ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ

Date:

ಜನವರಿ 13ನೇ ತಾರೀಕಿನಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಂದು ವಿದ್ಯಮಾನ ನಡೆಯಿತು. ತಮಿಳುನಾಡಿನ ದಲಿತ ರಾಜಕೀಯ ಪಕ್ಷವಾದ ಆತಿ ತಮಿಳರ್ ಕಚ್ಚಿಯ ಸದಸ್ಯರು ಬಿಜೆಪಿ ಕಚೇರಿ ಬಳಿ ಗೋಮಾಂಸವನ್ನು ಬಿಸಾಡಿ, ಪ್ರತಿರೋಧಿಸಿದರು. ಒಂದು ಮಟ್ಟದ ಉದ್ವಿಗ್ನತೆಯೂ ಸೃಷ್ಟಿಯಾಯಿತು. ನಗರದ ದೇವಾಲಯವೊಂದರ ಬಳಿ ಇದ್ದ ಗೋಮಾಂಸದ ಅಂಗಡಿಗೆ ಬಿಜೆಪಿಯ ಪದಾಧಿಕಾರಿಗಳ ಆಕ್ಷೇಪಕ್ಕೆ ಪ್ರತಿಯಾಗಿ ದಲಿತರು ಇಂತಹದ್ದೊಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ಕಚೇರಿಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ವಿಕೆಕೆ ಮೆನನ್ ರಸ್ತೆಯಲ್ಲಿ ಪ್ರತಿಭಟನೆ ನಡೆದಿತ್ತು. ಅದೇ ರಸ್ತೆಯಲ್ಲಿರುವ ಎಂಡಿಎಂಕೆ ಕಚೇರಿಯ ಮುಂದೆ ಸೇರಿದ ಐದು ಜನ ಆತಿ ತಮಿಳರ್ ಕಚ್ಚಿ ಮುಖಂಡರು ಬಿಜೆಪಿ ಆಫೀಸಿನತ್ತ ಹೊರಟರು. ಪಕ್ಷದ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ನಂತರ ಅವರು ರಸ್ತೆಗೆ ಗೋಮಾಂಸ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರಗಳನ್ನು ಬಿಸಾಡಿದರು. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಬಂಧಿಸಿ, ಮದುವೆ ಮಂಟಪವೊಂದಕ್ಕೆ ಕರೆತಂದರು.

ನಡೆದದ್ದೇನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೊಯಮತ್ತೂರಿನ ಹೊರವಲಯದಲ್ಲಿರುವ ಉದಯಂಪಾಲಯಂ ಎಂಬ ಹಳ್ಳಿಯಲ್ಲಿ ರವಿ ಮತ್ತು ಅವರ ಪತ್ನಿ ಅಬಿತಾ ಅವರು ಬೀಫ್‌ ಬಿರಿಯಾನಿ ಅಂಗಡಿ ನಡೆಸುತ್ತಿದ್ದರು. ಈ ಮಳಿಗೆಯ ವಿರುದ್ಧ ಕೆಲವು ಗ್ರಾಮಸ್ಥರು ಮತ್ತು ಸ್ಥಳೀಯ ಬಿಜೆಪಿ ನಾಯಕ ಸುಬ್ರಮಣಿ ಆಕ್ಷೇಪ ವ್ಯಕ್ತಪಡಿಸಿದರು. ವೀರಮತಿ ಅಮ್ಮನವರ ದೇವಸ್ಥಾನ ಮತ್ತು ಶಾಲೆಗೆ ಸಮೀಪದಲ್ಲೇ ಬೀಫ್ ಬಿರಿಯಾನಿ ಮಾರಾಟ ಮಳಿಗೆ ಇದೆ, ಇದು ಸ್ಥಳೀಯ ನಿಯಮಗಳಿಗೆ ವಿರುದ್ಧವಾಗಿದೆ ಎಂಬುದು ವಿರೋಧಿಗಳ ಆಕ್ಷೇಪ. ಅಂಗಡಿಯನ್ನು ತೆರವುಗೊಳಿಸುವಂತೆ ಸುಬ್ರಮಣಿ ಬೆದರಿಕೆ ಹಾಕಿದರು. ಸ್ಥಳಾಂತರಗೊಳ್ಳಲು ರವಿ ಒಪ್ಪಿಕೊಂಡರೆ, ಅಬಿತಾ ಆಕ್ಷೇಪ ವ್ಯಕ್ತಪಡಿಸಿದರು. ಈ ಘಟನೆಯನ್ನು ರೆಕಾರ್ಡ್ ಮಾಡಿಕೊಂಡ ಸುಬ್ರಮಣಿ ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸಿದರು.

