್ತು. ಈ ಸಮಾವೇಶಕ್ಕೆ ನಮ್ಮ ಊಹೆಗೂ ಮೀರಿ ಕ್ರಿಯಾಶೀಲ ಯುವ ಕಾರ್ಯಕರ್ತರು ರಾಜ್ಯಾದ್ಯಂತ ಬಂದು ಜಮಾಯಿಸಿದ್ದರು. ಬಿ. ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಕೆ. ನಾರಾಯಣ ಸ್ವಾಮಿ, ರುದ್ರಪ್ಪ ಹನಗವಾಡಿ, ಪರಮಶಿವ ನಡುಬೆಟ್ಟ, ದೇವಯ್ಯ ಹರವೆ, ಕೆ. ರಾಮಯ್ಯ, ಕೆ. ಬಿ. ಸಿದ್ದಯ್ಯ, ಗೋವಿಂದಯ್ಯ, ರಾಮದೇವ ರಾಕೆ, ಶಿವಾಜಿ ಗಣೇಶನ್, ಮಂಗ್ಳೂರ ವಿಜಯ, ವಿಜಯ ಪಾಟೀಲ, ಬೋಳ ಬಂಡೆಪ್ಪ, ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೀಕಾರ, ಶ್ರೀಧರ ಕಲಿವೀರ, ಬಾನಂದೂರು ಕೆಂಪಯ್ಯ, ಕೆ.ನ. ಶಿವತೀರ್ಥನ್, ದೇವನೂರ ಶಿವಮಲ್ಲು ಮತ್ತು ನಾನೂ ಸೇರಿದಂತೆ ಅಂದಿನ ಬಹುತೇಕ ಹೆಸರಾಂತ ಬರೆಹಗಾರರೆಲ್ಲ ಸಮಾವೇಶದಲ್ಲಿ ಪಾಲ್ಗೊಂಡಿದ್ದೆವು.

‘ದಸಂಸ’ಗೆ ಚಾಲನೆ

ಭದ್ರಾವತಿಯ ವಿ.ಐ.ಎಸ್.ಎಲ್ ಫ್ಯಾಕ್ಟರಿಯಲ್ಲಿ ಎನ್. ಗಿರಿಯಪ್ಪ ದಲಿತ ನೌಕರರ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಸಮಾಜವಾದಿ ಚಳವಳಿಯ ಹಿನ್ನೆಲೆಯಿಂದ ಬಂದ ಬಿ. ಕೃಷ್ಣಪ್ಪನವರು, ವಿ.ಐ.ಎಸ್.ಎಲ್ ಫ್ಯಾಕ್ಟರಿಯವರೇ ನಡೆಸುತ್ತಿದ್ದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಅಲ್ಲಿಯೇ ನೌಕರರಾಗಿದ್ದ ಚಂದ್ರಪ್ರಸಾದ ತ್ಯಾಗಿ, ಬಿ. ರಾಜಣ್ಣ ಮುಂತಾದವರು ಇಡೀ ಸಮಾವೇಶದಲ್ಲಿ ಏನೂ ಕೊರತೆಯಾಗದಂತೆ ಎಲ್ಲವನ್ನೂ ನಿರ್ವಹಿಸಿದರು. ಅಂದು ಸಮಾವೇಶದ ನಂತರ ಬಹುತೇಕ ಎಲ್ಲರೂ ಹೊರಟುಹೋದರು. ಉಳಿದ ಕೆಲವರಿಗೆ ಗಿರಿಯಪ್ಪನವರು ತಮ್ಮ ಮನೆಯಲ್ಲಿ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದರು.

ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?