2024ರ ಡಿಸೆಂಬರ್ 25 ಮತ್ತು 2025ರ ಜನವರಿ 5ರಂದು ಅಬಿತಾ ಅವರು ಸುಬ್ರಮಣಿ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದರು. ಆ ಪ್ರದೇಶದಲ್ಲಿ ಇತರ ಮಾಂಸಾಹಾರದ ಪದಾರ್ಥಗಳನ್ನು ಆಕ್ಷೇಪಣೆಯಿಲ್ಲದೆ ಮಾರಾಟ ಮಾಡಲಾಗುತ್ತಿದೆ, ಆದರೆ ಗೋಮಾಂಸ ಮಾರಾಟವನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಿದರು. ಅಬಿತಾ ದೂರು ನೀಡಿದ ನಂತರ ಪೊಲೀಸರು ಸುಬ್ರಮಣಿ ವಿರುದ್ಧ ಪ್ರಕರಣ ದಾಖಲಿಸಿದರು.

tn 3
ತಮಿಳುನಾಡಿನ ದಲಿತ ರಾಜಕೀಯ ಪಕ್ಷವಾದ ಆತಿ ತಮಿಳರ್ ಕಚ್ಚಿಯ ಸದಸ್ಯರು ಕೊಯಮತ್ತೂರಿನ ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಸಂದರ್ಭ

ಗೋಮಾಂಸ ಮಳಿಗೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಮತ್ತು ಸುಬ್ರಮಣಿ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಿರೋಧಿಸಿ 1,000ಕ್ಕೂ ಹೆಚ್ಚು ಗ್ರಾಮಸ್ಥರು ದೇವಾಲಯದ ಬಳಿ ಸೇರಿ ಪ್ರತಿಭಟನೆ ನಡೆಸಿದಾಗ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಗ್ರಾಮದ ಮುಖ್ಯಸ್ಥರ ಒತ್ತಡಕ್ಕೆ ಮಣಿದ ಗ್ರಾಮ ಸಮಿತಿಯು ರವಿ ಮತ್ತು ಅಬಿತಾ ಅವರನ್ನೂ ಒಳಗೊಂಡಂತೆ ಇತರರ ಏಳು ಆಹಾರ ಮಳಿಗೆಗಳನ್ನು ತೆರವು ಮಾಡಿಸಿತು.

ಇದನ್ನೂ ಓದಿರಿ: ಸಿನೆಮಾಗಳು ‘ಮುಸ್ಲಿಂ ಭಯ ಮತ್ತು ದ್ವೇಷ’ ಬಿತ್ತಿದ್ದು ಹೇಗೆ?

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮತ್ತು ಅದರ ಮುಖಂಡರು ಈ ನಿರ್ಧಾರವನ್ನು ಟೀಕಿಸಿದರು. ಇದು ಆಹಾರ ಹಕ್ಕುಗಳ ಉಲ್ಲಂಘನೆಯಾಗಿದೆ, ದಂಪತಿಯ ಸುರಕ್ಷತೆಗೆ ಅಪಾಯ ತಂದೊಡ್ಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಗೋಮಾಂಸ ಮಾರಾಟವನ್ನು ಕಾನೂನುಬದ್ಧವಾಗಿ ನಿರ್ಬಂಧಿಸದಿದ್ದರೂ, ದೇವಾಲಯದ ಬಳಿ ಮಳಿಗೆ ಇರುವುದು ಕಳವಳ ಹುಟ್ಟಿಹಾಕಿದೆ ಎಂದು ಸಿಪಿಎಂ ಕೌನ್ಸಿಲರ್ ವಿ. ರಾಮಮೂರ್ತಿ ಒಪ್ಪಿಕೊಂಡರು. ದಂಪತಿಯು ತಮ್ಮೊಂದಿಗೆ ಸಮಾಲೋಚಿಸಿದ್ದಾರೆ ಎಂದರು. ಆದರೆ ಅಂತಿಮವಾಗಿ ಅಂಗಡಿಯನ್ನು ಸೂಕ್ಷ್ಮ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಈ ಎಲ್ಲ ಬೆಳವಣಿಗೆಯಿಂದ ಸಿಟ್ಟಿಗೆದ್ದಿದ್ದ ಆತಿ ತಮಿಳರ್ ಕಚ್ಚಿ ಸದಸ್ಯರು ಸುಬ್ರಮಣಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಮತ್ತು ಬಿಜೆಪಿಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಕರೆ ನೀಡಿದ್ದಾರೆ. ಇದಿಷ್ಟು ಗೋಮಾಂಸ ಮತ್ತು ದಲಿತರ ವಿಚಾರದಲ್ಲಿ ತಮಿಳುನಾಡಿನಲ್ಲಾದ ಇತ್ತೀಚಿನ ವಿದ್ಯಮಾನ!

ಗೋಹತ್ಯೆ ನಿಷೇಧ ಎಂಬುದನ್ನು ಅಲ್ಪಸಂಖ್ಯಾತ ವಿರೋಧಿ ನೆಲೆಯಲ್ಲಿ ಚರ್ಚೆಗೆ ತರುವ ಬಿಜೆಪಿಗೆ ಸವಾಲಾಗಿ ನಿಲ್ಲುವುದು ಮುಸ್ಲಿಂ ಕ್ರಿಶ್ಚಿಯನ್ನೇತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳು.

“ಗೋಮಾಂಸವು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಆಹಾರ ಮಾತ್ರ, ಭಾರತೀಯರ ಮೇಲೆ ಇಸ್ಲಾಮಿಕ್- ಕ್ರಿಶ್ಚಿಯನ್ ಸಂಸ್ಕೃತಿಯನ್ನು ಹೇರುವ ಭಾಗವಾಗಿ ಗೋಮಾಂಸ ಭಕ್ಷಣೆ ನಡೆಯುತ್ತದೆ” ಎಂಬುದು ಬಿಜೆಪಿಯ ಕಲ್ಪಿತ ಸಿದ್ಧಾಂತ.

ಬಿಜೆಪಿಯ ಈ ಕಾರ್ಯಸೂಚಿಯ ಕುರಿತು ಬರೆಯುತ್ತಾ ಚಿಂತಕ ಕಾಂಚ ಐಲಯ್ಯ ಅವರು ಹೀಗೆ ಹೇಳುತ್ತಾರೆ: “ಬಿಜೆಪಿಗೆ ಇತರ ಕಾರ್ಯಸೂಚಿಗಳಿಗಿಂತ ಈ ನಿಲುವು ಹೆಚ್ಚು ತಿರುಗುಬಾಣವಾಗಿದೆ. ಏಕೆಂದರೆ ಸಾಂದರ್ಭಿಕವಾಗಿ ಅಥವಾ ನಿಯಮಿತವಾಗಿ ಗೋಮಾಂಸ ತಿನ್ನುವ  ಶೇ.45ರಿಂದ 50ರಷ್ಟು ಭಾರತೀಯರ ಆಹಾರ ಹಕ್ಕುಗಳ ಮೇಲೆ ಈ ಕಾರ್ಯಸೂಚಿ ಪರಿಣಾಮ ಬೀರುತ್ತದೆ. ಭಾರತದಲ್ಲಿ ಗೋಮಾಂಸ ತಿನ್ನುವ ಮುಸ್ಲಿಮೇತರ, ಕ್ರೈಸ್ತೇತರರೇ ಹೆಚ್ಚಿದ್ದಾರೆ ಎಂದು ತಿಳಿಯುವುದಕ್ಕೆ ಸರಳ ಅಂಕಗಣಿತ ಗೊತ್ತಿದ್ದರೆ ಸಾಕು. ಬಿಜೆಪಿಯ ಗೋಮಾಂಸ ವಿರೋಧಿ ಸಿದ್ಧಾಂತವು ಅದರ ಬ್ರಾಹ್ಮಣೀಯ ಹಿಂದುತ್ವ ಪ್ರಜ್ಞೆಯಿಂದ ಹೊರಹೊಮ್ಮುತ್ತದೆ. ತಳಮಟ್ಟದ ಸಾಮಾಜಿಕ ವಾಸ್ತವಕ್ಕೆ ಕುರುಡಾಗಿ, ಕಾಲ್ಪನಿಕ ಪುರಾಣವನ್ನು ಸೃಷ್ಟಿಸುತ್ತಾ ‘ಮುಸ್ಲಿಂ ಪೂರ್ವ ಭಾರತದಲ್ಲಿ ಗೋಮಾಂಸ ತಿನ್ನುವ ಸಾಂಸ್ಕೃತಿಕ ಪದ್ಧತಿಯೇ ಇರಲಿಲ್ಲ’ ಎಂದು ಬಿಜೆಪಿಯವರು ವಾದಿಸುತ್ತಾರೆ. ಜಾತಿ ವ್ಯವಸ್ಥೆಯ ವಿಚಾರದಲ್ಲೂ ಬಿಜೆಪಿ ಸಿದ್ಧಾಂತಿಗಳು ಇದೇ ರೀತಿಯ ವಾದವನ್ನು ಮಾಡುತ್ತಾ, ‘ಮೊಘಲರ ಆಳ್ವಿಕೆಯ ನಂತರ ಜಾತಿ ವ್ಯವಸ್ಥೆ ರಚನೆಯಾಯಿತು’ ಎನ್ನುತ್ತಾರೆ. ಆದರೆ ಈ ವಾದ ಹೆಚ್ಚು ಕಾಲ ನಿಲ್ಲಲಿಲ್ಲ. ಬಿಜೆಪಿಯ ಬೀಫ್ ವಿರೋಧಿ ಅಜೆಂಡಾಕ್ಕೆ ಅಲ್ಪಸಂಖ್ಯಾತರಿಗಿಂತ ಹೆಚ್ಚಿನ ಪ್ರತಿರೋಧ ಎಸ್‌ಸಿ, ಎಸ್‌ಟಿ ಸಮುದಾಯಗಳಿಂದ ಹೊಮ್ಮುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಕೆಲವು ಒಬಿಸಿ ಸಮುದಾಯಗಳು ಅಲ್ಪಸಂಖ್ಯಾತರಿಗಿಂತ ಹೆಚ್ಚಿನ ಬೀಫ್ ಅವಲಂಬನೆಯನ್ನು ಹೊಂದಿದ್ದಾರೆ. ಗೋಮಾಂಸ ಆಹಾರವು ಮುಸ್ಲಿಂ- ಕ್ರಿಶ್ಚಿಯನ್ನರಿಂದ ಆರಂಭವಾಯಿತು ಎಂಬುದೇ ಬಹುದೊಡ್ಡ ಮಿಥ್ಯೆ. ಬೌದ್ಧಪೂರ್ವ ಭಾರತದಲ್ಲಿ ಗೋಮಾಂಸವು, ಬ್ರಾಹ್ಮಣರು ಸೇರಿದಂತೆ ಎಲ್ಲ ಭಾರತೀಯರ ಅವಿಭಾಜ್ಯ ಆಹಾರವಾಗಿತ್ತೆಂದು ಬಿಜೆಪಿ ನಾಯಕರಿಗೂ ತಿಳಿದಿದೆ”.(ಆಧಾರ: ಇಪಿಡಬ್ಲ್ಯೂ)