ನಾವು ಕೆಲವರು ಎಂಟರಿಂದ ಹತ್ತು ಜನ ತಂಗಿದ್ದೆವು. ‘ಈ ಸಮಾವೇಶ ದೊಡ್ಡ ಯಶಸ್ಸು ಕಂಡಿದೆ. ಇದನ್ನು ಇಷ್ಟಕ್ಕೆ ಬಿಡಬಾರದು, ಇದಕ್ಕೊಂದು ಬಲಿಷ್ಠವಾದ ಸಂಘಟನೆಯ ರೂಪ ಕೊಡೋಣ’ ಎಂದು ಚರ್ಚೆ ನಡೆಯಿತು. ಆಗ ನಮ್ಮ ಮನಸ್ಸಲ್ಲಿ ಇದ್ದದ್ದು ಮಹಾರಾಷ್ಟ್ರದಲ್ಲಿ ಈಗಾಗಲೇ ಶುರುವಾಗಿದ್ದ ‘ದಲಿತ್ ಪ್ಯಾಂಥರ್ಸ್ ಚಳವಳಿ’. ಇದಕ್ಕೆ ಆಫ್ರಿಕಾದ ‘ಬ್ಲಾಕ್ ಫ್ಯಾಂಥರ್ಸ್’ ಸ್ಫೂರ್ತಿಯಾಗಿತ್ತು. ಇದರ ಪ್ರಭಾವ ನಮ್ಮ ಮೇಲೆ ಖಂಡಿತ ಇತ್ತು. ಸಂಘಟನೆ ಮಾಡಲು ಯೋಚಿಸಿದೆವು. ಈ ಸಂಬಂಧ ಹತ್ತಾರು ಸಭೆಗಳು ಮೈಸೂರು, ಬೆಂಗಳೂರು, ಧಾರವಾಡ, ಕೋಲಾರ, ಚಿಕ್ಕಮಗಳೂರು, ಗುಲ್ಬರ್ಗಾ – ಹೀಗೆ ಎಲ್ಲ ಕಡೆ ಜರುಗಿದವು. ಮೊದಲಿನ ಮಹತ್ವದ ಸಭೆ ನಡೆದದ್ದು ಮೈಸೂರಿನ ಸಿದ್ದಾರ್ಥ ಹಾಸ್ಟೆಲ್‌ನಲ್ಲಿ.