kancha ailayya
ಚಿಂತಕ ಕಾಂಚ ಐಲಯ್ಯ

ಹಿಂದುತ್ವ ಸಿದ್ದಾಂತವು ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅದು ಮೇಲು ನೋಟಕ್ಕೆ ಅಲ್ಪಸಂಖ್ಯಾತ ವಿರೋಧಿ ನಿಲುವನ್ನು ವ್ಯಕ್ತಪಡಿಸಿದರೂ, ಆಳದಲ್ಲಿ ಜಾತಿ ಶ್ರೇಣಿಯನ್ನು ಪೋಷಿಸುವ ಕಾರ್ಯಸೂಚಿಯನ್ನು ಹೊಂದಿದೆ. ಹೀಗಾಗಿಯೇ ಜಾತಿ ತಾರತಮ್ಯಗಳ ಕುರಿತು ಹಿಂದುತ್ವ ಪ್ರತಿಪಾದಕರು ಮಾತನಾಡುವುದಿಲ್ಲ. ಈ ದೇಶದ ಬಹುಸಂಖ್ಯಾತ ಶೋಷಿತ ಸಮುದಾಯದ ವೋಟಿನ ಶಕ್ತಿಯು, ಸಾಂವಿಧಾನಿಕ ಬಲವನ್ನು ಅಷ್ಟು ಸುಲಭವಾಗಿ ದಮನ ಮಾಡಲು ಅವಕಾಶ ನೀಡಿಲ್ಲ ಎಂಬುದು ಸತ್ಯ.

ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?

ಗೋರಕ್ಷಣೆಯ ಹೆಸರಲ್ಲಿ ಸಂಘಪರಿವಾರ ನಡೆಸುವ ದುಂಡಾವರ್ತನೆಗೆ ಕೇವಲ ಮುಸ್ಲಿಮರಷ್ಟೇ ಬಲಿಪಶುಗಳಲ್ಲ, ದಲಿತರೂ ಕೂಡ ಈ ದಾಳಿಗಳಿಂದ ಜರ್ಝರಿತರಾದವರು. ಗುಜರಾತಿನ ಊನಾದಲ್ಲಿ ಊನಗೊಂಡ ‘ಅಸ್ಪೃಶ್ಯ ಭಾರತ’ವನ್ನು ಮರೆಯಲಾಗದು. 2016, ಜುಲೈ 11ರಂದು ಗುಜರಾತ್‌ನ ಗೀರ್‌ಸೋಮನಾಥ ಜಿಲ್ಲೆಯ ಊನಾದ ಬಳಿ ಇರುವ ಮೋಟಾಸಮಾಧಿಯಾಲ ಎಂಬ ಹಳ್ಳಿಯಲ್ಲಿ ದಲಿತ ಸಮುದಾಯದವರು ಸತ್ತ ದನದ ಚರ್ಮವನ್ನು ಸುಲಿಯುವ ಕೆಲಸವನ್ನು ಎಂದಿನಂತೆ ಮಾಡುತ್ತಿದ್ದರು. ಅದು ತಲತಲಾಂತರದಿಂದ ಬಂದ ಕಸುಬಾಗಿತ್ತು. ಸತ್ತ ದನವನ್ನು ಬೇರೆಯ ಜಿಲ್ಲೆಯಿಂದ ತಂದಿದ್ದರು. ಆಗ ಎರಡು ಕಾರಿನಲ್ಲಿ ಬಂದ ಗೋರಕ್ಷಕ ಗೂಂಡಾಗಳು ದಾಂಧಲೆ ಎಬ್ಬಿಸಿದರು. ಮತಾಂಧತೆಯ ಅಮಲೇರಿಸಿದ್ದ ಮೇಲ್ಜಾತಿ ಗೋರಕ್ಷಕ ಪಡೆ ದಲಿತರನ್ನು ಕಾರಿಗೆ ಕಟ್ಟಿಹಾಕಿ ದೊಣ್ಣೆ ಮತ್ತು ಕಬ್ಬಿಣದ ರಾಡುಗಳಿಂದ ಥಳಿಸಿತು. ಊನಾ ಪಟ್ಟಣಕ್ಕೆ ಕರೆತಂದು ಎಲ್ಲರೆದುರು ಬಟ್ಟೆ ಬಿಚ್ಚಿ ಭೀಕರವಾಗಿ ಹೊಡೆಯುತ್ತಾರೆ. ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುತ್ತಾರೆ. ಕೇಸರಿ ಪಡೆಯ ಈ ದುಂಡಾವರ್ತನೆಯನ್ನು ಖಂಡಿಸಿ ಗುಜರಾತ್‌ನಲ್ಲಿ ದಲಿತರು ಬೀದಿಗಿಳಿಯುತ್ತಾರೆ. ಸತ್ತ ಪ್ರಾಣಿಗಳ ಕಳೇಬರವನ್ನು ರಸ್ತೆಗೆ ತಂದು ಬೀಸಾಡುತ್ತಾರೆ. ರಸ್ತೆ ರಸ್ತೆಯಲ್ಲಿ ಕಳೇಬರವನ್ನು ತಂದು ಎಸೆದಿದ್ದರಿಂದ ಒಂದು ವಾರ ಕಾಲ ಗುಜರಾತ್ ಗಬ್ಬು ನಾರುತ್ತದೆ!

una
ಗುಜರಾತ್‌ನ ಊನಾದಲ್ಲಿ ದಲಿತರನ್ನು ಭೀಕರವಾಗಿ ಥಳಿಸಿದ್ದ ಗೋರಕ್ಷಕ ಗೂಂಡಾ ಪಡೆ

ಘಟನೆಯಿಂದ ನೊಂದ ದಲಿತ ಯುವಕರು ಆತ್ಮಹತ್ಯೆಗೆ ಯತ್ನಿಸುತ್ತಾರೆ. ಅದರಲ್ಲಿ ಒಬ್ಬ ಸಾವಿಗೀಡಾಗುತ್ತಾನೆ. ಆಗಸ್ಟ್ 15ರಂದು ಅಹಮದಾಬಾದ್‌ನಿಂದ ಊನಾವರೆಗೆ ಕೈಗೊಂಡ ದಲಿತ ಅಸ್ಮಿತೆ ಯಾತ್ರೆಯು ಐತಿಹಾಸಿಕ ಘಟನೆ. ಸತ್ತ ಪ್ರಾಣಿಗಳ ವಿಲೇವಾರಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳುತ್ತಾರೆ. ದಲಿತರ ಮೇಲೆ ಬಾಂಬ್ ಎಸೆದು ದಾಳಿ ಮಾಡಲಾಗುತ್ತದೆ. ದಲಿತರ ಮೇಲೆಯೇ ಎಫ್‌ಐಆರ್ ಹಾಕಲಾಗುತ್ತದೆ. ಬಿಜೆಪಿ ಸರ್ಕಾರ ದಲಿತರನ್ನು ದಮನ ಮಾಡಲು ಯತ್ನಿಸಿದ ರೀತಿ ಇದು. ದನದ ವಿಚಾರದಲ್ಲಿ ದಲಿತರು ಸಿಡಿದೆದ್ದರಿಂದ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು ಅಷ್ಟೇ ಸತ್ಯ. ನಂತರದ ಚುನಾವಣೆಯಲ್ಲಿ ಒದ್ದಾಟ ನಡೆಸಿ ಬಿಜೆಪಿ ಗೆಲುವು ಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು.

ಬಿಜೆಪಿಯ ಬಾಡಿನ ಬೂಟಾಟಿಕೆ

ಗೋಮಾಂಸದ ವಿಚಾರದಲ್ಲಿ ಅಷ್ಟು ಸುಲಭವಾಗಿ ಬಿಜೆಪಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಗೋಮಾಂಸ ಬ್ಯಾನ್ ಮಾಡುವ ಪ್ರಸ್ತಾಪ ಬಂದಾಗಲೆಲ್ಲ ಬಿಜೆಪಿ ಅಧಿಕಾರದಲ್ಲಿರುವ ಗೋವಾ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿನ ಸ್ಥಿತಿಗಳು ಮುನ್ನೆಲೆಗೆ ಬರುತ್ತವೆ. ಈ ರಾಜ್ಯಗಳಲ್ಲಿ ಬೀಫ್ ನಿಷೇಧಿಸಿಲ್ಲ. ಬಿಜೆಪಿ ಗೋರಕ್ಷಣೆಯು ಬೂಟಾಟಿಕೆಯದ್ದು ಎಂಬುದು ಸ್ಪಷ್ಟವಾಗುತ್ತದೆ. ಆದರೂ ತನ್ನ ಬ್ರಾಹ್ಮಣೀಯ ಮನಸ್ಥಿತಿಯನ್ನು ಬಹುಜನರ ಮೇಲೆ ಹೇರುವ ಕಾರ್ಯತಂತ್ರವನ್ನು ನಿಧಾನಕ್ಕೆ ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಲೇ ಇವೆ.