b krishnappa
ಪ್ರೊ.ಬಿ.ಕೃಷ್ಣಪ್ಪ

ಹಲವು ಸಭೆಗಳ ನಂತರ 1977ರ ಸೆಪ್ಟೆಂಬರ್ 18ನೇ ತಾರೀಕು ಎಂ.ಡಿ ಗಂಗಯ್ಯ ಅವರ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಇನ್ನೊಂದು ಮಹತ್ವದ ಸಭೆ ನಡೆಯಿತು. ದಲಿತ ಚಳವಳಿಯನ್ನು ಇಡೀ ರಾಜ್ಯಾದ್ಯಂತ ಸಂಘಟಿತವಾಗಿ ಬೆಳೆಸಬೇಕು ಅನ್ನುವ ತೀರ್ಮಾನವನ್ನು ಅಲ್ಲಿ ಕೈಗೊಂಡೆವು. ಅದಕ್ಕಾಗಿ ‘ದಲೇಕಯುಸಂ’ಅನ್ನು ವಿಸರ್ಜಿಸಿ ಹೊಸ ಸಂಘಟನೆ ಕಟ್ಟಬೇಕು ಮತ್ತು ಅದಕ್ಕೆ ಹೋರಾಟದ ಕೆಚ್ಚಿರುವ ಹೊಸ ಹೆಸರಿಡಬೇಕು ಎಂದು ಚರ್ಚಿಸಿದಾಗ ಮೂರು ಹೆಸರುಗಳು ನಮ್ಮ ಮುಂದೆ ಬಂದವು. ಮಹಾರಾಷ್ಟ್ರದ ‘ದಲಿತ್ ಫ್ಯಾಂಥರ್ಸ್’ ಹೆಚ್ಚು ಚಾಲ್ತಿಯಲ್ಲಿದ್ದ ಹೆಸರಾಗಿತ್ತು. ಅದಕ್ಕೆ ಕರ್ನಾಟಕ ಸೇರಿಸಿ ‘ಕರ್ನಾಟಕ ದಲಿತ್ ಫ್ಯಾಂಥರ್ಸ್’ ಎಂದು ಇಟ್ಟುಕೊಳ್ಳಬಹುದೆಂದು ಕೆಲವರು ಸಲಹೆ ನೀಡಿದರು. ಬೆಂಗಳೂರಿನಲ್ಲಿ ಡಿ.ಎಂ. ತಿಮ್ಮರಾಯಪ್ಪ, ಚಿದಾನಂದ ಉಲ್ಲಾಳ್ ಮೊದಲಾದವರು ಸಕ್ರಿಯವಾಗಿ ಕಟ್ಟಿದ್ದ ‘ದಲಿತ ಕ್ರಿಯಾ ಸಮಿತಿ’ಯ ಹೆಸರೂ ಪ್ರಸ್ತಾಪವಾಯಿತು. ಈಗಾಗಲೇ ಭದ್ರಾವತಿಯಲ್ಲಿ ಎನ್. ಗಿರಿಯಪ್ಪನವರು ಅಧ್ಯಕ್ಷರಾಗಿ, ಬಿ. ಕೃಷ್ಣಪ್ಪನವರು ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದ ‘ದಲಿತ ಸಂಘರ್ಷ ಸಮಿತಿ’ ಎಂಬ ಹೆಸರನ್ನು ಮತ್ತೆ ಕೆಲವರು ಮುಂದಿಟ್ಟರು. ಈ ಮೂರರಲ್ಲಿ ಯಾವುದನ್ನು ಇಟ್ಟುಕೊಳ್ಳಬೇಕು ಎಂದು ಬಂದಾಗ ‘ದಲಿತ್ ಫ್ಯಾಂಥರ್ಸ್’ ಈ ನೆಲಕ್ಕೆ ಒಗ್ಗುವುದಿಲ್ಲ ಮತ್ತು ದಲಿತ ಕ್ರಿಯಾ ಸಮಿತಿ ಕಾರ್ಯ ವೈಖರಿ ನಮಗೆ ಹೊಂದಿಕೆಯಾಗದ ಕಾರಣ ಆ ಎರಡೂ ಹೆಸರನ್ನು ಕೈಬಿಡಲು ನಿರ್ಧರಿಸಲಾಯಿತು. ಅಂತಿಮವಾಗಿ ಎಲ್ಲರೂ ‘ದಲಿತ ಸಂಘರ್ಷ ಸಮಿತಿ’ (ದಸಂಸ) ಎಂಬ ಹೆಸರಿಗೆ ಒಪ್ಪಿಗೆ ಸೂಚಿಸಿದರು.