“ಗೋವಾದಲ್ಲಿ ಗೋಮಾಂಸವನ್ನು ನಿಷೇಧಿಸುವ ಯಾವುದೇ ಯೋಜನೆ ಆಡಳಿತಾರೂಢ ಬಿಜೆಪಿಗೆ ಇಲ್ಲ” ಎಂದು ಬಿಜೆಪಿ ನಾಯಕ ಅಮಿತ್ ಶಾ ಈ ಹಿಂದೆ ಸ್ಪಷ್ಟಪಡಿಸಿದ್ದರು. “ಗೋವಾಕ್ಕೆ ರಫ್ತಾಗುತ್ತಿರುವ ಗೋಮಾಂಸ ಸಾಕಾಗುತ್ತಿಲ್ಲ” ಎಂದು ಹಿಂದಿನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದುಂಟು. ಈಗ ಅಸ್ಸಾಂನಲ್ಲಿ ಬೀಫ್ ಬ್ಯಾನ್ ಮಾಡುವ ನಿರ್ಧಾರವನ್ನು ಅಲ್ಲಿನ ಬಿಜೆಪಿ ಸರ್ಕಾರ ತೆಗೆದುಕೊಳ್ಳುತ್ತಿದ್ದು, ತೀವ್ರ ವಿರೋಧವನ್ನು ಎದುರಿಸುವಂತಾಗಿದೆ. ಇದು ಈಶಾನ್ಯ ಭಾರತದ ಆಹಾರ ಸಂಸ್ಕೃತಿಯ ಮೇಲೆ ನಡೆಯುತ್ತಿರುವ ಗದಾಪ್ರಹಾರ ಎಂದು ಈಶಾನ್ಯ ಭಾರತ ಭಾಗದ ಬಿಜೆಪಿ ಶಾಸಕರೇ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಅದು ಸ್ವಾಭಾವಿಕ ಪ್ರತಿಕ್ರಿಯೆಯೂ ಆಗಿದೆ.

ಈಶಾನ್ಯದ ಎಂಟು ರಾಜ್ಯಗಳ ಪೈಕಿ ನಾಲ್ಕರಲ್ಲಿ ನೇರವಾಗಿ ಬಿಜೆಪಿ ಅಧಿಕಾರ ನಡೆಸುತ್ತಿದ್ದರೆ, ಮೂರು ರಾಜ್ಯಗಳಲ್ಲಿ ಬಿಜೆಪಿಯ ಮಿತ್ರಪಕ್ಷಗಳು ಅಧಿಕಾರದಲ್ಲಿವೆ. ಅಂದರೆ 7 ರಾಜ್ಯಗಳಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ. ಈ ಭಾಗದಲ್ಲಿ ಗೋಮಾಂಸ ನಿಷೇಧವೆಂಬುದು ಗಂಭೀರ ವಿಚಾರವಾಗುತ್ತದೆ. ಅಸ್ಸಾಂ ರಾಜ್ಯಾದ್ಯಂತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವನೆಯ ನಿಷೇಧವನ್ನು ವಿಸ್ತರಿಸುವ ಅಸ್ಸಾಂ ಗೋರಕ್ಷಣಾ 2021ರ ತಿದ್ದುಪಡಿ ಕಾಯ್ದೆ ತೀವ್ರ ಟೀಕೆಗೆ ಗುರಿಯಾಗಿರುವುದು ಇದೇ ಕಾರಣಕ್ಕೆ. ಮೇಘಾಲಯ ರಾಜ್ಯದ ಬಿಜೆಪಿ ಶಾಸಕ ಸ್ಯಾನ್‌ಬೋರ್ ಶುಲ್ಲೈ ಅವರು ಅಸ್ಸಾಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೈಯಕ್ತಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯಗಳ ಸಾಂವಿಧಾನಿಕ ಖಾತರಿಗಳನ್ನು ಉಲ್ಲೇಖಿಸಿರುವ ಅವರು, “ಮೇಘಾಲಯದಲ್ಲಿ ಇದೇ ರೀತಿಯ ಕ್ರಮಗಳ ಯಾವುದೇ ಸಾಧ್ಯತೆಯನ್ನು ತಿರಸ್ಕರಿಸುತ್ತೇವೆ. ಗೋಮಾಂಸ ಸೇರಿದಂತೆ ಆಹಾರದ ಆಯ್ಕೆಗಳು ಮೇಘಾಲಯ ಮತ್ತು ವಿಶಾಲ ಈಶಾನ್ಯ ಭಾರತದ ಸಾಂಸ್ಕೃತಿಕ ಗುರುತಿನ ಅವಿಭಾಜ್ಯ ಅಂಗ. ನಾನು ಜೀವಂತವಾಗಿರುವವರೆಗೆ, ಮೇಘಾಲಯದಲ್ಲಿ ಯಾವುದೇ ಗೋಮಾಂಸ ನಿಷೇಧವಿರುವುದಿಲ್ಲ” ಎನ್ನುತ್ತಾರೆ ಶುಲ್ಲೈ.

ನಾಗಾಲ್ಯಾಂಡ್ ಮತ್ತು ಮಿಜೋರಾಂನಂತಹ ಕ್ರಿಶ್ಚಿಯನ್ ಬಹುಸಂಖ್ಯಾತ ರಾಜ್ಯಗಳು ಗೋಮಾಂಸ ನಿಷೇಧವನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಿವೆ. ಇಂತಹ ಕ್ರಮಗಳು ತಮ್ಮ ಸಾಂಸ್ಕೃತಿಕ ಆಚರಣೆಗಳ ಮೇಲಿನ ದಾಳಿ ಎಂದು ಪರಿಗಣಿಸುತ್ತವೆ. ಅಂತಹ ನಿರ್ಬಂಧಗಳನ್ನು ವಿಧಿಸುವುದು ಈ ಪ್ರದೇಶದ ವೈವಿಧ್ಯಮಯ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಕಡೆಗಣಿಸಿದಂತೆ ಎನ್ನುತ್ತವೆ ಈಶಾನ್ಯ ರಾಜ್ಯಗಳು.

ಒಂದು ಕಡೆ ಬೀಫ್ ಬ್ಯಾನ್ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ತಮ್ಮದೇ ನೇತೃತ್ವದ ಕೇಂದ್ರ ಸರ್ಕಾರ ಅವಧಿಯಲ್ಲಿ ಬೀಫ್ ರಫ್ತು ಹೆಚ್ಚಾಗಿರುವುದನ್ನು ಮರೆಮಾಚುತ್ತಾರೆ. ‘ದಿ ಕ್ಯಾಟಲ್ ಸೈಟ್’ ವರದಿ ಪ್ರಕಾರ ಭಾರತದಿಂದ ಬೀಫ್ ರಫ್ತು 2025ರಲ್ಲಿ ಶೇ.4ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಮೆರಿಕದ ಕೃಷಿ ಇಲಾಖೆಯ (ಯುಎಸ್‌ಡಿಎ) ಇತ್ತೀಚಿನ ಜಾಗತಿಕ ಕೃಷಿ ಮಾಹಿತಿ ಜಾಲದ ವರದಿಯನ್ನು ಉಲ್ಲೇಖಿಸಿರುವ ‘ಕ್ಯಾಟಲ್ ಸೈಟ್’, “2025ರ ವೇಳೆಗೆ ಭಾರತದ ಗೋಮಾಂಸ ಉತ್ಪಾದನೆ (ಹೆಚ್ಚಾಗಿ ಎಮ್ಮೆಮಾಂಸ) 4.64 ಮಿಲಿಯನ್ ಮೆಟ್ರಿಕ್ ಟನ್ (MMT) ತಲುಪುವ ನಿರೀಕ್ಷೆ ಇದೆ.  2024ರಲ್ಲಿ ಇದರ ಉತ್ಪಾದನೆ 4.57 MMT ಇತ್ತು. ಭಾರತದ ಕ್ಯಾರಬೀಫ್ (ಎಮ್ಮೆಯ ಮಾಂಸ) ರಫ್ತು 2025 ರಲ್ಲಿ 1.65 ಮಿಲಿಯನ್ ಮೆಟ್ರಿಕ್ ಟನ್ ಆಗಲಿದೆ. 2024ರಲ್ಲಿ 1.58 ಎಂಟಿಎಂ ರಫ್ತು ಮಾಡಲಾಗಿತ್ತು” ಎಂದು ಅಂದಾಜಿಸಲಾಗಿದೆ. ಇದು 2024ರ ಪ್ರಮಾಣಕ್ಕಿಂತ (1.58 MMT) ಸುಮಾರು ನಾಲ್ಕು ಪರ್ಸೆಂಟ್ ಹೆಚ್ಚಳವನ್ನು ತೋರಿಸುತ್ತದೆ ಎಂಬುದು ಗಮನಾರ್ಹ.

cattele site
‘ದಿ ಕ್ಯಾಟಲ್ ಸೈಟ್’ ವೆಬ್‌ಸೈಟ್ ವರದಿ

ಭಾರತದ ಪ್ರಮುಖ ಕ್ಯಾರಬೀಫ್ ರಫ್ತು ಮಾರುಕಟ್ಟೆಗಳಲ್ಲಿ ಮಲೇಷ್ಯಾ, ವಿಯೆಟ್ನಾಂ, ಇಂಡೋನೇಷ್ಯಾ, ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ದೇಶಗಳು ಸೇರಿವೆ. ಭಾರತದ ಕ್ಯಾರಬೀಫ್ ರಫ್ತಿನಲ್ಲಿಈ ದೇಶಗಳು 65% ರಷ್ಟು ಪಾಲು ಹೊಂದಿವೆ. ಭೀಪ್ ರಫ್ತಿನಲ್ಲಿ ಬ್ರಿಜಿಲ್ ನಂತರದ ಸ್ಥಾನ ಭಾರತದ್ದು ಎಂದು ಯುಎಸ್ ಕೃಷಿ ಇಲಾಖೆಯ ಮಾಹಿತಿ ಹೇಳುತ್ತದೆ.

ಇದನ್ನೂ ಓದಿರಿ: ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ: ಚಾತುರ್ವರ್ಣದ ಮರುಸೃಷ್ಟಿ