ಈ ನಡುವೆ ನಾನು ಮತ್ತು ಶಿವಾಜಿ ಗಣೇಶನ್ 1978ರ ಸೆಪ್ಟೆಂಬರ್‌ನಲ್ಲಿ ‘ಪ್ರಜಾವಾಣಿ’ ಸೇರಿದ್ದೆವು. ಸಂಘಟನೆಯ ರೂಪುರೇಷೆ ಪದಾಧಿಕಾರಿಗಳು ಇತ್ಯಾದಿಗಳನ್ನು ಅಂತಿಮಗೊಳಿಸಲು ಬೆಂಗಳೂರಿನಲ್ಲಿ ಮತ್ತೊಂದು ಸಭೆಯನ್ನು ಆಯೋಜಿಸಲಾಯಿತು.  ಆಗ ಶ್ರೀರಾಮಪುರದಲ್ಲಿ ವಾಸವಿದ್ದ ಕವಿ ಸಿದ್ದಲಿಂಗಯ್ಯನವರು ಸಭೆ ವ್ಯವಸ್ಥೆ ಮಾಡುವ ಜವಾಬ್ದಾರಿ ಹೊತ್ತುಕೊಂಡರು. ಶ್ರೀರಾಮಪುರದಲ್ಲಿ ಇದ್ದ ಆರ್. ಗೋಪಾಲಸ್ವಾಮಿ ಅಯ್ಯರ್ ಹಾಸ್ಟೆಲ್‌ನಲ್ಲಿ 1978ರ ಅಕ್ಟೋಬರ್ 10 ಮತ್ತು 11ರಂದು ‘ದಸಂಸ’ದ ಮೊದಲ ರಾಜ್ಯ ಸಮಿತಿ ಸಭೆ ನಡೆಯಿತು. ದಲಿತ ಸಂಘರ್ಷ ಸಮಿತಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ- ಈ ರೀತಿ ಪದಾಧಿಕಾರಿಗಳು ಇರಬಾರದು. ಅದಕ್ಕೆ `ಸಂಚಾಲಕರು’ ಎಂದಷ್ಟೇ ಇಟ್ಟುಕೊಳ್ಳೋಣ ಎಂದು ಮಹತ್ವದ ನಿರ್ಧಾರ ಕೈಗೊಂಡೆವು. ಯಾರು ರಾಜ್ಯ ಸಂಚಾಲಕರು ಆಗಬೇಕೆಂದಾಗ ಬಹುತೇಕರು ದೇವನೂರ ಮಹಾದೇವ ಅವರ ಹೆಸರನ್ನು ಹೇಳಿದರು. ಸಾಹಿತಿಯಾಗಿ ಈಗಾಗಲೇ ಅವರ ಹೆಸರು ದೊಡ್ಡ ಮಟ್ಟದಲ್ಲಿತ್ತು. ದೇವನೂರರು ಅದಕ್ಕೆ ಒಪ್ಪಲಿಲ್ಲ. ಬಿ.ಕೃಷ್ಣಪ್ಪನವರನ್ನು ಆಯ್ಕೆ ಮಾಡಬೇಕು ಎಂದು ದೇವನೂರರು ಸಲಹೆ ನೀಡಿದರು. ಒಮ್ಮತದಿಂದ ಬಿ. ಕೃಷ್ಣಪ್ಪನವರು ‘ದಸಂಸ’ದ ಮೊದಲ ರಾಜ್ಯ ಸಂಚಾಲಕರಾಗಿ ಆಯ್ಕೆಯಾದರು. ಅಧಿಕೃತವಾಗಿ ಒಂದು ಸಂಘಟನೆಯ ಸ್ವರೂಪದಲ್ಲಿ ‘ದಸಂಸ’ ಕಾರ್ಯಾಚರಣೆ ಆರಂಭಿಸಿತು.

(ಮುಂದುವರಿಯುತ್ತದೆ..)

(‘ಈದಿನ.ಕಾಮ್’ ಹೊರ ತಂದಿರುವ ‘ನಮ್ಮ ಕರ್ನಾಟಕ- ನಡೆದ ಹೆಜ್ಜೆ 50.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಬರಹ)

idnudar
ಇಂದೂಧರ ಹೊನ್ನಾಪುರ
+ posts

ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನರಾದ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ದಲಿತ ಚಳವಳಿಯನ್ನು ಕಟ್ಟಿದವರಲ್ಲಿ ಒಬ್ಬರು. ದಲಿತ ಚಳವಳಿಯ ಭಾಗವಾಗಿದ್ದ 'ಪಂಚಮ' ಪತ್ರಿಕೆಯನ್ನು ಮುನ್ನಡೆಸಿದರು. 'ಪ್ರಜಾವಾಣಿ'ಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ಸಂವಾದ' ಮಾಸಿಕದ ಸಂಪಾದಕರಾಗಿದ್ದಾರೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಇಂದೂಧರ ಹೊನ್ನಾಪುರ
ಇಂದೂಧರ ಹೊನ್ನಾಪುರ
ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನರಾದ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ದಲಿತ ಚಳವಳಿಯನ್ನು ಕಟ್ಟಿದವರಲ್ಲಿ ಒಬ್ಬರು. ದಲಿತ ಚಳವಳಿಯ ಭಾಗವಾಗಿದ್ದ 'ಪಂಚಮ' ಪತ್ರಿಕೆಯನ್ನು ಮುನ್ನಡೆಸಿದರು. 'ಪ್ರಜಾವಾಣಿ'ಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ಸಂವಾದ' ಮಾಸಿಕದ ಸಂಪಾದಕರಾಗಿದ್ದಾರೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...