ಇನ್ನು ಸ್ವಲ್ಪ ಹಿಂದಕ್ಕೆ ಹೋಗೋಣ. 2014ರ ಲೋಕಸಭಾ ಚುನಾವಣೆ ವೇಳೆ ಬಿಹಾರದ ಯಾದವ ಸಮುದಾಯದ ಮತಗಳನ್ನು ಕೇಂದ್ರವಾಗಿಸಿಕೊಂಡು ಮತ್ತು ಮುಸ್ಲಿಂ – ಯಾದವ ಸಮೀಕರಣದ ನಡುವೆ ಬಿರುಕು ಮೂಡಿಸಲು ಅಂದು ಮೋದಿ ಹೇಳಿದ ಮಾತು ಹೀಗಿತ್ತು: “ಕಾಂಗ್ರೆಸ್ ಸರ್ಕಾರವು ಗುಲಾಬಿ ಕ್ರಾಂತಿ (ಪಿಂಕ್ ರೆವ್ಯುಲ್ಯೂಷನ್) ಮಾಡುತ್ತಿದೆ. ಗೋವುಗಳನ್ನು ರಫ್ತು ಮಾಡಲಾಗುತ್ತಿದೆ. ಗೋವನ್ನು ಪೂಜಿಸುವವರು ಇದ್ದನ್ನು ಬೆಂಬಲಿಸುತ್ತಾರೆಯೇ? ನಮ್ಮ ಹಳ್ಳಿಗಳಲ್ಲಿನ ಗೋವುಗಳನ್ನು ಕಸಾಯಿಖಾನೆಗೆ ದೂಡಲಾಗುತ್ತಿದೆ”.- ಇದು ಮೋದಿಯವರ ಆಣಿಮುತ್ತುಗಳು. ಆದರೆ ಅವರ ಕಾಲದಲ್ಲಿ ಆಗಿರುವ ಗುಲಾಬಿ ಕ್ರಾಂತಿಯ ಬಗ್ಗೆ ಮಹಾಮೌನಿಯಾಗಿದ್ದಾರೆ. ಅತಿ ಹೆಚ್ಚು ಗೋಮಾಂಸವನ್ನು ರಫ್ತು ಮಾಡುವ ಕಂಪನಿಗಳ ಪೈಕಿ ಅಲ್-ದುವಾ ಫುಡ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಕೂಡ ಒಂದು. ಇದರ ಪಾಲುದಾರರಲ್ಲಿ ಬಿಜೆಪಿಯ ನಾಯಕ ಸಂಗೀತ್ ಸೋಮ್ ಇದ್ದಾರೆ! ಮಾಂಸ ಮತ್ತು ಮಾಂಸದ ಉತ್ಪನ್ನಗಳ ಮಾರಾಟ ನಡೆಸಲು 2005ರಲ್ಲಿ ಸ್ಥಾಪಿತವಾದ ಕಂಪನಿಯೇ ಅಲ್- ದುವಾ ಫುಡ್. “ಭಾರತದಿಂದ ಹಲಾಲ್ ಮಾಂಸವನ್ನು ರಫ್ತು ಮಾಡುತ್ತಿರುವ ಪ್ರಮುಖ ಉತ್ಪಾದಕ ಕಂಪನಿ ಇದಾಗಿದೆ” ಎಂದು ಕಂಪನಿಯ ವೆಬ್‌ಸೈಟ್ ಹೇಳುತ್ತದೆ. ಧಾರ್ಮಿಕ ಆಯಾಮದಲ್ಲಿ ಬೀಫ್ ಬಗ್ಗೆ ಮಾತನಾಡುವ, ಮಾಂಸಾಹಾರವನ್ನು ತುಚ್ಛೀಕರಿಸಿ ಅದಕ್ಕೆ ಸಾಂಸ್ಕೃತಿಕ ಮಡಿವಂತಿಕೆಯನ್ನು ಲೇಪಿಸುವ ಬಿಜೆಪಿ, ಬೀಫ್ ವಿಚಾರದಲ್ಲಿ ಹೇಳುವುದು ಒಂದು ಮಾಡುವುದು ಇನ್ನೊಂದು!

ಮತ್ತೆ ದನದ ಮಾಂಸ ಮತ್ತು ದಲಿತರ ವಿಚಾರಕ್ಕೆ ಬರುವುದಾದರೆ, “ಹಲಾಲ್ ಮಾಂಸ ಬೇಡ, ಜಟ್ಕಾ ಮಾಂಸ ಬೇಕು” ಎಂದು ಕರ್ನಾಟಕದ ಕೆಲವು ಹಿಂದುತ್ವ ಸಂಘಟನೆಗಳು ಯುಗಾದಿ ಹಬ್ಬದ ಸಂದರ್ಭದಲ್ಲಿ ಈ ಹಿಂದೆ ಊಳಿಟ್ಟಾಗ, “ನಾವು ದಲಿತರು, ಯುಗಾದಿ ವರ್ಷತೊಡಕಿನಲ್ಲಿ ದನದ ಮಾಂಸ ತಿನ್ನುತ್ತೇವೆ. ನೀವು ಜಟ್ಕಾ ಕಟ್ ಮಾಡಿದ ದನದ ಮಾಂಸ ಎಲ್ಲಿ ಮಾರುತ್ತೀರಿ?” ಎಂದು ಕೇಳಿ ಬಾಯಿ ಮುಚ್ಚಿಸಿದ್ದರು. ದಲಿತರ ವಿರೋಧಕ್ಕೆ ಹಿಂದುತ್ವ ಗುಂಪಿನ ಪ್ರತಿಕ್ರಿಯೆ ಬರಲಿಲ್ಲ. ಜಟ್ಕಾ ಮಾಂಸ ಎಂಬ ಪರಿಕಲ್ಪನೆ ಅರ್ಥಕಳೆದುಕೊಂಡಿದ್ದು ಹೀಗೆ…

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...